Sunday, June 9, 2013

ಮುನಿಷಿಯವರ ಕೃಷ್ಣಾವತಾರ


 ಪುಸ್ತಕ  : ಕೃಷ್ಣಾವತಾರ (ಒಂಬತ್ತು ಪುಸ್ತಕಗಳು ಹತ್ತು ಬಾಗ)
ಲೇಖಕರು : ಕನ್ಹಯ್ಯಲಾಲ್ ಮುನಿಷಿ
ಕನ್ನಡಕ್ಕೆ : ಸಿದ್ದವನಹಳ್ಳಿ ಕೃಷ್ಣ ಶರ್ಮ
ಪ್ರಕಟಣೆ: ಅಧ್ಯಕ್ಷರು ಬಿ.ಡಿ. ಜತ್ತಿ , ಲೋಕಶಿಕ್ಷಣ ಟ್ರಸ್ಟ್ ಗ್ರಂಥಮಾಲೆ , ಹುಬ್ಬಳ್ಳಿ ಬೆಂಗಳೂರು.

 ಪುರಾಣಪುರುಷ ಶ್ರೀಕೃಷ್ಣನ ಕಥೆಯನ್ನು ತಮ್ಮ ಕಲ್ಪನೆಯಲ್ಲಿ ಮೂಡಿಸಿದ್ದಾರೆ ಶ್ರೀ ಮುನಿಷಿಯವರು ಇಂಗ್ಲೀಷ್ ಬಾಷೆಯಲ್ಲಿ ಅದನ್ನು ಕನ್ನಡಕ್ಕೆ ತಂದಿರುವರು ಸಿದ್ದವನಹಳ್ಳಿ ಕೃಷ್ಣ ಶರ್ಮರು. ಒಂಬತ್ತು ಪುಸ್ತಕಗಳ ಹತ್ತು ಬಾಗಗಳಲ್ಲಿ ಕತೆ ಸಾಗುತ್ತದೆ.
ಮೊದಲಿಗೆ ಕೃಷ್ಣ  ಹುಟ್ಟುವ ಮೊದಲಿನ ಸನ್ನಿವೇಶ ಆಗಿನ ರಾಜಕೀಯ ಸ್ಥಿತ್ಯಂತರ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತ ಸಾಗುತ್ತಾರೆ ಲೇಖಕರು. ಮೂಲಕತೆಯಲ್ಲಿನ ಹಲವು ಅನುಮಾನಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಕೃಷ್ಣನು ಚಿಕ್ಕಮಗುವಾಗಿರುವಾಗ ಪದೆ ಪದೆ ಅವನ ಮೇಲೆ ಆಕ್ರಮಣ ನಡೆಸುವ ಕಂಸನ ಕಡೆಯವರು ಪೂತನಿಯ ಮರಣದ ನಂತರ , ಪುನಃ ಕೃಷ್ಣ ಮದುರೆಗೆ ಬರುವವರೆಗು ಅವನನ್ನು ಕೊಲ್ಲಲ್ಲು ಯಾವ ಪ್ರಯತ್ನ ಸಹ ಮಾಡುವದಿಲ್ಲ ಅನ್ನುವದು ನನಗೆ ಎಂದಿಗು ಆಶ್ಚರ್ಯವೆನಿಸಿತ್ತು, ಹಾಗೆ ಮದುರೆಗೆ ಬಂದು ಅವನ ತಾಯಿಯನ್ನು ಬಿಡಿಸಿದವನು , ತನ್ನ ತಂದೆಯ ರಾಜ್ಯಕ್ಕೆ ಹೋಗದೆ ಅಲ್ಲಿಯೆ ಏಕೆ ಉಳಿದುಬಿಡುವ ಎನ್ನುವ ಪ್ರಶ್ನೆಯು ಕಾಡುತ್ತಿತ್ತು. ಬಲರಾಮ  ರೋಹಿಣಿಯ ಮಗ ಕೃಷ್ಣನ ಜೊತೆ ಏಕೆ ನಂದನ ಮನೆಯಲ್ಲಿರುವ ಎನ್ನುವ ಪ್ರಶ್ನೆ, ಇಂತದಕ್ಕೆಲ್ಲ ಅಲ್ಲಿ ಉತ್ತರಿಸುತ್ತ ಹೋಗುತ್ತಾರೆ, ಕೃಷ್ಣನ ಸಂಭಂದಗಳೆಲ್ಲ ಇಲ್ಲಿ ಅನಾವರಣಗೊಳ್ಳುತ್ತ ಹೋಗುತ್ತವೆ,  ಬಲರಾಮ ಸಹ ವಸುದೇವನ ಮಗನೆ ಎಂಬುದು ನನಗೆ ತಿಳಿದೆ ಇರಲಿಲ್ಲ. ವಸುದೇವನಿಗೆ ದೇವಕಿ ಒಬ್ಬಳೆ ಪತ್ನಿ ಎಂದುಕೊಂಡಿದ್ದರೆ, ರೋಹಿಣಿ ಸಹಿತ ಅವನ ಪತ್ನಿಯೆ.
ಕೃಷ್ಣನ ಬಾಲ್ಯದ ಘಟನೆಗಳೆಲ್ಲ ಕಣ್ಣೆದುರು ನಿಲ್ಲುತ್ತಿರುವಂತೆ, ರಾದೆಯ ಚಿತ್ರ ನಮ್ಮ ಮನಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ.

 ಕೃಷ್ಣನ ಬಾಲ್ಯಕ್ಕು ನಂತರದ ಅವನ ರಾಜಕೀಯ ಬದುಕಿಗು ಸಂಭಂದ ಕಲ್ಪಿಸಲೆ ಆಗಲಾರದಂತೆ ಇರುವುದೆ ಕತೆಯ ವೈಶಿಷ್ಟ್ಯ

ಕೃಷ್ಣನು ಮದುರೆಗೆ ಬಂದು ಕಂಸನನ್ನು ಕೊಲ್ಲುವುದು ನಂತರದ ರಾಜಕೀಯ ಬದಲಾವಣೆಗಳು, ಕಂಸನ ಮಾವನಾದ ಜರಾಸಂದ ಕೃಷ್ಣನ ದ್ವೇಷಿಯಾಗುವುದು. ಜರಾಸಂದನಿಂದ ತಪ್ಪಿಸಿಕೊಂಡು ಹೋದ ಕೃಷ್ಣ ಪುನಃ ಜರಾಸಂದನನ್ನೆ ಸೋಲಿಸುವುದು. ರುಕ್ಮಿಣಿಯ ಕತೆ ಎಲ್ಲವು ಅನಾವರಣಗೊಳ್ಳುತ್ತ ಹೋಗುತ್ತದೆ, ಕಂಸನ ಹಿಂಸೆ ತಡೆಯಲಾರದೆ ಕೃಷ್ಣನ ಆಗಮನ ಕಾಯುತ್ತ ಕುಳಿತವರೆ ಕಂಸನ ವದೆಯ ನಂತರ ಕೃಷ್ಣನ ವಿರುದ್ದ ಪಿತೂರಿಗಳಲ್ಲಿ ಪಾಲ್ಗೊಳ್ಳುವುದು  ಆಗಿನ ರಾಜಕೀಯ ನಡೆಯನ್ನು ತೋರುತ್ತದೆ.

ನಂತರ ಪಂಚಪಾಂಡವರ ಜೊತೆಗಿನ ಸಂಭಂದದ ವಿವರಗಳು,  ನಾನು ಮೊದಲೆಲ್ಲ ಓದಿರುವಂತೆ ದ್ರೌಪತಿ ಸ್ವಯಂವರದ ನಂತರವೆ ಕೃಷ್ಣ ಕಾಣಿಸುವುದು ಎಂದು ಅರಿತಿದ್ದೆ ಆದರೆ ಇಲ್ಲಿ ತುಂಬಾ ಚಿಕ್ಕವಯಸಿನಿಂದಲು ಪಾಂಡವರು ಹಾಗು ಕೃಷ್ಣನ ಸಖ್ಯಕಾಣುತ್ತದೆ, ಮೂಲಮಹಾಭಾರತದಲ್ಲಿರುವಂತೆ ಕೃಷ್ಣ ಆರ್ಜುನ ಜೊತೆ ಒಡನಾಟಕ್ಕಿಂತ ಇಲ್ಲಿ ಅದೇಕೊ ಭೀಮನ ಜೊತೆಯೆ ಅವನ ಸಖ್ಯ ಹೆಚ್ಚು ಇದೆ. ಅರ್ಜುನನ ಪ್ರಸ್ತಾಪವೆ ಇಲ್ಲ.

ಅಲ್ಲದೆ ಪಾಂಡವರ ತಾಯಿ ಕುಂತಿ,  ಶಿಶುಪಾಲನ ತಾಯಿ ಇಬ್ಬರು ಸಹಿತ ವಸುದೇವನ ಸ್ವಂತ ತಂಗಿಯರೆ ಹಾಗಿದ್ದರು ಕೃಷ್ಣ ಹಾಗು ಪಾಂಡವರ ನಡುವೆ ಇರುವ ಸಂಭಂದ ಶಿಶುಪಾಲನ ಜೊತೆ ಎಲ್ಲಿಯು ಕಾಣಿಸುವದಿಲ್ಲ. ಇಬ್ಬರು ತನ್ನ ಸೋದರತ್ತೆಯ ಮಕ್ಕಳೆ ಆದರು ಸಹ ಕೃಷ್ಣ ಪಾಂಡವರ ಜೊತೆ ಇರುವಂತೆ ಶಿಶುಪಾಲನ ಜೊತೆ ಎಂದಿಗು ಇರುವದಿಲ್ಲ ಹಾಗು ಕಡೆಯಲ್ಲಿ ಅವನನ್ನೆ ತನ್ನ ಚಕ್ರದಿಂದ ಸಂಹರಿಸುತ್ತಾನೆ ಅನ್ನುವ ಪ್ರಶ್ನೆಗೆ ಉತ್ತರ ಸಿಗಲೆ ಇಲ್ಲ. ಶಿಶುಪಾಲ ಕೃಷ್ಣನನ್ನು ಏಕೆ ವಿರೋದಿಸುತ್ತಿದ್ದ ಅನ್ನುವದಕ್ಕೆ ತಾರ್ಕಿಕ ಉತ್ತರವೆ ಇಲ್ಲ ,  ಕೃಷ್ಣನು  ಜರಾಸಂದನ ವಿರೋದಿ ಅನ್ನುವದಷ್ಟೆ ಕಾರಣ ಶಿಶುಪಾಲ ಅವನನ್ನು ವಿರೋದಿಸುವದಕ್ಕೆ.  ಅಲ್ಲದೆ ಪಾಂಡವರು ಹಾಗು ಶಿಶುಪಾಲ ಇಬ್ಬರು ಅಕ್ಕತಂಗಿಯರ ಮಕ್ಕಳು ಅಂದರೆ ದೊಡ್ಡಮ್ಮ ಚಿಕ್ಕಮನ ಮಕ್ಕಳು ಆದರೆ ಅವರಿಬ್ಬರ ನಡುವೆ ಯಾವಾಗಲು ಯಾವುದೆ ಸಂಭಂದವಿರುವುದೆ ಇಲ್ಲ ಅನ್ನುವುದು ಆಶ್ಚರ್ಯವೆ. ಹಾಗೆ ಪಾಂಡವರ ತಾಯಿ ಕುಂತಿ ಹಾಗು ಶಿಶುಪಾಲನ ತಾಯಿ ಅಕ್ಕತಂಗಿಯರು , ಅವರಿಬ್ಬರು ಎಂದು ಬೇಟಿ ಮಾಡುವ ಸಂದರ್ಬವೆ ಇರುವದಿಲ್ಲ ಅನ್ನುವುದು ಆಶ್ಚರ್ಯವೆ.

ಮೊದಲಿಗೆ ಯಾದವರ ನಡುವೆ ಇರುವ ಕೃಷ್ಣ ನಂತರ ಉತ್ತರಕ್ಕು ಹೋಗಿ ಸಂಪೂರ್ಣ ಆರ್ಯರಾಜರ ನಡುವಿನ ರಾಜಕೀಯದ ಕೇಂದ್ರಬಿಂದು ಎನಿಸುತ್ತಾನೆ.

ಐದನೆ ಬಾಗದವರೆಗು ಕತೆಯ ನಿರೂಪಣೆಯಲ್ಲಿ ಇರುವ ಬಿಗಿ ಅದೇಕೊ ನಂತರ ಕಳೆದು ಹೋಗಿದೆ ಅನ್ನಿಸುತ್ತೆ. ಪಾಂಡವರ ಕತೆಯ ವಿವರದೊಂದಿಗೆ ಕೃಷ್ಣ ಅಪ್ರಸ್ತುತನಾಗುತ್ತಾನೆ. ಅವನ ಪಾತ್ರವೆ ಇಲ್ಲದಂತೆ ಕತೆ ಸಾಗುತ್ತದೆ.

 ಎಂಟನೆ ಬಾಗಕ್ಕೆ ಬರುತ್ತಿರುವಂತೆ ಒಮ್ಮೆಲೆ ಲೇಖಕರು ಕೃಷ್ಣನ ಕತೆ ಎನ್ನುವದನ್ನೆ ಮರೆತು  ಭಾರತದ ಮತ್ಯಾವುದೊ ಅಧ್ಯಾಯ ಪ್ರಾರಂಬವಾಗುತ್ತದೆ. ಅದರಲ್ಲು ಕೃಷ್ಣದ್ವೈಪಾಯನರ ಕತೆಯನ್ನು ವಿವರಿಸುತ್ತ,  ಆಗ ಆರ್ಯರ ಹೊರತು ಮತ್ತೆಲ್ಲರು ನರಮಾಂಸ ಭಕ್ಷಣೆ ಗೋಮಾಂಸ ಭಕ್ಷಣೆ ಮಾಡುತ್ತಿರುವುದು ಸಹಜ ಅನ್ನುವಂತೆ ಬರೆಯಲಾಗಿದೆ. ಕತೆಯಲ್ಲಿ ಸಾಮಾನ್ಯ ಹಳ್ಳಿಯ ಜನ, ಗುಡ್ಡಗಾಡು ಜನರು ಎಲ್ಲರು ನರಮಾಂಸ ಭಕ್ಷಿಸುತ್ತಿದ್ದರು ಅನ್ನುವಂತೆ ಬರೆದಿರುವುದು ಸ್ವಲ್ಪ ಅಸಹಜವೆ ಅನ್ನಿಸುತ್ತೆ. ಅಲ್ಲೆಲ್ಲು ಕೃಷ್ಣ ಬರುವುದು ಇಲ್ಲ, ಕೃಷ್ಣಾವತಾರಕ್ಕು ಈ ಕತೆಗೆ ಯಾವ ಸಂಭಂದವು ಇಲ್ಲ.

ನಂತರ ಕೃಷ್ಣನ ಕತೆ ನೆನಪಿಗೆ ಬಂದಂತೆ ಸ್ಯಮಂತಕ ಮಣಿಯ ಕತೆಯನ್ನು ಹೇಳುತ್ತ ಸತ್ರಾಜಿತನನ್ನು ಒಬ್ಬ ಸಾಮಾಜಿಕ ದ್ರೋಹಿ ಎಂಬಂತೆ ಚಿತ್ರಿಸಲಾಗಿದೆ. ಸ್ಯಮಂತಕ ಮಣಿಯ ಕತೆಯ ಉದ್ದಕ್ಕು ಸತ್ರಾಜಿತನ ಮಗಳು ಸತ್ಯಭಾಮ ಕೃಷ್ಣನ ಪ್ರೇಯಸಿಯಾಗಿದ್ದು ಕಡೆಯಲ್ಲಿ ಅವನನ್ನೆ ತಂದೆಯ ಇಚ್ಚೆಗೆ ವಿರುದ್ದವಾಗಿ ಮದುವೆ ಆಗುತ್ತಾಳೆ. ಸಿಂಹವನ್ನು ಕರಡಿ ಕೊಂದು ಸ್ಯಮಂತಕ ಮಣಿಯನ್ನು ತೆಗೆದುಕೊಂಡು ಹೋಯಿತು ಎನ್ನುವ ಒಂದು ಎಳೆಯನ್ನು ಹಿಡಿದು ಬರೆದಿರುವ ಕತೆಯಲ್ಲಿ ಲೇಖಕರು ಒಂದು ಕರಡಿಯ ಲೋಕವನ್ನು ಸೃಷ್ಟಿಸಿಬಿಟ್ಟಿದ್ದಾರೆ.  ಕಾಡಿನಲ್ಲಿ ಬೆಳೆದ ಟಾರ್ಜನನ್ನ ಕತೆಯೊ ಅಥವ ಆಫ್ರಿಕದಲ್ಲಿ ಶೀಲ ಕತೆ ಓದುವಂತೆ ಬಾಸವಾಗುವ ಆ ಬಾಗ ಅತಿಯಾದ ಕಲ್ಪನೆಯಿಂದ ಕೂಡಿದೆ ಅನ್ನಿಸುತ್ತೆ. ಕತೆಯ ಉದ್ದಕ್ಕು ಸಾತ್ಯಕಿ ಹಾಗು ಉದ್ದವ ಕೃಷ್ಣನ ಅಂತರೀಕರಂತೆ ನಂಬಿಕೆಯವರಂತೆ ಕಾಣುವರು. ಸ್ಯಮಂತಕ ಮಣಿಯ ಕತೆಯ ನಂತರ ಜರಾಸಂದನ ವದೆ ಹಾಗು ಪಾಂಡವರ ರಾಜಸೂಯ ಯಾಗ ನಡೆದಂತೆ ಕತೆ ಅದೇನೊ ಆತುರ ಆತುರವಾಗಿ ಮುಗಿಸುವಂತೆ ಕಾಣುತ್ತ , ಅರ್ದದಲ್ಲಿಯೆ ನಿಂತು ಹೋಗುತ್ತದೆ.  ಕೃಷ್ಣಾವತಾರ ಕತೆ ಮುಗಿದೆ ಹೋಗುತ್ತದೆ, ಮಹಾಭಾರತ ಯುದ್ದ ನಡೆಯುವುದೆ ಇಲ್ಲ.

ಅದೇನೊ ಕತೆ ಓದಿದ ತೃಪ್ತಿಯೆ ಸಿಗುವದಿಲ್ಲ ಏತಕ್ಕೆ ಎಂದು ಹತ್ತನೆ ಬಾಗದ ಪ್ರಕಾಶಕರ ನುಡಿ ಓದುವಾಗ ತಿಳಿಯುತ್ತದೆ,  ಕೃಷ್ಣಾವತಾರದ ಲೇಖಕ ಮುನಿಷಿಯವರು ಕತೆಯನ್ನು ಸಂಪೂರ್ಣಗೊಳಿಸದೆ ನಿದನರಾಗಿದ್ದಾರೆ ಎಂದು.
 ಮೊದಲ ಐದು ಬಾಗ ಸಹಜತೆಗೆ ಹತ್ತಿರವಾಗಿದ್ದು, ಉಳಿದ ಐದು ಬಾಗ ಅತಿಯಾದ ಕಲ್ಪನೆ ರಂಜನೆಯಿಂದ ಕೂಡಿದೆ ಎನ್ನುವುದು ನನ್ನ ಸ್ವಂತ ಅಭಿಪ್ರಾಯ.

ಕತೆಯಲ್ಲಿ ಖುಷಿ ಕೊಡುವ ಬಾಗ ಎಂದರೆ ಬೀಮನ ಮಾತುಕತೆ ಹಾಗು ಅವನ ಮಗ ಘಟೋದ್ಗಜನ ಕತೆ . ಅಂದಹಾಗೆ ಇಲ್ಲಿ ಬಕಾಸುರ ಬರುವುದೆ ಇಲ್ಲ.


No comments:

Post a Comment

enter your comments please