Sunday, November 11, 2012

ಉಮಾಪತಿಯವರ ಮನೆ ನಿಮಗೆ ಗೊತ್ತಾ ?


ಸರಿ ಆರನೆ ಮುಖರಸ್ತೆ ಎಂದು ಬೋರ್ಡ್ ಇದೆ, ಅಲ್ಲಿಗೆ ಇದೆ ಸರಿಯಾದ ರಸ್ತೆ, ಬೈಕ್ ಅನ್ನು ಸ್ವಲ್ಪ ನಿಧಾನಮಾಡಿ ಎಡ ಬಾಗದತ್ತ ನೋಡುತ್ತ ಹೋಗುತ್ತಿದ್ದೆ, ಹಿಂದೆ ನನ್ನ ಅಣ್ಣನ ಮಗ ಶ್ರೀವತ್ಸ ಕುಳಿತಿದ್ದ. ಮನೆ ನಂಬರ್, ೨೮,... ೨೭... ೨೬ , ಹಾ  ಸಿಕ್ಕಿತು.
 
 ಗೇಟಿನ ಮೇಲೆ 'ಹಿರಣ್ಯ' ಎಂದು ಇತ್ತು, ಅಲ್ಲಿಗೆ ಸರಿಯಾದ ವಿಳಾಸಕ್ಕೆ ಬಂದಿರುವೆ. ಗೇಟಿನ ಒಳಬಾಗಕ್ಕೆ , ಮನೆಯ ಮುಂದೆ  ವಯಸ್ಸಾದ ಹಿರಿಯರೊಬ್ಬರು ನಿಂತಿದ್ದರು. ನಾನು ಬೈಕ್ ಆಫ್ ಮಾಡುತ್ತ ಅವರನ್ನು ಪ್ರಶ್ನಿಸಿದೆ
"ಸಾರ್ ರಘುಪತಿಯವರ ಮನೆ ಇದೇನ" 
ಆತ ನನ್ನತ್ತ ಒಂದು ವಿಲಕ್ಷಣ ದೃಷ್ಟಿ ಬೀರಿದರು
"ಏಯ್ , ನಾನೇನು ನಿನಗೆ ಅಡ್ರೆಸ್ ಹೇಳಲು ಇಲ್ಲಿ ನಿಂತಿದ್ದೀನ, ಸರಿಯಾಗಿ ವಿಳಾಸ ತಿಳಿಯದೆ, ಮನೆ ಗೊತ್ತಿಲ್ಲದೆ ಇಲ್ಲಿ ಏಕೆ ಸುತ್ತುತ್ತಿರುವೆ. ನಾನು ಯಾರ ಮನೇನು ತೋರ್ಸಲ್ಲ, ಮನೆ ಅಂತ ಮನೆ ಇವನ ಪಿಂಡ"  ಹೀಗೆಲ್ಲ ಕೂಗಾಡುತ್ತ, ಒಳಗೆ ಹೋಗಿ ' ದಡ್ ' ಎಂದು ಬಾಗಿಲು ಹಾಕಿಬಿಟ್ಟರು.
ನನಗೆ ಪಿಚ್ ಅನ್ನಿಸಿತ್ತು, ಅಲ್ಲ ಅಷ್ಟಕ್ಕು ನಾನೇನು ತಪ್ಪು ಕೇಳಿದೆ, ರಘುಪತಿಯವರ ಮನೆ ಇದೇನ ಎಂದೆ, ಸರ್ ಅಂತಲು ಮರ್ಯಾದೆ ಕೊಟ್ಟೆ ಕರೆದೆ. ಆದರು ಏಕೆ ಆತ ಅಷ್ಟೊಂದು ಕೋಪಗೊಂಡರು ಅರ್ಥವಾಗಲಿಲ್ಲ. ಈಗೇನು ಮಾಡುವುದು , ನನ್ನ ಸ್ನೇಹಿತ ರಘುಪತಿ ಕೊಟ್ಟ ವಿಳಾಸಕ್ಕೆ ಸರಿಯಾಗಿಯೆ ಬಂದಿರುವೆ ಅನ್ನಿಸುತ್ತೆ, ಆದರೆ ಇದ್ಯಾರೊ ವಿಚಿತ್ರದ ವ್ಯಕ್ತಿ ಇದ್ದಾರಲ್ಲ ಮನೆಯಲ್ಲಿ, ಗೇಟಿನ ಒಳಗೆ ಹೋಗಿ ಬಾಗಿಲು ತಟ್ಟಿದರೆ ಏನು ಅನ್ನುತ್ತಾರೊ ಎಂದು ಭಯವಾಯಿತು. ಈಗ ಹೊರಟುಬಿಡುವುದು ನಂತರ ರಘುರವರು ಎದುರು ಸಿಕ್ಕಾಗ ಹೀಗೆ ಆಯ್ತು ಎಂದು ಹೇಳಿದರಾಯಿತು. ಅವರ ಮೊಬೈಲ್ ನಂಬರ್ ಸಹ ನನ್ನ ಬಳಿ ಇಲ್ಲ. ಎಂದು ಬೈಕ್ ಮತ್ತೆ ಸ್ಟಾರ್ಟ್ ಮಾಡಿದೆ ಹೊರಡೋಣ ಎಂದು. ಹಿಂದಿದ್ದ ಶ್ರೀವತ್ಸ ಸಹ, 
"ಅದೇನು ಚಿಕ್ಕಪ್ಪ ನಿಮ್ಮ ಸ್ನೇಹಿತರ ಮನೆ ಅಂತೀರಿ, ಹೀಗೆ ಆಡ್ತಾರೆ ' ಎಂದ ಕೋಪದಲ್ಲಿ. 
ಬೈಕ್  ಮುಂದೆ ಸರಿಯುವದರಲ್ಲಿ, ಆ ಮನೆಯ ಬಾಗಿಲು ತೆರೆಯಿತು, ನೋಡಿದರೆ ರಘು ಅವರೆ ಬಾಗಿಲು ತೆರೆದು ಹೊರಬರುತ್ತಿದ್ದಾರೆ. ನನ್ನ ಕಡೆ ನೋಡಿ ಕೈ ಆಡಿಸುತ್ತಾ, 
'ಸಾರ್ ಇದೆ ಮನೆ ಬನ್ನಿ " ಎಂದರು.
ನಾನು ಆಶ್ಚರ್ಯ ಪಡುತ್ತ ಬೈಕ್ ಆಪ್ ಮಾಡಿ ಪಕ್ಕಕ್ಕೆ ಎಳೆದು ಸ್ಟಾಂಡ್ ಹಾಕಿದೆ. ಕೆಳಗಿಳಿದ ಶ್ರೀವತ್ಸ ಮುಖ ಊದಿಸಿ ನಿಂತಿದ್ದ.
"ಇದು ನಿಮ್ಮ ಮನೆಯ,  ಮುಂದೆ ಮತ್ಯಾರೊ ಇದ್ದರು, ಅವರಿಗೆ ಕೇಳಿದೆ ಅದೇನು ಕೋಪ ಮಾಡಿಕೊಂಡರು" ಎಂದೆ.
ಅದಕ್ಕವರು
"ಸಾರಿ, ನನಗೆಲ್ಲ ಕೇಳಿಸಿತು, ಅದಕ್ಕೆ ಬೇಗ ಹೊರಬಂದೆ, ಸಾರಿ,  ಒಳಗೆ ಬನ್ನಿ ಎಲ್ಲ ಹೇಳುವೆ" ಎಂದರು.
 
ಅವರ ಹಿಂದೆ ಒಳನಡೆದೆ, ಶ್ರೀವತ್ಸನಿಗೊಂದು ಕಂಪನಿಯಿಂದ ಕಾಲ್ ಲೆಟರ್ ಬಂದಿತ್ತು ಇಂಟರ್ ವ್ಯೂಗೆ , ಕಂಪನಿಯ ಮುಖ್ಯಸ್ಥರು ಹೇಗೊ ರಘುಪತಿಯವರಿಗೆ ಸಂಬಂಧಿಗಳು, ಅವರೆ ವಿಷಯ ತಿಳಿದು ಹೇಳಿದ್ದರು, ಹುಡುಗನ ವಿವರ ಎಲ್ಲ ತಂದುಕೊಡಿ, ನಾನು ಹೇಳಿದ್ದೇನೆ ಎಂದು. 
"ಮನೆಯ ಬಳಿ ಬನ್ನಿ" ಎಂದು ಪೋನ್ ನಲ್ಲಿಯೆ ಮನೆಯ ವಿಳಾಸವನ್ನೆಲ್ಲ ತಿಳಿಸಿದ್ದರು. ಹೀಗಾಗಿ ಶ್ರೀವತ್ಸನನ್ನು ಹಿಂದೆ ಕೂಡಿಸಿಕೊಂಡು ಅವರ ಮನೆ ಹುಡುಕುತ್ತ ಬಂದೆ , ಈಗ ಈ ಪ್ರಸಂಗ. ಸರಿ ಒಳಗೆ ಹೋಗಿ ವಿವರವನ್ನೆಲ್ಲ ಕೊಟ್ಟೆ, ಅವರು ನಮ್ಮ ಎದುರಿಗೆ ಅವರ ಸಂಬಂದಿಗಳಿಗೆ ಫೋನ್ ಮಾಡಿ, ಮಾತನಾಡಿದರು. ನಂತರ 
"ಏನು ಯೋಚನೆ ಬೇಡ,ಇವನ ಕ್ವಾಲಿಫಿಕೇಷನ್ ಎಲ್ಲ ಚೆನ್ನಾಗಿದೆ, ಹುಡುಗು ಚುರುಕಾಗಿದ್ದಾನೆ, ಖಂಡೀತ ಆಯ್ಕೆ ಆಗ್ತಾನೆ " ಎಂದರು. ಶ್ರೀವತ್ಸನಿಗು ಖುಷಿ.
ಕಾಫಿ ಕೊಟ್ಟರು , ಕುಡಿಯುತ್ತ, ಮತ್ತೆ ಬೇಕೊ ಬೇಡವೊ ಎಂಬಂತೆ ಪ್ರಶ್ನಿಸಿದೆ
"ನಿಮ್ಮ ಮನೆ ಮುಂದು ನಾನು ಬಂದಾಗ ನಿಂತಿದ್ದರಲ್ಲ ಅವರು ಯಾರು, ಯಾಕೆ ಆ ರೀತಿ ಕೋಪ ಮಾಡಿಕೊಂಡರು?" ಎಂದು
ರಘುಪತಿ ಸ್ವಲ್ಪ ಮಂಕಾದರು. 
"ಇಲ್ಲ ಹಾಗೇನು ಇಲ್ಲ, ಕೋಪವಲ್ಲ, ಅವರ ಹಿಂದಿನ ಕಹಿ ಅನುಭವ ಆ ರೀತಿ ವರ್ತಿಸುವಂತೆ ಮಾಡಿದೆ , ಹೇಳುತ್ತೇನೆ" ಎಂದು ಪ್ರಾರಂಬಿಸಿದರು,ನಾನು ಕುತೂಹಲದಿಂದ ಕೇಳುತ್ತಿದ್ದೆ
....
ಶ್ರೀನಿವಾಸರಾಯರು ರಿಟೈರ್ಡ್ ಆಗಿ, ಆಗಿನ್ನು ಮೂರು ನಾಲಕ್ಕು ತಿಂಗಳಾಗಿತ್ತು, ಸಮಯ ಹೋಗುವುದೆ ಕಷ್ಟ ಅತ್ಯಂತ ಚಟುವಟಿಕೆ ಮನುಷ್ಯ, ಬೆಳಗ್ಗೆ ಸಂಜೆ ವಾಕಿಂಗ್ ಎಂದು ಹೋಗುತ್ತಿದ್ದರು. ಅಂದು ಸಹ ಬೆಳಗಿನ ವಾಕಿಂಗ್ ಮುಗಿಸಿ, ಮನೆಗೆ ಹೊರಟರು, ಮನೆ ಇರುವ ರಸ್ತೆಯ ತುದಿಗೆ ಬರುವಾಗಲೆ, ರಸ್ತೆಯಲ್ಲಿ, ಬೈಕ್ ನಲ್ಲಿ ನಿಂತ ಇಬ್ಬರು ಯುವಕರು, ಅತ್ತ ಇತ್ತ ನೋಡುತ್ತಿದ್ದರು. 
ಇವರು ಕುತೂಹಲದಿಂದ ಅವರನ್ನು ಯಾವ ಮನೆ ಹುಡುಕುತ್ತಿದ್ದೀರಿ ಎಂದು ಪ್ರಶ್ನಿಸಿದರು
ಜರ್ಕಿನ್ ಹಾಗು ಹೆಲ್ಮೆಟ್ ಹಾಕಿ ಮುಂದೆ  ಕುಳಿತ್ತಿದ್ದಾತ 
"ಆರನೆ ಮುಖ್ಯ ರಸ್ತೆ ಇದೆ, ಅಲ್ಲವ? ಇಲ್ಲಿ ಉಮಾಪತಿ ಎಂಬುವರ ಮನೆ ಯಾವುದು?" ಎಂದ.
ಅದಕ್ಕ ಶ್ರೀನಿವಾಸರಾಯರು
"ಉಮಾಪತಿಯವರೆ ಅಂದರೆ , ಮೇಷ್ಟರಾಗಿದ್ದಾರಲ್ಲ ಅವರೆ ತಾನೆ" ಎಂದರು
"ಹೌದು ಅವರೆ, ಅವರ ಮನೆ ಯಾವುದು, ತೋರಿಸುತ್ತೀರ" ಎಂದರು
"ಅಯ್ಯೊ ನೋಡಿ, ಅಲ್ಲಿ ಬಿಳಿಮಾರುತಿ ೮೦೦ ಕಾರು ನಿಂತಿದೆಯಲ್ಲ ಅದೆ ಅವರ ಮನೆ,ಬನ್ನಿ" ಎನ್ನುತ್ತ ಅವರೆ ಮುಂದಾಗಿ ಹೊರಟರು. ಯಾರಿಗಾದರು ಉಪಕಾರ ಮಾಡುವದರಲ್ಲಿ ಅವರು ಸ್ವಲ್ಪ ಅತಿ ಉತ್ಸಾಹ
ಬೈಕನಲ್ಲಿದ್ದವರು ಅವರನ್ನು ನಿದಾನಕ್ಕೆ ಹಿಂಬಾಲಿಸಿದರು. ಶ್ರೀನಿವಾಸರಾಯರು ಉಮಾಪತಿಯವರ ಮನೆಮುಂದೆ ನಿಂತು, 
"ಉಮಾಪತಿಯವರೆ" ಎಂದು ಜೋರಾಗಿ ಕೂಗಿ, ಗ್ರಿಲ್ ಗೇಟನ್ನು ಬಡಿದರು. ಬೆಳಗ್ಗೆಯೆ ಯಾರು ಎನ್ನುತ್ತ ಅವರ ಪತ್ನಿ ಹೊರಗೆ ಬಂದು
"ಇದೇನು ಬೆಳಗ್ಗೆ ಬೆಳ್ಳಗೆಯೆ, ಬನ್ನಿ ಒಳಗೆ" ಎನ್ನುತ್ತ ಬಾಗಿಲು ತೆಗೆದರು
"ಅಯ್ಯೊ ಇಲ್ಲಮ್ಮ, ನೋಡಿ ಯಾರೋ ನಿಮ್ಮ ಯಜಮಾನರನ್ನು ಹುಡುಕಿ ಬಂದಿದ್ದಾರೆ, ಎದ್ದಿದ್ದಾರ ಕರೆಯಿರಿ" ಎಂದರು
ಆಕೆ ಹೊರಗೆ ಬೈಕ್ ನಲ್ಲಿನಿಂತಿದ್ದವರತ್ತ ನೋಡುತ್ತ , ಒಳಗೆ ಹೋಗಿ ಉಮಾಪತಿಯವರನ್ನು ಕರೆದು ತಂದರು.
ಪಂಚೆ ಬನಿಯನ್ ಧರಿಸಿ ಪೇಪರ್ ಓದುತ್ತ ಕುಳಿತಿದ್ದ ,ಉಮಾಪತಿಯವರು  ಶ್ರೀನಿವಾಸರಾಯರ ಹಿಂದೆ ನಿಂತ ಬೈಕ್ ನವರನ್ನು ಕಾಣುತ್ತ, 
"ಯಾರು ನೀವು , ಏನಾಗಬೇಕಿತ್ತು" ಎಂದರು. 
ಶ್ರೀನಿವಾಸರಾಯರು ಯೋಚಿಸಿದರು, ಅಂದರೆ ಬೈಕ್ ನಲ್ಲಿರುವರು ಉಮಾಪತಿಯವರಿಗೆ ಪರಿಚಿತರಲ್ಲ ಎಂದು .
ಆದರೆ ಅಲ್ಲಿ ಏನಾಯಿತು ಎಂದು ಯಾರಿಗು ಅರ್ಥವಾಗುವ ಮೊದಲೆ
ಬೈಕ್ ನಲ್ಲಿ ಹಿಂದೆ ಕುಳಿತ್ತಿದ್ದ ಯುವಕ, ತನ್ನ ಜೇಬಿಗೆ ಕೈ ಹಾಕಿ , ಪಿಸ್ತೂಲನ್ನು ಹೊರಗೆ ತೆಗೆದ, ನೇರ ಉಮಾಪತಿಯವರತ್ತ ಗುರಿ ಮಾಡಿ, ಸತತ ನಾಲಕ್ಕು ಐದು ಗುಂಡು ಹಾರಿಸಿದ. ಎದೆಯಿಂದ ರಕ್ತ ಚುಮ್ಮುತ್ತ, ಕುಸಿದ ಉಮಾಪತಿ, ಸ್ಥಳದಲ್ಲೆ ಮೃತರಾದರು. ನೋಡುತ್ತಿರುವಂತೆ, ಬೈಕ್ ವೇಗವಾಗಿ ಹೊರಟು ಹೋಯಿತು
ಶ್ರೀನಿವಾಸ ರಾಯರಿಗೆ ಹೃದಯ ಬಾಯಿಗೆ ಬಂದಿತು, ಗಾಭರಿಯಿಂದ ಅವರ ಕೈ ಕಾಲುಗಳುನಡುಗುತ್ತಿದ್ದವು. ಉಮಾಪತಿಯವರ ಪತ್ನಿಯ ಗೋಳಾಟ, ಕೂಗು ಕೇಳಿ ಸುತ್ತಮುತ್ತಲ ಮನೆಯವರೆಲ್ಲ ಹೊರಬಂದರು. 
 
ಎಲ್ಲರಲ್ಲು ಆತಂಕ , ಭಯ , ಏನಾಯ್ತೋ ಎಂಬ ಕುತೂಹಲ , ಎಲ್ಲರು ಕೇಳುತ್ತಿರುವಂತೆ, ಉಮಾಪತಿಯವರ ಪತ್ನಿ ಬಾರ್ಗವಿ, ಶ್ರೀನಿವಾಸರಾಯರತ್ತ ಕೈ ತೋರಿಸಿ ಅಳುತ್ತ ನುಡಿದಳು
"ಇವರೆ ಯಾರನ್ನೊ ಕರೆತಂದರು, ಬಂದವರು , ನಮ್ಮವರಿಗೆ ಗುಂಡು ಹಾರಿಸಿ ಹೊರಟು ಹೋದರು"
 
ಆಕೆಯ ಮಾತು ಕೇಳಿ ಎಲ್ಲರು ಶ್ರೀನಿವಾಸರಾಯರತ್ತ , ತಿರುಗಿದರು, ಭಯ,ಹಾಗು ಗಾಭರಿ, ಮನಸಿನ ಮೇಲೆ ಆದ ಅಘಾತ, ಎದುರಿಗೆ ಪಂಚೆ ಮತ್ತು ಬಿಳಿಯ ಬನಿಯನ್ ಪೂರ ತೋಯ್ದ ರಕ್ತದೊಂದಿಗೆ ಉಮಾಪತಿಯವರ ದೇಹ, ಶ್ರೀನಿವಾಸರಾಯರ ದ್ವನಿ ಹೂತು ಹೋಗಿತ್ತು, ಪಿಸುಮಾತು ಎಂಬಂತೆ ಸಣ್ಣಗೆ ನುಡಿದರು
"ಇಲ್ಲ ನನಗೆ ತಿಳಿಯದು, ವಾಕಿಂಗ್ ಮುಗಿಸಿ ಬರುತ್ತಿದ್ದೆ, ಮೋಟರ್ ಬೈಕ್ ನಲ್ಲಿ ಬಂದವರು, ಉಮಾಪತಿಯವರು ಮನೆ ಯಾವುದು ಎಂದು ಕೇಳಿದರು, ತೋರಿಸಿದೆ ಅಷ್ಟೆ, ಅವರು ಯಾರು ಎಂದು ನನಗೆ ತಿಳಿದಿಲ್ಲ , ನನಗೂ ಅವರು ಅಪರಿಚಿತರು್"
 
 ಪೋಲಿಸರು ಬಂದರು, ಸಹಜವಾಗಿಯೆ, ಉಮಾಪತಿಯವರ ಪತ್ನಿ ಭಾರ್ಗವಿಯವರ ಹೇಳಿಕೆಯ ಮೇರೆಗೆ ಶ್ರೀನಿವಾಸರಾಯರನ್ನು ಎಳೆದೋಯ್ದರು. ಪೋಲಿಸ್ ಸ್ಟೇಷನ್ ಗೆ ಹೋದ ರಾಯರು, ಮುಂದೆ ಏನು ಮಾಡಲು ತೋಚದೆ, ಕುಸಿದು ಕುಳಿತರು.
 
.
.
.
 
 ಕತೆ ಕೇಳುತ್ತಿದ್ದ ನನಗೆ ಶಾಕ್ ಆಗಿತ್ತು ಅಲ್ಲ ಹೀಗೆಲ್ಲ ನಡೆಯಲು ಸಾದ್ಯವೆ? ಹೀಗಾದರೆ ಹೊರಗೆ ಯಾರೋಡನೆ ಮಾತನಾಡುವುದು ಸಹ ಕಷ್ಟವಲ್ಲವೆ. ಮತ್ತೆ ಕೇಳಿದೆ ಮರುಕದಿಂದ 
"ಹಾಗಿದ್ದಲ್ಲಿ, ಆಮೇಲೆ ನೀವು ಏನು ಮಾಡಿದಿರಿ , ನಿಮ್ಮ ತಂದೆ ಶ್ರೀನಿವಾಸರಾಯರನ್ನು ಪೋಲಿಸರು ಹೇಗೆ ಬಿಟ್ಟರು" 
"ಸಾರ್ , ನಮ್ಮ ತಂದೆಯನ್ನು ಜೈಲಿನಿಂದ ಮನೆಗೆ ಕರೆತರುವಲ್ಲಿ, ನನ್ನ ಬುದ್ದಿ, ಮತ್ತು ಕೈಲಿದ್ದ ಹಣ ಅಷ್ಟು ಖಾಲಿಯಾಗಿತ್ತು, ನಮ್ಮ ಅದೃಷ್ಟ, ಹದಿನೈದು ದಿನದಲ್ಲಿಯೆ ಪೋಲಿಸರು ನಿಜ ಹಂತಕರನ್ನು ಸೆರೆಹಿಡಿದರು. ಕೋರ್ಟನಲ್ಲಿ ಸಹ ನಮ್ಮ ತಂದೆಯದು ಏನು ತಪ್ಪಿಲ್ಲ ಎಂದು ಅವರನ್ನು ಬಿಟ್ಟು ಬಿಟ್ಟರು, ಆದರೆ ನಮ್ಮ ತಂದೆಯವರ ಮನಸಿಗೆ ದೊಡ್ಡ ಶಾಕ್ ಆಗಿತ್ತು, ಮಾನಸಿಕವಾಗಿ ಕುಸಿದ ಅವರು ಕೆಲವೊಮ್ಮೆ ವಿಚಿತ್ರ ವಾಗಿ ವರ್ತಿಸುತ್ತಿದ್ದರು, ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಕೊಡಿಸಿದೆ. ಈಗೆಲ್ಲ ಸಮಸ್ಯೆ ಇಲ್ಲ, ಆದರೆ ಈದಿನ ನೀವಿಬ್ಬರು ಬಂದಿರುವ ರೀತಿ, ಬಹುಷಃ ಅವರಿಗೆ ಹಳೆಯದನ್ನು ನೆನಪಿಸಿದೆ, ಆ ದಿನ ಹಂತಕರು ಹೆಚ್ಚು ಕಡಿಮೆ ಹೀಗೆ ಬಂದಿದ್ದರು. ಅಲ್ಲದೆ ನೀವು ಕೇಳಿರುವ ಪ್ರಶ್ನೆ ಸಹ ಅವರ ಮನಸಿಗೆ ಚುಚ್ಚಿರಬೇಕು" ಎಂದು ನಿಲ್ಲಿಸಿದ.
 
ನಾನು ಕುತೂಹಲದಿಂದ ಕೇಳಿದೆ " ಉಮಾಪತಿಯವರ ಮನೆ ಈ ರಸ್ತೆಯಲ್ಲಿ ಯಾವುದು " ಎಂದು. ಅದಕ್ಕೆ ರಘುಪತಿಯವರು
ನಗುತ್ತ
"ಇಲ್ಲ ಬಿಡಿ ಈ ರಸ್ತೆಯಲ್ಲ, ಅದು ನಡೆದಿದ್ದು, ಸುಮಾರು ಆರು ವರ್ಷದ ಹಿಂದೆ, ಆಗ ಬ್ಯಾಂಕ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆವು, ಈ ಘಟನೆ ನಂತರ, ಬೇಸರವೆನಿಸಿ, ಆ ಮನೆ ಬಿಟ್ಟು , ಸ್ವಂತ ಮನೆ ಕಟ್ಟಿ ಇಲ್ಲಿಗೆ ಬಂದೆ" ಎಂದರು.
 
ನಾನು ಹೊರಡುವ ಮುಂಚೆ "ನಿಮ್ಮ ತಂದೆಯವರಲ್ಲಿ, ಅವರಿಗೆ ಬೇಸರ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು, ಕರೆಯುತ್ತೀರ" ಎಂದೆ.
ಮೇಲಿನ ರೂಮಿಗೆ ಹೋಗುವ ಮೆಟ್ಟಿಲತ್ತ ನೋಡುತ್ತ ಅವರು ರಘು ನುಡಿದರು " ಈ ದಿನ ಬೇಡ ಬಿಡಿ, ಮತ್ತೆ ಬಂದಾಗ ಯಾವಾಗಲಾದರು ಮಾತನಾಡುಸಿವಿರಂತೆ'
-----
 
ಅಲ್ಲಿಂದ ಬರುವಾಗ ಬೈಕ್ ನಲ್ಲಿ ಹಿಂದೆ ಕುಳಿತ್ತಿದ್ದ ಶ್ರೀವತ್ಸ ಅನ್ನುತ್ತಿದ್ದ "ಚಿಕ್ಕಪ್ಪ, ಹೀಗೆಲ್ಲ ಆಗಿಬಿಟ್ಟರೆ ತುಂಬಾನೆ ಕಷ್ಟವಲ್ಲವೆ, ಪಾಪ, ನನಗಂತು ಯಾರಿಗಾದರು ಅಡ್ರೆಸ್ ಕೇಳಿದರೆ ತೋರಿಸಲು ಭಯ ಅನ್ನಿಸುತ್ತಿದೆ "
 
- ಮುಗಿಯಿತು 

No comments:

Post a Comment

enter your comments please