Sunday, November 11, 2012

ನನ್ನ ಕಥಾನಾಯಕಿಯ ಜೊತೆ ಮುಖಾಮುಖಿ


ನನ್ನ ಕಥಾನಾಯಕಿಯ ಜೊತೆ ಮುಖಾಮುಖಿ

 ಅದೇನೊ ಆಕೆಯ ಸ್ವಭಾವವೆ ಹಾಗೆ. ಒಂದೆರಡು ದಿನ ಮೌನವಾಗಿದ್ದರೆ ಮತ್ತೆರಡು ದಿನ ಅದೇನೊ ಟೆನ್ಷನ್ ಇರುವಳಂತೆ ಅವಳ ವರ್ತನೆ. ಎಲ್ಲರನ್ನು ನಗುತ್ತ ಮಾತನಾಡಿಸುತ್ತಲೆ ಇರುವ ಅವಳು ಅದೇಕೊ ಕೆಲವು ದಿನ ವ್ಯಘ್ರಳಾಗಿರುತ್ತಾಳೆ. ಆ ದಿನ ಯಾರ ಮೇಲಾದರು ಆಕೆಯ ಕೋಪ ತಿರುಗಿದರೆ ಆಫೀಸಿನಲ್ಲಿ ಎಂತದೊ ಗಲಾಟೆ , ಕೂಗಾಟ ಎಲ್ಲಡೆಯು ರಂಪ.

ಆ ದಿನ ನನ್ನ ಟೂವಿಲರ್ ನಿಲ್ಲಿಸಿ ಒಳಗೆ ಹೋಗುವಾಗಲೆ ಎದುರಿಗೆ ಸಿಕ್ಕಿ , ತಲೆ ತಿರುಗಿಸಿ ಒಳ ಹೋದಳು. ನಂತರ ಅದೇನೊ ಕೆಲಸಕ್ಕೆ ಒಂದು ನೋಟ್ ಪುಸ್ತಕ ಹಿಡಿದು , ನನ್ನ ಸೆಕ್ಷನ್ ಗೆ ಕಾಲಿಟ್ಟಿದ್ದಳು. ಸೀದ ನನ್ನ ಕಡೆ ಬಂದು ಕೇಳಿದಳು,  ಇದಿಷ್ಟನ್ನು ನಾನು ಕ್ರಾಸ್ ವೆರಿಫೈ ಮಾಡಿ ನೋಡಬೇಕು, ಯಾರಾದಾದರು ಅಸಿಸ್ಟೆನ್ಸ್ ಕೊಡಿ, ನಾನು ಸರಿ ಎನ್ನುತ್ತ , ನನ್ನ ಸೆಕ್ಷನ್ ನಲ್ಲಿ ಒಬ್ಬರಿಗೆ ಹೇಳಿದೆ. ಹತ್ತು ನಿಮಿಷದಲ್ಲಿ ಎಲ್ಲ ಸರಿ ಇದೆ ಎಂದು ಬಂದರು.  
ಒಂದು ರೆಕಾರ್ಡ್ ಗೆ ಮಾತ್ರ ವಿವರ ಬೇಕಿತ್ತು, ನನ್ನ ಎದುರಿಗೆ ಕುಳಿತಿದ್ದ ವೇದವತಿಯನ್ನು ಆಕೆ, ಕೇಳಿದರು,ವೇದವತಿ ಒಂದು ನಿಮಿಶ ಎಂದರು, ಆದರೆ ಆಕೆ ಕಾಯಲು ಸಿದ್ದವಿರಲಿಲ್ಲ, ನನ್ನ ಬಳಿ ಕೇಳಿದರು, ನಾನು ಕಂಪ್ಯೂಟರಿನಲ್ಲಿ ಒಂದೆ ಫೈಲ್ ಒಪನ್ ಮಾಡಿದ್ದೆ ಅದನ್ನು ಮಧ್ಯದಲ್ಲಿ ಬಿಡುವಂತಿಲ್ಲ, ಒಂದೆ ನಿಮಿಶ ಕುಳಿತುಕೊಳ್ಳಿ ಕೊಡುವೆ ಎಂದೆ. ಅದೇನೊ ಆಕೆಗೆ ರೇಗಿ ಹೋಯ್ತು, ನಾನು ನಂತರ ಆಕೆ ಕೇಳಿದ ವಿವರ ಒದಗಿಸಿದೆ

ನಾನು ಇಷ್ಟು ಕೆಲಸ ಮಾಡುವೆ , ನನಗೆ ಯಾರು ಸಹಕರಿಸಲ್ಲ, ನನಗೆ ಗೊತ್ತು ಇದನ್ನು ಯಾರ ಹತ್ತಿರ ಒಯ್ಯಬೇಕು ಎಂದು ಎನ್ನುತ್ತ , ಜೋರಾಗಿ ಗೊಣಗಾಡುತ್ತಲೆ ಆಕೆ ಹೊರಟುಹೋದರು. ನಾನು ಸುಮ್ಮನಾಗಿ ನನ್ನ ಕೆಲಸದತ್ತ ಗಮನ ಹರಿಸಿದೆ, ಆದರೆ ಅದು ಅಷ್ಟಕ್ಕೆ ಸುಮ್ಮನಾಗುವಂತಿರಲಿಲ್ಲ. ನನ್ನ ಸೆಕ್ಷನ್ ನಲ್ಲಿ ಕೆಲಸ ಮಾಡುವ ಹತ್ತಕ್ಕಿಂತ ಹೆಚ್ಚು ಕೆಲಸಗಾರರು, ಒಮ್ಮೆಲೆ ಬಂದರು
“ಸಾರ್ ಆಕೆಯನ್ನು ಇಲ್ಲಿ ಅಲೊ ಮಾಡಬೇಡಿ, ಅವಳು ಬಂದು ನಮ್ಮೆಲ್ಲರ ಮೇಲೆ ಸದಾ ಸುಮ್ಮನೆಯೆ ಕೂಗಾಡಿ ಹೋಗುತ್ತಾರೆ, ನಾವು ಎಷ್ಟು ಎಂದು ಸಹಿಸಿ ಸುಮ್ಮನಿರುವುದು, ಇನ್ನು ಅವಳು ಒಳಗೆ ಬಂದರೆ ನಾವೆ ಹೊರಗೆ ಹೊರಟು ಹೋಗುತ್ತೇವೆ ಅಷ್ಟೆ” ಹೀಗೆಲ್ಲ ಕೂಗಾಡಿ ಹೋದರು, ನಾನು ಮನದಲ್ಲಿ ಏಕೊ ಇಂದು ನನಗೆ ದಿನ ಸರಿ ಇಲ್ಲ ಅಷ್ಟೆ ಎಂದುಕೊಂಡು, ಪುನಃ ಅದೆ ಸಮಸ್ಯೆ ಎದುರಾದರೆ ನೋಡೋಣ ಎಂದು ಸುಮ್ಮನಾದೆ.

 ಅಷ್ಟರಲ್ಲಿ ನನ್ನ ಮೇಲಾಧಿಕಾರಿಯಿಂದ ನನಗೆ ಕರೆ ಬಂದಿತು, ಒಂದು ನಿಮಿಶ ಬನ್ನಿ ಎಂದು. ಹೋದರೆ ಅಲ್ಲಿ ಆಕೆ ಕುಳಿತು ಗಲಾಟೆ ಎಬ್ಬಿಸಿದ್ದರು. ನಾನು ಹೋದರೆ ಯಾರು ಸಹಕರಿಸಲ್ಲ. ಎಂದು. ನಾನು ಮೇಲಾದಿಕಾರಿಯ ಮುಖ ನೋಡಿದೆ, ಆತನೇನು ತುಂಬಾ ಸೀರಿಯಸ್ ಇರುವಂತೆ ಕಾಣಲಿಲ್ಲ,. ನಗುತ್ತಿದ್ದರು. ನನ್ನನ್ನು ನೋಡಿ
“ಏನ್ರಿ ಇದು , ಇವರೇನೊ ಕೂಗಾಡುತ್ತಿದ್ದಾರೆ” ಎಂದರು. ನಾನು ಹೇಳಲು ಹೋದರೆ ಆಕೆ ಬಿಡುತ್ತಿಲ್ಲ
“ಪಾರ್ಥಸಾರಥಿ ನೀವು ಸುಳ್ಳು ಹೇಳ ಬೇಡಿ, ಏನು ನಡೆಯಿತು ಎಂದು ಮಾತ್ರ ಹೇಳಿ, ನಾನು ಕೇಳಿದರೆ ನಿಮ್ಮ ವೇದವತಿ ಒಂದು ವಿವರ ಕೊಡಲಿಲ್ಲ” ಎಂದೆ ಕೂಗಾಡುತ್ತಿದ್ದರು
ನಾನು ಎದುರಿಗೆ ನೋಡಿದ್ದೆ,  ವೇದವತಿಯೇನು ಈಕೆಯನ್ನು ಅವಮಾನವಾಗಲಿ ನಿರ್ಲಕ್ಷವಾಗಲಿ ಮಾಡಿರಲಿಲ್ಲ, ಆದರೆ ಅದನ್ನು ಹೇಳಲು ಈಕೆ ಬಿಡುತ್ತಿಲ್ಲ, ನೀವು ಸುಳ್ಳು ಹೇಳಿ ಆಕೆಯ ಪರ ವಾದಿಸಬೇಡಿ ಎಂದು ಕೂಗಾಡುತ್ತಿದ್ದಾಳೆ.
ಕಡೆಗೊಮ್ಮೆ ಕೇಳಿದೆ
“ಸರಿ ಈಗ ನಾನು ಏನು ಮಾಡಬೇಕೆಂದು ನಿರೀಕ್ಷಿಸುತ್ತಿದ್ದೀರ ಹೇಳಿ” ಎಂದೆ, ಆಕೆ
“ಮೊದಲು ವೇದವತಿಗೆ
ನಂತರ ನಿಮ್ಮ ಸೆಕ್ಷನ್ ನಲ್ಲಿ ಇರುವವರಿಗೆ ಬುದ್ದಿ ಹೇಳಿ, ಪೊಲೈಟ್ ಆಗಿ ವರ್ತಿಸಲು ಹೇಳಿ” ಎಂದರು
ನಾನು ಸರಿಯೆ, ಅದೇ ರೀತಿ ಮಾಡುತ್ತೇನೆ ನೀವೇನು ಚಿಂತಿಸಬೇಡಿ, ಎಂದೆ
ಆಕೆಗೆ ಅದೇನೊ ಇದ್ದಕ್ಕಿದ್ದಂತೆ ಅಳು
“ನಾನು ಯಾವ ಪರಿಸ್ಥಿಥಿಯಲ್ಲಿ ಕೆಲಸ ಮಾಡುತ್ತಿರುವೆ ನಿಮಗೆ ಗೊತ್ತ” ಹೀಗೆ ಏನೇನೊ ಹೇಳುತ್ತ ಹೊರಟು ಹೋದರು. ನನಗೆ ಆ ವೇದವತಿಯು ಯಾವ ಪರಿಸ್ಥಿಥಿಯಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ ಎಂಬ ಅರಿವಿತ್ತು. ಆದರೆ ಏನು ಮಾತನಾಡಲು ಹೋಗಲಿಲ್ಲ.
ಸರಿ ಎನ್ನುತ್ತ ನಾನು ಹೊರಟರೆ. ನಮ್ಮ ಮೇಲಾಧಿಕಾರಿ ಕೇಳಿದರು
“ಅದೇಕೆ ಅಷ್ಟೊಂದು ಮೈಲ್ಡ್ ಆಗಿ ವರ್ತಿಸುತ್ತೀರಿ, ನನಗೆ ಗೊತ್ತಿದೆ ಆಕೆ ದಿನಾ ಒಂದು ಕಂಪ್ಲೇಂಟ್ ತಂದು ನನ್ನ ತಲೆ ಕೆಡಿಸುತ್ತಾರೆ, ನೀವು ಆಕೆಗೆ ಸುಮ್ಮನೆ ಹೆದರಿದಿರಿ, ಸ್ವಲ್ಪ ದಭಾಯಿಸಿದ್ದರೆ ಆಕೆ ಎದ್ದು ಹೋಗುತ್ತಿದ್ದರು, ನೀವು ತುಂಬ ಪುಕ್ಕಲಪ್ಪ “ ಎನ್ನುತ್ತ ನಕ್ಕರು.

ನಾನು ಸುಮ್ಮನೆ ನಕ್ಕು ಎದ್ದು ಬಂದೆ,

ಆದರೆ ಆತನಿಗೆ ಅದು ಹೇಗೆ ಹೇಳಲಿ, ನಾನು ’ಆಕೆ’ಗೆ ಹೆದರಿ ಹಾಗೆ ವರ್ತಿಸಿದ್ದಲ್ಲ,  ಆಕೆ ಎದುರಿಗಿದ್ದಾಗ ಅವಳಲ್ಲಿ ನನ್ನ ಕಥಾನಾಯಕಿ ಸುನಂದಳನ್ನು ಎದುರಿಗೆ ಕಾಣುತ್ತಿದ್ದೆ. ನಾನು ಬರೆದ ಕತೆ ’ಸುನಂದ’ ಳಿಗೆ ಆಕೆಯೆ ರೋಲ್ ಮಾಡೆಲ್, ನನ್ನ ನಾಯಕಿಯ ಮನಸಿಗೆ ನಾನು ಹೇಗೆ ನೋವು ಮಾಡಲಿ, ಆ ಅಸಹಾಯಕತೆ ನನ್ನನ್ನು ಕಾಡಿತ್ತು. ಅದಕ್ಕಾಗಿಯೆ ಆಕೆಯ ಯಾವೊಂದು ಕೂಗಾಟಕ್ಕು ನಾನು ಉತ್ತರಿಸಲಿಲ್ಲ ಎಂದು ನನಗೊಬ್ಬನಿಗೆ ಮಾತ್ರ ಗೊತ್ತಿತ್ತು.

No comments:

Post a Comment

enter your comments please