Monday, January 3, 2022

ನೋವಿಲ್ಲದ ಸಾವು

 

ಹೃಷಿಕೇಶ್ ಭಾರತದ ತುತ್ತ ತುದಿ ಹಿಮಾಲಯದ ಬುಡದಲ್ಲಿರುವ ಪುರಾತನ ಸ್ಥಳ. ಅನಾದಿಕಾಲದಿಂದಲೂ  ಋಷಿ ಮುನಿಗಳು ಅವದೂತರು ಸನ್ಯಾಸಿಗಳು ಅಘೋರಿಗಳು ಎನ್ನುತ್ತ ಅಧ್ಯಾತ್ಮದ ಲೋಕದಲ್ಲಿರುವ ಮನುಷ್ಯರ ಜೊತೆಗೆ ರಾಜಮಹಾರಾಜರನ್ನು ಜನಸಾಮಾನ್ಯರನ್ನು ಸೆಳೆದ ಸ್ಥಳ. ಸಾವಿರಾರು ವರ್ಷಗಳಿಂದ ಲಕ್ಷ ಲಕ್ಷ ಇಂತಹ ಜನರು ಪಾದ ಊರಿ ನಡೆದಾಡಿದ ಪುಣ್ಯಭೂಮಿ. 

ಒಂದಷ್ಟು ದಿನದಿಂದ ಅಲ್ಲೆ ಸುತ್ತಾಟ ನಡೆಸಿದ್ದವು. ಉತ್ತರದಲ್ಲಿ ಕರೆಯುವಂತೆ ಚಾರ್ ಧಾಮ್ ಯಾತ್ರ ಅಂದರೆ ಗಂಗೋತ್ರಿ ಯಮುನೋತ್ರಿ ಬದರಿನಾಥ  ಕೇದಾರನಾಥ ಯಾತ್ರೆ ಮುಗಿಸಿ ಹೃಷಿಕೇಶ್ ನಲ್ಲಿ ಒಂದಿಷ್ಟು ದಿನ ಇದ್ದೆವು. ಪರಮಾರ್ಥ ನಿಕೇತನ ಆಶ್ರಮ ದಲ್ಲಿ ನಾನು ಪತ್ನಿ ಮತ್ತೆ ನಾಲಕ್ಕು ಜನ ಬಿಡಾರ ಹೂಡಿದ್ದೆವು.


ಆ ಅರುಂಧತಿ ಗುಹೆಗಳ ಹತ್ತಿರ ಇದ್ದೆವು. ಎಲ್ಲರೂ ಸುತ್ತಾಡುತ್ತ ಇದ್ದರೆ ನನಗೇಕೊ ಸುಮ್ಮನೆ ಒಂದು ಕಡೆ ಕುಳಿತುಕೊಂಡು ಎದುರಿನ ಪ್ರಕೃತಿ ನೋಡುವ ಮನಸ್ಸು. 


"ನರಸಿಂಹರವರೆ ಹಾಗಿದ್ದರೆ ಒಂದು ಕೆಲಸ ಮಾಡಿ "


ಜೊತೆ ಇದ್ದ ಶಿವರಾಮು ನುಡಿದರು


"ನೀವು ಇಲ್ಲೆ ಕುಳಿತು ಬಿಡಿ ನಾವೆಲ್ಲ ಒಂದು ಸುತ್ತು ಹಾಕಿ ಪುನಃ ಇಲ್ಲಿಗೆ ಬರುವೆವು. ನಂತರ ಜೊತೆಯಲ್ಲಿ ಹೊರಡೋಣ ಆದೀತೆ" 


ನಾನು ಆಗಲಿ ಎಂದು ತಲೆ ಆಡಿಸಿದೆ. 


"ಏಕ್ರಿ ಆರೋಗ್ಯವಾಗಿದ್ದರಿ ತಾನೆ " ಪತ್ನಿ ಕುಸುಮ ಕಾಳಜಿ ತೋರಿದಳು. 


"ನಾನು ಆರಾಮವಾಗಿ ಇರುವೆ ಯಾವ ತೊಂದರೆ ಇಲ್ಲ. ಅದೇನೊ ಇಲ್ಲಿ ಒಬ್ಬನೆ ಕುಳಿತಿರಲು ಮನಸ್ಸಾಗುತ್ತ ಇದೆ. ನೀನು ಎಲ್ಲರ ಜೊತೆ ಹೊರಡು ಎಲ್ಲ ನೋಡಿ ವಾಪಸ್ ಹೋಗುವ ಮೊದಲು ಬನ್ನಿ ಇಲ್ಲಿಂದ ಹೊರಡೋಣ" 


ಕುಸುಮ ಸರಿ ಎಂದು ತಲೆ ಆಡಿಸಿದಳು. 


ಎಲ್ಲರೂ ಹೊರಟರು ಕನಿಷ್ಠ ಒಂದು ಗಂಟೆ ಏಕಾಂತಕ್ಕೆ ಸಿದ್ದನಾದೆ. 


ವಿಶಾಲವಾಗಿ ಹರಡಿಕೊಂಡ ಮರಗಳ ನಡುವೆ ಕುಳಿತುಕೊಳ್ಳಲು ಹಾಕಿರುವ ಕಲ್ಲಿನ ಆಸನಗಳು. ಸುಖವಾಗಿ ಕುಳಿತೆ. ಸುತ್ತಲಿನ ಪ್ರಕೃತಿ , ಹರಿವ ನದಿ. ಹಸಿರು ಬೆಟ್ಟ ಗುಡ್ಡಗಳು ಎಲ್ಲವೂ ವಿವರಣೆ ಮೀರಿದ ಸ್ವಾನುಭವ. ಮನಸ್ಸು ಪ್ರಶಾಂತ ವಾಗಿತ್ತು. ಯೋಚನೆಗಳು ತಮ್ಮ ಶೂನ್ಯ ಸ್ಥಿತಿ ತಲುಪಿದ್ದವು. ಸುಮಾರು ಅರ್ಧಗಂಟೆ ಕಳೆಯಿತೇನೊ ಎದುರಿಗೆ ಕಣ್ಣಳತೆಯ ದೂರದಲ್ಲಿ ಮರದ ಕೆಳಗೆ ಸಾಧು ಒಬ್ಬರು ಒಬ್ಬಂಟಿಯಾಗಿ ಕುಳಿತಿರುವುದು ಕಾಣಿಸಿತು. ಅವರು ಎತ್ತಲೋ ದೃಷ್ಟಿ ನೆಟ್ಟು ಕುಳಿತ್ತಿದ್ದರು ಅನ್ನಿಸುತ್ತದೆ. 


ಎದ್ದು ಹೋಗಿ ಅವರನ್ನು ಮಾತನಾಡಿಸಲೆ ಎನ್ನುವ ಯೋಚನೆ ಬಂದಿತು. ಛೇ ಬೇಡ ನನ್ನಂತೆ ಅವರು ಸಹ ಏಕಾಂತ ಬಯಸಿ ಕುಳಿತಿರುತ್ತಾರೆ. ನಾವು ಭಕ್ತಿ ಹಾಳು ಮೂಳು ಎಂದು ಹೋಗಿ ಮಾತನಾಡಿಸಿ ಅವರಿಗೆ ತೊಂದರೆ ಕೊಡುವುದು ಸರಿ ಅಲ್ಲ ಅನ್ನಿಸಿತು. 


ಎತ್ತಲೋ ನೋಡುತ್ತ ಕುಳಿತಿದ್ದವನು ಏಕೊ ಒಮ್ಮೆ ಅವರತ್ತ , ಆ ಸನ್ಯಾಸಿಯತ್ತ ತಿರುಗಿದೆ. ಅದೇ ಸಮಯಕ್ಕೆ ಅವರು ನನ್ನತ್ತ ತಿರುಗಿದರು. ಕ್ಷಣಕಾಲ ನೋಡಿದವರು 'ಹತ್ತಿರ ಬಾ' ಎನ್ನುವಂತೆ ಕೈ ಆಡಿಸಿ ಕರೆದರು. ್


"ಓಹೋ ಅವರೇ ಕರೆಯುತ್ತ ಇದ್ದಾರೆ ಹತ್ತಿರ ಹೋಗಿ ಮಾತನಾಡಿಸಿ ಬಂದರಾಯಿತು" 


ಎಂದು ಎದ್ದು ಹತ್ತಿರ ಹೋದೆ. 

"ಬಾ ಕುಳಿತುಕೋ "


ಹಿಂದೀ ಭಾಷೆ ಆಡುತ್ತ ಇರುವರು


ಅವರ ಎದುರು ಹೋಗಿ ಕುಳಿತೆ.


"ಎಲ್ಲಿಂದ ಬರುತ್ತ ಇದ್ದೀಯಾ? "


ಕೇಳಿದರು. 


"ದಕ್ಷಿಣ ಭಾರತ , ಬೆಂಗಳೂರಿನಿಂದ ಬಂದಿರುವೆನು."


"ಓಹೋ ಕನ್ನಡ , ಕನ್ನಡದವನು " ಸನ್ಯಾಸಿ ನಗೆ ಬೀರಿದರು


"ಹೌದು ಸ್ವಾಮಿ ಕನ್ನಡದವನು ಕರ್ನಾಟಕದಿಂದ ಬರುತ್ತ ಇರುವೆ."


"ಒಬ್ಬನೇ ಬಂದಿರುವೆಯಾ , ಸಂಸಾರವೆಲ್ಲಿ "


ಈಗ ಕನ್ನಡದಲ್ಲಿ ಕೇಳಿದ್ದರು ಅವರು.


"ಎಲ್ಲರೂ ಇರುವರು ಸುತ್ತಲೂ ಸುತ್ತಾಡಲು ಹೋಗಿರುವರು. ನಾನು ಒಬ್ಬನೇ ಕುಳಿತಿದ್ದೆ "


"ಹಾಗೊ ಸರಿ "


ಎಂದರು. 


ಮತ್ತೆ ಅನುಮಾನವಾಗಿ ಕೇಳಿದೆ 


"ಸ್ವಾಮಿ ತಾವು ಕನ್ನಡ ಬಾಷೆಯಲ್ಲಿ ಮಾತನಾಡುತ್ತ ಇರುವಿರಿ"  ಕೇಳಿದೆ


"ಹೌದು , ನನಗೆ ಕನ್ನಡ ಬರುತ್ತದೆ. ಹಿಂದೆ ಕರ್ನಾಟಕದಲ್ಲಿ ಹತ್ತು ವರ್ಷಗಳ ಕಾಲ ಇದ್ದೆ." ಆತ ನುಡಿದರು

"ತಾವು ಕರ್ನಾಟಕದಲ್ಲಿ ಇದ್ದಿರ ? "


ಆಶ್ಚರ್ಯದಿಂದ ಕೇಳಿದೆ.


"ಹೌದು , ಮೈಸೂರು ಪ್ರಾಂತ್ಯದ ಶೃಂಗೇರಿ ಹತ್ತಿರ , ಋಷ್ಯಶೃಂಗರ ತಪೋನೆಲದಲ್ಲಿ  ಕಾಡಿನಲ್ಲಿ ತಪ್ಪಸ್ಸು ಮಾಡಿಕೊಂಡಿದ್ದೆ. ಆಗ ಸ್ಥಳೀಯರ ಜೊತೆ ಸಂಪರ್ಕದಲ್ಲಿ ಇದ್ದೆ ಹಾಗಾಗಿ ಕನ್ನಡ ಬಾಷೆ ಕಲಿಯುವಂತೆ ಆಯಿತು."


"ಒಹೋ ಹೌದಾ ಗುರುಗಳೆ ಈಗ ತಿಳಿಯಿತು "


ಎಂದೆ. 


"ಅದೇನು ಎಲ್ಲರೂ ಸುತ್ತಾಡಲು ಹೋದರೆ ನೀನು ಒಬ್ಬ ಇಲ್ಲಿ ಕುಳಿತಿದ್ದು." 


ಕೇಳಿದರು ಆ ಸನ್ಯಾಸಿ. 


"ಹೀಗೆ ಅದೇನೊ ಒಬ್ಬನೇ ಕುಳಿತಿರಲು ಮನಸ್ಸಾಯಿತು ಅಷ್ಟೇ. ಹಾಗೆ ಕುಳಿತಿದ್ದೆ. "


"ನಿನ್ನ ಹೆಸರೇನು ? "  ಸನ್ಯಾಸಿ ನನ್ನನ್ನು ಕೇಳಿದರು


"ನರಸಿಂಹ ಎಂದು ನನ್ನ ಹೆಸರು ಗುರುಗಳೆ."


ಮತ್ತೆ ಎಂತದೊ ಮೌನ ನೆಲಸಿತು. 

"ನೀನು ಕೇಳಲು ಯಾವ ಪ್ರಶ್ನೆಯು ಇಲ್ಲವೇ? "


ಅವರು ಕೇಳಿದರು.

"ನನಗೆ ಅರ್ಥವಾಗಲಿಲ್ಲ 


ಗುರುಗಳೆ .. "


ಎನ್ನುತ್ತ ಅವರ ಮುಖ ನೋಡಿದೆ ,


ನಕ್ಕರು.

"ನಮ್ಮನ್ನು ಬೇಟಿ ಮಾಡುವ ಎಲ್ಲರೂ ಒಂದು ಪ್ರಶ್ನೆ ಸಮಸ್ಯೆ ಹೊತ್ತು ಬಂದವರು ಆಗಿರುವರು. ಹಣದ ಸಮಸ್ಯೆ ಆರೋಗ್ಯದ ಸಮಸ್ಯೆ ಸಂಸಾರದ ವಿಷಯ ಹೀಗೆ ಸಾಲು ಸಾಲು. ನಿನಗೆ ಕೇಳಲು ಯಾವ ಪ್ರಶ್ನೆಯೂ ಇಲ್ಲವೇ "

ಕುಚೋದ್ಯದ ನಗು ಅವರ ಮುಖದಲ್ಲಿ ಕಾಣಿಸಿತು.


ವಿಚಿತ್ರ ಅನ್ನಿಸಿತು. 


"ಪ್ರಶ್ನೆ ಕೇಳಲು ನಾನಾಗೆ ನಿಮ್ಮ ಬಳಿ ಬಂದವನಲ್ಲ. ನೀವಾಗೆ ಬಳಿ ಕರೆದಿರಿ 


ಎನ್ನುವ ಉತ್ತರ ಮನದಲ್ಲಿ ಮೂಡಿತು."


ಆದರೆ ಅದು ಉದ್ದಟತನ ಆಗಬಹುದು. ಸನ್ಯಾಸಿಗಳ ಹತ್ತಿರ ಹಾಗೆಲ್ಲ ಮಾತನಾಡಿದರೆ ಸರಿ ಆಗಲಾರದು ಅನ್ನಿಸಿತು.

"ಅಂತಹ ಪ್ರಶ್ನೆಗಳಿಲ್ಲ , ಗುರುಗಳೆ ಆದರೆ ನನ್ನದೇ ಆದ ಬೇರೆ ಪ್ರಶ್ನೆ ಇದೆ ಕೇಳಲೇ "


ಎಂದೆ

"ಏನದು ಕೇಳು , ಉತ್ತರಿಸುವೆನು , ಪ್ರಪಂಚದಲ್ಲಿ ಉತ್ತರಿಸಲಾಗದ ಪ್ರಶ್ನೆ ಯಾವುದು ಇದೆ."


ಎಂದರು  ಆ ಸನ್ಯಾಸಿ

"ಗುರುಗಳೆ ನೋವಿಲ್ಲದ ಸಾವನ್ನು ಪಡೆಯುವುದು ಹೇಗೆ "


ನಾನು ಕೇಳಿದೆ

ಸನ್ಯಾಸಿ ಮೌನವಾದರು , ಮತ್ತೆ ಹೇಳಿದರು.

"ಅಂದರೆ ನೀನು ಇಚ್ಚಾಮರಣದ ಬಗ್ಗೆ ಕೇಳುತ್ತ ಇರುವೆಯ. ಅಂದರೆ ಯೋಗದ ಮೂಲಕ ಪ್ರಾಣತ್ಯಾಗ ಮಾಡುವ ಬಗ್ಗೆ "

"ಅಂದರೆ ಏನು ಗುರುಗಳೆ " ಪ್ರಶ್ನಿಸಿದೆ

"ಯೋಗದ ಮೂಲಕ ಕೆಲವೇ ಜನ ಸ್ವಯಂ ಇಚ್ಛೆಯಿಂದ ಪ್ರಾಣತ್ಯಾಗ ಮಾಡಬಲ್ಲರು. ಪ್ರಾಣವಾಯುವನ್ನು ಒಳಗೆ ಸ್ತಂಭನ ಗೊಳಿಸಿ. ಸಹಸ್ರಾರದ ಮೂಲಕ ಪ್ರಾಣ ತ್ಯಾಗ ಮಾಡುವರು. ಅದು ಸನ್ಯಾಸಿಗಳು, ಹಠಯೋಗಿಗಳು  ಸಾಧಕರು ಮಾಡಲು ಸಾಧ್ಯ ಅನ್ನುವರು. ಅಂತಹವರ ನೆತ್ತಿಯ ಸೂಕ್ಷ್ಮ ಭಾಗ ಒಡೆದು ಚಿಟಿಕೆ ರಕ್ತ ಚಿಮ್ಮುತ್ತದೆ ಎಂದು ಕೇಳಿರುವೆ."

ಸನ್ಯಾಸಿ ವಿವರವಾಗಿ ಹೇಳುತ್ತಿದ್ದರು

"ಇಲ್ಲ ಅದನ್ನಲ್ಲ ನಾನು ಕೇಳುತ್ತ ಇರುವುದು. ಅದೇ ರೀತಿಯಲ್ಲಿ ಆದರೆ ಬೇರೆ."  ಹೇಳೀದೆ

"ಅಂದರೆ ಏನು ವಿವರವಾಗಿ ಹೇಳು" ಸನ್ಯಾಸಿ ಹೇಳಿದರು

"ಗುರುಗಳೆ ನಾನು ಹೆಚ್ಚು ತಿಳಿದಿಲ್ಲ. ಆದರೆ ನಾನು ಕೇಳುತ್ತ ಇರುವುದು ಬೇರೆ. ದಿನನಿತ್ಯ ಸಾವುಗಳ ಬಗ್ಗೆ ಕೇಳುತ್ತ ಇರುವೆವು. ಹೃದಯ ಸ್ತಂಭನ, ಜ್ವರ ಖಾಯಿಲೆಗಳು ಅಪಘಾತ ಹೀಗೆ .ಆದರೆ ಎಲ್ಲ ಸಾವುಗಳು ಸಹ ನೋವನ್ನು ಒಳಗೊಂಡಿದೆ. ನಾನು ಕೇವಲ ಉಸಿರಾಟ ನಿಲ್ಲಿಸಿ ಸಾಯುವ ಬಗ್ಗೆ. ಅಂದರೆ ಉಸಿರಾಡುತ್ತ ಇರುವೆವು. ಒಮ್ಮೆ ಒಳಗೆ ಉಸಿರು ಒಳಗೆ ತೆಗೆದುಕೊಂಡು. ಮತ್ತೆ ಆ ಉಸಿರನ್ನು ಹೊರಗೆ ಬಿಟ್ಟರೆ ಆಯಿತು. ಮತ್ತೆ ಒಳಗೆ ಉಸಿರು ತೆಗೆದು ಕೊಳ್ಳಬಾರದು. ಅಂತಹ ಸಾವು."


ಸನ್ಯಾಸಿ ನಿಧಾನವಾಗಿ ಹೇಳಿದರು. 


"ಏಕಿಲ್ಲ , ಎಲ್ಲ ಸಹಜ ಸಾವಿನಲ್ಲಿ ಅದೇ ತಾನೆ ನಡೆಯೋದು. ಉಸಿರು ಹೊರಹಾಕುವುದು ಕಡೆಯ ಕ್ರಿಯೆ." 

"ಹಾಗಲ್ಲ ಗುರುಗಳೆ ನೀವು ಹೇಳುತ್ತ ಇರುವುದು ಬೇರೆ. ದೇಹದ ಎಲ್ಲ ಅಂಗಗಳು ತಮ್ಮ ಕೆಲಸ ನಿಲ್ಲಿಸಿ ಕಡೆಯದಾಗಿ ಉಸಿರು ನಿಲ್ಲುವುದು. ಆದರೆ ನಾನು ಕೇಳಿದ್ದು ಅದಲ್ಲ. ಆರೋಗ್ಯವಾಗಿರುವ ಮನುಷ್ಯನೊಬ್ಬ ತೀರ ಸಹಜವಾಗಿ , ಅಂದರೆ ಒಮ್ಮೆ ಉಸಿರು ಎಳೆದು ಹೊರಗೆ ಬಿಟ್ಟನಂತರ ಪುನಃ ಉಸಿರು ಒಳತೆಗೆದುಕೊಳ್ಳದೆ ನಿರಾಕರಣೆ ಮಾಡಲು ಸಾದ್ಯವೆ , ಯಾವ ನೋವು ಇಲ್ಲದೆ ತೀರ ಸಹಜವಾಗಿ."

ಸನ್ಯಾಸಿ ಯಾವ ಮಾತು ಆಡದೆ ಮೌನವಾಗಿ ಕುಳಿತರು. ಕೆಲ ಕಾಲ ಕಳೆದಂತೆ ಕೇಳಿದೆ


"ಕ್ಷಮಿಸಿ ಸ್ವಾಮಿ ನಿಮಗೆ ಪ್ರಶ್ನೆ ಇಷ್ಟವಾಗಲಿಲ್ಲ ಅನ್ನಿಸುತ್ತದೆ"


ನನ್ನ ಮಾತನ್ನು ಅವರು ಪರಿಗಣಿಸಲಿಲ್ಲ.


 ನಿಧಾನವಾಗಿ ಸ್ವಗತ ಎನ್ನುವಂತೆ ನುಡಿದರು.


"ಇದೇ ಸ್ಥಳದಲ್ಲಿ, ಇದೇ ಮರದ ಕೆಳಗೆ ನಾನು ಅವರಲ್ಲಿ ಇದೇ ಪ್ರಶ್ನೆ ಕೇಳಿದ್ದೆ." 


ಸನ್ಯಾಸಿ ಗೊಣಗುತ್ತ ಇದ್ದರು


"ಯಾರಲ್ಲಿ ಗುರುಗಳೆ ? "


ನಾನು ಕೇಳಿದೆ.

"ನನ್ನ ಗುರುಗಳ ಹತ್ತಿರ ಸುಮಾರು ಅರವತ್ತು ವರ್ಷಗಳ ಕೆಳಗೆ ಇದೇ ಪ್ರಶ್ನೆ ಕೇಳಿದ್ದೆ ನೋವಿಲ್ಲದೆ ಸಹಜ ಸಾವು ಪಡೆಯುವುದು ಹೇಗೆ."


ನಾನು ಮೌನವಾಗಿದ್ದೆ ಸನ್ಯಾಸಿಗಳು ಮುಂದುವರೆಸಿದರು. 


"ನನ್ನ ವಯಸ್ಸು ಎಷ್ಟಿರಬಹುದು. ನಿನಗೆ ತಿಳಿಯುವುದೆ "


ಅವರ ಮುಖ ನೋಡುತ್ತ , ಕರಿ ಬಿಳಿ ಮಿಶ್ರಿತ ಗಡ್ಡ ನೋಡುತ್ತ , ಕಣ್ಣುಗಳ ಪರೀಕ್ಷಿಸಿ ನುಡಿದೆ

"ಅರವತ್ತರ ಸುತ್ತ ಮುತ್ತ ಇರಬಹುದೆ ಗುರುಗಳೆ"


ಅವರ ದ್ವನಿಯಲ್ಲಿ ಈಗ ಹೆಮ್ಮೆ ಅಥವಾ ಅಹಂಕಾರ ಇರಲಿಲ್ಲ 

"ಇಲ್ಲ ನೀವು ಊಹಿಸಲಾರಿ.ಸಾಧುಗಳು ತಮ್ಮ ವಯಸ್ಸನ್ನು ಬಹಿರಂಗ ಗೊಳಿಸುವದಿಲ್ಲ. ಬಹಳ ವರ್ಷಗಳ ಕೆಳಗೆ ನನ್ನ  ವಯಸ್ಸು ನೂರು ದಾಟಿತು ನಂತರ ದಿನ ವರ್ಷ ಎಣಿಸುವುದು ನಿಲ್ಲಿಸಿದೆ. ನನ್ನ ಗುರುಗಳನ್ನು ಇದೇ ಮರದ ಕೆಳಗೆ ಹಲವು ಬಾರಿ ಬೇಟಿ ಮಾಡಿರುವೆ. ಅದೇ ನೆನಪಲ್ಲಿ ಇಲ್ಲಿ ಬಂದು ಕುಳಿತುಕೊಳ್ಳುವ ಅಭ್ಯಾಸ ನನ್ನದು. ವಿಚಿತ್ರ ನೋಡು ನಾನು ಅವರಲ್ಲಿ ಕೇಳಿದ್ದ ಪ್ರಶ್ನೆಯನ್ನೆ ನೀನು ಸಹ ಕೇಳಿರುವೆ." 

ಇನ್ನು ನನ್ನ ಪ್ರಶ್ನೆಗೆ ಸನ್ಯಾಸಿ ಉತ್ತರ ನೀಡಿರಲಿಲ್ಲ, ಹಾಗಾಗಿ ಅವರ ಮಾತು ಸಹನೆಯಿಂದ ಕೇಳುತ್ತ ಇದ್ದೆ. 

"ನಿನ್ನ ಪ್ರಶ್ನೆಗೆ ಸರಿಯಾದ ಉತ್ತರ ಹೌದು ಸಾಧ್ಯವಿದೆ ಎಂದು. ನಮ್ಮ ಉಸಿರಾಟವನ್ನು ನಾಲಕ್ಕು ಭಾಗ ಮಾಡಬಹುದು. ಉಚ್ವಾಸ ನಿಶ್ವಾಸಗಳನ್ನು  ಪೂರಕ ರೇಚಕ ಎನ್ನುವರು. ಹಾಗೆ ಪೂರಕದ ನಂತರ ಉಸಿರು ಹಿಡಿಯುವುದನ್ನು ಅಂತರ ಕುಂಭಕ , ರೇಚಕದ ನಂತರದ ಉಸಿರು ಹಿಡಿಯುವುದು ಬಾಹ್ಯ ಕುಂಭಕ ಅಥವಾ ಬಹಿರ್ ಕುಂಭಕ. ಎನ್ನುವರು. ಅಂತರ ಕುಂಭಕದಲ್ಲಿ ಉಸಿರನ್ನು ಒಳಗೆ ನಿಲ್ಲಿಸುವ ಪರಿಣಾಮ ಶ್ವಾಸಕೋಶ ಹೃದಯದ ಮೇಲೆ ಆಗುವುದು. ರಕ್ತದಲ್ಲಿ ಇಂಗಾಲದ ಅಂಶ ಹೆಚ್ಚುವುದು. ಉಸಿರನ್ನು ಶ್ವಾಸಕೋಶದಿಂದ ನೆತ್ತಿಯತ್ತ ಏರಿಸಿ , ಪ್ರಾಣವಿಡುವ ಕ್ರಿಯೆ ಯೋಗದಲ್ಲಿದೆ. ಆದರೆ ಅದರ ವಿಲೋಮ ಕ್ರಿಯೆ ಮತ್ತೊಂದು ಇದೆ ಅದನ್ನು ಗುರುಗಳು ನನಗೆ ಭೋದಿಸಿದ್ದರು ಅದನ್ನು ನೀನು ಈಗ ಕೇಳುತ್ತ ಇರುವೆ " 

ನನಗೀಗ ಯೋಚನೆ ಆಯಿತು. ಯೋಗಿಗಳ ಬಳಿ ಆಗಲಿ , ಅವಧೂತರ ಬಳಿ ಆಗಲಿ ನಾವಾಗೆ ಏನನ್ನು ಬೇಡಬಾರದು ಅನ್ನುವರು. ಇಲ್ಲಿ ನಾನೀಗ ಕೇಳಿದ ಕ್ರಮ ಸರಿ ಇದೆಯೆ , ಅಥವಾ ಕೋಪಗೊಳ್ಳುವರೆ. ಇರಲಾರದು ಏಕೆಂದರೆ ಅವರಾಗೆ ನನ್ನನ್ನು ಕರೆದು ಪ್ರಶ್ನೆ ಕೇಳಲು ಕೇಳಿದರು. ಹಾಗಾಗಿ ಕೋಪದ ಪ್ರಶ್ನೆ ಉದ್ಭವ ಆಗದು.


ನನ್ನ ಮೌನ ನೋಡುತ್ತ ಅವರು ಮುಂದುವರೆದರು. 

"ಆದರೆ ಗುರುಗಳು ನನಗೆ ಬೋಧಿಸಿರುವ ಈ ಕ್ರಿಯೆ ಅಥವಾ  ಯೋಗದಲ್ಲಿ ಒಂದು ತಾಂತ್ರಿಕ ಸಮಸ್ಯೆ ಇದೆ. ಯಾವುದೇ ಯೋಗವೊ ಮಂತ್ರವೋ ಗುರುಗಳು ಅದನ್ನು ಬೋಧಿಸಿದ ನಂತರದಲ್ಲಿ ಅದನ್ನು ನಾವು ಅನುಷ್ಠಾನಗೊಳಿಸಿ , ಸ್ವಾನುಭವದ ನಂತರ ಅದನ್ನು ಮತ್ತೊಬ್ಬರಿಗೆ ಬೋಧಿಸುವ ಯೋಗ್ಯತೆ ಬರುತ್ತದೆ. ಆದರೆ ಈ ಪ್ರಸಂಗದಲ್ಲಿ ನಾನು ಅದನ್ನು ಅನುಷ್ಠಾನಕ್ಕೆ ತಂದರೆ ನಿನಗೆ ಬೋಧಿಸಲು ನಾನೆ ಇರುವದಿಲ್ಲ. ನಾನು ಪ್ರಯತ್ನಪಟ್ಟಿಲ್ಲ ಎಂದಲ್ಲ ಆದರೆ ಅದೇಕೊ ಎರಡು ಪ್ರಯತ್ನಗಳು ಸಹ ನಾನು ಗುರಿ ತಲುಪಲು ಆಗಲಿಲ್ಲ. ಆದರೆ ನಾನು ಇದನ್ನು ನಿನಗೆ ಬೋಧಿಸಬಲ್ಲೆ , ನೀನು ಅದನ್ನು ಪಡೆಯಲು ಸಿದ್ದ ಇರುವೆಯ? "

ನಾನು ಈಗ ಯೋಚಿಸಿದೆ. ನಾನು ಅವರಲ್ಲಿ ಕೇಳಿದೆನಾದರು ಏನು. ನೋವಿಲ್ಲದ ಸಾವು ಹೇಗೆ ಎನ್ನುವ ಪ್ರಶ್ನೆ. ಆದರೆ ಅವರು ನನಗೆ ಬೋಧನೆ ಮಾಡಲು ಸಿದ್ದ ಎನ್ನುತ್ತ ಇರುವರು. ಏನು ಹೇಳುವುದು. ಅವರೇ ಹೇಳುತ್ತ ಇರುವರು ಎರಡು ಪ್ರಯತ್ನದಲ್ಲೂ ಸಹ ಗುರಿ ತಲುಪಲಿಲ್ಲ ಅನ್ನುವಾಗ ನಾನು ಹೆದರುವದರಲ್ಲಿ ಅರ್ಥವಿಲ್ಲ. ಅಷ್ಟಕ್ಕು ಅವರು ಅದಕ್ಕೆ ಸಂಬಂಧಿಸಿದ ಮಂತ್ರವೊ ಮತ್ತೇನೊ ಹೇಳುವರು ನೋಡೋಣ ಎಂದುಕೊಂಡು ಮೌನವಾಗಿ ತಲೆ ಆಡಿಸಿದೆ. 


ನನ್ನ ಮುಖವನ್ನೆ ದೀರ್ಘವಾಗಿ ನೋಡಿದರು. 


"ಈಗ ನಿನ್ನ ಪ್ರಶ್ನೆಗೆ ಉತ್ತರಿಸುವೆ, ಬೋಧನೆಯ ರೂಪದಲ್ಲಿ. ಕೇಳಿಸಿಕೊ. 


ಮೊದಲು ಪದ್ಮಾಸನದಲ್ಲಿ ವಿರಾಮವಾಗಿ ಕುಳಿತಿಕೊ"


ನಾನು ಅದೇನೊ ಅವರು ಹೇಳಿದ ಮಾತನ್ನು ಅನುಸರಿಸುತ್ತ ಇದ್ದೆ.


"ವಿರಾಮವಾಗಿ ಕುಳಿತು ಮನಸ್ಸು ಪ್ರಸನ್ನವಾಗಿರಲಿ. ಯಾವುದೇ ಸಮಸ್ಯೆಗಳಾಗಲಿ ಯೋಚನೆಗಳು ಆಗಲಿ ಮಾಡದೆ. ಮನಸ್ಸು ಸುಖಾನುಭಾವದಲ್ಲಿ ಇರಲಿ. 


ಈಗ ಸಹಜವಾಗಿ ಉಸಿರಾಡು. ದೀರ್ಘವಾಗಿ ಒಮ್ಮೆ ಉಸಿರು ತೆಗೆದುಕೊ , ಹಾಗೆ ಉಸಿರನ್ನು ನಿಧಾನವಾಗಿ ಹೊರಗೆ ಬಿಡು. ಹಾಗೆ ಒಂದೆರಡು ಬಾರಿ ಪುನರಾವರ್ತನೆ ಮಾಡು. 


ಈಗ ಪ್ರಾಣಾಯಾಮ ಪ್ರಾರಂಭ ಆಗಲಿ. ನಿಧಾನವಾಗಿ ಉಸಿರು ಒಳಗೆ ತಗೊ , 


ಉಸಿರು ನಿಲ್ಲಿಸು, 


ಉಸಿರು ಹೊರಗೆ ಬಿಡು. 


ಉಸಿರು ನಿಲ್ಲಿಸು 


ಮತ್ತೆ ಒಳಗೆ ತೆಗೆದುಕೊ 


ನಿಲ್ಲಿಸು 

ಈಗ ನಿಧಾನವಾಗಿ ಉಸಿರು ಹೊರಗೆ ಬಿಡು


ಉಸಿರು ನಿಲ್ಲಿಸು.


ಹಾಗೆ ಇರಲಿ. 


ಒಂದೆರಡು ಕ್ಷಣ ಅಷ್ಟೇ ಒಳಗಿನಿಂದ ಒತ್ತಡ ಬರುತ್ತದೆ ಉಸಿರಿಗಾಗಿ , 


ಆ ಒತ್ತಡ ತಡೆದುಕೊ.


ಮನಸ್ಸನ್ನು ಆ ಒತ್ತಡದಿಂದ ದೂರ ಸರಿಸು


ನೀನು ದಿನ ನಿತ್ಯ ಆರಾಧಿಸುವ ದೇವಿಯಲ್ಲಿ ಮನಸ್ಸನ್ನು ಸ್ಥಿರಗೊಳಿಸು. 


ಉಸಿರಿನ ಸ್ತಂಭನ ಹಾಗೆ ಇರಲಿ ಬಾಹ್ಯ ಕುಂಭಕದಲ್ಲಿ.


ಈಗ ಮಾನಸಿಕ ಆರಾಧನೆ ಪ್ರಾರಂಭ ಆಗಲಿ 


ನಿನಗೆ ಗೊತ್ತಿರುವ ಮೂಲಾಕ್ಷರಗಳ ಪಠಣ ಆರಂಭ ಆಗಲಿ.


ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ 


ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ 


ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ 


ಮನಸ್ಸು ದೇವಿಯ ಪಾದದಲ್ಲಿ ಸ್ಥಿರಗೊಳ್ಳುತ್ತ ಇರುವಂತೆ ಮನಸ್ಸು ಎಲ್ಲದರಿಂದ ವಿಮುಕ್ತಿ.

ಈಗ ನಿನಗೆ ಗುಪ್ತ ಮಂತ್ರಾಕ್ಷರ ಬೋಧಿಸುವೆ 


ಅದನ್ನು ಮನದಲ್ಲಿ ಮೂರು ಬಾರಿ ಪಠಿಸು.


"......................"


"......................."


"......................."

ಉಸಿರಾಟದ ಜೊತೆ ಹೃದಯ ಸಂಬಂಧಿಸಿದ ಕ್ರಿಯೆ, ಹಾಗಾಗಿ ಹೃದಯ ಬಡಿತ, 


ನಾಡಿ ಬಡಿತ ಕ್ಷೀಣ ಆಗುತ್ತ ಸಾಗುವುದು. 

ಕ್ರಮೇಣ ಮನ ಶಾಂತವಾಗುತ್ತ ಹೋಗುವುದು. ರಕ್ತಪರಿಚಲನೆ ನಿಲ್ಲುತ್ತ ದೇಹ ನಿಧಾನವಾಗ ತನ್ನ ಶಾಖ ಕಳೆದುಕೊಳ್ಳುತ್ತ ತಣ್ಣಗಾಗುವುದು. 

ಇಷ್ಟೇ ಮಗು ಇದರ ರಹಸ್ಯ. ನನಗೆ ಗುರುಗಳು ನೀಡಿದ ಉಪದೇಶ ಇಷ್ಟೆ. 


ಅವರು ಅದನ್ನು ಅನುಷ್ಠಾನಕ್ಕೆ ತರುವ ಮಾರ್ಗ ಸೂಚಿಸಲಿಲ್ಲ "

ಸನ್ಯಾಸಿ ತನ್ನ ಮಾತು ನಿಲ್ಲಿಸಿದರು. 


ಸೂರ್ಯನು ಪಶ್ಚಿಮಕ್ಕೆ ಸಾಗುತ್ತ ಇರುವಂತೆ. ಕಿರಣಗಳು ತಮ್ಮ ಶಾಖ ಕಳೆದುಕೊಳ್ಳಲು ಪ್ರಾರಂಭ ವಾಯಿತು. 

ಮನಸ್ಸು ಖಾಲಿಯಾದ ಭಾವದ ಜೊತೆ ಸನ್ಯಾಸಿ ಕಣ್ಣು ಮುಚ್ಚಿ ಕುಳಿತರು. 


.


.


ಅರ್ಧ ಗಂಟೆ ಕಳೆಯಿತೇನೊ.

ಹೊರಗೆ ಯಾರೊ ಬಂದ ಹಾಗಾಗಿ ಸನ್ಯಾಸಿ ಕಣ್ಣು ತೆರೆದರು. ಯಾರೊ ಇಬ್ಬರು ಹೆಂಗಸರು ಹಾಗು ಮೂವರು ಗಂಡಸರು. 

ಅವರೆಲ್ಲ ವಿನೀತರಾಗಿ ನಮಸ್ಕಾರ ಮಾಡಿದರು.

"ಯಾರು ನೀವೆಲ್ಲ " ಸನ್ಯಾಸಿ ಪ್ರಶ್ನೆ ಮಾಡಿದರು. 

"ಸ್ವಾಮಿ ನಾನು ಇವರ ಪತ್ನಿ ಕುಸುಮ" 


ಎನ್ನುತ್ತ ನರಸಿಂಹನತ್ತ ಆಕೆ ಕೈ ಮಾಡಿದರು.

ಸನ್ಯಾಸಿ ಇನ್ನೂ ತಮ್ಮ ಎದುರಿಗೆ ಕುಳಿತಿದ್ದ ನರಸಿಂಹನತ್ತ ದೃಷ್ಟಿ ಸಿದರು. ಇದೇನು ಈತ ಇನ್ನು ಇಲ್ಲಿಯೆ ಕಣ್ಮುಚ್ಚಿ ಕುಳಿತಿರುವರು. 

"ಹೌದೆ ಒಳ್ಳಯದಾಗಲಿ ತಾಯಿ. ಇವರು ಹೀಗೆ ನನ್ನ ಬಳಿ ಯಾವುದೋ ಪ್ರಶ್ನೆ ಕೇಳುತ್ತ ಇದ್ದರು. ಬಹುಶಃ ಹಾಗೆ ಕುಳಿತೆ ಇರುವರು. ಕುಳಿತಲ್ಲೆ ನಿದ್ದೆಯೊ ಏನೊ. ಎಚ್ಚರಗೊಳಿಸಿ, ಇಲ್ಲಿಂದ ಹೊರಡಿ. "

ಆಕೆ ಅವನನ್ನು ಕೂಗಿದರು. 


"ರೀ ಎದ್ದೇಳಿ" 


ಯಾವುದೇ ಪ್ರತಿಕ್ರಿಯೆ ಇಲ್ಲ. 


ಮತ್ತೊಮ್ಮೆ ಕೂಗಿದರುಇಲ್ಲ. 


ಬುಜ ಹಿಡಿದು ಅಲುಗಿಸಿದರು.


"ಎದ್ದೇಳಿ ಇದೇನು ಹೀಗೆ ಕುಳಿತಿರಿ" 


ನರಸಿಂಹ  ಹಾಗೆ ಹಿಂದೆ ಒರಗಿದ. 


ಈಗ ಅವಳಿಗೆ ಗಾಭರಿ.


"ರೀ ಏನಾಯಿತು , ಏಕೆ ಎಚ್ಚರ ಮಾಡಿಕೊಳ್ಳಿ"


ಈಗ ಶಿವರಾಮು ಸಹ ಮುಂದೆ ಬಂದರು


"ನರಸಿಂಹ ಎದ್ದೇಳಿ ", ಎನ್ನುತ್ತ ಹತ್ತಿರ ಬಂದರು 


ಅವರಿಗೆ ಏನೊ ಅನುಮಾನ ಅನಿಸಿತು. 


ಕೈ ಮುಟ್ಟಿದರು ತಣ್ಣನೆಗೆ ಕೊರೆಯುತ್ತ ಇದೆ. 


ಪರೀಕ್ಷೆ ಮಾಡಿ ನೋಡಿದರು. 


ಇಲ್ಲ ನರಸಿಂಹ ಬದುಕಿಲ್ಲ. 

ಶಿವರಾಮು ಆಶ್ಚರ್ಯ ಹಾಗು ಭಯದಿಂದ ನುಡಿದರು. 


"ಇಲ್ಲಮ್ಮ ನರಸಿಂಹ ಬದುಕಿಲ್ಲ." 

ಈಗ ಎಲ್ಲರು ಮುಂದೆ ಬಂದರು ಎಲ್ಲರಿಗು ಗಾಭರಿ. 


ನರಸಿಂಹನ ಪತ್ನಿ ಜೋರಾಗಿ ಅಳುತ್ತ ಇರುವರು. 


ಶಿವರಾಮುವಿಗೆ ಸಹ ಗಾಭರಿ 


ನರಸಿಂಹನ ಪತ್ನಿ  ಕೇಳಿದರು , ಅಳುತ್ತಲೆ


"ಗುರುಗಳೆ ಏಕೆ , ಇವರಿಗೆ ಏನಾಯಿತು ನಾವೆಲ್ಲ ಹೋಗುವಾಗ ಚೆನ್ನಾಗಿಯೆ ಇದ್ದರು." 

ಸನ್ಯಾಸಿಗೆ ಏನೊಂದು ತೋಚಲಿಲ್ಲ


ಹೇಳಿದರು. 

"ನಾನು ಮೋಸ ಹೋದೆ , ಸಾದರಣ ಒಬ್ಬ ಕುತೂಹಲದಿಂದ ಕೂಡಿದ ಮನುಷ್ಯ ಅಂದುಕೊಂಡೆ. ನನ್ನ ಶಿಷ್ಯ ಅನ್ನುವ ಭಾವದಿಂದ ಉಪದೇಶ ನೀಡಿದೆ. ಆದರೆ ತಪ್ಪಾಗಿ ಹೋಯಿತು. ಇವರು ನನಗೆ ಶಿಷ್ಯ ನಾಗಿ ಬರಲಿಲ್ಲ ಗುರುವಾಗಿ ಬಂದಿದ್ದರು. ಅರವತ್ತು ವರ್ಷಗಳ ಹಿಂದೆ ಇದೇ ಮರದ ಕೆಳಗೆ ಒಬ್ಬ ಗುರುಗಳು ಮಂತ್ರ ತಂತ್ರ ವನ್ನು ಬೋಧಿಸಿ ಹೋದರು. ಇಂದು ಇವರು ಮತ್ತೆ ಗುರುವಾಗಿ ಬಂದು ಆ ತಂತ್ರವನ್ನು ಅನುಷ್ಠಾನಗೊಳಿಸುವುದು ಹೇಗೆ ಎಂದು ತೋರಿಸಿದರು. ನನಗೆ ಮಾರ್ಗದರ್ಶನಕ್ಕಾಗಿ ಬಂದಿದ್ದರು ತಾಯಿ ಇವರು. ನಾನು ಅರಿಯಲಾರದೆ ಹೋದೆ. ನನಗೆ ಮುಂದಿನ ದಾರಿ ತೋರಿದರು."

ಆಕೆಗೆ ಈ ಸನ್ಯಾಸಿಯ ಮಾತು ಅರ್ಥವೇ ಆಗಲಿಲ್ಲ. 

ಮುಂದೆ ಏನು ಮಾಡುವುದು ಎನ್ನುವ ಚರ್ಚೆಗೆ ಶಿವರಾಮು ಇತರರು ತೊಡಗಿದರೆ. ಸನ್ಯಾಸಿ ಎದ್ದವರು ನರಸಿಂಹನಿಗೆ ನಮಸ್ಕಾರ ಮಾಡಿ ಅಲ್ಲಿಂದ ಗುಪ್ತ ಸ್ಥಳವೊಂದಕ್ಕೆ ಹೊರಟರು.




ಮುಗಿಯಿತು.

ಕತೆಯ ಭಾವ :  ಕಡೆಯಲ್ಲಿ ಸಾವು ಇರುವದಾದರು ಕರುಣ ಪ್ರಸಂಗಕ್ಕೆ ಇದು ಉತ್ತಮ ಆಯ್ಕೆ ಆಗಲಾರದು. ಯಾವುದೋ ಒಂದು ಅರಿಯಲಾರದ ವಿಷಯವನ್ನು , ಆಶ್ಚರ್ಯವನ್ನು , ಅದ್ಭುತವನ್ನು ಕಥೆ ಹಿಂಬಾಲಿಸುತ್ತ ಸಾಗುವದರಿಂದ 


ಕಥೆಯ ರಸವಾಗಿ ಆಯ್ಕೆ : " ಅದ್ಭುತ "




No comments:

Post a Comment

enter your comments please