Saturday, December 10, 2011

ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು

ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು

[ಸೂಚನೆ: ಇಲ್ಲಿ 'ನಾನು' ಎಂಬ ಪ್ರಥಮ ಪುರುಷನನ್ನು ಅಧ್ವೈತ  ಸಿದ್ಧಾಂತದ 'ನಾನು' ಎಂಬಂತೆಯೆ ಬಳಸಿದ್ದೇನೆ ಅದಕ್ಕಾಗಿಯೆ ಪ್ರಾರಂಭದಲ್ಲಿ ಶ್ರೀ ಶಂಕರಾಚಾರ್ಯರ ಹೆಸರು ಸೂಚ್ಯವಾಗಿ ಬಳಸಿದ್ದೇನೆ.
ಬೇಕಾದಲ್ಲಿ ಮೊದಲ ಭಾಗ ಹಾಗು ಎರಡನೆ  ಭಾಗ ಅದಲು ಬದಲು ಮಾಡಿ ಓದಿಕೊಳ್ಳಬಹುದು]

 ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧)

"ಎಲೊ ಜಡಬಾಲಕ ನೀನು ಯಾರು" ಪ್ರಶ್ನೆ
"ನಾನು ಜಡನಲ್ಲ ನನ್ನ ಉಪಸ್ಥಿತಿ ಮಾತ್ರದಿಂದ ಈ ಜಡ ಪ್ರಪಂಚ ಚಲಿಸುತ್ತದೆ"
ಆಧಿಶಂಕರಾಚಾರ್ಯರ ಶಿಷ್ಯ ಹಸ್ತಾಮಲಕರ ಉತ್ತರ. 
 ಅವರಂತು ಜಡರಲ್ಲ ಆದರೆ ನಾನು ಜಡನೆ. ಕೆಲವರು ನನ್ನನ್ನು ಹುಚ್ಚನೆಂದು ಗುರುತಿಸುವುದು ನನಗೆ ತಿಳಿದಿದೆ. ಕೆಲವೊಮ್ಮೆ ಎಚ್ಚರದಲ್ಲಿದ್ದಾಗ ನನ್ನ ಮನದಲ್ಲಿ ಮೂಡುವ ಕಲ್ಪನೆಗೂ ನಿದ್ದೆಯಲ್ಲಿದ್ದಾಗ ಕಾಣುವ ಕನಸಿಗೂ ನನ್ನಲ್ಲಿ ಹೆಚ್ಚು ವ್ಯತ್ಯಾಸವೇನು ಕಾಣಿಸುವದಿಲ್ಲ ಹಾಗಾಗಿ ನಾನು ಎಚ್ಚರದಲ್ಲಿರುವೆನೋ ಇಲ್ಲ ನಿದ್ದೆಯಲ್ಲಿರುವೆನೊ ಎನ್ನುವ ಅನುಮಾನವು ನನ್ನನ್ನು ಕಾಡುವದುಂಟು. ಅಂತಹ ಒಂದು ಸಮಯದಲ್ಲಿನ ಮನೋ ಚಿತ್ರವನ್ನು ನಾನೀಗ ವರ್ಣಿಸಲು ಹೊರಟಿರುವೆ.....

ಸೂರ್ಯ ನೆತ್ತಿಯಮೇಲೆ ಸುಡುತ್ತಿದ್ದ , ಎದುರಿಗೆ ಯಾವುದೋ ಸುಂದರ ದೇವಾಲಯದ ಗೋಪುರ, ನೋಡಲು ಬೇಲೂರಿನ ಹೋಯ್ಸಳರ ದೇವಾಲಯದ ರೀತಿ.  ಒಳಗೆ ಬಂದೆ ನಿಜಕ್ಕು ಬೇಲೂರಿನ ದೇವಾಲಯವೆ, ಸುತ್ತಲು ಕಲ್ಲಿನ ಹಾಸು ನಡುವೆ ನಕ್ಷತ್ರಾಕಾರದ ಪೀಠದ ಮೇಲಿನ ಅದ್ಭುತ ಶಿಲಾಕಾವ್ಯ. ಬಿಸಿಲಿನ ಝಳ ವಿಪರೀತವೆನಿಸಿ ದೇವಾಲಯದ ಒಳಹೊಕ್ಕೆ. ಬಿಸಿಲಿನಿಂದ ಒಳಬಂದ ಪರಿಣಾಮ ಎಂಬಂತೆ ಇದ್ಧಕ್ಕಿದಂತೆ ಕಣ್ಣಿಗೆ ಕವಿದ ಕತ್ತಲೆ. ಎರಡು ನಿಮಿಷ ಕಣ್ಣುಮುಚ್ಚಿ ನಿಂತು ಒಳಗಿನ ಕತ್ತಲೆಗೆ ಹೊಂದಿಕೊಂಡು ಕಣ್ಣು ಬಿಟ್ಟೆ.
ಮುಸುಕು ಬೆಳಕಿನಲ್ಲಿ ಕಾಣುತ್ತಿರುವ ನವರಂಗ, ಭೀಮಾಕಾರದ ಕಲ್ಲಿನಲ್ಲಿ ಕುಸುರಿ ಬಿಡಿಸಿದ ಕಂಬಗಳು ಬಹುಶಃ ಹನ್ನೆರಡೊ ಹದಿನಾರೋ ? ಎಣಿಸಲೆ ? ಹೆಜ್ಜೆ ಹಾಕುತ್ತಿರುವಾಗಲೆ ಕಾಣಿಸಿತು ಗರ್ಭಗುಡಿಯ ದ್ವಾರ. ಹತ್ತಿರ ಹೋಗಿ ಬಗ್ಗಿ ನೋಡಿದೆ. ಒಳಗೆ ವಿದ್ಯುತ್ ದೀಪವಿಲ್ಲ. ನಂದಾದೀಪದ ಬೆಳಕಲ್ಲಿ ದೂರದಲ್ಲಿ ಕಾಣುತ್ತಿರುವ ದೇವರ ಅಸ್ವಷ್ಟ ರೂಪ. ಇದೇನು ಒಳಗೆ ಕವಿದಿರುವುದು ಧೂಮವೋ? ಇಲ್ಲ ಮುಸುಕಿದ ಮಂಜೋ ತಿಳಿಯದು. ಒಳಗೆ ಅರ್ಚಕರಿದ್ದಾರ? ಎಂದು ಚಿಂತಿಸುವಾಗಲೆ ಗರ್ಭಗುಡಿಯ ಒಳಗಿನಿಂದ ಮಂತ್ರಘೋಷದ ಜೊತೆ ಜೊತೆಗೆ ಗಂಟೆಯ ನಾದ ಕೇಳಿಸಿತು. ತುಂಬು ಗಂಭೀರ ದ್ವನಿಯಲ್ಲಿ ಯಾರೋ ಹೇಳುತ್ತಿದ್ದಾರೆ,
ಹಿರಣ್ಯಪಾತ್ರಂಮಧೋಪೂರ್ಣಂ ದಧಾತಿ.....

ಓಹೋ ಪೂಜಾನಂತರದ ಮಂಗಳಾರತಿ ನಡೆಯುತ್ತಿದೆ ಅಂತ ಅರ್ಥಮಾಡಿಕೊಂಡೆ, ಕೈಮುಗಿದು ಒಳಗೆ ಬಗ್ಗಿ ನೋಡುತ್ತ ಕಾದೆ. ಎರಡು ಮೂರು ನಿಮಿಷದಲ್ಲಿ ಅರ್ಚಕರು ನಿಧಾನವಾಗಿ ನಡೆದುಬಂದು ಎದುರಿಗೆ ಮಂಗಳಾರತಿ ತಟ್ಟೆ ಹಿಡಿದರು. ಎರಡು ಕೈನಿಂದ ಮಂಗಳಾರತಿ ಸ್ವೀಕರಿಸಿ ನಂತರ ಕಣ್ಣೆತ್ತಿ ನೋಡಿದೆ. ಇದೇನು ಅದ್ಭುತ ! 
ಬಾಲ ಗಣಪತಿ ! 
ನನ್ನೆದುರು ಮಂಗಳಾರತಿ ತಟ್ಟೆ ಹಿಡಿದು ನಿಂತಿರುವ ಅರ್ಚಕರು ಅರಾಧ್ಯದೈವ ವಿನಾಯಕ!
ಸೊಂಡಾಲಾಡಿಸುತ್ತ ಸುಮುಖದ ತುಂಬಾ ಹೂನಗೆಯನ್ನು ಅರಳಿಸಿ ನಿಂತಿರುವ.
ನನಗೆ ಕಣ್ಣುಗಳು ತುಂಬಿ ಬಂದವು ಏನು ಹೇಳಲಿ ?
"ಸ್ವಾಮಿ ನೀನಾ?" ಎಂದೆ

"ಏಕೆ ಅನುಮಾನವ?" ಎನ್ನುವ ಪ್ರಶ್ನೆಯ ಜೊತೆಗೆ ಸಣ್ಣ ಸಣ್ಣ ಗಂಟೆಗಳನ್ನು ಒಟ್ಟಿಗೆ ಬಾರಿಸಿದಂತೆ ನಗು.

"ನೀನೆ ಇಲ್ಲಿ ಪೂಜೆ ಮಾಡುತ್ತೀಯ" ಎಂದೆ ಹೌದು ಎನ್ನುವಂತೆ ತಲೆ ಸೊಂಡಿಲು ಆಡಿಸಿದ ಗಣಪ
"ಮತ್ತೇನಾದರು ಕೇಳಬೇಕಾ?"ಎಂದನು.
ಏನು ಕೇಳಲಿ ಎಂದು ಹೊಳೆಯುತ್ತಿಲ್ಲ.
"ನನಗೆ ದೂರದಿಂದ ದೇವರು ಕಾಣುತ್ತಿಲ್ಲ ಏನೊ ಮುಸುಕು ಹತ್ತಿರ ಕರೆದೋಯ್ದು ತೋರಿಸುವೆಯ?" ಎಂದೆ ಆಸೆಯಿಂದ

"ಏಕಾಗಬಾರದು ಒಳಗೆ ಬರುತ್ತೀಯಾ ?..... ಬಾ.."
ಎನ್ನುತ್ತ ತನ್ನ ಎಡಗೈ ಮುಂದೆ ಮಾಡಿದ ಗಣಪ. 
ಅನಂತ ಆನಂದ ಅನುಭವಿಸುತ್ತ ನನ್ನ ಬಲಕೈಯನ್ನು ಅವನ ಕೈಯಲ್ಲಿ ಸೇರಿಸಿದೆ. 
ಹೀಗೆ ಈ ಪ್ರಪಂಚ ನಿಂತು ಹೋಗಬಾರದ ಕಾಲ ಸ್ಥಬ್ಧವಾಗಬಾರದ?
ನಿಧಾನವಾಗಿ ನಡೆಯುತ್ತ ಹೊರಟೆ ಅವನ ಜೊತೆ ಗರ್ಭಗುಡಿಯ ಒಳಗೆ, ಎಷ್ಟು ಹೊತ್ತು ಆಯಿತೊ ತಿಳಿಯುತ್ತಿಲ್ಲ.ಇದೇನು ಕಣ್ಣಳತೆಯಲ್ಲಿ ಕಾಣುತ್ತಿದ್ದ ದೇವರನ್ನು ಕಾಣಲು ಎಷ್ಟು ನಡೆದರು ಮುಗಿಯುತ್ತಿಲ್ಲವಲ್ಲ ಅನ್ನಿಸುತ್ತಿದ್ದಂತೆ ನಿಂತ ಗಣಪ.
ನಗುತ್ತ ನನ್ನ ಕಡೆ ನೋಡಿದ  
"ನೋಡು ಇದೇ ನೀನು ಕೇಳಿದ ದೇವರು"  
ಅರೇ ಇದೇನು ಇಲ್ಲಿ ಏನೂ ಕಾಣಿಸುತ್ತಿಲ್ಲ ಖಾಲಿ ಖಾಲಿ ಜಾಗವಷ್ಟೆ
ಅದನ್ನೆ ಹೇಳಿದೆ
"ಏಕದಂತ ಇಲ್ಲಿ ಏನೂ ಇಲ್ಲ"
"ಅದೇ ದೈವ"  
ನಗುತ್ತ ನುಡಿದ ಅವನು  
"ಬಾ ಹೊರಹೋಗೋಣ ಸಮಯವಾಯಿತು" ಎನ್ನುತ್ತ ಹೊರಟ. 
ಒಳಹೋಗುವಾಗ ಅಷ್ಟುಹೊತ್ತು ನಡೆದಿದ್ದೆ ಅದರೆ ಹೊರಬರುವಾಗ ಎರಡೆ ಹೆಜ್ಜೆಯಲ್ಲಿ ಗರ್ಭಗುಡಿಯ ಹೊರಗಿದ್ದೆ. ಮನಸ್ಸೆ ಒಂದು ವಿಚಿತ್ರ ಸಂಗಮದಲ್ಲಿತ್ತು ಎಲ್ಲವೂ ಅರ್ಥವಾದ ಸಂಭ್ರಮ ಜೊತೆಗೆ ಏನು ಅರ್ಥವಾಗಲಿಲ್ಲ ಅನ್ನುವ ಭಾವ. 
"ನೀನು ಹೊರಹೋಗು ಹೊರಗೆ ಕಲ್ಲಿನ ಮಂಟಪದ ಹತ್ತಿರ ಕೋತಿಗಳಿವೆ ಅವನ್ನು ಕಾಣು ನಿನಗೆ ದೇವರ ಹತ್ತಿರ ಹೋಗುವ ದಾರಿಯನ್ನು ತೋರಿಸುತ್ತವೆ" 
ಎಂದು ನುಡಿದು ನಿನಗೆ ಶುಭವಾಗಲಿ ಎಂದು ಹರಸಿ ನಿಧಾನವಾಗಿ ಗರ್ಭಗುಡಿಯ ಒಳಗೆ ನಡೆದ.
ಒಂದು ಕ್ಷಣನಿಂತ ನಾನು , 
"ನನ್ನ ಬುದ್ಧಿಯೆ, ಅವನು ಎದುರಿಗೆ ಬಂದಾಗಲು ಅವನ ಪಾದಗಳಿಗೆ ಒಮ್ಮೆ ನಮಸ್ಕರಿಸಲಿಲ್ಲವಲ್ಲ" 
ಅನ್ನಿಸಿ ಒಳಗೆ ಬಗ್ಗಿ ನೋಡಿದೆ. ಏನು ಕಾಣಿಸುತ್ತಿಲ್ಲ ಬರೀ ಕತ್ತಲೆ , ಜೋರಾಗಿ ಕೂಗಿದೆ 
"ಗಣಪ ..ವಿನಾಯಕ ..ಏಕದಂತ ..ಸುಮುಖ." 
ಇಲ್ಲ ಯಾವುದೇ ದ್ವನಿಯಿಲ್ಲ. ಇನ್ನು ನಿಲ್ಲುವುದರಲ್ಲಿ ಅರ್ಥವಿಲ್ಲ ಎಂದು ಅರ್ಥವಾಯಿತು. ನೆನಪಿಗೆ ಬಂದಿತು ಹೊರಗೆ ಹೋಗಿ ಅವನು ಹೇಳಿದ ಮಂಟಪದ ಕೋತಿಗಳನ್ನು ಕಾಣಬೇಕು. ನಿಧಾನವಾಗಿ ಹೊರಹೊರಟೆ.

ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨)

ದೇವಾಲಯದ ಹೊರಬಂದು ಎಡಬಾಗದಿಂದ ಪ್ರದಕ್ಷಿಣೆ ಪ್ರಾರಂಭಿಸಿದೆ. ಅರ್ಧಭಾಗ ಮುಗಿದಂತೆ ಕಾಣಿಸಿತು, ಕಲ್ಲು ಮಂಟಪಗಳ ಸಾಲು. 
ಹತ್ತಾರು ನೂರಾರು ಸಾವಿರಾರು ಸಾಲು ಸಾಲು ಕಲ್ಲು ಕಂಬಗಳ ಮಂಟಪಗಳು. ಮೊದಲ ಮಂಟಪದ ಹತ್ತಿರ ಹೋದೆ ಕಲ್ಲು ಕಂಬದ ಮೇಲಿನ ಬಾಗದಲ್ಲಿ ಕಾಣಿಸಿತು ನಿದ್ದೆಯಲ್ಲಿದ್ದ ಮುದಿಕೋತಿ. 

ನಿಂತು ಕೈಮುಗಿದು,
'ಗಣಪ ಕಳಿಸಿದ್ದಾನೆ ದೇವರ ಸಮೀಪ ಹೋಗುವ ದಾರಿ ತೋರುವೆಯ 'ಎಂದೆ, 
ಅದು ತನ್ನ ತೂಕಡಿಕೆ ಬಿಟ್ಟು ಕಣ್ಣು ತೆರೆದು ನನ್ನತ್ತ ನೋಡಿ ಮನುಷ್ಯ ಸಹಜ ದ್ವನಿಯಲ್ಲಿ ಮಾತನಾಡಿತು.
'ಹೀಗೆ ಮಂಟಪಗಳ ಸಾಲು ಹಿಡಿದು ಸಾಗು ಮುಂದೆ ಮತ್ತೂ ಕಪಿಗಳಿವೆ ಅವುಗಳನ್ನು ಕೇಳುತ್ತ ಹೋಗು' ಎಂದಿತು. 
ನಾನು ಮುಂದೆ ಹೊರಟೆ ಮತ್ತೆ ಆ ಮುದಿಕೋತಿ ಕರೆದು ಎಚ್ಚರಿಸಿತು.
'ನೋಡು ಅವೆಲ್ಲ ರಾಮಾಯಣದ ಯುದ್ದದಲ್ಲಿ ಬಾಗವಹಿಸಿದ ಕಪಿಗಳು ನೀನು ಅವುಗಳೊಡನೆ ಕೋಪಮಾಡಬೇಡ' ಎಂದಿತು.
ಸರಿ ಎಂದು ಹೊರಟು ಮುಂದಿನ ಮಂಟಪ ತಲುಪಿ ಮೇಲೆ ನೋಡಿದೆ ಇನ್ನೊಂದು ಕಪಿ ಮತ್ತೆ ಗಣಪ ಹೇಳಿದನ್ನು ಹೇಳಿದೆ. ನನ್ನತ್ತ ನೋಡಿ
ಹಲ್ಲು ಕಿರಿದ ಅದು ಮುಂದಿನ ಮಂಟಪ ತೋರಿತು. ಮತ್ತೆ ಮುಂದೆ ಹೋಗಿ ಮೇಲೆ ನೋಡಿದೆ ಈ ಬಾರಿ ನಾನು ಎನನ್ನಾದರು ಹೇಳುವ
ಮುಂಚೆಯೆ "ಮುಂದೆ" ಎನ್ನುತ್ತ ಕೈತೋರಿತು. ಹೀಗೆ ಮಂಟಪದ ನಂತರ ಮಂಟಪ "ಮುಂದೆ" ಎನ್ನುವ ಕಪಿಗಳ ಆಜ್ಞೆಯನ್ನು ಪಾಲಿಸುತ್ತ
ಹೋಗುತ್ತ ಹೋಗುತ್ತ ನನ್ನ ವೇಗೆ ಜಾಸ್ತಿಯಾಯಿತು.
ಕಿವಿಯಲ್ಲಿ ಒಂದೆ ದ್ವನಿ
ಮುಂದೆ...
ಮುಂದೆ...
ನಿಧಾನವಾಗಿ ಓಡಲಾರಂಬಿಸಿದೆ. 
ಮುಂದೆ ...
ಮುಂದೆ .. ....
ಮುಂದೆ.....
ಕಲ್ಲು ಮಂಟಪಗಳೆಲ್ಲ ಮುಗಿದವು. ಕಿವಿಯಲ್ಲಿ ಅದೆ ದ್ವನಿ
ಮುಂದೆ...
ಮುಂದೆ..
ಈಗ ದೊಡ್ಡ ಬಯಲಿನಲ್ಲಿ ಓಡುತ್ತಿದ್ದೆ. ವಿಶಾಲವಾದ ಹಸಿರುಬಯಲು ಮೇಲೆ ಅನಂತ ನೀಲಾಕಾಶ. ನನ್ನ ಮುಂದೆ ಸಣ್ಣ ಕಾಲುದಾರಿ
ಅದರಲ್ಲಿಯೆ ಓಡುತ್ತಿದ್ದೆ. 
ಮುಂದೆ ..
ಮುಂದೆ ..
ಒಮ್ಮೆಲೆ ಕಾಲುದಾರಿ ಮುಗಿದು ಹೋಯಿತು. ನಿಂತುಬಿಟ್ಟೆ. 
ಕಣ್ಣಳತೆಗೆ ಸಿಗದ ವಿಶಾಲ ಹಸಿರುಬಯಲು. ಮೇಲೆ ಶುಭ್ರ ನೀಲಿಯ ಆಕಾಶ. ಮದ್ಯೆ ಏಕಾಂಗಿಯಾಗಿ ನಾನು.
ಇದೇನು ಕಪಿಗಳು ಇದೇನು ಮಾಡಿಬಿಟ್ಟವು. ನನ್ನನ್ನು ಎಲ್ಲಿಗೆ ಕಳಿಸಿದವು. ನಾನು ಜೋರಾಗಿ ಕಿರುಚಿದೆ ಆಕಾಶಕ್ಕೆ ಮುಖಮಾಡಿ
"ಮುಂದಿನ ದಾರಿಯೇಕೆ ಕಾಣಿಸುತ್ತಿಲ್ಲ ದೇವರೆಲ್ಲಿ ಕಾಣಿಸುತ್ತಿಲ್ಲ?? ಬರೀ ಶೂನ್ಯವೇಕೆ?"
ನಿಧಾನವಾಗಿ ಗುಡುಗಿನಂತ ದ್ವನಿಯೊಂದು ಕೇಳಿಸಿತು ಆಕಾಶದಿಂದ 
"ನೀನು ನಡೆದುದ್ದೆ ಹಾದಿ ನೀನು ಕಾಣುವ ಶೂನ್ಯವೆ ದೈವ"
ನನ್ನಲ್ಲಿ ಏನೋ ಹತಾಷೆ
"ಹಾಗಾದರೆ ನನಗೆ ದೈವ ಸ್ವರೂಪದ ದರ್ಶನವಿಲ್ಲವೆ? ನಾನು ಕಾಣಲಾರನೆ?"
"ಖಂಡಿತ ಇದೆ ಆದರೆ ಕಾಲ ಕೂಡಿಬರಬೇಕು" ಎಂದಿತು ಆ ದ್ವನಿ
"ಹಾಗಾದರೆ ನೀನು ಯಾರು? " ಪ್ರಶ್ನಿಸಿದೆ
"ನಿನ್ನ ಗುರು" ಎಂದಿತು ಆ ದ್ವನಿ ,
ಕಡೆಯದಾಗಿ ಎಂಬಂತೆ ಕೇಳಿದೆ
'ಗುರುವೆಂದರೆ ? ನೀನು ಯಾರು ? '
ಆ ಕಡೆಯಿಂದ ಎಂತದೋ ನಗು ಆಕಾಶವೆಲ್ಲ ಗುಡುಗಿದಂತೆ ತುಂಬಿತು
"ಇನ್ನು ತಿಳಿಯಲಿಲ್ಲವೆ ಇದು ನಿನ್ನದೆ ಆತ್ಮದ ದ್ವನಿ ನಿನ್ನದೆ ಮನಸಿನ ದ್ವನಿ"
ನಿಧಾನವಾಗಿ ಕಣ್ಮುಚ್ಚಿದೆ.
ಹೊರಗಿನ ಬಯಲು ಆಕಾಶಗಳೆಲ್ಲ ನನ್ನಲ್ಲಿ ಕರಗುತ್ತ ಹೋಯಿತು.
ಕಿವಿಗಳಲ್ಲಿ ಒಂದೇ  ಮೊರೆತ
ಕಾಲ ಕೂಡಿಬರಬೇಕು.... ಕಾಲ ಕೂಡಿಬರಬೇಕು.
ನನ್ನ ಮನ ಸ್ಥಬ್ಧವಾಯಿತು ದೇಹ ನಿಶ್ಚಲವಾಯಿತು.

ಶುಭಂ
                                                                                 No comments:

Post a Comment

enter your comments please