Tuesday, June 18, 2013

ಕತೆ ಪತ್ತೆದಾರಿ : ಹೀಗೊಂದು ಕಿಡ್ನಾಪ್




ಪ್ರಿಯಾಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್ .

ಆಕೆ ಕೊಲೆ ದರೋಡೆಗಿಂತ , ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ ಬರುತ್ತಿದ್ದ ಹಣ.  ಆಕೆ ಕೋರ್ಟ್ ನಲ್ಲಿ ಗೆದ್ದ ಕೇಸುಗಳಿಗಿಂತ ಹೊರಗೆ ಸೆಟ್ಲ್ ಮಾಡಿರುವ ಕೇಸ್ ಗಳೆ ಜಾಸ್ತಿ ಇದ್ದವು, ತಾನು ತೆಗೆದುಕೊಂಡ ಕೇಸ್ ಗೆಲ್ಲಲ್ಲು ಆಕೆ ಎಲ್ಲ ರೀತಿಯಲ್ಲು ಪ್ರಯತ್ನ ಪಡುತ್ತಿದ್ದಳು. ಎದುರು ಪಾರ್ಟಿಯನ್ನು ಹಿಡಿದು ಒಪ್ಪಿಸುವುದು, ಎದುರು ಪಾರ್ಟಿಯ ಲಾಯರ್ ಗಳನ್ನು ಹಣತೋರಿಸಿ ಆಸೆ ಹುಟ್ಟಿಸಿ  ಅವರ ಕ್ಲೈಂಟ್ ಗಳು ಒಪ್ಪಂದಕ್ಕೆ ಬರುವಂತೆ ಪ್ರಚೋದಿಸುವುದು,  ಯಾವುದೆ ಮಾರ್ಗದಿಂದ ಆಗದಿದ್ದರೆ ಕಡೆಗೆ ಕೆಲವು ಸಾರಿ ರೌಡಿಗಳನ್ನು ಕಳಿಸಿ ಭಯ ಹುಟ್ಟಿಸಿ ಎದುರು ಪಾರ್ಟಿಯವರು ಕೇಸಿನಿಂದ ಹಿಂದೆ ಸರಿಯುವಂತೆ ಮಾಡುವ ಕಲೆಯು ಆಕೆಗೆ ಸಿದ್ದಿಸಿತ್ತು.

 ಹಾಗೆಂದು ಎಲ್ಲ ಕೇಸುಗಳನ್ನು ಗೆಲ್ಲಲ್ಲೆ ಬೇಕೆಂಬ ಹಟವೇನಿಲ್ಲ,  ಕೆಲವೊಮ್ಮೆ ತನ್ನ ಕ್ಲೈಂಟ್ ಗಳನ್ನು ನಡುನೀರಿನಲ್ಲಿ ಕೈಬಿಟ್ಟು ಎದುರು ಪಾರ್ಟಿಗಳ ಲಾಯರ್ ಗಳಿಗೆ ಕೇಸನ್ನು ಬಿಟ್ಟು ಕೊಟ್ಟಿದ್ದಳು ಆದರೆ  ಅದು ತನಗೆ ಬರಬಹುದಾದ ಹಣದ ಪ್ರಮಾಣವನ್ನು ಅವಲಂಬಿಸಿತ್ತು. ಹೀಗಾಗಿ ಅವಳಿಗೆ ವೃತ್ತಿಯಲ್ಲಿ ಸ್ನೇಹಿತರಿಗಿಂತ ಶತ್ರುಗಳೆ ಜಾಸ್ತಿ, ಆದರೆ ಆಕೆ ಅದನ್ನೆಲ್ಲ ಕೇರ್ ಮಾಡುವ ಹೆಣ್ಣಲ್ಲ. 
 ಆಕೆಯ ಗಂಡ ಸೆಲ್ವರಾಜ್ ತುಂಬ ಸೌಮ್ಯ ಸ್ವಭಾವ. ಕಾಲೇಜಿನಲ್ಲಿ ಪ್ರಾದ್ಯಾಪಕನಾಗಿದ್ದ ಆತ ಅವಳನ್ನು ಮದುವೆಯಾದಗ ಆಕೆ ಆಗಿನ್ನು ವೃತ್ತಿ ಪ್ರಾರಂಬಿಸಿದವಳು. ಆದರೆ ಆಕೆ ವೃತ್ತಿಯಲ್ಲಿ ಬೆಳೆದಂತೆ ಪ್ರಿಯಾ ಗಂಡ ಸೆಲ್ವರಾಜ್ ನನ್ನು ಮೀರಿ ಬೆಳೆದ್ದಿದ್ದಳು,  . ಅವರಿಬ್ಬರಿಗು ಇದ್ದ ಏಕಮಾತ್ರ ಕೊಂಡಿ,  ಹೆಣ್ಣು ಮಗು ಶ್ರೇಯಾ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಕಾಲೋನಿಯಲ್ಲಿ ವಾಸ.

 ನಗರದ ಅತಿ ಪ್ರತಿಷ್ಠಿತ ಶಾಲೆಯ  ಐದನೆ ತರಗತಿಯಲ್ಲಿ ಓದುತ್ತಿದ್ದ ಶ್ರೇಯಾ ತಾಯಿಯಂತೆ ಚುರುಕು. ಬೆಳಗ್ಗೆ ಮನೆಯ ಹತ್ತಿರ ಬರುವ ಶಾಲೆಯ ವಾಹನ ಹತ್ತಿ ಹೊರಟರೆ, ಶಾಲೆ ಮುಗಿಸಿ ಮನೆಗೆ ಬರುವಾಗ ಸಂಜೆ ನಾಲಕ್ಕುವರೆ ಯಾಗುತ್ತಿತ್ತು. ತಾಯಿ ಪ್ರಿಯಾ ತನ್ನ ಮಗಳಿಗೆ ಯಾವುದೆ ಕೊರತೆ ಬರದಂತೆ ಸಾಕುತ್ತಿದ್ದಳು ತನ್ನ ಮಗಳು ಬೇಕೆಂದ ಯಾವುದೆ ವಸ್ತುವು ಅವಳಿಗೆ ತಕ್ಷಣ ಸಿಗುತ್ತಿತ್ತು. ಹಾಗಾಗಿ ಐದನೆ ತರಗತಿಯಲ್ಲಿದ್ದರು ಶ್ರೇಯಾಳಿಗೆ ಅವಳದೆ ಆದ ಮೊಬೈಲ್ ಇತ್ತು.

ಅಂದು ಗಂಟೆ ಐದಾಗುತ್ತ ಬಂದಿತ್ತು, ಅಪರೂಪಕ್ಕೆ ಮನೆಯಲ್ಲಿದ್ದ ಪ್ರಿಯಾ ಮಗಳಿಗೆ ಕಾಯುತ್ತಿದ್ದಳು, ಗಂಟೆ ಐದಾದರು ಮಗಳು ಬರದದಾಗ ಎದ್ದು ಗೇಟಿನ ಹತ್ತಿರ ಬಂದು ನಿಂತು ರಸ್ತೆಯಲ್ಲಿ ಆಕಡೆ ಈ ಕಡೆ ನೋಡುತ್ತಿದ್ದಳು. ಅವಳ ಕೈಲಿದ್ದ ಮೊಬೈಲ್ ಮೆಸೇಜ್ ಬಂದ ಸಿಗ್ನಲ್ ಮಾಡಿತು, ಮೊಬೈಲ್ ಕಡೆ ನೋಡಿದಳು, ಮಗಳ ಮೊಬೈಲ್ ನಿಂದಲೆ ಬಂದ ಮೇಸೇಜ್ ಅದರತ್ತ ನೋಡಿದರೆ
 'ಕಿಡ್ನಾಪ್ಡ್ , ಲೈಕ್ ಅವರ್ ಕಾರ್ ' ಎಂದು ಅಂಗ್ಲಬಾಷೆಯಲ್ಲಿತ್ತು.  

ಅವಳಿಗೆ ಒಂದು ಕ್ಷಣ ಅರ್ಥವಾಗಲಿಲ್ಲ, ತನ್ನ ಮಗಳು ಹಾಗೇಕೆ ಮೆಸೇಜ್ ಮಾಡಿದ್ದಾಳೆ, ಏನೊ ಆತಂಕ ಕಾಡಿತು, ತಕ್ಷಣ ಹೊರಬಂದು ಅದೆ ರಸ್ತೆಯ ಕಡೆಯಲ್ಲಿದ್ದ ಮಗಳ ಗೆಳತಿ ರಕ್ಷಿತ ಮನೆಯತ್ತ ನಡೆದಳು. ಬಾಗಿಲು ತಟ್ಟಿದರೆ ರಕ್ಷಿತಳೆ ಬಾಗಿಲು ತೆರೆದು, ಪ್ರಿಯಾಳನ್ನು ಕಂಡು
 "ಬನ್ನಿ ಅಂಟಿ" ಎಂದಳು. 

ಪ್ರಿಯಾ ಅವಳನ್ನು ,' ಶ್ರೇಯಾ ನಿನ್ನ ಜೊತೆ ಬರಲಿಲ್ಲವ ' ಎಂದು ಪ್ರಶ್ನಿಸಿದರೆ, 

ರಕ್ಷಿತ
"ಇಬ್ಬರು ಒಟ್ಟಿಗೆ ಬಂದೆವಲ್ಲ ಆಂಟಿ,  ಬಸ್ ಇಳಿದ ಶ್ರೇಯಾ ಮನೆಗೆ ಬಂದಳಲ್ಲ " ಎಂದಳು.
ಪ್ರಿಯಾಗೆ ಅರ್ಥವಾಗಿತ್ತು ಏನೊ ಹೆಚ್ಚು ಕಡಿಮೆಯಾಗಿದೆ. ಮತ್ತೆ ಮನೆ ಸುತ್ತ ಮುತ್ತ ನೋಡಿ, ಮಗಳಿಗೆ ಕಾಲ್ ಮಾಡಿದರೆ ಆ ಕಡೆಯಿಂದ ಉತ್ತರವಿಲ್ಲ. 

ಪ್ರಿಯಾಸೆಲ್ವರಾಜ್ ಸಾಮನ್ಯಳಲ್ಲ ಉನ್ನತ ಅಧಿಕಾರಿಗಳು ರಾಜಕಾರಣಿಗಳೆಲ್ಲ ಅವಳಿಗೆ ಸಾಕಷ್ಟು ಪರಿಚಿತರು, ಒಡನೆ ಆಕೆ ರಾಜ್ಯದ ಗೃಹ ಸಚಿವರಿಗೆ ಕಾಲ್ ಮಾಡಿ ಸುದ್ದಿ ತಿಳಿಸಿ ಸಹಾಯ ಮಾಡುವಂತೆ ತಿಳಿಸಿದಳು, ಹಾಗೆ ರಾಜ್ಯ ಪೋಲಿಸ್ ವರಿಷ್ಠ ರವರಿಗೆ ಕಾಲ್ ಮಾಡಿ ತನ್ನ ಆತಂಕ ತಿಳಿಸಿದಳು,   ಬೆಂಗಳೂರಿನ ಪೋಲಿಸ್ ಪಡೆ  ಅಲರ್ಟ್ ಆಗಿತ್ತು. 
.
.
ಶ್ರೇಯಾ ಕಿಡ್ನಾಪ್ ಆದ ಒಂದುವರೆ ಘಂಟೆ ಕಳೆದಿತ್ತು,
 ವಿಜಯನಗರದ  ಮೊಬೈಲ್ ಎಕ್ಸ್ ಚೆಂಜ್ ಒಳಗೆ ಪೋಲಿಸ್ ಅಧಿಕಾರಿ  ಅಶೋಕ್  ಪ್ರವೇಶಿಸಿದ. ಸಂಬಂಧಿಸಿದ ಅಧಿಕಾರಿಗಳ ಎದುರಿನಲ್ಲಿ ಕುಳಿತಿದ್ದ ಆತ, ಮಗು ಕಿಡ್ನಾಪ್ ಆಗಿರುವ ವಿಷಯ ತಿಳಿಸಿ , ಮಗುವಿನ, ಹಾಗು ಲಾಯರ್ ಪ್ರಿಯಾಳ ಪೋನ್ ನಂಬರ್ ಗಳನ್ನೆಲ್ಲ ನೀಡಿ, ಒಂದು ಘಂಟೆ ಹಿಂದೆ ಈ ನಂಬರ್ ನಿಂದ ಮೆಸೇಜ್ ಬಂದಿರುವದಾಗಿ ತಿಳಿಸಿ, ಅದು ಎಲ್ಲಿಂದ ಬಂದಿತು, ಈಗ ಆ ನಂಬರ್ ಇರುವ ಜಾಗ ಯಾವುದು ಎಲ್ಲ ವಿಷಯ ತಕ್ಷಣ ಬೇಕಾಗಿದೆ, ಎಂದ 

ಆ ನಂಬರ್ ಗಳನ್ನೆಲ್ಲ ಪರಿಶೀಲಿಸಿದ ಆಕೆ , ಕೊಡಬಹುದು ಕಷ್ಟವೇನಿಲ್ಲ, ಆದರೆ ಅದಕ್ಕೆ ಮೇಲಾಧಿಕಾರಿಗಳ ಅಪ್ಪಣೆ ಬೇಕಿರುತ್ತೆ  ಎಂದಳು. ಪೋಲಿಸ್ ಅಧಿಕಾರಿ ಅಶೋಕ್ ಆಕೆಯ ಮುಖ ನೋಡಿದ ಅವನ ಮುಖದಲ್ಲಿ ಒಂದು ನಗೆ ಹಾದು ಹೋಯಿತು, ಅವಳ ಮುಖ ಅವನಿಗೆ ಚಿರಪರಿಚಿತ, ಹಿಂದೊಮ್ಮೆ ಆಕೆ ಸಾಕಷ್ಟು ಸಹಾಯ ಮಾಡಿದ್ದಳು,  ಲಾಲ್ ಬಾಗ್ ಹತ್ತಿರ ರಾಜಕೀಯ ಸಂಬಂಧಿಯೊಬ್ಬರನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು, ನಂತರ ಸಾರ್ವಜನಿಕರ ಎದುರಿಗೆ ಅವರು ತಪ್ಪಿಸಿಕೊಂಡಿದ್ದರು, ಆದರೆ ಆ ವ್ಯಕ್ತಿಗಳ ಬಳಿ ಇದ್ದ ಮೊಬೈಲ್ ಅನ್ನು ಮೊಬೈಲ್ ಟ್ರಾಕರ್ ಮೂಲಕ ಅನುಸರಿಸಿ, ಅವರು ಬೆಂಗಳೂರಿನಿಂದ ತಪ್ಪಿಸಿಕೊಂಡು ಹೋಗುವ ಮುಂಚೆಯೆ ಕೃಷ್ಣರಾಜಪುರಂ ಬಳಿ ಬಂದಿಸಲಾಗಿತ್ತು, ಆಗ ಸಹಾಯ ಮಾಡಿದ್ದವಳು ಇದೆ ಅಧಿಕಾರಿಣಿ. 

ಅಶೋಕ್ ಮಾತನಾಡಲಿಲ್ಲ, ಆಕೆಯನ್ನು ಕೇಳಿ ಎದುರಿಗಿದ್ದ ಟೆಲಿಫೋನ್ ಉಪಯೋಗಿಸಿ, ತನ್ನ ಉನ್ನತಾಧಿಕಾರಿಗೆ ಕಾಲ್ ಮಾಡಿ ವಿಷಯ ತಿಳಿಸಿ , ಪೋನ್ ಕೆಳಗಿಟ್ಟ.  ಪುನ: ಐದು ನಿಮಿಷದೊಳಗೆ, ಆಕೆಯ ಎದುರಿಗಿದ್ದ ಅವಳ ಸರ್ವಿಸ್ ಮೊಬೈಲ್ ರಿಂಗ್ ಆಯಿತು, ಅದನ್ನು ನೋಡುವಾಗಲೆ ಆಕೆಗೆ ತಿಳಿಯಿತು ಅದು ಮೊಬೈಲ್ ಜಿ.ಎಂ ರವರಿಂದ ಬಂದಿರುವುದು, ಆಕೆ ಕಾಲ್ ತೆಗೆದುಕೊಂಡವಳು, ಅತನತ್ತ ನೋಡಿ ನಕ್ಕಳು. ಅತ್ತಲಿಂದ ಅವಳಿಗೆ ಅನುಮತಿ ದೊರೆಯಿತು.

ಪೋನ್ ಕೆಳಗಿಡುತ್ತ, ಆಕೆ ಎದುರಿಗಿದ್ದ ತನ್ನ ಕಂಪ್ಯೂಟರ್ ಪರದೆ ನೋಡುತ್ತ ನುಡಿದಳು
"ಸಾರ್ ನೀವು ಹೇಳಿದ ಮೊಬೈಲ್ ಪೋನ್ ಈಗ ತುಮಕೂರು ಹಾಗು  ತಿಪಟೂರಿನ ಮದ್ಯದ ಗುಬ್ಬಿ ಹತ್ತಿರವಿದೆ, ಈಗ ತಾನೆ ಆ ಫೋನಿನಿಂದ ಮತ್ತೆ ಅದೆ ಲಾಯರ್ ನಂಬರಿಗೆ ಕಾಲ್ ಬಂದಿದೆ" 

ಅದನ್ನು ಕೇಳಿ ಅವನು ಆತುರವಾಗಿ, ಮತ್ತೆ ಎದುರಿನ ಫೋನಿನಿಂದ, ಲಾಯರ್ ಮೊಬೈಲ್ಗೆ ಕಾಲ್ ಮಾಡಿ, ವಿಚಾರಿಸಿದ, ಕಾಲ್ ಬಂದಿದೆಯ ಏನು ಸಮಾಚಾರ ಎಂದು.

ಕಿಡ್ನಾಪ್ ಮಾಡಿದ್ದವರಿಂದ ಕಾಲ್ ಬಂದಿತ್ತು, ಅವರು ಲಾಯರ್ ಪ್ರಿಯಾಳಿಗೆ ಹೇಳಿದ್ದರು
"ಪರವಾಗಿಲ್ಲ, ನಿನ್ನ ಮಗಳು ನಿನ್ನಷ್ಟೆ ಚುರುಕು, ಪಕ್ಕ ಕ್ರಿಮಿನಲ್ ಬ್ರೈನ್, ನಾವು ಕಿಡ್ನಾಪ್ ಮಾಡುವಾಗಲೆ ನಿನಗೆ ಮೆಸೇಜ್ ಕಳಿಸಿಬಿಟ್ಟಿದ್ದಾಳೆ,  ನಾವು ಈಗ ಗಮನಿಸಿದೆವು, ನಾವು ಕಿಡ್ನಾಪ್ ಮಾಡಿರುವುದು ನಿಜ, ನೀನು ಬುದ್ದಿವಂತಳಂತೆ ವ್ಯವಹರಿಸಿ, ಪೋಲಿಸ್ ತಂಟೆಗೆ ಹೋಗಬೇಡ, ಹೇಗು ನೀನು ಕೋರ್ಟ್ ನ ಹೊರಗೆ, ಪೋಲಿಸ್ ಸ್ಟೇಷನ್ ಹೊರಗೆ ಕೇಸು ಸೆಟಲ್ ಮಾಡುವದರಲ್ಲಿ ಪರಿಣೆತೆ, ಅರ್ಥ ಮಾಡಿಕೊ, ಹುಷಾರಾಗು, ನಿನ್ನ ಎದುರಿಗೆ ಕುಳಿತಿರುವ ಪೋಲಿಸನ್ನ ಹಿಂದೆ ಕಳಿಸು. ಹೆಚ್ಚು ಕಡಿಮೆಯಾದಲ್ಲಿ ಮಗುವಿನ ಪ್ರಾಣಕ್ಕೆ ದಕ್ಕೆ, ಮತ್ತೆ ಸಂಪರ್ಕಿಸುವೆವು" ಎನ್ನುತ್ತ ಕಾಲ್ ಕಟ್ ಮಾಡಿದ್ದರು. 

ಅಲ್ಲಿಗೆ ಮಗುವು ಕಿಡ್ನಾಪ್ ಮಾಡಿದವರ ಜೊತೆಗೆ ಇದೆ ಈಗ ತಿಪಟೂರಿನ ಹತ್ತಿರವಿದೆ, ಮುಂದೆ ಯಾವ ಕಡೆ ಸಾಗಬಹುದು ಶಿವಮೊಗ್ಗ ಅಥವ ಮಂಗಳೂರು?.  ಅಶೋಕನ ಮನದಲ್ಲಿ ಯೋಚನೆ ಸಾಗಿತ್ತು. ಅವರು ಮಗುವನ್ನು ಸ್ಕೂಲ್ ಯುನೀಫಾರ್ಮ್ ನಲ್ಲಿರುವಾಗಲೆ ಅಪಹರಿಸಿದ್ದಾರೆ. ಅವರು ಅಪಹರಿಸಿದ ತಕ್ಷಣ ಮಗು ಮೆಸೇಜ್ ಮಾಡಿದೆ, 

'ಕಿಡ್ನಾಪ್ಡ್ , ಲೈಕ್ ಅವರ್ ಕಾರ್ " 

ಅಂದರೆ ಏನು, ಕಿಡ್ನಾಪ್ಡ್ ಸರಿ , ಲೈಕ್ ಅವರ್ ಕಾರ್ ಅಂದರೆ ಅವನ ಬುದ್ದಿ ಚುರುಕಾಯಿತು. ಅಂದರೆ ನಮ್ಮ ಕಾರಿನಂತದೆ ಕಾರು ಎಂದೆ ಅದರ ಅರ್ಥ? . 
ತಕ್ಷಣ ಅಲ್ಲಿ ಕುಳಿತೆ ಮತ್ತೆ ಲಾಯರ್ ಪ್ರಿಯಾಗೆ ಕಾಲ್ ಮಾಡಿದ. ಆಕೆ ಉತ್ತರಿಸಿ
"ಸಾರ್ ಹೇಳಿ, ನನ್ನ ಮಗುವಿನ ಸುಳಿವು ಸಿಕ್ಕಿತಾ? " ಎಂದಳು, 
ಅದಕ್ಕವನು
"ಸಿಗುತ್ತಿದೆ,  ಮೇಡಮ್, ಅವರು ಮಗುವಿನ ಜೊತೆ ತಿಪಟೂರಿನ ಕಡೆ ಸಾಗುತ್ತಿದ್ದಾರೆ, ಅನ್ನಿಸುತ್ತೆ, ಅಂದ ಹಾಗೆ ನಿಮ್ಮ ಮನೆಯಲ್ಲಿರುವ ಕಾರ್ ಯಾವುದು ? "
 ಅವನ ಪ್ರಶ್ನೆಗೆ ಪ್ರಿಯ ಸಿಡುಕಿದಳು
"ಅದೆಂತ ಪ್ರಶ್ನೆ  ನನ್ನ ಮಗುವಿನ ಚಿಂತೆ ನನಗಾದರೆ ನನ್ನ ಕಾರ್ ಯಾವುದು ಎಂದು ಕೇಳುತ್ತೀರಲ್ಲ, ನಿಮಗೆ ಸಮಯ ಪ್ರಜ್ಞೆ ಇಲ್ಲವ?" 

ಅವನು ನಗುತ್ತ ಹೇಳಿದ 
"ಸಮಯ ಪ್ರಜ್ಞೆ ಇರುವ ಹೊತ್ತಿಗೆ ಕೇಳುತ್ತಿರುವುದು ಕ್ರಿಮಿನಲ್ ಲಾಯರ್ ಸಾಹೇಬರೆ, ನಿಮ್ಮ ಮಗು ಮೆಸೇಜ್ ಕೊಟ್ಟಿರುವದೇನು, ಲೈಕ್ ಅವರ್ ಕಾರ್ ಎಂದು, ಅಂದರೆ ಆಕೆ ನಮ್ಮ ಕಾರಿನಂತದೆ ಕಾರಿನಲ್ಲಿ ನನ್ನ ಕಿಡ್ನಾಪ್ ಮಾಡಿದ್ದಾರೆ ಎಂದು ಇರಬೇಕಲ್ಲವೆ, ನಿಮ್ಮ ಮಗಳು ಬುದ್ದಿವಂತಳು, ಅಂದ ಹಾಗೆ ಆಕೆ ಯಾವ ಡ್ರೆಸ್ ನಲ್ಲಿದ್ದಳು, ಬಹುಷಃ ಶಾಲೆಯ ಯೂನಿಫಾರ್ಮ್ ಅನ್ನಿಸುತ್ತೆ , ಎಲ್ಲ ವಿವರ ಹೇಳುವಿರ" ಎಂದ

ಈಗ ಕ್ರಿಮಿನಲ್ ಲಾಯರ್ ಪ್ರಿಯಾಗೆ ನಾಚಿಕೆ ಅನ್ನಿಸಿತು, ಬಹುಷಃ ಮಗು ಕಿಡ್ನಾಪ್ ಆದ ಆತಂಕದಲ್ಲಿ ನಾನು ಯೋಚನೆಯ ಶಕ್ತಿ ಕಳೆದು ಕೊಂಡೆ ಅನ್ನಿಸುತ್ತೆ ಅಂದುಕೊಂಡು , ಹೇಳಿದಳು
"ಸಾರಿ, ಇನ್ಸ್ ಪೆಕ್ಟರ್ ಅಶೋಕ್, ನಾನು ಸ್ವಲ್ಪ ಗಾಭರಿಯಾಗಿದ್ದೆ, ನಿಮ್ಮ ಮಾತು ನಿಜ, ಬಹುಷಃ ಆಕೆ ಕಾರಿನ ಬಗ್ಗೆ ಸೂಚನೆ ಕೊಟ್ಟಿದ್ದಾಳೆ, ಅನ್ನಿಸುತ್ತೆ, ನಮ್ಮ ಮನೆಯಲ್ಲಿರುವುದು, ಟಯೋಟ ಕ್ವಾಲಿಸ್ , ೨೦೦೩ ಮಾಡೆಲ್  ರೆಡ್ ಕಲರ್, ಬಹುಷಃ ಅದೆ ರೀತಿಯ ಕಾರಿನಲ್ಲಿ ಅವರು ಇರಬಹುದು. ಅಲ್ಲದೆ ಅವಳು ಆಗ ಸ್ಕೂಲ್ ಯೂನಿಫಾರ್ಮ್ ನಲ್ಲಿದ್ದಳು, ಪಾಚಿ ಹಸಿರು ಬಣ್ಣದ   ಬಾಟಮ್, ಶರ್ಟ್ ಅದೆ ಬಣ್ಣದಲ್ಲಿ, ಬಿಳಿ ಗೆರೆಗಳಿದ್ದವು, ಶಾಲೆಯ ಹೆಸರಿನ ಪಟ್ಟಿ ಅದರ ಮೇಲಿದೆ, ಕಪ್ಪು ಶೂ" 
ಎನ್ನುತ್ತ ಎಲ್ಲ ವಿವರಗಳನ್ನು ನೀಡಿದಳು

"ಸರಿ ಮೇಡಮ್ ಮತ್ತೆ ಬೇಕಾದಾಗ ನಿಮ್ಮನ್ನು ಕಾಂಟಾಕ್ಟ್ ಮಾಡುವೆ " ಎನ್ನುತ್ತ ಅಶೋಕ್ ಮೊಬೈಲ್ ಡಿಸ್ಕನೆಕ್ಟ್  ಮಾಡಿದ.
 ಅಶೋಕ್ ಲೆಕ್ಕಹಾಕುತ್ತಿದ್ದ,  ಇಂತದೆ ಕಾರಿರಬಹುದು ಎನ್ನುವ ಸುಳಿವು ಸಿಕ್ಕಿದೆ, ಅದರಲ್ಲಿ ಇರಬಹುದಾದವರ ಬಗ್ಗೆ ಸಹ ಸುಳಿವಿದೆ, ಅವರು ಸಾಗುತ್ತಿರುವ ದಿಕ್ಕಿನ ಬಗ್ಗೆ ಸುಳಿವಿದೆ, ಹೇಗಾದರು ಸರಿ ಅವರನ್ನು ದಾರಿಯಲ್ಲಿಯೆ ಹಿಡಿದು ಹಾಕಿದರೆ ವಾಸಿ , ನಂತರ ಅವರೆಲ್ಲಿ ಎನ್ನುವ ಸುಳಿವು ಸಿಗುವುದು ಕಷ್ಟ ಎಂದುಕೊಂಡು. ಪೋಲಿಸ್ ಹೆಡ್ ಕ್ವಾರ್ಟ್ರಸ್  ಅನ್ನು ಸಂಪರ್ಕಿಸಿ , ಎಲ್ಲ ವಿವರಗಳನ್ನು ನೀಡಿದ, ಕಾರು, ಕಾರಿನ ಬಣ್ಣ, ಮಗುವಿನ ವಿವರ, ಎಲ್ಲವನ್ನು ನೀಡಿ, ತಿಪಟೂರು ಹಾಗು ಮುಂದೆ ಸಿಗುವ ಎಲ್ಲ ಪೋಲಿಸ್ ಸ್ಟೇಶನ್ ಗಳಿಗು ತಕ್ಷಣ ತಿಳಿಸಿ ನಾಕಬಂದಿ ಹಾಕುವಂತೆ ವ್ಯವಸ್ತೆ ಮಾಡಿದ. ಎದುರಿಗೆ ಕುಳಿತ್ತಿದ್ದ ಅಧಿಕಾರಿಣಿಯನ್ನು ಕೇಳಿದ 
"ಮೇಡಮ್ ಆ ಕಾರು ಸಾಗುವ ದಿಕ್ಕಿನ ಬಗ್ಗೆ ಅಗಾಗ್ಯೆ ನನಗೆ ವಿವರ ಒದಗಿಸಲು ಸಾದ್ಯವೆ ? " 
ಆಕೆ ತಲೆ ಆಡಿಸುತ್ತ ನುಡಿದಳು, 
"ಖಂಡೀತ ಸಾದ್ಯವಿದೆ,  ಹೆಣ್ಣು ಮಗುವಿನ ಕಿಡ್ ನಾಪ್ ಕೇಸಿದು, ನನ್ನಿಂದ ಆಗುವ ಎಲ್ಲ ಸಹಾಯ ಮಾಡುವೆ " ಎಂದಳು

ಟೆಲಿಫೋನ್ ಮಾಡಿ, ತನ್ನ ಅಸಿಸ್ಟೆಂಟ್ , ಡಿಸೋಜನಿಗೆ ಈಗಲೆ ಲಾಯರ್ ಪ್ರಿಯಾ ಮನೆಯತ್ತ ಹೋಗುವಂತೆ ಎಷ್ಟು ಸಾದ್ಯವೊ ಅಷ್ಟು ವಿವರಗಳನ್ನು ಆಕೆಯಿಂದ ಸಂಗ್ರಹಿಸುವಂತೆ ತಿಳಿಸಿದ.  ಹಾಗೆ ಒಂದು ವೇಳೆ ಲಾಯರ್ ಮನೆಗೆ ಕಿಡ್ ನಾಪರ್ಸ್ ನಿಂದ ಯಾವುದಾದರು ಕಾಲ್ ಬಂದರೆ ಅಥವ ಸಂಪರ್ಕಿಸಿದರೆ ತಕ್ಷಣ ತನಗೆ ತಿಳಿಸುವಂತೆ ನಿರ್ದೇಶಿಸಿದ.

ಮತ್ತೆ ಸ್ವಲ್ಪ ಹೊತ್ತಾಯಿತು, ಎದುರಿಗಿದ್ದ ಆಕೆ ನುಡಿದಳು,
"ಸಾರ್ ಕಾರು ತಿಪಟೂರನ್ನು ದಾಟಿದೆ ಅನ್ನಿಸುತ್ತೆ, ನೀವು ನೀಡಿರುವ ಮೊಬೈಲ್ ನಂಬರ್ ಈಗ ಕಡೂರಿನ ಹತ್ತಿರದ ಟವರ್ ನ ಏರಿಯಾದಲ್ಲಿದೆ"

"ಕಡೂರೆ , ಅಂದರೆ ಅವರು ಶಿವಮೊಗ್ಗ ಕಡೆ ಹೋಗುವದಿಲ್ಲ ಅನ್ನಿಸುತ್ತೆ, ಬಹುಷಃ ಚಿಕ್ಕಮಗಳೂರು ನಂತರ ಘಾಟ್ ಸೆಕ್ಷನ್ ಕಡೆ ಸಾಗಬಹುದೇನೊ, ಆದರೆ ಅವರು ತಿಪಟೂರಿನ ಹಾಗು ಮುಂದಿನ ಪೋಲಿಸ್ ಕಾವಲನ್ನು ಹೇಗೆ ದಾಟಿದರು ತಿಳಿಯುತ್ತಿಲ್ಲ " ಎಂದವನೆ, ತಿಪಟೂರಿನ ಪೋಲಿಸ್ ಗೆ ಪೋನ್ ಮಾಡಿದ
"ಕಾರು , ತಿಪಟೂರಿನ ಗಡಿ ದಾಟಿಯಾಯಿತು, ನೀವು ಅದು ಹೇಗೆ ಬಿಟ್ಟಿರಿ ಅಷ್ಟೆಲ್ಲ ವಿವರ ನೀಡಿದರು" 
ಗರಂ ಆಗಿ ಪ್ರಶ್ನಿಸಿದ

"ಇಲ್ಲ ಸಾರ್ ನೀವು ಹೇಳಿದಂತೆ ಎಲ್ಲ ಕಾರನ್ನು ನಿಲ್ಲಿಸಿ ಹುಡುಕುತ್ತಿದ್ದೇವೆ, ಕ್ವಾಲೀಸ್ ಅಲ್ಲದೆ ಅನುಮಾನ ಬಂದ ಇತರೆ ಕೆಂಪು ವಾಹನವನ್ನು ನಿಲ್ಲಿಸಿ ನೋಡಿದೆ, ಆದರೆ ಯಾವುದೆ ವಾಹನದಲ್ಲಿ ಚಿಕ್ಕ ಮಗುವಿರುವುದು ಪತ್ತೆ ಆಗಲಿಲ್ಲ" ತಿಪಟೂರಿನ ಎಸ್ ಐ ಹೇಳಿದ.

"ಸರಿ ಮುಂದಿನ ಸ್ಟೇಷನ್ ಗಳಿಗೆ ಮೆಸೇಜ್ ಪಾಸ್ ಮಾಡಿ ಅವರು ಎತ್ತ ಹೋಗಬಹುದು ನೋಡೋಣ" ಎನ್ನುತ್ತ ಡಿಸ್ಕನೆಕ್ಟ್ ಮಾಡಿದ.

ಸ್ವಲ್ಪ ಕಾಲ ಕಳೆಯಿತು, ರಾತ್ರಿ ಹತ್ತಾಗುತ್ತ ಬಂದಿತು. 

 ಲಾಯರ್ ಮನೆಗೆ ಹೋದ ಅಶೋಕ್ ನ ಅಸಿಸ್ಟೆಂಟ್ ಮತ್ತೆ ಕಾಲ್ ಮಾಡಿದ
"ಸಾರ್ ಕಿಡ್ನಾಪರ್ ನಿಂದ ಕಾಲ್ ಬಂದಿತ್ತು, ಆನಿಸುತ್ತೆ ,  ಲಾಯರಮ್ಮ ಯಾವುದನ್ನು ಸರಿಯಾಗಿ ಬಾಯಿ ಬಿಡುತ್ತಿಲ್ಲ , ಆಕೆ ಹೇಳಿದ ಪ್ರಕಾರ 53 ಲಕ್ಷ ಹಣ ಕೇಳಿದ್ದಾನಂತೆ , ಹಣ ನಾಳೆ ಮದ್ಯಾನದ ಒಳಗೆ    ಸಿದ್ದಪಡಿಸಿ ಕೊಂಡಲ್ಲಿ, ನಾಳೆ ಹನ್ನೆರಡು ಘಂಟೆಗೆ ಪುನಃ ಕಾಲ್ ಮಾಡುತ್ತೇನೆ ಅಂತ ತಿಳಿಸಿದ್ದಾನೆ. ಈಕೆಯು ಹಣ ಕೊಡಲು ಸಿದ್ದವಿರುವಂತಿದೆ"

ಅಶೋಕ್ ಗೆ ಆಶ್ಚ್ಯರ್ಯವೆನಿಸಿತು 
"ಅದೇನು  53 ಲಕ್ಷ ಅಂತ ಲೆಕ್ಕ, ಸರಿಯಾಗೆ ಅಷ್ಟೆ ಕೇಳುತ್ತಿದ್ದಾನೆ, ವಿಚಿತ್ರವೆನಿಸುತ್ತಿದೆಯಲ್ಲವೆ, ಅವನು ಎಲ್ಲಿಂದ ಫೋನ್ ಮಾಡಿದ" 
ಅಶೋಕ್ ಕೇಳಿದ

ಅತ್ತಲಿಂದ ಅವನ ಅಸಿಸ್ಟೆಂಟ್,
"ಸರ್ ಅದೇನೊ ಅವನು ಹೇಳಿದನಂತೆ 50 ಲಕ್ಷ ಲಾಯರಿಂದ ಅವನಿಗೆ ವ್ಯವಹಾರದಲ್ಲಿ ಆದ ನಷ್ಟಕ್ಕಂತೆ, ಉಳಿದ ಮೂರು ಲಕ್ಷ ಕಿಡ್ ನಾಪ್ ಅರೇಂಜ್ ಮಾಡಲು ಆದ ಖರ್ಚಿಗಂತೆ" 

ಅಶೋಕ್ ಬಾಯಿತುಂಬ ನಗುತ್ತಿದ್ದ 
"ಒಳ್ಳೆ ಪಾರ್ಟಿ ಕಣಯ್ಯ ಬಹಳ ಪ್ರಾಮಾಣಿಕ ಅನ್ನಿಸುತ್ತೆ, ಅದಿರಲಿ ಯಾವ ನಂಬರಿಂದ ಕಾಲ್ ಮಾಡಿದ್ದ ಏನಂತೆ ವಿವರ ?"

"ಹೌದು ಸಾರ್, ಆಕೆಯ ವ್ಯವಹಾರಕ್ಕೆ ಸಂಬಂದಿಸಿದಂತೆ ಇದೆ, ಆಕೆ ಬಾಯಿ ಬಿಡುತ್ತಿಲ್ಲ, ಅಲ್ಲದೆ ಈ ಬಾರಿ ಮೊಬೈಲ್ ಗೆ ಕಾಲ್ ಬರಲಿಲ್ಲ, ಆಕೆಯ ಮನೆಯ ಲಾಂಡ್ ಲೈನಿಗೆ ಕಾಲ್ ಬಂದಿತ್ತು, ಹೊರಗೆ ಯಾವುದೊ ಪಬ್ಲಿಕ್ ಭೂತ್ ನಿಂದ ಮಾಡಿದ್ದಾನೆ, ನಂಬರ್ ನೋಡಿದೆ, ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಭೂತ್" ಎಂದ

ಅಶೋಕ್ ಬೆಚ್ಚಿಬಿದ್ದ 
ಅರೆ ನಾನಿಲ್ಲಿ , ದೂರದ ತಿಪಟೂರಿನಿಂದ ಕಾಲ್ ಬರುತ್ತೆ ಅಂತ ಕಾಯುತ್ತ ಇದ್ದರೆ,  ಬೆಂಗಳೂರಿನಿಂದಲೆ ಕಾಲ್, ಅಲ್ಲಿಗೆ ಇದು ಒಬ್ಬಿಬ್ಬರ ಕೆಲಸವಾಗಿರಲಾರದು, ಗುಂಪಿನದು ಅಂದುಕೊಂಡ

ಅಷ್ಟರಲ್ಲಿ ಆಕೆ 
"ಸಾರ್ ನಿಮ್ಮ ಮೊಬೈಲ್ ನಂಬರ್ ಈಗ ಚಿಕ್ಕಮಗಳೂರನ್ನು ದಾಟಿ, ಮೂಡಿಗೆರೆ ಯಲ್ಲಿ ಸ್ಥಿರವಾಗಿದೆ, ಅಲ್ಲಿಂದ ಕದಲುವಂತೆ ತೋರುತ್ತಿಲ್ಲ" ಎಂದಳು

"ಅರೆ ಇದೆಂತದು ನಾವು ಉದ್ದಕ್ಕು ಕಾಯುತ್ತಲೆ ಇದ್ದೇವೆ, ಪೋಲಿಸರ ಕಣ್ಣು ತಪ್ಪಿಸಿ , ಮಗುವಿನ ಸಮೇತ ಅವರು ಹೇಗೆ ಚಲಿಸುತ್ತಿದ್ದಾರೆ ಅಂತ ಅರ್ಥವೆ ಆಗುತ್ತಿಲ್ಲವಲ್ಲ" ಎಂದು ತಲೆಕೆಡಿಸಿಕೊಂಡವನು ,  ಮೂಡಿಗೆರೆಯ ನಂಬರ್ ಗೆ ಅವನ ಮೊಬೈಲ್ ನಿಂದ ಕಾಲ್ ಮಾಡಿದ
"ನಾನು ಬೆಂಗಳೂರಿನಿಂದ ಇನ್ಸ್ ಪೆಕ್ಟರ್ ಅಶೋಕ್ ಮಾತನಾಡುವುದು, ಕೆಂಪು ಕಲರ್ ಟಾಟ ಕ್ವಾಲೀಸ್, ಮಗುವಿನ ಸಮೇತ ಮೂಡಿಗೆರೆಯಲ್ಲಿ ಇದೆ ಹೇಗಾದರು ಪತ್ತೆ ಹಚ್ಚಬೇಕು " ಎಂದ 

ಅತ್ತಲಿಂದ ಮಾತನಾಡಿದ  ಅಧಿಕಾರಿ ಹೇಳಿದ 
"ಸರ್ ನಾನು ಅದೆ ವಿಷಯ ತಿಳಿಸುವನಿದ್ದೆ, ಮೆಸೇಜ್ ಬಂದಾರಿಬ್ಬ ನಾನು ಸುತ್ತು ಹೊಡೆಯುತ್ತಿರುವೆ,  ಕೆಂಪು ಕ್ವಾಲೀಸ್ ಕಾರೊಂದು ಚಾರ್ಮುಡಿ ಘಾಟ್ ರಸ್ತೆಯಲ್ಲಿ ಊರ ಹೊರಗೆ ನಿಂತಿದೆ, ಅದರಲ್ಲಿ ಯಾರು ಇಲ್ಲ, ಕಾರ್ ಪಕ್ಕ  ಸೇತುವೆ ಮೇಲೆ, ಮೊಬೈಲ್ ಫೋನ್ ಹಾಗು ಶಾಲೆಯ ಯೂನಿಫಾರ್ಮ್ ಹಾಗು ಶೂ ಎಲ್ಲ ಇಡಲಾಗಿದೆ, ನನಗೆ ಅರ್ಥವಾಗುತ್ತಿಲ್ಲ, ಮಗುವನ್ನು ಅವರೇನಾದರು ಮಾಡಿ ಘಾಟ್ ಗೆ ಎಸೆದಿದ್ದರೆ ಹುಡುಕುವುದು ತೊಂದರೆಯೆ" 

ಅಶೋಕ್ ಮೌನವಾದ, ಇದೇನು  ಕೇಸ್ ಈ ರೀತಿ ಟಾರ್ನ್ ತೆಗೆದುಕೊಂಡಿತು,  ಕಾರಿನಲ್ಲಿದ್ದವರೆಲ್ಲ ಎಲ್ಲಿ ಹೋದರು, ಬಹುಷಃ ವಾಹನ ಬದಲಾಯಿಸಿ ಇನ್ನೆಲಾದರು ಹೋಗಿರಬಹುದು ಅನ್ನಿಸುತ್ತೆ, ಅಥವ ಮಗುವನ್ನು ಕೊಂದುಬಿಟ್ಟಿದ್ದಾರ ಅವನಿಗೆ ಅರ್ಥವಾಗುತ್ತಿಲ್ಲ. 
  ಯೂನಿಫಾರ್ಮ್ ಶೂ ಎಲ್ಲ ತರಿಸಿ ಲಾಯರ್ ಮಗುವಿನದ ಅಂತ ಕನ್ ಫರ್ಮ್ ಮಾಡಿಕೊಳ್ಲಬೇಕು, ಬಹುಷಃ ಇನ್ನು ಈ ಟೆಲಿಫೋನ್ ಎಕ್ಸ್ ಚೆಂಜ್ ನಲ್ಲಿ ಕುಳಿತು ಮತ್ತೇನು ಮಾಡುವಂತಿಲ್ಲ, ಅನ್ನಿಸಿ ಆ ತುದಿಯಲ್ಲಿದ್ದ ಮೂಡಿಗೆರೆ ಇನ್ಸ್ ಪೆಕ್ಟರ್ ಗೆ ಕೇಳಿದ
"ಅಂದ ಹಾಗೆ ಕಾರಿನ ನಂಬರ್ ಏನು?"
"ಸಾರ್ , ಕಾರು ಬೆಂಗಳೂರಿನದು, ಕಳೆದವಾರ ಕಳುವಾಗಿರುವುದು, ನಾನು ಮಾತನಾಡಿ ಕನ್ ಫರ್ಮ್ ಮಾಡಿಕೊಂಡೆ, ಈ ಯೂನಿಫಾರ್ಮ್ ಮತ್ತು ಶೂ ಹಾಗು ಮೊಬೈಲ್ ಅನ್ನು ಬೇಕಿದ್ದಲ್ಲಿ ಈಗಲೆ ನಿಮ್ಮಲಿಗೆ ಕಳಿಸುವೆ, ಅತ್ತ ಬರುವ ಯಾವುದಾದರು ಬಸ್ ನಲ್ಲಿ ನಮ್ಮ ಪೇದೆ ತರುತ್ತಾನೆ " ಎಂದ 

"ಸರಿ ಹಾಗೆ ಮಾಡಿ ಮತ್ತೇನು ಮಾಡುವಂತಿಲ್ಲ, ಈಗ ಏನು ಸುಳಿವು ಸಿಗುವುದು ಕಷ್ಟ, ನೀವು ಬೆಳಗಾದ ಮೇಲೆ, ಮತ್ತೆ ಆ ಕಾರ್ ಸುತ್ತಮುತ್ತ ಏನಾದರು ಸುಳಿವು ಸಿಗುವುದು ಪ್ರಯತ್ನಿಸಿ, ಅಗತ್ಯವಿದ್ದಲ್ಲಿ ನಾನು ಅಲ್ಲಿಗೆ ಬರುತ್ತೇನೆ " ಎನ್ನುತ್ತ ಕಾಲ್ ಕಟ್ ಮಾಡಿದ. 

ತನಗೆ ಎಲ್ಲ ವಿವರ ಒದಗಿಸಿದ , ಎಕ್ಸ್ ಚೇಂಜ್ ನ ಅಧಿಕಾರಿಗೆ ಕೃತಜ್ಞತೆ ತಲುಪಿಸಿ, ಅಲ್ಲಿಂದ ಹೊರಬಂದು ಮೋಟರ್ ಬೈಕ್ ಏರಿದ.

ಸ್ಟೇಷನ್ ಗೆ ಬರುವದರಲ್ಲಿ, ಅವನ ಅಸಿಸ್ಟೆಂಟ್ ಸಹ ಬಂದಿದ್ದ, ಆದರೆ ಹೆಚ್ಚು ವಿವರಗಳೇನು ತಿಳಿಯುವಂತಿರಲಿಲ್ಲ. ಲಾಯರ್ ಯಾರ ಬಗ್ಗೆಯು ಅನುಮಾನ ವ್ಯಕ್ತಪಡಿಸುತ್ತಿಲ್ಲ. ಬಹುಷಃ ಅವಳಿಗೆ ತನ್ನ ಮಗುವನ್ನು ಕಿಡ್ನಾಪ್ ಮಾಡಿದವರು ಯಾರು ಎಂದು ಗೊತ್ತಿರಲು ಸಾಕು ಆದರೆ ಅದನ್ನು ಹೇಳುತ್ತಿಲ್ಲ, ಇದು ಅಸಿಸ್ಟೆಂಟ್ ನ ಅಭಿಪ್ರಾಯ. ಹೇಗು ಕಿಡ್ನಾಪರ್ ಬೆಳಗಿನ ಹನ್ನೆರಡರ ಹೊತ್ತಿಗೆ ಪುನಃ ಲಾಯರ್ ಗೆ ಕಾಲ್ ಮಾಡುವದಾಗಿ ತಿಳಿಸಿದ್ದಾನೆ , ನಾವು ಅಲ್ಲಿಗೆ ಹತ್ತರ ಹೊತ್ತಿಗೆ ಹೋದರೆ ಸರಿ ಹೋಗುತ್ತೆ ಅನ್ನಿಸುತ್ತೆ  ಅಂದುಕೊಂಡು , ಲಾಯರ್ ಗೆ ಒಮ್ಮೆ ಪೋನ್ ಮಾಡಿದ. ಅಪರಾತ್ರಿಯಲ್ಲು ಫೋನ್ ಎತ್ತಿದ ಲಾಯರ್ ದ್ವನಿಯಲ್ಲಿ ಆತಂಕ.
"ಏನಾಯಿತು ಸಾರ್ ಮಗುವಿನ ಬಗ್ಗೆ ಏನಾದರು ಸುಳಿವು ಸಿಕ್ಕಿತಾ?" ಆಕೆ ಕೇಳಿದಳು
"ಹೀಗೆ ಅಂತ ಹೇಳಲಾಗುತ್ತಿಲ್ಲ ಮೇಡಮ್, ಅವರು ಕಾರನ್ನು ಚಾರ್ಮುಡಿ ಘಾಟ್ ಹತ್ತಿರ ನಿಲ್ಲಿಸಿ ,ಪರಾರಿಯಾಗಿದ್ದಾರೆ ಅನ್ನಿಸುತ್ತೆ, ಮಗು ಅವರ ವಶದಲ್ಲಿಯೆ ಇರಬಹುದು, ರಾತ್ರಿ ಅವರು ಪುನಃ ಕರೆ ಮಾಡಿದರೆ, ನಮ್ಮನ್ನು ಸಂಪರ್ಕಿಸಿ, ಹೇಗು ಬೆಳಗ್ಗೆ ಹನ್ನೆರಡಕ್ಕೆ ಅವರು ಕಾಲ್ ಮಾಡ್ತಾರೆ, ನಾನು ಹತ್ತಕ್ಕೆ ನಿಮ್ಮ ಮನೆಯಲ್ಲಿರ್ತೀನಿ, ಮಗುವಿಗೆ ಏನು ಆಗಲಾರದು ಆತಂಕಪಡಬೇಡಿ" ಎಂದ ಆಶೋಕ್. 
ಆದರೆ ಅವನ ಮನದಲ್ಲಿಯೆ ಗ್ಯಾರಂಟಿ ಇಲ್ಲ. 
........

ಬೆಳಗ್ಗೆ ಹತ್ತಕ್ಕೆ ಸರಿಯಾಗಿ ಹೇಳಿದಂತೆ, ಇನ್ಸ್ ಪೆಕ್ಟರ್ ಆಶೋಕ್ ಲಾಯರ್ ಮನೆಮುಂದೆ ತನ್ನ ಅಸಿಸ್ಟೆಂಟ್ ಜೊತೆ ಇಳಿದ. ಬೈಕ್ ನಿಲ್ಲಿಸಿ ಒಳಗೆ ಹೋದರೆ. ಲಾಯರ್ ವರಾಂಡದ ಆರಾಮಸನದಲ್ಲಿ ಸ್ವಸ್ಥವಾಗಿ ಕುಳಿತಿದ್ದಳು. ಅಶೋಕ್ ನನ್ನು ಕಂಡು ಬನ್ನಿ ಎನ್ನುತ್ತ ಸ್ವಾಗತಿಸಿದಳು. 
"ಬನ್ನಿ ಕಾಫಿ ತೆಗೆದುಕೊಳ್ಳುತ್ತೀರ " ಎಂದಳು. ಆಶೋಕ್ ಗೆ ಆಶ್ಚರ್ಯ, ತನ್ನ ಮಗು ಕಿಡ್ನಾಪ್ ಆಗಿರುವಾಗಲು ಎಷ್ಟು ನೆಮ್ಮದಿಯಾಗಿದ್ದಾಳೆ ಇವಳು ಅಂದುಕೊಳ್ಳುತ್ತ
"ಆಗಬಹುದು ಮೇಡಂ, ಅಂದ ಹಾಗೆ ಕಿಡ್ನಾಪರ್ ಏನಾದರು ಕಾಂಟಾಕ್ಟ್ ಮಾಡಿದನ ಪುನಃ" ಎಂದ.

"ಮಾಡಿದ್ದ, ಆಗಲೆ ನನ್ನ ಹತ್ತಿರವಿದ್ದ ಹಣವನ್ನು ಕೊಟ್ಟಾಯಿತು, 53 ಲಕ್ಷ ಕಿತ್ತುಕೊಂಡು ಹೋದ " ಆಕೆಯ ಮುಖ ಸಪ್ಪೆಯಾಗಿತ್ತು

"ಆಶೋಕ್ ಆಶ್ಚರ್ಯದಿಂದ ಹಾರಿಬಿದ್ದ, ಇದೆಂತ ಮಾತು, ಹನ್ನೆರಡೆಕ್ಕೆ ಕಾಲ್ ಮಾಡ್ತೀನಿ ಅಂದಿದ್ದವನು, ಈಗ ಹತ್ತು ಆಗಲೆ ಅವನು ಬಂದು ಹಣ ಪಡೆದು ಹೋದ ಅನ್ನುತ್ತಿದ್ದಾಳೆ, ಇದೆಷ್ಟು ಸತ್ಯ
"ಹೌದೆ, ಅದು ಹೇಗೆ ಸಾದ್ಯ ಹನ್ನೆರಡಕ್ಕೆ ಅಲ್ಲವೆ ಅವನು ಪುನಃ ಕಾಲ್ ಮಾಡ್ತೀನಿ ಅಂದಿದ್ದು, ಬ್ಯಾಂಕ್ ಗಳೆಲ್ಲ ತೆಗೆಯುವುದು ಹತ್ತಕ್ಕೆ , ನೀವು ಅಷ್ಟು ಬೇಗ ಹಣ ಹೇಗೆ ಹೊಂದಿಸಿದಿರಿ, ಅವನು ನಿಮ್ಮನ್ನು ಹೇಗೆ ಕಾಂಟಾಕ್ಟ್ ಮಾಡಿದ, ನೀವು ಹಣ ಕೊಡಲು ಎಲ್ಲಿ ಹೋಗಿದ್ದೀರಿ" 

ಎಂದು ಉದ್ದಕ್ಕೆ ಪ್ರಶ್ನೆ ಕೇಳಿದ . ಅದಕ್ಕೆ ಅವಳು

"ಹೀಗೆ ನನ್ನ ಹತ್ತಿರ ಸ್ವಲ್ಪ ಹಣವಿತ್ತು, ಹಾಗೆ ಹತ್ತಿರದವರಿಂದ, ಎ.ಟಿ.ಎಮ್ ಗಳಿಂದ ಹಣ ಹೊಂದಿಸಿದೆ. ನಾನು ಎಲ್ಲು ಹೋಗಲೆ ಇಲ್ಲ, ಮನೆಯ ಮುಂದೆ ಅವರು ಬಂದು ಹಣ ಪಡೆದು ಹೋದರು" ಎಂದಳು
"ಮನೆಯ ಹತ್ತಿರ ಅವರು ಬಂದಿದ್ದರೆ, ಯಾರು ಬಂದಿದ್ದ, ನೋಡಲು ಹೇಗೆ ಇದ್ದ" ಎಂದು ಆಶೋಕ್ ಪ್ರಶ್ನಿಸಿದ

"ಅವರು ನೇರವಾಗಿ ಬರಲಿಲ್ಲ, ಬೆಳಗ್ಗೆ ಎಂಟಕ್ಕೆ ಫೋನ್ ಮಾಡಿ ಹಣ ಸಿದ್ದವಿದೆಯ ಎಂದು ಕೇಳಿದರು, ನಾನು ಇದೆ ಎಂದೆ. ಫೋನ್ ಇಟ್ಟುಬಿಟ್ಟರು. ಪುನಃ ಹತ್ತು ನಿಮಿಷಕ್ಕೆ ಕಾಲ್ ಬಂತು. ಹಣವನ್ನು ಕರಿಯ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ಸಿದ್ದವಾಗಿ, ಮನೆಯ ಮುಂದೆ ಎಂದಿನಂತೆ, ಕಾರ್ಪೋರೇಶನ್ ಕಸದ ವ್ಯಾನ್ ಬರುತ್ತೆ, ಸೈಲೆಂಟಾಗಿ ಆ ಕರಿಯ ಪ್ಲಾಸ್ಟಿಕ್ ಬ್ಯಾಗನ್ನು, ಆ ವ್ಯಾನ್ ನಲ್ಲಿ ಹಾಕಿ ಯಾರ ಜೊತೆಯು ಮಾತನಾಡದೆ ಒಳಹೋಗಿ , ಎಂದು ಹೇಳಿದ, ನಾನು ಅದೆ ರೀತಿ ನಡೆದುಕೊಂಡೆ" ಎಂದಳು

"ಏನು ಮೇಡಂ ನಾನು ಅಷ್ಟು ಹೇಳಿದ್ದೆ, ಅವರು ಕಾಲ್ ಮಾಡಿದೊಡನೆ, ನನಗೆ ತಿಳಿಸಿ ಎಂದು, ನೀವು ಏನು ತಿಳಿಸದೆ ಅವರಿಗೆ ಹಣ ಕೊಟ್ಟು ಕಳಿಸಿಬಿಟ್ಟಿರಿ ಈಗ ಮಗುವನ್ನು ಹೇಗೆ ಟ್ರೇಸ್ ಮಾಡುವುದು" ಎಂದ

"ಇಲ್ಲ ಅವರು ಸಮಯ ಕೊಡಲೆ ಇಲ್ಲ, ನಾನು ನಿಮಗೆ ತಿಳಿಸುವಷ್ಟು ಸಮಯವಿರಲಿಲ್ಲ, ಅವರು ನಮ್ಮ ಮನೆಯ ಸುತ್ತ ಕಾವಲಿದ್ದರು ಅನ್ನಿಸುತ್ತೆ, ಮಗುವನ್ನು ಬಹುಷಃ ಕಳಿಸಬಹುದು ಅನ್ನಿಸುತ್ತೆ " ಎಂದಳು ಸಪ್ಪೆಯಾಗಿ.
"ನೀವು ಕಸದ ವ್ಯಾನಿನವನ ಜೊತೆ ಹಣ ಕಳುಹಿಸಿ ಎಷ್ಟು ಸಮಯವಾಗಿರಬಹುದು? ಅವರು ಇದೆ ರಸ್ತೆಯಲ್ಲಿ ಎಲ್ಲಾದರು ಇರಬಹುದು,ಹೋಗಿ ನೋಡುವೆ"
"ಸುಮಾರು ಅರ್ದ ಘಂಟೆಯಾಗಿರಬಹುದು" ಆಕೆ ಉತ್ತರಿಸುತ್ತಲೆ, ತನ್ನ ಅಸಿಸ್ಟೆಂಟ್ ಜೊತೆ ಎದ್ದ ಆಶೋಕ್ 
ಮೋಟರ್ ಬೈಕ್ ನಲ್ಲಿ ಒಂದು ಸುತ್ತು ಹಾಕುವಲ್ಲಿ, ಕಸದ ವ್ಯಾನ್ ಸಿಕ್ಕಿತು, ಅದರಲ್ಲಿದ್ದವ ಮರದ ಕೆಳಗೆ ನಿಲ್ಲಿಸಿ, ಸಿಗರೇಟ್ ಸೇದುತ್ತ ಕುಳಿತಿದ್ದವನು ತನ್ನ ಬಳಿ ಪೋಲಿಸ್ ಬಂದು ಮೋಟರ್ ಬೈಕ್ ನಲ್ಲಿ ನಿಂತಾಗ ಎದ್ದು ನಿಂತ,
"ಏನಯ್ಯ ಬೆಳಗ್ಗೆನಿಂದ ಕಸದ ವ್ಯಾನ್ ಇಲ್ಲಿ ಓಡಿಸುತ್ತಿರುವನು ನೀನೆನಾ?" 
ಅವನು ಭಯದಿಂದ ಹೇಳಿದ "ಹೌದು ಸಾರ್, ದಿನಾ ಇಲ್ಲಿ ಎಲ್ಲ ರಸ್ತೆಯಲ್ಲಿ ಕಸ ಎತ್ತುವನು ನಾನೆ"
"ಈ ದಿನ ಮೂರನೆ ಕ್ರಾಸ್ ಇದೆಯಲ್ಲ, ಲಾಯರ್ ಮನೆ, ಅಲ್ಲಿ ಬಂದಿದ್ದವನು ನೀನೇನಾ?" 
ಅವನು ಉಗುಳು ನುಂಗಿದ, ಸುಮ್ಮನಿದ್ದ
"ಹೇಳು ಈಗ ಅರ್ದ ಗಂಟೆ ಮುಂಚೆ ಆ ರಸ್ತೆಯಲ್ಲಿ ವ್ಯಾನಿನಲ್ಲಿ ಬಂದವನು ನೀನೆ ತಾನೆ?"
"ಸಾರ್, ದಿನಾ ಬರುವನು ನಾನೆ, ಆದರೆ ಈದಿನ ನಾನು ಇರಲಿಲ್ಲ ಸಾರ್," ಅವನು ಆತಂಕದಿಂದ ನುಡಿದ,
"ಹಾಗೆಂದರೆ ಏನು, ಇವತ್ತು ಬೇರೆ ಯಾರು ಬಂದಿದ್ದರು, ಅವನನ್ನು ಕರೆ ನೋಡೋಣ, ಅವನ ಹತ್ತಿರ ಮಾತನಾಡಬೇಕು"
"ಸಾರ್ ಅದು ಹಾಗಲ್ಲ, ಇವನ್ನು ಬೆಳಗ್ಗೆ ಬೆಳಗ್ಗೆಯೆ ಒಬ್ಬ ಗಿರಾಕಿ ಗಂಟು ಬಿದ್ದ, ನನ್ನ ಹತ್ತಿರ ಬಂದು, ಅವನು ಯಾವುದೊ ಸೀರಿಯಲ್ ಶೂಟೊಂಗ್ ಮಾಡಬೇಕಂತೆ, ಅದರಲ್ಲಿ ಕಸದ ಲಾರಿ ದಬ್ಬುವ ಸೀನ್ ಇದೆಯಂತೆ, ಅದಕ್ಕೆ  ಸ್ವಲ್ಪ ಪ್ರಾಕ್ಟೀಸ್ ಮಾಡಬೇಕು, ಎರಡು ರಸ್ತೆ ಮಾತ್ರ ನಾನು ಹೋಗಿ ಬರ್ತೀನಿ, ನೀನು  ಮೂರನೆ ಕ್ರಾಸ್ ತುದಿಯಲ್ಲಿ ನಿಂತಿರು ಸ್ವಲ್ಪ ನಾಚುರಲ್ ಆಗಿ ಬರಲಿ ಅಂತ ಮಾಡ್ತ ಇದ್ದೀವಿ ಅಂದ ಸರ್,  ಅವನಿಗೆ ಗಾಡಿ ಕೊಟ್ಟಿದ್ದೆ, ಆಮೇಲೆ ಹೋಗ್ತಾ ನನಗೆ 500 ರೂಪಾಯಿ ಕೊಟ್ಟು ಹೋದ ಸಾರ್, ಯಾರೊ ದೊಡ್ಡ ಮನುಶ್ಯ, ಈಗ ನೀವು ಬಂದಿರಿ, ಏಕೆ ಏನಾಯ್ತು ಸಾರ್"

ಆಶೋಕ್ ಗೆ ತಲೆ ಕೆಟ್ಟಿಂತೆ ಅನ್ನಿಸಿತು, ಏನೆಲ್ಲ ಪ್ಲಾನ್ ಮಾಡ್ತಾರೆ ಈ ಕಳ್ಳರು, ನಾವೆ ಹಿಂದೆ ಬೀಳ್ತಾ ಇದ್ದೇವೆ ಪೋಲಿಸರು ಅಂದುಕೊಂಡು ಕೇಳಿದ
"ಅವನು ಹೇಗಿದ್ದ ಅಂತ ಹೇಳಕ್ಕಾಗುತ್ತ, ಹೇಗೆ ಬಂದಿದ್ದ "
"ಅವನು ಉದ್ದ ಇದ್ದ ಸಾರ್, ಗಡ್ಡ ಬಿಟ್ಟಿದ್ದ, ಹೆಲ್ಮೆಟ್ ಹಾಕಿರಲಿಲ್ಲ ಮೋಟರ್ ಬೈಕ್ ನಲ್ಲಿ ಇದ್ದ, ಸ್ವಲ್ಪ ಕಪ್ಪು ಬಣ್ಣ ಸಾರ್ , "
"ಬೈಕ್ ನ ನಂಬರ್ ಏನಾದರು ನೆನಪಿದೆಯ?"
"ನಂಬರ್ ಅದೆಲ್ಲ ನಂಗೆ ಗೊತ್ತಾಗಲ್ಲ ಸಾರ್,  ಅವನು ದುಡ್ಡು ಕೊಡ್ತೀನಿ ಅಂದ, ಗಾಡಿ ತಳ್ತೀನಿ ಅಂದ ನನಗೇನು ಕಷ್ಟ ಅಂತ ಕೊಟ್ಟೆ ಅಷ್ಟೆ, ಏನಾದರು ತಪ್ಪಾಗಿದೆಯ ಸಾರ್, ನನಗೆ ಗೊತ್ತಾಗ್ತ ಇಲ್ಲ ?"
"ಏನು ಇಲ್ಲ ಬಿಡು, ನೀನು ಇಲ್ಲಿಯೆ ಇರ್ತೀಯ ಅಲ್ವ ಯಾವಾಗಲು, ಬೇಕಾದರು ಪುನಃ ಬರ್ತೀನಿ" ಎನ್ನುತ್ತ ಬೈಕ್ ಹತ್ತಿದ ಆಶೋಕ್
"ಬನ್ನಿ ಸಾರ್, ನೀವು ಎಷ್ಟು ವರ್ಷ ಬಿಟ್ಟು ಬಂದ್ರು ನಾನು ಇದೆ ಬೀದಿಲೆ ಇರ್ತೀನಿ, ಬಂದು ವೆಂಕಟ ಯಾರು ಅಂತ ಕೇಳಿ ಅಷ್ಟೆ ಸಾರ್ ಯಾರಾದ್ರು ತೋರಿಸ್ತಾರೆ " ಎಂದು ಹಲ್ಲು ಕಿರಿದ

ಏನು ಲಾಭವಿಲ್ಲ ಎಂಬಂತೆ ಪುನಃ ಲಾಯರ್ ಮನೆಗೆ ಬಂದ ಆಶೋಕ್, ಅವಳ ಬಳಿ ಕುಳಿತು ಮಾತನಾಡಿದ. ಸ್ವಲ್ಪ ಹೊತ್ತಿನ ನಂತರ 



"ಸರಿ ಮತ್ತೆ ಸಿಗ್ತೀನಿ ಮೇಡಮ್ , ನಿಮ್ಮ ಮಗಳು ಬಂದ ನಂತರ ತಿಳಿಸಿ ಈಗ ನಾವು ಮಾಡುವುದು ಏನು ಇಲ್ಲ ಅನ್ನಿಸುತ್ತೆ " ಎಂದ. 

ಪ್ರಿಯ "ಹೌದು , ಹಣ ಕೊಟ್ಟಾಗಿದೆ, ಮಗುವಿಗೆ ಏನಮಾಡಲ್ಲ ಅಂತ ಬರವಸೆ ಕೊಟ್ಟಿದ್ದಾರೆ, ಈ ದಿನ ಮಧ್ಯಾನದೊಳಗೆ ಮಗುವನ್ನು ಮನೆಗೆ ಕಳಿಸುತ್ತೀವಿ ಅಂದಿದ್ದಾರೆ ನೋಡೋಣ" ಎಂದಳು

ಅವನು ಹೊರಡುವಾಗಲೆ ಬಾಗಿಲಿನಿಂದ , ಹೆಣ್ಣು ಹುಡುಗಿಯೊಬ್ಬಳು ನಿಧಾನವಾಗಿ ಪ್ರವೇಶಿಸಿದಳು, ಅವಳ ಮುಖ ನೋಡುವಾಗಲೆ ಇವನಿಗೆ ಗೊತ್ತಾಯಿತು, ಈಕೆಯೆ ನಿನ್ನೆ ಕಿಡ್ನಾಪ್ ಆದ ಹುಡುಗಿ, ಲಾಯರ್ ಸಹ ಅವನ ಹಿಂದಿನಿಂದ ಬಂದು 
"ಶ್ರೇಯಾ , ಬಂದೆಯ ಪುಟ್ಟಿ, ನನಗೆ ಎಂತಾ ಗಾಭರಿ ಆಗಿತ್ತು, ಕಡೆಗೆ ಬಿಟ್ಟರಲ್ಲ, ನಿನಗೆ ಏನು ತೊಂದರೆ ಕೊಡಲಿಲ್ವ?" ಎಂದು ಕೇಳಿದಳು

"ಇಲ್ಲ ಮಮಿ, ನಿನ್ನೆ ನನ್ನನ್ನು , ಯಾವುದೊ ಮನೆಯಲ್ಲಿ ಇಟ್ಟಿದ್ದರು, ಬೆಳಗ್ಗೆ  ಕರೆದುಕೊಂಡು ಬಂದು ಈ ರಸ್ತೆಯ ತುದಿಯಲ್ಲಿ ಇಳಿಸಿ ಹೊರಟು ಹೋದರು, ಬೆಳಗ್ಗೆ ತಿಂಡಿ ಕೊಡಸಿದರು, ನನಗೆ ಏನು ತೊಂದರೆ ಮಾಡಲಿಲ್ಲ,  ಯಾರು ಮಮ್ಮಿ ಅವರೆಲ್ಲ ಗೊತ್ತಾಯ್ತ" 

ಚಿಕ್ಕ ವಯಸಿನ ಹುಡುಗಿಯಾದರು, ದೊಡ್ಡವಳಂತೆ ಮಾತನಾಡುತ್ತಿದ್ದವಳು, ಐದನೆ ಕ್ಲಾಸ್ ಆದರು ಹಾಗೆನಿಸುವದಿಲ್ಲ, ದೊಡ್ಡವಳಂತೆ ಕಾಣುತ್ತಾಳೆ ಅಂದುಕೊಂಡ ಆಶೋಕ್ . 

"ಯಾರು ಅಂತ ತಿಳಿದಿಲ್ಲ, ನೀನು ಶ್ರೇಯ ಅಲ್ಲವ , ಬೆಳಗ್ಗೆಯೆ ಹೊರಟು ಇಷ್ಟು ಬೇಗ ಹೇಗೆ ಬಂದೆ, ಮೂಡಿಗೆರೆ ಹತ್ತಿರವಲ್ಲವ ನೀನು ನಿನ್ನೆ ಸಂಜೆ ಕಾರಿನಿಂದ ಇಳಿದಿದ್ದು, ರಾತ್ರಿ ಇದ್ದದ್ದು ?" ಎಂದ ಅಶೋಕ್

 ಇವನನ್ನೆ ವಿಚಿತ್ರವಾಗಿ ನೋಡಿದ ಶ್ರೇಯ, 
"ಮಮ್ಮಿ ಇವರು ಯಾರು ?" ಎಂದು ಕೇಳಿದಳು. ಲಾಯರ್ ಗಿಂತಮೊದಲಾಗಿ ಆಶೋಕ್
"ನಾನು ಅಶೋಕ್ ಅಂತ ಶ್ರೇಯ, ಪೋಲಿಸ್, ನಿನ್ನ ಮಮ್ಮಿನೆ ನನ್ನಕರೆಸಿದ್ರು, ಹೇಳು ನೀನು ಮೂಡಿಗೆರೆಯಿಂದ ಹೇಗೆ ಬಂದೆ"

ಅದಕ್ಕೆ ಶ್ರೇಯ ಯೋಚಿಸುತ್ತ

"ಮೂಡಿಗೆರೆಯ, ಅದೆಲ್ಲಿದೆ ಅಂಕಲ್, ನನಗೆ ತಿಳಿಯದು, ನಾನು ನಿನ್ನೆ ಇದ್ದಿದ್ದು ತುಮಕೂರು , ಅಲ್ಲಿ ಯಾವುದೊ ಮನೆಯಲ್ಲಿ ನನ್ನ ಇಟ್ಟಿದ್ದರು ಎಲ್ಲಿ ಅಂತ ಸರಿಯಾಗಿ ತಿಳಿಯದು" ಎಂದಳು

"ತುಮಕೂರು ?" ಎನ್ನುತ್ತ ಆಶ್ಚರ್ಯಕ್ಕೆ ಒಳಗಾದ ಆಶೋಕ್, ನಾವು ಸುಮ್ಮನೆ ,ಪೆದ್ದು ಪೆದ್ದಾಗಿ ಇವಳ ಮೊಬೈಲ್ ಸಿಗ್ನಲ್ ಅನ್ನು ಫಾಲೋ ಮಾಡುತ್ತ ಕುಳಿತ್ತಿದ್ದೇವೆಲ್ಲ ಅನ್ನಿಸಿ ಹೇಳಿದ

"ತುಮಕೂರು, ನಿನಗೆ ಹೇಗೆ ಗೊತ್ತು, ಶ್ರೇಯ,  ನಿನ್ನೆ ರಾತ್ರಿ ಹತ್ತ ಘಂಟೆ ವರೆಗು ನೀನು ಕಾರಿನಲ್ಲಿ ಹೋದೆ ಅಲ್ಲವ, ಬೆಳಗ್ಗೆ ಅಲ್ಲಿಂದ ಪುನಃ ಹೇಗೆ ಬಂದೆ, ನಿನ್ನ ಜೊತೆ ಯಾರಿದ್ದರು, ನೀನಿದ್ದ ಮನೆ ಯಾರದು ಗೊತ್ತಾ" ಎಂದೆಲ್ಲ ಕೇಳಿದ, ತುಸು ಆಶ್ಚರ್ಯಕ್ಕೆ ಒಳಗಾದ ಅವನು ತಾನು ಪ್ರಶ್ನೆ ಮಾಡುತ್ತಿರುವುದು, ಚಿಕ್ಕ ಮಗುವನ್ನು ಅನ್ನುವದನ್ನು ಮರೆತಿದ್ದ.

"ಇಲ್ಲ ಅಂಕಲ್ , ನಿನ್ನೆ ಸ್ಕೂಲ್ ವ್ಯಾನ್ ನಲ್ಲಿ ಮನೆ ಹತ್ತಿರ ಇಳಿದೆನಲ್ಲ ,ನನ್ನ ಫ್ರೆಂಡ್ ರಕ್ಷಿತಾ ಅವಳ ಮನೆಗೆ ಹೋದಳು, ನಾನು ನಮ್ಮ ಮನೆಯ ಕ್ರಾಸ್ ಹತ್ತಿರ ತಿರುಗಿದೆ, ರಸ್ತೆಯ ಕೊನೆಯಲ್ಲಿ ಕೆಂಪು, ಕ್ವಾಲೀಸ್ ಕಾರು ನಿಂತಿತ್ತು, ಅದರಿಂದ ಇಳಿದ ಒಬ್ಬ ನನ್ನನ್ನು ಎತ್ತಿ ಕಾರಿನಲ್ಲಿ ಕೂಡಿಸಿದ, ತಕ್ಷಣ ಕಾರು ಹೊರಟಿತು, ಒಳಗಿನಿಂದ ಲಾಕ್ ಆಗಿತ್ತು, ನಾನು ಅತ್ತಿತ್ತ ನೋಡಿದೆ ಏನು ಮಾಡಲು ಗೊತ್ತಾಗಲಿಲ್ಲ, ಆರ್ಚ್ ಬರುವ ಹೊತ್ತಿಗೆ, ನನ್ನ ಹತ್ತಿರವಿದ್ದ ಮೊಬೈಲ್ ನೆನಪಿಗೆ ಬಂದಿತು ಅಮ್ಮನಿಗೆ ಮೆಸೇಜ್ ಮಾಡಿ ಸುಮ್ಮನೆ ಕುಳಿತೆ, ಕಾರು ತುಮಕೂರು ರೋಡ್ ಗೆ ಹೋಯಿತು, ಹಿಂದೆ ನಾನೊಬ್ಬಳೆ ಇದ್ದೆ ಮುಂದೆ ಡ್ರೈವರ್ ಹಾಗು ಇನ್ನೊಬ್ಬ ಇದ್ದ, ನನ್ನ ಹತ್ತಿರ ಮೊಬೈಲ್ ಇರುವುದು ಅವರಿಗೆ ಗೊತ್ತಾಯಿತು, ತಕ್ಷಣ ಅದನ್ನು ಕಿತ್ತು ಅವರ ಹತ್ತಿರ ಇಟ್ಟುಕೊಂಡರು, ಹಿಂದೆ ನಾನು ಕುಳಿತ್ತಿದ್ದು, ಯಾರಿಗು ಕಾಣಿಸುತ್ತಿರಲಿಲ್ಲ"

ಶ್ರೇಯ ಮಾತು ನಿಲ್ಲಿಸಿದ ನಂತರ ಆಶೋಕ್ ಪುನಃ ಕೇಳಿದ,
"ನೀನು ತುಮಕೂರಿನಲ್ಲಿ ಇದ್ದೆ ಅಂತ ನಿನಗೆ ಹೇಗೆ ಗೊತ್ತು, ನೀನು ಎಷ್ಟು ಹೊತ್ತು ಕಾರಿನಲ್ಲಿ ಕುಳಿತ್ತಿದ್ದೆ?"

"ಅಂಕಲ್, ತುಮಕೂರು ನನಗೆ ಗೊತ್ತು, ಅಮ್ಮನ ಜೊತೆ ಹೋಗಿದ್ದೇನೆ, ಕಾರು ತುಮಕೂರು ಒಳಗೆ ಹೋಗಲಿಲ್ಲ, ಬೈ ಪಾಸ್ ನಲ್ಲಿ ಹೋಯಿತು, ಅಲ್ಲಿ ಶೆಟ್ಟಿ ಹಳ್ಳಿ ಇದೆಯಲ್ಲ ಅದರ ಹತ್ತಿರ ಕಾರು ನಿಲ್ಲಿಸಿದ, ನನ್ನನ್ನು ಕೆಳಗೆ ಇಳಿಸಿದರು, ಆಗ ಸಂಜೆ ಐದು ಐದುವರೆ ಇರಬಹುದೇನೊ ಎದುರಿಗೆ ಮತ್ತೊಂದು ಮೆಟಡಾರ್ ಇತ್ತು , ನನ್ನನ್ನು ಅದರಲ್ಲಿ ಹತ್ತಿಸಿ, ಕರಿಯ ಗೌನ್ ಒಂದನ್ನು ಕೊಟ್ಟು, ಅದನ್ನು ಹಾಕಿಕೊಂಡು, ಯೂನಿಫಾರ್ಮ್ ಕೊಡುವಂತೆ ತಿಳಿಸಿದರು, ನಾನು ಹಾಗೆ ಮಾಡಿದೆ, ನನ್ನ ಬ್ಯಾಗ್, ಶೂ ಎಲ್ಲವನ್ನು ತೆಗೆದುಕೊಂಡು, ಕಾರ್ ಮುಂದೆ ಹೊರಟು ಹೋಯಿತು ಅದು , ಎಲ್ಲಿ ಹೋಯಿತು ನನಗೆ ಗೊತ್ತಿಲ್ಲ, ಅವರು ಹೋಗುವಾಗ, ಮೆಟಡಾರ್ ಡ್ರೈವರ್ ಗೆ ಹೇಳಿದರು
"ಈ ಹುಡುಗಿ ಚಾಲಕಿ ಇದ್ದಾಳೆ ಹುಷಾರು ಅಂತ, ಅವನು ತಕ್ಷಣ ನನ್ನ ಕಣ್ಣಿಗೆ ಒಂದು ಬಟ್ಟೆ ಕಟ್ಟಿ ಹಿಂದೆ ಕೂಡಿಸಿದ, ಅಲ್ಲಿಂದ ಹತ್ತು ನಿಮಿಷ ಅಷ್ಟೆ ನನ್ನನ್ನು ಇಳಿಸಿದರು, ಅವರೆ ಕೈ ಹಿಡಿದು ಕರೆದುಕೊಂಡು ಹೋದರು, ಒಂದೆರಡು ನಿಮಿಷ ಆದ ಮೇಲೆ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿದರು, ನಾನು ಆಗ ನೋಡಿದೆ ಅದು ಯಾವುದೊ ಮನೆ, ನನ್ನನ್ನು ಅಲ್ಲಿ ಬಿಟ್ಟು ಅವರು ಹೊರಟುಹೋದರು, ಮನೆಯಲ್ಲಿ ಒಂದು ಅಜ್ಜಿ ಮಾತ್ರ ಇತ್ತು, ಅದು ನಾನು ಎಷ್ಟೆ ಮಾತನಾಡಿಸಿದರು, ಮಾತೆ ಆಡಲಿಲ್ಲ, ಮೂಕಿಯೆ ಏನೊ ಗೊತ್ತಿಲ್ಲ " ಎಂದಳು ಶ್ರೇಯಾ

ಆಶೋಕ್ ಆಶ್ಚರ್ಯದಿಂದ ಹುಡುಗಿಯನ್ನೆ ನೋಡುತ್ತಿದ್ದ, ತಾನು ಕೇಳದಲೆ ಎಲ್ಲವನ್ನು ವಿವರವಾಗಿ ತಿಳಿಸುತ್ತಿದ್ದಾಳೆ, ಹುಡುಗಿ ನಿಜಕ್ಕು ಬುದ್ದಿವಂತೆ ಅಂದುಕೊಂಡ. ಪ್ರಿಯಾ ಮಾತ್ರ ಮಗುವಿನ ಪಕ್ಕ ಕುಳಿತು, ತನ್ನ ಮಗಳು ಇನ್ಸ್ ಪೆಕ್ಟರ್ ಗೆ ಏನು ಹೇಳುವಳು ಎಂದು ಆಸಕ್ತಿಯಿಂದ ಕೇಳುತ್ತಿದ್ದಳು, ಅಲ್ಲದೆ ತನ್ನ ಮಗಳು ಯಾವ ತೊಂದರೆಯು ಇಲ್ಲದೆ ಬಂದಿರುವುದು ಅವಳಿಗೆ ಸಮಾದಾನವಾದಂತೆ ಇತ್ತು

"ಸರಿ ಶ್ರೇಯಾ, ನೀನು ಬುದ್ದಿವಂತೆ, ಎಲ್ಲ ನೆನಪಲ್ಲಿ ಇಟ್ಟಿದ್ದೀಯ, ರಾತ್ರಿ ನಿನ್ನ ಅಲ್ಲಿ ಬಿಟ್ಟ ಮೇಲೆ, ಆ ಮನೆಗೆ ಯಾರಾರು ಬಂದಿದ್ದರು, ಅದು ಯಾರ ಮನೆ ಅಂತ ಗೊತ್ತಾಗುತ್ತ "

"ಇಲ್ಲ ಅಂಕಲ್ ನನ್ನನ್ನು ಅಲ್ಲಿ ಬಿಟ್ಟ ಮೇಲೆ ಯಾರು ಬರಲಿಲ್ಲ, ರಾತ್ರಿ ಆ ಮನೆಯಲ್ಲಿ ನಾನು ಅಜ್ಜಿ ಬಿಟ್ಟರೆ  ಯಾರು ಇರಲಿಲ್ಲ, ಕಿಟಕಿ ಎಲ್ಲ ಹಾಕಿತ್ತು, ನಾನು ಹೊರಗೆ ನೋಡಲು ಆಗಲಿಲ್ಲ, ನನಗೆ ಅಂತ ಊಟ ತಂದಿಟ್ಟಿದ್ದರು, ಅದರ ಮೇಲೆ ನಂಜುಂಡೇಶ್ವರ ಹೋಟಿಲಿನ ಕವರ್ ಇತ್ತು, ಆಗಲೆ ನನಗೆ ಗೊತ್ತಾಯಿತು, ತುಮಕೂರಿನಲ್ಲಿ ಇದ್ದೇನೆ ಗ್ಯಾರಂಟಿ ಅಂತ,  ಆ ಮನೆ ಯಾರದು ಅಂತ ಗೊತ್ತಿಲ್ಲ ಆಂಕಲ್ ಆದರೆ ಕಂಡು ಹಿಡಿಯಬಹುದು" ಎಂದಳು ಖುಷಿಯಾಗಿ.
"ಯಾವ ಮನೆ ಅಂತ ಕಂಡು ಹಿಡಿಯಬಹುದ ಹೇಗೆ?" ಅಶೋಕ್ ಕುತೂಹಲದಿಂದ ಕೇಳಿದ
"ಅಂಕಲ್, ಆ ಮನೆಯಲ್ಲಿ ನಾನು ಅಜ್ಜಿ ಮಾತ್ರ ಇದ್ದೆವಲ್ಲ, ರೂಮಿನಲ್ಲಿ ನಾನು ಮಲಗಿದೆ, ಅದು ಯಾವುದೊ ಹುಡುಗಿಯ ರೂಮು, ಅಲ್ಲಿ ಅವಳ ಸ್ಕೂಲ್ ಬುಕ್ಸ್ ನೋಟ್ಸ್, ಎಲ್ಲ ಇತ್ತು, ಅಲ್ಲದೆ ಅವಳು , ಅವರ ಕ್ಲಾಸ್ ಟೀಚರ್ ಗೆ ಒಂದು ಲೀವ್ ಲೆಟರ್ ಬರೆದು ಟೇಬಲ್ ಮೇಲೆ ಇಟ್ಟಿದ್ದಳು, ಅದನ್ನು ಓದಿದೆ, ಅವಳ ಅಪ್ಪ ಅಮ್ಮನ ಜೊತೆ ಮಂತ್ರಾಲಯಕ್ಕೆ ಹೋಗುತ್ತಿದ್ದೇನೆ ಅದಕ್ಕೆ ಮೂರು ದಿನ ರಜಾ ಬೇಕು ಅಂತ ಬರೆದಿದ್ದಳು, ಅವಳ ಹೆಸರು, ಚೇತನ ವಿದ್ಯಾಮಂದಿರ, ಏಳನೆ ಕ್ಲಾಸ್ , "ಎ" ಸೆಕ್ಷನ್ ಎಂದಿತ್ತು, ತುಮಕೂರಿನ ಚೇತನ ವಿದ್ಯಾಮಂದಿರಕ್ಕೆ ಹೋದರೆ ಏಳನೆ ಕ್ಲಾಸ್ ನಲ್ಲಿ ಅವಳು ಸಿಗ್ತಾಳೆ ಅನ್ನಿಸುತ್ತೆ" ಎಂದಳು 

ಆಶೋಕ್ ಈಗಂತು ಆಶ್ಚರ್ಯದಿಂದ ಹುಡುಗಿಯನ್ನು ನೋಡುತ್ತಿದ್ದ
"ಏನು ಮೇಡಮ್, ನಿಮ್ಮ ಮಗಳು ತುಂಬಾ ಚುರುಕು, ನೋಡಿ ಪೋಲಿಸರು ಮಾಡಬೇಕಾದ ಎಲ್ಲ ಕೆಲಸಗಳನ್ನು ಅವಳೆ ಮಾಡಿ ಮುಗಿಸಿದ್ದಾಳೆ" ಎಂದ ಸಂತಸದಿಂದ.
ಲಾಯರ್ ಸಹ ತನ್ನ ಮಗಳ ಬಗ್ಗೆ ಸಂತಸಪಡುತ್ತ 
"ಬೆಳಗ್ಗೆ ನಿನ್ನ ಅಲ್ಲಿಂದ ಹೇಗೆ ಕರೆತಂದರಮ್ಮ , ಎಷ್ಟು ಹೊತ್ತಿಗೆ ಹೊರಟೆ ಅಲ್ಲಿಂದ " ಎಂದಳು

"ಇಲ್ಲ ಮಮ್ಮಿ, ಬೆಳಗ್ಗೆ ಐದಕ್ಕೆ ನನ್ನನ್ನು ಎಬ್ಬಿಸಿದಳು, ಅಜ್ಜಿ, ಅಲ್ಲಿಯೆ ಸ್ನಾನ ಮಾಡಿ ಸಿದ್ದವಾಗುವಂತೆ ಹೇಳಿದಳು, ನನಗೆ ಅಂತ ಒಂದು ಬಟ್ಟೆ ತಂದಿದ್ದರು, ನೋಡು ನನಗೆ ಸರಿಯಾಗು ಸೆಟ್ ಆಗುತ್ತೆ, ಸರಿಯಾದ ಸೈಜ್, ಆಮೇಲೆ ರಾತ್ರಿ ಬಿಟ್ಟು ಹೋದನಲ್ಲ ಅವನು ಬಂದ, ಪುನಃ ನನ್ನನ್ನು ಕಣ್ಣಿಗೆ ಬಟ್ಟೆ ಕಟ್ಟಿ ಅದೆ ಮೆಟಡಾರ್ ನಲ್ಲಿ ಕೂಡಿಸಿದ, ಹತ್ತು ನಿಮಿಷ , ಶೆಟ್ಟಿಹಳ್ಳಿಯ ಹತ್ತಿರ ಇಳಿಸಿದ. ಅಲ್ಲಿಂದ ಹೊರಟಾಗ ಏಳುಗಂಟೆ ಆಗಿತ್ತೇನೊ ಗೊತ್ತಿಲ್ಲ,  ಅಲ್ಲಿ ಬೇರೆ ಕಾರು ಇತ್ತು, ನನ್ನನ್ನು ಕಿಡ್ನಾಪ್ ಮಾಡಿದವರು ಇರಲಿಲ್ಲ ಇವರು ಬೇರೆ, ನನ್ನ ಕೈಲಿ ಮಾತನಾಡುತ್ತಿದ್ದರು, ಆಮೇಲೆ ಬೆಂಗಳೂರಿಗೆ ಕರೆತಂದರು, ಇಲ್ಲಿ ನನಗೆ ಎಲ್ಲೆಲ್ಲಿ ಹೋದೆ ಅಂತ ಗೊತ್ತಿಲ್ಲ, ಕಾರಿಗೆ ತಿಂಡಿ ನೀರು ಎಲ್ಲ ತಂದು ಕೊಟ್ಟರು, ಸುಮ್ಮನೆ ಸುತ್ತಿಸುತ್ತ ಇದ್ದರು,  ಆಮೇಲೆ ಇಲ್ಲಿ ಇಳಿಸಿಹೋದರು, ಅವರು ಇಳಿಸಿ ಹೋಗುವಾಗಲು ಗಮನಿಸಿದೆ, ಆದರೆ ಕಾರಿಗೆ ನಂಬರ್ ಇರಲಿಲ್ಲ ಮಮ್ಮಿ, ಅದರ ಮೇಲೆ ಏನೊ ಚೀಟಿ ಅಂಟಿಸಿಬಿಟ್ಟಿದ್ದರು"

ಅಶೋಕ್ ಯೋಚಿಸಿದ, ಅಲ್ಲಿಗೆ ಅವರು ಎಲ್ಲ ಎಚ್ಚರಿಕೆ ತೆಗೆದುಕೊಂಡೆ ಮಾಡಿದ್ದಾರೆ, ಕಾರಿನಲ್ಲಿದ್ದವರ ಬಗ್ಗೆ ಕೇಳಿದರು ಸಹ ಉಪಯೋಗವಿಲ್ಲ, ಅಲ್ಲದೆ ಎಲ್ಲ ಸೆಟ್ಲ್ ಆಗಿಹೋಗಿದೆ. ಆದರೆ ಸಾಕಷ್ಟು ಕ್ಲೂಗಳಿವೆ, ಇವಳು ತುಮಕೂರಿನಲ್ಲಿ ಇಳಿದ ಮನೆ ಗುರಿತಿಸುವುದು ಕಷ್ಟವೇನಿಲ್ಲ, ಕಿಡ್ನಾಪರ್ ಸುಲುಭವಾಗಿಯೆ ಸಿಗುವನು ಆದರೆ, ಕೇಸಿನ ಆಳ ಉದ್ದಗಳೆ ಅರ್ಥವಾಗುತ್ತಿಲ್ಲ,  ಅಂದುಕೊಂಡು, ತನ್ನ ಚೀಪ್ ಗೆ ಫೋನ್ ಮಾಡಿದ

ಅತ್ತಲಿಂದ ಉತ್ತರ ಬಂದ ನಂತರ 
"ಸಾರ್, ಮಗು ಮನೆಗೆ ವಾಪಸ್ ಬಂದಿದೆ, ಅಲ್ಲದೆ ಇವರು ಕಿಡ್ನಾಪರ್ ಗೆ ಹಣವನ್ನು ಕೊಟ್ಟಿಬಿಟ್ಟಿದ್ದಾರೆ, ಆದರೆ ಹುಡುಕಿದರೆ, ಅವರು ಸಿಗುವುದು ಕಷ್ಟವೇನಲ್ಲ ಅನ್ನಿಸುತ್ತಿದೆ, ನೀವು ಒಪ್ಪಿದರೆ, ಪ್ರಯತ್ನ ಪಡುವೆ" ಎಂದ 

ಮಗು, ಮನೆ ಸೇರಿರುವದರಿಂದ , ಈಗ ಕಿಡ್ನಾಪ್ ಮಾಡಿದವರಿಂದ ಯಾವುದೆ ಅಪಾಯದ ಅವಕಾಶವಿಲ್ಲ, ಅವರನ್ನು ಹುಡುಕಿ ಅರೆಷ್ಟ್ ಮಾಡುವುದು ಸರಿ ಎಂದು ಭಾವಿಸಿದ , ಪೋಲಿಸ್ ಚೀಪ್, ತನ್ನ ಒಪ್ಪಿಗೆ ಸೂಚಿಸಿದ.  

ಅಶೋಕ್ ಲಾಯರ್ ಕಡೆ ತಿರುಗಿ

"ಪ್ರಿಯಾರವರೆ, ಈಗ ತುಮಕೂರಿಗೆ ಹೋಗಿ ಬರೋಣವೆ, ಹೆಚ್ಚು ಸಮಯವೇನು ಹಿಡಿಯಲ್ಲ, ಸಣ್ಣ ಎನ್ ಕ್ವಯರಿ ಅಷ್ಟೆ, ಮಗು ನನ್ನ ಜೊತೆ ಬಂದರೆ ಅನುಕೂಲ, ಜೊತೆಗೆ ನೀವಿದ್ದರೆ ನಮ್ಮ ಅಬ್ಜೆಕ್ಷನ್ ಏನು ಇಲ್ಲ " ಎಂದ 

ಪ್ರಿಯಾ ಸಾಕಷ್ಟು ಕೊಸರಾಡಿದಳು
"ಈಗ ಮಗಳು ಮನೆಗೆ ಬಂದಾಯ್ತಲ್ಲ, ಇನ್ನಾವ ಎನ್ ಕ್ವಯರಿ, ಬಿಡಿ " ಎಂದಳು
"ಹಾಗಾಗಲ್ಲ, ಮಗು ಮನೆಗೆ ಬಂದ ಮಾತ್ರಕ್ಕೆ ಕೇಸ್ ಮುಗಿದಂತಲ್ಲ, ಕಿಡ್ನಾಪ್ ಮಾಡಿದವರನ್ನು ಗುರಿತಿಸಿ ಅವರಿಗೆ ಶಿಕ್ಷೆ ಆಗಬೇಕಲ್ಲವೆ, ನೀವು ಕಾನೂನು ತಿಳಿದವರು, ಒಂದು ಗಂಟೆ ಬಿಟ್ಟು ಬರುತ್ತೇನೆ ಸಿದ್ದವಾಗಿ, ನಮ್ಮದೆ ವೆಹಿಕಲ್ ತರುವೆ" ಎಂದು ಅಲ್ಲಿಂದ ಹೊರಟ.
............ 
ಲಾಯರ್ ಹಾಗು ಅವಳ ಮಗಳ ಜೊತೆ, ತುಮಕೂರಿನ ಚೇತನ ವಿದ್ಯಾಮಂದಿರ ಶಾಲೆಯ ಮುಂದೆ ಇಳಿದಾಗ ಆಗಲೆ ಮದ್ಯಾನ ದಾಟುತ್ತಿತ್ತು, ಏಳನೆ ಏ ಸೆಕ್ಷನ್ ಕ್ಲಾಸ್ ಟೀಚರ್ ಸುಲುಭವಾಗಿಯೆ ಸಿಕ್ಕಿದರು, ಪೋಲಿಸರನ್ನು ಕಂಡ ಆಕೆಗೆ ಗಾಭರಿ 
"ಗಾಭರಿ ಪಡುವಂತದು ಏನು ಇಲ್ಲ, ನಿಮ್ಮ ಶಾಲೆಯಲ್ಲಿ ವೈಷ್ಣವಿ ಅನ್ನುವ ಹುಡುಗಿ ಇದ್ದಾಳಲ್ಲ ಅವಳನ್ನು ಮಾತನಾಡಿಸಬೇಕಿತ್ತು" ಎಂದ ಆಶೋಕ್
ವೈಷ್ಣವಿಯು ಬಂದಳು, ಸ್ವಲ್ಪ ಉದ್ದಕ್ಕೆ, ಕಪ್ಪುವರ್ಣದಿಂದ ಇದ್ದ ಹುಡುಗಿ , ಇವರನ್ನೆಲ್ಲ ನೋಡಿ ಅರ್ಥವಾಗದೆ ಗಲಿಬಿಲಿಯಿಂದ ನಿಂತಳು

ಅವಳನ್ನು ನೋಡುತ್ತ, ಆಶೋಕ್ ಪ್ರಶ್ನಿಸಿದ
"ವೈಷ್ಣವಿ ಹೆದರಬೇಡ, ನಾವು ಹೀಗೆ ಸುಮ್ಮನೆ ಬಂದಿದ್ದೇವೆ, ನಿಮ್ಮ ಮನೆ ಎಲ್ಲಿದೆ, ವಿಳಾಸ ತಿಳಿಸುತ್ತೀಯ "
"ನಮ್ಮ ಮನೆ ವಿಜಯನಗರ , ೩ ನೆ ಕ್ರಾಸ್, ಶೆಟ್ಟಿಹಳ್ಳಿಯ ಹತ್ತಿರ ಇದೆ ಆದರೆ ಏಕೆ ಬೇಕು" ಅವಳು ಭಯದಿಂದ ಕೇಳಿದಳು,
"ಹೆದರಬೇಡಮ್ಮ,ನೋಡು ನಿಮ್ಮ ಮನೆಗೆ ಹೋಗೋಣ ಬರ್ತೀಯ ಕೆಲವು ವಿವರ ಬೇಕು"

ಆಕೆಯ ಕ್ಲಾಸ್ ಟೀಚರ್ ವೈಷ್ಣವಿ ಒಬ್ಬಳನ್ನು ಕಳಿಸಲು ಒಪ್ಪದೆ ತಾನು ಮನೆಯವರೆಗು ಜೊತೆಗೆ ಬರುವದಾಗಿ ಸಿದ್ದವಾದಳು, 

  ವೈಷ್ಣವಿ ಮನೆಯ ಮುಂದೆ ನಿಂತಾಗ ಆಶೋಕ್ ಗಮನಿಸಿದ, ಅತಿ ವಿರಳ ಮನೆಗಳಿರುವ ಜಾಗ, ಎರಡು ಮನೆ ಬಿಟ್ಟರೆ ಸುತ್ತಲು ಮನೆಗಳೆ ಹೆಚ್ಚು ಕಾಣುತ್ತಿಲ್ಲ, ಅಲ್ಲೊಂದು ಇಲ್ಲೊಂದು, ಈಗ ಬೆಳೆಯುತ್ತಿರವ ಏರಿಯ ಅಂದುಕೊಂಡ.  ಬಾಗಿಲು ತಟ್ಟಿದಾಗ, ಒಳಗಿನಿಂದ ಬಾಗಿಲು ತೆಗೆದ ವೈಷ್ಣವಿಯ ಅಪ್ಪ ಅಮ್ಮನಿಗೆ ಆಶ್ಚರ್ಯ, ಮಗಳ ಜೊತೆ ಬಂದ ಇವರೆನ್ನೆಲ್ಲ ನೋಡುತ್ತ. 

ಮನೆಯ ಒಳಗೆ ಬರುವಾಗಲೆ, ಶ್ರೇಯ ಗುರುತು ಹಿಡಿದಳು, ನಾನು ನಿನ್ನೆ ಇದ್ದದ್ದು ಇದೆ ಮನೆ ಎಂದು.  ಅಲ್ಲಿರುವ ಯಾರಿಗು ಸಂದರ್ಭ ಅರ್ಥವಾಗಲಿಲ್ಲ.  ಆಶೋಕ್ ಕಿಡ್ನಾಪಿನ ವಿವರವನ್ನೆಲ್ಲ ತಿಳಿಸಿ, ಈ ಮನೆಯಲ್ಲಿ ನಿನ್ನೆ ಶ್ರೇಯ ಇದ್ದಿದ್ದನ್ನು ತಿಳಿಸಿದರು, ಸತೀಶ ಆಶ್ಚರ್ಯಪಡುತ್ತಿರುವಂತೆ ಮತ್ತೆ ಕೇಳಿದರು,
"ನಿನ್ನೆ ನೀವು ಎಲ್ಲಿದ್ದೀರಿ, ಈ ಮನೆಯಲ್ಲಿ ಯಾರಿದ್ದರು?"  ಅದಕ್ಕಾತ
"ಇಲ್ಲ ಇನ್ಸ್ ಪೆಕ್ಟರ್ ನಾವು ಮೂರುದಿನದಿಂದ ಊರಿನಲ್ಲಿ ಇರಲಿಲ್ಲ, ನಾವು ಹಾಗು ಎದುರು ಮನೆಯವರು ಒಟ್ಟಿಗೆ ಮಂತ್ರಾಲಯ ಹಂಪೆ ಅಂತ ಟ್ರಿಪ್ ಹೋಗಿದ್ದೆವು, ಈ ದಿನ ಬೆಳಗ್ಗೆ ಎಂಟು ಗಂಟೆಗಷ್ಟೆ, ನಾವು ಬಂದಿದ್ದು, ಇವಳು ಶಾಲೆ ತಪ್ಪಿಸಲ್ಲ, ಅಂತ ಬಂದವಳೆ ಶಾಲೆಗೆ ಹೋದಳು, ನಾವು ರೆಷ್ಟ್ ತೆಗೆದುಕೊಳ್ಳುತ್ತಿದ್ದೆವೆ ಅಷ್ಟೆ" ಎಂದರು
"ನೀವು ಹೋಗುವಾಗ ಮನೆಯ ಕೀಯನ್ನು ಯಾರಿಗಾದರು ಕೊಟ್ಟಿದ್ದೀರ" ಎಂದು ಕೇಳಿದ
"ಹೌದು ನಮ್ಮ ಕೀ ಎದುರು ಮನೆಯಲ್ಲಿಯೆ ಇತ್ತು, ಅಲ್ಲದೆ ಅವರು ಸಹ ನಮ್ಮ ಜೊತೆಯೆ ಬಂದಿದ್ದರು, ಅವರ ಮನೆಯಲ್ಲಿ   ಅವರ ಪರಿಚಯದವರೊಬ್ಬರುಗೆ ಮನೆಯಲ್ಲಿ ಮಲಗಲು ತಿಳಿಸಿದ್ದರು, ನಮ್ಮ ಮನೆಯಲ್ಲಿ ಯಾರು ಮಲಗುತ್ತಿರಲಿಲ್ಲ "
ಅದಕ್ಕೆ ಅಶೋಕ್
"ಸರಿ ಈಗ ಎದುರು ಮನೆಯಲ್ಲಿ ಯಾರಿದ್ದಾರೆ, " ಎಂದರು
"ನಮ್ಮ ಜೊತೆಯೆ ಬಂದರಲ್ಲ, ಗಂಡ ಹೆಂಡತಿ ಅವರೆ ಇದ್ದಾರೆ, ಅವರ ಮಗ ಶಾಲೆಗೆ ಹೋಗಿರಬಹುದು" ಎಂದರು
"ಬನ್ನಿ ಒಂದು ಕ್ಷಣ ಅವರ ಮನೆಗೆ ಹೋಗಿ ವಿಚಾರಿಸೋಣ, ಅವರ ಅವರ ಮನೆಯಲ್ಲಿ ಮಲಗುತ್ತಿದ್ದ ವ್ಯಕ್ತಿ ಈಗ ಎಲ್ಲಿ ಸಿಗಬಹುದು ನೋಡೋಣ" ಎನ್ನುತ್ತ ಎದ್ದು ಹೊರಟರು
ವೈಷ್ಣವಿಯ ತಂದೆ ಸತೀಶನಿಗೆ ಆತಂಕ, ಇದೇನು ಅಪ್ಪತ್ತು ಬಂದಿತಲ್ಲ, ಎನ್ನುತ್ತ ಎದುರು ಮನೆಗೆ ಇನ್ಸ್ ಪೆಕ್ಟರ್ ಜೊತೆ ಹೊರಟು, ಎದುರು ಮನೆ ಬಾಗಿಲು ತಟ್ಟಿದರು, ಅವರು ಬಾಗಿಲು ತೆಗೆದ ನಂತರ , ಆಶೋಕ್ ನನ್ನು ಅವರಿಗೆ ಪರಿಚಯಿಸಿದರು ಸತೀಶ್
ಆಶೋಕ ಅವರನ್ನು 
"ನೀವು ಮನೆಯಲ್ಲಿ ಇಲ್ಲದಾಗ ಇಲ್ಲಿ ಯಾರು ಇರುತ್ತಿದ್ದರು, ಯಾರ್ಯಾರು ಇರುತ್ತಿದ್ದರು" ಎಂದು ಕೇಳಿದರು
"ಇಲ್ಲ ಯಾರು ಇಲ್ಲ,  ರಾಮಕೃಷ್ಣ ಅಂತ ಪರಿಚಯದವ ಇರುತ್ತಿದ್ದ ಅಷ್ಟೆ, ಅವನಿಗೆ ಕೀ ಕೊಟ್ಟು ಹೋಗಿದ್ದೆವು" ಎಂದರು ಮನೆಯಾತ.
"ಈಗ ನಿಮ್ಮ  ರಾಮಕೃಷ್ಣ ಅವರನ್ನು ಕರೆಸಲು ಸಾದ್ಯವೆ ಎಲ್ಲಿ ಸಿಗುತ್ತಾನೆ" ಎಂದ ಆಶೋಕ್
"ಇದೆ ರಸ್ತೆಯ ತುದಿಯಲ್ಲಿರುವ ಅಂಗಡಿಯಲ್ಲಿಯೆ ಇರುತ್ತಾನೆ ರಾಮಕೃಷ್ಣ   , ಅಲ್ಲಿಯೆ ಅವನು ಕೆಲಸ ಮಾಡುವುದು, ತಡಿಯಿರಿ ,ಫೋನ್ ಮಾಡುವೆ ಇಲ್ಲಿಯೆ ಬರುವ " ಎಂದರು ಅವರು, 
"ನೋಡಿ ನಾವೆಲ್ಲ ಬಂದಿರುವ ವಿಷಯ ತಿಳಿಸಬೇಡಿ, ಸುಮ್ಮನೆ ಕಾಲ್ ಮಾಡಿ " 
ಎಂದ ಇನ್ಸ್ ಪೆಕ್ಟರ್ ಅಶೋಕ್

ಐದೇ ನಿಮಿಷದಲ್ಲಿ, ಆತ ಬಂದ, ಅವನು ಬರುತ್ತಲೆ ಶ್ರೇಯ ಗುರುತಿಸಿದಳು ರಾತ್ರಿ ಅವನೆ ತನ್ನನ್ನು ಮೆಟಡಾರ್ ನಲ್ಲಿ ಕರೆತಂದವನು ಎಂದು. ಅಲ್ಲಿಯೆ ಅವನ ಅರೆಷ್ಟೆ ಮಾಡಿದರು ಪೋಲಿಸರು, ಯಾರಿಗು ಏನಾಗಿದೆ ಎಂದು ಅರ್ಥವಾಗಲೆ ಇಲ್ಲ. 
......

ಕೇಸ್ ತುಂಬಾ ಸುಲುಭದಲ್ಲಿಯೆ ಸಾಲ್ವ್ ಆಗಿತ್ತು, ರಾಮಕೃಷ್ಣ ಸುಲುಭವಾಗಿಯೆ ಬಾಯಿ ಬಿಟ್ಟಿದ್ದ, ಅವನಿಗೆ ಹಿನ್ನಲೆ ಏನು ತಿಳಿಯದು, ಮಗುವನ್ನು ಒಂದು ರಾತ್ರಿ ಯಾರಿಗು ಸಿಗದಂತೆ ಇಟ್ಟುಕೊಂಡಿದ್ದಕ್ಕೆ ಅವನಿಗೆ ಸಿಕ್ಕಿದ್ದು ಐದು ಸಾವಿರ ರೂಪಾಯಿ, ಅವನಿಗೆ ಕೆಲಸ ವಹಿಸಿದವರು ಯಾರು ಎಂತಲೂ ತಿಳಿಯಿತು, 

ಕಡೆಯಲ್ಲಿ ಬೆಪ್ಪಾಗಿ ಕುಳಿತವನು ಆಶೋಕ್ , ಸಾಮಾನ್ಯ ಕೇಸ್ ಎಂದು ವಿಚಾರಣೆಗೆ ಹೊರಟರೆ ಎಲ್ಲಿಗೊ ಕರೆದೋಯ್ಯುತ್ತಿದೆ, ಕಿಡ್ನಾಪ್ ಹಿಂದೆ ಇರುವರು ಯಾರು ಎಂದು ತಿಳಿಯುತ್ತಲೆ ಅವನು ತಣ್ಣಗಾಗಿ ಹೋದ, ತನ್ನ ಮೇಲಾಧಿಕಾರಿಗೆ ಕೇಸ್ ಒಪ್ಪಿಸಿ ಸಾರ್ ಹೀಗೆ ಇದೆ, ಎಂದ
ಅವರು ಸಹ ಯೋಚಿಸಿದರು, ಇದೆಲ್ಲ ಹೀಗೆ ನಡೆಯುವುದು, ನಾವು ನಡುವೆ ಇವರಿಗೆಲ್ಲ ಆಡುವ ವಸ್ತುಗಳು ಎಂದುಕೊಳ್ಳುತ್ತ , ಲಾಯರ್ ಪ್ರಿಯಾಗೆ ಫೋನ್ ಮಾಡಿ ಕರೆಸಿದರು, ಅವಳು ಸಹ ಬಂದು ಕುಳಿತಳು

"ನೋಡಿ ಪ್ರಿಯಾ ನಿಮಗೆ ಗೊತ್ತಿರಬಹುದು, ನಿಮ್ಮ ಮಗಳ ಕಿಡ್ನಾಪ್ ಕೇಸ್ ಹುಡುಕುತ್ತ ಹೋದರೆ ಆಳಕ್ಕೆ ಇಳಿಯುತ್ತಿದೆ, ಕಿಡ್ನಾಪ್ ಕೇಸ್ ಹಿಂದಿರುವರು ತುಂಬಾ ದೊಡ್ಡ ವ್ಯಕ್ತಿ, ನಾವು ಈಗ ಅಸಹಾಯಕರಾಗಿದ್ದೇವೆ, ನಿಮ್ಮ ಅವರ ನಡುವೆ ಇರುವ ವ್ಯವಹಾರ ಪೂರ್ತಿ ನಮಗೆ ತಿಳಿಯದು, ಈಗ ಏನು ಮಾಡುವುದು ಹೇಳಿ" ಎಂದರು
"ಸರ್ ಕಿಡ್ನಾಪ್ ಮಾಡಿಸಿದವರು ಯಾರು ಎಂದು ತಿಳಿಯಬಹುದಾ?" 
ಆಕೆ ಕುತೂಹಲದಿಂದ ಕೇಳಿದಳು
ದ್ವನಿ ತಗ್ಗಿಸಿ ನುಡಿದರು  ಪೋಲಿಸ್ ಐ ಜಿ
"ನಮ್ಮ ಹೋಮ್ ಮಿನಿಷ್ಟರ್ ಕಡೇಗೆ ಬೆರಳು ಹೋಗುತ್ತಿದೆ ಮೇಡಮ್ ಈ ಕೇಸನ್ನು ಇಲ್ಲಿಯೆ ಬಿಟ್ಟರೆ ಒಳ್ಳೆಯದೇನೊ " ಎಂದರು
"ಸರಿ ನನ್ನದೇನು ಅಭ್ಯಂತವಿಲ್ಲ, ನಾನು ಮಗಳು ಸಿಗುತ್ತಲೆ ಕೇಸ್ ಬಿಡಲು ಸಿದ್ದಳಿದ್ದೆ, ನಿಮ್ಮ ಇನ್ಸ್ ಪೆಕ್ಟರ್ ಆಶೋಕ್ ರವರೆ ಆಸಕ್ತಿ ವಹಿಸಿದರು, ನನಗೆ ಯಾರು ಎಂದು ತಿಳಿಯುವ ಕುತೂಹಲಕ್ಕೆ ಸುಮ್ಮನಿದ್ದೆ, ಈಗ ಎಲ್ಲ ಆಯ್ತಲ್ಲ, ಯಾವುದೋ ವ್ಯವಹಾರದಲ್ಲಿನ ಏರುಪೇರು  ಏನೊ ಆಗಿದೆ ಬಿಡಿ, ನಾನು ಕಂಪ್ಲೇಂಟ್ ವಾಪಸ್ ಪಡೆಯುವೆ, ನೀವು ಇದನ್ನು ಇಲ್ಲಿಯೆ ಬಿಟ್ಟು ಬಿಡಿ " ಎಂದಳು
ಆಶೋಕ್ ಮುಖ ಸಪ್ಪೆಯಾಗಿತ್ತು, ಅವಳು ಅಲ್ಲಿಂದ ಹೊರಟಂತೆ ಹೇಳಿದ
"ಪ್ರಿಯಾರವರೆ , ನಿಮ್ಮ ಮಗಳು ತುಂಬಾ ಚುರುಕು, ಅವಳಿಗು ಸ್ವಲ್ಪ ಹೇಳಿ ಕೆಲ ಕಾಲ ಹೊರಗೆಲ್ಲು ಈ ವಿಷಯ ಮಾತನಾಡುರುವುದು ಬೇಡ" 
ನಗುತ್ತ ನುಡಿದಳು ಪ್ರಿಯ
"ಇಲ್ಲ ಅವಳು ಹರಟೆ ಮಲ್ಲಿ ಏನಲ್ಲ, ಮಾತು ಕಡಿಮೆ, ಅಲ್ಲದೆ ನಾಳೆಯಿಂದ ಅವಳ ಶಾಲೆಗೆ ರಜೆ, ಹಾಗಾಗಿ ಈ ದಿನ ರಾತ್ರಿ ಊಟಿಗೆ ನನ್ನ ತಂಗಿ ಮನೆಗೆ ಹೋಗುತ್ತಿದ್ದಾಳೆ, ಇನ್ನು ಹದಿನೈದು ದಿನ ಅವಳು ಬೆಂಗಳೂರಿನಲ್ಲಿ ಇರಲ್ಲ ಬಿಡಿ " ಎನ್ನುತ್ತ ಎದ್ದಳು. 
ಅವಳು ಸ್ಟೇಷನ್ ನಿಂದ ಹೊರಬರುತ್ತಿರವಾಗ ಹಿಂದೆಯೆ ಬಂದ ಅಶೋಕ್ ಮತ್ತೆ ಕೆಟ್ಟಕುತೂಹಲದಿಂದ ಕೇಳಿದ
"ಪ್ರಿಯಾರವರೆ ತಪ್ಪು ತಿಳಿಯಬೇಡಿ, ನಿಮ್ಮ ಹಸ್ ಬೆಂಡ್ ಅಂದರೆ ಮಗುವಿನ ತಂದೆ ಸೆಲ್ವರಾಜ್ ರವರು ಎಲ್ಲಿ, ಕಾಣಿಸಲೆ ಇಲ್ಲ ಅವರಿಗೆ ವಿಷಯ ತಿಳಿಸಲಿಲ್ಲವೆ?"

ಆಕೆಯ ಮುಖದಲ್ಲಿ ಎಂತದೋ ಒಂದು ವ್ಯಂಗ್ಯದ ನಗೆ ಹಾದುಹೋಯಿತು 
" ಇಲ್ಲ  ಅವರು ಊರಲಿಲ್ಲ, ದಾರವಾಡದಲ್ಲಿ ಈಗ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆಯಲ್ಲ, ಮೂರು ದಿನ ಅಲ್ಲಿಗೆ ಹೋಗಿದ್ದಾರೆ, ಅವರಿಗೆ ಸುಮ್ಮನೆ ತಿಳಿಸಿ ಗಾಭರಿ ಪಡಿಸುವುದು ಏಕೆ ಅಂತ ಸುಮ್ಮನಾದೆ, ಮಗಳು ಬಂದಾಯ್ತಲ್ಲ ಬಿಡಿ " ಎನ್ನುತ್ತ ಹೊರಟಳು ಪ್ರಿಯಾ. 
- ಮುಗಿಯಿತು

No comments:

Post a Comment

enter your comments please