Saturday, January 25, 2014

ಸಾಗರ ಯಾತ್ರೆ - ಬೆಂಗಳೂರಿನಿಂದ ಸಾಗರಕ್ಕೆ

ಸಾಗರ ಯಾತ್ರೆ- ಬೆಂಗಳೂರಿನಿಂದ ಸಾಗರಕ್ಕೆ
ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ ಮೂರು ದಿನ ಬೆಂಗಳೂರಿನಿಂದ ಹೊರಗೆ ಹೋಗುವ ಕಾರ್ಯಕ್ರಮ. ಮೊದಲಿಗೆ ಮಗಳು ಹೇಳಿದ್ದು
"ಅಪ್ಪ ಕೇರಳ ಕಡೆ ಸೈಟ್ ಸೀಯಿಂಗ್ ಚೆನ್ನಾಗಿರುತ್ತೆ ಅನ್ನುತ್ತಾರೆ ಗೆಳತಿಯರೆಲ್ಲ,  ಅಲ್ಲಿಗೆ ಹೋಗೋಣ" ಎಂದು.

ಅಲ್ಲಿಗೆಲ್ಲ ಮೊದಲೇ ಪ್ರೋಗ್ರಾಂ ಹಾಕದೇ ಹೋಗುವದಾದರು ಹೇಗೆ?.
ಹೀಗೆ ಆಫೀಸಿನಲ್ಲಿ ವಿಚಾರಿಸುತ್ತಿದ್ದಾಗ ಗೆಳೆಯರೊಬ್ಬರು ಅಂದರು
"ಕೇರಳ ಏಕೆ ನಮ್ಮ ಊರಿನ ಕಡೆ ಹೋಗಿ ಬನ್ನಿ ಕೇರಳಕ್ಕಿಂತ ಚೆನ್ನಾಗಿಯೆ ಇರುತ್ತದೆ, ಅಲ್ಲದೆ ಈಗ ಪ್ರವಾಸಿಗರು ಕಡಿಮೆ. ಬೇಕಾದಲ್ಲಿ ನಾನು ಹೋಟೆಲ್‌ನಲ್ಲಿ ರೂಮು,ಹಾಗು ವಾಹನದ ಏರ್ಪಾಡುಮಾಡಿಕೊಡುವೆ" ಎಂದರು.

ಅವರು ಶಿವಮೊಗ್ಗದ ಸಾಗರದ ಕಡೆಯವರು. ಅಲ್ಲಿ ಸುತ್ತಮುತ್ತ ನೋಡಬಹುದಾದ ಸ್ಥಳಗಳು ಯಾವುವು ಇವೆ ಎನ್ನುವ ಅಂದಾಜು ಇರದೆ ಕೇಳಿದಾಗ , ಕೆಲವು ಸ್ಥಳಗಳ ಲಿಸ್ಟ್ ಕೊಟ್ಟರು, ಕೆಳದಿ, ಇಕ್ಕೇರಿ, ಬನವಾಸಿ, ಜೋಗ್, ಲಿಂಗನಮಕ್ಕಿ, ಪಕ್ಷಿದಾಮ, ಸೋಂದೇ ಮಠ, ಸಿಗಂದೂರು ಇತ್ಯಾದಿ.

ನಾನು ಶಿವಮೊಗ್ಗ ಕಡೆ ಹೋದವನಲ್ಲ. ಹಾಗಾಗಿ ಹೋಗಬಹುದು ಅನ್ನಿಸಿತು. ಮನೆಯಲ್ಲಿ ಹೇಳಿನೋಡಿದೆ, ಅಲ್ಲಿಗೆ ಹೋಗುವುದು ಎನ್ನುವ ಜೊತೆಗೆ ತಮ್ಮನ ಸಂಸಾರ ಜೊತೆಗೆ ಬರುವರೆಂಬ ನಿರ್ಧಾರವು ಆಯಿತು.

ಸರಿ ಅಂದೆ ಸಾಗರಕ್ಕೆ ಟಿಕೆಟ್ ಬುಕ್ ಮಾಡಿದೆ, ಸಂಜೆಯ ವೇಳೆಗೆ ಸಾಗರದ ವರದಶ್ರೀ ಲಾದ್ಜ್‌ನಲ್ಲಿ ರೂಮು ಸಹ ಬುಕ್ ಆಗಿರುವದಾಗಿ  ನನ್ನ ಸ್ನೇಹಿತರು ತಿಳಿಸಿದರು.

ಅಷ್ಟರಲ್ಲಿ ಮತ್ತೊಬ್ಬ ತಮ್ಮ ಫೋನ್ ಮಾಡಿದ್ದ. ನಾನು ಹೊರಟಿರುವುದು ತಿಳಿದು ಅವನು  ಸಹ ಬರುವದಾಗಿ ತಿಳಿಸಿದ.,ಈಗ ಮೊದಲಿನಿಂದ ಪ್ರಾರಂಬ, ಹೋಟೆಲ್ ನಲ್ಲಿ ಎರಡೇ ರೂಮು ಸಿಕ್ಕಿದ್ದು ಮತ್ತೊಂದು ರೂಮಿಗೆ ಬೇಡಿಕೆ ಸಲ್ಲಿಸಿದೆ, ಆದರೆ ತಕ್ಷಣಕ್ಕೆ ಕನ್‌ಫರ್ಮ್ ಆಗದೆ ಸ್ವಲ್ಪ ಗಡಿಬಿಡಿ ಆಯಿತು. ಅಲ್ಲದೆ ಅರು ಜನರಿಗಾದರೆ ವಾಹನದ ಏರ್ಪಾಡು ಸುಲುಭ ಈಗ ಮತ್ತೆ ಮೂರು ಜನ ಒಂಬತ್ತು ಜನರಿಗೆ ಓಡಿಯಾಡಲು ಅಲ್ಲಿ ವಾಹನದ ಅನುಕೂಲ ಹೇಗೆ ಆಗುವುದು ಎನ್ನುವ ಸ್ವಲ್ಪ ಆತಂಕ.
ಜನವರಿ ಹದಿನೈದರ ರಾತ್ರಿ ಮೆಜಿಸ್ಟಿಕ್ ಸೇರಿದಾಗ ಎಲ್ಲವೂ ಸ್ವಲ್ಪ ಗಡಿಬಿಡಿ. ಅಲ್ಲಿ ಮೆಟ್ರೋಗಾಗಿ ಅಗೆದು ಬಸ್‌ನಿಲ್ದಾಣವನ್ನೆ ಅಸ್ತವ್ಯಸ್ತಗೊಳಿಸಿಬಿಟ್ಟಿದ್ದಾರೆ. ಯಾವ ಬಸ್ಸುಗಳು ಎಲ್ಲಿ ನಿಲ್ಲುವುವೊ, ತಲುಪುವುದು ತಡವಾಗುವುದೊ ಎನ್ನುವ ಆತಂಕ. ಎಲ್ಲ ಆತಂಕ ಕಳೆದು ಸಂಕ್ರಾತಿ ಹಬ್ಬದ ಆ ರಾತ್ರಿ ಬಸ್ ಬೆಂಗಳೂರು ನಿಲ್ದಾಣ ಬಿಟ್ಟಾಗ ಎಲ್ಲರಿಗು ನಿರಾಳ.

ಹದಿನಾರರ ಬೆಳಗ್ಗೆ  ಇನ್ನೂ ಕತ್ತಲಿರುವಾಗಲೆ ಬಸ್ ಸಾಗರವನ್ನು ಪ್ರವೇಶಿಸಿತು. ಮೊದಲು ಸಿಗುವ ಬಸ್ ನಿಲುಗಡೆಯಲ್ಲಿ ಇಳಿಯಲು ಹೇಳಿದ್ದರು ಸ್ನೇಹಿತರು. ಕಂಡೆಕ್ಟರ್ ಬಳಿ ಅದನ್ನು ತಿಳಿಸಿ,  ಪ್ರವೇಟ್ ಬಸ್ ನಿಲ್ದಾಣದ ಹತ್ತಿರ ಇಳಿದು, ನಾವು ರೂಮ್ ಬುಕ್ ಮಾಡಿದ್ದ ಹೋಟೆಲ್, 'ವರದಶ್ರೀ' ಎಲ್ಲಿ ಎಂದು ಕೇಳಿದಾಗ, ಬಸ್ಸು ಬಂದ ದಾರಿಯಲ್ಲಿಯೆ ಮತ್ತೆ ಒಂದೂವರೆ ಕಿ.ಮಿ. ಹಿಂದಕ್ಕೆ ನಡೆಯಬೇಕೆಂದು, ನಾವು ಮುಂದೆ ಬಂದು ಇಳಿದಿರುವದಾಗಿ ತಿಳಿಯಿತು.

ಮೊದಲಿಗೆ ಎಲ್ಲರಿಗೂ ಬೇಸರ ನಡೆಯಬೇಕೆ ಎಂದು. ಆದರೆ ಬೆಳಗಿನ ಆ ಚುಮುಚುಮು ಚಳಿಯಲ್ಲಿ, ಬೀಳುತ್ತಿರುವ ಮಂಜಿನಲ್ಲಿ ನಡೆಯುತ್ತ ಹೊರಟಂತೆ ಉತ್ಸಾಹ ತಾನಾಗಿಯೆ ಉಂಟಾಯಿತು. ಬಸ್ಸಿನಲ್ಲಿ ಮಾಡುತ್ತಿದ್ದ ನಿದ್ದೆಯ ಮೊಬ್ಬು ಕರಗಿತ್ತು. ರಸ್ತೆಯ ಪಕ್ಕದಲ್ಲಿದ್ದ ಒಂದು ಚಿಕ್ಕ ಹೋಟೆಲ್ ನಲ್ಲಿ ಕಾಫಿ ಕುಡಿದು ಮುಂದುವರೆದಂತೆ, ಊರಹೊರಗಿನ ಕೆರೆ ಸಹ ಸಿಕ್ಕಿತು. ಅದರಲ್ಲಿ ಅರಳಿದ್ದ ತಾವರೆ, ನಸುಕತ್ತಲಿನಲ್ಲಿಯೂ ಕಾಣಿಸುತ್ತಿತ್ತು, ಬೀಳುತ್ತಿದ್ದ ಮಂಜು ಹಿತಕರವಾಗಿತ್ತು. ಬೆಂಗಳೂರಿನಿಂದ ಬಂದವರಿಗೆ ಈ ವಾತವರಣ ಖಂಡಿತ ಉತ್ಸಾಹ ಮೂಡಿಸಿತ್ತು.

ಕಡೇಗೊಮ್ಮೆ ಹೋಟೆಲ್ ತಲುಪಿದಾಗ, ಎಲ್ಲರಿಗೂ ಆನಂದ. ರಿಸಿಪ್ಷನ್ ನಲ್ಲಿ ನಮ್ಮ ರೂಮು ಬಗ್ಗೆ ವಿಚಾರಿಸಿ, ಅಡ್ವಾನ್ಸ್ ಕೊಡಲು ಮುಂದಾದರೆ ಒಂದು ಆಶ್ಚರ್ಯಕಾದಿತ್ತು, ನಮ್ಮ ಪರವಾಗಿ ಅಶೋಕ ಎನ್ನುವರು ಅಡ್ವಾನ್ಸ್ ನೀಡಿ ರೂಮ್ ಬುಕ್ ಮಾಡಿದ್ದರು. ನನಗೆ ತಿಳಿಯದ ಹೆಸರದು, ಕಡೆಗೆ ಅರ್ಥವಾಯಿತು, ಬೆಂಗಳೂರಿನ ನನ್ನ ಸ್ನೇಹಿತರಾದ ಜಯರಾಮ್ ರವರ ತಮ್ಮ  ಅಶೋಕ್ ರವರು ಎಂದು. ಎಲ್ಲರೂ ಸಿದ್ದವಾಗುವ ಹೊತ್ತಿಗೆ ರಿಸಿಪ್ಷನ್ ನಲ್ಲಿದ್ದವರನ್ನು ವಿಚಾರಿಸಿದೆವು ಹೊರಗೆ ಸುತ್ತಾಡಲು ವಾಹನದ ಏರ್ಪಾಡು ಆಗುವುದೇ ಎಂದು. ಆಗ ಅವರೇ ಮಾತನಾಡಿ ಕರೆಸಿದ ಡ್ರೈವರ್ ಪ್ರಮೋದ್ ಎಂಬವರು.

ಮೂರು ದಿನದ ಸುತ್ತಾಟಕ್ಕೆ ಅನುಕೂಲವಾಗುವಂತ ಸ್ಥಳವನ್ನು  ಆಯ್ಕೇ ಮಾಡಿಕೊಟ್ಟವರು ಅದೇ ಪ್ರಮೋದ್. ನಮ್ಮ ಲಿಸ್ಟ್ ನಲ್ಲಿದ್ದ ಸ್ಥಳಗಳಿಗಿಂತ ಎರಡು ಪಟ್ಟು ಜಾಸ್ತಿ, ಹಾಗು ಹೊಸ ಜಾಗ .

ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂಧೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ .
ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ.

2 comments:

  1. ಶಿವಮೊಗ್ಗೆ ಸಾಗರದ ಸುತ್ತಮುತ್ತ ಪ್ರವಾಸ ಕಥನ. ಮೊದಲ ಕಂತು.

    ReplyDelete

enter your comments please