Monday, January 3, 2011

ನನ್ನ ಬಾಲ್ಯದ ಗೆಳತಿ



ನನ್ನ ಬಾಲ್ಯದ ಗೆಳತಿ ಹೆಸರು ಸಿರಿಗೌರಿ
ನೆನಪು ಸದಾ ಹಸಿರು
ಕಣ್ಣು ಮುಚ್ಚಿ ನೆನೆಯಲು ಎದೆಯ ಸ್ಪರ್ಶಿಸುವುದು
ಈಗಲು ಅವಳ ಉಸಿರು
ಅರಳು ಕಂಗಳಲ್ಲೇನೊ ಮುಂಗಾರಿನ ಮಿಂಚಿನ ಸೆಳವು
ಕೆನ್ನೆ ಗಲ್ಲಗಳಲ್ಲಿ ಸದಾ ಅರುಣರಾಗದ ಸಂಜೆಯ ಹೊಳವು
ನಕ್ಕರದು ಮುಂಜಾವಿನ ಪಾರಿಜಾತದ ಹೂವಿನ ಮಳೆಯು
ಮುನಿದರೆ ಸಹ್ಯಾದ್ರಿಯ ನಾಡಿನ ಜಿನುಗು ಮಳೆಯ ಪರಿಯು
ನವರಾತ್ರಿಯ ಅಂಗಳದ ಸ್ಪಟಿಕದ ಗೊಂಬೆ ಅವಳು
ಅವಳ ದಿನವು ಕಾಣದಿರೆ ನನ್ನ ಮನವು ಒಲೆಯ ಮೇಲಿನ ಅರಳು
ಅಂತ ಸಿರಿಗೌರಿಗೆ ಬರೆದ ನನ್ನ ಮನದ ಪತ್ರ
ಪತ್ರದಿ ಮೂಡಿಸಿದೆ ಅವಳ ಕಂಗಳ ವರ್ಣ ಕದಪುಗಳ ಸಂಜೆಯ ಬಣ್ಣ
ಯಾರು ಇಲ್ಲದ ಸಮಯ ಕಾದೆ ಕಳ್ಳಬೆಕ್ಕಿನ ರೀತಿ
ನಡು ಅಂಗಳದಿ ಅವಳು ಒಬ್ಬಳೆ , ಮೊಗದಲಿ ನಗುವಿನ ಮೋಡಿ
ನಿದಾನವಾಗಿ ನಡೆದೆ , ಮೊಣಕಾಲೂರಿ ಅವಳ ಮುಂದೆ ಕುಳಿತೆ
ಅವಳಿಗಾಗಿ ಬರೆದ ವರ್ಣ ವರ್ಣದ ಪತ್ರವ ಅವಳ ಮುಂದೆ ಹಿಡಿದೆ
ನನ್ನತ್ತ ನೋಡಿದಳು ಬಟ್ಟಲು ಕಂಗಳ ಅರಳಿಸಿ ನಕ್ಕಳು
ಕೈ ಚಾಚಿ ನಾನು ಬರೆದ ಪತ್ರವ ಹಿಡಿದಳು
ಎರಡು ಕೈಗಳಿಂದಲು ಪತ್ರವನ್ನು ಅದುಮಿ ಮುದುರಿದಳು

.

 ..................ನಿದಾನವಾಗಿ ತನ್ನ ಪುಟ್ಟ ಬಾಯನ್ನು ತೆರೆದು

ನಾ ಬರೆದ ಪತ್ರವನ್ನು ತನ್ನ ಬಾಯ ಒಳಗಿರಿಸಿ ತಿನ್ನಲು ಹಚ್ಚಿದಳು
ಛಿ! ತುಂಟಿ ನನ್ನ ಅಕ್ಕನ ಮಗಳು ಸಿರಿಗೌರಿ ಹಸುಗೂಸು ಇನ್ನು
ಕುಡಿದ ಹಾಲಿನ ಛಾಯೆ ತುಟಿಯಿಂದ ಮರೆಯಾಗಿಲ್ಲವಿನ್ನು
ಶಬ್ದವೇನೆಂದು ತಿರುಗಿ ನೋಡಲು ಬೆನ್ನ ಮೇಲೊಂದು ಗುದ್ದು
ಬೇಡವೆಂದರೂ ಮಗುವ ಕಾಡಿಸುವೆಯ ಎಂದು ಅಕ್ಕನ ಕೂಗು
ನನ್ನ ಮರೆವಿಗೆ ಶಪಿಸಿ ನಿಂತೆ ನಾ ಬೇಗ
ಬಿಟ್ಟ ಬಾಣಾದ ತೆರದಿ ಓಡಿದೆ ಬಾಗಿಲಿನತ್ತ ಬೇಗ
==================================
ಚಿತ್ರ ಮೂಲ : ಮಗು ಮತ್ತು ಹುಡುಗ 

No comments:

Post a Comment

enter your comments please