Monday, July 18, 2016

ಅನಂತ ಎಂಬ....

ಅನಂತ ಎಂಬ....

4.857145

ಅತ್ತಿಗೆ ಕೋಡುಬಳೆ ಮಾಡ್ತಿದ್ದೀರಾ?
ಅಡುಗೆ ಮನೆ ಹಿಂಬಾಗದ ಕಿಟಕಿಯಿಂದ ಬಂದ ದ್ವನಿಗೆ ನಮ್ಮ ಅಮ್ಮ ಬೆಚ್ಚಿ ಬಿದ್ದರು, ಮನೆಯ ಹಿಂಬಾಗ ಇಳಿಜಾರು ಹಳ್ಳ, ನೆಲದಿಂದ ಎಂಟು ಒಂಬತ್ತು ಅಡಿ ಮೇಲಿದ್ದ ಆ ಕಿಟಕಿಯಲ್ಲಿ ಯಾರು ಮುಖ ಕಾಣುವುದು ಅಸಂಭವವವೆ. ಆದರೆ ಅನಂತ ಅ ಕಿಟಕಿಯಲ್ಲಿ ಎರಡು ಕೈಯಲ್ಲಿ ಕಂಬಿ ಹಿಡಿದು ದೇಹವನ್ನು ಬಿಲ್ಲಾಗಿಸಿ ನಿಂತಿದ್ದ. 
"ಅಲ್ಲಿ ಏಕೊ ಹತ್ತಿದೆ, ಬಿದ್ದರೇನು ಗತಿ, ಮುಂದಿನ ಬಾಗಿಲಲ್ಲಿ ಬರೋದಲ್ವ ?" ಎಂದರು ಅಮ್ಮ ಗಾಭರಿಯಿಂದ
"ಮುಂದಿನ ಬಾಗಿಲಲ್ಲಿ ಬಂದರೆ ಕಿಟ್ಟಣ್ಣ ಬೈತಾನೆ, ಕೋಡುಬಳೆ ಕರಿತಿರೊ ವಾಸನೆ ಬಂತು ಅದಕ್ಕೆ ಕಿಟಕಿ ಹತ್ತಿ ಬಿಟ್ಟೆ" ಎಂದ ಅನಂತ.
***************************************************************************

ಅನಂತ ನನಗಿಂತ ಒಂದೆರಡು ವರುಷ ವಯಸಿನಲ್ಲಿ ದೊಡ್ಡವನೇನೊ, ಆದರೆ ದೇಹದಲ್ಲಿ ನನಗಿಂತ ಐದು ಆರು ವರ್ಷಕ್ಕೆ ದೊಡ್ಡವನಾಗಿ ಕಾಣುತ್ತಿದ್ದ.ನಮ್ಮ ತಂದೆಯ ಊರು ದೊಡ್ಡನಾರುವಂಗಲ, ತುಮಕೂರಿನ ಹತ್ತಿರ, ಹೋದಾಗಲೆಲ್ಲ ಅವನೆ ನಮ್ಮ ಹೀರೊ. ಹೀಗೆ ದೀಪಾವಳಿ ಸಮಯದಲ್ಲಿ ಒಮ್ಮೆ ನಮ್ಮ ಹಳ್ಳಿಗೆ ಹೋಗಿದ್ದೆವು. ನಮ್ಮ ಅಜ್ಜಿಗೆ ಅಂದರೆ ನಮ್ಮ ತಂದೆಯ ತಾಯಿಗೆ ಎಂತದೊ ಹುಶಾರಿಲ್ಲ ಎಂದು. ನಾವಂತು ನಮ್ಮ ಪಟಾಕಿ ಸಂಭ್ರಮದಲ್ಲಿದ್ದೆವು, ನನಗಾಗ 5-6 ನೆ ವಯಸ್ಸು. ಅನಂತ ನನ್ನನ್ನು ಪಕ್ಕಕ್ಕೆ ಕರೆದೋಯ್ದ. 
"ಪಾರ್ಥ ನಿಮ್ಮ ಅಜ್ಜಿಯನ್ನ ಸುಡುತ್ತಾರಲ್ಲ , ಆ ಜಾಗ ತೋರಿಸ್ತೀನಿ ಬರ್ತೀಯ?" ಎಂದ. 
ನನಗೆ ಗಾಭರಿಯಾಗಿ ಹೋಯ್ತು, ಅಜ್ಜಿಯನ್ನೇಕೆ ಸುಡುತ್ತಾರೆ. ಅವರೇನು ಪಟಾಕಿಯ?. ಅವನ ಮಾತು ಅರ್ಥವಾಗದೆ ಕೇಳಿದೆ
"ಅಜ್ಜಿಯನ್ನೇಕೆ ಸುಡುತ್ತಾರೆ" 
"ನಿಮ್ಮಜ್ಜಿ ಸತ್ತು ಹೋದರಲ್ಲ, ಅವರನ್ನು ಸುಡಕ್ಕೆ ಸೌದೆ ಎಲ್ಲ ಹಾಕಿದ್ದಾರೆ, ನಾನು ನೋಡಿ ಬಂದೆ ನೀನು ಬಂದರೆ ತೋರಿಸ್ತಿನಿ" ಎಂದ. ನನಗೆ ಸ್ವಲ್ಪ ಅರ್ಥವಾಯಿತು, ನಡುವಿನಲ್ಲಿ ಎಲ್ಲರು ಮಲಗಿರುವ ಅಜ್ಜಿಯ ಸುತ್ತ ಮೌನವಾಗಿ ಕುಳಿತಿದ್ದರು. ಮತ್ತೆ ಒಳಗೆ ಹೋಗಿ ನೋಡಿದೆ. ಅಮ್ಮ ಅಳುತ್ತಿದ್ದರು. ಆದರು ಅಜ್ಜಿಯನ್ನು ಸುಡುವುದು ಏಕೆ? ಎಲ್ಲರ ಮುಖವು ಗಂಭೀರ, ಯಾರನ್ನು ಕೇಳುವಂತಿಲ್ಲ.
 ಅಜ್ಜಿಯನ್ನು ಹೊತ್ತೋಯ್ದ ಸ್ವಲ್ಪ ಹೊತ್ತಿಗೆ ಅವರು ಹೋದ ವಿರುದ್ದ ದಿಕ್ಕಿನಿಂದ ಹುಣಸೆ ಮರದ ಕೆಳಗಿನಿಂದ ಕೆರೆಯ ಮತ್ತೊಂದು ಮಗ್ಗುಲಿಗೆ ನನ್ನನ್ನು ಕರೆದೋಯ್ದ ಅನಂತ, ಅವನು ಹೇಳಿದ್ದು ನಿಜ, ಅಜ್ಜಿಯನ್ನು ಸುಡುತ್ತಿದ್ದಾರೆ, ಬೆಂಕಿ ದೂರಕ್ಕು ಕಾಣಿಸುತ್ತಿದೆ, ಆದರೆ ನಮ್ಮ ತಂದೆಗಾಗಲಿ ಯಾರಿಗೆ ಆಗಲಿ ದೂರದಲ್ಲಿದ್ದ ನಾವು ಕಾಣಲಿಲ್ಲ.

************************************************************************************

ನನಗಿಂತ ದೊಡ್ಡವನಾದ ಅನಂತ ಎಸ್.ಎಸ್.ಎಲ್.ಸಿ ಮುಗಿಸುವ ಮುಂಚೆಯೆ ನಾನು ಪಿ.ಯು.ಸಿಗೆ ಬಂದಿದ್ದೆ, ತಾನು ಫೇಲಾಗಿ ಫೇಲಾಗಿ ಬರುತ್ತಿರುವುದು ಅವನಿಗೇನೊ ಅಂತ ಬೇಸರ ಕಾಣಲಿಲ್ಲ. ಆ ದಿನ ಅವನು ಕಟ್ಟಿದ ಟಿ.ಸಿ.ಹೆಚ್ ಪರೀಕ್ಷೆಯ ರಿಸಲ್ಟ್. ಏಕೊ ತುಮಕೂರಿನಿಂದ ಹಳ್ಳಿಗೆ ಹೋಗಿದ್ದೆ. ಅವನು ಸಿಕ್ಕಾಗ ಕೇಳಿದೆ " ಏನಾಯ್ತೋ" ಅಂತ.
"ಎಲ್ಲ ಹೋಗಿದೆಯೊ , ಒಂದು ವಿಷಯ ಮಾತ್ರ ಪಾಸಾಗಿದ್ದೇನಿ " ಅಂದ ಸಪ್ಪಗೆ, ಸುಮ್ಮನೆ ಕುತೂಹಲ 
"ಯಾವುದರಲ್ಲಿ ಪಾಸಾಗಿದ್ದಿ?" ಎಂದು ಕೇಳಿದೆ.
"ಡ್ರೀಲ್ ನಲ್ಲಿ " ಅವನು ಸಾಕಷ್ಟು ಗಂಭೀರನಾಗಿಯೆ ಇದ್ದ, ನನಗೆ ಮಾತ್ರ ನಗು

***************************************************************************************
 ಸುಮಾರು ಇಪ್ಪತೆಂಟು ಮುವತ್ತು ವರ್ಷವಾದರು ಅವನ ಲೋಕ ಜ್ಞಾನ ಅಷ್ಟೇನೆ . ಬಹುಶಃ ಹಳ್ಳಿಯಲ್ಲಿ ಬೆಳೆದ ಪರಿಣಾಮವೇನೊ. ಅವನ ವಯಸ್ಸಾದ ತಾಯಿ ಅವನನ್ನು ಯಾವುದಕ್ಕು ಕಳಿಸುತ್ತಿರಲಿಲ್ಲ. ಅವರು ಅವನನ್ನು ಹೆಸರು ಹಿಡಿದು ಕರೆಯುತ್ತಿದ್ದುದ್ದು ಕಡಿಮೆಯೆ.ಯಾವಾಗಲು "ಮುಂ....ಮಗ" ಎಂದೆ ಕರೆಯುತ್ತಿದ್ದರು. ಅಷ್ಟು ವರ್ಷವಾದರು ಅವನು , ಅಲ್ಲಿಂದ ಎಂಟು ಕಿ.ಮೀ. ದೂರದಲ್ಲಿ ರುವ ತುಮಕೂರಿಗೆ ಒಬ್ಬನೆ ಹೋಗುತ್ತಿರಲಿಲ್ಲ, ಅವರ ಅಮ್ಮ ಬಿಡುತ್ತಿರಲಿಲ್ಲ "ಅಯ್ಯೊ ಮು...ನಿನಗೆ ಗೊತ್ತಾಗಲ್ಲ ದಾರಿ ತಪ್ಪಿಸುಕೊಂಡು ಬಿಡುತ್ತಿಯ"  ಅನ್ನುತ್ತಿದ್ದರು.  

 ಇಂತ ಅನಂತ ಹೇಗೆ ನೋಡಿದನೊ ತಿಳಿಯದು, ಅವರ ಅಕ್ಕನ ಮನೆಗೆ ಮೈಸೂರಿಗೆ ಹೋಗಿ ಅವರ ಭಾವನ ಜೋತೆ ಒಂದು ಸಿನಿಮಾ ನೋಡಿದ್ದ "ಬಯಲು ದಾರಿ"! 

ನಾವು ಶನಿವಾರ ಬಾನುವಾರ ರಜಾಕ್ಕೆ ಊರಿಗೆ ಹೋದಾಗ ಅವನಿಗೆ ಅದೆ ಮಾತು. ಗದ್ದೆ ಬಯಲಿನಲ್ಲಿ ಕಾಲುವೆ ಯಲ್ಲಿ ಹರಿವ ನೀರಿನಲ್ಲಿ ನಿಂತು,ಸಿನಿಮಾದಲ್ಲಿ ಅನಂತನಾಗ್ ಅಭಿನಯವನ್ನೆ ತೋರಿಸುತ್ತ " ಈ ತಾಯಿ ಕಾವೇರಿಯಾಣೆ... " ಎನ್ನುತ್ತ ಕಾಲುವೆಯ ನೀರನ್ನೆ ಕಾವೇರಿ ಎಂದು ಭ್ರಮಿಸಿ  ಬೊಗಸೆಯಲ್ಲಿ ನೀರನ್ನು ಹಿಡಿದು ಅನಂತ್ ನಾಗ್ ಶೈಲಿಯಲ್ಲಿ ನೀರನ್ನು ಬಿಡುತ್ತಿದ್ದ. 

ಯಾರು ಇಲ್ಲದಾಗ ನನ್ನನ್ನು ಪಕ್ಕಕ್ಕೆ ಕರೆದೋಯ್ದ, ಮುಖದಲ್ಲಿ ಸಂಕೋಚ, "ಪಾರ್ಥ ಸಿನಿಮಾ ಬಗ್ಗೆ ನಿನಗೆಲ್ಲ ಗೊತ್ತ" ಎಂದ 
"ಯಾಕೊ" ಅಂತ ಕೇಳಿದೆ.
"ಅಲ್ಲ ಸಿನಿಮಾದಲ್ಲಿ ಅನಂತ್ ನಾಗ್ ಕಲ್ಪನ ಕೈ ಹಿಡಿಯುವುದು, ಅಪ್ಪುವುದು ಎಲ್ಲ ಮಾಡ್ತಾರಲ್ಲ , ಇದ ನಿಜಾವಾಗಿ ಮಾಡ್ತಾರೊ ಇಲ್ಲ ಕ್ಯಾಮರದಲ್ಲಿ "ಟ್ರಿಕ್ಸ್" ಮಾಡಿ ತೋರುಸ್ತಾರೊ?" 
ನಾನೀಗ ಬೆಪ್ಪಾದೆ, ನಾನು ಪೇಟೆಯವನಾದ ಕಾರಣಕ್ಕೆ ನನ್ನ ಜ್ಞಾನ ಅವನದಕ್ಕಿಂತ ದೊಡ್ಡದಿತ್ತು, ಅಥವ ನಾನು ಹಾಗೆ ತಿಳಿದಿದ್ದೆ, ಅವನಿಗೆ ಸಿನಿಮ ಬಗ್ಗೆ ನನಗೆ ತಿಳಿದಿದ್ದನ್ನು ಬಿಡಿಸಿ ಹೇಳಿದೆ.
************************************************************************************

 ಒಮ್ಮೆ ರಜಾದಲ್ಲಿ ನಮ್ಮ ಗುಂಪೆಲ್ಲ ಸೇರಿತ್ತು, ಅನಂತ ಬಟ್ಟೆ ಒಗೆಯುವದಕ್ಕೆ ಗದ್ದೆಬಯಲಿನ ಪಂಪ್ ಸೆಟ್ಟಿನ ಹತ್ತಿರ ಹೊರಟಿದ್ದ, ಕೈಯಲ್ಲಿ ಬಟ್ಟೆಯ ಗಂಟು, ದಾರಿಯಲ್ಲಿ ಹಳ್ಳಿಯ ಶೇಷಪ್ಪನ ಅಂಗಡಿಯಲ್ಲಿ ಹತ್ತು ಪೈಸೆ ನೀಲಿ ಪಡೆದ. ಅವರು ಒಂದು ಚಮಚದಷ್ಟು ನೀಲಿಯನ್ನು ಪೇಪರಿನಲ್ಲಿ ಸಣ್ಣ ಪಟ್ಟಣ ಕಟ್ಟಿ ಕೊಟ್ಟರು. ಅವನು ಬಟ್ಟೆ ಒಗೆಯುತ್ತ ಕುಳಿತಿದ್ದಾಗ , ಗುಂಪಿನಲ್ಲಿದ್ದ ನಾಗಭೂಷಣ ಎಂಬುವನು ಹೇಗೊ ಅ ನೀಲಿಯ ಪೊಟ್ಟಣ ಎಗರಿಸಿ, ಅದರಲ್ಲಿ ನೀಲಿಯನ್ನು ಹೊರತೆಗೆದು, ಅದರಲ್ಲಿ ಸ್ವಲ್ಪ ಮರದ ಹೊಟ್ಟಿನ ಪುಡಿಯನ್ನು ಹಾಕಿ, ನಂತರ ಮೊದಲಿನ ಹಾಗೆ ಪಟ್ಟಣ ಕಟ್ಟಿ ಅಲ್ಲಿಯೆ ಇಟ್ಟ.
 ಬಟ್ಟೆ ಒಗೆದು ಮುಗಿಸಿ, ನೀರಿಗೆ ನೀಲಿಯನ್ನು ಹಾಕಲು ಪಟ್ಟಣ ಬಿಡಿಸಿದ ಅನಂತ ನೋಡುತ್ತಾನೆ , ಪೊಟ್ಟಣದಲ್ಲಿ ನೀಲಿ ಬದಲು ಮರದಪುಡಿ
"ನೋಡು ಪಾರ್ಥ ಶೇಷಪ್ಪ ಮಾಡಿರುವ ಮೋಸ, ನೀಲಿ ಬದಲು ಮರದ ಪುಡಿ ಕೊಟ್ಟಿದ್ದಾನೆ, ಈಗಲೆ ಹೋಗಿ ಗ್ರಾಚಾರ ಬಿಡಿಸ್ತೀನಿ" ಎಂದವನೆ ದಡ ದಡ ಹೊರಟ, ನನಗೆ ನಗುವಿನ ಜೊತೆ ಇದೇನು ಆಯ್ತಲ್ಲ, ಈ ನಡು ಬಿಸಿಲಲ್ಲಿ ಇವನು ಹೊರಟನಲ್ಲ ಅಂತ ನಾಗಭೂಷಣನಿಗೆ ಕೂಗಿ ಹೇಳಿದೆ 
"ಅನಂತ ಶೇಷಪ್ಪನ ಅಂಗಡಿಗೆ ಜಗಳಕ್ಕೆ ಹೋಗ್ತಿದ್ದಾನೆ" ಎಂದು.
ಈಗ ನಾಗಭೂಷಣನು ಹೆದರಿದ, ಅನಂತ ಹಿಂದೆ ಒಂದೆ ಓಟ, ಅವನನ್ನು ಸಮದಾನಪಡಿಸಿ, ವಿಷಯ ತಿಳಿಸಿ ಕರೆತರುವದರಲ್ಲಿ ಅವನು ಸುಸ್ತು.

*************************************************************************************

ನಂತರ ಓದು ಕೆಲಸ ವರ್ಗಾವಣೆ ಎನ್ನುತ್ತ ಊರಿನ ಕೊಂಡಿಯೆ ಕಳಚಿ ಹೋಯ್ತು. ಸುಮಾರು ಮೂವತ್ತು ವರುಷಗಳು ಕಳೆದೆ ಹೋಯ್ತೊ ಏನೊ, ಎರಡು ವರುಷದ ಹಿಂದೆ ಅನಂತ ಬೆಂಗಳೂರಿನಲ್ಲಿ ಸಿಕ್ಕಿದ್ದ. ಆಶ್ಚರ್ಯ ಈಗವನು ಮೊದಲಿನಂತಿಲ್ಲ , ಮುಖದಲ್ಲಿ ಎಂತದೊ ಬದಲಾವಣೆ, ಮದುವೆಯಾಗಿದೆಯಂತೆ ,ಹೆಂಡತಿ ಮಗು. ಹೀಗೆ ಮಂತ್ರಗಳನ್ನು ಕಲಿತು. ಅಲ್ಲಿ ಇಲ್ಲಿ ಪೂಜೆಗೆ ಹೋಗುತ್ತಾನಂತೆ ಅವನೆ ತಿಳಿಸಿದ. ಈಗ "ತಿಥಿ ಮಾಡಿಸಲು ಕಲಿತಿದ್ದೀನಿ" ಎಂದು.ಬೆಂಗಳೂರಿನ ವಿದ್ಯಾರಣ್ಯಪುರದ ಹತ್ತಿರ (ದೊಡ್ಡ ಬೊಮ್ಮಸಂದ್ರ) ಎಲ್ಲಿಯೊ ಇದ್ದಾನೆ ದೇವಸ್ಥಾನದಲ್ಲಿ ಪೂಜೆಮಾಡ್ತಾನೆ, ಸಣ್ಣ ಮನೆ ಕಟ್ಟಿ ಸುಖವಾಗಿದ್ದಾನೆ ಅಂತ, ನನ್ನ ಮನಸಿಗೇಕೊ ತುಂಬಾ ಹಿತ ಅನ್ನಿಸಿತು. ಅಪ್ಪನ ಆಸ್ತಿಯ ಮೇಲೆ ಜಗತ್ತಿಗೆ ದೊಡ್ಡವರಂತೆ ಬೆಳೆಯುವ ಅಂಭಾನಿ ಸಹೋದರರಿಗಿಂತ, ಏನು ಇಲ್ಲದ ನಾವೆಲ್ಲ ತಿಳಿವಳಿಕೆ ಕಡಿಮೆ ಎಂದು ಮಾಡಿದ ಈ ಅನಂತನ ಜೀವನದ ಸಾದನೆಯೆ ನನಗೇಕೊ ದೊಡ್ಡದು ಅನ್ನಿಸಿ ಬಿಡ್ತು. ಯಾರಲ್ಲು ಒಂದು ಪೈಸೆ ಬೇಡದ ಸ್ವಾವಲಂಬಿ ಜೀವನ!

**************************************************************************************

ಹೀಗೆ ಅನಂತನನ್ನು ಗೆಳೆಯನೆಂದು ಕರೆಯಬಹುದೊ ಇಲ್ಲವೊ ತಿಳಿಯದು ,  ಅವನ ಜೀವನದ ಪಾತ್ರ ಹೀಗೆ ಬಿಡಿ ಬಿಡಿ ಘಟನೆಗಳಾಗಿಯೆ ನನ್ನ ಮನದಲ್ಲಿ ಉಳಿಯಿತು.

*************************************************************************************

ನಿನ್ನೆ ಮಂಗಳವಾರ ೨೪/೫/೨೦೧೧ ರಂದು ಬೆಳಗ್ಗೆ ಮನೆಯಲ್ಲಿ ಕಾಫಿ ಕುಡಿಯುತ್ತಿದ್ದೆ, ಬೆಳಗ್ಗೆ ಇನ್ನು ಆರು ಘಂಟೆಯೇನೊ,ಟೆಲಿಫೋನ್ ಶಬ್ದ ಮಾಡಿತು, ಯಾವ ಕರೆ ಬೆಳಗ್ಗೆ ಬೆಳಗ್ಗೆಯೆ ಎನ್ನುತ್ತ ತೆಗೆದರೆ ಊರಿನಿಂದ ಅಣ್ಣನ ಕರೆ 
"ಗೊತ್ತಯಿತ, ನಿನ್ನೆ ಸಂಜೆ ಅನಂತ ಹೋಗಿ ಬಿಟ್ನಂತೆ" ಎಂದ. 
ಯಾವ ಅನಂತ ಇವನು ಹೇಳ್ತೀರೋದು ಅಂತ ಚಿಂತಿಸುವಾಗ ಅವನೆ ಮುಂದುವರಿಸಿದ 

"ಊರಿಂದ ಚಂದ್ರ ಪೋನ್ ಮಾಡಿದ್ದ, ವಿದ್ಯಾರಣ್ಯಪುರದಲ್ಲಿ ಅನಂತ ಅವರ ಮನೆ ಹತ್ತಿರಾನೆ ಆಕ್ಸಿಡೆಂಟ್ ಆಗಿ ಸ್ಥಳದಲ್ಲಿಯೆ ಹೋಗಿಬಿಟ್ನಂತೆ,ಇನ್ನು ದೇಹಮನೆಗೆ ಬಂದಿಲ್ಲ ಪೋಷ್ಟ್ ಮಾರ್ಟಮ್ ಅಗ್ಬೇಕಂತೆ" 

ನಿಧಾನಕ್ಕೆ ವಿಷಯವೆಲ್ಲ ತಿಳಿಯಿತು, ಅನಂತ  ವಿದ್ಯಾರಣ್ಯ ಪುರದ, ಮನೆಯ ಹತ್ತಿರವೆ ಇರುವ ಬಸ್ ಸ್ಟಾಪಿಗೆ ಮನೆಗ ಬಂದ ನೆಂಟರನ್ನು ಕಳಿಸಲು ಹೋದವ, ದಾರಿಯಲ್ಲಿ , ಅರೆಗತ್ತಲಿನಲ್ಲಿ ಯಾರೊ ಅಪರಿಚಿತ ವ್ಯಕ್ತಿ ವೇಗವಾಗಿ   ಮೋಟರ್ ಸೈಕಲ್ ನಲ್ಲಿ ಬಂದು ಅವನಿಗೆ ತಗಲಿಸಿ, ಕೆಳಗೆ ಬಿದ್ದು ಸ್ಥಳದಲ್ಲಿಯೆ ಸಾವಿಗೆ ಒಳಗಾಗಿದ್ದ.

*************************************************************************************

ನಿನ್ನೆಯಿಂದ ಏಕೊ ಅನಂತನೆ ಮನಸಿನಲ್ಲಿ ತುಂಬಿದ್ದಾನೆ, ಹೀಗೆ ಕಳೆಯುತ್ತದೆ, ಬೆಂಗಳೂರಿನ ಒತ್ತಡದ ಜೀವನದಲ್ಲಿ, ಸರ್ಕಾರದ ಏಳೂಬೀಳಿನ ಆಟದಲ್ಲಿ, i.p.l ಎಂಬ ಆಟದಲ್ಲಿ, ಮುಂದಿನ ತಿಂಗಳ ಮಗಳ ಸಿ.ಇ.ಟಿ ಎಂಬ ಮಾಯೆಯಲ್ಲಿ, ಅನಂತನ ನೆನಪೆಲ್ಲ ಕರಗಿ ಹೋಗ ಬಹುದು. ಆದರು ಏಕೊ ಅನಂತನೆಂಬ ವ್ಯಕ್ತಿತ್ವ ನನ್ನ ಮನಸು ತುಂಬಿದೆ,ಅವನು ಇದನ್ನು ಓದಲು ಸಾದ್ಯವಾದರೆ ..........................
(2011 ರಲ್ಲಿ ಸಂಪದದಲ್ಲಿ ಬರೆದಿದ್ದ ವ್ಯಕ್ತಿ ಪರಿಚಯ)

No comments:

Post a Comment

enter your comments please