Friday, December 2, 2011

ವಿಕ್ಷಿಪ್ತ

ವಿಕ್ಷಿಪ್ತ (ಕಥೆ)

ವಿಕ್ಷಿಪ್ತ
ಬಾನುವಾರವಾದ್ದರಿಂದ ಸ್ವಲ್ಪ ತಡವಾಗಿ ಏಳುವದೆಂದು ರಾತ್ರಿ ಮಲಗುವಾಗಲೆ ನಿರ್ದರಿಸಿದ್ದೆ. ಎಚ್ಚರವಾಗಿ ಕಣ್ಣು ಬಿಟ್ಟಾಗ ಸಾಕಷ್ಟು ತಡವಾಯಿತೇನು ಅನ್ನಿಸಿ ಸುತ್ತಲು ನೋಡಿ ಗೋಡೆಯಲ್ಲಿದ್ದ ಗಡಿಯಾರ ದೃಷ್ಟಿಸಿದೆ ಓ ಆಗಲೇ ಒಂಬತ್ತು ದಾಟಿ ಹತ್ತು ನಿಮಿಷಎನ್ನುತ್ತ. ಇದೇನು ಇಷ್ಟು ಕಾಲ ಮಲಗಿದೆ ಎನ್ನುತ್ತ ದಡಬಡಿಸಿ ಎದ್ದು ಹೊರಗೆ ಬಂದೆ.ಮನೆಯಾಕೆಯಾಗಲಿ , ಮಗಳಾಗಲಿ ಕಾಣಲಿಲ್ಲ. ಹೇಗು ತಡವಾಗಿದೆ ನೇರವಾಗಿ ಸ್ನಾನ ಮುಗಿಸಿಬಿಡೋಣ ನಂತರ ಕಾಫಿಯಾಗಲಿ ಅನ್ನಿಸಿ , ಟವೆಲ್ ಹುಡುಕಿ ಹಿಡಿದು ಸ್ನಾನ ಗೃಹ ಸೇರಿದೆ. ಸ್ನಾನ ಇತ್ಯಾದಿ ಕೆಲಸಗಳನ್ನು ಮುಗಿಸಿ ಹೊರಬಂದು, ಹಾಗೆ ದೇವರಿಗೆ ದೀಪ ಮುಟ್ಟಿಸಿ ಬಟ್ಟೆ ದರಿಸುತ್ತ , ಮನೆಯಲ್ಲಿ ಸುತ್ತಲು ಕಣ್ಣಾಡಿಸಿದೆ. ಎಲ್ಲಿ ಇಬ್ಬರು ಕಾಣಿಸುತ್ತಿಲ್ಲ , ಅಂದು ಕೊಂಡು ಅಡುಗೆಮನೆಗೆ ಹೋದೆ. ಅಲ್ಲಿಯು ನನ್ನಾಕೆಯ ಸುಳಿವಿಲ್ಲ. ಅರೇ ಇದೇನಿದು ರಾತ್ರಿ ಅವಳು ಮಲಗುವ ಮುಂಚೆ ಅಡುಗೆ ಮನೆ ಸ್ವಚ್ಚಮಾಡಿ ಮಲಗಿದಾಗ ಇರುವಂತೆ ಎಲ್ಲವು ಶುಬ್ರವಾಗಿಯೆ ಇದೆ. ಕಡೆಯ ಪಕ್ಷ ಕಾಫಿ ಮಾಡಿದ ಗುರುತು ಇಲ್ಲ. ಹೋಗಲಿ ನಾನೆ ಮಾಡಿಕೊಳ್ಳೋಣ ಎಂದುಕೊಂಡರೆ ಹಾಲಾಗಲಿ ಕಾಫಿಗೆ ಡಿಕಾಕ್ಷನ್ ಹಾಕಿದ ಸುಳಿವಾಗಲಿ ಇಲ್ಲ

        ಬೆಳಗ್ಗೆಯೆ ಎಲ್ಲಿ ಹೋದರು ರಸ್ತೆಯಲ್ಲಿ ಯಾರ ಮನೆಯಲ್ಲಿ ಏನಾದರು ಹೆಚ್ಚು ಕಡಿಮೆಯಾಗಿ ಈಕೆ ಅಲ್ಲಿಗೆ ದಾವಿಸಿದಳಾ? ಅನ್ನಿಸಿತು, ಆದರೆ ಮಗಳು ಆ ರೀತಿ ಹೋಗುವಳಲ್ಲ. ನಿದಾನವಾಗಿ ಹೊರಬಂದೆ. ಹತ್ತು ಗಂಟೆ ದಾಟಿದ್ದರು ರಸ್ತೆಯಲ್ಲಿ ಯಾರ ಸುಳಿವು ಇಲ್ಲ. ಬಹುಷಃ ಮುಂದಿನ ಮನೆಗೆ ಹೋಗಿರಬಹುದು ಎಂದು ಕೊಂಡು ಗೇಟ್ ತೆಗೆದು ಅವರ ಮನೆಯ ಒಳಗೆ ಹೋದೆ. ಬಾಗಿಲು ತೆಗೆದೆ ಇತ್ತು. ’ಗಿರೀಶ’ ಎನ್ನುತ್ತ ಅವರ ಮನೆಯ ಹುಡುಗನನ್ನು ಕೂಗಿದೆ. ಯಾವ ಪ್ರತಿಕ್ರಿಯೆ ಇಲ್ಲ. ಒಳಗೆಲ್ಲ ಬಗ್ಗಿ ನೋಡಿದೆ. ನಿಜ ಅವರ ಮನೆಯಲ್ಲಿ ಯಾರು ಇಲ್ಲ. ಪುನಃ ಹೊರಗೆ ಬಂದು ಅದೆ ರೀತಿ ನಮ್ಮ ಮನೆಯ ಪಕ್ಕದ ಮನೆ ಬಾಗಿಲು ತೆರೆದಿರುವದನ್ನು ಕಂಡು ಒಳಗೆ ಹೋದೆ. ಆಶ್ಚರ್ಯ ಅವರ ಮನೆಯಲ್ಲು ಯಾರು ಇಲ್ಲ.

       ಮನೆಗೆ ಹಿಂದಿರುಗಿ ಬಂದೆ ಏನೊ ವಿಪರೀತವಾಗಿದೆ ಎನ್ನಿಸಿ, ಪ್ಯಾಂಟ್, ಚಪ್ಪಲಿ ಧರಿಸಿ ಬೀಗ ಹಾಕಿ ಹೊರಬಂದು ಎಲ್ಲರ ಮನೆ ನೋಡುತ್ತ ಹೊರಟೆ. ಸಂಫೂರ್ಣ ರಸ್ತೆಯೆ ಖಾಲಿ, ವಿಚಿತ್ರ, ಹಾಗೆ ರಸ್ತೆಯಲ್ಲಿ ನಡೆಯುತ್ತ ಹೊರಟ, ಎಲ್ಲಿ ಯಾವ ಗಲಾಟೆಯಾಗಲಿ ಅವಸರವಾಗಲಿ ಇಲ್ಲ ಆದರೆ ಆಶ್ಚರ್ಯವೆಂದರೆ ಯಾವುದೇ ವಾಹನವಾಗಲಿ ಜನಗಳಾಗಲಿ ಕಡೆಗೆ ಪ್ರಾಣಿಗಳಾಗಲಿ ಕಾಣುತ್ತಿಲ್ಲ. ಯಾವ ಅಂಗಡಿಗಳಾಗಲಿ ತೆರೆದಿಲ್ಲ. ಏನಾಗಿದೆ ಎಂದು ನನಗೆ ಹೇಳುವುವರು ಇರಲಿಲ್ಲ. ಸಂಪೂರ್ಣ ಊರಿಗೆ ನಾನೊಬ್ಬನೆ ಉಳಿದಿರುವನೊ ಎಂಬಂತೆ ಸುತ್ತುತ್ತಿದ್ದೆ , ಕಾಲುಗಳು ನೋಯುತ್ತಿದ್ದವು. ಮನಸ್ಸಿನಲ್ಲಿ ಏನು ಮಾಡಬೇಕೆಂಬ ನಿರ್ದಾರವೆ ಮೂಡುತ್ತಿಲ್ಲ. ಸಮಯ ನೋಡೋಣವೆಂದರೆ ವಾಚನ್ನು ಕಟ್ಟಿಕೊಂಡು ಬರಲಿಲ್ಲ, ಹಾಗೆ ಕಾಲೆಳೆಯುತ್ತ ಹತ್ತಿರ ಕಾಣಿಸಿದ ಪಾರ್ಕಿಗೆ ಹೋಗಿ ಕುಳಿತೆ.

    ಎಷ್ಟು ಹೊತ್ತಾಯಿತು ತಿಳಿದಿಲ್ಲ ಹಾಗೆ ಕುಳಿತಿರುವಾಗ ಆಶ್ಚರ್ಯವನ್ನು ಗಮನಿಸಿದೆ ನನ್ನಿಂದ ಕಣ್ಣಳತೆಯ ದೂರದಲ್ಲಿ ಬಹುಷಃ ಕೆರೆಯ ಏರಿಯಂತಹ ಎಂತದೋ ರಚನೆ , ಅಥವ ಕ್ರಿಕೇಟ್ ಸ್ಟೇಡಿಯಮ್ ತರದ್ದು ದೂರಕ್ಕೆ ವೃತ್ತಾಕಾರಕ್ಕೆ ಕಾಣಿಸುತ್ತಿತ್ತು. ಅದರೆ ಮೇಲೆ ಏರಿಹೋಗಲು ವಿಶಾಲವಾದ ಸಾಲು ಸಾಲು ಮೆಟ್ಟಿಲುಗಳು. ಯಾರೋ ಒಬ್ಬಾತ ದೂರದಲ್ಲಿ ನಿದಾನವಾಗಿ ಕಾಲೆಳೆಯುತ್ತ ಅ ಮೆಟ್ಟಿಲುಗಳತ್ತ ಸಾಗುತ್ತಿದ್ದ , ಬೆಳಗಿನಿಂದ ಕಾಣಿಸಿದ ಪ್ರಥಮ ಮನುಷ್ಯ, ನಾನು ತಕ್ಷಣ ಎದ್ದು ಆ ದಿಕ್ಕಿನತ್ತ ಧಾವಿಸಿದೆ. ಅವನ ಹತ್ತಿರ ’ಸಾರ್ ಸಾರ್’ ಎಂದು ಕೂಗುತ್ತ ಓಡಿಹೋದೆ. ಹತ್ತಿರ ಹೋದಾಗ ಅವನು ನನ್ನತ್ತ ದಿಟ್ಟಿಸಿ ನೋಡಿದ. ನಾನು ಉಸಿರು ಎಳೆದುಕೊಳ್ಳುತ್ತ ಬಡಬಡಿಸಿದೆ ’ಸುತ್ತಲು ಎಲ್ಲಿಯೂ ಜನರೆ ಕಾಣಿಸುತ್ತಿಲ್ಲ ಎಲ್ಲರು ಎಲ್ಲಿ ಹೋಗಿದ್ದಾರೆ, ಇದೇನು ಮೇಲೆ ಹೋಗಲು ಮೆಟ್ಟಿಲುಗಳು ಏನು ರಚನೆಯಿದು?’ಅವನು ನನ್ನತ್ತ ನಿರ್ಲಿಪ್ತನಾಗಿ ನೋಡಿದ, ಅವನ ಮುಖದಲ್ಲಿ ಯಾವುದೇ ಭಾವನೆ ಕಾಣಿಸಲಿಲ್ಲ ನನ್ನ ಪ್ರಶ್ನೆಗೆ ಉತ್ತರವನ್ನು ಕೊಡಲು ಹೋಗಲಿಲ್ಲ. ನಾನು ಅಲ್ಲಿ ಇರುವದನ್ನು ಅವನು ಗಮನಿಸಲೆ ಇಲ್ಲ ಎನ್ನುವಂತೆ ನನ್ನ ಪಕ್ಕದಿಂದ ಹೊರಟು ಮೆಟ್ಟಿಲುಗಳನ್ನು ಹತ್ತಲು ಪ್ರಾರಂಬಿಸಿದ.

    ಸ್ವಲ್ಪ ಹೊತ್ತು ನಿಂತಿದ್ದ ನನಗೆ ಏನು ಮಾಡಲು ತೋಚಲಿಲ್ಲ. ನಂತರ ಏನಾದರು ಆಗಲಿ ಎನ್ನುತ್ತ ಆ ವ್ಯಕ್ತಿ ಹೋದಕಡೆಗೆ ನಾನು ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೊರಟೆ. ಮೇಲ್ಬಾಗ ತಲುಪಿದಾಗ ಅನ್ನಿಸಿದ್ದು ನಾನು ಯಾವುದೋ ಒಂದು ಗುಡ್ಡದ ತುದಿಯಲ್ಲಿರುವೆನೊ ಅಂತ. ಮೇಲೆ ಎರಡು ಫುಟ್ಬಾಲ್ ಮೇದಾನದ ವಿಸ್ತೀರ್ಣದಸ್ಟು ಜಾಗ ಸುತ್ತಲು ವೃತ್ತ ಕಾರದಲ್ಲಿ ಹಾಕಿದ ಒರಗು ಕಲ್ಲು ಬೆಂಚುಗಳು. ಮದ್ಯದಲ್ಲಿ ಒಂದು ಕ್ರಿಕೆಟ್ ಮೈದಾನದಸ್ಟು ದೊಡ್ಡದಾದ ಬಾವಿಯಂತ ಜಾಗಕ್ಕೆ ಸುತ್ತಲು ಹಾಕಿದ ಕಬ್ಬಿಣದ ಬೇಲಿ. ಇದೇನು ಇಷ್ಟು ದೊಡ್ಡ ಬಾವಿ ಎಂದು ಹತ್ತಿರಹೋದೆ , ಕಂಬಿಯನ್ನು ಹಿಡಿದು ಒಳಗೆ ಬಗ್ಗಿ ನೋಡಿದೆ. ಇದೇನು ಒಳಗೆ ಕುದಿಯುತ್ತಿರುವ ಲಾವರಸ. ಕೆಂಪಗೆ ಹೊಳೆಯುತ್ತಿರುವ ಭೂಗರ್ಭ , ಸುಮಾರು ಐದು ನೂರರಿಂದ ಆರು ನೂರು ಅಡಿಯಷ್ಟು ಆಳವಿರಬಹುದಾ? ತಿಳಿಯದು. ಸುತ್ತಲು ಕಣ್ಣಾಡಿಸಿದಾಗ ಆ ಕಬ್ಬಿಣದ ಬೇಲಿಯನ್ನು ದಾಟಿ ಒಳಹೋಗಲು ಅಲ್ಲಲ್ಲಿ ಗೇಟಿನಂತ ರಚನೆ ಕಾಣಿಸಿತು. ನಿದಾನವಾಗಿ ಹಾಗೆ ಬೇಲಿಯಪಕ್ಕವೆ ಆ ಬಾವಿಗೆ ಸುತ್ತು ಬರುತ್ತ ಕಾಣಿಸಿದ ಗೇಟ್ ಸಮೀಪ ಹೋದೆ, ಪಕ್ಕದಲ್ಲಿ ಎಂತದೊ ಪ್ರಕಟಣೆಯೊಂದರ ಬೋರ್ಡ್ ಇತ್ತು. ಓದಲು ಪ್ರಯತ್ನಿಸಿದೆ. ನನಗೆ ಅರ್ಥವಾದಂತೆ ಅದು ಹಿಂದುಗಳು ಒಳಗೆ ಹೋಗಿ ದುಮುಕಲು ಮಾಡಿದ ಜಾಗ , ದುಮುಕುವ ಮುಂಚೆ ಹೇಳಬೇಕಾದ ಅಗ್ನಿ ಸ್ತೊತ್ರವೊಂದನು ಅಲ್ಲಿ ಬರೆದಿದ್ದರು. 50 ವರ್ಷಕ್ಕೆ ಮೇಲ್ಪಟ್ಟವರು ಮಾತ್ರ ಒಳಹೋಗಲು ಅನುಮತಿ ಎಂದು ತಿಳಿಸಲಾಗಿತ್ತು. ಇದ್ದಕ್ಕಿದ್ದಂತೆ ಹೊಳೆದುಬಿಟ್ಟಿತು ಅದು ಆತ್ಮಹತ್ಯ ಮಾಡಿಕೊಳ್ಳಬಯಸುವವರಿಗಾಗಿ ಇರುವ ಏರ್ಪಾಡು. ಕುತೂಹಲವೆನಿಸಿ ಗೇಟಿನಮೂಲಕ ಒಳಹೋದೆ ಅದು ಈಜುಕೊಳದಲ್ಲಿ ಇರುವ ಚಿಮ್ಮುಹಲಗೆಯಂತಹ ರಚನೆ, ಅದರಮೇಲಿನಿಂದ ಹಾರಿ ಭೂಗರ್ಭ ಸೇರಬಹುದಿತ್ತು. ಇದು ಬಾವಿಯಲ್ಲ,ಒಂದು ಅಗ್ನಿಪರ್ವತದ ತೆರೆದ ಬಾಯಿ ಎನಿಸಿ ಅಲ್ಲಿ ನಿಲ್ಲಲ್ಲು ಭಯವೆನಿಸಿ ಹೊರಬಂದೆ.

    ಎದುರಿಗೆ ಬಂದ ವ್ಯಕ್ತಿ ನಾನು ಹೊರಬರುತ್ತಿರುವದನ್ನು ನೋಡಿ ಗಹಗಹಿಸಿ ನಗಲು ಶುರುವಿಟ್ಟ. ’ನಾನು ಆತ್ಮಹತ್ಯೆಗೆ ಹೋಗಿ ಜೀವಭಯದಿಂದ ಹೊರಗೆ ಬರುತ್ತಿಲ್ಲ’ ಅಂತ ಹೇಳಲ ಅಂದುಕೊಂಡೆ ಆದರೆ ಏಕೊ ಅಲ್ಲಿ ಮಾತಿನಿಂದ ಏನು ಪ್ರಯೋಜನವಿಲ್ಲವೆಂದೆನಿಸಿತು. ಅವನು ನಗುನಗುತ್ತ ನನ್ನ ಎದುರಿನಲ್ಲಿಯೆ ಒಳಹೋದವನ್ನು ತಕ್ಷಣ ಕೆಳಗೆ ನೆಗೆದು ಬಿಟ್ಟ.
ನಾನು ಸ್ವಲ್ಪ ಮುಂದೆ ಹೋದೆ ಮತ್ತೊಂದು ಗೇಟ್ ಪಕ್ಕದಲ್ಲಿ ಉರ್ದುವಿನಲ್ಲಿ ಬರದಿತ್ತು ,ಹತ್ತಿರ ಹೋದೆ ಓದಿನೋಡಲು ಅದು ಮುಸ್ಲೀಮರ ಆತ್ಮಹತ್ಯಾ ತಾಣಾ!! ತಕ್ಷಣ ಹೊಳೆಯಿತು ಸುತ್ತಲು ಏಕೆ ಅಷ್ಟೊಂದು ಗೇಟ್ಗಳಿವೆ ಅಂತ. ಮುಂದೆ ಯಾವ ಆಸಕ್ತಿಯು ಉಳಿಯಲಿಲ್ಲ. ಹಾಗೆ ಬಂದು ಒರಗುಬೆಂಚಿನ ಮೇಲೆ ಕುಳಿತೆ. ಸ್ವಲ್ಪ ಕಾಲಕಳೆಯಿತು. ಎದುರಿನಿಂದ ಬಂದ ವ್ಯಕ್ತಿ ನನ್ನನ್ನೆ ನೋಡುತ್ತ ನಿಂತ, ಅವನು ಸ್ವಚ್ಚವಾದ ಸೂಟು ಧರಿಸಿ ಟೈಕಟ್ಟಿದ್ದಾನೆ. ನಾನು ಏನು ಮಾತಾಡಲು ಹೋಗಲಿಲ್ಲ. ಆದರೆ ತನ್ನಂತೆ ಹೊಳೆಯುತ್ತಿದ್ದೆ , ಅವನೊಬ್ಬ ನರಬಕ್ಷಕ. ನನ್ನನ್ನು ತಿಂದು ಮುಗಿಸಲು ಅವನು ಚಿಂತಿಸುತ್ತಿದ್ದಾನೆ ಇದೇನಿದು ಇದ್ದಕ್ಕಿದ್ದಂತೆ ಬಂದ ಆಪತ್ತು ಹೊಳೆಯುತ್ತಿಲ್ಲ. ತಕ್ಷಣ ಎದ್ದು ಅಲ್ಲಿಂದ ಬಂದ ದಾರಿಗೆ ವೇಗವಾಗಿಯೆ ಹೊರಟೆ. ಅವನು ನನ್ನ ಹಿಂದೆ ! ಈಗ ನನಗೆ ಗ್ಯಾರಂಟಿಯೆನಿಸಿತು ಅವನು ನಿಜಕ್ಕು ಇಂದು ನನ್ನನ್ನು ತಿನ್ನುವ ನಿರ್ದಾರ ಮಾಡಿದ್ದಾನೆ. ವೇಗವಾಗಿ ಮೆಟ್ಟಿಲು ಇಳಿಯಲು ಪ್ರಾರಂಬಿಸಿದೆ . ಇಳಿದು ಮುಗಿಸಿದಾಗ ತಕ್ಷಣ ಮೆಟ್ಟಿಲ ಪಕ್ಕಕ್ಕೆ ಬಂದೆ, ಮೆಟ್ಟಿಲ ಕೆಳಗಡೆ ಸಿಮೆಂಟಿನಲ್ಲಿ ಗೂಡಿನಂತಹ ರಚನೆಗಳನ್ನು ನಿರ್ಮಿಸಿದ್ದಾರೆ. ತಕ್ಷಣ ಅಲ್ಲಿ ಮುಚ್ಚಿಟ್ಟುಕೊಂಡೆ. ನನ್ನ ಹಿಂದೆಯೆ ಇಳಿದ ಅವ್ಯಕ್ತಿ ನೆಲದಮೇಲೆ ನಿಂತು ಸುತ್ತಲು ಹುಡುಕುತ್ತಿದ್ದ. ಅವನ ಕಾಲುಗಳು ಮಾತ್ರ ನನಗೆ ಹಿಂಬದಿಯಿಂದ ಕಾಣುತ್ತಿದ್ದವು. ನನ್ನನ್ನು ಅರಸುತ್ತ ಅವನು ಎತ್ತಲೋ ನಡೆದುಹೋದ.

        ನಾನು ಕುಳಿತ ಜಾಗದಲ್ಲಿ ಪಕ್ಕದಲ್ಲಿ ಯಾರೊ ಇದ್ದಂತೆ ಅನ್ನಿಸಿತು. ನೋಡಿದೆ ನೆಲದ ಮೇಲೆ ಹಾಸಿದ ಬೆಚ್ಚನೆಯ ಕಂಬಳಿಯಂತ ಹಾಸಿಗೆಯಮೇಲೆ ಸುಮಾರು ಒಂದು ವರ್ಷದ ಮಗುವನ್ನು ಮಲಗಿಸಿ ಅದಕ್ಕೆ ಬೆಚ್ಚನೆಯ ದೊಡ್ಡ ರಗ್ಗಿನಂತಹ ಹೊದಿಕೆಯನ್ನು ಹೊದಿಸಿದ್ದರು. ನಿದ್ದೆಯಲ್ಲಿಯು ಆ ಮಗು ಸಣ್ಣದಾಗಿ ನಗುತ್ತಿತ್ತು. ಆ ನಗುವಿನಲ್ಲಿ ನನಗೆ ಜಗತ್ತಿನ ಎಲ್ಲ ಆಶ್ವಾಸನೆಗಳು ದೊರೆತಂತೆ ಅನ್ನಿಸಿತು. ಕತ್ತಲಾದಂತೆ ನಾನು ಮಗುವಿನಪಕ್ಕ ಮಲಗಿ ಅದೆ ರಗ್ಗನು ಅಗಲ ಮಾಡಿ ಹೊದ್ದುಕೊಂಡೆ. ನನ್ನತ್ತ ತಿರುಗಿದ ಆ ಮಗುವು ತನ್ನ ಕೈ ಹಾಗು ಕಾಲುಗಳನ್ನು ನನ್ನ ಮೇಲೆ ಹಾಕಿತು. ಮಗು ಹಾಸಿಗೆಯಲ್ಲಿ ಒದ್ದೆ ಮಾಡಿತ್ತೊ ಏನೊ ಮಗುವಿನ ಪಕ್ಕ ಮಲಗಿದ್ದರಿಂದ ಎಂತದೊ ಒಂದು ವಾಸನೆ ನನ್ನನ್ನು ಆವರಿಸಿತು. ನಾನು ಹಾಗೆ ನಿದ್ದೆಗೆ ಜಾರಿದೆ

No comments:

Post a Comment

enter your comments please