Sunday, February 2, 2014

ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ

ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ 


ಬನವಾಸಿ : 









ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು.
ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ ಹರಡಿ ನಿಂತ ತಾವರೆ ಹೂಗಳು ಎಲ್ಲವನ್ನು ನೋಡುತ್ತ ಪ್ರಯಾಣ ಮಾಡಿದ್ದೆ ತಿಳಿಯಲಿಲ್ಲ. ಪಂಪ ಬನವಾಸಿಯವನು ಎಂಬ ನೆನಪು ಬಂದಿತು. ಸುತ್ತಲೂ ಹರಡಿನಿಂತಿರುವ ವನಸ ಸೌಂದರ್ಯ.  ಮಳೆಗಾಲ ಕಳೆದು ಎಷ್ಟೋ ದಿನವಾದರು ತುಂಬಿನಿಂತ ಕೆರೆಗಳು, ಕೆರೆಪೂರ್ತಿ ತುಂಬಿರುವ ಕೆಂಪು ವರ್ಣದ ತಾವರೆಯ ಹೂಗಳು. ಅಲ್ಲಲ್ಲಿ ಅಡ್ಡಬರುವ ನೆಲದ ಹಸು ಕರುಗಳು. ಎಲ್ಲವನ್ನೂ ನೋಡುತ್ತ ,
'ಮುಂದಿನ ಜನ್ಮವಿದ್ದಲ್ಲಿ ನನಗೆ ಬನವಾಸಿಯಲ್ಲಿಯೆ ಮರುಹುಟ್ಟು ಕೊಡು ' ಎನ್ನುವ ಪಂಪನ ಮಾತು ನೆನಪಾಯಿತು

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ !

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ!

ಅವನ ಮಾತು ಬರೀ ಕಾವ್ಯಕ್ಕಷ್ಟೆ ನಿಜವಲ್ಲ ! ನಿಜಕ್ಕೂ ಹಾಗೆ ಇದೆ ಅನ್ನಿಸಿತು!


ದೇವಾಲಯದ ಮುಂದೆ ನಿಂತಾಗ , ಅನಾನಸ್ ಹಣ್ಣಿನ ಪೀಸ್, ಮಾರುವವರು ಇವರನ್ನೆಲ್ಲ ಕಂಡಾಗ ದೇವಾಲಯದಿಂದ ಹೊರಬರುವಾಗ ಅನಾನಸ್ ತಿನ್ನುವದೆಂಬ ನಿರ್ಧಾರದಿಂದ ಒಳಹೊಕ್ಕೆವು.

ಗೋಪುರದ ಮೂಲಕ ಒಳಗೆ ಹೋಗುವಾಗಲೆ, ಎದುರಾಗುವ ಎರಡು ಗರುಡಗಂಬ, ಕೆಳಗೆ ಈಶ್ವರನ ವಿಗ್ರಹ ನೋಡುತ್ತಲೆ ಎದುರಿನ ಬಸವನನ್ನು ಹಾದು ದೇವಾಲಯದ ಒಳಹೊಕ್ಕೆವು,
ಅಲ್ಲಿ ಒಬ್ಬ ಪೂಜಾರಿ/ಗೈಡ್ ಕಂಬಗಳ ಮದ್ಯೆ ನಿಂತು ಕೈ ಆಡಿಸುತ್ತ ನೋಡಿ ಇಲ್ಲಿ ಕೈ ಆಡಿದರೆ ಉಲ್ಟಾ ಕಾಣುತ್ತದೆ, ಇಲ್ಲಿ ಒಂದಕ್ಕೆ ಎರಡು ಕಾಣುತ್ತದೆ ಎಂದು ವರ್ಣಿಸುತ್ತಿದ್ದರು.

ಒಳ ಹೋಗಿ ದೇವರ ಮುಂದೆ ನಿಲ್ಲುವಾಗ ಹೆಸರು ಗಮನಿಸಿದೆ,
'ಮಧುಕೇಶ್ವರ',
ತಕ್ಷಣ ಮಯೂರ ಸಿನಿಮಾ ನೆನಪಿಗೆ ಬಂದಿತು, ಆಗ ನನ್ನ ತಲೆಗೆ ಹೊಳೆದಿತ್ತು, ಇದು ಮೈಸೂರು ಪ್ರಾಂತ್ಯದ  ಕದಂಬರ   ಅರಸ ಮಯೂರವರ್ಮ ಆಳಿದ ಬನವಾಸಿ, ಅವನ ಆರಾದ್ಯದೇವರೇ ಈ ಮಧುಕೇಶ್ವರ ಎಂಬುದು.

ಪುರೋಹಿತರು, ನಮ್ಮ ಹೆಸರನ್ನೆಲ್ಲ ಕೇಳಿ ಪೂಜೆ ಮಾಡಿದರು, ಹೊರಬಂದು ಮಂಗಳಾರತಿ ಕೊಟ್ಟು, ನಂತರ
"ಗೈಡ್ ಮಾಡಬೇಕೆ, ದೇವಾಲಯದ ವಿವರವನ್ನೆಲ್ಲ ಹೇಳುವೆ" ಎಂದರು, ನಮಗೂ ಕುತೂಹಲ ಸರಿ ಎಂದೆವು,

ಶಿವನಿಂದಲೆ ಪ್ರಾರಂಭ, ಜೇನುತುಪ್ಪದ ಬಣ್ಣದಲ್ಲಿರುವ ಕಲ್ಲಿನಲ್ಲಿ ಶಿವಲಿಂಗ ಕೆತ್ತಿರುವದರಿಂದ ಅವನಿಗೆ ಮಧುಕೇಶ್ವರ ಎನ್ನುವ ಹೆಸರಂತೆ, ಕದಂಬರು ಆಳಿದ ನಾಡು ಇದು, ಆದಿಕವಿ ಪಂಪ ಇಲ್ಲಿಯೆ ಕುಳಿತು ತನ್ನ ರಚನೆಗಳನ್ನೆಲ್ಲ ಬರೆದ ಎನ್ನುವುದು ಇತಿಹಾಸ. ಎದುರಿಗಿರುವ ಬಸವ ಶಿವನನ್ನು ಪಾರ್ವತಿಯನ್ನು ಸಮಾನನಾಗಿ ನೋಡುತ್ತಿರುವನಂತೆ. ಪಾರ್ವತಿ ಗುಡಿಯ ಎದುರಿಗೆ ನಿಂತು ಕಂಬದ ಸಂದಿಯಲ್ಲಿ ನೋಡುವಾಗಲು ಬಸವನ ಒಂದು ಕಣ್ಣು ಕಾಣಿಸುತ್ತದೆ. ಸುತ್ತಲೂ ಭಾರತ ವಿವಿದ ಪ್ರಾಂತ್ಯಗಳಲ್ಲಿರುವ ಕಾಶಿವಿಶ್ವನಾಥ ಇತ್ಯಾದಿ ದೇವತೆಗಳನ್ನು ಬನವಾಸಿಯ ದೇವಾಲಯದ ಪ್ರಾಂಗಣದಲ್ಲಿ ಸ್ಥಾಪಿಸಲಾಗಿದೆ.

ಇಲ್ಲಿಯ ನರಸಿಂಹ ಅತ್ಯಂತಪುರಾತನಕಾಲದು,  ದ್ವಿಭುಜವನ್ನು ಹೊಂದಿದ್ದು, ಮನುಷ್ಯರೂಪದಲ್ಲಿರುವ ನರಸಿಂಹ ವಿಗ್ರಹ ಇಲ್ಲಿಯದು. ಹಾಗೆ ದೇವಾಲಯದ ರಚನೆ ಕೂಡಿ ವಿಶಿಷ್ಟ. ಎಂತಹ ಭೂಕಂಪನವನ್ನು ಕೂಡ ಸಹಿಸಿ ನಿಲ್ಲಬಲ್ಲ ಕಲ್ಲಿನ ರಚನೆ.
ಕಡೆಯಲ್ಲೊಮ್ಮೆ ಸಾಕ್ಷಿಗಣಪತಿ, ದೇವಾಲಯಕ್ಕೆ ಬರುವ ಭಕ್ತರ ಹೆಸರನ್ನೆಲ್ಲ ಅವನು ಬರೆದುಕೊಳ್ಳುವನಂತೆ. ಬಹುಷಃ ಅವನ ದಾಖಲೆಯಲ್ಲಿ ನನ್ನ ಹೆಸರು ದಾಖಲಾಗಿರಬಹುದು!!

ಕಲ್ಲಿನ ಮಂಚವೊಂದಿದೆ ಆದರೆ ಅದರ ಮೇಲೆ ಮಲಗಲು ಬಿಡುವದಿಲ್ಲ . :-)









ನೋಡುತ್ತಿರುವಂತೆ ಯಾವುದೋ ಶಾಲೆಯ ವಿದ್ಯಾರ್ಥಿಗಳ ಗುಂಪು ಒಳ ನುಗ್ಗಿತು. ಅಲ್ಲಿಯೆ ಇದ್ದ ನಲ್ಲಿಯಲ್ಲಿ ನೀರು ತುಂಬಿಸಿಕೊಳ್ಳುತ್ತ ನಾವು ಹೊರನಡೆದೆವು.
ವರನಟ ರಾಜಕುಮಾರರ ದ್ವನಿ "ಮಧುಕೇಶ್ವರನ ಸಾಕ್ಷಿಯಾಗಿಯು...." ಕಿವಿಯಲ್ಲಿ ದ್ವನಿಸುತ್ತಿತ್ತು.
ಹೊರಗೆ ನಮ್ಮ ವಾಹನದ ಹತ್ತಿರ ಬರುವಾಗಲೆ , ಒಳಗೆ ಹೋಗುವಾಗ ಮಾಡಿದ್ದ ಪ್ರತಿಜ್ಞೆ ನೆನಪಿಗೆ ಬಂದಿತು, ಸರಿ ಮತ್ತಿನ್ನೇನು ?
ಎಲ್ಲರೂ ಅನಾನಸ್ ಹಣ್ಣನ್ನು ಕೊಂಡು ಅದಕ್ಕೆ ಉಪ್ಪು ಕಾರ ಹಾಕಿಸಿ ಸಾಕಷ್ಟು ತಿಂದೆವು. ಗಾಡಿ ಹತ್ತುತ್ತ ನಮ್ಮ  ಕುಮಾರಸ್ವಾಮಿಯವರನ್ನು ಕೇಳಿದೆವು ಮುಂದೆ ಎಲ್ಲಿಗೆ ?
"ಸಿರ್ಸಿ ಮಾರಿಕಾಂಬ"
ಸರಿ ಜೈ ಅಂದೆವು !

 
ಸಿರಿಸಿಮಾರಿಕಾಂಬ:
ದೇವಾಲಯ ತಲುಪುವಾಗ ಹೆಚ್ಚು ಕಡಿಮೆ ಬೆಳಗಿನ ಹನ್ನೊಂದು ಗಂಟೆ ದಾಟಿತ್ತು. ದೇವಾಲಯದ ಎದುರಿಗೆ ಹೋಗುವಾಗಲೆ ಅನ್ನಿಸಿತು, ಇದನ್ನು ಮೊದಲೇ ನೋಡಿದ ಹಾಗಿದೆಯಲ್ಲ ಎಂದು, ನಂತರ ಹೊಳೆಯಿತು, ನೇರವಾಗಿ ಅಲ್ಲ, ಟೀವಿಯ ಕಾರ್ಯಕ್ರಮಗಳಲ್ಲಿ ನೋಡಿರುವೆ ಎಂದು.

ಎಂಟು ಬುಜ ಕೈಗಳ ವಿಗ್ರಹ ಇಲ್ಲಿಯ ದುರ್ಗಿಯದು, ಎಲ್ಲರೂ ದೊಡ್ಡಮ್ಮ ಅನ್ನುವರಂತೆ. ರೇಣುಕಾ ಅಥವ ಎಲ್ಲಮ್ಮ ಎನ್ನುವ ಹೆಸರುಗಳು ಪ್ರಚಲಿತವಿದ್ದು, ದೇವಾಲಯ ಕಟ್ಟಿದ ಕಾಲ ಸುಮಾರು 1688 ನೇ ಇಸವಿ, ದೇವಾಲಯದಲ್ಲಿ ಪ್ರಾಣಿಬಲಿಯ ಪರಂಪರೆ ಇದೆ, ಹಿಂದೆಲ್ಲ ಕೋಣನನ್ನು ದೇವಿಗೆ ಬಲಿಕೊಡುತ್ತಿದ್ದರಂತೆ. ಗಾಂಧೀಜಿ ಕರ್ನಾಟಕಕ್ಕೆ ಬರುವಾಗ ಇಲ್ಲಿಯ ಪ್ರಾಣಿಬಲಿ ವಿಷಯ ತಿಳಿದು ಒಳಗೆ ಬರಲ್ಲ ಅಂದರಂತೆ ಎಂದು ವೀಕಿಪೀಡಿಯ ಓದಿ ತಿಳಿದೆ. ದೇವರ ದರ್ಶನವಾಯಿತು,

ಹೊರಗೆ ಬಂದರೆ ನಮ್ಮ ಡ್ರ್ವೈವರ್ ನಾಪತ್ತೆ. ಎಲ್ಲಿ ಹೋದ ಎಂದು ಹುಡುಕಿದರೆ,  ಅಲ್ಲಿ ಮಾಡುವ ಅನ್ನದಾನದ ಸರತಿಗೆ ಹೋಗುತ್ತಿದ್ದಾನೆ, ನಮ್ಮನ್ನು ಕರೆದ
"ಸಾರ್ ಬನ್ನಿ ಇಲ್ಲಿಯೇ ಊಟ ಮುಗಿಸಿ ಬಿಡೋಣ, ದೇವರ ಪ್ರಸಾದವು ಆಗುತ್ತದೆ ಎಂದು "
ನಾವು ಇದೇನು ಎಂದು ನಿಂತು ನೋಡಿದೆವು, ಯಾರನ್ನೊ ವಿಚಾರಿಸಲಾಗಿ, ಊಟ ಹಾಕುವುದು ಒಂದು ಗಂಟೆಯ ಮೇಲಂತೆ,
ಸಮಯ ನೋಡಿದರೆ ಹನ್ನೊಂದು ಮುಕ್ಕಾಲು !
ಅಂದರೆ ಒಂದುಕಾಲು ಗಂಟೆ  ಇಲ್ಲಿ ಸಾಲಿನಲ್ಲಿ ನಿಂತು ನಂತರ ಊಟ ಮುಗಿಸುವಾಗ ಎರಡು ಗಂಟೆ ದಾಟುತ್ತದೆ. ಅನ್ನಿಸಿತು. ಅವನನ್ನು ಇಲ್ಲಿ ಬೇಡಪ್ಪ ಸುಮ್ಮನೆ ಸಮಯ ವ್ಯರ್ಥ ಅಲ್ಲದೆ , ತಿಂದಿರುವ ತಿಂಡಿ ಇನ್ನು ಅರಗಿಯೇ ಇಲ್ಲ. ಇಷ್ಟು ಬೇಗ ಯಾರು ಊಟಮಾಡುವರು ಎಂದು ಕರೆದರೆ ಅವನಿಗೆ ಹೊರಡಲು ಮನಸೇ ಇಲ್ಲ . ಕಡೆಗೊಮ್ಮೆ ಬಲವಂತ ಮಾಡಿ ಹೊರಡಿಸಿದಾಗ ಅವನಿಗೆ ತುಸು ಕೋಪವೇ ಬಂದಿತು. ನಮಗೆ ಶಾಪ ಹಾಕುತ್ತಲೆ ಹೊರಟ,
"ನೋಡಿ ಇಲ್ಲಿಯೂ ಊಟವಿಲ್ಲ, ಊಟದ ಸಮಯಕ್ಕೆ ಎಲ್ಲಿ ಸಿಕ್ಕರೆ ತಿಂದುಬಿಡಬೇಕು, ಮುಂದಿನ ಸ್ಥಳ ತಲುಪುವಾಗ ಹೇಗೋ ಗೊತ್ತಿಲ್ಲ" ಎಂದ

ಮುಂದೆ ನಾವು ಹೋಗುವುದು ಎಲ್ಲಿಗೆ ?

ಸೋಂದೆ ಮಠ,

ಸಾರ್ ಅಲ್ಲಿ ಮೊದಲೆ ತಿಳಿಸದೆ ಊಟ ಹಾಕುವದಿಲ್ಲ, ಹೋಟೆಲ್ ಸಹ ಸರಿ ಇಲ್ಲ ಎಂದು ಏನೆಲ್ಲ ಕತೆ ಹೇಳಿ ಹೊರಟ.



1 comment:

  1. ನನ್ನೊಳಿಗಿನ ಕವಿ ಪಂಪನ ನೆಲೆ ಬನವಾಸಿಯನ್ನೂ ಸಿರಸಿಯ ಮಾರಿಕಾಂಬೆಯನ್ನು ದರ್ಶಿಸಿ ಬಂದ ತಾವೇ ಎನ್ಎಸ್ ಮಾನ್ಯರು.

    ReplyDelete

enter your comments please