Thursday, March 20, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧) ಮಹಾಲಕ್ಷಮ್ಮನವರು ಆತಂಕದಿಂದ ಕಾದಿದ್ದರು. ತನ್ನ ಸ್ನೇಹಿತರ ಮನೆಗೆ ಎಂದು ಹೋದ ವೆಂಕಟೇಶಯ್ಯನವರು ರಾತ್ರಿ ಒಂಬತ್ತಾದರು ಮನೆಗೆ ಬಂದಿರಲಿಲ್ಲ. ಕಡೆಗೊಮ್ಮೆ ಬಾಗಿಲಲ್ಲಿ ಅವರ ಮುಖ ಕಾಣಿಸಿದಾಗ ನೆಮ್ಮದಿ, ಸದ್ಯ ಬಂದರಲ್ಲ ಎಂದು.

"ಅದೇನು ಇಷ್ಟು ಹೊತ್ತಾಯಿತು, ನಿಮ್ಮ ಗೆಳೆಯರು ಸಿಗಲಿಲ್ಲವೇ"  

ತನ್ನ ಪತಿ ಒಳಗೆ ಬರುವಾಗಲೆ.ಆಕೆ ಪ್ರಶ್ನಿಸಿದರು

"ಸಿಗದೇ ಏನು ಸಿಕ್ಕಿದ್ದ, ಹೀಗೆ ಏನೊ ಮಾತಿಗೆ ಮಾತು, ಹೊರಡುವುದು ತಡವಾಯಿತು, ಏಕೊ ಅವನಿಗೆ ಕೊಟ್ಟ ಹಣ ಹಿಂದೆ ಬರುವಂತಿಲ್ಲ ಬಿಡು, ಸುಮ್ಮನೆ ಮಾತನಾಡಿ ಕೂಗಾಡಿದ್ದೆ ಬಂತು" ಎಂದರು ನಿರಾಶೆಯಿಂದ.

"ಏಕೆ, ಕೂಗಾಡಲು ಏಕೆ ಹೋದಿರಿ, ಒಳ್ಳೆಯ ಮಾತಿನಲ್ಲಿಯೆ ಕೇಳಬೇಕಾಗಿತ್ತು, ಅವರಿಗೆ ಏನು ಸಂದರ್ಭವೋ" ಎಂದರು

"ಒಳ್ಳೆಯ ಮಾತೆ ಆಡಬೇಕು ಅಂತ ಹೊರಟಿದ್ದೆ, ಆದರೆ ಅವನು ಹಿಂದಕ್ಕೆ ಕೊಡುವ ಮಾತನಾಡದೆ, ಏನೊ ಕೈಎತ್ತಿದವನಂತೆ, ಮಾತನಾಡಿದ, ನನ್ನ ಕೈಲಾದಾಗ ಕೊಡುತ್ತೇನೆ, ಈಗಿರುವ ಸಂದರ್ಭದಲ್ಲಿ ಯಾವಾಗ ಕೊಡುತ್ತೇನೆ ಎಂದು ಆಶ್ವಾಸನೆ ಸಹಿತ ಕೊಡಕ್ಕಾಗಲ್ಲ, ಇಂತಹ ದಿನವೇ ಕೊಡುತ್ತೇನೆ ಅಂತ ಹೇಳಲಾರೆ, ನನಗೆ ಹಣದ ಅನುಕೂಲವಾದಾಗ ಕೊಡುತ್ತೇನೆ ಎನ್ನುವ ಮಾತನಾಡಿದ. ನನಗೆ ರೇಗಿ ಹೋಯಿತು. ನನ್ನ ಸ್ನೇಹಿತನೇ ಇರಬಹುದು, ಹಣ ಪಡೆಯುವಾಗ ಎಂತಹ ಸವಿಯಾದ ಮಾತುಗಳನ್ನು ಆಡಿದ್ದ. ಈಗ ಈ ರೀತಿ ಆಡಿದರೆ, ಕೂಗಾಡದೆ ಏನು ಮಾಡಲಿ ಹೇಳು"  ವೆಂಕಟೇಶಯ್ಯ ಎಂದರು ಅಸಹಾಯಕತೆಯಿಂದ.

"ಸರಿ ಕೂಗಾಡಿದರೇನಾಯಿತು, ನಿಮ್ಮ ಹಣ ಹಿಂದಕ್ಕೆ ಬರದಲ್ಲ, ಒಮ್ಮೆ ಮುಖ ಕೆಡಿಸಿಕೊಂಡರೆ, ಮತ್ತೆ ಹಣ ಹೋದ ಹಾಗೆ. ಕಡೆಗೆ ಏನಾಯಿತು?" ಎಂದರೂ ಆಕೆ ಆತಂಕದಿಂದ

"ಏನಾಗುತ್ತೆ, ಇಬ್ಬರೂ ಕೂಗಾಡಿದೆವು, ನಂತರ ಅವನೇ ಕೆಳಗೆ ಬಂದ, ಕಣ್ಣೀರು ಹಾಕಿದ, ಏನು ಮಾಡುವುದು, ಮನೆ ಕಟ್ಟಲು ಹೋಗಿ ಎಲ್ಲವನ್ನೂ ಮೈಮೇಲೆ ಎಳೆದುಕೊಂಡೆ.  ಹೇಗಾದರು ಸರಿ ನಿನ್ನ ಹಣ ಹಿಂದೆ ಕೊಡುತ್ತೇನೆ, ಸ್ವಲ್ಪ ಸಮಯ ಕೊಡು ಅಂತ ಗೋಳಾಡಿದ. ಎಷ್ಟಾದರು ಬಾಲ್ಯ ಗೆಳೆಯನ್ನಲ್ಲವೆ. ಅವನೂ ಕಷ್ಟದಲ್ಲಿದ್ದಾನೆ, ಆದರೆ ಅವನು ಆಡಿದ ಒರಟು ಮಾತಿನಿಂದ ನನ್ನ ಸಹನೆ ಕಳೆದಿತ್ತು ಅಷ್ಟೆ. ಕಡೆಗೊಮ್ಮೆ ,  ಸರಿಯಪ್ಪ, ಹೇಗಾದರು ಹಿಂದೆ ಕೊಡು, ನನಗೂ ಅದನ್ನು ಬಿಟ್ಟು ಬಿಡುವಷ್ಟು ಶ್ರೀಮಂತಿಕೆ ಇಲ್ಲ. ಈಗ ಅದರ ಅವಶ್ಯಕತೆ ಇದೆ ಎಂದು ಒಳ್ಳೆಯ ಮಾತು ಹೇಳಿ ಹೊರಟುಬಿಟ್ಟೆ. ಕಡೆಗೆ ಬಸ್ ಸ್ಟಾಂಡಿನ ಹತ್ತಿರದವರೆಗೂ ಬಂದು ಬಸ್ಸು ಹತ್ತಿಸಿದ. ಬಸ್ ಸ್ಟಾಂಡಿನ ಹತ್ತಿರವೂ ಕುಳಿತು ತನ್ನ ಪರಿಸ್ಥಿತಿಗಾಗಿ ಕಣ್ಣೀರು ಹಾಕಿದ. ನನ್ನಲ್ಲಿ ಕ್ಷಮೇ ಬೇಡಿದ. ನನಗೂ ಅಯ್ಯೋ ಅನ್ನಿಸಿ, ನಿನಗೆ ಯಾವಾಗ ಅನುಕೂಲ ಅನ್ನಿಸುತ್ತೋ ಅವಾಗ ಕೊಡಪ್ಪ. ಎಂದು ಹೇಳಿ ಬಂದು ಬಿಟ್ಟೆ. ಅವನೇನು ನನಗೆ ಮೋಸ ಮಾಡುವ ಮನಸಿನಲ್ಲಿ ಇಲ್ಲ, ಏನೋ ಅನಾನುಕೂಲ ಅನ್ನಿಸುತ್ತೆ. ಅದಾಗೆ ಬಂದರೆ ಬರಲಿ ಇಲ್ಲದಿದ್ದರೆ ಐದು ಲಕ್ಷ ನನ್ನದಲ್ಲ ಎಂದು ಬಿಟ್ಟು ಬಿಡುವುದು"

’ಸರಿ ಅದು ಅಷ್ಟೆ ಅಲ್ಲಿಗೆ ವಾಪಸ್ಸು ಬಂದ ಹಾಗೆ ಇದೆ ಬಿಡಿ ಈಗ ಕಾಲು ತೊಳೆದು ಊಟಕ್ಕೆ ಏಳಿ’

ಎನ್ನುತ್ತ ಮಹಾಲಕ್ಷಮ್ಮನವರು ಊಟಕ್ಕೆ ಸಿದ್ದಮಾಡಲು ಅಡುಗೆ ಮನೆಗೆ ಹೊರಟರು. ವೆಂಕಟೇಶಯ್ಯವರು ಕಾಲು ತೊಳೆದು, ದೇವರಿಗೆ ನಮಸ್ಕರಿಸಿ. ಊಟಕ್ಕೆ ಬಂದು ಕುಳಿತರು

"ಏನು ಮದ್ಯಾನಃದ ಸಾರನ್ನೆ ಬಿಸಿಮಾಡಿದ್ದಿ " ಎಂದರು ಕಲಸಿ ತಿನ್ನುತ್ತ.

"ಇನ್ನೇನು ಇರೋ ಇಬ್ಬರಿಗೆ ಮತ್ತೆ ಅಡುಗೆ ಮಾಡಿ ಬಿಸಾಡಕ್ಕೆ ಆಗುತ್ತ, ಈಗ ಇರೋ ಬೆಲೆಗಳಲ್ಲಿ" ಎಂದರು.

ಹೀಗೆ ಮಾತನಾಡುತ್ತ ಊಟ ಮಾಡುತ್ತಿರುವಂತೆ. ಮನೆಯ ಮುಂದೆ ಯಾವುದೋ ವಾಹನ ನಿಂತ ಶಬ್ದವಾಯಿತು. ನಂತರ ಮನೆಯ ಬಾಗಿಲು ಬಡಿದ ಶಬ್ದ.

ಮಹಾಲಕ್ಷಮ್ಮನವರು ಎದ್ದು ಬಾಗಿಲು ತೆರೆದರು. ಎದುರಿಗೆ ಒಬ್ಬ ಪೋಲಿಸ್ ಅಧಿಕಾರಿ, ಅವನ ಹಿಂದೆ ಒಬ್ಬ ಕಾನ್ಸ್‌ಟೇಬಲ್ ,

"ವೆಂಕಟೇಶಯ್ಯನವರ ಮನೆ ಇದೇನಾ?" ಅವನ ದ್ವನಿಯಲ್ಲಿದ್ದ ಗತ್ತಿಗೆ ಆಕೆ ಗಾಭರಿಯಾದರು,  

"ರೀ ಬನ್ನಿ ಯಾರೋ ಪೋಲಿಸರು ಬಂದಿದ್ದಾರೆ ಏಕೆ ಎಂದು ಕೇಳಿ"  ಆಕೆ ಕೂಗಿದರು,

ಊಟ ಮಾಡುತ್ತಿದ್ದ ವೆಂಕಟೇಶಯ್ಯನವರು , ಎದ್ದು ಕೈ ತೊಳೆದು, ಕೈ ಒರೆಸುತ್ತ ಬೇಗ ಬೇಗ ಬಾಗಿಲಿಗೆ ಬಂದರು

"ಹೇಳಿ ಸಾರ್ ಯಾರು ಬೇಕಾಗಿತ್ತು,"  

ಪೋಲಿಸನನ್ನು ಅವರು ಕೇಳಿದರು, ದ್ವನಿಯಲ್ಲಿ ಸ್ವಲ್ಪ ಭಯವೇ ಇತ್ತು

"ವೆಂಕಟೇಶಯ್ಯವರ ಮನೆ ಇದೇನಾ?"
ಆತ ಮತ್ತೊಮ್ಮೆ ಅಸಹನೆಯಿಂದ ಅನ್ನುವಂತೆ ಕೇಳಿದ.

"ಹೌದು ಇದೇ, ನಾನೆ ವೆಂಕಟೇಶಯ್ಯ ಅಂತ, ಏತಕ್ಕಾಗಿ ಬೇಕಿತ್ತು" ಅಂದರು,

ಅವನು ಇವರ ಪ್ರಶ್ನೆಗೆ ಉತ್ತರಿಸಿದೆ
"ಮಾಗಡಿ ರಸ್ತೆಯಲ್ಲಿರುವ ಅನಂತರಾಮಯ್ಯ ಅನ್ನುವರು ನಿಮಗೆ ಗೊತ್ತ, ನಿಮ್ಮ ಸ್ನೇಹಿತರಂತೆ"

ವೆಂಕಟೇಶಯ್ಯನವರಿಗೆ ಆಶ್ಚರ್ಯ, ಇದೇನು , ಈಗಿನ್ನು ಅವನನ್ನು ನೋಡಿ ಬರುತ್ತಿರುವೆ, ಪೋಲಿಸರು ಬಂದು ಅವನ ಬಗ್ಗೆ ಕೇಳುತ್ತಿರುವರಲ್ಲ ಅಂದುಕೊಳ್ಳುತ್ತ
"ಹೌದು ಸಾರ್ ಗೊತ್ತು ಅವನು ನನ್ನ ಬಾಲ್ಯದ ಗೆಳೆಯ, ನಿಜ ಹೇಳುವದಾದರೆ ನಾನು ಈಗ ತಾನೆ ಅವನನ್ನೆ ನೋಡಲು ಹೋಗಿ ಬರುತ್ತಿರುವೆ" ಎಂದರು.

"ಯಾವ ಕಾರಣಕ್ಕೆ ಅಲ್ಲಿಗೆ ಹೋಗಿದ್ದಿರಿ ಕೇಳಬಹುದಾ? , ಅಲ್ಲಿ ನಿಮಗೂ ಅವರಿಗೂ ಏನಾದರು ಗಲಾಟೆ ಆಯಿತಾ? ’

ಪೋಲಿಸನ ಮಾತಿಗೆ ವೆಂಕಟೇಶಯ್ಯ ಮತ್ತೆ ಆಶ್ಚರ್ಯಪಟ್ಟರು. ಇದೇನು, ಗಲಾಟೆ ಅನ್ನುತ್ತಿದ್ದಾರೆ, ಏನಾದರು ನನ್ನಮೇಲೆ ಆನಂತನು ಕಂಪ್ಲೇಂಟ್ ಕೊಟ್ಟಿದ್ದಾನ? ಅಂದುಕೊಳ್ಳುತ್ತ

"ಗಲಾಟೆ ಏನಿಲ್ಲ ಸಾರ್ , ಸುಮ್ಮನೇ ಹೋಗಿದ್ದೆ, ನಿಜಾ ಹೇಳಬೇಕು ಅಂದರೆ ಸ್ವಲ್ಪ ಸ್ವಂತ ವಿಷಯ, ಅವನಿಗೆ ನಾನು ಸ್ವಲ್ಪ ಹಣ ಕೊಟ್ಟಿದ್ದೆ, ವಾಪಸ್ ಕೇಳೋಣ ಎಂದು ಹೋಗಿದ್ದೆ , ಅವನು ಕೊಡುವ ಸ್ಥಿತಿಯಲ್ಲಿಲ್ಲ , ಹಾಗಾಗಿ ವಾಪಸ್ ಬಂದುಬಿಟ್ಟೆ, ಅವನೇ ನನ್ನನ್ನು ಬಸ್ ವರೆಗೂ ಬಂದು ಹತ್ತಿಸಿ ಹೋದ, ಈಗ ನೋಡಿದರೆ ನೀವು ಬಂದಿದ್ದೀರಿ"  ಎಂದರು.

"ಬಸ್ ಸ್ಟಾಂಡಿನಲ್ಲಿ ನಿಮಗೂ ಅವರಿಗೂ ಮತ್ತೆ ಏನಾದರು ಜಗಳ ಹೊಡೆದಾಟ ಅಂತಹುದು ನಡೆಯಿತಾ? "

"ಇಲ್ಲವಲ್ಲ ಸಾರ್, ನಾವು ಹೊಡೆದಾಟ ಆಡುವಷ್ಟು ಸಣ್ಣ ಜನರಲ್ಲ, ಬಸ್‍ಸ್ಟಾಂಡಿನ ಹತ್ತಿರ ನಮಗೆ ಯಾವ ಜಗಳವೂ ಆಗಿಲ್ಲ, ಅವನೇ ನೊಂದುಕೊಂಡ, ನನ್ನ ಹಣ ಕೊಡಲು ಆಗದೇ ಇರುವದಕ್ಕೆ, ನಾನು ಏನು ಮಾಡಲಾಗದೆ ಬಂದುಬಿಟ್ಟೆ ಅಷ್ಟೆ ಈಗ  ನನ್ನ ಮೇಲೆ ಕಂಪ್ಲೇಂಟು ಕೊಟ್ಟಿದ್ದಾನ ಅವನು?"

’ಹೊಡೆದಾಟ ಬೇಡ, ಕೊಲೆ ಮಾಡಬಹುದಲ್ಲ, ಹಣ ವಾಪಸ್ಸು ಬರಲಿಲ್ಲ ಎನ್ನುವ ರೋಷಕ್ಕೆ, ಎಷ್ಟು ಹಣ ನೀವು ಅವರಿಗೆ ಕೊಟ್ಟಿದ್ದು. ಕಂಪ್ಲೇಂಟ್ ಕೊಟ್ಟಿರುವುದು ಅವರಲ್ಲ , ಅವರ ಹೆಂಡತಿ" ಎಂದ ಪೋಲಿಸ್ ಅಧಿಕಾರಿ.

"ರಾಜಮ್ಮನೆ ಕಂಪ್ಲೇಂಟ್ ಕೊಟ್ಟಿರುವುದು ? ಆಕೆಗೆಲ್ಲೊ ತಪ್ಪು ಅಭಿಪ್ರಾಯವಾಗಿದೆ, ನಾನು ಏನು ಹಣಕ್ಕಾಗಿ ಪೀಡಿಸಿಲ್ಲ, ನನ್ನ ಹಣ ಕೊಡಪ್ಪ ಎಂದು ಕೇಳಿದೆ ಅಷ್ಟೆ, ಕೂಗಾಡಿದವನು ಅವನೇ. ಇರಲಿ ಬಿಡಿ, ಅನಂತನ ಜೊತೆ ಒಮ್ಮೆ ಮಾತನಾಡಿ ಕೇಳುವೆ, ಈರೀತಿ ನಿನ್ನ ಹೆಂಡತಿ ಕಂಪ್ಲೇಟ್ ಕೊಟ್ಟಿದ್ದಾಳೆ ಸರಿಯೇ ಎಂದು. ನೀವು ಅವನ ಜೊತೆ ಒಮ್ಮೆ ಮಾತನಾಡಬೇಕಿತ್ತು”
ವೆಂಕಟೇಶಯ್ಯನವರು ಸಮಾದಾನವಾಗಿಯೇ ಹೇಳಿದರು

"ರೀ ಸ್ವಾಮಿ ನಾಟಕ ಆಡುತ್ತೀರ, ನಿಮ್ಮ ಅನಂತರಾಮಯ್ಯನವರ ಕೊಲೆ ಆಗಿದೆ, ನೀವು ಬಸ್ ಹತ್ತಿರುವ ಬಸ್ ಸ್ಟಾಪಿನ ಹತ್ತಿರವೇ, ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಎಲ್ಲ ಮಾಡಿ ನೀವು ಇಲ್ಲಿ ಬಂದು ಸೇರಿದ್ದೀರಿ, ನೀವೆ ಕೊಲೆ ಮಾಡಿದ್ದೀರಿ ಎಂದು ನಿಮ್ಮ ಅನಂತರಾಮಯ್ಯನ ಹೆಂಡತಿ ರಾಜಮ್ಮ ಕಂಪ್ಲೇಟ್ ಕೊಟ್ಟಿರುವುದು"

ಅದುರಿಬಿದ್ದರು ವೆಂಕಟೇಶಯ್ಯ, ಮಹಾಲಕ್ಷಮ್ಮನ ಮುಖ ಸಹಿತ ವಿವರ್ಣವಾಯಿತು. ಇಬ್ಬರೂ ಹೆದರಿ ಹೋದರು. ವೆಂಕಟೇಶಯ್ಯ ಎಂದರು,

"ಕೊಲೆಯೆ ಹೇಗೆ ಸಾದ್ಯ ಸಾರ್, ನನ್ನನ್ನು ಬಸ್ ಹತ್ತಿಸಿಯೆ ಅವನು ಹೊರಟಿದ್ದಾನೆ, ನಾನೆ ನೋಡಿರುವೆ. ನಾನು ಅವನನ್ನು ಕೊಲೆ ಮಾಡಿಲ್ಲ ಇದೆಲ್ಲ ಸುಳ್ಳು ಅನ್ನಿಸುತ್ತಿದೆ "
ವೆಂಕಟೇಶಯ್ಯನವರ ಮಾತಿಗೆ ಪೋಲಿಸ್ ಅಧಿಕಾರಿ ಎಂದರು,

"ರೀ ನಿಮಗೆ ಅನ್ನಿಸುವದಲ್ಲ ಮುಖ್ಯ, ಅದೆಲ್ಲ ನನಗೆ ತಿಳಿಯದು, ನಿಮ್ಮಿಬ್ಬರ ಜೊತೆ ಬಸ್ ಸ್ಟಾಂಡಿನಲ್ಲಿ ಬೇರೆ ಯಾರಿದ್ದರು? "

"ಇಲ್ಲ ಸಾರ್,  ಅಲ್ಲಿ ಕತ್ತಲಾಗಿತ್ತು, ಸುತ್ತಲೂ ಯಾರು ಇರಲಿಲ್ಲ, ನಾನು ಅವನು ಇಬ್ಬರೇ ಇದ್ದದ್ದು, ನಾನು ಬಸ್ ಹತ್ತಿದೆ, ಅವನು ಅಲ್ಲಿಂದ ಹೊರಟ"  ವೆಂಕಟೇಶಯ್ಯನವರು ಅಸಹಾಯಕರಂತೆ ನುಡಿದರು.

"ನೋಡಿ ಇವರೆ ನೀವು ನೋಡಿದರೆ ವಯಸ್ಸಾದವರು, ಆದರೆ ನಾನು ಏನು ಮಾಡುವ ಹಾಗಿಲ್ಲ, ಕೊಲೆಯಾದವನ ಹೆಂಡತಿಯೇ ನೀವು ಕೊಲೆ ಮಾಡಿರುವದೆಂದು ಹೇಳುತ್ತಿದ್ದಾರೆ. ನಿಮ್ಮಿಬ್ಬರನ್ನು ಹೊರತುಪಡಿಸಿ ಅಲ್ಲಿ ಯಾರು ಇರಲಿಲ್ಲ ಎನ್ನುವಿರಿ. ನೀವು ಕೊಲೆಮಾಡಿಲ್ಲ ಅನ್ನುವ ಮಾತನ್ನು ನನಗೆ ನಂಬಲಾಗುತ್ತಿಲ್ಲ. ಈಗ ನಿಮ್ಮನ್ನು ಅರೆಷ್ಟ್ ಮಾಡುತ್ತ ಇದ್ದೇನೆ. ಉಳಿದ ವಿಷಯ ಏನಿದ್ದರೂ, ನಾನು ಎಫ್‍ಐಅರ್  ಹಾಕಿದ ನಂತರ ಕೋರ್ಟಿನಲ್ಲಿ ಹೇಳಿ"

ಅಸಹಾಯಕರಾದ ವೆಂಕಟೇಶಯ್ಯನವರ ಮಾತುಗಳನ್ನಾಗಲಿ, ಜೋರಾಗಿ ಅಳುತ್ತಿದ್ದ ಮಹಾಲಕ್ಷಮ್ಮನವರ ಅಳುವಾಗಲಿ ಪೋಲಿಸ್ ಅಧಿಕಾರಿಯ ಕಿವಿಗೆ ಬೀಳಲಿಲ್ಲ ಅವನ ಹೃದಯವನ್ನು ಕರಗಿಸಲಿಲ್ಲ. ಅವರನ್ನು ಅರೆಷ್ಟ್ ಮಾಡಿ ಆ ಕ್ಷಣದಲ್ಲಿಯೆ ಜೀಪ್ ಹತ್ತಿಸಿದ್ದ. ಪೋಲಿಸ್ ಅಧಿಕಾರಿ   ಅಶೋಕನಿಗೆ ಖುಷಿ,  ಕೊಲೆಯಾದ ಒಂದು ಘಂಟೆಯಲ್ಲಿಯೇ ಆರೋಪಿಯನ್ನು ಬಂದಿಸಿದ್ದೇನೆ ಎಂದು.

ಮುಂದುವರೆಯುವುದು..

1 comment:

  1. ವಯಸಾದ ದಂಪತಿಗಳಿಗೆ ಪಾಪ ಎಂತ ಹಿಂಸೆ. ಹಣ ವಾಪಸ್ಸು ಕೇಳಲು ಹೋದವನ ಮೇಲೆಯೇ ಹತ್ಯಾರೋಪವೇ?
    ಮುಂದಿನ ಕಂತು ಬೇಗನೇ ಬರಲಿ...

    ReplyDelete

enter your comments please