Tuesday, December 27, 2011

ನನ್ನ ಬಾಲ್ಯದ ನೆನಪುಗಳು : ಬೆಳಕು ಕತ್ತಲೆಯ ಆಟ

ನನ್ನ ಬಾಲ್ಯದ ನೆನಪುಗಳು : ಬೆಳಕು ಕತ್ತಲೆಯ ಆಟ
ಸುಮಾರು ೧೯೭೨-೭೩ ರ ಬೇಲೂರಿನಲ್ಲಿ ಇದ್ದ ಸಮಯ. ನಮ್ಮ ಮನೆಯ ಹಿಂಬಾಗಕ್ಕೆ ವಿಶಾಲ ಜಾಗವಿದ್ದು ಮಕ್ಕಳು ಆಟವಾಡಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ರಜಾದಿನಗಳಲ್ಲಿ ನಮಗೆಲ್ಲ ಅದೇನೊ ಸಂಬ್ರಮ. ಅಲ್ಲದೆ ಬೇಸಿಗೆ ರಜಕ್ಕೊಮ್ಮೆ ನಾನು ಅಮ್ಮನ ಜೊತೆ ಅಜ್ಜಿಮನೆ ಬೆಂಗಳೂರಿಗೆ ಬರುತ್ತಿದ್ದೆ. ಇಲ್ಲಿಯದೆ ಬೇರೆ ಲೋಕ. ಜಯನಗರದ ಅಜ್ಜಿಯ ಮನೆಯ ಹತ್ತಿರ ಆಗ ರಸ್ತೆಗಳಲ್ಲಿ ಆಡಲು ಸುತ್ತಮುತ್ತ ಮನೆಯ ಮಕ್ಕಳು ಸಾಕಷ್ಟು ಸೇರುತ್ತಿದ್ದರು.ದಿನಕೊಂದು ಆಟ ಆಡುತ್ತಿದ್ದೆವು( ಈಗ ಹಾಗಿಲ್ಲ ಬಿಡಿ ಮಕ್ಕಳಿಗೆ ಬೀದಿಗೆ ಬಿಡುವುದೆ ಇಲ್ಲ. ಪಕ್ಕದ ಮನೆಯ ಹುಡುಗರುಗಳಿಗೆ ಪರಿಚಯವೇ ಇರುವುದಿಲ್ಲ. ಶಾಲೆಗಳಲ್ಲಿ ಆಡಿದರು ಕ್ರಿಕೇಟ್ ಹೊರತುಪಡಿಸಿ ಬೇರೆ ಆಟಗಳು ಸಾಕಷ್ಟು ಪರಿಚಯವಿಲ್ಲ.) ಆಗ ಬೆಂಗಳೂರಿನಲ್ಲಿ ಕಲಿತು ಬಂದಿದ್ದೆ " ಐಸ್ ಪೈಸ್ " ಎಂಬ ಹೊಸಆಟ. ಅದು ಮೊದಲೆ ಆಡುತ್ತಿದ್ದ ಆಟದ ಬೇರೆ ರೂಪ ಎಂದು ನನಗೆ ತಿಳಿದಿರಲಿಲ್ಲ. ನಾನು ಈ ಹೊಸಆಟವನ್ನು ಸ್ನೇಹಿತರಿಗೆ ಪರಿಚಯಿಸಿ ಬೇಷ್ ಅನ್ನಿಸಿಕೊಳ್ಳಬೇಕಿತ್ತು.
ಬೆಳಗಿನ ತಿಂಡಿ ಮುಗಿಸಿ ಆಡಲು ಸೇರಿದೆವು ಒಬ್ಬ ಗೋಡೆಗೆ ಮುಖ ಮಾಡಿ ನಿಂತು ಒಂದರಿಂದ ಇಪ್ಪತ್ತರವರೆಗು ಏಣಿಸುವುದು , ಅಷ್ಟರಲ್ಲಿ ಉಳಿದವರೆಲ್ಲ ಕಣ್ಣಿಗೆ ಕಾಣದಂತೆ ಮುಚ್ಚಿಟ್ಟುಕೊಳ್ಳುವುದು.ಮುಖಮುಚ್ಚಿ ಎಣಿಸಿದವ ಒಬ್ಬೊಬ್ಬರನ್ನೆ ಹುಡುಕಿ "ಐಸ್ ಪೈಸ್" ಕೂಗಬೇಕು. ಹುಡುಕಲು ವಿಫಲನಾದರೆ ಅಥವ ಮುಚ್ಚಿಟ್ಟುಕೊಂಡವರು ,ಇವನು ನಿಂತು ಎಣಿಸಿದ ಸ್ಥಳವನ್ನು ತಲುಪಿ ಗೋಡೆ ಮುಟ್ಟಿ ಐಸ್ ಪೈಸ್ ಕೂಗಿದರೆ, ಪುನಃ ಅವನಿಗೆ ಅ ಹುಡುಕುವ ಕೆಲಸ.
 ಹಾಗಿರುವಾಗ ನನ್ನ ಸ್ನೇಹಿತನೊಬ್ಬ ಎಣಿಸಲು ಪ್ರಾರಂಭ ಮಾಡಿದ , ನಾನು ಮುಚ್ಚಿಟ್ಟು ಕೊಳ್ಳಲು ಜಾಗ ಹುಡುಕುತ್ತ ಮೂಲೆಯ ಬಾವಿಯತ್ತ ನಡೆದೆ. ಅದರ ಪಕ್ಕದಲ್ಲಿ ಒಂದು ಯಾರು ವಾಸವಿರದ ಮನೆಯೊಂದಿತ್ತು. ಅದಕ್ಕೆ ಬೀಗ ಹಾಕಿ ಯಾವ ಕಾಲವಾಗಿತ್ತೊ ತಿಳಿಯದು. ಬಾವಿಯ ಪಕ್ಕಕ್ಕೆ ಹೊಂದಿಕೊಂಡಂತೆ ಆ ಮನೆಯ ನೀರಮನೆಯಿತ್ತು. ಅದಕ್ಕೆ ಬೀಗ ಹಾಕಿರಲಿಲ್ಲ , ಕೇವಲ ಚಿಲಕ ಸಿಗಿಸಿ ಬಿಟ್ಟಿದ್ದರು. ನಾನು ಆತುರದಲ್ಲಿ ಚಿಲಕತೆಗೆದು ಒಳಗೆ ನುಗ್ಗಿದೆ. ಹೆಂಚಿನ ಮನೆಯಾದರು ಹೆಂಚು ಪೂರ್ತಿಯಾಗಿ ಉಳಿದಿರಲ್ಲಿಲ್ಲ ಅಲ್ಲೊಂದು ಇಲ್ಲೊಂದು, ಹಾಗಾಗಿ ಬಿಸಿಲು ಪೂರ್ತಿಯಾಗಿ ಒಳಗೆ ಬೀಳುತ್ತಿತ್ತು. ಬಾಗಿಲಿನ ಎದುರಿಗೆ ನೀರ ಓಲೆ , ಹಂಡೆಯನ್ನು ತೆಗೆದಿದ್ದರು ಹಾಗಾಗಿ ಮುರುಕು ಒಲೆ , ಒಳಗೆಲ್ಲ ಬೆಳೆದು ನಿಂತ ಗಿಡ ಪೊದೆಗಳು. ಒಲೆಯ ಪಕ್ಕವೇ ತೊಟ್ಟಿ ,.....! ಆದರೆ ! ಆ ತೊಟ್ಟಿಯ ಮೇಲೆ ಕುಳಿತಿರುವರು ಯಾರು ??. ಪೊದೆಯಂತೆ ಹರಡಿನಿಂತ ಬಿಳಿಯ ಕೂದಲು ಬಿಳಿಯ ಹುಬ್ಬುಗಳು ಬಟ್ಟೆದರಿಸಿರುವರೋ ಇಲ್ಲ ಶರೀರವೇ ಆ ರೀತಿಯ ಮಡಿಕೆಗಳಿಂದಾಗಿದೆಯೊ?? ಎಲ್ಲಕ್ಕಿಂತ ಭಯ ಹುಟ್ಟಿಸಿದ್ದು ಆ ಕಣ್ಣುಗಳು , ತನ್ನ ಬೇಟೆಯನ್ನು ಗುರುತಿಸಿ ಅದರ ಮೇಲೆರುಗುವ ಹುಲಿಯ ನಿರ್ಲಿಪ್ತ ಕಣ್ಣಿನ ದ್ರುಷ್ಟಿಯಂತೆ ನನ್ನನ್ನೆ ನೋಡುತ್ತಿದೆ. ನಾನೆಲ್ಲಿರುವೆ ಎಂಬುದನ್ನು ಒಂದು ಕ್ಷಣ ಮರೆತುಬಿಟ್ಟಿದ್ದೆ. ನಂತರ ಎಚ್ಚರಗೊಂಡು ಹೊರಗೆ ಓಡಿ ಬಂದೆ . ಮುಚ್ಚಿಟ್ಟುಕೊಂಡವರನ್ನು ಹುಡುಕುತ್ತ ಬಂದವನಿಗೆ ನಾನಾಗಿಯೆ ಹೊರಬಂದುದ್ದನ್ನು ಕಂಡು ಸಂತೋಷವಾಗಿ 'ಐಸ್ ಪೈಸ್' ಎಂದು ಕೂಗಿದ.ನಂತರ ನನ್ನ ಮುಖವನ್ನು ನೋಡಿ ಅನುಮಾನಗೊಂಡವನಂತೆ ಎನಾಯಿತೋ ಎಂದು ವಿಚಾರಿಸಿದ. ನಾನು ಮನೆಯ ಒಳಗೆ ಯಾರೋ ಇರುವುದನ್ನು ತಿಳಿಸಿದೆ. ಅವನು ಸಹ ಒಳಗೆ ನುಗ್ಗಿ ನಂತರ ಈಚೆ ಓಡಿ ಬಂದ.
ಅ ಮನೆಯ ಎದುರಿಗಿದ್ದ ಪಟ್ಟಾಭಿ ಎಂಬ ವಯಸ್ಕರೊಬ್ಬರಿದ್ದರು. ಪ್ರತಿ ಗುರುವಾರ ಅವರು ಸಾಯಿಭಜನೆ ಮಾಡಿ ನಮ್ಮೆಲ್ಲರಿಗು ಸಿಹಿ ಕೊಡುತ್ತಿದ್ದರು. ಅವರು ಹೊರಬಂದು ಗಲಾಟೆ ಮಾಡುತ್ತಿರುವುದಕ್ಕೆ ನಮ್ಮನ್ನು ಗದರಿದರು, ನಂತರ ನಮ್ಮಿಂದ ವಿಷಯ ತಿಳಿದ ಅವರು ಸಹ ಕುತೂಹಲದಿಂದ ಒಳಹೋಗಿ ಸುತ್ತಲು ನೋಡಿ ಏನು ಕಾಣಿಸದೆ ನಮ್ಮನ್ನು ಒಳಗೆ ಕರೆದರು. ನಾವು ಒಳಗೆ ಹೋಗಿ ನೋಡುತ್ತೇವೆ ನಿಜಕ್ಕು ಯಾರು ಇಲ್ಲ. ಮತ್ತೆ ಅವ ಎಲ್ಲಿ ಹೋದ??. ಪಟ್ಟಾಭಿಯವರು ಆ ಮನೆಯ ಬಾಗಿಲು ತೆರೆದು ಒಳಹೋಗಿದ್ದಕ್ಕೆ ಸಾಕಾಷ್ಟು ಕೂಗಾಡಿ, ಇಲ್ಲಿ ಎಂತದು ಇಲ್ಲ , ನೀವು ಇದ್ದಕ್ಕಿದ್ದಂತೆ ಬಿಸಿಲಿನಲ್ಲಿ ಒಳಗೆ ಬಂದ್ದಿದ್ದೀರಿ , ಹಾಗಾಗಿ ನಿಮಗೆ ಭ್ರಮೆಯಾಗಿದೆ , ಹೊರಡಿ ಎಂದು ನಮ್ಮಿಭ್ಭರನ್ನು ಓಡಿಸಿ ಹೊರಗಿನಿಂದ ಪುನಃ ಬಾಗಿಲು ಹಾಕಿ ಚಿಲುಕ ಭದ್ರಪಡಿಸಿದರು. ನನಗೆ ಇಂದಿಗೂ ಅದು ಒಂದು ವಿಭ್ರಮೆಯೆ ನಾನು ನೋಡಿದ ನೋಟ ನಿಜವೋ ಇಲ್ಲ ಬೆಳಕು ಕತ್ತಲೆಯ ಒಂದು ಆಟವೋ
--------------------------------------------------------------------------------------------------------
ನಿಜ ನಮ್ಮ ನಂಬಿಕಸ್ತ ಗೆಳೆಯ ಕಣ್ಣು ಕೆಲ ಸಲ ನಮಗೆ ಮೋಸ ಮಾಡುತ್ತಾನೆ

No comments:

Post a Comment

enter your comments please