Sunday, September 29, 2013

ಕೃಷ್ಣ ..ಕೃಷ್ಣ...ಕೃಷ್ಣ - ಕೃಷ್ಣನ ಹೋರಾಟದ ಬದುಕು

ಕೃಷ್ಣನ ಹೋರಾಟದ ಬದುಕು



ಕೃಷ್ಣ ..ಕೃಷ್ಣ...ಕೃಷ್ಣ (12)-  ಕೃಷ್ಣನ ಹೋರಾಟದ ಬದುಕು



ಇಲ್ಲಿಯವರೆಗೂ...


“ಸರಿ ಕೃಷ್ಣ ಇಂತಹ ಮನಸಿನ ಶಕ್ತಿಯ ಬಗ್ಗೆ ಹೇಳುತ್ತಿರುವೆ. ಕಂಸನನ್ನು ಕೊಂದೆ ಎನ್ನುತ್ತಿರುವೆ, ಆದರೆ ಅದೇ ಜರಾಸಂದ ನಿನ್ನ ಮಥುರೆಯ ಮೇಲೆ ದಾಳಿ ಇಡಲು ಬಂದಾಗ ಒಮ್ಮೆ ಅವನಿಗೆ ಹೆದರಿ ಓಡಿಹೋದೆ, ನಂತರ ಅವನಿಗೆ ಹೆದರಿ ನಿನ್ನ ರಾಜ್ಯದ ಜನರನ್ನೆ ಮಥುರೆಯಿಂದ ದ್ವಾರಕೆಗೆ ಸಾಗಿಸಿಬಿಟ್ಟೆ. ಕಂಸನನ್ನು ಕೊಂದ ನಿನ್ನ ಮನಸಿನ ಶಕ್ತಿ ಜರಾಸಂದನನ್ನು ಎದುರಿಸುವಾಗ ಏಕೆ ಕುಸಿದುಹೋಯಿತು”

ಕೃಷ್ಣ ಗಂಭೀರವಾಗಿ ಕುಳಿತ, ಗಣೇಶ ನನ್ನನ್ನು ರೇಗಿಸಲು ಕೇಳುತ್ತಿರುವನೊ, ಅಥವ ನಿಜವಾದ ಶ್ರಧ್ದೆಯಿಂದ ಕೇಳುತ್ತಿರುವನೊ ಎನ್ನುತ್ತ ಗಣೇಶನ ಮುಖ ನೋಡಿದ. ಗಣೇಶನ ಮುಖ ಗಂಭೀರವಾಗಿಯೆ ಇತ್ತು.

<೧೨/೦೯/೨೦೧೩>


ಮುಂದೆ ಓದಿ…..





ಕೃಷ್ಣ ಮತ್ತೆ ನುಡಿದ
“ಗಣೇಶ ನೀನು ತಿಳಿದೆ ಕೇಳುತ್ತಿರುವೆ ಎಂದು ನನಗನ್ನಿಸುತ್ತಿದೆ. ಕಂಸನನ್ನು ಕೊಂದ ಸಂದರ್ಭಕ್ಕು , ಜರಾಸಂಧನನ್ನು ಎದುರಿಸುವುದಕ್ಕು ಯಾವುದೆ ಹೋಲಿಕೆ ಇಲ್ಲ. ಕಂಸನನ್ನು ಕೊಲ್ಲುವಾಗ ನನಗೆ ಅನುಕೂಲಕರವಾದ ವಾತವರಣವೆ ಇತ್ತು.
ಸುತ್ತಲ ಜನರಾಗಲಿ ಸೈನಿಕರಾಗಲಿ ನನ್ನನ್ನು ವಿರೋಧಿಸಲೆ ಇಲ್ಲ. ಮಾನಸಿಕವಾಗಿ ನಾನು ಸನ್ನದ್ಧನಾಗಿ ಅವನನ್ನು ಕೊಲ್ಲಲೆಂದೆ ಹೋಗಿದ್ದೆ. ಕಂಸನಾದರು ಸಹ ನನ್ನ ಬರವನ್ನೆ ನಿರೀಕ್ಷಿಸುತ್ತಿದ್ದ, ಹೆದರಿದ್ದ.


ಆದರೆ ಜರಾಸಂಧನ ವಿಷಯ ಹಾಗಲ್ಲ. ಅವನು ನನ್ನನ್ನು ಜಯಸಿಲೆಂದೆ ದಂಡೆತ್ತಿ ಬಂದಿದ್ದ. ಅವನ ಅಳಿಯನಾದ ಕಂಸನನ್ನು ಕೊಂದಿದ್ದು ಅವನಲ್ಲಿ ದ್ವೇಷ ರೋಷ ತುಂಬಿ ತುಳುಕುತ್ತಿತ್ತು. ನಾನು ಅವನನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವೆ ಇರಲಿಲ್ಲ. ಅವನ ರೋಷ ಮೃಗದಂತೆ ಇತ್ತು, ಆದರೆ ನಾನು ಸಹ ಮೃಗದಂತೆ ಅವನ ಮೇಲೆ ಬಿದ್ದಿದ್ದರೆ ನಾಶವಾಗುತ್ತಿದ್ದೆ. ನಾನು ಬೇಟೆಗಾರನಂತೆ ಯೋಚಿಸಬೇಕಿತ್ತು. ಆಯ ನೋಡಿ ಅವನ ಮೇಲೆ ಆಕ್ರಮಣ ನಡೆಸಬೇಕಿತ್ತು. ನಾನು ಮಥುರೆಯಲ್ಲಿಯೆ ಇದ್ದರೆ ನನ್ನನ್ನು ಕೊಲ್ಲುವ ಜೊತೆಗೆ ಮಥುರೆಗೆ ಬೆಂಕಿ ಇಟ್ಟು ಹೋಗುತ್ತಿದ್ದ. ಹಾಗಾಗಿ ಅವನು ಮಥುರೆಗೆ ಹತ್ತಿರ ಬರುವವರೆಗೂ ಸುಮ್ಮನಿದ್ದು ನಾನು ಓಡಿ ಹೋದೆ. ಅಷ್ಟೆ ಅಲ್ಲ ನಾನು ಮಥುರೆಯಿಂದ ಓಡಿ ಹೋಗಿರುವ ವಿಷಯ ಅವನ ಕಿವಿಗೆ ಗೂಡಚಾರರ ಮೂಲಕ ಬೀಳುವಂತೆ ನೋಡಿಕೊಂಡೆ. ಅವನು ನನ್ನನ್ನು ಹಿಡಿಯಲಾರದ ಹತಾಶೆಯಿಂದ ಕೋಪಗೊಂಡು ಹಿಂದಿರುಗಿದ. ದಾರಿಯಲ್ಲಿ ಅವನ ಸೈನ್ಯದ ಶಕ್ತಿ ಕುಂದಿಸಿದೆ.  
ಎರಡನೆ ಸಾರಿ ಅವನು ಮಥುರೆಯ ಮೇಲೆ ಬರುತ್ತಿದ್ದಾನೆ ಎಂದು ತಿಳಿದಾಗ, ನಾನು ಕಂಗಲಾದೆ, ಈ ಬಾರಿ ಮೊದಲ ತಂತ್ರ ಕೆಲಸಮಾಡುತ್ತಿರಲಿಲ್ಲ. ನಾನು ಓಡಿಹೋಗಿದ್ದರೆ ಅವನು ಆ ಕೋಪವನ್ನು ಮಥುರೆಯ ಮೇಲೆ ಅಲ್ಲಿಯ ಜನರ ಮೇಲೆ ತೋರಿಸಿ ನಾಶ ಮಾಡುತ್ತಿದ್ದ. ಯಾವ ಮಥುರೆಯ ಜನರು ನಾನು ಅವರನ್ನು ಕಂಸನಿಂದ ಕಾಪಾಡಿದೆ ಎನ್ನುವ ಧೈರ್ಯದಲ್ಲಿದ್ದರೋ ಅದೆ ಜನರು ನನಗಾಗಿ ಜರಾಸಂಧನಿಂದ ಸಾವಿಗೆ ಈಡಾಗುತ್ತಿದ್ದರು. ಅಲ್ಲದೆ ಮತ್ತೊಂದು ಕಾರಣವಿತ್ತು, ಕಂಸನ ದೀರ್ಘ ಆಳ್ವಿಕೆಯಲ್ಲಿ ಜನರ ಆತ್ಮಶಕ್ತಿಯೆ ಕುಂದಿಹೋಗಿತ್ತು. ಜರಾಸಂಧ ರಕ್ಷಣೆ ಕೊಡುತ್ತಿದ್ದ ಅನ್ನುವ ಕಾರಣಕ್ಕೆ ಮಥುರೆಯ ಸೈನ್ಯ  ನಿರಾಳವಾಗಿದ್ದು, ಅವರಲ್ಲಿ ಯಾವುದೆ ಯುದ್ದವನ್ನು ಎದುರಿಸುವ ಶಕ್ತಿಯೂ ಇರಲಿಲ್ಲ. ಯಾವ ಜರಾಸಂಧನ ರಕ್ಷಣೆಯ ನೆರಳಲಿ ಮಥುರೆಯ    ದೇಶವಿತ್ತೋ ಅದೇ ದೇಶವೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜರಾಸಂಧನನ್ನೆ ಎದುರಿಸುವ ಪರಿಸ್ಥಿತಿಗೆ ಬಂದಿತ್ತು, ಅದಕ್ಕೆ ನಾನು ಸಹ ಕಾರಣನಾಗಿದ್ದೆ ಅನ್ನುವುದು ಸತ್ಯ. ಹೀಗಾಗಿ ಮಥುರೆಯ ಜನತೆಯನ್ನೆಲ್ಲ ಅಲ್ಲಿಂದ ದೂರದ ದ್ವಾರಕೆಗೆ ಸಾಗಿಸುವುದು ಅನಿವಾರ್ಯವಾಯಿತು”


ಗಣೇಶ ನುಡಿದ
’ಮುಂದೆ ಅದೆ ಜರಾಸಂಧನನ್ನೆ ನೀನು ಉಪಾಯವಾಗಿ ಮುಗಿಸಿದೆಯಲ್ಲ”



ಕೃಷ್ಣನೆಂದ
“ಅದೇ ನೋಡು  ಮನಸಿನ ಶಕ್ತಿ ಅನ್ನುವುದು. ನಾವು ಎಲ್ಲರನ್ನು ಬರೀ ದೈಹಿಕವಾಗಿ ಎದುರಿಸುವುದು ಸಾದ್ಯವಿಲ್ಲ. ದೇಹಶಕ್ತಿಯನ್ನೆ ನಂಬಿ ಎಲ್ಲ ಸಂದರ್ಭದಲ್ಲಿ ಹೋರಾಡಲಾಗುವದಿಲ್ಲ. ಅವಶ್ಯಕತೆ ಇದ್ದಾಗ ಎರಡು ಹೆಜ್ಜೆ ಹಿಂದೆ ಇಡಲು ಬೇಕಾಗಿರುತ್ತೆ”



ಗಣೇಶ
ಕೃಷ್ಣ ನಿನಗೆ ಮಥುರೆಯ ಜನ ಅಷ್ಟು ಪ್ರಿಯರಾಗಿದ್ದರೆ ? ನಿನ್ನ ಮೇಲೆ ಹೇಡಿ ಕಳ್ಳ ಎಂದೆಲ್ಲ  ಅಪವಾದ ಬಂದರು ಸರಿಯೆ ಎಂದು ನೀನು ಓಡಿ ಹೋಗಿ , ಅವರಿಗಾಗಿ ನಿಂದನೆಯನ್ನೆಲ್ಲ ಸಹಿಸುವಷ್ಟು.    
ಕೃಷ್ಣ ನಿನಗೆ ಒಂದು ವೇಳೆ  ಗೋಕುಲದ ಜನ ಇಷ್ಟವೋ ಮಥುರೆಯ ಜನ ಇಷ್ಟವೋ ಎಂದು ಕೇಳಿದರೆ ಏನು ಹೇಳುವೆ ?


ಕೃಷ್ಣ
“ನಿಸ್ಸಂಶಯವಾಗಿ ಗೋಕುಲದ ಜನ ಅಲ್ಲವೆ ಗಣೇಶ. ಯಾರಿಗೆ ಆಗಲಿ ತನ್ನ ಬಾಲ್ಯವನ್ನು ಪೋಷಿಸಿದ ಊರು ಯಾವಾಗಲು ಆತ್ಮೀಯವಾಗಿರುತ್ತೆ. ನಾನು ಮಥುರೆಗೆ ಬಂದ ಮೇಲೆ ಗೋಕುಲಕ್ಕೆ ಹೋಗದೆ ಇರಲು ಮತ್ತು ಒಂದು ಕಾರಣವಿತ್ತು, ಜರಾಸಂಧನಾಗಲಿ ಮತ್ಯಾರೆ ಆಗಲಿ ನನ್ನನ್ನು ಹುಡುಕುತ್ತ ಗೋಕುಲಕ್ಕೆ ಹೋಗುವುದು ನನಗೆ ಇಷ್ಟವಿರಲಿಲ್ಲ. ಗೋಕುಲ ಎನ್ನುವುದು ಸಣ್ಣದೊಂದು ಹಳ್ಳಿ ಅಲ್ಲಿ ಅತ್ಯಂತ ಆತ್ಮೀಯ ವಾತವರಣವಿತ್ತು. ಹೊರಗಿನ ಯಾವುದೆ ರಾಜಕೀಯದ ಸೊಂಕು ಅಲ್ಲಿರಲಿಲ್ಲ, ಹಾಗಿರುವಾಗ ನಾನು ಅಲ್ಲಿ ಪದೆ ಪದೇ ಹೋಗಿದ್ದರೆ , ನನ್ನ ಕಾರಣಕ್ಕಾಗಿಯೆ ಅಲ್ಲಿಯ ಶಾಂತಿ ಕದಡುವ ಸಂಭವ ಇದೆ ಎಂದು ನನಗೆ ಬಹಳ ಸಾರಿ ಅನ್ನಿಸಿತು ಹಾಗಾಗಿ ಅಲ್ಲಿಗೆ ಹೋಗಲೆ ಇಲ್ಲ. ನನಗೆ ನನ್ನ ಅಮ್ಮ ಯಶೋದೆಯನ್ನು ನೋಡಬೇಕು ಅನಿಸುವಾಗಲು  ಅವರು ಒಮ್ಮೊಮ್ಮೆ ಗೋಕುಲದಿಂದ ಮಥುರೆಗೆ ಬರುತ್ತಿದ್ದರೆ ವಿನಃ ನಾನು ಗೋಕುಲಕ್ಕೆ ಹೋಗಲಿಲ್ಲ.
ಮಥುರೆಯ ಜನ ಅವರು ನನ್ನನ್ನು ಬರಮಾಡಿಕೊಂಡದ್ದು ಅವರ  ಕಂಸನ ಆಡಳಿತದಿಂದ ಪಾರಾಗಲು ಎನ್ನುವ ಕಾರಣಕ್ಕೆ. ಅವರಿಗೆ ಒಂದು ಮಾನಸಿಕ ಆಧಾರ ಬೇಕಾಗಿತ್ತು , ಹಾಗಾಗಿ ನಾನು ಅಲ್ಲಿ ಹೋದೆ. ನನ್ನ ಕಾರಣದಿಂದ ಅವರಿಗೆ ಅಪಾಯವಾಗಬಹುದು ಅನ್ನಿಸಿದಾಗ ನನ್ನ ಮೇಲೆ ಹೇಡಿ ಎಂಬ ಅಪವಾದ ಬಂದರೂ ಬರಲಿ ಎನ್ನುವ ಕಾರಣಕ್ಕೆ ಅಲ್ಲಿಂದ ಓಡಿಹೋಗಿದ್ದೆ


ಗಣೇಶ ಕೇಳಿದ
ಕೃಷ್ಣ ನನಗೆ ಒಂದು ಕೌತುಕ, ನಿನಗೆ ಪಾಂಡವರು ಎಂದರೆ ಪ್ರಿಯ, ಕೌರವರನ್ನು ಬಿಡು ಅವರ ದಾಯಾದಿಗಳು, ನಿನ್ನ ಮಾತನ್ನು ಕೇಳಲಿಲ್ಲ ಹೇಗೊ ಮಹಾಭಾರತ ಯುದ್ದವಾಯಿತು ಅಂದುಕೊಳ್ಳೋಣ ಆದರೆ, ಕುಂತಿ ನಿನಗೆ ಹೇಗೆ ಸೋದರತ್ತೆಯೋ ಹಾಗೆ ಶಿಶುಪಾಲನ ತಾಯಿ ಸಹ ನಿನಗೆ ಸೋದರತ್ತೆಯೆ. ಆದರೆ ಪಾಂಡವರನ್ನು ಸದಾ ಬೆನ್ನ ಹಿಂದೆ ನಿಂತು ಕಾಪಾಡಿದ ನೀನು ಶಿಶುಪಾಲನನ್ನು ಮಾತ್ರ ಸ್ವಯಂ ಕೈಯಾರೆ ಕೊಂದು ಹಾಕಿದೆ , ಈ ಬೇಧಭಾವ ಏಕೆ. ನಿನಗೆ ಪಾಂಡವರು ಹೇಗೆ ಭಾಂದವರೋ ಹಾಗೆ ಶಿಶುಪಾಲನು ಭಾಂದವನೆ ಅಲ್ಲವೆ ?


ಕೃಷ್ಣ   ಸ್ವಲ್ಪ ಕಾಲ ಕಣ್ಣು ಮುಚ್ಚಿ ಕುಳಿತ


“ಅಪ್ಪ ಗಣಪ ಎಂತಹ ಪ್ರಶ್ನೆಗಳನ್ನೆಲ್ಲ ನಿನ್ನ ಬತ್ತಳಿಕೆಯಲ್ಲಿ ಇಟ್ಟಿರುವೆಯಪ್ಪಾ, ಉತ್ತರಿಸಲು ನಾನು ಸಾಕಷ್ಟು ಯೋಚಿಸಬೇಕು. ನಿನ್ನ ಮಾತು ನಿಜ ಸಂಬಂಧದಲ್ಲಿ ನೋಡಿದರೆ ಪಾಂಡವರು ಹೇಗೆ ನನಗೆ ಸೋದರತ್ತೆಯ ಮಕ್ಕಳೊ ಹಾಗೆ ಶಿಶುಪಾಲ ಸಹ , ಪಾಂಡವರ ತಾಯಿ ಕುಂತಿ ಮತ್ತು ಶಿಶುಪಾಲನ ತಾಯಿ…… ಇಬ್ಬರೂ ನಮ್ಮ ತಂದೆ ವಸುದೇವನ ಸಹೋದರಿಯರೆ. ಆದರೆ ಸಂಬಂಧ ಒಂದೆ ನಿಲ್ಲಲಾರದು ಅಲ್ಲವೆ ಗಣಪ. ಪಾಂಡವರು ಸದಾ ನನ್ನನ್ನು ಅರ್ಥಮಾಡಿಕೊಂಡಿದ್ದರು, ನನ್ನ ಎದುರು ನಿಲ್ಲುವ ಪ್ರಸಂಗವೆ ಬರಲಿಲ್ಲ. ಶಿಶುಪಾಲನಾದರೊ ತಾನು ಜರಾಸಂಧನ ಶಿಷ್ಯ ಎನ್ನುವ ಕಾರಣಕ್ಕೆ ನನ್ನ ವಿರೋಧಿಯಾಗಿದ್ದ, ಕಂಸನನ್ನು ಕೊಂದಿದ್ದು ಅವರನ್ನೆಲ್ಲ ಕೆರಳಿಸಿತ್ತು. ಹಾಗಾಗಿ ಸದಾ ನನ್ನ ವಿರುದ್ದದ ಪಿತೂರಿಗಳಲ್ಲಿ ಪಾಲುದಾರನಾಗಿದ್ದ. ಅವನು ಮತ್ತು ರುಕ್ಮಿಣಿಯ ಸಹೋದರ ರುಕ್ಮಾಂಗ ಇಬ್ಬರು ನನಗೆ ಸದಾ ಕಿರುಕುಳ ಕೊಡುತ್ತಿದ್ದರು, ನಾನು ಹೋದಲ್ಲೆಲ್ಲ ಅವಮಾನ ಮಾಡುತ್ತಿದ್ದರು. ಶಿಶುಪಾಲ ಸಂಬಂಧಿಯಾದರು ನನ್ನನ್ನು ಶತ್ರುವಿನಂತೆ ಕಾಣುತ್ತಿದ್ದ. ನನ್ನ ಸಹನೆಯ ಮಟ್ಟವನ್ನು ಮೀರಿದಾಗ ಪಾಂಡವರು ಮಾಡಿದ ರಾಜಸೂಯ ಯಾಗದಲ್ಲಿ ಕಡೆಗೊಮ್ಮೆ ನನ್ನ ಚಕ್ರಕ್ಕೆ ಬಲಿಯಾದ.


ಗಣೇಶ
ಕೃಷ್ಣ ಅಂದಹಾಗೆ ಎಲ್ಲರೂ ಬಿಲ್ಲು ಬಾಣ ಕತ್ತಿ ಗದೆ ಎಂದು ಹಿಡಿದು ಯುದ್ದ ಮಾಡುವಾಗ ನೀನು ಅದೇನು ಚಕ್ರವನ್ನೇಕೆ ಉಪಯೋಗಿಸುವದನ್ನು ಕಲಿತೆ. ಅಲ್ಲದೆ ಅದು ವಿಷ್ಣುವಿನ ಆಯುಧವಲ್ಲವೆ


ಕೃಷ್ಣ
ನಗುತ್ತ ಅದೆಲ್ಲ ತಿಳಿಯದು ಗಣಪ, ಆದರೆ ಚಿಕ್ಕ ವಯಸಿನಲ್ಲಿ ಗೋಕುಲದಲ್ಲಿ ಕಲಿತ ವಿದ್ಯೆಯದು. ಮತ್ತೆ ಗುರುಕುಲದಲ್ಲಿ ಅದನ್ನೆ ಅಭ್ಯಾಸ ಮಾಡಿದೆ ಅದೇನೊ ಚಕ್ರ ನನಗೆ ಪ್ರಿಯವಾದ ಆಯುಧವಾಯಿತು. ಬೇರೆ ಯಾರು ಅದನ್ನು ಕಲಿತಿರಲಿಲ್ಲ ಅನ್ನುವುದು ಸಹ ಒಂದು ಕಾರಣ ನನಗೆ ಅದು ಪ್ರಿಯವಾಗಲು. ಗದೆಯಾಗಲಿ ಕತ್ತಿಯಾಗಲಿ  ಬಿಲ್ಲು ಬಾಣಗಳಾಗಲಿ ಅದೇನೊ ನನಗೆ ಹೊಂದುತ್ತಿರಲಿಲ್ಲ ಇಷ್ಟವಾಗುತ್ತಿರಲಿಲ್ಲ.


ಗಣೇಶ
ನಿಜ ಕೃಷ್ಣ  ನೀನು ಹೇಳಿದಂತೆ ಯಾವುದೆ ಸಂಬಂಧ ನಿಲ್ಲಲಾರದು. ನಿನ್ನ ಅತ್ಮೀಯ ಎನ್ನುವ ಅರ್ಜುನನ ಮಗ, ನಿನ್ನ ತಂಗಿಯ ಮಗ ಅಭಿಮನ್ಯುವೆ ಯುದ್ದದಲ್ಲಿ ನಾಶವಾದಾಗ ನೀನು ಅವನನ್ನು ಕಾಯದೆ ಬಿಟ್ಟುಬಿಟ್ಟೆ ಹಾಗಿರಲು ಸಂಬಂಧಗಳಿಯೆ ಯಾವ ಅರ್ಥವಿದೆ ಹೇಳು


ಕೃಷ್ಣ


ಗಣೇಶ ಇದೇನು ನೀನು ಸಹ ನನ್ನನ್ನು ನಿಂದಿಸುತ್ತಿರುವೆಯ. ಮಹಾಭಾರತದ ಯುದ್ದದಲ್ಲಿ ನಾನು ಬರಿ ಸಾಕ್ಷಿ ಅಷ್ಟೆ.  ಹಾಗಿರಲು ಅಭಿಮನ್ಯುವನ್ನು ನಾನು ಕಾಪಾಡಲಿಲ್ಲ ಅನ್ನುವ ಮಾತಿಗೆ ಏನು ಅರ್ಥ. ಹಾಗೆ ನೋಡಿದರೆ ಭೀಮನ ಮಗನೂ ಉಳಿಯಲಿಲ್ಲ. ನಾನು ನನ್ನವರು ಎಂದು ಹೇಳುವ , ಯಾವ ಮಥುರೆಗಯನ್ನು ರಕ್ಷಿಸಲು ನಾನು ಕಷ್ಟಪಟ್ಟನೋ ಅಂತಹ ಮಥುರೆಯ ಸೈನ್ಯವೆ ಮಹಾಭಾರತದ ಯುದ್ದದಲ್ಲಿ ನನ್ನ ವಿರುದ್ದದ ಕೌರವರ ಪರವಾಗಿತ್ತು.


ಗಣೇಶ
ಅದೇನು ಕೃಷ್ಣ , ನೀನೆ ಅಲ್ಲವೆ ಅರ್ಜುನನಿಗೆ ನಿನ್ನ ಸಾರಥ್ಯವನ್ನು , ಕೌರವರಿಗೆ ನಿನ್ನ ಸೈನ್ಯವನ್ನು ಕೊಟ್ಟವನು.


ಕೃಷ್ಣ ನಗುತ್ತಿದ್ದ


“ಗಣೇಶ ಮತ್ತೆ ಅದೆ ನುಡಿಯುತ್ತಿರುವೆ, ನನಗೆ ನನ್ನದು ಅಂತ ಯಾವ ಸೈನ್ಯವೂ ಇರಲಿಲ್ಲ. ನಾನು ಎಲ್ಲಿಗೂ ರಾಜನು ಆಗಿರಲಿಲ್ಲ. ನನ್ನ ಅಧೀನದಲ್ಲಿ ಯಾವ ಸೈನ್ಯವಿತ್ತು ಹೇಳು. ಸೈನ್ಯ ಅಂತ ಇದ್ದಿದ್ದು  ಮಹಾರಾಜ ಉಗ್ರಸೇನನ ಆಡಳಿತದಲ್ಲಿ, ಕೆಲ ಸೈನ್ಯಾಧಿಕಾರಿಗಳ ಆಡಳಿತದಲ್ಲಿ. ಬಲರಾಮನಿಗಾದರೊ ಸ್ವಲ್ಪ ಸೈನ್ಯದ ಮೇಲೆ ಹಿಡಿತವಿತ್ತು ಆದರೆ ಅವನು ಯುದ್ದದಲ್ಲಿ ಇರಲೆ ಇಲ್ಲ. ಮಥುರೆಯ ಸೈನ್ಯವನ್ನು ನನ್ನ ವಿರುದ್ದವೆ ನಿಲ್ಲಿಸಿದರು. ನಾನು ಏನೊ ಹೇಳಿದೆ ಅನ್ನುವದೆಲ್ಲ, ನಾನು ಅರ್ಜುನನ ಪರ ನನ್ನ ಸೈನ್ಯ ಕೌರವರ ಪರ ಅನ್ನುವದೆಲ್ಲ ಕಟ್ಟುಕತೆ. ನಾನು ಧರ್ಮದ ಪರ ನಿಂತು ನನ್ನ ಸೈನ್ಯವನ್ನು ಅಧರ್ಮದ ಪರ ನಿಲ್ಲಿಸುತ್ತೇನೆ ಅನ್ನುವುದು ಅರ್ಥವಿಲ್ಲದ ಮಾತು


ಗಣೇಶ
ಹಾಗಾದರೆ ನಿನಗೆ ನಿನ್ನ ದ್ವಾರಕೆಯ ಸೈನ್ಯದ ಮೇಲೆ , ನಿನ್ನ ದ್ವಾರಕೆಯ ಮಹಾರಾಜ ಮುಂತಾದ ಸೈನ್ಯಾದಿಕಾರಿಗಳ ಮೇಲೆ ಕೊಂಚ ಅಸಮಾದಾನವು ಇತ್ತು ಅಲ್ಲವೆ ಕೃಷ್ಣ


ಕೃಷ್ಣ
ಇರಬಹುದು. ನನ್ನ ಮಾತಿಗೆ ನನ್ನ ರಾಜ್ಯದಲ್ಲಿಯೆ ಬೆಲೆ ಸಿಗದಿದ್ದಾಗ ನನಗೆ ಬೇಸರ ಇರುವುದು ಸಹಜವಲ್ಲವೆ ಗಣಪ


ಗಣೇಶ
ಮತ್ತೆ ಅದೇ ಭಾವದಲ್ಲಿ ನೀನು ನಿನ್ನ ದ್ವಾರಕೆಯ ಸೈನಿಕರು, ಜನರು , ಯಾದವರು ಪರಸ್ಪರ ಹೊಡೆದಾಡಿ, ನಾಶವಾದ ಯಾದವರ ಕಲಹವನ್ನು ತಡೆಯಲ್ಲಿಲ್ಲ ಅನ್ನಿಸುತ್ತೆ ಅಲ್ಲವೆ


ಕೃಷ್ಣ  ಅಘಾತಗೊಂಡವನಂತೆ ಸುಮ್ಮನೆ ಕುಳಿತ ನಂತರ ನುಡಿದ


ಗಣೇಶ, ನೀನು ನನ್ನ ಅಂತರಂಗವನ್ನೆ ಕೆದಕುತ್ತಿರುವೆ, ಇಲ್ಲದೆ ಇರುವ ಭಾವವನ್ನು ಅರೋಪಿಸಿ, ನನ್ನ ಅಧೀರನನ್ನಾಗಿ ಮಾಡುತ್ತಿರುವೆ.  ನನಗೆ ನನ್ನ ಮಾತಿಗೆ ಬೆಲೆ ಕೊಡದೆ  ಸ್ವೇಚ್ಚೆಯಿಂದ ದಾರಿ ತಪ್ಪಿ ನಡೆಯುತ್ತಿದ್ದ ಯಾದವ ಯುವಕರ ಬಗ್ಗೆ ಅಸಮಾದಾನ , ತುಸು ಬೇಸರ ಎಲ್ಲವು ಇದ್ದಿದ್ದು ನಿಜ. ಹಿರಿಯರ ಯಾವ ಮಾತಿಗೂ ಗೌರವೆ ಕೊಡದೆ ದಿಕ್ಕರಿಸುತ್ತಿದ್ದ ಅವರ ನಡೆನುಡಿಗಳು ನನ್ನನ್ನು ಅಧೀರನನ್ನಾಗಿ ಮಾಡಿದ್ದವು.  ದ್ವಾರಕೆಗೆ ಬರುತ್ತಿದ್ದ ಮುನಿಜನಗಳನ್ನು ಅವರು ದಿಕ್ಕರಿಸಿ ಅವರ ಕೋಪಕ್ಕೆ ಒಳಗಾಗಿದ್ದರು.  ಇದಕ್ಕೆ ನನ್ನ ಮಕ್ಕಳು ಹೊರತಾಗಿರಲಿಲ್ಲ. ಅಷ್ಟೆ ಅಲ್ಲ ಯಾದವರ ನಡುವೆ ಗುಂಪುಗಾರಿಕೆ ಹೇರಳವಾಗಿದ್ದವು. ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಗೌರವಿಸುತ್ತಿರಲಿಲ್ಲ. ಈಗ ನೋಡು ಹೊರಗಿನ ಸಮಾಜದ ಸ್ಥಿತಿ ಹೇಗೆ ಇದೆ ಹೆಚ್ಚು ಕಡಿಮೆ ಇದೆ ವಾತಾವರಣ ಆಗಲು ಇತ್ತು. ಅದೆ ನನ್ನನ್ನು ಚಿಂತಿಗೆ ಒಳಗು ಮಾಡಿರುವುದು.
ಕಂಸನ ಕಾಲದಲ್ಲಿ ಹೆದರಿ ಮೂಲೆ ಸೇರಿದ್ದ ನಾಯಕರೆಲ್ಲ ಕಂಸನ ನಂತರ ಚಿಗುರಿಕೊಂಡರು , ರಾಜ್ಯಾಡಳಿತವನ್ನು ದಿಕ್ಕರಿಸಿ ನಡೆಯುತ್ತಿದ್ದರು, ಅವರನ್ನೆಲ್ಲ ಮಹಾರಾಜ ಉಗ್ರಸೇನ ನಿಗ್ರಹಿಸಲು ಕಷ್ಟಪಡುತ್ತಿದ್ದ. ಕೆಲವರಾದರು ಹೆದರುತ್ತಿದ್ದರು ಅಂದರೆ ಅಣ್ಣ ಬಲರಾಮನಿಗೆ . ಅಂತಹ ಸ್ಥಿತಿಯಲ್ಲಿ ಅಂತಕಲಹಃ ಮುಗಿಲು ಮುಟ್ಟಿತ್ತು, ಅವರವರಲ್ಲೆ ಹೊಡೆದಾಟಗಳು ಒಳ ಯುದ್ದಗಳು ನಡೆಯುತ್ತಿದ್ದವು ,  ಅವರಲ್ಲಿ ಒಮ್ಮತ ಮೂಡಿಸಲು ನಾನು ಸಾಕಷ್ಟು ಪ್ರಯತ್ನಿಸಿದೆ. ಕೌರವ ಪಾಂಡವರಲ್ಲಿ ಹೇಗೆ ಒಮ್ಮತ ಮೂಡಲಿಲ್ಲವೋ ಹಾಗೆ ಇಲ್ಲಿ ಸಹ ಅದೆ ಪರಿಸ್ಥಿತಿ , ಯಾದವರು ಪರಸ್ಪರ ಹೊಡೆದಾಡಿದರು , ನಾನು  ನನ್ನವರ ಈ ಒಳಯುದ್ದ ನೋಡುತ್ತ, ನಿಸ್ಸಹಾಯಕನಾದೆ, ಅಧೀರನಾದೆ. ನನ್ನ ಪ್ರಯತ್ನ ಕೈಗೂಡಲಿಲ್ಲ ಹೊರತಾಗಿ ನಾನು ನನ್ನ ಬೇಸರದ ಕಾರಣದಿಂದ ಅವರ ಮೇಲಿನ ಕೋಪದಿಂದ ಅವರನ್ನು ನಾಶವಾಗಲು ಬಿಟ್ಟೆ ಅನ್ನುವುದು ಅಸಂಗತ ಮಾತಾಗುತ್ತೆ ಗಣಪ


ಗಣೇಶ ಮತ್ತೆ ನುಡಿದ


ಇಲ್ಲ ಕೃಷ್ಣ ನನಗೆ ನಿನ್ನ ಮಾತು ಅರ್ಥವಾಗುತ್ತೆ, ಆದರೆ ಆಗಿನ ಪರಿಸ್ಥಿತಿ ಹೇಗಿತ್ತು ಅಂತ ತಿಳಿಯಬೇಕಿತ್ತು , ಅದಕ್ಕಾಗಿ ಕೇಳಿದೆ.


ಕೃಷ್ಣ


ಇಲ್ಲ ಗಣೇಶ, ನನ್ನ ಜೀವನದ ಹೋರಾಟ ಯಾರಿಗೂ ಅರ್ಥವಾಗುವುದೆ ಇಲ್ಲ . ಹುಟ್ಟಿನಿಂದ ಕೊನೆಯವರೆಗೂ, ಹೋರಾಟದಲ್ಲಿ ಬೆಂದವನು ನಾನು, ಮೊದಲಿನಿಂದ ಕಡೆಯವರೆಗೂ ದ್ವೇಷ, ರೋಷ, ಸಾವಿನ ಭಯ ಇದನ್ನೆಲ್ಲ ಎದುರಿಸಿ ಉಳಿದವನು ನಾನು. ನನ್ನ ಜೀವನದ ಯಾವ ಕ್ಷಣದಲ್ಲಿ ಸುಖವಿತ್ತು ನೀನೆ ಹೇಳು. ಕೊಂಚ ದೀರ್ಘವಾಗಿ ಮಾತನಾಡುವೆ ಗಣೇಶ, ಕೇಳು,
ಭೂಮಿಗೆ ಕಾಲಿಡುವಾಗಲೆ, ಜೀವ ಭಯ, ಎಲ್ಲರಿಗೂ ತಾಯಿಯ ಪ್ರೀತಿ ಆರೈಕೆ ದೊರೆತರೆ, ನಾನು ಹುಟ್ಟುತ್ತಲೆ ತಂದೆಯ ತಲೆಯ ಮೇಲೆ ಬುಟ್ಟಿಯಲ್ಲಿ ಕುಳಿತು , ಅರ್ಧರಾತ್ರಿಯ ಕತ್ತಲು ಚಳಿಯಲ್ಲಿ ,  ಘೋರವಾದ ಮಳೆಯು ಸುರಿಯುತ್ತಿರುವಾಗ, ತುಂಬು ಪ್ರವಾಹದ ಯಮುನೆಯನ್ನು ದಾಟಿ, ಗೋಕುಲ ಸೇರಬೇಕಾಯಿತು. ಇಂತಹ ಹೋರಾಟ ಯಾವ ಮನುಷ್ಯ ಎದುರಿಸಿರುವ ಹೇಳು. ಗೋಕುಲ ಸೇರಿದ ನಂತರವಾದರು ನೆಮ್ಮದಿಯೆ ಅಲ್ಲಿ ಕಂಸನ ಕಾಟ ಅವನ ಸೇವಕರು ಸದಾ ನನ್ನ ಮೇಲೆ ಎರಗುವರೆಂಬ ಭಯ ಹಾಗಾಗಿ ತಂದೆ ತಾಯಿಯ ಕಣ್ಗಾವಲಿನಲ್ಲಿಯೆ ಬೆಳೆದೆ. ಹದಿನಾರು ಹದಿನೇಳಕ್ಕೆ  ಹಿರಿಯರೆಲ್ಲ ಸೇರಿ, ಕಂಸನನ್ನು ಕೊಲ್ಲು, ಮಥುರ ನಗರವನ್ನು ಉಳಿಸು ಎನ್ನುವ ಜವಾಬ್ದಾರಿ ನನ್ನ ಮೇಲೆ ಹೇರಿದರು,  ಒಂಟಿಯಾಗಿ ನಾನು , ಅಣ್ಣ ಬಲರಾಮನು ಆ ಸನ್ನಿವೇಶವನ್ನು ಎದುರಿಸಬೇಕಾಯಿತು,
ನಂತರ ಜರಾಸಂದ , ಶಿಶುಪಾಲ ಇಂತವರ ದ್ವೇಷ.  ದೇಶ ದೇಶ ತಿರುಗಾಟ,  ಪಾಂಡವ ಕೌರವರ ಜಗಳಗಳು. ಜರಾಸಂದನನ್ನು ಮುಗಿಸಿದ ನಂತರ ಎದುರಿಸಿದ ಸಮಸ್ಯೆ. ಒಂದೆ ಎರಡೆ ಗಣೇಶ. ಯಾವ ಗೋಕುಲವನ್ನು ಅಲ್ಲಿಯ ಜನರನ್ನು , ನನ್ನ ಪ್ರೀತಿಯ ರಾದೆಯನ್ನು ನಾನು ಈ ಎಲ್ಲ ಸಮಸ್ಯೆಗಳ ಕಾರಣದಿಂದ ದೂರವಿರಿಸಬೇಕಾಯಿತು. ನನ್ನನ್ನು ಗೋಕುಲಕ್ಕೆ ಹೋಗದಂತೆ ತಡೆಯಿತು.


ಯಾವ ಮಥುರಾ ನಗರದ ಜನತೆ ನನ್ನನ್ನು ಸ್ವಾಗತಿಸಿದರೊ ಅಲ್ಲಿಯೆ ಕ್ರಮೇಣ ಒಳರಾಜಕೀಯ. ಹೋರಾಟದಲ್ಲಿಯೆ ಜೀವನ. ನನ್ನಿಂದ ಉಪಕಾರ ಪಡೆದವರಿಂದಲೆ ಅಪವಾದಗಳು . ಕಡೆಗೊಮ್ಮೆ ಯಾದವ ಕಲಹ, ಇಂತ ಜೀವನವನ್ನು ಸುಖ  ಜೀವನ ಎಂದು ಯಾರಾದರು ಕರೆಯುವರೆ ಗಣೇಶ”


ಕೃಷ್ಣನ ದ್ವನಿ ಸಪ್ಪೆಯಾಗಿತ್ತು , ದೂರ ದಿಗಂತವನ್ನೆ ದಿಟ್ಟಿಸುತ್ತಿದ್ದ,


ಗಣೇಶ ಕೊಂಚ ಕುತೂಹಲ, ಕಕ್ಕುಲತೆಯಿಂದ ಪ್ರಶ್ನಿಸಿದ


“ಕೃಷ್ಣ, ಬೇಸರವಾಯಿತೆ, ಅಳುತ್ತಿರುವೆಯ”


ಕೃಷ್ಣ ನುಡಿದ
“ಗಣೇಶ ಬೇರೆಯವರ ಕಣ್ಣೀರು ಒರೆಸುವ ಕರ್ತವ್ಯ ಇರುವವರಿಗೆ, ತಾವು ಕಣ್ಣೀರು ಹಾಕಲು ಹಕ್ಕಿರುವದಿಲ್ಲ ಅಲ್ಲವೆ” ಎನ್ನುತ್ತ ನಕ್ಕ



ಮುಂದುವರೆಯುವುದು…..
ಚಿತ್ರ ಕೃಪೆ : ಕೃಷ್ಣನ ಹೋರಾಟದ ಬದುಕು
http://i1.ytimg.com/vi/tvwZFm1dEKE/hqdefault.jpg

No comments:

Post a Comment

enter your comments please