Friday, April 28, 2017

ನೆನಪಿನ ಪಯಣ – ಭಾಗ 3

 

ಆಗ ವಿಚಿತ್ರ ಗಮನಿಸಿದೆ,
ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ
ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ
 ನಾನು.
’ ಜ್ಯೋತಿ ಸಮಾದಾನ ಪಟ್ಟುಕೊಳ್ಳಿ ಅದೇಕೆ ಎಲ್ಲ ದುಃಖದ ವಿಷಯವನ್ನೆ ನೆನೆಯುತ್ತಿರುವಿರಿ, ನೀವು ಎದ್ದೇಳಿ, ಸ್ವಲ್ಪ ಕಾಪಿ ಕುಡಿಯಿರಿ ಮತ್ತೆಂದಾದರು , ಈ ಪ್ರಯೋಗ ಮುಂದುವರೆಸೋಣ, ಇಂದಿಗೆ ಸಾಕು ಅಲ್ಲವೇ' ಎಂದೆ
' ಇಲ್ಲ ನನಗೇನು ಶ್ರಮ ಅನ್ನಿಸುತ್ತಿಲ್ಲ, ಅದೇನೊ ನೆನಪಿಗೆ ಬಂದಿತು ಅಷ್ಟೆ ,ನಾನು ಸರಿ ಇದ್ದೇನೆ '
ಜ್ಯೋತಿ ಉತ್ತರಿಸಿದರು.
ನನಗೆ ಅದೆಂತದೋ ಒಂದು ಅನುಮಾನ, ನಾನೇನಾದರು ಗೊತ್ತಿಲ್ಲದೆ ಆಕೆಗೆ ಸಂಮೋಹನ ಪ್ರಯೋಗದ ರೀತಿ ಏನಾದರು ತಪ್ಪು ಮಾಡಿರುವೆನಾ ಎಂದು,
ಹಾಗಾಗಿ ಮತ್ತೆ ಹೇಳಿದೆ
'ಜ್ಯೋತಿ ನೋಡಿ, ನಾನು ನಿಮ್ಮನ್ನು ಯಾವುದಕ್ಕೂ ಒತ್ತಡ ಹೇರುತ್ತಿಲ್ಲ, ನಾನು ನಿಮ್ಮ ಮೇಲೆ ಯಾವುದೇ ಹಿಪ್ನಾಟಿಕ್ ಸಜೆಶನ್ ಕೊಡುತ್ತಿಲ್ಲ. ನೀವು ಯೋಚಿಸಲು ಸ್ವತಂತ್ರ್ಯರಿದ್ದೀರಿ. ನಿಮಗೆ ಬೇಕಾದ ಯಾವುದೇ ನೆನಪನ್ನು ನೀವು ಕೆದಕಬಹುದು. ನಿಮಗೆ ಸಾಕು ಆನಿಸಿದಾಗ ಎದ್ದೇಳಬಹುದು. ನಿಮ್ಮ ಮನಸ್ಸು ನಿಮ್ಮ ವಶದಲ್ಲಿಯೆ ಇರಲಿ, ಈಗ ನಿಮ್ಮ ನೆನಪನ್ನು ಹಿಂದೆಕ್ಕೆ ಹಿಂದಕ್ಕೆ ತೆಗೆದುಕೊಂಡು ಹೋಗಿ' ಎಂದೆ .
ನಾನು ಹಿಪ್ನಾಟಿಕ್ ಸಜೆಶನ್ ಕೊಡುತ್ತಿಲ್ಲ ಎಂದು ಬಾಯಲ್ಲಿ ಹೇಳುತ್ತಿದ್ದರು, ಅದೇನೊ ತಪ್ಪು ಮಾಡುತ್ತಿರುವೆ ಅನ್ನಿಸುತ್ತಿತ್ತು. ಏನೆಂದು ಅರ್ಥವಾಗುತ್ತಿಲ್ಲ.
ಕಣ್ಣು ಮುಚ್ಚಿದ್ದ ಜ್ಯೋತಿ ನನ್ನ ಮಾತನ್ನು ಕೇಳಿಸಿಕೊಂಡರು, ಆದರೆ ನನ್ನಮಾತಿಗೆ ಹೆಚ್ಚು ಬೆಲೆಯೇನು ಕೊಡಲಿಲ್ಲ. ನಾನು ಗಮನಿಸುವಂತೆ ಆಕೆ ಈಗ ಸುತ್ತಲು ಇದ್ದ ಎಲ್ಲರ ಬಗ್ಗೆ ಮರೆತುಹೋಗಿದ್ದರು, ಕಡೆಗೆ ಅವರ ಪತಿ ಆನಂದ ಆಕೆಯ ಪಕ್ಕ ಕುಳಿತಿರುವರನು ಎನ್ನುವದನ್ನು ಮರೆತಂತೆ ಇತ್ತು.
’ನನ್ನ ಜೀವನದಲ್ಲಿ ಅತ್ಯಂತ ಸಂಭ್ರಮದ ಗಳಿಗೆ ಅಂದರೆ ಮದುವೆ ,
ಆಕೆ ಮತ್ತೆ ಪ್ರಾರಂಭಿಸಿದರು,
ಆನಂದ ನಾನು ಮೆಚ್ಚಿದ, ನಮ್ಮ ಅಪ್ಪ ಅಮ್ಮ ಹುಡುಕಿದ ಹುಡುಗ. ನನ್ನದೂ ಇನ್ನೂ ಚಿಕ್ಕವಯಸ್ಸೆ ಬಿಡಿ, ಅವರನ್ನು ಪೂರ್ಣ ಮನಸ್ಸಿನಿಂದ ಒಪ್ಪಿದ್ದೆ. ಮದುವೆ ಬೆಂಗಳೂರು ಜಯನಗರದ ಬೆಳಗೋಡು ಕಲ್ಯಾಣ ಮಂಟಪದಲ್ಲಿ ನಡೆಯಿತು. ಆಗೆಲ್ಲ ಬೆಳಗೋಡು ಅಂದರೆ ದೊಡ್ಡ ಛತ್ರ. ಅತ್ಯಂತ ವೈಭವ ಎಂದೇ ಲೆಕ್ಕ. ನಮ್ಮ ಅಪ್ಪ ತನ್ನ ಶಕ್ತಿ ಮೀರಿ ತನ್ನೆಲ್ಲ ಸೇವಿಂಗ್ಸ್ ಹಣವನ್ನು ಉಪಯೋಗಿಸಿ ಮದುವೆ ಮಾಡಿದರು. ಒಬ್ಬಳೇ ಮಗಳು ಎನ್ನುವ ಭಾವ ಅವರಿಗೆ. ಅಮ್ಮನಾಗಲಿ , ನನ್ನ ತಮ್ಮನಾಗಲಿ ಸಂಭ್ರಮದಲ್ಲಿಯೆ ಇದ್ದರು. ತಾಳಿ ಕಟ್ಟುವಾಗ ಅವರ ಮುಖವನ್ನೆ ಕದ್ದು ನೋಡುತ್ತಿದ್ದೆ, ಆನಂದರ ಮುಖದಲ್ಲಿ ಸಹ ನಗು ಸಂತಸ ತೇಲುತ್ತಿತ್ತು. ಅವರೂ ಸಹ ನನ್ನನ್ನು ಪೂರ್ಣ ಮನಸಿನಿಂದ ಒಪ್ಪಿದ್ದಾರೆ ಅನ್ನುವಾಗ ಎಂತಹುದೋ ನೆಮ್ಮದಿ.
ಮದುವೆಯ ಸಂಭ್ರಮದಲ್ಲಿ ಸಂಜೆ ಆರತಕ್ಷತೆ ಏರ್ಪಾಡಾಗಿತ್ತು. ಅದಕ್ಕೆ ಸಿದ್ದತೆಗಾಗಿ , ಸಂದ್ಯಾ ಹಾಗು ನಾನು ಬ್ಯೂಟಿಪಾರಲಲ್ ಗೆ ಹೊರಟೆವು. ಅವಳದೇ ಕಾರು ಅವಳಿಗೆ ಡ್ರೈವಿಂಗ್ ಚೆನ್ನಾಗಿಯೆ ಗೊತ್ತು. ಆದರೂ ಅಮ್ಮನಿಗೆ ಆತಂಕ ಮದುವೆಯ ಹುಡುಗಿ ಹೊರಗೆ ಹೋಗುತ್ತಾಳೆ ಎಂದು ಹಾಗಾಗಿ ನನ್ನ ತಮ್ಮನನ್ನು ಜೊತೆಗೆ ಕಳುಹಿಸಿದರು.
ನನಗೂ ಪ್ರಥಮ ಬಾರಿ ಪಾರ್ಲರ್ ಅನುಭವ, ಅಲ್ಲದೆ ರಿಸಿಪ್ಷನ್ ಗೆ ಸಿದ್ದವಾಗಬೇಕಾದ ಸಂಭ್ರಮ ಬೇರೆ , ಎಲ್ಲವೂ ಮುಗಿಸಿ ಹಣ ನೀಡಿ ಹೊರಡಬೇಕು, ಅಲ್ಲಿ ಹೊರಗೆ ಪೇಪರ್ ಓದುತ್ತ ಕುಳಿತ್ತದ್ದ ಯುವತಿ ನಮ್ಮ ಕಡೆ ಎದ್ದು ಬಂದಳು,
'ಈ ಹೇರ್‍ ಸ್ಟೈಲ್ ನಿಮಗೆ ಚೆನ್ನಾಗಿ ಒಪ್ಪುತ್ತದೆ ' ನಗುತ್ತ ಅಂದಳು
ನಾನು ಸಂತಸದಿಂದ  ಥ್ಯಾಂಕ್ಸ್ ಎಂದೆ
ಆದರೆ ಈ ಒಡವೆಗಳೆಲ್ಲ , ಅಷ್ಟೊಂದು ಸರಿ ಕಾಣುತ್ತಿಲ್ಲ ಎಂದಳು
ನನಗೂ ಒಡವೆಗಳೆಂದರೆ ಇಷ್ಟವೇನಿಲ್ಲ, ಆದರೆ ಈ ದಿನಕ್ಕಾಗಿ ಹಾಕಿದ್ದೇನೆ ಎಂದೆ
ಅದಕ್ಕವಳು
ಗೊತ್ತಿದೆ, ಈ ದಿನ ನಿಮ್ಮ ಮದುವೆ, ಬೆಳಗೋಡು ನಲ್ಲಿ ನಡೆಯುತ್ತಿದೆ, ನಿಮ್ಮ ಗಂಡನ ಹೆಸರು ಆನಂದ ಎಂದು
ನಾನು ಸ್ವಲ್ಪ ಆಶ್ಚರ್ಯಪಟ್ಟೆ
ಓ ನಿಮಗೆ ಅವರು ಮೊದಲೆ ಪರಿಚಿತರ, ಸ್ನೇಹಿತರ ?
ಆಕೆ ನಗುತ್ತಿದ್ದಳು
’ ಹೌದು ಪರಿಚಿತರು , ಅಂದರೆ ತೀರಾನೆ ಪರಿಚಿತರು, ಎಷ್ಟು ಅಂದರೆ ನೋಡಿ ಇಷ್ಟೆ, ನಾನು ಅವರು ಕೆ ಅರ್ ಎಸ್ ಎಂದೆಲ್ಲ ಸುತ್ತಡಿದ್ದೇವು. ಆದರೆ ಕಡೆಯಲ್ಲಿ ನನ್ನನ್ನು ನಿರಾಕರಿಸಿಬಿಟ್ಟರು'
ಆಕೆ ಒಂದಿಷ್ಟು ಪೋಟೋಗಳನ್ನು ಕೊಟ್ಟರು , ಆಕೆ ಹೇಳಿದ್ದು ನಿಜವಿತ್ತು ಆನಂದ ಹಾಗು ಆಕೆ ಸಂಭ್ರಮದಿಂದ ಅತ್ಯಂತ ಆಪ್ತವಾಗಿ ತೆಗಿಸಿರುವ ಪೋಟೋಗಳು. ಕೆ ಅರ್ ಎಸ್ ಪೋಟೋಗಳಂತು ಅವರಿಬ್ಬರ ನಡುವಿನ ಆತ್ಮೀಯತೆ ಸಾರುತ್ತಿದ್ದವು.
ಈಗ ನಂಬದೆ ಬೇರೆ ದಾರಿ ಇರಲಿಲ್ಲ,
ಸರಿ ನೀನು ಅಷ್ಟೊಂದು ಆತ್ಮೀಯಳು, ಅನ್ನುವದಾದರೆ ಅವರನ್ನು ಏಕೆ ಮದುವೆ ಆಗಲಿಲ್ಲ, ಮದುವೆಗೆ ಮೊದಲೆ ಬಂದು ನನ್ನನ್ನೇಕೆ ಕಾಣಲಿಲ್ಲ.
ಅವಳು ನಗುತ್ತಿದ್ದಳು,
ನೀನು ಬುದ್ದಿವಂತೆ ಗ್ರಹಿಸಿಬಿಟ್ಟೆ, ನಿಜ , ನನಗೆ ಈಗಲೂ ಆನಂದನನ್ನು ಮದುವೆ ಆಗಬೇಕೆನ್ನುವ ಹಂಬಲವೇನಿಲ್ಲ, ಆದರೆ ಈ ಪ್ರಪಂಚದಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಬಾರದಲ್ಲವೆ. ನನ್ನೊಡನೆ ಸಾಕಷ್ಟು ಸುತ್ತಾಡಿದ ಕಡೆಯಲ್ಲಿ ಮದುವೆ ನಿರಾಕರಿಸಿಬಿಟ್ಟ ಅದಕ್ಕಾಗಿ ನನಗೆ ಪ್ರತಿಫಲಬೇಡವೇ ?
ನನಗೆ ಆಶ್ಚರ್ಯವಾಗಿತ್ತು
ಪ್ರತಿಫಲವೇ ? ಹೋಗಲಿ ನಿನ್ನನ್ನು ಅವನು ಮದುವೆಗೆ ನಿರಾಕರಿಸಲು ಕಾರಣವೇನು ?
ಅವಳು ನಗುತ್ತಿದಳು
ನಾನು ಬೇರೆಯವರ ಜೊತೆ ಸುತ್ತುವುದು ಅವನಿಗೆ ಇಷ್ಟವಾಗಲಿಲ್ಲ
ನನಗೆ ಸ್ವಲ್ಪ ಅರ್ಥವಾಗುತ್ತಿತ್ತು,
ಸರಿ ಬಿಡು, ಆದರೆ ಈಗ ನೀನು ಬಂದಿರುವ ಉದ್ದೇಶವೇನು?
ನಗುತ್ತ ನುಡಿದಳು
ಇನ್ನೂ ಅರ್ಥವಾಗಲಿಲ್ಲವೆ, ಅತ್ಯಂತ ಸರಳ, ಈಗ ನಿನ್ನ ಮೈಮೇಲೆ ಇರುವ ಎಲ್ಲ ಒಡವೆಗಳನ್ನು ನಿನ್ನ ಬಳಿ ಇರುವ ಹಣವನ್ನು ತೆಗೆದುಕೊಡುತ್ತೀಯ ಅಷ್ಟೆ
ಜೊತೆಯಲ್ಲಿದ್ದ ಸಂದ್ಯಾಳಿಗೆ ಕೋಪ ಏರುತ್ತಿತ್ತು
ನಿನಗೆ ಪೋಲಿಸ ಸ್ಟೇಷನ್ ತೋರಿಸಬೇಕಾ, ? ಸುಮ್ಮನೆ ಹೊರಟುಬಿಡು, ಇಲ್ಲದಿದ್ದರೆ ಬ್ಲಾಕ್ ಮೈಲ್ ಎಂದು ಪೋಲಿಸರಿಗೆ ಕಂಪ್ಲೇಟ್ ಮಾಡುತ್ತೀವಿ
ಅವಳು ನಕ್ಕಳು
ಸಂದ್ಯಾ ಅಲ್ಲವೇ ನೀನು , ಇವಳ ಸ್ನೇಹಿತೆ, ಪೋಲಿಸರ ಹೆಸರು ಹೇಳುತ್ತೀಯ, ಅವರು ನಮಗೆ ದಿನವೂ ಅವರ ಒಡನಾಟ ಇರುವುದೆ. ಇಲ್ಲಿಯ ಸ್ಟೇಷನಿನ್ನ ಎಸ್ ಐ ಅಂತೂ ನನಗೆ ಆತ್ಮೀಯ
ನಾವಿಬ್ಬರು ನಿರುತ್ತರ
ಆಕೆ ಹೇಳಿದಳು ನಿಮಗೆ ಹಣ ಒಡವೆ ಕೊಡದೆ ಬೇರೆ ದಾರಿಯಿಲ್ಲ ಯೋಚಿಸಿ
ಸಂದ್ಯಾ ನನ್ನ ಪರವಾಗಿ ಅನ್ನುವಂತೆ ದಬಾಯಿಸುತ್ತಿದ್ದಳು
ಒಂದು ವೇಳೆ ನಾವು ಒಡವೆ ಕೊಡಲಿಲ್ಲ ಅಂದರೆ ಏನುಮಾಡುತ್ತೀಯ
ಈಗ ನನಗೆ ಅರ್ಥವಾಗಿತ್ತು, ಇವಳಿಂದ ತಪ್ಪಿಸಿಹೋಗುವುದು ಸ್ವಲ್ಪ ಕಷ್ಟಾನೆ ಎಂದು,
ತುಂಬಾನೆ ಸಿಂಪಲ್, ಮದುವೆ ಮನೆಗೆ ಬರುವೆ , ರಿಸಿಪ್ಷನ್ ಅಂದರೆ ಸಾವಿರ ಜನರಾದರು ಸೇರಿರುತ್ತಾರೆ, ಅಲ್ಲಿ ನಿನ್ನ ಗಂಡನ ಮರ್ಯಾದೆ ಹೋಗುವುದು ನಿನಗೆ ಬೇಕಾ ? ಆನಂದನ ಹೆಂಡತಿಯಾಗಿ ಅವನ ಮರ್ಯಾದೆ ಕಾಪಾಡುವುದು ನಿನ್ನ ಕರ್ತ್ಯವ್ಯ ಅಲ್ಲವಾ
ಸಂದ್ಯಾ ನುಡಿದಳು ಅವಳ ಜೊತೆ, … , ನನ್ನನ್ನು ನೋಡುತ್ತ,
ನಾವು ಒಡವೆ ಹಣ ಎಲ್ಲಾ ಕೊಟ್ಟ ಮೇಲು, ನೀನು ಸುಮ್ಮನಿರುವೆ ಎಂದು ಗ್ಯಾರಂಟಿ ಏನು, ನಿನ್ನ ಬಳಿ ಇರುವ ನೆಗೆಟೀವಿ ನಿಂದ ಮತ್ತಷ್ಟು ಪೋಟೋ ಪ್ರಿಂಟ್ ಹಾಕಿಸಬಹುದು, ಮತ್ತೆ ಮತ್ತೆ ಬರಬಹುದು
ಅವಳು ನಕ್ಕಳು
ಈಗ ನೀವು ಸರಿಯಾಗಿ ವ್ಯವಹಾರಕ್ಕೆ ಇಳಿದಿರಿ,
ನಾನು ಆನಂದ ಮೈಸೂರಿಗೆ ಹೋದಾಗಿನ ಪೋಟೋಗಳು ಇವೆಲ್ಲ. ಕೆಅರ್ ಎಸ್ ನಲ್ಲಿ ಯಾರೋ ಪೋಟೋಗ್ರಾಫರ ತೆಗಿದಿದ್ದು, ಪಾಪ ಆನಂದನೆ ಹಣ ಕೊಟ್ಟಿದ್ದ. ಈ ನೆಗೆಟೀವ್ ಹಾಗು ಪೋಟೋ ಎರಡನ್ನೂ ನಿಮಗೆ ಹಿಂದಿರುಗಿಸುತ್ತೇನೆ. ನನಗೆ ಅದರಿಂದ ಏನು ಆಗಬೇಕಾಗಿಲ್ಲ. ನಾನು ಪದೇ ಪದೇ ಬಂದರೆ ನೀವು ಹಣ ಕೊಡಲ್ಲ ಅಂತ ಗೊತ್ತಿದೆ. ಇದು ಅವನಿಗೆ ಮದುವೆ ಅಲ್ಲವೇ , ರಿಸಿಪ್ಷನ್ ಅಂದರೆ ಕನಿಷ್ಠ ಸಾವಿರ ಜನ ಸೇರಿರುತ್ತಾರೆ ಅವರ ಎದುರಿಗೆ ನನ್ನ ಕೂಗಾಟಕ್ಕೂ ಒಂದು ಬೆಲೆ ಇರುತ್ತದೆ.
ನನಗೆ ಬೇರೆ ಯಾವ ದಾರಿಯೂ ಇರಲಿಲ್ಲ,
ಒಡವೆ ಹಾಗು ಹಣ ಎಲ್ಲ ತೆಗೆದುಕೊಟ್ಟೆ, ಸಂದ್ಯಾ ಬಳಿ ಇದ್ದ ಹಣವನ್ನು ಸಹ ಅವಳೂ ಕಿತ್ತುಕೊಂಡಳು. ತಾಳಿ ಮಾತ್ರ ಉಳಿಸಿದಳು. ನಂತರ ಮದುವೆ ಮನೆಗೆ ಹಿಂದಿರುಗಿದರೆ, ಅಮ್ಮ ಅಪ್ಪ ಎಲ್ಲರೂ ಕೇಳೋರೆ ಒಡವೆ ಎಲ್ಲ ಏನಾಯಿತು ಎಂದು. ಯಾರಿಗು ತಿಳಿಸುವ ಹಾಗಿಲ್ಲ, ಆನಂದನ ಮರ್ಯಾದೆ ಪ್ರಶ್ನೆ, ಹಾಗಾಗಿ, ಪಾರ್ಲರ್ ನಲ್ಲಿ ಅಲಂಕಾರ ಮಾಡುವಾಗ ಒಡವೆ ತೆಗೆದು ಇಟ್ಟಿದ್ದೆ, ಅಲ್ಲಿ ಕಳೆದುಹೋಯಿತು ಅಂತ ತಿಳಿಸಿದೆ. ಸಂದ್ಯಾ ಸಹ ಸಪ್ಪೆ ಮುಖ ಧರಿಸಿ ನಿಂತಳು. ಬೇಜವಾಬ್ಧಾರಿ ಹುಡುಗಿ ಎಂದು ಮದುವೆ ದಿನ ಸಹ ಎಲ್ಲರ ಕೈಲಿ ಅನ್ನಿಸಿಕೊಳ್ಳಬೇಕಾಯಿತು ನನ್ನ ಕಾರಣದಿಂದ ಸಂದ್ಯಾಳಿಗೆ ಸಹ ಮಾತು ಕೇಳುವ ದುರಾದೃಷ್ಟ. ಈ ವಿಷಯ ಅದೇಕೊ ಆನಂದನಿಗೆ ಯಾವತ್ತು ತಿಳಿಸಲೇ ಇಲ್ಲ
ಜ್ಯೋತಿ ಮಾತು ನಿಲ್ಲಿಸಿದಳು. ಆನಂದ ಆಶ್ಚರ್ಯಪಟ್ಟವನಂತಿದ್ದ, ಅವನು ಅಪರಾದಿ ಮನೋಭಾವದ ಮುಖದೊಂದಿಗೆ ಸಂದ್ಯಾಳ ಕಣ್ಣುಮುಚ್ಚಿದ್ದ ಮುಖ ನೋಡುತ್ತಿದ್ದ . ಅವನು ತುಟಿಯೊಳಗೆ ಮಾತನಾಡಿಕೊಂಡಿದ್ದು ಆ ನಿಶ್ಯಬ್ಧದಲ್ಲಿ ನನಗೆ ಸ್ವಷ್ಟವಾಗಿ ಕೇಳಿಸಿತು.
ಕಲ್ಪನ….
ನನಗೆ ಈಗ ಗೊಂದಲ , ಜ್ಯೋತಿಯನ್ನು ಮುಂದೆ ಏನು ಕೇಳುವದೆಂಬ ಗೊಂದಲ, ಕೇಳಿದೆ
ಆನಂದನಿಗೆ ಈ ವಿಷಯ ಏಕೆ ತಿಳಿಸಲಿಲ್ಲ ?
ತಿಳಿಸುವ ಅಗತ್ಯವಿದೆ ಎಂದು ಅನ್ನಿಸಲಿಲ್ಲ, ಅವನು ಎಂದೋ ಮಾಡಿದ್ದ ತಪ್ಪು ಅದು, ಅದನ್ನು ಸರಿಪಡಿಸಿಕೊಂಡಿದ್ದಾನೆ ಅನ್ನುವಾಗ ಏಕೆ ಕೆದಕಬೇಕು ಎಂದು ಸುಮ್ಮನಾದೆ. ಗಂಡನಿಗೆ ಎಲ್ಲ ವಿಷಯವನ್ನು ಹೇಳಲು ಆಗಲ್ಲ…..
ಅವಳು ಮತ್ತೆ ಅದೇನೊ ನೆನಪಿಸಿಕೊಳ್ಳುವಂತೆ ತೋರಿದಳು.
ನನಗೆ ಗಾಭರಿ ಅನ್ನಿಸುತ್ತಿತ್ತು, ಹೆಂಗಸರ ಮನದಲ್ಲಿ ಅದೇನು ಗುಟ್ಟುಗಳು ಇರುತ್ತವೋ. ಅದ್ಯಾರು ಮೂರ್ಖರು ಹೇಳಿದ್ದಾರೋ ಹೆಂಗಸರ ಬಾಯಲ್ಲಿ ಗುಟ್ಟು ಉಳಿಯುವದಿಲ್ಲ ಎಂದು. ಇಲ್ಲಿ ನೋಡಿದರೆ ಎಂತಹ ಗುಟ್ಟಿನ ವಿಷಯಗಳೆಲ್ಲ ಹೊರಬರುತ್ತಿದೆಯಲ್ಲ ಅನ್ನಿಸಿತು.
ಅಲ್ಲದೇ ಜ್ಯೋತಿ ನೆನಪಿನ ಈ ಪಯಣದಲ್ಲಿ ಸಿದ್ದವಾಗುವಾಗ ಇದ್ದ ಮನಸ್ಥಿತಿಯಲ್ಲಿ ಈಗ ಇರುವಂತಿಲ್ಲ. ಅವಳನ್ನು ಇದು ಹೇಳು ಇದು ಹೇಳಬೇಡ ಎನ್ನುವ ಸ್ಥಿತಿಯಲ್ಲಿ ನಾವ್ಯಾರು ಇಲ್ಲ. ಎಂತದೋ ಒಂದು ಸಿಕ್ಕಿನಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದೇವೆ
ಈಗ ಸಂದ್ಯಾ ಸಹ ಕುತೂಹಲದಿಂದ ನೋಡುತ್ತಿದ್ದಳು, . ಆನಂದನ ಮುಖ ನಾನು ನೋಡಿದೆ, ಅವನು ತಡೆಯಬೇಡಿ, ಜ್ಯೋತಿ ಮುಂದುವರೆಸಲಿ ಅನ್ನುವಂತೆ ಸನ್ನೆ ಮಾಡಿದ.
ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು …………

Monday, April 17, 2017

ನೆನಪಿನ ಪಯಣ ಬಾಗ – 2

ನೆನಪಿನ ಪಯಣ  ಬಾಗ – 2


ನೆನಪಿನ ಪಯಣದ ಪ್ರಯೋಗ ಪ್ರಾರಂಭ:
 ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ. ಹಾಗಾಗಿ ನಮ್ಮಗಳದೆ ಸಾಮ್ರಾಜ್ಯ.
ಶ್ರೀನಿವಾಸಮೂರ್ತಿಗಳು ಮಾತ್ರ ಈಗಲೂ ಆತಂಕದಲ್ಲಿದ್ದರು
ರೂಮಿನಲ್ಲಿ ಒಂದು ದೀಪ ಬಿಟ್ಟು ಎಲ್ಲ ದೀಪವನ್ನು ಆನಂದ ಆರಿಸಿದ. ಜ್ಯೋತಿ ಮಾತ್ರ ನಗುತ್ತಿದ್ದಳು. ಅವಳಿಗೆ ಎಂತದೊ ಮಕ್ಕಳ ಆಟದಂತೆ ತೋರುತ್ತಿತ್ತು ಅನ್ನಿಸುತ್ತೆ.
ಜ್ಯೋತಿ ಆರಾಮವಾಗಿ ಅನ್ನುವಂತೆ ಮಂಚ ಹತ್ತಿ ಮಲಗಿದ್ದಳು. ನಾನು ಆನಂದ ಜ್ಯೋತಿಯ ಮುಂದೆ ಕುರ್ಚಿಹಾಕಿ ಕುಳಿತೆವು.
ಸಂದ್ಯಾ, ಆರ್ಯ, ಉಷಾ ಹಾಗು ಶ್ರೀನಿವಾಸ ಮೂರ್ತಿಗಳು ಜ್ಯೋತಿಯ ತಲೆಯ ಬಾಗದಲ್ಲಿ ಮಂಚದ ಹಿಂಬಾಗದಲ್ಲಿದ್ದ ಸೋಫದಲ್ಲಿ ಕುಳಿತರು. ಜ್ಯೋತಿಗೆ ನಾನು ಮತ್ತು ಆನಂದ ಮಾತ್ರ ಕಾಣುತ್ತಿದ್ದೆವು.
ಆನಂದ ನುಡಿದ, ನೋಡಪ್ಪ, ನಿನಗೆ ಹೇಗೆ ಬೇಕೊ ಹಾಗೆ ಅವಳಿಗೆ ನೆನಪಿಸಿಕೊಳ್ಳಲು ಹೇಳು, ನಾನು ಪಕ್ಕದಲ್ಲಿರುತ್ತೇನೆ ಬಾಯಿ ಹಾಕುವದಿಲ್ಲ. ನಾವ್ಯಾರು ನಡುವೆ ಮಾತನಾಡುವದಿಲ್ಲ.
<ನಮಗೆ ಅರಿವಿಲ್ಲದೆ, ಪ್ರಕೃತಿಯು ತೋಡಿದ ನೆನಪು ಎನ್ನುವ ಆಳ ಪ್ರಪಾತಕ್ಕೆ ಬೀಳಲು ನಾವು ಸಜ್ಜಾಗುತ್ತಿದ್ದೆವು. ಮೆದುಳಿನ ಶಕ್ತಿಯ ಅರಿವಿಲ್ಲದ ನಮ್ಮಂತ ಸಾಮಾನ್ಯರಿಂದ ಮೆದುಳಿನ ಶಕ್ತಿಯ ಮೇಲಿನ ಪರೀಕ್ಷೆ! >
ನಾನು ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಮಂಚದ ಮೇಲೆ ಮಲಗಿದ್ದ ಜ್ಯೋತಿ ನಗುತ್ತ ನನ್ನ ಕಡೆ ನೋಡುತ್ತಿದ್ದಳು. ನಾನು ನಗುತ್ತ ಅವಳ ಕಡೆ ನೋಡಿ ನುಡಿದೆ.
ಜ್ಯೋತಿ, ನಾವೀಗ ಸುಮ್ಮನೆ ಕುತೂಹಲಕ್ಕೆ ಒಂದು ಪ್ರಯೋಗ ನಡೆಸಿದ್ದೇವೆ. ನೀವು ಆರಾಮವಾಗಿ ಮಲಗಿ. ಆದರೆ ಒಂದು ನೆನಪಿಡಿ ನೀವು ಯಾವಾಗಲು ನಿದ್ದೆ ಮಾಡುವಂತಿಲ್ಲ. ಇನ್ನು ತಂಪಾಗಿದೆ ಎಂದು ನಿದ್ದೆ ಹೊಡೆದುಬಿಟ್ಟೀರಿ ಎಂದೆ
ಅವಳ ನಗು ರೂಮನ್ನೆಲ್ಲ ವ್ಯಾಪಿಸಿತು. ನಂತರ ಆಗಲಿ ಅನ್ನುವಂತೆ ತಲೆ ಆಡಿಸಿದಳು
ಜ್ಯೋತಿ ಮೊದಲು ನಿಮ್ಮ ಮನಸ್ಸಿನಲ್ಲಿ ಯಾವುದಾದರು ಆತಂಕವಿದ್ದರೆ ಅದನ್ನು ತೆಗೆದುಬಿಡಿ. ನಾವೀಗ ನಿಮ್ಮ ಮೇಲೆ ಪ್ರಯೋಗವನ್ನೇನು ನಡೆಸುತ್ತಿಲ್ಲ. ನಾನು ಮಲಗಿ ಬಹಳ ಸಮಯವಾದರು ನಿದ್ರೆ ಬಾರದೇ ಹೋದಾಗ, ನಿದ್ರೆ ಬರಲೆಂದು  ಹಿಂದಿನದೆಲ್ಲ ನೆನಪಿಸಿಕೊಳ್ಳುತ್ತ ಹೋಗುತ್ತಿದ್ದೆ. ಸ್ವಲ್ಪ ಕಾಲದಲ್ಲಿಯೆ ನಿದ್ರೆ ಹತ್ತಿಬಿಡುತ್ತಿತ್ತು. ನೀವು ಎಷ್ಟು ಕಾಲದ ಹಿಂದಿನ ಘಟನೆಗಳನ್ನು , ಸಂದರ್ಭಗಳನ್ನು ನೆನೆಪಿಸಿಕೊಳ್ಳುತ್ತ ಹೋಗುತ್ತೀರಿ ಎಂದು ನೋಡುವುದು ಅಷ್ಟೆ ಈಗ ಉದ್ದೇಶ. ನಿಮಗೆ ನಾನು ಯಾವ ಪ್ರಶ್ನೆಗಳನ್ನು ಹಾಕುವದಿಲ್ಲ. ಸುಮ್ಮನೆ ಸಲಹೆ ಕೊಡುತ್ತ ಹೋಗುತ್ತೇನೆ ಆದೀತ?. ನೀವು ಅಷ್ಟೆ ನಿಮ್ಮ ನೆನಪಿನಲ್ಲಿ ಬರುವ ಘಟನೆಗಳನ್ನು ನಮಗೆ ತಿಳಿಸುತ್ತ ಹೋಗಿ, ಆದರೆ ಒಂದು ನೆನಪಿಡಿ ಸಾದ್ಯವಾದ ಮಟ್ಟಿಗು ನಿಮ್ಮ ನೆನಪಿನ ಪಯಣ ಹಿಮ್ಮುಖವಾಗಿ ಸಾಗುತ್ತದೆ. ಒಮ್ಮೆ ಹಿಂದೆ ಮತ್ತೆ ಒಮ್ಮೆ ಮುಂದೆ ಎಂದು ಓಡಾಟ ಬೇಡ ಸಿದ್ದವಾಗಿ  ಎಂದೆ
ಆಗಲಿ ನನಗೆ ಯಾವ ಆತಂಕವು ಇಲ್ಲ, ನೀವು ಅಪರಿಚಿತರು ಎಂದು ಸಹ ಅನ್ನಿಸುವದಿಲ್ಲ. I am feeling comfortable , ಮೇಲಾಗಿ ಇದು ನಾನು ದಿನವೂ ಮಲಗುವ ಜಾಗ ಯಾವ ಕಿರಿಕಿರಿಯೂ ಇಲ್ಲ ಎಂದಳು ಜ್ಯೋತಿ
ಸರಿ ಹಾಗಿದ್ದರೆ, ನಿಮ್ಮ ಮನಸನ್ನು ಕೇಂದ್ರಿಕರಿಸಲು ಸಹಾಯವಾಗಲಿ, ಒಂದು ಕ್ಷಣ ಕಣ್ಣು ಮುಚ್ಚಿರಿ ಎಂದೆ.
ಆಕೆ ನಗುತ್ತ ಕಣ್ಣು ಮುಚ್ಚಿ ಮಲಗಿದರು. ಆಕೆಯ ಮುಖ ಗಮನಿಸಿದೆ. ಯಾವುದೇ ಅಳುಕಿಲ್ಲ.
ಪಕ್ಕದಲ್ಲಿ ಆನಂದ ಏನೋ ಮಾಡುತ್ತಿದ್ದ. ಗಮನಿಸಿದರೆ ಅವನು ತನ್ನ ಮೊಬೈಲ್ ತೆಗೆದು ಅದನ್ನು ವಾಯ್ಸ್ ರೆಕಾರ್ಡಿಂಗ್ ಹಾಕಿ ಹಾಸಿಗೆಯ ಮೇಲೆ ಜ್ಯೋತಿ ಮಲಗಿದ್ದ ದಿಂಬಿನ ಪಕ್ಕ ಇಡುತ್ತಿದ್ದ. ನಾನು ಅವನ ಮುಖ ನೋಡಿದರೆ, ಮಾತನಾಡಬೇಡಿ ಎನ್ನುವಂತೆ ತನ್ನ ತೋರು ಬೆರಳನ್ನು ಅವನ ತುಟಿಯ ಮೇಲಿಟ್ಟು ಅಭಿನಯಿಸಿದ. ಇದು ಬಹುಶಃ ಜ್ಯೋತಿಯ ಮಾತನ್ನೆಲ್ಲ ರೆಕಾರ್ಡ್ ಮಾಡಿ ಅವಳು ಮೇಲೆದ್ದ ನಂತರ ಅವಳಿಗೆ ಕೇಳಿಸಿ ಗೋಳಾಡಿಸಲು ಇರಬಹುದು ಎಂದು ಕೊಂಡು, ನನಗೂ ನಗು ಬಂದಿತು
ಜ್ಯೋತಿ , ಈಗ ಸುಮ್ಮನೆ ಈ ದಿನದ ಬೆಳಗಿನಿಂದ ಸಂಜೆಯವರೆಗೂ ನಡೆದ ಘಟನೆಗಳನ್ನು ಸುಮ್ಮನೆ ನೆನಪಿಸಿಕೊಳ್ಳಿ. ……..
ನಾನು ನಿಧಾನವಾದ ದ್ವನಿಯಲ್ಲಿ ಹೇಳಿದೆ,
ಹಾಗೆ ಅದನ್ನು ನಮಗೆ ಹೇಳುತ್ತ ಹೋಗಿ.
ಜ್ಯೋತಿ ನುಡಿದಳು
ಆಗಲಿ ಬಿಡಿ ಅದರಲ್ಲೇನು ವಿಶೇಷವಿಲ್ಲ. ಈದಿನವೂ  ಎಂದಿನಂತೆ ಆರುಘಂಟೆಗೆ ಎದ್ದು, ಮುಖತೊಳೆದು, ಹೋಗಿ ಹಾಲು ತಂದೆ. ಈ ಮನುಷ್ಯ , ನನ್ನ ಗಂಡ ಆನಂದ ,  ಎಮ್ಮೆಯ ತರ ಮಲಗೇ ಇದ್ದರು
(… ಅವಳ ನಗು) .
ನಂತರ ಕಾಫಿ ಮಾಡಿದೆ, ಕಾಫಿಯ ವಾಸನೆ ತಾಗುತ್ತಲೆ ಇವರು ಎದ್ದು ಕುಳಿತರು. ಕಾಫಿಮುಗಿಸಿ, ಬಾಗಿಲ ಕಸ ತೆಗೆದು, ನೀರು ಹಾಕಿ ರಂಗೋಲಿ ಮುಗಿಸುವಾಗ, ಪೇಪರ್ ಬಂದಿತ್ತು. ಪೇಪರ್ ನೋಡುತ್ತ ಕುಳಿತೆ. ಇವರು ಎಂದಿನಂತೆ ಮೊಬೈಲ್ ಹಿಡಿದು ವಾಟ್ಸಪ್ ಪೇಸ್ ಬುಕ್ ಎಂದು ಮುಳುಗಿದ್ದರು. ಈ ದಿನ ಬಾನುವಾರ ಬೇರೆ ಆಪೀಸಿಗೆ ಹೋಗುವ ಆತುರವು ಇಲ್ಲ . ಎಲ್ಲವೂ ನಿಧಾನವಾಗಿತ್ತು. ಅಷ್ಟರಲ್ಲಿ ಶಶಾಂಕನ ಪೋನ್ ಬಂದಿತು, ಅವನು ಊಟಿಯಲ್ಲಿದ್ದಾನಂತೆ ಸ್ನೇಹಿತರ ಜೊತೆ. ಇಂದು ರಾತ್ರಿಯೋ, ನಾಳೆ ಬೆಳಗ್ಗೆಯೋ ಬರಬಹುದು. ಸರಿ ಸ್ನಾನ ತಿಂಡಿ ಊಟ ಅಂತ ಎಲ್ಲ ಮುಗಿಸುವಾಗ ನೀವೆಲ್ಲ ಬಂದಿರಿ ಮಾತನಾಡುತ್ತ ಕುಳಿತೆವು. ಮರೆತೆ ಬೆಳಗ್ಗೆ ಒಂದು ಸಿನಿಮಾ ನೋಡಿದೆ ಅಕಾಶ್ ಎಂದು ಪುನೀತ್ ರಾಜ್ ಕುಮಾರದು, ಇವರು ಶತದಿನೋತ್ಸವ ಎಂದು ರೇಗಿಸುತ್ತಿದ್ದರು ನೂರನೇ ಸಾರಿ ಅದೇ ಸಿನಿಮಾ ನೋಡುತ್ತಿರುವೆ ಎಂದು  ….., ಬಹುಶಃ .. ಅಷ್ಟೆ ಅನ್ನಿಸುತ್ತೆ.
ಜ್ಯೋತಿ ಮಾತು ನಿಲ್ಲಿಸಿದಳು.
ಅಲ್ಲೆಲ್ಲ ಒಂದು ಮೌನ. ಎಲ್ಲರ ಮುಖ ನೋಡಿದೆ. ಶ್ರೀನಿವಾಸಮೂರ್ತಿಗಳು, ಆರ್ಯ ಅವನ ಪತ್ನಿ ಉಷಾ , ಸಂದ್ಯಾ ಎಲ್ಲರೂ ಮುಂದೆ ಏನಾಗಬಹುದು ಎನ್ನುವ ಕುತೂಹಲದಲ್ಲಿದ್ದರು. ಆನಂದ ಸುಮ್ಮನೆ ಕುಳಿತಿದ್ದ.
ನಾನು
ಸರಿ ಈಗ ನಿನ್ನೆ ಬೆಳಗ್ಗೆಯಿಂದ ಏನಾಯಿತು ಹೇಳಬಲ್ಲಿರಾ ?
ನಿನ್ನೆ ಶನಿವಾರ, ಇವರು ಸ್ವಲ್ಪ ಬೇಗ ಎದ್ದು ಸ್ನಾನ ಮುಗಿಸಿದ್ದರು, ಶನಿವಾರದ ಪ್ರಯುಕ್ತ ದೇವಾಲಯಕ್ಕೆ ಎಂದು ಹೋಗವರಲ್ಲ. ಮಠಕ್ಕೆ ಹೋಗಿ ಬಂದರು, ಇವರು ಬರುವಾಗ ನಾನು ದೋಸೆ ಮಾಡಿದ್ದೆ. ಅವರು ಈ ದಿನ ತಿಂಡಿಯ ಡಭ್ಭಿ ಬೇಡ ಎಂದರು. ಆಫೀಸಿಗೆ ಹೊರಟರು.  ನಾನು ಮಧ್ಯಾಹ್ನವೂ ದೋಸೆಯನ್ನೆ ತಿಂದೆ. ಸ್ವಲ್ಪ ಮಲಗಿದ್ದೆ. ನಂತರ ಸಂಜೆ ರಸ್ತೆಯಲ್ಲಿ ಸ್ನೇಹಿತೆಯರು ಬಂದಿದರು. ವಾಕಿಂಗ್ ಹೋಗಿ ಬಂದೆವು ಪಾರ್ಕ್ ತನಕ. ಅಷ್ಟರಲ್ಲಿ ಗ್ಯಾಸ್ ನವನು ಬಂದು ಹೊರಟು ಹೋಗಿದ್ದ. ಸಂಜೆ ಇವರು ಆಪೀಸಿನಿಂದ ಬಂದರು. ಕಾಫಿ ಮಾಡಿಕೊಟ್ಟೆ. ನಂತರ ಟೀವಿ ನೋಡಿದೆ. ಮಕ್ಕಳ ಕಾರ್ಯಕ್ರಮ ಒಂದುಬರುತ್ತಿದೆಯಲ್ಲ ನಾಟಕದ್ದು ಅದನ್ನು , ರಾತ್ರಿ ಊಟ ಬೇಡ ಎಂದೆ ಚಪಾತಿ ಮಾಡಿದ್ದೆ. ಇವರು ಚಪಾತಿ ನಂತರ ಚೆನ್ನಾಗಿ ಮಾವಿನಹಣ್ಣು ಇಳಿಸಿದರು. ಹತ್ತು ವರೆಗೆ ಮಲಗಿಬಿಟ್ಟೆವು ಅಷ್ಟೆ
ಸರಿ ಈಗ ನೀವು ಮತ್ತು ಹಿಂದೆ ಹೋಗಬಲ್ಲಿರಾ, ನಿಮಗೆ ಯಾವ ದಿನವೋ ಅಲ್ಲಿಗೆ ನಿಮ್ಮ ಮನಸಿಗೆ ಏನು ನೆನಪು ಬರುವುದೋ ಅದು.
ಕ್ಷಣಮೌನ….. ಜ್ಯೋತಿ ಪ್ರಾರಂಭಿಸಿದಳು.
ಕಳೆದ ಬಾನುವಾರ ಮಗ ಶಶಾಂಕ ಇದ್ದಕ್ಕಿದಂತೆ ಬ್ಯಾಗು ಹಿಡಿದು ಹೊರಟುನಿಂತ ( ಅವಳ ದ್ವನಿ ಸ್ವಲ್ಪ ಬದಲಾಗಿತ್ತು ).

ಅವನು ಟೂರ್ ಎಂದು ಹೋಗುವುದು ಸಹ ನಮಗೆ ಮೊದಲೇ ಗೊತ್ತಿರಲಿಲ್ಲ. ಎಲ್ಲವೂ ಏರ್ಪಾಡು ಮಾಡಿಕೊಂಡು ಕಡೆಯ ಗಳಿಗೆಯಲ್ಲಿ ಹೊರಡುವಾಗ ನನಗೆ ತಿಳಿಸಿದ. ನಾನು ಆನಂದ್ ಗೆ ಹೇಳಿದರೆ, ಅವರು ನೀವಿಬ್ಬರು ಮೊದಲೇ ನಿರ್ಧರಮಾಡಿರುತ್ತೀರಿ ನನಗೆ ಏನು ತಿಳಿಸುವದಿಲ್ಲ ಅಂತ ಕೂಗಾಡಿದರು. ಅವರಿಗೆ ಹೇಳಿದರೂ ನಂಬುವದಿಲ್ಲ. ಶಶಾಂಕ ಈ ವಯಸಿನಲ್ಲಿ ಅವನ ವರ್ತನೆ ನೋಡುವಾಗ ಭಯವಾಗುತ್ತೆ. ಅಪ್ಪ ಅಮ್ಮ ಅವನಿಗೆ ಲೆಕ್ಕವೇ ಇಲ್ಲವೇನೊಎನ್ನುವಂತೆ ವರ್ತಿಸುತ್ತಾನೆ.
ನಾನು ಕೇಳಿದರೆ ನನ್ನ ಮೇಲೆ ಕೂಗಾಡಿದ. ಎಲ್ಲ ಮನೆಯಲ್ಲಿ ನೋಡಿ ಬನ್ನಿ ಇಲ್ಲಿ ನನಗೆ ಯಾವ ಸ್ವಾತಂತ್ರ್ಯವೂ ಇಲ್ಲ ಅನ್ನುತ್ತಾನೆ. ಮೊದಲೇ ಹೇಳುವದಲ್ಲವೇನೊ ಅಂದರೆ ಮೊದಲೇ ಹೇಳಿದರೆ ನೀವು ನನಗೆ ಹೋಗಲು ಎಲ್ಲಿ ಬಿಡುತ್ತೀರಿ ಎನ್ನುವ ಉತ್ತರ. ಹಣವನ್ನು ಮನಬಂದಂತೆ ಖರ್ಚುಮಾಡಬೇಡ ಹಿಡಿತವಿರಲಿ ಎಂದು ಇವರೆಂದರೆ ನನ್ನ ಕೈಲಿ ಅನ್ನುತ್ತಾನೆ, ನಾನು ಓದು ಮುಗಿಸಿ ಕೆಲಸಕ್ಕೆ ಅಂತ ಸೇರಲಿ , ನೀವು ಖರ್ಚು ಮಾಡಿರುವ ಹಣವನ್ನೆಲ್ಲ ಲೆಕ್ಕ ಹೇಳಿ,  ವಾಪಸ್ಸು ಬಿಸಾಕುತ್ತೇನೆ ಎನ್ನುತ್ತಾನೆ. ಯಾವ ಮಾತನ್ನು ಅರ್ಥ ಮಾಡಿಕೊಳ್ಳುವದಿಲ್ಲ. ಅವನು ಹೊರಡುವಾಗ ಅಂದು ಹೋದ ಮಾತು ನನ್ನನ್ನು ಒಂದು ವಾರವಾದರು ಕೊರೆಯುತ್ತಿದೆ.
'ನಾವು ಹೆತ್ತು ಹೊತ್ತು ಸಾಕುವದಕ್ಕೆ, ನಮ್ಮ ಶ್ರಮಕ್ಕೆ ಯಾವ ಅರ್ಥವೂ ಇಲ್ಲವೇನೊ ' ಅಂದರೆ
'ಅದರಲ್ಲಿ ಏನು ವಿಶೇಷವಿದೆ, ಎಲ್ಲ ಅಪ್ಪ ಅಮ್ಮಂದಿರೂ ಮಕ್ಕಳನ್ನು ಸಾಕುತ್ತಾರೆ ಬೆಳಸುತ್ತಾರೆ, ಬೀದಿಯಲ್ಲಿ ನೋಡಿ ನಾಯಿ ಹಂದಿಗಳು ಸಹ ತಮ್ಮ ಮರಿಯನ್ನು ಬೆಳಸುತ್ತವೆ'ಎಂದ
'ಅಂದರೆ ನಾವು ನಾಯಿ ಹಂದಿಗೆ ಸಮವೇನೊ 'ಎಂದು ಕೇಳಿದರೆ, ಅರ್ಥಮಾಡಿಕೊಳ್ಳುವುದು ಅವರವರಿಗೆ ಬಿಟ್ಟಿದ್ದು, ನನ್ನನ್ನು ಈ ಮನೆಯಲ್ಲಿ ಒಂದು ನಾಯಿಮರಿಯಂತೆ ನೋಡಿಕೊಳ್ಳುವಿರಿ,  ಅಷ್ಟೆ ಮುದ್ದಿನಿಂದ, ಅದಕ್ಕೆ ಚೈನ್ ಹಾಕಿ ಕಟ್ಟಿಹಾಕಿರುವಿರಿ, ನನಗೆ ಕಟ್ಟಿ ಹಾಕಿಲ್ಲ ಅಷ್ಟೆ ವ್ಯತ್ಯಾಸ
ಎಂದು ಗಲಾಟೆ ಮಾಡಿ ಹಣ ಪಡೆದು ಹೊರಟುಹೋದ. ಈಗಲೂ ಅವನು ಪೋನ್ ಮಾಡಿದ್ದು, ಅಕೌಂಟಿಗೆ ಹಣ ಹಾಕಿ , ಏಟಿಎಮ್ ಕಾರ್ಡಿನಲ್ಲಿ ಡ್ರಾ ಮಾಡುವೆ ಎಂದು ಹೇಳುವದಕ್ಕೇನೆ'
ನಾನು ಇದನ್ನೆಲ್ಲ ಯಾರ ಬಳಿ ಹೇಳಲಿ, ಇವರು ಕೇಳಿದರೆ ನೊಂದುಕೊಳ್ಳುತ್ತಾರೆ, ಕೂಗಾಡುತ್ತಾರೆ ಸುಮ್ಮನೆ ಮನೆಯಲ್ಲಿ ಜಗಳ .
ಜ್ಯೋತಿ ಮೌನ ತಾಳಿದಳು. ನನಗೆ ಏನು ತೋಚಲಿಲ್ಲ. ಆನಂದನ ಮುಖ ನೋಡಿದೆ. ಅವನ ಮುಖವೂ ಸಪ್ಪೆಯಾಗಿತ್ತು ಏನನ್ನೋ ಯೋಚಿಸುತ್ತಿದ್ದ.
ನಾನೀಗ ಯೋಚಿಸುತ್ತಿದ್ದೆ.
ಜ್ಯೋತಿ , ಕಣ್ಣು ಮುಚ್ಚಿ ಮಲಗಿ ಹೊರಗಿನದನ್ನೆಲ್ಲ ಮರೆತುಬಿಟ್ಟಿದ್ದಾಳೆ. ಯಾವ ಮಾತು ಆಡಬೇಕು ಆಡಬಾರದು ಎಲ್ಲರೂ ಇದ್ದೇವೆ ಅನ್ನುವ ವಿವೇಚನೆ ಸದ್ಯಕ್ಕೆ ಮರೆಯಾಗಿದೆ ಅನ್ನಿಸಿತು. ಸುತ್ತಲೂ ಕುಳಿತ ಎಲ್ಲರ ಮುಖದಲ್ಲಿ ಗೊಂದಲ ಕಾಣುತ್ತಿತ್ತು. ಈ ಕಾರ್ಯಕ್ರಮ ಇಲ್ಲಿಗೆ ನಿಂತರೆ ಸರಿಯೇನೊ. ಎಲ್ಲರ ಎದುರಿಗೆ ನಗುತ್ತ ಇರುವ ಜ್ಯೋತಿ ಮತ್ತು ಆನಂದ ಮನಸ್ಸಿನಲ್ಲಿ ಇಂತಹುದೆಲ್ಲ ದುಃಖ ತುಂಬಿಕೊಂಡಿದ್ದಾರೆ ಎಂದು ತಿಳಿದಿರಿಲಿಲ್ಲ.
'ಜ್ಯೋತಿ ಇದು ಎಲ್ಲರ ಮನೆಯಲ್ಲಿ ಇರುವ ಸಮಸ್ಯೆಗಳೆ ಅಲ್ಲವೇ. ಅಷ್ಟಕ್ಕೂ ಶಶಾಂಕ ಇನ್ನು ಚಿಕ್ಕ ಹುಡುಗ, ಯೋಚಿಸುವ ಶಕ್ತಿ ಇಲ್ಲ. ಸ್ವಲ್ಪ ದೊಡ್ಡವನಾದಂತೆ ಎಲ್ಲ ಅರ್ಥಮಾಡಿಕೊಳ್ಳುತ್ತಾನೆ. ವಯಸ್ಸಿನ ದುಡುಕುತನಕ್ಕೆ ನೀವು ಇಷ್ಟೊಂದು ಕೊರಗುವ ಅವಶ್ಯಕತೆ ಇಲ್ಲ ಅಲ್ಲವೇ ' ಎಂದೆ.
ಆನಂದನ ಮುಖ ನೋಡಿದೆ, ಮುಂದುವರೆಯಲಿ ಅನ್ನುವಂತೆ ಮುಖಭಾವ ಮಾಡಿದ. ನಾನು ಸ್ವಲ್ಪ ಹಿಂಜರಿದಿದ್ದೆ ಅವನೇ ಹಾಗೆ ಹೇಳುವಾಗ ಮುಂದುವರೆಯುವುದು ಸರಿ ಅನ್ನಿಸಿತು. ಸ್ವಲ್ಪ ಯೋಚಿಸಿ ಮತ್ತೆ ನುಡಿದೆ
ಜ್ಯೋತಿ ನಿಮ್ಮ ಮನಸಿಗೆ ಯಾವುದೇ ನೆನಪು ಬರಲಿ , ಚಿಂತೆಯಿಲ್ಲ . ಆದರೆ ಅದು ಒಂದು ಕ್ರಮದಲ್ಲಿಯೆ ಬರಲಿ . ಅಲ್ಲದೇ ನೀವು ನಿಮ್ಮ ಮನಸಿಗೆ ಬರುವ ಎಲ್ಲ ನೆನಪುಗಳನ್ನು ಹೊರಗೆ ಹೇಳುವ ಅಗತ್ಯವಿಲ್ಲ. ನಿಮ್ಮ ನೆನಪೂ ಮತ್ತೂ ಹಿಂದಕ್ಕೆ ಕರೆದೊಯ್ಯಿರಿ. ನೆನಪಿಡಿ ನಾನು ನಿಮ್ಮ ಮೇಲೆ ಯಾವುದೇ ಒತ್ತಡ ಹಾಕುತ್ತಿಲ್ಲ. ಹಿಪ್ನಾಟಾಯಿಸ್ ಮಾಡುತ್ತಿಲ್ಲ. ನೀವು ಚಿಂತಿಸಲು ಸಮರ್ಥರಿದ್ದೀರಿ. ನಿಮ್ಮ ಯೋಚನೆಗೆ ಅನುಗುಣವಾಗಿ ನೆನಪಿಸಿಕೊಳ್ಳಿ, ಈಗ ಮತ್ತೂ ಹಿಂದಿನ ಯಾವುದಾದರು ಸಂದರ್ಭ ನೆನೆಯಿರಿ.
ನಿಮ್ಮಲ್ಲಿ ನೆನೆಪನ್ನು ಹಂಚಿಕೊಳ್ಳುವದರಲ್ಲಿ ನನಗೆ ಯಾವ ಸಂಕೋಚವೂ ಇಲ್ಲ ಅಣ್ಣ ಎಂದಳು ,
ಅವಳು ನನ್ನನ್ನು ಪ್ರಥಮ ಭಾರಿ ಅಣ್ಣ ಎಂದು ಕರೆದಿದ್ದಳು. 
ಇಲ್ಲಿಯವರೆಗೂ ನಾನು ಆ ಮನೆಗೆ ಸ್ನೇಹಿತನಂತೆ ಬಂದು ಹೋಗುವದರ ಹೊರತು ಮತ್ಯಾವ ಭಾವಾನರೀತಿಯ ಸಂಬಂಧಗಳು ಇರಲಿಲ್ಲ. ಈಗ ಆಕೆ ಅಣ್ಣ ಅಂದಿದ್ದು, ನನ್ನಲ್ಲಿ ಬೆರಗು ಮೂಡಿಸಿತ್ತು.
ಜ್ಯೋತಿ ತನ್ನ ಮಾತು ಮುಂದುವರೆಸಿದಳು.
ಮಕ್ಕಳು ಬೆಳೆದ ನಂತರ ಎಲ್ಲ ಮರೆತುಹೋಗುತ್ತದೆ. ಅವರಿಗೆ ನಾವು ಖರ್ಚು ಮಾಡಿದ ಹಣಕ್ಕೆ ಯಾವ ಅರ್ಥವೂ ಇಲ್ಲ. ಅವರಿಗೆ ಮಾಡುವ ಸೇವೆಗೂ ಅಷ್ಟೆ ನಮ್ಮಕರ್ತವ್ಯ ವಾಗಿರುತ್ತೆ. ಅವರಿಗೆ ಒದಗಿಸುವ ಸೌಕರ್ಯಗಳು ಸಹ ನಮ್ಮ ಕರ್ತ್ಯವ್ಯದ ಒಂದು ಭಾಗವಾಗಿರುತ್ತೆ, ಅವು ನಮ್ಮ ಸ್ವಂತ ಮಕ್ಕಳಲ್ಲದೆ ಬೇರೆ ಮಕ್ಕಳಿದ್ದರು ಮಾಡಬಹುದು. ಆದರೆ ಸ್ವಂತ ಮಕ್ಕಳನ್ನು ಹೆತ್ತ ಮಕ್ಕಳು ಅನ್ನುವಾಗ ಕಾರಣ ಬೇರೆ ಇರುತ್ತೆ. ಇದು ತಾಯಿಯರಿಗೆ ಮಾತ್ರ ಅರ್ಥವಾಗುವ ಕಾರಣ. ಒಂದು ಮಗುವನ್ನು ಒಂಬತ್ತು ತಿಂಗಳು ನಮ್ಮ ಒಳಗೆ ಹೊತ್ತಿರಲು ಕಡೆಗೆ ಹೆರಿಗೆಯ ದಿನ ಅನುಭವಿಸುವ ಆತಂಕ, ಆ ನೋವು ಬಹುಶಃ ತಾಯಿಯರಿಗೆ ಮಾತ್ರ ಅರ್ಥವಾಗುವ ಭಾವ, ಅದು ಮಕ್ಕಳಿಗಾಗಲಿ, ಅವರ ತಂದೆಗಾಗಲಿ ತಿಳಿಯುವದಿಲ್ಲ.
ಆಕೆಯ ಮಾತು ಕೇಳುತ್ತಿರುವಾಗ ಆನಂದ ನನ್ನನ್ನೆ ನೋಡುತ್ತಿದ್ದ. ಅವನಿಗೂ ಬಹುಶಃ ಇದೆಲ್ಲ ಅನಿರೀಕ್ಷಿತ ಅನ್ನಿಸುತ್ತೆ, ಜ್ಯೋತಿ ಇಷ್ಟು ಭಾವನಾತ್ಮಕವಾಗಿ ಮಾತನಾಡಬಲ್ಲಳು ಎಂಬುದು ಅವನಿಗೂ ತಿಳಿದಿದೆಯೋ ಇಲ್ಲವೋ. ನಾನು ಎದುರಿಗೆ ಕುಳಿತವರ ಮುಖ ನೋಡಿದೆ. ಸಂದ್ಯಾ ಮತ್ತು ಉಷಾ ನನ್ನನ್ನೇ ನೋಡುತ್ತಿದ್ದರು. ಅವರಿಗೆ ನಾನು ಸಂದರ್ಭವನ್ನು ಹೇಗೆ ನಿಭಾಯಿಸುವೆನೊ ಎನ್ನುವ ಆತಂಕವಿದ್ದಂತೆ ಕಂಡಿತು.
ಜ್ಯೋತಿ ಮಾತನಾಡುತ್ತಿದ್ದಳು.
ಶಶಾಂಕ ಹುಟ್ಟಿದ ದಿನ ಅದನ್ನು ನಾನು ಮರೆಯುವ ಘಟನೆಯಲ್ಲ , ಅವನ ಬಸಿರು ಹೊತ್ತಿರುವಾಗಲೆ ಸಾಕಷ್ಟ ಕಷ್ಟ ಶ್ರಮ ಅನುಭವಿಸಿದೆ. ಮೊದಲಿನಿಂದ ನೋಡುತ್ತಿದ್ದ ಡಾಕ್ಟರ್ ಏನೇ ಆದರು ಸೀಸೇರಿಯನ್ ಮಾಡುವದಿಲ್ಲ ಅಂದುಬಿಟ್ಟರು. ಆದರೆ ಹೆರಿಗೆಯಲ್ಲಿ ಸಾಕಷ್ಟುನೋವು ಅನುಭವಿಸಿದೆ.  ವಿಜ್ಞಾನಿಗಳು ಶಭ್ಧವನ್ನು ಡಿಸಿಬಲ್ ನಲ್ಲಿ ಅಳೆಯುವಂತೆ ನೋವನ್ನು ಸಹ ಇಂತಹುದೇ ಒಂದು ಮಾಪನದಲ್ಲಿ ಅಳೆಯಬಹುದು ಎನ್ನುತ್ತಾರೆ. ಆದರೆ ಅಂತಹ ವಿಜ್ಞಾನಿಗಳು ಹೆರಿಗೆ ನೋವನ್ನು ಎಂದಿಗೂ ಅನುಭವಿಸಿರುವದಿಲ್ಲ. ಅವರು ನೋವನ್ನು ಮಾಪನದಲ್ಲಿ ಅಳೆಯುವೆ ಎನ್ನುವಾಗ ಹೆಂಗಸರಿಗೆ ನಗು ಬರುತ್ತದೆ. ಹೆಣ್ಣು ಅನುಭವಿಸುವ ಹೆರಿಗೆನೋವಿನ ಅನುಭವ ಅವಳಿಗೆಮಾತ್ರ ವೇಧ್ಯ. ಶಶಾಂಕ ಹುಟ್ಟುವಾಗ ಅದೇನೊ ತೊಂದರೆ ಆಯಿತು, ಕಡೇಯವರೆಗೂ ಸರಿ ಇದೆ ಅನ್ನುತ್ತಿದ್ದ ಡಾಕ್ಟರ್ ಗಳು ಕಡೆ ಗಳಿಗೆಯಲ್ಲಿ ಕಕ್ಕಾವಿಕ್ಕಿಯಾದರು. ನನಗಂತು ಆ ಕ್ಷಣ ನನ್ನ ಜೀವನ ಮುಗಿಯಿತು ಅನ್ನುವ ಭಾವ ತುಂಬಿಹೋಯಿತು. ಸಾವಿಗೆ ಸಿದ್ದಳಾಗಿ ಬಿಟ್ಟೆ. ಅಂತಹ ನೋವಿನಲ್ಲಿ ಕಾಡುತ್ತಿದ್ದ ಆತಂಕವೆಂದರೆ ಒಂದುವೇಳೆ ಹೆರಿಗೆಯಲ್ಲಿ ನಾನು ಸತ್ತು ಮಗು ಉಳಿದುಬಿಟ್ಟರೆ, ಅದನ್ನು ನೋಡಿಕೊಳ್ಳುವವರು ಯಾರು. ಅಲ್ಲದೆ ನನ್ನ ಸಾವಿನ ನಂತರ ಆನಂದ ಏನು ಮಾಡುವನು ಎಂಬುದಾಗಿತ್ತು.
ಜ್ಯೋತಿ ಮೌನವಾದಳು, ಆನಂದ ಎಂತದೋ ಒಂದು ಭಾವದಿಂದ ಬೆರಗಿನಿಂದ ಅವಳ ಮುಖ ನೋಡುತ್ತಿದ್ದ.
ಅಂತಹ ನೋವನ್ನು ಅನುಭವಿಸಿ, ನಾನು ಶಶಾಂಕನನ್ನು ಪಡೆದೆ. ಅವನು ನನ್ನ ದೇಹದ ಒಂದು ಭಾಗ ಅನ್ನುವಂತೆ ಬೆಳೆಸಿದೆ. ಆದರೆ ಈಗ ಅವನು ಸ್ವತಂತ್ರ್ಯ. ನನ್ನ ಅನುಭವ ಅವನಿಗೆ ಅನಗತ್ಯ. ಕಡೆಗೆ ನಾಯಿ ಹಂದಿಗೆ ಸಹ ನಮ್ಮ ಶ್ರಮವನ್ನು ಹೋಲಿಸಿದ.
ಜ್ಯೋತಿ ಸಣ್ಣದಾಗಿ ಅಳುತ್ತಿದ್ದಳು.
ಸಂದ್ಯಾ ಎದ್ದು ಬಂದವಳು, ಪಕ್ಕ ಕುಳಿತು
ಜ್ಯೋತಿ ಏಕೆ ಹೀಗೆ ಅಳುತ್ತಿರುವಿ, ಸಮಾದಾನ ಪಟ್ಟುಕೊ , ಎಲ್ಲವೂ ಸರಿ ಹೋಗುತ್ತದೆ, ಅವನು ಸಣ್ಣ ಹುಡುಗ. ನಿನಗೆ ಈಗ ಶ್ರಮವಾಗಿದೆ ಅನ್ನಿಸುತ್ತೆ. ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡೋಣ, ಎದ್ದೇಳು, ನಾನು ಕಾಫಿ ಮಾಡಿ ತರುವೆ ' ಎಂದಳು
ಆದರೆ ವಿಚಿತ್ರ ಗಮನಿಸಿದೆ, ಜ್ಯೋತಿಗೆ ಸಂದ್ಯಾ ಹೇಳಿದ ಸಮಾದಾನದ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ. 

ಮುಂದುವರೆಯುವುದು.

Tuesday, April 11, 2017

ನೆನಪಿನ ಪಯಣ: ಬಾಗ - 1

ನೆನಪಿನ ಪಯಣ:  ಬಾಗ - 1 

ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ !
ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು. 
ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ. ನಿದ್ರಾದೇವಿಯನ್ನು ಅಹ್ವಾನಿಸಲು ಹೊಸ ಹೊಸ ರೀತಿಯ ಪ್ರಯೋಗ. 

   ಒಮ್ಮೆ ಕೆಲವು ರಾತ್ರಿ  ನಿದ್ದೆ ಬರಲಿ ಎನ್ನುವ ಕಾರಣಕ್ಕೆ ಮನಸನ್ನು ಒಂದೇ ಕಡೆ ಕೇಂದ್ರಿಕರಿಸಲು ಪ್ರಯತ್ನಿಸುತ್ತ, ಬೆಳಗ್ಗೆಯಿಂದ ರಾತ್ರಿಯ ತನಕ ಏನೆಲ್ಲ ಆಯಿತು ಎಂದು ನೆನೆಯುತ್ತ ಹೋದೆ. ಯಾರುಯಾರ ಜೊತೆಯೆಲ್ಲ ಮಾತನಾಡಿದೆ, ಬೆಳಗಿನ ತಿಂಡಿ ಏನು ತಿಂದೆ, ಮಧ್ಯಾನ್ಹದ ಊಟ ,   ಕೆಲಸ ಹೀಗೆ ನೆನೆಯುತ್ತಿರುವಾಗಲೆ ನಿದ್ರೆ ಆವರಿಸುತ್ತ ಇತ್ತು.    

ಕೆಲವು ದಿನ ನನ್ನ ಯೋಚನೆಯನ್ನು ಹಿಂದಕ್ಕೆ ದೂಡುತ್ತ ಹೋದೆ. ನಿನ್ನೆ ಏನಾಯಿತು , ಹಾಗೆ ಕಳೆದ ಬಾನುವಾರ ತಿಂಡಿ ಏನು ?  ಮನೆಗೆ ಯಾರು ಬಂದಿದ್ದರು, ಏನೆಲ್ಲ ಆಯಿತು ಹೀಗೆ. 

ಅಂತಹ ಪ್ರಯೋಗ ಮುಂದುವರೆದು, ಮಲಗುವ ಮುಂಚೆ ನನ್ನ ಮನಸ್ಸು,  ಕಳೆದ ವರ್ಷಗಳು, ಹಿಂದೆಲ್ಲ ಇದ್ದ ಊರು, ಕೆಲಸದ ನಿಮಿತ್ತ ಇದ್ದ ಸ್ಥಳ, ಬೇಟಿ ಮಾಡಿದ ಹಳೆಯ ಸ್ನೇಹಿತರು. ಎಲ್ಲ ಆಗುತ್ತಿರುವಂತೆ, ಮದುವೆ, ಮದುವೆಗೆ ಮುಂಚಿನ ದಿನಗಳು, ಕಾಲೇಜಿನ ದಿನ, ಮತ್ತೂ ಹಿಂದಕ್ಕೆ ಹೋಗಿ ಶಾಲೆಯಲ್ಲಿನ ದಿನಗಳು. ಅಪ್ಪ ಅಮ್ಮ ಅಣ್ಣ ತಮ್ಮಂದಿರ ಒಡನಾಟ. ಆಗಿನ ದಿನಗಳನೆಲ್ಲ ನೆನೆಯುವುದೆ ಒಂದು ಕ್ರಮವಾಯಿತು. ತೀರ ಚಿಕ್ಕ ವಯಸಿನ ಯಾವುದೋ ದಿನಕ್ಕೆ ಹೋಗಿ ನನ್ನ ನೆನಪಿನ ಪಯಣ ನಿಂತು ಬಿಡುತ್ತಿತ್ತು.  
ತುಂಬಾ ಹಿಂದೆ ಅಂದರೆ ನನ್ನ ಹುಟ್ಟಿನ ದಿನ, ಅದನ್ನು ನೆನೆಯಲು ಸಾದ್ಯವಾದರೆ!!  
ಹುಟ್ಟಿನ ದಿನದಿಂದ ಹಿಂದಕ್ಕೆ ಹೋಗಲು ಸಾದ್ಯವಿಲ್ಲವೇನೊ!! 

ಅದು ಹೇಗೆ?  ಹಾಗಾದರೆ, 

ನಾನು ಈ ಭೂಮಿಯ ಮೇಲೆ ಬಂದ ಕ್ಷಣಕ್ಕಿಂತ ಮುಂಚೆ ನನ್ನ ಅಸ್ತಿತ್ವ ಇರಲೇ ಇಲ್ಲವೇ ?  
ಹೌದು! 
ಅದು ಸುಳ್ಳಲ್ಲವೆ ? . 
ನಾನು ಈ ಭೂಮಿಯ ಒಂದು ಭಾಗವಾಗಿರುವೆ ಅನ್ನುವಾಗ, ಈ ಭೂಮಿಬಂದ ಕ್ಷಣದಿಂದಲೂ ನಾನು ಇಲ್ಲಿಯೇ ಇದ್ದೇನೆ ಅನ್ನುವ ಯೋಚನೆ ನನ್ನಲ್ಲಿ ತುಂಬಿಕೊಳ್ಳುತ್ತಿತ್ತು.  ಅಂತಹ ಯೋಚನೆಗೆ ಒಂದು ನಿಶ್ಚಿತವಾದ ರೂಪವನ್ನು ಕೊಡಲು ನನಗೆ ಸಾದ್ಯವಾಗುತ್ತಿರಲಿಲ್ಲ.

ಅಂತಹ ದಿನಗಳಲ್ಲಿ ನಾನು ಬಾನುವಾರ ಅಥವ ರಜಾದಿನಗಳಲ್ಲಿ ಬೇಟಿ ಮಾಡುತ್ತಿದ್ದ ಸ್ನೇಹಿತರ ಮನೆಯಲ್ಲಿ ಒಮ್ಮೆ ಈ ಬಗ್ಗೆ ಮಾತು ಪ್ರಾರಂಭವಾಯಿತು. 

ಆದಿನ ಇದ್ದದ್ದು ನನ್ನ ಗೆಳೆಯ ಆನಂದನ ಮನೆಯಲ್ಲಿ.

ಅವನು ನನಗೆ ತೀರ ಅತ್ಮೀಯನೆ. ಅವನ ಪತ್ನಿ   ಸಹ ಪರಿಚಿತಳೆ, ಎಷ್ಟು ಅಂದರೆ ಅವನ ಜೊತೆ ಮಾತನಾಡುವಷ್ಟೆ ಸಲುಗೆಯಿಂದ ಆಕೆಯ ಜೊತೆ ಸಹ ಮಾತನಾಡುತ್ತಿದ್ದೆ. ಆಕೆಯ ಹೆಸರು ಜ್ಯೋತಿ. 
ಅವರಿಬ್ಬರಲ್ಲದೆ ಜ್ಯೋತಿಯ ಸ್ನೇಹಿತೆ ಸಂಧ್ಯ ಎನ್ನುವವರು, ಹಾಗು ಆನಂದನ ಗೆಳೆಯ ಆರ್ಯ ಹಾಗು ಅವನ ಪತ್ನಿ ಉಷಾ. ಹಾಗು ನಮ್ಮ   ನಡುವೆ ಸ್ವಲ್ಪ ವಯಸ್ಸಾದ ಶ್ರೀನಿವಾಸಮೂರ್ತಿಗಳು ಸಹ ಇದ್ದರು. 

ಮಧ್ಯಾಹ್ನನ ಊಟದ ನಂತರ ಮಾತನಾಡುತ್ತ ಕುಳಿತಿದ್ದೆವು. ಮಲಗುವಾಗ ನಾನು ಮಾಡುತ್ತಿದ್ದ ಈ ರೀತಿಯ ಪ್ರಯೋಗವನ್ನು ಹೇಳಿದೆ.  
ಕೇಳಿ ಅವರೆಲ್ಲ ಕುತೂಹಲದಿಂದ ನಕ್ಕರು. 

ನಂತರ ನನ್ನ ಪ್ರಶ್ನೆ ಬರುತ್ತಲೆ ಸ್ವಲ್ಪ ಎಲ್ಲರೂ ಗಂಭೀರ.  
ನಮ್ಮ ಹುಟ್ಟಿಗೆ ಮುಂಚೆ ನಮ್ಮ ಅಸ್ತಿತ್ವ ಇರಲಿಲ್ಲವೇ ?

’ ತೀರ ಇರಲೇ ಇಲ್ಲ ಎಂದು ಹೇಳಲ್ಲಿಕ್ಕಾಗದು, ಹಿಂದಿನ ಜನ್ಮ ಅಂತೆಲ್ಲ ಹೇಳ್ತಾರಲ್ಲ’
ಶ್ರೀನಿವಾಸ ಮೂರ್ತಿಗಳು ನುಡಿದಾಗ, ಆರ್ಯ ನಕ್ಕುಬಿಟ್ಟ. 
ಮೂರ್ತಿಗಳು ಕೋಪಗೊಂಡರು.
ನಾನು ಹೇಳಿದೆ 
 ಇಲ್ಲ ನಾನು ಆ ಬಗ್ಗೆ , ಹಿಂದಿನ ಜನ್ಮ.. ಆ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ನಮ್ಮ ಬೌತಿಕ ಅಸ್ತಿತ್ವದ ಬಗ್ಗೆ, ಹಾಗೆ ಹೇಳುವದಾದರೆ , ನಮ್ಮ ಹುಟ್ಟಿಗೆ ಮುಂಚೆ ನಾವು ಅಂಶ ರೂಪದಲ್ಲಿ ನಮ್ಮ ತಂದೆ ತಾಯಿಯರಲ್ಲಿ ಜೀನ್ಸ್ ಅಥವ ಜೀವಕೋಶಗಳ ರೂಪಿನಲ್ಲಿ ಜೀವಿಸಿರುತ್ತೇವೆ, ಹಾಗೆ ನಮ್ಮ ತಂದೆ ಅವರ ತಂದೆಯ ದೇಹದ ಅಂಶವಾಗಿರುತ್ತಾರೆ, ಹಾಗೆ ಹಿಂದಕ್ಕೆ ಹೋದರೆ, ನಮ್ಮ ವಂಶದಲ್ಲಿ ನಾವು ಅಂಶರೂಪವಾಗಿ ಇದ್ದೆ ಇರುತ್ತೇವೆ ಅಲ್ಲವೇ ?

ಉತ್ತರ ಅನ್ನುವಂತೆ.ಶ್ರೀನಿವಾಸಮೂರ್ತಿಗಳು ಮತ್ತೆ ಮಾತಿನ ಜಾಡು ತಪ್ಪಿಸಿದ್ದರು

ಹೌದು , ಅದಕ್ಕೆ ಮೂವತ್ತೆರಡು ತಲೆ ಅನ್ನೋದು, ನಮ್ಮ ಪಿತೃಗಳ ರೂಪದಲ್ಲಿ ನಾವು ಇದ್ದೆ ಇರುವೆವು. ತಿಥಿಮಾಡುವಾಗಲು ಅಷ್ಟೆ, ನಮ್ಮ ತಂದೆ ಹಾಗು ತಾಯಿಯ ಹಿಂದಿನ ಮೂವತ್ತೆರಡು ತಲೆಗಳ ಹೆಸರು ಹೇಳುವೆವು ಅಲ್ಲವೆ?’


ನಾನು ಅವರ ಮಾತು ಬಿಟ್ಟು ಪುನಃ ಹೇಳಿದೆ,

ಹಾಗೆ ನೋಡುವದಾದರೆ, ಮನುಷ್ಯ ಎನ್ನುವ ಜೀವಿಯ ಹುಟ್ಟು ಆರು ಮಿಲಿಯನ್  ವರ್ಷಗಳ ಹಿಂದೆ ಆಯಿತು, ಅನ್ನುವದಾದರೆ ನಾವು ಆಗಿನಿಂದಲೇ ಇದ್ದೇವೆ. ನಮ್ಮ ಈ ಸ್ವರೂಪದಲ್ಲಿ ಅಲ್ಲದಿದ್ದರೂ , ನಮ್ಮ ಬೌತಿಕ ಅಂಶರೂಪದಲ್ಲಿ, ಜೀನ್ಸ್ ಗಳ ಕೋಶಗಳಾಗಿ ಇಲ್ಲಿ ನೆಲೆಸೇ ಇದ್ದೇವೆ. ಹಾಗಾಗಿ ನಮ್ಮ ನೆನಪು ಸಹ ನಮ್ಮ ಹುಟ್ಟಿನಿಂದಲೂ ಹಿಂದೆ ಹೋಗುವ ಸಾದ್ಯತೆ ಇದೆ. ಆದರೆ ಹುಟ್ಟಿನ ಹಿಂದೆ ಬಿಡಿ, ನಮ್ಮ ಹುಟ್ಟಿನ ನಂತರದ ದಿನಗಳನ್ನು ಸಹ ವ್ಯವಸ್ಥಿತವಾಗಿ ಜೋಡಿಸಲು ನಮ್ಮಿಂದ ಆಗುವದಿಲ್ಲ’

ಅದಕ್ಕೆ ಆರ್ಯ ಎಂದ, 

ಅದರಲ್ಲೇನು ಕಷ್ಟವಿದೆ, ಸಣ್ಣ ಸಣ್ಣ ಘಟನೆಗಳೆಲ್ಲ ಮರೆತಿರಬಹುದು, ಅದನ್ನೆಲ್ಲ ನೆನಪಿಡಲೂ ಸಾದ್ಯವಿಲ್ಲ, ಆದರೆ ನಮ್ಮ ಜೀವನದ ಪ್ರಮುಖ ಘಟನೆಗಳೆಲ್ಲ ಸಾದಾರಣ ನೆನಪಿನಲ್ಲಿ ಇರುತ್ತೆ, ಅದನ್ನು ಕ್ರಮದಲ್ಲಿ ಜೋಡಿಸಿಕೊಳ್ಳಬಹುದೇನೊ ಅಂದ

ಅದಕ್ಕೆ ನಾನೆಂದೆ 
ಇಲ್ಲ ಅಷ್ಟು ಸುಲುಭವಲ್ಲ, ನಮ್ಮ ನೆನಪು ಅದರಲ್ಲೂ ಗಂಡಸರ ನೆನಪು ಅತೀ ಸೀಮಿತ. ಕೆಲ ಹೆಂಗಸರಲ್ಲಿ ಅಂತಹ ಶಕ್ತಿ ಜಾಸ್ತಿಯೇ ಇರುತ್ತದೆ. ಆದರೆ ಅವರು ಅದನ್ನು ನಿದ್ದೆ ತರಿಸಲು ಮಾತ್ರ ಉಪಯೋಗಿಸುವದಿಲ್ಲ 
ಎಂದು ನಕ್ಕೆ 

ಆನಂದ ಬಾಯಿ ಬಿಟ್ಟ

ನಿನ್ನ ಮಾತು ನಿಜವಪ್ಪ, ನನಗಾದರೆ ಅದೇನೊ ಮದುವೆಯ ದಿನವೇ ಮರೆತುಹೋಗಿರುತ್ತದೆ, ಇವಳಾದರೆ ನೋಡು,( ಎನ್ನುತ ಜ್ಯೋತಿಯತ್ತ ಕೈ ತೋರಿಸಿ ಹೇಳಿದ)  ಮದುವೆಯ ದಿನ ಅವಳ ಚಿಕ್ಕಮ್ಮ ಉಟ್ಟಿದ್ದ ಸೀರೆಯ ಬಣ್ಣ ಸಹ ನೆನಪಿರುತ್ತದೆ. ನೆನಪಿನಲ್ಲಿ ಇವರ ಅಜ್ಜಿಯ ತರಾನೆ. ಅವರು ಅಷ್ಟೆ, ಅವರ ನಾದಿನಿಯ ಅಕ್ಕನ ಮದುವೆಗೆ ಹೋಗಿದ್ದಾಗ ಅಡುಗೆ ಏನೇನು ಮಾಡಿದ್ದರು, ಅದಕ್ಕೆ ಉಪ್ಪು ಕಡಿಮೆಯಾಗಿತ್ತು ಎಂದು ಈಗ ಐವತ್ತು ವರುಷದ ನಂತರವೂ ಹೇಳುತ್ತಾರೆ. 
ಎನ್ನುತ್ತ ಗಹಗಹಿಸಿ ನಕ್ಕ 
ಜ್ಯೋತಿಗೆ ಸ್ವಲ್ಪ ಅವಮಾನ ಆಯಿತೇನೊ ಎಲ್ಲರೆದುರು ಅಂದಿದ್ದು, ಹಾಗಾಗಿ ನಾನು ಅದನ್ನು ಸರಿಪಡಿಸಲು , ಅವಳನ್ನು ಸಮಾದಾನಪಡಿಸಲು ನುಡಿದೆ, 

ಅದೇಕೆ ಹಾಗೆ ಹೇಳುತ್ತಿ, ಹಾಗೆ ನೋಡುವದಾದರೆ ಪ್ರಕೃತಿ ಅವರಿಗೆ ನೀಡಿರುವ ಶಕ್ತಿ ಅದು, ಅವರ ನೆನಪಿನ ಶಕ್ತಿ ಯಾಗಲಿ, ಕಣ್ಣಿನ ಶಕ್ತಿಯಾಗಲಿ ನಮಗೆಲ್ಲಿ, ನಿನಗೆ ಗೊತ್ತ, ಹೆಣ್ಣು ನೂರಾರು ಬಣ್ಣ ವ್ಯತ್ಯಾಸಗಳನ್ನು ಗುರುತಿಸಬಲ್ಲಳು, ಗಂಡಸರು ಬಹುತೇಕ ಅದರಲ್ಲಿ ಸೊನ್ನೆ, ಬಹಳಷ್ಟು ಗಂಡಸರು ಬಣ್ಣಗುರುಡು ಎಂದೆ . 

ಆನಂದ, 
’ಸರಿಯಪ್ಪ, ಅವಳನ್ನು ನೀನೆಲ್ಲಿ ಬಿಟ್ಟುಕೊಡುತ್ತೀಯ, ಈಗ ನೀನೆ ಹೇಳುತ್ತಿದ್ದೆಯಲ್ಲ ಅದೇನೊ ನೆನಪಿನಲ್ಲಿ ಹಿಂದೆ ಹೋಗುವ ಪ್ರಯೋಗ ಅದನ್ನು ಅವಳ ಮೇಲೆ ಪ್ರಯೋಗಿಸು ನೋಡೋಣ , ಅವಳ ಶಕ್ತಿ ಗೊತ್ತಾಗುತ್ತದೆ ಎಂದ 

ನಾನು ಹೇಳಿದೆ, 
ಅವಳಿಗೆ ನನ್ನ ರೀತಿ ನಿದ್ದೆಯ ಸಮಸ್ಯೆ ಏನಿಲ್ಲ. ಆದರೂ ಆಕೆ ಒಪ್ಪಿದರೆ ಆಕೆಯ ನೆನಪಿನ ಶಕ್ತಿ, ಹಾಗು ನೆನಪಿನ ಪಯಣ ಎಷ್ಟು ಹಿಂದಕ್ಕೆ ಹೋಗುತ್ತದೆ ಎಂದು ನೋಡಬಹುದೇನೊ  

ಆರ್ಯ ಈಗ ಉತ್ಸಾಹಿತನಾದ, 

ಹೌದು ಸಾರ್, ಈ ಪ್ರಯೋಗ ಏಕೆ ನೀವು ಮಾಡಬಾರದು, ಜ್ಯೋತಿಯವರು ಒಪ್ಪಿದರೆ, ಅವರನ್ನು ಹಿಂದಿನ ಜನ್ಮಕ್ಕೂ ಕಳಿಸಿಬಿಡಿ, ನಂತರ ನೀವು ಟೀವಿಯಲ್ಲಿ ಬರಬಹುದು, ಅದ್ಯಾವುದೋ ಕಾರ್ಯಕ್ರಮ ಬರುತ್ತಲ್ಲ  ಹಾಗೆ.  

ಆಗ ಆನಂದ ಎಂದ 
ಸರಿ ಈಗ ನಿನ್ನ ಉದ್ದೇಶ ಏನು , ಬೇಕಿದ್ದರೆ ನಾವೆ ಪ್ರಯೋಗ ಮಾಡೋಣ, ಜ್ಯೋತಿ ನಿನ್ನ ಪ್ರಯೋಗಕ್ಕೆ ಸಿದ್ದ  (ಎನ್ನುತ್ತ) 
ಅಲ್ಲವೇನೆ ಎಂದ , ಜ್ಯೋತಿ ನಗುತ್ತ ನಾನೇನೊ ಸಿದ್ದ, ಎಂದಳು. 

ನಾನೀಗ ಇಕ್ಕಟ್ಟಿಗೆ ಸಿಕ್ಕಿದೆ, ನಾನೊ ಎಂತದೋ ಒಂದು ಸಮಯ ಕಳೆಯುವ ಚರ್ಚೆಯಲ್ಲಿ ಕಾಲಹರಣ ಮಾಡೋಣ ಎಂದಿದ್ದರೆ, ಇವರೆಲ್ಲರು ನನ್ನನ್ನು ಯಾವುದೋ ಒಂದು ದಿಕ್ಕಿಗೆ ಪ್ರಯೋಗಕ್ಕೆ ನೂಕುತ್ತಿದ್ದರು. ನಾನು ಮಾನಸಿಕವಾಗಿ ಸಿದ್ದನಿರಲಿಲ್ಲ. 

" ನೋಡಿ ನಾನು ಯಾವ ಪ್ರಯೋಗಕ್ಕೂ ಬಂದಿಲ್ಲ, ಸುಮ್ಮನೆ ಚರ್ಚೆಯ ಮಾತಿಗೆ ಹೇಳಿದೆ ಅಷ್ಟೆ. ನಾನೇನು  ಆ ರೀತಿಯ ಪ್ರಯೋಗಗಳನ್ನು ಮಾಡುವ ಪರಿಣಿತಿ ಹೊಂದಿಲ್ಲ'  ಎಂದೆ

ಅದಕ್ಕೆ ಪರಿಣಿತಿ ಯಾಕಪ್ಪ,  ಜ್ಯೋತಿಯವರನ್ನು ಹಿಂದಿನದೆಲ್ಲ ನೆನಪಿಸಿಕೊಳ್ಳಿ ಎನ್ನುವುದು ಅಷ್ಟೆ ತಾನೆ ? ಅವರು ಎಷ್ಟು ನೆನಪಿಸಿಕೊಳ್ಳುತ್ತಾರೆ ಅನ್ನುವುದಷ್ಟೆ ಕುತೂಹಲ ಎಂದ ಆರ್ಯ. 

ಇರಬಹುದು, ಆದರೆ ನಾವು ಏನಾದರು ಮಾಡಲು ಹೋಗಿ, ಜ್ಯೋತಿ ಅಕ್ಕನಿಗೆ ತೊಂದರೆ ಆದರೆ '  
ಆರ್ಯನ ಹೆಂಡತಿ ಉಷಾ ಅನ್ನುವಾಗ , ಸಂದ್ಯಾ ಸಹ ದ್ವನಿಗೂಡಿಸಿದರು

'ಇಂತಹುದೆಲ್ಲ ನಾವು ಗೊತ್ತಿಲ್ಲದೆ ಮಾಡಲು ಹೋಗುವುದು ತಪ್ಪು, ಒಂದುಹೋಗಿ ಒಂದು ಆದರೆ ಕಷ್ಟವೇ ಅಲ್ಲವೇ ? 

ಆದರೆ ಆನಂದ , ಮತ್ತು ಜ್ಯೋತಿ ನಿಶ್ಚಿಂತರಾಗಿದ್ದರು.

ಅಯ್ಯೋ ಎಲ್ಲರೂ ಎಷ್ಟು ಹೆದರುವಿರಪ್ಪ, ನಾವೇನು ಹಿಪ್ನಾಟಿಸಂ  ಪ್ರಯೋಗ ಮಾಡುತ್ತಿದ್ದೇವೆಯೆ , ಇವಳ ಮೇಲೆ , ಇವಳ ಮನಸ್ಸು ನನಗೆ ಗೊತ್ತಿದೆ, ತುಂಬಾನೆ ಸ್ಟ್ರಾಂಗ್ , ಯಾತಕ್ಕೂ, ಯಾವುದಕ್ಕೂ ಕೇರ್‍ ಮಾಡೋಲ್ಲ, ಯಾರ ಮಾತು ಕೇಳಲ್ಲ 
ಆನಂದ ನಗುತ್ತಿದ್ದ. ಜ್ಯೋತಿ ನುಡಿದಳು 

ಹೌದಪ್ಪ ನಾನು ಸ್ಟ್ರಾಂಗೆ , ಹಾಗೆಲ್ಲ ನನ್ನ ಮನಸ್ಸು ಒಬ್ಬರ ವಶವಾಗೋಲ್ಲ. ಅದೆಲ್ಲ ವೀಕ್ ಇರುವವರ ಮನಸ್ಸಿನ ಕಷ್ಟ ಅಷ್ಟೆ ಅಂದಳು. 

ಹೀಗೆ ಸ್ವಲ್ಪ ಹೊತ್ತು ಮಾತುಗಳು, ವಾದಗಳು ನಡೆದವು. ಕಡೆಗೆ ಜ್ಯೋತಿಯನ್ನು ನೆನಪಿನ ಪಯಣದ ಪರೀಕ್ಷೆಗೆ ಒಳಪಡಿಸುವದೆಂದು ನಿರ್ಧಾರವಾಯಿತು. 
ನಂತರ ಜ್ಯೋತಿ ಹಾಗು ಸಂದ್ಯಾ ಹೋಗಿ ಕಾಫಿ ಮಾಡಿ ತಂದ ನಂತರ ಎಲ್ಲರ ಕಾಫಿ ಕಾರ್ಯಕ್ರಮ ಮುಗಿಯಿತು.  
ಪ್ರಯೋಗಕ್ಕೆ ಸಜ್ಜಾದೆವು
………….     
ಮುಂದುವರೆಯುವುದು.

Thursday, December 22, 2016

ಬೆಳಕು-ಸತ್ಯ-ಕತ್ತಲೆ-ಅಜ್ಞಾನ

ಬೆಳಕು-ಸತ್ಯ-ಕತ್ತಲೆ-ಅಜ್ಞಾನ

"ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳು ಲಕ್ಷ ಕೋಟಿ ವರ್ಷಗಳಿಂದ ಸತತ ಪ್ರಯತ್ನಪಡುತ್ತಿದ್ದರು, ಬ್ರಹ್ಮಾಂಡದ ಕತ್ತಲನು ಪೂರ್ಣವಾಗಿ ಅಳಿಸಲು ಸಾದ್ಯವಾಗಿಲ್ಲ ಎನ್ನುವ ಸತ್ಯ ಮನಸನ್ನು ಕಲಕುತ್ತದೆ "
ಕೆಲವುದಿನದ ಕೆಳಗೆ ಈ ರೀತಿ ಫೇಸ್ ಬುಕ್ಕಿನಲ್ಲಿ ಒಂದು ಸ್ಟೇಟಸ್ ಹಾಕಿದ್ದೆ,
ಅದಕ್ಕೆ ಬಹಳಷ್ಟು ಕಾಮೆಂಟ್ಸ್ ಬಂದವು, 
ನನ್ನ ಈ ಮಾತನ್ನು ಬಹುತೇಕ, ಋಣಾತ್ಮಕ ಎಂದು ಪರಿಗಣಿಸಿ,
"ಬ್ರಹ್ಮಾಂಡದ ತಿಮಿರ, ಅನಾದಿ ಕಾಲದಿಂದಲೂ ಕೋಟಿ ಕೋಟಿ ನಕ್ಷತ್ರಗಳ ಪ್ರಕಾಶವನ್ನು ಮುಸುಕಲು ಸಾಧ್ಯವಾಗಿಲ್ಲ ಎನ್ನುವ ಸತ್ಯ ಮನಸ್ಸನ್ನು ಮುದಗೊಳಿಸುತ್ತದೆ
ಎನ್ನುವ, ಮತ್ತು ಅದೇ ಅರ್ಥ ಕೊಡುವ ಧನಾತ್ಮಕ ಎನ್ನುವ ರೀತಿಯ ಕಾಮೆಂಟ್ ಗಳು ಬಂದವು,
ನನಗೂ ಆಗ ನನ್ನ ಮಾತು ಪೂರ್ಣ ಸ್ವಷ್ಟವಾಗಿರಲಿಲ್ಲ.
ಆಮೇಲೆ ನನಗೆ ಅನ್ನಿಸಿತು, ಇದಕ್ಕೆಲ್ಲ ಕಾರಣ, ಕತ್ತಲನ್ನು ನಿರಾಶವಾದವೆಂದು, ಬೆಳಕನ್ನು ಆಶಾವಾದವೆಂದು ಭ್ರಮಿಸುವ ನಮ್ಮ ಮನಸ್ಸು ಇದಕ್ಕೆ ಕಾರಣ.
ಮೊದಲಿನಿಂದಲೂ ಬೆಳಕನ್ನು ಜ್ಞಾನದ ಸಂಕೇತವನ್ನಾಗಿ ಕತ್ತಲನ್ನು ಮೂಢತೆಯ ಸಂಕೇತವಾಗಿಯು ಅನಾದಿಕಾಲದಿಂದಲೂ ಸ್ವೀಕರಿಸಿದೆ.
ಆದರೆ ತರ್ಕವನ್ನು ಸ್ವಲ್ಪ ಬಳಸಿ ನೋಡಿದರೆ, ಬೆಳಕು ಕತ್ತಲೆಯಲ್ಲಿನ ನಿಗೂಡತೆಯನ್ನು ಬೇಧಿಸಲು ಪ್ರಯತ್ನಿಸುತ್ತಿದೆ ಅನ್ನಬಹುದೇನೊ.
ಬ್ರಹ್ಮಾಂಡದ ಅಗಾದತೆ ಎಷ್ಟು ಎನ್ನುವದನ್ನು ಯಾರು ಅರ್ಥಮಾಡಿಕೊಳ್ಳಲಾಗುವದಿಲ್ಲ. ಅದರ ಒಂದು ಕೊನೆಯಿಂದ ಮತ್ತೊಂದೆ ಕೊನೆಗೆ ಇರಬಹುದಾದ ವಿಸ್ತೀರ್ಣವನ್ನು ಅರಿಯಲು, ಅದರ ಕೊನೆ ಎಲ್ಲಿದೆ ಎಂಬುದೆ ಯಾರಿಗೂ ತಿಳಿಯದು. ಅಂತಹ ವಿಶಾಲ ಭ್ರಹ್ಮಾಂಡವನ್ನು ಆವರಿಸಿರವುದು ಅಗಾದ ಕತ್ತಲು. ಅಲ್ಲಿ ಏನಿದೆ ಎಂಬುದು ಯಾರಿಗೂ ಅರಿವಿಗೆ ಬರದ, ಯಾರ ಕಣ್ಣಿಗೂ ಬೀಳಲು ಶಕ್ಯವಿಲ್ಲದ ಖಾಲಿ ಖಾಲಿ ಪ್ರದೇಶ.
ಕತ್ತಲು ಬರೀ ಕತ್ತಲು.
ಹಗಲೆಲ್ಲ ಭೂಮಿಯಲ್ಲಿನ ಕತ್ತಲೆಯನ್ನು ದೂರಮಾಡಿದ ಸಂತೃಪ್ತಿಯಲ್ಲಿನ ಸೂರ್ಯನ ಬೆಳಕು, ಭೂಮಿ ತನ್ನ ಮುಖ ತಿರುಗಿಸಿದೊಡನೆ, ಆ ಕತ್ತಲನ್ನು ಓಡಿಸಲು ಅಶಕ್ಯ. ಸೂರ್ಯ ನಮ್ಮ ಅತೀ ಹತ್ತಿರದಲ್ಲಿರುವ ನಕ್ಷತ್ರ, ಇವನ ಶಕ್ತಿಯೆ ಇಷ್ಟು ಅನ್ನುವಾಗ, ಎಲ್ಲ ನಕ್ಷತ್ರಗಳು ಕೂಡಿದರು, ಅಗಾದ ಬ್ರಹ್ಮಾಂಡದ ಕತ್ತಲೆಯನ್ನು ಓಡಿಸಲು, ಕೋಟಿ ಕೋಟಿ ವರ್ಷಗಳಿಂದಲೂ (ವರ್ಷ ಅನ್ನುವುದು ಸಹ ನಮ್ಮ ಭ್ರಮೆ ! ) ಅಳಿಸಲಾಗಿಲ್ಲ ಅನ್ನುವುದು ಸತ್ಯ.
ಇಂತಹ ಬ್ರಹ್ಮಾಂಡದ ದುರ್ಭರ ಕತ್ತಲೆ ನಡುವೆ ಅಲ್ಲಲ್ಲಿ ಮಿನುಗುತ್ತಿರುವ ನಕ್ಷತ್ರಗಳು. ನಮ್ಮ ಎಣಿಕೆಗೆ ಅಗಾದ ಎನಿಸಬಹುದಾದ ಸೂರ್ಯನಿಗಿಂತಲೂ ನೂರು ಪಟ್ಟು ಮಿಗಿಲಾದ ದೊಡ್ಡದಾದ ನಕ್ಷತ್ರಗಳು ಕೋಟಿ ಕೋಟಿ ಇದ್ದರು ಸಹ ಬ್ರಹ್ಮಾಂಡವನ್ನು ಇಂದಿಗೂ ಆವರಿಸಿರುವುದು ಕತ್ತಲೆ ಹಾಗು ನಿಗೂಡತೆ. ಈ ಬ್ರಹ್ಮಾಂಡದ ಆಚೆಗೆ ಇಂತಹುದೇ ಅದೆಷ್ಟು ಬ್ರಹ್ಮಾಂಡಗಳಿವೆ ಯಾರು ಅರಿಯರು
ಇಂತಹ ಅಗಾದ ಕತ್ತಲೆಯನ್ನು ಬೇದಿಸಲು ಪ್ರಯತ್ನ ಪಡುತ್ತಿರುವುದು ಇದೇ ಕೋಟಿ ಕೋಟಿ ನಕ್ಷತ್ರಗಳು, ಅವುಗಳು ಪ್ರಯತ್ನ ಪಡುತ್ತಿರುವುದು ಬ್ರಹ್ಮಾಂಡ ಎನ್ನುವ ಸತ್ಯವನ್ನು , ನಿಗೂಡತೆಯನ್ನು ಅಂದರೆ ಕತ್ತಲೆಯನ್ನು ಬಯಲಿಗೆಳೆಯಲು . ಅಲ್ಲಿಗೆ ಒಂದು ತರ್ಕಕ್ಕೆ ಹೋದರೆ, ಕತ್ತಲೆಯೆ ನಿಗೂಡ, ಅದೇ ಸತ್ಯ. ಅಂತಹ ಸತ್ಯವನ್ನು ಬೇದಿಸುವ ವಸ್ತು ಮಾತ್ರ ಬೆಳಕು ಅಲ್ಲವೆ ?
ಅಥವ ಕತ್ತಲೆ ಅನ್ನುವುದು ಸತ್ಯವನ್ನು ಮುಸುಕಿರುವ ಹೊರಗಿನ ಮುಸುಕು, ಅಥವ ಸತ್ಯಕ್ಕೆ ಸೇರಿದ ವಸ್ತು.
ಇಂತಹ ನಕ್ಷತ್ರಗಳ ಅಂದರೆ ಬೆಳಕಿನ ಆಯಸ್ಸು ಬ್ರಹ್ಮಾಂಡಕ್ಕೆ , ಕತ್ತಲೆಗೆ ಹೋಲಿಸಿದರೆ, ನಶ್ವರ, ಕಡಿಮೆ !!!
ಇಂತಹ ನಕ್ಷತ್ರಗಲು, ಅದರ ಬೆಳಕು ಹುಟ್ಟುತ್ತಲೆ ಇರುತ್ತದೆ , ಹಾಗು ಸಾಯುತ್ತಲು ಇರುತ್ತದೆ, ಸತ್ತ ನಕ್ಷತ್ರ ಪುನಃ ಇದೆ ನಿಗೂಡ ಕತ್ತಲೆಯಲ್ಲಿ ಸೇರಿ ಹೋಗುತ್ತದೆ, ಶಾಶ್ವತ ಕತ್ತಲೆಯನ್ನು !!
ಬೆಳಕು ಇಲ್ಲ ಅನ್ನುವ ಸ್ಥಿತಿಯೆ ಕತ್ತಲೆ ಎನ್ನುವದಾದರೆ ,
ಬೆಳಕು ಇಲ್ಲದಾಗಲು ಕತ್ತಲೆ ಇತ್ತು,
ಬೆಳಕು ಬಂದು ಹೋದ ನಂತರವೂ ಕತ್ತಲೆ ಇದೆ .
ಕತ್ತಲೆ (ನಿಗೂಡತೆ) ಎನ್ನುವುದೆ ಸತ್ಯ. ಬೆಳಕು ಸತ್ಯದ ಅನ್ವೇಷಣೆಯನ್ನು ನಡೆಸಿರುವ ಒಂದು ವಸ್ತು/ಸಲಕರಣೆ ಅನ್ನುವುದು ಕುತರ್ಕವಾಗುತ್ತದೆಯೆ ? .
ಆದರೆ ವಿಪರ್ಯಾಸವೆಂದರೆ, ಕತ್ತಲೆಯನ್ನು ಬೇದಿಸಲು ಬೆಳಕು ಪ್ರಯತ್ನ ಪಡುವಾಗಲೆ ಕತ್ತಲೆ ಮಾಯವಾಗುತ್ತದೆ, ಬೆಳಕು ಸೋತು ಸುಮ್ಮನಾದರೆ ಪುನಃ ಕತ್ತಲೆ ಆವರಿಸುತ್ತದೆ
ಇಂತಹ ಕತ್ತಲು , ನಿಗೂಡತೆಯು ಸಂಪೂರ್ಣ ವಿಶ್ವವನ್ನು ಆವರಿಸಿದೆ, ಅದನ್ನು ಅರ್ಥಮಾಡಿಕೊಳ್ಳಬೇಕಿದೆ , ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ

Wednesday, November 16, 2016

ಸಣ್ಣಕತೆ: ರಾಜ್ಯೋತ್ಸವ


ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು,
" ಕನ್ನಡ ನಾಡು ನುಡಿ ಜಲ ಭೂಮಿಗಾಗಿ , ನನ್ನ ಈ ಜನ್ಮವನ್ನು ಮೀಸಲಾಗಿಡುವೆ.  ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ  ಅನ್ನ ತಿನ್ನುತ್ತಿರುವೆ , ನಿಮ್ಮ ನಡುವೆ ಒಬ್ಬ ನೆಚ್ಚಿನ ನಟನಾಗಿ ನಿಂತಿರುವೆ ಎನ್ನುವದಾದರೆ ಅದಕ್ಕೆ ಈ ನಾಡಿನ ಸಮಸ್ತ ತಾಯಿಯರ ಪ್ರೀತಿ, ಅಕ್ಕ ತಂಗಿಯರ ವಾತ್ಸಲ್ಯ ಕಾರಣ. ಸ್ವಂತ ಅಣ್ಣ ತಮ್ಮಂದಿರು ನನ್ನ  ಜೊತೆ ಇರಲಿಲ್ಲ, ಆದರೆ ನೀವು ನನ್ನ ಕೈ ಬಿಡಲಿಲ್ಲ , ನನಗೆ ಅಣ್ಣನಂತೆ ತಂದೆಯಂತೆ ನಿಂತು ನನ್ನ ಸಲಹಿದಿರಿ, ಸಲಹುತ್ತಿದ್ದೀರಿ. ಇದು ಕನ್ನಡ ನಾಡಿನ ಜನತೆಗೆ ಜನ್ಮದಿಂದ ಬಂದಿರುವ ಗುಣ. ಹಸಿದು ಬಂದವರಿಗೆ,  ಬಾಯಾರಿ ಬಂದವರಿಗೆ ಅವರು ಎಂದೂ ನಿರಾಕರಿಸುವದಿಲ್ಲ. ನನಗೆ ನನ್ನಂತ ನೂರು ಜನರಿಗೆ ಅನ್ನ ಕೊಡುವ ಪುಣ್ಯ ನಿಮ್ಮದು.  ನಾನು ಈಗಿನ್ನು ಬೆಳೆಯುತ್ತಿರುವ ಕೂಸು, ನನ್ನ ಈ ವೇದಿಕೆಯಲ್ಲಿರುವ ನಾಡಿನ ಅತ್ಯಂತ ಹಿರಿಯ ಗೌರವಾನ್ವಿತ ಅನುಭವಿ ಹಾಗು ನಾಡೋಜ ಮುಂತಾದ ಹತ್ತು ಹಲವು ಪ್ರಶಸ್ತಿ ವಿಜೇತರಾದ ಲೇಖಕ ಶ್ರೀಯುತ  " 
 ಎನ್ನುತ ಸ್ವಲ್ಪ ಪಕ್ಕಕ್ಕೆ ಬಗ್ಗಿ ತನ್ನ ಹಿಂದೆ ನಿಂತವರನ್ನು ನೋಡಿದ ಅವರು ಕಿವಿಯಲ್ಲಿ ಆ ಲೇಖಕರ ಹೆಸರನ್ನು ಹೇಳಿದರು, ...
" ಲೇಖಕ ಶ್ರೀಯುತ ರಾಮಯ್ಯನವರ ಜೊತೆ ನನ್ನನ್ನು ಸರಿಸಮಾನಾಗಿ ಕೂರಿಸಿದ್ದೀರಿ, ಅವರ ಅನುಭವದ ಮುಂದೆ ನನ್ನ ವಯಸ್ಸು ಯಾವ ಲೆಕ್ಕಕ್ಕೆ, ಅವರಿಗೆ ನಾನು ನಿಮ್ಮೆಲ್ಲರ ಎದುರಿಗೆ ಪಾದವಂದನೆ ಮಾಡುತ್ತಿದ್ದೇನೆ. ನನಗೆ ಸಂಜೆ ಮತ್ತೊಂದು ಕಾರ್ಯಕ್ರಮವಿದೆ, ನೀವೆಲ್ಲ ಅಪ್ಪಣೆ ಕೊಟ್ಟರೆ ನಾನು ಹೊರಡುತ್ತೇನೆ... " 
ನಾಯಕನಟ ರೂಪೇಶನ ಮಾತಿಗೆ ಜನ ದಂಗಾಗಿ ಹೋಗಿದ್ದರು. ಅವರ ಅಭಿಮಾನ ಹುಚ್ಚೆದ್ದು ಕುಣಿಯುತ್ತಿತ್ತು, ತಮ್ಮ ನಾಯಕನನ್ನು ಎದುರಿಗೆ ನೋಡುತ್ತ ಹುಡುಗಿಯರು ವಿಭ್ರಮೆಗೆ ಒಳಗಾಗಿದ್ದರು, 
ಹಾಡು .....   ಹಾಡು ....    ಎನ್ನುವ  ಜನರ ದ್ವನಿ ಮೊಳಗಿತು, 
ಇತ್ತೀಚೆಗೆ ಬಿಡುಗಡೆಯಾದ ನಾಯಕ ನಟನ ಸಿನಿಮಾದ ಹಾಡನ್ನು ಅವನು ತನ್ನ ಕೆಟ್ಟದ್ವನಿಯಿಂದ ಹಾಡುತ್ತಿರುವಂತೆ ಜನ ಚಪ್ಪಾಳೆ ಹಾಕುತ್ತ ನರ್ತಿಸಿದರು.   ಟೀವಿ ಮಾಧ್ಯಮಗಳು, ಕ್ಲೋಸ್ ಅಪ್ ನಲ್ಲಿ ನಾಯಕನನ್ನು ತೋರಿಸಲು ಪ್ರಯತ್ನಪಡುತ್ತಿದ್ದವು. 
ವಸುಧ ಕನ್ನಡ ಸಂಘದ ಅಧ್ಯಕ್ಷ  ಶಂಕರನ ಮುಖ ಇಳಿದು ಹೋಗಿತ್ತು. ಅವನ ಮನ ಚಿಂತಿಸುತ್ತ ಇತ್ತು. ಕನ್ನಡ ಭಾಷೆಯ ಉದ್ದಾರ ಎನ್ನುವ ಹೆಸರಿನಲ್ಲಿ ನಾವೆಲ್ಲ ಪರದಾಡುತ್ತೇವೆ. ಅದೇ ಹುಚ್ಚಿನಲ್ಲಿ ಈ ಸಂಘ ಕಟ್ಟಿಕೊಂಡೆವು. ಆದರೆ ನಿಜಕ್ಕೂ ನಾವು ಮಾಡುತ್ತಿರುವುದು ಕನ್ನಡ ಸೇವೆಯಾ ? ಎನ್ನುವ ಭಾವನೆ ಅವನನ್ನು ಕಾಡಿಸುತ್ತಿತ್ತು. ಈ ರೀತಿ ಯಾರೋ ಪ್ರಸಿದ್ದ ನಟರನ್ನು ಕರೆಸುವುದು, ಅವರ ಕೈಲಿ ಮಾತು, ಹಾಡು ಎನ್ನುವ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಭಾಷೆಗೆ ಯಾವ ರೀತಿ ಸಹಾಯವಾಗುತ್ತದೆ ಎಂದು ಅವನು ಯೋಚಿಸುತ್ತಿದ್ದ. ಈ ವರ್ಷ ರಾಜ್ಯೋತ್ಸವದ ಕಾರ್ಯಕ್ರಮ ಮಾಡಬೇಕು ಎಂದು ನಿರ್ಧರಿಸಿ,  ಕಮಿಟಿ ಮೀಟಿಂಗ್ ಸೇರಿದಾಗ ಸದಸ್ಯರೆಲ್ಲರು ಒಂದೇ ಹಟ ಹಿಡಿದರು. ಈ ಸಾರಿ ನಾವು ನಾಯಕ ನಟ ರೂಪೇಶನನ್ನು ಕರೆಸಬೇಕು. ಎಂದು . ಪಕ್ಕದ ಭಡಾವಣೆಯಲ್ಲಿ ಅವರು ಯಾರೊ ಮತ್ತೊಂದು ಕನ್ನಡ ಸಂಘದವರು, ಮತ್ತೊಬ್ಬ ನಟ ಸಂದೀಪನನ್ನು ಕರೆಸುತ್ತಿದ್ದಾರಂತೆ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಬೇಕು ಎಂದು ಅವರೆಲ್ಲರ ಹಟ. ಶಂಕರ ಎಷ್ಟೋ ಹೇಳಿದ, ನಾವು ಯಾರದೋ ಮೇಲಿನ ಪೈಪೋಟಿಗಲ್ಲ ರಾಜ್ಯೋತ್ಸವ ನಡೆಸುವುದು, ಕನ್ನಡ ಸೇವೆಗೋಸ್ಕರ ಎಂದು. ಪ್ರಸಿದ್ದರು ಬಂದರೆ ಕಾರ್ಯಕ್ರಮ ಸರಿಯಾಗಿ ನಡೆಸಲು ಆಗುವದಿಲ್ಲ, ಅಲ್ಲದೆ  ಸಂಬಂಧಪಡದ ಜನರು ಹೆಚ್ಚು ಸೇರುತ್ತಾರೆ ಹಾಗಾಗಿ ಸಭೆ ತನ್ನ ಘನತೆ ಕಳೆದುಕೊಳ್ಳುತ್ತದೆ ಎಂದು. ಆದರೆ ಯಾರು ತನ್ನ ಮಾತಿಗೆ ಬೆಲೆಕೊಡಲು ಸಿದ್ದರಿರಲಿಲ್ಲ. 
ಇಂದು ಆಗಿರುವುದು ಅದೇ, ತಮ್ಮ ಏರಿಯಾದ ಜನರು ಹೆಚ್ಚಿಗೆ ಇಲ್ಲವೇ ಇಲ್ಲ. ಯಾವುದೋ ಜನ ಎಲ್ಲಿಯವರೋ ಹೆಚ್ಚು ಹೆಚ್ಚು ಯುವಜನತೆ , ಪಡ್ಡೆ ಹುಡುಗರು, ಹುಡುಗಿಯರು ಕಾರ್ಯಕ್ರಮದಲ್ಲಿ ನುಗ್ಗಿ,  ರಾಜ್ಯೋತ್ಸವದ ಉದ್ದೇಶವೆ ಮರೆತಂತ ಆಗಿದೆ. ಪಾಪ ಅಧ್ಯಕ್ಷ ಸ್ಥಾನಕ್ಕೆ ರಾಮಯ್ಯನವರನ್ನು ಕರೆತಂದು ಅವಮಾನ ಮಾಡಿದಂತೆ ಆಗುತ್ತಿದೆ, ಅವರಿಗೆ ಯಾವ ಪ್ರಾಮುಖ್ಯತೆಯೂ ಇಲ್ಲ. ಅವರ ಮಾತನ್ನು ಕೇಳುವ ಜನರೂ ಇಲ್ಲಿ ಇಲ್ಲ ಅಂದುಕೊಂಡ. 
ಈ ರೂಪೇಶನನ್ನು ಅಹ್ವಾನಿಸಲು, ಮೊದಲೆ ಪೋನ್ ಮಾಡಿ ಒಪ್ಪಿಸಿ ಅವನ ಮನೆಗೆ ಹೋದ ಮೇಲು ಸುಮಾರು ಎರಡು ಘಂಟೆ ಕಾಲ ಗೇಟಿನಲ್ಲಿ ನಿಲ್ಲಿಸಿದ್ದರು. ನಂತರ ಅವರ ಮನೆ ಒಳಗೆ ಹೋಗುವಾಗಲು ನಮ್ಮ ಸದಸ್ಯರೆಲ್ಲರಿಗೂ ಎಂತದೋ ಹಿಂಜರಿತ, ಉದ್ವೇಗ. ಒಳಗೆ ಬಂದ ಅವನು ನಮ್ಮ ಅಹ್ವಾನ ಕೇಳಿ ನೇರವಾಗಿಯೆ ಹೇಳಿದ
 '  ನಾನು ನಿಮ್ಮ ಸಭೆಗೆ ಬರಲು ಅಡ್ಡಿ ಏನಿಲ್ಲ. ಆದರೆ ನಾನು ಯಾವುದೇ ಸಭೆ ಅಥವ ಕಾರ್ಯಕ್ರಮಕ್ಕೆ ಬರುವಾಗಲು ಚಾರ್ಚ್ ಮಾಡುತ್ತೇನೆ. ರಾಜ್ಯೋತ್ಸವದ ಕಾರ್ಯಕ್ರಮ ಎಂದರೆ ಐದು ಲಕ್ಷ ಕೊಡಲೇ ಬೇಕು. ಅದರಲ್ಲಿ ಚೌಕಾಸಿ ಏನಿಲ್ಲ.  ಅದಕ್ಕೆ ಒಪ್ಪಿಗೆ ಇದ್ದರೆ, ಹಣ ಕೊಡಿ ನಿಮ್ಮ ಕಾರ್ಯಕ್ರಮಕ್ಕೆ ಬರುತ್ತೇನೆ, ಇಲ್ಲದಿದ್ದರೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ. '
ನಮ್ಮ ಸಂಘದ ರಾಜ್ಯೋತ್ಸವದ ಒಟ್ಟು ಖರ್ಚು ನಾವು ಅಂದಾಜಿಸದಂತೆ ಏಳು ಲಕ್ಷ ಆಗಬಹುದು ಎಂದು ಕೊಂಡಿದ್ದೆವು, ಈ ಬಾರಿ ಅಷ್ಟು ಕಲೆಕ್ಷನ್ ಆಗುವುದು ಕಷ್ಟವಿತ್ತು, ಈಗ ಇವನೊಬ್ಬನಿಗೆ ಐದು ಲಕ್ಷ ಅಂದರೆ ಉಳಿದ ಖರ್ಚು ಹೇಗೆ ಹೊಂದಿಸುವುದು ಎಂದು ಶಂಕರ ಚಿಂತಿಸುತ್ತಿರುವಂತೆ ಕಾರ್ಯದರ್ಶಿ ರಮೇಶ ನಮಗೆ ಒಪ್ಪಿಗೆ ಇದೆ ಸಾರ್ ಅಂದುಬಿಟ್ಟ. ಅಲ್ಲದೆ ನಾಳೆ ಹಣವನ್ನು ತಂದು ಕೊಡುವದಾಗಿಯೂ ಹೇಳಿದ.  
ನಾಯಕ ನಟ ರೂಪೇಶ್ 
 " ನೋಡಿ ನನಗೆ ಕನ್ನಡ ಕಾರ್ಯಕ್ರಮಕ್ಕೆ ಹಣ ಪಡೆಯಬೇಕು ಎಂದೇನು ಇಲ್ಲ, ಆದರೆ ಏನು ಮಾಡುವುದು, ನಾನು ಬಿಟ್ಟಿ ಬರುತ್ತೇನೆ ಅಂದರೆ ಎಲ್ಲ ಸಂಘದವರು ಕರೆಯಲು ಬರುವರು, ನಿರಾಕರಿಸಲು ನನಗೆ ಕಷ್ಟ ನೋಡಿ " ಎಂದು ನಕ್ಕನಲ್ಲದೆ , ಹಣವನ್ನು ಕ್ಯಾಷ್   ಕೊಡಬೇಕೆಂದು ಚೆಕ್ ಬೇಡವೆಂದು ತಿಳಿಸಿದ. 

ಅಷ್ಟಕ್ಕೆ ಮುಗಿಯಲಿಲ್ಲ, ನಾಯಕ ನಟ ರೂಪೇಶ , ತುಂಬಾ ಜನ ಸೇರುವ ಕಾರಣ ತನಗೆ ಸಾಕಷ್ಟು ಭದ್ರತೆ ಒದಗಿಸಬೇಕೆಂದು ಕೋರಿದ್ದ,  ಅದಕ್ಕಾಗಿ ಸಂಘದ ಲೆಟರ್ ಹೆಡ್ ನಲ್ಲಿ ಪತ್ರ ಬರೆದು ಪೋಲಿಸರಲ್ಲಿಗೆ ಹೋದರೆ, ಪತ್ರ ಸ್ವೀಕರಿಸಿದ ಪೋಲಿಸ್ ಅಧಿಕಾರಿ 
' ಎಲ್ಲರಿಗೂ ರಕ್ಷಣೆ ಅಂದರೆ ನಾನು ಜನರನ್ನು ಎಲ್ಲಿಂದ ತರುವುದು, ಹೋಗಲಿ ಬಿಡಿ , ಇಪ್ಪತ್ತು ಜನ ಪೋಲಿಸರನ್ನು ಕಳಿಸುತ್ತೇನೆ. ಈಗಲೇ ಹೇಳಿದ್ದೇನೆ ಅವರ ಖರ್ಚನ್ನು ನೀವೆ ವಹಿಸಬೇಕಾಗುತ್ತೆ " 
" ಅಂದರೆ ಸಾರ್ "   ರಮೇಶ ಅರ್ಥವಾಗದವನಂತೆ ಕೇಳಿದ 
" ಅಂದರೆ ಏನ್ರಿ,  ಇಪ್ಪತ್ತು ಜನ ಕಾನ್ಸ್ಟೇಬಲ್ಸ್ , ಒಬ್ಬ ಎಸ್ ಐ, ಒಟ್ಟು ಇಪ್ಪತ್ತೆರಡು ಸಾವಿರ ಹಣ ಕೊಟ್ಟು ಹೋಗಿ
 "ಸಾರ್ ಅಷ್ಟೊಂದು ಹಣವ ಎಲ್ಲಿ ತರುವುದು "
" ರೀ ನನಗೆ ಗೊತ್ತಿಲ್ಲ ಅಂತ ಭಾವಿಸಿದ್ದೀರಾ, ಈಗ ನಾಯಕನಟ ರೂಪೇಶನನ್ನು ಕರೆಸುತ್ತಿದ್ದೀರಲ್ಲ, ಅವನೇನು ಬಿಟ್ಟಿ ಬರುತ್ತಿದ್ದಾನ, ಅವನಿಗೆ ಐದು ಹತ್ತು ಲಕ್ಷ ಅಂತ ಸುರಿಯುತ್ತೀರಿ, ನಾವು ಕೇಳಿದರೆ ಅಷ್ಟೊಂದಾ ಅಂತ ನೀರಾನೆ ತರ ಬಾಯಿ ತೆಗಿತೀರಲ್ರಿ. ಅವನೇನು ಕನ್ನಡದಲ್ಲಿ ಏನು ಕಿತ್ತು ಹಾಕಿದ್ದಾನೆ,  ಅವನಿಗಿಂತ ನಮ್ಮ ಕಾನ್ಸ್ಟೇಬಲ್ ಕರಿಯಪ್ಪ ವಾಸಿ ಅವನಿಗೆ ಗೊತ್ತಿರುವ ಜಾನಪದದ ಹಾಡುಗಳು ಗ್ರಾಮೀಣ ಸೊಭಗಿನ ಕನ್ನಡ , ಹಳ್ಳಿಯ ಹಾಡುಗಳು ನೋಡುವಾಗ  ನಿಮ್ಮ  ರೂಪೇಶನಿಗೆ ಏನ್ರಿ ಗೊತ್ತಿದೆ, ನನಗೆ ನಿಮ್ಮ ಜೊತೆ ಮಾತನಾಡಲು ಸಮಯವಿಲ್ಲ, ಒಳಗೆ ಹಣ ಕೊಟ್ಟು ಹೋಗಿ "
ಪೋಲಿಸ್ ಸ್ಟೇಶನ್ ನಲ್ಲಿ ನಿಂತು ಹಣದ ಬಗ್ಗೆ ಹೆಚ್ಚು ಚೌಕಾಸಿ ಮಾಡುವುದು ಕ್ಷೇಮವಲ್ಲ ಎನ್ನುವ ಅರಿವಿನೊಡನೆ, ಶಂಕರ ಹಾಗು ರಮೇಶ ಎದ್ದು ಒಳಗೆ ಹೋಗಿ ಅಪ್ಲಿಕೇಶನ್ ಹಾಗು ಹಣ ಒಪ್ಪಿಸಿ ಬಂದಿದ್ದರು.  

ಉಳಿದ ಖರ್ಚುಗಳನ್ನು ಖೋತ ಮಾಡಿ ರೂಪೇಶನಿಗೆ ಹಣ ಹೊಂದಿಸಲು ಸಾಹಸ ಪಟ್ಟಿದ್ದರು, ಅಷ್ಟಾದರು ಈ ವರ್ಷ ಹಣದ ತಾಪತ್ರಯ ಸಾಕಷ್ಟಿತ್ತು. ಅದೇ ಅಧ್ಯಕ್ಷ ಸ್ಥಾನದಲ್ಲಿದ್ದ ಕವಿ ರಾಮಯ್ಯನವರು ಪಾಪ ಯಾವ ಹಣದ ಬೇಡಿಕೆಯೂ ಇಟ್ಟಿರಲಿಲ್ಲ, ತಾವೆ ಆಟೋ ಮಾಡಿಕೊಂಡು ಬಂದಿದ್ದರು. ಅಲ್ಲದೆ ತಡವಾಗಿ ಬಂದ ರೂಪೇಶನಿಗೆ ಸಹನೆಯಿಂದ ಕಾಯುತ್ತ ಕುಳಿತ್ತಿದ್ದರು.  

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ , ಶ್ರೀಯುತ ರಾಮಯ್ಯನವರು ಒಳಗೆ ವಿಷಾದ ಪಡುತ್ತ ಹೊರಗೆ ಪೆದ್ದು ನಗೆ ನಗುತ್ತ ಕುಳಿತಿದ್ದರು, ಅವರು ಬೆಳಗಿನ ತಿಂಡಿ ಇನ್ನು ತಿಂದಿರಲಿಲ್ಲ. ಇನ್ನು ಅವರ ಭಾಷಣ ಬಾಕಿ ಇತ್ತು. 
ನಾಯಕ ನಟ ಹಾಡು ಮುಗಿಸಿ,  ಕೆಳಗಿಳಿಯುತ್ತಿರುವಂತೆ ಜನ ಸಾಗರ ಅತ್ತ ನುಗ್ಗಿತು, 
ಕಾರ್ಯಕ್ರಮ ಆಯೋಜಿಸಿದ್ದ  ವಸುಧ ಕನ್ನಡ ಸಂಘದವರು ಹರಸಾಹಸ ಪಡುತ್ತಿದ್ದರು,  ಸಂಘದ ಕಾರ್ಯದರ್ಶಿ  ರಮೇಶ ಬಂದು ಮೈಕಿನ ಮೂಲಕ, ಇನ್ನೂ ಕಾರ್ಯಕ್ರಮ ಬಾಕಿ ಇದೆ ಸಹಕರಿಸಿ ಎನ್ನುತ್ತಿದ್ದ ಮಾತು ಯಾರ ಮೇಲು ಪರಿಣಾಮ ಬೀರದೆ,  ಎಲ್ಲರೂ ನಾಯಕನ ಹಿಂದೆ ಓಡಿದರು.  ಸ್ಟೇಜ್ ಮೇಲೆ ಕುಳಿತಿದ್ದ, ಅಧ್ಯಕ್ಷ ರಾಮಯ್ಯನವರು, 
 " ಆಗಲ್ಲ ಬಿಡಿ, ಇನ್ನು ಅಷ್ಟೆ, ಕಾರ್ಯಕ್ರಮ ಮುಗಿಸಿಬಿಡೋಣ,  ಈ ರೀತಿ, ಪಬ್ಲಿಕ್ ಫಿಗರ್ ಬರುವ ಕಾರ್ಯಕ್ರಮಕ್ಕೆ ನಾನು ಬರಬಾರದು ಅಂದುಕೊಳ್ತೀನಿ , ಆಗೋದೆ ಇಲ್ಲ " ಎನ್ನುತ್ತ ಕೈಮುಗಿದು ಎದ್ದರು.   
ನೋಡಪ್ಪ ಶಂಕರ, ಇಂತ ಕಾರ್ಯಕ್ರಮವೆಲ್ಲ ಇಷ್ಟೆ, ಯಾರಿಗೂ ಕನ್ನಡ ಅದು ಇದು ಅಂತ ಏನಿರಲ್ಲ, ಏನೋ ನಡೆಯುತ್ತ ಇರುತ್ತೆ ಅಷ್ಟೆ, ಇರಲಿ ಇಂತಹುದೆಲ್ಲ ನೋಡಿರುವೆ ನನಗೆ ಬೇಸರವಿಲ್ಲ, ನೀನು ನನಗೊಂದು ಆಟೋ ಹಿಡಿದು ಕೊಡು ಅಲ್ಲಿಯವರೆಗೂ ನಾನು ಇಲ್ಲಿ ಕೂತಿರುತ್ತೇನೆ ಅಂತ, ಮೂಲೆಯಲ್ಲಿ ಹೋಗಿ ಕೂತರು. 

ಸಭೆ ಹೆಚ್ಚು ಕಡಿಮೆ ಖಾಲಿಯಾಗಿತ್ತು,   ಕಾರ್ಯದರ್ಶಿ ರಮೇಶ ಸಪ್ಪೆ ಮುಖದೊಡನೆ ರೂಪೇಶನನ್ನು ಕಳಿಸಿ ಬಂದ. 
ಸಂಘದ ಅಧ್ಯಕ್ಷ ಶಂಕರ ನಗುತ್ತ ಅಂದ  ’ ಏನಪ್ಪ ರಮೇಶ, ನಿಮ್ಮ ನಾಯಕನನ್ನು ಕಳಿಸಿ ದುಃಖವಾಗಿರುವಂತಿದೆ , ಇನ್ನೂ ಸ್ವಲ್ಪ ಕಾಲ ಇರು ಅಂತ ನೀನು ಹೇಳಿದ್ದರೆ ಇರುತ್ತಿದ್ದರೇನೊ "   
ಅಂದ ವ್ಯಂಗ್ಯವಾಗಿ. 
" ಬಿಡೋ ನಾನು ತಪ್ಪು ಮಾಡಿದೆ ಅನ್ನಿಸುತ್ತಿದೆ,  ಯಾರೋ ಕುಣಿದರು ಅಂತ ನಾನು ಕುಣಿಯಬಾರದಿತ್ತು. ಇವರೆಲ್ಲರು ಬಂದು ಕನ್ನಡ ಉದ್ದಾರ ಆಗುತ್ತೆ ಅಂತ ನಂಬಿದೆ ನೋಡು ಅದು ನನ್ನ ತಪ್ಪು. ದುರಂಹಕಾರಿ ಮನುಷ್ಯ,  ಇವರೆಲ್ಲ ಸಮಾಜದಲ್ಲಿ ಪ್ರಸಿದ್ದ ನಾಯಕರು " 
ಎಂದ 
" ಏಕೊ ಏನಾಯ್ತು, ಅಷ್ಟೊಂದು ಬೇಸರ ಪಡುವಂತದು ಏನಿದೆ, ಅವರುಗಳುಇರುವುದು ಹಾಗೇನೆ, ಅಲ್ಲದೆ ಅವರ ಸುತ್ತಲು ಅಭಿಮಾನಿಗಳು ತುಂಬಿರುತ್ತಾರೆ, ಹಾಗಾಗಿ ಅವರಿಗೆ ಸ್ವತಂತ್ರವಾಗಿ ಇರಲು ಮತನಾಡಲು ಆಗಲ್ಲ ಬಿಡು " ಎಂದ ಶಂಕರ 
" ಹಾಗಲ್ಲವೋ, ನಾನು ಹೇಗಿದ್ದರು  ರೂಪೇಶ ತನ್ನ ಕಾರಿನಲ್ಲಿ  ಮನೆಗೆ ಹೋಗುವಾಗ ಅದೇ ದಾರಿಯಲ್ಲಿ ಪಾಪ,  ಈ ಸಾಹಿತಿ ರಾಮಯ್ಯನವರ ಮನೆ ಇದೆಯಲ್ಲ ಒಂದು ಡ್ರಾಪ್ ಕೊಡಲು ಆಗುತ್ತ ಸಾರ್ , ರಾಮಯ್ಯನವರಿಗೆ ಪಾಪ ವಯಸ್ಸಾದವರು ಎಂದೆ ಅದಕ್ಕವನು ಎಂತಹ ದುರಂಹಕಾರದ ಮಾತು ಆಡಿದ ಗೊತ್ತ " 
ರಮೇಶನ ಮುಖ ಕೆಂಪಾಗಿತ್ತೂ
"ಏನಂತ ಅಂದರು "  
ಶಂಕರ ಕುತೂಹಲದಿಂದ ಕೇಳಿದ 
"  ರೀ ಸ್ವಾಮಿ, ನಮ್ಮದು ಕಾರು  , ವಯಸಾದವರು  ಅಂತ ಎಲ್ಲರಿಗೂ ಡ್ರಾಪ್ ಕೊಡಲು ಇದು  ಅಂಬ್ಯೂಲೆನ್ಸ್ ಅಲ್ಲ  "  ಅನ್ನುತ್ತಾ ವೇಗವಾಗಿ ಹೊರಟುಹೋದ
ಎಂದ ಶಂಕರ ಹಲ್ಲುಕಡಿಯುತ್ತ 
" ಅಯ್ಯೋ ನೀನ್ಯಾಕೆ ಅವರನ್ನು ಕೇಳಲು ಹೋದೆ, ನಾನು ರಾಮಯ್ಯನವರನ್ನು ಮನೆಗೆ ಬಿಟ್ಟು ಬರುವೆ " ಎಂದ ಶಂಕರ
"ಇಲ್ಲ ಬಿಡು ನಾನು ಹೋಗಿ ಬೇಗ ಬಿಟ್ಟು ಬರುವೆ ನಂದೀಶನ ಕಾರಿದೆ. ನೀನು ಸ್ವಲ್ಪ ಇದ್ದು ಚೇರ್, ಶಾಮಿಯಾನ ನೋಡಿಕೋ ಅಷ್ಟರಲ್ಲಿ ಬರುವೆ " ಎನ್ನುತ್ತ ಹೊರಟ . ರಾಮಯ್ಯನವರು  ರಮೇಶನ ಜೊತೆ ನಿಧಾನವಾಗಿ ಎದ್ದು ನಡೆಯುತ್ತ ಹೊರಟರು. 

ಅಲ್ಲಿದ ಜನರೆಲ್ಲ ಚದುರುತ್ತಿದ್ದರು, ವಸುಧ ಕನ್ನಡ ಸಂಘದ ಇತರ ಸದಸ್ಯರು, ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. 
ಶಂಕರ ಚಿಂತಿಸುತ್ತಿದ್ದ. ಇದೇನು ನಾವು ಎಲ್ಲಿಗೆ ಬಂದು ಮುಟ್ಟಿದ್ದೇವೆ. ಕನ್ನಡ ಸೇವೆ ಅನ್ನುವುದು ಸಹ  ಪ್ರದರ್ಶನ ಅಥವ ನಾಟಕೀಯವಾಗಿ ಹೋಗುತ್ತಿದೆಯಲ್ಲ. ಇದಕ್ಕೆಲ್ಲ ಅರ್ಥವಿದೆಯ. ಮುಂದಿನ ವರ್ಷದಿಂದ ನಿಜವಾಗಿಯೂ ಕನ್ನಡ ಭಾಷೆ ಬೆಳವಣಿಗೆ  ದೃಷ್ಟಿಯಿಂದ ಹೊಸ ರೀತಿಯ ಕಾರ್ಯಕ್ರಮ ಆಯೋಜಿಸಬೇಕು, ಏನಾದರು ಹೊಸದಾರಿ ಹುಡುಕಬೇಕು.  ಈ ರೀತಿ ಅರ್ಥವಿಲ್ಲದ ಸಾವಿರ ಸಾವಿರ ಜನ ಸೇರುವದಕ್ಕಿಂತ ಅರ್ಥಪೂರ್ಣವಾಗಿ ಹತ್ತು ಜನ ಸೇರಿದರು ಸಾಕು ಎಂದು ಯೋಚಿಸುತ್ತಿದ್ದ 
- ಶುಭಂ