Sunday, August 5, 2012

ಕತೆ : ಎರಡನೆ ತಪ್ಪು


 ಮುರುಳಿಗೆ ಒಂದೆಡೆ ಕುಳಿತು ಕೊಳ್ಳಲು ಆಗುತ್ತಿಲ್ಲ. ಮನದಲ್ಲಿ ತುಂಬಿರುವ ಗಾಭರಿ ಮತ್ತು ಒತ್ತಡವನ್ನು ನಿವಾರಿಸಲು ಕಾರಿಡಾರ್ ನಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುವನು. ಅದೆ ಕಾರಿಡಾರ್ ನಲ್ಲಿ ಇದ್ದ ಕುರ್ಚಿಗಳ ಮೇಲೆ ಕುಳಿತ್ತಿದ್ದ ಅವನ ತಾಯಿ ಮತ್ತು ಅತ್ತೆ ಅವನತ್ತ ನಗುತ್ತ ನೋಡುತ್ತಿದ್ದಾರೆ. ಅದೊಂದು  ಹೆರಿಗೆ ಆಸ್ಪತ್ರೆ, ಬೆಂಗಳೂರಿನ ದಕ್ಷಿಣದಲ್ಲಿರುವ ನೆಟಕಲ್ಲಪ್ಪ ಸರ್ಕಲ್ ಹತ್ತಿರದ ಆಸ್ಪತ್ರೆ ಅದು. ಸ್ವಲ್ಪ ಕಾಲ ಕಳೆಯುತ್ತಿರುವಂತೆ ನರ್ಸ್ ಒಬ್ಬಾಕೆ ಈಚೆ ಬಂದಳು, ಇವರತ್ತ. ಮುರುಳಿಯ ತಾಯಿ ಮತ್ತು ಅತ್ತೆ ಕುಳಿತಿರುವತ್ತ ಬಂದು ನಗುತ್ತ ನುಡಿದಳು. 
"ಗಂಡು ಮಗು"
 
ಮುರುಳಿಗೆ  ಮನಸಿನ ಗಾಬರಿಯೆಲ್ಲ ಕಳೆದು, ಅಲ್ಲಿ ಸಂತಸ ತುಂಬಿಕೊಂಡಿತು, ಹತ್ತಿರ ಬಂದವನು ಕೇಳಿದ, 
 
"ಒಳಗೆ ಹೋಗಿ ನೋಡಬಹುದ?"  ನರ್ಸ್ ಮತ್ತೆ ನಗುತ್ತ ಅಂದಳು
 
"ಅಷ್ಟೊಂದು ಆತುರ ಪಟ್ಟರೆ ಹೇಗೆ , ಸ್ವಲ್ಪ ಕಾಲ ಕಾಯಬೇಕು, ಮಗುವಿಗೆ ಸ್ನಾನವಾಗುತ್ತಿದೆ"
.
.
ಅದೇ ಅಸ್ಪತ್ರೆಯಲ್ಲಿ ತಮ್ಮ  ಮಗಳ ಹೆರಿಗೆಗಾಗಿ ಮತ್ತು ಒಂದು ಕುಟುಂಬ ಕಾಯುತ್ತಿದೆ, ನೋಡಲು ಸ್ವಲ್ಪ ಬಡಕುಟುಂಬದಂತೆ ಕಾಣುತ್ತಿರುವ ಅವರನ್ನು ಡಾಕ್ಟರ್ ಗಳಾಗಲಿ ನರ್ಸ್ ಗಳಾಗಲಿ ನಗುತ್ತ ಏನು ಮಾತನಾಡಿಸುವದಿಲ್ಲ. ಆ ಕುಟುಂಬದ ಒಂದು ಹೆಣ್ಣು ತನ್ನ ಮಗುವಿಗೆ ಜನ್ಮ ಕೊಡಲು ಅಲ್ಲಿ ಬಂದು ಸೇರಿದ್ದಾಳೆ, ಅವಳಿಗು ಹೆರಿಗೆ ನೋವು. ಸ್ವಲ್ಪ ಕಾಲವಷ್ಟೆ ಆ ಹೆಣ್ಣು ಸಹ  ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. 
 
 ಆಸ್ಪತ್ರೆಯಲ್ಲಿನ ಇಬ್ಬರು ನರ್ಸ್ ಗಳು ಮಗುವನ್ನು ಸ್ವಚ್ಚಗೊಳಿಸಿ ಸ್ನಾನ ಮಾಡಿಸಲು, ಒಟ್ಟಿಗೆ ಬಂದು ಮಗುವಿನೆ ಸ್ನಾನ ಮಾಡಿಸಿ, ಮಗುವಿನ ಗುರುತಿಗೆ ಕೈಗೆ ಒಂದು ಬಾಡ್ಜ್ ಕಟ್ಟಿದರು ಅದರಲ್ಲಿ ಮಗುವಿನ ತಾಯಿಯ ಹೆಸರು ಮತ್ತು ಬೆಡ್ ನಂಬರ್ ಬರೆದಿತ್ತು, ಇಬ್ಬರು ಮಾತನಾಡುತ್ತ ವಾರ್ಡ್ ಕಡೆ ಹೊರಟರು, 
 
ಆಗ ಯಾರಿಗು ಅರಿವಾಗದ ಸಣ್ಣ ತಪ್ಪೊಂದು ನಡೆದು ಹೋಯಿತು. ಮಗುವಿಗೆ ಕಟ್ಟಿದ್ದ ತಾಯಿಯ ಹೆಸರಿನ ಬ್ಯಾಡ್ಜ್ ಅದಲು ಬದಲಾಗಿ ಹೋಗಿತ್ತು. ಯಾರ ಅರಿವಿಗು ಬಾರದೆ ಕೆಲವೊಂದು ಘಟನೆಗಳು ಪ್ರಪಂಚದಲ್ಲಿ ನಡೆಯುತ್ತಲೆ ಇರುತ್ತದೆ. 
 
ಅದು ದೊಡ್ಡ ಆಸ್ಪತ್ರೆ ಇಂತವೆಲ್ಲ ಗಮನಿಸುವುದು ಸ್ವಲ್ಪ ಕಷ್ಟವೆ. ಮಗುವನ್ನು ವಾರ್ಡಗೆ ತೆಗೆದುಕೊಂಡು ಹೋಗಿ ತಾಯಂದಿರ ಪಕ್ಕ ಮಲಗಿಸಲಾಯಿತು. ಜಗತ್ತಿನಲ್ಲಿ ಇಂತ ತಪ್ಪುಗಳೆಲ್ಲ ಆಗುತ್ತಲೆ ಇರುತ್ತದೆ. ಕೆಲವೊಮ್ಮೆ ಯಾರ ಗಮನಕ್ಕು ಬರುವುದೆ ಇಲ್ಲ.ಅಂತ ದೊಡ್ಡ ಆಸ್ಪತ್ರೆಯಲ್ಲಿ ಮಗುವೊಂದು ಅದಲು ಬದಲಾದರೆ ಯಾರು ಗುರುತಿಸಬೇಕು. ತಾಯಿ ಇನ್ನು ಮಗುವನ್ನು ನೋಡಿಲ್ಲದ ಸ್ಥಿಥಿಯಲ್ಲಿ. 
 
 ಸ್ವಲ್ಪ ಹೊತ್ತಿನಲ್ಲಿ ಮುರುಳಿ ಒಳಗೆ ಹೋಗಿ , ತನ್ನ ಪತ್ನಿಯನ್ನು, ಮಗುವನ್ನು ನೋಡಿ ಸಂಭ್ರಮಿಸಿದ. ಪತ್ನಿ ಕಮಲಳಿಗು ಅಷ್ಟೆ ಗಂಡನ ಸಂಭ್ರಮ ನೋಡುತ್ತ , ಸಂತಸ 
 
"ನೋಡೆ ಮಗು ನೋಡಲು ನನ್ನ ಹಾಗೆ ಇದೆ" 
 
"ಹೌದು ಹೌದು ಥೇಟ್ ನಿಮ್ಮ ಹಾಗೆ, ದಪ್ಪ ಮೀಸೆ ಒಂದು ತಂದು ಅಂಟಿಸಿಬಿಟ್ಟರೆ ಎಲ್ಲರು ಅವನನ್ನು ನೀವೆ ಅಂದು ಕೊಂಡುಬಿಡುತ್ತಾರೆ ಬಿಡಿ" ಪತ್ನಿ ಅವನನ್ನು ರೇಗಿಸಿದಳು.
 
..
.
.
ತಾಯಿ ಮಗುವನ್ನು ಐದು ದಿನದ ನಂತರ ಮನೆಗೆ ಕರೆತರಲಾಯಿತು, ಮತ್ತೆ ದಿನ ಕಳೆದ ಹತ್ತು ದಿನಕ್ಕೆ ಮಗುವಿನೆ , ತಾಯಿಗೆ ನೀರು ಹಾಕಿ, ನಂತರ ನಾಮಕರಣ ಇಟ್ಟುಕೊಂಡರು, ಎಲ್ಲರಿಗು ಸಂಭ್ರಮ. ಮುರುಳಿಗೆ ತಾನು ಮೊದಲ ಮಗುವಿಗೆ ತಂದೆಯಾದ ಸಂಭ್ರಮ.  ಅದೇನೊ ಮಗುವಿಗೆ ಕೃಷ್ಣಮೂರ್ತಿ ಎಂದು ಮಗುವಿನ ಇಬ್ಬರು ಅಜ್ಜಿಯರು ಸೇರಿ ಹೆಸರು ಆರಿಸಿದರು, ಅದೇ ಹೆಸರು ಗಟ್ಟಿಯಾಗಿ ಹೋಯ್ತು. ಮುರುಳಿ ಮಗುವಿನ ಕಿವಿಯಲ್ಲಿ 
"ಕೃಷ್ಣಮೂರ್ತಿ" ಎಂದು ಮೂರು ಸಾರಿ ಕರೆದು, ಹೆಸರನ್ನು ಇಟ್ಟು ಬಿಟ್ಟ. ಮನೆಯಲ್ಲಿ ಸೂಮಾರು ಐವತ್ತು ಅರವತ್ತು ಜನ ಸೇರಿದ್ದರು ಅವನ ಸಂಭ್ರಮಕ್ಕೆ ಜೊತೆಯಾಗಲು. 
 
.
.
 
ಮುರುಳಿ ಹಾಗು ಕಮಲಳ ನಿಜವಾದ ಮಗು ಶಂಕರ ಮತ್ತು ಪದ್ಮ  ಎಂಬುವರ ಮನೆ ಸೇರಿತು. ಅಲ್ಲಿ ಅಂತ ಸಂಬ್ರಮವೇನಿಲ್ಲ. ಹಣ ಖರ್ಚು ಮಾಡಲು ಹಣವೆ ಇಲ್ಲದ ಬಡಕುಟುಂಬವದು. ಆದರೆ ಮಗುವಿಗೆ ಹೆಸರಿಡುವ ಸಂಭ್ರಮವಂತು ನಡೆಯಲೆ ಬೇಕಲ್ಲ. ಹತ್ತಿರದಲ್ಲಿ ಇರುವ ಗಣಪತಿ ದೇವಾಲಯಕ್ಕೆ ಹೋಗಿ, ಅಲ್ಲಿ ಇರುವ ಪುರೋಹಿತರ ಕೈಲಿ ಪೂಜೆ ಮಾಡಿಸಿ , ನಂತರ ಮನೆಗೆ ಬಂದು ಅವರು ಮಗುವಿಗೆ ಹೆಸರಿಟ್ಟರು. ಅದೇನೊ ಪಕ್ಕದ ಮನೆಯ ಅಜ್ಜಿಯೊಂದು ಹೇಳಿತು 
"ಪದ್ಮ  ನಿನ್ನ ಮಗುವಿಗೆ ಕೃಷ್ಣಮೂರ್ತಿ ಎಂಬ ಹೆಸರಿಡೆ, ಚೆನ್ನಾಗಿರುತ್ತೆ" ಎಂದು, ಸರಿ ಅದೆ ಘಟ್ಟಿಯಾಯಿತು, ಆ ಮಗುವಿನ ಹೆಸರು ಸಹ 
"ಕೃಷ್ಣಮೂರ್ತಿ" ಎಂದು ಇಡಲಾಯಿತು. 
 
****************************************
 
ಮುರುಳಿ ಸರ್ಕಾರಿ ಕೆಲಸದಲ್ಲಿ ಏನಿರಲಿಲ್ಲ. ಮೊದಲಿನಿಂದಲು ಅವನಿಗೆ ಸ್ವಂತ ಉದ್ಯೋಗದತ್ತಲೆ ಒಲವು. ಅವನದು ಬೆಂಗಳೂರಿನಲ್ಲಿ ಊದುಬತ್ತಿಯ ಒಂದು ಫ್ಯಾಕ್ಟರಿ ಇದ್ದಿತು, ಅದರ ಹೆಸರು "ಸಾರಥಿ ಪರ್ ಫ್ಯೂಮರಿ" . ಸಾಕಷ್ಟು ಅದಾಯವು ಇತ್ತು. ಕೃಷ್ಣ ಮೂರ್ತಿ ಹುಟ್ಟಿದ ಬಳಿಕ, ಅದೆ ಫ್ಯಾಕ್ಟರಿ ಒಂದಕ್ಕೆ ಹತ್ತಾಗಿ ಬೆಳೆಯಿತು.  
ತನ್ನ ಮಗನ ಮೇಲಿನ ಪ್ರೀತಿಯಲ್ಲಿ  ಅವನು ಹೊಸ ಬ್ರಾಂಡಿನ ರಪ್ತುಮಾಡುವ ಕ್ವಾಲಿಟಿಯ ಊದುಬತ್ತಿಯನ್ನು ಮಾರ್ಕೆಟ್ ಗೆ ಬಿಟ್ಟು ಅದಕ್ಕೆ "ಕೃಷ್ಣ" ಎಂಬ ಹೆಸರು ಕೊಟ್ಟ. ಆ ಬ್ರಾಂಡ್ ತುಂಬಾ ಜನಪ್ರಿಯವಾಯಿತು. ನಂತರ ಅವನು ಅದಕ್ಕೆ ಸಂಬಂದಿಸಿದಂತೆ ಬೇರೆ ಬೇರೆ ವಿಭಾಗವನ್ನು ಆರಿಸಿಕೊಂಡ. ಪರ್ ಫ್ಯೂಮ್ ಗಳನ್ನು ತಯಾರಿಸಿ ವಿದೇಶಕ್ಕೆ ರಪ್ತು ಮಾಡಲು ಪ್ರಾರಂಬಿಸಿದ. ಕನಕಪುರ ರಸ್ತೆಯಲ್ಲಿ  ದೊಡ್ಡ ಎಸ್ಟೇಟ್  ಒಂದನ್ನು ಕೊಂಡು ಅದರಲ್ಲಿ ಸೆಂಟ್ ಗೆ ಅಗತ್ಯವಾದ ಮರಗಳನ್ನು ಬೆಳೆಸಲು ಪ್ರಯತ್ನಿಸಿದ. ಅವನಿಗೆ ಒಂದು ನಂಭಿಕೆ ಬೆಳೆಯಿತು. ತನ್ನ ಈ ಅದೃಷ್ಟಕ್ಕೆಲ್ಲ ತನ್ನ ಮಗ ಕೃಷ್ಣನೆ ಕಾರಣ. 
 
 ತಂದೆಯ ಹತ್ತಿರವಿರುವ ಅಪಾರ ಹಣ ಅನುಕೂಲಗಳು ಮಗ ಕೃಷ್ಣನ ದಾರಿ ತಪ್ಪಿಸಲಿಲ್ಲ. ಅವನು ಓದಿನಲ್ಲಿ ಅಪ್ರತಿಮನಾಗಿ ಮುಂದುವರೆದ. ಅವನು ತನ್ನ ಇಂಜಿನೀಯರಿಂಗ್ ಡಿಗ್ರಿ ಮುಗಿಸಿದಾಗ ಅವನಿಗೆ ಹೊರಗೆ ಕೆಲಸಕ್ಕೆ ಹೋಗುವ ಅಗತ್ಯವಿರಲಿಲ್ಲ. ತಂದೆ ಬೆಳೆಸಿದ ಉದ್ಯಮ ಅವನಿಗೆ ಕಾಯುತ್ತಿತ್ತು.  ಲಕ್ಷ್ಮಿ ಇರುವ ಕಡೆ ಸರಸ್ವತಿ ಇರುವದಿಲ್ಲ ಎನ್ನುವರು ಆದರೆ ಲಕ್ಷ್ಮಿ ಹಾಗು ಸರಸ್ವತಿ ಅವರ ಮನೆಯಲ್ಲಿ ಒಟ್ಟಿಗೆ ನೆಲೆಸಿದ್ದರು. 
 
 ಆದರೆ ಕಾಲ.ಸುಮ್ಮನಿರಬೇಕಲ್ಲ. ಕೃಷ್ಣಮೂರ್ತಿಗೆ ಮದುವೆಯಾಗಿ ಕೆಲವೆ ವರ್ಷಗಳಲ್ಲಿ ಅವನ ತಂದೆಯು ತೀರಿಕೊಂಡು, ಅವನು ಉದ್ಯಮವನ್ನು ಪೂರ್ತಿಯಾಗಿ ವಹಿಸಿಕೊಂಡ. ಅವನಿಗು ಮೊದಲ ಮಗುವೆ ಗಂಡು ಮಗುವಾಯಿತು. ಕಾಲಚಕ್ರ ಎಷ್ಟು ವೇಗವಾಗಿ ತಿರುಗುತ್ತೆ ಎಂದರೆ. ಕೃಷ್ಣಮೂರ್ತಿಯ ಮಗ ಆನಂದನಿಗೆ ಈಗ ಸುಮಾರು ಮೂವತ್ತು ವರ್ಷಗಳು. ಕೃಷ್ಣ ಮೂರ್ತಿಗೆ ಈಗ ಅರವತ್ತರ ಹತ್ತಿರ. ತನ್ನ ಮಗನ ಮೇಲೆ ಎಲ್ಲ ವ್ಯವಹಾರ ಬಿಟ್ಟು ಅವನು ಆದಷ್ಟು ವಿಶ್ರಾಂತಿ ಪಡೆಯುತ್ತಾನೆ. ಅವನಿಗೆ ಅದೇನೊ ಹೃದಯದ ಸಮಸ್ಯೆ. 
 
 
 
 ಈ ವಂಶದ ನಿಜವಾದ ಕೃಷ್ಣಮೂರ್ತಿ ಏನು ಮಾಡುತ್ತಿದ್ದಾನೆ ಅಂತ ಕುತೂಹಲವಲ್ಲವೆ,  ಅವನು ತನ್ನ ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಅಲೆದ. ಕೆಲವು ಕಾಲ ಬೆಂಗಳೂರು ಬಿಟ್ಟು ಹೊರಗೆಲ್ಲ ಹೋಗುವ ಸಂದರ್ಭ ಬಂದಿತು. ನಂತರ ಅದು ಹೇಗೊ, ಅವನಿಗೆ ಕೃಷ್ನಮೂರ್ತಿಯವರೆ ನಡೆಸುತ್ತಿದ್ದ ಸಾರಥಿ ಪರ್ ಫ್ಯೂಮರಿಯಲ್ಲಿ ಕೆಲಸ ದೊರಕಿತು. ಅವನು ಅಲ್ಲಿಯೆ ನೆಲಗೊಂಡು, ಉನ್ನತ ದರ್ಜೆಗೇರಿ, ತನಗೆ ಅರವತ್ತು ವರ್ಷವಾಯಿತು ಎಂದು ಹೇಳಿ ಹೇಗೊ ಮಾಡಿ ತನ್ನ ಮಗ ಕೇಶವನನ್ನು ಅಲ್ಲಿಯೆ ಕೆಲಸಕ್ಕೆ ಸೇರಿಸಿದ್ದ, ಈಗ ಕೇಶವ ಸಹ ಪರ್ ಪ್ಯ್ಯೂಮರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. 
 
**********************************************************
 
ಕಾಲಚಕ್ರದ ಈ ಉರುಳಿನಲ್ಲಿ ಅರವತ್ತು ವರ್ಷಗಳು ವೇಗವಾಗಿಯೆ ಕಳೆದಿತ್ತು. ಅದೇನೊ ಬೆಳಗ್ಗೆಯೆ ಕೃಷ್ಣಮೂರ್ತಿಯು ಹಾರ್ಟ್ ಪೈಲ್ಯೂರ್ ನಿಂದ ಅನಿರೀಕ್ಷಿತವಾಗಿ ಮರಣಹೊಂದಿದ. ಮನೆಯಲ್ಲಿ ಎಲ್ಲರಿಗು ದುಖಃ..         
ಎಲ್ಲರಿಗು ವಿಷಯ ತಿಳಿಯಿತು. ಅವರ ಪ್ಯಾಕ್ಟರಿಯಿಂದಲು ಸಾವಿರಾರು ಜನರು ಬಂದು ತಮ್ಮ ಗೌರವ ಅರ್ಪಿಸಿ ಹೋಗುತ್ತಿದ್ದರು. ಕಡೆಗೊಮ್ಮೆ ಬನಶಂಕರಿಯಲ್ಲಿಯೆ ಇರುವ ವಿಧ್ಯುತ್ ಚಿತಗಾರದಲ್ಲಿಯೆ ದಹನಕ್ರಿಯೆ ನಡೆಸುವದೆಂದು ತೀರ್ಮಾನವಾಯಿತು. ಎಲ್ಲರು ಬಂದು ಹೋದ ನಂತರ ವಾಹನದಲ್ಲಿ ಕೃಷ್ಣಮೂರ್ತಿಯವರ ದೇಹವನ್ನು ಬನಶಂಕರಿಯ ಚಿತಾಗಾರಕ್ಕೆ ತರಲಾಯಿತು. ಗೌರವ ಪೂರ್ವಕವಾಗಿ ಅಲ್ಲಿ ದಹನ ಕ್ರಿಯೆಗೆ ಕೊಡಲಾಯಿತು. ಅಲ್ಲಿಯ ರಿಜಿಷ್ಟರ್ ಒಂದು ಇತ್ತು ಅಲ್ಲಿಯ ಪುಸ್ತಕದಲ್ಲಿ ಅವರ ಹೆಸರು ಸಹ ರಿಜಿಸ್ಟರ್ ಆಯಿತು.  ಮರುದಿನ ಬಂದು ದಹನದ ನಂತರದ ಬೂದಿ ಹಾಗು ಮೂಳೆಗಳನ್ನು ಪಡೆಯುವಂತೆ ತಿಳಿಸಿದರು. ಅಲ್ಲಿಯ ಕೆಲಸಗಳೆಲ್ಲ ಮೂಗಿಸಿ ಎಲ್ಲ ಕಾರುಗಳು ಹೊರಡತ್ತಿರುವಂತೆ, ಮತ್ತೊಂದು ಕುಟುಂಬ ಅಲ್ಲಿ ಪ್ರವೇಶಿಸಿತು. 
...
 
ಹೌದು,  ಪಾಪ ಕೇಶವ ಅಘಾತಗೊಂಡಿದ್ದ , ಚೆನ್ನಾಗಿಯೆ ಇದ್ದ ಅವನ ಅಂದೆ ಕೃಷ್ಣ ಮೂರ್ತಿ , ಬೆಳಗ್ಗೆ ಕಾಪಿ ಕುಡಿದು ಪೇಪರ್ ಓದುತ್ತಿದ್ದವರು ಕುಸಿದು ಬಿದ್ದರು. ಅವರನ್ನು ಟ್ಯಾಕ್ಸಿ ಮಾಡಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಅವರು ಪ್ರಾಣನಿಟ್ಟಾಗಿತ್ತು. ಕೇಶವ ಅವರು ಕೆಲಸ ಮಾಡುತ್ತಿದ್ದ  ಪ್ಯಾಕ್ಟರಿಗೆ ವಿಷಯ ತಿಳಿಸಿದ. ಕೆಲವು ಹಿರಿಯ ಅಧಿಕಾರಿಗಳು ಬೇಟಿ ನೀಡಿದರು. ಕೇಶವನಿಗೆ ಧನ ಸಹಾಯವನ್ನು ನೀಡಿ ಸಾಂತ್ವನ ಹೇಳಿದರು. ಆಗ ಅವನಿಗೆ ವಿಷಯ ತಿಳಿಯಿತು. ತಾನು ಕೆಲಸ ಮಾಡುತ್ತಿದ್ದ, ಕಂಪನಿಯ ಯಜಮಾನರು ಸಹ ಬೆಳಗ್ಗೆ ನಿದನರಾದರು ಎಂದು.  ಎಲ್ಲ ಏರ್ಪಾಡು ಮುಗಿದು ಅವನು ಬನಶಂಕರಿಯ ಚಿತಗಾರಕ್ಕೆ ತನ್ನ ತಂದೆಯ ದೇಹವನ್ನು ತಂದ , ಗೆಳೆಯರ ಸಹಾಯದಿಂದ. ಅವರ ದೇಹವನ್ನು ಸಹ ದಹನಕ್ಕೆ ಕೊಡಲಾಯಿತು. ರಿಜಿಸ್ಟರ್ ನಲ್ಲಿ ಅವನ ಹೆಸರನ್ನು ಬರೆದು ಕೊಳ್ಳಲಾಯಿತು. ಮತ್ತು ಮರುದಿನ ಬಂದು ಬೂದಿ  ಪಡೆಯುವಂತೆ ತಿಳಿಸಲಾಯಿತು. 
 
*****************************************************
 
ಮರುದಿನ ಕೇಶವ ತನ್ನ ಸೋದರಮಾವನ ಜೊತೆ , ತನ್ನ ತಂದೆಯ ದೇಹದ ಬೂದಿಯನ್ನು ಪಡೆಯಲು ಒಳಬಂದವನು ನೋಡಿದ, ತನ್ನ ಕಂಪನಿಯ ಯಜಮಾನನ ಮಗ ಸಹ ಅಲ್ಲಿ ಇದ್ದಾರೆ. ಅಂದರೆ ಅವರು ಸಹ ಇಲ್ಲಿಯೆ ದಹನ ಕಾರ್ಯಗಳನ್ನು ನೆರವೇರಿಸಿದ್ದಾರೆ. ಅವನು ಸ್ವಲ್ಪಕಾದು ನಿಂತ, ಮೊದಲು ಅವರು ಪಡೆಯಲಿ ಎಂದು. ಅಲ್ಲಿಯ ಕೆಲಸಗಾರ, ಮೊದಲು ಬಂದಿದ್ದ ಅನಂದರನ್ನು ಅವರ ತಂದೆಯ ಹೆಸರನ್ನು ಕೇಳಿ, ಒಳಗೆ ಹೋದ.. ಅಲ್ಲಿ ಹಿಂದಿನ ದಿನ ದಹನವಾದ ಬೂದಿ ಹಾಗು ಮೂಳೆಯ ಚೂರುಗಳನ್ನು ಇಟ್ಟಿದ್ದ ಮಡಕೆಗಳನ್ನು ಸಾಲಾಗಿ ಜೋಡಿಸಲಾಗಿತ್ತು. ಮತ್ತು ಗುರುತಿಗೆ ಅವುಗಳ ಮೇಲೆ ಹೆಸರು ಬರೆಯಲಾಗಿತ್ತು. ಅದರಲ್ಲಿ ಅವನು ಕೃಷ್ಣಮೂರ್ತಿ ಎಂದು ಹೆಸರಿನ ಚೀಟಿ ಅಂಟಿಸಿದ್ದ ಮಡಕೆಯನ್ನು ತಂದು , ಹೊರಗಿದ್ದ ಆನಂದನ ಕೈಗೆ ಇತ್ತ. ಆನಂದ ಅದನ್ನು ಪಡೆದು, ತಲೆತಗ್ಗಿಸಿ, ತನ್ನ ಬಂದುಗಳೊಡನೆ ಅಲ್ಲಿಂದ ಹೊರಟ. ಆದಿನದ ಕಾರ್ಯಕ್ರಮದಂತೆ ಅಲ್ಲಿಂದ ಹೊರಟು ಅವರು ನೇರವಾಗಿ ಶ್ರೀರಂಗ ಪಟ್ಟಣ ಸೇರಿ ಅಲ್ಲಿ ಕಾವೇರಿ ನದಿಯಲ್ಲಿ ಬೂದಿಯನ್ನು ಅರ್ಪಿಸುವ ಕೆಲಸವಿತ್ತು.
 
 ನಂತರ ಕೇಶವ ಮುಂದೆ ಬಂದ, ಅಲ್ಲಿನ ಕೆಲಸಗಾರ ಇವನನ್ನು ಮೃತರ ಹೆಸರು ಕೇಳಿದ. ಇವನು ಕೃಷ್ಣಮೂರ್ತಿ ಎಂದು ತಿಳಿಸಿದಾಗ ಅವನು ಸ್ವಲ್ಪ ಆಶ್ಚರ್ಯದಿಂದಲೆ ಒಳಹೋದವನು ಅಲ್ಲಿಯ ಸಾಲು ಮಡಕೆಯಲ್ಲಿ ಮತ್ತೆ ಕೃಷ್ಣಮೂರ್ತಿ ಎಂಬ ಹೆಸರಿನ ಚೀಟಿ ಇದ್ದ ಮಡಕೆಯನ್ನು ಹೊರತಂದು ಕೊಟ್ಟ. ಅಲ್ಲಿ ಮಡಕೆ ನೀಡಿ ಸಹಿ ಪಡೆಯಲು ಕುಳಿತಿದ್ದ, ವ್ಯಕ್ತಿಗೆ ಎಂತದೊ ಸ್ವಲ್ಪ ಗಲಿಬಿಲಿ ಉಂಟಾಯಿತು, ಅವನು ಹೆಸರನ್ನು ನೋಡಿದ ಮತ್ತು ಅದರ ಸೀರಿಯಲ್ ನಂಬರ್ ಗಮನಿಸಿದ.  ಹೆಸರೇನೊ ಸರಿ, ಆದರೆ ಸೀರಿಯಲ್ ನಂಬರ್ , ಮಡಕೆಯ ಮೇಲೆ ಅಂಟಿಸಿದ್ದ, ನಂಬರಿಗು ರಿಜಿಸ್ಟರಿನಲ್ಲಿದ್ದ ಸೀರಿಯಲ್ ನಂಬರಿಗು ಸ್ವಲ್ಪ ವ್ಯತ್ಯಾಸವಿತ್ತು.  ಈ ಕೃಷ್ಣಮೂರ್ತಿಯ ಸೀರಿಯಲ್ ನಂಬರ್ ೫೫೩೫ ಅದಾಗಲೆ ಮೊದಲಿನವರು ತೆಗೆದುಕೊಂಡು ಹೋಗಿದ್ದರು. ಇಲ್ಲಿರುವುದು ಅವರ ಮನೆಯ ಕೃಷ್ಣಮೂರ್ತಿಯ ಬೂದಿಯ ಮಡಕೆ. ಅವನು ಯೋಚಿಸಿದ ಈಗ ವಿಷಯ ತಿಳಿಸಲು ಹೋದರೆ ಸುಮ್ಮನೆ ಗಲಾಟೆ.  ವಿಷಯ ಸೀರಿಯಸ್ ಆದರು ಆಗಬಹುದು. ನನಗೆ 'ಏಕೆ ಬೇಕೆ' ಅಂದುಕೊಂಡವನು ಕೇಶವನ ಸಹಿಯನ್ನು ಪಡೆದ. ನಿದಾನಕ್ಕೆ ಅವನ ಕೈಲಿ ಮಾತನಾಡುತ್ತ. ಮಡಕೆಯ ಮೇಲೆ ಅಂಟಿಸಿದ್ದ ಚೀಟಿಯನ್ನು ಉಗುರಿನಿಂದ ಕೆರೆದು ತೆಗೆದು. ಮಡಕೆಯನ್ನು ಅವನಿಗೆ ಕೊಟ್ಟು ಸಾಗಹಾಕಿ ನಿಟ್ಟುಸಿರು ಬಿಟ್ಟ. 
 
 ಹೌದು ಈ ಪ್ರಪಂಚದಲ್ಲಿ ಯಾರ ಅರಿವಿಗು ಬಾರದಂತೆ ಕೆಲವು ಘಟನೆಗಳು ನಡೆಯುತ್ತ ಇರುತ್ತದೆ,  ಪಾಪ ಚಿತಗಾರದಲ್ಲಿ ಅಲ್ಲಿಯ ಕೆಲಸಗಾರರ ನಿರ್ಲಕ್ಷದಿಂದ, ಮತ್ತು ಮೃತರ ಮಕ್ಕಳ ನಿರ್ಲಕ್ಷ್ಯದಿಂದ , ಇಬ್ಬರ ದೇಹದ ದಹನದ ಬೂದಿ ಹಾಗು ಮೂಳೆಯ ಚೂರು ಅದಲು ಬದಲಾಗಿ ಹೋಗಿತ್ತು, ತಮ್ಮ ತಂದೆಯದು ಎಂದು ತಿಳಿದ ಇಬ್ಬರು ಮಕ್ಕಳು ಮತ್ತ್ಯಾರದೊ ಬೂದಿಯನ್ನು ಪಡೆದು ಹೋಗಿದ್ದರು. 
 
********************************************************
 
 ಶ್ರೀರಂಗಪಟ್ಟಣದಲ್ಲಿ ನದಿಯ ದಡದಲ್ಲಿ ಮಡಕೆಯನ್ನು ಮುಂದಿಟ್ಟು ಕುಳಿತ ಆನಂದನಿಗೆ ಪುರೋಹಿತರು ಕೇಳುತ್ತಿದ್ದರು, ಮೃತರ ಹೆಸರೇನು, 
"ಕೃಷ್ಣಮೂರ್ತಿ", ಮತ್ತೆ ಅವರ ತಂದೆಯ ಹೆಸರು ಎಂದು ಕೇಳಿದರು
" ಮುರಳಿ " , ಮತ್ತೆ ಅವರ ತಂದೆಯ ಹೆಸರು ಅವರು ಕೇಳಿದರು
"ಅದು... ನಾರಯಣರಾವ್  " , ಪುರೋಹಿತರು ಮಂತ್ರ ಜೋರಾಗಿ ಹೇಳುತ್ತಿದ್ದರು, 
 
.....
 
ನಿಜ 
ತಪ್ಪು ಮತ್ತೆ ಸರಿಯಾಗಿತ್ತು.  
ಹಿಂದೆ ಅರಿಯದೆ ನರ್ಸ್ ಒಬ್ಬಳು ಮಾಡಿದ ತಪ್ಪನ್ನು ,  ಕಾಲನು  ಅರವತ್ತು ವರ್ಷಗಳ ನಂತರ ಮತ್ತೆ ಚಿತಾಗರ ಒಂದರ ಕೆಲಸಗಾರನ ತಪ್ಪಿನ ಮೂಲಕ ಸರಿಪಡಿಸಿದ್ದ. 
 
ಎರಡನೆ ತಪ್ಪು ಮೊದಲ ತಪ್ಪನ್ನು ಸರಿಪಡಿಸಿತ್ತು.
 
ಇಬ್ಬರು ಕೃಷ್ಣಮೂರ್ತಿಯರು ನಿಜವಾದ ತಮ್ಮ ವಂಶವನ್ನು ಸೇರಿ ತಮ್ಮ ಪಿತೃಗಳೆಡೆಗೆ ಪಯಣಮಾಡಲು ಸಜ್ಜಾಗುತ್ತಿದ್ದರು. 
 

No comments:

Post a Comment

enter your comments please