Wednesday, February 15, 2012

ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ

ತಿಂಗಳಿಗೊಂದು ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ !

ಮೊನ್ನೆ ಬಾನುವಾರ ತಿಂಡಿತಿಂದು ಸುಮ್ಮನೆ ಕುಳಿತ್ತಿದ್ದೆ. ಹಾಗೆ ಏಕೆ  ಮನು ಮನೆಗೆ ಹೋಗಿಬರಬಾರದೇಕೆ ಅನ್ನಿಸಿತು. ಕಳೆದ ಬಾರಿ ಹೋದಾಗ  ಅವನ ಅಜ್ಜಿ ಹೇಳಿದ <<ಬೆಳ್ಳಿ ಲೋಟ>> ಕಥೆ ಇನ್ನು ನೆನಪಿನಲ್ಲಿತ್ತು. ಮತ್ತೆ ಬಂದಾಗ ಬೇರೆ ಹೇಳುವೆನೆಂದಿದ್ದರು. ಒಮ್ಮೆ ಸಂಕೋಚ ಅನ್ನಿಸಿತು. ಮನು ಏನೆಂದು ಭಾವಿಸುವನೋ ! ಏನಾದರು ಅಂದುಕೊಳ್ಳಲಿ ಎಂದು ಅವನ ಮನೆಗೆ ಹೊರಟೆ. ಬಾಗಿಲಲ್ಲಿ ಅವನ ಮನೆಯಾಕೆ ನಗುತ್ತ ಸ್ವಾಗತಿಸಿದರು 'ಬನ್ನಿ ಬನ್ನಿ' ಎಂದು. ಒಳಗೆ ಹಾಲಿನಲ್ಲಿ ಯಥಾಪ್ರಕಾರ ಅವನ ಮಕ್ಕಳಿಬ್ಬರು ಸನತ್ ಹಾಗು ಸಾಕೇತ್ ಅವರ ಅಪ್ಪನನ್ನು 'ಹುರಿಯುತ್ತ' ಕುಳಿತ್ತಿದ್ದರು. ನನ್ನನ್ನು ಕಂಡೊಡನೆ 'ಅಂಕಲ್ ಬಂದ್ರು ' ಅಂತ ಸುತ್ತುವರೆದರು. ಮನುವು ನಗುತ್ತಲೆ 'ಏನಪ್ಪ ನಮ್ಮ ಅಜ್ಜಿ ಹತ್ತಿರ ಕಥೆ ಕೇಳಲು ಬಂದೆಯಾ' ಅಂದ ಕಿಚಾಯಿಸುತ್ತ. ನಾನದರೊ ಇಲ್ಲಪ್ಪ ಅಂದೆ ನಗುತ್ತ. ಅವನ ಮಕ್ಕಳಿಬ್ಬರು 'ಓ ದೆವ್ವ ಕೊಟ್ಟ ಬೆಳ್ಳಿ ಲೋಟದ ಕಥೆ, ಅಜ್ಜೀನ ಕರೀತಿವಿ ಹೇಳ್ತಾರೆ' ಅಂತ ಒಳಗೆ ಓಡಿದವು. ಮನುವಿನ ಮಡದಿ ಈಬಾರಿ ನನ್ನನ್ನು ಕೇಳದೆ ನಿಂಬೆಯ ಪಾನಕ ತಂದರು. ನಾನು 'ಯಾಕೆ ಮಾಡಿದಿರಿ ಬೇಕಿರಲಿಲ್ಲ' ಅಂದೆ. ಮನುವು 'ಕುಡಿಯೋ ನಾಟಕ ಬೇಡ' ಅಂತ ದಬಾಯಿಸಿದಾಗ ಲೋಟ ಮೇಲೆತ್ತಿದೆ.
ಅಷ್ಟರಲ್ಲಿ ಮಕ್ಕಳಿಬ್ಬರು ಅಜ್ಜಿಯನ್ನು ಹೆಚ್ಚು ಕಡಿಮೆ ಎಳೆದೆ ತಂದರು. ನಾನು ಗಮನಿಸಿದೆ ಕಳೆದಬಾರಿ ಅವರು ಕುಳಿತ ಜಾಗದಲ್ಲಿ ನಾನು ಕುಳಿತಿದ್ದೆ, ಹಾಗಾಗಿ ನಿಲ್ಲುತ್ತ 'ಬನ್ನಿ ಕುಳಿತುಕೊಳ್ಳಿ' ಎಂದು ಕರೆದೆ. 
 ಅವರು ಬಂದು ನಾನು ಕುಳಿತಿದ್ದ ಜಾಗದಲ್ಲಿ ಕುಳಿತರು, 
ಮಕ್ಕಳನ್ನು  'ನನ್ನ ಕೈ ಬಿಡಿರೋ ಎಂದಾದರು ಒಂದುದಿನ ನನ್ನ ಕೈಯನ್ನು ಮುರಿದೆ ಹಾಕಿ ಬಿಡುತ್ತೀರಿ' ಅಂತ ಹುಸಿಮುನಿಸು ತೋರುವಾಗ.
ಸನತ್ ಸಾಕೇತ್ ಇಬ್ಬರು ಅವರ ಅಕ್ಕ ಪಕ್ಕ ನಿಲ್ಲುತ್ತ 'ಹಾಗಾದರೆ ಕಥೆ ಹೇಳಿ ನಿಮ್ಮ ಕೈ ಮುರಿಯಲ್ಲ' ಅಂದರು. 
ಅಜ್ಜಿ ನನ್ನತ್ತ ನೋಡುತ್ತ 'ನೋಡಪ್ಪ ಇವರ ದಬ್ಬಾಳಿಕೇನ' ಎಂದರು . ನಾನು ’ಹೋಗಲಿ ಮಕ್ಕಳಲ್ವೆ ಪಾಪ ಕೇಳುತ್ವೆ ಎಂತದೋ ಒಂದು ಕಥೆ ಹೇಳಿಬಿಡ’  ಎಂದೆ. 
ಪಕ್ಕದಲ್ಲಿದ್ದ ಮನು ಗಹಗಹಿಸಿ ನಗುತ್ತ 'ಇದಪ್ಪ ವರಸೆ ಅಂದರೆ, ಕಥೆ ಕೇಳಲು ಬಂದವನು ನೀನು, ನನ್ನ ಮಕ್ಕಳನ್ನು ಛೂ ಬಿಟ್ಟವನು ನೀನು ಈಗ ಈ ರೀತಿ ಹೇಳ್ತೀಯ' ಅಂತ ರೇಗಿಸಿದ. 
ನಾನು 'ಎಂತದೊ ನಿಂದು ಹುಡುಗಾಟ ಸುಮ್ಮನಿರೋ' ಅಂದೆ.
ಆಗ ಅಜ್ಜಿ  'ಏನಪ್ಪ ನಾನು ಕಳೆದ ಸಾರಿ ಹೇಳಿದ 'ಬೆಳ್ಳಿಲೋಟದ' ಕಥೆಯನ್ನು ನೀನು ಅದೆಲ್ಲೊ ಪತ್ರಿಕೆಗೆ ಹಾಕಿಸಿದ್ದೀಯಂತೆ ಎಷ್ಟು ದುಡ್ಡು ಕೊಟ್ಟರು'  ಅಂತ ಕುತೂಹಲದಿಂದ ಕೇಳಿದರು. 
ನಾನು ಕೆಕ್ಕರಿಸಿ ಮನುವಿನತ್ತ ನೋಡಿದೆ , ಈರೀತಿ ಕಿತಾಪತಿಯೆಲ್ಲ ಅವನು ಮಾಡುವುದೆ. ನಾನೀಗ ಏನು ಹೇಳಲಿ. 
'ಅಜ್ಜಿ ಅದೇನು ದೊಡ್ಡ ಪತ್ರಿಕೆಯಲ್ಲ , ದುಡ್ಡು ಪಡ್ಡು ಎಂತಾದು ಅಲ್ಲ, "ಸಂಪದ" ಅಂತ ಒಂದು ಬಳಗವಿದೆ ನೀವು ನೋಡ್ತಿರಲ್ಲ ನಿಮ್ಮ ಮನುವಿನ ರೂಮಿನಲ್ಲಿ 'ಕಂಪ್ಯೂಟರ್' ಅದರಲ್ಲಿ ಹಾಕಬಹುದು. ನಾವೆ ಒಂದಿಷ್ಟು ಗೆಳೆಯರು, ನಾನು ಹಾಕಿದ್ದು ಎಲ್ಲ ನೋಡ್ತಾರೆ ಹಾಗೆ ಅವರು ಹಾಕಿದ್ದು ನಾನು ನೋಡ್ತೀನಿ, ದುಡ್ಡು ಪಡ್ಡು ಎಲ್ಲ ಏನಿಲ್ಲ, ಸುಮ್ಮನೆ ಒಂದು ಹವ್ಯಾಸ ಅಷ್ಟೆ' ಅಂದೆ.
ಅವರು  ' ಅಯ್ಯೋ ,ಹೌದ? ನಾನೆಲ್ಲೊ ನೀನು ಕಾರಂತರು,ಆನಾಕೃಷ್ಣರಾಯರ ತರ ಏನೊ ದೊಡ್ಡ ಕಥೆಗಾರನಾಗಿಬಿಟ್ಟೆ ಅಂತಿದ್ನಲ್ಲ'  ಎಂದರು. 
ಮನು ಮತ್ತೆ ಗಹಗಹಿಸಿ ನಕ್ಕುಬಿಟ್ಟ. ನಾನು ತುಸು ಮುನಿಸಿನಿಂದಲೆ ಅವನತ್ತ ನೋಡಿದೆ. ಮಕ್ಕಳಿಗೆ ಇವೆಲ್ಲ ಹೇಗೆ ಅರ್ಥವಾಗಬೇಕು ಅವರದು ಒಂದೇ ರಾಗ 'ಅಜ್ಜಿ ಬೆಳ್ಳಿ ಲೋಟದ ಕಥೆ ಹೇಳು' ಅಂತ. 
ಆಗ ಅಜ್ಜಿ 'ಆಯ್ಯೋ ಪೆದ್ದರ ಯಾವಾಗಲು ಅದೆ ಕಥೆ ಹೇಳ್ತಾರೇನೊ ಈ ಸಾರಿ 'ತೊಟ್ಟಿಲು ತೂಗಿದ ದೆವ್ವ' ದ ಕಥೆ ಹೇಳ್ತೀನಿ ಅಂದರು. ಮಕ್ಕಳಿಬ್ಬರು 'ಓ ತೊಟ್ಟಿಲು ತೂಗುವ ದೆವ್ವದ ಕಥೆ , ಅಜ್ಜಿ ನಮ್ಮ ರೂಮಲ್ಲಿ ಅಟ್ಟದ ಮೇಲೆ ಇದೆ ತೊಟ್ಟಿಲು’ ಅಂದರು. ಅಜ್ಜಿ 'ಆಯ್ತಪ್ಪ ಗಲಾಟೆ ಮಾಡದೆ ಕೇಳಬೇಕು' ಅಂತ ಪ್ರಾರಂಬಿಸಿದರು. ನಾನು ಮನುವಿನ ಪಕ್ಕ ಕುಳಿತೆ.
......

ಸರಿ ಓದುಗರೆ ... making over you to ... ಅಜ್ಜಿ

 ಆಗ ನಾನು ಚೊಚ್ಚಿಲ ಬಸುರಿ, ಬಾಣಂತನಕ್ಕೆ ಅಂತ ಅಮ್ಮನ ಮನೆಗೆ ಹೋಗಬೇಕು, ಅದೇನೊ ನಮ್ಮ ಅಪ್ಪನಿಗೆ ತಿಪಟೂರಿನ ಹತ್ತಿರ ಹಳ್ಳಿ ಬಜಗೂರು ಅಂತ ಅಲ್ಲಿಗೆ ಹಾಕಿಬಿಟ್ರು. ಸುತ್ತ ಮುತ್ತ ಹತ್ತು ಹಳ್ಳಿ ಸುತ್ತುತ್ತ ಎಂತದೋ ಸರ್ವೆ ಮಾಡುತ್ತಿದ್ದರು.ಬಜಗೂರು ಒಂದು ಚಿಕ್ಕ ಹಳ್ಳಿ, ಅಲ್ಲಿ ಮನೆಯೆಲ್ಲ ಎಲ್ಲಿ ಸಿಗಬೇಕು , ಊರ ಕೊನೆಯಲ್ಲಿ ಕರಿಹೆಂಚಿನ ಮನೆ ಒಂದು ಬಾಡಿಗೆಗೆ ಹಿಡಿದರು. ಸುಮಾರಾಗಿ ಚೆನ್ನಾಗಿಯೆ ಕಟ್ಟಿದ ಮನೆ,ಹಜಾರದಲ್ಲಿ ಮರದ ಮೇಟ್ಟಿಲುಗಳಿದ್ದು ಮೇಲಿನ ಅಂತಸ್ತಿಗೆ ಹೋಗಬಹುದಿತ್ತು. ಆದರೆ ಮೇಲಿನ ಬಾಗವನ್ನು ನಾವು ಉಪಯೋಗಿಸುತ್ತಿದ್ದಿಲ್ಲ. ಮನೆಯ ಒಡೆಯನು ಮೇಲೆಹೋಗಬೇಡಿ ಹಳೇ ಕಾಲದ್ದು ಹೇಗೊ ಏನೊ ಎಂದು ತಿಳಿಸಿದ್ದ. ನಾನು ಏಳನೆ ತಿಂಗಳಿಗೆ ಅಮ್ಮನ ಮನೆಗೆ ಹೋದೆ. ಹೊಸ ಜಾಗ ಅಲ್ಲೆಲ್ಲ ಸುತ್ತಾಡುವುದೆ ಒಂದು ಸುಖ.ಸುತ್ತಲಿನ ಜನ ದೂರ ನಿಂತು ನೋಡುತ್ತಿದ್ದರು ವಿನಹಃ ಹತ್ತಿರ ಬರುತ್ತಿರಲಿಲ್ಲ. ಹಿಂಬಾಗದಲ್ಲಿ ದೊಡ್ಡ ಹಿತ್ತಲಿತ್ತು. 

ಅಟ್ಟದ ಅಂತಸ್ತಲ್ಲಿ  ಏನಿದೆಯೊ ಅಂತ ಕುತೂಹಲ. ಒಮ್ಮೆ ಅಮ್ಮ ಹಿಂದೆ ಬಟ್ಟೆ ಒಗೆಯುತ್ತಿದ್ದಾಗ ತಮ್ಮ ಆನಂದನನ್ನು ಜೊತೆಮಾಡಿಕೊಂಡು ಮೇಲೆ ಹೊರಟೆ. ಸಿಕ್ಕಪಟ್ಟೆ ದೂಳು, ಜೇಡ. ಯಾವ ಕಾಲದ ಮನೆಯೊ ಯಾವ ಪಾಳೆಗಾರನದೂ ತಿಳಿಯದು. ಹೆಂಚಿನಮಾಡಿನಿಂದ ಉದ್ದಕ್ಕೆ ಹಗ್ಗ ಕಟ್ಟಿ ಉದ್ದನೆ ಕತ್ತಿಗಳನ್ನು ತೂಗುಬಿಟ್ಟಿದರು, ನೋಡಿದರೆ ತಿಳಿಯುತ್ತಿತ್ತು ಅದು ಹಳೆಯಕಾಲದ ಯುದ್ದದ ಕತ್ತಿಗಳೆಂದು. ಗೋಡೆಗೆ ಒರಗಿಸಿದಂತೆ ಮರದ ಬೀರುಗಳಿದ್ದು ತೆಗೆದು ನೋಡಿದೆ ಎಂತದೊ ಪತ್ರಗಳು, ಹೊರೆಹೊರೆ ತಾಳೆಗರಿಗಳು ಎಲ್ಲವನ್ನು ಹೆಚ್ಚುಕಡಿಮೆ ಗೆದ್ದಲು ತಿಂದುಹಾಕಿತ್ತು. ನೆಲದಮೇಲೆ ದೊಡ್ಡ ಮರದ ಪೆಟ್ಟಿಗೆಗಳನ್ನು ಜೋಡಿಸಿದ್ದರು , ಅದನ್ನು ಆನಂದನ ಸಹಾಯದಿಂದ ತೆಗೆದೆ, ಒಳಗೆಲ್ಲ ಹಿಂದೆ ಯುದ್ದಕಾಲದಲ್ಲಿ ದರಿಸುತ್ತಿದ್ದ ಕವಚ ಮುಂತಾದ ವಸ್ತ್ರಗಳು. 
   ನಾನು ಒಂದು ನಿಲುವಂಗಿಯನ್ನು ಹಿಡಿದು ನೋಡುತ್ತಿದ್ದೆ, ಆಗಲೇ ವಿಚಿತ್ರ ಅನುಭವವಾಯಿತು, ನಮ್ಮ ಹಿಂದೆ ಯಾರೊ ನಡೆಯುತ್ತ ಹೊರಟು ಮೆಟ್ಟಿಲುಗಳತ್ತ ಸಾಗಿದ ಹೆಜ್ಜೆಯ ಶಬ್ದ ಸ್ವಷ್ಟವಾಗಿ ಕೇಳಿತು, ಅದು ಹೆಣ್ಣಿನ ಹೆಜ್ಜೆಯ ಶಬ್ದಗಳೆ ಏಕೆಂದರೆ  ಹೆಜ್ಜೆಯ ಜೊತೆ ಕೇಳುತ್ತಿದ್ದ ಗೆಜ್ಜೆಯ ಶಬ್ದ ಕಿವಿಯನ್ನು ತುಂಬಿತ್ತು. ತಕ್ಷಣ ಹಿಂದಿರುಗಿ ನೋಡಿದೆ ಯಾರು ಕಾಣುತ್ತಿಲ್ಲ, ಅಮ್ಮ ಆಗಿರಲು ಸಾದ್ಯವಿಲ್ಲ , ಏಕೆಂದರೆ ಅವಳೇನು ಗೆಜ್ಜೆಯನ್ನು ಕಟ್ಟಿಲ್ಲ , ನನಗಂತು ಮೊದಲೆ ಅದರಲ್ಲೆಲ್ಲ ಆಸೆಯಿಲ್ಲ. ಅಲ್ಲದೆ ಅಮ್ಮ ಹಿಂಬಾಗದಲ್ಲಿ ಬಟ್ಟೆ ಒಗೆಯುತ್ತಿರುವ ಶಬ್ದ ಸ್ವಷ್ಟವಾಗಿ ಕೇಳಿಸುತ್ತಿದೆ. ಮನೆಯ ಮುಂದಿನ ಬಾಗಿಲು ನಾನೆ ಹಾಕಿ ಮೇಲೆ ಬಂದಿದ್ದೀನಿ. ಯಾರಿರಬಹುದು? ಎದೆಯಲ್ಲಿ ಸಣ್ಣಗೆ ನಡುಕ ಒಂದರ ಅನುಭವವಾಯಿತು. ಕೈಯಲ್ಲಿ ಹಿಡಿದ ನಿಲುವಂಗಿಯನ್ನು ಪೆಟ್ಟಿಗೆಯಲ್ಲಿ ಎಸೆದು. ನಾನು ಆನಂದನ ಕೈಹಿಡಿದು ನಿದಾನವಾಗಿಯೆ ಕೆಳಗೆ ಬಂದೆ. ಮತ್ತು ಆನಂದನಿಗೆ ನಾವು ಮೇಲೆ ಹೋದ ವಿಷಯ ಅಮ್ಮನಿಗೆ ತಿಳಿಸಬಾರದೆಂದು ಮಾತು ತೆಗೆದುಕೊಂಡೆ.  

ಆದಿನ ರಾತ್ರಿಯೆ ನನಗೆ ಹೆರಿಗೆ ನೋವು ಪ್ರಾರಂಬವಾಯಿತು. ಅಪ್ಪ , ಆನಂದನನ್ನು ಜೊತೆಗೆ ಕರೆದುಕೊಂಡು ಹೋಗಿ, ಪಕ್ಕದ ಹಳ್ಳಿಯಲ್ಲಿ ಯಾರೊ ವಯಸ್ಸಾದ ಸೂಲಗಿತ್ತಿಯನ್ನು ಕರೆತಂದರು. ಯಾವ ತೊಂದರೆಯು ಇಲ್ಲದೆ ನನಗೆ ಹೆಣ್ಣು ಮಗುವಾಯಿತು. ನಾನು ಆ ಗಲಾಟೆಯಲ್ಲಿ ಅಟ್ಟದ ಮೇಲಿನ ವಿಷಯವನ್ನು ಮರೆತುಬಿಟ್ಟೆ. ಹೀಗೆ ಸುಮಾರು ಒಂದು ತಿಂಗಳು ಕಳೆಯಿತೇನೊ, ಒಂದು ದಿನ ವಿಚಿತ್ರವೊಂದು ನಡೆಯಿತು. ಅಮ್ಮ ಬಿಸಿನೀರು ಚೆನ್ನಾಗಿ ಕಾಯಿಸಿ ಮಗುವಿಗೆ ನೀರು ಹಾಕಿದ್ದಳು, ಹಾಲು ಕುಡಿದ ಮಗುವು ಮಲಗಿತ್ತು. ಆಗ ಅಮ್ಮ ಹೇಗು ಮಗು ಮಲಗಿದೆ ನೀನು ನೀರು ಹಾಕಿಕೊಂಡುಬಿಡು ಎನ್ನುತ್ತ ಸಿದ್ದಗೊಳಿಸಿದರು.ಸರಿ ನನಗೂ ಎಣ್ಣೆ ಸ್ನಾನವಾಯಿತು, ಅಮ್ಮ ಹೊರಗೆ ಹೋಗಿ ತಲೆಒರೆಸಲು ಬಟ್ಟೆ ತಂದು ಕೊಟ್ಟಳು, ನಾನು ಸೀರೆ ಸುತ್ತಿಕೊಂಡು ಹೊರಬರಬೇಕು, ಹೊರಗೆ ಮಗು ಎದ್ದು ಅಳುತ್ತಿರುವುದು ಕೇಳಿಸಿತು. ಅಮ್ಮ 'ನೀನು ನಿದಾನವಾಗಿ ಬಾ , ಮಗು ಎಚ್ಚರವಾಯಿತು ಅನ್ನಿಸುತ್ತೆ ನಾನು ನೋಡ್ತೀನಿ' ಎಂದು ಹೊರಗೆ ಹೋದಳು, ಒಂದೆರಡು ಕ್ಷಣವಿರಬಹುದು, ಅಮ್ಮ ಜೋರಾಗಿ ಭಯದಿಂದ ಕಿರುಚಿಕೊಂಡಿದ್ದು ಕೇಳಿಸಿತು.ನಾನು  ಓಡುತ್ತ ಮಗುವಿರುವಡೆಗೆ ಬಂದೆ. 

  ಅಲ್ಲಿ ನೋಡಿದ ದೃಷ್ಯವಾದರೊ ವಿಚಿತ್ರವಾಗಿತ್ತು. ಯಾರು ಇಲ್ಲದಿದ್ದರು,ಮಾಡಿನ ಕೊಂಡಿಯಿಂದ ಇಳಿಬಿದ್ದ ಹಗ್ಗವನ್ನು ಜೋಡಿಸಿ ತೊಟ್ಟಿಲನ್ನು ಯಾರೊ ತೂಗುತ್ತ ಇರುವುದು ಗೊತ್ತಾಗುತ್ತಿತ್ತು. ಆದರೆ ಯಾರು ಕಾಣಿಸುತ್ತಿಲ್ಲ. ಅಮ್ಮ ಹೆದರಿ ನಡುಗುತ್ತ ನಿಂತು ಬಿಟ್ಟಳು. ಇರುವದರಲ್ಲಿ ನನಗೆ ದೈರ್ಯ ಜಾಸ್ತಿ ಅನ್ನಿಸುತ್ತೆ, ಹಾಗಾಗಿ ನಿದಾನವಾಗಿ ತೊಟ್ಟಿಲ ಹತ್ತಿರ ಹೋದೆ. ತೊಟ್ಟಿಲನ್ನು ತೂಗುತ್ತಿದ್ದ ಅದೃಷ್ಯ ವ್ಯಕ್ತಿ ತೂಗುವದನ್ನು ಬಿಟ್ಟು ನಿದಾನವಾಗಿ ದೂರಸರಿದು ಹೋದರು, ಜೊತೆಯಲ್ಲಿ ಗೆಜ್ಜೆ ಹಾಗು ಹೆಜ್ಜೆಯ ಶಬ್ದ. ಖಂಡೀತವಾಗಿಯು ಅದೇ ,ಆ ದಿನ ಮಹಡಿಯ ಮೇಲೆ ಕೇಳಿದ ಹೆಜ್ಜೆಯ ಶಬ್ದವೆ. ನಾನು ಮಗುವನ್ನು ಎತ್ತಿಕೊಂಡು ಈಚೆ ಬಂದೆ. 
  ಸರಿ ಅಪ್ಪ ಮನೆಗೆ ಬರುವವರೆಗೂ ಅಮ್ಮನಿಗೆ ಪರದಾಟ. ನನಗೂ , ತಮ್ಮ ಆನಂದನಿಗೂ ಭಯವೆ ಆದರೆ ಹಿಂದೊಮ್ಮೆ ಇದೇ ಅನುಭವವಾಗಿದ್ದಿರಿಂದಲೊ ಏನು ಭಯಕ್ಕಿಂತ ಅಮ್ಮನ ಪರದಾಟ ಕಂಡಾಗ ಎಂತದೊ ನಗು. ವಿಷಯ ತಿಳಿದ ಅಪ್ಪನು ಸ್ವಲ್ಪ ಹೆದರಿದಂತೆ ಕಂಡರು, ನಮಗೆಲ್ಲ ದೈರ್ಯ ಹೇಳುತ್ತ, ತಾವೆ ಕುಳಿತು ಆಂಜನೇಯನಿಗೆ ನರಸಿಂಹನಿಗೆ ಅಂತ ತಮಗೆ ತಿಳಿದ ಪೂಜೆ ಮಾಡಿ ಇನ್ನು ಆ ದೆವ್ವ ಬರಲ್ಲ ಅಂತ ದೈರ್ಯ ಹೇಳಿದರು. 
 ಆ ದೆವ್ವವೇನು ಅಪ್ಪನ ಪೂಜೆಗೆ ಹೆದರಿದಂತೆ ಕಾಣಲಿಲ್ಲ. ಪುನಃ ಒಂದೆರಡು ಬಾರಿ ಅದೆ ಅನುಭವ, ನಾವು ದೂರ ಹೋದಾಗ ಮಗುವೇನಾದರು ಅತ್ತರೆ ಸಾಕು ನಮಗಿಂತ ಮೊದಲೆ ಓಡಿಹೋಗಿ ಆ ದೆವ್ವ ತೊಟ್ಟಿಲು ತೂಗುತ್ತಿತ್ತು ನಾವೇನಾದರು ಹತ್ತಿರ ಹೋದರೆ ಹಗ್ಗ ಬಿಟ್ಟು ಹೋಗುವುದು ಗೊತ್ತಾಗುತ್ತಿತ್ತು. ಕ್ರಮೇಣ ನಮಗೂ ಒಂದು ದೈರ್ಯ ಬಂದಿತು. ಅದು ಮಗುವನ್ನು ತೂಗುವುದು ಬಿಟ್ಟು ಇನ್ನೇನು ಮಾಡುವದಿಲ್ಲ ಅಂತ. ನಾನಂತು ನೋಡೋಣ ಅಂತ ಒಮ್ಮೆ ಆ ದೆವ್ವಕ್ಕೆ ಕೇಳುವಂತೆ ಅಮ್ಮನಿಗೆ ಹೇಳಿದೆ 'ಸ್ವಲ್ಪ ಮೆತ್ತಗೆ ತೂಗಿದರೆ ಆ ದೆವ್ವಕ್ಕೆ ತೂಗು ಅಂತ ಬಿಟ್ಟು ಬಿಡಬಹುದು' ಅಂತ. ಆ ಮಾತು ಕೆಲಸ ಮಾಡಿತು. ಈಗ ನಾವಿಲ್ಲದಿದ್ದರೆ ಅದು ಮಗುವಿನ ತೊಟ್ಟಿಲನ್ನು ತೂಗಿಕೊಳ್ಳುತ್ತಿತ್ತು. ಮಗುವು ಅಷ್ಟೆ ಅದೇಕೊ ದೆವ್ವ ತೂಗುವುದಕ್ಕೆ ಹೊಂದಿಕೊಂಡಿದ್ದು ಒಮ್ಮೊಮ್ಮೆ ನಾವು ತೂಗಿದರೆ ಅಳುತ್ತಿತ್ತು.

 ಎಷ್ಟಾದರು ದೆವ್ವ ದೆವ್ವವೆ ಅದರ ಬುದ್ದಿಯನ್ನು ತೋರಿಸಿಬಿಟ್ಟಿತು. ಹೀಗೆ ಮಳೆಗಾಲ ಪ್ರಾರಂಬವಾಯಿತು. ಆಗೆಲ್ಲ ಕರೆಂಟ್ ದೀಪವಿಲ್ಲ ಸೀಮೆ ಎಣ್ಣೆ ಬುಡ್ಡಿಯಲ್ಲಿ ಕಾಲ ಕಳೆಯಬೇಕು. ಒಂದು ದಿನ ಸಂಜೆ ಪ್ರಾರಂಬವಾದ ಮಳೆ ರಾತ್ರಿಯೆಲ್ಲ ಸುರಿಯುತ್ತಲೆ ಇತ್ತು. ನನಗೆ ಸರಿಯಾಗಿ ನಿದ್ರೆಯಿಲ್ಲ. ಬರೀ ಬಿಡದೆ ಸುರಿಯುತ್ತಿರುವ ಶಬ್ದ. ಕಣ್ಣು ಮುಚ್ಚಿದ್ದೆ, ಸರಿ ರಾತ್ರಿಯಲ್ಲಿ ಮಗು ಅಳುತ್ತಿರುವ ಶಬ್ದ ಕೇಳುತಿತ್ತು. ಎಲ್ಲೋ ದೂರದಲ್ಲಿ ಅಳುತ್ತಿರುವಂತೆ. ಕಣ್ಣು ಬಿಟ್ಟು ಪಕ್ಕದಲ್ಲಿ ಕೈ ಆಡಿಸಿದೆ, ಮಗುವಿಲ್ಲ!. ಎದೆ ದಸಕ್ ಎಂದಿತು. ಜೋರಾಗಿ 'ಅಮ್ಮ ಅಮ್ಮ' ಅಂತ ಕೂಗಿದೆ. ಸೀಮೆಎಣ್ಣೆ ಲಾಟಿನ್ ದೊಡ್ಡದು ಮಾಡಿ ಅಪ್ಪ ಅಮ್ಮ ರೂಮಿನೊಳಗೆ ಓಡಿಬಂದರು. 'ಅಮ್ಮ ಪಕ್ಕದಲ್ಲಿ ಮಗುವಿಲ್ಲ' ಎಂದೆ ಗಾಬರಿಯಿಂದ ಪಕ್ಕಕ್ಕೆ ನೋಡಿದರೆ ತೊಟ್ಟಿಲು ಇಲ್ಲ!. ಮನೆಯ ಹೊರಗೆ ಮಗು ಜೋರಾಗಿ ಅಳುತ್ತಿದೆ! . ಅರ್ಥವಾಗದೆ ಮೂವರು ತಕ್ಷಣ ಹೊರಗೆ ಓಡಿದೆವು.

 ಲಾಟಿನ್ ಬೆಳಕಲ್ಲಿ ಹೊರಗಿನ ದೃಷ್ಯ ಹೆದರಿಕೆ ಹುಟ್ಟಿಸುವಂತಿತ್ತು, ಮನೆಯ ಮೇಲಿನಿಂದ ಮಳೆಯ ನೀರು ಬರಲು ಪೈಪಿನಂತದು ಜೋಡಿಸಿದ್ದರು. ಅದನ್ನು ಹಳ್ಳಿಯಲ್ಲಿ ದೋಣಿಬಾಯಿ ಅನ್ನುತ್ತಾರೆ, ಜೋರು ಮಳೆಗೆ ಪೂರ್ಣ ರಭಸದಲ್ಲಿ ನೀರು ಸುರಿಯುತ್ತಿದೆ, ಮಗು ತೊಟ್ಟಿಲು ಸಮೇತ ಆ ದೋಣಿಬಾಯಿಯ ಕೆಳಗಿದೆ , ಮಳೆಯ ನೀರು ಮಗುವಿನ ಮೇಲೆ ಜೋರಾಗಿ ಬೀಳುತ್ತಿದೆ!. ಎಚ್ಚೆತ್ತ ಅಪ್ಪ ಓಡಿ ಹೋಗಿ ತೊಟ್ಟಿಲನು ದೂರ ಎಳೆದರು, ನಾನು ಹಿಂದೆಯೆ ಹೋಗಿ ಮಗುವನ್ನು ಎತ್ತಿಕೊಂಡೆ, ಅಳುತ್ತಿದ್ದ ಮಗು ಚಳಿಗೆ ಗಡ ಗಡ ನಡುಗುತ್ತಿತ್ತು. ಅಳುವ ಅದರ ದ್ವನಿಯೂ ನಡುಗುತ್ತಿತ್ತು.
   
ಮಗುವಿನೊಡನೆ ಒಳಗೆ ಬಂದು ಅದರ ಬಟ್ಟೆಯನ್ನೆಲ್ಲ ತೆಗೆದು ಒರೆಸಿದೆ. ನಂತರ ಮನೆಯಲ್ಲಿದ್ದ ನೀಲಗಿರಿ ಎಣ್ಣೆಯನ್ನು ಎದೆಗೆ ಮೈಗೆಲ್ಲ ಹಚ್ಚಿ ಉಜ್ಜಿದೆ. ಅಮ್ಮನು ತಕ್ಷಣ ಕೆಂಡ ಮಾಡಿ ಸ್ವಲ್ಪ ಸಾಂಭ್ರಾಣಿ ಹೊಗೆ ಹಾಕಿದಳು, ಹಾಗು ಹೀಗು ಮಗು ನಡುಗುವುದು ನಿಂತು ಹಾಲು ಕುಡಿದು ಮತ್ತೆ ಮಲಗಿತು.ಈಗ ನನಗೆ ಹೊಳೆಯಿತು ದೆವ್ವ ಮಗುವಿಗೆ ಸ್ನಾನ ಮಾಡಿಸುತ್ತ ಇತ್ತು.

 ನನಗಂತೂ ತುಂಬಾ ಕೋಪ ಬಂದಿತ್ತು. ಹಾಳು ದೆವ್ವವನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದೆ. ಅಮ್ಮ ಹೆದರಿ ಬೇಡ ಸುಮ್ಮನಿರೆ ಒಂದು ಹೋಗಿ ಮತ್ತೊಂದು ಆದೀತು ಅಂತಿದ್ದಳು. ನನಗಂತು ಹಾಳು ದೆವ್ವದ ಮೇಲೆ ಸಿಟ್ಟು, ನಂಬಿದರೆ ಹೀಗಾ ಮಾಡೋದು? ಅಂತ. ಬೆಳಗ್ಗೆವರೆಗೂ ಎಲ್ಲರು ಎದ್ದು ಕುಳಿತಿದ್ದೆವು. 
  ಬೆಳಗ್ಗೆ ಯಥಾಪ್ರಕಾರ ಅಪ್ಪ ಕೆಲಸಕ್ಕೆ ಹೊರಟರು ನನಗೆ ಒಂದೇ ಯೋಚನೆ , ಹಾಳು ದೆವ್ವದ ಕೈಯಲ್ಲಿ ಹೇಗೆ ಏಗುವುದು ಅಂತ. ಸಂಜೆ ಮನೆಗೆ ಬಂದ ಅಪ್ಪ ಒಳ್ಳೆ ಸುದ್ದಿ ತಿಳಿಸಿದರು. ಅವರಿಗೆ ಅಲ್ಲಿಯ ಕೆಲಸ ಮುಗಿದಿರುವದರಿಂದ ಪುನಃ ತುಮಕೂರಿಗೆ ವರ್ಗ ಮಾಡಲಾಗಿತ್ತು. ನನಗೂ ಸಂತೋಷವಾಯಿತು ಹೇಗೊ ಅಲ್ಲಿ ನನ್ನವರು ಇದ್ದಾರೆ ಅಂತ.
 ಮುಂದೆ ಒಂದೆರಡು ದಿನದಲ್ಲಿ ಅ ಊರುಬಿಟ್ಟು ತುಮಕೂರಿಗೆ ಬಂದೆವು, ಪುನಃ ಅಲ್ಲಿಗೆ ಹೋಗುವ ಅವಕಾಶವಾಗಲೆ ಇಲ್ಲ. 
-----
ಅನಿರೀಕ್ಷಿತವಾಗಿ ಕಥೆ ನಿಂತದ್ದು ನನಗೆ ಒಂದು ತರಹವಾಯಿತು, ಮಕ್ಕಳು ಎಚ್ಚೆತ್ತರು
'ಅಜ್ಜಿ ನೀನು ಹೇಳುವದೆಲ್ಲ ಬರೀ ರೀಲು' ಅಂತ ಕೈಯಲ್ಲಿ ಸುತ್ತುತ್ತ ತೋರಿಸಿದರು
ಅಜ್ಜಿ ಆಶ್ಚರ್ಯದಿಂದ 'ಏಕೊ ಮಕ್ಕಳ ಹಾಗಂತೀರಿ' ಎಂದರು.
ಅದಕ್ಕವರು 'ನೀನು ಏನು ಹೇಳಿದ್ದು , ಹೆಣ್ಣು ಮಗುವೆಂದೆ ಆದರೆ ನಿನಗೆ ಹೆಣ್ಣು ಮಕ್ಕಳೆ ಇಲ್ಲ, ನಮ್ಮ ತಾತ ಗಂಡು ಮಗನಲ್ಲವಾ? "
ಅಂತ ಲಾ ಪಾಯಿಂಟ್ ಹಾಕಿದರು.
"ಅಯ್ಯೊ ಪೆದ್ದರೆ, ಅಮೇರಿಕದಿಂದ ಪ್ರತಿ ವಾರ ನಿನಗೆ ಅಕ್ಷಯ್ ಪೋನ್ ಮಾಡಲ್ವ , ಅವನು ನನ್ನ ಮಗಳು ರತ್ನಳ ಮೊಮ್ಮಗನೇ ಅಲ್ವ" ಅಂದರು.
ಮಕ್ಕಳು ಹೌದಾ? ಅಂತ ಬಾಯಿ ತೆಗೆದು 'ಅಪ್ಪ ನಮಗೂ ದೆವ್ವದತೊಟ್ಟಿಲು ತೆಗೆಸಿಕೊಡು' ಅಂತ ಕಾಡಲು ಶುರುವಿಟ್ಟರು.
ನನ್ನತ್ತ ತಿರುಗಿದ ಅಜ್ಜಿ "ಏನಪ್ಪ ಇದನ್ನು ನೀನು ಅದೆಲ್ಲಿಗೊ ಬರೆದು ಹಾಕ್ತೀಯ" ಅಂದರು 
ನಾನು ನಗುತ್ತ ’ಹೌದಜ್ಜಿ’ ಎನ್ನುತ್ತ ಹೊರಟೆ. ಅವರು 'ನನ್ನ ಹೆಸರನ್ನು ಹಾಕೋ ಮರಿ' ಅಂದರು. 
ಕಥೆ ಕೀಲಿಮಣೆಯಲ್ಲಿ ಕುಟ್ಟುವಾಗ ಹೊಳೆಯಿತು ಅಯ್ಯೊ ಅಜ್ಜಿಯ ಹೆಸರೆ ನನಗೆ ಗೊತ್ತಿಲ್ಲವಲ್ಲ !

4 comments:

  1. niv nija devvada kathena bahala chennagi baritira, edella nija a ajji elidda, nangantu devva andre bhaya adre, devvada movies,
    stories andre tumba esta thank u

    ReplyDelete
  2. ಬಹಳ ಚೆನ್ನಾಗಿದೆ ...

    ReplyDelete

enter your comments please