Sunday, November 11, 2012

ಅಪ್ಪ ನಿನ್ನೆ ನಾನೊಂದು ತಪ್ಪು ಮಾಡಿದೆ"


ಅಪ್ಪ ನಿನ್ನೆ ನಾನೊಂದು ತಪ್ಪು ಮಾಡಿದೆ"
ಗಣಪತಿ ಹಬ್ಬ ಮುಗಿಸಿ, ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಏಳುವಾಗಲೆ ಮಗಳು ಅಂದಳು
"!!! ??"
ಏನಿರಬಹುದು , ಆಕೆ ಐದು ವರ್ಷದ ಮಗುವಾಗಿದ್ದಾಗಿನ ಘಟನೆ ನೆನಪಿಗೆ ಬಂದಿತು, ಆಫೀಸ್ ಮುಗಿಸಿ ಸಂಜೆ ಮನೆಗೆ ಬರುವಾಗ ತೀರ ಜ್ವರ ಜಾಸ್ತಿಯಾಗಿ ಮಲಗಿದ್ದಳು. ನನ್ನ ಪತ್ನಿಯು ಗಾಭರಿಯಾಗಿದ್ದಳು.
"ನೋಡಿ ಮಧ್ಯಾಹ್ನದಿಂದ ಜ್ವರ ಕಾಯುತ್ತಿದೆ, ಶಾಪಿಗೆ ಹೋಗಬೇಕು ಡಾಕ್ತ್ರರ ಹತ್ತಿರ "
ನಾನು ಅವಳ ಹಾಸಿಗೆ ಹತ್ತಿರ ಕುಳಿತು ಹಣೆಮೇಲೆ ಕೈ ಇಡುತ್ತ ನುಡಿದೆ
"ಜ್ವರವಿದ್ದಹಾಗಿದೆ, ಒಳಗೆ ಥರ್ಮಾಮೀಟರ್ ಇದೆಯಲ್ಲ ತಗೋ ಜ್ವರ ಎಷ್ಟಿದೆ ನೋಡೋಣ"
ಎನ್ನುತ್ತ ನಾನೆ ಅದನ್ನು ಗೂಡಿನಿಂದ ತೆಗೆಯಲು ಎದ್ದೆ, ಕಣ್ಣುಮುಚ್ಚಿ ಮಲಗಿದ್ದ ಮಗಳು ತಕ್ಷಣ ಕೈ ಹಿಡಿದು ಎಳೆಯುತ್ತ ಹೇಳಿದಳು
"ಅಪ್ಪ ಈಗ ಅದು ಆಗಲ್ಲ ಕುಳಿತುಕೊಳ್ಳಿ "
" ಆಗದೆ ಏನಮ್ಮ, ಅದೇನು ನೋವಾಗಲ್ಲ ಸುಮ್ಮನೆ ಬಾಯಲ್ಲಿಟ್ಟು ಜ್ವರ ಎಷ್ಟು ಅಂತ ನೋಡೋದು ಅಷ್ಟೆ" ಅಂದೆ ಅವಳನ್ನು ಸಮಾದಾನ ಪಡಿಸುತ್ತ
" ಅದಕ್ಕಲ್ಲ ಅಪ್ಪ ಈಗ ಅದರಲ್ಲಿ ಜ್ವರ ನೋಡಕ್ಕೆ ಆಗಲ್ಲ ಅಪ್ಪ "
" ಏಕೆ, ಅದಕ್ಕೆ ಏನಾಗಿದೆ " ಎಂದೆ ನಾನು ಆಶ್ಚರ್ಯದಿಂದ
" ನಾನು ಅವತ್ತು ಎಂದೊ ತೆಗೆದಿದ್ದೆ ಅದು ಕೆಳಗೆ ಬಿದ್ದು ಒಡೆದು ಹೋಯಿತು, ನಾನು ಹಾಗೆ ಒಳಗೆ ಹಾಕಿಟ್ಟಿದ್ದೇನೆ " ನರಳುತ್ತ ನುಡಿದಳು
ಜ್ವರದ ತಾಪದಿಂದ ಬಳಲುತ್ತಿರುವ ಅವಳನ್ನು ಏನೆಂದು ಅನ್ನುವುದು ಸುಮ್ಮನಾದೆ
ಈಗ ಅದೆಲ್ಲ ನೆನೆಯುತ್ತ ಅವಳನ್ನು ಕೇಳಿದೆ
"ಅದೇನು ತಪ್ಪು ಮಾಡಿದೆ " ನನ್ನ ದ್ವನಿಯು ಸ್ವಲ್ಪ ಗಟ್ಟಿ ಇತ್ತೇನೊ
"ನೀವು ಬೈಯುವದಿಲ್ಲ ಅಂದರೆ ಹೇಳ್ತೀನಿ"
ನನಗೆ ಕುತೂಹಲ ಏನಿರಬಹುದು, ಬಹುಷಃ ಕ್ಲಾಸಿನಲ್ಲಿ ಇಂಟರ್ನಲ್ ತಪ್ಪಿಸಿ ಹೋಗದೆ ಸುಮ್ಮನಾದಳೊ, ಅಥವ ಮನೆಯಲ್ಲಿ ಹೇಳದೆ ಇನ್ನೇನು ಮಾಡಿದ್ದಾಳೆ ಅವಾಂತರ, ಈ ವಯಸಿನ ಹುಡುಗಿಯರದೆ ಒಂದು ಕಷ್ಟ,
"ಸುಮ್ಮನೆ ಪೀಠಿಕೆ ಎಲ್ಲ ಬೇಡ ಏನು ಮಾಡಿದೆ ನೇರವಾಗಿ ಹೇಳು "
"ಅಪ್ಪ ಮತ್ತೇನು ಅಲ್ಲ, ಅಮ್ಮ ಗಣಪತಿಗೆ ಅಂತ ಮಾಡಿ ಅಟ್ಟದಲ್ಲಿ ಇಟ್ಟಿದಳಲ್ಲ, ಕಡುಬು, ಅದನ್ನು ಮೊದಲೆ ಒಂದು ತೆಗೆದು ತಿಂದು ಬಿಟ್ಟೆದ್ದೆ "
"!!!!!! "
"ಅಮ್ಮ ಮಡಿಯಲ್ಲಿ ಮಾಡಿಟ್ಟಿದಳು ಅಪ್ಪ, ಅವಳಿಗೆ ಹೇಳಿದರೆ ಬೈಯ್ತಾಳೆ "
ನಾನು ಹೇಳಿದೆ
"ಅಲ್ಲಮ್ಮ ನಿಮ್ಮ ಅಮ್ಮನೇನೊ ಪಾಪ ಉಪವಾಸವಿದ್ದು, ದೇವರ ನೈವೈದ್ಯಕ್ಕೆ ಅಂತ ಮಾಡಿರುತ್ತಾಳೆ ಕಷ್ಟ ಬಿದ್ದು, ಅದನ್ನೇಕೆ ತಿನ್ನಲು ಹೋದೆ, ಅದು ಪೂಜೆಗೆ ಮುಂಚೆ "
"ಇಲ್ಲಪ್ಪ ನಾನು ಗಣಪತಿ ಹತ್ತಿರಾನು ಕೇಳಿಕೊಂಡುಬಿಟ್ಟೆ, ತಿನ್ನಕ್ಕೆ ಮೊದಲೆ, ತುಂಬಾ ಆಸೆ ಒಂದು ತಿನ್ನುತ್ತೇನೆ , ಕ್ಷಮಿಸಿಬಿಡು ಅಂತ "
ಹೇಳಿದಳು
"ಹೋಗಲಿ ಬಿಡು , ಸುಮ್ಮನಾಗಿ ಬಿಡು , ಮತ್ತೆ ಮತ್ತೆ ಅದೇ ಹೇಳುತ್ತ ಇರಬೇಡ" ಎಂದೆ ನಾನು ಮೆತ್ತಗೆ.
"ರೀ ಕಾಫಿ ತಗೊಳ್ಳಿ " ಅವರ ಅಮ್ಮನ ದ್ವನಿ ನನ್ನ ಹಿಂಬದಿಯಿಂದ
ತಿರುಗಿ ನೋಡಿದೆ, ನನಗೆ ಕಾಫಿ ಕೊಡುತ್ತಲೆ, ಮಗಳ ಕಡೆ ಹುಸಿ ಕೋಪದಿಂದ ನೋಡುತ್ತಿದ್ದಳು , ಪತ್ನಿ.
ನಾನು ಕಾಫಿ ಲೋಟ ಹಿಡಿದು ಸೈಲೆಂಟಾಗಿ ಹಾಲಿಗೆ ಬಂದು ಸೋಪ ಮೇಲೆ ಕುಳಿತು ಬಿಟ್ಟೆ

No comments:

Post a Comment

enter your comments please