Saturday, March 30, 2013

ಕತೆ : ಜಾತಸ್ಯ ಮರಣಂ ದೃವಂ


ಕತೆ :  ಜಾತಸ್ಯ ಮರಣಂ ದೃವಂ
===============

’ನಿಮ್ಮ ಕೈಲು ನನಗೆ ಏನು ಸಹಾಯ ಮಾಡಲು ಆಗಲ್ವಾಪ್ಪ”

ಮೊದಲು ನನಗೆ ಅರ್ಥವಾಗಲಿಲ್ಲ, ನಾನು ಇವರಿಗೆ ಮಾಡಬಹುದಾದ ಸಹಾಯ ಏನೆಂದು. ಸಂಭಂದಿಗಳ ಮನೆಗೆ ಹೀಗೆ ಸುಮ್ಮನೆ ಹೋಗಿದ್ದೆ ಪತ್ನಿಯ ಜೊತೆ. ಮನೆಯಲ್ಲಿ ಇದ್ದವರು ಇಬ್ಬರೆ ಗಂಡ ಹೆಂಡತಿ , ಅವರಿಬ್ಬರ ವಯಸ್ಸು ಆಗಲೆ  ಐವತ್ತು, ಅರವತ್ತು ವರ್ಷಗಳಿರಬಹುದು. ಒಳಕೋಣೆಯಲ್ಲಿ ಆಕೆಯ ತಾಯಿ ಮಲಗಿದ್ದರು, ಮೊದಲಿನಿಂದ ನೋಡಿದ್ದವರು, ವಯಸ್ಸು ನೂರು ಆಗಿಲ್ಲ, ತೊಂಬತ್ತು ದಾಟಿರಬಹುದೇನೊ. ಮಾತನಾಡಿಸಿದೆ,
’ಅಜ್ಜಿ ನಾನು ಬಂದಿರುವೆ ’ ಎಂದು. ಅದಕ್ಕೆ ಅವರು ಹೇಳಿದ ಮಾತು 
"ನಿಮ್ಮ ಕೈಲು ನನಗೆ ಏನು ಸಹಾಯ ಮಾಡಲು ಅಗಲ್ವಾಪ್ಪ?" ಎಂದು.  
"ಏನು ಸಹಾಯ ಅಜ್ಜಿ, ನಾನೇನು ಮಾಡಬೇಕು ಹೇಳಿ" ಎಂದೆ. 
ಅವರು ಶೂನ್ಯ ದೃಷ್ಟಿ ಇಟ್ಟು ನೋಡಿದರು , ನನ್ನನು ಅವರು ನೋಡಿದರು ಸಹ ಸುಕ್ಕುಬಿದ್ದ ಮುಖದಲ್ಲಿ ಯಾವುದೆ ಭಾವನೆಗಳು ಇಲ್ಲ. 
ಪಕ್ಕದಲ್ಲಿ ಕುಳಿತಿದ್ದ ಅವರ ಮಗಳು ಹೇಳಿದರು
"ಬಿಡಿ ಸುಮ್ಮನೆ ಹೀಗೆ ಏನೊ ಬೇಸರಕ್ಕೆ ಅವರು ಹೀಗೆ ಮಾತನಾಡುತ್ತಾರೆ" 

ಅಷ್ಟಾದರು ನನಗೆ ಅವರು ಕೇಳಿದ ಸಹಾಯ ಏನೆಂದು ಅರ್ಥವಾಗಲಿಲ್ಲ. ನಂತರ , ಆಕೆ ಹೇಳಿದರು
"ಏನು ಮಾಡುವುದು ಹೇಳಿ ಸಾವು ನಮ್ಮ ಕೈಯಲ್ಲಿದೆಯ, ಏನೊ ನಮ್ಮ ಅಮ್ಮನಿಗೆ, ಬದುಕಿದ್ದು ಸಾಕು ಸಾವು ಬರಲಿ ಅನ್ನುವ ನಿರೀಕ್ಷೆ, ಮಲಗಿದಲ್ಲೆ ಎಲ್ಲ ಸೇವೆ ಮಾಡಿಸಿಕೊಳ್ಳುವ ಅಸಹ್ಯಭಾವ, ಎಲ್ಲ ಸೇರಿ, ಒಮ್ಮೊಮ್ಮೆ ನನಗೆ ಸಾವು ಬರಬಾರದೆ ಅಂತ ಹಾತೊರೆಯುತ್ತಾರೆ, ನಿಮ್ಮಂತವರು ಯಾರಾದರು ಬಂದರೆ, ಹೀಗೆ ಸಹಾಯ ಮಾಡ್ತೀರ ಅಂತಾರೆ, ನಾನು ಎಷ್ಟೋ ಸಾರಿ ಹೇಳ್ತೀನಿ , ಅದೆಲ್ಲ ಮನಸಿನಿಂದ ಬಿಟ್ಟು ಸ್ವಸ್ಥವಾಗಿರು ಅಂತ ಕೇಳಲ್ಲ ಏನು ಮಾಡುವುದು" 

ನನಗೀಗ ಸ್ವಷ್ಟವಾಗಿತ್ತು, ಆಕೆ ನನ್ನ ಕೇಳಿದ ಸಹಾಯ, ಹೇಗಾದರು ಮಾಡಿಯಾದರು ಸರಿ, ಸಾಯಲು ಸಹಾಯ ಮಾಡ್ತೀರ ಅಂತ. ಎದೆಯ ಒಳಗೆಲ್ಲೊ ಜ್ವಾಲಮುಖಿ, ಎಲ್ಲ ಭಾವಗಳು ಉಕ್ಕಿ ಬಂದಂತೆ ಅನ್ನಿಸಿತು. 
ಮತ್ತೆ ಅದೇನೊ ಅಜ್ಜಿಯದು ಮಾತು ಅವರ ಮಗಳ ಜೊತೆ, 
"ನಿನ್ನೆ ಕನಸಿನಲ್ಲಿ ಐದು ಜನ ಒಟ್ಟಾಗಿ ಬಂದಿದ್ದರು, ಅವರೆಲ್ಲ ಹೇಳಿದ್ದಾರೆ, ಇನ್ನು ಸಾಕು, ಏನು ಬೇಡ ಅಂತ, ಸುಮ್ಮನಿದ್ದುಬಿಡು ಏನು ಮಾಡಬೇಡ ಅಂತ"  
ಮಗಳು ನಗುತ್ತಲೆ ಕೇಳಿದರು
"ಸರಿಯಮ್ಮ, ಯಾರು ಐದು ಜನ ನಿನ್ನ ನೋಡಲು ಬಂದವರು"  
ಅಜ್ಜಿಯ ಮರುಳು ಮಾತು
"ಅವರೆ ನರಸಿಂಹ, ರಾಘವೇಂದ್ರ, ಮತ್ತೆ ಗಾಯತ್ರಿ , ಸಾವಿತ್ರಿ , ಸರಸ್ವತಿ " 
ನಾನು ಬೆರಳು ಮಡಿಚಿದೆ, ಸರಿಯಾಗೆ ಐದು ಹೆಸರು ಹೇಳಿದರು, ಅಂದರೆ ಮಾತು ಮರುಳಾದರು, ಬುದ್ದಿಯಲ್ಲಿನ ’ಲಾಜಿಕ್’ ಇನ್ನು ಸರಿಯಾಗಿಯೆ ಇದೆ!
ಅವರ ಮಗಳು ಅಂದರು
"ಗೊತ್ತಾಯಿತು ಬಿಡು, ನಿನಗೆ ಈಗ ಕೊಡುವ ಮಾತ್ರೆ ತೆಗೆದುಕೊಳ್ಳುವ ಇಷ್ಟವಿಲ್ಲ, ಅದಕ್ಕೆ ಹೀಗೆ ಹೇಳುತ್ತಿರುವೆ"  
ಎಂದ ಆಕೆ , ನಮ್ಮತ್ತ ತಿರುಗಿ,
             
"ನೋಡಿ ಹೀಗೆ, ಈ ನಡುವೆ ಮಾತ್ರೆಯು ತೆಗೆದುಕೊಳ್ಳಲ್ಲ, ಊಟ ತಿಂಡಿಗಳನ್ನು   ಅಷ್ಟೆ  ನಿರಾಕರಿಸಿಬಿಡ್ತಾರೆ, ಮೈಯಲ್ಲಿ ಏನು ಶಕ್ತಿ ಇಲ್ಲ. ಕೈ ಎತ್ತ ಬೇಕಾದರು, ನಾವು ಪಕ್ಕಕ್ಕೆ ಎತ್ತಿ ಇಡಬೇಕು ಅನ್ನುವ ಸ್ಥಿತಿ,  ಏನು ಮಾಡುವುದು ಹೇಳಿ , ನಮಗೆ ಅವಳನ್ನು ನೋಡುವಾಗಲೆ ಪಾಪ ಅನ್ನಿಸುತ್ತೆ, ಆದರೆ ಅವಳು ಅದನ್ನು ಅನುಭವಿಸುವ ನೋವು ಇನ್ನು ಕಷ್ಟ" 
ಅವರನ್ನು ಎಡಪಕ್ಕಕ್ಕೆ ತಿರುಗಿಸಿ ಮಲಗಿಸಿದ ಆಕೆ,
“ಈಗ ಕೆಲವು ದಿನದಿಂದ ಮೈಯೆಲ್ಲ ಊತ ಬರುತ್ತಿದೆ, ನೀರು ತುಂಬುತ್ತಿದೆ ಅಂತಾರೆ ಡಾಕ್ಟರ್, ಕಿಡ್ನಿಯ ಸಮಸ್ಯೆ ಇರಬಹುದು, ಈಗ ಡಯಾಲಿಸೀಸ್ ಅವೆಲ್ಲ ಆಗಲ್ಲ ಇವರ ವಯಸ್ಸಿಗೆ, ಕುಡಿಯಲು ನೀರು ಜಾಸ್ತಿ ಕೊಡಬೇಡಿ ಅಂತಾರೆ, ಇವರು ಊಟಬೇಡ ಬರಿ ನೀರು ಸಾಕು ಅಂತಾರೆ” ಎಂದ ಆಕೆ, ಬನ್ನಿ ಹೊರಗೆ ಹೋಗೋಣ ಎಂದು ಎದ್ದರು, 

ನಾನು ಹೊರಟಂತೆ, ಅವರು ಸಹ  ನನ್ನ ಜೊತೆ ಹೊರಗೆ ಬಂದರು. ಜೊತೆ ಜೊತೆಗೆ ನನ್ನ ಪತ್ನಿಯು ಹೊರಬಂದಳು.
 ಹೊರಗಿನ ಹಜಾರದಲ್ಲಿ ಕುಳಿತೆವು, ಆಕೆ ಕಾಫಿ ಮಾಡುವೆ ಎಂದರು ಅದೆಲ್ಲ ಏನು ಬೇಡ ಅನ್ನುತ್ತ ತಡೆದರು , ಕೇಳದೆ ಕಾಫಿ ಮಾಡಿ ತಂದರು. ಮನೆಯಲ್ಲಿ ಕಾಯಿಲೆಯವರು , ವಯಸ್ಸಾದವರು ಒಬ್ಬರಿದ್ದರೆ, ಅವರನ್ನು ನೋಡಿಕೊಳ್ಳುವ ಜೊತೆ ಜೊತೆಗೆ ಅವರನ್ನು ನೋಡಲು ಬಂದವರಿಗು ಉಪಚಾರ ಸಾಗಬೇಕು, ಅನ್ನಿಸಿ ಮನಸಿಗೆ ಕಷ್ಟವೆನಿಸಿತು.
ನನ್ನಾಕೆ ಮೆತ್ತಗೆ ಕೇಳಿದಳು 
"ನಿಮ್ಮ ತಾಯಿ, ನಿಮ್ಮ ಅಣ್ಣನ ಮನೆಯಲ್ಲಿ ಸ್ವಲ್ಪ ದಿನ ಇದ್ದರು ಅಲ್ಲವೆ, ಪುನಃ ಇಲ್ಲಿಗೆ ಯಾವಾಗ ಬಂದರು" 
ಆಕೆ ಒಂದು ಕ್ಷಣ ಮೌನ 
"ಏನು ಮಾಡುವದಮ್ಮ, ಸಂಸಾರ ಎಂದ ಮೇಲೆ ಎಲ್ಲ ಇರುವುದೆ ಅಲ್ಲವೆ, ಅಮ್ಮನಿಗೆ ತೀರ ವಯಸ್ಸಾಗಿದೆ, ಮೊದಲಿನಿಂದಲು ನನ್ನ ಜೊತೆಗೆ ಇದ್ದರು, ಸ್ವಲ್ಪ ದಿನ ಅಣ್ಣ ಬಂದು ಕರೆದುಕೊಂಡು ಹೋದ, ಆದರೆ ಅತ್ತಿಗೆಗೆ ಇವರನ್ನು ಇಟ್ಟುಕೊಂಡು ಸೇವೆ ಮಾಡುವ ಇಷ್ಟವಿಲ್ಲ, ಎಲ್ಲ ಕಾರಣವನ್ನು ಹೇಳುತ್ತಾರೆ, ಕೆಲಸದವರು ಸಿಗುವದಿಲ್ಲ ಇತ್ಯಾದಿ.   ಅಣ್ಣನಿಗೆ ಅತ್ತಿಗೆ ನೇರವಾಗಿಯೆ ಹೇಳಿದ್ದಾರೆ ’ನಿಮ್ಮ ಅಮ್ಮನನ್ನು ಕರೆತಂದರೆ ನನ್ನನ್ನು ಯಾವ ಕೆಲಸಕ್ಕು ಕರೆಯಬೇಡಿ, ನೀವುಂಟು ನಿಮ್ಮ ಅಮ್ಮನುಂಟು ’ ಎಂದು, ದಿನಕ್ಕೆ ಒಂದು ಹೊತ್ತು ಮಾತ್ರ ತಟ್ಟೆಗೆ ಸ್ವಲ್ಪ ಅನ್ನ, ಸಾರು ಹಾಕಿ ಅಣ್ಣನ ಕೈಗೆ ಕೊಟ್ಟು, ನಿಮ್ಮ ತಾಯಿಗೆ ಕೊಡಿ   ಅನ್ನುತ್ತಾಳೆ, ಮತ್ತೆ ಏನು ಮಾಡಿದರು , ಇವರಿರುವ ರೂಮಿಗೆ ಒಳಕ್ಕೆ ಕೂಡ ಹೋಗಲ್ಲ. ಹಾಸಿಗೆ ಎಲ್ಲ ಗಲೀಜಾಗಿರುತ್ತೆ , ಹತ್ತಿರ ಹೋದರೆ ಕಾಯಿಲೆ ಬರುತ್ತೆ ಅಸಹ್ಯ ಎಂದು ಮುಖ ವಕ್ರ ಮಾಡುತ್ತಾರೆ’

ನಾನು ನಡುವೆ ಬಾಯಿ ಹಾಕಿದೆ,

"ಏನು ಮಾಡುವುದು ಆಗುತ್ತೆ, ಎಲ್ಲರಿಗು ವಯಸಾಗುತ್ತೆ, ವಯಸ್ಸಾದ ಮೇಲೆ ಇವೆಲ್ಲ ಅನುಭವಿಸಲೆ ಬೇಕು, ಸಾವೇನು ಎಲ್ಲರಿಗು ಸುಲುಭವಾಗಿ ಹತ್ತಿರ ಬರಲ್ಲ" 
ಸುಮ್ಮನಿದ್ದ ಆಕೆ ಮತ್ತೆ ಹೇಳಿದರು 
"ಹೌದು , ಅಣ್ಣ ಈ ಎಲ್ಲ  ವೇಧಾಂತವನ್ನು ಅತ್ತಿಗೆಗೆ ಹೇಳಿದ್ದಾನೆ
"ನಿನಗೆ ವಯಸಾದ ಮೇಲೆ ಏನು ಮಾಡುವೆ, ನಿನ್ನದು ಅದೇ ಸ್ಥಿಥಿ ಅಲ್ಲವೆ, ಬೇರೆಯವರ ಬಗ್ಗೆ ಅಸಹ್ಯ ಪಡಬೇಡ " ಎಂದು,
ಅದಕ್ಕೆ ಅತ್ತಿಗೆ "ನಾನು ಆ ಸ್ಥಿಥಿಗೆ ಬರಲ್ಲ, ಒಂದು ವೇಳೆ ನನಗೆ ಕೈ ಕಾಲು ಆಡದೆ ಹೋದರೆ, ವಿಷ ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳುವೆ ಹೊರತು, ಹೀಗೆ ಒಬ್ಬರಿಗೆ ಹೊರೆಯಾಗಲಾರೆ"  ಅಂದಳಂತೆ,,  
ಅಣ್ಣ ಮತ್ತೆ "ಅಂದರೆ ನಿನ್ನ ಮಾತಿನ ಅರ್ಥವೇನು, ಅಮ್ಮನಿಗೆ ನಾನು ವಿಷ ತಂದುಕೊಡಬೇಕೆ" ಎಂದು ಕೇಳಿದರೆ, 
’ನಾನೇಕೆ ಹಾಗೆ ಹೇಳಲಿ, ನಾನು ಅವರ ಪರಿಸ್ಥಿಥಿಯಲ್ಲಿದ್ದರೆ ಏನು ಮಾಡುತ್ತಿದ್ದೆ ಎಂದು ಹೇಳಿದೆ ಅಷ್ಟೆ,  ನೀವು ಹೇಗು ಇದ್ದಿರಲ್ಲ ಸೇವೆ ಮಾಡಲು, ದಾರಳವಾಗಿ ಇನ್ನು ಹತ್ತು ವರುಷ ಬದುಕಿ ಎಲ್ಲ ಆಸೆ ತೀರಿಸಿಕೊಳ್ಳಲಿ ಬಿಡಿ " ಎಂದು ಕೂಗಾಡಿದಳಂತೆ,   .. ಈ ಎಲ್ಲ ಮಾತುಗಳನ್ನು ಕೇಳಿ ಅಮ್ಮ ಸುಮ್ಮನೆ ಕಣ್ಣೀರು ಸುರಿಸುತ್ತಾಳೆ, ನನಗೆ ಎದ್ದು ಹೋಗುವ ಶಕ್ತಿ ಇಲ್ಲವೆ, ನೀನೆ ಹೇಗಾದರು ಮಾಡು ವಿಷವನ್ನು ಏನನ್ನಾದರು ತಂದುಕೊಡೆ, ನನಗೆ ಬದುಕುವ ಇಷ್ಟವಿಲ್ಲ , ಸಾಕು ಈ ನರಕದ ಬದುಕು ಅಂತ" 

ಎಂತದೋ ಮೌನ ಮನೆಯಲ್ಲಿ, ನನಗೆ ಏನು ಮಾಡಲು ತೋಚದೆ ಸುಮ್ಮನೆ ಕುಳಿತೆ. ಆಕೆಯ ಪತಿಯು ಅಷ್ಟೆ. ತಲೆತಗ್ಗಿಸಿ ಪೇಪರ್ ಓದುವದರಲ್ಲಿ ತಲ್ಲೀನ, ಪಾಪ ಅದೆಷ್ಟು ಸಾರಿ  ಕೇಳಿದ್ದರೊ ಈ ಎಲ್ಲ ಕತೆಯನ್ನು.

ಆಕೆಗೆ ಪಾಪ ತನ್ನ ಕಷ್ಟವನ್ನು ಯಾರಿಗಾದರು ಹೇಳಿ  ಸಮಾದಾನಪಟ್ಟುಕೊಳ್ಳುವ ಮನಸು, ಮತ್ತೆ ಮುಂದುವರೆಸಿದರು,

"ಒಬ್ಬ ಅತ್ತಿಗೆಯದಾಯಿತು, ನನ್ನ  ಮತ್ತೊಬ್ಬ ಅಣ್ಣ ಅತ್ತಿಗೆ ಇದ್ದಾರಲ್ಲ ,  ಅವರ ಮನೆಯಲ್ಲು ಅದೆ ಕತೆ, ಆಕೆ ತನ್ನ ಅತ್ತೆಯನ್ನು ಒಳಗೆ ಬಿಟ್ಟುಕೊಳ್ಳಲು ತಯಾರಿಲ್ಲ, ಮೊನ್ನೆ ನೋಡಿಕೊಂಡು ಹೋಗಲು ಅಂತ ಅತಿಥಿಗಳ ತರ ಬಂದಿದ್ದರು ಅಣ್ಣ ಅತ್ತಿಗೆ, ಅಮ್ಮ ಮಲಗಿದ್ದರೆ, ಅವರಿಗೆ ಕೇಳುವಂತೆಯೆ, ಪಕ್ಕದಲ್ಲಿ ಕುಳಿತು ಆಕೆ ಅಂದಳು 
"ಇವರಿಗೆ ಇನ್ನು ಬದುಕಿನಲ್ಲಿ ಆಸೆ ಹೋಗಿಲ್ಲ ಅದಕ್ಕೆ ಸಾವು ಹತ್ತಿರ ಬರುತ್ತಿಲ್ಲ, ಮನಸಿನಲ್ಲಿ ಆಸೆ ಇಟ್ಟು ಕೊಂಡಿದ್ದರೆ, ಸಾವು ಎಲ್ಲಿ ಹತ್ತಿರ ಬರುತ್ತೆ " ಎಂದಳು, ನಿಷ್ಟೂರವಾಗಿ" 
ಅಣ್ಣ ಅತ್ತಿಗೆ ಹೋದನಂತರ ಅಮ್ಮ ಮತ್ತೆ ಗೋಳಾಡಿದರು, 
’ನಿಜವಾಗಿಯು ನನಗೆ ಯಾವ ಆಸೆಯು ಇಲ್ಲಮ್ಮ,   ಬದುಕು ನಿಜಕ್ಕು ಸಾಕು ಅನ್ನಿಸಿದೆ, ಸಾವು ಬರಲಿ ಅನ್ನಿಸಿದೆ, ಆದರೆ ನನ್ನ ಕೈಲಿ ಇಲ್ಲವಲ್ಲ ಏನು"  ಎಂದು. 

ಅಮ್ಮನ ವ್ಯಥೆ, ನರಳಾಟ ಹೇಳುತ್ತ ಆಕೆಯ ದ್ವನಿಯೇಕೊ ಕುಗ್ಗುತ್ತಿತ್ತು, ದ್ವನಿ ಕಟ್ಟಿದಂತೆ ಅನ್ನಿಸುತ್ತಿತ್ತು,
ಆಕೆ ಹೇಳಿದರು
“ಅಮ್ಮ ಸಾವನ್ನು ಎಷ್ಟು ಕರೆಯುತ್ತಿದ್ದಾಳೆ ಅಂದರೆ ನನಗೆ ಕರುಳು ಕಿತ್ತು ಬರುತ್ತೆ, ಮೊನ್ನೆ ಮದ್ಯಾನ್ಹ ಅವಳ ಪಕ್ಕದಲ್ಲೆ ಪುಸ್ತಕ ಓದುತ್ತ ಕುಳಿತಿದ್ದೆ, ಆಕೆ ಮಲಗಿ ನಿದ್ದೆ ಹೋಗುತ್ತಿದ್ದಳು, ನಡುವೆ ಎಚ್ಚರವಾಯಿತೇನೊ, ಕಣ್ಣು ಬಿಟ್ಟಳು,  ನಂತರ ‘ಅಯ್ಯೊ ನಾನು ಇನ್ನು ಸತ್ತೆ ಇಲ್ಲವೇನೆ, ಬದುಕಿಯೆ ಇದ್ದೀನ” ಎಂದು ಗೊಣಗುತ್ತ, ಮತ್ತೆ ನಿದ್ದೆ ಹೋದಳು”

ಆಕೆಯ ಮಾತುಗಳನ್ನು ಕೇಳುತ್ತ, ಕೇಳುತ್ತ  ನನಗೇಕೊ ಮನುಷ್ಯನ ಬದುಕೆ ಬರ್ಭರವೆನಿಸಿತು. ಬದುಕಿನಲ್ಲಿ ಎಲ್ಲವು ಚೆನ್ನಾಗಿದ್ದಾಗ ಸುಂದರವೆ. ಆದರೆ ಒಮ್ಮೆ ಸ್ವಲ್ಪ ಏರುಪೇರಾಯಿತು ಅಂದರೆ ಆಯಿತು, ಬದುಕು ನರಕ.  ಒಳಗೆ ಅಸಹಾಯಕರಾಗಿ ಮಲಗಿರುವ ಅಜ್ಜಿಯ ಬದುಕು ನನಗೆ ಗೊತ್ತಿರುವುದೆ, ನಮ್ಮ ಅಮ್ಮನ ಬಾಯಲ್ಲು ಕೇಳಿರುವೆ. ಗಂಡನಿರುವ ತನಕ , ಅವರ ಮನೆಯಲ್ಲಿ ಸದಾ ತುಂಬಿರುವ ನೆಂಟರಿಷ್ಟರು,  ಆ  ಕಾಲಕ್ಕೆ ಓದಿಗಾಗಿ ಬಂದ ಎಷ್ಟೋ ಹುಡುಗರಿಗೆ ಅವರು ದಿನ ನಿತ್ಯ ಊಟವಿಟ್ಟಿದ್ದಾರೆ, ಅಮ್ಮನಿಲ್ಲದ ಹೆಣ್ಣು ಮಕ್ಕಳಿಗೆ ಇವರೆ ನಿಂತು ಬಾಣಂತನ ಮಾಡಿದ್ದಾರೆ. ತಮ್ಮ ಕೈಲಾದ ಸಹಾಯ ಎಲ್ಲರಿಗು ಮಾಡುತ್ತಲೆ ಬಂದವರು ಈ ಅಜ್ಜಿ. ಆದರೆ ಅವರ ಪತಿಯ ಮರಣದ ನಂತರ, ಮಕ್ಕಳೆ ಆದಾರ ಎನ್ನುವಂತಾಯಿತು. ಗಂಡುಮಕ್ಕಳಿಗು, ಸೊಸೆಯರಿಗು ಆಕೆಗು ಅದೇನೊ ಕೂಡಿಬರಲೆ ಇಲ್ಲ, ತಮ್ಮ ಮಗಳ ಮನೆಯಲ್ಲಿಯೆ ಜಾಸ್ತಿ ಸಮಯ ಕಳೆದರು.  ಈಗಂತು ಆಕೆ ಹಾಸಿಗೆ ಹಿಡಿದು ಮರಣ ಶಯ್ಯೆಯಲ್ಲಿ ಮಲಗಿದಾದ ಮೇಲೆ, ಗಂಡು ಮಕ್ಕಳ ಆಸರೆ ಪೂರ್ತಿ ತೊರೆದೆ ಹೋಯಿತು ಅನ್ನುವಂತಾಯ್ತು. 

ನನಗೇಕೊ ಈ ಪಾಪ ಪುಣ್ಯ ಎಲ್ಲದರ ಬಗ್ಗೆ , ಅನುಮಾನವೆನಿಸಿತು, ಈ ಅಜ್ಜಿ ಜೀವನದಲ್ಲಿ ಎಂದು ಯಾರಿಗು, ಒಂದು ಇರುವೆಗು ತೊಂದರೆ ಮಾಡಿದವರಲ್ಲ, ತಮ್ಮ ಕೈಲಾದ ಸಹಾಯ ಎಲ್ಲರಿಗು ಮಾಡುತ್ತ ಬಂದವರೆ, ಯಾರ ಬಾಯಲ್ಲಿ ಕೇಳಿದರು ಆಕೆಯ ಬಗ್ಗೆ ಕೆಟ್ಟಮಾತು ಬರಲ್ಲ, ಅಂತದರಲ್ಲಿ, ಈಕೆ ಗಳಿಸಿದ ಪುಣ್ಯದ ಲೆಕ್ಕ ಏನಾಯಿತು, ಯಾವ ಕಾರಣಕ್ಕೆ ಈಕೆ ಹೀಗೆ ಬದುಕಿನ ಕೊನೆಯಲ್ಲಿ ನರಕ ಅನುಭವಿಸುತ್ತಿದ್ದಾರೆ ಅನ್ನಿಸಿತು. ಮತ್ತೆ ಕಳೆದ ಜನ್ಮದ ಪಾಪ ಪುಣ್ಯಗಳ ಪಾಡು ಅನ್ನಲು ನನಗೆ ಮನಸ್ಸು ಬರುತ್ತಿಲ್ಲ.

ಮನುಷ್ಯನಿಗೆ ಬದುಕು ಸುಂದರವಾಗಿರುವಂತೆ, ಸಾವು ಸಹ ಸುಂದರವಾಗಿರಬೇಕಲ್ಲವೆ. ನಿಜ ನಮ್ಮ ಬದುಕಿಗೆ ಘನತೆ ಇರುವಂತೆ, ಸಾವಿನಲ್ಲು ಕೂಡ ನಮಗೆ ಗೌರವವಿರಬೇಡವೆ. ಬೇರೆಯವರ ಪಾಲಿಗೆ ದೊಡ್ದ ಹೊರೆಯಾಗಿ ಹಿಂಸೆಯಾಗಿ ನಾವು ಬದುಕಿರಬೇಕೆ. ಅದಕ್ಕಿಂತ ಆತ್ಮಹತ್ಯೆ, ಘನತೆಯ ಸಾವಲ್ಲವೆ ಅನ್ನಿಸಿತು. 

 ತಕ್ಷಣ ನೆನಪಿಗೆ ಬಂದಿತು,  ಈಚೆಗೆ ಕೇಳಿಬರುವ ’ದಯಾಮರಣದ’ ಬಗೆಗಿನ ವಾದಗಳು. ಮನುಷ್ಯನಿಗೆ ಬದುಕು ಬಾರವಾದಗ, ಇನ್ನು ಅವನು ಮತ್ತೆ ಎದ್ದು ಬರಲ್ಲ ಅನ್ನುವಾಗ, ಅವನ ಮೆದುಳು ಸತ್ತಿದೆ ಎಂದು ಡಾಕ್ಟರ್ ಗಳು ನಿರ್ಧರಿಸಿದಾಗ, ಹೀಗೆ ಯಾವುದ್ಯಾವುದೊ ಸಂದರ್ಭದಲ್ಲಿ ಅವನು ಇಚ್ಚೆಪಟ್ಟರೆ ಅವನಿಗೆ ಸಾವನ್ನು ಕೊಡುವುದು ಅವನ ಹಕ್ಕು ಅನ್ನುತ್ತಾರೆ. ನಿಜ. ಆದರೆ, ಸಾವನ್ನು ನಿರ್ದರಿಸುವಾಗ, ಸಾವನ್ನು ಬಯಸುವ ವ್ಯಕ್ತಿಯೆ ನಿರ್ಧರಿಸಿಬೇಕು. ಅವನ ಪರವಾಗಿ ಬೇರೆಯವರು ನಿರ್ದರಿಸುವುದು ಸರಿಯಲ್ಲ ಅನ್ನುವ ವಾದ. ಆದರೆ ಅವನಿಗೆ ಸಾವನ್ನು ನಿರ್ದರಿಸಿಲು ಸಹ ಮನಸಿಗೆ ಶಕ್ತಿ ಇಲ್ಲದಾಗ ಹೇಗೆ ಅನ್ನಿಸಿತು. ಒಬ್ಬ ವ್ಯಕ್ತಿ , ಕೋಮಗೆ ಹೋಗಿ ಮಲಗಿರುವಾಗ ನಾವು ಅವನ ಸಾವನ್ನು ನಿರ್ಧರಿಸಿ, ಅವನಿಗೆ ಸಾವು ಕೊಡುವುದು, ಸರಿಯಾದ ನೀತಿಯಲ್ಲ ಅನ್ನಿಸಿತು. 

ಆದರೆ ಇಲ್ಲಿ  ಪರಿಸ್ಥಿಥಿ ಬೇರೆ, ಈಕೆಗೆ ಬಾಳು ನರಕವೆನಿಸಿದೆ, ಎದ್ದು ಓಡಾಡಲು ಆಗದಂತ ಸ್ಥಿಥಿ, ಪಕ್ಕಕ್ಕೆ ತಿರುಗಿ ಮಲಗಲು ಸಹ ಅನ್ಯರ ಸಹಾಯ, ಹಾಸಿಗೆಯಲ್ಲಿಯೆ ಮಲಮೂತ್ರಗಳು ಆಗಬೇಕು ಅನ್ನುವ ಅಸಹ್ಯದ ಬದುಕು, ಹೀಗಿರುವಾಗ ಆಕೆ ದಯಾಮರಣ ಬಯಸುವುದು ಸಹಜವೆ ಅನ್ನಿಸಿತು. ನಾನು ಒಳಗೆ ಬಂದ ತಕ್ಷಣ ಆಕೆಯ ಮಾತು ನೆನಪಾಯಿತು ’ನಿಮಗು ಸಹ ಏನು ಸಹಾಯ ಮಾಡಲು ಅಗಲ್ವಾಪ್ಪಾ" , 

ನನ್ನ ಮೆದುಳಿನಲ್ಲಿ ಕರೆಂಟ್ ಹರಿದಂತೆ ಅನ್ನಿಸಿತು. ಎಲ್ಲ ಭಾವನೆಗಳು ಮನಸಿನಲ್ಲಿ ಒಮ್ಮೆಲೆ ದಾಳಿ ಇಟ್ಟಿತು, 

ಆಕೆ ನನ್ನನ್ನು ಕೇಳಿದ್ದು ”ದಯಾಮರಣಕ್ಕೆ”   ಸಹಾಯ  ಮಾಡಿ ಅಂತಲೆ ? 

ಹೌದು, ಅಂತಹ ದೊಡ್ಡ ಪದಗಳು, ಅಥವ ಕಾನೂನಿನ ಪದಗಳು ಅವಳಿಗೆ ಅರ್ಥವಾಗದಿರಬಹುದು ಆದರೆ ಆಕೆ ನನ್ನ ಬಳಿ ಕೇಳಿದ ಸಹಾಯ ಅದೆ ಅನ್ನಿಸಿದೊಡನೆ, ನನ್ನ ಕೈಕಾಲುಗಳಲ್ಲಿ ಸೋಲು ಕಾಣಿಸಿತು. ಹೇಗೆ ಸಾದ್ಯ ಅಂತಹ ಕೆಲಸ ನಾನು ನಿರ್ವಹಿಸಬಲ್ಲನೆ?. ಇದೆಲ್ಲ ಹುಚ್ಚು ಅನ್ನಿಸಿತು. ತಲೆಯಿಂದ ಆ ಯೋಚನೆ ದೂರಮಾಡಲು ಎದ್ದು ನಿಂತೆ. ನನ್ನಾಕೆ , ಆ ಮನೆಯಾಕೆಯ ಹತ್ತಿರ ಇನ್ನು ಎಂತದೋ ಮಾತು ನಡೆಸಿದ್ದಳು, ನಾನು ನಿಂತದ್ದು ಕಂಡು
"ಸರಿ ನಾವಿನ್ನು ಹೊರಡುವೆವು ಅಮ್ಮ" ಎಂದಳು. 
ಆಕೆ ಎಂದರು
"ಕೂತಿರಿ ಹೋಗಿ ಮಾಡುವದೇನು, ನಮಗೂ ಇಬ್ಬರೆ ಕುಳಿತು ಬೇಸರ, ಅಮ್ಮನ ಜೊತೆಗಂತು ಎಂತ  ಮಾತನಾಡುವಂತಿಲ್ಲ”   
ಅದಕ್ಕೆ ನನ್ನಾಕೆ ಅಂದಳು,
"ಇಲ್ಲ ಸಂಜೆಯಾಯಿತು, ಬೀಗ ಹಾಕಿ ಬಂದಿರುವೆವು, ಮನೆಗೆ ಹೋಗಿ ದೀಪ ಹಚ್ಚಬೇಕು"  
ಆಕೆ
"ಸರಿಯಮ್ಮ ಅಗಾಗ್ಯೆ ಬರುತ್ತಿರಿ, ನಮಗೂ ವಯಸ್ಸಾಯಿತು, ಯಾರಾದರು ನೋಡಲು ಬಂದರೆ ಸಂತಸ " ಎನ್ನುತ್ತ ಕುಂಕುಮ ತರಲು ಒಳಗೆ ಹೊರಟರು.
ನಾನು ಆಕೆಯ ಪತಿಯೊಂದಿಗೆ
"ಸರಿ ಸರ್, ಬರಲೆ ನಾನಿನ್ನು " ಎಂದೆ, ಅದಕ್ಕವರು
"ಸಂತೋಷವಪ್ಪ ಅಗಾಗ್ಯೆ ಬರುತ್ತಿರಿ" ಎಂದರು 
ನನ್ನವಳು ಅಜ್ಜಿಗೆ ಹೇಳಿಬರೋಣವೆ ಎನ್ನುತ್ತ ರೂಮಿಗೆ ಹೋದಳು. ಅಜ್ಜಿ ಏತಕ್ಕೊ ಸಪ್ಪೆಯಾಗಿದ್ದರು. ಮುಖವೆಲ್ಲ ಪೇಲವ, ನಾನು ನನ್ನವಳು ಒಳಗೆ ಹೋಗಿದ್ದನ್ನು ಕಂಡು, ಸಣ್ಣಗೆ  ನಡುಗುವ ದ್ವನಿಯಲ್ಲಿ
"ಮಗು, ಸ್ವಲ್ಪ ನೀರು ಕುಡಿಸುತ್ತೀಯ, ಅದೇನೊ ಗಂಟಲು ಆರುತ್ತಿದೆ" ಎಂದರು. ಆಕೆಗೆ ನೀರು ಜಾಸ್ತಿ ಕುಡಿಸುವಂತಿಲ್ಲ ಎಂದು ಅವರ ಮಗಳು ಹೇಳಿದ್ದಾಳೆ, ಆದರೆ ಪಾಪ ಅನ್ನಿಸಿತು
"ಸರಿ ಅಜ್ಜಿ" ಎನ್ನುತ್ತ, ಒಂದೆರಡು ಚಮಚದಷ್ಟು ನೀರನ್ನು, ಆಕೆಯ ಬಾಯಿಗೆ ಹಾಕಿದಳು, ನನ್ನವಳು,  ಅಜ್ಜಿಯ ಮುಖದಲ್ಲಿ ಎಂತದೊ ನೆಮ್ಮದಿ
"ಒಳ್ಳೆಯದಾಗಲಿ ಮಗು, ಗಂಟಲು ಒಣಗಿತ್ತು, ನೀನು ನನ್ನ ಜೀವ ಉಳಿಸಿದೆ " ಎಂದರು. 
ಒಳಗೆ ಹೋದ ನಾನು
"ಅಜ್ಜಿ ನಾವಿನ್ನು ಹೊರಡುತ್ತೇವೆ, ಹೋಗಬರಲ" ಎಂದು ಕೇಳಿದೆ
ಅದಕ್ಕೆ ಅಜ್ಜಿ
"ನೋಡ್ರಪ್ಪ, ನೀವು ಬಂದಾಗ ನಾನು ಏನೇನೊ ಮಾತನಾಡಿ ಬಿಟ್ಟೆ ಅನ್ನಿಸುತ್ತೆ,  ಮೊದಲೆ ನನ್ನ ಸೊಸೆಯರು ಹೇಳ್ತಾರೆ, ನನಗೆ ಬ್ರೈನ್ ಕಂಟ್ರೋಲ್ ಹೊರಟೋಗಿದೆ, ಮಾತು ಬುದ್ದಿ ಸ್ಥಿಮಿತದಲ್ಲಿಲ್ಲ ಎಂದು, ನಾನೇನಾದರು ತಪ್ಪು ಮಾತನಾಡಿದ್ದರೆ, ಕ್ಷಮಿಸಿಬಿಡಪ್ಪ" ಅಂದರು. 
ನನಗೆ ಎಂತದೊ ಸಂಕೋಚ, ಬೇಸರ, ಇಷ್ಟು ದೊಡ್ಡವರು ಕ್ಷಮಿಸಿ ಅನ್ನುವುದೆ
"ಹಾಗೆಲ್ಲ ಏನಿಲ್ಲ ಅಜ್ಜಿ , ನೀವು ಸರಿಯಾಗಿಯೆ ಮಾತನಾಡಿದ್ದೀರಿ, ಏನು ತಪ್ಪು ಆಡಿಲ್ಲ ಬಿಡಿ. ಅರಾಮವಾಗಿ ಮಲಗಿ" ಎನ್ನುತ್ತ ಅಲ್ಲಿಂದ ಹೊರಟೆ
"ಹೌದೆ , ಹಾಗಿದ್ದರೆ ಸರಿಯಪ್ಪ" ಎನ್ನುತ್ತ, ನೆಮ್ಮದಿಯಿಂದ ಕಣ್ಣು ಮುಚ್ಚಿ ಮಲಗಿಕೊಂಡರು.

ರೂಮಿನಿಂದ ಹೊರಗೆ ಬಂದು, ಆಕೆಗೆ, ಮತ್ತೆ ಆತನಿಗೆ ಪುನಃ ಹೇಳಿ ಮನೆಗೆ ಹೊರಟೆವು. ದಾರಿಯುದ್ದಕ್ಕು ಅಜ್ಜಿಯದೆ ಚಿಂತೆ,  
ನಮ್ಮ ಬದುಕು ಹೀಗೆ ಅಲ್ಲವೆ. ಒಮ್ಮೆ ನಮಗು ವಯಸ್ಸಾಗಿ, ನೋಡುವರಿಲ್ಲದೆ. ಈ ರೀತಿ ಹಾಸಿಗೆ ಹಿಡಿದರೆ, ಹೇಗೆ ಅನ್ನುವ ಭಾವ ಮನಸಿನಲ್ಲಿ ಬಂದೊಡನೆ, ಎದೆಯಲಿ ಎಂತದೋ ಸಂಕಟ, ಭಯ ಅನ್ನಿಸಿತು. 
ಮನದಲ್ಲಿ ಅಂದುಕೊಂಡೆ "ದೇವರೆ, ಆಕೆ ನರಳುವದನ್ನು ನೋಡಲಾಗುವದಿಲ್ಲ, ಏಕಪ್ಪ ಹಾಗೆಲ್ಲ ಆಡಿಸುತ್ತಿದ್ದಿ, ಅವಳಿಗೆ ಬದುಕು ಸಾಕು ಅನ್ನಿಸಿದೆ, ನಿನಗೆ ಇನ್ನು ಸಾಕು ಅನ್ನಿಸಿಲ್ಲವೆ" ಎಂದು

ಈ ರೀತಿಯ ಭಾವಗಳೊಡನೆ  ಮನೆಗೆ ತಲುಪಿದೆವು. ನನ್ನ ಪತ್ನಿಯ ಮುಖವು ಸಪ್ಪೆ ಸಪ್ಪೆ. ಬೀಗತೆಗೆದು ಮನೆಯೊಳಗೆ ಬರುವಾಗ,  ಜೋಬಿನಲ್ಲಿದ್ದ ಮೊಬೈಲ್ ಸದ್ದು ಮಾಡಿತು.  ನಾನು ಮೋಬೈಲ್ ಹೊರತೆಗೆದು ದೂರಹಿಡಿದು ನೋಡಿದೆ, ಅರೆ ಇದೇನಿದು ಮತ್ತೆ ಆಕೆಯೆ ಪೋನ್ ಮಾಡಿದ್ದಾರೆ,  ಈಗಿನ್ನು ಅವರ ಮನೆಯಿಂದ ಹೊರಟು ಬಂದೆವಲ್ಲ, ಮತ್ತೇನು ಸಮಾಚಾರ ಅಂದುಕೊಳ್ಳುತ್ತ,  ಮೊಬೈಲ್ ನ ಹಸಿರು ಬಟನ್ ಅದುಮುತ್ತ, ಕಿವಿಯತ್ತ ಹಿಡಿದು
“ಹಲೋ” ಎಂದೆ
-----------------   
ಮುಗಿಯಿತು

2 comments:

 1. ಇದು ನಿಮ್ಮ ಬ್ಲಾಗಿನಲ್ಲಿ ನಾನು ಓಡುತ್ತಿರುವ ಮೊದಲ ಪ್ರಕಟಣೆ ಸಾರ್,

  ದಯಾಮರಣ ಭಾರತವು ತೀವ್ರವಾಗಿ ಚಿಂತಿಸಲೇ ಬೇಕಾದ ಪ್ರಕ್ರಿಯೇ. ಅಮಾನವೀಯ ಅನಿಸಿದರು ಅದರ ಅನಿವಾರ್ಯತೆ ಅನುಭವಿಸುವ ಮರಣ ಸಮ್ಮುಖರಿಗೆ ಗೊತ್ತು ಅಲ್ಲವೇ?

  ಒಂದು ತೀವ್ರ ನೋವನ್ನು ಬಸಿದು ಬರೆದುಕೊಟ್ಟ ಕಥನ ಓದಿದ ಅನುಭವ.

  ReplyDelete
 2. ತಮ್ಮ ಅಭಿಪ್ರಾಯಕ್ಕೆ ವಂದನೆಗಳು.
  ದಯಾಮರಣ ಅಮಾನವೀಯ ಅನ್ನಿಸುವುದು ಸತ್ಯ
  ಹಾಗೆ ಆ ರೀತಿ ಮರಣಕ್ಕೆ ಕಾಯುತ್ತ ಮಲಗಿರುವರನ್ನು ನಾವು ನಡೆಸಿಕೊಳ್ಳುವ ರೀತಿಯು ಅಮಾನವೀಯವೆ!
  ಶುಭಬೆಳಗು!
  ಪಾರ್ಥಸಾರಥಿ

  ReplyDelete

enter your comments please