Saturday, August 16, 2014

ಚಾಯ್ ಮಾರುವರು ಪ್ರಧಾನಿಯಾದರೆ ................

'ಚಾಯ್ ಮಾರುವರು ಪ್ರಧಾನಿಯಾದರೆ ................ . '
ಸಂಜೆ ಆಫೀಸಿನಿಂದ ಬಂದ ಐದು ನಿಮಿಶಕ್ಕೆ ಗೆಳೆಯರೊಬ್ಬರಿಂದ ಕರೆ, ವಾಕಿಂಗ್ ಬರುತ್ತೀರ ಅಂತ, ಅದೇನೊ ಸಂಜೆ ವಾಕಿಂಗ್ ಅಷ್ಟು ಉತ್ಸಾಹವಿರಲ್ಲ ಆದರೂ ಅವರನ್ನು ಬೇಟಿ ಮಾಡಿ ತುಂಬಾ ಕಾಲವಾಗಿತ್ತು. ಹಾಗಾಗಿ ಮನೆಯಿಂದ ಹೊರಟು ಅವರ ಮನೆ ತಲುಪಿ ಅಲ್ಲಿಂದ ನಡೆಯುತ್ತ, ಹತ್ತಿರದಲ್ಲಿ ಇರುವ ನಂಜುಂಡೇಶ್ವರ ಸ್ಟೋರ್ ಹತ್ತಿರದ ಪಾರ್ಕ್ ತಲುಪಿ, ಒಂದರ್ದ ಗಂಟೆ ವಾಕಿಂಗ್ ಮಾತು ಎಲ್ಲ ಮುಗಿಸಿ ನಿಧಾನಕ್ಕೆ ಮನೆ ಕಡೆ ಹೊರಟೆವು. ದಾರಿಯಲ್ಲಿ ಟೆಲಿಫೋನ್ ಎಕ್ಚ್ ಚೇಂಜ್ ಎದುರಿನ ಪೆಟ್ರೋಲ್ ಬಂಕಿನಲ್ಲಿ ನಿಂತ ಸಾಲು ಸಾಲು ವಾಹನಗಳು, ಕಿಕ್ಕಿರದ ಜನ. ಅದೇಕೆ ಇಷ್ಟು ರಶ್ ನಾಳೆಯಿಂದ ಏನಾದರು ಪೆಟ್ರೋಲ್ ಬಂಕ್ ಸ್ಟ್ರೈಕ್ ಇದ್ದೀತಾ ಎಂದು ಆಶ್ಚರ್ಯವಾಯಿತು. ಒಂದಿಬ್ಬರನು ಕೇಳಿದರೆ ಸರಿಯಾದ ಉತ್ತರ ಸಿಗಲಿಲ್ಲ. ನಮ್ಮ ಪುಣ್ಯಕ್ಕೆ ಒಂದು ಪಂಪ್ ಬಳಿ ಅಲ್ಲಿಯ ಓನರ್ ನಿಂತಿದ್ದ, ನನ್ನ ಸ್ನೇಹಿತರಿಗೆ ಪರಿಚಯ ಎಂದು ಕಾಣುತ್ತೆ,
'ಇದೇನು ಸಾರ್, ಇಷ್ಟೊಂದು ರಶ್, ಇಷ್ಟೊಂದು ವೆಹಿಕಲ್ಸ್ , ಏಕೆ ? " ಕುತೂಹಲದಿಂದ ಕೇಳಿದರು, ಅವನು ಬನ್ನಿ ಎನ್ನುತ್ತ ಅಲ್ಲಿಂದ ಹೊರಗೆ ಕರೆದುಕೊಂಡು ಬಂದ.
'ಗೊತ್ತಿದೆಯಲ್ಲ ಸಾರ್, ಇಂದಿನಿಂದ ಪೆಟ್ರೋಲ್ ಬೆಲೆಯಲ್ಲಿ ಎರಡು ರೂಪಾಯಿನಷ್ಟು ಕಡಿಮೆ ಆಯ್ತಲ್ಲ ಅದರ ಪರಿಣಾಮ'
ನಮಗೆ ಇನ್ನೂ ಅರ್ಥವಾಗಲಿಲ್ಲ,
'ಅಲ್ಲ ಬೆಲೆ ಕಡಿಮೆ ಆದರೆ, ಇವತ್ತೊಂದು ದಿನ ಮಾತ್ರವಲ್ಲವಲ್ಲ, ನಾಳೆಯಿಂದ ಅದೇ ಬೆಲೆ ಇರುತ್ತೇ, ಆದರೆ ಅದಕ್ಕೆ ಈವತ್ತು ಇಷ್ಟೊಂದು ರಶ್ ಏಕೆ ? "
'ಅದು ಹಾಗಲ್ಲ ಸಾರ್, ಸರ್ಕಾರ ನಡೆಸಕ್ಕೆ ಬರದವರೆಲ್ಲ, ಲೀಡರ್ ಆದ್ರೆ ಹಾಗೆ ಆಗೋದು, 'ಚಾಯ್ ಮಾರೋರು ಚಾಯ್ ಮಾರಿಕೊಂಡಿರಬೇಕು' ಅದು ಬಿಟ್ಟು ಪ್ರಧಾನಿ ಆದರೆ, ಹೀಗೆ ಆಗೋದು' ಎಂದೆಲ್ಲ ತನ್ನ ದುಃಖ ತೋಡಿಕೊಂಡ.
ಚಾಯ್ ಮಾರುವ ಮೋದಿಯವರು ಪ್ರಧಾನಿಯಾಗುವದಕ್ಕೂ, ಇಲ್ಲಿ ಇಷ್ಟು ರಶ್ ಆಗುವದಕ್ಕೂ, ಇಷ್ಟು ವ್ಯಾಪಾರವಾಗುತ್ತಿದ್ದರು ಸಹ ಓನರು ದುಃಖವಾಗಿರುವದಕ್ಕೂ ಕಾರಣ ಮಾತ್ರ ತಿಳಿಯಲಿಲ್ಲ, ನಮ್ಮ ಪೆದ್ದುತನ ಮತ್ತೆ ಪ್ರದರ್ಶಿಸಿದೆವು.
ಅವನ ಬಿಡಿಸಿಹೇಳಿದ
'ಅಲ್ಲ ಸರ್ ಮೊದಲೆಲ್ಲ, ದರ ಬದಲಾವಣೇ ಆಗುವದಿದ್ದರೆ, ಹಿಂದಿನ ರಾತ್ರಿ ಪ್ರಕಟಣೆ ಕೊಡುತ್ತಿದ್ದರೂ, ಈ ಬಾರಿ ಒಂದು ವಾರ ಮೊದಲೆ ಹೇಳಿಬಿಟ್ಟಿದ್ದಾರೆ. ದರ ಕಡಿಮೆ ಆಗುತ್ತೆ ಎಂದು, ಎಲ್ಲ ಪೆಟ್ರೋಲ್ ಬಂಕ್ ನವರು ಸಹ ಪೆಟ್ರೋಲ್ ಗೆ ಆರ್ಡರ್ ಕೊಡುವದನ್ನು ನಿಲ್ಲಿಸಿಬಿಟ್ಟರು, ಇಂದು ಕೊಂಡು ನಾಳೆ ಮಾರಿದರೆ ನಷ್ಟ್ ಅಂತ ಗೊತ್ತಿರುವಾಗ ಯಾರು ತಾನೆ ಕೊಳ್ಳುತ್ತಾರೆ , ಹಾಗಾಗಿ ಬೇರೆ ಕಡೆ ಪೆಟ್ರೋಲ್ ಇಲ್ಲ ಎಂದು ಎಲ್ಲರೂ ಇಲ್ಲಿ ನುಗ್ಗುತ್ತಿದ್ದಾರೆ, ಹಾಗಾಗಿ ಸಿಕ್ಕಪಟ್ಟೆ ರಶ್ ಆಗಿದೆ
ನಾನು ನೋಡಿ, ಒಟ್ಟು 77 ಸಾವಿರ ರುಪಾಯಿ ನಷ್ಟ ಸಾರ್, ಯಾರು ಕಟ್ಟಿ ಕೊಡುತ್ತಾರೆ ಹೇಳಿ, ಅದಕ್ಕೆ ಹೇಳಿದ್ದು ಚಾಯ್ ಮಾರುವರು ಮಾರಿಕೊಂಡಿರಬೇಕು" ಅಂತ ಹರಿಹಾಯ್ದರು
ಅದು ಸರಿ ಎಲ್ಲರೂ ಪೆಟ್ರೋಲ್ ತರಿಸುವದನ್ನು ಎರಡು ದಿನ ಮೊದಲೆ ನಿಲ್ಲಿಸಿದಾಗ, ಇವರೊಬ್ಬರು ಏಕೆ ತರಿಸಿದರು ಎಂದು ಅರ್ಥವಾಗದೇ ಕೇಳಿದರೆ, ಅದಕ್ಕೆ ತಕ್ಕ ಉತ್ತರ ಸಿಗಲಿಲ್ಲ. ಅಲ್ಲದೆ ಅದನ್ನು ಈ ದಿನ ಮಾರುವ ಬದಲು ಪೆಟ್ರೋಲ್ ಇಲ್ಲ ಎಂದು ಭೋರ್ಡ್ ಇಟ್ಟು, ನಾಳೆ ಮಾರಬಹುದಲ್ಲ ಎನ್ನುವ ನನ್ನ ಪೆದ್ದು ಪೆದ್ದು ಮಾತಿಗೆ ಆತ
' ಸರ್ ಇವತ್ತು ಮಾರಿದರು ನಷ್ಟವೇ , ನಾಳೆ ಮಾರಿದರು ನಷ್ಟವೇ ಅಲ್ಲವೆ ಅದನ್ನು ಯಾರು ತುಂಬಿಕೊಡುತ್ತಾರೆ ? ಹೇಳಿ '
ಎಂದರು
ಅದು ಸರಿಯೇ. ಆತ ಇನ್ನೂ ಹೇಳುತ್ತಿರುವಂತೆ ನಾವು ಅಲ್ಲಿಂದ ಹೊರಟೆವು.
ಸರ್ಕಾರದ ಕೆಲವು ಪ್ರಕಟಣೆಗಳು ಸಾರ್ವಜನಕರಿಗೆ ಇಷ್ಟೆಲ್ಲ ತೊಂದರೆ ಕೊಡುತ್ತದೆ ಎಂದು ಅರಿವಾಗಿದ್ದು ಆಗಲೇ, ವ್ಯಾಪಾರಿಗಳು ಪ್ರತಿ ಘಟನೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ.
ನಮ್ಮ ಕೈಲಿ ತನಗೆ ಆದ ನಷ್ಟಕ್ಕೆ ಮೋದಿಯವರನ್ನು ಹೊಣೆಮಾಡುವ ಆತ, ಮುಂದಿನ ತಿಂಗಳು ಪೆಟ್ರೋಲ್ ಬೆಲೆ ಜಾಸ್ತಿಯಾದಗ, ಹಳೆ ಪೆಟ್ರೋಲೆಗೆ ಹೊಸ ಬೆಲೆಯಲ್ಲಿ ಮಾರಿದಾಗ ಆಗುವ ಲಾಬವನ್ನು ಯಾರ ಕೈಲು ಹೇಳಿ ಕೊಳ್ಳುವದಿಲ್ಲ ಎಂದು ಗೊತ್ತಿರುವುದೇ.
ತಮಾಷಿ ಅನ್ನಿಸಿದ್ದು ಮಾತ್ರ ಆತ ತನ್ನ ಪೆದ್ದು ತನದ ವ್ಯಾಪಾರ ನಿರ್ಣಯಕ್ಕಾಗಿ ನಷ್ಟವಾಗುತ್ತಿರುವಾಗ, ತನ್ನ ಪೆದ್ದುತನವನ್ನು ಎಲ್ಲರಕೈಲಿ ಹೇಳಿಕೊಳ್ಳುತ್ತ, ಮತ್ತಷ್ಟು ಪೆದ್ದ ನಾಗುವುದು, ಎಲ್ಲಿಯೋ ಇರುವ ಮೋದಿಯವರನ್ನು ಅದಕ್ಕೆ ಹೊಣೆ ಮಾಡಿ ತನ್ನ ಸಂಕಟ ಕಡಿಮೆಮಾಡಿಕೊಳ್ಳುತ್ತಿರುವುದು ನಗು ತರಿಸಿತು.

1 comment:

  1. ಹ್ಹಹ್ಹಹ್ಹ...
    ಆತನ ಪೆದ್ದುತನದ ವ್ಯಾಪಾರ ನಿರ್ಣಯಕ್ಕಾಗಿ ನಷ್ಟ ಅನುಭವಿಸಿದ್ದು ಆತನೇ. ಆದರೂ ಒಂದು ವಾರದ ಮುಂಚೆಯೇ ಪಟಾಕಿ ಸಿಡಿಸಿ ಆಮೇಲೆ ಕಡಿಮೆ ಮಾಡದಿರುವುದು ಏಕೋಪ್ಪಾ!?

    ReplyDelete

enter your comments please