Tuesday, April 29, 2014

ಯೋಗ ನಿದ್ರೆಗೆ ತೆರಳೋಣ.


ಯೋಗ ನಿದ್ರೆಗೆ ತೆರಳೋಣ.  

ಭಾರತದ  2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾರ ಚುನಾವಣೆಯ ಪಲಿತಾಂಶ ಘೋಷಣೆ.

 ನಂತರ , ಯಾರಿಗೆ ಯಾರು , ಯಾವ ಪಕ್ಷಕ್ಕೆ ಯಾವ ಪಕ್ಷ ಸಪೋರ್ಟ್ ಮಾಡುವರು ಎನ್ನುವ ಸಾರ್ವಜನಿಕ ಗೊಂದಲದ ನಡುವೆಯೆ ಒಂದು ಸರ್ಕಾರವಂತು ಜಾರಿಗೆ ಬರುತ್ತದೆ. ಉಳಿದಂತೆ ಯಥಾಪ್ರಕಾರ ಗದ್ದಲ, ನನಗೆ ಮಂತ್ರಿಪದವಿ ಸಿಗಲಿಲ್ಲ ಎನ್ನುವ  ಕೋಪ, ಮಂತ್ರಿಪದವಿ ಸಿಕ್ಕವರಿಗೆ ನನಗೆ ಉಪಯುಕ್ತವಾದ ಇಲಾಖೆ (?) ಸಿಗಲಿಲ್ಲ ಎಂಬ ಕೋಪ, ಮಾಧ್ಯಮಗಳಿಗೆ ಸಂತೆಯ ಸುಗ್ಗಿ, ನಂತರ ಎಲ್ಲವೂ ಮೌನ, ಉಳಿದ ಐದು ವರ್ಷ ಏನೋ ಪವಾಡ ನಡೆದುಬಿಡುವುದು ಎಂಬ ಭಾರತೀಯರೆಲ್ಲರ ನಿರೀಕ್ಷೆಗಳು ಮತ್ತೆ ಗಾಳಿಗುಳ್ಳೆಗಳಾಗಿ ಹಾರಾಡಿ ಒಡೆಯುತ್ತ,  ಮುಂದಿನ ಚುನಾವಣೆಯ ನಿರೀಕ್ಷೆ. ಮತ್ತಷ್ಟು ಹಗರಣಗಳು, ಭ್ರಷ್ಟಾಚಾರದ ಮರುನಿರ್ಮಾಣ. ಕಳೆದ ಅರವತ್ತು - ಅರವತೈದು ವರ್ಷಗಳಲ್ಲಿ ನಡೆಯುತ್ತಿರುವ ಇದಕ್ಕಿಂತ ಯಾವ ಬದಲಾವಣೆಯನ್ನು ನಿರೀಕ್ಷಿಸುವಂತಿಲ್ಲ.

ಸುಮಾರು ಮೂರು ತಿಂಗಳು ನಡೆದ ಚುನಾವಣ ಪ್ರಕ್ರಿಯೆಗಳು,  ವಿವಿದ ನಾಯಕರ ಬಾಷಣಗಳು, ಗಾಳಿಯಲ್ಲಿ ಸೃಷ್ಟಿಯಾಗಿ ಮಾಯವಾದ ಆಶ್ವಾಸನೆಗಳು. ಎಲ್ಲವನ್ನು ನಿಜಾ ಎಂದೇ ನಂಬಿ , ಎಂತದೋ ಒಂದು ಮಾಯಕದ ಬಲೆಯಲ್ಲಿ ಸಿಲುಕಿ ತಾನು ನಂಬಿದವರಿಗೆ ತನ್ನ ಮತವನ್ನು ನೀಡಿಬಂದ ಮತದಾರನಿಗೆ ,   ಸರ್ಕಾರಗಳು ಕೊಡುವ ಬೆಲೆ ಏರಿಕೆಯ ಶಾಕ್ ಗಳು, ಬಿಸಿಲಿನ ಝಳ ಹಾಗೆ ನೀರಿನ ಹಾಹಾಕಾರ ಈಗ ಕೇಳಿಸಲು ಪ್ರಾರಂಭ.  ಚುನಾವಣೆಯ ಕೊಚ್ಚೆಯಲ್ಲಿ ಮುಳುಗಿದ್ದ ಚಾನಲ್ ಗಳು ಮತ್ತೆ ಚುರುಕಾಗಿ ಕ್ಯಾಮರ ಹಿಡಿದು ದಿನಾ ಓಟ. ಏನೊ ಸಾಧಿಸಿಬಿಡುವೆವು ಎನ್ನುವ ಹುಸಿನಂಬಿಕೆ ಎಲ್ಲವೂ ಬಡ ಭಾರತೀಯನ ನೆಲದಲ್ಲಿ ಸದಾ ನಡೆಯುವ ನಾಟಕವೇ. ಇರಲಿ ಬಿಡಿ,

ಇಷ್ಟು ದೀರ್ಘ ಚುನಾವಣ ಪ್ರಚಾರದಲ್ಲಿ ಯಾವುದೇ ಪಕ್ಷವು ತಾನು ಗೆದ್ದು ಬಂದರೆ ನಂತರ ಐದುವರ್ಷಗಳ ಕಾಲ ತನ್ನ ಕಾರ್ಯಕ್ರಮಗಳು ಏನು ಎಂದು ಪ್ರಸ್ತಾಪ ಮಾಡಲಿಲ್ಲ. ತನ್ನ ಐದು ವರ್ಷಗಳ ತನ್ನ ಆರ್ಥಿಕ ನೀತಿ ಏನು. ಆ ಮೂಲಕ ಭಾರತವನ್ನು ಹೇಗೆ ಪ್ರಗತಿಯತ್ತ ಒಯ್ಯುವೆವು, ತಮ್ಮ ಪಕ್ಷದ  ಆರ್ಥಿಕ ನೀತಿ ಹೇಗೆ ಭಾರತದ ರೈತರನ್ನಾಗಲಿ, ಕಾರ್ಮಿಕರನ್ನಾಗಲಿ, ಮಧ್ಯಮವರ್ಗದ ಭಾರತೀಯರನ್ನಾಗಲಿ, ಬಡಜನರನ್ನಾಗಲಿ ಒಳಗೊಳ್ಳುವದೆಂದು ತಿಳಿಸಲಿಲ್ಲ.

ಹಾಗೆ ತಾನು ಅಧಿಕಾರಕ್ಕೆ ಬಂದಲ್ಲಿ ತನ್ನ ವಿದೇಶಿನೀತಿಗಳೇನು, ಮಿಲಿಟರಿಯನ್ನಾಗಲಿ, ಬಾಹ್ಯಕಾಶವನ್ನಾಗಲಿ, ವಿಜ್ಞಾನ, ವಿದ್ಯುತ್ ಕ್ಷೇತ್ರ, ಸಾರ್ವಜನಿಕ ಉದ್ದಿಮೆಗಳ ಭವಿಷ್ಯ. ಭಾರತದ ನೆಲದಲ್ಲಿ ತಾಂತ್ರಿಕ ಬೆಳವಣಿಗೆ ಇವುಗಳನ್ನು ಸಾದಿಸುವದರಲ್ಲಿ ತನ್ನ ಗುರಿ ಏನು ಎಂದು ಪ್ರಸ್ತಾಪ ಮಾಡಲಿಲ್ಲ.
 
 ಈ ದಶಕದಲ್ಲಿ ನೆಲಕಚ್ಚಿರುವ ವ್ಯವಸಾಯ, ಗ್ರಾಮೀಣ ಉದ್ದಿಮೆಗಳು, ಸಣ್ಣ ವ್ಯಾಪಾರಿಗಳು ಇವು ಯಾವುದಾದರು ಪ್ರಸ್ತಾಪ ?? ಊಹೂಂ....

ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಹೇಗೆ ಮಟ್ಟಹಾಕುವೆವು, ಕಪ್ಪುಹಣದ ನಿಗ್ರಹ ಹೇಗೆ, ಇಂತಹವುದನ್ನೆಲ್ಲ ತಮ್ಮ ಪಕ್ಷ ಹೇಗೆ ನಿಭಾಯಿಸುವುದು ? ಯಾರಿಗೂ ಬೇಕಿಲ್ಲ.

ದೇಶದಲ್ಲಿ ಹೆಚ್ಚಿರುವ ನೆಕ್ಸಲೈಟ್ ಸಮಸ್ಯೆಗಳು, ಭಯೋತ್ಪಾದನೆ, ಮತೀಯ ಭಾವನೆಗಳು , ಸತತ ಶೋಷಣೆಗೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವ ಹೆಣ್ಣಿನ ಭವಣೆಗೆ ಕಾರಣರು ಇಂತವರೆನ್ನೆಲ್ಲ ,  ಇವನ್ನೆಲ್ಲ ಧಮನಗೊಳಿಸುವ ಬಗ್ಗೆ ಏನಾದರು ನೀತಿ? .... ಇಲ್ಲಾ !!!

ಆದರೆ ಪ್ರತಿಯೊಬ್ಬ  ನಾಯಕರು ಚುನಾವಣೆಯಲ್ಲಿ ಭಾಷಣ ಮಾಡಿದರು, ತನ್ನ ವಿರೋದಿ ಪಕ್ಷಗಳನ್ನು ವಾಮಗೋಚರ ನಿಂದಿಸಿದರು. ಮಾತಿನಲ್ಲಿ ವ್ಯಕ್ತಿಗತ ಟೀಕೆಗಳು, ಆಧಾರವೆ ಇಲ್ಲದ ಹಲವು ಆರೋಪಗಳು ಎಲ್ಲವನ್ನು ಮಾಧ್ಯಮದವರು ಖುಷಿಯಾಗಿ ಮತದಾರರಿಗೆ ತಲುಪಿಸಿದರು.    ಮೋದಿಯವರನ್ನು ಹೆಚ್ಚುಕಡಿಮೆ ಎಲ್ಲ ಪಕ್ಷದವರು  ನಿಶ್ಪಕ್ಷಪಾತವಾಗಿ ಗುರಿಯಾಗಿಸಿ ತಮ್ಮ ಚುನಾವಣ ಪ್ರಚಾರ ನಡೆಸಿದರು, ಹಾಗೆ ಮೋದಿಯವರು ಸಹ ಏಕಾಂಗಿಯನ್ನು ಎಲ್ಲರನ್ನು ಎದುರಿಸಿ ತಮ್ಮ ಎದುರಾಳಿಗಳನ್ನು ಅವರ ತಪ್ಪುಗಳನ್ನೆಲ್ಲ  ಎತ್ತಿ ತೋರಿಸುತ್ತ, ವ್ಯಂಗ್ಯ ಭಾಷಣಗಳಿಂದ ಪ್ರಚೋದಿಸಿದರು. ಪ್ರತಿ ಪಕ್ಷದವರು ಎದುರಾಳಿ ಪಕ್ಷದವರನ್ನು ನಿಂದಿಸುತ್ತ ತಮ್ಮ ಪಕ್ಷವನ್ನು ಸಮರ್ಥಿಸುತ್ತ ಮತದಾರರಿಗೆ ಹೆಚ್ಚು ಹೆಚ್ಚು ಮನೋರಂಜನೆ ಒದಗಿಸಿದರು.

ಈ ಕೆಸರು ಎರಚಾಟದಲ್ಲಿ ಎಲ್ಲಾ ಪಕ್ಷದವರು ಸಹ ಬಾಗವಹಿಸಿ, ಮನಸೋ ಇಚ್ಚೆ, ತಮ್ಮ ಜ್ಞಾನಬಂಡಾರದಲ್ಲಿರುವ ಪದಗಳನ್ನೆಲ್ಲ ಹುಡುಕಿ ತೆಗೆದು ಕಿರುಚಾಡಿದರು, ಕಡೆ ಕಡೆಗೆ ಎಂದೋ ಸತ್ತು ಹೋದವರನ್ನು,  ಎದುರಾಳಿ ಪಕ್ಷಗಳ ನಾಯಕರ ಪತ್ನಿ, ಪತಿ, ಅಪ್ಪ ಅಮ್ಮ , ಭಾವ ಭಾವಮೈದುನ, ಅಣ್ಣ ತಮ್ಮ ಎನ್ನದೆ ಎಲ್ಲರನ್ನು ಬಾಷಣಗಳಲ್ಲಿ ತಂದು , ಚುನಾವಣ ಕಮೀಷನ್ ಸಹ ಬೆಚ್ಚಿಬಿದ್ದು ಎಚ್ಚರಿಕೆ ಕೊಡುವಂತೆ ವರ್ತಿಸಿದರು.  ಕಡೆ ಕಡೆಗೆ ಸನ್ಯಾಸಿಗಳು ಎಂದು ಹೆಸರು ಮಾಡಿರುವ ಭಾಬಾ ರಾಮದೇವ್ ಅಂತವರೂ ಸಹ ಮತ್ತೊಬ್ಬರ ಬಗ್ಗೆ ನಿರ್ಲಜ್ಜ ಟೀಕೆಗಳನ್ನು ಸಹ ಮಾಡಿ ಕೃತಾರ್ಥರಾದರು.

ಬಹುಶಃ  ಮತ್ತೊಂದು ತಿಂಗಳು ಈ ಕತೆ ಮುಂದುವರೆಯುತ್ತೆ.  ಇರಲಿ ಬಿಡಿ ಅನುಭವಿಸಿಬಿಡೋಣ.

ಹಾಗೆ ನಾವು ಮಹಾನ್ ಭಾರತದ ಪ್ರಜೆಗಳು, ಯಾರಿಗೆ ಮತ ಕೊಟ್ಟೆವು ಎನ್ನುವ ಪಶ್ಚಾತಾಪವಾಗಲಿ, ಅಥವ ಹೆಮ್ಮೆಯಾಗಲಿ ಪಡುವ ಅಗತ್ಯವಿಲ್ಲ. ಅಯ್ಯೋ ಇಂತವನಿಗೆ ಮತ ನೀಡಿದೆನಲ್ಲ ಎನ್ನುವ ನೋವು ಬೇಡ. ಹಾಗೆ ನಾನು ಉತ್ತಮ ಅಭ್ಯರ್ಥಿಗೆ ಮತ ನೀಡಿರುವೆ ಎನ್ನುವ ಭಾವವೂ ಬೇಡ.  ಈ ಚುನಾವಣ ಪ್ರಚಾರಗಳನ್ನು ಸಮಗ್ರವಾಗಿ ನೋಡುವಾಗ, ಬಹುಶಃ ಎಲ್ಲ ರಾಜಕೀಯ ಪಕ್ಷದ ನಾಯಕರು ಸಮಾನ ಮನಸ್ಥಿತಿಯಲ್ಲಿದ್ದಾರೆ ಅನ್ನಿಸುತ್ತಿದೆ. ಎಲ್ಲರ ಬೌದ್ದಿಕ ಮಟ್ಟವು ಒಂದೇ ಆಗಿದೆ.

ಯಾವ ಚಿಂತೆಯೂ ಬೇಡ, ಅವರು ಆಡಳಿತ ನಡೆಸುತ್ತಾ , ಮತ್ತಷ್ಟು ಭ್ರಷ್ಟಾಚಾರ ಹಗರಣ ಸೃಷ್ಟಿಸಿ ನಮ್ಮ ಚಕಿತರನ್ನಾಗಿ ಮಾಡುತ್ತ . ಮತ್ತೆ ಅದನ್ನೆಲ್ಲ ನಿರಾಕರಿಸಿ ನಮ್ಮನ್ನು ಗೊಂದಲದಲ್ಲಿ ದೂಡುತ್ತಾ , ಇಂದು ಒಂದು ಪಕ್ಷದಲ್ಲಿದ್ದವರು, ಎದುರು ಪಕ್ಷದ ನಾಯಕನನ್ನು ಹುಚ್ಚಾಪಟ್ಟೆ ಟೀಕೆ ಮಾಡಿ ನಿಂದಿಸಿದವರು, ನಾಳೆ ಅದೇ ಪಕ್ಷವನ್ನು ಸೇರಿ ತಾವು ನಿಂದಿಸಿದ ನಾಯಕನನ್ನೆ ಹೊಗಳಿ ಸಮರ್ಥಿಸುವರು. ಎಲ್ಲವನ್ನು ನಾವು ಸವಿಯೋಣ, ನೋಡಿ ಆನಂದ ಪಡುತ್ತ ,
ಮತ್ತೆ
ಐದುವರ್ಷಗಳ ಯೋಗ ನಿದ್ರೆಗೆ ತೆರಳೋಣ.
..ಆ.........ಆಕಳಿಕೆ.......
ಮೇರಾ ಭಾರತ್ ಮಹಾನ್....



1 comment:

  1. ಚುನಾವಣಾನಂತರೇಣ ಮತದಾರ:
    ಯೋಗ ನಿದ್ರಾವಸ್ಥಾ...

    ವಾಸ್ವವದ ಚಿತ್ರಣ.

    ReplyDelete

enter your comments please