Thursday, March 27, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)
ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು,  ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ  ಬಾಕಿ ಇತ್ತು  ಸರ್ಕಾರದ ಪರವಾಗಿ.,  ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್ ಕಟಕಟೆಗೆ ಬಂದರು,
‘ಸತ್ಯವನ್ನೆ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೆ ಏನು ಹೇಳುವದಿಲ್ಲ” ಎನ್ನುವ ವಚನ ಸ್ವೀಕರಿಸಿದರು
“ನಿಮ್ಮ ಹೆಸರು” ಸರ್ಕಾರಿ ವಕೀಲರು ಕೇಳಿದರು,
“ನನ್ನ ಹೆಸರು, ಅಶೋಕ್ , ಪೋಲಿಸ್ ಇನ್ಸ್ ಪೆಕ್ಟರ್, ಈ ಕೇಸಿನಲ್ಲಿ ಐ ಓ ಆಗಿದ್ದೇನೆ”
“ಸರಿ ಹೇಳಿ , ನಿಮಗೆ ಈ ಕೇಸಿನ ಬಗ್ಗೆ ಏನು ಹೇಳುವುದಿದೆ?”  ಕೇಳಿದರು ಸರ್ಕಾರಿ ವಕೀಲರು,
“ಸ್ವಾಮಿ  ಕೊಲೆಯಾದ ಅಂದು, ಮಾರ್ಚಿ ೩ ರಂದು ರಾತ್ರಿ ಎಂಟುವರೆ ಗಂಟೆಯಾಗಿತ್ತು, ಆಗ ಪೋಲಿಸ್ ಸ್ಟೇಶನ್ ಗೆ ಒಂದು ಕಾಲ್ ಬಂದಿತು, ಮಹಾಲಕ್ಷ್ಮೀ ಪುರದ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಸತ್ತು ಬಿದ್ದಿರುವನೆಂದು ತಲೆಯಿಂದ ರಕ್ತ ಸುರಿಯುತ್ತ ಇದೆಯೆಂದು ಯಾರೋ ಕೊಲೆಮಾಡಿ ಹಾಕಿರುವರೆಂದು.   ನಾನು ಅಲ್ಲಿ ಹೋಗುವಾಗಲೆ ಜನ ಸೇರಿದ್ದರು ಅವರನ್ನೆಲ್ಲ ದೂರ ಕಳಿಸಿ ಪರೀಕ್ಷಿಸಿದೆವು, ಅಲ್ಲಿ ಬಿದ್ದಿದ್ದ ವ್ಯಕ್ತಿ ಅನಂತರಾಮಯ್ಯ ಎನ್ನುವುದು ತಿಳಿಯಿತು ಅವರ ಪತ್ನಿಯೂ ಅಲ್ಲಿ ಬಂದಿದ್ದರು, ಆಗ ವಿಷಯವೆಲ್ಲ ತಿಳಿಯಿತು, ಮೃತನ ಸ್ನೇಹಿತ ವೆಂಕಟೇಶಯ್ಯ ಅನ್ನುವರು ಅವರ ಜೊತೆ ಹೊರಟರೆಂದು , ನಂತರ ಅವರು ಹೊರಟುಹೋಗಿರುವದಾಗಿ, ತಿಳಿಯಿತು. ಮೃತ ವ್ಯಕ್ತಿಯ ಸಮೀಪವೆ ರಕ್ತಸಿಕ್ತ ಕಲ್ಲು ಬಿದ್ದಿತ್ತು. ತಕ್ಷವೆ ತನಿಖೆಗೆ ಸಹಾಯವಾಗಬಹುದಾದ ವಿಷಯಗಳನ್ನೆಲ್ಲ ಸಂಗ್ರಹಿಸಿದೆ, ಹಾಗು ಮೃತನ ಶರೀರವನ್ನು ಆಸ್ಪತ್ರೆಗೆ ಸಾಗಿಸಲು ಏರ್ಪಾಡುಮಾಡಿದೆ. ಹಾಗೆ ವೆಂಕಟೇಶಯ್ಯನವರ ವಿಳಾಸ ಪಡೆದು, ಕೊಲೆಯಾದ ಸ್ಥಳದಿಂದ ಕಣ್ಮರೆಯಾಗಿ ಓಡಿಹೋಗಿದ್ದ  ಅವರನ್ನು ಹುಡುಕುತ್ತ ಹೋಗಿ ಅವರ ಮನೆಯಲ್ಲಿಯೆ ಇದ್ದ ಅವರನ್ನು ದಸ್ತಗಿರಿ ಮಾಡಿ ಕರೆತಂದೆ. ಅಲ್ಲಿ ಇದ್ದ ಎಲ್ಲ ಸಾಕ್ಷಿಗಳು ವೆಂಕಟೇಶಯ್ಯನವರೇ ಕೊಲೆ ಮಾಡಿದ್ದಾರೆಂದು ಸಾರಿ ಹೇಳುತ್ತಿದ್ದವು. ಅಲ್ಲದೆ ಸ್ಥಳದಿಂದ ಕಣ್ಮರೆಯಾಗಿದ್ದರಿಂದ ವೆಂಕಟೇಶಯ್ಯವರ ಬಗ್ಗೆ ಅನುಮಾನ ಹೆಚ್ಚಿಸಿತು. ಎಫ್ ಐ ಅರ್ ಬುಕ್ ಮಾಡಿ ನಂತರ ಕೋರ್ಟಿಗೆ ಹಾಜರುಪಡಿಸಿದೆ, ಅವರು ಬೇಲ್ ಪಡೆದುಕೊಂಡರು” ಎಂದು ತಿಳಿಸಿದರು.
ಸರ್ಕಾರಿ ವಕೀಲರು ಕೇಳಿದರು
“ಸರಿ ಆಗ ನೇರ ಸಾಕ್ಷಿ ಯಾರು ಇರಲಿಲ್ಲ ಎಂದು ನಮೂದಿಸಿದ್ದೀರಿ, ನಂತರ ಶಿವಣ್ಣ ಎನ್ನುವರು ಹೇಗೆ ಬಂದರು”
“ಇಲ್ಲ ಎಫ್ ಐ ಅರ್ ಹಾಕುವಾಗ ನೇರ ಸಾಕ್ಷಿಯ ಬಗ್ಗೆ ಮಾಹಿತಿ ಇರಲಿಲ್ಲ, ಈ ಕೇಸ್ ಬಗ್ಗೆ ಪೇಪರ್ ಹಾಗು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಶಿವಣ್ಣ ಎನ್ನುವವರು ತಾವಾಗಿಯೆ ಬಂದು ನಾನು ಈ ಕೊಲೆಯನ್ನು ನೇರ ನೋಡಿದ್ದೇನೆ, ಆಗ ನನಗೆ ಅವರು ಸತ್ತರು ಎಂದು ಗೊತ್ತಿರಲಿಲ್ಲ, ಅಸ್ಪತ್ರೆಗೆ ಕರೆದೋಯ್ದರು ಅಂದುಕೊಂಡಿದ್ದೆ   ಎಂದು ತಿಳಿಸಿದರು, ಹಾಗಾಗಿ ನಂತರ ಅವರ ಸಾಕ್ಷಿಯನ್ನು ಕೋರ್ಟಿಗೆ ಹಾಜರು ಪಡಿಸಲಾಗಿದೆ “  
“ಈ ಕೊಲೆ ಹೇಗೆ ನಡೆದಿದೆ ಎಂದು ನೀವು ಹೇಳುವಿರಿ?”
“ಈ ಮೊದಲೇ ತಿಳಿಸಿದಂತೆ ಅನಂತರಾಮಯ್ಯನವರು ವೆಂಕಟೇಶಯ್ಯನವರ ಹತ್ತಿರ ಬಡ್ಡಿಗೆ ಹಣ ಪಡೆದಿದ್ದಾರೆ, ಆದರೆ ಅಸಲನ್ನಾಗಲಿ ಬಡ್ಡಿಯನ್ನಾಗಲಿ ಹಿಂದೆ ಕೊಟ್ಟಿಲ್ಲ, ಹಾಗಾಗಿ ಅದನ್ನು ಕೇಳಲು ಮನೆಗೆ ಬಂದಿದ್ದಾರೆ, ಮಾತಿಗೆ ಮಾತು ಬೆಳೆದು ಜಗಳವಾಗಿದೆ ನಂತರ ಉಪಾಯವಾಗಿ ಒಬ್ಬರನ್ನೆ ಬಸ್ ನಿಲ್ದಾಣಾಕ್ಕೆ ಕರೆದೋಯಿದಿದ್ದಾರೆ ಅಲ್ಲಿ ಸಮಯನೋಡಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಅಲ್ಲಿಂದ ಬಸ್ ಹತ್ತಿ ಓಡಿ ಹೋಗಿದ್ದಾರೆ”  
ಅಶೋಕರ ಮಾತಿಗೆ ವಕೀಲರು
“ಆದರೆ ಇಲ್ಲಿ ಕೊಲೆಯನ್ನು ನೋಡಿದ ನೇರ ಸಾಕ್ಷಿಗಳಿಲ್ಲ, ನೀವು ತಂದಿರುವ ಸಾಕ್ಷಿಯೂ ನಾನು ದೂರದಲ್ಲಿದ್ದೆ ಕತ್ತಲಿನ ಕಾರಣ ಮುಖ ಅಸ್ವಷ್ಟ ಎಂದು ತಿಳಿಸುತ್ತಿದ್ದಾರೆ , ಹಾಗಿರುವಾಗ ವೆಂಕಟೇಶಯ್ಯನವರೇ ಕೊಲೆ ಮಾಡಿರುವುದು ಎಂದು ನೀವು ಹೇಗೆ ಸಾಧಿಸುವಿರಿ”
ವಕೀಲರಿಗೆ ಉತ್ತರಿಸುತ್ತ ಅಶೋಕರವರು
“ಕೊಲೆಗಾರನ ಪಾತ್ರ ನಿರ್ಧರಿಸುವಾಗ, ನೇರಸಾಕ್ಷಿ ಮುಖ್ಯವಾದರು, ಕೆಲವೊಮ್ಮೆ ಸಾಂದರ್ಭಿಕ ಸಾಕ್ಷಗಳನ್ನು ಅವಲಂಬಿಸಬೇಕಾಗುತ್ತೆ. ಇಲ್ಲಿ ಕೊಲೆಗಾರನಿಗೆ ಕೊಲೆಮಾಡಲು ಉದ್ದೇಶವಿದೆ, ತನ್ನ ಹಣ ಹೋಯಿತು ಎನ್ನುವ ರೋಷವಿದೆ. ಅನಂತರಾಮಯ್ಯ ಸಾಯುವಾಗ ವೆಂಕಟೇಶಯ್ಯ ಬಿಟ್ಟು ಬೇರೆ ಯಾರು ಹತ್ತಿರದಲ್ಲಿ ಇಲ್ಲ ಅನ್ನುವದನ್ನು ಗಮನಿಸಿಬೇಕು. ಅನಂತರಾಮಯ್ಯನವರದು ಸಹಜ ಮರಣವಲ್ಲ  ಅನ್ನುವದನ್ನು ಕಲ್ಲಿಗೆ  ಹತ್ತಿರುವ ರಕ್ತ , ಶವಪರೀಕ್ಷೆ ಇವೆಲ್ಲ ದೃಡಪಡಿಸಿವೆ. ಅಲ್ಲದೆ ಅನಂತರಾಮಯ್ಯ ಸತ್ತ ನಂತರ ವೆಂಕಟೇಶಯ್ಯನವರು ಸ್ಥಳದಿಂದ ಕಣ್ಮರೆಯಾಗುತ್ತಾರೆ, ಇವೆಲ್ಲವನ್ನು ಗಮನಿಸುವಾಗ ವೆಂಕಟೇಶಯ್ಯವರೆ ಅನಂತರಾಮಯ್ಯನವರ ಕೊಲೆ ಮಾಡಿದ್ದಾರೆ ಎಂದು ಸಾಧಿಸುತ್ತದೆ ಅಲ್ಲವೆ ?” ಎಂದರು
ಸರ್ಕಾರಿ ವಕೀಲರು ನ್ಯಾಯದೀಶರತ್ತ ತಿರುಗಿ ಅಷ್ಟೆ ಸ್ವಾಮಿ ಎಂದು ನುಡಿದರು.

ನ್ಯಾಯಾದೀಶರು ನರಸಿಂಹನತ್ತ ತಿರುಗಿದರು, ನರಸಿಂಹ ಎದ್ದು ನಿಂತ.
’ಸ್ವಾಮಿ ನಿಮ್ಮ ಅಪ್ಪಣೆಯಾದರೆ , ನಾನು ಪೋಲಿಸ್ ಅಧಿಕಾರಿ ಅಶೋಕ್‍ರವರನ್ನು ಕೆಲವು ಪ್ರಶ್ನೆ ಕೇಳುವದಿದೆ’
ಅದಕ್ಕೆ ನ್ಯಾಯದೀಶರು,
“ನಿಮ್ಮ ಪರವಾಗಿ ಯಾವುದಾದರು ಸಾಕ್ಷಿಗಳನ್ನು ದಾಖಲೆಗಳನ್ನು ಒದಗಿಸುವುದು ಇದೆಯಾ?”
“ಇದೇ ಸ್ವಾಮಿ, ಸಾಕ್ಷಿಗಳಿದ್ದಾರೆ, ಮೊದಲು ಅಶೋಕರನ್ನು ಪ್ರಶ್ನೆ ಕೇಳಲು ಅವಕಾಶಕೊಟ್ಟರೆ, ಅವರು ಸತ್ಯವನ್ನೆ ಹೇಳಿದರೆ, ನನಗೆ ಸಾಕ್ಷಿಯನ್ನು ನಿಮ್ಮ ಮುಂದೆ ನಿಲ್ಲಿಸುವ ಅಗತ್ಯವೇ ಇರುವದಿಲ್ಲ’ ಎಂದನು ನರಸಿಂಹ.
ಸರ್ಕಾರಿ ವಕೀಲರು ಎದ್ದು ನಿಂತು,
“ಸ್ವಾಮಿ , ಅರೋಪಿಗಳ ವಕೀಲರು, ಅಶೋಕರವರು ತಮ್ಮ ವಿವರಣೆ ನೀಡುವದಕ್ಕೆ ಮೊದಲೆ, ಸುಳ್ಳು ಹೇಳುತ್ತಿದ್ದಾರೆ ಎಂದು ಅರೋಪಿಸುತ್ತಿದ್ದಾರೆ, ಹೇಗೆ ಸಾದ್ಯ” ಎಂದರು,
ಅದಕ್ಕೆ ನರಸಿಂಹನು
“ಕ್ಷಮಿಸಿ ಸ್ವಾಮಿ, ನಾನು ಹಾಗೆ ಹೇಳಲಿಲ್ಲ, ಪೋಲಿಸ್ ಅಧಿಕಾರಿ ಅಶೋಕರವರು ಹೇಳುವ ಮಾತು ನಮಗೆ ಒಪ್ಪಿಯಾದರೆ , ನಿಜವಾಗಿದ್ದರೆ ಆಗ ನಮಗೆ ನಮ್ಮ ಪರ ಸಾಕ್ಷಿಯ ಅಗತ್ಯವೇ ಇರುವದಿಲ್ಲ ಅಂದೆ ಅಷ್ಟೆ” ಎಂದನು.
ನ್ಯಾಯಾದೀಶರು,
“ಸರಿ ಸುಮ್ಮನ್ನೆ ಮಾತಿನ ಕಾಲಹರಣ ಬೇಡ, ಕೋರ್ಟಿನ ಸಮಯ ವ್ಯರ್ಥ ಮಾಡದೆ ಪಾಟಿಸವಾಲು ಮಾಡಿ”
ಎಂದು ಸೂಚಿಸಲು, ನರಸಿಂಹನು ಅಶೋಕನ ಎದುರಿಗೆ ಬಂದು ನಿಂತನು
“ತಮ್ಮ ಹೆಸರು”
“ಅಶೋಕ ಎಂದು, ಮಹಾಲಕ್ಷ್ಮೀಪುರದ ಪೋಲಿಸ್ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿ ಕೆಲಸ, ಪ್ರಸ್ತುತ ಈ ಕೇಸಿನ ವಿಚಾರಣ ಅಧಿಕಾರಿ”
“ಸಂತೋಷ, ಈಗ ಕೊಲೆಗೆ ಸಂಬಂಧಿಸಿದ ಪ್ರಶ್ನೆಗೆ ಬರುವ ಮೊದಲು ತಮ್ಮನ್ನು ಈ ಕೇಸಿನಲ್ಲಿ ತಾನು ಹೊರಿಸಿರುವ ಅಪರಾದಗಳ ಬಗ್ಗೆ ಪ್ರಶ್ನೆ ಕೇಳುತ್ತೇನೆ ಆಗಬಹುದೇ?”
ಆಗಲಿ ಎನ್ನುವಂತೆ ತಲೆ ಆಡಿಸಿದ , ಅಶೋಕ್
“ಅರೋಪಿ ವೆಂಕಟೇಶಯ್ಯನವರು, ಅನದಿಕೃತ ಲೇವಾದೇವಿ ಮಾಡುತ್ತಿದ್ದರೆಂದು ಅರೋಪಿಸಿದ್ದೀರಿ ಅದಕ್ಕೆ ಸಾಕ್ಷಿ ಒದಗಿಸಿದ್ದೀರಾ?”
“ಇದೆಯಲ್ಲ, ತಾವು ಬಡ್ಡಿಗೆ ಹಣ ಕೊಟ್ಟಿರುವುದಾಗಿ ಅರೋಪಿಯೆ ಒಪ್ಪಿಕೊಂಡಿದ್ದಾರೆ,  ಮೃತರ ಪತ್ನಿಯೂ ಸಾಕ್ಷಿಯಾಗಿದ್ದಾರೆ, ಅಲ್ಲದೆ ಅರೋಪಿಯ ಬ್ಯಾಂಕ್ ಪಾಸ್ ಬುಕ್ಕಿನಲ್ಲಿ ಮೃತರಿಗೆ ಕೊಟ್ಟಿರುವ ಐದು ಲಕ್ಷ ಹಣದ ಚೆಕ್ ಬಗ್ಗೆ ವಿವರ ಒದಗಿಸಿಲಾಗಿದೆ”
“ತಾವು ಹಣ ಕೊಟ್ಟಿರುವದಾಗಿ ಮಾತ್ರ ವೆಂಕಟೇಶಯ್ಯನವರು ಹೇಳಿದ್ದಾರೆ, ಆದರೆ ಬಡ್ಡಿಗೆ ಎಂದು ಅವರಾಗಲಿ, ಅಥವ ಮೃತರ ಪತ್ನಿಯಾಗಲಿ ಒಪ್ಪಿಕೊಂಡಿಲ್ಲ. ಗೆಳೆಯ ಮನೆ ಕಟ್ಟುತ್ತಿದ್ದಾನೆ ಅವನು ಬಂದು ಹಣದ ಸಹಾಯ ಕೇಳಿದಾಗ, ಕೈಗಡ ಎಂದು ಕೊಟ್ಟಿದ್ದಾರೆ ಅಷ್ಟೆ, ಎರಡು ತಿಂಗಳಲ್ಲಿ ಹಿಂದಕ್ಕೆ ಕೊಡು ಎಂದು , ಅದು ಅನಧಿಕೃತ ಲೇವಾದೇವಿಗೆ ಹೇಗೆ ಬರುತ್ತದೆ. ಅಲ್ಲದೆ ಆ ಹಣಕ್ಕೆ ಯಾವುದೆ ಗ್ಯಾರಂಟಿ, ಆಗಲಿ ಪತ್ರವ್ಯವಹಾರವಾಗಲಿ ಇಲ್ಲ, ಹಾಗಿರುವಾಗ ಅದು ಲೇವಾದೇವಿ ಆಗುತ್ತದೆಯ”
ನರಸಿಂಹ ಕೇಳಿದ
“ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಯಾರು ಹಾಗೆ ಕೊಡುವದಿಲ್ಲ ಅಲ್ಲವೇ, ಬಡ್ಡಿ ಇಲ್ಲದಿದ್ದರೆ?”
ಅಶೋಕ್ ಕೇಳಿದರು
ಅದಕ್ಕೆ ನರಸಿಂಹ
“ನೀವು ನನ್ನ ಪ್ರಶ್ನೆಗೆ ಉತ್ತರ ಹೇಳದೆ ನನ್ನನ್ನೆ ಪ್ರಶ್ನೆ ಕೇಳುತ್ತಿರುವಿರಿ, ನೀವು ಅರೋಪಿಸಿದ ಹಣದ ಲೇವಾದೇವಿಗೆ ಯಾವುದೇ ಸಾಕ್ಷ್ಯವಿಲ್ಲ. ಹೋಗಲಿ , ಆ ರೀತಿ ಅವರು ವ್ಯವಹಾರ ಮಾಡುತ್ತಿದ್ದರೆ, ಅವರು ಅನಂತರಾಮಯ್ಯನ ಹೊರತು ಬೇರೆ ಯಾರ ಜೊತೆಗಾದರು ಮಾಡಿರುವ ವ್ಯವಹಾರಗಳ ದಾಖಲೆ ಇದೆಯ?” ಎಂದ ನರಸಿಂಹ
ಪೋಲಿಸ್ ಅಧಿಕಾರಿ ಅಶೋಕ್
“ಇಲ್ಲ ನಾನು ಆ ರೀತಿಯ ಸಾಕ್ಷ್ಯ ಒದಗಿಸಿಲ್ಲ, ಈ ಕೇಸಿಗೆ ಸಂಬಂದಿಸಿದಂತೆ ಮಾತ್ರ ದಾಖಲೆ ಕೊಟ್ಟಿರುವೆ”
ನರಸಿಂಹ ಪ್ರಶ್ನಿಸಿದ
“ಸರಿ, ಹಾಗಿದ್ದರೆ, ಅವರು ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು ಎನ್ನುವದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಅಲ್ಲವೇ?”
ಅಶೋಕ್ ಉತ್ತರ ಕೊಡಲಿಲ್ಲ. ಮೌನವಾಗಿದ್ದ.
“ಹೋಗಲಿ ಹಣದ ವಿಷಯ ಬಿಡೋಣ, ನೀವು ವೆಂಕಟೇಶಯ್ಯನವರೆ ಕೊಲೆ ಮಾಡಿರುವರೆಂದು ಹೇಗೆ ನಿರ್ಧರಿಸಿದಿರಿ?”  ನರಸಿಂಹ ಪ್ರಸ್ನಿಸಿದ
ಅದಕ್ಕೆ ಉತ್ತರಿಸುತ್ತ ಅಶೋಕ್
“ಆ ದಿನ ಮಹಾಲಕ್ಷ್ಮೀಪುರದ ನಗರ ಬಸ್ ನಿಲ್ದಾಣದ ಬಳಿ ಯಾವುದೋ ಕೊಲೆಯಾಗಿರುವದೆಂದು ಸಾರ್ವಜಕರು ಯಾರೊ ಪೋನ್ ಮಾಡಿ ತಿಳಿಸಿದರು, ರಾತ್ರಿ ಎಂಟುವರೆ ಸಮಯ ಅನ್ನಿಸುತ್ತೆ, ನಾನು ತಕ್ಷಣ ಅಲ್ಲಿಗೆ ಹೋದೆ, ಆಗಲೆ ಜನ ಸೇರಿದ್ದರು, ಮೃತರ ಪತ್ನಿ ರಾಜಮ್ಮ ಅಲ್ಲಿದ್ದರು,  ತಮ್ಮ ಗಂಡನೊಂದಿಗೆ ವೆಂಕಟೇಶಯ್ಯ ಸಹ  ಒಟ್ಟಿಗೆ ಬಸ್ ನಿಲ್ದಾಣಕ್ಕೆ ಹೊರಟರೆಂದು , ಈಗ ಇಲ್ಲಿ ತನ್ನ ಗಂಡ ತಲೆಯೊಡೆದು ಬಿದ್ದಿರುವದಲ್ಲದೆ, ವೆಂಕಟೇಶಯ್ಯ ಅಲ್ಲಿಂದ ಕಣ್ಮರೆಯಾಗಿದ್ದಾರೆಂದು ತಿಳಿಸಿದರು.
 ಹಣದ ವಿಷಯಕ್ಕೆ ಸಂಜೆಯಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿಸಿದರಲ್ಲದೆ, ಕೂಗಾಟ ನಡೆಯುತ್ತ ಇತ್ತು ಎಂದು ತಿಳಿಸಿದರು, ವೆಂಕಟೇಶಯ್ಯ ತನ್ನ ಗಂಡನ ಕೊಲೆ ಮಾಡಿ ಅಲ್ಲಿಂದ ಓಡಿಹೋಗಿದ್ದಾರೆಂದು ತಿಳಿಸಿದರು, ಆಗ ವೆಂಕಟೇಶಯ್ಯನವರ ಮನೆಯ ವಿಳಾಸ ಪಡೆದು, ಅಲ್ಲಿಗೆ ಹೋಗಿ ಅವರನ್ನು ದಸ್ತಗಿರಿ ಮಾಡಿದೆ”

ನರಸಿಂಹ ವ್ಯಂಗ್ಯದಿಂದ ಕೇಳಿದ,  
“ನೀವು ವೆಂಕಟೇಶಯ್ಯನವರ ಮನೆಗೆ ಹೋದಾಗ ಅವರೇನು ಮಾಡುತ್ತ ಇದ್ದರು, ಬಟ್ಟೆಗಳನ್ನು ಬ್ಯಾಗಿನಲ್ಲಿ ತುರುಕಿ ಪ್ಲೇನಿನಲ್ಲಿ ವಿದೇಶಕ್ಕೆ ಹಾರಿಹೋಗಲು ಹೊರಟಿದ್ದರಾ?”

ಅಶೋಕ್ ಗಂಭೀರವಾಗಿ
“ಇಲ್ಲ ನಾನು ಹೋದಾಗ ಮನೆಯಲ್ಲಿ ಊಟಮಾಡುತ್ತ ಕುಳಿತಿದ್ದರು, ಎದ್ದು ಬಂದರು” ಅಶೋಕನ ದ್ವನಿ ಸ್ವಲ್ಪ ತಗ್ಗಿತ್ತು.

“ಮತ್ತೆ ಅವರು ಕೊಲೆಯ ನಂತರ ಕಣ್ಮರೆಯಾಗಿದ್ದರು ಎಂದು ತಿಳಿಸಿದ್ದೀರಿ, ಅಲ್ಲ ಮನೆಯಲ್ಲಿ ಊಟಮಾಡುತ್ತ ನೆಮ್ಮದಿಯಾಗಿ ಕುಳಿತಿರುವವರನ್ನು ಕಣ್ಮರೆ ಎಂದರೆ ಹೇಗೇ , ಅವರೇನು ಮನೆ ದೇಶ ಬಿಟ್ಟು ಹೋಗಿ ಅಡಗಿದ್ದರಾ?” ಎಂದ ನರಸಿಂಹ ಗಟ್ಟಿಯಾದ ದ್ವನಿಯಲ್ಲಿ.
ಅದಕ್ಕೆ ಅಶೋಕ್
“ಹಾಗಲ್ಲ , ಅವರ ಸ್ನೇಹಿತ ಅನಂತರಾಮಯ್ಯ ಬಸ್ ನಿಲ್ದಾಣದಲ್ಲಿ ಸತ್ತು ಬಿದ್ದಾಗ, ಇವರು ನಿಜಕ್ಕೂ ನಿರಾಪರಾದಿಯಾಗಿದ್ದರೆ ಕಡೆಯಪಕ್ಷ ಪೋಲಿಸರಿಗೆ, ಮನೆಯವರಿಗೆ ವಿಷಯ ತಿಳಿಸಬಹುದಿತ್ತಲ್ಲ, ಹಾಗೆ ಏಕೆ ಓಡಿಹೋದರು”
ನರಸಿಂಹ ಹೇಳಿದ.
“ಸರಿಯಾಗಿ ಕೇಳಿದಿರಿ, ಏಕೆ ಹಾಗೆ ಹೋದರೆಂದರೆ ಆಗ ಅನಂತರಾಮಯ್ಯನವರ ಕೊಲೆ ಆಗಿರಲಿಲ್ಲ, ವೆಂಕಟೇಶಯ್ಯನವರು ಬಸ್ಸು ಹತ್ತುವವರೆಗೂ ಅನಂತರಾಮಯ್ಯ ಸರಿಯಾಗಿಯೇ ಇದ್ದರು, ಹಾಗಾಗಿ ಅವರಿಗೆ ಪೋಲಿಸ್ ಅಥವ ಮನೆಯವರಿಗೆ ತಿಳಿಸುವ ಪ್ರಮೇಯವೇ ಬರಲಿಲ್ಲ,  ಅವರ ಎದುರಿಗೆ ಅನಂತರಾಮಯ್ಯನವರಿಗೆ ಏನಾದರು ಆಗಿದ್ದಲ್ಲಿ, ಅವರು ನೀವು ತಿಳಿಸಿದ್ದಂತೆ ಮಾಡುತ್ತಿದ್ದರು ಅಲ್ಲವೇ?”

ನರಸಿಂಹನ ತರ್ಕದ ವಾದಕ್ಕೆ ಪೋಲಿಸ್ ಅಧಿಕಾರಿ ಅಶೋಕನ ಬಾಯಿ ತಗ್ಗಿತ್ತು, ಆದರೂ ನುಡಿದ
“ಅದು ನೀವು ಹೇಳುತ್ತಿರುವ ತರ್ಕ, ಆದರೆ ಅನಂತರಾಮಯ್ಯನವರನ್ನು ಕೊಲ್ಲಲು ವೆಂಕಟೇಶಯ್ಯನವರಿಗೆ ಎಲ್ಲ ಕಾರಣಗಳೂ , ಸಂದರ್ಭದ ಅನುಕೂಲವೂ ಇದ್ದವೂ, ಹಾಗಾಗಿ ಅವರು ಕೊಲೆ ಮಾಡಿ ಅಲ್ಲಿಂದ ಮರೆಯಾದರು ಅನ್ನುವುದು ಸತ್ಯ”

ನರಸಿಂಹ
“ಸರಿ ಈಗ ನಿಮ್ಮ ತರ್ಕದ ಪ್ರಕಾರ ವೆಂಕಟೇಶಯ್ಯವರು ಹೇಗೆ ಕೊಲೆ ಮಾಡಿದ್ದಾರೆ ಎಂದು ನೀವು ಹೇಳುವುದು”

ಅಶೋಕ ಹೇಳಿದ್ದ,
“ಅದನ್ನು ಸಾಕಷ್ಟು ಬಾರಿ ನಿಮ್ಮ ಎದುರಿಗೆ ಕೋರ್ಟಿನಲ್ಲಿ ಹೇಳಲಾಗಿದೆ, ಅದಕ್ಕೆ ತಕ್ಕ ಸಾಕ್ಷಿಯನ್ನು ನಾವು ಕೊಟ್ಟಿದ್ದೇವೆ, ವೆಂಕಟೇಶಯ್ಯನವರು ರಸ್ತೆಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿ ಹಿಂಬದಿಹಿಂದ ಅನಂತರಾಮಯ್ಯನವರ ತಲೆಗೆ ಬಾರಿಸಿದ್ದಾರೆ, ನಂತರ ಕಲ್ಲನ್ನು ಅಲ್ಲೆ ಎಸೆದು ಓಡಿಹೋಗಿದ್ದಾರೆ, ಕಲ್ಲಿನ ಮೇಲಿನ ರಕ್ತದ ಕಲೆ ಅನಂತರಾಮಯ್ಯನವರದೇ ಎಂದು ಮೆಡಿಕಲ್ ರಿಪೋರ್ಟ್‍ನಲ್ಲಿ ಸಾಬೀತಾಗಿದೆ”
ನರಸಿಂಹ ಕೇಳಿದ
“ಅಕಲ್ಲಿನ ಮೇಲೆ ವೆಂಕಟೇಶ್ಯನವರ ಬೆರಳಗುರುತೇನಾದರು ಸಿಕ್ಕಿದೆಯಾ ಪರೀಕ್ಷೆ ಮಾಡಿಸಿದ್ದೀರಾ?”
ಅಶೋಕ ಹೇಳಿದರು
“ಇಲ್ಲ ಅದು ರಸ್ತೆಯಲ್ಲಿ ಬಿದ್ದಿದ್ದ, ಮಣ್ಣು ಮುಚ್ಚಿದ್ದ ಕಲ್ಲು, ಅಲ್ಲದೆ ಅದು ಸಂಪೂರ್ಣ ರಕ್ದದಿಂದ ತೋಯ್ದು ಹೋಗಿದೆ ಹಾಗಾಗಿ ಅದರ ಮೇಲೆ  ಬೆರಳಗುರುತು ಸಿಗುವ ಹಾಗಿರಲಿಲ್ಲ”

ನರಸಿಂಹ ಮತ್ತೆ ಪ್ರಶ್ನಿಸಿದ.
“ಅದು ಹೋಗಲಿ ಬಿಡಿ, ನೀವು ಹೇಳಿದಂತೆ ಹಿಂದಿನಿಂದ ತನಗಿಂತ ಎತ್ತರವಿರುವ ಅನಂತರಾಮಯ್ಯನವರ ತಲೆಗೆ ವೆಂಕಟೇಶ್ಯನವರು ಜೋರಾಗಿ ಹೊಡೆದಿದ್ದಾರೆ ಎಂದರೆ,  ಅವರು ಅಷ್ಟು ಶಕ್ತಿವಂತರಲ್ಲ,ಇರಲಿ, ಹಾಗೆ ಹಾಗಿದ್ದರು ವೆಂಕಟೇಶಯ್ಯನವರ ಬಟ್ಟೆ ರಕ್ತದಿಂದ ತೋಯ್ಯಬೇಕಾಗಿತ್ತು, ನೀವು ಆ ರೀತಿ ವೆಂಕಟೇಯ್ಯನವರ ರಕ್ತ ಸಿಕ್ತ ಬಟ್ಟೆ ಏನಾದರು ವಶಪಡಿಸಿಕೊಂಡಿದ್ದೀರಾ?”
ನರಸಿಂಹನ ಪ್ರಶ್ನೆಗೆ ಅಶೋಕ ಗಲಿಬಿಲಿಗೊಂಡ, ಆ ವಿಷಯ ಅವನು ಮರೆತಿದ್ದ,
“ಇಲ್ಲ ಆ ರೀತಿ ಬಟ್ಟೆ ಯಾವುದೂ ಸಿಗಲಿಲ್ಲ, ಬಹುಷಃ ಅವರು ಅದನ್ನು ಮುಚ್ಚಿಟ್ಟು ನಾಶ ಮಾಡಿರಬಹುದು”
ನರಸಿಂಹ  ಮತ್ತೆ ಜೋರಾಗಿ ಹೇಳಿದ
“ಇನ್ಸ್‍ಪೆಕ್ಟರ್ ಅಶೋಕ್ ರವರೆ ,  ಕಲ್ಪನೆಯ ಉತ್ತರ ನೀಡುತ್ತ ಇರುವಿರಿ .ನೀವು ಕೊಲೆಯಾದ ಒಂದು ಘಂಟೆಯೊಳಗೆ ಅರೋಪಿಯ ಮನೆಗೆ ಹೋಗಿದ್ದೀರಿ, ಅಷ್ಟು ಸಮಯದಲ್ಲಿ ಅವರು ಬಸ್ಸಿನಲ್ಲಿ ಮನೆಗೆ ಹೋಗಿ, ರಕ್ತದ ಕಲೆಯನ್ನೆಲ್ಲ ತೊಳೆದು, ಬಟ್ಟೆಯನ್ನು ನಾಶಮಾಡಿ, ಶಾಂತರಾಗಿ ಊಟಮಾಡುತ್ತ ಕುಳಿತುಕೊಳ್ಳುವುದು ಸಾದ್ಯವೇ,  ಅಲ್ಲದೇ ಅವರು ಅದೇ ರಕ್ತದ ಬಟ್ಟೆಯಲ್ಲಿಯೆ ಬಸ್ ಹತ್ತಿ ಪ್ರಯಾಣ ಮಾಡಿದರು ಎನ್ನುವಾಗ, ನಿಮ್ಮ ತರ್ಕದಲ್ಲಿ ಲೋಪವಿದೆ ಅನ್ನಿಸಲ್ಲವೆ, ಅದಾಗ್ಯು ಈ ಮೇಷ್ಟ್ರು ವೆಂಕಟೇಶಯ್ಯನವರು   ಪ್ರೊಫೆಷನ ಕೊಲೆಗಾರ ಏನಲ್ಲ, ಅಷ್ಟು ತಣ್ಣಗೆ ಎಲ್ಲ ಮಾಡಿ ಮುಗಿಸಿ ಕೂಡಲು, ಇವರಿಗೆ ಯಾವುದೇ ಕ್ರಿಮಿನಲ್ ಬ್ಯಾಗ್ರೌಂಡ ಸಹ ಇಲ್ಲ “
ನರಸಿಂಹ ಅಶೋಕನ ಮುಖವನ್ನೆ ನೋಡುತ್ತಿದ್ದ.

ಅಶೋಕ
“ಇರಬಹುದು, ಆದರೆ ಆ ಸಂದರ್ಭದಲ್ಲಿ ವೆಂಕಟೇಶಯ್ಯನವರನ್ನು ಹೊರತುಪಡಿಸಿ, ಮತ್ತೇ ಯಾರಿಗೂ ಅನಂತರಾಮಯ್ಯನನ್ನು ಕೊಲೆಮಾಡಲು ಅವಕಾಶವೂ ಇಲ್ಲ, ಕಾರಣವೂ ಇಲ್ಲ, ಅವರನ್ನು ಬಿಟ್ಟು ಮತ್ತೆ ಯಾರು ಕೊಲೆಮಾಡಲು ಸಾದ್ಯ?”
ನರಸಿಂಹ ನಗುತ್ತ ನುಡಿದ
“ಯಾರು ಕೊಲೆಮಾಡಲು ಸಾದ್ಯ ಎಂದು ಹೇಳುವುದು ನನ್ನ ಕೆಲಸವಲ್ಲ ನಿಮ್ಮ ಕೆಲಸ, ನನ್ನ ಕೆಲಸವೆಂದರೆ ವೆಂಕಟೇಶಯ್ಯನವರು ಕೊಲೆ ಮಾಡಲು ಸಾದ್ಯವಿಲ್ಲ ಎಂದು ಹೇಳುವದಷ್ಟೆ, ನನ್ನ ಕ್ಲೈಂಟ್ ನಿರಪರಾದಿ ಎಂದು ತೋರಿಸುವುದು”
ಅಶೋಕ   
“ಅದಕ್ಕಾಗಿಯೆ ನನ್ನ ಕೆಲಸವೆಂದ, ಹೇಳುತ್ತಿರುವೆ, ನನ್ನ ಪ್ರಕಾರ ವೆಂಕಟೇಶಯ್ಯನವರನ್ನು ಬಿಟ್ಟರೆ ಮತ್ತೆ ಯಾರು ಅನಂತರಾಮುವನ್ನು ಆ ಸಮಯದಲ್ಲಿ ಬೇಟಿ ಮಾಡಲೇ ಇಲ್ಲ, ಅದೇ ನಮ್ಮ ತರ್ಕ”
ನರಸಿಂಹ ಮತ್ತೆ ಹೇಳಿದ
“ಅಶೋಕ್‌ರವರೆ ನಾನು ಸಹ ಅಲ್ಲಿ ಹೋಗಿ ಜಾಗ ಪರಿಶೀಲಿಸಿದ್ದೀನಿ, ಅದು ಸುಮಾರು ನಲವತ್ತು ಅಡಿಯ ಚಿಕ್ಕ ರಸ್ತೆ ಬಸ್ ನಿಲ್ದಾಣದ ಎದುರಿಗೆ ರೋಡ್ ಡಿವೈಡರ್ ಸಹ ಹಾಕಲಾಗಿದೆ,  ಬಸ್ ನಿಲ್ದಾಣದ ಪುಟ್ಪಾತ್ ನಿಂದ ಮೂರು ಅಡಿ ದೂರಕ್ಕೆ ಶವ ಬಿದ್ದಿತ್ತು, ಯಾವುದೇ ಬಸ್ ಬಂದರು ಸಹ ನೆಲದ ಮೇಲಿದ್ದ ಅನಂತರಾಮಯ್ಯನವರ ಮೇಲೆಯೆ ಹೋಗಬೇಕಿತ್ತು, ಆದರೆ ನಿಮ್ಮ ಹೇಳಿಕೆ ಪ್ರಕಾರ , ಕೊಲೆ ಮಾಡಿದ ನಂತರ ವೆಂಕಟೇಶಯ್ಯನವರು ಬಸ್ ಹತ್ತಿ ಹೋದರು ಅನ್ನುವಿರಿ, ಹಾಗಿರುವಾಗ ಬಸ್ ಅಲ್ಲಿ ಹೇಗೆ ಚಲಿಸಿತು, ಬಸ್ ಡ್ರೈವರ್ ಆಗಲಿ, ಅಥವ ಯಾರೇ ಆಗಲಿ ನೆಲದ ಮೇಲೆ ಬಿದ್ದಿದ್ದ ಶವ ಗಮನಿಸಲಿಲ್ಲವೇ, ಪೋಲಿಸರಿಗೆ ತಿಳಿಸಲಿಲ್ಲವೇ?”
ಅಶೋಕ್ ಹೇಳಿದ
“ಗಮನಿಸಿರಬಹುದು, ನಮ್ಮಲ್ಲಿ ಶವ ಕಂಡಾಗ ಕೆಲವರು ಮಾತ್ರ  ಪೋಲಿಸರಿಗೆ ಬಂದು ಹೇಳುವರು, ಕೆಲವರು ಕಾನೂನಿನ ಗೊಡವೆ ಏಕೆ ಎಂದು ಹೋಗುವರು ಜಾಸ್ತಿ, ಬಸ್ ಡ್ರೈವರ್ ಪಕ್ಕದಿಂದ ಹೋಗಿರಬಹುದು”

ನರಸಿಂಹ ಹೇಳಿದ
“ನಿಮ್ಮ ಪ್ರಕಾರ ಅಲ್ಲಿ ಶವ ಬಿದ್ದಿದ್ದರು ಬಸ್ ಪಕ್ಕದಿಂದ ಚಲಿಸಿತು, ಬಸ್ ನಲ್ಲಿ ರಕ್ತದ ಬಟ್ಟೆಯಲ್ಲೆ ಇದ್ದ ವೆಂಕಟೇಶಯ್ಯ ಪಯಣಿಸಿದರು,  ಸರಿ ಈಗ ಆ ಕಲ್ಲಿನ ವಿಷಯಕ್ಕೆ ಬರೋಣ, ಕೊಲೆ ಮಾಡಲು ಉಪಯೋಗಿಸಿದ ಕಲ್ಲು ನಿಮಗೆ ಎಲ್ಲಿ , ಹೇಗೆ ಸಿಕ್ಕಿತು”

ಅಶೋಕ ಹೇಳಿದ
“ಅದು ಅಪರಾದಿಯು ಬಸ್ ನಿಲ್ದಾಣದ ಮುಂದೆ ಬಿದ್ದಿದ್ದ ಕಲ್ಲಿನಿಂದ ತಕ್ಷಣಕ್ಕೆ ಕೊಲೆ ಮಾಡಿ ನಂತರ ಅದನ್ನು ಅಲ್ಲಿಯೇ ಎಸೆದುಹೋಗಿದ್ದ, ನಾನು ಸ್ಥಳಕ್ಕೆ ಹೋದಾಗಲು ಆ ಕಲ್ಲು ಅಲ್ಲಿಯೆ ಬಿದ್ದಿತ್ತು ಅದನ್ನು ವಶಪಡಿಸಿಕೊಂಡು, ಅದರ ಮೇಲಿದ್ದ ರಕ್ತದ ಪರೀಕ್ಷೇ ಮಾಡಿಸಿ ಕೋರ್ಟಿಗೆ ವಶಪಡಿಸಿದ್ದೀನೆ”

“ಮತ್ತೊಮ್ಮೆ ಕೇಳುತ್ತಿದ್ದೇನೆ, ನೆಲದ ಮೇಲೆ ಬಿದ್ದಿದ್ದ ಕಲ್ಲನ್ನು ಎತ್ತಿ ಹೊಡೆದು ಅನಂತರ ಅಲ್ಲಿಯೆ ಎಸೆದು ಬಸ್ ಹತ್ತಿ ಹೋದರಾ?”



ಅಶೋಕ್ ಡೃಡವಾಗಿ ಉತ್ತರಿಸಿದ
“ಹೌದು ಹಾಗೆಯೇ ಆಗಿರುವುದು”
ನರಸಿಂಹ ಅಶೋಕ್ ರತ್ತ ನೋಡುತ್ತ
“ ಅದು ಹಾಗೆ ಆಗಿರಲಿ, ಈಗ ಅಲ್ಲಿ ನೋಡಿ, ಬೆಂಚ್ ಮೇಲೆ ಒಬ್ಬ ವ್ಯಕ್ತಿ ಕುಳಿತಿರುವ ಅವರನ್ನು ನೀವು ಗುರುತು ಹಿಡಿಯುವಿರ” ಎಂದು ಕೇಳುತ್ತ
“ನೀನು ಸ್ವಲ್ಪ ನಿಂತುಕೋಪ್ಪ,  ಮೂರ್ತಿ ಸ್ವಲ್ಪ ಮುಂದೆ ಬಾ” ಎಂದು ಕೈ ಮಾಡಿ ಕರೆದ.
ಅಶೋಕ್ ಅವನತ್ತ ನೋಡುತ್ತ
“ಇವನಾ, ಇವನನ್ನು ನೋಡಿರುವೆ, ಅಗಾಗ್ಯೆ ನಮ್ಮ ಸ್ಟೇಷನ್ ಗೆ ಬರುವವನು, ಪಾಟ್ ನಲ್ಲಿರುವ ಗಿಡಗಳನ್ನು ಸರಿಮಾಡುವುದು ಅಂತಹ ಕೆಲಸಗಳನ್ನೆಲ್ಲ ಮಾಡಿಕೊಡುವನು, ಇವನಿಗೂ ಈ ಕೇಸಿಗೂ ಏನು ಸಂಬಂಧ” ಎಂದ ಅಶೋಕ್ .
“ಸಂಬಂಧ ಆಮೇಲೆ ಹೇಳುತ್ತೇನೆ ‘ ಅಂದ  ನರಸಿಂಹ ನ್ಯಾಯಾದೀಶರನ್ನು ಕುರಿತು,
“ಸ್ವಾಮಿ, ಈ ಸಂದರ್ಭದಲ್ಲಿ ನಾನು ಇನ್ಸ್ ಪೆಕ್ಟರ್ ರವರ ಪಾಟಿಸವಾಲನ್ನು ನಂತರ ಮುಂದುವರೆಸುವೆ, ತಾವು ದಯಮಾಡಿ ಈ ನನ್ನ ಸಾಕ್ಷಿಗೆ ತಾನು ನೋಡಿರುವದನ್ನು ವಿವರಿಸಲು ಅವಕಾಶ ಕೊಡಬೇಕು, ಇವನು ಕೊಲೆಯಾಗಿರುವ ಜಾಗದ ಪಕ್ಕದಲ್ಲಿಯೇ ಗುಡಿಸಲಿನಲ್ಲಿದ್ದಾನೆ , ಮೂರ್ತಿ ಎಂದು ಹೆಸರು”
ಎಂದನು, ನ್ಯಾಯದೀಶರು ಅಸಮದಾನದಿಂದ
“ಇದೇನು ನರಸಿಂಹ, ಈ ರೀತಿ ಮಾಡುತ್ತಿರುವಿರಿ, ನಿಮ್ಮ ಸಾಕ್ಷಿಯನ್ನು ಮೊದಲು ವಿಚಾರಿಸಿ, ಕಡೆಗೆ ಕೇಸ್ ಇನ್ ಚಾರ್ಜ್ ಅಶೋಕ್ ರವರ ವಿಚಾರಣೆ ನಡೆಸಬಹುದಿತ್ತು, ಅರ್ಧಕ್ಕೆ ನಿಲ್ಲಿಸುವುದು, ನಿಮ್ಮ ಸಾಕ್ಷಿಯನ್ನು ನಡುವೆ ತರುವುದು , ಇದೆಲ್ಲ ಏನು ಮಾಡುತ್ತಿರುವಿರಿ ಕೋರ್ಟಿನ ಸಮಯ ವ್ಯರ್ಥಮಾಡುವಿರಿ”
ನರಸಿಂಹನು
“ಕ್ಷಮಿಸಿ ಬೇಕು ಸ್ವಾಮಿ, ಅಶೋಕ್ ರವರ ಹೇಳಿಕೆಯಲ್ಲಿನ ತಪ್ಪನ್ನು ತೋರಿಸಲು ನನಗೆ ಈ ಸಾಕ್ಷಿ ಬೇಕಾಗಿದೆ ಅಷ್ಟೆ, ಒಂದು ವೇಳೆ ಅಶೋಕರವರೆ ಹೇಳಿಬಿಟ್ಟಿದ್ದರೆ ನನಗೆ ಈ ಸಾಕ್ಷಿಯ ಅಗತ್ಯವಿರಲಿಲ್ಲ, ಅದಕ್ಕಾಗಿ ಕೋರ್ಟಿನ ಸಮಯ ತೆಗೆದುಕೊಳ್ಳುತ್ತಿರುವುದಕ್ಕೆ ಕ್ಷಮಿಸಬೇಕು, ಅಗತ್ಯ ಪತ್ರವನ್ನು ಸ್ವೀಕರಿಸಿ ಅವಕಾಶ ಕೊಡಬೇಕು ಎನ್ನುತ್ತ ತನ್ನ ಅಪ್ಲಿಕೇಶನ್ ಕೊಟ್ಟನು”
ನ್ಯಾಯಾದೀಶರು
“ಸರಿ , ನಿಮ್ಮ ಸಾಕ್ಷಿಯನ್ನು ಕರೆಯಿರಿ ಅದೇನು ಹೇಳಿಸುವಿರೋ ಹೇಳಿಸಿ, ರೀ ಅಶೋಕ್ ನೀವು ಸ್ವಲ್ಪ ಹೊರಬನ್ನಿ ಆಪ್ಪ, ನಂತರ ಮತ್ತೇ ಬೇಕಾದರೆ ಕರೆಯುತ್ತೇವೆ” ಎಂದರು ಅಸಮಾದಾನದಿಂದ

ಮೂರ್ತಿಯನ್ನು ಕಟಕಟೆಗೆ ಕರೆಯಲಾಯಿತು, ಅವನು ಪ್ರತಿಜ್ಞಾವಿದಿ ಸ್ವೀಕರಿಸಿದ, ಸ್ವಲ್ಪ ಹೆದರಿದಂತಿದ್ದ ಮೂರ್ತಿಗೆ ನರಸಿಂಹ ಹೇಳಿದ
“ನಿನ್ನ ಹೆಸರೇನು”
“ಮೂರ್ತಿ ಅಂತ ಸ್ವಾಮಿ”
“ನೋಡು ಮೂರ್ತಿ, ನೀನು ಏನು ಹೆದರಬೇಡ, ನಿನ್ನನ್ನು ಇಲ್ಲಿ ಕರೆದಿರುವುದು, ನೀನು ಕೊಲೆಯಾದ ದಿನ ಏನೇನೊ ನೋಡಿದೆ, ಪೋಲಿಸರಿಗೆ ಏನು ಸಹಾಯ ಮಾಡಿದೆ ಎಂದು ಕೇಳಲು ಮಾತ್ರ” ಎಂದನು ನರಸಿಂಹ,
ಮೂರ್ತಿ ಆಗಲಿ ಎನ್ನುವಂತೆ ತಲೆ ಆಡಿಸಿದ.

“ನೋಡು ಮೂರ್ತಿ ಆ ದಿನ ಬಸ್ ಸ್ಟಾಂಡಿನ ಹತ್ತಿರ ಕೊಲೆಯಾಯಿತಲ್ಲ ಆದಿನ ಏನು ನಡೆಯಿತು ನಿನಗೆ ಏನು ಗೊತ್ತಿದೆ ಎಲ್ಲ ಹೇಳು, ನೀನು ಕೊಲೆಗಾರನನ್ನು ನೋಡಿದೆಯಾ ?”
ಮೂರ್ತಿ ನಿಧಾನಕ್ಕೆ ನುಡಿದ
“ಸ್ವಾಮಿ ನಾನು ಕೊಲೆಮಾಡಿದವನನ್ನು ನೋಡಿಲ್ಲ, ಅವತ್ತು ರಾತ್ರಿ ನಾನು ಗುಡಿಸಲಲ್ಲಿ ಒಬ್ಬನೆ ಮಲಗಿದ್ದೆ, ಬಸ್ ಸ್ಟಾಂಡಿನ ಹತ್ತಿರ ಕಂಬದ ದೀಪ ಹೋದ ಮೇಲೆ ಬೇಗ ಮಲಗಿಬಿಡುತ್ತೇನೆ, ಅವತ್ತು ಹಾಗೆ ಮಲಗಿದ್ದಾಗ, ಸ್ವಲ್ಪಹೊತ್ತಾಗಿರಬಹುದು, ಹೊರಗೆ ರಸ್ತೆಯಲ್ಲಿ, ಯಾವುದೋ ಬೈಕ್ ತಕ್ಷಣ ಬ್ರೇಕ್ ಹಾಕಿದರೆ ಬರುತ್ತಲ್ಲ ಆ ರೀತಿ ಜೋರಾಗಿ ಶಬ್ದ ಬಂದಿತು, ಹಾಗೆ ಯಾರೋ ಅಯ್ಯೋ ಅಂತ ಕೂಗಿದರು, ಮತ್ತೆ ಮತ್ತೆ ಒಬ್ಬರು ಸಾರ್ ಸಾರ್ ಅನ್ನುತಿರುವುದು ಕೇಳಿಸಿತು, ನಾನು ಏನಾಯಿತು ಅಂತ ಹೊರಗೆ ಹೋಗೋಣ ಅಂತ ಎದ್ದೆ, ಮತ್ತೆ ಬೈಕ್ ಶಬ್ದ, ಹೊರಗೆ ಬಂದರೆ ಯಾರು ಕಾಣಿಸಲಿಲ್ಲ. ಸರಿ ಒಳಗೆ ಹೊರಟು ಹೋಗೋಣ ಅಂದುಕೊಂಡು ತಿರುಗುವದರಲ್ಲಿ,  ಮುಸುಕು ಬೆಳಕಲ್ಲಿ ರಸ್ತೆಯಲ್ಲಿ ಯಾರೋ ಬಿದ್ದಿರುವುದು ಕಾಣಿಸಿತು, ಹಾಗೆ ಮೇಲೆ ನಡೆದು ರಸ್ತೆಗೆ ಬಂದು ಹತ್ತಿರದಿಂದ ನೋಡಿದೆ, ತಲೆಯಿಂದ ರಕ್ತ ಬರುತ್ತಿತ್ತು, ರಸ್ತೆಯೆಲ್ಲ ರಕ್ತ ಚೆಲ್ಲಿತ್ತು, ವ್ಯಕ್ತಿ ಮಿಸುಗುತ್ತಿರಲಿಲ್ಲ, ಒಳಗೆ ಹೋಗಿ ನೀರು ತರೋಣವೆ ಅಂದುಕೊಂಡರೆ ಅವನು ಬಿದ್ದಿರುವುದು ರಸ್ತೆಯಲ್ಲಿ, ಕತ್ತಲು ಬೇರೆ ಯಾವುದಾದರು ವಾಹನ  ಬಂದರೆ ಅವನ ಮೇಲೆ ಹೋಗುತ್ತಿತ್ತು, ಸರಿ ಸ್ವಲ್ಪ ಕೂಗಿದೆ ಒಂದಿಷ್ಟು ಜನ ಸೇರಿದರು, ಹಾಗೆ ಅಲ್ಲಿ ಬಿದ್ದವರು ಮೇಷ್ಟ್ರು ಪಕ್ಕದ ರಸ್ತೆಯವರು ಎಂದು ಗೊತ್ತಾಯಿತು, ಅವರ ಮನೆಯವರು ಬಂದರು, ಆಮೇಲೆ ಪೋಲಿಸರು ಬಂದರು, ಸ್ವಲ್ಪ ಕಾಲ ನೋಡಿ ಅವರನ್ನು ಅಸ್ಪತ್ರೆಗೆ ತೆಗೆದುಕೊಂಡು ಹೋದರು”

ನರಸಿಂಹ ನ್ಯಾಯದೀಶರ ಕಡೆ ನೋಡಿದ,
“ಇವರು ಏನು ವಿಶೇಷ ಹೇಳಿದರು, ರಿ ನರಸಿಂಹ, ಈಗ ಗೊತ್ತಿರುವುದೇ, ಹೊಸದೇನಿದೆ, ಸಮಯ ಹಾಳು “ ಎಂದರು
ನರಸಿಂಹ ಹೇಳಿದ
“ಹಾಗಲ್ಲ ಸ್ವಾಮಿ, ಗಮನಿಸಿ, ಅಲ್ಲಿ ಯಾರೋ ಬೈಕ್ ನಲ್ಲಿ ಬಂದಿದ್ದಾರೆ, ಅನಂತರಾಮಯ್ಯನವರ ಕೊಲೆಯಾಗಿದೆ, ಹಾಗು ಆಗ ವೆಂಕಟೇಶಯ್ಯನವರು ಇರಲಿಲ್ಲ ಅಂತ ಅಲ್ಲವೇ”
ನ್ಯಾಯದೀಶರನ್ನು ಕೇಳಿದ.
ನ್ಯಾಯದೀಶರು
“ಬೇರೆ ಯಾರೋ ಬಂದಿದ್ದಾರೆ ಅಂದುಕೊಳ್ಳೋಣ, ವೆಂಕಟೇಶಯ್ಯ ಇರಲಿಲ್ಲ ಎಂದು ಹೇಗೆ ಸಾಧಿಸುವಿರಿ”
ನರಸಿಂಹ ಹೇಳಿದ
“ಸ್ವಾಮಿ ಇದು ಪೋಲಿಸರ ಹೇಳಿರುವ ಕೊಲೆಯ ಕತೆಗಿಂತ ಭಿನ್ನವಲ್ಲವೆ , ವೆಂಕಟೇಶಯ್ಯನವರು ಬಸ್ಸಿನಲ್ಲವೆ ಮನೆಗೆ ಹೋಗಿರುವುದು, ಅದಕ್ಕಿಂತ ಈ ಮೂರ್ತಿಯ ಮುಂದಿನ ಹೇಳಿಕೆಯನ್ನು ಗಮನಿಸಿ ದಯವಿಟ್ಟು”
ಎನ್ನುತ್ತ ನರಸಿಂಹ ಮೂರ್ತಿಯತ್ತ ತಿರುಗಿ
“ಮೂರ್ತಿ, ಕೊಲೆಯ ಸಂಗತಿಯಾಯಿತು, ನೀನು ಆ ನಂತರ ಪೋಲಿಸರಿಗೆ ಸಹಾಯ ಮಾಡಿದೆಯಲ್ಲ , ಆ ಕೊಲೆಮಾಡಿದ ಕಲ್ಲನ್ನು ತೆಗೆದುಕೊಟ್ಟದ್ದು ಎಲ್ಲವನ್ನು ಹೇಳು “
ಎನ್ನುತ್ತ, ಕುಚೇಷ್ಟೆಯಿಂದ ಅಶೋಕನ ಕಡೆ ನೋಡಿ ನಕ್ಕನು,
ಪೋಲಿಸ್ ಅಧಿಕಾರಿಗೆ ಈಗ ಸ್ವಲ್ಪ ಗಾಭರಿ.
ಮೂರ್ತಿ
“ಹೌದು ಸಾ, ಎಲ್ಲ ಹೋದರು, ಆ ಮೇಲೆ ರಾತ್ರಿ,  ಹತ್ತು ಗಂಟೆ ಆದ ಮೇಲೆ ಪೋಲಿಸರು, ಪುನಃ ಬಂದಿದ್ದರು, ಅಲ್ಲಿ ಬಿದ್ದಿದ್ದ ವಸ್ತುಗಳನ್ನೆಲ್ಲ ಹುಡುಕಿದರು, ಹಾಗೆ ರಕ್ತವಾಗಿದ್ದ ಕಲ್ಲನ್ನು ತೆಗೆದುಕೊಡಲು ಕೇಳಿದರು, ನಾನು ನನ್ನಲ್ಲಿದ್ದ ಗುದ್ದಲಿ ತಂದು ನೆಲದಿಂದ ಕಲ್ಲನ್ನು ಬಿಡಿಸಿದೆ, ನಂತರ  ಕಲ್ಲಿನ ಮೇಲಿದ್ದ  ಮಣ್ಣನು ಸ್ವಲ್ಪ ಕ್ಲೀನ್ ಮಾಡಿದೆ , ಆ ಕಲ್ಲನ್ನು ಜೀಪಿನಲ್ಲಿಡು ಅಂತ ಹೇಳಿ ಇಡಿಸಿದರು”
“ನೋಡು ಮೂರ್ತಿ ಇದೇ ಕಲ್ಲ ನೋಡು “
ಎಂದ ನರಸಿಂಹ, ಮೂರ್ತಿ
“ಹೌದು ಸಾ, ಇದೇ ಕಲ್ಲು ಅವನ್ನು ನಾನು ನೆಲದಿಂದ ಕಿತ್ತಿದ್ದು, ಮುಕ್ಕಾಲು ಬಾಗ ನೆಲದಲ್ಲೆ ಸೇರಿತ್ತು, ಸಾಹೇಬ್ರು ಕೇಳಿದರು ಎಂದು ಬಿಡಿಸಿಕೊಟ್ಟೆ, ಅದೇ ಕಲ್ಲಿನಲ್ಲಂತಲ್ಲ ಸ್ವಾಮಿ ಮೇಷ್ಟ್ರ ಕೊಲೆ ಮಾಡಿರೋದು”
ಮೂರ್ತಿ ಮುಗ್ದನಾಗಿ ಕೇಳಿದ
ನರಸಿಂಹ ನಗುತ್ತಿದ್ದರೆ, ಒಂದು ಕ್ಷಣ ಅರ್ಥವಾಗದೆ ಸುಮ್ಮನಿದ್ದ ನ್ಯಾಯದೀಶರು ನಂತರ ಗಂಭೀರವಾದರು, ಅವರಿಗೆ ಪೋಲಿಸರು ಈ ಕೇಸಿನಲ್ಲಿ ಹೇಗೆ ಸುಳ್ಳು ಸಾಕ್ಷಗಳನ್ನು ಕೊಟ್ಟು ದಾರಿ ತಪ್ಪಿಸಿದ್ದಾರೆ ಎಂದು ಅರ್ಥವಾಗಿತ್ತು.
“ಸ್ವಾಮಿ ನೀವೆ ಕೇಳಿದಿರಿ, ಪೋಲಿಸರು ಕೊಲೆಮಾಡಲು ಉಪಯೋಗಿಸಿದೆ ಎನ್ನುವ ಈ ಕಲ್ಲು ಆಳಕ್ಕೆ ನೆಲದಲ್ಲಿ ಹುದುಗಿತ್ತು, ಅದನ್ನು ಕೂಲಿಮಾಡುವ ಮೂರ್ತಿ ಕಷ್ಟಬಿದ್ದು, ಗುದ್ದಲಿ ಉಪಯೋಗಿಸಿ ಕಿತ್ತಿದ್ದಾನೆ, ಹಾಗಿರುವಾಗ ಅರೋಪಿ ವೆಂಕಟೇಶಯ್ಯನವರು ಆ ಕಲ್ಲನ್ನು ನೆಲದಿಂದ ಕಿತ್ತು ಅನಂತರಾಮಯ್ಯನ ತಲೆಗೆ ಹೊಡೆದರೆಂದು, ಮತ್ತೆ ಅದೇ ಕಲ್ಲನ್ನು ಹಿಂದಿನಂತೆ ನೆಲದಲ್ಲಿ ಹೂತು ಹೊದರೆಂದು ಹೇಳಿದರೆ ಹೇಗೆ ನಂಬಲು ಸಾದ್ಯ, ಅವರೇನು ಅಂತಹ ವಿಚಿತ್ರ ಶಕ್ತಿ ಹೊಂದಿರುವರು ಎಂದು ನಂಬಬೇಕೆ?.

ಪೋಲಿಸರು ಸ್ಥಳ ಪಂಚನಾಮೆ ನಡೆಸಿರುವುದು, ಕಲ್ಲಿನಿಂದಲೆ ಹೊಡೆದು ಸಾಯಿಸಿದ ಎನ್ನುವ ಸಾಕ್ಷಿಯನ್ನು ತಂದಿರುವುದು ಎಲ್ಲವು ಕಪೋಲ ಕಲ್ಪಿತ. ನಾನು ಕರೆತಂದಿರುವ ಸಾಕ್ಷಿ, ಪೋಲಿಸರ ಸಹಾಯಕನೇ. ನಿಮಗೆ ಮತ್ತೂ ಬೇಕಿದ್ದರೆ ಇವರದೇ  ಸ್ಟೇಷನಿನ್ನ ಹೆಡ್ ಕಾನ್ಸ್ ಟೇಬಲ್ ಮರಿಯಪ್ಪನವರನ್ನು ಸಹ ಕರಿಸಿಕೇಳಬಹುದು” ಎಂದ ನರಸಿಂಹ
ಇನ್ಸ್‍ಪೆಕ್ಟರ್ ಅಶೋಕ್ ಸಿಡಿಮಿಡಿ ಮಾಡುತ್ತ, ಅಸಹನೆಯಿಂದ ನಿಂತಿದ್ದರು,
ನ್ಯಾಯದೀಶರು, ಸರ್ಕಾರಿ ವಕೀಲರನ್ನು ಕುರಿತು
“ಏನ್ರಿ ನೀವು ಏನಾದರು ಪಾಟಿಸವಾಲು ಮಾಡುವದಿದೆಯಾ , ಇವರನ್ನು “ ಎಂದರು
ಸರ್ಕಾರಿ ವಕೀಲ ಕೋಪದಿಂದ ಪೋಲಿಸ್ ಅಧಿಕಾರಿಯ ಮುಖ ನೋಡಿದ, ಅವನಿಗೆ ಅರ್ಥವಾಗಿತ್ತು,
“ಇಲ್ಲ ಸ್ವಾಮಿ ಯಾವುದೇ ಪ್ರಶ್ನೆ ಇಲ್ಲ “ ಎಂದ
ನರಸಿಂಹ  ಮೂರ್ತಿಗೆ ಹೇಳಿದ
“ಸರಿ ಮೂರ್ತಿ ನೀನು ಬಂದು ಇಲ್ಲಿ ವಿಷಯ ತಿಳಿಸಿದ್ದು ಪೋಲಿಸರಿಗೆ ತುಂಬಾ ಸಹಾಯವಾಯಿತು, ನೀನು ಹೋಗಬಹುದು” ಎಂದ
ಮೂರ್ತಿ ಸಂತಸದಿಂದ ನ್ಯಾಯದೀಶರಿಗೂ, ನರಸಿಂಹನಿಗೂ ವಂದಿಸಿ ಸಾಕ್ಷಿ ಕಟ್ಟೆ ಯಿಂದ ಕೆಳಗಿಳಿದ


ಮುಂದಿನ ಬಾಗದಲ್ಲಿ… ಮುಕ್ತಾಯ….

2 comments:

  1. ಕಲ್ಲು ಹೇಳಿದ ಕಥೆ!
    (ಸಾರ್ ಹೀಗೆ ನ್ಯಾಯಾಲಯದ ವ್ಯವಹಾರಗಳು ಇಷ್ಟು ಸೂಕ್ಷ್ಮವಾಗಿ ಅದ ಹೇಗೆ ತಿಳಿದುಕೊಂಡಿರಿ?)

    ReplyDelete
  2. ಸೀರಿಯಲ್ ಹಾಗು ಪುಸ್ತಕದ ಜ್ಞಾನ ಅಷ್ಟೇ ಸಾರ್ ! ಅನುಭವದ ಜ್ಞಾನವಾಗಿದಿದ್ದರೆ ಮತ್ತಸ್ಟು ಸಜಜವಾಗಿ ಬರೆಯಬಹುದಿತ್ತು !

    ReplyDelete

enter your comments please