Saturday, September 28, 2013

ಕೃಷ್ಣ ..ಕೃಷ್ಣ...ಕೃಷ್ಣ - ಕಂಸನ ಅಂತ್ಯ


ಕಂಸನ ಅಂತ್ಯ

ಕೃಷ್ಣ ..ಕೃಷ್ಣ...ಕೃಷ್ಣ (11)  -  ಕಂಸನ ಅಂತ್ಯ


ಇಲ್ಲಿಯವರೆಗೂ...

ಗಣೇಶ

ಕೃಷ್ಣ ಸಾಮಾನ್ಯ ಜನರು ಎಷ್ಟೆ ಹೋರಾಡಬಹುದು. ಜಗಳವಾಡಬಹುದು ಆದರೆ ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲುವುದು ಅನ್ನುವ ಮನಸ್ಥಿತಿ ತುಂಬಾನೆ ಕಷ್ಟ. ಅದು ಮೊದಲ ಬಾರಿ ಅನ್ನುವಾಗ ಅಷ್ಟು ಸುಲುಭವಲ್ಲ. ಹಾಗಿರುವಾಗ ನೀನು ಕಂಸನನ್ನು ಕೊಲ್ಲಲು ಹೊರಟೆ ಅನ್ನುವಾಗ ಅಥವ ಮಥುರೆಯಲ್ಲಿ ಕಂಸನನ್ನು ಕೊಲ್ಲುವಾಗ ನಿನ್ನ ಮನಸಿಗೆ ಹೇಗನಿಸಿತು.

ಮುಂದೆ ಓದಿ...ಕೃಷ್ಣ  ದೀರ್ಘ ಮೌನದ ನಂತರ ನುಡಿದ

ನಿನ್ನ ಮಾತು ನಿಜ ಗಣೇಶ. ಚಿಕ್ಕ ಮಗುವಿನಲ್ಲಿ ನಾನು ಪೂತನಿಯನ್ನಾಗಲಿ ಯಾವುದೊ ರಾಕ್ಷಸರನ್ನಾಗಲಿ ಕೊಂದೆ ಅನ್ನುವಾಗ ನನಗೆ ಗೊತ್ತೆ ಆಗಲಿಲ್ಲ. ಅಥವ ನಾನು ಅವರನ್ನು ಕೊಲ್ಲಲೆ ಇಲ್ಲ ಅನ್ನಬಹುದು. ಯಾವುದೋ ಅದೃಷ್ಟ ನನ್ನನ್ನು ಅವರ ಕೈನಿಂದ ನನ್ನನ್ನು ಕಾಪಾಡಿದೆ. ನನಗಂತು ತೀರ ಚಿಕ್ಕವಯಸ್ಸು ಅದನ್ನೆಲ್ಲ ನೆನಪಿಡಲಾಗದ ಮುಗ್ದತೆ. ಆದರೆ ಕಂಸನನ್ನು ಕೊಂದೆ ಅನ್ನುವಾಗ ಕೊಲ್ಲಬೇಕು ಅನ್ನುವಾಗ ನಾನು ಸಾಕಷ್ಟು ದೊಡ್ಡವನಾಗಿದ್ದೆ, ಸುಮಾರು ಹದಿನೆಂಟು ವಯಸಿರಬಹುದು. ಒಬ್ಬ ವ್ಯಕ್ತಿಯನ್ನು ಕೊಲ್ಲಬೇಕು ಅನ್ನುವ ನಿರ್ಧಾರ ನನ್ನ ಮನಸಿನಲ್ಲಿ ಆಂದೋಳನವನ್ನು ನಿರ್ಮಿಸಿತ್ತು.   ಎಲ್ಲರೂ ನನ್ನನ್ನು ಗೊಲ್ಲನೆಂದು ಬೈದರೂ ಸಹ ನನ್ನದು ಕ್ಷತ್ರೀಯ ರಕ್ತವಲ್ಲವೆ ಹಾಗಾಗಿ ಕೊಲ್ಲುವುದು ರಕ್ತ ಇವೆಲ್ಲ ನನ್ನೊಳಗೆ ಅಂತರ್ಗತವಾಗಿತ್ತೇನೊ. ಕಂಸನನ್ನು ಕೊಲ್ಲಬೇಕು ಅನ್ನುವಾಗ ಹೃದಯ ನಡುಗಿದ್ದು ನಿಜ ಆದರೆ ಅದು ಗೋಕುಲದಿಂದ ಹೊರಡುವಾಗ ಮಾತ್ರ. ಆದರೆ ಮಥುರೆಯನ್ನು ಸೇರುವಷ್ಟರಲ್ಲಿ  ಮನಸ್ಸು ತಹಬದಿಗೆ ಬಂದಿತ್ತು. ನನ್ನ ಹಾಗು ಬಲರಾಮನ ರಕ್ಷಣೆಗೆ ಮೊದಲ ಆಧ್ಯತೆ ಕೊಟ್ಟಿದ್ದೆ. ನಾನು ಬಲರಾಮ ಇಬ್ಬರೆ ಕುಳಿತು ಸಾಕಷ್ಟು ಚರ್ಚಿಸಿದ್ದೆವು. ಯಾವುದೆ ಸಂದರ್ಭದಲ್ಲಿಯೂ ನಾವಿಬ್ಬರು ಬೇರೆ ಬೇರೆ ಇರಬಾರದೆಂದು ಆದಷ್ಟು ಒಟ್ಟಿಗೆ ಪಕ್ಕ ಪಕ್ಕವೆ ಇರಬೇಕೆಂದು , ತುರ್ತು ಸ್ಥಿಥಿಯಲ್ಲಿ ಒಬ್ಬರಿಗೊಬ್ಬರು ಸಹಾಯವಾಗಿರಬೇಕೆಂದು ನಮ್ಮಿಬ್ಬರಲ್ಲಿ ನಿರ್ಧಾರವಾಗಿತ್ತು. ಮುಂದೆ ಬರುವ ಸಂದರ್ಭಗಳನ್ನು ನೋಡಿಕೊಂಡು ಮುಂದಿನ ಯೋಜನೆಗಳನ್ನು ಬದಲಾಯಿಸಿಕೊಳ್ಳಬಹುದೆಂದು ನಿರ್ದರಿಸಿದ್ದೆವು.

ಗಣೇಶ ನಡುವೆ ನುಡಿದ

ನೀನು ಕಂಸನನ್ನು ಕೊಲ್ಲುವ ಮುಂಚೆ ಬೇರೆ ಬೇರೆ ಘಟನೆ ನಡೆಯಿತ್ತಲ್ಲ ಕೃಷ್ಣ. ಬೆನ್ನು ಬಾಗಿದ ಕುಬ್ಜೆ  ತ್ರಿವಕ್ರೆ ಎಂಬಾಕೆಯ ಬೆನ್ನು ಸರಿಮಾಡಿದೆಯಂತೆ, ಹಾಗೆ ಆನೆಯನ್ನೆ ಮಣಿಸಿದೆಯಂತೆ, ಅಲ್ಲದೆ ಚಾಣೂರ ಮುಷ್ಠಿಕರೆಂಬ ದೈತ್ಯರನ್ನು ಗೆದ್ದೆಯಂತೆ

ಕೃಷ್ಣ ನುಡಿದ

ಅಂತೂ ಗಣೇಶ ನೀನು ನನ್ನ ಕಾಲೆಳೆಯುವ ಯಾವ ಸಂದರ್ಭವನ್ನು ಬಿಡುವದಿಲ್ಲ ಅನ್ನು. ನೀನು ಹೇಳಿದಂತೆ, ರಾಜನ ಅರಮನೆಗೆ ಗಂಧವನ್ನು ಹೂವುಗಳು ದಿನವೂ ಕೊಡುತ್ತಿದ್ದ, ಸೇವಕಿ  ತ್ರಿವಕ್ರೆಗೆ ಗೂನು ಬೆನ್ನು ಇದ್ದಿದ್ದು ನಿಜ.  ಆಕೆಯ ನಿಜ ಹೆಸರು ಅದೇನಿತ್ತೊ ಆಕೆಯ ದೇಹ ವಕ್ರತೆಗಾಗಿ ಎಲ್ಲರೂ ತ್ರಿವಕ್ರೆ ಎಂದೆ ಕರೆಯುತ್ತಿದ್ದರು. ಅರಮನೆಯಲ್ಲಿ ಸದಾ ಓಡಾಡುತ್ತಿದ್ದ ಆಕೆ ನನ್ನ ಹೆಸರನ್ನು ಅದೆಷ್ಟು ಸಾರಿ ಕೇಳಿದ್ದಳೊ, ನನ್ನ ಬಗ್ಗೆ ಅದೇನೊ ಭಕ್ತಿ, ನಂಬಿಕೆಗಳನ್ನು ದೀರ್ಘಕಾಲದಿಂದ ಬೆಳೆಸಿಕೊಂಡಿದ್ದವಳು, ಕಂಸನನ್ನು ಕೊಲ್ಲುತ್ತಾನೆ ಎನ್ನುವ ನನ್ನ ಶಕ್ತಿಯ ಬಗೆಗೆ ಆಕೆಗೆ ಅದೇನೊ ಕಲ್ಪನೆಗಳು.
ಆಕೆ   ಭಕ್ತಿಯಿಂದ ಬಂದು ಮಣಿದಳು. ನನಗೆ ಅರ್ಧ ಸಂಕೋಚ ಅರ್ಧ ಸಂಬ್ರಮ. ಆಕೆಯನ್ನು ಗಲ್ಲ ಹಿಡಿದು ಮೇಲೆತ್ತಿದೆ. ಅದೇನೊ ಆಕೆಯ ಗೂನು ಬೆನ್ನು ಸರಿಯಾಗಿಬಿಟ್ಟಿತ್ತು. ಆಕೆಯಂತು ಸಂತೋಷದಿಂದ ಕಣ್ಣೀರು ಸುರಿಸಿದಳು. ಸುತ್ತಲೂ ಇದ್ದವರೆಲ್ಲ ಆಶ್ಚರ್ಯ ಪಟ್ಟರು.

ಗಣೇಶ
ಅಂದರೆ ನೀನೇನು ಮಾಡಿದೆ ಕೃಷ್ಣ ಆಕೆಯ ಬೆನ್ನನ್ನು ಸರಿ ಮಾಡುವ ಪವಾಡವನ್ನು ಹೇಗೆ ಮಾಡಿದೆ

ಕೃಷ್ಣ

ಇಲ್ಲ ಗಣಪ. ನಾನು ಯಾವ ಪವಾಡವನ್ನು ಮಾಡಲಿಲ್ಲ. ಬಹುಶಃ ಆಕೆಗೆ ಯಾವುದೋ ನರದ ದೌರ್ಭಲ್ಯದಿಂದ ಹಾಗೆ ಆಗಿತ್ತೇನೊ, ನಾನು ಅಕೆಗೆ ಆಸರೆ ಕೊಟ್ಟು ನೆಟ್ಟಗೆ ನಿಲ್ಲಿಸಿದಾಗ ಹಿಡಿದಿದ್ದ ನರವು ಸರಿಹೋಗಿರಬಹುದು

ಕೃಷ್ಣ ಜೋರಾಗಿ ನಗುತ್ತಿದ್ದ.
ಗಣಪ ನಗುತ್ತಲೆ ಕೇಳಿದ

“ಕೃಷ್ಣ ನೀನು ಜಾರಿಕೊಳ್ಳಲು ನೋಡುತ್ತಿ, ಅಂತಹ ಪವಾಡಗಳೆಲ್ಲ ನಿನಗೆ ಬೆರಳ ತುದಿಯಲ್ಲಲ್ಲವೆ. ಅದನ್ನೆಲ್ಲ ಯಾವಾಗ ಕಲಿತೆ , ಗೋಕುಲದಲ್ಲಿ ನೀನು ಅಂತಹುದನೆಲ್ಲ ಕಲಿತೆಯ”

ಕೃಷ್ಣ ಗಂಭೀರನಾಗುತ್ತ ಹೇಳಿದ
“ಇಲ್ಲ ಗಣೇಶ, ನಾನು ನಗುತ್ತಿದ್ದರು ನಿಜವನ್ನೆ ಹೇಳುತ್ತಿರುವೆ. ನಾನು ಯಾವ ಪವಾಡವನ್ನು ಮಾಡಲಿಲ್ಲ. ನಿನಗೆ ತಿಳಿಯದೆ  ಇರುವದೇನಿದೆ ನಂಬಿಕೆ ವಿಶ್ವಾಸಗಳು ಎಂತ ಪವಾಡವನ್ನಾದರು ಮಾಡಬಲ್ಲದು ಅಲ್ಲವೆ, ಆಕೆಗೆ ನನ್ನ ಮೇಲಿದ್ದ ವಿಶ್ವಾಸ, ನಿರ್ಮಲ ಅಂತಃಕರಣ. ತನಗೆ ಸರಿಹೋಗಬಹುದೆಂಬ , ತನ್ನ ಕಷ್ಟ ವೆಲ್ಲ ಪರಿಹಾರವಾಗಬಹುದೆಂಬ ನಂಬಿಕೆ ಇಂತಹ ಮನಸ್ಥಿತಿಯಲ್ಲಿ ನನ್ನ ದ್ವನಿ ಆಕೆಯ ಮೇಲೆ ಪರಿಣಾಮಬೀರಿರಬಹುದು.
ಗಣೇಶ, ಇದನ್ನು ತಿಳಿ ಹಿಂದೆಯಾಗಲಿ , ಯಾವಗಲೆ ಆಗಲಿ, ಯಾವ ದೈವ ಶಕ್ತಿಯು ಪವಾಡಗಳನ್ನು ಪ್ರದರ್ಶಿಸಲು ಹೋಗಿಲ್ಲ ಅನ್ನುವುದು ಸತ್ಯ. ಪವಾಡಗಳೆಂದರೆ ಅತಿರೇಕ ಶಕ್ತಿಯ ಪ್ರದರ್ಶನ. ಪ್ರಕೃತಿಗೆ ವಿರುದ್ದವಾದ ಕ್ರಿಯೆ. ಹಾಗಿರುವಾಗ ನಿಯಾಮಕನಾದ ದೈವ ಎಂದಿಗು ತನ್ನ ನಿಯಮ ತಾನೆ ಮುರಿಯುವದಿಲ್ಲ.  ದೇವರಿಗೆ ಅಂತಹ ಪವಾಡಗಳ ಅವಶ್ಯಕತೆಯೂ ಇಲ್ಲ. ಆ ರೀತಿ ಅತಿರೇಕಗಳನ್ನು ಮಾಡುವ ಹಾಗಿದ್ದಲ್ಲಿ,  ರಾಮನ ಅವತಾರ  ಎನ್ನುವ ಕಲ್ಪನೆಗಳೆಲ್ಲ ಏಕೆ, ರಾವಣನನ್ನು ಕೊಲ್ಲುವುದು ಸೃಷ್ಟಿಗೆ ಒಡೆಯನಾದ ದೈವಕ್ಕೆ ಅಷ್ಟು ಕಷ್ಟವೆ ಕೇವಲ ಸಂಕಲ್ಪ ಮಾತ್ರದಿಂದಲೆ ರಾವಣನನ್ನು ಕೊಲ್ಲಬಲ್ಲದಲ್ಲವೆ. ಜೀವನವೆಂದರೆ ಕಷ್ಟು ಸುಖಗಳ ಮಿಶ್ರಣ. ಎಲ್ಲವನ್ನು ಅನುಭವಿಸಲೇ ಬೇಕು. ಯಾವುದೊ ಅತೀತವಾದ ಶಕ್ತಿ ನಮ್ಮನ್ನು ಕಷ್ಟದಿಂದ ಪಾರುಮಾಡುತ್ತದೆ ಅನ್ನುವುದು ಸರಿಯಲ್ಲ. ಹಾಗೆ ಪವಾಡ ಪ್ರದರ್ಶಿಸುವ ಹಾಗಿದ್ದಲ್ಲಿ, ಜರಾಸಂದನನ್ನು ಕೊಲ್ಲಲು ನಾನು ಸಮಯವನ್ನೇಕೆ ಕಾಯಬೇಕಿತ್ತು, ಅಲ್ಲವೆ ಗಣೇಶ.
ಆದರೆ ನಾನು ಹೇಳಿದಂತೆ ಒಂದು ನಿಜ , ಮನುಷ್ಯನ ದೃಡವಾದ ನಂಬಿಕೆ ವಿಶ್ವಾಸಗಳು  ಹಾಗು ಪ್ರಯತ್ನಗಳುಎಂತಹ ಸಾಧನೆಯನ್ನಾದರು ಸಾದ್ಯವಾಗಿಸುತ್ತವೆ. ಸಾಧನೆ ಎನ್ನುವುದು ಮನಸಿನ, ದೇಹದ ಸಮ್ಮಿಲನದ ಶಕ್ತಿಯೆ ಹೊರತಾಗಿ ಪವಾಡವಲ್ಲ.ಮನಸಿನ ಶಕ್ತಿಗಿಂತ ದೊಡ್ಡ ಶಕ್ತಿಯಾವುದೆ ಇಲ್ಲ ಅಲ್ಲವೆ. ಅಂತಹ ದೃಡ ನಂಬಿಕೆ ವಿಶ್ವಾಸ ಹಾಗು ಪ್ರಯತ್ನಕ್ಕೆ ದೈವ ಕೃಪೆಯು ಇರುತ್ತದೆ ಹಾಗಾಗಿ ಸಾದನೆ ಎನ್ನುವುದು ಚಿಟಿಕೆಯಾಗುತ್ತದೆ.

ಹೇಗೊ ಒಟ್ಟಿನಲ್ಲಿ ತ್ರಿವಕ್ರೆಗೆ  ಗೂನು ಬೆನ್ನು ಸರಿಹೋಯಿತು ಅನ್ನುವುದು ಅದಕ್ಕೆ ನಾನು ಕಾರಣನಾಗಿದ್ದೆ ಅನ್ನುವುದು ಎರಡು ನಿಜ.  ಅವಳ ನಂಬಿಕೆ ಅವಳಿಗೆ ಸಹಾಯ ಮಾಡಿದೆ ಹೊರತಾಗಿ ನಾನು ಅವಳಿಗೆ ಯಾವ ಉಪಕಾರವನ್ನಾಗಲಿ ಅಥವ ಮೋಸವನ್ನಾಗಲಿ ಮಾಡಲಿಲ್ಲ “


ಗಣೇಶ
“ನಿನ್ನ ಮೋಸದ ಬಗ್ಗೆ ಮಾತನಾಡಲಿಲ್ಲ ಕೃಷ್ಣ ಆದರೂ ನೀನು  ಅನೆಯನ್ನು ಗೆದ್ದಿದ್ದು ಚಾಣೂರನನ್ನು ಕುಸ್ತಿಯಲ್ಲಿ ಗೆದ್ದಿದ್ದು ನಿಜ ತಾನೆ ಆ ಕ್ರಿಯೆಯಿಂದ ತಾನೆ ಕಂಸ ಹೆದರಿದ್ದು”

ಕೃಷ್ಣ
“ಗಣೇಶ , ಎಲ್ಲವನ್ನು ಶಕ್ತಿಯಿಂದಲೆ ಗೆಲ್ಲಲು ಸಾದ್ಯವಿಲ್ಲ ಅಲ್ಲವೆ. ಎಂತ ದೊಡ್ಡ ಆನೆಯಾದರು ಎದುರಿಗೆ ಸಿಂಹ ಬಂದರೆ ಹೆದರಿ ನಡುಗುವದಿಲ್ಲವೆ, ಯಾವ ಮನಸಿನ ಶಕ್ತಿ ತ್ರಿವಕ್ರೆ ಎಂಬಾಕೆಯ ಗೂನು ಬೆನ್ನನ್ನು ಸರಿಮಾಡಿತೋ , ಅದೇ ಮನಸಿನ ಶಕ್ತಿಯ ಹೀನತೆ ಆ ರಾಕ್ಷಸರನ್ನು ಕಂಸನನ್ನು ಸಾವಿಗೆ ಶರಣು ಮಾಡಿತು. ನಾನು ಬರೀ ಯುಕ್ತಿಯನ್ನು ಮನಸಿನ ಶಕ್ತಿಯನ್ನು ನಂಬಿದ್ದೆ,  
ಕುವಲಯಪೀಡ ಎಂಬ ಆ ಅಂಕೆ ತಪ್ಪಿದ ಆನೆಯಾಗಲಿ ಚಾಣೂರ ಮತ್ತು ಮುಸ್ತಿಕರೆಂಬ ಕುಸ್ತಿಯಪಟುಗಳಾಗಲಿ ಕಡೆಗೆ
ಕಂಸನಾಗಲಿ    ಅದೇ ಮಾನಸಿಕ ಶಕ್ತಿಹೀನತೆಯಿಂದ ಸತ್ತರು.

ಕಂಸ ನಾನು ಅವನ ಕುತ್ತಿಗೆಯ ಮೇಲೆ ಕೈಇಡುವ ಹೊತ್ತಿಗಾಗಲೆ ಅರ್ಧ ಸತ್ತಿದ್ದ ಹೆದರಿಕೆಯಿಂದ. ನಾನು ಅವನನ್ನು ಸಾಯಿಸುವಾಗ ಅವನು ಪ್ರತಿಭಟಿಸಲೇ ಇಲ್ಲ. ನಾನು ಅವನನ್ನು ಸಾಯಿಸಲೆ ಹುಟ್ಟಿರುವನೆಂಬ ಭಾವ, ನಂಬಿಕೆ, ಭಯ ಇಂತಹವೇ ಭಾವಗಳು ಅವನನ್ನು ಕೊಂದಿತು.
ನಿನಗೆ ತಿಳಿಯದು ಗಣಪ , ಚಿಕ್ಕಂದಿನಿಂದಲು ನನ್ನ ಮನ ಸದಾ ಸ್ಥಿರವಾಗಿರುತ್ತಿತ್ತು, ಎಂತಹ ತುರ್ತಿನಲ್ಲು ಸಹ ಅವಸರ ಮಾಡದೆ ನಿಧಾನ ಯೋಚಿಸುವ ಸಮಾದಾನ, ಹಾವು ಕಡಿಯಿತು ಅನ್ನುವಾಗಲು ಅದು ವಿಷದ ಹಾವೊ ಅಥವ ಸಾದಾರಣ ಹಾವೊ ಎಂದು ಪರೀಕ್ಷಿಸುವ ನಂತರ ಪರಿಹಾರ ಹುಡುಕುವ ಸ್ಥೈರ್ಯ ಇವೆಲ್ಲ ನನಗೆ ಹುಟ್ಟುಗುಣವಾಗಿತ್ತು, ಹಾಗಾಗಿ ಮನದಲ್ಲಿ ಎಂತಹುದೆ ವಿಪ್ಲವವಿರಲಿ ಮುಖದ ಮೇಲೆ ಸದಾ ಮುಗುಳುನಗೆ ಇರುತ್ತ ಇದ್ದದ್ದು ನನಗೆ ಹುಟ್ಟಿನಿಂದ ಬಂದ ಬಳುವಳಿ.

ಕಂಸನ ಮುಖವನ್ನು, ಅವನ ಕಣ್ಣುಗಳನ್ನು ನೀನು ಕಡೆಯ ಕ್ಷಣಗಳಲ್ಲಿ ನೋಡಬೇಕಾಗಿತ್ತು ಗಣಪ, ಸಾವಿನ ಭಯ ಅವನ ಮುಖದಲ್ಲಿ ಎದ್ದೆದ್ದು ಕುಣಿಯುತ್ತಿತ್ತು, ಕಣ್ಣುಗಳಲ್ಲಿ ದಿಕ್ಕೆಟ್ಟ ಭಾವ, ಅಷ್ಟು ಯುದ್ದಗಳಲ್ಲಿ ಗೆದ್ದವನನ್ನು, ಸಾವಿರಾರು ಜನರನ್ನು ಕೊಂದವನನ್ನು , ಅದೇಕೆ ಸಾವಿನ ಭಯ ಆಕ್ರಮಿಸಿತು, ಬಹುಷಃ ನಾನು ಅವನ ಮರಣ ಎನ್ನುವ ಭಾವ ಅವನ ಹೃದಯ ಮನಸ್ಸು ಅತ್ಮಗಳಲ್ಲಿ ತುಂಬಿಹೋಗಿತ್ತು, ಅದೊಂದೆ ಭಾವ ಅವನನ್ನು ಸೋಲಿಸಿತು, ಸಾವಿಗೆ ಶರಣು ಮಾಡಿತು, ನಾನು ಅವನ ಕುತ್ತಿಗೆಯನ್ನು ಅದುಮಲು ಇಲ್ಲ, ಕೈಇಡುವಾಗಲೆ ಅವನ ಹೃದಯ ಕೆಲಸ ನಿಲ್ಲಿಸಿತು, ಜೀವ ಕಣ್ಣುಗಳ ಮೂಲಕ ಹಾರಿಹೋಯಿತು, ದೇಹ ಶವವಾಗಿತ್ತು.
ಅವನು ಸತ್ತ ನಂತರ ನನಗೆ ಅನ್ನಿಸಿತು, ಸಾಯಿಸುವ ಕ್ರಿಯೆ ಇಷ್ಟು ಸುಲುಭವೆ. ಒಬ್ಬ ದೈತ್ಯ ದೇಹಿಯನ್ನು, ಒಂದು ದೊಡ್ಡ ಸಾಮ್ರಾಜ್ಯಕ್ಕೆ ಒಡೆಯನನ್ನು, ಸಾವಿರಾರು ಸೈನಿಕರಿಂದ ರಕ್ಷಿಸಲ್ಪಟ್ಟ ಮಹಾರಾಜನನ್ನು , ಯಾವ ಆತಂಕವೂ ಇಲ್ಲದೆ ಕೇವಲ ಹದಿನೆಂಟರ ವಯಸಿನವನಾದ ನಾನು ಕೊಂದೆ ಎಂದರೆ ಮನಸಿನ ಶಕ್ತಿ ಎಂತಹುದು ಎನ್ನುವ ಅರಿವು ನನಗಾಗಿತ್ತು, ಅದೆ ಚಿಂತನೆ ನನ್ನ ಜೀವನದ ಉದ್ದಕ್ಕೂ ಸಹಾಯ ಮಾಡಿತು. ನಮ್ಮನ್ನು ನಾವು ನಂಬಬೇಕು, ಆ ನಂಬಿಕೆ ಕುಸಿದ ದಿನ ಹೊರಗಿನ ಯಾವುದೆ ಸಹಾಯ ನಮಗೆ ಸಿಗಲಾರದು”

ಗಣೇಶ ಸುಮ್ಮನೆ ಕುಳಿತಿದ್ದ. ನಂತರ ಕೇಳಿದ

“ಸರಿ ಕೃಷ್ಣ ಇಂತಹ ಮನಸಿನ ಶಕ್ತಿಯ ಬಗ್ಗೆ ಹೇಳುತ್ತಿರುವೆ. ಕಂಸನನ್ನು ಕೊಂದೆ ಎನ್ನುತ್ತಿರುವೆ, ಆದರೆ ಅದೆ ಜರಾಸಂದ ನಿನ್ನ ಮಥುರೆಯ ಮೇಲೆ ದಾಳಿ ಇಡಲು ಬಂದಾಗ ಒಮ್ಮೆ ಅವನಿಗೆ ಹೆದರಿ ಓಡಿಹೋದೆ, ನಂತರ ಅವನಿಗೆ  ಹೆದರುತ್ತ,  ರಾಜ್ಯದ ಜನರನ್ನೆ ಮಥುರೆಯಿಂದ ದ್ವಾರಕೆಗೆ ಸಾಗಿಸಿಬಿಟ್ಟೆ. ಕಂಸನನ್ನು ಕೊಂದ ನಿನ್ನ ಮನಸಿನ ಶಕ್ತಿ ಜರಾಸಂದನನ್ನು ಎದುರಿಸುವಾಗ ಏಕೆ ಕುಸಿದುಹೋಯಿತು”

ಕೃಷ್ಣ ಗಂಭೀರವಾಗಿ ಕುಳಿತ, ಗಣೇಶ ನನ್ನನ್ನು ರೇಗಿಸಲು ಕೇಳುತ್ತಿರುವನೊ, ಅಥವ ನಿಜವಾದ ಶ್ರದ್ದೆಯಿಂದ ಕೇಳುತ್ತಿರುವನೊ ಎನ್ನುತ್ತ ಗಣೇಶನ ಮುಖ ನೋಡಿದ. ಗಣೇಶನ ಮುಖ ಗಂಭೀರವಾಗಿಯೆ ಇತ್ತು.

೧೨/೦೯/೨೦೧೩
ಮುಂದುವರೆಯುವುದು….

ಚಿತ್ರ ಕೃಪೆ : indiavideo.org
https://encrypted-tbn2.gstatic.com/images?q=tbn:ANd9GcSZUARPwUdMXtV5JvuMza7bBE2bPaodPyZdXS85FdDaK84IhYP7Ag

No comments:

Post a Comment

enter your comments please