Monday, August 5, 2013

ಕತೆ : ಶಾಪ


[ ಭಾಗ - ೧]


ನನಗೆ ಆ ಮನೆಗೆ ಬರುವ ಅಗತ್ಯವೇನಿರಲಿಲ್ಲ. ಊರಹೊರಗಿನ ದುರ್ಗಾ ದೇವಾಲಯದಲ್ಲಿ ಕುಳಿತಿದ್ದ ನನ್ನನ್ನು ಅವನಾಗಿಯೆ ಮಾತನಾಡಿಸಿದ. ಅವನ ಹೆಸರು ಶ್ರೀನಿವಾಸ
"ಎಲ್ಲಿಂದ ಬರುತ್ತಿದ್ದೀರಿ?" ಅವನು ನನ್ನನ್ನು ಕುತೂಹಲದಿಂದ ಪ್ರಶ್ನಿಸಿದ.
ಪ್ರಶ್ನೆ ಸರಿಯಾಗಿಯೆ ಇತ್ತು, ಹಾಗಾಗಿ ಉತ್ತರಿಸಿದೆ
"ಉತ್ತರದ ಹರಿದ್ವಾರದಿಂದ ಹೊರಟವನು ಹಾಗೆಯೆ ಸುತ್ತುತ್ತ ಬಂದೆ, ಈಗ ನಿಮ್ಮ ಊರಿಗೆ ಬಂದಿರುವೆ"
ಮತ್ತೆ ಕುತೂಹಲದಿಂದ ಪ್ರಶ್ನಿಸಿದ
"ರಾತ್ರಿ ಉಳಿಯುವ ಏರ್ಪಾಡು ಹೇಗೆ, ಎಲ್ಲಿ ಇಳಿದುಕೊಳ್ಳುವಿರಿ"
ನನಗೆ ಆ ರೀತಿಯ ಪ್ರಶ್ನೆಗಳು ಕಾಡುತ್ತಲೆ ಇರಲಿಲ್ಲ. ಇರುವೆನು ಎನ್ನುವಾಗ ರಾತ್ರಿಯೇನು , ಹಗಲೇನು, ಮುಂದಿನ ಊರಿಗೆ ಹೊರಡುವವರೆಗು ಅಲ್ಲಿ ಇರುವುದು, ಎಲ್ಲಿ  ಅಂತೇನು ಇಲ್ಲ , ಹಾಗಾಗಿ ಉತ್ತರಿಸಿದೆ
"ಏರ್ಪಾಡು ಅಂತೇನು ಇಲ್ಲ, ಇಲ್ಲಿಯೆ ದುರ್ಗಾದೇವಿಯ ಎದುರಿಗೆ ಮಲಗಿಬಿಡುವುದು, ಎಚ್ಚರವಾದಾಗ ಇಲ್ಲಿಂದ ಹೊರಡುವುದು" ಎಂದೆ ನಗುತ್ತ
ಅದಕ್ಕವನು ಅನುಮಾನದಿಂದ ಪ್ರಶ್ನಿಸಿದ
"ನಿಮ್ಮ ಅಭ್ಯಂತರವಿಲ್ಲದಿದ್ದರೆ, ನಮ್ಮ ಮನೆಯಲ್ಲಿ ಇಂದು ರಾತ್ರಿ ಬಂದು ಇರಬಹುದಲ್ಲ? ಹಾಗೆ ಇಂದಿನ ರಾತ್ರಿಯ ತಮ್ಮ ಭೋಜನವು ನಮ್ಮ ಮನೆಯಲ್ಲಿ ನಡೆದರೆ ಸಂತೋಷ"  
ನನ್ನ ಉತ್ತರ,
"ನನಗೆ ಯಾವ ಅಭ್ಯಂತರ, ನನಗೆ ಎಲ್ಲಿದ್ದರು ನಡೆಯುತ್ತದೆ, ಎಲ್ಲವು ದುರ್ಗಿಯ ಅವಾಸಸ್ಥಾನವೆ ನನಗೆ, ಗುಡಿಯಾದರು ಒಂದೆ, ನಿಮ್ಮ ಮನೆಯಾದರು ಒಂದೆ"
"ಹಾಗಿದ್ದರೆ ನನ್ನ ಜೊತೆ ಬನ್ನಿ" ಎನ್ನುತ್ತ ಅವನು ಹೊರಟ

ದುರ್ಗಿಯ ಕಡೆಗೊಮ್ಮೆ ಕೈಮುಗಿದು ಅವನ ಜೊತೆ ಹೊರಟೆ. ದೇವಾಲಯದ ಹೊರಗೆ ಬಂದರೆ ಅವನು ಕಾರಿನತ್ತ ನಡೆದ, ನನಗೆ ಆಶ್ಚರ್ಯವೆನಿಸಿತು, ನಾನು ನಡೆಯಲು ಸಿದ್ದನಾಗಿ ಹೊರಟವನು, ಅವನ ಬಳಿ ಕಾರು ಇರಬಹುದೆಂದು ಯೋಚಿಸಲಿಲ್ಲ, ಇರಲಿ , ಈ ದಿನ ದುರ್ಗಿ ಕಾರಿನ ರಥವನ್ನೇರಿಸುತ್ತಿದ್ದಾಳೆ ಈ ದೇಹವನ್ನು  ಅಂದುಕೊಳ್ಳುತ್ತ , ಅವನ ಜೊತೆ ಕಾರು ಏರಿದೆ.


ಊರಿನ ಪ್ರಮುಖ ಬಾಗದಲ್ಲಿಯೆ ಇತ್ತು ಅವನ ಮನೆ. ಸುತ್ತಲು, ವೈಭವ ಸೂಚಿಸುವ ಮನೆಗಳು, ಆದರೆ ಇವನ ಮನೆ ಮಾತ್ರ ಸರಳವಾಗಿಯೆ ಇತ್ತು. ಅಂತಹ ವೈಭವ ಏನು ಕಾಣಲಿಲ್ಲ. ಮನೆಯಲ್ಲಿ ಅವನ ಹೆಂಡತಿ, ಹಾಗು ತಾಯಿ ಇದ್ದರು. ನನ್ನನ್ನು ಅವರಿಗೆ ಪರಿಚಯ ಮಾಡಿಸಿದ.
ಇಬ್ಬರ ಮುಖದಲ್ಲಿ ಸಂತಸವೆ ಕಂಡಿತು


"ಸ್ವಾಮಿ, ನಾನು ಅಂಗಡಿಯ ಹತ್ತಿರ ಸ್ವಲ್ಪ ಹೋಗಿ ಬರಬೇಕು, ಬಾಗಿಲು ಹಾಕಿಸಿ ಬರುವಾಗ ಒಂದು ತಾಸು ಆಗಬಹುದು, ನೀವು ವಿಶ್ರಾಂತಿ ಪಡೆಯುತ್ತಿರಿ. ನಾನು ಬರುವೆನು, ನಂತರ ಒಟ್ಟಿಗೆ ಊಟ ಮಾಡಬಹುದು, ನಿಮಗೆ ಹಸಿದಿದ್ದರೆ, ನನ್ನನ್ನು ಕಾಯಲು ಹೋಗಬೇಡಿ, ನಿಮ್ಮನ್ನು ಬಿಟ್ಟು ಹೋಗುತ್ತಿರುವದಕ್ಕೆ ಕ್ಷಮಿಸಿ" ಎಂದ.

ನಾನು, ನಗುತ್ತಲೆ "ಇಲ್ಲ ನನಗೆ ಊಟದ ಆತುರವೇನು ಇಲ್ಲ. ನೀವು ನಿಮ್ಮ ಕೆಲಸವನ್ನೆಲ್ಲ ಮುಗಿಸಿ ಬನ್ನಿ ನಾನು ವಿರಾಮವಾಗಿ ಕಾಯುತ್ತಿರುವೆ, ನನ್ನಿಂದ ನಿಮ್ಮ ಕೆಲಸಗಳಿಗೆ ತೊಂದರೆಯಾಗಬಾರದು ಅಷ್ಟೆ" ಎಂದೆ.
ಅವನು ಅಲ್ಲಿಂದ ಹೊರಟು ಹೋದ.
ಆತನ ಪತ್ನಿ ಹೆಸರು ಲಕ್ಷ್ಮೀ ಎಂದು, ಆಕೆ ಹೇಳಿದಳು
"ಸ್ವಾಮಿ, ಕಾಲು ತೊಳೆಯುವದಿದ್ದರೆ, ಹಿಂದೆ ಜಾಗವಿದೆ, ಕುಡಿಯಲು ಏನು ಕೊಡಲಿ, ತಣ್ಣಗಿನ ಏನಾದರು ಕೊಡಲ, ಅಥವ ಕಾಫಿ   ಕುಡಿಯುತ್ತೀರ"
ಆಕೆಯ ಸೌಜನ್ಯ ನನಗೆ ಸಂತಸವೆನಿಸಿತು.
"ನೀವು ಏನು ತಂದರು ತೊಂದರೆಯಿಲ್ಲ ತಾಯಿ,  ಕುಡಿಯುವೆ" ಎಂದೆ.
ಆಕೆ ಒಳಗೆ ಹೋದಂತೆ, ಶ್ರೀನಿವಾಸನ ತಾಯಿ, ಹೆಸರು ಬಾಗ್ಯಮ್ಮ ಎಂದು ತಿಳಿಸಿದರು, ಆಕೆ ಪ್ರಶ್ನಿಸಿದರು
"ತಾವು ಎಲ್ಲಿಂದ ಬರುತ್ತಿರುವಿರಿ , ನನ್ನ ಮಗ ಹೇಗೆ ಪರಿಚಯವಾದ? , ಯಾವ ಊರಿನವರು, ಹೆಸರು ಕೇಳಿದರೆ ಬೇಸರವೇನಿಲ್ಲ ತಾನೆ"
"ಇಲ್ಲ ಬೇಸರವೇಕೆ, ನನ್ನ ಹೆಸರು ಯಾರಾದರು ಕೇಳಿಯೆ ಎಷ್ಟೊ ವರ್ಷವಾಯಿತು, ಲಕ್ಷ್ಮಣನೆಂದು ಕರೆಯುತ್ತಿದ್ದರು ನನ್ನನ್ನು ಎಲ್ಲರು.  ಉತ್ತರ ಭಾರತವನ್ನು ಸೇರಿ, ಹರಿದ್ವಾರದಲ್ಲಿ ನೆಲಸಿದ ಮೇಲೆ , ಸಾದು ಮಹಾರಾಜ್ ಎಂದೆ ಸಂಭೋದಿಸಿದರು, ಅದು ಅವರ ಆಚಾರ. ಇಲ್ಲಿ ಸ್ವಾಮಿ ಎನ್ನುವರು, ನೀವು ಏನು ಕರೆದರು ಸಂತಸವೆ, ಮತ್ತೆ ನಿಮ್ಮ ಮಗನ ಪರಿಚಯವೇನಿಲ್ಲ, ದುರ್ಗಾದೇವಾಲಯದ ಮುಂದೆ ಕುಳಿತ್ತಿದ್ದ ನನ್ನನ್ನು ಮನೆಗೆ ಕರೆತಂದರು, ಸಾದುಗಳೆಂದರೆ ಸಮಾಜ ಹೆದರುವ ಕಾಲದಲ್ಲು ನಿಮ್ಮ ಮಗನ ಮನಸ್ಸು ನೋಡುವಾಗ ಸಂತಸವೆನಿಸುತ್ತದೆ" ಎಂದೆ . 
ತಣ್ಣನೆಯ ನಿಂಬೆಯ ಶರಬತ್ ತಂದುಕೊಟ್ಟ , ಶ್ರೀನಿವಾಸನ ಮಡದಿ , ರಾತ್ರಿಯ ಅಡುಗೆಗಾಗಿ ಅಡುಗೆ ಮನೆಯತ್ತ ತೆರಳಿದರು.
"ನನ್ನ ಮಗನ ಸ್ವಭಾವವೆ ಹಾಗೆ, ಚಿಕ್ಕವಯಸಿನಿಂದಲು ಅದೇನೊ ಸಾದು ಸಂತರು, ದೇವರೆಂದರೆ ಅವನಿಗೆ ಅದೇನೊ ಭಕ್ತಿ.  ಈಗಲು ಅಷ್ಟೆ ಇಷ್ಟು ಐಶ್ವರ್ಯದ ನಡುವೆಯು ಕೆಸರಿನಮೇಲಿನ ಕಮಲ ಅನ್ನುವರಲ್ಲ ಆ ರೀತಿ ಬದುಕುತ್ತಿದ್ದಾನೆ. ಯಾವ ಭೋಗದಲ್ಲಿ ಆಸಕ್ತಿ ಇಲ್ಲ, ಲೋಕವಿರುದ್ದ ಸ್ವಭಾವ" ಬಾಗ್ಯಮ್ಮ ಮಾತನಾಡುವಾಗ ಅವರ ಮುಖದಲ್ಲಿ ಎಂತದೋ ಭಾವ.
"ಅಂಗಡಿಗೆ ಎಂದು ಹೋದರು, ಅಲ್ಲಿ ಕೆಲಸ ಮಾಡುತ್ತಿರುವರೆ ? ಯಾವ ಅಂಗಡಿ" ಎಂದೆ ಸುಮ್ಮನೆ ಲೋಕಾರೂಡಿ.

"ಕೆಲಸವೆ, ಅವನಿಗೆ ಕೆಲಸವೇಕೆ, ಸ್ವಾಮಿ, ಅವನೆ ನೂರಾರು ಜನರಿಗೆ ಅನ್ನ ಕೊಡುವ ದಣಿ, ಬೇಕು ಅಂದರೆ ಅರ್ಧ ಊರನ್ನು ಕೊಳ್ಳಬಲ್ಲ ಧನ ಶಕ್ತಿ ಇದೆ, ಆದರೆ ಅದೇಕೊ ಯಾವುದರಲ್ಲಿಯು  ಆಸಕ್ತಿ ಇಲ್ಲದವನು" ಎಂದರು ಆಕೆ .
ನನಗೆ ಕೊಂಚ ಆಶ್ಚರ್ಯವೆನಿಸಿತು. ಕೆಲವರ ಹುಟ್ಟು ಸ್ವಭಾವವೆ ಹಾಗೆ ಯಾವುದರಲ್ಲಿ ಬೆರೆಯುವದಿಲ್ಲ, ಏನು ಬೇಕಿಲ್ಲದ ನಿರ್ಲಿಪ್ತ ಸ್ವಭಾವ ಹುಟ್ಟಿನಿಂದಲೆ ಬಂದಿರುತ್ತದೆ ಅನ್ನಿಸಿತು. ಆಕೆ ಮತ್ತೆ ಹೇಳಿದಳು
"ಊರಿನ ಆಭರಣದ ಅಂಗಡಿ, ಅಲ್ಲದೆ, ಜವಳಿ ಮಳಿಗೆಗಳು ಇವೆ, ಕೆಲವು ಕಟ್ಟಡಗಳನ್ನು ಬಾಡಿಗೆಗೆ ಕೊಟ್ಟಿದೆ. ನ್ಯಾಯಮಾರ್ಗದಲ್ಲಿಯೆ ದುಡಿಯುತ್ತಿದ್ದರು, ಅಪಾರ ಹಣ ಹರಿದು ಬರುತ್ತಿದೆ. ಆದರೆ ಅವನು ಮಾತ್ರ ಯಾವುದನ್ನು ಅನುಭವಿಸುವದಿಲ್ಲ. ನನಗೆ ಏನು ಬೇಡ ಅನ್ನುತ್ತಾನೆ. ಅದನ್ನು ನೀವು ಒಂದು ಯೋಚನೆ ಎಂದು ಕರೆಯುವದಾದರೆ , ನಮ್ಮ ಮೊಮ್ಮಗನಿದ್ದಾನೆ ಲಕ್ಷ್ಮೀಶ ಎಂದು ಹೆಸರು, ಅಪ್ಪನಿಗೆ ಪೂರ್ತಿ ವಿರುದ್ದ ಸ್ವಭಾವ. ಸುಖಲೋಲುಪತೆಯಲ್ಲಿ ಆಸಕ್ತಿ, ಕೆಲಸದಲ್ಲಿ ಶ್ರದ್ದೆಯಿರದಿದ್ದರು, ಖರ್ಚುಮಾಡುವದರಲ್ಲಿ ಮಾತ್ರ ಯಾವ ಹಿಡಿತವು ಇಲ್ಲ. ಹಾಗೆ ದೈವವೆಂದರೆ ನಂಭಿಕೆಯು ಇಲ್ಲ, ದರ್ಮ ಸಂಸ್ಕೃತಿ ಎಂದರೆ ಅವನಿಗೆ ಆಡಿಕೊಳ್ಳುವ ವಿಷಯ , ಅವನದು ಇನ್ನೊಂದು ಯೋಚನೆಯಾಗಿದೆ, ಇಬ್ಬರ ಮನಸುಗಳು ಎಂದಿಗು ಜೊತೆ ಸೇರದೇನೊ ಎನ್ನುವ ಚಿಂತೆ ನನಗೆ, ನನ್ನ ಸೊಸೆಗೆ"

ಆಕೆಯ ಮಾತು ಕೇಳಿ ಮೌನವಾದೆ. ಪ್ರಪಂಚದಲ್ಲಿ ಎಲ್ಲಿ ಹೋದರು ಇದೆ ಘರ್ಷಣೆಯೆ ಅನ್ನಿಸಿತು. ನನ್ನ ಮೌನ ನೋಡುತ್ತ ಆಕೆಯು ಮೌನವಾಗಿ ಕುಳಿತರು.

ಸ್ವಲ್ಪ ಕಾಲವಾಯಿತೇನೊ, ಹೊರಗಿನಿಂದ ಹದಿನೆಂಟರ ಹುಡುಗನೊಬ್ಬ ಒಳಬಂದ ನೋಡುವಾಗಲೆ ಅನ್ನಿಸಿತು, ಇವನೆ ಲಕ್ಷ್ಮೀಶ ಶ್ರೀನಿವಾಸನ ಮಗ ಎಂದು. ಅವನು ವರಾಂಡದಲ್ಲಿ ಕುಳಿತಿದ್ದ ಅವರ ಅಜ್ಜಿಯತ್ತ ನಂತರ ನನ್ನತ್ತ ನೋಡಿದ. ಅವನ ಮುಖದಲ್ಲಿ ಒಂದು ಅಲಕ್ಷದ ಅವಹೇಳನದ ನಗೆಯೊಂದು ಹಾದು ಹೋಯಿತು.

ಅವನ ಅಜ್ಜಿ ಕೂಗಿದರು
"ಮಗು ಲಕ್ಷ್ಮೀಶ ಇಲ್ಲಿ ಬಾಪ್ಪ, ನೋಡು ಬಾ ನಿಮ್ಮ ತಂದೆ ಇಂದು ವಿಶೇಷ ಅತಿಥಿಯೊಬ್ಬರನ್ನು ಕರೆತಂದಿದ್ದಾರೆ, ಅವರ ಅಶೀರ್ವಾದ ಪಡಿ"
ಅವನು ನಿಧಾನವಾಗಿ ನಡೆಯುತ್ತ ಇತ್ತ ಬಂದ, ನನ್ನನ್ನು ನೋಡಿ ,
ಅವರ ಅಜ್ಜಿಗೆ ಹೇಳಿದ
"ಗೊತ್ತಾಯಿತು  ಬಿಡಜ್ಜಿ, ದುರ್ಗಾಗುಡಿಯ ಮುಂದೆ ಕುಳಿತ್ತಿದ್ದವರು, ಸಾದು ಇರಬೇಕಲ್ಲವೆ, ಇವರ ಬಟ್ಟೆ ನೋಡಿದಾಗಲೆ ತಿಳಿಯುತ್ತಿದೆಯಲ್ಲ" .
ಅವನ ಮುಖದಲ್ಲಿ ಕುಹಕದ ನಗು.
"ಅಂದರೆ ನಿಮ್ಮ ಅಪ್ಪ ಶ್ರೀನಿವಾಸ ನಿನಗೆ ಸಿಕ್ಕಿದ್ದನ, ಹೇಳಿದನ, ದುರ್ಗಾಗುಡಿಗೆ ಹೋಗಿದ್ದು" ಆಕೆ ಕೇಳಿದಳು.
"ಅಪ್ಪ ಸಿಕ್ಕಲಿಲ್ಲ ಅಜ್ಜಿ ಆದರೆ ಇದೇನು ಮೊದಲಲ್ಲವಲ್ಲ, ಶುಕ್ರವಾರ ಬಂತು ಅಂದರೆ ಅಪ್ಪಾಜಿ ಅಲ್ಲಿಗೆ ಹೋಗುವರು ಎನ್ನುವುದು ತಿಳಿದಿದೆ, ಅಲ್ಲಿ ಯಾರಾದರು ಸಿಕ್ಕರೆ ಸಾಕು ಕಾಲಿಗೆ ಬಿದ್ದು ಕರೆತರುವರು,..... ಮನೆಯನ್ನು ಮಠ ಮಾಡಲು ಹೊರಟಿರುವರು" ಎಂದ ಅಸಮಾದಾನದಿಂದ.

"ಏಕಪ್ಪ ಹೀಗೆ ಆಡುವೆ, ದೊಡ್ಡವರಿಗೆ ಬೇಸರವಾಗುವ ಹಾಗೆ ಮಾತನಾಡುವುದು ಸರಿಯ, ನಿನ್ನ ಮಾತಿನಿಂದ ಸ್ವಾಮಿಗಳಿಗೆ ಬೇಸರವಾಗುವದಿಲ್ಲವೆ?" ಆಕೆ ನೊಂದು ನುಡಿದರು.

ನನಗೆ ಏಕೊ ಈ ರೀತಿಯ ಯುವಕರನ್ನು ಕಾಣುವಾಗ ಬೇಸರ ಎನಿಸುವದಿಲ್ಲ,  ಮನುಷ್ಯನ ಎಲ್ಲ ಮುಖಗಳು ಅನಾವರಣಗೊಳ್ಳುತ್ತಿದ್ದರೆ, ಅದನ್ನು ಅರಿಯುತ್ತ ಹೋಗುವದರಲ್ಲಿ ಎಂತದೋ ಆಸಕ್ತಿ.  
ನಾನು ಆ ಯುವಕನನ್ನು ಪ್ರಶ್ನಿಸಿದೆ.

"ಹಾಗೇಕೆ ಭಾವಿಸುವೆ ಮಗು, ನಿಮ್ಮ ತಂದೆಯವರ ಕರೆಯ ಮೇರೆಗೆ ನಾನು ಇಲ್ಲಿಗೆ ಬಂದಿರುವೆ ಅಷ್ಟೆ, ಮನೆ ಏಕೆ ಮಠವಾಗಬೇಕು, ಮಠದಲ್ಲಿರುವ ಸಾದುವಿಗೆ ಒಂದು ದಿನ ಮನೆಯ ಅತಿಥ್ಯ ಅಷ್ಟೆ, ಮನೆ ಎಂದಿಗೂ ಮನೆಯೆ ಅಲ್ಲವೆ?"

ಅವನು ನನ್ನನ್ನು  ಅಸಮಾದಾನದಿಂದ ದಿಟ್ಟಿಸಿದ

"ಇರಬಹುದು, ಆದರು ಮಠದಲ್ಲಿರುವರು ಮನೆಗಳಿಗೆ ಬರುವ ಅಗತ್ಯ ವೇನಿದೆ, ಮನೆ ಬೇಡವೆಂದಲ್ಲವೆ ಎಲ್ಲವನ್ನು ತೊರೆದು ಮಠ ಸೇರುವುದು, ಮತ್ತೆ ಮನೆಯ ಬಗ್ಗೆ ವ್ಯಾಮೋಹ ಏತಕ್ಕೆ" ಎಂದ.
ನಾನು ಜೋರಾಗಿ ನಕ್ಕುಬಿಟ್ಟೆ 
"ಆಯಿತಪ್ಪ, ಹೀಗೆ , ಮನೆಯಲ್ಲಿರುವರು ಮನೆ ಬೇಸರ ಎಂದು   ಮಠಕ್ಕೆ ಬರುವದಿಲ್ಲವೆ, ಹಾಗೆ ನಾವು ಮಠದಲ್ಲಿರುವರು ಮಠ ಬೇಸರ ಎಂದು ಒಂದು ಸ್ವಲ್ಪ ಕಾಲ ಮನೆಗೆ ಬರುವೆವು ಎಂದಿಟ್ಟಿಕೊ. ಅಷ್ಟಕ್ಕು ನಾನು ಮನೆಗೆ ಸೇರಿದವನಲ್ಲ ಮಠಕ್ಕು ಸೇರಿದವನಲ್ಲ, ಕೇವಲ ಪ್ರಪಂಚಕ್ಕೆ ಸೇರಿದವನು. ಅಷ್ಟಕ್ಕು ನಿನಗೆ ಮಠ, ಸನ್ಯಾಸಿ ಎಂದರೆ ಏತಕ್ಕೆ ದ್ವೇಷ" ಎಂದೆ.
ಅವರ ಅಜ್ಜಿ ಗಾಭರಿಯಾಗಿದ್ದಳು.
"ಲಕ್ಷ್ಮೀಶ ನೀನು ಏನೊ ಮಾತನಾಡುತ್ತಿ, ಅದು ಇನ್ನೆಲ್ಲಿಗೊ ಹೋಗುತ್ತೆ, ನೀನು ಎದ್ದು ಒಳಗೆ ಹೋಗು, ಕಾಲು ತೊಳೆದು ಊಟಮಾಡುಹೋಗು" ಎಂದಳು.
ನಾನು ನಗುತ್ತ,
"ಇರಲ್ಲಿ ಬಿಡಿ ಅಮ್ಮ,  ಅವನು ಮನಸಿನಲ್ಲಿರುವದನ್ನು ಮಾತನಾಡಿದ ತಪ್ಪೇನಿದೆ, ನನಗಾವ ಬೇಸರವು ಇಲ್ಲ , ಅವನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಪಡೋಣ" ಎಂದೆ .

ಲಕ್ಷ್ಮೀಶ ಸುಮ್ಮನೆ ಕುಳಿತಿದ್ದವನು ನುಡಿದ

"ನನಗೆ ದ್ವೇಶವೆ?  , ಚಿಕ್ಕವಯಸಿನಿಂದಲು ಅಷ್ಟೆ, ಅಪ್ಪ ಸದಾ ದೇವಾಲಯ, ಮಠ, ಎಂದು ಸುತ್ತುತ್ತಲೆ ಇರುತ್ತಾರೆ, ಊರಿನ ಉಳಿದ ವ್ಯಾಪಾರಸ್ಥರೆಲ್ಲ, ವ್ಯವಹಾರ ಬೆಳೆಸಲು , ಆಸ್ತಿ ಮಾಡಲು ನೋಡಿದರೆ ಇವರು, ಎಲ್ಲಿಗೆ ದಾನ ಕೊಟ್ಟೇನು, ಯಾವ ಸ್ವಾಮಿಯನ್ನು ಕರೆದೇನು ಅನ್ನುತ್ತಾರೆ. ಇವರಿಗೆ ಇರುವ ಹಣದಲ್ಲಿ ಹೇಗಿರಬಹುದು, ತಾತ ಕಟ್ಟಿದ ಈ ಮನೆಯಲ್ಲಿ ಗತಿ ಇಲ್ಲದವರಂತೆ ಇರುತ್ತಾರೆ, ಒಂದು ಹಳೆಯ ಸೆಕೆಂಡ್ ಹ್ಯಾಂಡ್ ಕಾರಿನ ಹೊರತು  ಓಡಾಡಲು ಏನು ಇಲ್ಲ, ಇರುವದನ್ನು ಅನುಭವಿಸಲು ಯೋಗ್ಯತೆ ಇಲ್ಲ, ಯಾವಾಗಲು ವೈರಾಗ್ಯದ ಮಾತುಗಳು ಉಪದೇಶಗಳು, ನನಗಂತು ತಲೆ ಕೆಡುತ್ತದೆ, ಹಾಳಾಗಲಿ ನನಗಾದರು ಕೇಳಿದ್ದು ಕೊಡಿಸುತ್ತಾರ, ಇಲ್ಲ, ಸಮಯಕ್ಕೆ ಕಾಯಬೇಕಂತೆ, ಕಾಯುವ ಹೊತ್ತಿಗೆ ನನ್ನ ಆಯಸ್ಸೆ ಮುಗಿದಿರುತ್ತದೆ ಅಷ್ಟೆ, ಸಾದು ಎಂದರೆ ಕಾಲಿಗೆ ಬಿದ್ದು ಹಣ ಸುರಿಯುವ ಇವರಿಗೆ, ಮಗ ಕೇಳಿದರೆ ಪ್ರತಿ ರುಪಾಯಿ ಸಹ ಲೆಕ್ಕ " ಎಂದ ಗಟ್ಟಿಯಾಗಿ
"ಅಯಸ್ಸು ಮುಗಿಯುವ ಮಾತು ಏಕಪ್ಪ ಸಂಜೆ ಸಮಯ, ನೀನು ಇನ್ನು ಚಿಕ್ಕ ಪುಟ್ಟವನು"  
ಅವನ ಅಜ್ಜಿ ಕಣ್ಣಲ್ಲಿ ನೀರು ತುಂಬಿದರು, ಅಡುಗೆ ಮನೆಯಲ್ಲಿದ್ದ , ಅವನ ಅಮ್ಮ ಹೊರಬಂದು, ಆತಂಕದಿಂದ ನಿಂತರು. 
ಆ ಹುಡುಗನ ಮನದಲ್ಲಿರುವ ಗೊಂದಲ ಅಸಮಾದಾನ ನನಗೆ ಅರ್ಥವಾಗಿತ್ತು.
"ನಿನ್ನ ದುಗುಡ ನನಗೆ ಅರ್ಥವಾಯಿತು, ಮಗು, ನಿಮ್ಮ ತಂದೆ ತಮ್ಮ ದುಡಿತವನ್ನು ಸುಖಕ್ಕೆ ಉಪಯೋಗಿಸದೆ ಬರಿ , ಈ ರೀತಿ ಸಾದುಗಳು ಮಠ,  ದೇವಾಲಯ ಎಂದು ಖರ್ಚು ಮಾಡುತ್ತಾರೆ ಎಂದಲ್ಲವೆ, ನಿನಗೆ ಬೇಸರ?"

ಅದಕ್ಕೆ ಲಕ್ಷ್ಮೀಶ
"ಅಲ್ಲದೆ ಮತ್ತೇನು, ತಮ್ಮ ದುಡಿತದಲ್ಲಿ ಒಂದು ಸಿನಿಮಾ ಬೇಡ, ಮನೋರಂಜನೆ ಬೇಡ, ಮನಸಿಗೆ ಸುಖಬೇಡ, ಅನ್ನುವದಾದರೆ ಏಕೆ ದುಡಿಯಬೇಕು,  ನಾನು ಒಂದು ಸಿನಿಮಾ ನೋಡಲು ಹೋದರೆ, ಕ್ರಿಕೇಟ್ ಮ್ಯಾಚಿಗೆ ಹೋದರೆ  ಖರ್ಚು ಅನ್ನುವ ಇವರು , ದಾನ ದರ್ಮ ಅಂತ ಖರ್ಚು ಮಾಡಬಹುದೊ" ಎಂದ

"ಸರಿಯಪ್ಪ, ನೀನು ಅನ್ನುವುದು ಸರಿಯೆ ಇದೆ, ನಾವು ದುಡಿದಮೇಲೆ, ನಮ್ಮ ಮನಸಿಗೆ ಸರಿ ಅನ್ನಿಸುವ ಹಾಗೆ ಖರ್ಚು ಮಾಡಬೇಕು ಅಲ್ಲವೆ, ನಿನಗೆ ಸಿನಿಮಾದಿಂದ, ಕ್ರಿಕೇಟಿನಿಂದ ಖುಷಿ ದೊರಕುವಂತೆ , ನಿಮ್ಮ ತಂದೆಗೆ ಮಠ, ಅಥವ ದೇವರಿಂದ, ಸಾದುಗಳ ಸಹವಾಸದಿಂದ ಸುಖ ದೊರಕುತ್ತಿದೆ ಎಂದು ಭಾವಿಸು, ನೀನು ಖರ್ಚು ಮಾಡುವ ರೀತಿಯಲ್ಲಿ, ಅವರು ಸಹ ತಮ್ಮ ಸುಖಕ್ಕೆ , ಮನಸಿನ ಸಂತಸಕ್ಕೆ  ಖರ್ಚು ಮಾಡುತ್ತಿರುವರು ಅಂದುಕೊ ಆಗದೆ ?" ಎಂದೆ ನಗುತ್ತ.


ಲಕ್ಷ್ಮೀಶ , ಸ್ವಲ್ಪ ತಡವರಿಸಿದ, ಅವನು ಈ ರೀತಿಯ ಉತ್ತರ ನಿರೀಕ್ಷಿಸಿರಲಿಲ್ಲ ಅನ್ನಿಸುತ್ತೆ, ಅಥವ ನಾನು ಕೋಪಗೊಳ್ಳುವೆ ಎಂದು ನಿರೀಕ್ಷಿಸಿದ್ದ ಅನ್ನಿಸುತ್ತೆ. ಅವರ ಅಮ್ಮ ಮಾತ್ರ ಗಡಿಬಿಡಿಯಿಂದ ಹೊರಬಂದರು
"ಸ್ವಾಮಿ ಕ್ಷಮಿಸಿ, ಅವನು ಸ್ವಲ್ಪ ಹುಡುಗಾಟಿಕೆ ಸ್ವಭಾವ, ಮನಸಿಗೆ ಅನ್ಯಥಾ ಭಾವಿಸಬೇಡಿ" ಎಂದು ಕೈಮುಗಿದು,
"ಲಕ್ಷ್ಮೀಶ ನೀನು ಎದ್ದು ಒಳ ನಡಿ, ನಿನಗೆ ದೊಡ್ಡವರ ಜೊತೆ ಹೇಗೆ ವರ್ತಿಸುವುದು ಅಂತ ತಿಳಿದಿಲ್ಲ" ಎಂದರು.


ನಾನು ಮತ್ತೆ ತಡೆದೆ, ನನಗೆ ಈ ಹುಡುಗನ ಮನದಲ್ಲಿ ಇನ್ನು ಏನೇನು ಭಾವ ಅಡಗಿರಬಹುದೆಂಬ ಕುತೂಹಲ
"ಇರಲಿ ಬಿಡಿ ಅಮ್ಮ, ನೀವು ಹೆದರದಿರಿ, ನಿಮ್ಮ ಮಗನ ಮಾತುಗಳು ಚಿಂತಿಸಲು ಯೋಗ್ಯವಾಗಿಯೆ ಇದೆಯಲ್ಲವೆ, ಅದಕ್ಕೆ ಉತ್ತರ ಕೊಡುವುದು ದೊಡ್ಡವರಾದ ನಮ್ಮ ಕರ್ತ್ಯವ್ಯ" ಎಂದೆ.
ಅದಕ್ಕವಳು
"ಇಲ್ಲ ಸ್ವಾಮಿ, ಅವನದು ಅತಿಯಾದ ಮಾತು, ವಿನಯವಿಲ್ಲ, ಮತ್ತೇನಾದರು ನುಡಿದರೆ ಅಂತ ನನಗೆ ಭಯ " ಎಂದಳು.
ನಾನು ನಗುತ್ತ
"ಇರಲಿ ಬಿಡಮ್ಮ ,ಅವನು ಏನು ನುಡಿದರು ಚಿಂತಿಸದಿರು, ಇಂದು ನಿನ್ನ ಕೈಯ ಅನ್ನದ ಋಣದಲ್ಲಿರುವೆ, ನಿನ್ನ ಮಗನನ್ನು ಶಪಿಸಲಾರೆ, ಬೇಸರವು ಪಡಲಾರೆ, ನೀನು ನೆಮ್ಮದಿಯಾಗಿರು" ಎಂದೆ.
ಮತ್ತೆ ಲಕ್ಷ್ಮೀಶನತ್ತ ತಿರುಗಿ,
"ಹೇಳು ಮಗು ನಾನು ಹೇಳಿದ್ದು ಸರಿ ಅಲ್ಲವೆ, ನಿಮ್ಮ ತಂದೆ ಅವರ ಸುಖಕ್ಕೆ  ಸಂತಸಕ್ಕೆ ಖರ್ಚು ಮಾಡುತ್ತಿಲ್ಲವೆ?" ಎಂದೆ.
"ಇರಬಹುದು, ನೀವು ಹೇಳುವದನ್ನು ಒಪ್ಪಿದರು, ಅವರ ಭಾವನೆಯನ್ನು ನಮ್ಮ ಮೇಲೆಲ್ಲ ಏಕೆ ಹೊರಸಬೇಕು, ಇರಲು ಒಳ್ಳೆಯ ಮನೆಬೇಡ, ವಾಹನ ಬೇಡ, ಬಟ್ಟೆ ಬೇಡ, ಯಾವ ಸುಖವು ಬೇಡ ಅನ್ನುವದಾದರೆ , ಇದೆಂತಹ ಜೀವನ. ನನ್ನ ಜೊತೆ ಇರುವವರು ಹೇಗಿರುವರು ಗೊತ್ತೆ, ನಾನು ಇವರೆದುರಿಗೆ ಪ್ರತಿ ರುಪಾಯಿಗು ನಿಂತು ಬೇಡಬೇಕು, ಮಾತು ತೆಗೆದರೆ ಬರಿ ಉಪದೇಶ, ಹೋಗಲಿ ಅವರಿಗೆ ಖರ್ಚು ಮಾಡುವರ ಅಂದರೆ ಯಾವುದರಲ್ಲು ಆಸೆಯೆ ಇಲ್ಲದವರು ಅವರು,ಅವರ ರಾಗಕ್ಕೆ ತಾಳ ಹಾಕುವ ಅಮ್ಮ "

ಅಪ್ಪ ಅಮ್ಮ ಸೇರಿ ಹುಡುಗನ ಮೇಲೆ ತಮ್ಮ ಭಾವನೆ ಅತಿಯಾಗಿ ಹೊರಸಿದ್ದಾರೆ ಅನ್ನಿಸಿತು

"ಸರಿ ಮಗು , ನಿಮ್ಮ ತಂದೆಯವರ ಸ್ವಭಾವವೆ ಅದಿರಬಹುದು, ನೀನು ಅವರಿಗೆ ಸ್ವಲ್ಪ ಹೊಂದಿಕೊಳ್ಳಬೇಕು, ಬಹುಷಃ ಆಸೆಯೆ ದುಃಖಕ್ಕೆ ಮೂಲ ಎನ್ನುವ ಬುದ್ದನ ಭೋದನೆಯನ್ನು ನಿಮ್ಮ ತಂದೆ ನಂಬಿ ಅನುಸರಿಸುತ್ತಿರಬಹುದು, ಹಾಗಾಗೆ ಅವರಿಗೆ ಯಾವುದೆ ಆಸೆ ಇಲ್ಲ ಅಂದುಕೊ ಆಗದೆ"
ನಾನು ಹುಡುಗನನ್ನು ಸ್ವಲ್ಪ ಕೆದಕಿದೆ, ಅವನ ಮುಖದಲ್ಲಿ ಕುಹಕದ ನಗುವೊಂದು ಕಾಣಿಸಿತು


"ಆಸೆಯೆ ದುಃಖಕ್ಕೆ ಮೂಲ, ಸರಿಯಾದ ಮಾತು ಹೇಳುತ್ತಿರುವಿರಿ, ಮಲಗುವನಿಗೆ ಹಾಸಿಗೆ ಹಾಸಿ ಕೊಟ್ಟಂತೆ,  ಆದರೆ ಅವರು ಇರುವುದು ವ್ಯಾಪಾರ ಕ್ಷೇತ್ರದಲ್ಲಿ ಸ್ವಾಮಿ, ಈಗ ಕಾಲ ಬದಲಾಗಿದೆ, ಬುದ್ದನ ಮಾತನ್ನು ನಾವು ಬೇರೆ ರೀತಿ ಹೇಳಬೇಕಾಗಿದೆ, ಸ್ವಲ ಹಣ ಸುಖ ಬರುವದಾದರೆ, ಆಸೆ ನೆರವೇರಬಹುದಾದರೆ, ದುಃಖ ತಾನೆ ಆಗಲಿ ಬಿಡಿ, ತಪ್ಪೇನು ?" ಎಂದ. 
ನಾನು ಬೆಚ್ಚಿ ಬಿದ್ದೆ, ಇದೇನು ಹೊಸ ವಾದ 
ಮತ್ತೆ ಕೇಳಿದೆ
"ಇದೇನು ನಿನ್ನ ಹೊಸ ರೀತಿಯ ಮಾತು, ದುಃಖ ಆಗಲಿ ಬಿಡಿ ಅನ್ನುತ್ತಿರುವೆಯಲ್ಲ, ಮತ್ತೆ ವಿವರಿಸು" ಎಂದೆ.
ಅವನಲ್ಲಿ ಎಂತದೊ ಹುರುಪು,
"ಇನ್ನೇನು? , ವ್ಯಾಪಾರದಲ್ಲಿರುವರು ಚಿಂತಿಸಬೇಕಾದ ರೀತೆಯೆ ಬೇರೆ, ಯಾವಾಗಲೊ, ಯಾರಿಗೊ ದುಃಖವಾಗುತ್ತೆ ಅಂತ ಕುಳಿತರೆ, ಆಸೆ ನೆರವೇರುವದಾದರು ಹೇಗೆ, ದುಃಖಕ್ಕೆ ಹೆದರಿ ಆಸೆಯನ್ನೆ ತೊರೆದ ಬುದ್ದ ಮಾತುಗಳು ಈಗ ರುಚಿಸವು, ಅಷ್ಟಕ್ಕು ಯಾರ ಆಸೆಯಿಂದ ಯಾರಿಗೆ ದುಃಖವಾಗುತ್ತೆ ಅನ್ನುವದನ್ನು ನೋಡಬೇಕಲ್ಲವೆ, ಈಗ ನೀವೆ ನೋಡಿ, ನಿಮ್ಮ ಆಸೆ ನೆರವೇರಬೇಕು ಅಂದರೆ ನನಗೆ ಸ್ವಲ್ಪ ದುಃಖವಾಗಬೇಕು ಅಲ್ಲವೆ, ಹಾಗಂತ ನಿಮ್ಮ ಆಸೆಯನ್ನು ಬಿಡುವಿರ?"


ನನಗೆ ಆಶ್ಚರ್ಯ, ಸುತ್ತಿ ಸುತ್ತಿ ನನಗೆ ತಂದನಲ್ಲ, ನನ್ನ ಯಾವ ಆಸೆ ಇವನ ದುಃಖಕ್ಕೆ ಮೂಲ ಅರ್ಥವಾಗದೆ ಕೇಳಿದೆ,

"ನಿನ್ನ ಮಾತು ನನಗೆ ಅರ್ಥವಾಗಲಿಲ್ಲ, ಲಕ್ಷ್ಮೀಶ , ನನ್ನ ಯಾವ ಆಸೆ ನಿನ್ನ ದುಃಖಕ್ಕೆ ಕಾರಣವಾಗಬಹುದು?"
ನಗುತ್ತ ನುಡಿದ
"ಅದು ಹಾಗೆ , ಈಗ ನೋಡಿ, ನಮ್ಮ ತಂದೆ ನಿಮ್ಮನ್ನು ಕರೆತಂದಿರುವರು, ನೀವಾಗೆ ಬರಲಿಲ್ಲ ಎಂದೆ ಭಾವಿಸಿರಿ, ಒಟ್ಟಿನಲ್ಲಿ ಅವರ ಕೋರಿಕೆಯ ಮೇಲೆ ಬಂದಿರಿ, ಈಗ ನಿಮ್ಮ ಮನದಲ್ಲಿ ಒಂದು ಉದ್ದೇಶವಿರುತ್ತೆ, ಹೇಗಾದರು ಸರಿ ಇವರ ಬಳಿ, ಸ್ವಲ್ಪ ಕಾಣಿಕೆಯ ರೂಪದಲ್ಲಿ ಹಣವನ್ನೊ ಏನಾದರು ಪಡೆದು ಹೋಗಬಹುದು ಎಂದು, ನಿಮ್ಮ  ಈ ಆಸೆ ನನ್ನ ದುಃಖಕ್ಕೆ ಕಾರಣವಲ್ಲವೆ, ಅಂದರೆ , ನಮ್ಮ ತಂದೆ ವ್ಯರ್ಥವಾಗಿ ಹಣ ವ್ಯಯ ಮಾಡುವರೆಂಬ ದುಃಖಕ್ಕೆ ಕಾರಣವಲ್ಲವೆ?"
ಅವನ ಮಾತಿಗೆ, ಅವನ ಅಜ್ಜಿ ಗಾಭರಿಯಾದಳು, ಅವರ ತಾಯಿ,
"ಲಕ್ಷ್ಮೀಶ ನಿನ್ನದು ಅತಿಯಾಯಿತು, ಒಳಗೆ ನಡಿ, ನಿಮ್ಮ ತಂದೆ ಬರಲಿ ಇರು ಹೇಳುವೆ " ಎಂದಳು

ನನ್ನ ಮನ ಶಾಂತವಾಗಿತ್ತು, ಹೇಳಿದೆ
"ಮಗು ಲಕ್ಷ್ಮೀಶ, ನಿನ್ನ ಮಾತು ನಿಜ, ಒಮ್ಮೆ ನಾನು ಆರೀತಿ ಹಣಕ್ಕೆ ಆಸೆ ಬಿದ್ದರೆ, ಅದು ನಿನ್ನ ದುಃಖಕ್ಕೆ ಕಾರಣವಾಗಬಹುದು, ಸತ್ಯವಾದ ಮಾತು. ಆದರೆ ನಾನಿಲ್ಲಿ ಯಾವುದೆ ಹಣದ ಅಥವ ಯಾವುದೆ ನಿರೀಕ್ಷೆಯಿಂದ ಬರಲಿಲ್ಲ, ನಿಮ್ಮ ತಂದೆಯವರು ರಾತ್ರಿ ಮನೆಯಲ್ಲಿದ್ದು ಊಟ ಸ್ವೀಕರಿಸಿ ಎಂದರು, ಅದೊಂದೆ ನಿರೀಕ್ಷೆ ಇರುವುದು, ಆದರೆ , ಅದು ತಪ್ಪಿದರು ನನಗಾವ ದುಃಖವು ಇಲ್ಲ, ನಾನು ಊಟವಿಲ್ಲದ ರಾತ್ರಿಗಳನ್ನು ಬಹಳ ಕಳೆದಿರುವೆ,  ಭೂಮಿ ಆಕಾಶಗಳೆ ಮನೆ ಎಂದು ಕಳೆದ ಅನುಭವ ಸಾಕಷ್ಟಿದೆ, ಆದರೆ ಈಗ , ನಾನು ನಿಮ್ಮ ತಂದೆಯವರ ಬಳಿ ನಾನು ಹಣಪಡೆಯಬಹುದು, ಎನ್ನುವ ನಿನ್ನ ನಿರೀಕ್ಷೆಯ ಭಾವ ನಿನ್ನಲ್ಲಿ ದುಃಖ ಉಂಟುಮಾಡುತ್ತಿದೆ, ಅದು ಕಲ್ಪಿತ ಭಾವ, ನೋಡು ಕಲ್ಪಿತ ಒಂದು ಭಾವವೆ ನಿನ್ನಲ್ಲಿ ಎಂತ ದುಃಖ ತರುತ್ತಿದೆ, ಅದೆ ವ್ಯಾಮೋಹ, ಹಣದ ಬಗ್ಗೆ ನಿನಗಿರುವ ವ್ಯಾಮೋಹದ ಕಾರಣದಿಂದ , ನಿನಗೆ ಆಗುತ್ತಿರುವ ದುಃಖ, ಗೌತಮ ಬುದ್ದ ಹೇಳಿದ್ದು ಇದನ್ನೆ ಅಲ್ಲವೆ ?" ಎಂದೆ.
ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೊ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.  



ಕತೆ : ಶಾಪ [ ಬಾಗ -  ೨]
ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೊ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.  


ಒಳಗೆ ಬರುವಾಗಲೆ,


"ದಯಮಾಡಿ ಕ್ಷಮಿಸಿ, ಬೇಗಬರುವೆ ಅಂತ ಹೋಗಿ ನಿಮ್ಮನ್ನು ಕಾಯಿಸಿದೆ, ನಿಮಗೆ ತೊಂದರೆಯಾಯಿತು ಅನ್ನಿಸುತ್ತೆ, " ಅಂದವನು ಅಲ್ಲೆ ಕುಳಿತಿದ್ದ ಅವನ ಮಗನತ್ತ, ಅವನ ಅಮ್ಮನತ್ತ, ನನ್ನತ್ತ ನೋಡಿ,
"ಇವನ ಹತ್ತಿರ ಮಾತನಾಡುತ್ತಿದ್ದಿರ, ನಿಮಗೆ ಏನು ಬೇಸರವಾಗಲಿಲ್ಲ ತಾನೆ?" ಅಂದನು ಆತಂಕದಿಂದ
ನಾನು ನಕ್ಕುಬಿಟ್ಟೆ
"ಬನ್ನಿ ಕುಳಿತುಕೊಳ್ಳಿ, ಯಾವ ಆತಂಕವು ಬೇಡ, ನನಗೆ ಯಾವ ಬೇಸರವು ಇಲ್ಲ , ನಿಮ್ಮ ಹುಡುಗನ ಜೊತೆ ಹೀಗೆ ಏನೊ ಸ್ವಲ್ಪ ಮಾತು ನಡೆಸಿದ್ದೆ ಅಷ್ಟೆ, ನೀವು ದಣಿದು ಬಂದಿರುವಿರಿ, ಸಿದ್ದವಾಗಿ, ನೀವು ಹಸಿದಿರಬಹುದು, ಊಟ ಮಾಡೋಣ ಏಳಿ, ನೋಡಿ ನಿಮ್ಮ ಮನೆಯಲ್ಲಿ ನಿಮಗೆ ಉಪಚಾರ ಮಾಡುತ್ತಿರುವೆ" ಎಂದು ಪುನ ನಕ್ಕುಬಿಟ್ಟೆ.
ಶ್ರೀನಿವಾಸ  ಬರುವಾಗಲೆ, ಅವನ ಮಗ ಲಕ್ಷ್ಮೀಶ ಎದ್ದು ನಿಂತನು, ಮುಂದೆ ಏನು ಮಾತನಾಡದೆ, ಒಳಹೊರಟನು.
ಶ್ರೀನಿವಾಸನ ತಾಯಿ
"ಕ್ಷಮಿಸಿ ಸ್ವಾಮಿ, ಹುಡುಗನದು ಸ್ವಲ್ಪ ದುಡುಕಿನ ಸ್ವಭಾವ ಏನಾದರು ಮಾತನಾಡಿಬಿಡುವ, ಮುಂದಾಲೋಚನೆ ಇಲ್ಲ" ಎಂದರು,
ಶ್ರೀನಿವಾಸ ಆತಂಕದಿಂದ
"ಏನಾಯ್ತಮ್ಮ ಏನು ಮಾತನಾಡಿದ" ಎನ್ನುವಾಗಲೆ , ನಾನು
"ಏನು ಇಲ್ಲ ಬಿಡಿ, ಚಿಕ್ಕ ವಯಸಿನಲ್ಲಿ ಎಲ್ಲರು ಹಾಗೆ ಅಲ್ಲವೆ, ಸ್ವಭಾವ ನಿಮಗಿಂತ ವಿಭಿನ್ನ ಅನ್ನಿಸುತ್ತೆ, ನೋಡುವಾಗ ನಿಮ್ಮ ಯಾರ ಸ್ವಭಾವವು ಇಲ್ಲ, ಬಹುಷಃ ಅವರ ತಾತನ ಸ್ವಭಾವ ಬಂದಿರಬಹುದೇನೊ"
ನನ್ನ ಬಾಯಿಂದ ನನಗರಿವಿಲ್ಲದೆ ಬಂದ ಮಾತು ಅದಾಗಿತ್ತು, ನಂತರ ನನ್ನ ಮನಸಿಗೆ ಕಸಿವಿಸಿ ಅನ್ನಿಸಿತು. ಶ್ರೀನಿವಾಸನ ತಾಯಿಯ ಮುಖ ಏಕೊ ಚಿಕ್ಕದಾಯಿತು. ಅಷ್ಟರಲ್ಲಿ ಒಳಗಿನಿಂದ ಬಂದಿದ್ದ, ಶ್ರೀನಿವಾಸನ ಪತ್ನಿ ಲಕ್ಷ್ಮಿ ಎಲ್ಲರನ್ನು ಊಟಕ್ಕೆ ಎಬ್ಬಿಸಿದರು, ಹಾಗಾಗಿ ನನ್ನ ತಪ್ಪು ಮಾತು ಮುಚ್ಚಿಹೋಯಿತು.


ಊಟಕ್ಕೆ ನಾನು ಮತ್ತು ಶ್ರೀನಿವಾಸ  ಹಾಗು ಅವನ ತಾಯಿ ಕುಳಿತಿದ್ದರು, ಲಕ್ಷ್ಮಿಯವರು ಊಟ ಬಡಿಸುತ್ತಿದ್ದರು, ನಾನು ನಡುವೆ ಕೇಳಿದೆ
"ಏಕೆ, ಲಕ್ಷ್ಮೀಶ ಊಟಕ್ಕೆ ಬರಲಿಲ್ಲವೆ" ,
ಶ್ರೀನಿವಾಸ ಅವನ ಪತ್ನಿಯ ಮುಖ ನೋಡಿದನು, ಆಕೆ
"ಅವನು ಹಸಿವಿಲ್ಲ, ಆಮೇಲೆ ಮಾಡುವೆ ಎಂದ" ಆಕೆ ನುಡಿದಳು.
ಊಟದ ನಡುವೆ ನಾನು ಶ್ರೀನಿವಾಸನನ್ನು
"ನಿಮ್ಮನ್ನು ನಾನು ಏಕವಚನದಲ್ಲಿಯೆ ಕರಯಬಹುದೆ ? ಅದು ನನಗೆ ಅನುಕೂಲ ಅನ್ನಿಸುತ್ತೆ"
ಎಂದೆ
ಅದಕ್ಕವನು
"ತೊಂದರೆ ಏನಿಲ್ಲ, ನೀವು ನನಗಿಂತ ವಯಸಿನಲ್ಲಿ ದೊಡ್ಡವರು, ಏಕವಚನದಲ್ಲಿ ಕರೆದರೆ ಸಂತಸವೆ " ಎಂದನು


ನಾನು ಮುಂದೆ ಮಾತನಾಡಲಿಲ್ಲ.
ಊಟ ಮುಗಿಸಿ  ನಾನು ಶ್ರೀನಿವಾಸ ಹಾಗು ಬಾಗ್ಯಮ್ಮ ಹೊರಗಿನ ವರಾಂಡದಲ್ಲಿ ಕುಳಿತಂತೆ, ಮೇಲಿನ ರೂಮಿನಲ್ಲಿದ್ದ ಲಕ್ಷ್ಮೀಶ ಕೆಳಗಿಳಿದು ಊಟಕ್ಕೆ ಹೋದ.


ನಮ್ಮ ಮೂವರ ಮಾತುಗಳು ಎತ್ತತ್ತಲೊ ತಿರುಗುತ್ತಿತ್ತು,  ಶ್ರೀನಿವಾಸನ ತಾಯಿ, ಬಾಗ್ಯಮ್ಮ ಮಾತಿನ ನಡುವೆ ಹಿಮಾಲಯದ ಸಾಧುಗಳ ಅವರ ಶಕ್ತಿಗಳ ಬಗ್ಗೆ ಮಾತು ತೆಗೆದರು. ಒಳಗಿನಿಂದ ಊಟ ಮುಗಿಸಿದ ಲಕ್ಷ್ಮೀಶನು ಅಲ್ಲಿ ಬಂದು ನಿಂತಿದ್ದ. ನನಗೆ ಗೊತ್ತಿದ್ದ ಹಲವು ಸಾಧುಗಳ ಬಗ್ಗೆ ತಿಳಿಸಿದೆ.  
ಶ್ರೀನಿವಾಸ ಕೇಳಿದನು
"ಸಾಧುಗಳಿಗೆ ಕೆಲವು ವಿಶೇಷ ಶಕ್ತಿ ಇರುತ್ತೆ ಅನ್ನುವರು, ಅದು ಹೇಗೆ ಸಾದಿಸುವರು, ಅಂತವೆಲ್ಲ ಕಷ್ಟವಲ್ಲವೆ "
ನಾನು  ಹಲವು ಸಾದುಗಳ ಸಾದನೆ ಬಗ್ಗೆ ಅವರ ವಿಶೇಷ ಶಕ್ತಿಯ ಬಗ್ಗೆ ಉತ್ಸಾಹದಿಂದ ವಿವರಿಸುತ್ತಿದ್ದೆ. ಸುಮ್ಮನೆ ಕುಳಿತಿದ್ದ, ಲಕ್ಷ್ಮೀಶನು , ನಡುವೆ ಕೇಳಿದ


"ಸರಿ ಸಾಧುಗಳಿಗೆ ವಿಶೇಷ ಶಕ್ತಿ ಇರುವುದು ಅನ್ನುವದಾದರೆ, ನಿಮ್ಮಗಿರುವ ವಿಶೇಷ ಶಕ್ತಿ ಏನು?"
ಅವನ ದ್ವನಿಯಲ್ಲಿ ಕುತೂಹಲವಿತ್ತೊ, ಅಣಕಿಸುವ ಪರಿ ಇತ್ತೊ, ಅಥವ ತಿರಸ್ಕಾರವಿತ್ತೊ ಅರಿಯಲಾಗಲಿಲ್ಲ. ಅಲ್ಲೊಂದು ದೀರ್ಘಮೌನ ಆವರಿಸಿತು.


ನನಗೆ ಅಲ್ಲಿಯವರೆಗು ಇರದಿದ್ದ ಭಾವವೊಂದು ಆವರಿಸಿತು. ಯಾರೊಂದಿಗು ಹೆಚ್ಚು ಮಾತನಾಡಲು ಇಷ್ಟ ಪಡದ ನಾನು ಈ ಲಕ್ಷ್ಮೀಶನೊಡನೆ ಮಾತಿಗೆ ಸಿಲುಕುತ್ತಿದ್ದೆ.


"ಹೌದು ಅಂತಹ ಸಿದ್ದಶಕ್ತಿ ಇರುವುದು ಸತ್ಯ. ನಾನು ಹಿಮಾಲಯದಲ್ಲಿ ಜೀವನದ ಬಹುಕಾಲ ಕಳೆದಿರುವೆ. ಹರಿದ್ವಾರಕ್ಕೆ ಬರುವ ಮೊದಲು, ಅಲ್ಲಿಂದ ಮೇಲೆ ಹಿಮಾಲಯದ ತಪ್ಪಲಿನಲ್ಲಿ ಸುತ್ತುತ್ತಿದ್ದೆ, ಯಾವುದೆ ಗುರಿಯಿಲ್ಲ,  ಇಂತಹುದೆ ಎನ್ನುವ ಪರಿಯಿಲ್ಲ. ಆಗ ಸಾದು ಒಬ್ಬರು ಸಿಕ್ಕಿದರು ತೀರ ವಯಸ್ಸಾಗಿದ್ದವರು. ತೊಂಬತ್ತು ದಾಟಿರಬಹುದೇನೊ. ಒಂದೆರಡು ವರುಷ ಅವರ ಜೊತೆ ಕಳೆದೆ. ಅವರು ದ್ಯಾನ ಮಾಡುತಿದ್ದರು ನಾನು ಅವರ ಸೇವೆ ಮಾಡುತ್ತಿದ್ದೆ, ನನಗೆ ದ್ಯಾನ ತಪಸ್ಸುಗಳ ಹುಚ್ಚು ಇರಲಿಲ್ಲ. ಕಡೆಗೊಮ್ಮೆ ಅವರು ನನ್ನನ್ನು ತೊರೆದು ಮೇಲಿನ ಹಿಮಾಲಯಕ್ಕೆ ಹೊರಡಲು ಸಿದ್ದರಾದರು, ನಾನು ಅವರ ಜೊತೆ ಹೊರಟೆ. ಅವರು ಬೇಡ ಎಂದು ತಡೆದರು. ನನಗು ಅವರಿಗು ಇದ್ದ ಋಣ ತೀರಿತ್ತು, ಆದರೆ ಅವರು ಹೊರಡುವ ಮೊದಲು, ನನಗೆ ಹೇಳಿದರು , ನೀನು ಇಷ್ಟು ವರ್ಷ ನನ್ನ ಸೇವೆಯನ್ನು ನಿಷ್ಟೆಯಿಂದ ಮಾಡಿರುವೆ, ಅದಕ್ಕೆ ಪ್ರತಿಯಾಗಿ ನಿನಗೆ ಶಕ್ತಿ ಒಂದನ್ನು ಕೊಡುವೆ, ನೀನು ಯಾವ ಸ್ಥಳದಲ್ಲಿದ್ದರು, ಅಲ್ಲಿಯ ಹಿಂದಿನ ಇತಿಹಾಸ ನೀನು ಬಯಸಿದರೆ, ನಿನ್ನ ಅರಿವಿಗೆ ಬರುವುದು, ಅದು ಎಷ್ಟೆ ವರ್ಷಗಳ ಹಿಂದಿನ ಘಟನೆಯಾದರು, ನಿನಗೆ ಪ್ರತಿ ವಿವರವು ತಿಳಿಯುವುದು, ಎಂದು ನುಡಿದಿದ್ದರು. ಆದರೆ ನನಗೆ ಎಂದು ಆ ಶಕ್ತಿಯನ್ನು ಉಪಯೋಗಿಸಬೇಕು ಎಂದು ಅನ್ನಿಸಲೆ ಇಲ್ಲ. ಹಾಗಾಗಿ ಎಷ್ಟೋ ವರುಷಗಳಾದರು ಆ ಶಕ್ತಿಯ ಉಪಯೋಗ ನಾನು ಪಡೆದಿಲ್ಲ"
ನಾನು ಈ ಮಾತನ್ನು ಹೇಳಿ ಸುಮ್ಮನೆ ಕುಳಿತೆ. ದೀರ್ಘಮೌನ. ಶ್ರೀನಿವಾಸನಾಗಲಿ ಅವನ ತಾಯಿಯಾಗಲಿ ಮಾತನಾಡಲಿಲ್ಲ , ಅಥವ ಏನು ಮಾತನಾಡುವದೆಂದು ಅವರಿಗೆ ತಿಳಿಯಲಿಲ್ಲ ಅನ್ನಿಸುತ್ತೆ.
ಆದರೆ ಲಕ್ಷ್ಮೀಶ ಇದ್ದಕ್ಕಿದ್ದಂತೆ ನುಡಿದ
"ಇದೆಂತಹ ಶಕ್ತಿ, ಇದರಿಂದ ಏನು ಉಪಯೋಗ, ಯಾವುದೆ ಸ್ಥಳದಲ್ಲಿ ಕುಳಿತು, ಅಲ್ಲಿರುವರನ್ನು ಕೇಳಿದರೆ ಆಯಿತು ಹಿಂದೆ ನಡೆದಿರುವದನ್ನೆಲ್ಲ ಹೇಳುವರು, ಈಗ ನನ್ನ ತಂದೆ, ಅಜ್ಜಿಯರನ್ನು ಕೇಳಿದರೆ ಆಯಿತು ನಮ್ಮ ಮನೆಯ ಇತಿಹಾಸ ತಿಳಿಯುವುದು ಅಲ್ಲವೆ?, ಅದಕ್ಕೆ ವಿಶೇಷ ಶಕ್ತಿ ಎಕೆ ಬೇಕು, ಈ ವರದಿಂದ ಯಾವುದೆ ಲಾಭವಿಲ್ಲವಲ್ಲ" ಎಂದ.


ನನ್ನ ಉತ್ಸಾಹ ಇಳಿದುಹೋಯಿತು. ನನಗಿದ್ದ ಶಕ್ತಿಯನ್ನು ವರ್ಣಿಸಿದರೆ ಈ ಬಾಲಕ ಒಂದೆ ಕ್ಷಣದಲ್ಲಿ ನನ್ನ ಭಾವಭಂಗ ಮಾಡಿದ್ದ. ಈಗ ಇವನ ಸ್ವಭಾವ ನನಗೆ ಸಾಮಾನ್ಯದ್ದಾಗಿ ಕಾಣಲಿಲ್ಲ. ನನ್ನ ಮುಖದ ಮೇಲಿದ್ದ ನಗು ಅಳಸಿಹೋಗಿತ್ತು. ಅದು ನನಗೆ ಆಗಿದ್ದ ಅಭಿಮಾನ ಭಂಗದ ಕಾರಣವಿರಬಹುದು.
ಶ್ರೀನಿವಾಸ ಗದರಿದನು ಅವನ ಮಗನನ್ನು
"ಲಕ್ಷ್ಮೀಶ ನಿನ್ನದು ಸದಾ ದುಡುಕು ನುಡಿಯೆ, ನಿನಗೆ ಇವೆಲ್ಲ ಅರ್ಥವಾಗಲ್ಲ, ನೀನು ಮೇಲೆ ಹೋಗು, ಮುಂದಿನ ತಿಂಗಳು ಪರೀಕ್ಷೆ ಇರಬೇಕಲ್ಲವೆ ಆ ಕಡೆ ಗಮನ ಕೊಡು"  
ಅವನು ಯಾವ ಮಾತು ಆಡದೆ ಅಲ್ಲಿಂದ ಎದ್ದು ಹೊರಟ.
ಲಕ್ಷ್ಮೀಶ ಒಳಗೆ ಎದ್ದು ಹೋದ ಬಹಳ ಹೊತ್ತಿನವರೆಗು ನಾನು ಸುಮ್ಮನೆ ಕುಳಿತಿದ್ದೆ. ನನ್ನ ಮೌನವನ್ನು ಕಂಡು ಶ್ರೀನಿವಾಸ ನುಡಿದನು


"ತಪ್ಪು ತಿಳಿಯಬೇಡಿ ಸ್ವಾಮಿ, ಅವನ ಸ್ವಭಾವವೆ ಒಂದು ರೀತಿ, ಎದುರಿಗೆ ಇರುವವರಿಗೆ ನೋವಾಗುತ್ತದೆ ಎಂದು ಗೊತ್ತಿದ್ದಾಗಲು ಸಹ ಮನಸಿನಲ್ಲಿ ಉಳಿಸಿಕೊಳ್ಳದೆ ಮಾತನಾಡಿಬಿಡುತ್ತಾನೆ ಅವನನ್ನು ತಿದ್ದಿ ನಾನು ಸೋತುಹೋದೆ. ತಾವು ನನ್ನ ಅತಿಥಿಯಾಗಿ ಬಂದಿರುವಿರಿ, ದಯಮಾಡಿ ನನ್ನನ್ನು ಕ್ಷಮಿಸಿ, ನನ್ನ ಮನೆಯಲ್ಲಿ ನಿಮಗೆ ನೋವಾಗಿದ್ದರೆ ಮರೆತುಬಿಡಿ ನನ್ನ ಮಗನ ಬಗ್ಗೆ ಅಗ್ರಹ ತಾಳಬೇಡಿ" ಎಂದ.
ನಿಧಾನವಾಗಿ ನುಡಿದೆ,
"ಅವನ ಮಾತು ಸತ್ಯವೆ ಅಲ್ಲವೆ, ಯಾವುದೊ ಸ್ಥಳದ ಇತಿಹಾಸದಿಂದ ಅಲ್ಲಿ ಏನು ನಡೆದಿತ್ತು ಅನ್ನುವದರಿಂದ ಯಾರಿಗಾದರು ಏನು ಉಪಯೋಗ, ಅದರಿಂದ ನಾನು ಯಾರಿಗು ಉಪಕಾರಮಾಡಲಾರೆ ಅಲ್ಲವೆ"


"ಹಾಗೇಕೆ ಅನ್ನುವಿರಿ, ಇತಿಹಾಸದಿಂದ ನಾವು ಕಲಿಯುವೆವು ಅಲ್ಲವೆ, ಒಂದು ಸ್ಥಳದ ಬಗ್ಗೆ ನಮಗೆ ಅರಿಯದ ಎಷ್ಟೋ ವಿಷಯಗಳು ಇರುತ್ತವೆ, ಅದನ್ನು ತಿಳಿಯಬಹುದು, ಅಲ್ಲದೆ ಕೆಲವು ನಿಗೂಡ ಘಟನೆಗಳ ಬಗ್ಗೆ ಯಾರಿಗು ಅರಿವಿರುವದಿಲ್ಲ, ಅಂತಹ ಜಾಗದಲ್ಲಿ ಅವುಗಳನ್ನು , ಆ ಘಟನೆಯಲ್ಲಿ ನಿಜವಾಗಿ ಏನು ನಡೆಯಿತು ಎನ್ನುವುದು ತಿಳಿಯಬಹುದು, ಮನಸು ಮಾಡಿದರೆ ಅದರಲ್ಲಿ ಹಣವು ಮಾಡಬಹುದು, ಕೊಲೆಗಳನ್ನು ಅಪರಾದಗಳನ್ನು ಅವುಗಳ ಸತ್ಯಗಳನ್ನು ಬಯಲಿಗೆಳೆಯಬಹುದು"  
ಅವನ ಮಾತಿನಿಂದ ನನಗೆ ನಗು ಬರಲು ಪ್ರಾರಂಬವಾಯಿತು, ಜೋರಾಗಿ ನಗುತ್ತಿದ್ದೆ. ಶ್ರೀನಿವಾಸನು ಸಂಕೋಚದಿಂದ ಕೇಳಿದ
"ಏಕೆ ಗುರುಗಳೆ ನನ್ನ ಮಾತು ಹಾಸ್ಯಸ್ಪದವಾಯಿತೆ, ತಮಗೆ ಬೇಸರವಾಯಿತೆ?"
"ಹಾಗಲ್ಲ ಶ್ರೀನಿವಾಸ, ಮತ್ತೇನಕ್ಕೊ ನಗು ಬಂದಿತು, ನಿನ್ನ ಮಗ ಭಾವಿಸುವನು ನಿನಗೆ ವೈರಾಗ್ಯ, ದೇವರು ಮುಂತಾದ ಯೋಚನೆ ಬಿಟ್ಟು ಬೇರೆ ಹೊಳೆಯುವದಿಲ್ಲ, ವ್ಯವಹಾರಕ್ಕೆ ನಿನ್ನ ಮನಸ್ಸು ಹೊಂದುವದಿಲ್ಲ ಅನ್ನುತ್ತಾನೆ, ಆದರೆ ನೀನಾದರೊ ನನ್ನ ಸಿದ್ದ ಶಕ್ತಿಯನ್ನು ಹೇಗೆ ವ್ಯವಹಾರಕ್ಕೆ ಬಳಸಿ ಹಣಮಾಡಬಹುದು ಎನ್ನುತ್ತಿರುವೆ, ಅದಕ್ಕಾಗಿ ನಗುತ್ತಿದ್ದೆ ಅಷ್ಟೆ, ತಪ್ಪಲ್ಲ ತಾನೆ, ನಿನ್ನ ಮಾತನ್ನು ನಿನ್ನ ಮಗ ಕೇಳಿದ್ದರೆ ಎಷ್ಟೋ ಸಂತಸಪಡುತ್ತಿದ್ದನು ಅವನನ್ನು ವೃತಾ ಒಳಗೆ ಕಳಿಸಿಬಿಟ್ಟೆ" ಎಂದೆ ನಗುತ್ತ


ಶ್ರೀನಿವಾಸನ ಮುಖ ಸಂಕೋಚದಿಂದ ಕೆಂಪಾಯಿತು. ಆದರು ಸಾವರಿಸಿ ನುಡಿದ


"ನಿಮ್ಮ ಮಾತು ನಿಜ ಅವನು ಸಾಕಷ್ಟು ಸಾರಿ ಅದನ್ನು ಎತ್ತಿ ಆಡಿದ್ದಾನೆ, ನನಗೆ ವ್ಯವಹಾರ ಬುದ್ದಿ ಇಲ್ಲ ಎನ್ನುವುದು ಅವನ ಅಭಿಮತ. ಕೆಲವೊಮ್ಮೆ ನಾನು ಇರುವುದು ಹಾಗೆ ಬಿಡಿ, ಆದರು ಅವನ ಮಾತು ಕೆಲವೊಮ್ಮೆ ಮನಸಿಗೆ ಹಿಂಸೆ ಆಗುತ್ತೆ, ಕೆಲವೊಮ್ಮೆ ಅವನ ಮಾತು ವಯಸ್ಸಿಗೆ ಮೀರಿದ್ದು ಅನ್ನಿಸುತೆ, ಕೆಲವು ತಿಂಗಳೊ ವರ್ಷವೊ, ಕೆಳಗೆ ಒಮ್ಮೆಲೆ ನುಡಿದಿದ್ದ,
"ತಾತ ದುಡಿದಿದ್ದಾರೆ ಎನ್ನುವ ಕಾರಣಕ್ಕೆ ನೀವು ದಾನ ಧರ್ಮ ಎನ್ನುತ್ತ ಓಡಾಡುವಿರಿ, ಆದರೆ ನಿಮ್ಮ ಹಿರಿಮೆ ಏನಿದೆ, ನಿಜವಾಗಿ ದಾನ ಮಾಡುವದಾದರೆ ನಿಮ್ಮ ದುಡಿತದ ಹಣವನ್ನು ದಾನ ಮಾಡಿರಿ, ತಾತನ ಹಣದ ಮೇಲೆ ನಿಮಗೆ ಯಾವ ಅದಿಕಾರವು ಇಲ್ಲ, ನಿಜ ಹೇಳುವದಾದರೆ ಅದರ ಮೇಲೆ ನನಗೆ ಕಾನೂನಿನಂತೆ ಅದಿಕಾರ ಜಾಸ್ತಿ"  ಎಂದ ,
ಅವನ ಮಾತು ನಿಜ ಅನ್ನಿಸಿ ನನಗೆ ಮನಸಿಗೆ ಸಂಕಟವಾಯಿತು"  
ಶ್ರೀನಿವಾಸ ಮುಂದುವರೆಸಿದ,
"ನಾನು ಅಂದೆ ನಿರ್ದರಿಸಿದೆ, ನಾನು ನನ್ನ ದುಡಿಮೆಯಲ್ಲಿಯಷ್ಟೆ ಬದುಕಬೇಕು,   ನನ್ನ ಹತ್ತಿರವಿರುವದೆಲ್ಲ ನನ್ನ ತಂದೆ ಸಂಪಾದಿಸಿದ ಆಸ್ತಿಯೆ, ನನ್ನ ಅಂಗಡಿಗಳಾಗಲಿ, ಮಳಿಗೆಗಳಾಗಲಿ ಯಾವುದೆ ವ್ಯವಹಾರವಾಗಲಿ ನಾನು ಬೆಳೆಸಿದ್ದು ಏನು ಇಲ್ಲ, ಹಾಗಾಗಿ ಅಂದಿನಿಂದ ನಾನು ನನ್ನ ಬದುಕನ್ನು ಬದಲಾಯಿಸಿಕೊಂಡೆ, ಇಂದಿಗು ನನ್ನ , ಹಾಗು ಮನೆಯ ಖರ್ಚುಗಳೆಲ್ಲ ವ್ಯಾಪಾರದ ಲಾಭದ ಹಣದಲ್ಲಿ ನಡೆಯುವದಿಲ್ಲ, ನನ್ನನ್ನು ಈ ಆಸ್ತಿಗೆಲ್ಲ ಧರ್ಮದರ್ಶಿ ಎಂದುಕೊಂಡಿರುವೆ, ಹಾಗು ಎಲ್ಲ ಆಸ್ತಿಯ ಮೇಲ್ವಿಚಾರಕನಾಗಿ ನಾನು ನ್ಯಾಯ ಸಮ್ಮತ ಎನಿಸುವ ಸಂಬಳಕ್ಕೆ ಸಮಾನವಾದ ಹಣವನ್ನು ಮಾತ್ರ ಪಡೆಯುವೆ, ಅದರಿಂದಲೆ ನನ್ನ ಮನೆ, ಹೆಂಡತಿ ಮಗ ಅಮ್ಮ ಎಲ್ಲರನ್ನು ಸಾಕುತ್ತಿರುವೆ. ವ್ಯಾಪಾರದ ಲಾಭ ನಷ್ಟಗಳೆಲ್ಲ ಹಾಗೆಯೆ ಇದ್ದು, ಅದನ್ನು ಲಕ್ಷ್ಮೀಶನು ಪ್ರಾಪ್ತ ವಯಸ್ಕನಾದ ಮೇಲೆ ಅವನಿಗೆ ತಲುಪಿಸುವುದು ಎಂದು ತೀರ್ಮಾನಿಸಿರುವೆ. ನಾನು ಮಾಡುವೆ ಎಂದು ಕೊಳ್ಳುವ  ಒಳ್ಳೆಯ ಕೆಲಸಗಳು ಅಷ್ಟೆ, ದಾನಗಳು ಅಷ್ಟೆ ನನ್ನದೆ ದುಡಿಮೆಯ ಹಣದ ಹೊರತಾಗಿ, ನಮ್ಮ ತಂದೆಯ ಆಸ್ತಿಯ ಹಣ ಬಳಸುವದಿಲ್ಲ. ಅದು ಅವನಿಗೆ ತಿಳಿಸಿಲ್ಲ ಸಮಯ ನೋಡಿ ತಿಳಿಸುವೆ" ಎಂದು ನಿಲ್ಲಿಸಿದ.



ನನಗೆ ಈಗ  ನಿಜಕ್ಕು ಆಶ್ಚರ್ಯವೆನಿಸಿತು, ಸ್ವಂತ ತನ್ನ ತಂದೆಯ ಆಸ್ತಿಯನ್ನು  ಅನುಭೋಗಿಸದೆ, ಅದಕ್ಕೆ ಧರ್ಮದರ್ಶಿಯಾಗಿದ್ದು, ಅದನ್ನು ಮುಂದಿನ ತಲೆಮಾರಿಗೆ ಸಾಗಿಸುವ ಸೇತುವಾಗಿದ್ದಾನೆ ಶ್ರೀನಿವಾಸ. ಪ್ರಪಂಚದಲ್ಲಿ ಎಂತದೊ ಘಟನೆಗಳೆಲ್ಲ ನಡೆಯುತ್ತದೆ.


ನನ್ನ ಮನವೇಕೊ ಯಾವುದೋ ಭಾವಕ್ಕೆ ಜಾರುತ್ತಿತ್ತು, ಅಪ್ಪ ಮಕ್ಕಳು ಹೀಗೆ ಇನ್ನು ಇವರ ಅಂದರೆ ಶ್ರೀನಿವಾಸರ ತಂದೆ ಹೇಗಿದ್ದಿರಬಹುದು.
ಕಣ್ಣಿಗೆ ಯಾವುದೋ ದೃಷ್ಯಗಳು ಕಾಣುತ್ತಿದ್ದವು  ............


ಶ್ರೀನಿವಾಸನ ತಂದೆ,  ಬಾಲಕೃಷ್ಣಯ್ಯನವರು ಕೂಗಾಡುತ್ತಿದ್ದರು
"ಹೀಗಾದರೆ ನೀನು ಉದ್ದಾರವಾದ ಹಾಗೆ ಇದೆ ಬಿಡು, ನೀನು ಒಬ್ಬ ವ್ಯಾಪರಿಯ ಮಗ ತಿಳಿದುಕೋ, ಸದಾ ದಾನ ಧರ್ಮ ಸಹಾಯ ಎಂದೆ ತಿರುಗುತ್ತಿದ್ದರೆ ನಿನಗೆ ಕಡೆಗೆ ಸಿಗುವುದೆ ದೊಡ್ಡ ಚಿಪ್ಪು ಅಷ್ಟೆ,  ಯಾವುದೆ ವಿಷಯದಲ್ಲು ವ್ಯಾವಹಾರಿಕವಾಗಿ ಚಿಂತಿಸಬೇಕು ತಿಳಿ, ರೂಪಾಯಿ ಎಂದರೆ ಒಂದು ರುಪಾಯಿ ಅಲ್ಲ ಅದರಲ್ಲಿ ನೂರು ಪೈಸೆಗಳಿವೆ ತಿಳುದುಕೊ, ಒಂದೊಂದು ಪೈಸೆ ದುಡಿಯಲ್ಲು ನಮ್ಮ ಶಕ್ತಿ ಬುದ್ದಿ ವಿನಿಯೋಗವಾಗಿರುತ್ತದೆ, ಸುಮ್ಮನೆ ಖರ್ಚು ಮಾಡುವದಲ್ಲ"


ಅವರ ಕೂಗಾಟಕ್ಕೆ, ಮೆದುವಾಗಿಯೆ ಉತ್ತರಿಸಿದ ಶ್ರೀನಿವಾಸ.


"ಅಪ್ಪಾಜಿ , ನಾನೇನು ಈಗ ಅಂತ ದುಂದು ಮಾಡಿದೆ ಎಂದು ಕೂಗಾಡುತ್ತಿರುವಿರಿ, ಏನೊ ಬಾಲ್ಯ ಸ್ನೇಹಿತ , ಕಾಲೇಜಿನಲ್ಲಿ ಫೀಸು ಕಟ್ಟಲು ಹಣವಿಲ್ಲ ಅಂತ ಕುಳಿತಿದ್ದ,  ಅದು ಬರಿ ಐವತ್ತೆರಡು ರುಪಾಯಿ, ಮುಂದಿನವಾರ ಅವರಪ್ಪ ಕಳಿಸುವ ಮನಿ ಆರ್ಡರ್ ಬರುತ್ತದೆ  ಹಿಂದಿರುಗಿಸುವೆ ಅಂದಿದ್ದಾನೆ. ನಾನೆ ಬೇಡ ಅಂದಿರುವೆ,  ನಿಮ್ಮ ಹತ್ತಿರವಿರುವ ಲಕ್ಷ ಲಕ್ಷ ಹಣದಲ್ಲಿ ಈ ಐವತ್ತೆರಡು ರುಪಾಯಿ ಯಾವ ಲೆಕ್ಕ ಅಂತ ಹೀಗಾಡುತ್ತೀರಿ"
ಬಾಲಕೃಷ್ಣಯ್ಯನ ಕೂಗಾಟ ಮತ್ತು ಜಾಸ್ತಿ ಆಯಿತು
"ಆಯಿತು, ನೀನು ಉದ್ದಾರವಾಗುವ ಜನವಲ್ಲ ಬಿಡು, ಹೀಗೆ ಅವರಿಗೆ ಇವರಿಗೆ ಎಂದು ಎಲ್ಲ ಕಳೆದುಬಿಡುವೆ, ಐವತ್ತರಡು ರುಪಾಯಿ ಯಾವ ಮಹಾ ಎನ್ನುವ ನೀನು ಒಂದು ರುಪಾಯಿ ದುಡಿದು ತೋರಿಸು ನೋಡೋಣ, ನಿನ್ನ ಯೋಗ್ಯತೆಗಿಷ್ಟು. ನನಗೆ ನಿನ್ನದೆ ಒಂದೆ ಚಿಂತೆಯಾಗಿದೆ, ಮುಂದು ಅಷ್ಟೆ ನೀನು ನನ್ನ ನಂತರ ಈ ಆಸ್ತಿಯ ಒಂದು ಪೈಸೆಯನ್ನು ಉಳಿಸಲ್ಲ, ಎಲ್ಲ ಗುಡಿಸಿಹಾಕಿಬಿಡುತ್ತಿ, ನಿನ್ನ ಅಮ್ಮನನ್ನು ನೀರಿನಲ್ಲಿ ಮುಳುಗಿಸಿಬಿಡುತ್ತಿ. ನಾನು ಪ್ರತಿ ರುಪಾಯಿ ದುಡಿಯಲು ಎಷ್ಟು ಕಷ್ಟ ಬಿದ್ದಿರುವೆ ಗೊತ್ತೆ, ಈ ಮನೆಯನ್ನು ಕಟ್ಟಲು ಪ್ರಾಣ ಬಿಟ್ಟಿರುವೆ " ಎಂದರು.
ಶ್ರೀನಿವಾಸನ ಸಹನೆ ಮೀರಿತ್ತು, ಬಾಯಿ ತಪ್ಪಿ ನುಡಿದ


"ಹೌದು ಹೌದು, ಈ ಮನೆ ಕಟ್ಟಲು ತುಂಬಾ ಶ್ರಮ ಬಿದ್ದಿರುವಿರಿ ಬಿಡಿ,  ಇಲ್ಲಿ ಮನೆ ಕಟ್ಟಿದ ರಾಮಕೃಷ್ಣಯ್ಯ ಮಾಸ್ತರರನ್ನು ಹೇಗೆ ಓಡಿಸಿದಿರಿ ಎಂದು ನನಗೆ ತಿಳಿದಿದೆ,  ಗೆದ್ದಲುಹುಳು ಕಟ್ಟಿದ ಹುತ್ತದಲ್ಲಿ ಹಾವು ಸೇರಿದಂತೆ ನಾವು ಬಂದು ಸೇರಿದ್ದೇವೆ ಅಷ್ಟೆ"


ಶ್ರೀನಿವಾಸನ ಬಾಯಲ್ಲಿ ಈ ಮಾತು ಬರುತ್ತಲೆ , ಬಾಲಕೃಷ್ಣಯ್ಯನವರ ದ್ವನಿ ತಾರಕಕ್ಕೆ ಏರಿತು, ಅವರ ದ್ವನಿಯಲ್ಲಿ ನೀವು ತನ್ನ ಮಗನೆ ತನಗೆ ಹಂಗಿಸುವಂತಾಯ್ತಲ್ಲ  ಎನ್ನುವ ರೋಷ, ಅವಮಾನ ಎದ್ದು ಕಾಣುತ್ತಿತ್ತು.........
ಇದೆಲ್ಲ ಕಣ್ಣ ಮುಂದೆ ಸಾಗುತ್ತಿರುವಂತೆ ನಾನು ಶ್ರೀನಿವಾಸನನ್ನು ಕೇಳಿದೆ ,
"ಅಂದರೆ ಈ ಮನೆಯನ್ನು ನಿಮ್ಮ ತಂದೆ ಬಾಲಕೃಷ್ಣಯ್ಯನವರು,  ರಾಮಕೃಷ್ಣ ಅನ್ನುವ ಮಾಸ್ತರರಿಂದ ಮೋಸ ಮಾಡಿ ಪಡೆದರ?"


ಶ್ರೀನಿವಾಸ ಆಶ್ಚರ್ಯದಿಂದ ಎಂಬಂತೆ ಕಣ್ಣು ಅಗಲಿಸಿದ,
ನಾನು ಆಗ ಗಮನಿಸಿದೆ, ಅಲ್ಲಿ ಯಾರು ಏನು ಮಾತನಾಡಿರಲಿಲ್ಲ, ನಾನು ಯಾವುದೊ ಮನಸಿನ ದೃಷ್ಯದಲ್ಲಿ ಕಂಡಿದ್ದನ್ನು ನೇರವಾಗಿ ಶ್ರೀನಿವಾಸನಿಗೆ ಕೇಳಿದ್ದೆ,


"ಸ್ವಾಮಿ, ನೀವು ಭೂತಕಾಲವನ್ನು ಮನದಲ್ಲಿ ಕಂಡಿರ?, ರಾಮಕೃಷ್ಣಯ್ಯ ಮಾಸ್ತರು ಅನ್ನುವ ಹೆಸರು, ನಮ್ಮ ತಂದೆ ಬಾಲಕೃಷ್ಣಯ್ಯ ಎನ್ನುವ ಹೆಸರು ನಿಮಗೆ ಹೇಗೆ ತಿಳಿಯಿತು"


ಹೌದೆ, ನಾನು ಈಗ ಭೂತಕಾಲವನ್ನು ನೋಡಿದೆನ!!.


ನನಗೆ ಆಶ್ಚರ್ಯವಾಯಿತು, ಇಲ್ಲಿಯವರೆಗು ಅದೇನೊ ಹನ್ನೆರಡು ವರುಷಗಳ ಹಿಂದೆ ಗುರುಗಳು ಕೊಟ್ಟ  ಶಕ್ತಿಯನ್ನು ನಾನು ಪರೀಕ್ಷೆ ಸಹ ಮಾಡಲು ಹೋಗಿರಲಿಲ್ಲ, ಹಾಗಿರುವಾಗ ಈಗ ತಾನಾಗಿಯೆ ಭೂತಕಾಲ ನನ್ನೆದುರು ಸುಳಿದುಹೋಗಿದೆ ಅಂದರೆ, ಗುರುಗಳು ಹರಿಸಿ ಕೊಟ್ಟಿರುವ ಶಕ್ತಿ ಕೆಲಸ ಮಾಡಿದೆ ಅನ್ನಿಸಿತು. ಈ ಸ್ಥಳದ ಪ್ರಭಾವ ನನ್ನ ಮನಸಿನ ಮೇಲೆ ಕೆಲಸ ಮಾಡಿರಬಹುದು ಅನ್ನಿಸಿತು. ನಾನು ಮೌನವಾಗಿದ್ದೆ.  ಶ್ರೀನಿವಾಸನ ತಾಯಿ ಸಹ ಚಕಿತರಾದಂತೆ ಇತ್ತು,
ಶ್ರೀನಿವಾಸ ಮತ್ತೆ ನುಡಿದ
"ನಿಮ್ಮ ಮಾತು ನಿಜ ಸ್ವಾಮಿ,  ರಾಮಕೃಷ್ಣಯ್ಯ ಎನ್ನುವ ಮಾಸ್ತರರಿಂದ ಪಡೆದಿದ್ದು ಈ ಮನೆ, ನಮ್ಮ ತಂದೆ ವ್ಯಾಪಾರದ ಜೊತೆ, ಆಸ್ತಿ ಅಡಿವಿರಿಸಿಕೊಂಡು ಸಾಲ ಕೊಡುವ ವ್ಯವಹಾರ ಸಹ ಮಾಡುತ್ತಿದ್ದರು. ರಾಮಕೃಷ್ಣ ಎನ್ನುವ ಮಾಸ್ತರರು ಕಟ್ಟಿದ ಮನೆ ಇದು, ಹೊಸ ಮನೆ ಕಟ್ಟಿ ವರ್ಷ ಕೂಡ ಅವರು ಅದರಲ್ಲಿ ಇರಲಿಲ್ಲವೇನೊ, ಅವರ ಕಷ್ಟಗಳೊ ಏನೊ ತಿಳಿಯದು, ಆದರೆ ಅವರು ನಮ್ಮ ತಂದೆಯಿಂದ ಪಡೆದ ಸಾಲದ ಹಣವಾಗಲಿ ಅದರ ಬಡ್ಡಿಯನ್ನಾಗಲಿ ಕೊಟ್ಟಿರಲಿಲ್ಲ ಎನ್ನುವುದು ಸತ್ಯ. ಕಡೆಗೊಮ್ಮೆ ಯಾವುದು ಮಾತನಾಡದೆ, ಆತ ತನ್ನ ಮನೆಯನ್ನು ಅಪ್ಪನ ಹೆಸರಿಗೆ  ಕ್ರಯಪತ್ರ ಮಾಡಿಕೊಟ್ಟು, ತನ್ನ ಸಾಲ ತೀರಿತು ಎಂದು ಕೈಬೀಸಿ ಹೊರಟೆ ಹೋದರು, ಮಾರುಕಟ್ಟೆಯ ದರಕ್ಕಿಂತ ಕಾಲು ಬಾಗ ಹಣದಲ್ಲಿ ಅಪ್ಪ ಮನೆಯನ್ನು ಹೊಡೆದು ಬಿಟ್ಟಿದ್ದರು ಎಂದು ಅಕ್ಕಪಕ್ಕದ ಜನರೆಲ್ಲ ಆಡುವುದು ಬಾಲಕನಾಗಿದ್ದ ನನ್ನ ಕಿವಿಗೆ ಬಿದ್ದಿತ್ತು. ನಾನು ಅದನ್ನು ಅವರ ಎದುರಿಗೆ ಒಂದು ಸಾರಿ ಎತ್ತಿ ಆಡಿ ಅದು ಅನ್ಯಾಯ ಎಂದು ವಾದಿಸಿ, ಅವರಿಂದ ಏಟು ಸಹ ತಿಂದಿದ್ದೆ"


ನಾನು ಈಗ ಸುಮ್ಮನೆ ಶ್ರೀನಿವಾಸನ ತಾಯಿ ಬಾಗ್ಯಮ್ಮನತ್ತ ನೋಡಿದೆ, ಆಕೆಯ ಕಣ್ಣಲ್ಲಿ ನೀರು ತುಂಬುತ್ತಿತ್ತು


"ನೋಡಿ ಸ್ವಾಮಿ ನನ್ನ ಹಣೆ ಬರಹ, ಆಗ ನನ್ನ ಗಂಡನಿಗು , ಮಗನಿಗು ಆಗಿಬರಲ್ಲ ಎಂದು ಕಣ್ಣೀರು ಸುರಿಸಿದೆ, ಈಗ ಮಗನಿಗು ಮೊಮ್ಮಗನಿಗೂ ಆಗಿಬರಲ್ಲ ಎಂದು ದುಃಖಪಡುವೆ, ಒಟ್ಟಿನಲ್ಲಿ ಇದೇ ನನ್ನ ಹಣೆ ಬರಹವಾಯಿತು, ಏಕೊ ಈ ನೆಲ , ಆಸ್ತಿ, ಮನೆ ಎಲ್ಲವು ಬೇಸರವೆನಿಸುತ್ತೆ, ಎಲ್ಲವನ್ನು ತೊರೆದು ಎಲ್ಲಿಯಾದರು ಹೊರಟುಹೋಗಬೇಕು ಆದರೆ ಎಲ್ಲಿಗೆ ಎಂದು ಹೋಗಲಿ ಹೇಳಿ?"


ನಾನು ನಿದಾನವಾಗಿ ನುಡಿದೆ
"ಬೇಸರ ಪಡಬೇಡಮ್ಮ, ಎಲ್ಲವು ಕಾಲಕ್ಕೆ ತಕ್ಕಂತೆ ನಡೆಯುತ್ತ ಇರುತ್ತೆ ಅದರಲ್ಲಿ ನಾವು ಯಾರು ಹೇಳಿ, ಈ ಆಸ್ತಿ ಮನೆ ನೆಲ ಎಲ್ಲವು ಋಣ ಇರುವರಿಗೆ ಕೈ ದಾಟುತ್ತಲೆ ಇರುತ್ತದೆ, ಇಂದು ನನ್ನದು ಅಂದುಕೊಳ್ಳುವ  ಮನೆ ಹಿಂದೆ ಯಾರದೊ ಆಗಿತ್ತು, ಹಾಗೆ ಮುಂದೆ ಇನ್ಯಾರದೊ   ಆಗಿರುತ್ತದೆ, ನಡುವೆ ನಾವು ಒಬ್ಬರು ಅನ್ನುವದನ್ನು ಮರೆಯುತ್ತೇವೆ, ಅಹಂಕಾರಪಡುತ್ತೇವೆ ಅಷ್ಟೆ"


ಅಷ್ಟರಲ್ಲಿ ಒಳಗಿನಿಂದ ಶ್ರೀನಿವಾಸನ ಪತ್ನಿ ಲಕ್ಷ್ಮೀ ಬಂದರು, ಪತಿಯತ್ತ ತಿರುಗಿ
"ಮಾತನಾಡುತ್ತ ಕುಳಿತುಬಿಟ್ಟಿರ, ಸ್ವಾಮಿಗಳಿಗೆ ಮಲಗುವ ಏರ್ಪಾಡು ಮಾಡಬೇಡವೆ, ಒಳಗಿನ  ಅತಿಥಿಗಳ ಕೋಣೆಯಲ್ಲಿ ಅವರು ಮಲಗಲಿ ಅಲ್ಲವೆ. ಅವರಿಗು ಆಯಾಸ ಆಗಿದ್ದಿತು, ನಾನು ಅಲ್ಲಿ ಏರ್ಪಾಡು ಮಾಡಿರುವೆ" ಎಂದರು.


ಶ್ರೀನಿವಾಸ ತನ್ನ ಪತ್ನಿಯತ್ತ ತಿರುಗಿ
"ಸರಿ ಒಳ್ಳೆಯದಾಯಿತು, ನೀನು ಕಾಯಬೇಡ ಹೋಗಿ ಮಲಗಿಬಿಡು, ನಾವು ಇನೊಂದೈದು ನಿಮಿಷ ಮಲಗಿಬಿಡುತ್ತೇವೆ " .


  ಆದರೆ ಶ್ರೀನಿವಾಸ ದ್ವನಿ ಕೇಳುವಾಗ ಮಲಗುವದಕ್ಕಿಂತ ಇನ್ನು ಸ್ವಲ್ಪ ಕಾಲ ಮಾತನಾಡಬೇಕೆಂಬ ಹಂಬಲ ಕಾಣಿತ್ತಿತ್ತು. ನನಗು ಏಕೊ ನಿದ್ದೆ ಬರುವ ಲಕ್ಷಣವಿರಲಿಲ್ಲ.


ಬಹುಷಃ ಇದೆ ಮನೆಯ ಪ್ರಭಾವ ಎನ್ನಿಸುತ್ತೆ. ಹೊರಗೆ ಬಯಲಿನಲ್ಲಿ, ಊಟಮಾಡಿ ಯಾವ ಅನುಕೂಲವು ಇಲ್ಲದೆಯು ಕಲ್ಲಿನ ಮೇಲೆ ಮಲಗಿದರು ನಿದ್ದೆ ಆವರಿಸುತ್ತ ಇತ್ತು ಇಷ್ಟು ದಿನ, ಆದರೆ ಈಗ ಮನೆಯೊಳಗೆ ಸುಖಕರವಾದ ಊಟವು ಆಗಿ, ಸುರಕ್ಷಿತವಾಗಿ ಮಲಗಲು ಜಾಗವಿದ್ದು, ಕಲ್ಲಿನ ಬದಲಿಗೆ ಮೆತ್ತನೆಯ ಮಂಚದ ಹಾಸಿಗೆ ಸಿದ್ದವಿದ್ದರು ನಿದ್ದೆ ಮಾತ್ರ ಸುಳಿಯುತ್ತಿಲ್ಲ, ಇದೆ ಪ್ರಕೃತಿಯ ವಿಚಿತ್ರ .  


ನನಗೆ ಅತ್ತ ನಿದ್ದೆಯು ಅಲ್ಲ ಎಚ್ಚರವು ಅಲ್ಲ ಅನ್ನುವ ಮನಸಿನ ಸ್ಥಿಥಿ, ಯಾವುದೊ ದ್ಯಾನದಲ್ಲಿರುವಂತೆ ಅನ್ನಿಸುತ್ತಿತ್ತು, ಮನಸಿಗೆ, ಎದುರಿಗೆ ಕುಳಿತಿರುವ ಶ್ರೀನಿವಾಸನಾಗಲಿ, ಅವನ ತಾಯಿಯಾಗಲಿ ಮಾತನ್ನೆ ಆಡದೆ ನನ್ನತ್ತ ನೋಡುತ್ತಿದ್ದರು, ನನ್ನ ಕಣ್ಣು ಮುಚ್ಚುತ್ತ ಇರುವಂತೆ ಮನ ಯಾವುದೊ ದೃಷ್ಯದತ್ತ ಹರಿದಿತ್ತು.......



 

ಕತೆ: ಶಾಪ [ಬಾಗ - ೩]

ನೋಡಿದರೆ ಖಾಲಿ ಜಾಗ, ಎದುರು ರಾಮಕೃಷ್ಣಯ್ಯ ಹಾಗು  ಅವರ ಪತ್ನಿ ಜಾನಕಿ ನಿಂತಿದ್ದರು, ಅವರ ಎರಡು ವರ್ಷದ ಮಗು  ಅಲ್ಲೆಲ್ಲ ಓಡಿಯಾಡುತ್ತ ಆಡಿಕೊಳ್ಳುತ್ತಿತ್ತು.
"ನೋಡು  ಈ ಸೈಟ್ ನಮ್ಮದಾಗುವ ಹೊತ್ತಿಗೆ ಸಾಕು ಸಾಕಾಯಿತು, ಎಂತ ಕಾಲ ಬಂದಿತು, ನನ್ನಿಂದ ಅಡ್ವಾನ್ಸ್ ಹಣವನ್ನು ಪಡೆದ   ಅ ದಲ್ಲಾಳಿ ನಂತರ ಸೈಟ್ ಬೇರೆ ಯಾರಿಗೊ ಆಗಿದೆ ಅನ್ನುತ್ತಾನಲ್ಲ, ಹಾಗೆಂದು ಇಲ್ಲಿ ಸೈಟ್ಗಳಿಗೆ ಅಂತಾ ಬೆಲೆ ಏನು ಇಲ್ಲ, ನಮ್ಮ ಹತ್ತಿರ ನಾಟಕವಾಡಿ ಸೈಟಿನ ಬೆಲೆ ಏರಿಸಲು ಪ್ರಯತ್ನಿಸಿದ, ಹೇಗೊ ಎಲ್ಲ ಸರಿ ಹೋಯಿತು, ನಮ್ಮ ಹೆಸರಿಗೆ ರಿಜಿಷ್ಟರ್ ಆಯಿತು"

ಜಾನಕಿ ನುಡಿದರು

"ಸರಿ ಸೈಟ್ ಏನೊ ಆಯಿತು ಅಂತ ಇಟ್ಟುಕೊಳ್ಳಿ, ಆದರೆ ಸ್ವಂತ ಮನೆ ಕಟ್ಟುವ ಆಸೆ ಅಂದರೆ ಅಷ್ಟು ಸುಲುಭವೆ, ಈಗ ಮನೆ ಕಟ್ಟಲು ಏನು ಮಾಡುವಿರಿ, ನನಗಂತು ಬಾಡಿಗೆ ಮನೆ ಸಹವಾಸ ಸಾಕಾಗಿದೆ, ಆದಷ್ಟು ಬೇಗ ಮನೆ ಕಟ್ಟಿ ಇಲ್ಲಿ ಬಂದು ತಳ ಊರಿದರೆ ಸಾಕು ಅನ್ನಿಸುತ್ತೆ, ಅಂದ ಹಾಗೆ ಈ ಸೈಟನ ಹಳೆಯ ಓನರ್ ಯಾರು, ನೀವು ಅವನ ಜೊತೆ ಮಾತನಾಡಲೆ ಇಲ್ಲವೆ ?"  ಅಂದರು.

"ಸೈಟಿನ ಓನರ್  ಎಲ್ಲಿ ಬಂತು, ಇಲ್ಲಿ ಯಾವುದೊ ಜಮೀನುಗಳಿದ್ದವು,   ಈ ಊರಿನಲ್ಲಿ ಇದ್ದಾನಲ್ಲ, ನಾಗರಾಜ ಶೆಟ್ಟಿ ಅಂತೆ ಹೆಸರು, ಅವನು ಜಮೀನುಗಳನ್ನು ಖರೀದಿಸಿ, ಅದನ್ನು ಸೈಟುಗಳನ್ನಾಗಿ ಮಾಡಿ, ದಾಖಲೆ ಎಲ್ಲ ಮಾಡಿ, ಹೆಚ್ಚಿನ ಹಣಕ್ಕೆ ಮಾರಿದ, ಅವರಿಗೆ ಈ ದಲ್ಲಾಳಿಗಳ ಸಹಾಯ, ನಮ್ಮಂತವರನ್ನು ಹುಡುಕಿ ಸೈಟ್ ಮಾರುತ್ತಾರೆ, ಹಲವು ಕೈ ದಾಟುವ ಹೊತ್ತಿಗೆ, ರೇಟು ಸಹ ಜಾಸ್ತಿಯೆ ಆಗಿರುತ್ತದೆ ಬಿಡು"

"ಅದೆಲ್ಲ ಆಯಿತು, ಈಗ ಮುಂದಿನ ಕತೆ ಹೇಳಿ, ಯಾವಾಗ ಪ್ರಾರಂಬ ಮಾಡುವುದು, ವಿಜಯದಶಮಿ ಎಂದರೆ ಯಾವ ಮಹೂರ್ತವು ನೋಡಬೇಕಿಲ್ಲ ಅನ್ನುವರಲ್ಲವೆ, ಮುಂದಿನ ತಿಂಗಳು ವಿಜಯದಶಮಿ ಗುದ್ದಲಿ ಪೂಜೆ ಮಾಡಿಬಿಡೋದು, ಮನೆ ಪ್ರಾರಂಬಿಸೋದು" ಆಕೆಯ ದ್ವನಿಯಲ್ಲಿ ಎಂತದೊ ಸಂಭ್ರಮ.
ಆತ ಮಾತ್ರ ಅಷ್ಟು ಹುರುಪಿನಿಂದ ಇರಲಿಲ್ಲ
"ನೋಡಬೇಕಲ್ಲೆ, ನನ್ನ ಹತ್ತಿರ ಇರುವ ಹಣದಲ್ಲಿ ತಳಪಾಯ ಸಹ ಆಗಲ್ಲ, ಬ್ಯಾಂಕಿನಲ್ಲಿ ನನಗೆ ಬರುವ ಸಂಬಳಕ್ಕೆ ಕೊಡುವ ಸಾಲ ಏತಕ್ಕು ಸಾಲಲ್ಲ, ಹೊರಗೆ ಸಹ ಸಾಲ ಮಾಡಬೇಕು, ನನ್ನ ಸ್ನೇಹಿತ ರಮೇಶ ಹೇಳಿದ್ದಾನೆ, ಅದ್ಯಾರೊ ಬಾಲಕೃಷ್ಣಯ್ಯ ಅನ್ನುವರು ಪತ್ರದ ಆಧಾರದಲ್ಲಿ ಸಾಲ ಕೊಡಲು ಒಪ್ಪಿದ್ದಾರಂತೆ , ನೋಡಬೇಕು, ಇದೆ ಸೈಟನ್ನೆ ಅವರಿಗೆ ಅಧಾರವಾಗಿ ಇಡೋದು, ಸಾಲ ಪಡೆಯೋದು, ಆಮೇಲೆ ಸಾಲ ತೀರಿಸೋದು ಇದ್ದೆ ಇದೆ"  
ಕಡೆಯಲ್ಲಿ ಅವರ ದ್ವನಿ ಇಳಿದಿತ್ತು.
...
ರಾಮಕೃಷ್ಣಯ್ಯನವರ ಪ್ರಯತ್ನ ಸಫಲವಾಗಿತ್ತು, ವರ್ಷ ಕಳೆಯುವದರಲ್ಲಿ ಆ ಜಾಗದಲ್ಲಿ ಮನೆ ಎದ್ದು ನಿಂತಿತ್ತು, ಸೈಟಿನಲ್ಲಿ ಪೂರ್ತಿ ಕಟ್ಟದೆ, ಹಿಂಬಾಗದಲ್ಲಿ, ಒಂದು ರೂಮಿನ ಸಣ್ಣ ಮನೆ ಇವತ್ತೆಲ್ಲ ಐದು ಆರು ಚದುರ ಇರಬಹುದೇನೊ. ಅದಕ್ಕೆ ಬ್ಯಾಂಕಿನ, ಬಾಲಕೃಷ್ಣಯ್ಯನವರ ಸಾಲವು ಸೇರಿತ್ತು.   

ಮನೆ ಕಟ್ಟಿದ ಸಂಭ್ರಮ ದಂಪತಿಗಳಿಗೆ, ಗೃಹ ಪ್ರವೇಶ ಮಾಡಿ ನೆಂಟರನ್ನೆಲ್ಲ ಕರೆದಿದ್ದರು, ಮನೆಯ ಮುಂದೆ ಪೆಂಡಾಲ್. ಒಳಗೆ ಹೋಮದ ಹೊಗೆ,  ಅಕ್ಕ ಪಕ್ಕ ಇನ್ನು ಮನೆ ಕಡಿಮೆ, ಸುತ್ತಲು ಕಾಂಪೋಂಡ್ ಹಾಕಿಸಿದ್ದರು, ಮನೆ ಪೂರ್ತಿ ಹಿಂದಕ್ಕೆ ಕಟ್ಟಿದ್ದು, ಹಿಂದೆ ಜಾಗ ಬಿಟ್ಟಿರಲಿಲ್ಲ . ಇವರ ಮನೆ ಹಿಂಬಾಗ   ಮತ್ತೊಂದು ಮನೆ ಕಟ್ಟಲು ತಯಾರಿ ನಡೆದಿತ್ತು, ಆಗಲೆ ಗೋಡೆ ಎದ್ದಿದ್ದು,  ಕಬ್ಬಿಣ. ಜಲ್ಲಿ ಎಲ್ಲ ತಂದು ಹರಡಿದ್ದರು. ರಾಮಕೃಷ್ಣರ ಮನೆ ಮೇಲೆ ನಿಂತರೆ ಹಿಂಬಾಗ ಸ್ವಷ್ಟವಾಗಿ ಕಾಣುತ್ತಿತ್ತು.

ಬಂದ ನೆಂಟರೆಲ್ಲರನ್ನು ಮಾತನಾಡಿಸುತ್ತ ಜಾನಕಿ, ರಾಮಕೃಷ್ಣಯ್ಯ ಓಡಾಡುತ್ತಿದ್ದರು, ಜಾನಕಿಗೆ ತಮ್ಮ ಮಗುವಿನ ನೆನಪು ಬಂದಿತು, ಎಲ್ಲಿ ಹೋದ ಇವನು ಎಷ್ಟು ಹೊತ್ತಾದರು ಕಾಣುತ್ತಿಲ್ಲ. ಅಲ್ಲಿ ರಸ್ತೆಗಳು ಇಲ್ಲ ಹಾಗಾಗಿ ವಾಹನಗಳ ಓಡಾಟದ ಭಯವು ಇಲ್ಲ ಹಾಗಾಗಿ ಮಕ್ಕಳೆಲ್ಲ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದರು.
  ಎಲ್ಲರು ಊಟಕ್ಕೆ ಕುಳಿತಾಗ ಆಕೆ ಮಗನನ್ನು ಹುಡುಕಿದಳು, ಕಾಣಲೆ ಇಲ್ಲ, ಜೊತೆಯಲ್ಲಿದ್ದ ಹುಡುಗರಿಗು ಅವನು ಎಲ್ಲಿ ಎಂದು ತಿಳಿದಿಲ್ಲ. ಊಟ ಮುಗಿಯುತ್ತ ಬರುತ್ತಿದ್ದಂತೆ ರಾಮಕೃಷ್ಣಯ್ಯ ಹಾಗು ಜಾನಕಿ ಇಬ್ಬರು ತಮ್ಮ ಮಗನನು ಹುಡುಕಿದರು, ಇನ್ನು ನಾಲಕ್ಕು ವರುಷ ಆಗಿಲ್ಲದ ಚಿಕ್ಕ ಮಗು ಅದು ಎಲ್ಲಿ ಹೋದಿತು.
ಮಗುವಿನ ಜೊತೆ ಇದ್ದ ಪುಟ್ಟ ಹುಡುಗನೊಬ್ಬ ನುಡಿದ, "ಆಗಲೆ ಅವನು ಮನೆಯ ಮೇಲೆ ಹೋದ" ಎಂದು. ದಂಪತಿಗಳು ಪಕ್ಕದಲ್ಲಿದ್ದ ಮೆಟ್ಟಲಿನ ಮೂಲಕ ಮೇಲೆ ಬಂದರು, ಅಲ್ಲಿಯು ಮಗನ ಸುಳಿವಿಲ್ಲ, ಸುತ್ತಲಿನ ನೋಟ ಸ್ವಷ್ಟವಾಗಿ ಕಾಣುತ್ತಿದೆ,  ಮನೆಗಳು ಇಲ್ಲ ಹಾಗಾಗಿ ಮಗು ಎಲ್ಲಿಹೋಗಿದ್ದರು ಕಾಣಬೇಕಿತ್ತಲ್ಲ, ಎನ್ನುತ ಹಾಗೆ ರಾಮಕೃಷ್ಣಯ್ಯ ಮನೆಯ ಹಿಂಬಾಗದ ತುದಿಗೆ ಬರುತ್ತ ಅಲ್ಲಿ ಮನೆ ಕಟ್ಟುತ್ತಿದ್ದ ಸೈಟಿನತ್ತ ಬಗ್ಗಿ ನೋಡಿದರು. ಅವರ ಉಸಿರು ನಿಂತಂತೆ ಆಯಿತು, ತಮ್ಮ ಮಗುವೆ ಅದು, ಕೆಳಗೆ ಕಬ್ಬಿಣದ ಮೇಲೆ ಬಿದ್ದಿದ್ದೆ, ಅಲುಗಾಡುವುದು ಕಾಣುತ್ತಿಲ್ಲ. "ಜಾನಕಿ" ಎಂದು ಕೂಗಲು ಹೋದವರು, ಬೇಡ ಅನ್ನುತ್ತ ಕೆಳಗಿಳಿದು ಬಂದರು, ಹಿಂದೆಯೆ ಅವರ ಪತ್ನಿ.
ಮನೆಯ ಹಿಂಬಾಗಕ್ಕೆ ತೆರಳಿದರು, ಕಷ್ಟಪಟ್ಟು ಹತ್ತಿರ ಹೋಗಿ ನೋಡಿದರೆ, ಅವರ ಮಗ ಮೇಲಿನಿಂದ ಕಂಬಿಗಳ ಮೇಲೆ ಬಿದ್ದಿದ್ದ, ಬಗ್ಗಿಸಿದ್ದ ಕಂಬಿಯ ಸರಳು ಮಗುವಿನ ಹೊಟ್ಟೆಯಲ್ಲಿ ತೂರಿ, ಬೆನ್ನಲ್ಲಿ ಹೊರಬಂದಿತ್ತು, ನೋಡುವಾಗಲೆ ತಿಳಿಯಿತು. ಮಗು ಸತ್ತು ಬಹಳ ಕಾಲವಾಗಿತ್ತು.

ಗೃಹ ಪ್ರವೇಶದ ಮನೆ ಮರಣದ ಮನೆಯಾಗಿ ಬದಲಾಯಿತು. ಎಲ್ಲರ ಕಣ್ಣಲ್ಲಿ ನೀರು. ಗಂಡ ಹೆಂಡತಿ ಪೂರ ಇಳಿದುಹೋದರು, ಬಂದವರಿಗು ಏನು ಸಮಾದಾನ ಹೇಳುವದೆಂದು ತಿಳಿಯದು. ಕಡೆಗೆ ಎಲ್ಲರು ಅಸಹಾಯಕರು, ರಾಮಕೃಷ್ಣನ ಜೊತೆ ಕೆಲವರು ಹೋಗಿ, ಮಗುವನ್ನು ಮಣ್ಣು ಮಾಡಿ ಬಂದರು.

ಹೊಸ ಮನೆ ಕಟ್ಟಿದ ಸಂಬ್ರಮ ಇಬ್ಬರಲ್ಲು ಇಳಿದು ಹೋಯಿತು. ಇದ್ದ ಒಬ್ಬನೆ ಮಗನು ಗೃಹಪ್ರವೇಶದ ದಿನವೆ ಸತ್ತಿದ್ದು, ಅವರಿಗೆ ಅದನ್ನು ತಡೆಯುವುದು ಕಷ್ಟವೆನಿಸಿತ್ತು. ರಾಮಕೃಷ್ಣಯ್ಯ ಎಲ್ಲದರಲ್ಲಿ ಆಸಕ್ತಿ ಕಳೆದುಕೊಂಡರು. ಬ್ಯಾಂಕಿನ ನೋಟಿಸಿನ ಜೊತೆ ಜೊತೆಗೆ   ಬಾಲಕೃಷ್ಣಯ್ಯನ ಸಾಲದ ಹೊರೆ. ಜಾನಕಿಯಂತು
"ನಾನು ಈ ಮನೆಯಲ್ಲಿ ಇರಲಾರೆ, ನನಗೆ ಮಗುವಿನ ನೆನಪು ಕಾಡುತ್ತೆ" ಅಂತ ಹಟ ಹಿಡಿದರು.
ವರ್ಷ ಕಳೆಯುವುದೊರಳಗಾಗಿ, ತಾವು ಆಸೆಯಿಂದ ಕಟ್ಟಿಸಿದ ಮನೆಯ ಬಗ್ಗೆ ಆಸೆಯನ್ನೆ ಕಳೆದುಕೊಂಡರು. ಮನೆಯ ಹಂಗೆ ಬೇಡ ಎನ್ನುವಂತೆ, ಬಾಲಕೃಷ್ಣಯ್ಯನವರ ಬಳಿ ಹೋಗಿ, ತಮಗೆ ಸಾಲ ತೀರಿಸಲು ಆಗುತ್ತಿಲ್ಲ, ಹಾಗಾಗಿ , ಸೈಟು ಹಾಗು ಮನೆ ಮಾರುವನಿದ್ದೇನೆ, ಬೇಕಾದಲ್ಲಿ ನೀವೆ ತೆಗೆದುಕೊಳ್ಳಿ ಎಂದರು.

ಬಾಲಕೃಷ್ಣಯ್ಯವರಿಗೆ ವಿಷಯ ತಿಳಿಯದು ಎಂದೇನಿಲ್ಲ, ಆದರೆ ವ್ಯವಹಾರಸ್ಥರು, ಮನೆಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ವ್ಯಾಪಾರ ಮಾಡಿದರು. ತಮ್ಮ ಮನೆ ಮಾರಿ, ಉಳಿದ ಹಣವನ್ನು ಬ್ಯಾಂಕಿಗೆ ಕಟ್ಟಿದ, ರಾಮಕೃಷ್ಣಯ್ಯ, ನಂತರ ಊರನ್ನೆ ಬಿಟ್ಟು ಹೊರಟು ಹೋದರು..........
ಅಬ್ಬ ಒಂದು ಮನೆಯ ಹಿಂದೆ ಇಂತ ಕತೆಯೆ , ಏಕೊ ನನಗೆ ವೇದನೆ ಅನಿಸಿತು. ಪ್ರತಿ ಸುಖದ ಹಿಂದೆ ಕಷ್ಟವಿರುತ್ತೆ ಅನ್ನುತ್ತಾರೆ, ಆದರೆ ಸರಳ ಮನುಷ್ಯನೊಬ್ಬನ, ಆಸೆಯ ಹಿಂದೆ ಇಂತ ದುಃಖವೆ. ಆಸೆಯೆ ದುಃಖಕ್ಕೆ ಮೂಲ ಅನ್ನುವರು . ಇಲ್ಲಿ ಸ್ವಂತ ಮನೆ ಕಟ್ಟುವ ಅವರ ಆಸೆ ದೊಡ್ಡದೊ, ಅಥವ ಅದಕ್ಕಾಗಿ ಅವರು ತಮ್ಮ ಮಗನನ್ನು ಕಳೆದುಕೊಂಡು, ಮನೆಯನ್ನು ತೊರೆದು ಹೋದ ಅವರ ಕಷ್ಟ ದೊಡ್ಡದೊ.

ನಾನು ಹೇಳಿದ ಕತೆ ಕೇಳುತ್ತ, ಶ್ರೀನಿವಾಸನ ಕಣ್ಣಲ್ಲಿ ನೀರು ತುಂಬಿತು. ದುಗುಡ ತುಂಬಿ  
"ಅಂತಹ ಮನುಷ್ಯರ ಸಂದರ್ಭ ಬಳಸಿ ನಮ್ಮ ಅಪ್ಪ ಈ ಮನೆ ಪಡೆದಿದ್ದು ತಪ್ಪಲ್ಲವೆ ಸ್ವಾಮಿ"
ನಾನು ತುಸು ಚಿಂತಿಸಿ ಅಂದೆ
"ಶ್ರೀನಿವಾಸ, ಮನುಷ್ಯನ ದುಃಖ ಸಂತೋಷವೆ ಬೇರೆ, ಅವನ ವ್ಯವಹಾರವೆ ಬೇರೆ ಅಲ್ಲವೆ, ಅವರು ಕಷ್ಟದಲ್ಲಿದ್ದರು ಅನ್ನುವುದು ನಿಜ, ಆದರೆ ನಿಮ್ಮ ತಂದೆಯವರ ಸಾಲ ತೀರಿಸಲು ಅವರು ಮನೆಯನ್ನು ಮಾರಿ ಹೋದರು. ಮಾಡಿದ ಸಾಲ ತೀರಿಸುವುದು ಮನುಷ್ಯನ ಕರ್ತವ್ಯ ಅಲ್ಲವೆ"
ಶ್ರೀನಿವಾಸ  ಹೇಳಿದ
"ಇರಬಹುದು ಸ್ವಾಮಿ, ಆದರೆ ಅಂತಹ ಸಮಯದಲ್ಲಿ ನಮ್ಮ ತಂದೆ ವ್ಯವಹಾರ ಕುಶಲತೆ ತೋರಿದ್ದಾರೆ ಅಲ್ಲವೆ, ನ್ಯಾಯವಾದ ಬೆಲೆಗೆ ಪಡೆಯದೆ, ಕಡಿಮೆ ಬೆಲೆಗೆ ಪಡೆದಿದ್ದಾರೆ, ಅಲ್ಲದೆ ಬೇಕು ಅಂದಿದ್ದರೆ, ಸಾಲವನ್ನು ನಿಧಾನವಾಗಿ ತೀರಿಸಿ ಆನ್ನಬಹುದಿತ್ತಲ್ಲವೆ?"

ನಾನು ಹೇಳಿದೆ

"ಅದು ವ್ಯವಹಾರ ಏನು ಹೇಳಲಾದಿತು, ಅವರ ಸ್ವಭಾವ ಬಿಡಿ. ಆದರೆ ನನಗೆ ಆಶ್ಚರ್ಯ ಅನಿಸುವುದು, ಪ್ರತಿ ಜಾಗಕ್ಕು ಇಂತಹ ಎಷ್ಟೋ ಇತಿಹಾಸಗಳಿರುತ್ತವೆ, ಕನಸುಗಳಿರುತ್ತವೆ, ಕತೆಗಳಿರುತ್ತವೆ. ಬಹುಷಃ ನಿಮಗೆ ಈ ಜಾಗದ ಋಣವಿತ್ತೇನೊ ರಾಮಕೃಷ್ಣಯ್ಯ ಕಟ್ಟಿದ ಮನೆ ನಿಮಗೆ ಸೇರಿತು ಅನ್ನಿಸುತ್ತೆ"

ಶ್ರೀನಿವಾಸರ ತಾಯಿ ನುಡಿದರು,
"ನನಗೆ ನಮ್ಮವರ ವ್ಯವಹಾರಗಳು ತಿಳಿಯದು, ಆದರೆ ಕೊಂಡಾಗ ಮನೆ ಹೀಗಿರಲಿಲ್ಲ, ಹಿಂದಿನ ಅಡುಗೆಮನೆ, ಊಟದ ಮನೆ, ಬಾತ್ ರೂಮ್ ಇದೆಯಲ್ಲ ಅಷ್ಟೆ ಇದ್ದದ್ದು, ಆಮೇಲೆ ಇವರು, ಖಾಲಿ ಇದ್ದ ಜಾಗವನ್ನು ಸೇರಿಸಿ ದೊಡ್ಡ ಮನೆ ಮಾಡಿದರು. ಮೇಲೆ ಒಂದು ರೂಮು ಹಾಕಿಸಿದರು. ಈ ಮನೆಯಲ್ಲಿ ಬಂದು ನಿಂತೆವು. ಅವರಿಗು ಈ ಮನೆಯ ಋಣ ಇದ್ದದ್ದು ಅಷ್ಟರಲ್ಲೆ ಇದೆ. ಐವತೈದು ವರ್ಷ ಸಾಯುವ ವಯಸ್ಸೇನು ಅಲ್ಲ, ಈ ಮನೆಗೆ ಬಂದು ಐದಾರು ವರುಷಗಳಾಗಿತ್ತು ಅಷ್ಟೆ ಅನ್ನಿಸುತ್ತೆ, ಹಾರ್ಟ್ ಅಟ್ಯಾಕ್ ಹೆಸರಲ್ಲಿ ದೇವರು ಅವರನ್ನು ಕರೆಸಿಕೊಂಡ. ಶ್ರೀನಿವಾಸನಿಗೆ ಮದುವೆ ಆಯಿತು, ಇಪ್ಪತ್ತು ವರ್ಷಗಳು ದಾಟಿದವು, ನಾನು ಮಾತ್ರ ಇಲ್ಲಿಯೆ ಇದ್ದೇನೆ"
ಬೇಸರದ ಸ್ವರ  ಆಕೆಯದು.
"ಎಲ್ಲ ಪ್ರಕೃತಿಯ ಇಚ್ಚೆ ಅಲ್ಲವೆ ಅಮ್ಮ , ಯಾರ ಹಿಡಿತಕ್ಕು ಸಿಗದೆ ನಡೆಯುತ್ತ ಇರುತ್ತೆ ಅಷ್ಟೆ" ಎಂದೆ
ಮತ್ತೆ ಎಂತದೋ ಮೌನ .

ಶ್ರೀನಿವಾಸ ಮತ್ತೆ ಕುತೂಹಲದ ದ್ವನಿಯಲ್ಲಿ ನುಡಿದ

"ಹಾಗಾದರೆ ಸ್ವಾಮಿ, ರಾಮಕೃಷ್ಣಯ್ಯನವರು ಈ ಮನೆ ಕಟ್ಟುವ ಮೊದಲು ಈ ಜಾಗದಲ್ಲಿ ಯಾರಿದ್ದರು ತಿಳಿಯಬಹುದು ಅಲ್ಲವೆ, ಅಂದರೆ ಮೂವತ್ತು , ನಲವತ್ತು ವರುಷ ಹಿಂದಕ್ಕೆ ಹೋಗಬೇಕೆನೊ"  

"ಯಾರಿರಲು ಸಾದ್ಯ, ಆಗೆಲೆ ಹೇಳಿದ್ದರಲ್ಲ, ಯಾರದೊ ಜಮೀನು, ಸೈಟು ಮಾಡಿದ್ದಾರೆ ಅಂತ"
ಬಾಗ್ಯಮ್ಮ ನುಡಿದರು.

ನನ್ನ ಮನ ಮತ್ತೆ ಎಂತದೋ ಭಾವಾವೇಶಕ್ಕೆ ಒಳಗಾಗುತ್ತಿತ್ತು.........
ಕಣ್ಣೆದುರು ಏನೇನೊ ಚಿತ್ರಗಳು..

ನಡು ಮದ್ಯಾನ್ಹ  ರೈತ ವೆಂಕಟ ಮರದ ಕೆಳಗೆ ಕುಳಿತಿದ್ದ, ಅವನ ತಾಯಿ ತರುವ ಊಟಕ್ಕೆ ಕಾಯುತ್ತಿದ್ದ. ಬೆಳಗ್ಗೆ ಬೆಳಗ್ಗೆ ಎದ್ದು ಮನೆ ಬಿಟ್ಟಿದ್ದು, ಬೆಳಗಿನಿಂದ ಹೊಲವನ್ನು ಹಸನು ಮಾಡಿದ್ದು, ನೆತ್ತಿಯ ಮೇಲಿನ ಬಿಸಿಲು ಎಲ್ಲವು ಸೇರಿ ಯುವಕನಾದರು ಆಯಾಸ ಅನ್ನಿಸುತ್ತಿತ್ತು ಅವನಿಗೆ. ಹಾಗೆ ಮರದ ಬುಡಕ್ಕೆ ಒರಗಿ ಕಣ್ಣು ಮುಚ್ಚಿದ. ದೂರದಿಂದ ಯಾರೊ ಬರುತ್ತಿರುವ ಹೆಜ್ಜೆ ಸಪ್ಪಳ ಕೇಳಿಸಿತು. ನೋಡಿದರೆ ಅವನ ತಾಯಿ, ಜೊತೆಯಲ್ಲಿ ಅವನ ಅಕ್ಕನ ಮಗಳು ದೇವಕಿ. ಎದ್ದು ಕುಳಿತ.
"ಇವಳು ಯಾವಾಗ ಬಂದಳಮ್ಮ"  ನಗುಮುಖದಿಂದ ಪ್ರಶ್ನಿಸಿದ.
"ಬೆಳಗ್ಗೆ ಬಸ್ಸಿಗೆ ಬಂದಳಪ್ಪ, ಬಿಸಿಲು ಬೇಡ ಬಿಡು ಅಂದರೆ ಕೇಳದೆ ನನ್ನ ಜೊತೆ ಬಂದಿದ್ದಾಳೆ, ನಿನಗೆ ಊಟ ಕೊಡಲು" ತಾಯಿ ನುಡಿದಳು.

ದೇವಕಿಯ ಮುಖದಲ್ಲಿ ನಾಚಿಕೆ. ಬಿಸಿಲಿನಲ್ಲಿ ನಡೆದು ಬಂದು ಬಳಲಿದ ಅವಳ ಮುಖದಲ್ಲಿ ನಾಚಿಕೆ ನೋಡುವಾಗ ವೆಂಕಟನಿಗೆ ಮನದೊಳಗೆ ಖುಷಿ. ಅವನ ಮನದಲ್ಲಿ ಸದಾ ಮಂಡಿಗೆ ತಿನ್ನುತ್ತಿದ್ದ. ಹೇಗಿದ್ದರು ಅಕ್ಕನ ಮಗಳೆ , ಹೊರಗಿನವರಲ್ಲ,  ಅವ್ವನಿಗೆ ತಿಳಿಸಿ, ಕೇಳಿ ಇವಳನ್ನೆ ಮದುವೆ ಆಗಬೇಕು, ಆದರೆ ಮನೆ ಕಡೆ ಎಲ್ಲವು ಒಂದು ಸುಸ್ಥಿಥಿಗೆ ಬರಬೇಕು, ನಂತರವೆ ಮದುವೆ ಎಲ್ಲ ಮಾತು ಎಂದು ಮನದಲ್ಲೆ ಅಂದುಕೊಂಡ.
"ಏಕೊ ಸುಮ್ಮನೆ ಕುಳಿತೆ, ದಿನಾ ಅರಳು ಹುರಿದಂತೆ ಮಾತನಾಡುತ್ತಿದ್ದೆ, ಈದಿನ ಇವಳಿದ್ದಾಳೆ ಎನ್ನುವ ಸಂಕೋಚವ ಸರಿ ಹೋಯಿತು, ಗಂಡುಮಗ ನೀನೆ ನಾಚಿದರೆ ಅವಳಾದರು ಏನು ಬಾಯಿ ಬಿಟ್ಟಾಳು. ನಾಳೆ ಇವಳನ್ನು ಮದುವೆ ಆದಲ್ಲಿ ಇಬ್ಬರು ಏನು ಮಾಡುವಿರಿ, ಹೀಗೆ ಮೌನವಾಗಿ ಕುಳಿತಿರುವಿರ"
ತನ್ನ ಆಸೆಯೆ ಅಮ್ಮನ ಬಾಯಲ್ಲಿ ಬರುತ್ತಲೆ, ವೆಂಕಟ ಸಂತಸ ಪಟ್ಟ, ನನ್ನ ಮನದಲ್ಲಿ ಯೋಚನೆ ಮೂಡಿದ್ದು ಒಳ್ಳೆ ಗಳಿಗೆ ಇರಬೇಕು ಅದಕ್ಕೆ ಅವ್ವನ ಬಾಯಲ್ಲು ಅದೆ ಮಾತು ದೇವರು ಬರಸವ್ನೆ ಅಂದು ಕೊಂಡರು , ಹೊರಗೆ ಮಾತ್ರ,
"ಹೋಗವ್ವ ನೀನು ಏನೇನೊ ಮಾತಾಡ್ತಿಯ, ಸದ್ಯಕ್ಕೆ ಮನೆಕಡೆ ಎಲ್ಲ ಒಂದು ಹದಕ್ಕೆ ಬಂದರೆ ಸಾಕಾಗಿದೆ, ಈಗ ಮದುವೆ ಅಂದರೆ ಅಷ್ಟೆ ಅಂದ. ದೇವಕಿಗು ತನ್ನ ಅಜ್ಜಿ ಹಾಗು ಅತ್ತೆಯಾಗುವ ಅವಳ ಮಾತು ಹಿತ ತಂದಿತು. ಮೌನವಾಗಿದ್ದಳು.
 
"ದೇವಕಿ ನೀನು ವೆಂಕಟನಿಗೆ ಊಟ ಬಡಸುತ್ತ ಇರು, ನಾನು ಅಲ್ಲಿ ಕಾಣಿಸುತ್ತಿದೆಯಲ್ಲ, ಕರಿಹೆಂಚಿನ ಮನೆ ಅಲ್ಲಿ  ಸುಶೀಲ ಇರುತ್ತಾಳೆ, ಒಂದು ಕ್ಷಣ ಮಾತನಾಡಿಸಿ ಬಂದುಬಿಡುವೆ, ಆಮೇಲೆ ನಾವಿಬ್ಬರು ಮತ್ತೆ ಮನೆಗೆ ಹೋಗೋಣ, ಅಲ್ಲಿ ನಿಮ್ಮಮ್ಮ ಕಾಯುತ್ತಿರುತ್ತಾಳೆ ಊಟಕ್ಕೆ" ಎನ್ನುತ್ತ ಹೊರಟಳು.
ತನ್ನ ತಾಯಿ ದೇವಕಿಯನ್ನು ತನ್ನ ಜೊತೆ ಬಿಟ್ಟು ಹೊರಟಿದ್ದು ವೆಂಕಟನಿಗೆ ಆಶ್ಚರ್ಯವೆನಿಸಿತು. ಅವಳು ಅತ್ತ ಹೋಗುತ್ತಲೆ ಕೇಳಿದ
"ಅಮ್ಮ ಹೇಳಿದ್ದು ಕೇಳಿಸ್ತ, ನೀನೆ ಊಟ ಬಡಿಸ್ ಬೇಕಂತೆ" ಎಂದ ಖುಷಿಯಾಗಿ,
"ಬಡಿಸ್ಬೇಕು ಅಂದ್ರೆ, ನೀವು ಕೂತ್ಕೊಬೇಕಪ್ಪ, ನಿಂತೋರಿಗೆ ಊಟ ಹಾಕೊ ಪದ್ದತಿ ನಮ್ಮೂರಾಗಿಲ್ಲ" ಎಂದಳು ಅವಳು ತುಂಟತನದಿಂದ.

ವೆಂಕಟ ನಗುತ್ತ ಊಟಕ್ಕೆ ಕುಳಿತ, ಅವಳು ತಟ್ಟೆ ಇಟ್ಟು, ತಂದಿದ್ದ  ಮುದ್ದೆ, ಸಾರು ಎಲ್ಲ ಬಡಿಸುತ್ತಿರುವಾಗ ಕೇಳಿದ
"ನಿಮ್ಮ ಅಜ್ಜಿ ಅಂದಿದ್ದು ಕೇಳಸ್ತ,  ನಾವಿಬ್ಬರು ಗಂಡ ಹೆಂಡ್ತಿ ಆದ್ರೆ ಹೆಂಗೆ ಅಂದ್ಳು. ನೀನೇನು  ಹೇಳ್ಳೆ ಇಲ್ಲ" ಎಂದ
"ನಾನೆಂತದು ಹೇಳೋದು, ಎಲ್ರು ಆಯ್ತು ಅಂದ್ರೆ ಆಯ್ತು" ಅಂದಳು ಕೆಂಪು ಕೆಂಪಾಗುತ್ತ
"ಅಂದ್ರೆ ನಿಂಗೆ ಇಷ್ಟ ಇಲ್ವ" ವೆಂಕಟ ಮತ್ತೆ ಕೇಳಿದ
"ಇಷ್ಟ ಇರೋ ಹೊತ್ಗೆ, ನಿಮ್ಮೂರ್ಗೆ ಬಂದಿರಾದು, ಇಲ್ಲಿ ನಿಮ್ಮ ಜೊತೆ ಕೂತಿರೋದು" ಅಂದಳು
ವೆಂಕಟನಿಗೆ ಸಂತಸದಿಂದ ಮನ ತುಂಬಿ ಬಂತು,
"ದೇವಕಿ, ಮುಂದೆ ನಾನು ನಿನ್ನ ಚೆನ್ನಾಗಿ ನೋಡ್ಕೋತಿನಿ ಅಂತ ನಂಬ್ಕೆ ಇದ್ಯಾ?" ಅವನು ಕೇಳಿದ
"ನಮ್ಮ ಅಮ್ಮನ ಬೆನ್ನಾಗ್ ಬಿದ್ದಿರೋ ಸೋದರಮಾವ ನೀನು, ಮದುವೆ ಆಗ್ತೀನಿ ಅಂತಾ ಕೇಳ್ತಾ ಇದ್ದಿ, ನಿನ್ನ ನಂಬದೆ ಇನ್ಯಾರನ್ನ ನಂಬಲಿ, ನಿನ್ನೆ ನಂಬ್ಕಂಡು ನಿನ್ನ ಮನೆಗೆ ಬರ್ತೀನಿ,  ಆಕಡೆ ಅತ್ತೆ ಅವ್ಳೆ, ಅಜ್ಜೀನು ಅವ್ಳೆ, ನಂಗೇ ಇನ್ನೇನು ಭಯ"
ದೇವಕಿ ಮುಗ್ದವಾಗಿ ನುಡಿದಳು.
ಊಟ ಮುಗಿಸುತ್ತಿರಬೇಕಾದರೆ, ಅತ್ತ ಹೋಗಿದ್ದ ವೆಂಕಟನ ಅಮ್ಮನು ಬಂದಳು, ಅದು ಇದು ಮಾತಾಡಿ ಅವರಿಬ್ಬರು , ವೆಂಕಟನಿಗೆ ಬೇಗ ಮನೆಗೆ ಬರುವಂತೆ ತಿಳಿಸಿ ಹೊರಟರು.

"ಸ್ವಲ್ಪ ಕೆಲಸ ಉಳ್ಕಂಡಿದೆ, ಒಂದೆರಡು ತಾಸು ಅಷ್ಟೆಯ, ನಿಮ್ಮ ಹಿಂದೆನೆ ಬರ್ತೀನಿ ನಡೀರಿ" ಅಂತ ಅಮ್ಮನನ್ನು ದೇವಕಿಯನ್ನು ಕಳಿಸಿದ ವೆಂಕಟ. ಮರದ ನೆಳ್ಳು ತಂಪಾಗಿದೆ, ಐದು ನಿಮಿಷ ಕಣ್ಣು ಮುಚ್ಚಿ, ಮತ್ತೆ ಕೆಲಸಕ್ಕೆ ತೊಡಗುವುದು, ಅಂದುಕೊಂಡು, ದೇವಕಿಯ ಕನಸು ಕಾಣುತ್ತ ಕಣ್ಣು ಮುಚ್ಚಿದ.

ಊಟದ ಮೈಬಾರ ಸ್ವಲ್ಪ ಇಳಿಯಿತು, ಅರ್ಧಗಂಟೆ ಆಗಿರಬಹುದೇನೊ, ಇನ್ನು ತಡವಾಗುತ್ತೆ ಎಂದು ಎದ್ದು, ಹೊಲದ ಕಡೆ   ಹೆಜ್ಜೆ ಹಾಕಿದ, ದೂರದಲ್ಲಿ ಯಾರೊ ಓಡಿ ಬರುವುದು ಕಾಣಿಸಿತು. ನೋಡುವಾಗಲೆ ತಿಳಿಯಿತು, ಪಕ್ಕದ ಗೌಡ್ರ ಮನೆ ಆಳು, ಸಿದ್ದ , ಇಲ್ಲಿಗೇಕೆ ಬರುತ್ತಿದ್ದಾನೆ ಅಂದುಕೊಳ್ಳುತ್ತಿರಬೇಕಾದರೆ,
"ವೆಂಕಟ, ಬೇಗ ಮನೆಗೆ ಬರ ಬೇಕಂತೆ, ಊರಿಂದ ಬಂದ ನಿಮ್ಮ ಅಕ್ಕ ಕರೀತವ್ಳೆ" ಅಂದ ಓಡುತ್ತ ಬಂದ ಸಿದ್ದ,
"ಅದ್ಯಾಕೋ, ಈಗಿನ್ನು ಅಮ್ಮ , ದೇವಕಿ ಬಂದು ಹೋದ್ರಲ್ಲ, ಸ್ವಲ್ಪ ಕೆಲಸ ಉಳಿದಿದೆ, ಮುಗಿಸಿ ಬರುತ್ತೇನೆ ಬಿಡು" ಎಂದ ವೆಂಕಟ.
"ಹಾಗಲ್ಲಪ್ಪೋ, ಅದ್ಯಾರೋ ಬ್ಯಾಂಕಿನೋರು ಬಂದಿದ್ದಾರೆ, ಜೀಪಿನಲ್ಲಿ, ಜೊತೆಗೆ ಪೋಲಿಸು ಇದೆ, ನಿನ್ನ ಸಾಲ ಇದೆಯಂತಲ್ಲ, ಜಪ್ತಿಗೆ ಅಂತೆ, ನಿಮ್ಮ ಮನೆ ಸಾಮಾನೆಲ್ಲ ಹೊರಗೆ ಎಸೆದು ಬೀಗ ಹಾಕ್ಕೊಂಡು ಹೋಗ್ತಿದ್ದಾರೆ, ಸಾಲಕ್ಕೆ ನೀನು ಮನೆ, ಜಮೀನು ಇಟ್ಟಿದ್ದೀಯಲ್ಲ, ಅದ್ಕೆ, ನಿಮ್ಮಕ್ಕ ಅಳ್ತ ಕೂತವ್ಳೆ, ನಿನ್ನ ಕರಕೊಂಡು ಬಾ ಅಂದಳು" ಎಂದ ಸಿದ್ದ.
ವೆಂಕಟನಿಗೆ ಒಮ್ಮೆಲೆ ನಿದ್ದೆ, ದೇವಕಿಯ ಪ್ರೀತಿಯ ಭ್ರಮೆ ಎಲ್ಲವು ಇಳಿದುಹೋಯಿತು, ಏನು ಬ್ಯಾಂಕೋರು ಬಂದಿದ್ದಾರೆ, ಜೊತೆಗೆ ಪೋಲಿಸು ಬೇರೆ, ದೇವ್ರೆ ಎಂತ ಕೆಲಸ ಆಗೋಯ್ತು, ಇವ್ರು ದೇವಕಿ ಬಂದಾಗಲೆ ಬರಬೇಕ. ನಮ್ಮ ಮನೆ ಬೀಗ ಹಾಕಿದ್ರು ಅಂದ್ರೆ ಅಷ್ಟೇಯ, ಇನ್ನು ಮನೆ ಹರಾಜಿಗೆ ಇಡ್ತಾರೆ , ದುಡ್ಡು ಕಟ್ಟ ಬೇಕು ಆದ್ರೆ, ನನ್ನ ಹತ್ರ ದುಡ್ಡಾದ್ರು ಎಲ್ಲಿದೆ ಅಂದುಕೊಳ್ಳುತ್ತ ನಿಂತ.
"ಬೇಗ ಹೊರಡಪ್ಪೊ, ನಿನ್ನ ಕಾಯ್ತಾವ್ರೆ" ಎಂದ ಸಿದ್ದ,  
ವೆಂಕಟನಿಗೆ ರೇಗಿ ಹೋಗಿತ್ತು
"ತಡ್ಕಳಲ , ಹೋಗಿವಿಂತಿ, ನಾನು ಅಲ್ಲಿ ಬಂದು ಏನು ಮಾಡಲಿ ನಂಗೆ ಗೊತ್ತಾಯ್ತ ಇಲ್ಲ, ನಿಂದು ಬೇರೆ ಇಲ್ಲಿ, ಅಮ್ಮ ದೇವಕಿ ಮನೆಗೆ ಬಂದ್ರ " ಅಂತ ಕೇಳಿದ
"ಇಲ್ಲ, ನಿಂಗೆ ಊಟ ಕೊಟ್ಟು ಬರ್ತೀನಿ, ಅಂತ ಅವರಿಬ್ಬರು ಬಂದ್ರಂತಲ್ಲ, ಇನ್ನು ಮನೆಗೆ ಬಂದಿರಲಿಲ್ಲ, ಅಷ್ಟರಲ್ಲಿ ಇಷ್ಟೆಲ್ಲ ರಾಮಾಯಣ ಆಗೋಯ್ತು, ನಿಮ್ಮ ಅಕ್ಕ ಒಬ್ಳೆ ಅಳ್ತಾವ್ಳೆ, ಶುಭ ಕಾರ್ಯಕ್ಕೆ ಬಂದೆ ಹೀಗಾಯ್ತು ಅಂತ ಗೋಳಾಡ್ತ  ಅವ್ಳೆ" ಸಿದ್ದ ನುಡಿದ

ವೆಂಕಟನ ಮನಸು ಮುದುರಿ ಹೋಯ್ತು, ಅಕ್ಕನು ಪಾಪ ನಂಗೆ ಹೆಣ್ಣು ಕೇಳ್ಬೇಕು ಅಂತಾನೆ ಬಂದಾವ್ಳೆ ಅನ್ಸುತ್ತೆ, ಈಗ ನನ್ನ ಗಾಚಾರ ಹೀಗಾಯ್ತು ಅಂದುಕೊಂಡ. ಏಕೊ ಅವನಿಗೆ ಮನೆ ಹತ್ತಿರ ಹೋಗಲು, ಮನವೆ ಒಪ್ಪಲಿಲ್ಲ ಈಗ ಅಲ್ಲಿ ಹೋಗಿ, ಹೇಗೆ ದೇವಕಿಯ ಕಣ್ಣನ್ನು ಎದುರಿಸುವುದು, ಅನ್ನಿಸಿ
"ಲೋ ಸಿದ್ದ ನೀನು ಹೋಗ್ಲ, ನಾನು ಸ್ವಲ್ಪ ಹೊತ್ತು ಬಿಟ್ಟು ಬರ್ತೀನಿ, ಏಕೊ ತಲೆ ಕೆಟ್ಟು ಮೊಸರಾಯ್ತು" ಎನ್ನುತ್ತ ಕುಸಿದು ಕುಳಿತ
"ನಿನ್ನ ಇಷ್ಟ ಕಣ್ಲ, ಅಕ್ಕ ನಿನ್ನ  ಬೇಗ ಕರಕಂಡು ಬಾ ಅಂದ್ಳು, ನಾ ಹೋಗಿ ಹೇಳ್ತೀನಿ" ಎನ್ನುತ್ತ  ಉಪಾಯವಿಲ್ಲದೆ ಹೊರಟ ಸಿದ್ದ.

ಸಿದ್ದ ಹೋಗುತ್ತಲೆ, ವೆಂಕಟ ತಲೆ ಹಿಡಿದು ಕುಳಿತ, ದೇವ್ರೆ ಇದೇನು ಕೆಲ್ಸ ಮಾಡಿದೆ, ಬೆಳಗ್ಗೆ ಇಂದ ರಾತ್ರಿ ಗಂಟ ದುಡಿತೀನಿ ಆದ್ರು ಸಾಲ ಅನ್ನೋದು ತೀರಲ್ಲ, ಬೆಳೆ ಮೇಲೆ ಹಾಕಿದ ದುಡ್ಡು ಹಾಕಿದಂಗೆ ಕರಗಿ ಹೋಗ್ಬುಡುತ್ತೆ, ನಾನು ಏನ್ ಮಾಡಲಿ? . ಮನೇಲಿ ಇರೋರೆ ಇಬ್ರು ನಾನು ಅಮ್ಮ, ಈಗಲೆ ಈ ಪಾಡು, ಇನ್ನು ಮದುವೆ ಮಕ್ಕಳು ಅಂತ ಆದ್ರೆ ನಂಗೆ ತೂಗ್ಸಕ್ಕೆ ಆಗುತ್ತ ಅನ್ನಿಸಿ ಅಳು ಬಂದಿತು.

ಕಣ್ಣಲ್ಲಿ ನೀರು ಸುರಿಯುತ್ತ ಇತ್ತು ಅವನಿಗೆ, ಅಲ್ಲ ಈಗ ದೇವಕಿಗೆ, ಅಕ್ಕನಿಗೆ ಹೇಗೆ ಮುಖ ತೋರಿಸೋದು, ಸ್ವಂತ ಅಕ್ಕನೆ ಇರಬಹುದು ಆದರೆ ಅವಳಿಗೆ ಮಗಳು ಸುಖ ಮುಖ್ಯ ಅಲ್ವ, ಕಂಡು ಕಂಡು ನನಗೆ ಹೇಗೆ ಹೆಣ್ಣು ಕೊಡ್ತಾಳೆ, ದೇವಕಿ ಆದ್ರು ನನ್ನ ಏಕೆ ಒಪ್ತಾಳೆ.

ಆಗಿನ್ನು ದೇವಕಿ ಅಂದಿದ್ದ ಮಾತು ನಿಜವಾಯಿತು, ನೀನು ಸುಖವಾಗಿ ನೋಡ್ಕೋತಿಯ ಅಂತ ನಂಬಿ ನಿನ್ನ ಮನೆಗೆ ಬರ್ತೀನಿ ಅಂದ್ಳು, ಈಗ ಅವಳ ಕಣ್ಣೆದುರೆ ಎಲ್ಲ ನಂಬಿಕೇನೊ ತೀರಿ ಹೋಯ್ತು. ಈಗ ಏನಮಾಡದು, ಹೋಗಿ  ಕಾಲು ಹಿಡಿದರು, ಬ್ಯಾಂಕಿನೋರು ಬಿಡಲ್ಲ, ಪೋಲಿಸರು ಬೇರೆ ಇದ್ದಾರೆ ಒದ್ದು ಒಳಗೆ ಹಾಕ್ತಾರೆ ಹೀಗೆ ಏನೇನೊ ಯೋಚನೆ, ಕಡೆಗೊಮ್ಮೆ ಯೋಚಿಸಿದ ಇಂತ ಜೀವನ ಬೇಕಾ ನನಗೆ.  ತಲೆ ಹಿಡಿದು ಕುಳಿತ, ಹತ್ತು ನಿಮಷದಲ್ಲಿ ತೀರ್ಮಾನ ಮಾಡಿಬಿಟ್ಟ, ಇನ್ನು ಅವರ್ಯಾರಿಗು ಮುಖ ತೋರಿಸಲ್ಲ ಎಂದು. ದನವನ್ನು ಮೇವಿಗೆ ಬಿಟ್ಟು , ದನಕ್ಕೆ ಕಟ್ಟಿದ್ದ ಹಗ್ಗ ಅಲ್ಲೆ, ಮರದ ಕೆಳಗೆ ಇತ್ತು. ಸುತ್ತಲು ನೋಡಿದ, ಎಲ್ಲಿ ಯಾವ ಮುನುಷ್ಯರ ಸುಳಿವು ಇಲ್ಲ. ತಲೆ ಎತ್ತಿ ನೋಡಿದ ಮರದ ಕೊಂಬೆ ಕಾಣುತ್ತಿತ್ತು.

ಅಲ್ಲಿ ಬಿದ್ದಿದ್ದ ಹಗ್ಗವನ್ನು ಹಿಡಿದ, ಅದಕ್ಕೆ ಕುಣಿಕೆ ಸರಿಯಾಗಿ ಹಾಕಿದ, ಮರ ಹತ್ತಿ ಮೇಲೆ ಹೋದವನೆ ಮರದ ಕೆಳಗಿನ ಕೊಂಬೆಗೆ ಹಗ್ಗದ ತುದಿ ಕಟ್ಟಿ ಎಳೆದು ನೋಡಿದ, ಕುಣಿಕೆಯನ್ನು ಕುತ್ತಿಗೆಗೆ ಸಿಕ್ಕಿಸಿ, ಬಿಗಿದುಕೊಂಡು ಕಣ್ಣುಮುಚ್ಚಿ ಕೆಳಗೆ ಹಾರಿದ. ಬರಿ ಮೂರು ನಾಲಕ್ಕು ನಿಮಿಷವಷ್ಟೆ ವೆಂಕಟನ ಜೀವ ಹಾರಿ ಹೋಗಿತ್ತು, ಅವನ ದೇಹ ಮರದ ಕೊಂಬೆಗೆ ನೇತಾಡುತ್ತಿತ್ತು.
ಸುತ್ತ ಮೇಯುತ್ತಿದ್ದ ದನಗಳು, ಹತ್ತಿರ ಓಡಿಬಂದವು, ವೆಂಕಟ ನೇತಾಡುತ್ತಿರುವದು ಕಂಡು ಅಂಬ ಅಂಬಾ ಎಂದು ಕಿರುಚಿ, ಕಡೆಗೆ ಏನು ತೋಚದೆ, ಸುಮ್ಮನೆ ನಿಂತವು.

ಮತ್ತೆ ಅರ್ಧ ಗಂಟೆ ಕಳೆಯಿತೇನೊ,  ವೆಂಕಟನ ತಾಯಿ, ದೇವಕಿ, ಮತ್ತೊಬ್ಬಾಕೆ, ಅಕ್ಕ ಇರಬೇಕು, ಎಲ್ಲರೂ ಓಡಿಬಂದರು, ಜೊತೆಗೆ ಪೋಲಿಸರು ಇಬ್ಬರು ಇದ್ದರು, ಊರಿನ ಜನ ಸುತ್ತಲು ನೆರೆದಿದ್ದರು. ಆಳುಗಳು ಸೇರಿ ಪೋಲಿಸರ ಹೇಳಿದ ನಂತರ ಹೆಣ ಕೆಳಗಿಳಿಸಿದರು.

ವೆಂಕಟನ ಅಮ್ಮ ಗೋಳಾಡುತ್ತಿದ್ದಳು, ಸುತ್ತಲಿದ್ದವರಿಗೆ ವರದಿ ಒಪ್ಪಿಸುತ್ತಿದ್ದಳು, ಅಳುತ್ತಲೆ
"ಅಯ್ಯೋ, ಇದೆಂತದಪ್ಪ, ಜಮೀನು ಹೋಯ್ತು, ಮನೆ ಹೋಯ್ತು ಅಂತ ಎದೆ ಒಡೆದು ಮಗ ನೇಣು ಹಾಕಿಕೊಂಡಿದ್ದಾನಲ್ಲ, ಮುದುಕಿ ನಾನೆ ಬದುಕಿರುವೆ. ನಮ್ಮ ಯಜಮಾನರ ತಾತನ ಕಾಲದಲ್ಲಿ ಬಂದ ಜಮೀನು,  ಅವರು ಸೈನ್ಯದಲ್ಲಿ ಕೆಲಸ ಮಾಡಿ ಜೀವ ಕೊಟ್ಟರು ಅಂತ ಮಹಾರಾಜರು ಬರೆದುಕೊಟ್ಟಿದ್ದಂತೆ, ಮನೆಗೆ ಅದೆ ಆದಾರವಾಗಿತ್ತು, ಈಗ ಸಾಲ ಮಾಡಿದ ಮೊಮ್ಮಗ ಅದನ್ನು ತೀರಿಸಲಾರದೆ, ಜೀವ ತೆತ್ತ" ಎಂದು ಗೋಳಾಡುತ್ತಿದ್ದಳು

ಅವನ ಜೀವ ಹೋದದ್ದುಕ್ಕೆ ಕಾರಣರಾಗಿದ್ದ ಪೋಲಿಸರು, ಬ್ಯಾಂಕಿನವರು ನಿರ್ಭಾವುಕರಾಗಿ ನಿಂತಿದ್ದರು. ವೆಂಕಟನ ಅಕ್ಕನು ಹೆಣದ ಪಕ್ಕ ಕುಳಿತು ಗೋಳಾಡುತ್ತಿದ್ದಳು.
ದೇವಕಿ , ತಾನು ಈಗಿನ್ನು ಮಾತನಾಡಸಿ ಹೋದ, ತನ್ನೊಡನೆ ಪ್ರೀತಿಯಿಂದ ವರ್ತಿಸಿದ ಮಾವ ಈಗಿಲ್ಲ ಎಂದು ನಂಭಿಕೆ ಬಾರದೆ ಅವನ ಹೆಣದ ಮೇಲೆ ಬಿದ್ದು ಅಳುತ್ತಿದ್ದಳು. ಪಕ್ಕದಲ್ಲಿದ ಪೋಲಿಸರು
"ಪಂಚನಾಮೆ ಆಗುತ ತನಕ ದೇಹ ಮುಟ್ಟುವ ಹಾಗಿಲ್ಲ, ಏಳಮ್ಮ " ಎನ್ನುತ್ತ ದೇವಕಿಯನ್ನು ಎಬ್ಬಿಸುತ್ತಿದ್ದರು..................






ಕತೆ :ಶಾಪ  [ ಬಾಗ - ೪]

ನನಗೆ ಅರಿವಿಲ್ಲದೆ ಕಣ್ಣಲ್ಲಿ ನೀರು ತುಂಬಿ ಕೊಂಡಿತು, ಇದೆಂತಹ ಕತೆ, ಇದೆಂತಹ ವ್ಯಥೆ. ನನ್ನ ಕಣ್ಣಲ್ಲಿ ನೀರು ನೋಡುತ್ತ ಶ್ರೀನಿವಾಸ ಗಾಭರಿಯಾದ,
"ಏಕೆ ಸ್ವಾಮಿಗಳೆ, ನಿಮ್ಮ ಕಣ್ಣಿಗೆ ಏನು ಕಾಣುತ್ತಿದೆ" ಎಂದು ಕೇಳಿದ
ನಾನು ಅವನಿಗೆ ಮೊದಲಿನಿಂದ ಎಲ್ಲ ಕತೆ ವಿವರಿಸಿದೆ, ಅವನ ಹಾಗು ಅವನ ತಾಯಿ ಬಾಗ್ಯಮ್ಮ ಇಬ್ಬರ ಕಣ್ಣಲ್ಲಿಯು ನೀರೆ.
"ಇದೇನು ಸ್ವಾಮಿ,  ಈ ನೆಲದ ಹಿಂದೆ ಬರಿ ದುಃಖವೆ ತುಂಬಿದೆ, ಸಾವಿನ ಕತೆಗಳೆ ತುಂಬಿದೆಯಲ್ಲ, ಏಕೆ ಗುರುಗಳೆ" ಎಂದ.

ನಾನದರು ಏನು ಉತ್ತರ ಹೇಳಲಿ ಪ್ರಕೃತಿಯಲ್ಲಿ ನಡೆಯುವ ಘಟನೆಗಳೆಲ್ಲ ನಿಗೂಡವೆ ಅಲ್ಲವೆ.
ಅಲ್ಲದೆ ನನಗೆ ಮತ್ತೊಂದು ಸಮಸ್ಯೆ ಕಾಡುತ್ತಿತ್ತು, ವೆಂಕಟನ ಸಾವಿನ ನಂತರ ಅವನ ಸಂಸಾರ ಅಮ್ಮ ಎಲ್ಲ ಏನಾದರು , ಎಷ್ಟು ಪ್ರಯತ್ನಿಸಿದರು ತಿಳಿಯಲು ಆಗಲೆ ಇಲ್ಲ. ಎಷ್ಟು ಹೊತ್ತು ಕಣ್ಣು ಮುಚ್ಚಿ ಕುಳಿತರು ಹೊಳೆಯುತ್ತಿಲ್ಲ ...

ಶ್ರೀನಿವಾಸನು ಕುಳಿತ್ತಿದ್ದವನು ಎದ್ದನು.
"ಅಮ್ಮ ತುಂಬಾ ಹೊತ್ತಾಯಿತು ಅನ್ನಿಸುತ್ತೆ, ಆಗಲೆ ನಡುರಾತ್ರಿ ದಾಟಿ ಆಯಿತು ಅನ್ನಿಸುತ್ತೆ   ಬೇಕಿದ್ದರೆ ಹೋಗಿ ಮಲಗಮ್ಮ " ಎನ್ನುತ್ತ , ನನ್ನ ಕಡೆ ತಿರುಗಿ
"ಸ್ವಾಮಿ, ಬರಿ ಮಾತನ್ನೆ ಆಡಿಸುತ್ತ, ನೀವು ಊಟವನ್ನು ಸರಿಯಾಗಿ ಮಾಡಲಿಲ್ಲ ಅನ್ನಿಸುತ್ತೆ, ಈಗ ರಾತ್ರಿ ಹೊತ್ತಾಯಿತು, ನಿಮಗೆ ಒಂದು ಲೋಟ ಹಾಲು ತರುವೆ, ಕುಡಿದು, ರೂಮಿನಲ್ಲಿ ಮಲಗಿಬಿಡಿ" ಎಂದನು

ಅದಕ್ಕೆ ನಾನು
"ಶ್ರೀನಿವಾಸ, ಹಾಲು ತರಬೇಡ, ನಾನು ರಾತ್ರಿ ಊಟ ಮಾಡುವುದೆ ಅಪರೂಪ, ನಿನ್ನ ಅತಿಥ್ಯ ಎಂದು ಸ್ವೀಕರಿಸಬೇಕಾಯಿತು. ಸ್ವಲ್ಪ ಜಾಸ್ತಿಯೆ ತಿಂದೆ. ಅಲ್ಲದೆ ನನಗೆ ಏಕೊ ನಿದ್ದೆ ಬರುವಂತೆ  ಕಾಣುತ್ತಿಲ್ಲ. ಇರಲಿ ನನ್ನಿಂದಾಗಿ ನಿಮ್ಮಿಬ್ಬರ ನಿದ್ದೆ ಹಾಳಾಗುವುದು ಬೇಡ, ಈಗ ನಾನು ಮಲಗಬೇಕಾದ ಜಾಗ ತೋರಿಸಿ ನೀನು ಹೋಗಿ ಮಲಗಿಬಿಡು" ಎನ್ನುತ್ತ ಎದ್ದು ನಿಂತೆ.

"ಇಲ್ಲ ಗುರುಗಳೆ, ನನಗೂ ನಿದ್ದೆ ಏನು ಬರುತ್ತಿಲ್ಲ, ಏತಕ್ಕೊ ಹಿಂದಿನ ಕತೆಗಳು ಕೇಳುತ್ತ ಮನ ವ್ಯಗ್ರವಾಗಿದೆ ಅನ್ನಿಸುತ್ತೆ, ಆದರೆ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಬೇಕೆ ಬೇಕಲ್ಲವೆ ಬನ್ನಿ ನಿಮಗೆ ರೂಮು ತೋರಿಸುವೆ, ಮಲಗಿ ಬಿಡಿ, ಬೆಳಗ್ಗೆ ನೋಡೋಣ" ಎನ್ನುತ್ತ ಹೊರಟ.

ನಾನು ಅವನ ಹಿಂದೆ ಹೊರಟವನು, ರೂಮಿನಲ್ಲಿ ಮಂಚ, ಹಾಸಿಗೆ ಎಲ್ಲ ನೋಡುತ್ತ.

"ಇವೆಲ್ಲ ಬೇಕಿರಲಿಲ್ಲ, ನನಗೆ ಒಂದು ಚಾಪೆ ಸಾಕಿತ್ತು ನೆಲದ ಮೇಲೆ ಮಲಗುತ್ತಿದ್ದೆ, ಆದರೆ ಈಗ ನಿಮ್ಮ ಮನೆ ನಿಮ್ಮ ಇಚ್ಚೆಯಂತೆ" ಆಗಲಿ, ಎನ್ನುತ್ತ ಮಂಚದ ಮೇಲೆ ಕುಳಿತೆ
ಶ್ರೀನಿವಾಸನು
"ನೋಡಿ ಇಲ್ಲಿ ಪಕ್ಕದಲ್ಲಿ ಕುಡಿಯಲು ನೀರಿನ ಪಾತ್ರೆ ಲೋಟ ಇಟ್ಟಿರುವೆ ಗುರುಗಳೆ, ಮಲಗಿ" ಎನ್ನುತ್ತ ಹೊರಟ.

ಎಲ್ಲ ದೀಪಗಳು ಆರಿ, ಬರಿ ರಾತ್ರಿಯ ಕಡಿಮೆ ಬೆಳಕು ಬೀರುವ , ದೀಪ ಮಾತ್ರ ಬೆಳಗುತ್ತಿತ್ತು, ರೂಮೆಲ್ಲ ಅದೇನೊ ಕೆಂಪು ಬಣ್ಣ ತುಂಬಿದಂತೆ ಇತ್ತು. ಹಾಸಿಗೆ ಮೇಲೆ ಕಣ್ಣು ಮುಚ್ಚಿ ಕುಳಿತೆ, ಏಕೊ ಅಸೌಖ್ಯ ಅನ್ನಿಸಿತು, ಹಾಗಾಗಿ ದ್ಯಾನಕ್ಕೆ ಕುಳಿತುಕೊಳ್ಳುವ ನಂತೆ ಹಾಸಿಗೆಮೇಲೆ ಚಕ್ಕಮಟ್ಟಳ ಹಾಕಿ ಕಾಲು ಮಡಚಿ ಕುಳಿತೆ. ಕಣ್ಣು ಮುಚ್ಚಿದರೆ, ಕಿವಿಯಲ್ಲ ಎಂತದೊ ಶಬ್ದಗಳಿಂದ ತುಂಬುತ್ತಿತ್ತು..................
****
ಹೌದು ಅದು ನೂರಾರು, ಸಾವಿರಾರು ಪಕ್ಷಿಗಳು ಒಟ್ಟಿಗೆ ಚಿಲಿಪಿಲಿ ಗುಟ್ಟುವ ಶಬ್ದ. ಹಲವಾರು ಜಾತಿಯ, ಹಲವು ರೀತಿಯ ದ್ವನಿಯ ಶಬ್ದ ಕಿವಿಯನ್ನೆಲ್ಲ ತುಂಬುತ್ತಿತ್ತು. ನಡುವೆ ಅದೇನೊ ಪಕ್ಷಿಗಳ ಆಕ್ರಂದನದಂತೆ ಶಬ್ದಗಳು.ಅವುಗಳ ದ್ವನಿಯಲ್ಲಿ ಗಾಭರಿ, ಹೆದರಿಕೆ ಇನ್ನೇನೊ. ನನಗೆ ಅರ್ಥವಾಗಲಿಲ್ಲ ಇದೇನು ಈ ರೂಮಿನಲ್ಲಿ ಇಂತಹ ಶಬ್ದ, ಯಾರಾದರು ಟಿ.ವಿಯನ್ನೊ, ರೇಡಿಯೋ ಅಥವ ಇನ್ನೇನಾದರು ಹಾಕಿದ್ದಾರ ಎನ್ನುತ್ತ ತಕ್ಷಣ ಕಣ್ಣು ತೆರೆದೆ. ಎಲ್ಲ ದ್ವನಿಯು ಒಟ್ಟಿಗೆ ನಿಂತು ನಿಶ್ಯಬ್ದ ಆವರಿಸಿತು. ಹಾಲಿನಲ್ಲಿ ನಡೆಯುತ್ತಿದ್ದ ಗಡಿಯಾರದ ಟಿಕ್ ಟಿಕ್ ಹೊರತು ಬೇರೆ ಯಾವ ಶಬ್ದವು ಇಲ್ಲ.

ನನಗೆ ಆಶ್ಚರ್ಯವೆನಿಸಿತು, ಇನ್ನು ನಿದ್ದೆಯಂತು ಬಂದಿಲ್ಲ, ಅಂದರೆ ನನ್ನ ಅನುಭವ ಏನು. ಈಗ ಅರ್ಥವಾಯಿತು, ಈ ಸ್ಥಳದ ಬಗ್ಗೆ ಮತ್ತೇನೊ ನನಗೆ ಗೋಚರಿಸುತ್ತಿದೆ. ನಿದಾನವಾಗಿ ಕಣ್ಣು ಮುಚ್ಚಿ ಮನಸನ್ನು ಕೇಂದ್ರಿಕರಿಸಿದೆ. .....


ಮುಸುಕು ಬೆಳಕಿನಲ್ಲಿ ಗೋಚರಿಸುತ್ತಿತ್ತು, ಅದು ಬಾರಿ ದೊಡ್ಡ ಮರ, ಕಾಡಿನಲ್ಲಿ ಬೆಳೆಯುವಂತದ್ದು, ಗೋಣಿಯದೊ ಅಥವ ಭೂರುಗದ ಮರವೊ. ಅದರ ಬುಡದ ದಪ್ಪ ನೋಡುವಾಗಲೆ ಅನ್ನಿಸಿತು ಮರ ಕಡಿಮೆ ಎಂದರು ಮುನ್ನೂರಾ ಐವತ್ತು ವರುಷ ಅಥವ ನಾಲಕ್ಕು ನೂರು ವರುಷಗಳ ಮರವಿರಬಹುದು ಎಂದು.

ಕತ್ತೆತ್ತಿ ನೋಡಿದರೆ , ಹರಡಿ ನಿಂತ ಕೊಂಬೆಗಳು ಆಕಾಶ ಮುಟ್ಟುವೆನು ಎನ್ನುವಂತೆ ಬೆಳೆದ ಎತ್ತರ. ಸಣ್ಣ ಸಣ್ಣ ಹಣ್ಣುಗಳು, ಮರದ ಇಂಚಿಂಚು ತುಂಬಿ ನಿಂತ ಗಿಣಿ, ಪಾರಿವಾಳ, ಗೊರವಂಕ, ಗುಬ್ಬಚ್ಚಿಯಂತ ವಿವಿದ ಜಾತಿಗೆ ಸೇರಿದ ಪಕ್ಷಿಗಳು ಕೊಂಬೆ ಕೊಂಬೆಗು ಗೂಡು ಕಟ್ಟಿ ಆಶ್ರಯ ಪಡೆದಿದ್ದವು. ಅಲ್ಲದೆ ಕೊಂಬೆಗಳ ತುದಿಯಲ್ಲಿ ನೇತಾಡುತ್ತಿರುವ ಗಿಜಗನ ಗೂಡುಗಳು. ಒಟ್ಟಾರೆ ಎಷ್ಟು ಪಕ್ಷಿಯೊ, ಗೂಡುಗಳೊ ಲೆಕ್ಕ ಮಾಡಲಾಗದು ಅನ್ನುವಂತೆ ಇತ್ತು.

ಸುತ್ತಲು ನೋಡಿದರೆ , ಬಹುಷಃ ಕಾಡು ಇರಬಹುದೆ ಅನ್ನಿಸಿತು. ಅಥವ ಊರ ಹೊರಗಿನ ಬಾಗವು ಆಗಿರಬಹುದು. ಮನಸಿಗೆ ಹೊಳೆಯಿತು, ಅಲ್ಲ ಅಲ್ಲ , ಈ ಮರವು ಹಿಂದೆ ಈಗ ಮನೆ ಇರುವ ಜಾಗದಲ್ಲಿ ಇದ್ದಿದ್ದು, ಅಂದರೆ ವೆಂಕಟ ಅಲ್ಲಿ ಹೊಲಮಾಡುವ ಎಷ್ಟೋ ವರುಷಗಳ ಹಿಂದೆ, ಅಲ್ಲಿ ಇರಬಹುದಾಗಿದ್ದ ಮರವಿರಬಹುದು ಅದು. ಆದರೆ ಆ ಪಕ್ಷಿಗಳು ಅದೇಕೆ ಹಾಗೆ ಕೊರಗುತ್ತಿವೆ, ಅದ್ಯಾವ ಅಪತ್ತಿನ ನಿರೀಕ್ಷೆ ಅವುಗಳ ಮನದಲ್ಲಿದೆ ನನಗೆ ಅರ್ಥವಾಗಲಿಲ್ಲ. ಅವುಗಳ ಬಾಷೆ ಅರಿಯುವ ಶಕ್ತಿಯು ನನಗಿಲ್ಲ.



ಹಾಗೆ ನೋಡುತ್ತಿರುವಂತೆ ಸೂರ್ಯ ಉದಯಿಸಿದ, ಬೆಳಗಿನ ಕಿರಣಗಳು, ಮರದ ಮೇಲೆ ಬಿದ್ದು ಮರ ಆಕರ್ಷಕವಾಗಿ ಕಾಣುತ್ತಿತ್ತು. ಸೂರ್ಯ ಉದಯಿಸಿದಂತೆ ಎಲ್ಲ ಪಕ್ಷಿಗಳು ಎಚ್ಚೆತ್ತವು. ಕೊಂಬೆ ಕೂಂಬೆಗೆ, ಹಾರುತ ಕುಶಲ ನಡೆಸಿದವು, ಸಂಸಾರದ ಹೊಣೆಹೊತ್ತ ಪಕ್ಷಿಗಳೆಲ್ಲ ಗೂಡಿನಿಂದ ಅಗಸದತ್ತ ಹಾರಿಹೊರಟವು. ಗೂಡಿನಲ್ಲಿ ತಮಗಾಗಿ ಕಾದು ಕುಳಿತಿರುವ ಮರಿಗಳಿಗೆ ಅಹಾರ ಹೊತ್ತು ತರುವುದು ಅವುಗಳ ಕೆಲಸವಲ್ಲವೆ. ಮರದಲ್ಲಿ ಮೊಟ್ಟೆ ಇಟ್ಟು ಕಾದು ಕುಳಿತ ಹೆಣ್ಣು  ಪಕ್ಷಿಗಳಿದ್ದವು,  ಅಮ್ಮ ತರುವ ಪ್ರೀತಿಯ ತುತ್ತು ತಿನ್ನಲು ಕಾದಿದ್ದ ಪುಟ್ಟ ಪುಟ್ಟ ಮರಿಗಳಿದ್ದವು, ಇನ್ನು ಹೊರಗಿನ ಪ್ರಪಂಚಕ್ಕೆ ಬರದೆ ಮೊಟ್ಟೆಯೊಳಗೆ ಇರುವ ಪಕ್ಷಿಗಳಿದ್ದವು

ಸ್ವಲ್ಪ ಕಾಲ ಕಳೆಯಿತೇನೊ, ದೂರದಿಂದ ಯಾರೊ ನಾಲ್ವರು ಬರುತ್ತಿರುವುದು ಕಾಣಿಸಿತು. ಅವರು ಏಕೆ ಬರುತ್ತಿರುವರು ಅಂದುಕೊಳ್ಳುವದರಲ್ಲಿ, ಮರದ ಕೆಳಗೆ ನಿಂತು ತಲೆಯಿತ್ತಿ ನೋಡಿದರು, ಅವರವರಲ್ಲೆ ಮಾತು
"ಒಳ್ಳೆ ಐನಾತಿ ಮರ ಕಣ್ಲ, ಇವತ್ತು ಕಡಿದು ಮುಗಿಸಿಬಿಡಬೇಕು, ಕಾಲ ಕಳೆಯೋ ಹಾಗಿಲ್ಲ ಇನ್ನು ಒಡೆಯರ ಕೈಲಿ ಅನ್ನಿಸಿಕೊಳ್ಳಬೇಕಾಗುತ್ತೆ ಅಷ್ಟೆ,"

ತಮ್ಮ ಮೇಲಂಗಿ ತೆಗೆದರು, ಕೈಯಲ್ಲಿದ್ದ ಕೊಡಲಿಯನ್ನೊಮ್ಮೆ ಸರಿ ಪಡಿಸಿಕೊಂಡು ತಮ್ಮ ಕೆಲಸ ಪ್ರಾರಂಬಿಸಿದರು.

ನನಗೆ ಭಯ ಹಾಗು ದುಃಖ ತುಂಬಿತು ಎಂತ ಮರುಕವಿಲ್ಲದ ಕೆಲಸಕ್ಕೆ ಕೈ ಹಚ್ಚಿದ್ದಾರೆ, ಇವರನ್ನು ತಡೆಯಬೇಕು ಅನ್ನಿಸಿ ಕೂಗಿದೆ
"ಬೇಡ ಆ ಮರ ಕಡಿಯಬೇಡಿ ಸಾವಿರಾರು ಪಕ್ಷಿಗಳಿಗೆ ಆಶ್ರಯವಾಗಿದೆ, ಅವುಗಳ ಶಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ"
ಆದರೆ ನಂತರ ಅರಿವಾಯಿತು, ನನ್ನ ಕೂಗು ಅವರನ್ನು ಮುಟ್ಟಲಾರದು, ಇದು ಹಿಂದೆ ಯಾವುದೊ ಕಾಲದಲ್ಲಿ ನೂರಾರು ವರ್ಷಗಳ ಹಿಂದೆ ನಡೆದ ಘಟನೆ ನನಗೆ ಗೋಚರಿಸುತ್ತಿದೆ, ನಾನು ಅವರನ್ನು ತಡೆಯಲಾರೆ

ಇಷ್ಟು ದೈತ್ಯ ಮರವನ್ನು ಮನುಷ್ಯ ಕೈಯಲ್ಲಿ ಕಡಿಯುವದುಂಟೆ ಅನ್ನಿಸಿತು ನನಗೆ, ಮರದ ಮೇಲಿದ್ದ ಪಕ್ಷಿಗಳಲ್ಲಿ ಕೆಲವು ಇವರು ಏನು ಮಾಡುತ್ತಿರುವರು ಎನ್ನುವದನ್ನು ಅರಿಯದೆ ಮರದ ಕೊಂಬೆಗಳಲ್ಲಿ ಹಾರಾಟ ಮಾಡುತ್ತಿದ್ದವು, ಗಿಜಗಿನ ಗೂಡಿನ ಸಂದಿಯಿಂದ ಕೆಲವು ಪುಟ್ಟ ಪುಟ್ಟ ಮರಿಗಳು ಭಯದಿಂದ ಹೊರಗೆ ಇಣುಕುತ್ತಿದ್ದವು.

ಮನುಷ್ಯ ಪ್ರಕೃತಿಯಲ್ಲಿ ಶಕ್ತಿ ಹೀನ ಅನ್ನುವ ನನ್ನ ನಿರೀಕ್ಷೆ ಸುಳ್ಳಾಯಿತು, ನೋಡು ನೋಡುತ್ತಿರುವಂತೆ, ಸೂರ್ಯ ಇನ್ನು ನಡುನೆತ್ತಿ ದಾಟುತ್ತಿರುವಂತೆ ಮರ ತನ್ನ ಹೋರಾಟ ಬಿಟ್ಟುಕೊಟ್ಟಂತೆ ಅನ್ನಿಸಿತು,  ಶಕ್ತಿ ಹೀನವಾಯಿತೇನೊ, ಬಾರಿ ಶಬ್ದದೊಂದಿಗೆ ತನ್ನೆಲ್ಲ  ಕೊಂಬೆಗಳನ್ನು ಒಂದಕ್ಕೊಂದು ಉಜ್ಜಿ ಶಬ್ದ ಮಾಡುತ್ತ, ಮರದ ಕೊಂಬೆಗಳಲ್ಲಿರುವ ಪಕ್ಷಿಗಳೆಲ್ಲ ಹೆದರಿ ಕೂಗುತ್ತಿರುವಂತೆ ಅಷ್ಟು ದೊಡ್ದ ಮರ ನೆಲಕ್ಕೆ ಒರಗಿತು. ನಾಲ್ವರು ಮನುಷ್ಯರು ತೃಪ್ತಿಯಿಂದ ಬಿದ್ದ ಮರದ ಕಡೆ ನೋಡುತ್ತ,
"ಸಂಜೆ ಆಗುತ್ತೆ ಅಂತಿದ್ದೆ, ಅಂತು ಬೇಗ್ನೆ ಕೆಲಸ ಮೂಗಿತು, ನಡಿ ನಾಳೆ ಬಂದು ಒಪ್ಪ ಮಾಡುವ, ನಮಗು ಬೇಕಾದಷ್ಟು ಸೌದೆ ಸಿಗ್ತದೆ, ಒಡೆಯರಿಗಂತು ಹಬ್ಬ ದಿಮ್ಮಿಗಳು, ಹಲಗೆ , ತೊಲೆ ಏನೆಲ್ಲ ಆಗುತ್ತೋ ಅವರಿಗೆ ಗೊತ್ತು" ಎನ್ನುತ್ತ ಒಬ್ಬರಿಗೊಬ್ಬರು ತಮಾಷಿ ಮಾಡುತ್ತ ಹೊರಟರು.

ನನ್ನ ದೃಷ್ಟಿಗೆ ಮರವೊಂದು , ಸತ್ತು ಬಿದ್ದಿದ್ದ ಬಾರಿ ಜೀವಿಯಂತೆ ಕಾಣಿಸಿತು, ಅದರ ಸುತ್ತಲು ನೂರಾರು ಪಕ್ಷಿಗಳು ಸುತ್ತು ಬರುತ್ತಿದ್ದವು, ಅವುಗಳು ಅಸಹಾಯಕವಾಗಿದ್ದು ಏನು ಮಾಡಲು ತೋಚದೆ, 'ಚೀವ್ ಚೀವ್ " ಎಂದು ಗೋಳಾಡುತ್ತಿದ್ದವು. ಅವುಗಳ ದ್ವನಿಯಲ್ಲಿ ದುಃಖ ಹತಾಷೆ ಭಯ ದಿಘ್ಭ್ರಮೆ ತುಂಬಿದೆ ಎಂದು ನನಗೆ ಅನ್ನಿಸಲು ಶುರುವಾಯಿತು, ನೋಡುತ್ತಿರುವೆ, ಸಾವಿರಾರು ಪಕ್ಷಿಗಳ ಮೊಟ್ಟೆ ನೆಲಕ್ಕೆ ಬಿದ್ದು, ಒಡೆದು ಹೋಗಿದೆ, ಅವುಗಳಿಗೆ ಕೆಂಪಿರುವೆ ಮುತ್ತಿದೆ. ಆಗಿನ್ನು ಕಣ್ಣು ಬಿಡುತ್ತಿದ್ದ ಪುಟ್ಟ ಪುಟ್ಟ ಮರಿಗಳು, ನೆಲಕ್ಕೆ ಬಿದ್ದು ಹಾರಲು ಆಗದೆ ಮುಂದೆ ತೆವಳಲು ಆಗದೆ ಅರ್ಧ ಜೀವವಾದರೆ ಕೆಂಪಿರುವೆಗಳು ಅವುಗಳನ್ನು ಮುತ್ತಿ ತಿನ್ನುತ್ತಿವೆ. ಕೊಂಬೆಗಳ ಕೆಳಗೆ ಸಿಕ್ಕಿಬಿದ್ದು ಸಾವನ್ನಪ್ಪಿರುವ ಪಕ್ಷಿಗಳು  ಎಷ್ಟೋ. ಎಲ್ಲವನ್ನು ನೋಡುತ್ತ     ನೋಡುತ್ತ ಅವುಗಳ ಚೀರಾಟ ಕೇಳುತ್ತ ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ತುಂಬುತ್ತಿದೆ.

ಸಂಜೆಯಾಗುತ್ತ ಬಂದಿತು, ದೂರ ದೂರ ಹೋಗಿದ್ದ ಪಕ್ಷಿಗಳೆಲ್ಲ ತಮ್ಮ ನಿವಾಸ ಹುಡುಕುತ್ತ ಬಂದು  ಗಾಭರಿಗೊಂಡಿವೆ, ಅವುಗಳ ಕೂಗು ಸುತ್ತಲ ಕಾಡನ್ನೆಲ್ಲ ತುಂಬುತ್ತಿದೆ , ನನ್ನ ಕಣ್ಣಿಗೆ ಒಂದು ಪಕ್ಷಿಯ ಗೋಳಾಟ ಕಂಡಿತು, ಏನು ಎಂದು ನೋಡಿದೆ, ಕೆಳಗೆ ಅದರ ಮರಿ ಇರಬೇಕು, ಅದು ಮರ ಬೀಳುವಾಗ ಹೇಗೆ ಕೆಳಗೆ ಬಿತ್ತೊ ಗೊತ್ತಿಲ್ಲ, ಮುರಿದ ಕೊಂಬೆಯ ಚೂಪಾದ ತುದಿ, ಅದರ ಎದೆಯ ಬಾಗದಿಂದ ನುಗ್ಗಿ , ಬೆನ್ನಿನ ಮೇಲ್ಬಾಗದಿಂದ ಹೊರಬಂದಿದೆ, ನನಗೆ ನೋಡುತ್ತಿರುವಂತೆ , ಗೃಹಪ್ರವೇಶದ ದಿನವೆ ರಾಮಕೃಷ್ಣ ಮಾಸ್ತರರ ಮಗನ ಸಾವು ನೆನಪಿಗೆ ಬಂದು ಕಣ್ಣಮುಂದೆ ನಿಂತಿತು, ಆ ಮಗುವು ಹಾಗೆ ಕಣ್ಣಿಣದ ಸಲಾಕೆ ಎದೆಯಿಂದ ಬೆನ್ನಿನವರೆಗು ಚುಚ್ಚಿ ಪ್ರಾಣ ಹೋಗಿತ್ತು.

ನನಗೆ ಗೊತ್ತಿಲ್ಲದೆ ಅಳು ಪ್ರಾರಂಬವಾಯಿತು ಬಿಕ್ಕಿ ಬಿಕ್ಕಿ ಅಳುತ್ತಿದೆ ............

"ಗುರುಗಳೆ ಏನಾಯಿತು, ಏಕೆ "  ಶ್ರೀನಿವಾಸನ ದ್ವನಿ ನನ್ನನ್ನು ಎಚ್ಚರಿಸಿತು,

ನನಗೆ ಗೊತ್ತಿಲ್ಲದೆ ನಾನು ಅಳುತ್ತಿರುವೆ, ನನ್ನ ಕಣ್ಣಲ್ಲಿ ನೀರು ತುಂಬಿ ಹರಿಯುತ್ತಿತ್ತು, ಆದರೆ ಅವನಿಗೆ ಏನು ಹೇಳಲಿ, ಕುಳಿತುಕೋ ಎಂಬಂತೆ ಸನ್ನೆ ಮಾಡಿದೆ. ಹಾಗೆ ದುಃಖದ ಭಾವವನ್ನು ನನ್ನೊಳಗೆ ನುಂಗಿದೆ. ನನ್ನ ಮನಸಿಗೆ ಈಗ ಏನೇನೊ ಭಾವಗಳು ತುಂಬಿಬರುತ್ತಿದ್ದವು. ಪ್ರಕೃತಿ ಮರ ಜಲ ನದಿ ಇವೆಲ್ಲ ದೇವರ ಸೃಷ್ಟಿ , ಮನುಷ್ಯ ಇವುಗಳನ್ನೆಲ್ಲ ನಾಶ ಮಾಡುತ್ತ ಪಾಪಕ್ಕೆಒಳಗಾಗುತ್ತಿದ್ದಾನೆ,  ಇಂತಹ ಪಾಪ ಮಾಡುತ್ತ, ಮತ್ತೆ ದೇವರ ಎದುರಿಗೆ ನಿಂತು ಪೂಜೆ ಸಲ್ಲಿಸುತ್ತಿದ್ದರೆ ಏನು ಲಾಭ.

ನನಗೇಕೊ ಆ ಪಕ್ಷಿಗಳ ಚೀರಾಟದ ದ್ವನಿಗೆ ಕಿವಿ ತುಂಬಿತ್ತು. ಅವುಗಳ ಚೀರಾಟದ ಚೀವ್ ಚೀವ್ ಬರಿ ದುಃಖದ ಕೂಗಾಗಿ ಕೇಳಲಿಲ್ಲ, ಅವುಗಳು ಮನುಜನನ್ನು ಕೋಪದಿಂದ ಶಪಿಸುತ್ತಿರುವಂತೆ ಅನ್ನಿಸಿತು. ಮಾಸ್ತರರ ಮಗನು ಪಕ್ಷಿಯ ಮರಿಯ ರೀತಿಯಲ್ಲೆ ಏಕೆ ಸಾಯಬೇಕಿತ್ತು.  ಅವನಾವನೊ ವೆಂಕಟ ಅದೇಕೊ ಮರಕ್ಕೆ ನೇಣು ಹಾಕಿಕೊಂಡು ಸಾಯಬೇಕಿತ್ತು?. ನಿಜ ಮನುಷ್ಯ ಭೂಮಿಯಲ್ಲಿ ಅನುಭವಿಸುತ್ತಿರುವ ನೋವು ದುಃಖ ಗಳಿಗೆಲ್ಲ ಅವನ ಪ್ರಕೃತಿಯ ಮೇಲಿನ ಅತ್ಯಾಚಾರವೆ ಕಾರಣ. ಪ್ರಕೃತಿಯ ಉಳಿದ ಜೀವಿಗಳು ಮನುಷ್ಯನಿಗೆ ಹಾಕುತ್ತಿರುವ ಶಾಪವೆ ಕಾರಣ ಅನ್ನಿಸಿತು.

ಕತ್ತಲಲ್ಲಿ ನನ್ನ ಕಣ್ಣೀರು ಎದುರು ಕುಳಿತ ಶ್ರೀನಿವಾಸನಿಗೆ ಕಾಣಲಿಲ್ಲ. ಆದರು ನಾನು ಅಳುತ್ತಿರುವೆ ಎಂದು ಅವನಿಗೆ ತಿಳಿಯುತ್ತಿತ್ತು.
ಅವನು ಮತ್ತೆ ಕೇಳಿದ ,"ಗುರುಗಳೆ ನೀವು ಏಕೆ ಅಳುತ್ತಿದ್ದೀರಿ, ಮತ್ತೇನಾದರು ತಮ್ಮ ಮನಸಿಗೆ ಗೋಚರಿಸಿತ, ನನಗೂ ಹೇಳಬಹುದ " ಎಂದೆಲ್ಲ ಕೇಳುತ್ತಿದ್ದ

ನಾನು ನಿಧಾನವಾಗಿ "ಹೌದು ಶ್ರೀನಿವಾಸ ನೀನು ಇದನ್ನು ಕೇಳಲೆ ಬೇಕು, ನಾನು ನೋಡಿದ ವ್ಯಥೆಯ ಕತೆ" ಎನ್ನುತ್ತ ನನ್ನ ಕಣ್ಣಿಗೆ ಕಂಡ ಕತೆಯನ್ನು ಅವನಿಗೆ ವರ್ಣಿಸಿದೆ, ಅವನ ಕಣ್ಣಲ್ಲು ನೀರು ಬರುತ್ತಿತ್ತು. ಅವನಿಗಾಗಲಿ ನನಗಾಗಲಿ ಏನು ಮಾತನಾಡಬೇಕೆಂದು ತೋಚಲಿಲ್ಲ. ನಾನೆ ನುಡಿದೆ , ಆಗಲೆ ಬೆಳಗಾಗುತ್ತ ಬಂದಿತು ಎನ್ನಿಸುತ್ತಿದೆ , ನೀನು ಸ್ವಲ್ಪ ಕಾಲ ಹೋಗಿ ಮಲಗು, ಅವನು ನಿಧಾನವಾಗಿ ಎದ್ದು ಹೋದ

ಶ್ರೀನಿವಾಸ ಹೋದ ನಂತರ ನನ್ನ ಮನ ದುಗುಡದಿಂದ ತುಂಬಿತ್ತು, ಹಾಸಿಗೆ ಮೇಲೆ ನಿದ್ದೆ ಮಾಡಲಾರೆ ಅನ್ನಿಸಿತು. ಕೆಳಗೆ ಇಳಿದೆ, ಮಂಚದಮೇಲಿದ್ದ ರಗ್ಗನ್ನು ತೆಗೆದು ಅಗಲಕ್ಕೆ ನೆಲದ ಮೇಲೆ ಹಾಸಿದೆ. ದಿಂಬನ್ನು ಇಟ್ಟು ನೆಲದ ಮೇಲೆ ಮಲಗಿದೆ. ಅಂಗತಾ ಮಲಗಿ ಕಣ್ಣು ಮುಚ್ಚಿದೆ.  

ಕಣ್ಣಿಗೆ ಕಂಡ ಪಕ್ಷಿಗಳ ಆಕ್ರಂದನದ ಘಟನೆಯ ಬಗ್ಗೆ ಯೋಚಿಸುತ್ತಿದೆ.

ಇದು ಹೇಗೆ ಆಗುತ್ತಿದೆ, ಗುರುಗಳು ನನಗೆ ದಯಪಾಲಿಸಿರುವ ವರದ ಮೇಲೆ ನನಗೆ ಯಾವುದೆ ಹಿಡಿತ ಇರುವಂತೆ ಕಾಣಲಿಲ್ಲ. ಅದು ತನಗೆ ತಾನೆ ನನಗೆ ಇತಿಹಾಸದ ಘಟನೆಗಳನ್ನು ತೋರಿಸುತ್ತಿದೆ. ನನಗೆ ಗುರುಗಳು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ನನಗೆ ಅರ್ಥವಾಗಲಿಲ್ಲ. ಪ್ರಕೃತಿಯು ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳುವುದು ಎಂದೆ, ಅಥವ ಮರ , ಜಲ, ಗಾಳಿಯನ್ನು ನಾಶಗೊಳಿಸುತ್ತಿರುವ ನಮ್ಮ ನಡತೆಯಿಂದ ಅವುಗಳು ಹಾಕುವ ಶಾಪ ನಮ್ಮನ್ನು ಕಾಡುತ್ತಿದೆ ಎಂದೆ. ಅದ್ಯಾವುದು ಅಲ್ಲವೇನೊ.

ಗುರುಗಳು ಮುಖ ಕಂಡಂತೆ ಆಯಿತು. ಒಮ್ಮೆಲೆ ಹೊಳೆದುಬಿಟ್ಟಿತು, ಇಲ್ಲ ಅದಲ್ಲ, ನನಗೆ ಗುರುಗಳು ಕೊಟ್ಟಿರುವ ಸಿದ್ದಿಶಕ್ತಿಯ ಸ್ವರೂಪವೆ ಬೇರೆ, ಅದಕ್ಕು ಮನುಷ್ಯನ ಇತಿಹಾಸಕ್ಕು ಯಾವುದೆ ಸಂಭಂದವಿಲ್ಲ. ನಾನು ಯಾವುದೆ ಮನುಷ್ಯನ ಇತಿಹಾಸವನ್ನು ತಿಳಿಯಲಾರೆ. ಆದರೆ ನಾನು ಯಾವುದಾದರು ಮನೆ ಅಥವ ದೇವಾಲಯ ಅಥವ ಅಂತ ಸ್ಥಳದಲ್ಲಿದ್ದಾಗ ಆ ಜಾಗದಲ್ಲಿ  ಹಿಂದೆ ಘಟಿಸಿರುವ ಘಟನೆಗಳನ್ನು ನಾನು ಅರಿಯಬಹುದು. ಆ ಸ್ಥಳದ ಯಾವುದೊ ವೈಬ್ರೇಷನ್ ಅಂದರೆ ಕಂಪನ ಶಕ್ತಿ ನನ್ನ ಮನಸಿನ ಕಂಪನದೊಂದಿಗೆ ಸರಿಸಮಾನವಾಗಿ ಸೇರಿ ಹೋದಾಗ ಅಲ್ಲಿಯ ಕತೆ ದೃಷ್ಯ ರೂಪದಲ್ಲಿ ನನಗೆ ಕಾಣುತ್ತದೆ ಹೊರತಾಗಿ ಅಲ್ಲಿರುವ ಮನುಷ್ಯರ ಇತಿಹಾಸ ನಾನು ಅರಿಯಲಾರೆ, ಅದಕ್ಕಾಗಿಯೆ ನನಗೆ ಮನೆಯನ್ನು ಮಾರಿ ಹೋದ ಆ ರಾಮಕೃಷ್ಣ ಮಾಸ್ತರರು ಮುಂದೆ ಏನಾದರು ಎಂದು ತಿಳಿಯಲಾಗುತ್ತಿಲ್ಲ. ಹಾಗೆ ಹೊಲಮಾಡಿಕೊಂಡಿದ್ದ ವೆಂಕಟ ಆತ್ಮಹತ್ಯೆ ಮಾಡಿಕೊಂಡ ನಂತರ ಅವನ ಸಂಸಾರ ಅವರ ಅಮ್ಮ ದೇವಕಿ ಎಲ್ಲ ಏನಾದರು ಗೊತ್ತಾಗುತ್ತಿಲ್ಲ. ರಾಜರಿಂದ ಹೊಲವನ್ನು ಕಾಣಿಕೆ ಪಡೆದ ವೆಂಕಟನ ತಾತನೊ ಮುತ್ತಾತನೊ ಯಾರು ಅದು ಸಹ ನನಗೆ ಗೊತ್ತಿಲ್ಲ, ಈ ನೆಲದೊಂದಿಗೆ ಸಂಬಂದವಿಲ್ಲದ ಯಾವುದೆ ಘಟನೆಯನ್ನು ನಾನು ನೋಡಲಾರೆ, ತಿಳಿಯಲಾರೆ. ಯಾವುದೆ ಮನುಷ್ಯನ ಚರಿತ್ರೆಯನ್ನು ನಾನು ಅರಿಯಲಾರೆ.


ಎದುರಿಗೆ ಗುರುಗಳ ಮುಖ ಕಾಣುತ್ತಿತ್ತು, ನಾನು ಕೈ ಮುಗಿದು ಹೇಳಿದೆ
"ಪೂಜ್ಯರೆ ನನಗೆ ಈ ಸಿದ್ದಿಯನ್ನು ಏಕೆ ದಯಪಾಲಿಸಿದಿರಿ ನನಗೆ ತಿಳಿಯುತ್ತಿಲ್ಲ. ಹನ್ನೆರಡು ವರುಷಕ್ಕಿಂತ ಹೆಚ್ಚು ಕಾಲ ಅದನ್ನು ನಾನು ಉಪಯೋಗಿಸಿಯೆ ಇರಲಿಲ್ಲ, ಆದರೆ ಈ ಮನೆಗೆ ಬಂದು ಅನಿರೀಕ್ಷಿತವಾಗಿ ನಿಮ್ಮ ವರದ ಪ್ರಭಾವ ಕಂಡೆ. ಆದರೆ ನನಗೆ ಇದರ ಸದುಪಯೋಗ ಹೇಗೆ ಮಾಡುವದೆಂದು ತಿಳಿಯುತ್ತಿಲ್ಲ. ಈ ಪ್ರಪಂಚಕ್ಕೆ ಉಪಯೋಗವಾಗುವ ರೀತಿ ಈ ಸಿದ್ದಿಯನ್ನು ಉಪಯೋಗಿಸಲು ಕಲಿತ ನಂತರ ಇದರ ಸಹಾಯ ಪಡೆಯುವೆ, ಗುರುಗಳೆ ನನಗೆ ಆ ಸದುಪಯೋಗದ ದಾರಿ ತೋರಿಸಿ ಅಲ್ಲಿಯವರೆಗು ಈ ಸಿದ್ದಿಯನ್ನು ನಾನು ಉಪಯೋಗಿಸಲಾರೆ" ಎಂದು ಕೊಂಡೆ.  ಸ್ವಲ್ಪ ಜಂಪು ಹತ್ತಿದಂತಾಯ್ತು.

ಒಂದು ಅಥವ ಎರಡು ಘಂಟೆ ನಿದ್ದೆ ಮಾಡಿದೆನೇನೊ, ಯಾರೊ ರೂಮಿನ ಬಾಗಿಲಲ್ಲಿ ನಿಂತಂತೆ ಅನ್ನಿಸಿತು. ತಕ್ಷಣ ಎದ್ದು ಕುಳಿತೆ. ದೃಷ್ಟಿ ಇಟ್ಟು ನೋಡಿದರೆ ಶ್ರೀನಿವಾಸ ನಿಂತಿದ್ದು ಕಾಣಿಸಿತು.
"ಏಕೆ ನಿದ್ದೆ ಬರಲಿಲ್ಲವೆ" ಎಂದು ಕೇಳಿದೆ
"ಇಲ್ಲ ಗುರುಗಳೆ, ಏಕೆ ಎದ್ದಿರಿ, ಮಂಚದ ಮೇಲಿಂದ ಇಳಿದು ಕೆಳಗೆ ಮಲಗಿಬಿಟ್ಟಿದ್ದೀರಿ " ಎಂದ ಆಶ್ಚರ್ಯದಿಂದ
"ಇಲ್ಲ ನನ್ನ ಅಭ್ಯಾಸ ಅದು, ರಾತ್ರಿ ಯಾವಗಲೆ ಮಲಗಲಿ ಬೆಳಗ್ಗೆ ಐದಕ್ಕೆ ಎಚ್ಚರವಾಗಿಬಿಡುತ್ತದೆ. ಶ್ರೀನಿವಾಸ, ನನ್ನ ನಿದ್ದೆ ಆಯಿತು ಅನ್ನಿಸುತ್ತೆ. ಇನ್ನು ಸ್ನಾನಕ್ಕೆ ಏನು ಅನುಕೂಲವಿದೆ, ನೀರಿಗೆ ತೊಂದರೆ ಇಲ್ಲವಲ್ಲ " ಎಂದೆ
"ನೀರಿಗೇನು ಬರವಿಲ್ಲ ಗುರುಗಳೆ, ನಾನು ಅದಕ್ಕೆ ಎದ್ದೆ, ನೀರು ಒಲೆಗೆ ಎರಡು ಸೌದೆ ಹಾಕಿಬಿಡುವೆ, ಬಿಸಿಯಾಗಿ ಕಾಯುತ್ತದೆ, ನಂತರ ಸ್ನಾನ ಮಾಡುವಿರಂತೆ, ಅಲ್ಲಿಯವರೆಗು ಒಂದು ಬಿಸಿ ಬಿಸಿ ಕಾಫಿ ಮಾಡಲೆ " ಎಂದ
"ಬೇಡ, ನನಗೆ ಬಿಸಿ ನೀರಿನ ಅಭ್ಯಾಸವಿಲ್ಲ, ಯಾವ ಕಾಲಕ್ಕು ತಣ್ಣೀರೆ, ಹಾಗಿದ್ದರೆ ನಾನು ಸ್ನಾನ ಮುಗಿಸಿಬಿಡುವೆ" ಎನ್ನುತ್ತ ಎದ್ದೆ, ನನ್ನ ಹಿಂದೆ ಬಂದ ಶ್ರೀನಿವಾಸ ಸ್ನಾನದ ಮನೆಯನ್ನು ತೋರಿಸಿದ. ಅವನು ಹೊರಹೋದ ನಂತರ, ನಾನು ಎಲ್ಲ ಕರ್ಮಗಳನ್ನು ಮುಗಿಸಿ ಸ್ನಾನ ಮುಗಿಸಿ ಹೊರಬರುವಾಗ ಅರ್ಧ ಒಂದು ತಾಸು ಕಳೆದಿತ್ತೇನೊ.

ಒಳಗೆ ಅಡುಗೆ ಮನೆಯಲ್ಲಿ ಶ್ರೀನಿವಾಸ ಅವನ ಪತ್ನಿ ಮಾತನಾಡುವುದು ಕೇಳಿಸಿತು

"ಅವರು ಬಂದರು ಅನ್ನಿಸುತ್ತೆ, ಒಂದು ಕಾಫಿ ಕೊಡು, ನಂತರ ಎಂಟು ಗಂಟೆ ಹೊತ್ತಿಗೆ ಇಡ್ಲಿನೊ ಏನಾದರು ಒಂದು ತಿಂಡಿ ಮಾಡಿಬಿಡು ಅವರು ಒಪ್ಪಿದರೆ, ಒಂದು ನಾಲಕ್ಕು ಜನರನ್ನು ಕರೆದು ಪಾದ ತೊಳೆದು ಬಿಡೋಣ, ಮಧ್ಯಾನ್ಹದ ಊಟಕ್ಕೆ ಏನಾದರು ಸಿಹಿ ಅಡುಗೆ ಮಾಡು"
ನನಗೆ ಅರಿವಿಲ್ಲದೆ ನಗು ನನ್ನ ಮನದಲ್ಲಿ ತುಂಬಿತು, ನಾನು ಮೃದುವಾಗಿ ಕೂಗಿದೆ
"ಶ್ರೀನಿವಾಸ ಇಲ್ಲಿ ಬಾಪ್ಪ" , ಅವನು ಹೊರಬಂದ
" ಇಲ್ಲಿ ನೋಡು, ನಾನು ಬಂದ ಕೆಲಸವಾಯಿತು, ಇನ್ನು ಹೊರಡಲೆ " ಎಂದೆ . ಅವನು ಗಾಭರಿ ಆಶ್ಚರ್ಯದಿಂದ,
"ಅದೇಕೆ ಗುರುಗಳೆ, ಅಷ್ಟು  ಆತುರ, ತಿಂಡಿ , ಮದ್ಯಾನ್ಹದ ಊಟ ಮುಗಿಸಿ ಹೊರಟರಾಯಿತು, ನಿಮ್ಮ ಜೊತೆ ಸ್ವಲ್ಪ ಕಾಲ ಕಳೆಯುವ ಅವಕಾಶ ಮಾಡಿಕೊಡಿ" ಎಂದ ವಿನೀತನಾಗಿ
"ನಿನ್ನೆ ಸಂಜೆಯಿಂದ ನಿನ್ನ ಜೊತೆಯೆ ಇದ್ದೆನಲ್ಲ ಶ್ರೀನಿವಾಸ, ಅಲ್ಲದೆ ನಾನು ಬರುವಾಗ ನೀನು ಹೇಳಿದ್ದೆ , ಈದಿನದ ರಾತ್ರಿ ಊಟ ಹಾಗು ರಾತ್ರಿ ಕಳೆಯಲು ನಮ್ಮ ಮನೆಗೆ ಬನ್ನಿ ಎಂದು ಅಲ್ಲವೆ ನೀನು ಕರೆದಿದ್ದು, ನಿನ್ನ ಜೊತೆ ಒಪ್ಪಿಕೊಂಡಂತೆ ಬಂದಿರುವೆ, ಅದೆ ರೀತಿ ರಾತ್ರಿ ಇಲ್ಲಿ ಕಳೆದಿರುವೆ, ಅದಕ್ಕಿಂತ ಹೆಚ್ಚು ಕಾಲ ನಾವು ಸನ್ಯಾಸಿಗಳು ಒಂದು ಕಡೆ ನಿಲ್ಲ ಬಾರದು. ನಾನೀಗ ಹೊರಡುವೆ ನನ್ನನ್ನು ತಡೆಯಬೇಡ" ಎಂದೆ. ಅವನು ಉತ್ತರ ತೋಚದೆ ನಿಂತ. ಒಳಗಿನಿಂದ ಅವನ ಪತ್ನಿ ಕಾಫಿ ಹಿಡಿದು ತಂದಳು
"ಅಮ್ಮ, ನಾನು ಬೆಳಗಿನ ಕಾಫಿ ಅಂತ ಏನು ಕುಡಿಯುವುದಿಲ್ಲ, ಆದರೆ ನೀನು ಮಾಡಿ ಅಡುಗೆ ಮನೆಯಿಂದ ಹಿಡಿದು ತಂದಿರುವೆ, ಬೇಡ ಅಂತ ಹಿಂದೆ ಕಳಿಸಿದರೆ, ನಿನ್ನ ಮನ ನೊಂದೀತು, ಅದಕ್ಕಾಗಿ ಕೊಡು ಕುಡಿಯುವೆ, ಮತ್ತೆ ನನಗಾಗಿ ಏನು ಮಾಡಲು ಹೋಗಬೇಡಿ" ಎನ್ನುತ್ತ ಕಾಫಿ ತೆಗೆದುಕೊಂಡು ಅಲ್ಲೆ ಇದ್ದ ಕುರ್ಚಿಯ ಮೇಲೆ ಕುಳಿತೆ.
ಮನ ಅದೇನೊ ಪ್ರಪುಲ್ಲವಾಗಿತ್ತು, ಸಂತಸದಿಂದಿತ್ತು, ರಾತ್ರಿಯ ದುಗುಡ ದುಃಖಗಳೆಲ್ಲ ನನ್ನನ್ನು ಬಿಟ್ಟು ಹೋಗಿದ್ದವು.
"ಶ್ರೀನಿವಾಸ ಮನೆಯ ಮುಂದೆ ಸಾಕಷ್ಟು ಜಾಗ ಇದೆ ಅಲ್ಲವೆ?" ಅವನು ನನ್ನ ಪ್ರಶ್ನೆ ಅರ್ಥವಾಗದೆ,
"ಹೌದು ಸ್ವಾಮಿ ಸಾಕಷ್ಟು ಸ್ಥಳವಿದೆ, ಸೈಟು ಪೂರ್ತಿ ಮನೆ ಕಟ್ಟಿಸಿಲ್ಲ" ಎಂದ
"ಆಯಿತು, ಮನೆಯ ಹೊರಗೆ, ಸೈಟಿನ ಎರಡು ಮೂಲೆಗಳಲ್ಲಿ ಯಾವುದಾದರು ದೊಡ್ಡದಾಗಿ ಬೆಳೆಯುವ ಹಣ್ಣಿನ ಮರವನ್ನು ಹಾಕಿಸು, ಆದರೆ ಆ ಮರ ಪಕ್ಷಿಗಳಿಗೆ ಆಶ್ರಯ ಕೊಡುವಂತ ಮರವಾಗಿರಬೇಕು, ಯಾವುದೊ ಕೆಲಸಕ್ಕೆ ಬಾರದ ಮರವಾಗಬಾರದು, ಒಪ್ಪಿಗೆಯೆ " ಎಂದೆ
ಶ್ರೀನಿವಾಸನು ತುಸು ಅಚ್ಚರಿಯಿಂದ
"ಆಗಲಿ ಗುರುಗಳೆ ನಿಮ್ಮ ಮಾತು ಪಾಲಿಸುವೆ, ಮನೆಯ ಮುಂದೆ ಎರಡು ಮಾವಿನ ಮರ ಹಾಕಿಸುವೆ, ಮುಂದೆ ನೆರಳು ಇರುತ್ತದಲ್ಲವೆ" ಎಂದ.
"ಸರಿ ಆಯಿತು, ಎಲ್ಲವು ಸರಿ ಇದೆ ಯೋಚಿಸಬೇಡ, ನಿನ್ನ ಮಗನು ಅಷ್ಟೆ,  ಒಳ್ಳೆಯ ಸ್ವಭಾವ ಆದರೆ ವಯಸಿನ ಪ್ರಭಾವ ಅಷ್ಟೆ, ಹಾಗಾಗಿ ಮಾತು ಅವನ ಹಿಡಿತದಲ್ಲಿಲ್ಲ, ಮುಂದೆ ಎಲ್ಲವು ಒಳ್ಳೆಯದೆ ಆಗುತ್ತೆ, ಅವನು ನಿನ್ನನ್ನು , ಅವರ ಅಮ್ಮ, ಅಜ್ಜಿಯನ್ನು ಚೆನ್ನಾಗಿಯೆ ನೋಡಿಕೊಳ್ಳುವ ಯೋಚಿಸಬೇಡ " ಎಂದೆ
ಶ್ರೀನಿವಾಸ, ಸಂತಸದಿಂದ ತಲೆ ಆಡಿಸಿದ. ನನ್ನ ಕಾಫಿ ಮುಗಿದಿತ್ತು.  ಶ್ರೀನಿವಾಸನ ತಾಯಿ ಬಾಗ್ಯಮ್ಮನು ಎದ್ದು ಈಚೆಗೆ ಬಂದು ನಾನು ಹೊರಟಿರುವುದು ಕಂಡು ಅಚ್ಚರಿಯಿಂದ ನಿಂತರು. ನಾನು ಅವರಿಗೆ ಮತ್ತು ಶ್ರೀನಿವಾಸನ ಪತ್ನಿಗೆ ವಂದಿಸಿ ಹೊರಬಂದೆ. ನನ್ನ ಹಿಂದೆ ಶ್ರೀನಿವಾಸನು ಹೊರಬಂದ . ನಾನು ಗೇಟಿನ ಹತ್ತಿರ ನಡೆಯುತ್ತಿರಬೇಕಾದರೆ, ಶ್ರೀನಿವಾಸನ ಮಗ ಲಕ್ಷ್ಮೀಶ ಹೊರಬಂದ,ನಾನು ಅವನತ್ತ ನೋಡಿ ಮುಗುಳ್ನಗು ನಕ್ಕೆ, ನಾನು ಬೆಳಗ್ಗೆಯೆ ಹೊರಟಿರುವುದು ಕಂಡು ಅವನು ಅಚ್ಚರಿಯಿಂದ ಎನ್ನುವಂತೆ ನಿಂತ ಆಗ ನಾನು ಅವನನ್ನು ಕುರಿತು ಹೇಳಿದೆ
"ಮಗು ನಿನಗೊಂದು ಕೆಲಸಕೊಡುವೆ, ದಿನಾ ಮಾಡುವೆಯ?"
"ಏನು ಮಾಡಬೇಕು"
ಅವನು ಸ್ವಲ್ಪ ಅನುಮಾನದಿಂದ ಪ್ರಶ್ನಿಸಿದ, ಇನ್ನು ಯಾವ ದೇವಾಲಯಕ್ಕೆ ಹೋಗು ಎನ್ನುವನೊ ಎನ್ನುವ ಅನುಮಾನ ಅನ್ನಿಸುತ್ತೆ, ನಾನು ಹೇಳಿದೆ

"ಇನ್ನೇನಿಲ್ಲ ಮಗು, ಪ್ರತಿ ದಿನ ಬೆಳಗ್ಗೆ, ಮನೆಯ ಮೇಲೆ, ಸ್ವಲ್ಪ ಜಾಗದಲ್ಲಿ,, ಕಾಳುಗಳನ್ನು , ಅಕ್ಕಿಯನ್ನು, ಸ್ವಲ್ಪ ನೀರನ್ನು ಇಟ್ಟು ಪಕ್ಷಿಗಳನ್ನು ಕರೆಯುವ ಅಭ್ಯಾಸ ಮಾಡು, ಸ್ವಲ್ಪ ದಿನ ಕಳೆದರೆ ಅಭ್ಯಾಸವಾಗಿ ನೀನು ಬೆಳಗ್ಗೆ ಕಾಳು ಇಡುವಾಗಲೆ ಪಕ್ಷಿಗಳೆಲ್ಲ ಬರುತ್ತವೆ, ಇದನ್ನು ಅಜೀವ ಪರ್ಯಂತ ಮುಂದುವರೆಸು, ಒಂದು ದಿನವು ತಪ್ಪದೆ ಪಕ್ಷಿಗಳಿಗೆ, ಕಾಳು ನೀರು ಇಡು,  ಈ ಕೆಲಸ ಮಾಡ್ತೀಯ"

ಅವನು  ಸಮಾದಾನದಿಂದ ನುಡಿದ,

"ಖಂಡೀತ ಮಾಡ್ತೀನಿ , ಹಾಗೆ ಆಗಲಿ ಇಂತಹವು ಮಾಡಿದರೆ ತಪ್ಪೇನಿಲ್ಲ ಒಳ್ಳೆಯದೆ"
ನಾನು ನಗುತ್ತ ನುಡಿದ
"ಮಾಡು ಮಾಡು, ಆದರೆ ಒಂದೆ ಒಂದು ನಿಯಮ ಅಥವ ನಿನ್ನ ಬಾಷೆಯಲ್ಲಿ ಕಂಡೀಶನ್ ಇದೆ ಮಗು"
"ಕಂಡೀಶನ್ ಇದೆಯ ಏನದು " ಅವನು ಮತ್ತೆ ಅಚ್ಚರಿಯಿಂದ ಕೇಳಿದ
"ಇನ್ನೇನಿಲ್ಲ,  ಪಕ್ಷಿಗಳಿಗೆ ಹಾಕುವ ಕಾಳು ಅಥವ ಅಕ್ಕಿ ಏನಾದರು ಆಗಲಿ , ಅದು ನಿನ್ನ ಅಪ್ಪನದೊ ತಾತನದೊ ಹಣದಿಂದ ತರಬಾರದು, ನಿನ್ನದೆ ಸ್ವಂತ ದುಡಿಮೆಯಿಂದ ತರಬೇಕು, ಆಗುವುದೆ? ಅದು ಇಂದಿನಿಂದಲೆ ಪಾರಂಬಿಸಬೇಕು, ನೆನಪಿಡು ಅದು ನಿನ್ನ ದುಡಿಮೆಯ ಹಣದಿಂದಲೆ ತಂದದ್ದು ಆಗಿರಬೇಕು"  

ನಾನು ನಗುತ್ತ ನುಡಿದೆ. ಅವನು ಒಮ್ಮೆಲೆ ಮೌನತಳೆದು ನಿಂತ, ಸ್ವಲ್ಪ ಕಾಲ ಕಳೆದು

"ಆಗಲಿ ಸ್ವಾಮಿ, ನಿಮ್ಮ ಮಾತಿನಂತೆ ನಡೆಯುತ್ತೇನೆ, ನನ್ನ ದುಡಿಮೆಯಿಂದ ದಿನ ಮನೆಯ ಮೇಲೆ ಪಕ್ಷಿಗಳಿಗೆ ಕಾಳು, ಅಕ್ಕಿ ತಂದು ಹಾಕುತ್ತೇನೆ, ಅದು ಇಂದಿನಿಂದಲೆ , ನನ್ನನ್ನು ಆಶೀರ್ವದಿಸಿ, ಎನ್ನುತ್ತ ಕಾಲು ಮುಟ್ಟಲು ಬಂದ, ನಾನು ಜೋರಾಗಿ ನಕ್ಕು ಬಿಟ್ಟೆ

"ಇದೆಲ್ಲ ಏನು ಬೇಡ ಬಿಡು, ನಮಸ್ಕಾರವೆಲ್ಲ ಬೇಡ, ಶುದ್ದ ಜೀವನನಾಗಿ ಬಾಳು ಸಾಕು" ಎನ್ನುತ್ತ, ಶ್ರೀನಿವಾಸನತ್ತ ತಿರುಗಿ ನಕ್ಕು ಹೊರಟುಬಿಟ್ಟೆ.

ಗೇಟು ದಾಟಿದವನು ರಸ್ತೆಯಲ್ಲಿ ಮುಂದೆ ಹೊರಟೆ. ಮತ್ತೆ ಮನೆಯತ್ತ ತಿರುಗಿ ನೋಡಲಿಲ್ಲ. ಸ್ವಲ್ಪ ದೂರ ನಡೆದೆ. ಮನವೇಕೊ ಸಮಾದಾನದಿಂದ ತುಂಬಿರುವಂತೆ ಅನ್ನಿಸಿತು.
  ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಜೋಡಿಯನ್ನು ನೋಡುತ್ತಿದ್ದಾಗ,ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ.ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ,ಕರುಣೆ,ದುಃಖ,ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ನುಡಿದ ಮಾತುಗಳು ಪದೆ ಪದೆ ನೆನಪಿಗೆ ಬರುತ್ತಿತ್ತು.
"ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ "(ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||)
- ಮುಗಿಯಿತು.

No comments:

Post a Comment

enter your comments please