Wednesday, December 23, 2015

ಕತೆ : ಐಚ್ಚಿಕಮು

ಕತೆ : ಐಚ್ಚಿಕಮು


 
ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ. 
ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು ಮತ್ತೆ ಬೆಂಗಳೂರು ಕಡೆ ಹೊರಡುವ ರೈಲು ಹಿಡಿಯಬೇಕಿತ್ತು. 
ಮಧ್ಯಾನ್ಯದ ಊಟವು ಇಲ್ಲವಾಗಿ, ಕುಳಿತಲ್ಲೆ ಜೊಂಪು ಎಳೆಯುತ್ತಿತ್ತು. 
ನಿದ್ದೆಗಣ್ಣಲ್ಲಿ ಎಚ್ಚರವಾಗಿ ನೋಡಿದರೆ ಎಲ್ಲರೂ ಕೆಳಗೆ ಇಳಿಯುತ್ತಿದ್ದರು. 
ಅದೇ ಹೈದರಾಭಾದ್ ಇರಬೇಕೆಂದು ಯಾರನ್ನೋ ಕೇಳಿದೆ ಅವನು ಅದೇನು ಕೇಳಿಸಿಕೊಂಡನೊ 
’ಅವುನೂ ’ ಎನ್ನುತ್ತ ಇಳಿದುಹೋದ!, 
ನಾನು ಸಹ ಬ್ಯಾಗ್ ಹಿಡಿದು ಇಳಿದು ಬಿಟ್ಟೆ , 
ನಂತರವೇ ಗೊತ್ತಾಗಿದ್ದು ಅದು ಮತ್ಯಾವುದೋ ಸ್ಟೇಶನ್, ಹೈದರಾಭಾದ ಅಲ್ಲ ಎಂದು. 
ರೈಲ್ವೇ ಸ್ಟೇಶನ್ ಖಾಲಿ ಖಾಲಿ, ಜನರೇ ಇಲ್ಲ,  ಮತ್ತೆ ಅಲ್ಲಿಂದ ಯಾವ ರೈಲು ಇಲ್ಲ, ಹೊರಗೆ ಬಂದೆ. 
ಅದು ಯಾವುದೋ ಒಂದು ಆಂದ್ರದ ಚಿಕ್ಕ ಊರು ಇರಬೇಕು, ಆದರೆ ಸಾಕಷ್ಟು ಅದುನಿಕವಾಗಿತ್ತು!. 
ಊರ ಹೆಸರು ಕೇಳಿದರೆ 
’ ಐಚ್ಚಿಕಮು ’ ಎಂದರು. ಇದೆಂತ ಹೆಸರೋ ! 
ರೈಲಂತೂ ಇಲ್ಲ ಬಸ್ ಸಿಗುವುದೋ ಎನ್ನುವ ಆಸೆಯೊಂದಿಗೆ ಊರಲ್ಲಿ ನಡೆದಿದ್ದೆ. 
ಅದೇನೊ ಅಲ್ಲಿಯ ಜನ , ಮನೆ , ಅಂಗಡಿಗಳಾಗಲಿ ಹೋಟೆಲ್ ಯಾವುದು ಸಹಜವಾಗಿದೆ ಎಂದು ಅನಿಸಲಿಲ್ಲ. ಎಂತದೋ ಒಂದು ವಿಪರೀತ, ಹೀಗೆ ಎಂದು ನಿಮಗೆ ಹೇಳಲಾರೆ. ಮತ್ತೆ ಒಂದು ಆಶ್ಚರ್ಯ ಕಾದಿತ್ತು, ಯಾರಲ್ಲಿ ಮಾತನಾಡಿದರು ಸ್ವಚ್ಚವಾಗಿ ಕನ್ನಡವೆ ಮಾತನಾಡುತ್ತಿದ್ದರು, ಇದೇನು ಕರ್ನಾಟಕದ ಇಷ್ಟೂ ದೂರದಲ್ಲಿ ಕನ್ನಡವೆ ಎಂದು ಪ್ರಶ್ನಿಸಿದರೆ, ನೀವು ಯಾವ ಬಾಷೆಯಲ್ಲಿ ಮಾತನಾಡಿದರು ಅದೇ ಬಾಷೆಯಲ್ಲಿ ಉತ್ತರಿಸುವುದು ಅಲ್ಲಿನ ಪದ್ದತಿ ಎಂದು ತಿಳಿಸಿದರು. 
’ಪರವಾಗಿಲ್ಲ ನಮ್ಮ ಬೆಂಗಳೂರಿನ ತರವೇ ಇದೆಯಲ್ಲ ’  ಎಂದುಕೊಂಡೆ. 
ಕಡೆಗೆ ಬಸ್ ನಿಲ್ದಾಣದ ಬಗ್ಗೆ ಅಥವ ಬಸ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯಾವುದಾದರು ಲಾಡ್ಜ್ ಸಿಕ್ಕರೆ ಅಥವ ಹೋಟೆಲ್ ಸಿಕ್ಕರೆ ಉಳಿದು ಮಾರನೇ ದಿನ ಪುನಃ ರೈಲಿನಲ್ಲಿಯೇ ಹೈದರಾಭಾದಿಗೆ ಪ್ರಯಾಣ ಮಾಡಬಹುದೇ ಅನ್ನಿಸಿತು. ಆಗೆ ಸಂಜೆ ಕಳೆದು ರಾತ್ರಿಗೆ ಕಾಲ ಕಾಲಿಟ್ಟಿತ್ತು. 
ಅಲ್ಲೊಂದು ಹೋಟೆಲ್ ತರದ ಬೋರ್ಡ್ ಕಾಣಿಸಿತು
ಹೆಸರಾದರೋ ’ಮಿಹಾಮ್ ’ ಎಂದೋ ಏನೊ ಇತ್ತು, ನನಗೆ ತೆಲಗನ್ನು ಅಕ್ಷರ ಅಕ್ಷರ ಸೇರಿಸಿ ಓದುವೆನಾದರು ಸರಿಯಾಗಿ ಓದಲಾರೆ
ಒಳಗೆ ಹೋದೆ. ಜನ ದಟ್ಟನೇ ಏನು ಇಲ್ಲ , ಆಫೀಸಿನಲ್ಲಿಯ ಚಿಕ್ಕ ಚಿಕ್ಕ ಕ್ಯಾಬಿನ್ ರೀತಿಯ ರೂಮುಗಳು. 
ಒಂದು ರೂಮಿನಲ್ಲಿ ಹೋಗಿ ಕುಳಿತೆ , 
ಒಬ್ಬಾಕೆ ಕಾಣಿಸಿದಳು, ನನ್ನನ್ನು ಸ್ವಲ್ಪ ಅನುಮಾನಾಸ್ಪದ ಎನ್ನುವಂತೆ ನೋಡುತ್ತ
’ನೀವು ಇಲ್ಲಿಯವರಂತೆ ಕಾಣುವದಿಲ್ಲವಲ್ಲ ’ ಎಂದಳು ನಗುತ್ತ. 
’ನಿಜ ನಾನು ಇಲ್ಲಿಯವನಲ್ಲ, ಬೆಂಗಳೂರಿನವನು, ಅಚಾತುರ್ಯದಿಂದ ರೈಲಿನಿಂದ ಇಳಿದೆ ಮುಂದಿನ ರೈಲು ಸಿಗದೆ ಪರದಾಟ’ ಎಂದೆ 
ಆಕೆ
’ಎಲ್ಲವೂ ಸರಿ ಹೋದಿತು ಬಿಡಿ, ನಿಮಗೆ ಏನು ಮಾಡಿ ಕೊಡಲಿ ತಿನ್ನಲು’ ಎಂದಳು
ನನಗಂತು ಮೊದಲಿಗೆ ಆಕೆ ಕನ್ನಡದಲ್ಲಿ ಮಾತನಾಡಿದ್ದು ಆಶ್ಚರ್ಯವೆನಿಸಿತ್ತು, ಮೇಲಾಗಿ ಮನೆಯಲ್ಲಿ ಕೇಳುವಂತೆ ಕೇಳುತ್ತಿದ್ದಾಳೆ ಏನು ಮಾಡಿಕೊಡಲಿ ಎಂದು. 
ನಾನು ನಗುತ್ತ ಹೇಳಿದೆ
’ಅಂದರೆ ನಮ್ಮನ್ನು ಕೇಳಿ ಮಾಡುವ ಪದ್ದತಿಯ ಇಲ್ಲಿ, ನಮಗೆ ಬೇಕಾದ್ದು ಮಾಡಲು ಹೇಗೆ ಸಾದ್ಯ’ ಎಂದೆ
ಆಕೆ
’ಇಲ್ಲಿಯೆಲ್ಲ ಹೋಟಲಿಗೆ ಬರುವವರೆ ಕಡಿಮೆ, ಅಲ್ಲದೆ ನಮ್ಮ ಹೋಟೆಲ್ ಹೆಸರೆ ನಿಮ್ಮ ಮನೆ ಎಂದು ನೀವು ಹೇಳಿ ಪ್ರಯತ್ನಮಾಡುವ’ ಎಂದಳು ನಗುತ್ತ
’ಸರಿ ದೋಸೆ ಆದರೆ ಚೆನ್ನಾದೀತು, ದೋಸೆ ಚಟ್ನಿ ಆಲೂಗೆಡ್ಡೆ ಈರುಳ್ಳಿಯ ಪಲ್ಯ ಸಿಕ್ಕೀತೆ ’ ಎಂದೆ ತಮಾಶಿ ಎನ್ನುವಂತೆ
’ಸರಿ ಆದೀತು, ಅಲ್ಲಿಯವರೆಗೂ, ತಂಪಾದ ಪಾನಕ ಕುಡಿದು ಸುದಾರಿಸಿಕೊಳ್ಳಿ ’   
ಒಳಗಿನಿಂದ ನಿಂಬೆ ಹಣ್ಣಿನ ಪಾನಕ ತಂದುಕೊಟ್ಟಳು 
ಅದನ್ನು ಕುಡಿಯುತ್ತ ಯೋಚಿಸಿದೆ, ಅದೇನು ಇಲ್ಲಿ ಎಲ್ಲವು ಸಹಜವಾಗಿ ಕಾಣುತ್ತಿಲ್ಲವೆ ಎಂದು . 
ಸ್ವಲ್ಪ ಸಮಯದಲ್ಲಿಯೆ ದೋಸೆ, ಹಾಗು ಚಟ್ನಿ ಪಲ್ಯ ಎಲ್ಲವೂ ನಾನು ಬಯಸಿದಂತೆ ಸಿದ್ದವಾಗಿ ಬಂದಿತು. ಹೆಚ್ಚು ಆಶ್ಚರ್ಯಪಡದೆ ತಿಂದೆ. ಕಾಫಿ ಆಯಿತು. ಅದೇನೊ ಕುತೂಹಲ ಅನ್ನಿಸಿತು, ಇದೇ ಊರಿನಲ್ಲಿ ಒಂದು ದಿನ ಇದ್ದು ಹೋದರೆ ಮತ್ತಷ್ಟು ವಿಷಯಗಳು ತಿಳಿಯಬಹುದು ಇಲ್ಲಿಯ ಬಗ್ಗೆ .
’ಈ ಊರಿನಲ್ಲಿ ಇಳಿದುಕೊಳ್ಳಲು ಎಲ್ಲಿಯಾದರು ಸ್ಥಳ ಸಿಗಬಹುದೇ, ಗೆಸ್ಟ್ ಹೌಸ್ ರೀತಿ ’ 
’ಖಂಡಿತ ಸಿಗುತ್ತದೆ’ ಎಂದಳು
ಅವಳ ಬಳಿಯಿದ್ದ ವಿಸಿಟಿಂಗ್ ಕಾರ್ಡ್ ಒಂದನ್ನು ಕೊಟ್ಟು, ನೋಡಿ ಈ ವಿಳಾಸದಲ್ಲಿ ಹೋಗಿ, ಅಲ್ಲಿ ನೀವು ಉಳಿದುಕೊಳ್ಳಬಹುದು. ಎಂದಳು
ಸರಿ ಹಣ ಎಷ್ಟಾಗಿರಬಹುದೆ ಎಂದು ಚಿಂತಿಸುತ್ತ, ಜೋಬಿನಿಂದ ನೂರು ರೂಪಾಯಿ ನೋಟು ತೆಗೆದು ಅವಳ ಕೈಗೆ ಕೊಟ್ಟೆ 
ಆಕೆ ಅದನ್ನು ಆಶ್ಚರ್ಯಚಕಿತಳಾಗಿ ಹಿಂದೆ ಮುಂದೆ ತಿರುಗಿಸಿ ನೋಡುತ್ತ ನಿಂತು ಬಿಟ್ಟಳು. ಸ್ವಲ್ಪ ಸಮಯದ ನಂತರ ಕೇಳಿದಳು
’ಈ ಹಣ ನಿಮಗೆಲ್ಲಿ ಸಿಕ್ಕಿತು’ 
ನನಗೆ ಮತ್ತೆ ಆಶ್ಚರ್ಯ ವಾಗಿತ್ತು,’ ಅಲ್ಲ ನನ್ನ ಹಣ ಎಲ್ಲಿ ಸಿಕ್ಕಿತ್ತು ಎಂದರೆ ಏನು ಹೇಳುವುದು’  
’ಸಿಗುವದೇನು ಬಂತು, ATM ನಿಂದ ಡ್ರಾ ಮಾಡಿರುವುದು’ ಎಂದೆ , 
ಆಕೆ ಅನುಮಾನಾಸ್ಪದವಾಗಿ ನನ್ನನ್ನು ನೋಡುತ್ತ, ತಲೆ ಆಡಿಸಿದಳು. ಮತ್ತೆ 
’ಇಷ್ಟು ಹಣಕ್ಕೆ ನಾನು ಚಿಲ್ಲರೆ ಹೊಂದಿಸುವುದು ಕಷ್ಟ’ ಎಂದಳು 
’ನಾನು ತಿಂದಿದ್ದ ತಿಂಡಿ, ಕಾಫಿ , ಪಾನಕ ಎಲ್ಲ ನೆನೆಯುತ್ತ 
’ಪರ್ವಾಗಿಲ್ಲ ಬಿಡಿ’ ಎಂದರೆ , ಆಕೆ ಕಣ್ಣರಳಿಸಿ ನನ್ನತ್ತ ನೋಡಿದಳು, ನಾನು ಅಲ್ಲಿಂದ ವಿಳಾಸದ ಕಾರ್ಡ್ ಹಿಡಿದು ಹೊರಟೆ
ಬೆಂಗಳೂರು ಬಿಟ್ಟು ಹದಿನೈದು ದಿನವಾಗಿತ್ತು, ತಲೆಯಲ್ಲಿ ಕೂದಲು ಬೆಳೆದು ಎಂತದೋ ಮುಜುಗರ, ಅಲ್ಲದೆ ರೈಲಿನ ಪ್ರಯಾಣದ ನಡುವೆ ಶೇವ್ ಸಹ ಮಾಡಲಾಗಿರಲಿಲ್ಲ. ದಾರಿಯಲ್ಲಿ ಹೋಗುವಾಗ , ಕಟಿಂಗ್ ಶಾಪ್ ಒಂದರ ಫಲಕ ಕಾಣಿಸಿತು. 
’ಮೇನಿಯಾ ಹೇರ್ ಡ್ರೆಸ್ ’ 
ಸರಿ ಕ್ಷೌರ ಮಾಡಿಸಿಯೆ ಬಿಡುವುದು ಎಂದು ನಿರ್ಧರಿಸಿ ಒಳಗೆ ಹೋದೆ. 
ನಾನು ಸಾಮಾನ್ಯವಾಗಿ ಕಟಿಂಗ ಇಂತಹುದಕ್ಕೆಲ್ಲ ಸಮಯ ಎಲ್ಲ ನೋಡುತ್ತಿರಲಿಲ್ಲ. ಕೈಲಿದ್ದ ಬ್ಯಾಗನ್ನು ಕೆಳಗಿಟ್ಟು ಸುತ್ತಲೂ ನೋಡುವಾಗ ಒಳಗಿನಿಂದ ಒಬ್ಬಾತ ಬಂದ. ಲಕ್ಷಣವಾಗಿ ಬಿಳಿಯ ಪಂಚೆ ಶರ್ಟ್ ಧರಿಸಿದ್ದ. 
ಹಣೆಯಲ್ಲಿ ಅಗಲ ಗಂಧ, ತಕ್ಷಣ ನೋಡಿದರೆ, ದೇವಾಲಯದ ಪುರೋಹಿತನಂತೆ ಕಾಣುತ್ತಿದ್ದ. 
’ಒಳಗೆ ಬರಬಹುದೇ’ ಎಂದು ಕೇಳಿದೆ.
ಅವನು ನಗುತ್ತ ,
’ದಯಮಾಡಿ ಬನ್ನಿ,  ಯಾವ ಸೇವೆ ಆಗಬೇಕಿತ್ತು’ ಎಂದು ಕೇಳಿದ. ಇದೆನು ಹುಚ್ಚೋ, ಇಲ್ಲಿ ಯಾವ ಸೇವೆ, ಎಂದು ಮನದಲ್ಲಿ ಗೊಣಗಿಕೊಳ್ಳುತ್ತ.
’ಊರು ಬಿಟ್ಟು ತುಂಬಾ ದಿನವಾಯಿತಲ್ಲ, ಕೂದಲು ಬೆಳೆದಿದೆ, ತಲೆಕ್ಷೌರ ಮಾಡಿಸೋಣ ಎಂದು ಬಂದೆ’ ಎಂದೆ ಮುಗುಮ್ಮಾಗಿ,
’ಸರಿ ಇಲ್ಲಿ ಆಸೀನರಾಗಿ, ’ ಎನ್ನುತ್ತ ಖುರ್ಚಿ ಒಂದನ್ನು ತೋರಿಸಿದ. ಎದುರಿಗೆ ಕನ್ನಡಿ, ನೋಡಲು ಸ್ವಚ್ಚವಾಗಿಯಿ ಇತ್ತು ಅಂಗಡಿ. 
ಎದುರಿಗೆ ನಿಂತವನು, 
’ಎಲ್ಲಿ ಕೈ ಮುಂದೆ ಚಾಚಿ’ ಎಂದ. 
ನೋಡಿದರೆ ಅವನ ಕೈಲಿ ಪಂಚಪಾತ್ರೆಯಂತ ಪುಟ್ಟ ಲೋಟ, ಹಾಗು ಉದ್ದರಣೆ. ಇದೇನು ಪದ್ದತಿಯೋ ಹಾಳಾದ್ದು ಎಂದು ಗೊಣಗಿಕೊಳ್ಳುತ್ತ , ಕೈ ಚಾಚಿದೆ
’ಗಂಗೇ ಚ ಯಮುನೇ ಚ ….’ ಎಂದು ಸಣ್ಣ ದ್ವನಿಯಲ್ಲಿ ಗೊಣಗಿಕೊಳ್ಳುತ್ತ ನನ್ನ ಕೈಗೆ ಮೂರು ಉದ್ದರಣೆ ನೀರು ಹಾಕಿ. 
’ಈಗ ಸಂಕಲ್ಪ ಮಾಡಿಬಿಡೋಣ, ನಿಮ್ಮ ಹೆಸರು, ಗೋತ್ರ ಹೇಳುತ್ತೀರ’ ಎಂದು ವಿನಯವಾಗಿ ಕೇಳಿದ 
ಅಯ್ಯೋ ಇದೇನು ಹುಚ್ಚರ ಲೋಕವೆ ? , 
ಕಟಿಂಗ್ ಎಂದು ಬಂದರೆ ದೇವಾಲಯದಲ್ಲಿ ಕೇಳುವಂತೆ , ಗೋತ್ರ ಪಾತ್ರ ಎಂದೆಲ್ಲ ಕೇಳುತ್ತಿರುವನಲ್ಲ ಎನ್ನುತ್ತ 
’ಇದೇನು ನೀವು ಕೇಳುವುದು ವಿಚಿತ್ರ, ಕಟಿಂಗ್ ಮಾಡಿಸಲು ಬಂದರೆ ದೇವಾಲಯದ ಪುರೋಹಿತರ ರೀತಿಯಲ್ಲಿ ಗೋತ್ರ ಪ್ರವರ ಎಂದೆಲ್ಲ ಕೇಳುವಿರಲ್ಲ. ’ ಎಂದು ನಕ್ಕೆ 
’ಹಾ ಹಾಗೆ , ಒಂದು ರೀತಿ ಅಭ್ಯಾಸ ಬಲ ಅಂದುಕೊಳ್ಳಿ, ಮೊದಲು ದೇವಾಲಯದಲ್ಲಿ ಪೂಜೆಯ ಕೆಲಸ ಮಾಡಿಕೊಂಡಿದ್ದೆ, ಈಗ ಈ ಉದ್ಯೋಗ ಹಿಡಿದಿರುವೆ. ಯಾವುದೇ ಕೆಲಸಕ್ಕೆ ಮೊದಲು ದೇವರ ಹೆಸರಿನಲ್ಲಿ ಸಂಕಲ್ಪ ಮಾಡುವುದು ಒಳ್ಳೆಯದಲ್ಲವೇ. ಅಲ್ಲದೆ ಮೊದಲಿನಿಂದ ಬಂದ ವೃತ್ತಿಧರ್ಮ. ಹೀಗೆ ಹತ್ತು ಹಲವು ಕಾರಣಗಳು. ನೀವು ನಿಮ್ಮ ಗೋತ್ರ, ನಕ್ಷತ್ರ ಹೆಸರು ಹೇಳಿದಲ್ಲಿ, ಸಂಕಲ್ಪ ಮುಗಿಸಿ, ಕಟಿಂಗ್ ಪ್ರಾರಂಭಿಸುವೆ ’ ಎಂದನು 
ನಾನು ಸಖೇಧಾಶ್ಚರ್ಯದಲ್ಲಿ ಮುಳುಗಿ, 
’ಏಕೆ ಈಗ ಆ ವೃತ್ತಿಯನ್ನು ಬಿಟ್ಟು ಬಿಟ್ಟಿರಿ’
’ನಾನೆಲ್ಲಿ ಬಿಟ್ಟೆ, ಈಗ ದೇವಾಲಯ ಹಾಗು ಪೂಜೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಅಲ್ಲಿ ಅದು ಪೂಜೆಗೆ ತನ್ನದೇ ನೌಕರರನ್ನು ನೇಮಿಸಿದೆ. ಅಲ್ಲದೆ ಈಗ ಅಲ್ಲಿ ಕೆಲವು ಎಮ್ ಎನ್ ಸಿ ಕಂಪನಿಗಳು , ರಿಲೆಯನ್ಸ್ ಮುಂತಾಸ ಭಾರತೀಯ ಕಂಪನಿಗಳು ಬಂಡವಾಳ ಹೂಡಿವೆ. ಹಾಗಿರಲು ನಾನು ಅಷ್ಟೊಂದು ಬಂಡವಾಳ ಹಾಕಲಾಗಲಿ, ದೇವಾಲಯ ನಡೆಸಲಾಗಲಿ ಎಲ್ಲಿ ಸಾಧ್ಯ ? ಅದಕ್ಕೆ ಈ ವೃತ್ತಿ’ ಎಂದನು
ನಾನು ಏನನ್ನಾದರು ಹೇಳುವ ಮುಂಚೆಯೆ , ಎತ್ತರದ ವ್ಯಕ್ತಿ ಒಬ್ಬರು ಪ್ರವೇಶಿಸಿದರು. ಅವರನ್ನು ನೋಡುವಾಗಲೆ , ಅಂಗಡಿಯ ಮಾಲಿಕ ಭಯ ಭಕ್ತಿಯಿಂತ ಅತ್ತ ತಿರುಗಿದ. ನಾನು ಕುಳಿತಿರುವುದು ಲೆಕ್ಕವೆ ಇಲ್ಲ ಎನ್ನುವ ರೀತಿ. ಅವರ ಕಡೆ ನಡೆದು. ಅಲ್ಲಿದ್ದ ಖುರ್ಚಿ ತೋರಿಸುತ್ತ 
’ಕುಳಿತುಕೊಳ್ಳಿ ಸಾರ್, ತುಂಬಾ ದಿನ ಆಯಿತು ಇತ್ತ ಬಂದು, ಕಟಿಂಗ್ ಮಾಡಲ , ಶೇವಿಂಗ್ ’ ಎಂದರು. ಹೊರಗಿನಿಂದ ಬಂದಾತ 
ಅಲಕ್ಷ್ಯದಿಂದ ಎಂಬಂತೆ 
’ಇಲ್ಲಿ ಬಂದಿರುವೆನಲ್ಲ , ಕಟಿಂಗ್ ಹಾಗು ಶೇವಿಂಗ್ ಎರಡು ಮಾಡಿಬಿಡು. ಹುಷಾರ್, ಹೆಚ್ಚು ಕಡಿಮೆ ಆದರೆ ಅಷ್ಟೆ’ ಎಂದರು
ನಾನು ಸ್ವಲ್ಪ ಕೋಪ ಭಾವದಿಂದ , ಕಟಿಂಗ್ ಅಂಗಡಿಯಾತನತ್ತ ನೋಡಿದೆ. ಅವನು ಕಣ್ಸನ್ನೆಯಲ್ಲಿಯೆ ನನ್ನನ್ನು ಮಾತನಾಡಬೇಡಿ ಎಂದು ತಡೆದ. ಹೊರಗಿನಿಂದ ಬಂದಿದ್ದ  ವ್ಯಕ್ತಿ ನನ್ನ ಕಡೆ ನೋಡುತ್ತ, ಅಂಗಡಿಯವನೊಡನೆ.
’ಯಾರಿವನು , ಹೊಸಬನಂತೆ ಕಾಣುತ್ತಿದ್ದಾನೆ ’ 
’ಹೌದು ಸಾರ್ ಪಟ್ಟಣಕ್ಕೆ ಹೊಸಬನಂತೆ ಕಾಣುತ್ತಿದ್ದಾನೆ, ರೈಲ್ ಮಿಸ್ಸಾಗಿ ಇಲ್ಲಿ ಇಳಿದಿದ್ದಾನೆ’ ಎಂದ 
ಅದಕ್ಕೆ ಹೊರಗಿನಿಂದ ಬಂದವನು ನಕ್ಕು,
 ’ರೈಲ್ ಮಿಸ್ಸಾದವರೆಲ್ಲ, ನಿನ್ನ ಬಳಿ ಕಟಿಂಗ್ ಎಂದು ಬರುತ್ತಾರೊ ಸರಿ’ 
ಎಂದು ಸುಮ್ಮನಾದ.
ನಾನು ಚಿಂತಿಸುತ್ತಿದ್ದೆ, ಇವನಿಗೆ ಹೇಗೆ ತಿಳಿಯಿತು, ನಾನು ರೈಲು ಮಿಸ್ಸಾಗಿ ಇಲ್ಲಿ ಬಂದಿರುವೆ ಎಂದು ! ಇವನಿಗೆ ಹೇಗೆ ತಿಳಿಯಿತು?. 
ಅವನ ಕಟಿಂಗ್ ಶೇವಿಂಗ್ ಮುಗಿಯಿತು. ಅಲ್ಲಿದ್ದ ಮಿಶಿನ್ ಒಂದರಲ್ಲಿ ತನ್ನ ಹೆಬ್ಬರಳನ್ನು ಒತ್ತಿದ್ದ ಆತ ಹೊರಟುಹೋದನಂತರ ಅಂಗಡಿಯಾತ ನನ್ನ ಕಡೆ ಬಂದ. 
’ನೀವು ಮಾತನಾಡದೆ ಸುಮ್ಮನೆ ಕುಳಿತಿದ್ದು, ಒಳ್ಳೆಯದಾಯಿತು. ಇಲ್ಲದಿದ್ದರೆ ಒಂದು ಹೋಗಿ ಒಂದು ಅನ್ನುವಂತೆ ಉತ್ತರಿಸುವುದು ಕಷ್ಟ ಆಗುತ್ತಿತ್ತು. ಬನ್ನಿ ಕಟಿಂಗ್ ಮಾಡುವೆ ’ ಎಂದೆ 
’ಅದೇನು ಆತ ಹಣವನ್ನೆ ಕೊಡಲಿಲ್ಲ,ಹಾಗೆ ಹೊರಟುಹೋದರಲ್ಲ ಪರಿಚಯವೇ?" ಎಂದೆ
’ಪರಿಚಯ ಎಲ್ಲಿ ಬಂತು, ಮಾಡಬೇಕಷ್ಟೆ. ಅವರಿಗೆ ಕಟಿಂಗ್ ಹಾಗು ಶೇವಿಂಗ್ ಮಾಡಿದ ಹಣ ನಂತರ ಸರ್ಕಾರ ನಮ್ಮ ಖಾತೆಗೆ ಜಮಾ ಮಡುತ್ತದೆ. ಒಮ್ಮೊಮ್ಮೆ ಅದು ಮಿಸ್ ಆಗುತ್ತದೆ’ 
ನನಗೆ ಆಶ್ಚರ್ಯ
’ಅಲ್ಲ ಅದು ಹೇಗೆ , ಅದೇನು ಅವರಿಗೆ ಕಟಿಂಗ್ ಮಾಡಿದರೆ ಸರ್ಕಾರ ಏಕೆ ಹಣ ಪಾವತಿಸುತ್ತದೆ?" ಎಂದು ಕೇಳಿದೆ,
’ಹೌದು ಅದು ಹಾಗೆ ಸರ್ಕಾರ ಅವರಿಗೆ ಎಲ್ಲ ರೀತಿಯ ಸವಲತ್ತು ಒದಗಿಸಿದೆ, ಹಾಗಾಗಿ ಈ ವ್ಯವಸ್ಥೆ, ’ ಎಂದ
’ನನಗೆ ಅರ್ಥವಾಗಲಿಲ್ಲ, ಅದೇನು ಎಲ್ಲ ವ್ಯವಸ್ಥೆ ಎಂದರೆ, ಕಟಿಂಗ್ ಸಹ ಸರ್ಕಾರ ರಿಬೆಟ್ ಕೊಡುತ್ತದೆಯೆ , ಅದು ಹೇಗೆ ’ ಎಂದೆ
’ನೀವು ತೀರ ಅಮಾಯಕರಂತಿ ನಟಿಸುತ್ತೀರಿ. ನನ್ನನ್ನು ಇಕ್ಕಟಿಗೆ ಸಿಲುಕಿಸಬೇಡಿ’ ಎಂದ ಕಟಿಂಗ್ ಮಾಡುತ್ತಲೆ. 
ಅವನ ದ್ವನಿಯಲ್ಲಿ ಸ್ವಲ್ಪ ಭಯ!  
ಕಡೆಗೆ ಕಟಿಂಗ್ ಮುಗಿಯಿತು. 
’ಎಷ್ಟು ಆಯಿತು, ಇಲ್ಲಿ ಎಷ್ಟು ದರ’ ಎಂದೆ
’ಈಗಲಾದರೆ ನೂರು ರುಪಾಯಿ, ಬೆಳಗ್ಗೆ ಸಮಯವಾದರೆ ನೂರಾಐವತ್ತು ಆಗುತ್ತಿತ್ತು’ ಎಂದ 
’ಅದೇನು ಒಂದೊಂದು ಸಮಯಕ್ಕೆ ಒಂದೊಂದು ದರವೇ?" ನನಗೆ ಆಶ್ಚರ್ಯ
’ಹೌದು , ಬೆಳಗ್ಗೆ ಸಾಮಾನ್ಯ ಪೀಕ್ ಅವರ್ ಎಲ್ಲರೂ ಬರುತ್ತಾರೆ, ಆಗ ರೇಟ್ ಜಾಸ್ತಿ, ಸಂಜೆ ರಾತ್ರಿ ಕಡಿಮೆ ಜನ ಹಾಗಾಗಿ ಪ್ರೋತ್ಸಾಹ ನೀಡಲು, ಕಡಿಮೆ ದರ, ಫ್ಲೈಟ್ ಗಳಲ್ಲಿ ಇರುತ್ತದಲ್ಲ ಹಾಗೆ ’ ಎಂದ.
’ಬಾನುವಾರ ?" ಎಂದೆ ತಮಾಷಿಗೆ,
’ಬಾನುವಾರ ಇನ್ನೂರಾಐವತ್ತಕ್ಕೆ ಕಡಿಮೆ ಇಲ್ಲ’ ಎಂದ  
ನನಗೆ ತಲೆ ಕೆಟ್ಟಿತು, ಸರಿ ಎಂದು ಪರ್ಸ್ ತೆಗೆದು ಅದರಲ್ಲಿ ನೂರರ ನೋಟು ತೆಗೆದು ಅವನ ಕೈಗಿತ್ತೆ. ಅವನು ನೋಟನ್ನು ಒಮ್ಮೆ ಆಶ್ಚರ್ಯದಿಂದ ದಿಟ್ಟಿಸಿದ. ನಂತರ ನನ್ನಪರ್ಸ್ ನೋಡಿ ಅದರಲ್ಲಿ ಇದ್ದ ನೋಟಗಳನ್ನು ನೋಡುತ್ತ ಅವನು ಆಶ್ಚರ್ಯ ಚಕಿತನಾದಂತೆ ಕಾಣಿಸಿತು.
’ಅದೇನು ಈ ನೋಟು ಇಷ್ಟೊಂದು ಎಲ್ಲಿಂದ ಬಂತು’ ಅವನು ಆಶ್ಚರ್ಯದಿಂದ ಕೇಳಿದ   
 ಮತ್ತೆ ಅಘಾತ, ಹೋಟೆಲಿನಲ್ಲಿ ಸಹ ಇದೇ ಪ್ರಶ್ನೆ ಕೇಳಿದ್ದಳು ಆಕೆ. 
’ಮತ್ತೆಯದು  ATM ನಿಂದ ಡ್ರಾ ಮಾಡಿದ್ದು’ ಎಂದೆ ಗೊಂದಲದಿಂದ. 
ಸರಿ ಅಲ್ಲಿಂದ ಹೊರಟೆ. ಸ್ವಲ್ಪ ದೂರದಲ್ಲಿ ಹೋಗವದರಲ್ಲಿ , ಹೋಟೆಲ್ ನವಳು ಹೇಳಿದ್ದ ಲಾಡ್ಜ್ ಸಿಕ್ಕಿತು, 
ಒಳಗೆ ಹೋಗುವಾಗಲೆ , ಬಾಗಿಲಲ್ಲಿ ನಿಂತು ಸ್ವಾಗತಿಸಿದರು, ಅಲ್ಲಿಯವರೆ , ಅಹಾ ಎಷ್ಟೊಂದು ಉಪಚಾರ, ನನಗೆ ಖುಶಿ
ನನಗೆ ಅರ್ಥವಾಗಿತ್ತು, ಹೋಟೆಲಿನಾಕೆ ಇವರಿಗೆ ನನ್ನ ಬಗ್ಗೆ ಫೋನ್ ಮಾಡಿ ವಿಷಯ ತಿಳಿಸಿರಬಹುದು, ನಾನು ಬರುತ್ತಿರುವ ವಿಷಯ. 
’ಬನ್ನಿ ಅವನು ಸ್ವಾಗತಿಸಿದ’ 
ಲಾಡ್ಜ್ ಹೆಸರು ’ ನಾಂಪಲ್ಲಿ ಲಾಡ್ಜ್ ’
ಒಳಗೆ ಸಾದಾರಣವಾಗಿಯೆ ಇತ್ತು. ಆದರೆ ಅವರು ಆಧರದಿಂದ ನೋಡಿಕೊಳ್ಳುತ್ತಿದ್ದರು. ಏಕೆ ಎಂದು ಮಾತ್ರ ಅರ್ಥವಾಗಿರಲಿಲ್ಲ. 
ಅಡ್ವಾನ್ಸ್ ಏನಾದರು ಕೊಡಬೇಕ ಎಂದು ಕೇಳಿದೆ. 
'ಕೊಡುವ ಹಾಗಿದ್ದರೆ ಕೊಡಿ, ಇಲ್ಲದಿದ್ದರೂ ಪರ್ವಾಗಿಲ್ಲ , ಹೇಗೂ ಹೊರಡುವಾಗ ಕೊಡುವಿರಲ್ಲ’ 
’ನಾನು ಆಗಲಿ , ನಾಳೆ ಇಲ್ಲಿಂದ ಹೊರಡುವನಿದ್ದೇನೆ. ಅಡ್ವಾನ್ಸ್ ಎಂದು ಐದುನೂರು ಕೊಟ್ಟಿರಲ? ಇಲ್ಲಿ ದಿನ ಒಂದಕ್ಕೆ ಬಾಡಿಗೆ ಎಷ್ಟು’ 
ಅವನು ಎಚ್ಚೆತ್ತ
’ಸಾಕು ಸಾರ್ ಅಷ್ಟು ಕೊಟ್ಟಿರಿ, ನಮ್ಮಲ್ಲಿ ಬಾಡಿಗೆ ದಿನಕ್ಕೆ ಸಾವಿರದ ಇನ್ನೂರು, ಒಂದು ಊಟ ಫ್ರೀ ಎಂದ’  
ಪರವಾಗಿಲ್ಲ, ಇಂದಿನ ಊಟ ಮಾಡಿದರೆ ಆಯ್ತು, ಅದಕ್ಕೆ  ಬೇರೆ ಹಣ ಕೊಡುವುದು ತಪ್ಪಿತು ಎಂದುಕೊಂಡೆ. 
ರಾತ್ರಿ ಊಟ  ನಿದ್ದೆ ಎಲ್ಲಾ ಕಳೆಯಿತು. 
ಬೆಳಗ್ಗೆ ಕೌಂಟರಿನಲ್ಲಿ ಕೇಳಿದೆ 
’ಇಲ್ಲಿಂದ ಹೈದರಾಬಾದ್ ಗೆ ಹೋಗಲು ರೈಲು ಎಷ್ಟು ಹೊತ್ತಿಗೆ ಸಿಗಬಹುದು’ 
’ಮಧ್ಯಾನ ಹನ್ನೆರಡು ಗಂಟೆ ಐದು ನಿಮಿಶಕ್ಕೆ ಒಂದು ಟ್ರೈನ್ ಇದೆ. ಇಲ್ಲಿಂದ ಅರ್ದಗಂಟೆ ಸ್ಟೇಶನ್ ಗೆ   ಅರಾಮವಾಗಿ ಹೋಗಬಹುದು’ ಎಂದ 
ಸರಿ ಅಲ್ಲಿ ಬೆಳಗಿನ ಉಪಾಹಾರ ಮುಗಿಸಿದವನು ಅಲ್ಲಿಂದ ರೂಮು ಖಾಲಿ ಮಾಡಿ ಹೊರಟೆ. ನಾನು ಹಣ ಕೊಟ್ಟಾಗ ಎಂದಿನಂತೆ ಅವನು ಅದನ್ನು ಜತನದಿಂದ ಎಣಿಸಿ, ಒಳಗಿಟ್ಟು ನನ್ನನ್ನು ಪೆದ್ದನನ್ನು ನೋಡುವಂತೆ ನೋಡಿ, 
’ಸರಿ ಸಾರ್ ಹೋಗಿ ಬನ್ನಿ ನಮಸ್ಕಾರ ’ ಎಂದ
ಹಾಗೆ ನಿಧಾನವಾಗಿ ನಡೆದು ಸಾಗಿದ್ದೆ, ಹೇಗೂ ಆಗಿನ್ನು ಬೆಳಗಿನ ಹತ್ತು ಗಂಟೆ , ರೈಲಿರುವುದು ಹನ್ನೆರಡಕ್ಕೆ, 
ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಬೋರ್ಡ್ ಕಾಣಿಸಿತು. 
ದಪ್ಪಕ್ಷರದಲ್ಲಿ  
’ಹಿಂದೂ ವರ್ಶಿಪ್ ಪ್ಲೇಸ್ ’ ಎಂದು ಬರೆದು
ಸಣ್ಣದಾಗಿ ಕೆಳಗೆ ಬರೆದಿದ್ದರು, ’ಯೂ ಕೆನ್ ಪ್ರೇ ಹೀಯರ್ ’.
ಇದೇನು ದೇವಾಲಯ ಈ ರೀತಿ ಮಾಲ್ ರೀತಿ ಇದೆಯಲ್ಲ ಅನ್ನಿಸಿ ಒಳಗೆ ಹೋಗಿ ನೋಡೋಣವೆ ಎನ್ನಿಸಿತು.  ಸರಿ ಮತ್ತೇನು ಬಾಗಿಲತ್ತ ನಡೆದೆ.
ದೊಡ್ಡ ಗಾಜಿನ ಬಾಗಿಲುಗಳು, ನಾನು ಒಳಗೆ ಹೋಗುವಾಗಲೆ ಬಾಗಿಲ ಬಳಿ ಸ್ವಚ್ಚವಾದ ಸೂಟ್ ಧರಿಸಿದ್ದ ವ್ಯಕ್ತಿಯೊಬ್ಬ, ಬಾಗಿಲು ತೆರೆದು ನನ್ನನ್ನು ವಿನಯಪೂರ್ವಕವಾಗಿ ಸ್ವಾಗತಿಸಿದ. 
’ಪ್ಲೀಸ್ ವೆಲ್ ಕಂ ಸಾರ್, ಫೀಲ್ ಫ್ರೀ ಟು ಪ್ರೇ ಯುವರ್ ಪೇವರೆಟ್ ಗಾಡ್ ’
ನಾನು ಪೆದ್ದನಂತೆ ಕೇಳಿದೆ
’ಇದು ದೇವಾಲಯದ ರೀತಿ ಅಲ್ಲವೆ ,  ಹೋಟೆಲ್ ರೀತಿ ಕಾಣುತ್ತಿದೆಯಲ್ಲ ’ 
ಅವನು ತಕ್ಷಣ ಕನ್ನಡಕ್ಕೆ ಬದಲಾದ
’ಹೌದು ಸಾರ್, ದಯಮಾಡಿ ಒಳಗೆ ಬನ್ನಿ. ನಿಮಗೆ ಎಲ್ಲ ಅನುಕೂಲ ಮಾಡಿಕೊಡಲಾಗುತ್ತೆ’ ನನ್ನನ್ನು ಕರೆದೋಯ್ದ. 
’ನೀವು ಒಬ್ಬರೆ ಬಂದಿರುವುದಾ ಸಾರ್, ಸಂಸಾರ ಕರೆತರಲಿಲ್ಲವಾ" 
’ಇಲ್ಲ ನಾನು ಹೀಗೆ, ಸುಮ್ಮನೆ ಬಂದೆ, ’ ಎಂದೆ ಹೆಚ್ಚಿನ ವಿವರ ಹೇಳದೆ
’ಇಲ್ಲಿ ಬನ್ನಿ ಕುಳಿತುಕೊಳ್ಳಿ ಸಾರ್, ’ ಎನ್ನುತ್ತ ದುಂಡಾದ ಒಂದು ಟೇಬಲ್, ಮತ್ತು ಸುತ್ತಲೂ ಹಾಕಿದ್ದ ಖುರ್ಚಿಗಳನ್ನು ತೋರಿಸುತ್ತ ಹೇಳಿದ 
ನನಗೆ ಕುತೂಹಲ ಎನಿಸುತ್ತಿತ್ತು, ಅಲ್ಲ ದೇವಾಲಯ ಅಂತ ಹೊರಗೆ ಫಲಕವಿದೆ, ಆದರೆ ಇಲ್ಲಿ ದೇವಾಲಯದ ಯಾವ ಲಕ್ಷಣವೂ ಇಲ್ಲ. 
ನಾನು ಕುಳಿತಂತೆ. ಸೂಟುಬೂಟು ಧರಿಸಿದ ವ್ಯಕ್ತಿಯೊಬ್ಬ ವಿನಯದಿಂದ ಬಂದು ನಿಂತು ವಂದಿಸಿದ. 
’ಸಾರ್ ತಾವು ಯಾವ ಪೂಜೆ ಮಾಡಿಸಬೇಕೆಂದಿರುವಿರಿ, ಯಾವ ದೇವರು ವಿವರ ತಿಳಿಸಿ, ಇಲ್ಲಿ ನೋಡಿ ನಿಮಗೆ ಬೇಕಾದ ಎಲ್ಲ ವಿವರವೂ ಇದೆ ’   
ಹೋಟೆಲಿನಲ್ಲಿ ಕೊಡುವಂತೆ ಒಂದು ಮೆನು ತರಹದ ಪುಸ್ತಕ ಕೊಟ್ಟ
ತೆರೆದು ನೋಡಿದೆ. 
ಮೊದಲ ಪುಟವೆ ಗಮನ ಸೆಳೆಯಿತು, ಅದು ರಿಲಾಯನ್ಸ್ ಪೂಜಾ ಸ್ಥಳ . ಇದೇನಿದು ರಿಲಾಯನ್ಸ್ ರವರು ತರಕಾರಿ ಪೆಟ್ರೋಲು ಚಪ್ಪಲಿ ಎಂದು ಏನೆಲ್ಲ ನಡೆಸುತ್ತಿದ್ದರು ಈಗ ದೇವಾಲದಯ ವ್ಯವಹಾರಕ್ಕು ತೊಡಗಿಸಿಕೊಂಡರಾ ಎಂದು ಆಶ್ಚರ್ಯ. ಇರಲಿ ಎಂದು ಮುಂದಿನ ಪುಟಗಳನ್ನು ತೆರೆದುನೋಡಿದೆ
ಪೂಜೆಗೆ ಲಭ್ಯವಿರುವ ದೇವರುಗಳು ೧.ಗಣೇಶ – ರೂ.೧೫೦ ೨. ಶಿವ – ರೂ ೧೫೦  ೩.ವೆಂಕಟೇಶ  ರೂ ೨೦೦  ೪. ನರಸಿಂಹ ರೂ ೨೦೦. ಸತ್ಯನಾರಾಯಣ – ರೂ ೧೭೫ 
ಅರ್ಥವಾಗಲಿಲ್ಲ , 
ಮುಂದಿನ ಪುಟಕ್ಕೆ ಹೋದೆ 
ಕುಂಕುಮಾರ್ಚನೆ ೧೦೦   ಪ್ರಾರ್ಥನೆ ೫೦ ರೂಪಾಯಿ  ಪ್ರಸಾದ ಸಮೇತ ಪೂಜೆ : ರೂ ೫೦೦ 
ಇದೆಲ್ಲ ಏನು ಎನ್ನುವಂತೆ ಅವನ ಮುಖ ನೋಡಿದೆ 
’ಯಾವ ದೇವರ ಪೂಜೆ ಇರಲಿ ಸಾರ್, ದೇವರ ಶುಲ್ಕ ಹಾಗು ಪೂಜೆಯ ಶುಲ್ಕ ಬೇರೆ ಬೇರೆ. ಅಲ್ಲದೆ ಪೂಜೆ ಮಾಡಿಸುವ ಲೇಬರ್ ನಮ್ಮದು ೨೫೦ ಪ್ರತ್ಯೇಕ. ಅದರ ಮೇಲೆ ವ್ಯಾಟ್ ೧೦.೫ % ಮತ್ತ್ತು ಸ್ವಚ್ಛ ಭಾರತ ಶುಲ್ಕ ೨% ಸೇರುತ್ತೆ ಸಾರ್”  ಎಂದ
ನನಗೆ ಅರ್ಥವಾಗಲಿಲ್ಲ 
’ಗಣೇಶನಿಗೆ ಕುಂಕುಮಾರ್ಚನೆ , ಎಷ್ಟಾಗುತ್ತೆ ’ ಎಂದೆ ಅಂದೆ.
’ಗಣೇಶ ಕುಂಕುಮಾರ್ಚನೆ ಅಂದರೆ ….. ಒಟ್ಟು ಸುಮಾರು ೫೫೦ ಅಥವ ೫೮೦ ಆಗಬಹುದು. ಟಿಪ್ಸ್ ನಿಮ್ಮ ಇಷ್ಟ’ 
’ಟಿಪ್ಸ್ …. ದೇವರೆ ಇದೇನು ಕಾಲ ಬಂದಿದೆಯಪ್ಪ’  ಅಂದುಕೊಂಡೆ, 
ಹಾಗೆ ನೋಡಿದರೆ ಎಲ್ಲ ಒಂದೇ,   ಮಂಗಳಾರತಿ ಎಂದು ಒಂದು ಎರಡು ರುಪಾಯಿ ಹಾಕುತ್ತಿದ್ದೆ , ಇಲ್ಲಿ ಅದನ್ನು ವ್ಯಾಪರೀಕರಣ ಮಾಡಿ ಟಿಪ್ಸ್ ಎಂದು ಕರೆಯುತ್ತಿದ್ದಾರೆ. 
ಸರಿ ಒಳಗೆ ಬಂದಾಗಿದೆ ಏಕೊ ಹಾಗೆ ಹೊರಗೆ ಹೋಗಲು ಮುಜುಗರ ನಾಚಿಕೆ ಅನ್ನಿಸಿ, 
’ಗಣೇಶನಿಗೆ ಕುಂಕುಮಾರ್ಚನೆ ಆಗಲಿ ಬಿಡಿ, ನಡೆಯಿರಿ, ಎಲ್ಲಿದೆ , ದೇವಾಲಯ ’ ಎನ್ನುತ್ತ  ಎದ್ದುನಿಂತೆ. 
’ಸಾರ್ ಕುಳಿತುಕೊಳ್ಳಿ, ಎಲ್ಲವೂ ನೀವು ಇರುವಲ್ಲಿಯೆ ಚಿಂತೆ ಬೇಡ’ ಎನ್ನುತ್ತ ನನ್ನ ಆರ್ಡರ್ ತೆಗೆದುಕೊಂಡು ಹೊರಟುಹೋದ. 
ಇದೇನಪ್ಪ ಎಂದು ಕಾಯುತ್ತ ಕುಳಿತಂತೆ, ನನ್ನ ಎದುರಿಗೆ ದೊಡ್ಡ ಎಲ್ ಸಿ ಡಿ ಪರದೆಯಲ್ಲಿ ಗಣೇಶನ ಚಿತ್ರವೂ, ಸುಮಧುರ ಸಂಗೀತವೂ ಕಾಣಿಸುತ್ತಿತ್ತು. ನನ್ನತ್ತ ಒಬ್ಬಾತ ಬಂದ ಅವನು ಬರುವಾಗಲೆ ಗಮನಿಸಿದೆ, ಸೂಟುಬೂಟು ಧರಿಸಿದ್ದ.
ಅವನ ಕೈಯಲ್ಲಿ ದೊಡ್ಡ ತಟ್ಟೆ, ಗಂಟೆ, ಮುಂತಾದ ವಸ್ತುಗಳಿದ್ದವು. 
ನನ್ನ ಎದುರಿನ ಟೇಬಲಿನಲ್ಲಿ, ಬೆಳ್ಳಿಯ ತಟ್ಟೆಯನ್ನು ಅದರ ಮೇಲೆ ಗಣೇಶನ ಸುಂದರ ವಿಗ್ರಹವನ್ನು ಇರಿಸಿದ. ನಗುತ್ತ ಪಕ್ಕದಲ್ಲಿ ಕುಳಿತವನು. ಕೈ ಹಿಡಿಯಿರಿ ಎನ್ನುತ್ತ ಕೈಗೆ ಒಂದೆರಡು ಚಮಚದಷ್ಟು ತನ್ನ ಬಳಿಯಿದ್ದ ಗಿಂಡಿಯಿಂದ ನೀರು ಹಾಕಿದ. ಶುದ್ದಿಮಾಡಿಕೊಳ್ಳಲು. 
’ನಿಮ್ಮ ಹೆಸರು ’ ಎಂದ.ಹೆಸರು ಹೇಳಿದೆ. 
ನನ್ನ ಎದುರಿಗೆ, ತಟ್ಟೆಯಲ್ಲಿ ಸ್ವಲ್ಪ ಹೂವನ್ನು, ಚಿಕ್ಕ ಚಿಕ್ಕ ಊದುಗಡ್ಡಿ, ಕುಂಕುಮ ಇರಿಸಿದ. 
ಗಣೇಶನ ಪೂಜೆ ಮಾಡುತ್ತ, ಹೂವು ಹಾಕಿ ನಂತರ ಅವನು ಹೇಳಿದಂತೆ ಕುಂಕುಮದಲ್ಲಿ ಪೂಜಿಸಿದೆ. ಗಂಧದ ಕಡ್ಡಿ ಬೆಳಗಿ, ಮಂಗಳಾರತಿ ಮಾಡಿಸಿದ. 
’ನಮ್ಮಲ್ಲಿ ಅಷ್ಟೆ ಸಾರ್, ನೀವು ಕೇವಲ ಕುಂಕುಮಾರ್ಚನೆ ಎಂದರೂ ಸಹ ಮಂಗಳಾರತಿ ಎಂದು ಮಾಡೆ ಮಾಡುತ್ತೇವೆ, ಹಣಕ್ಕಾಗಿ ಸಂಪ್ರದಾಯ ಕಡೆಗಣಿಸಬಾರದು ನೋಡಿ ’ ಎಂದ. ನಾನು ಅರ್ಥ ಆದವನಂತೆ ತಲೆ ಆಡಿಸಿದೆ. 
ಹತ್ತು ನಿಮಿಷದಲ್ಲಿ ಎಲ್ಲ ಮುಗಿಯಿತು. ನಂತರ, ನನ್ನ ಟೇಬಲ್ಲಿನ ಮೇಲಿದ್ದ ಗಣಪತಿ, ಎಲ್ಲವನ್ನು ತೆಗೆದು ತನ್ನ ಬಳಿ ಇದ್ದ ತಟ್ಟೆಯಲ್ಲಿ ಇರಿಸಿದ. ಪೂಜೆ ಮಾಡಿದ ಹೂವನ್ನು ಕೊಟ್ಟು, ಜೊತೆಗೆ ಸ್ವಲ್ಪ ಕಲ್ಲು ಸಕ್ಕರೆ ನೀಡಿದ. 
’ಎಲ್ಲ ಸಾಂಗವಾಗಿ ಆಯಿತು ಸಾರ್ ’ ಎಂದು ಹಲ್ಲು ಕಿರಿದ. 
ನಾನು ವಿದಿ ಇಲ್ಲದೆ ಕೇಳಿದೆ 
’ಸರಿ ಬಿಡಿ, ಎಲ್ಲ ಆಯಿತಲ್ಲ, ಒಟ್ಟು ಎಷ್ಟು ಹಣ ಕೊಡಬೇಕು ’ ಎಂದೆ 
’ಅವನು ತನ್ನ ಬಳಿ ಇದ್ದ ಕ್ಯಾಲ್ಕುಲೇಟರ್ ತೆಗೆದು ನನ್ನತ್ತ ತಿರುಗಿ, ರಸೀದಿ ಬೇಕಾ ಬೇಡವಾ ಸಾರ್, ನಮ್ಮಲ್ಲಿ ಸಾಮಾನ್ಯ ರಸೀತಿ ಇಲ್ಲದ ಯಾವ ವ್ಯವಹಾರವು ಇಲ್ಲ, ನೀವು ಹೊಸಬರಂತೆ ಕಂಡಿರಿ ಅದಕ್ಕೆ ಕೇಳಿದೆ , ರಸೀದಿ ಕೊಡಲ’ ಎಂದ 
ಆಗಲಿ ಎಂದು ತಲೆ ಆಡಿಸಿದೆ. 
ಅವನು ಲೆಕ್ಕ ಹಾಕುತ್ತ, ಸಾರ್ ಒಟ್ಟು, ಆರುನೂರ ಇಪ್ಪತ್ತು ರೂಪಾಯಿ ಆಯಿತು. ಎಂದ. 
ನನ್ನ ಬಳಿ ಇದ್ದ , ನೂರರ ಏಳು ನೋಟನ್ನು ಅವನಿಗೆ ನೀಡಿದೆ. ಅವನು ಗಾಭರಿ ಆಗಿ ಹೋದ . ಒಳಗೆ ಓಡಿದವ ಎಷ್ಟೋ  ಸಮಯದ ನಂತರ ಬಂದ. ನಾನು ಇನ್ನೂ ಅಲ್ಲಿ ಕುಳಿತಿರುವದನ್ನು ಕಂಡು 
’ಮತ್ತೇನು ಎನ್ನುವಂತೆ ಮುಖ ನೋಡಿದ ’
ಚಿಲ್ಲರೆ ಕೊಡಲಿಲ್ಲ ಅನ್ನಬೇಕು ಅಂದುಕೊಂಡವನು ಅದು ಟಿಪ್ಸ್ ಅಂತ ಇಟ್ಟುಕೊಂಡನೇನೊ ಅನ್ನಿಸಿತು. 
ಹತ್ತಿರ ಬಂದವನ ಬಳಿ ಕೇಳಿದೆ
’ಅಲ್ಲ ಇದೇನು ಎಲ್ಲ ಇಲ್ಲಿ ಹೀಗಿದೆ. ಮೊದಲಾದರೆ ಪುರೋಹಿತರಲ್ಲವೇ ದೇವರ ಪೂಜೆ ಮಾಡುತ್ತ ಇದ್ದದ್ದು ಈಗ ಇದೊಂದು ವ್ಯಾಪಾರದಂತೆ ಆಗಿದೆ ’ 
ಅವನ ಮುಖದಲ್ಲಿ ಕೋಪ ಕಾಣಿಸಿತು
’ಅಂದರೆ ನಾವು ಮಾಡಬಾರದು ಎಂದು ನೀವು ಹೇಳುತ್ತಿರುವುದಾ’ ಎಂದ
’ಇಲ್ಲ ನಾನೆಲ್ಲಿ ಹಾಗೆ ಹೇಳಿದೆ, ಯಾರು ಬೇಕಾದರು ದೇವರನ್ನು ಪೂಜಿಸಬಹುದು. ಇದೆಲ್ಲ ಯಾಕೆ ಬದಲಾಯಿತು, ಅಂತ ಕೇಳಿದೆ ಅಷ್ಟೆ ’ ಅಂದ
’ನೀವು ಮಾಡುತ್ತಿರುವ ಪ್ರಶ್ನೆ ಎಂತದೂ ಗೊತ್ತ ನಿಮ್ಮನ್ನು ಅರೆಷ್ಟೆ ಮಾಡಬಹುದು’ ಎಂದ 
ನನಗೆ ಗಾಭರಿ ಆಗಿಹೋಯಿತು. ಅಲ್ಲ ಇದೇನು , ನಾನೇನು ಕೇಳಬಾರದ ಪ್ರಸ್ನೆ ಕೇಳಿದೆ, ನನ್ನ ಅಪರಾದವೇನು ಅಂತ ತಿಳಿಯಲೇ ಇಲ್ಲ . 
’ನಿಮಗೆ ತಿಳಿದಿರಲಿ, ನಿಮ್ಮ ಪ್ರಶ್ನೆಯನ್ನು ಪೋಲಿಸರಿಗೆ ತಿಳಿಸಿದರೆ, ನಿಮ್ಮನ್ನು ಅಸಹಿಷ್ಣತೆಯ ಕಾನೂನಿನ ೧೪ ನೇ ಕ್ಲಾಸಿನ ಪ್ರಕಾರ ಹತ್ತು ವರ್ಷ ಜೈಲಿಗೆ ಹಾಕಬಹುದು, ಹತ್ತು ಸಾವಿರ ದಂಡವೂ ಇರುತ್ತೆ ’ ಎಂದ 
ಇಲ್ಲಿ ಎಂತದೋ ಒಂದು ಗೊಂದಲವಿದೆ ಅನ್ನಿಸಿತು, ಅಥವ ಇಲ್ಲಿಯ ಪರಿಸ್ಥಿತಿ ನನಗೆ ಪೂರ್ತಿ ಅರ್ಥವಾಗುತ್ತಿಲ್ಲ , ಮೌನವೇ ಉತ್ತಮ ಉಪಾಯ ಅನ್ನಿಸಿ
’ನನಗೆ ತಿಳಿಯಲಿಲ್ಲ ಕ್ಷಮಿಸಿ ’ ಎನ್ನುತ್ತ ಹೊರಗೆ ಬಂದೆ. 
ನಾನು ಯಾವುದೋ ಗೊಂದಲಪುರಿಯಲ್ಲಿರುವದಾಗಿ ಭಾಸವಾಯಿತು.  
ಅಲ್ಲಿಂದ ನಡೆದೆ. ರೈಲ್ವೇ ನಿಲ್ದಾಣ ಯಾವ ಕಡೆಯೋ ಯಾರನ್ನಾದರು ಕೇಳಬೇಕು. ಅಂದುಕೊಳ್ಳುತ್ತಿದ್ದೆ. ಪುಟ್ ಪಾತಿನಲ್ಲಿ ನಡೆಯುತ್ತಿದ್ದ ತಲೆ ತಗ್ಗಿಸಿದ್ದ ನಾನು ತಲೆ ಎತ್ತಿ ನೋಡಿದರೆ, ನನ್ನ ಸುತ್ತ ನಾಲಕ್ಕು ಐದು ಜನ ಇದ್ದಾರೆ, ನೋಡಿದರೆ ಕ್ರಿಮಿನಲ್ ಗಳ ಹಾಗೆ ಕಾಣುತ್ತಿರುವರು. ಅವರೆಲ್ಲ ಹ್ಯಾಟ್ ಧರಿಸಿ, ಮುಖ ಮುಚ್ಚಿಕೊಂಡಿದ್ದರು ತಕ್ಶಣ ಗಮನಿಸಿದೆ, ಅವರ ನಾಯಕನಂತೆ ಇದ್ದವನ್ನು ಕಟಿಂಗ್ ಶಾಪಿನಲ್ಲಿ ಇದ್ದು ನನಗೆ ಕಟಿಂಗ್ ಮಾಡಿದವನು.  
ಛೇ ! ಇದೆಂತದು ಎಂದು ನಾನು ಅಂದುಕೊಳ್ಳುವದರಲ್ಲಿ
’ಏಯ್ ನಿನ್ನ ಹತ್ತಿರ ಇರುವ ಹಣವನ್ನೆಲ್ಲ ಇತ್ತ ಕೊಡು’ ಎನ್ನುತ್ತ ಕೂಗು ಹಾಕಿದ. 
ನನಗೆ ಅರ್ಥವಾಗಿ ಹೋಗಿತ್ತು, ಸ್ವಷ್ಟವಾಗಿ ಕನ್ನಡದಲ್ಲಿ ರೋಪ್ ಹಾಕುತ್ತಿದ್ದಾನೆ ಅವನೇ ಖಂಡಿತ. ನಾನು ಏನು ಎಂದು ಯೋಚಿಸುವ ಮೊದಲೆ ಪಕ್ಕದಲ್ಲಿ ಮೋಟರ್ ಬೈಕ್ ಸದ್ದು ಆಯಿತು. 
ನಾನು ಅತ್ತ ತಿರುಗಿದೆ. ಪೋಲಿಸ್ ಅಧಿಕಾರಿ ಒಬ್ಬ, ಬೈಕ್ ನಿಲ್ಲಿಸುತ್ತಿದ್ದ. ನಾನು ಪುನಃ ಪಕ್ಕಕ್ಕೆ ನೋಡಿದೆ, ನನ್ನನ್ನು ಸುತ್ತುವರೆದಿದ್ದ, ಕಳ್ಳರೆಲ್ಲ ಮಾಯ, ದೂರದಲ್ಲಿ ಓಡುತ್ತಿರುವುದು ಕಾಣಿಸಿತು.
ಪೋಲಿಸ್ ಅಧಿಕಾರಿ ಹತ್ತಿರ ಬಂದ . ನಾನು ಕೃತಜ್ಞತೆಯಿಂದ 
’ಥ್ಯಾಂಕ್ಯೂ ಸಾರ್ ಸರಿಯಾದ ಸಮಯಕ್ಕೆ ಬಂದು ನನ್ನ ಕಾಪಾಡಿದಿರಿ, ಹಣ ದೋಚಲು ಬಂದಿದ್ದರು’ 
’ಥ್ಯಾಕ್ಸಾ, ಹಾ ಇರಲಿ, ನಿಮ್ಮ ಹತ್ತಿರ ಎಷ್ಟು ಹಣ ಇದೆ’ ಎಂದ ಪೋಲಿಸ್ ಅಧಿಕಾರಿ ದರ್ಪದಿಂದ. 
’ಹಣ,? ಇರಬಹುದೇನೊ ಸಾರ್, ಒಂದೂವರೆ ಸಾವಿರದಷ್ಟು ಉಳಿದಿದೆ, ಬೆಂಗಳೂರು ಸೇರಲು ಬೇಕಲ್ಲ. ನಾನು ಇಲ್ಲಿಯವನಲ್ಲ ಸಾರ್ ಬೆಂಗಳೂರಿನವನು’ 
’ಹಾ ಹಾ ಎಲ್ಲ ಗೊತ್ತಿದೆ. ಒಂದೂವರೆ ಸಾವಿರ ಎಂದು ಸುಳ್ಳು ಬೇರೆ ಹೇಳುತ್ತಿದ್ದೀರಿ, ನನಗೆ ಬಂದಿರುವ ಸುದ್ದಿ ಪ್ರಕಾರ, ನಿಮ್ಮ ಹತ್ತಿರ ಇರುವ ಹಣದ ಒಟ್ಟು ಮೌಲ್ಯ ಒಂದೂವರೆ ಕೋಟಿ’ ಅಂದ , 
ಇದೇನು ಹುಚ್ಚರ ಸಂತೆ. !! 
’ಸಾರ್ ಇದೇನು ಹೇಳುವಿರಿ’ 
’ರೀ ನಮಗೆ ಕಿವಿಯಲ್ಲಿ ಹೂ ಇಡುವಿರಾ. ಈಗ ನಿಮ್ಮ ಬಳಿ ಇರುವ ನೋಟುಗಳು, ಚಾಲ್ತಿಯಲ್ಲಿಲ್ಲ, ಇರುವುದು ದೇಶದ ಮ್ಯೂಸಿಯಂಮಿನಲ್ಲಿ ಮಾತ್ರ. ಅದರ ಬೆಲೆ ಅಷ್ಟಾಗುತ್ತೆ ಅಂತ ನಿಮಗೇ ಗೊತ್ತಿಲ್ಲ ಅಲ್ವಾ ?" ಎಂದ ವ್ಯಂಗ್ಯವಾಗಿ. 
ನಾನು ಉತ್ತರಿಸಿದೇ ಸುಮ್ಮನೆ ನಿಂತೆ. 
ಮತ್ತೆ ಅವನೇ ಹೇಳಿದ
’ಅದು ಹೋಗಲಿ, ನೀವೇನು ಇಲ್ಲಿ ಕಿಚ್ಚು ಹಚ್ಚಲು ಬರುತ್ತಿರುವಿರಾ? ಎಲ್ಲಿ ಹೋದರು,  ಜಾತಿ ಪದ್ದತಿಯನ್ನು ಮತ್ತೆ ಕೆಣಕುವ ಪ್ರಶ್ನೆಗಳನ್ನೆ ಕೇಳುತ್ತಿದ್ದೀರಿ . ಕಟಿಂಗ್ ಶಾಪಿನಲ್ಲಿ, ದೇವಾಲಯದಲ್ಲಿ ಎಲ್ಲ ಕಡೆ ? . ಬೇಕೆಂದು ನೀವು ಈ ಕೆಲಸ ನಡೆಸುತ್ತಿರುವಂತಿದೆ, ಯಾವ ದೇಶದಿಂದ ಇಲ್ಲಿಗೆ ಬರುತ್ತಿರುವಿರಿ, ಪಾಕಿಸ್ತಾನವೋ, ಇಲ್ಲ ಚೀನವೋ ನಡೆಯಿರಿ ಸ್ಟೇಶನ್ನಿಗೆ, ಒಂದಿಷ್ಟು ವಿಚಾರಿಸೋಣ ’ ಎಂದ 
ನನಗೆ ಬೆವರಲು ಶುರುವಾಯಿತು. ಇದೆಂತಹ ತಾಪತ್ರಯದಲ್ಲಿ ಸಿಕ್ಕಿದೆ, ಇಲ್ಲಿ ಏನು ನಡೆದಿದೆ. ನಾನು ಇಲ್ಲಿದ್ದರೆ ಖಂಡಿತ ತೊಂದರೆಗೆ ಸಿಲುಕುವೆ ಎಂದು ಅರಿವಾಯಿತು. ಹೇಗಾದರು ಸರಿ ಮೊದಲು ರೈಲ್ವೇ ಸ್ಟೇಶನ್ ಸೇರಿ, ಅಲ್ಲಿಂದ ಹೊರಟು ಹೈದರಾಭಾದ್ ಸೇರಬೇಕು. ಆಗ ಗಮನಿಸಿದೆ.  ಅವನು ಇನ್ನು ಬೈಕ್ ಮೇಲೆ ಕುಳಿತಿದ್ದಾನೆ. ನಾನು ನಿಂತಿರುವ ರಸ್ತೆ ಸುಮಾರು ಐದು ಅಡಿ ಎತ್ತರದಲ್ಲಿದೆ. ಕೆಳಗೆ ಮತ್ತೊಂದು ಸಣ್ಣ ರಸ್ತೆ ಒಳಬಾಗಕ್ಕೆ ಹೋಗುತ್ತಿದೆ. ಹೆಚ್ಚು ಹೋಚಿಸದೆ , ಕೆಳಗೆ ದುಮುಕಿದೆ, ಸಣ್ಣ ರಸ್ತೆಯತ್ತ ತಿರುಗಿ ಓಡಲು ಶುರುವಿಟ್ಟೆ
ಮೇಲಿನಿಂದ ಪೋಲಿಸ್ ಅಧಿಕಾರಿ ನಗುತ್ತ ಕೂಗುತ್ತಿದ್ದ
’ ಹಲೋ , ನೀನು ಎಲ್ಲಿ ಓಡಿದರು, ನನ್ನ ಕೈನಿಂದ ತಪ್ಪಿಸಿಕೊಳ್ಳಲಾರೆ, ಫೂಲ್ , ಹೆಚ್ಚು ಹೆಚ್ಚು ತಪ್ಪು ಮಾಡುತ್ತಿರುವೆ’ 
ಓಡುತ್ತಿದೆ. ರಸ್ತೆಯ ಕೊನೆ ಬರುವಾಗ ಮುಖ್ಯ ರಸ್ತೆಗೆ ಸೇರುತ್ತಿತ್ತು, ಅಲ್ಲಿದ್ದ ಒಬ್ಬರನ್ನು ಕೇಳಿದೆ 
’ರೈಲ್ವೇ ನಿಲ್ದಾಣ ಇಲ್ಲಿ ಎಲ್ಲಿ ಬರುತ್ತದೆ’ 
ಎಡಕ್ಕೆ ಹೋಗುತ್ತಿರುವ ರಸ್ತೆ ತೋರಿಸಿ ಹೇಳಿದ. 
’ಏ ರಸ್ತೆಯಲ್ಲಿ ನೇರವಾಗಿ ಹೋದರೆ, ರೈಲು ನಿಲ್ದಾಣ ತಲುಪುವಿರಿ’ 
ವೇಗವಾಗಿ ಆ ರಸ್ತೆಯಲ್ಲಿ ನಡೆದೆ. ಹತ್ತು ನಿಮಿಶ ಎದುರಿಗೆ ರೈಲ್ವೆ ನಿಲ್ದಾಣ ಕಾಣಿಸಿತು,  ಮುಖ್ಯ ದ್ವಾರದತ್ತ ಗಮನಿಸಿದೆ. ಅದೊಂದು ಅದುನಿಕ ವ್ಯವಸ್ಥೆಯಾಗಿದ್ದು, ಯಾರಾದರು ಬಂದರೆ ತನಗೆ ತಾನೆ ಬಾಗಿಲು ತೆರೆಯುವ ಗಾಜಿನ ದ್ವಾರವಿತ್ತು. ವೇಗವಾಗಿ ಬಾಗಿಲತ್ತ ಹೊರಟೆ. 
ಎಲ್ಲ ಹಾಳಾಯಿತು!. 
ನನ್ನ ಪಕ್ಕದಲ್ಲಿ , ಮೋಟರ್ ಬೈಕ್ ಸದ್ದಾಯಿತು. ತಿರುಗಿದರೆ, ಪಕ್ಕದಲ್ಲಿ ಪೋಲಿಸ್ ಅಧಿಕಾರಿ ನಗುತ್ತ ಗಾಡಿ ನಿಲ್ಲಿಸಿದ್ದ
’ಈಗ ನೀನು ಪೋಲಿಸರ ಕಣ್ತಪ್ಪಿಸಿ ಓಡಿ ನೇರವಾಗಿ ಅಪರಾಧಿ ಆಗಿದ್ದಿ. ಇನ್ನು ನಿನ್ನ ಆಟ ಮುಗಿಯಿತು’ ಎಂದ 
ಏನು ತೋಚದೆ ನಿಂತಿದ್ದೆ. ನಿಲ್ದಾಣದತ್ತ ಗಮನಿಸಿದೆ, ಯಾವುದೋ ರೈಲು ಬಂದು ನಿಂತಿತು. ಒಳಗಿನಿಂದ ಜನ ಹೊರಬರುತ್ತಿದ್ದರು. ಒಳಗಿನಿಂದ ಬರುವವರು, ಪಕ್ಕದಲ್ಲಿದ್ದ ಮೆಷಿನ್ ನಲ್ಲಿ ಹೆಬ್ಬೆರಳು ಊರಿದರೆ ಬಾಗಿಲು ತೆರೆಯುತ್ತಿತ್ತು,  ಈಗ ವೇಗವಾಗಿ ಯೋಚಿಸಿದೆ. ಬೇರೆ ದಾರಿಯೇ ಇಲ್ಲ, ತಪ್ಪು ಮಾಡಲೇ ಬೇಕು. 
ಪೋಲಿಸ್ ಅಧಿಕಾರಿಯ ಮುಖ ನೋಡುತ್ತಿರುವಂತೆ ನಟಿಸುತ್ತಿದ್ದೆ, ಅವನು ನನ್ನ ಮುಖ ನೋಡುತ್ತ ನಗುತ್ತಿದ್ದ,  ಒಳಗಿನಿಂದ ಗುಂಪು ಹೊರಬರುತ್ತಿದ್ದಂತೆ ಬಾಗಿಲು ತೆರೆಯಿತು, ಪೋಲಿಸ್ ಅಧಿಕಾರಿ ಏನೊಂದು ಯೋಚಿಸುವ ಮೊದಲೆ, ನಾನು ವೇಗವಾಗಿ ಬಾಗಿಲ ಕಡೆ ಓಡಿದೆ. ಅವನು ತನ್ನ ಗಾಡಿ ನಿಲ್ಲಿಸಿ ಸ್ಟಾಂಡ್ ಹಾಕುವ ಮೊದಲೆ ನಾನು ಬಾಗಿಲ ಒಳಗಿದ್ದೆ, ಅದೇ ವೇಗದಲ್ಲಿ ಓಡುತ್ತ ಹೋದೆ, ಒಳಗೆ ರೈಲು ಹೊರಡಲು ಸಿಗ್ನಲ್ ಕೊಡುತ್ತಿದ್ದರು. ಎಲ್ಲಡೆ ಹಸಿರು ದೀಪ ಕಾಣುತ್ತಿತ್ತು, ಈಗ ಟಿಕೆಟ್ ಮುಂತಾದ ವಿಷಯದ ಬಗ್ಗೆ ಯೋಚಿಸುವ ಕ್ಷಣ ಅಲ್ಲ, ಓಡುತ್ತ ಹೋಗಿ ರೈಲಿನೊಳಗೆ ತೂರಿಕೊಂಡೆ. ನನ್ನ ಹಿಂದೆ ರೈಲಿನ ಅಟೋಮ್ಯಾಟಿಕ್ ಬಾಗಿಲುಗಳು, ಹಾಕಲ್ಪಟ್ಟವು, ಬಗ್ಗಿ ನೋಡಿದೆ. ಒಳಗೆ ಬಂದ ಪೋಲಿಸ್ ಅಧಿಕಾರಿ ಅತ್ತ ಇತ್ತ ನೋಡುತ್ತಿದ್ದ, ನಾನುರೈಲಿನಲ್ಲಿ ಹತ್ತಿದ್ದನ್ನುಅವನು ಗಮನಿಸಲಿಲ್ಲ ಅನ್ನಿಸುತ್ತಿದೆ. 
ಒಂದು….. ಎರಡು…. ಮೂರು….. 
ನಾನು ಹತ್ತಿದ್ದ ರೈಲು ಚಲಿಸುತ್ತಿತ್ತು. 
’ಉಫ್ ’ ಸದ್ಯಕ್ಕೆ ಬಚಾವ್. ಒಳಗೆ ಹೋದವನು ಅಲ್ಲಿದ್ದ ಒಂದು ಸೀಟಿನಲ್ಲಿ ಕುಳಿತೆ.
ನನ್ನನ್ನೀಗ ಮತ್ತೊಂದು ಅನುಮಾನ ಕಾಡುತ್ತಿತ್ತು. ಪೋಲಿಸ್ ಅಧಿಕಾರಿ ಮುಂದಿನ ನಿಲ್ದಾಣಕ್ಕೆ ನನ್ನ ಬಗ್ಗೆ ತಿಳಿಸಿದ್ದರೆ ಏನು ಗತಿ. ಹಾಗೆ ಸುಮಾರು ಇಪ್ಪತ್ತು ನಿಮಿಶಕ್ಕುಅಧಿಕ ಅದೇ ಮಾನಸಿಕ ಒತ್ತಡದಲ್ಲಿಯೆ  ಕುಳಿತಿದ್ದೆ. ಮತ್ತೊಂದು ನಿಲ್ದಾಣ ಬಂದಿತು. ರೈಲು ಎರಡು ನಿಮಿಶ ನಿಂತಿತು. ಇಲ್ಲ ಯಾವುದೇ ತೊಂದರೆ ಕಾಣಿಸಲಿಲ್ಲ. ಪುನಃ ಹೊರಟಿತು. ಒಂದು ರೀತಿ ನೆಮ್ಮದಿ ನೆಲೆಸಿತು. 
ಈಗ ಎಲ್ಲ ಆಯಾಸವು ಕಾಡುತ್ತಿತ್ತು. ಮಧ್ಯಾನ್ಹದ ಊಟವೂ ಆಗಿರಲಿಲ್ಲ, ಅಲ್ಲದೆ ಓಡಿ ಬಂದ ಸುಸ್ತು. ಕಣ್ಣೆಳೆಯುತ್ತಿತ್ತು. 
ಪಕ್ಕದಲ್ಲಿದ್ದವನನ್ನು ಅಂಗ್ಲದಲ್ಲಿ ಪ್ರಶ್ನಿಸಿದೆ 
’ಹೈದರಾಬಾದ್ ಎಷ್ಟು ದೂರವಿದೆ’ ಎಂದು
’ಸುಮಾರು ನೂರಾಐವತ್ತು ಕಿ.ಮೀ ಆಗಬಹುದು, ಇನ್ನು ಒಂದೂವರೆ ಘಂಟೆ ಸಮಯವಿದೆ ’ ಎಂದ  
ಹಾಗೆ ಹಿಂದಕ್ಕೆ ತಲೆ ಒರಗಿಸಿದೆ. ಕಣ್ಣು ಎಳೆಯುತ್ತಿತ್ತು. ನಿದ್ರೆಗೆ ಜಾರಿದೆ …

ಎಷ್ಟು ಸಮಯವಾಯಿತೋ, ಯಾರೋ ಬುಜ ಹಿಡಿದು ಅಲುಗಿಸುತ್ತಿದ್ದರು
’ಸಾರ್ ಹೈದರಾಬಾದ್ ಬಂದಿತು, ಇಳಿಯಿರಿ’ ನೋಡಿದೆ,  ಪಕ್ಕದಲ್ಲಿದ್ದವನು ನನ್ನನ್ನು ಎಚ್ಚರಿಸುತ್ತಿದ್ದ. 
ಅವನಿಗೆ ವಂದನೆ ಸಲ್ಲಿಸಿ, ಎದ್ದೆ. ಕೆಳಗಿಳಿದೆ. ಜನಬರಿತ ನಿಲ್ದಾಣ. ಅಲ್ಲಿಯೆ ಕ್ಯಾಂಟಿನ್ನಿನಲ್ಲಿ ಊಟ ಮುಗಿಸಿದೆ. ಬೆಂಗಳೂರಿನತ್ತ ಹೋಗುವ ರೈಲು ಇತ್ತು, ಟಿಕೆಟ್ ಪಡೆದು. ಹತ್ತಿ ಕುಳಿತೆ. 
ರೈಲು ಬೆಂಗಳೂರಿನತ್ತ ಓಡುತ್ತಿತ್ತು. ನನ್ನ ಮನ ಈಗ ಗೊಂದಲದ ಗೂಡಾಗಿತ್ತು. ನಾನು ನಿಜಕ್ಕು ಅದ್ಯಾವುದೋ ಊರು, 
’ಐಚಿಕ್ಕಮು’ 
ಅದು ನಿಜವಾದ ಅನುಭವವ ಅಥವ ನಾನು ನಿದ್ದೆಯಲ್ಲಿ ಕಂಡ ಕನಸಾ ? 
ಪಕ್ಕದಲ್ಲಿದ್ದವನನ್ನು ಪ್ರಶ್ನಿಸಿದೆ. ಹೈದರಾಬಾದ್ ನಿಂದು ಸುಮಾರು ಇನ್ನೂರು ಕಿ.ಮೀ ದೂರದಲ್ಲಿ ಐಚಿಕ್ಕಮು ಎನ್ನುವ ಊರು , ಅದು ಯಾವ ಜಿಲ್ಲೆ ಬರುತ್ತದೆ, ನೀವು ಕೇಳಿದ್ದೀರಾ ಎಂದು . ನನ್ನ ಮುಖ ವಿಚಿತ್ರವಾಗಿ ನೋಡಿದ. ಅಕ್ಕ ಪಕ್ಕದಲ್ಲಿದವರು ನನ್ನಮುಖ ನೋಡಿದರು
’ಇಲ್ಲವಲ್ಲ, ಆ ರೀತಿ ಒಂದು ಊರಿನ ಹೆಸರು, ಕೇಳಿಲ್ಲವೆ . ನಾನು ಆಂದ್ರವನ್ನು ಎಷ್ಟೋ ಸಾರಿ ಸುತ್ತಿರುವೆ, ಆದರೆ ಈ ಹೆಸರು ಕೇಳಲಿಲ್ಲವಲ್ಲ’ ಎಂದ. 
ಸುತ್ತಲಿನವರು ಅವನ ಮಾತನ್ನು ಅನುಮೋದಿಸಿದಿರು.  
ಒಂದು ಗೊಂದಲದ ಗೂಡಾಗಿ ನಾನು ಸುಮ್ಮನೆ ಕುಳಿತೆ. 
- ಶುಭಂ 

1 comment:

enter your comments please