Friday, January 13, 2012

ಲೌಕಿಕ - ಅಲೌಕಿಕ

 ಲೌಕಿಕ - ಅಲೌಕಿಕ                ೦೫-ಜನವರಿ-೨೦೧೧

ಲೌಕಿಕ
ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ|
ಸಮಯ ನಡುರಾತ್ರಿಯನ್ನು ಮೀರಿ ಸ್ವಲ್ಪ ಕಾಲ ಕಳೆದಿತ್ತು. ಹಡಗಿನಂತ ಇನ್ನೋವ ಕಾರು ಕತ್ತಲೆಯಲ್ಲಿ ಕಪ್ಪುರಸ್ತೆಯ ಮೇಲೆ ಬೆಳಕು ಚೆಲ್ಲುತ್ತ ಬೆಂಗಳೂರಿನತ್ತ ತೇಲುತ್ತ ಎಂಬಂತೆ ಹೋಗುತ್ತಿತ್ತು. ಚಾಲಕ ರವಿ ಪಕ್ಕಕ್ಕೆ ತಿರುಗಿನೋಡಿದ, ಅನನ್ಯ ತಲೆ ಹಿಂದೆ ಒರಗಿಸಿ ನಿದ್ರಿಸುತ್ತಿದ್ದ. ತನ್ನ ಮುಂದಿದ್ದ ಕನ್ನಡಿಯಲ್ಲಿ ಹಿಂದಕ್ಕೆ ದೃಷ್ಟಿ ಹರಿಸಿದ ರವಿ, ಹಿಂದಿದ್ದ ಮೂವರು ಯುವಕರು ನಿದ್ರೆಗೆ ಜಾರಿದ್ದಾರೆ. ತನ್ನಲ್ಲಿಯೆ ನಕ್ಕ ರವಿ ಎಡಕೈಯನ್ನು ಬಳಸಿ ದ್ವನಿ ಪೂರತಗ್ಗುವಂತೆ ಪ್ಲೇಯರ್ ತಿರುಗಿಸಿದವನು ಪುನಃ ರಸ್ತೆಯತ್ತ ದೃಷ್ಟಿನೆಟ್ಟ.
ಅನನ್ಯ ಒಬ್ಬ ಸಾಫ್ಟ್ ವೇರ್ ಇಂಜಿನೀಯರ್ 'ಸಮಧ್ಯತಾ ಸಾಫ್ಟ್ವೇರ್ ಸಲ್ಯೂಷನ್' ಕಂಪನಿಯ ಒಡೆಯ. ಅವನ ಜೊತೆಯಲ್ಲಿಯೆ ಪಯಣಿಸುತ್ತಿದ್ದ ಯುವಕರು ನಟರಾಜ್ ಮದ್ವೇಶ್ ಹಾಗು ಚಕ್ರಪಾಣಿ ಮೂವರು ಅವನ ಬಾಲ್ಯಸ್ನೇಹಿತರು. ಸುಮಾರಾಗಿ ಹತ್ತನೆ ತರಗತಿಯವರೆಗು ಜೊತೆಯಲ್ಲಿ ಓದಿದ ನಂತರ ಅವರ ಮಾರ್ಗಗಳು ಬೇರೆ ಬೇರೆಯಾಗಿದ್ದವು. ಅನನ್ಯ ಕಂಪ್ಯೂಟರ್ ನಲ್ಲಿ ಡಿಗ್ರಿ ಗಳಿಸಿ ನಂತರ ತನ್ನದೆ ಕಂಪನಿ 'ಸಮಧ್ಯತಾ ಸಾಫ್ಟ್ ವೇರ್ ಸಲ್ಯೂಷನ್' ಸ್ಥಾಪಿಸಿ ಇದೀಗ ಆ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದ. ನಟರಾಜ್ ಬಿಕಾಮ್ ಮುಗಿಸಿ ತನ್ನ ತಂದೆಯದೆ ವ್ಯಾಪಾರ ವ್ಯವಹಾರದಲ್ಲಿ ಪಳಗುತ್ತಿದ್ದ. ಮತ್ತಿಬ್ಬರು ಮದ್ವೇಶ್ ಹಾಗು ಚಕ್ರಪಾಣಿ ಉನ್ನತವ್ಯಾಸಂಗ ಮುಗಿಸಿ ಈಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿದ್ದರು. ಹೇಗಿದ್ದರು ತಿಂಗಳಲ್ಲಿ ಒಂದೆರಡು ಬಾರಿ ಒಬ್ಬರನೊಬ್ಬರು ಬೇಟಿ ಮಾಡುತ್ತಿದ್ದರು. ವರ್ಷ ಎರಡು ವರ್ಷಕ್ಕೊಮ್ಮೆ ಮೂರು ನಾಲಕ್ಕು ದಿನ ಹೊರಹೋಗಿ ಸುತ್ತಾಡಿ ಬರುತ್ತಿದ್ದರು.ಈ ಬಾರಿ ಶಬರಿಮಲೆ ಎಂದು ಹೊರಟ ಅವರು ಬರುವಾಗ ತಮಿಳುನಾಡಿನ ಕೆಲ ದೇವಾಲಯಗಳನ್ನು ನೋಡಿಕೊಂಡು ಕಡೆಯಲ್ಲಿ ಪಳನಿ ತಲುಪಿ ಸುಬ್ರಮಣ್ಯನ ದರ್ಶನ ಮಾಡಿ ಬೆಂಗಳೂರಿನ ಕಡೆ ಹಿಂದುರಿಗಿ ಹೊರಟರು. ಪಳನಿ ಬಿಡುವಾಗ ಸಾಕಷ್ಟು ತಡವೇ ಆಗಿತ್ತು. ರವಿ ಅನನ್ಯನ ಕಂಪನಿಯಲ್ಲಿಯೆ ಕಾರಿನ ಚಾಲಕ. ಅವನು ಪ್ರಾಮಾಣಿಕ ಮತ್ತು ಕರ್ತವ್ಯ ನಿಷ್ಟ ಎಂದು ಅನನ್ಯನಿಗೆ ಅವನನ್ನು ಕಂಡರೆ ಅಚ್ಚುಮೆಚ್ಚು. ರವಿಗೂ ಅಷ್ಟೆ ತನ್ನ ಕಂಪನಿಯ ಮಾಲಿಕ ಅನನ್ಯನನ್ನ ಕಂಡರೆ ಗೌರವದ ಜೊತೆಗೆ ಆತ್ಮೀಯತೆ. ಕಾರಿನಲ್ಲಿದ್ದ ಐದು ಜನರು ಸರಿಸುಮಾರು ಒಂದೆ ವಯಸ್ಸಿನವರು, ೨೭ ರಿಂದ ೨೯ ವರ್ಷಗಳು ಅಷ್ಟೆ. ಪಳನಿ ಬಿಟ್ಟಾದ ನಂತರವು ಪಳಿನಿಯ ಸುಬ್ರಮಣ್ಯನೆ ತುಂಬಿದ್ದ ಅವರೆಲ್ಲರ ಮನದಲ್ಲಿ. ಅಲ್ಲಿ ಕೊಂಡ ಭಕ್ತಿಗೀತೆಯ ಸೀಡಿ ಯನ್ನು ಪ್ಲೇಯರ್ ನಲ್ಲಿ ಕೇಳುತ್ತಲೆ ನಾಲ್ವರೂ ನಿದ್ದೆಗೆ ಜಾರಿದ್ದರು.
ಮತ್ತೊಮ್ಮೆ ವಾಚನ್ನು ನೋಡುತ್ತ ರವಿ ಆಕಳಿಸಿದ, ಆಗೊಮ್ಮೆ ಈಗೊಮ್ಮೆ ವೇಗವಾಗಿ ಬರುವ ವಾಹನಗಳನ್ನು ಬಿಟ್ಟರೆ ಉಳಿದಂತೆ ರಸ್ತೆ ಖಾಲಿಯಾಗಿಯೆ ಇದೆ. ಆಗಲೆ ಕೃಷ್ಣಗಿರಿ ಬಿಟ್ಟಾಯಿತು. ಆದಷ್ಟು ಬೇಗ ಬೆಂಗಳೂರು ಸೇರಿ ಇವರೆಲ್ಲರನ್ನು ಮನೆಗೆ ಸೇರಿಸಿ ತಾನು ಐದು ಗಂಟೆಯೊಳಗೆ ಮನೆ ಸೇರಿದರೆ ಒಂದೆರಡು ತಾಸು ವಿರಾಮ ಮಾಡಿ ತಾನು ಪುನಃ ಹತ್ತು ಗಂಟೆ ಹೊತ್ತಿಗೆ ಬಾಸ ಮನೆಗೆ ಹೋಗಿ ದ್ಯೂಟಿಗೆ ಪಿಕಪ್ ಮಾಡಬಹುದು ಅಂದು ಕೊಂಡು ವೇಗವನ್ನು ಸ್ವಲ್ಪ ಹೆಚ್ಚಿಸಿದ ದೂರದಲ್ಲಿ ಯಾವುದೊ ಒಂಟಿದೀಪದ ವಾಹನ ಕಾಣಿಸಿತು. ಬಹುಷಃ ಕಾರೊ ಅಥವ ಬೈಕೊ ಇರಬಹುದು ಅಂದು ಕೊಂಡ. ವೇಗವೇನು ತಗ್ಗಿಸಲಿಲ್ಲ.
ಮುಂದಿನವಾರ ಹೇಗಾದರು ಬಾಸನ್ನು ಕೇಳಿ ಮೂರುದಿನವಾದರು ರಜಾ ಪಡೆದರೆ ಪತ್ನಿ ಹಾಗು ಮಗುವಿನ ಜೊತೆ ಊರಿಗೆ ಹೋಗಿ ಅಮ್ಮನನ್ನು ನೋಡಿ ಬರಬಹುದು ಅನ್ನಿಸಿತು. ತಾನು ಕೇಳಿದರೆ ಇವರು ಖಂಡೀತ ಇಲ್ಲ ಎನ್ನುವದಿಲ್ಲ ತುಂಬಾ ಒಳ್ಳೆಯ ಜನ ಅಂದುಕೊಂಡ. ಏಕೊ ಮತ್ತೊಂದು ಆಕಳಿಕೆ.
ಇದ್ದಕಿದ್ದಂತೆ ಗಲಿಬಿಲಿಯಾಗಿತ್ತು. ಎದುರಿಗೆ ಬರುತ್ತಿರುವುದು ಬೈಕ್ ಅಲ್ಲವೇನೊ ಯಾವುದೋ ಮರಳು ಲಾರಿಯಂತಿದೆ. ತೀರ ಹತ್ತಿರ ಬಂದಾಗ ಅವನು ಇದ್ದಕಿದ್ದಂತೆ ಲಾರಿಯ ಎರಡು ಹೆಡ್ ಲೈಟ್ ಗಳನ್ನು ಬೆಳಗಿಸಿದ್ದ, ಜೋರಾಗಿ ಹಾರ್ನ್ ಮಾಡುತ್ತಿದ್ದಾನೆ. ಏನಾಗುತ್ತಿದೆ ? ಅವನನ್ನು ತಪ್ಪಿಸಲು ರವಿ ಸ್ಟೇರಿಂಗ್ ಅನ್ನು ಬಲವಾಗಿ ಎಡಕ್ಕೆ ತಿರುಗಿಸಿದ. ಕಾರು ರಸ್ತೆ ಬಿಟ್ಟು ಪಕ್ಕಕ್ಕೆ ಇಳಿದಿತ್ತು. ಪುನಃ ಬಲಕ್ಕೆ ಬರಲು ಪ್ರಯತ್ನಿಸಿದ. ಕಾರಿನ ಮುಂದಿನ ಚಕ್ರಗಳು ಯಾವುದೋ ಕಲ್ಲು ಅಥವ ಮರದ ಬೇರನ್ನು ಹತ್ತಿತ್ತೇನೊ? ಪುನಃ ಎಡಕ್ಕೆ ಹೊರಳಿತ್ತು. ಕಾರು ಎತ್ತಿಹಾಕಿದಾಗ ನಿದ್ದೆಯಿಂದ ಎಚ್ಚೆತ್ತ ಅನನ್ಯ "ರವೀ..." ಎಂದು ಜೋರಾಗಿ ಕಿರುಚಿದ. ಚಾಲಕ ರವಿ ಕಾರಿನ ಮೇಲೆ ಪೂರ್ಣ ಹತೋಟಿ ಕಳೆದುಕೊಂಡಿದ್ದ. ಕಾರಿನ ಮುಂದಿನ ದೀಪದ ಬೆಳಕಲ್ಲಿ ದೈತ್ಯಾಕಾರದ ಮರದ ಕಾಂಡ ಗೋಚರಿಸಿತು. ಅನನ್ಯ ಕಾರಿನಿಂದ ಹೊರಗೆ ಹಾರಲ ಅಂದುಕೊಳ್ಳುತ್ತಿರುವಂತೆ ಕಾರಿನ ಮುಂಬಾಗ ತೀವ್ರ ವೇಗದಲ್ಲಿ ಮರಕ್ಕೆ ಅಪ್ಪಳಿಸಿತ್ತು. ಅನನ್ಯ ಅವನಿಗರಿವಿಲ್ಲದೆ ಭಯ ಹಾಗು ಆರ್ತತೆಯಿಂದ ಕೂಗಿಕೊಂಡ "ಪಳನಿಸ್ವಾಮಿ..". ಮರುಕ್ಷಣವೆ ಅವನ ದೇಹ ಕಾರಿನಿಂದ ಹೊರಗೆ ಎಸೆಯಲ್ಪಟ್ಟು ತಲೆ ನೇರವಾಗಿ ಮರದ ಬುಡದಲ್ಲಿದ ಕಲ್ಲು ಬಂಡೆಗೆ ಅಪ್ಪಳಿಸಿ ಎರಡು ಬಾಗವಾಗಿ ಅವನು ಸ್ಥಳದಲ್ಲಿ ಮರಣಹೊಂದಿದ. ಚಾಲಕ ರವಿ ಕಿರುಚಲು ಅವಕಾಶವಿಲ್ಲದಂತೆ ದೇಹ ಛಿದ್ರವಾಗಿ ಕುಳಿತಲ್ಲೆ ಮರಣಹೊಂದಿದ. ಹಿಂದಿನ ಸೀಟುಗಳಲ್ಲಿದ್ದ ನಟರಾಜ ಮದ್ವೇಶ ಹಾಗು ಚಕ್ರಪಾಣಿಯವರು ನಿದ್ದೆಯಲ್ಲಿದ್ದಂತೆ ಛಿದ್ರವಾಗಿ ಹೋಗಿದ್ದರು. ಕಾರಿನಲ್ಲಿದ ಐವರು ಅರೆಕ್ಷಣದಲ್ಲಿ ನಿರ್ಜೀವವಾಗಿ ರಸ್ತೆಯ ಪಕ್ಕದಲ್ಲಿ ಚದುರಿಬಿದ್ದರು.
ಲಾರಿಯ ಚಾಲಕ ಮುಂದೆ ಹೋಗಿ ತಕ್ಷಣ ನಿಲ್ಲಿಸಿ ಹಿಂದೆ ನೋಡಿದ ಅವನಿಗೆ ಗಂಬೀರತೆಯ ಅರಿವಾಯ್ತು. ಪಕ್ಕಕ್ಕೆ ನೋಡಿದ ಕ್ಲೀನರ ನಿದ್ದೆಯಲ್ಲಿ ಮುಳುಗಿದ್ದ. ಇಳಿಯುವುದು ಬೇಡ ಅಂತ ನಿರ್ದರಿಸಿದ ಅವನು ಪುನಃ ಗೇರ್ ಬದಲಿಸಿ ವೇಗವಾಗಿ ಮುಂದೆ ಹೊರಟುಹೋದ.ಆ ನೀರವ ರಾತ್ರಿಯಲ್ಲಿ ಕಾರಿನಲ್ಲಿದ್ದ ಪ್ಲೇಯರ್ ಹೇಗೊ ತನ್ನ ಕೆಲಸ ಮುಂದುವರೆಸಿತ್ತು..
ಬ್ರಹ್ಮಣ್ಯಂ ಸ್ಕಂದದೇವಂ ಗುಹಮಚಲಭಿದೋ ರುದ್ರತೇಜೋ ಸ್ವರೂಪಂ!


 ಅಲೌಕಿಕ


ಇತ್ತ ಶ್ರೀಕ್ಷೇತ್ರ ಪಳನಿ ದೇವಾಲಯದ ಗರ್ಭಗುಡಿ. ಅರ್ಚಕರೆಲ್ಲ ಸುಬ್ರಮಣ್ಯನಿಗೆ ಜೋಗುಳ ಹಾಡಿ ಮಂಗಳಾರತಿ ನೆರವೇರಿಸಿ ಬಾಗಿಲುಗಳನೆಲ್ಲ ಭದ್ರಪಡಿಸಿ ಹೋಗಿಯಾಗಿತ್ತು. ಆದರೆ ಏಕೊ ಸ್ವಾಮಿ ಸುಬ್ರಮಣ್ಯನಿಗೆ ಸುಖನಿದ್ರೆ ಇಲ್ಲ. ಚಿಂತಿಸುತ್ತಿದ್ದಾನೆ ತನ್ನ ಮನಸಿನ ಈ ಅಸುಖಕ್ಕೆ ಕಾರಣವೇನು. ಯಾವುದಾದರು ಭಾರಿವಿಪತ್ತಿನ ಮುನ್ಸೂಚನೆಯೊ ಅಥವ ತನ್ನ ಭಕ್ತರಾರದರು ವಿಪತ್ತಿನಲ್ಲಿದ್ದು ಆರ್ತರಾಗಿದ್ದಾರೊ?. ಬೆಳಗಿನಿಂದ ತನ್ನನ್ನು ಬೇಡಿ ಬಂದವರು ಯಾರಾರು ಎಂದು ನೆನೆಯುತ್ತಿದ್ದ. ಮತ್ತೆ ಮತ್ತೆ ಮಗ್ಗಲು ಬದಲಿಸಿದ ಅಸಹನೆಯಿಂದ. ಆಗ ಕೇಳಿತ್ತು ಆರ್ತದ್ವನಿ "ಪಳನಿ ಸ್ವಾಮೀ..." ಎನ್ನುವ ಕೂಗು.


ತಟ್ಟನೆ ಎದ್ದು ಕುಳಿತ, ಈಗ ತಡಮಾಡುವಂತಿಲ್ಲ ಮನೋವೇಗವನ್ನು ಮೀರಿದ ವೇಗದಲ್ಲಿ ಅಪಘಾತ ನಡೆದ ಅ ಸ್ಥಳಕ್ಕೆ ಬಂದು ಸೇರಿದ. ಸೇರಿದವನು ಸುಮ್ಮನೆ ನಿಂತುಬಿಟ್ಟ ಇದೇನು ಹೀಗಾಗಿದೆ?. ಈ ಐವರು ತರುಣರು ಸಂಜೆ ತನ್ನ ದರ್ಶನಕ್ಕೆ ಬಂದಿದ್ದವರಲ್ಲವೆ. ತೇಜಸ್ವಿ ತರುಣರು ಮುಂದೆ ಜೀವನದಲ್ಲಿ ಏನನ್ನದರು ಸಾದಿಸಬಲ್ಲವರು ಅಂದು ಕೊಂಡಿದ್ದೆ, ಇದೇನು ಹೀಗಾಗಿದೆ ಎಂದು ಅವರ ಮುಖವನ್ನೆ ಗಮನಿಸಿದ. ಸಾವಿನಲ್ಲು ಅವರ ಮುಖದಲ್ಲಿ ನೆಲೆಸಿರುವ ಸೌಮ್ಯತೆ! ದೀರರು ಅಂದುಕೊಳ್ಳುವಾಗ ಮತ್ತೊಂದು ಅಚ್ಚರಿ ಅವನ ಗಮನಕ್ಕೆ ಬಂದಿತು. ಐವರು ದೀರ್ಘಾಯಸ್ಸು ಹೊಂದಿದ್ದರು ಸಹ ಅಕಾಲ ಮೃತ್ಯುವಶರಾಗಿದ್ದಾರೆ. ಸಾವಿನಲ್ಲು ಸಾಮ್ಯತೆ. ಏಕೊ ಸಾಯುವಾಗ ಅವರಿಂದ ಹೊರಟ ಅರ್ತದ್ವನಿ ಇನ್ನು ಅವನ ಕಿವಿಯನ್ನು ತುಂಬಿತ್ತು. ಅನನ್ಯನ 'ಪಳನಿ ಸ್ವಾಮಿ" ಎಂಬ ಕೂಗು , ಪಳನಿಯ ಒಡೆಯನನ್ನು ವಿಹ್ವಲನನ್ನಾಗಿಸಿತ್ತು. ಅನನ್ಯನ ಮುಖವನ್ನು ದಿಟ್ಟಿಸುವಾಗ ಅನ್ನಿಸಿತು ಮುಂದೆ ಇವನಿಂದ ಜೀವಕೋಟಿಗೆ ಆಗಬೇಕಾದ ಕೆಲಸಗಳು ಸಾಕಷ್ಟಿವೆ, ಇವರನ್ನು ಅಪಾಯದಿಂದ ಪಾರುಮಾಡಿ ಬದುಕಿಸುವುದು ನನ್ನ ಕರ್ತವ್ಯವಾಗಿತ್ತು. ಏಕೆ ಹೀಗಾಯಿತು ಎಂದು ಚಿಂತಿಸಿದ.ಈಗಲೂ ಪ್ರಯತ್ನ ಪಟ್ಟರೆ ಹೇಗೆ ಎಂಬ ಯೋಚನೆ ಅವನಿಗೆ ಬಂದಿದ್ದೆ ತಡ ತನ್ನ ಅನುಜ ಗಣಪನನ್ನು ನೆನೆದ.
ಗಣೇಶನಿಗೆ ಬರುವಾಗಲೆ ಗೊಂದಲ ಬಂದವನೆ "ಏನಿದು ಅನುಜ ಸುಬ್ರಮಣ್ಯ ಇದ್ದಕಿದ್ದಂತೆ ನನ್ನನ್ನು ಕರೆದೆ? ಕಾರಣ?" ಎಂದು ಪ್ರಶ್ನಿಸಿದ.
ತನ್ನ ಅಣ್ಣನಿಗೆ ಆಗಷ್ಟೆ ಆಗಿರುವ ಅಪಘಾತ ತೋರಿಸಿದ ಸುಬ್ರಮಣ್ಯ. ಸುತ್ತಲು ವಿಕ್ಷಿಸಿ ನುಡಿದ ವಿನಾಯಕ,ಕಾಲಧರ್ಮವಪ್ಪ ಇಂತಹದು ಈಗ ಅದಿಕವೆ ಸರಿ. ನೀನೇಕೆ ಇಲ್ಲಿ ಬಂದು ನಿಂತಿದ್ದೀಯ?" ಎಂದ. ಅದಕ್ಕೆ ಸುಬ್ರಮಣ್ಯನು 'ಹಾಗಲ್ಲ ಅಣ್ಣ ಏಕೊ ಸಾವು ಸನಿಹವಾದಾಗ ಅವನ ಕರೆಯಲ್ಲಿದ್ದ ಆರ್ತತೆ ನನ್ನ ಹೃದಯವನ್ನೆ ಕಲಕಿ ಬಿಟ್ಟಿದೆ, ಅವರೆಲ್ಲ ನನ್ನನ್ನು ನಂಬಿದ್ದರು ಅದರೆ ನಾನು ಅವರ ಸಮಯಕ್ಕೆ ಒದಗಲಿಲ್ಲ' ಎಂದ
ಗಣಪ ವಿಲಾಸಕ್ಕೆಂಬಂತೆ ನುಡಿದ " ನಿಜ ಸ್ಕಂದ ನೋಡು ನಮ್ಮನ್ನು ನಂಬಿದ ಭಕ್ತರಿಗೆ ಅಪಾಯ ಒದಗುವ ಮೊದಲೆ ಅವರನ್ನು ಕಾಯುವುದು ನಮ್ಮ ಧರ್ಮ ಆದರೆ ಅವರಾಗಿ ಆರ್ತತೆಯಿಂದ ಮೊರೆಯಿಡುವವರೆಗೂ ನಾವು ನಿರ್ಲಕ್ಷ ಮಾಡುತ್ತೇವೆ. ಈ ಭೂಮಿಯಲ್ಲಿದ್ದು ನಮಗೂ ಏಕೊ ಮನುಷ್ಯರ ಸ್ವಭಾವವೆ ಬಂದು ಬಿಟ್ಟೆತ್ತೇನೊ?" ಅಂದ.
ನೊಂದ ಸುಬ್ರಮಣ್ಯ ನುಡಿದ"ಹೌದು ಅಣ್ಣ ನನ್ನ ಆ ತಪ್ಪಿಗಾಗಿಯೆ ನಿರ್ದರಿಸಿದ್ದೇನೆ ಹೇಗಾದರು ಸರಿಯೆ ಇವರಿಗೆ ನಾನು ಸಹಾಯ ಮಾಡಲೆ ಬೇಕು ಅದಕ್ಕೆ ನಿನ್ನ ಸಹಕಾರ ಬೇಕು" ಎಂದ.
ಗಣಪತಿ ಆಶ್ಚರ್ಯದಿಂದ ನುಡಿದ"ಈಗ ನೀನೇನು ಸಹಾಯ ಮಾಡಬಲ್ಲೆ,ಅವರ ದೇಹಗಳಾಗಲೆ ಛಿದ್ರ ಛಿದ್ರವಾಗಿದೆ ಅದರಲ್ಲಿ ಜೀವ ತುಂಬುವದಂತು ಅಸಾದ್ಯ. ಅಪಘಾತವಾಗದಂತೆ ತಡೆಯುವದಂತು ದೂರ ಉಳಿಯಿತು.
" ಅಣ್ಣ ಅಪಘಾತವಾಗದಂತೆ ತಡೆಯಬಹುದಲ್ಲವೆ ?" ಎಂದ ಸುಬ್ರಮಣ್ಯ.
"ತಮ್ಮ ಏನು ಹೇಳುತ್ತಿರುವೆ ? ಆಗಲೆ ಆಗಿಹೋಗಿರುವ ಘಟನೆಯನ್ನು ನೀನು ಆಗದಂತೆ ತಡೆಯಲು ಹೇಗೆ ಸಾದ್ಯ?" ಎಂದ ವಿಘ್ನೇಶ್ವರ.
"ಕಾಲವನ್ನು ಹಿಂದೆ ತಳ್ಳುವುದು" ನಿರ್ವಿಕಾರನಾಗಿ ನುಡಿದ ಸುಬ್ರಮಣ್ಯ. ಗಣಪ ಬೆಚ್ಚಿದ.
"ತಮ್ಮ ಹೇಗೆ ಸಾದ್ಯ ಕಾಲವನ್ನು ಮುಟ್ಟಲು ಹೋದರೆ ಸಂಪೂರ್ಣ ಸೃಷ್ಟಿಯೆ ಎದ್ದು ಕುಳಿತುಕೊಳ್ಳುತ್ತದೆ. ಅಲ್ಲದೆ ನಿಯಾಮಕನಿಗೆ ಏನು ವಿವರಣೆ ಕೊಡುವೆ. ಇದೆಲ್ಲ ಸಾದ್ಯವಾಗದ ಮಾತು" ಎಂದ.
"ಅಣ್ಣ ನೀನು ಎಲ್ಲವನ್ನು ತಿಳಿದು ನನ್ನ ಬಾಯಿಯಲ್ಲಿಯೆ ನುಡಿಸುತ್ತಿ, ಆಗಲಿ, ನಾನು ಹೇಳಿದ್ದು ಸಂಪೂರ್ಣ ವಿಶ್ವದ ಕಾಲಮಾನವನ್ನಲ್ಲ, ಈ ಅಪಘಾತ ನಡೆದಿರುವ ಪರಿಮಿತ ಕ್ಷೇತ್ರವನ್ನಷ್ಟೆ ನಾನು ಬೇರೆಮಾಡಿ ಕಾಲಬೇದವನ್ನುಂಟು ಮಾಡಿ, ನಂತರ ನನ್ನ ಕೆಲಸ ಮುಗಿಸುತ್ತೇನೆ. ನನ್ನ ಪರದಿಯಲ್ಲಿ ಯಾರು ಹೊರಗಿನಿಂದ ನುಗ್ಗದಂತೆ ನೀನು ಹೊರಗೆ ನಿಂತು ತಡೆಯಬೇಕು. ಅದಕ್ಕೆ ಹೇಳಿದ್ದು ನನಗೆ ನಿನ್ನ ಸಹಾಯ ಬೇಕು". ಎಂದ
ಈಗ ಗಣೇಶನಿಗು ಸುಬ್ರಮಣ್ಯನ ಮನಸ್ಸಿನಲ್ಲಿರುವ ಕಾರ್ಯ ಸೂಚಿ ಸಿಕ್ಕಿತ್ತು. ಇಬ್ಬರು ಕುಳಿತು ಕಾರ್ಯತಂತ್ರವನ್ನು ಕುರಿತು ಚರ್ಚಿಸಿ ಸಿದ್ದವಾದರು.
ಸುಬ್ರಮಣ್ಯನು ಮರದ ಕೆಳಗೆ ಕುಳಿತು ದ್ಯಾನಮಗ್ನನಾಗಿ ತನ್ನ ಕೆಲಸ ಪ್ರಾರಂಬಿಸಿದ. ಅವನು ಕುಳಿತ ಜಾಗದಿಂದ ಸುತ್ತ ಮುತ್ತಲ ಸುಮಾರು ಐದುನೂರು ಅಡಿ ಪರದಿಯ ಸುತ್ತಳತೆಯಲ್ಲಿ ನಿದಾನವಾಗಿ ಹಿಮ್ಮದ ಮುಸುಕು ತುಂಬಿದಂತೆ ಆಗಿ ಆ ಬಾಗವನ್ನು ಬೇರೆ ಮಾಡಿತ್ತು. ಆ ಹಿಮದ ಕವಚದ ಅತಿ ಮೇಲ್ಬಾಗದಲ್ಲಿ ವಿಲಾಸಕ್ಕೊ ಎಂಬಂತೆ ಗಣೇಶ ನಿಂತಿರುವುದು ನೃತ್ಯಮಾಡಲು ನಿಂತಂತೆ ಕಾಣಿಸುತ್ತಿತ್ತು.ಅದೊಂದು ಅದ್ಬುತ ಅಲೌಕಿಕ ನೋಟ. ದೂರದಲ್ಲಿ ಬರುತ್ತಿರುವ ವಾಹನ ಚಾಲಕರು ಹಿಮ ಮುಸುಕಿದ ರಸ್ತೆಯನ್ನು ಕಂಡು ಇದೇನು ಈ ಸರಿರಾತ್ರಿಯಲ್ಲಿ ಕಾವಳವೆ ಅಂದುಕೊಳ್ಳುತ್ತಿರುವಾಗಲೆ ಅವರು ಯಾವುದೆ ಮಾಯಕದ ನಿದ್ದೆಗೆ ಒಳಗಾದಂತೆ ವಶರಾಗುತ್ತಾರೆ, ಕಾಲಘಟ್ಟದಲ್ಲಿ ಬೇರೆಯಾಗಿರುವ ಆ ಕ್ಷೇತ್ರವನ್ನು ಅವರು ಪ್ರವೇಶಿಸದಂತೆ ತಡೆಯುವ ಗಣಪ , ತನ್ನ ಶಕ್ತಿಯಿಂದ ಅವರು ಹೊರಗಿನಿಂದಲೆ ಹಿಮಕವಚದ ಮತ್ತೊಂದು ತುದಿ ತಲಪುವಂತೆ ಮಾಡುತ್ತಾನೆ. ಅಲ್ಲಿ ಎಚ್ಚೆತ್ತ ಅವರು ಏನು ಆಗಿಲ್ಲವೆಂಬಂತೆ ಮುಂದು ಹೋದರೆ ಕೆಲವರಾದರು ಇಷ್ಟುಬೇಗ ಈ ಮಂಜುತುಂಬಿದ ರಸ್ತೆಯನ್ನು ಹೇಗೆ ಹಾದು ಬಂದೆವು ಎಂದು ಕೌತುಕದಿಂದ ಮುಂದುವರೆದರೆ, ಮೇಲೆ ಗಣಪ ಕುಶಾಲು ಎಂಬಂತೆ ನಗುತ್ತಿದ್ದಾನೆ.
ಅಲ್ಲಿ ಒಳಗೆ ಹಿಮದ ಮುಸಿಕಿನ ಒಳಗೆ, ಪಳನಿ ಸುಬ್ರಮಣ್ಯನು ದ್ಯಾನಬದ್ದನಾಗಿದ್ದಾನೆ. ಕಾಲ ನಿದಾನವಾಗಿ ತನ್ನಂತೆ ಹಿಂದೆ ಸರಿಯುತ್ತಿದೆ.
ಹಿಂದೆ..
ಹಿಂದೆ  ಹಿಂದೆ....

ಇದ್ದಕಿದ್ದಂತೆ ಗಲಿಬಿಲಿಯಾಗಿತ್ತು. ಎದುರಿಗೆ ಬರುತ್ತಿರುವುದು ಬೈಕ್ ಅಲ್ಲವೇನೊ ಯಾವುದೋ ಮರಳು ಲಾರಿಯಂತಿದೆ. ತೀರ ಹತ್ತಿರ ಬಂದಾಗ ಅವನು ಇದ್ದಕಿದ್ದಂತೆ ಎರಡು ಹೆಡ್ ಲೈಟ್ ಗಳನ್ನು ಬೆಳಗಿಸಿದ್ದ ಅವನು ಜೋರಾಗಿ ಹಾರ್ನ್ ಮಾಡುತ್ತಿದ್ದಾನೆ. ಏನಾಗುತ್ತಿದೆ ? ಅವನನ್ನು ತಪ್ಪಿಸಲು ರವಿ ಸ್ಟೇರಿಂಗ್ ಅನ್ನು ಬಲವಾಗಿ ಎಡಕ್ಕೆ ತಿರುಗಿಸಿದ. ಕಾರು ರಸ್ತೆ ಬಿಟ್ಟು ಪಕ್ಕಕ್ಕೆ ಇಳಿದಿತ್ತು. ಪುನಃ ಬಲಕ್ಕೆ ಬರಲು ಪ್ರಯತ್ನಿಸಿದ. ಕಾರಿನ ಮುಂದಿನ ಚಕ್ರಗಳು ಯಾವುದೋ ಕಲ್ಲು ಅಥವ ಮರದ ಬೇರನ್ನು ಹತ್ತಿತ್ತೇನೊ? ಪುನಃ ಎಡಕ್ಕೆ ಹೊರಳಿತ್ತು. ಕಾರು ಎತ್ತಿಹಾಕಿದಾಗ ನಿದ್ದೆಯೊಂದ ಎಚ್ಚೆತ್ತ ಅನನ್ಯ "ರವೀ..." ಎಂದು ಜೋರಾಗಿ ಕಿರುಚಿದ. ಚಾಲಕ ರವಿ ಕಾರಿನ ಮೇಲೆ ಪೂರ್ಣ ಹತೋಟಿ ಕಳೆದುಕೊಂಡಿದ್ದ. ಕಾರಿನ ಮುಂದಿನ ದೀಪದ ಬೆಳಕಲ್ಲಿ ದೈತ್ಯಾಕಾರದ ಮರದ ಕಾಂಡ ಗೋಚರಿಸಿತು.
ಅನನ್ಯ ಹೊರಗೆ ಹಾರಲ ಅಂದು ಕೊಳ್ಳುತ್ತಿರುವಂತೆ ರವಿ ನಿಶ್ಚಯಿಸಿದ ಎಲ್ಲವು ಆಗಿಹೋಯಿತು, ಇನ್ನು ಆ ಪಳನಿ ಸುಬ್ರಮಣ್ಯನೆ ಗತಿ. ಆಗ ಅದ್ಬುತವೊಂದು ನಡೆದಿತ್ತು. ಚಾಲಕನ ಕೈಯನ್ನು ಯಾರು ಬಲವಾಗಿ ಒತ್ತಿದಂತೆ ಸ್ಟೇರಿಂಗ ಬಲವಾಗಿ ಬಲಕ್ಕೆ ತಿರುಗಿತ್ತು. ಮರಕ್ಕೆ ಅಪ್ಪಳಿಸಲ್ಲಿದ್ದ ಕಾರು ಅನೀರಿಕ್ಶಿತವಾಗಿ ಬಲಕ್ಕೆ ತಿರುಗಿದಂತೆ ಕಾರಿನ ಎಡಬಾಗ ಮರಕ್ಕೆ ತಗಲಿ ಉಜ್ಜುತ್ತ ಚಲಿಸುತ್ತಿರುವಂತೆ ಅವನ ಬಲಕಾಲಿನ ಮೇಲೆ ಒತ್ತಡಬಿದ್ದು ಬ್ರೇಕ್ ಅದುಮಿ ಕಾರು ನಿಂತು ಹೋಯಿತು.ಕಾರಿನಲ್ಲಿದವರೆಲ್ಲ ನಿದ್ದೆಯಿಂದ ಎಚ್ಚೆತ್ತು ಕುಳಿತರು. ಅಪಘಾತದ ಪರಿಣಾಮಕ್ಕೆ ಚಾಲಕ ರವಿ ಹೆದರಿ ನಡಗುತ್ತಿದ್ದ. ಗಾಬರಿಯಿಂದ ಅನನ್ಯ ಪ್ರಶ್ನಿಸಿದ"ಏಕೆ ಏನಾಯಿತು ರವಿ"
ನಡುಗುವ ದ್ವನಿಯಲ್ಲಿಯೆ ರವಿ ವಿವರಿಸಿದ. ಎದುರಿನ ಲಾರಿ ಹತ್ತಿರಬಂದಂತೆ ಇದ್ದಕಿದ್ದಂತೆ ಹೆಡ್ ಲೈಟ್ ಬೆಳಗಿದ್ದು , ಎಡಕ್ಕೆ ಬಂದ ಕಾರು ತನ್ನ ಹಿಡಿತ ತಪ್ಪಿ ಮರಕ್ಕೆ ಅಪ್ಪಳಿಸುವ ಕಡೆಯಹಂತದಲ್ಲಿ ಪವಾಡವೆಂಬಂತೆ ತಾವೆಲ್ಲ ಪಾರಗಿದ್ದು ಎಲ್ಲವನ್ನು.ಹೋಗಲಿ ಬಿಡು ಸ್ವಲ್ಪ ವಿರಾಮ ಮಾಡು ಎಂದ ಅನನ್ಯ, ಗೆಳೆಯರನ್ನು ಕೇಳಿ ಕಾರಿನ ಹಿಂದಿನ ಸೀಟಿನಲ್ಲಿದ್ದ ಫ್ಲಾಸ್ಕ್ ಪಡೆದು ಅದರಲ್ಲಿದ್ದ ಬಿಸಿ ಕಾಫಿಯನ್ನು ರವಿಗೆ ಕುಡಿಯಲು ಬಗ್ಗಿಸಿ ಕೊಟ್ಟ. "ಬೇಡ ಸಾರ್" ಅನ್ನುತ್ತಲೆ ಕಾಫಿಯನ್ನು ಪಡೆದು ಕುಡಿದ ರವಿ ಸ್ವಲ್ಪ ಹೊತ್ತು ಕುಳಿತು. ನಂತರ ನಂತರ ಅನನ್ಯನತ್ತ ತಿರುಗಿ ತಗ್ಗಿದ ದ್ವನಿಯಲ್ಲಿ "ಕ್ಷಮಿಸಿ ಸಾರ್" ಎಂದ.ಅನನ್ಯ ಸಮಾದಾನ ಮಾಡುವಂತೆ ಅವನ ಹೆಗಲು ತಟ್ಟಿದ.
"ಹೋಗಲಿ ಬಿಡು, ನಾವೆಲ್ಲ ಹೇಗೊ ಅಪಘಾತದಿಂದ ಉಳಿದೆವು. ಎಲ್ಲ ಆ ಪಳನಿಸ್ವಾಮಿಯ ದಯೆ" ಎಂದು ನುಡಿದು ಸ್ವಾಮಿಗೆ ಕೃತಜ್ಙತೆ ಅರ್ಪಿಸುತ್ತಿರುವಂತೆ ಕಾರು ಪುನಃ ಬೆಂಗಳೂರಿಗೆ ಮುಖಮಾಡಿ ಹೊರಟಿತು.


ಮುಕ್ತಾಯ: ಸುಬ್ರಮಣ್ಯ ತೃಪಿಯಿಂದ ಕಾರು ಹೋಗುವದನ್ನೆ ನೋಡುತ್ತ ನಿಂತಂತೆ,ಕಾವಳ ನಿದಾನವಾಗಿ ಕರಗುತ್ತಿತ್ತು. ಪಕ್ಕದಲ್ಲಿ ನಿಂತ ಗಣೇಶ ನುಡಿದ"ನೋಡಿದ ನಿನ್ನ ಭಕ್ತರ ಬುದ್ದಿಯ ನಾನು ಎದ್ದೆನೊ ಬಿದ್ದೆನೊ ಅಂತ ಬಂದು ಸಹಾಯ ಮಾಡಿದರೆ ನನಗೆ ಒಂದಾದರು ಕೃತಜ್ಙತೆಯ ಮಾತೆ ಇಲ್ಲ" ಅಂದ ನಗುತ್ತ. ಸ್ಕಂದ ಏಕೊ ಭಾವಪೂರ್ಣನಾಗಿದ್ದ"ಹೋಗಲಿ ಬಿಡಣ್ಣ ನಿನಗೆ ಕೃತಜ್ಙತೆ ಅರ್ಪಿಸಲು ನಾನಿದ್ದೀನಲ್ಲ" ಎಂದ.
ಗಣೇಶ ನಗುತ್ತ "ಅಗಲಪ್ಪ ಈಗ ಸಮಯವಾಯಿತು ನಾನು ಹೊರಡುತ್ತಿದ್ದೀನಿ, ನೀನು ನಿನ್ನ ಗಮ್ಯವನ್ನು ಸೇರು" ಎಂದು ನುಡಿದು ಹೊರಟ.
ಪಳನಿ ದೇವಾಲಯದ ಗರ್ಭಗುಡಿ ಸೇರಿದ ಸುಬ್ರಮಣ್ಯನು ತೃಪ್ತಿಯಿಂದ ಈಗಲಾದರೆ ಎಲ್ಲ ಸರಿಯಾಯಿತು ಸ್ವಲ್ಪ ವಿರಾಮ ಮಾಡೋಣ ಎಂದು ಸಿದ್ದನಾಗುತ್ತಿರುವಂತೆ ಬಾಗಿಲ ಹತ್ತಿರ ಶಬ್ದ. ಪುರೋಹಿತರು ! ಇದೇನು ಇಷ್ಟುಬೇಗ ಬಂದರೆ! ಇವರು ಎಂದು ಸುಬ್ರಮಣ್ಯನು ಚಿಂತಿಸುವಾಗಲೆ ಮನ ನೆನೆಯಿತು ಇಂದಿನಿಂದ ಧನುರ್ಮಾಸ ಪ್ರಾರಂಬವಲ್ಲವೆ ಎಂದು. ಸ್ವಲ್ಪ ಆಲಸ್ಯದಿಂದಲೆ ಎದ್ದು ಕುಳಿತ ಸುಬ್ರಮಣ್ಯ ಮನದಲ್ಲಿಯೆ ಅರ್ಚಕರ ಬಗ್ಗೆ ಹುಸಿಕೋಪ ತಾಳುತ್ತ.     

No comments:

Post a Comment

enter your comments please