Wednesday, July 3, 2013

ಬೆಂಗಳೂರಿನಲ್ಲಿ ಕ್ಲೌಡ್ ಬರ್ಷ್ಟ್ .. ಅಷಾಡ .. ಅಮಾವಾಸ್ಯೆ ಇತ್ಯಾದಿ



  ರಾತ್ರಿ ಮಲಗುವಾಗ ಕೇದಾರದ ರುದ್ರಭಯಂಕರ ಮಳೆಯ ಬಗ್ಗೆ  ಟೀವಿ ವರದಿ ನೋಡುತ್ತ ಇದ್ದವನು ಹಾಗೆಯೆ ಮಲಗಿದ್ದೆ. ಮಲಗಿ ಸ್ವಲ್ಪ ಕಾಲವಾಗಿತ್ತೇನೊ ಏಕೊ ಎಚ್ಚರವೆನಿಸಿತು. ಹೊರಗೆ ಪಟ ಪಟ ಎನ್ನುವ ಸತತ ಶಬ್ದ. 
'ಓಹೋ ರಾತ್ರಿ ಮಳೆ ಪ್ರಾರಂಬವಾಯಿತು' ಅಂದುಕೊಂಡೆ,


ಸ್ವಲ್ಪ ಮಲಗಿರುವಂತೆಯೆ ಮಳೆಯ ಶಬ್ದ ಜಾಸ್ತಿಯಾಗುತ್ತ ಹೋಯಿತು, ಮಲಗಿರಲಾರದೆ ಒಮ್ಮೆ ಎದ್ದು , ಲೈಟ್ ಹಚ್ಚಿ ಹೊರಗೆ ಬಂದೆ, ಬಾಗಿಲು ತೆರೆದು ಹೊರಬಂದು ಗ್ರಿಲ್ ಬೀಗ ತೆಗೆಯದೆ ರಸ್ತೆ ನೋಡುತ್ತಿರುವಂತೆ, ಎದೆ ಬಿರಿಯುವಂತೆ ಗುಡುಗಿನ ಶಬ್ದ, ಪ್ರತಿ ಸೆಕೆಂಡ್ ಸಹ ಆಕಾಶವನ್ನೆಲ್ಲ ತುಂಬುತ್ತಿರುವಂತೆ ಸತತ ಮಿಂಚುಗಳ ಅಬ್ಬರ. ಕಣ್ಣು ಕತ್ತಲೆಯಾದಂತೆ ಅನಿಸಿತು, ಮಲಗಿದ್ದು ಎದ್ದು ಬಂದಿದ್ದರಿಂದ ಕಣ್ಣು ಅಗಲಿಸುವಂತೆ ಆಗುತ್ತಿತ್ತು.  ಅಕಾಶವನ್ನೆಲ್ಲ ತುಂಬಿದಂತೆ, ಮಿಚೊಂದು ತುಂಬಿಕೊಂಡಿತು, ಮತ್ತೆ ಗುಡುಗುತ್ತದೆ ಅಂದುಕೊಳ್ಳುತ್ತಿರುವಾಗಲೆ, ಕಿವಿ ತೂತಾಗುವಂತೆ ಶಬ್ದ, ಎದೆಯಲ್ಲಿ ನಡುಕ ಹುಟ್ಟಿಸಿತು. ಇದೆನು ಮಳೆಯ ಅಬ್ಬರ ಅನ್ನುತ್ತಿರುವಾಗಲೆ, ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಮನೆಯ ಮೇಲಿನಿಂದ ಬಿದ್ದ ನೀರು ಕಾಪೊಂಡ್ ಒಳಗಿನ ಕಾಂಕ್ರಿಟ್ ನೆಲದ ಮೇಲೆ ಬಿದ್ದು, ಹೊರಗೆ ಹರಿಯಲಾರದೆ ನೀರು ತುಂಬಿಕೊಳ್ಳುತ್ತಿತ್ತು,  ರಸ್ತೆಯಲ್ಲಿನ ನೀರಿನ ಮಟ್ಟ ಒಳಗಿನ ನೀರಿಗಿಂತ ಜಾಸ್ತಿ ಆದಂತೆ , ನೀರು ಹೊರಹೋಗುವ ಬದಲಿಗೆ, ಹೊರಗಿನ ನೀರು ಒಳಗೆ ಬರುತ್ತಿದೆಯ ಅನ್ನಿಸಿತು. 

ಮತ್ತೊಮ್ಮೆ ಬಾರಿ ಮಿಂಚು, ಕಿವಿಯ ಕರ್ಣಪಟಲ ಹರಿಯುವಂತೆ ಶಬ್ದ, ಖಂಡೀತ ಇದು ಸಿಡಿಲು ಅಂದುಕೊಂಡೆ, ಕರೆಂಟ್ ಹೊರಟುಹೋಗಿ, ಒಳಗೆಲ್ಲ ಕತ್ತಲು ತುಂಬಿತು. ಅರ್ಧರಾತ್ರಿಯ ಸಮಯ ಹೆಚ್ಚು ಹೊತ್ತು ಹೊರಗೆ ನಿಲ್ಲುವುದು ಸರಿಯಲ್ಲ ಅಂದುಕೊಂಡು, ಒಳಗೆ ಬಂದು ಬಾಗಿಲು ಹಾಕಿದೆ. ಮತ್ತೆ ದೀಪ ಹಚ್ಚುವದೇಕೆ ಎನ್ನುತ್ತ, ಮಿಂಚಿನ ಬೆಳಕು ಒಳಗೆಲ್ಲ ತುಂಬುತ್ತಿರುವಂತೆ ಮಂಚದ ಹತ್ತಿರ ನಡೆದು ಸೊಳ್ಳೆಯ ಪರದೆಯಲ್ಲಿ ತೂರಿಕೊಂಡೆ ಹೆಂಡತಿ ಮಾತ್ರ ನಿಶ್ಚಿಂತೆಯಿಂದ ಮಲಗಿದ್ದಳು, 

ಮಳೆ ಮತ್ತೆ ಬಿರುಸಾಯಿತು, ಏನಿದು ಇಷ್ಟೊಂದು ಶಬ್ದ, ಮನೆಯ ತಾರಸಿಯ ಮೇಲೆ ಯಾರೊ ಕಲ್ಲಿನ ರಾಶಿ ಸುರಿಯುತ್ತಿರವಂತೆ ದಡ ದಡ ಶಬ್ದ. ಇದು ಸಾದಾರಣ ಮಳೆಯಲ್ಲ ಅನ್ನಿಸಿತು. ಬೆಂಗಳೂರಿನಲ್ಲಿ ಇಂತಹ ದೊಡ್ದ ಮಳೆಯನ್ನು ನಾನು ಕಂಡೆ ಇರಲಿಲ್ಲ. ಮಂಚದಿಂದ ಕೆಳಗಿಳಿಯೋಣವೆ ಎನ್ನುತ ಕೆಳಗೆ ಕಾಲು ಇಟ್ಟೆ, ಅರೆ ಕಾಲೆಲ್ಲ ನೀರಿನಲ್ಲಿ ಇಟ್ಟಂತಾಯಿತು, ಹೌದಲ್ಲ, ರೂಮಿನಲ್ಲಿ ನೀರು ತುಂಬಿದೆ ಅನ್ನಿಸುತ್ತೆ ಅಂದುಕೊಳ್ಳುವಾಗಲೆ, ಕೆಳಗೆ ಮೊಣಕಾಲಿನವರೆಗು ನೀರು ತುಂಬಿದ್ದು ತಿಳಿಯುತ್ತ ಇತ್ತು 

 'ಅರೆ ಹೊರಗಿನ ನೀರು ಬಾಗಿಲ ಸಂದಿಯಲ್ಲಿ ಒಳಗೆ ನುಸುಳತ್ತ ಇರಬಹುದು, ಹೊರಗೆ ಹೋಗಿ ನೋಡಬೇಕು ಬಹುಷಃ ಕಾಪೊಂಡ್ ಒಳಗಿನ ನೀರು ಹೊರಗೆ ಹೋಗದೆ ಕಟ್ಟಿಕೊಂಡಿರಬೇಕು, ಒಂದು ಕೋಲನ್ನಾದರು ಹುಡುಕಿ ನೀರು ಹೊರಹೋಗುವ ಸಂದಿಯನ್ನೊಮ್ಮೆ ತಿವಿಯಬೇಕು ಬಹುಷಃ ಎಲೆ ಮುಂತಾದವು ಸೇರಿ ಅವಸ್ಥೆಯಾಗಿರಬೇಕು'

ಎಂದುಕೊಳ್ಳುತ ನೀರಿನಲ್ಲಿಯೆ ನಿದಾನವಾಗಿ ನಡೆಯುತ್ತ ಮುಂಬಾಗಿಲ ಬಳಿ ಬಂದು ನಿದಾನವಾಗಿ ಬಾಗಿಲು ತೆರೆದೆ. ನಾನು ಮಾಡಿದ ತಪ್ಪು ತಿಳಿಯಿತು. ಹೊರಗೆ ಬಾರಿ ತುಂಬಿದ್ದ ನೀರು ಒಮ್ಮೆಲೆ ಒಳಗೆ ನುಗ್ಗಿತು, ಬಾಗಿಲಿಗೆ ರಸ್ತೆ ಕಾಣುತ್ತಿತ್ತು, ರಸ್ತೆಯಲ್ಲು ಅದೆ ಮಟ್ಟಕ್ಕೆ ನೀರು ತುಂಬಿತ್ತು. ಒಳಗೆ ಮಂಚದ ಮೇಲೆ ಮಲಗಿರುವ ಹೆಂಡತಿಯನ್ನು ಎಬ್ಬಿಸಬೇಕು ಮನೆಯೆಲ್ಲ ನೀರು ತುಂಬಿದೆ ಎಂದು , ಕೂಗಿಕೊಳ್ಳುತ್ತ ರೂಮಿನೊಳಗೆ ನೀರಿನಲ್ಲಿ ನಡೆಯುತ್ತ ಬಂದೆ, ಮಂಚದ ಬಳಿ ಬರುವಾಗಲೆ , ಇದ್ದಕ್ಕಿಂದಂತೆ ನೀರು ಒಳನುಗ್ಗಿತು, ನೀರು ಕುತ್ತಿಗೆವರೆಗೆ ನುಗ್ಗಿತು, ಮಂಚದ ಮೇಲೆಲ್ಲ ನೀರುತುಂಬಿದಂತೆ ಮಲಗಿದ್ದ ಹೆಂಡತಿ ಎದ್ದಳು 
"ಏನಾಯಿತು , ಎಲ್ಲಿಂದ ಬಂದಿತು ನೀರು" ಎಂದು ಅವಳು ಕೂಗುತ್ತಿರುವಾಗಲೆ, ನಾನು ಹೇಳಿದೆ
"ಮನೆಯಲ್ಲಿ ನೀರು ತುಂಬಿದೆ ಅನ್ನಿಸುತ್ತಿದೆ, ಕರೆಂಟ್ ಬೇರೆ ಇಲ್ಲ, ಮಂಚದ ಮೇಲೆ ಎದ್ದು ನಿಲ್ಲು" ಎಂದು ಹೇಳುತ್ತ, ನಾನು ಮಂಚ ಹತ್ತಿ ನಿಂತೆ, ಏನೆಂದು ಯೋಚಿಸುವದರಲ್ಲಿ ಹೊರಗಿನ ನೀರು ಒಳಗೆ ನುಗ್ಗುತ್ತಲೆ, ಒಳಗಿದ್ದ ನೀರಿನ ಎತ್ತರ ಹೆಚ್ಚುತ್ತಲೆ ಹೋಯಿತು, ನಮ್ಮಿಬ್ಬರ ಕುತ್ತಿಗೆವರೆಗು ನೀರು ತುಂಬುತ್ತಿದೆ, ಅನ್ನಿಸಿತು. ಸುತ್ತಲು ನೀರಿನಲ್ಲಿ ಹಾವೊ ಏನೇನೊ ಹರಿದಾಡಿದಂತೆ ಅನ್ನಿಸಿತು, ಗಾಭರಿ ಹೆಚ್ಚುತ್ತ ಇತ್ತು
ನೀರು ಕುತ್ತಿಗೆ ದಾಟಿ, ಮುಖವನ್ನು ಮುಚ್ಚುತ್ತಿರುವಂತೆ ಹೆದರಿಹೋದೆ, ಓಹೊ ಅಷ್ಟೆ ಕತೆ, ಬಹುಷಃ ಬೆಂಗಳೂರಿನಲ್ಲಿ ಕ್ಲೌಡ್ ಬರ್ಷ್ಟ್ ಆಯಿತು ಅನ್ನಿಸುತ್ತೆ, ಅದಕ್ಕೆ ಈ  ಪಟ್ಟಿಗೆ ಮಳೆ, ಇದು ಸದ್ಯಕ್ಕೆ ನಿಲ್ಲುವಂತಿಲ್ಲ, ನಮ್ಮ ಕತೆ ಅಷ್ಟೆ ಅಂದುಕೊಳ್ಳುತ್ತಿರುವಾಗಲೆ, ನೀರು ಹೆಚ್ಚುತ್ತ ಹೋಗಿ, ತಲೆಮುಳುಗುತ್ತಿರವಂತೆ ಅನ್ನಿಸಿತು, ನಾನು ಹಾಗು ಹೆಂಡತಿ ಇಬ್ಬರು ನೀರಿನಲ್ಲಿ ಮುಳುಗುತ್ತಿದ್ದೇವೆ, 

'ಅಯ್ಯೊ ನೀರು ನೀರು...... " ಅಂತ ಕೂಗುತ್ತಿದ್ದೆ
.
ಪಕ್ಕದಲ್ಲಿ ಹೆಂಡತಿ  ಎಬ್ಬಿಸುತ್ತಿದ್ದಳು

"ಏನಾಯ್ತು ರಿ, ಅದೇಕೆ ಕೂಗುತ್ತಿರುವಿರಿ" 

ನಿಧಾನ ಎಚ್ಚರವಾಯಿತು, ಹೆದರಿಕೆಯಿಂದ ಎದೆ ನಡುಗುತ್ತಿತ್ತು  


" ಅದೆ ಕಣೆ ಮಳೆ ಒಳಗೆಲ್ಲ ನೀರು ತುಂಬಿತ್ತು, ಬೆಂಗಳೂರಿನಲ್ಲಿ ಕ್ಲೌಡ್ ಬರ್ಷ್ಟ್ ಆಯಿತು ಅನ್ನಿಸುತ್ತೆ" ಎಂದೆ ನಡಗುತ್ತ

"ನಿಮಗೆಲ್ಲೊ ಕನಸು ಅನ್ನಿಸುತ್ತೆ, ಬೆಂಗಳೂರಿನಲ್ಲಿ ಮಳೆ ಇಲ್ಲ ನೀರಿಲ್ಲ ಅಂತ ಎಲ್ಲ ಕೊರಗ್ತ ಇದ್ದಾರೆ, ಕ್ಲೌಡ್ ಬರ್ಷ್ಟ್ ಎಲ್ಲಿ ಬರಬೇಕು, ರಾತ್ರಿ ಟೀವಿ ನೋಡಿ ಮಲಗಿದ್ದಿರಲ್ಲ ಅದೆ ಕನಸು ಅನ್ನಿಸುತೆ , ಮಲಗಿ " ಅಂದಳು ಹೆಂಡತಿ


 ಕತ್ತಲೆ ಒಳಗೆಲ್ಲ ತುಂಬಿ, ಸೆಕೆ ಜಾಸ್ತಿಯಾಗಿತ್ತು, ಆಗಿನ್ನು ಬಿದ್ದ ಕನಸಿಗೆ ಮೈ ನಡುಗುತ್ತಿತ್ತು. ಇದೇನಾಯಿತು ನನಗೆ, ಸಾಮಾನ್ಯ ಕನಸೆ ಬೀಳುವದಿಲ್ಲ, ಇವತ್ತೇಕೆ ಹೀಗೆ ಅಂದುಕೊಂಡೆ. ಸೆಕೆ ಜಾಸ್ತಿ ಆಯಿತು. ನನ್ನನ್ನು ಸಮಾದಾನಪಡಿಸುವಂತೆ ಹೆಂಡತಿ ತನ್ನ ಕೈಯನ್ನು ನನ್ನ ಎದೆಯ ಮೇಲೆ ಇಟ್ಟಿದ್ದಳು. 

"ಏಕೊ ಸೆಕೆ ಅನ್ನಿಸುತ್ತೆ ಎದ್ದು ಸ್ವಲ್ಪ ಫ್ಯಾನ್ ಹಾಕ್ತೀಯ " ಎಂದೆ

ಸರಿ ಎನ್ನುತ್ತ ಎದ್ದು ಪ್ಯಾನ್ ಹಾಕಿದಳು, ಫ್ಯಾನ್ ಬಳಿ ಕತ್ತಲಲ್ಲಿ ನಿಂತೆ ಕೇಳಿದಳು

"ಫ್ಯಾನ್ ಇಷ್ಟೆ ಸಾಕ ಸ್ವಲ್ಪ ಜಾಸ್ತಿ ಮಾಡಲ?" ಎಂದು

"ಸಾಕು ಬಿಡು ಅಷ್ಟೆ ಇರಲಿ, ಬಂದು ಮಲಗಿಬಿಡು" ಎಂದವನಿಗೆ, ಮತ್ತೆ ಶಾಕ್ ಆಯಿತು, 

ಹೆಂಡತಿ ಎದ್ದು ಫ್ಯಾನ್ ಹಾಕುತ್ತಿದ್ದಾಳೆ ಸರಿ, ಆದರೆ ನನ್ನ ಎದೆಯ ಮೇಲೆ ಇರುವ ಅವಳ ಕೈ !!!!!!

ಹೇಗೆ ಸಾದ್ಯ?  ಅವಳು ಫ್ಯಾನ್ ಸ್ವಿಚ್  ಬಳಿ ಇದ್ದರೆ, ಅವಳ ಕೈ ನನ್ನ ಎದೆಯ ಮೇಲೆ ಇರಲು ಹೇಗೆ ಸಾದ್ಯ? 

ಕಿರುಚಲು ಹೋದೆ, ದ್ವನಿ ಈಚೆಯೆ ಬರಲಿಲ್ಲ, ನಡುಗತ್ತಲೆ ಕೇಳಿದೆ

"ನೀನು ಅಲ್ಲಿದ್ದೇಯೆ ಆದರೆ ನಿನ್ನ ಕೈ ನನ್ನ ಎದೆಯ ಮೇಲೆ ಹೇಗಿದೆ" 

ನಿಧಾನವಾಗಿ ಅವಳ ನಗು ರೂಮಿನಲ್ಲೆಲ್ಲ ತುಂಬಿತು, ಮಂಚದ ಮೇಲೆ ಪಕ್ಕದಲ್ಲಿ ಸಹ ನಗು

ಅಯ್ಯಯ್ಯೊ ಇದೇನಿದು, ನಾನು ಎಲ್ಲಿದ್ದೀನಿ, ಯಾವುದು ಈ ಪಿಶಾಚಿಗಳು, ರೂಮಿನಲ್ಲಿ ಯಾರು ಯಾರೊ ಇರುವಂತಿದೆ, 

ಎದೆಯ ಮೇಲಿದ್ದ ಕೈ ಅನ್ನು ಕಿತ್ತು ಹಾಕಲು ಹೋದೆ, ಆದರೆ ಆ ಕೈ ಬಲವಾಗಿತ್ತು, 

ಆ ಕೈಗೆ ದೇಹವೆ ಇದ್ದಂತೆ ಕಾಣಲಿಲ್ಲ, ಪಕ್ಕದಲ್ಲೆಲ್ಲ ಕೈಆಡಿಸಿದೆ , ದೇಹವಿಲ್ಲದ ಬರಿ ಕೈ ನನ್ನ ಕುತ್ತಿಗೆಯನ್ನು ಸುತ್ತಿಕೊಳ್ಳುತ್ತಿತ್ತು, ಉಸಿರಾಡಲು ಕಷ್ಟವಾಗತೊಡಗಿತು,  ಕಿರುಚಲು ಹೋದೆ, ದ್ವನಿ ಈಚೆ ಬರುತ್ತಿಲ್ಲ 
ಆಯಿತು ನನ್ನ ಆಯಸ್ಸು ಇಂದಿಗೆ ಮುಗಿಯಿತು, 
ಒದ್ದಾಡುತ್ತಿರುವಂತೆ ನಿಧಾನವಾಗಿ ಮತ್ತೆ ನನ್ನ ಹೆಂಡತಿ ದ್ವನಿ ಕಿವಿಗೆ ಬಿದ್ದಿತ್ತು

"ಏನ್ರಿ ಆಗಲೆ ಬೆಳಗ್ಗೆ ಆರಾಗುತ್ತ ಬಂದಿತು, ಇವತ್ತು ವಾಕಿಂಗ್ ಹೋಗಲ್ವ ಇನ್ನು ಮಲಗೆ ಇದ್ದೀರಿ "

ದ್ವನಿಗೆ  ಕಣ್ಣು ತೆರೆದೆ, 
 "ಛೆ  ಇದೆಂತ ಕನಸುಗಳಪ್ಪ,  ಹೀಗೆ ಕಾಡುತ್ತಿರುವದಲ್ಲ " ಅಂದುಕೊಳ್ಳುತ್ತಿರುವಂತೆ ನೆನೆಪಿಗೆ ಬಂದಿತು.

 ಹೌದಲ್ಲ,  ನಾಳೆ ಬಾನುವಾರ ಅಷಾಡದ ಪ್ರಾರಂಬದ ಅಮಾವಾಸ್ಯೆ ಅಲ್ಲವೆ. ಅಷಾಡ ಅಮಾವಾಸ್ಯೆ ಅಂದರೆ ಹೀಗೆ ದೆವ್ವ ಭೂತಗಳ ಕಾಟವಷ್ಟೆ. ನನಗೆ ಕನಸಿನಲ್ಲಿ ಬಂದು ಕಾಡುತ್ತಿದೆಯ ಅನ್ನಿಸಿ ನಗುಬಂದಿತು. 

ಸರಿ ಸಣ್ಣದಾದರು ಪರವಾಗಿಲ್ಲ ಬೆಳಗ್ಗೆ ಒಂದು  ಸುತ್ತು ವಾಕಿಂಗ್ ಹೋಗಿಬರೋಣ ಎಂದುಕೊಳ್ಳುತ್ತ ಎದ್ದೆ. 

ಚಿತ್ರಕೃಪೆ : NEW MOON DAY

2 comments:

enter your comments please