Tuesday, December 6, 2011

ವೈದೀಕ

ವೈದೀಕ

ಭಾಗ - ಒಂದು

ನಡುಮಧ್ಯಾಹ್ನದ  ಸಮಯ

ಇಬ್ಬರೆ ನಡೆದು ಹೊರಟಿದ್ದರು , ರಾಜಾಜೀನಗರದ ಒಂದನೆ ಬ್ಲಾಕಿನ ಏಳನೆ ಕ್ರಾಸಿನ ಮನೆಯಲ್ಲಿ ಈದಿನ ವೈದೀಕ, ಅಲ್ಲಿಗೆ ಕರೆಯಲ್ಪಟ್ಟ ಬ್ರಾಹ್ಮಣರು ಇವರಿಬ್ಬರು. ಬೆಂಗಳೂರಿನ ಮಲ್ಲೇಶ್ವರದ ವೈದೀಕಧರ್ಮಶಾಲೆಯಲ್ಲಿ ಇವರ ವಾಸ . ಸಾಮಾನ್ಯವಾಗಿ ಹೊರಗೆ ಹೋಗುವದಿಲ್ಲ ಧರ್ಮ ಶಾಲೆಯಲ್ಲಿಯೆ ಸಾಕಷ್ಟು ಕಾರ್ಯಕ್ರಮಗಳು ಇರುತ್ತವೆ , ಪುರೋಹಿತ ವೆಂಕಟೇಶಯ್ಯನವರು ಯಾವುದೇ ಶ್ರಾದ್ಧ ಒಪ್ಪಿಕೊಂಡರು ಇವರಿಬ್ಬರು ಪರಿಚಿತರು ಎಂಬ ಕಾರಣಕ್ಕೆಬ್ರಾಹ್ಮಣಾರ್ಥಕ್ಕೆ ಇವರನ್ನೆ ಕರೆಯುತ್ತಿದ್ದರು . ಇಬ್ಬರಲ್ಲಿ ಒಬ್ಬರಿಗೆ ಹೇಳಿದರು ಸಾಕಿತ್ತು ಇಬ್ಬರು ಜೊತೆಯಾಗಿಯೆ ಹೋಗುತ್ತಿದ್ದರು .

ಇಬ್ಬರಿಗು ಸಂಸಾರವಿರಲಿಲ್ಲ , ಇಬ್ಬರೆ ಜೊತೆಯಾಗಿ ವೈದೀಕ ಧರ್ಮ ಶಾಲೆಯ ಹತ್ತಿರವೆ ಮನೆ ಮಾಡಿಕೊಂಡು ವಾಸವಾಗಿದ್ದರು. ಒಬ್ಬರ ಹೆಸರು ವಿನಾಯಕ ಜೋಯಿಸ ಇವರು ಸಾಮಾನ್ಯವಾಗಿ ಈ ವಲಯದಲ್ಲಿ ಎಲ್ಲರಿಗು ಪರಿಚಿತರು, ಪತ್ನಿಯ ಮರಣದ ನಂತರ ಒಬ್ಬಳೆ ಮಗಳಿಗೆ ಹೊರೆಯಾಗಲು ಇಷ್ಟಪಡದೆ ಇಲ್ಲಿ ಬಂದು ನೆಲೆಯೂರಿದ್ದರು , ಅಗಾಗ್ಯೆ ತಮ್ಮ ಮಗಳನ್ನು ನೋಡಿಬರಲು ಉಡುಪಿಗೆ ಹೋಗಿ ಬರುತ್ತಿಧ್ಧರು, ಅದರೆ ಅದು ತುಂಬ ಅಪರೂಪ.

ಇವರ ಜೊತೆಯಿರುವ ನಾರಾಯಣ ಭಟ್ಟರು ತುಂಬ ಹಳೆಯ ಪರಿಚಯವೆನಲ್ಲ, ಕೇವಲ ಎರಡು ವರ್ಷಗಳಿಂದೀಚೆಗೆ ಬಂದು ಸೇರಿದವರು. ಇವರ ಹಿನ್ನಲೆ ಯಾರಿಗು ಸರಿಯಾಗಿ ತಿಳಿಯದು , ಅದರೆ ತಿಂಗಳಿಗೊಂದು ಸಾರಿ ಇವರು ಗುಪ್ತವಾಗಿ ಎಲ್ಲಿಗೋ ಹೋಗಿ ಬರುತ್ತಿದ್ದರು , ಕೇಳಿದಾಗ ಹೊರನಾಡು,ಶೃಂಗೇರಿ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದರು . ನಾರಾಯಣ ಭಟ್ಟರ ಉಳಿತಾಯದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಏನು ಮಾಡಿದರು  ತಿಳಿಯಲಾಗಿರಲ್ಲಿಲ್ಲ.  ಅಲ್ಲದೆ ನಾರಾಯಣರಿಗೆ ಸಾಧಾರಣ ಮಂತ್ರಗಳು  ತಿಳಿದಿರಲಿಲ್ಲ , ಹೇಗೊ ತಿಥಿ ಬ್ರಾಹ್ಮಣಾರ್ಥದಲ್ಲಿ ಹೆಚ್ಚು ಬಾಯಿ ಬಿಡುವಹಾಗಿರಲಿಲ್ಲ , ಹಾಗಾಗಿ ಅದನ್ನು ನಿಭಾಯಿಸುತ್ತಿದ್ದರು. ಈ ವಿಷಯವು ವಿನಾಯಕರಿಗೆ ಚೆನ್ನಾಗಿಯೆ ತಿಳಿದಿತ್ತು , ಆದರು ಬ್ರಾಹ್ಮಣನ ಹೊಟ್ಟೆಪಾಡು ಎಂದು ಸುಮ್ಮನಾಗಿದ್ದರು.


ಇಬ್ಬರು ಮಾತನಾಡುತ್ತ ಮನೆಯ ಹತ್ತಿರ ಬಂದರು ,

ವಿನಾಯಕರಿಗೆ ಮನೆ ಚೆನ್ನಾಗಿಯೇ ತಿಳಿದಿತ್ತು ಹಾಗಾಗಿ ಮನೆ ಹುಡುಕುವ ಶ್ರಮವಿರಲಿಲ್ಲ.

ನಾರಾಯಣ ಭಟ್ಟರಿಗೆ ಏಕೋ ಬೆಳಗಿನಿಂದಲೆ ಇಂದು ಮನಸ್ಸು ಸರಿಯಿರಲಿಲ್ಲ

ಅದಕ್ಕೆ ಯಾವುದೆ ಹೊರಗಿನ ಕಾರಣವಿರಲಿಲ್ಲ, ಅವರೊಳಗಿನ ತುಮಲ ಅವರನ್ನು ಕಾಡಿಸುತಿತ್ತು. ಯೋಚಿಸುತ್ತಿದ್ದರು ಎಷ್ಟು ದಿನ ಅಂತ ಈ ನರಕ ಅನುಭವಿಸುವುದು . ಮೊದಲೆಲ್ಲ ತುಂಬ ಸುಲುಭವಾಗಿಯೆ ಕಾಣಿಸುತ್ತಿತ್ತು. ಯಾವುದೆ  ದೈಹಿಕ ಶ್ರಮವಿರಲಿಲ್ಲ , ಕರೆದಲ್ಲಿಗೆ ಬರುವುದು , ಪುರೋಹಿತರು  ಹೇಳಿದಂತೆ ಮಾಡುವುದು,  ಕೊನೆಯಲ್ಲಿ ಒಂದು ಊಟ , ನಂತರ ದಕ್ಷಿಣೆ , ಕಷ್ಟವೇನಿಲ್ಲ ಸುಲುಭವಾಗಿಯೆ ಅಭ್ಯಾಸವಾಯಿತು ಈ ಜೀವನ. ಆದರೆ ತನ್ನ ಪರಿಸ್ಥಿತಿ ಎಂತಹುದು? . ಹೆಂಡತಿ ಮಕ್ಕಳಿದ್ದರು ಅವರ ಜೊತೆಯಲ್ಲಿ ಇರುವ ಹಾಗಿಲ್ಲ , ಅಲ್ಲಿ ಹೋದರು ಯಾರಿಗು ಕಾಣದಂತೆ ರಾತ್ರಿಯಲ್ಲಿ ಹೋಗಬೇಕು , ಮನೆಯಲ್ಲಿದ್ದರು ಸುತ್ತಮುತ್ತ ಯಾರಿಗು ಅನುಮಾನ ಬರದಂತೆ ಇರಬೇಕು , ಬೆಳಕು ಮೂಡುವ ಮುನ್ನ ಯಾರು ಎಚ್ಚರವಾಗುವದಕ್ಕೆ ಮೊದಲು ಹೊರಟು ಇಲ್ಲಿಗೆ ಬಂದು ಸೇರಿಬಿಡಬೇಕು , ಇಲ್ಲಿ ತನ್ನ ನಿಜವಾದ ಹೆಸರು ಸಹ ಯಾರಿಗು ತಿಳಿಸುವಂತಿಲ್ಲ . ಈರೀತಿಯ ಸುಳ್ಳು ಹೆಸರು, ಸುಳ್ಳು ರೂಪದ ಜೀವನ ಇನ್ನು ಎಷ್ಟು ದಿನವೋ , ವರ್ಷವೋ ತನಗೂ ತಿಳಿಯದು. ತನಗೆ ಆತ್ಮೀಯರು ಎಂದರೆ  ಸದ್ಯಕ್ಕೆ ಈ ವಿನಾಯಕರೊಬ್ಬರೆ , ಅವರಲ್ಲಿ ತನ್ನ ಪರಿಸ್ಥಿತಿ ಹೇಳಿಕೊಳ್ಳಲಾ ಅನ್ನಿಸುತ್ತೆ , ಆದರೆ ತಾನು ಇರುವ ಪರಿಸ್ಥಿತಿ ಸಧ್ಯಕ್ಕೆ ಯಾರನ್ನು ನಂಬುವ ಹಾಗಿಲ್ಲ.

ನಾರಾಯಣರು ನಿಟ್ಟುಸಿರು ಬಿಡುತ್ತ ವಿನಾಯಕರೊಡನೆ ಮನೆ ಪ್ರವೇಶಿಸಿದರು

ಸಾಧರಣ ಎಲ್ಲ ತಿಥಿ ಮನೆಗಳಲ್ಲಿ ಕಾಣುವ ವಾತವರಣವೆ ಇಲ್ಲಿಯು ಇದ್ದು   ಮನೆ ಪ್ರವೇಶಿಸುವಾಗಲೆ ನಾರಾಯಣ ಭಟ್ಟರು ಗಮನಿಸಿದರು ಹೊರಗಡೆ ತಂತಿಯ ಮೇಲೆ ಮಡಿಯಲ್ಲಿ ಬಿಳಿಪಂಚೆಗಳನ್ನು ಒಣಗಲು ಹಾಕಿದ್ದರು, ಗೋಡೆಯ ಪಕ್ಕ  ಹಸುವಿನ ಸಗಣಿ ತಂದು ಇಟ್ಟಿದ್ದರು.

ಒಳಗೆ ಪ್ರವೇಶಿಸುವಾಗಲೆ
" ಓ..ಬನ್ನಿ,ಬನ್ನಿ "
ಎನ್ನುತ್ತ ಪುರೋಹಿತ ವೆಂಕಟೇಶಯ್ಯನವರು ಸ್ವಾಗತಿಸಿದರು .

ಅಗಲೇ ಪುರೋಹಿತರು ಬಂದಾಗಿದೆ ಎಂದುಕೊಳ್ಳುತ್ತ , ಅಲ್ಲೆ  ಸ್ಟೀಲ್ ಕುರ್ಚಿ ಮೇಲೆ ಕುಳಿತರು ನಾರಾಯಣರು. ವಿನಾಯಕರು  ನೇರ ಹೋಗಿ ವೆಂಕಟೇಶಯ್ಯನವರ ಪಕ್ಕ ಕುಳಿತು, ಅವರು
ಸಿದ್ದಪಡಿಸುತ್ತಿದ್ದ ದರ್ಭೆಯ ಪವಿತ್ರಗಳನ್ನು ಹಿತ್ತಾಳೆಯ ತಟ್ಟೆಯಲ್ಲಿ  ಜೋಡಿಸಿದರು.
ಒಳಗಿನಿಂದ ಯುವತಿಯೊಬ್ಬಳು ಎರಡು ಲೋಟದಲ್ಲಿ ಕಾಫಿ ತಂದು ಇಬ್ಬರಿಗು ಕೊಟ್ಟಳು . ಕಾಫಿ ಕುಡಿಯುತ್ತ ಒಳಗಿನ ಬೆಳಕಿಗೆ ಕಣ್ಣು ಹೊಂದಿಸಿಕೊಳ್ಳುತ್ತ ಸುತ್ತಲು ಕಣ್ಣಾಡಿಸಿದರು. ಟೀವಿ ಮುಂತಾದ ವಸ್ತುಗಳನ್ನೆಲ್ಲ ರೂಮಿಗೆ ಸಾಗಿಸಿ ,  ಹಜಾರದಲ್ಲಿ ಸ್ಥಳ ಮಾಡಿದ್ದರು. ಗೋಡೆಯ ಪಕ್ಕ ನಾಲ್ಕು ಮಣೆಗಳಿದ್ದವು ,ಮಣೆಯ ಪಕ್ಕ ಬಾಳೆ ಎಲೆ,ಮೂಲೆಯಲ್ಲಿ ನೆಲ ಹಾಳಾಗದಂತೆ ಮರಳು ಹಾಕಿ ಅದರ ಮೇಲೆ ಇಟ್ಟಿದ್ದ ಹೋಮದಕುಂಡವನ್ನು , ಪಕ್ಕದಲ್ಲಿ ಕಟ್ಟಿಗೆಯ ಸಣ್ಣ,ಸಣ್ಣ ಕಡ್ಡಿಗಳನ್ನು ಗಮನಿಸಿ , ಯಜುರ್ವೇದಿಗಳು ಅಂದುಕೊಂಡರು.

ಒಳಗಿನಿಂದ ಕರ್ಮವನ್ನು ನೆರವೇರಿಸಬೇಕಾದ ವ್ಯಕ್ತಿ ಸ್ನಾನ ಮುಗಿಸಿ ಕಚ್ಛೆ ಧರಿಸಿ ಸಿದ್ಧನಾಗಿ ಬಂದ. ಒಳಗೆ ಕುಳಿತ ಇವರೆಲ್ಲರತ್ತ ಒಮ್ಮೆ ಧೃಷ್ಟಿ ಬೀರಿದ, ವೆಂಕಟೇಶಯ್ಯನವರು ಅವನನ್ನು ನೋಡಿ ,
"ಸ್ನಾನ ಮುಗಿಸಿದೆಯ ಶಶಿ, ನೀನು ಸ್ವಲ್ಪ ಗಾಯತ್ರಿ ಮಾಡಿ ಸಿದ್ಧನಾಗು ,ಅಷ್ಟರಲ್ಲಿ ಇವರಿಬ್ಬರು ಸ್ನಾನ ಮುಗಿಸುತ್ತಾರೆ " ಎಂದ ಅವರು , ಮತ್ತೆ ಜೋರಾದ ಧ್ವನಿಯಲ್ಲಿ ,
" ಶಾಮಣ್ಣನವರೆ ನೀವು ರೆಡೀನಾ? " ಎನ್ನುತ್ತ ಅಡಿಗೆಯವರನ್ನು ಕೇಳಿದರು.

ಅಡಿಗೆಯವ ಸ್ವಲ್ಪ ತಲೆ ಹೊರಗೆ ಹಾಕಿ
"ನಾವು ರೆಡಿ ಶಾಸ್ತ್ರೀಯವರೆ , ನೀವು ಪ್ರಾರಂಭ ಮಾಡಿಕೊಳ್ಳಿ, ಇಗೋ ಈಗ ಎಣ್ಣೆ ಒಲೆಯ ಮೇಲಿಟ್ಟೆ" ಅಂದರು .

ವೆಂಕಟೇಶಯ್ಯನವರು ನಾರಯಣರತ್ತ ತಿರುಗಿ
"ಭಟ್ಟರೆ , ನೀವು ಏಳಿ , ಒಂದು ಸ್ನಾನ ಮುಗಿಸಿಬಿಡಿ, ನಂತರ ವಿನಾಯಕರು ಹೋಗಲಿ" ಎಂದರು.

ಸರಿ ಎನ್ನುತ್ತ ನಾರಾಯಣರು ಎದ್ದು , ನಿಧಾನವಾಗಿ ತಮ್ಮ ಅಂಗಿಯನ್ನು ಕಳಚಿ, ತಾವು  ತಂದಿದ್ದ  ಚೀಲದಲ್ಲಿಟ್ಟು, ತುಂಡು ಪಂಚೆಯಲ್ಲಿ ತೆಳುವಾದ ಬಟ್ಟೆಯನ್ನು ಕೈಯಲ್ಲಿ ಹಿಡಿದು ಸ್ನಾನದ ಮನೆಯತ್ತ ಹೊರಟರು.

ಸ್ನಾನದ ಮನೆಯನ್ನು ಅರಸುತ್ತ ಹಿಂದೆ ಬಂದ ನಾರಾಯಣರಿಗೆ   ಒಗೆಯುವ ಕಲ್ಲಿನ ಹತ್ತಿರ ಚಿಕ್ಕ ಹುಡುಗನೊಬ್ಬ ತೆಂಗಿನ ಮೊಟ್ಟೆಕಾಯಿ ಸುಲಿಯಲು ಪ್ರಯಾಸ ಪಡುತ್ತಿರುವುದು ಕಾಣಿಸಿತು ,
"ಏನು ಮಾಡುತ್ತಿರುವೆ ಮಗು " ಎಂದು ಪ್ರಶ್ನಿಸಿದರು , ಅವನು ಕಾಯಿ ತೋರಿಸಿದ.
"ಕಾಯಿ ಸುಲಿಯುವುದು ಸುಲುಭ,  ನಾನು ನಿನಗೆ ತೋರಿಸುತ್ತೀನಿ ಕೊಡು "  ಎನ್ನುತ್ತ ಮೊಟ್ಟೆ ಕಾಯನ್ನು, ಮಚ್ಚನ್ನು ಪಡೆದು ಎರಡೆ ಹೊಡೆತದಲ್ಲಿ ಕಾಯನ್ನು ಸುಲಿದು ಅವನಿಗೆ ಕೊಟ್ಟರು.

ಅವನು ಇವರ ಕೌಶಲ್ಯಕ್ಕೆ ಬೆರಗಾಗಿ ಇವರತ್ತಲೆ ನೋಡುತ್ತಿದ್ದ ,ಇವರು ಹೆಮ್ಮೆಯಿಂದ ಕೈಯನ್ನು ನೋಡಿಕೊಂಡರು , ತಮ್ಮ ಕೈಯಲ್ಲಿಧ್ಧ ಮಚ್ಚು ನೋಡುತ್ತಲೆ ವಿಧ್ಯುತ್ ತಗಲಿದವರಂತೆ ಹೆದರಿ ಮಚ್ಚನ್ನು ಅಲ್ಲಿಯೆ ನೆಲದ ಮೇಲೆ ಹಾಕಿದರು. ನಂತರ ಯಾರಾದರು ತಮ್ಮನ್ನು ಗಮನಿಸಿದರ ಅಂತ ಸುತ್ತಲು ನೋಡಿದರು . ಇವರಿಗೆ ಸ್ನಾನದಮನೆ ತೋರಿಸಲು ಬಂದ ವಿನಾಯಕರು ಇವರತ್ತಲೆ ನೋಡುತ್ತ ನಿಂತಿರುವುದು ಕಾಣಿಸಿತು, ಅಲ್ಲದೆ ರೂಮಿನ ಒಳಗಿನಿಂದ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಅನ್ನಿಸಿತು. ಗಾಭರಿ ಬಿದ್ಧವರಂತೆ ನಾರಾಯಣರು , ನಾನು ಸ್ನಾನ ಮುಗಿಸುತ್ತೇನೆ ಎಂದು ತೊದಲುತ್ತ, ಸ್ನಾನದ ಮನೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡರು.
                                           
ಭಾಗ - ಎರಡು
==========
 ಸ್ನಾನದಮನೆ ಸೇರಿದ ನಾರಾಯಣರ ಕೈಕಾಲುಗಳು ನಡುಗುತ್ತಿದ್ದವು  ಮಚ್ಚು ಮುಟ್ಟಲು ಹೋಗಬಾರದಿತ್ತು ಅನ್ನಿಸಿತು, ವಿನಾಯಕರು ತನ್ನನ್ನೆ ಹೇಗೆ ನೋಡುತ್ತಿದ್ದರು ಎಂದು ನೆನೆದಾಗ ಅವರ ಮನಸ್ಸು ಬಿರುಗಾಳಿಯಲ್ಲಿ ಸಿಕ್ಕಿದ ತರಗೆಲೆಯಾಯ್ತು. ಕಾಲದಲ್ಲಿ ಹಿಂದೆ ಸರಿದು........ ನಡೆದು ಹೋದ ಘಟನೆಗಳ ನೆನಪುಗಳು ಅವರನ್ನು ಆವರಿಸಿದವು.

 ನಾರಾಯಣ ಭಟ್ಟರ ನಿಜವಾದ ಹೆಸರು ಕೆಂಪುತಿಮ್ಮಯ್ಯ , ಸಾಮಾನ್ಯ ತನ್ನವರಂತೆ ಕಪ್ಪಗೆ ಇರದೆ ಕೆಂಪು , ಕೆಂಪಗಿದ್ದ ಕಾರಣಕ್ಕೊ, ಇಲ್ಲ ಕೋಪ ಬಂದಾಗ ಮುಖವೆಲ್ಲ ಕೆಂಪು ತಿರುಗುವುದಕ್ಕೊ ತಿಮ್ಮಯ್ಯ ಹೆಸರಿನ ಹಿಂದೆ ಕೆಂಪು ಸೇರಿಕೊಂಡು ಕೆಂಪು ತಿಮ್ಮಯ್ಯ ಎಂದಾಗಿತ್ತು. ತನ್ನವರಲ್ಲೆ ಅತಿ ಬುದ್ದಿವಂತನಾಗಿದ್ದ ತಿಮ್ಮಯ್ಯನ ಜೀವನದಲ್ಲಿ ಶೀಘ್ರಕೋಪ , ದುಡುಕುಬುದ್ದಿ ಸದಾ ಅವನಿಗೆ ತೊಂದರೆ ಕೊಡುತ್ತಿದ್ದವು.

ವಿವಾಹವಾಗಿ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದ ಅವನಿಗೆ ಸರಕಾರಿ ಕೆಲಸವು ಇದ್ದು ಯಾವುದೆ ಕೊರತೆಯು ಇರಲಿಲ್ಲ. ಅವರ ಮನೆಯ ಪಕ್ಕದ ಮನೆಯನ್ನು ಹೊಸದಾಗಿ ಬೆಂಗಳೂರಿನ ಕೃಷ್ಣಸ್ವಾಮಿ ಎಂಬ ವ್ಯಕ್ತಿಯೊಬ್ಬರು ಕೊಂಡುಕೊಂಡಿದ್ದರು.ಗೃಹಪ್ರವೇಶವನ್ನು ಅದ್ದೂರಿಯಾಗೆ ಮಾಡಿದ್ದರು. ಗೃಹಪ್ರವೇಶಕ್ಕೆ ಪಕ್ಕದಮನೆಯ ಕೆಂಪುತಿಮ್ಮಯ್ಯನು ಹೋಗಿ ಊಟ ಮಾಡಿ ಬಂದ್ದಿದ್ದ.   ಗೃಹಪ್ರವೇಶದ ನೆಂಟರೆಲ್ಲ ಹೊರಟನಂತರ ಎರಡು ದಿನದಲ್ಲೆ ಹೊರಗಿನ ಕಾಂಪೋಂಡ್   ಹಾಕಿಸಲು ಪ್ರಾರಂಬಿಸಿದರು.

ತರಕಾರಿ ತರಲು ಕೈಯಲ್ಲಿ ಚೀಲ ಹಿಡಿದು ಮನೆಯಿಂದ ಹೊರಬಂದು ತಿಮ್ಮಯ್ಯನಿಗೆ ಪಕ್ಕದ  ಮನೆಯವರು  ಗೋಡೆ ಹಾಕಿಸುತ್ತಿರುವದನ್ನು ಕಂಡು ಹತ್ತಿರ ಬಂದು ನೋಡಿದ. ಗಮನಿಸಿದರೆ ಗೋಡೆಯು ತನ್ನ ಜಾಗದಲ್ಲಿ ಬರುತ್ತಿರುವುದು ಕಾಣಿಸಿತು. ಅದನ್ನು ಕಂಡು , ಕೃಷ್ಣಸ್ವಾಮಿ ಕಡೆಗೆ ತಿರುಗಿ ವಿಷಯ ತಿಳಿಸಿದ. ಆದರೆ ಅವರು ಕೇಳಿಸಲೆ ಇಲ್ಲ ಎನ್ನುವಂತೆ ನಟಿಸುತ್ತ ಕೆಲಸದವರಿಗೆ ಸೂಚನೆ ಕೊಡುತ್ತಿದ್ದರು. ತಿಮ್ಮಯ್ಯ ಮತ್ತೊಮ್ಮೆ ಅವರ ಗೋಡೆ ತನ್ನ ಜಾಗದಲ್ಲಿ ಬರುತ್ತಿದೆ ಎಂದು ಸ್ವಲ್ಪ ಏರುಧ್ವನಿಯಲ್ಲಿಯೆ ತಿಳಿಸಿದ.
 ಆದರೆ ಇವನ ಜೊತೆ ಸಮಧಾನವಾಗಿ ಮಾತನಾಡುವ ಬದಲು ಕೃಷ್ಣಸ್ವಾಮಿಯವರು , ಗೋಡೆ ತನ್ನ ಜಾಗದಲ್ಲೆ ಸರಿಯಾಗಿ ಇದೆ , ಸಲ್ಲದ ತರಲೆ ತೆಗೆಯುವುಧು ಬೇಡ ಎಂದು ಇವನಿಗೆ ನಿರ್ಲಕ್ಷ್ಯ ತುಂಬಿದ ಧ್ವನಿಯಲ್ಲಿ ಉತ್ತರ ಕೊಟ್ಟರು. ಆಗ ಇಬ್ಬರ ನಡುವೆ ವಾದವಿವಾದಗಳು ಪ್ರಾರಂಭವಾದವು . ಕೆಲಸದವರು ತಮ್ಮ ಕೆಲಸ ನಿಲ್ಲಿಸಿ ಇವರ ಕಡೆ ನೋಡಲು ನಿಂತರು.

  ತಿಮ್ಮಯ್ಯನ ಹೆಂಡತಿ ಜಯಮ್ಮ ಹಾಗು ಕೃಷ್ಣಸ್ವಾಮಿಯ ಹೆಂಡತಿ ಶಾರದ ಇಬ್ಬರು ಮನೆಯಿಂದ ಹೊರಬಂದು ತಮ್ಮ ಗಂಡಂದಿರ ಜಗಳ ನಿಲ್ಲಿಸಲು ಪ್ರಯತ್ನಪಟ್ಟರು.

ಆದರೆ ಇಬ್ಬರು ಶೀಘ್ರ ಕೋಪಿಗಳು

ಅಹಂಕಾರಗಳು ಅವರನ್ನು ಜಗಳ ನಿಲ್ಲಿಸಲು ಬಿಡಲಿಲ್ಲ. ಜಗಳ ತಾರಕ್ಕಕ್ಕೇರಿದಂತೆ ಕೋಪ ತಡೆಯದ ತಿಮ್ಮಯ್ಯ ಹತ್ತಿರವೆ ಇದ್ದ ಕೆಲಸದವರ ಮಚ್ಚು ಕೈಗೆತ್ತಿಕೊಂಡು, ಕೃಷ್ಣಸ್ವಾಮಿ ಯನ್ನು ಕೊಚ್ಚಿಹಾಕುವದಾಗಿ ಕೂಗಿಕೊಂಡ, ತಿಮ್ಮಯ್ಯನ ಕೈಯಲ್ಲಿ ಮಚ್ಚು ನೋಡಿದ ಕೃಷ್ಣಸ್ವಾಮಿಯ ಕಣ್ಣಲ್ಲಿ ಕ್ಷಣಕಾಲ ಹೆದರಿಕೆ ಕಾಣಿಸಿತು . ಆದರೆ ಮರುಕ್ಷಣವೆ ಅವನ ಎದುರಿಗೆ ನಿಂತು ತಾನು ಈ ಬೆದರಿಕೆಗೆಲ್ಲ ಬೆಲೆ ಕೊಡಲ್ಲ, ಧೈರ್ಯವಿದ್ದಲ್ಲಿ ಹೊಡೆ ಎಂದು ಸವಾಲು ಹಾಕಿದ. ಕೋಪ ತಡೆಯದ ತಿಮ್ಮಯ್ಯ ಕೈಯಲ್ಲಿದ್ದ ಮಚ್ಚನ್ನು ಅವನ ಹೆಗಲಿನ ಕಡೆಗೆ ಬೀಸಿದ, ಮತ್ತೂ ಒಂದು ಏಟು , ಸುತ್ತಲಿನವರು ತಡೆಯುವದರಲ್ಲಿ ಕೃಷ್ಣಸ್ವಾಮಿ ತಲೆಕಡಿದು ಸತ್ತು ಬಿದ್ದಿದ್ದ.
ಕೊಲೆ ನಡೆದು ಹೋಗಿತ್ತು!

  ಸುತ್ತಲಿನ ಜನ ತನ್ನ ಕಡೆಗೆ ಹೆದರಿಕೆಯಿಂದ ನೋಡುವುದನ್ನು ಕಂಡು ತಿಮ್ಮಯ್ಯ ತನ್ನ ಕೈಕಡೆಗೆ ನೋಡಿಕೊಂಡ  ನಿಧಾನವಾಗಿ ಕೋಪದ ಜಾಗದಲ್ಲಿ ಹೆದರಿಕೆ ತುಂಬಿಕೊಂಡಿತು.   ಮಾಡಿರುವ ತಪ್ಪಿನ ಪರಿಣಾಮವೇನಾಗಬಹುದು ಎಂದು ಹೊಳೆಯಿತು. ತಕ್ಷಣ ಬಲಕೈಯಲ್ಲಿದ್ದ ಮಚ್ಚಿನ ಸಹಿತ ತಾನು ಪೋಲಿಸ ಸ್ಟೇಷನ್ನಿಗೆ ಹೋಗುತ್ತಿರುವದಾಗಿ ಘೋಷಿಸಿ ವೇಗವಾಗಿ ಅಲ್ಲಿಂದ ಹೊರಟ. ಸ್ವಲ್ಪದೂರ ಬರುವುದರಲ್ಲಿ ತಾನು ಪೋಲಿಸರಲ್ಲಿ ಶರಣಾದರೆ ಪರಿಣಾಮವೇನು ಎನ್ನುವುದು ಹೊಳೆಯಿತು.

ಗಲ್ಲು ಶಿಕ್ಷೆ ಅಥವ ಕಡೆಯಪಕ್ಷ ಜೀವನಪೂರ್ತಿ ಸೆರೆಮನೆವಾಸ.

ಹೆದರಿಕೆಯಾಯಿತು , ದಾರಿಯಲ್ಲಿ  ಮುಳ್ಳಿನ ಪೊದೆಯಲ್ಲಿ  ಮಚ್ಚನ್ನು ಎಸೆದ, ಮುಖ್ಯರಸ್ತೆಯನ್ನು ಬಿಟ್ಟು ,ಕಾಲು ದಾರಿಯಲ್ಲಿ ನಡೆಯುತ್ತ ರೈಲ್ವೆಸ್ಟೇಷನ ಹಿಂಭಾಗಕ್ಕೆ ಬಂದ. ಅವನಿಗೆ ಸಹಾಯ ಮಾಡಲೋ ಎನ್ನುವಂತೆ ಬೆಂಗಳೂರಿನ ಕಡೆಗೆ ಹೋಗುವ ರೈಲುಗಾಡಿಯೊಂದು ಬಂದಿತು. ಟಿಕೆಟ್ ಪಡೆಯಲು ಹೆದರಿದ ಅವನು ಹಾಗೆಯೆ ರೈಲು ಹತ್ತಿದ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ತಿಳಿದಾಗ ಸ್ವಲ್ಪ ಧೈರ್ಯತಾಳಿದ.

 ಬೆಂಗಳೂರಿನ ಮಲ್ಲೇಶ್ವರ ನಿಲ್ದಾಣ ಬರುವವರೆಗು ಯಾರ ಗಮನ ಸೆಳೆಯದಂತೆ ಕುಳಿತ್ತಿದ್ದು,  ಕೆಳಗೆ ಇಳಿದ. ಹೊರಗೆ ಎಲ್ಲಿ ಹೋಗಬೇಕೆಂದು ತಿಳಿಯಲ್ಲಿಲ್ಲ, ಕತ್ತಲಾಗುತ್ತ ಬರುತ್ತಿತ್ತು. ರಾತ್ರಿ ಅಲ್ಲೆ ಉಳಿಯುವುದಾಗಿ ನಿರ್ಧರಿಸಿದ. ತರಕಾರಿಗೆಂದು ಮನೆಯಿಂದ ಹೊರಟಾಗ ಇದ್ದ ಕೈಚೀಲ , ಜೇಬಿನಲ್ಲಿ ಇಪ್ಪತ್ತು ರೂಪಯಿ ಬಿಟ್ಟರೆ ಹತ್ತಿರ ಏನು ಇರಲ್ಲಿಲ್ಲ. ಹತ್ತಿರದಲ್ಲೆ ಇದ್ದ ತಳ್ಳುವಗಾಡಿಯ ಬಳಿ ಸ್ವಲ್ಪ ತಿಂಡಿ ತಿಂದು ನಿಲ್ಧಾಣದಲ್ಲೆ ಮಲಗಿದ.

 ಬೆಳಗ್ಗೆ ಬೇಗನೆ ಎಚ್ಚರವಾಯಿತು  ತನ್ನ ಪರಿಸ್ಥಿತಿ ನೆನಪಿಗೆ ಬಂದು ಯಾವ ದಾರಿಯು ತೋರಲಿಲ್ಲ ತನಗೆ ಸಹಾಯ ಮಾಡಬಲ್ಲವರು ಯಾರು ಇಲ್ಲ ಅನ್ನಿಸಿತು. ಹತ್ತಿರದಲ್ಲೆ ನಲ್ಲಿಯಲ್ಲಿ ಮುಖ ತೊಳೆದು ಕಾಫಿ ಕುಡಿದ. ತನ್ನ ಹತ್ತಿರ ಆರು, ಏಳು ರೂಪಾಯಿ ಬಿಟ್ಟರೆ ಮತ್ತೇನು ಉಳಿದಿಲ್ಲ, ಯಾವ ದಾರಿ ಸಮಯವೆಷ್ಟು ಯಾವುದನ್ನು ಗಮನಿಸಲ್ಲಿಲ್ಲ. ನಡೆಯುತ್ತ ಮಲ್ಲೇಶ್ವರದ ವೈಧೀಕ ಧರ್ಮ ಶಾಲೆಯ ಹತ್ತಿರ ತಲುಪಿ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತ.

 ಅದೆ ಸಮಯಕ್ಕೆ ವಿನಾಯಕ ಜೋಯಿಸರು ಹೊರಗೆ ಬಂದರು, ಆದಿನ ಅವರು ಒಂದು ಸಮಸ್ಯೆಗೆ ಸಿಕ್ಕಿದ್ದರು. ಅವರ ಪರಿಚಯದ ವ್ಯಕ್ತಿಯೊಬ್ಬರು ಕಡೆ ಗಳಿಗೆಯಲ್ಲಿ ಬಂದು, ತಮ್ಮ ತಂದೆಯ ತಿಥಿಯನ್ನು ನಡೆಸಿಕೊಡಲು ಕೇಳಿದ್ದರು, ಅವರ ಮನೆಯಲ್ಲಿಯ ತೊಂದರೆಯಿಂದ ಕಡೆಯ ಗಳಿಗೆಯಲ್ಲಿ ಇಲ್ಲಿ ಬಂದಿದ್ದರು.ಪುರೋಹಿತರು ಸಿದ್ದವಿದ್ದು ಒಬ್ಬ ಬ್ರಾಹ್ಮಣರ ಅವಶ್ಯಕತೆ ಇದ್ದು. ಕೈಚೀಲ ಹಿಡಿದು ಮರದ ಕೆಳಗೆ ಕುಳಿತ್ತಿದ್ದ ತಿಮ್ಮಯ್ಯನನ್ನು ಕಂಡರು. ಅವನನ್ನು ಯಾರೊ  ಬ್ರಾಹ್ಮಣ ಎಂದು ತಿಳಿದು  , ಒಂದು ವೈಧೀಕ ಇರುವದರಿಂದ ಬ್ರಾಹ್ಮಣಾರ್ಥಕ್ಕೆ ಬರಲು ಸಾಧ್ಯವೆ ಎಂದು ಇವನನ್ನು ಕೇಳಿದರು.

 ತಿಮ್ಮಯ್ಯನು ಇದೇನು ಎಂದು ಯೋಚಿಸುತ್ತ ತನಗೆ ಅಭ್ಯಾಸವಿಲ್ಲವೆಂದು ತಿಳಿಸಿದ. ವಿನಾಯಕರು ಪರವಾಗಿಲ್ಲ ಬನ್ನಿ ಹೇಗೋ ಒಂದು ದಿನ ಸರಿಮಾಡೋಣ ಎಂದು ಅವನನ್ನು ಒಳಗೆ ಕರೆದೋಯ್ದು ಸ್ನಾನ ಮಾಡಲು ಜಾಗ ತೋರಿಸಿದರು.

ಕೆಂಪಯ್ಯನು ಇದೇನು ತನ್ನ ಪರಿಸ್ಥಿತಿ ಎಂದು ಬೆರಗಾಗುತ್ತ ಚಿಂತಿಸಿದ. ತನ್ನನ್ನು ಇವರು ಬ್ರಾಹ್ಮಣ ಎಂದು ತಿಳಿದಿದ್ದಾರೆ, ತಾನೀಗ ಅಲ್ಲ ಅನ್ನುವದಕ್ಕಿಂತ ಮೌನವಾಗಿದ್ದರೆ ತನಗೆ ಅನುಕೂಲ ಎಂದರಿತ. ಆದರೆ ತಾನು ಜನಿವಾರ ದರಿಸಿಲ್ಲ , ಅವರಿಗೆ ಅನುಮಾನ ಬರಬಹುದು ಅನ್ನಿಸಿ ಅಲ್ಲೆ ಸ್ನಾನದ ಮನೆಯಲ್ಲಿ ಯಾರೊ ಬಿಟ್ಟು ಹೋಗಿದ್ದ ಜನಿವಾರ ದರಿಸಿದ. ಸ್ನಾನ ಮುಗಿಸಿ ಹೊರಬಂದಾಗ ವಿನಾಯಕರು ಅವನನ್ನು ತಿಥಿ ನದೆಯುತಿದ್ದ ಜಾಗಕ್ಕೆ ಕರೆದೋಯ್ದರು. ನಡುವೆ ಇವನ ಹೆಸರೇನು ಎಂದು ಕೇಳಿದರು. ಇವನು ನಿಧಾನವಾಗಿ ನಾರಾಯಣ ಎಂದ. ಅದಕ್ಕೆ ನಾರಾಯಣ ಭಟ್ಟರ ಎನ್ನುವಾಗ ಹೌದು ಎನ್ನುವಂತೆ ತಲೆ ಹಾಕಿದ. ಹಾಗಾಗಿ ನಾರಾಯಣ ಭಟ್ಟ ಎನ್ನುವ ಹೆಸರು ನಂತರ ಸ್ಥಿರವಾಯಿತು.

 ವಿನಾಯಕರು ಒಂಟಿಯಾಗಿ ವಾಸವಾಗಿದ್ದರು, ಹಾಗಾಗಿ ಇವನನ್ನು ಜೊತೆಯಾಗಿರಲು ಕರೆದರು, ಅದು ಅವನಿಗು ಅನುಕೂಲವಾಗಿ ಕಾಣಿಸಿ ಒಪ್ಪಿಕೊಂಡ. ನಿಧಾನವಾಗಿ ಅವರನ್ನು ನೋಡುತ್ತ ತನ್ನ ನಡೆ ನುಡಿಗಳನ್ನು ಬ್ರಾಹ್ಮಣರಂತೆ ತಿದ್ದಿಕೊಂಡ . ಪುಸ್ತಕ ತಂದು ಸಂಧ್ಯಾವಂದನೆಯಂತ ಸರಳ ಕರ್ಮಗಳನ್ನು ಕ್ರಿಯಾಸಮೇತವಾಗಿ ಅಭ್ಯಾಸಮಾಡಿಕೊಂಡ.

 ಎಲ್ಲ ನೆನೆಪುಗಳು ಅವನಲ್ಲಿ ಹಾದು ಹೋಗುತ್ತಿರುವಾಗ ಹೊರಗೆ ವಿನಾಯಕರು ಜೋರಾಗಿ ಕೂಗುತ್ತಿದ್ದರು.

"ನಾರಾಯಣರೆ ಬೇಗ ಸ್ನಾನ ಮುಗಿಸಿ ಬನ್ನಿ, ಎಲ್ಲ ಕಾಯುತ್ತಿದ್ದಾರೆ" .

ತನ್ನ ಮೈಮರೆವಿಗೆ ಶಪಿಸಿಕೊಳ್ಳುತ್ತ ನಾರಾಯಣರು ಬೇಗ ಸ್ನಾನ ಮುಗಿಸಿ, ತುಂಡು ಪಂಚೆ ಸುತ್ತಿ ಹೊರಬಂದರು.ಎಲ್ಲರು ತನ್ನನ್ನೆ ಕಾಯುತ್ತಿದ್ದಾರೆ. ಬೇಗ ಬಿಳಿಪಂಚೆ ಉಟ್ಟು, ಸಿಧ್ಧವಾಗಿ ತಿಥಿ ನಡೆಯುತ್ತಿದ್ದ ನಡುವಿಗೆ ಬಂದು ಕುಳಿತರು.


ಪುರೋಹಿತರು ಆಗಲೆ ಅಗ್ನಿಕಾರ್ಯ ಪ್ರಾರಂಬಿಸಿದ್ದರು
  ನಾರಾಯಣರು ಯೋಚಿಸುತ್ತಿದ್ದರು, ಈ ಬ್ರಾಹ್ಮಣರ ಆಚರಣೆಗಳು ಎಷ್ಟು ನಿಜವೋ ಕಲ್ಪಿತವೋ ತಿಳಿಯದು ಆದರೆ ತನ್ನಲ್ಲಿ ಒಮ್ಮೊಮ್ಮೆ ಹೆದರಿಕೆ ಹುಟ್ಟಿಸುತ್ತದೆ. ತಾನು ಈ ಜಾಗಕ್ಕೆ ಅರ್ಹ ವ್ಯಕ್ತಿಯಲ್ಲ ಎಂದು ತನಗೆ ತಿಳಿದಿದೆ. ತನ್ನ ಈ ಸುಳ್ಳು ಪಾತ್ರದಿಂದ ತಾನು ಮುಂದೆ ಏನು ಅನುಭವಿಸಬೇಕೊ ತಿಳಿಯದು. ಇದರಿಂದ ಆದಷ್ಟು ಬೇಗ ತಪ್ಪಿಸಿಕೊಳ್ಳಬೇಕು, ಪೋಲಿಸರಿಗು ಈಗ ತನ್ನ ಮನೆಯ ಮೇಲೆ ಗಮನ ಕಡಿಮೆಯಾಗಿದೆ. ತುಮಕೂರಿನಲ್ಲಿರುವ ತನ್ನ ಆಸ್ತಿಯನ್ನೆಲ್ಲ ತನ್ನ ಹೆಂಡತಿ ಸಹಾಯದಿಂದ ಮಾರಾಟ ಮಾಡಿಸಿ, ಬೆಂಗಳೂರಿನಲ್ಲಿ ಈಗಿರುವ ಹೆಸರಿನಲ್ಲಿಯೆ ನೆಲಸಿಬಿಡಬೇಕು.
 ಹೋಮದ ಹೊಗೆಯಲ್ಲಿಯೆ ಸುತ್ತಲು ಗಮನಿಸಿದರು, ಗೋಡೆಯಪಕ್ಕ ಮಣೆಯಿತ್ತು ಅದರ ಮೇಲೆ ತಿಥಿ ನಡೆಯುತ್ತಿರುವ ವ್ಯಕ್ತಿಯ ಫೋಟವನ್ನಿಟ್ಟು ಹೂವಿನಹಾರ ಹಾಕಿದ್ದರು. ಮತ್ತೊಮ್ಮೆ ಗಮನಿಸಿದರು ಚಿತ್ರದಲ್ಲಿರುವ ವ್ಯಕ್ತಿ ಪರಿಚಿತ ಮುಖದಂತೆ ಕಾಣುತ್ತಿದೆಯಲ್ಲ ,
ಯಾರೀತ?? ...
ತಟ್ಟನೆ ಹೊಳೆಯಿತು..
ಕೃಷ್ಣಸ್ವಾಮಿ... , ತನ್ನಿಂದ ತುಮಕೂರಿನಲ್ಲಿ ಕೊಲೆಯಾದ ವ್ಯಕ್ತಿ!!!
ಯಾರ ಕೊಲೆ ಮಾಡಿ ತಾನು ತಲೆಮರೆಸಿಕೊಂಡು ಬಾಳುತ್ತಿರುವೆನೊ ಅದೇ ವ್ಯಕ್ತಿಯ ವೈಧೀಕವನ್ನು ನೆರವೇರಿಸಲು ತಾನು ಬ್ರಾಹ್ಮಣನಾಗಿ ಬಂದು ಕುಳಿತಿದ್ದೀನಿ, ನಾರಾಯಣರಿಗೆ ಕೈಕಾಲುಗಳಲ್ಲಿ ನಡುಕ ಕಾಣಿಸಿಕೊಂಡಿತು. ಮೈಯೆಲ್ಲ ಬೆವರಲು ತೊಡಗಿತು. ತನ್ನ ಗುರುತು ಇಲ್ಲಿ ಯಾರಿಗು ಸಿಗಲಿಲ್ಲವೆ ?

ಕಡೆಯ ಪಕ್ಷ ಕೃಷ್ಣಸ್ವಾಮಿಯ ಹೆಂಡತಿ ಶಾರದ ಸಹ ತನ್ನ ಪತ್ತೆ ಹಚ್ಚಲ್ಲಿಲ್ಲವೆ?

ಒಳಗೆ ನಡುಗಿದರು ನಾರಾಯಣ ಭಟ್ಟರು.

                                       
ಭಾಗ - ಮೂರು
==========
ಪುರೋಹಿತರು  ಮಂತ್ರ ಹೇಳುತ್ತ   ವಿನಾಯಕರು ಹಾಗು ನಾರಾಯಣರನ್ನು ನೋಡುತ್ತ ಯಾಕೋ ಇವರಿಬ್ಬರು ಈ ದಿನ ಸರಿಯಿಲ್ಲ ಏನಾದರು ಇಬ್ಬರ ನಡುವೆ ಗಲಾಟೆ ಆಗಿರಬಹುದ ಅಂದುಕೊಂಡರು.ಸಾಮಾನ್ಯವಾಗಿ ಪಟ ಪಟ ಮಾತನಾಡುತ್ತ ಇರುವ ವಿನಾಯಕರ ಇಂದಿನ ಮೌನ ಆಶ್ಚರ್ಯವೆನಿಸಿತು. ಹೋಮದ ನಂತರ ಬ್ರಾಹ್ಮಣರ ಬಳಿ ಕುಳಿತ ವೆಂಕಟೇಶಯ್ಯನವರು ಅವಾಹನೆ ಪ್ರಾರಂಬಿಸಿದರು.
ಕಾರ್ಯ ಮಾಡುತ್ತಿದ್ದ ಶಶಿಧರನು ವಿನಾಯಕರನ್ನು ನೋಡುತ್ತ ಗಲಿಬಿಲಿಗೊಂಡ. ವಿನಾಯಕರ ಕಣ್ಣು ಕೆಂಪು ತಿರುಗುತ್ತಲ್ಲಿತ್ತು. ಉಸಿರಾಟದ ವೇಗ ಹೆಚ್ಚಾಯಿತು. ಬ್ರಾಹ್ಮಣರ ಕಾಲುತೊಳೆದು ಅವರಿಗೆ ಊಟಕ್ಕೆ ಎಲೆ ಹಾಕಿ, ಎಲ್ಲವನ್ನು ಬಡಿಸಿ, ನಂತರ ನಿಧಾನವಾಗಿ ಊಟ ಮಾಡುವಂತೆ ಇಬ್ಬರಲ್ಲೂ ಪ್ರಾರ್ಥನೆ ಮಾಡಿದ ಶಶಿಧರ.
ನಾರಾಯಣರು ಎಲೆಗೆ ಕೈಹಚ್ಚಬೇಕು ಅನ್ನುವದರಲ್ಲಿ , ವಿನಾಯಕರು ಇವರತ್ತ ತಿರುಗಿ
"ನಿಲ್ಲೊ,.. ಎಲೆಗೆ ಕೈಯಿಡಬೇಡಾ..." ಎಂದು ಗಟ್ಟಿಯಾಗಿ ಅರಚಿದರು.
ಪುರೋಹಿತರು, ಶಶಿಧರ ಗಾಬರಿಗೊಂಡರು. ಮನೆಯಲ್ಲಿದ್ದ ಎಲ್ಲರು ಬಾಗಿಲಿನಲ್ಲಿ ಕಿಟಕಿಗಳಲ್ಲಿ ನಿಂತು ಒಳಗೆ ನೋಡತೊಡಗಿದರು. ನಾರಾಯಣರ ಕೈಕಾಲುಗಳಲ್ಲಿ ನಡುಕ.

ಪುರೋಹಿತರ ಕಡೆ ತಿರುಗಿದ ವಿನಾಯಕರು
"ವೆಂಕಿ , ನನ್ನ ಶ್ರಾದ್ಧಾನ ಹೀಗೇನಾ ಮಾಡೋದು ?" ಎಂದು ರೇಗಿದರು. ಪುರೋಹಿತ ವೆಂಕಟೇಶಯ್ಯನವರು ಆಶ್ಚರ್ಯಚಕಿತರಾದರು, ಎನಿದು? ವಿನಾಯಕರು ಎಂದು ನನ್ನನ್ನು ಹೆಸರು ಹಿಡಿದು ಸಹ ಕರೆದವರಲ್ಲ, ವಿನಯದಿಂದ ನನ್ನ ಜೊತೆ ಮಾತನಾಡುವವರು. ಅಲ್ಲದೆ ನನ್ನನ್ನು ವೆಂಕಿ ಎಂದು ಕರೆಯುತ್ತಿದ್ದವನು ಮರಣಹೊಂದಿರುವ ಕೃಷ್ಣಸ್ವಾಮಿ ಮಾತ್ರ. ಅಂದರೆ ಏನಾಗಿದೆ ತಾನು ಮಂತ್ರಪೂರ್ವಕವಾಗಿ ಕರೆದಾಗ ಕೃಷ್ಣಸ್ವಾಮಿಯ ಪ್ರೇತ ನಿಜವಾಗಿಯು ವಿನಾಯಕರ ಮೇಲೆ ಅವಾಹನೆಯಾಗಿದೆಯ??.
ತನ್ನ ವೃತ್ತಿ ಜೀವನದಲ್ಲಿ ಎಂದೂ ಎದುರಿಸದ ಈ ಸಂದರ್ಭದಿಂದ ಅವರು ಏನು ಮಾಡಬೇಕೆಂದು ತಿಳಿಯದೆ ಗಲಿಬಿಲಿಗೊಂಡರು.
ಇತ್ತ ಹೆದರಿದ ಶಶಿಯತ್ತ ತಿರುಗಿದ ವಿನಾಯಕರು
"ಎನೋ ಗುರು , ನನ್ನನ್ನು ಕೊಂದವನನ್ನೆ ನನ್ನ ಶ್ರಾದ್ಧಕ್ಕೆ ಕೂಡಿಸಿ ನನಗೆ ಪಿಂಡ ಇಡುತ್ತಿಯಾ? ನನಗೆ ಬೇಡವೋ " ಎಂದರು.

ಶಶಿಧರ ಚಕಿತನಾದ ,

ತನ್ನನ್ನ ಗುರು ಎನ್ನುತ್ತಿದ್ದವರು ತಂದೆಯೊಬ್ಬರೆ, ಆದರೆ ಏನು ಹೇಳುತ್ತಿದ್ದರೆ ? ವಿನಾಯಕರ ಜೊತೆ ಬಂದಿರುವ ಈ ಬ್ರಾಹ್ಮಣ ಹೇಗೆ ತನ್ನ ತಂದೆಯನ್ನು ಕೊಲ್ಲಲ್ಲು ಸಾಧ್ಯ. ಇವರನ್ನು ಕೊಂದವ ತುಮಕೂರಿನಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕೆಂಪುತಿಮ್ಮಯ್ಯ ಎಂಬುವನಲ್ಲವೆ ಎಂದು ಯೋಚಿಸುತ್ತ ಕುಳಿತ.

ಮೊದಲಿಗೆ ಧೈರ್ಯತಂದುಕೊಂಡವರು ವೆಂಕಟೇಶಯ್ಯನವರೆ

ವಿನಾಯಕರತ್ತ ತಿರುಗಿ

"ಅಂದರೆ ನೀನು ಕಿಟ್ಟಿಯ ಆತ್ಮವ , ನಿನಗೆ ಏಕೆ ಇಂತ ಪರಿಸ್ಥಿತಿ ಬಂತು? , ಇವರು ನಾರಾಯಣ ಭಟ್ಟರು , ಇವರು ಏಕೆ ನಿನ್ನ ಕೊಲೆ ಮಾಡುತ್ತಾರೆ ?ನಿನ್ನನ್ನು ಕೊಂದವ ತುಮಕೂರಿನ ನಿಮ್ಮ ಪಕ್ಕದ ಮನೆಯವ ಅಲ್ಲವ ?" ಎಂದು ಕೇಳಿದರು.

ಕಣ್ಣು ಕೆಂಪು ಮಾಡಿಕೊಂಡ ವಿನಾಯಕರು

"ನಾರಾಯಣನು ಅಲ್ಲ ಭಟ್ಟನು ಅಲ್ಲ,ಇವನು ಕೆಂಪಯ್ಯ ಬೇಕಾದರೆ ಅವನನ್ನೆ ಕೇಳು , ಈ ಶ್ರಾದ್ದ ನಿಲ್ಲಿಸು ಇವನನ್ನು ಎಬ್ಬಿಸು" ಎಂದು ಕೂಗಿದರು.

ವೆಂಕಟೇಶಯ್ಯನವರು ನಾರಾಯಣರನ್ನು ಕೇಳುವ ಅಗತ್ಯವೇ ಬರಲಿಲ್ಲ. ನಾರಾಯಣರ ಬೆದರಿದ ಮುಖ, ನಡುಗುತ್ತಿದ್ದ ಕೈಕಾಲುಗಳು ಎಲ್ಲವನ್ನು ಹೇಳುತ್ತಿದ್ದವು.
ವೆಂಕಟೇಶಯ್ಯನವರಿಗೆ ಕೈಮುಗಿದ ನಾರಾಯಣರು
"ದಯಮಾಡಿ ಕ್ಷಮಿಸಿಬಿಡಿ, ನನ್ನಿಂದ ತಪ್ಪಗಿದೆ , ಅವರು ಹೇಳುತ್ತಿರುವುದು ಸತ್ಯ ನಾನು ಹೊರಡುತ್ತೇನೆ " ಎಂದರು.
ಕ್ಷಣಕಾಲ ಚಿಂತಿಸಿದ ವೆಂಕಟೇಶಯ್ಯನವರು   ರೂಮಿನಲ್ಲಿ ಯಾರಿದ್ದಿರೀ? ಹೊರಗೆ ಬನ್ನಿ ಎಂದು ಕರೆದು,
"ನೀವೀಗ ಯಾವುದೆ ತೊಂದರೆಕೊಡದೆ ಹೋಗಿ ಆ ರೂಮಿನಲ್ಲಿರಿ" ಎಂದರು.

ಬೆಳಗಿನಿಂದ ಇದ್ದ ಉಪಾವಾಸ , ಈ ಕ್ಷಣದ ಗಾಭರಿ ಎಲ್ಲವು ಸೇರಿ ಯಾವುದೇ ಪ್ರತಿರೋದವಿಲ್ಲದೆ ನಾರಾಯಣರು ರೂಮಿನ ಒಳಗೆ ಹೋದರು. ಹಿಂದೆಯೆ ಶಶಿಯು ಬಾಗಿಲುಹಾಕಿ ಹೊರಗಿನಿಂದ ಭದ್ರಪಡಿಸಿದನು.
ನಂತರ ಅಡುಗೆಗೆ ಬಂದಿದ್ದ ಶಾಮಣ್ಣನವರನ್ನೆ ನಾರಾಯಣರ ಜಾಗದಲ್ಲಿ ಕೂಡಿಸಿ ಕೆಲಸ ಮುಂದುವರೆಸಿದರು. ಅಲ್ಲಿಯವರೆಗು ಬೆಂಕಿಯಂತಿದ್ದ ವಿನಾಯಕರು ಈಗ ಮಾತನಾಡದೆ ಊಟ ಮಾಡುತ್ತಿದ್ದರು.
ರೂಮಿನಲ್ಲಿ ತಲೆಯ ಮೇಲೆ ಕೈಹೊತ್ತ ನಾರಾಯಣರು ಜೀವನದಲ್ಲಿ ಬರುತ್ತಿರುವ ಅನಿರೀಕ್ಷಿತಗಳಿಂದ ಮಂಕಾಗಿದರು ಎಷ್ಟು ಸಮಯ ಕಳೆಯಿತೊ ತಿಳಿಯಲಿಲ್ಲ. ಹೊರಗಿನಿಂದ ಯಾವ ಶಬ್ಧವು ಕೇಳುತ್ತಿಲ್ಲ, ಮುಂದೆ ತನ್ನ ದಾರಿ ಯಾವುದು, ಈಗ ಇವರು ತನ್ನನ್ನು ಏನು ಮಾಡಬಹುದು ಎಂದು ಚಿಂತಿಸುತಿದ್ದರು.ಸಂಜೆಯಾಗುತ್ತಿದೆ ಎನ್ನಿಸಿತು, ಬಾಗಿಲ ಬಳಿ ಶಬ್ಧವಾಯಿತು, ಯಾರೊ ಬಾಗಿಲು ತೆಗೆಯುತ್ತಿದ್ದಾರೆ. ರೂಮಿನ ಒಳಗೆ ಯಾರೋ ಬರುತ್ತಿದ್ದಾರೆ, ಸುಸ್ತಾಗಿದ್ದ ಅವರು ನೆಲದಮೇಲೆ ಕುಳಿತೆ ತಲೆಯೆತ್ತಿ ನೋಡಿದರು.
ಸಮವಸ್ತ್ರದಲ್ಲಿದ್ದ ತುಮಕೂರಿನ ಪೋಲಿಸ್ ಅಧಿಕಾರಿ ಇಬ್ಬರು ಪೇದೆಗಳ ಜೊತೆ ನಿಂತಿದ್ದರು.
                                                                                             ಮುಗಿಯಿತು
September 23, 2010 - 5:12pm
 

8 comments:

  1. ಕಥೆಯ ಸಾರ ಮತ್ತು ನೀತಿ ಸ್ವಾಗತಾರ್ಹ, ಪಾರ್ಥರವರೇ. ಚೆನ್ನಾಗಿ ಮೂಡಿಸಿರುವಿರಿ.

    ReplyDelete
  2. ಪ್ರತಿಕ್ರಿಯೆ ಕೊಡುವಾಗ word verificationಗೆ ಒಳಪಡಬೇಕಿದೆ. ಇದನ್ನು ಬದಲಾಯಿಸುವ ಕುರಿತು ನಿರ್ಧರಿಸಿ, ಪಾರ್ಥರೇ.

    ReplyDelete
  3. Replies
    1. ಮೆಚ್ಚುಗೆಗೆ ವಂದನೆಗಳು ಸರ್

      Delete
  4. ನಾರಾಯಣ ಭಟ್ಟರ ಪಾತ್ರ ವಿಭಿನ್ನವಾಗಿದೆ. ಕೈಗೆ ಬಂದ ಮಚ್ಚು ಮತ್ತು ಆದ ಹಿನ್ನಲೆ ಮುಂದೆ ತೆರೆದುಕೊಳ್ಳಬಹುದು.

    ReplyDelete
  5. ಅನಿರೀಕ್ಷಿತ ತಿರುವು ಪಡೆದ ಕತೆ. ಕೊನೆಗೂ ಅವರ ಕರ್ಮಕ್ಕೆ ಫಲ ಸಿಕ್ಕಿತು. ಕೆಂಪು ತಿಮ್ಮಯ್ಯನ ಕರ್ಮಕ್ಕೆ ತಕ್ಕ ಫಲ ಅವನಿಗೆ & ಶ್ರಾದ್ಧ ಕರ್ಮದ ಫಲ ಕೃಷ್ಣಸ್ವಾಮಿಯವರ ಆತ್ಮಕ್ಕೆ ಶಾಂತಿ. ಅದ್ಭುತ ಕಲ್ಪನೆ :)

    ReplyDelete
    Replies
    1. ವಂದನೆಗಳು ಪಲ್ಲವಿ ಅಡಿಗ ರವರಿಗೆ, ನಿಜ ಅವರ ಕರ್ಮದ ಫಲ ಅವರಿಗೆ!

      Delete

enter your comments please