Wednesday, June 26, 2013

ಕಿವುಡು ಪುಟ್ಟಮ್ಮ


 ಪುಟ್ಟಮ್ಮ ಎಂದು ಕರೆದಾಗ
ಹತ್ತಿರ ಬಂದು ಅಪ್ಪಿಕೊಂಡಳು

ಎಡವಿ ಬೀಳುವಿ ಪುಟ್ಟಿ ಹುಷಾರು ಎಂದಾಗ
ಅಪ್ಪನ ಕೈ ಆಸರೆ ಪಡೆದು ನಡೆವಳು

ನಾಯಿ ಬಾಲ ಎಳೆಯ ಬೇಡ
ಅದು ಕೈ ಕಚ್ಚುತ್ತೆ ಎಂದ ಅಣ್ಣನ ಮಾತ ನಂಬಿದಳು

ಹೊರಗೆ ಕತ್ತಲೆಯಮ್ಮ ಗುಮ್ಮನಿರುವ ಎನ್ನುವ
ಅಮ್ಮನ ಮಾತಿಗೆ ಅವಳ ತೋಳ ಸೇರಿದಳು

ಅಪ್ಪ ಹೇಳಿದ ಸಾಲು ಸಾಲು ಕತೆಗಳನ್ನೆಲ್ಲ
ಕೇಳಿ ಕಣ್ಣರಳಿಸಿ ನಂಬಿದ ಪುಟ್ಟಮ್ಮ
 

 
 
 
 
 
ಹೊರಗೆ ಜನರ ಜೊತೆ ವ್ಯವಹಾರ ಕಷ್ಟ
ಎಂದು ಎಚ್ಚರಿಸಿದಾಗ ಸ್ವಾತಂತ್ರ್ಯವಿಲ್ಲ ಎಂದಳು

ಹೊರಗೆ ನೂರಾರು ತೋಳಗಳು ಹರಿದು
ತಿನ್ನಲು ಕಾದಿವೆ ಹುಷಾರು ಎಂದ
ಹಿರಿಯರ ಮಾತಿಗೆ ಉಸಿರು ಕಟ್ಟುತ್ತಿದೆ ಅಂದಳು

ಕನಸಿನಲ್ಲಿ ನಡೆದರು ಸಾಲದು ಪುಟ್ಟಮ್ಮ
ಎಚ್ಚರದಲ್ಲಿ ಕಣ್ಬಿಟ್ಟು ನಡೆಯಬೇಕು
ಇದು ಹಳ್ಳ ಮುಳ್ಳುಗಳಿರುವ ಹಾದಿ ಎಂದು
ಅಮ್ಮನೆಂದರೆ ಅದನ್ನು
ಅಭಿಪ್ರಾಯದ ಹೇರಿಕೆ ಅಂದಳು

ಅಪ್ಪ ಅಮ್ಮ ಹಿರಿಯರ ಕಣ್ಣೀರ
ಹಿಂದಿನ ಹೃದಯವ ಮರೆತ ಪುಟ್ಟಮ್ಮ
ತನ್ನತನದಿ ಮೆರೆದು
’ನಾನು ಉಸಿರಾಡಿದ್ದು ಹುಟ್ಟಿದಾಗ ಮಾತ್ರ ಎಂದಳು’

ಇಪ್ಪತ್ತು ವರ್ಷ ಇಷ್ಟಪಟ್ಟು ಬೆಳೆಸಿದ
ತಪಸನ್ನ ಅಪ್ಪ ಅಮ್ಮನ ಹಿರಿಯರ ಪ್ರೀತಿಯನ್ನ
ಕಾಲಲ್ಲಿ ತುಳಿಯುತ್ತ
’ಕ್ರಾಂತಿಯ , ಸ್ವಾತಂತ್ರ್ಯದ ಬಾವುಟವನ್ನು’
ಎತ್ತಿ ಹಿಡಿದಳು
ಹೇಗಾದರು ಸುಖವಾಗಿರು ಎನ್ನುವ ಅಪ್ಪ ಅಮ್ಮನ
ಪಿಸುಮಾತಿಗೆ ಕಿವುಡಾದಳು
ಇದು ಎಷ್ಟು ಅಪ್ಪ ಅಮ್ಮಂದಿರ ವ್ಯಥೆಯೊ !!

2 comments:

  1. ಅಪ್ಪ ಅಮ್ಮಂದಿರ ವ್ಯಥೆಯನ್ನು ಬಹಳ ಮನ ಮುಟ್ಟುವಂತೆ ವ್ಯಕ್ತಪಡಿಸಿದ್ದೀರಾ ಸಾರ್, ನನಗೆ ತುಂಬಾ ನೆಚ್ಚಿಗೆಯಾಯಿತು.

    ReplyDelete
  2. ಅಪ್ಪ ಅಮ್ಮಂದಿರ ವ್ಯಥೆಯೊ ಸಮಾಜ ಸಾಗುತ್ತಿರುವ ದಿಕ್ಕೊ ಅರ್ಥವಾಗದ ಗೊಂದಲ !

    ReplyDelete

enter your comments please