Showing posts with label ಕಥೆಗಳು-2011. Show all posts
Showing posts with label ಕಥೆಗಳು-2011. Show all posts

Friday, March 1, 2013

ಕಥೆ : ಸರ್ಪಸುತ್ತು


                              
 ನಡುರಾತ್ರಿಯು ಸನಿಹ ಬಂದರು ಬಾರದ ನಿದ್ರೆ, ಮತ್ತೊಮ್ಮೆ ಬಲಬದಿಗೆ ಹೊರಳಿದ ಶಶಿ. ತೊಡೆಯ ಸಂದಿಯಲ್ಲಿ ಪ್ರಾರಂಬವಾದ ನೋವಿನ ಸೆಳೆತ ದೇಹವನ್ನೆಲ್ಲ ವ್ಯಾಪಿಸಿ ಅವನಿಗರಿವಿಲ್ಲದೆ 'ಅಮ್ಮಾ,,,,' ಎಂಬ ಉದ್ಗಾರ ಅವನ ಬಾಯಿಯಿಂದ ಹೊರಟಿತು. "ಸರ್ಪಸುತ್ತು"    ವೈದ್ಯರು ಕೊಟ್ಟಿದ ಹೆಸರು,ಔಷದಿ ಕೊಡದೆ ಗುಣವಾಗಬೇಕಾದ ಕಾಯಿಲೆ. ಎದೆಯ ಹತ್ತಿರ ಪ್ರಾರಂಬವಾದ ಸಣ್ಣ ಗಾಯದಂತೆ ಕಾಣಿಸಿಕೊಂಡ ಕಾಯಿಲೆ ನಿದಾನವಾಗಿ ದೇಹದ ಬಲಬಾಗವನ್ನು ಆಕ್ರಮಿಸುತ್ತ, ಸೊಂಟವನ್ನೆಲ್ಲ ಬಳಸಿ ಈಗ ಬಲಕಾಲಿನತ್ತ ಇಳಿಯುತ್ತಿದೆ. ಮೈಮೇಲೆ ದರಿಸಿರುವ ಬಟ್ಟೆ ಸೋಕಿದರು ಸಾಕು ನರವನ್ನೆಲ್ಲ ಯಾರೊ ಚಾಕುವಿನಿಂದ ಕತ್ತರಿಸಿದಂತೆ ಅಮರಿಕೊಳ್ಳುವ ನೋವು ಅವನನ್ನು ಹಣ್ಣುಮಾಡಿ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿತ್ತು. ಶಶಿ ಯೋಚಿಸುತ್ತಿದ್ದಾನೆ "ಆ ಸೃಷ್ಟಿಕರ್ತ ಯಾತಕ್ಕಾಗಿ ಈ ರೀತಿಯ ಕಾಯಿಲೆಗಳನ್ನೆಲ್ಲ ಕಲ್ಪಿಸಿ ಭೂಮಿಯಲ್ಲಿ ಬಿಟ್ಟಿದ್ದಾನೆ' ಎಂದು.

    ಅವನ 'ಅಮ್ಮಾ' ಎಂಬ ಕೂಗು , ನಡುರಾತ್ರಿಯಲ್ಲು ನಡುಮನೆಯಲ್ಲಿ ಮಲಗಿದ್ದ ಸುನಂದಳನ್ನು ಎಚ್ಚರಿಸಿತ್ತು. "ಏಕೊ ಶಶಿ ತುಂಬಾ ನೋವಿದೆಯೇನೊ?" , ಅವಳ ದ್ವನಿಯಲ್ಲಿ ಎಂತದೊ ಕಕ್ಕುಲಾತಿ, ತಾನೆ ನೋವನ್ನು ಅನುಭವಿಸುತ್ತಿರುವ ತಾಯಿಯ ಹೃದಯ. ಅವಳಿಗೆ ಯಾವ ಉತ್ತರವನ್ನು ಕೊಡಲಿಲ್ಲ ಮಗ.ಸಣ್ಣಗೆ ಒಮ್ಮೆ 'ಅಮ್ಮಾ' ಎನ್ನುವ ದ್ವನಿ ನಡುರಾತ್ರಿಯಲ್ಲು ಅವಳನ್ನು ಎಚ್ಚರಿಸುತ್ತದೆ, ತನ್ನೊಳಗೆ ಯೋಚಿಸುತ್ತಿದ್ದಾನೆ ಶಶಿ, 'ಅಮ್ಮ ತನಗಾಗಿ ಹೀಗೆ ಒದ್ದುಕೊಳ್ತಾಳೆ, ನನ್ನ ಜೀವನದ ಸಫಲತೆ ಉಳಿದು ಬೇರೆನು ಬಯಸದ ಅವಳಿಗೆ ತಾನು ಒಂದು ಮಾನಸಿಕ ಹೊರಯಷ್ಟೆ' ಅನ್ನಿಸಿತು.

   ತಾನೊಬ್ಬನೆ ಅವಳಿಗೆ ಜೀವನಕ್ಕೆ ಮನಸಿಗೆ ಆದಾರವೆಂದು ತಿಳಿದಿದೆ, ಓದು ಮುಗಿಸಿ ಕೆಲಸಕ್ಕೆ ಸೇರುವವರೆಗು ಅವಳು ಆರೋಗ್ಯ ಅನಾರೋಗ್ಯ ಅಂತ ನೋಡದೆ ದುಡಿದಳು. ನನ್ನನ್ನು ಜೀವನದ ಒಂದು ಸ್ಥಿರವಾದ ದಡಕ್ಕೆ ಸೇರಿಸುವದಷ್ಟೆ ಅವಳ ಜೀವನದ ಪರಮಗುರಿ ಎಂಬಂತೆ ಜೀವಿಸಿದಳು.ಮಗನಾಗಿ ತಾನು ಎಂದ ಅವಳ ಮನಸಿಗೆ ನೆಮ್ಮದಿ ಶಾಂತಿ ಒದಗಿಸಲಿಲ್ಲ ಎಂದುಕೊಂಡ ಶಶಿ. "ಚಿಕ್ಕ ವಯಸ್ಸಿನಿಂದಲು ಏಕೊ ಪ್ರತಿವಿಷಯಕ್ಕು ಹಟಮಾಡುವುದು ಅವಳು ಅಸಹಾಯಕಳು ಎಂದು ತಿಳಿದು ನನ್ನ ಅಗತ್ಯಗಳಿಗೆ ಅವಳನ್ನು ಪೀಡಿಸುವುದು. ನನ್ನ ಜೀವನ ಧರ್ಮವಾಗಿಹೋಗಿತ್ತು, ಆದರು ಅವಳೆಂದು ದ್ವನಿ ಎತ್ತಿ ಮಾತಡಲಿಲ್ಲ, ದರ್ಪದಿಂದ ನನ್ನನ್ನು ಗದರಿಸಿಲಿಲ್ಲ.ಇಂತಹ ತಾಯಿಗೆ ಮಾನಸಿಕ ಅಘಾತ ನೀಡಲು ಆ ಲೀಲಾಜೊಸೆಫ್ ಕಾರಣಳಾದಳು" ಅನ್ನಿಸಿತು.

   ಲೀಲಾಳ ಹೆಸರು ನೆನಪು ಬಂದಂತೆ ಶಶಿ ಹೃದಯ ನೋವಿನಿಂದ ಚೀರಿಟ್ಟಿತು. ತನ್ನದು ಎಂತಹ ದೈನ್ಯದ ಸ್ಥಿಥಿ ನೋವು ಅನ್ನುವುದು ಒಳಗೆ ಹೊರಗಿನಿಂದ ಒಟ್ಟಿಗೆ ಹುರಿದುಮುಕ್ಕುವ ವಿದಿಯ ರೀತಿ ಅವನಲ್ಲಿ ಅವನ ಬಗ್ಗೆಯೆ ಕರುಣೆ ಹುಟ್ಟಿಸಿತ್ತು. ಲೀಲಜೋಸೆಫ್ ಎಂಬ ಮಾಯೆ ಅವನ ಬೆನ್ನು ಬಿದ್ದಿದ್ದು ಅವನು ಕೆಲಸಕ್ಕೆ ಸೇರಿದ ದಿನದಿಂದ. ಓದುಮುಗಿಸಿ ಸ್ಪರ್ದಾಪರೀಕ್ಷೆಯನ್ನು ಮುಗಿಸಿ ಮೌಕಿಕ ಪರೀಕ್ಷೆಯನ್ನು ಎದುರಿಸುವಾಗ ಇದ್ದ ಆತ್ಮವಿಶ್ವಾಸ ಬ್ಯಾಂಕಿನಲ್ಲಿ ಕೆಲಸಕ್ಕೆ ಹಾಜರಾದ ಮೊದಲ ದಿನ ಇರಲಿಲ್ಲ. ಅಲ್ಲಿನ ನೌಕರರ ಧಿಮಾಕು,ಮ್ಯಾನೇಜರನ ಬಿಗಿಮುಖ ಅವನಲ್ಲಿ ಅಳುಕು ಹುಟ್ಟಿಸಿತ್ತು. ಲೀಲಾಳನ್ನು ಕರೆದ ಮ್ಯಾನೇಜರ್ ಶಶಿಯನ್ನು ತೋರಿಸಿ "ಇವರು ಈದಿನ ಜಾಯಿನ್ ಆಗ್ತಿದ್ದಾರೆ, ಶಶಿಧರ ಎಂದು, ನಿಮ್ಮ ಸೆಕ್ಷನ್ಗೆ ಕಳಿಸ್ತೀನಿ, ಟ್ರೈನ್ ಮಾಡಿ" ಎಂದರು.
 "ಹೊಸಬರಾದರೆ ಮ್ಯಾನೇಜ್ ಮಾಡೋದು ಕಷ್ಟ ಸಾರ್, ನೀವು ನನ್ನ ತಲೆಗೆ ಇವರನ್ನೆಲ್ಲ ಕಟ್ಟುತ್ತೀರಿ" ಎನ್ನುತ್ತ ಹೊರಟ ಅವಳ ಹಿಂದೆ ವಿದಿಯಿಲ್ಲದ ಹೊರಟ ಶಶಿ.ಎರಡನೆ ಮಹಡಿಯ ಅವಳ ವಿಭಾಗ ಬಂದಾಗ ಆಕೆ "ನಿಮ್ಮ ಹೆಸರೇನು" ಎಂದು ಕೇಳಿದಳು, ಆಗತಾನೆ ಮ್ಯಾನೇಜರ್ ಪರಿಚಯಿಸಿದ್ದನು ಮರೆತ್ತಿದ್ದಳು. ಕುಳಿತುಕೊಳ್ಳಲ್ಲು ಕುರ್ಚಿತೋರಿಸುತ್ತ "ಏನ್ರಿ ತಪ್ಪಿಲ್ಲದಂತೆ ಬರೆಯಕ್ಕೆ ಬರುತ್ತಾ" ಎಂದಳು, "ಬಿಕಾಂ ಮಾಡಿ ಈಗಷ್ಟೆ ಸಿಎಗೆ ಸಿದ್ದವಾಗುತ್ತಿರುವ ನನಗೆ ಇವಳು ಕೇಳುವ ಪ್ರಶ್ನೆ" ಅಂದು ಕೊಂಡ ಶಶಿ.

   ನಂತರ ಆರು ತಿಂಗಳಲ್ಲೆ ಶಶಿ ಕೇಳಿದ ಅವಳನ್ನು "ಲೀಲ ನನ್ನ ಮದುವೆ ಆಗ್ತೀಯಾ?", ಅವಳು ನಕ್ಕು ಹೇಳಿದ್ದಳು  "ಅದು ಆಮೇಲೆ ನಿರ್ದಾರಮಾಡಬಹುದು, ಮೊದಲು ನಿಮ್ಮ ತಾಯಿ ಒಪ್ಪುತ್ತಾರ ವಿಚಾರಿಸಿ"

   ಅಂದು ಸಂಜೆಯೆ ಶಶಿ ಅವನ ತಾಯಿ ಸುನಂದಳ ಹತ್ತಿರ ವಿಶಯ ಪ್ರಸ್ತಾಪ ಮಾಡಿದ. ಆಕೆ ಏನು ಉತ್ತರ ಹೇಳಿಯಾಳು, ಮಂಕಾದಳು, ಗಂಡ ಹೋದ ನಂತರ ಮುಚ್ಚಟ್ಟೆಯಿಂದ ಕಷ್ಟಬಿದ್ದು ಬೆಳೆಸಿದ ಮಗ, ಅವನ ಹೊರತು ಅವಳಿಗೆ ಯಾವ ಆದಾರವು ಇಲ್ಲ, ಅನ್ಯಜಾತಿಯ ಹುಡುಗಿಯನ್ನು ಮದುವೆಯಾಗಲು ಸಿದ್ದನಾಗಿ ನಿಂತಿದ್ದಾನೆ. ಅವಳಿಗೆ ಹುಡುಗಿಯ ಗುಣಸ್ವಭಾವಗಳೇನು ತಿಳಿದಿಲ್ಲ,ಎಂತದೊ ಆತಂಕ. ಮಗನಾದರು ಎಂದು ತಾಯಿಯ ಮಾತು ಕೇಳದೆ ಬೆಳೆದವನು, ಈಗ ಮದುವೆಯ ವಿಷಯ!. ವಾರ ಹತ್ತುದಿನ ಕಣ್ಣೀರು ಸುರಿಸಿದಳು, ಕಡೆಗೆ ಮಗ ಚೆನ್ನಾಗಿದ್ದರೆ ಸಾಕು ಎಂಬ ಹಂಬಲದೊಂದಿಗೆ ಮದುವೆಗೆ ಒಪ್ಪಿಗೆ ಸೂಚಿಸಿದಳು.

   ಶಶಿ ಉತ್ಸಾಹದಿಂದಲೆ ಓಡಿಬಂದ, ಹೊಟೆಲ್ ನಲ್ಲಿ ಮಾತು ತೆಗೆಯುತ್ತ ತಿಳಿಸಿದ" ಲೀಲಾ ನಮ್ಮ ತಾಯಿ ಒಪ್ಪಿಗೆ ಕೊಟ್ಟರು ಈಗ ನಿನ್ನದೇನು ಹೇಳು" ,"ಯಾವುದಕ್ಕೆ ಒಪ್ಪಿಗೆ" ಲೀಲ ಕೇಳಿದಳು ಅಮಾಯಕಳಂತೆ, "ನೀನೆ ಹೇಳಿದ್ದಿಯಲ್ಲ ಲೀಲ ನಮ್ಮ ಮದುವೆಗೆ ತಾಯಿ ಒಪ್ಪುತ್ತಾರ ಕೇಳು ಎಂದು" ಶಶಿ ನುಡಿದ ಆತಂಕದಲ್ಲಿ. ದೀರ್ಘಮೌನ, ನಂತರ ಲೀಲ ನುಡಿದಳು. "ನೀನು ತಪ್ಪು ತಿಳಿದೆ ಶಶಿ, ನಾವಿಬ್ಬರು ಬೇರೆಯೆ ಧರ್ಮ ಆಚಾರ ಸಂಪ್ರದಾಯಗಳಿಗೆ ಸೇರಿದವರು,ಮನೆಯಲ್ಲಿ ಪರಸ್ಪರ ಹೊಂದಿಕೆ ಬರಲು ಸಾದ್ಯವ?,ನಿನಗೆ ಮತ್ತು ಒಂದು ವಿಷಯ ತಿಳಿಸಲಿಲ್ಲ, ಕಳೆದವಾರ ನನ್ನ ನೋಡಲು ಹುಡುಗನೊಬ್ಬ ಬಂದಿದ್ದ, ನಾನು ಒಪ್ಪಿಗೆ ಸೂಚಿಸಿ ಆಗಿದೆ. ಮದುವೆಗೆ ಮೊದಲು ನಾನು ಬ್ಯಾಂಕಿನ ಕೆಲಸಕ್ಕೆ ರಾಜಿನಾಮೆ ಕೊಡುವಳ್ಳಿದ್ದೇನೆ, ಇನ್ನುಯಾರಿಗು ತಿಳಿಸಿಲ್ಲ, ನಿನಗೆ ಮೊದಲು ಹೇಳುತ್ತಿರುವುದು" ಅಂದಳು.

 ತಲೆಯಮೇಲೆ ಕಲ್ಲು ಬಿದ್ದಂತೆ ಆಯಿತು ಶಶಿಗೆ."ಇವಳು ಏನು ಹೇಳುತ್ತಿದ್ದಾಳೆ,ಇವಳ ಮಾತು ನಂಬಿ ಅಮ್ಮನ ಮನಸ್ಸು ಮುರಿದೆ, ಅನ್ನಬಾರದ ಮಾತನ್ನೆಲ್ಲ ಅಂದೆ, ಈಗ ಈರೀತಿ ಅನ್ನುತ್ತಿದ್ದಾಳೆ" ಅಂದುಕೊಂಡು "ಮತ್ತೆ ನೀನೆಕೆ ಅಮ್ಮನ ಬಳಿ ಕೇಳು ಅಂತ ಹೇಳಿದೆ" ಅಂದ ಕನಲಿ, ಅದಕ್ಕೆ ಲೀಲ "ನಾನು ಕೇಳು ಅನ್ನಲಿಲ್ಲ ನಿಮ್ಮ ತಾಯಿ ಒಪ್ಪಲಾರರು ಅಂದೆ" ಎಂದಳು. ಏನೆ ವಾದ ಮಾಡಿದರು, ಲೀಲಾಳ ಮನಸ್ಸು ಕರಗಲಿಲ್ಲ ಅವಳು ಸ್ವಷ್ಟವಾಗಿಯೆ ಹೇಳಿದಳು "ಶಶಿ ನಿಮ್ಮನ್ನು ಮದುವೆಯಾಗಿ ಜೀವನ ಪೂರ್ತಿ ಹೀಗೆ ಬ್ಯಾಂಕಿನ ಕೆಲಸಮಾಡುತ್ತ ಕೊಳೆಯಲಾರೆ, ನನಗೆ ನನ್ನದೆ ಆದ ಆಸೆಗಳಿವೆ, ಅದೆಲ್ಲ ನಿನ್ನ ಜೊತೆ ಇದ್ದಲ್ಲಿ ನೆರೆವೇರದು, ಕ್ಷಮಿಸು" ಎನ್ನುತ್ತ ಎದ್ದು ಹೋದಳು.

ನಂತರ ಶಶಿಗೆ ತಿಳಿದುಬಂದಿತ್ತು, ಈಗ ಗೊತ್ತಾಗಿರುವ ಹುಡುಗನಾದರು ಹತ್ತಾರು ಕೋಟಿಗಳ ಒಡೆಯನಾಗಿರುವ ಅಪ್ಪನ ಒಬ್ಬನೆ ಮಗ. ಲೀಲಾಳ ನಿರ್ದಾರ ಸ್ವಷ್ಟವಾಗಿಯೆ ಇತ್ತು, ಮರೀಚಿಕೆಯ ಬೆನ್ನು ಬಿದ್ದವನು ಶಶಿ. ಬ್ಯಾಂಕಿನಲ್ಲಿ ಎಲ್ಲರ ಅಪಹಾಸ್ಯಕ್ಕೆ ಒಳಗಾಗಿದ್ದ. ಶಶಿಗೆ ಲೀಲ ಅವನನ್ನು ತಿರಸ್ಕರಿಸಿದಳು ಎನ್ನುವದನ್ನು ಅರಗಿಸಿಕೊಳ್ಳಲೆ ಆಗಿರಲಿಲ್ಲ, ಆ ಕಿತ್ತು ತಿನ್ನುವ ನೋವಿನ ಜೊತೆಗೆ ಅಂಟಿಕೊಂಡಿತ್ತು ದೇಹವನ್ನು ಹಿಂಡುತ್ತಿರುವ ಈ ಕಾಯಿಲೆ.

ಏಕೊ ಶಶಿಗೆ ಅವನ ಅಪ್ಪನ ನೆನಪು ಬಂದಿತು. ಅವನಿಗೆ ಅವರ ಮುಖನೋಡಿದ ನೆನಪೆ ಇಲ್ಲ. ಚಿತ್ರದಲ್ಲಿ ನೋಡಿರುವದಷ್ಟೆ. ತಾಯಿ ಮಲಗಿದ್ದಾಳೊ ಇಲ್ಲವೊ ಕತ್ತಲಿನಲ್ಲಿ ತಿಳಿಯುತ್ತಿಲ್ಲ.ಆದರು ಕೇಳಿದ "ಅಮ್ಮ ಏಕೊ ಶೃಂಗೇರಿಗೆ ಹೋಗಿಬರಬೇಕೆನ್ನಿಸಿದೆ ನಾಳೆ ಹೋಗಲ"
ಸುನಂದಳ ಹೃದಯ ಸ್ಥಬ್ದವಾಯಿತು. ಆದರು ಕಷ್ಟದಿಂದ ಅಂದಳು "ಈಗ ಏಕಪ್ಪ ಆಮಾತು, ನನಗೆ ಆ ಸ್ಥಳದ ಹೆಸರು ಹೇಳಲು ಇಷ್ಟವಿಲ್ಲ, ನಾನೆಂದು ಅಲ್ಲಿಗೆ ಬರಲಾರೆ" ಅವಳ ಮಾತಿನಲ್ಲಿ ಇಡಿ ಜೀವಮಾನದ ನೋವೆಲ್ಲ ಇಣುಕಿತು.
"ಸರಿಯಮ್ಮ ಆದರೆ ನನಗೆ ಏಕೊ ಅಲ್ಲಿಗೆ ಹೋಗಬೇಕಿನಿಸಿದೆ ನಾಳೆ ಹೊರಡಲಿದ್ದೇನೆ" ಎಂದ. ಸುನಂದ ಏನು ಹೇಳಿಯಾಳು, ಅವಳ ಹೃದಯ ಹೆದರಿ ರೋದಿಸಿತು. ಮಗನನ್ನು ತಡೆಯಲಾಗುವದಿಲ್ಲ, ತನ್ನ ಬಾಳಿನಲ್ಲಿ ಬರಿ ಕತ್ತಲೆ ತುಂಬಿದ ಪುಟಗಳೆ, ಇದು ಯಾವ ಅನಾಹುತಕ್ಕೆ ಮುನ್ನುಡಿಯೊ ಎಂದು ಅಳುಕಿದಳು.ಕಾಲವೆ ಎಲ್ಲವನ್ನು ನಿರ್ದರಿಸಲಿ ಎನ್ನುತ್ತ "ತಾಯಿ ಶಾರದಾಂಬೆ ಮಗನು ನಿನ್ನ ಮಡಿಲಿಗೆ ಬರುತ್ತಿದ್ದಾನೆ ಅವನ ರಕ್ಷಣೆ ನಿನ್ನ ಹೊಣೆ" ಎಂದು ಕತ್ತಲಿನಲ್ಲಿಯೆ ಕೈಮುಗಿದಳು.
****************************** ೧

 ಬಸ್ಸು ಶೃಂಗೇರಿ ತಲುಪುವಾಗ ಬೆಳಗಿನ ಸೂರ್ಯ ದಟ್ಟವಾದ ಮಂಜಿನಿಂದ ಮೇಲೆದ್ದು ಶ್ರಮಪಡುತ್ತಿದ್ದ,ದೇವಾಲಯದ ಪಕ್ಕದಲ್ಲಿಯೆ ಇದ್ದ ಸ್ವಾಗತ ಕೊಠಡಿಯಲ್ಲಿ ಬಸ್ಸಿನಲ್ಲಿ ಬಂದ ಪ್ರಯಾಣಿಕರೆಲ್ಲ ತಮ್ಮ ವಿಳಾಸ ಹೆಸರು ಬರೆದು ರೂಮು ಪಡೆಯುತ್ತಿದ್ದರು. ಶಶಿಯು ಕೊನೆಯಲ್ಲಿ ನಿಂತ,ಕೌಂಟರಿನಲ್ಲಿ ಕುಳಿತ್ತಿದ್ದ ನೀಳವಾದ ಗಡ್ಡ ಬಿಟ್ಟ ವ್ಯಕ್ತಿ ಹಣಪಡೆದು ರೂಮಿನ ಕೀಲಿ ಕೊಡುತ್ತಿದ್ದ.ಇವನ ಸರದಿ ಬಂದಾಗ ವಿಳಾಸ ಬರೆಯಲು ಪೆನ್ನು ತೆಗೆದುಕೊಂಡ, ಆ ನೀಳಗಡ್ಡದಾರಿ ಇವನನ್ನು "ಎಷ್ಟು ಜನರಿದ್ದೀರಿ" ಎಂದ.
"ನಾನು ಒಬ್ಬನೆ" ಎಂದ ಶಶಿ,
"ಕ್ಷಮಿಸಿ ಒಂಟಿಯಾಗಿ ಬರುವವರಿಗೆ ರೂಮುಕೊಡಲಾಗುವದಿಲ್ಲ" ಎನ್ನುತ್ತ, ಪುಸ್ತಕ ಹಿಂದೆ ಎಳೆದುಕೊಂಡ.
"ಏಕೆ ಏನು ತೊಂದರೆ" ಶಶಿ ಆಶ್ಚರ್ಯದಿಂದ ಕೇಳಿದ.
"ಅದು ಇಲ್ಲಿಯ ನಿಯಮ" ಗಡ್ಡದಾರಿ ನಿರ್ಲಿಪ್ತನಾಗಿ ನುಡಿದು ಮುಖ ತಿರುಗಿಸಿದ.
ಶಶಿ ಅವನ ಜೊತೆ ವಾದಮಾಡುವ ಮನಸ್ಥಿಥಿಯಲ್ಲಿರಲಿಲ್ಲ,ಬ್ಯಾಗ್ ಹಿಡಿದು ಹೊರಬಂದವನು, ಎದುರುಸಾಲಿನ ಅಂಗಡಿಗಳ ಮುಂದಿನ ಕಲ್ಲುಬೆಂಚಿನ ಮೇಲೆ ಕುಳಿತ.  ನಡುಗಿಸುವ ಚಳಿ,ಮುಸುಕ್ಕಿದ ಮಂಜಿನಂತೆಯೆ ಶಶಿಯ ಮನದಲ್ಲಿ ಎಂತದೊ ಶೂನ್ಯ ಕವಿದಿತ್ತು.ಏನು ಮಾಡಬೇಕೆಂಬ ನಿರ್ದಾರವಿಲ್ಲದೆ ಜಡನಾಗಿ ಸುಮ್ಮನೆ ತಲೆತಗ್ಗಿಸಿ ಕುಳಿತ್ತಿದ್ದ. ಎದುರಿಗೆ ಯಾರೊ ನಿಂತಂತೆ ಆಯಿತು.
"ಏಕೆ ನಿಮಗು ರೂಮು ಸಿಗಲಿಲ್ಲವೆ" ಇಂಪಾಗಿ ಬಂದ ದ್ವನಿಗೆ ತಲೆ ಎತ್ತಿದ್ದ.ತಿಳಿಹಸಿರು ಅಂಚಿನ ಬಿಳಿಯ ಸೀರೆ ಧರಿಸಿ,ಹಣೆಯಲ್ಲಿ ಅಗಲವಾದ ಕುಂಕುಮ,ತಲೆಯ ಹಿಂಬಾಗದಲ್ಲಿ ಹರಡಿದ್ದ ನೀಳಕೇಶರಾಶಿ, ನೋಡುವಾಗಲೆ ಗೌರವ ಮೂಡಿಸುವ ಮುಖಭಾವ. ಅವಳ ಪ್ರಶ್ನೆ ಅರ್ಥವಾಗದೆ ಮುಖವನ್ನೆ ದಿಟ್ಟಿಸಿದ.
"ನೀವು ಒಂಟಿಯಾಗಿ ಬಂದಿರುವ ಹಾಗಿದೆ,ಇರಲು ರೂಮಿನ ಅನುಕೂಲವಾಗಲಿಲ್ಲ ಅನ್ನಿಸುತ್ತೆ" ಅಂದಳು,ಅವನು ಶೂನ್ಯ ದೃಷ್ಟಿಬೀರಿದ.ಏನು ಹೇಳದೆ ನಗುಬೀರಿದ.ಅಕೆಯ ಮುಖದಲ್ಲಿ ಎಂತದೊ ನಗು
"ನನಗು ಅದೆ ಸಮಸ್ಯೆ ನಾನು ಒಂಟಿಯಾಗಿ ಬಂದಿರುವೆ, ನೀವು ಒಪ್ಪುವದಾದಲ್ಲಿ ಇಬ್ಬರು ಸೇರಿ ರೂಮು ಪಡೆಯೋಣ" ಶಶಿ ವಿಭ್ರಾಂತನಾದ, ಆಕೆ "ಬನ್ನಿ ಕೇಳೋಣ" ಎಂದಳು.ಶಶಿಗೆ ಏನು ತೋಚದೆ ಎದ್ದು ಹೊರಟ. ಈಗ ಸ್ವಾಗತದ ಕೌಂಟರಿನಲ್ಲಿ ಮತ್ತಾರೊ ಯುವಕ ಕುಳಿತ್ತಿದ್ದ. ಶಶಿಯನ್ನು ಅವನ ಹಿಂದೆ ಬಂದ ಆಕೆಯನ್ನು ಕಂಡು,
"ಎಲ್ಲಿಂದ ಬರುತ್ತಿದ್ದೀರಿ ರೂಮು ಬೇಕ ಇಲ್ಲಿ ವಿವರ ಬರೆಯಿರಿ"ಎನ್ನುತ್ತ ಪುಸ್ತಕ ತೋರಿದ. ಶಶಿ ಹೆಸರು ವಿಳಾಸವನ್ನೆಲ್ಲ ಬರೆದು, ಹಣ ನೀಡಿದ  .ಅವನು ಕೀಲಿ ಕೊಡುತ್ತ "ಇದೆ ರಸ್ತೆಯಲ್ಲಿ ಮುಂದೆಹೋಗಿ ಎಡಬಾಗದ ಗುಡ್ಡದ ಮೇಲಿದೆ ಟಿ.ಟಿ.ಡಿ ಯ ರೂಮುಗಳು" ಎಂದು ತಿಳಿಸಿದ.
ಹೊರಗೆ ಬಂದ ಶಶಿಗೆ ಎಂತದೊ ಗಲಿಬಿಲಿ ಅವಳು ಯಾರು ಎಂದು ಅವನಿಗೆ ತಿಳಿಯುತ್ತಿಲ್ಲ. ಹೆಚ್ಚುಕಡಿಮೆ ಅವನ ತಾಯಿಯಷ್ಟು ಅಥವ ಸ್ವಲ್ಪ ಕಡಿಮೆ ವಯಸ್ಸಿರಬಹುದೇನೊ. ಏಕೊ ಅವನಿಗೆ ಯಾವ ಕುತೂಹಲವು ಮೂಡಲಿಲ್ಲ,ಸುಮ್ಮನೆ ತಲೆತಗ್ಗಿಸಿ ಹೊರಟ.ಹಿಂದೆ ... ಹಿಂದೆ ..ಆಕೆಯ ಗೆಜ್ಜೆಯ ಶಬ್ದ. ಆರು ಏಳೂ ನಿಮಿಷದಲ್ಲಿ ರೂಮುಸೇರಿದ. ನಿದಾನವಾಗಿ ಬಾಗಿಲಿನಿಂದ ಒಳಬಂದ ಆಕೆ ರೂಮಿನಲ್ಲೆಲ್ಲ ಒಮ್ಮೆ ಕಣ್ಣಾಡಿಸಿದಳು. ಬ್ಯಾಗನ್ನು ಕುರ್ಚಿಯ ಮೇಲಿಟ್ಟ ಶಶಿ ಮತ್ತೊಂದು ಕುರ್ಚಿಯಲ್ಲಿ ಕುಳಿತ.ಆಕೆ ಶಶಿಯತ್ತ ನೋಡುತ್ತ "ಬಸ್ ಪ್ರಯಾಣ ಆಯಾಸವಾಗಿದೆ ಅನ್ನಿಸುತ್ತೆ, ಮೊದಲು ಒಂದು ಸ್ನಾನ ಮುಗಿಸಿ ಬಂದು ಬಿಡಪ್ಪ, ನನ್ನದಂತು ಆಗಿದೆ, ಏಕವಚನದಲ್ಲಿ ಕರೆದರೆ ಬೇಸರವಿಲ್ಲ ತಾನೆ, ನಾನು ನಿನಗಿಂತ ದೊಡ್ಡವಳು" ಎಂದಳು.
ಶಶಿ ಯಾವ ಉತ್ತರವನ್ನು ಕೊಡಲಿಲ್ಲ, ಸರಿ ಎಂದುಕೊಂಡು, ಟವೆಲ್ ಬಟ್ಟೆ ಬ್ರಶ್ ಎಲ್ಲ ತೆಗೆದುಗೊಂಡು ಸ್ನಾನದ ಕೊಠಡಿ ಹೊಕ್ಕು ಬಾಗಿಲು ಹಾಕಿದ. ನಲ್ಲಿ ತಿರುಗಿಸಿ ನೋಡಿದ ತಣ್ಣನ್ನೆಯ ನೀರು, ಪರವಾ ಇಲ್ಲ ಅನ್ನಿಸಿತು. ನಿದಾನವಾಗಿ ಎಲ್ಲ ಮುಗಿಸಿ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡ.
ಶಶಿ ಹೊರಬಂದಾಗ ಆಕೆ ಅಲ್ಲಿಯೆ ಇದ್ದ ಮಂಚದ ಮೇಲೆ ಪದ್ಮಾಸನದಲ್ಲಿ ಕುಳಿತು ಕಣ್ಣುಮುಚ್ಚಿದ್ದರು, ಬಹುಷಃ ಧ್ಯಾನ ಮಾಡುತ್ತಿದ್ದರೇನೊ,ಇವನು ಓಡಿಯಾಡಿದ ಸಪ್ಪಳಕ್ಕೆ ಕಣ್ಣುಬಿಟ್ಟು ಇವನತ್ತ ನೋಡಿ ಮುಗುಳ್ನಕ್ಕರು
"ಸ್ನಾನ ಆಯಿತ ಸ್ವಲ್ಪ ಪ್ರಯಾಣದ ಆಯಾಸವೆಲ್ಲ ಹರಿಯಿತು ಅನ್ನಿಸುತ್ತೆ, ನೀನು ಬೇಗ ಸಿದ್ದನಾಗಿ ಹೊರಗೆ ಎಲ್ಲಿಯಾದರು ಉಪಹಾರ ಮುಗಿಸಿ, ನಂತರ ದೇವಾಲಯಕ್ಕೆ ಹೋದರೆ ದೇವರ ದರ್ಶನ ಪಡೆದು ಸುತ್ತಮುತ್ತ ನೋಡಲು ಹೋಗಬಹುದು. ನೀನು ಹೊರಟಿರು ನಾನು ಸ್ವಲ್ಪ ನಿದಾನವಾಗಿ ಬರುತ್ತೇನೆ, ದೇವಾಲಯದಲ್ಲಿ ನಿನಗೆ ಸಿಗುತ್ತೇನೆ" ಎಂದರು.

ಸ್ವಲ್ಪ ಆಲಸ್ಯದಿಂದಲೆ ಸಿದ್ದನಾಗಿ,ಆಕೆಯತ್ತ ನೋಡಿದ ಶಶಿ, ಇವನ ಕಡೆ ಅವರಿಗೆ ಗಮನವಿದ್ದಂತಿಲ್ಲ, ಏನಾದರು ಮಾಡಿಕೊಳ್ಳಲ್ಲಿ ಎನ್ನುತ್ತ ಹೊರಗೆ ಬಂದು ಬಾಗಿಲು ಹೊರಗಿನಿಂದ ಮುಂದೆ ಎಳೆದುಕೊಂಡ.ರಸ್ತೆಯಲ್ಲಿ ನಡೆಯುತ್ತ ಹೊರಟಂತೆ ಹೋಟಲಿನ ಬೋರ್ಡ್ ಕಾಣಿಸಿತು, ಒಳಗೆ ಹೋದರೆ, ಮನೆಯಂತೆ ನೆಲದಮೇಲೆ ಚಾಪೆಯಲ್ಲಿ ಕೂಡಿಸಿ ಉಪಹಾರ ಕೊಡುತ್ತಿದ್ದರು. ಇವನನ್ನು ಕಂಡು, "ಕುಳಿತುಕೊಳ್ಳಿ" ಎನ್ನುತ್ತ, ಎದುರಿಗೆ ಬಾಳೆ ಎಲೆ ಹಾಸಿ ನೀರು ಬಡಿಸಿ ಒಳಹೋದರು. ಒಳಗಿನಿಂದ ಬಿಸಿಬಿಸಿ ಇಡ್ಲಿ ಬಂತು, ಹೊಟ್ಟೆ ತುಂಬುವಂತೆ ನಿದಾನವಾಗಿ ತಿಂದು, ಕಾಫಿಕುಡಿದು , ಹಣನೀಡಿ ಹೊರಬಂದ ಶಶಿ.

ಎಂದೊ ಸಣ್ಣ ವಯಸ್ಸಿನಲ್ಲಿ ಕಂಡ ನೆನಪು ಎತ್ತ ಹೋಗಬೇಕೆಂಬ ನಿರ್ದಾರವಿಲ್ಲ.ದೇವಾಲಯದ ಮಹಾದ್ವಾರ ಕಾಣಿಸಿತು,ಒಳಗೆ ಹೋಗಲಿಲ್ಲ. ಹಾಗೆಯೆ ಕಾಲೆಳೆಯುತ್ತ ಮುಂದೆ ಸಾಗಿದವನಿಗೆ ಎದುರಾಗಿದ್ದು ತುಂಗಾನದಿ. ಅದರ ದಡದಲ್ಲಿಯೆ ನಡೆಯುತ್ತ ಹೊರಟ. "ನಾನು ಇಲ್ಲಿ ಏಕೆ ಬಂದೆ ನಾನು ನಿರೀಕ್ಷಿಸಿದ ನೆಮ್ಮದಿ ಶಾಂತಿ ಇಲ್ಲಿ ಸಿಕ್ಕೀತೆ? ನನ್ನ ಮನಸ್ಸೆ ಕದಡಿಹೋಗಿರುವಾಗ ಹೊರಗಿನಿಂದ ಸಮಾದಾನ ಎಲ್ಲಿ ದೊರಕೀತು, ಅಡಿಗಡಿಗೆ ಕಾಡುತ್ತಿರುವ ಈ ನೋವು ಎಲ್ಲಕ್ಕು ಮೂಲ ಕಾರಣ ಅವಳೆ ರಾಕ್ಷಸಿ ಲೀಲ ಜೋಸೆಪ್" ಅನ್ನಿಸಿಬಿಟ್ಟಿತು. ಅವಳ ನೆನಪು ಮನವನ್ನು ಆಕ್ರಮಿಸಿದಂತೆ ಪುನಃ ಅತ್ಮ ಕುಸಿದುಹೋಯಿತು. ಬೆಂಗಳೂರಿನಿಂದ ಇಷ್ಟು ದೂರಬಂದರು ಕಾಡುವ ನೆನಪುಗಳ ಹಿಂಸೆ ಶಶಿಯನ್ನು ಹೈರಾಣವಾಗಿಸಿತು "ಲೀಲಾ ಏಕೆ ಹೀಗೆ ನನ್ನ ಕಾಡಿಸುತ್ತೀಯ ನನ್ನನ್ನು ಬಿಟ್ಟುಬಿಡು" ಅಂದುಕೊಂಡ. ನಡೆಯುತ್ತಿದ್ದಂತೆ ಗಾಯಕೆರಳಿ ನೋವಿನ ಹಿಂಸೆ ಪ್ರಾರಂಬವಾಯಿತು ಹಾಗೆಯೆ ಒಂದು ಜಾಗ ಅರಸಿ ಹುಲ್ಲಿನ ಮೇಲೆ ಕುಳಿತ.ಹರಿಯುತ್ತಿದ್ದ ನದಿಯನ್ನು ದಿಟ್ಟಿಸುತ್ತಿದ್ದ. ಶಶಿಗೆ ಏಕೊ ಅಲಸ್ಯವೆನೆಸಿ, ಕಣ್ಣುಮುಚ್ಚಿ ಕುಳಿತ. ಬಿಸಿಲು ಮೇಲೆರುತ್ತಿತ್ತು, "ಲೀಲಾ ನಾನು ಯಾವ ತಪ್ಪು ಮಾಡಿದೆ ಎಂದು ನನ್ನನ್ನು ನಿರಾಕರಿಸಿದೆ ಮೊದಲು ನನ್ನನ್ನೇಕೆ ನಿನ್ನ ಆಕರ್ಷಣೆಯಲ್ಲಿ ಕೆಡವಿಕೊಂಡೆ , ನನ್ನ ಮನಸ್ಸನ್ನೇಕೆ ದುರ್ಬಲಗೊಳಿಸಿದೆ" ಅವನ ಮನ ರೋದಿಸುತ್ತಿತ್ತು. "ನನಗೆ ಸುಖವೆಂಬುದೆ ಇಲ್ಲವೆ ಜೀವನದಲ್ಲಿ" ಅವನು ಚಿಂತಿಸಿದ. ಲೀಲ ಜೊತೆ ಕಳೆದ ದಿನಗಳ ನೆನಪು ಅವನ ಮನವನ್ನು ತುಂಬಿತು.ಸಮಯ ಎಷ್ಟು ಕಳೆಯಿತೊ ಅವನಿಗೆ ತಿಳಿಯಲ್ಲಿಲ್ಲ ಗಡಿಯಾರವನ್ನು ಕಟ್ಟಿರಲಿಲ್ಲ ರೂಮಿನಲ್ಲಿಯೆ ಮರೆತ್ತಿದ್ದ.ಪುನಃ ಊರೊಳಗೆ ಹೋಗುವುದೆ ಬೇಡ ಅಂದುಕೊಂಡ ಒಮ್ಮೆ, ಅಷ್ಟೆ ಏಕೆ ಬೆಂಗಳೂರಿಗೆ ಮರಳುವುದೆ ಬೇಡ ಅನ್ನಿಸಿತು. ಬಿಸಿಲು ಇಳಿಮುಖವಾಗುತ್ತಿತ್ತು.
****************************************** ೨
ತುಂಗೆಯ ದಡವನ್ನು ಬಿಟ್ಟು ಮೇಲೆದ್ದ, ತಕ್ಷಣ ಮೇಲೆ ಎದ್ದಿದ್ದಕ್ಕೊ ಕಾಡುತ್ತಿರುವ ಸರ್ಪಸುತ್ತಿನ ಪ್ರಭಾವವೊ ನೋವು ದೇಹದಲ್ಲೆಲ್ಲ ಒಮ್ಮೆ ಸಂಚಾರಮಾಡಿತು. ನಿದಾನಕ್ಕೆ ನಡೆಯುತ್ತ ಹೊರಟವನು ದೇವಾಲಯದ ಮುಂಬಾಗಕ್ಕೆ ಬಂದ.ಒಳಗೆ ಹೋದರೆ ಶಾರದ ದೇವಾಲಯ ನಂತರ ನದಿಯ ಪಾತ್ರಕ್ಕೆ ಇಳಿಯಲು ಮೆಟ್ಟಿಲುಗಳು ನೀರಿನಲ್ಲಿ ಮೀನುಗಳು ಚಿಕ್ಕವಯಸ್ಸಿನಲ್ಲಿ ನೋಡಿದ ನೆನಪಾಯಿತು ಶಶಿಗೆ. ಒಳಗೆ ಹೊರಟ ಬಿಸಿಲಿನ ಜಳಕ್ಕೆ ಒಳಗೆ ಹಾಸಿದ್ದ ಕಲ್ಲು ಕಾದು ಸುಡುತ್ತಿತ್ತು. ಶಾರದ ದೇವಿಯ ದೇವಾಲಯ ಕಾಣಿಸಿತು, ಕೆಲವರು ಒಳಗಿನಿಂದ ಹೊರಬರುತ್ತಿದ್ದರು, ಅವನು ಒಳಹೋಗದೆ ಮುಂದೆ ನಡೆದ, ಎದುರಿಗೆ ನಕ್ಷತ್ರಾಕಾರದಲ್ಲಿ ಕಟ್ಟಿದೆ ಹಳೆಯ ಕಲ್ಲಿನ ದೇವಾಲಯ, ಯಾವುದು ಈ ದೇವಾಲಯ, ಹೆಸರು ಮರೆತ್ತಿತ್ತು, ಶಿವದೇವಾಲಯ ಅಂತ ನೆನಪ್ಪಿತ್ತು. ಹಾಗೆಯೆ ಹಿಂದೆ ಬಂದರೆ, ಕೆಳಗೆ ಇಳಿಯಲು ಮೆಟ್ಟಿಲುಗಳು, ಎಡಕ್ಕೆ ಸೇತುವೆ ಮೇಲೆ ನದಿಯನ್ನು ದಾಟಿ ಇನ್ನೊಂದು ಬದಿಗೆ ದಾಟಿಹೋಗುವ ದಾರಿ ಕಾಣಿಸಿತು.
 ಮೆಟ್ಟಿಲು ಇಳಿಯುತ್ತ ನದಿಯತ್ತ ಇಳಿದ ಶಶಿ , ಕೆಲವರು ಮೀನಿಗೆ ಪುರಿ ಹಾಕುತ್ತ ಆನಂದಿಸುತ್ತಿದ್ದರು. ಏಕೊ ಬೇಸರವೆನಿಸಿ ಪುನಃ ಮೇಲೆ ಬಂದು ಸೇತುವ ಮೇಲೆ ಹೊರಟ. ಸೇತುವೆ ಮೇಲಿನಿಂದ ನದಿಯ ದಡದಲ್ಲಿ ಮೆಟ್ಟಿಲುಗಳ ಮೇಲಿರುವ ಜನ ಕಾಣುತ್ತಿದ್ದರು. ಮುಳುಗಲು ಸಿದ್ದನಾಗಿದ್ದ ಸೂರ್ಯನ ಓರೆ ಕಿರಣಗಳು ಕಣ್ಣು ಚುಚ್ಚುತ್ತಿದ್ದವು. ಮೊದಲ ಸಲ ಬಂದಾಗ ಇಲ್ಲಿ ಸೇತುವೆ ಇರಲಿಲ್ಲ, ಬಿದುರು ಮರದಿಂದ ಕಟ್ಟಿದ ತಾತ್ಕಲಿಕ ಸೇತುವೆ ಇತ್ತು ಈಗ ಇದು ಹೊಸದಾಗಿ ಆಗಿರುವ ಸೇತುವೆ ಅಂದುಕೊಂಡ.ನದಿಯನ್ನು ದಿಟ್ಟಿಸುತ್ತಿರುವಂತೆ ಅನ್ನಿಸಿತು "ನಿಜ ಇದೆ ಜಾಗ ನನ್ನ ತಂದೆ ನೀರಿನಲ್ಲಿ ಕೊಚ್ಚಿಹೋಗಿ ನನ್ನನ್ನು ಅಮ್ಮನನ್ನು ಜೀವನಪೂರ್ತಿ ಅನಾಥಭಾವ ತುಂಬುವಂತೆ ಮಾಡಿದ ಜಾಗ"

   ಆದಿನ ಕಣ್ಣಮುಂದೆ ಬಂದಿತು, ಬೆಳಗಿನ ಆರುಗಂಟೆ ಸಮಯವೇನೊ, ಬೇಡವೆಂದು ಅಮ್ಮ ತಡೆಯುತ್ತಿದ್ದರು ಮೊಂಡುತನ ಮಾಡಿ ಸ್ನಾನಕ್ಕೆ ಇಳಿದ ಅಪ್ಪ, ಇದೇ ಶ್ರಾವಣಮಾಸವಿರಬಹುದೇನೊ ತುಂಗಾನದಿ ಕೆಂಪು ಬಣ್ಣದ ಹೊಸನೀರಿನಿಂದ ತುಂಬಿ ಹರಿಯುತ್ತಿದ್ದಳು. ಹೆಜ್ಜೆ ಜಾರಿದ ಅಪ್ಪ ಕಣ್ಣೆದುರೆ ಕೊಚ್ಚಿಹೋದರು, ಅಮ್ಮ ಜೋರಾಗಿ ಕೂಗುತ್ತಿದ್ದಳು. ನಂತರ ಜನ ಸೇರಿದರು. ಪೋಲಿಸರಿಗು ತಿಳಿಸಲಾಯಿತು. ಕಡೆಗೂ ಅಪ್ಪ ಸಿಕ್ಕಿದ್ದು ಎಷ್ಟೋ ದೂರದಲ್ಲಿ ಅದು ಹೆಣವಾಗಿ, ಎಲ್ಲ ಕರ್ಮಗಳನ್ನು ಇಲ್ಲಿಯೆ ಮುಗಿಸಲಾಯಿತು. ಶಾರದೆಯ ದರ್ಶನಮಾಡಲು ಬಂದವರು ಬದುಕಿನ ಆದಾರವನ್ನು ಕಳೆದುಕೊಂಡು ಹಿಂದಿರುಗಿದರು, ಆಕೆಯ ದರ್ಶನ ಪಡೆಯದೆ.
****************************************   ೩

ವಿಷಾದಭಾವ ತುಂಬಿಕೊಂಡಿತ್ತು ಶಶಿಯ ಮನದಲ್ಲಿ ಯೋಚಿಸುತ್ತಿದ್ದ ಇನ್ನೆಂದು ನನ್ನ ಜೀವನದಲ್ಲಿ ಒಳ್ಳೆಯ ದಿನಗಳು ಬರಲಾರವು. ಏಕೆ ಬದುಕಬೇಕು ಈ ಬದುಕು, ಯಾರಿಗಾಗಿ?, ಅಪ್ಪ ಸತ್ತ ಜಾಗಕ್ಕೆ ತಲುಪಿರುವೆ ಸರಿಯಾಗಿ. ಈ ಸೇತುವ ಇರುವ ಸ್ಥಳದಲ್ಲಿಯೆ ಅನ್ನಿಸುತ್ತೆ , ಕೆಳಗೆ ಹರಿಯುತ್ತಿರುವ ನೀರಿನಲ್ಲಿ  ಅಪ್ಪನ  ಆತ್ಮ ಮನ ದೇಹಗಳು ಬೆರೆತು ಹೋಗಿವೆ. ನಾನು ಅಲ್ಲಿಯೆ ಸೇರಿಬಿಡಬೇಕು ಈ ಜೀವನವನ್ನು ಕೊನೆಮುಟ್ಟಿಸಿಬಿಡಬೇಕು. ಈಗ ನೋಡುತ್ತಿರುವ ಸೂರ್ಯಾಸ್ತವೆ ನನ್ನ ಜೀವನದ ಕಡೆಯ ಸೂರ್ಯಾಸ್ತವಾಗಲಿ ಅಂದುಕೊಂಡ ಶಶಿ.

ಅವನ ಕಣ್ಣುಗಳು ಸೂರ್ಯನನ್ನೆ ದಿಟ್ಟಿಸುತ್ತಿರಲು ಮತ್ತೇನು ಕಾಣದಾಯಿತು. ಮನಸ್ಸು ಕುಸಿದುಹೋಗಿ ಶೂನ್ಯವನ್ನು ತಲುಪಿತು. ಮತ್ತೇನು ತುಂಬಿ ಹರಿಯುತ್ತಿರುವ ರುದ್ರೆ ತುಂಗೆಯ ಸುಳಿಯಲ್ಲಿ ಸೇರಿಹೋಗಲಿ ನನ್ನ ಜೀವ ದೇಹಗಳು. ಯಾರಿಗು ಬೇಡದ ನನಗು ಬೇಡದ ಈ ಜೀವನ ಕೊನೆಗಾಣಲಿ. ಕೈಯಲ್ಲಿ ಹಿಡಿದಿದ್ದ ಸೇತುವೆಯ ಮೇಲಿನ ಹಿಡಿತ ಬಿಗಿಯಾಯ್ತು, ಕಾಲುಗಳು ನಿದಾನವಾಗಿ ನೆಲದಿಂದ ಮೇಲೇಳುತ್ತಿವೆ, ಕಣ್ಣಲ್ಲಿ ಮುಳುಗುಸೂರ್ಯನ ಕೆಂಪುವರ್ಣ ತುಂಬಿದೆ....ಎಲ್ಲ ಮುಗಿಯಿತು...ಅಂದುಕೊಂಡ
.....
...
ಬಲಗಡೆಯ ಹೆಗಲ ಮೇಲೆ ಯಾವುದೊ ಒತ್ತಡ ಬಿದ್ದಂತೆ ಅನುಭವವಾಯಿತು, ಮೃದುವಾದ ಸ್ಪರ್ಶ , "ದೇವಸ್ಥಾನಕ್ಕೆ ಹೋಗಲಿಲ್ಲವೆ ಇಲ್ಲಿ ಏಕಪ್ಪ ನಿಂತಿದ್ದೀಯ" , ಮನ ಒಲೈಸುವ ಮದುರ ನುಡಿ. ನಿದಾನವಾಗಿ ಕಣ್ಣು ತೆರೆದ. ಎದುರಿಗೆ ಯಾರೊ ನಿಂತಿದ್ದಾರೆ. ಯಾರೊ ಹೆಂಗಸು, "ಏಕೆ ಇಲ್ಲಿ ಒಬ್ಬನೆ ನಿಂತೆ, ದೇವಾಲಯಕ್ಕೆ ಹೋಗಲಿಲ್ಲವೆ".  ಶಶಿ ಉತ್ತರ ಕೊಡಲಿಲ್ಲ ಯಾರೀಕೆ ಎನ್ನುತ್ತ ದಿಟ್ಟಿಸಿದ. ತಕ್ಷಣ ನೆನಪಿಗೆ ಬಂದಿತು! , ಬೆಳಗ್ಗೆ ನನ್ನ ಜೊತೆ ರೂಮು ಪಡೆದವರು, ಏನು ಉತ್ತರ ಕೊಡಲು ತೋಚದೆ ಆಕೆಯನ್ನು ದೃಷ್ಟಿ ಶೂನ್ಯನಾಗಿ ಆಕೆಯನ್ನು ದಿಟ್ಟಿಸಿದ.  ಸಣ್ಣ ಮುಗುಳ್ನಗು ಆಕೆಯ ಮುಖವನ್ನು ತುಂಬಿತು. ಸೂರ್ಯನ ಕಡೆಯ ಕಿರಣಗಳು ಅವಳ ಮುಖದ ಮೇಲೆ ಬಿದ್ದು ಅವಳ ಮುಖದ ಸೊಭಗನ್ನು ನೂರ್ಮಡಿ ಹೆಚ್ಚಿಸಿತ್ತು. " ನಡೆ  ದೇವರ ದರ್ಶನ ಪಡೆಯುವಿಯಂತೆ " ಆಕೆಯ ದ್ವನಿಯಲ್ಲಿದ್ದ ಅಗೋಚರ ಅಪ್ಪಣೆಯ ದ್ವನಿಗೆ ಎದುರಾಡಲು ತೋಚದೆ ನಿದಾನಕ್ಕೆ ಅವಳ ಹಿಂದೆ ಹೊರಟ ಶಶಿ.

***************************************  ೪

ದೇವಾಲಯದ ಬಾಗಿಲವರೆಗು ಬಂದ ಆಕೆ "ನೀನು  ಹೋಗಿ ದೇವಿಯ ದರ್ಶನ ಮಾಡಿ ಬಾ, ನಂತರ ಊಟ ಮಾಡಿ ಊರಿಗೆ ಹೊರಡಲು ಅನುಕೂಲವಾಗುತ್ತೆ, ನನಗೆ ಇನ್ನು ರೂಮಿನ ಅವಶ್ಯಕತೆಯಿಲ್ಲ ನಾನು ಹೊರಡುವಳೆ, ಹಿಡಿ" ಎಂದು ರೂಮಿನ ಕೀಲಿಯನ್ನು ಅವನಿಗೆ ನೀಡಿದರು.. ಅವಳ ಮುಖ ನೋಡಿದ ಶಶಿ , ಆಕೆ  " ನಾನಿಲ್ಲಿಯೆ ಇರುತ್ತೇನೆ ನೀನು ಒಳ ಹೋಗಿ ದೇವರ ದರ್ಶನ ಮಾಡಿ ಬಾ" ಎಂದರು.. ನಿದಾನವಾಗಿ ಒಳಬಂದ ಶಶಿ. ದೇವಾಲಯದ ಒಳ ಅಂಗಳ ಅವನ ಕಣ್ಣುಮನಸನ್ನು ತುಂಬಿತು. ಹಳೆಯ ದೇವಾಲಯ. ದೇವಿಯ ವಿಗ್ರಹದ ಕಾಣುವಂತೆ ಮುಂದೆ ನಿಂತ. ಒಳಗೆ ಕುಂಕುಮಾರ್ಚನೆ ನಡೆದಿತ್ತು. ಅರ್ಚಕರು ಮಂಗಳಾರತಿ ತಂದು ಕೊಟ್ಟರು, ತೆಗೆದುಕೊಂಡ, ಅವರು ಕೊಟ್ಟ ಪ್ರಸಾದ ಕುಂಕುಮ ತೆಗೆದುಕೊಂಡು ನಮಸ್ಕರಿಸಿ,ಒಳಗಿನ ಪ್ರಾಂಗಣದಲ್ಲಿ ಸುತ್ತು ಬಂದ. ತುಂಬಾ ಹಳೆಯ ದೇವಾಲಯ ಅನ್ನಿಸಿತು ಅವನಿಗೆ. ಪುನಃ ಮುಂದೆ ಬಂದು ಶಾರದದೇವಿ ಕಾಣುವಂತೆ ಕಂಬಕ್ಕೆ ಒರಗಿ ಕುಳಿತ. ಕಣ್ಣುಮುಚ್ಚಿದ.
ಯಾರೊ ಒಬ್ಬಾಕೆ ಸುಶ್ರಾವ್ಯವಾಗಿ ಹಾಡುತ್ತಿದ್ದಳು ಶಾಸ್ರ್ತೀಯ ಗಾಯನ "ನಮ್ಮಮ್ಮ ಶಾರದೆ...." .ಬೆಳಗಿನಿಂದ ಆದ ಆಯಾಸಕ್ಕೊ ಆಕೆಯ ಹಾಡಿನಲ್ಲಿದ್ದ ಮಾಧುರ್ಯಕ್ಕೊ, ದೇವಾಲಯದ ವಾತವರಣವೊ,ಶಶಿಯ ಕಣ್ಣು ಎಳೆಯುತ್ತಿತ್ತು ಅವನ ಮನಸ್ಸು ಏಕೊ ಹಗುರವಾಗಿ ಮನದ ದುಗುಡವೆಲ್ಲೆ ಕರಗಿ ನೀರಾದಂತೆ ಭಾವ. ದೇಹ ಮನಸ್ಸುಗಳನ್ನೆಲ್ಲ ತುಂಬಿದ್ದ ನೋವು ತನ್ನನ್ನ ಬಿಟ್ಟು ಹೊರಟುಹೋಯಿತೇನೊ ಅನ್ನುವ ಭಾವ ಮನಸ್ಸು ತುಂಬಿತು. ಮತ್ತೊಮ್ಮೆ ನಮಸ್ಕರಿಸಿ ಹೊರಬಂದ.
ಈಗ ಇಲ್ಲಿದ್ದು ಇನ್ನೇನು ಮಾಡುವುದು, ಹೊರಟುಬಿಡೋದು ಅಷ್ಟೆ, ಸುತ್ತಲ್ಲು ದಿಟ್ಟಿಸಿದ. ಎಲ್ಲಿಯು ಆಕೆಯ ಸುಳಿವಿಲ್ಲ. ಹೊರಬಂದು ಹತ್ತಿರದ ಹೋಟೆಲಿನಲ್ಲಿ ಊಟ ಮುಗಿಸಿ ರೂಮಿಗೆ ಹೋದ. ತಣ್ಣನೆಯ ನೀರಿನಲ್ಲಿ ಮುಖ ತೊಳೆದು ಬ್ಯಾಗಿನಲ್ಲಿ ಬಟ್ಟೆಯಲ್ಲ ತುರುಕಿ ಸಿದ್ದನಾಗಿ,ಸಮಯ ನೋಡಿದ ರಾತ್ರಿಯ ಒಂಬತ್ತು ಗಂಟೆಯಾಗಿತ್ತು. ರೂಮಿನ ಕೀಲಿಯನ್ನು ಮೇಟಿಯನ್ನು ಹುಡುಕಿ ಕೊಟ್ಟು , ಕೆಳಗೆ ಬಂದ. ರಸ್ತೆಗೆ ಬರುವಾಗಲೆ ಬೆಂಗಳೂರಿಗೆ ಹೋಗುವ ಬಸ್ಸು ಬಂದಿತು, ನೋಡೋಣ ಅಂತ ಕೈಹಿಡಿದರೆ, ಅವನ ಅದೃಷ್ಟ ಬಸ್ಸು ಅಲ್ಲಿಯೆ ನಿಲ್ಲಿಸಿದ ಡ್ರೈವರ್. ಬಸ್ಸನ್ನು ಹತ್ತಿ ಟಿಕೆಟ್ ಪಡೆದು ಕಿಟಕಿಯ ಪಕ್ಕದ ಖಾಲಿಯಿದ್ದ ಸೀಟನ್ನು ಆರಿಸಿ ಕುಳಿತ. ಬಸ್ಸು ಪುನಃ ದೇವಾಲಯದ ಮುಂದೆ ಬಂದಿತು. ಕಿಟಕಿ ಯಿಂದ ದೇವಾಲವನ್ನು ದಿಟ್ಟಿಸಿದ. ದೇವಾಲಯದ ಹೆಬ್ಬಾಗಿಲಿನ ಮುಂದೆ, ನಿಂತಿದ್ದಾರೆ, ಯಾರಾಕೆ "ಹೌದು ನನ್ನ ಜೊತೆ ಇದ್ದವರೆ" ಅಂದುಕೊಂಡ. ಆದರೆ ಅವರು ಯಾರು? , ನಾನು ಅವರ ಹೆಸರು ಕೇಳಲಿಲ್ಲವಲ್ಲ, ಅಷ್ಟೆ ಏಕೆ ಅವರ ಹತ್ತಿರ ಒಂದೆ ಒಂದು ಮಾತನ್ನು ಆಡಲಿಲ್ಲವೆ ಅಂತ ನೆನಪಿಗೆ ಬಂದಿತು. ಬಸ್ಸು ಮುಂದೆ ಹೊರಟಂತೆ, ತಲೆ ಹಿಂದೆ ಒರಗಿಸಿ ಕಣ್ಣು ಮುಚ್ಚಿದ ಶಶಿ. ಮನದಲ್ಲಿ ಅದೇ ಪ್ರಶ್ನೆ, ಯಾರಿರಬಹುದು ಆಕೆ..? , ನಿಧಾನಕ್ಕೆ ನಿದ್ದೆಗೆ ಜಾರಿದ ಶಶಿ.
********************************** ೫

Wednesday, February 27, 2013

ಕಥೆ : ಕಂಸ


ಕಾರ್ಗತ್ತಲು ಜಗತ್ತನೆಲ್ಲ ಆವರಿಸಿದಂತೆ ಕಾಣುತ್ತಿತ್ತು. ಆಕಾಶದಿಂದ ಒಂದೆ ಸಮಕ್ಕೆ ಸುರಿಯುತ್ತಿರುವ ವರ್ಷದಾರೆ. ಪದೆ ಪದೆ ಮಿಂಚಿನ ಬಳ್ಳಿಯೊಂದು ನಭವನ್ನು ಸೀಳಿದಾಗ ಆ ಬೆಳಕಲ್ಲಿ ಅರಮನೆಯ ಮುಂಬಾಗದಲ್ಲಿರುವೆ ಹೆಬ್ಬಾಗಿಲು ಕಂಡು ಮರೆಯಾಗುತ್ತಿದೆ. ಮಿಂಚಿನ ಜೊತೆ ಜೊತೆಗೆ ಕರ್ಣಪಟಲವನ್ನು ಸೀಳಿಬಿಡುವುದೆ ಎನ್ನುವಂತೆ ಎದೆಯನ್ನೆ ನಡುಗಿಸುತ್ತಿರುವ ಗುಡುಗಿನ ಶಬ್ದ. ಸಂಜೆ ಪ್ರಾರಂಬವಾದ ಮಳೆ ಸರಿರಾತ್ರಿಯಾದರು ನಿಲ್ಲುವ ಯಾವ ಸೂಚನೆಯು ಇಲ್ಲ.

 ಅರಮನೆಯ ಮಹಡಿಯ ಮುಂದಿನ ಪೌಳಿಯಲ್ಲಿ ಸುಖಾಸನದ ಮೇಲೆ ಕುಳಿತು ಕತ್ತಲೆಯಲ್ಲಿ ಕಣ್ಣು ನೆಟ್ಟಿದ್ದಾನೆ ಮಹಾರಾಜ ಕಂಸ. ಇಂದೇತಕೊ ಮಲಗಿದರು ನಿದ್ದೆಯೆ ಸನಿಹ ಬರುತ್ತಿಲ್ಲ ಅವನಿಗೆ. ಮನದಲ್ಲಿ ಎಂತದೊ ಆತಂಕ, ಭಯ!.  ಈಗ ಬರುತ್ತಿರುವುದು ಯಾವ ಮಳೆಯೊ ಎಂದುಕೊಂಡ ಕಂಸ, ಅದೆಲ್ಲ ಅವನ ತಲೆಗೆ ಹೊಳೆಯುವದಿಲ್ಲ,  "ಈದಿನ ಅಷ್ಟಮಿಯೊ ನವಮಿಯೊ ಇರಬಹುದು" ಅಂದು ಕೊಂಡ. ಕಪ್ಪುಮೋಡಗಳು ಆಕಾಶವನ್ನೆಲ್ಲ ತುಂಬಿ ಸುರಿಯುತ್ತಿರುವ ಮಳೆಯಲ್ಲಿ ಚಂದ್ರನಾಗಲಿ ನಕ್ಷತ್ರವಾಗಲಿ ಕಾಣುವುದು ಅಸಾದ್ಯವಾಗಿತ್ತು.

  ಮಳೆಯ ಸತತ ಶಬ್ದವನ್ನು ಸೀಳಿದಂತೆ ಎಲ್ಲಿಯೊ ಒಂದು ಸಣ್ಣ ಶಬ್ದ ಕೇಳುತ್ತಿದೆ, ಕಿವಿಗೊಟ್ಟು ಆಲಿಸಿದ, "ಹೌದು ಯಾವುದೊ ಸಣ್ಣ ಮಗು ಅಳುವ ಶಬ್ದ" ಅನ್ನಿಸಿದಾಗ ಕನಲಿ ಹೋದ. ಏಕೊ ಅವನಿಗೆ ಮಗು ಅಳುವ ಶಬ್ದ ಎಂದರೆ ಮನಸ್ಸು ಕದಡಿ ಹೋಗಿ ಭಯವೊ ಕೋಪವೊ ಆವರಿಸುತ್ತದೆ ಆಗ ಏನೊ ಮಾಡುತ್ತಾನೆ ಅವನಿಗೆ ತಿಳಿಯುವದಿಲ್ಲ. ತಕ್ಷಣ ಪಕ್ಕದಲ್ಲಿದ್ದ ಕರೆಗಂಟೆ ಬಾರಿಸಿದ. ಸ್ವಲ್ಪ ಹೊತ್ತಿನಲ್ಲಿ ಯಾರೊ ಮರದ ಮೆಟ್ಟಿಲು ಹತ್ತಿಬರುತ್ತಿರುವ ಶಬ್ದ. ಕಂಸನ ಮುಂದು ಕಾವಲುಗಾರನೊಬ್ಬ ಬಂದು ನಿಂತ, ಮಳೆಯಲ್ಲಿ ಅವನ ಬಟ್ಟೆಗಳು ತೋಯಿದಿದ್ದವು. ತಲೆಯ ಕೂದಲಿಂದ ನೀರು ಇಳಿಯುತ್ತಿತ್ತು, ಅದನೆಲ್ಲ ಗಮನಿಸುವಷ್ಟು ಸಹನೆ ಅವನಿಗಿಲ್ಲ, ಅಲ್ಲದೆ ಹಚ್ಚಿರುವ ಒಂದು ಹಣತೆ ಹೊರತು ಪಡಿಸಿ ಯಾವ ದೀಪವು ಇಲ್ಲ, ಅದು ಯಾವ ಘಳಿಗೆಯಲ್ಲು ನಂದ ಬಹುದು.
"ಯಾವ ಮಗುವದು ಅಳುತ್ತಿರುವುದು ನನಗೆ ಮಗುವಿನ ಅಳುವ ಶಬ್ದ ಆಗದೆಂದು ತಿಳಿಯದೆ" ಎಂದ.
"ಮಹರಾಜ, ಹೆಬ್ಬಾಗಿಲ ಹತ್ತಿರ ಕಾವಲುಗಾರರ ಮನೆಗಳಿವೆ, ಅಲ್ಲಿಂದ ಬರುತ್ತಿರುವ ಯಾವುದೊ ಮಗುವಿನ ಅಳುವಿರಬಹುದು "ಎಂದ
"ನನಗದೆಲ್ಲ ಬೇಕಿಲ್ಲ ತಕ್ಷಣ ಅಳುವಿನ ಶಬ್ದ ನಿಲ್ಲ ಬೇಕು, ಆಗದಿದ್ದರೆ ಈಗಲೆ ಹೋಗಿ ಆ ಮಗುವಿನ ಕತ್ತು ಕತ್ತರಿಸಿ ಬಾ, ಇದು ರಾಜಾಜ್ಞೆ ಎಂದು ತಿಳಿ ಓಡು" ಎಂದ.
ಕಾವಲುಗಾರ ಒಟ್ಟಿಗೆ ಎರಡೆರಡು ಮೆಟ್ಟಿಲುಗಳನ್ನು ಇಳಿಯುತ್ತ ಓಡಿದ, ಮಗುವಿನ ಅಳುವನ್ನು ನಿಲ್ಲಿಸಲು. ಅವನಿಗೆ ಚೆನ್ನಾಗಿ ತಿಳಿದಿತ್ತು ಅದು ಅವನದೆ ಮನೆಯಿಂದ ಬರುತ್ತಿರುವ ಮಗುವಿನ ಅಳುವಿನ ಶಬ್ದ, ಅವನದೆ ಮಗು, ಸಂಜೆಯಿಂದ ಹೊಟ್ಟೆನೋವಿಗೊ ಏನೊ ಅಳುತ್ತಲೆ ಇತ್ತು. ಅರೆ ಕ್ಷಣದಲ್ಲಿಯೆ ಮಗುವಿನ ಅಳುವಿನ ಶಬ್ದ ಕೇಳದಾಯಿತು.
---------------------------------------------------------------------------------------------------------------

ಮಗುವಿನ ಅಳು......
ಕಂಸನ ಮನಸನ್ನೆ ಅಲ್ಲೋಲ ಕಲ್ಲೋಲ ಮಾಡಿತ್ತು.... ಮನಸ್ಸು ಎತ್ತಲೊ..
"ಎಲವೊ ಕಂಸ ನೀನು ಯಾರ ಮದುವೆಯನ್ನು ಸಂಭ್ರಮದಿಂದ ನಡೆಸಿದ್ದೀಯ, ನಿನ್ನ ತಂಗಿ ದೇವಕಿ, ಅವಳ ಗರ್ಭದಲ್ಲಿ ಜನಿಸುವ ಎಂಟನೆ ಮಗುವಿನಿಂದಲೆ ನಿನಗೆ ಮರಣ ಇದು ಸತ್ಯ.."
ಯಾರ ದ್ವನಿಯದು, ಅರಿವೆ ಆಗಲಿಲ್ಲ, ದೇವಕಿ ಮದುವೆಯ ಸಂಭ್ರಮ  ಮನಸನ್ನೆಲ್ಲ ಆಕ್ರಮಿಸಿದ್ದಾಗ ,ತನ್ನ ತಂಗಿ ದೇವಕಿ ಹಾಗು ತಾನೆ ಆಸ್ಥೆಯಿಂದ ಆರಿಸಿ ತಂದ ಅವಳ ವರ ವಸುದೇವ ಗಂಡು,ಇಬ್ಬರನ್ನು ಕೂಡಿಸಿ ಮೆರವಣಿಗೆಯ ರಥವನ್ನು ತಾನೆ ನಡೆಸಿದ್ದಾಗ, ಆಕಾಶದಿಂದ ಎಂಬಂತೆ ಆ ದ್ವನಿ ಜೋರಾಗಿ ಕೇಳಿಬಂದಿತು, ಯಾರೋ ಕಹಳೆಯೊಳಗೆ ಮುಖವಿಟ್ಟು ನುಡಿದಂತೆ ದೊಡ್ದ ದ್ವನಿ. ಒಂದು ಕ್ಷಣ ನಾನು ಸ್ಥಬ್ದನಾದೆ, ಸುತ್ತಲಿನ ಜನರೆಲ್ಲ ಅಶರೀರವಾಣಿ, ನಭಮಂಡಲದಿಂದ ಮೂಡಿಬಂದಿತು ಅನ್ನುವಾಗ ತನ್ನನ್ನು ಪೂರ್ಣವಾಗಿ ಆವರಿಸಿದ ಜೀವಭಯ ತಕ್ಷಣ ತನ್ನನ್ನು ನಂಬುವಂತೆ ಮಾಡಿತು.

  ಕಂಸನ ಮನಸು ಈಗ ಚಿಂತಿಸುತ್ತಿದೆ, ಅದು ನಿಜವಾಗಿಯು ಅಶರೀರವಾಣಿಯ?, ನಭದಿಂದಲೆ ಮೂಡಿಬಂದಿತ ಅಥವಾ ಯಾರಾದರು ಶತ್ರುಗಳ ಕುಚೋದ್ಯವ, ತನ್ನನ್ನು ಜೀವಭಯ ಹುಟ್ಟಿಸಿ ಕುಗ್ಗಿಸುವ ಉಪಾಯವ? ಈಗ ನಿರ್ದರಿಸಲಾಗುತ್ತಿಲ್ಲ.ಆಗಲೆ ಸಾವದಾನವಹಿಸಿ ಸರಿಯಾಗಿ ಶೋದ ನಡೆಸಿದ್ದಲ್ಲಿ ನಿಜ ಸಂಗತಿ ಬಯಲಾಗುತ್ತಿತ್ತು. ಇಷ್ಟು ವರ್ಷಗಳ ನಂತರ ಅದನ್ನು ವಿಚಾರಿಸಲು ಹೊರಟರೆ ತಾನು ನಗೆಪಾಟಲಿಗೆ ಈಡಾಗುತ್ತೀನಿ. ಆಗ ವಿವೇಕಿಯಂತೆ ವರ್ತಿಸದೆ ಅತಿಯಾಗಿ ಬೆದರಿಬಿಟ್ಟೆ ಅನ್ನಿಸಿತು.

  ನಂತರದ ಘಟನೆಗಳೆಲ್ಲ ಅವನ ಎದುರು ನೆರಳಿನಂತೆ ಹಾದುಹೋದವು,ಮದುವೆಯ ಸಂಭ್ರಮ ಕಳೆದು ಮಸಣದ ಮನೆಯಂತಾಯಿತು,ಹೆತ್ತ ತಂದೆಯನ್ನು ಸೆರೆಗೆ ತಳ್ಳಿ ತಾನು ರಾಜನಾಗಿದ್ದರು, ಹೆತ್ತವರೆ ತನ್ನನ್ನು ರಕ್ಕಸನೆಂದು ನಿರ್ದರಿಸಿದ್ದರು, ತಂಗಿಯ ವಿಷಯಕ್ಕೆ ತನ್ನ ಮನಸ್ಸು ಮೃದುವಾಗುತ್ತಿತ್ತು.ಅವಳ ನಿಲುವು ರೂಪಗಳೆ ಅಂತಹುದು. ಸೋತು ನಡೆಯುವ ಸ್ವಾಭಾವದವಳು.ತನ್ನ ಬಗ್ಗೆ ಅವಳಿಗೆ ಪ್ರೀತಿಯಿತ್ತೊ,ಭಯವೊ ತಿಳಿಯದು, ಆದರೆ ತಂದೆಯನ್ನು ಸೆರೆಗೆ ಹಾಕುವಾಗಲು ಅವಳು ತನ್ನ ಬಳಿ ಆ ವಿಷಯದ ಬಗ್ಗೆ ತುಟಿ ಬಿಚ್ಚಲಿಲ್ಲ. ಅಂತಹ ತಂಗಿಯನ್ನು ಅವಳ ಗಂಡನನ್ನು ಕೊಲ್ಲಲ್ಲು ಕತ್ತಿ ಎತ್ತಿದೆ.

 ಅವಳು ಕಣ್ತುಂಬಿದಳು,ಅವಳ ಗಂಡನಾದರೊ ಜೀವ ಉಳಿಸುವಂತೆ ಬೇಡಿದ, ಅವಳು ಒಮ್ಮೆಯಾದರು ತನ್ನನ್ನೆ ಉಳಿಸೆಂದು ಬೇಡಲಿಲ್ಲ ಎಂದು ನೆನೆಯಿತು ಅವನ ಮನ.ಕಡೆಗೆ ದೇವಕಿಯ ಗಂಡನೆ ಒಪ್ಪಿಕೊಂಡಂತೆ, ತನ್ನ ಮಕ್ಕಳನ್ನೆಲ್ಲ ಒಪ್ಪಿಸುವ ಒಪ್ಪಂದದಂತೆ ತಂಗಿ ಹಾಗು ಅವಳ ಗಂಡನನ್ನು ಸೆರೆಗೆ ತಳ್ಳಲಾಯಿತು.ಹತ್ತು ಹನ್ನೊಂದು ವರ್ಷಗಳ ಅವದಿಯಲ್ಲಿ ಅವಳನ್ನು ನೋಡಲು ಹೋಗಿದ್ದು, ಅವಳು ಮಗುವಿಗೆ ಜನ್ಮ ಕೊಟ್ಟಾಗ ಮಾತ್ರ, ಅದು ಆ ಮಗುವನ್ನು ಸೆಳೆದು ಕೊಂದುಹಾಕಲು.

 ಮೊದಲೆಲ್ಲ ತಾನು ಮಗುವನ್ನು ಕೊಲ್ಲಲ್ಲು ಸೆರೆಮನೆಗೆ ಹೋದಾಗ ಅಳುತ್ತಿದ್ದಳು,ಶಪಿಸುತ್ತಿದ್ದಳು, ತನ್ನ ಮಗುವನ್ನು ಕೊಲ್ಲಬೇಡವೆಂದು ಬೇಡುತ್ತಿದ್ದಳು. "ಕೇವಲ ಎಂಟನೆ ಮಗುವಿನಿಂದ ತಾನೆ ನಿನಗೆ ಮರಣ ಇವನ್ನೆಲ್ಲ ಉಳಿಸು" ಎನ್ನುತ್ತಿದ್ದಳು.ಸಾಲು ಸಾಲಾಗಿ ನಾನು ಅವಳ ಮಗುವನ್ನು ಕೊಲ್ಲುತ್ತ ಹೋದಂತೆ ಕಡೆಗೆ ಅವಳು ಅಳು ನಿಲ್ಲಿಸಿದಳು.ಇದು ತನ್ನ ಕರ್ಮ ಎಂದು ನಿರ್ಣಯಿಸಿದ್ದಳೇನೊ. ಯಾವುದೊ ನರಭಕ್ಷಕ ಹುಲಿಬಂದು ಮಗುವನ್ನು ಹೊತ್ತೋಯ್ದಂತೆ ಇರುತ್ತಿದ್ದಳು.ಇನ್ನು ವಸುದೇವನೊ, ಅವನ ಪ್ರತಿಭಟನೆಯನ್ನು ತಾನು ಲೆಕ್ಕಿಸಲಿಲ್ಲ.

ಕಂಸನ ಮನ ಚಿಂತಿಸಿತು, ನನ್ನ ಮನಸ್ಸು ಹೇಗೆ ಅಷ್ಟೊಂದು ಕ್ರೂರವಾಯಿತು. ಒಡಹುಟ್ಟಿದವಳ ಮಕ್ಕಳನ್ನು, ಆಗ ತಾನೆ ಹುಟ್ಟಿದ ಬೊಮ್ಮಟೆಗಳನ್ನ ಯಾವ ಕರುಣೆಯು ಇಲ್ಲದೆ ಸೆರೆಮನೆಯ ಗೋಡೆಗೆ ಅಪ್ಪಳಿಸಿ, ಕತ್ತರಿಸಿ ಕೊಂದು ಹಾಕಿದೆ, ಅದು ಹೆಣ್ಣೊ ಗಂಡೊ ಎಂದು ಕೂಡ ನೋಡದೆ.ತನ್ನಲ್ಲಿ ಆಳವಾಗಿ ಹುದುಗಿದ್ದ ಮರಣದ ಭಯ ತನ್ನನ್ನು ಇಷ್ಟೊಂದು ಕಾಡಿಸಿತೆ.ತಾನು ನಿಜಕ್ಕು ನೆಮ್ಮದಿಯಾಗಿ ಮಲಗಿ ನಿದ್ದೆ ಮಾಡಿದ್ದಾದರು ಯಾವಾಗ?.
ಈಗ ದೇವಕಿ ಪುನಃ ಗರ್ಭಿಣಿ, ಅವಳ ಎಂಟನೆ ಮಗು, ಕಂಸನ ಮರಣಕ್ಕೆ ಕಾರಣವಾಗಬಹುದಾದ ಮಗು ಒಂದೆರಡು ದಿನದಲ್ಲಿ ಹುಟ್ಟಲಿದೆ. ಸೆರೆಮನೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ, ಪ್ರತಿಗಂಟೆಗೊಮ್ಮೆ ಅವಳ ಸ್ಥಿಥಿ ತಿಳಿಸಬೇಕೆಂದು. ಮಗುವಿಗೆ ಜನ್ಮ ನೀಡುವ ಕಾಲಕ್ಕೆ ಒಡನೆಯೆ ಅವನಿಗೆ ಸುದ್ದಿ ಕಳಿಸಬೇಕೆಂದು.ಪ್ರತಿದಿನ ಅವನು ಹೋಗಿ ನೋಡಿ ಬರುತ್ತಿದ್ದಾನೆ ಯಾವುದೆ ಮೋಸಕ್ಕೆ ಅವಕಾಶವಿರಬಾರದೆಂದು.

  ಮತ್ತೊಂದು ಮಿಂಚು ಆಕಾಶವನ್ನೆಲ್ಲ ಆವರಿಸಿತು. ಹಿಂದೆಯೆ ಬಂದ ಕರ್ಣಕಠೋರ ಗುಡುಗಿನ ಶಬ್ದ ಕಂಸನ ಎದೆಯನ್ನೆಲ್ಲ ವ್ಯಾಪಿಸಿ, ಒಳಗೆ ನಡುಕ ಹುಟ್ಟಿತ್ತು.ಗುಡುಗಿನ ಶಬ್ದ ಪೂರ್ತಿ ಅಡಗುವ ಮುನ್ನವೆ ಯಾರೊ ದಡ ದಡ ಮೆಟ್ಟಿಲು ಹತ್ತಿ ಬರುತ್ತಿರುವ ಶಬ್ದ. ದೀವಟಿಗೆಯ ಬೆಳಕಲ್ಲಿ ಹಿಂದೆ ನೋಡಿದ ಅವನು,ಸೆರೆಮನೆಯ ಇಬ್ಬರು ಕಾವಲುಗಾರರು, ಮಳೆಯಲ್ಲಿ ತೋಯ್ದು ನಡುಗುತ್ತಿದ್ದರು. ಇವನನ್ನು ಕಂಡು ವಂದಿಸಿ ನಿಂತರು. ಇವನು ಅವರತ್ತ ನೋಡಿದ.ಅವರಲ್ಲೊಬ್ಬ ನುಡಿದ "ಪ್ರಭು ದೇವಕಿ ದೇವಿಯವರು ಮಗುವಿಗೆ ಜನ್ಮವಿತ್ತರು", ಎದೆಯ ಮೂಲೆಯಲ್ಲಿ ಪ್ರಾರಂಬವಾದ ನೋವು ಎದೆಯನ್ನೆಲ್ಲ ಆಕ್ರಮಿಸುತ್ತಿರುವಂತೆ,ಭಯ ಅನ್ನುವುದು ದೇಹ ಮನಸ್ಸುಗಳನ್ನೆ ಆಕ್ರಮಿಸಿತು.ಕಾಲು ಕುಸಿಯುತ್ತಿದೆ ಅನ್ನಿಸಿದರು ಎದ್ದುನಿಂತ ಕಂಸರಾಜ. ಕೈಯಲ್ಲಿ ಕತ್ತಿ ಸಿದ್ದವಾಗಿಯೆ ಇತ್ತು, ಅವರ ಮಾತಿಗೆ ಏನನ್ನು ಹೇಳದೆ ತಾನೆ ಸೆರೆಮನೆಯತ್ತ ಹೊರಟ ಅವನನ್ನು ಕಂಡ ಸೆರೆಮನೆಯ ಕಾವಲುಗಾರರು ತಮ್ಮೊಳಗೆ ನಡುಗಿದರು.
--------------------------------------------------------------------------------------------------------------

 ನಡುರಾತ್ರಿ ಕಳೆದು ಕೆಲವು ಸಮಯವಾಗಿರಬಹುದು.ಸೆರೆಮನೆಯೆಲ್ಲ ಪಿಸುಮಾತಿನಿಂದ ತುಂಬಿದೆ. ಅಲ್ಲಲ್ಲಿ ದೀಪಗಳನ್ನು ಹಚ್ಚಿಡಲಾಗಿದೆ. ಹೊರಗೆ ಮಿಂಚು ಗುಡುಗಿನ ಆರ್ಭಟ. ಯಾವುದೆ ಪರಾಕುಗಳಿಲ್ಲದೆ, ಬೆಂಗಾವಲು ಪಡೆ ಜೊತೆಗಿಲ್ಲದೆ, ಕಂಸ ಒಬ್ಬನೆ ನುಗ್ಗಿಬಂದ. ಅವನ ಮುಖದಲ್ಲಿ ತುಂಬಿದ ಕ್ರೌರ್ಯವನ್ನು ನೋಡಲಾರದೆ ಕಾವಲುಗಾರರು ಮುಖ ಪಕ್ಕಕ್ಕೆ ತಿರುಗಿಸಿದರು.
ದೇವಕಿಯ ಕೋಣೆಗೆ ಅವನು ನುಗ್ಗಿದಂತೆ ಎದುರಿಗೆ ಬಂದ ವಸುದೇವ ,. ತನ್ನ ಭಾವಮೈದುನನ ಕಾಲಿನಹತ್ತಿರ ಬಗ್ಗಿ ಕುಳಿತು ಅವನನ್ನು ಪ್ರಾರ್ಥಿಸಿದ
"ಬೇಡ ಕಂಸ ಕ್ರೂರನಾಗಬೇಡ, ನಿನಗೆ ಎಲ್ಲ ಮಕ್ಕಳನ್ನು ಒಪ್ಪಿಸಿದ್ದೇನೆ, ಈಗ ಹುಟ್ಟಿರುವುದು ಹೆಣ್ಣು ಮಗು ಅದು ನಿನ್ನನ್ನೇನು ಮಾಡೀತು? ಅದನ್ನಾದರು ಉಳಿಸು"
ಕಂಸ ಕೊಂಚ ಆಶ್ಚರ್ಯಪಟ್ಟ "ಹೆಣ್ಣು ಮಗುವೆ!",  ಆದರೆ ಅವನು ಯಾರ ಮಾತು ಕೇಳಲು ಸಿದ್ದನಿರಲಿಲ್ಲ. ತನ್ನ ಸಾವಿಗೆ ಕಾರಣವಾಗಲಿರುವ ದೇವಕಿಯ ಸಂತಾನವೆ ಉಳಿಯಕೂಡದು. ಆಗ ತಾನೆ ಜನಿಸಿ ಕಣ್ಣುಮುಚ್ಚಿ ಮಲಗಿದ್ದ ಮಗುವಿನ ಮೇಲೆ ಹೊದೆಸಿದ್ದ ವಸ್ತ್ರವನ್ನು ಕಿತ್ತೆಸೆದ. ಎಚ್ಚೆತ್ತು ಕುಳಿತ ದೇವಕಿ ಕ್ರೂರದೃಷ್ಟಿಯಿಂದ ಅವನನ್ನು ದಿಟ್ಟಿಸಿದಳು.ತನ್ನ ಮಗುವನ್ನು ರಕ್ಷಿಸುವಂತ ತನ್ನ ಎರಡು ಕೈಯನ್ನು ಅದರ ಮೇಲೆ ಅಡ್ಡತಂದಳು.ಕಂಸ ಅಟ್ಟಹಾಸದಿಂದ ಅವಳ ಎರಡು ಕೈಯನ್ನು ಪಕ್ಕಕ್ಕೆ ಸರಿಸಿ, ಮಗುವಿನ ಬಲಬುಜಕ್ಕೆ ಕೈ ಹಾಕಿ ತನ್ನ ಒಂದೆ ಕೈಯಿಂದ ಮಗುವನ್ನು ಮೇಲೆ ಎತ್ತಿದ.
 
   ಕಣ್ಣು ಬಿಡದ ಮಗು ಯಾವ ಶಬ್ದವನ್ನು ಮಾಡಲಿಲ್ಲ,ಅದರ ನಾಲಿಗೆ ಮಾತ್ರ ತುಟಿಯನ್ನು ಸವರುತ್ತಿತ್ತು.ದೇವಕಿಯ ಯಾವ ಗೋಳನ್ನು ಕಿವಿಗೆ ಹಾಕಿಕೊಳ್ಳದೆ ಹೊರಬಂದ ಕಂಸ ವೇಗವಾಗಿ ಮೆಟ್ಟಿಲು ಹತ್ತುತ್ತ ಮೇಲಿನ ಅಂತಸ್ತಿಗೆ ಹೊರಟ. ಅವನನ್ನು ಯಾರು ಹಿಂಬಾಲಿಸಲಿಲ್ಲ, ಅಲ್ಲಿ ಏನು ನಡೆಯುತ್ತದೆ ಎಂದು ಎಲ್ಲರಿಗು ತಿಳಿದಿತ್ತು. ಮೇಲಿನ ಅಂತಸ್ತಿನ ಬಿಸಿಲುಚಾವಣಿಗೆ ಬಂದ ಕಂಸ , ಎಲ್ಲೆಲ್ಲು ಕತ್ತಲು ಆವರಿಸಿತ್ತು, ಮಿಂಚಿನ ಬೆಳಕು ಆಗಾಗ ಕಾಣಿಸುತ್ತಿತ್ತು.ಕ್ರೂರತನದಿಂದ ಮಗುವಿನ ಎರಡು ಕಾಲನ್ನು ಜೋಡಿಸಿ ತನ್ನ ಕೈಯಿಂದ ಬಲವಾಗಿ ಹಿಡಿದ, ಜೋರಾಗಿ ತಿರುಗಿಸಿ ತೂಗಿ, ಮಗುವನ್ನು ಗೋಡೆಗೆ ಆಪ್ಪಳಿಸುವಂತೆ ಎಸೆದ.....

ಆಶ್ಚರ್ಯ! ಗೋಡೆಗೆ ಬಡಿಯಬೇಕಿದ್ದ ಮಗು ಅವನ ಕೈಯಿಂದ ತಪ್ಪಿ, ಮೇಲೆ ಹಾರಿದಂತಾಯಿತು, ಮೇಲೆ ಹೋದಂತೆ ಮಗುವಿನ ಬದಲು ಇನ್ಯಾವುದೊ ರೂಪ ಗೋಚರಿಸುತ್ತಿದೆ! ಅವನ ಮನಸು ವಿಭ್ರಮೆಗೆ ಒಳಗಾಯಿತು. ಎದುರಿಗೆ ಕಾಣುತ್ತಿರುವ ದೇವತೆಯಂತ ರೂಪ ನಿಜವ ಇಲ್ಲ ತನ್ನ ಭ್ರಮೆಯ.ನಿಜವಾದರೆ ಅವಳು ಯಾರು ಮತ್ತು ಏಕೆ ಬಂದಿದ್ದಾಳೆ?. ತನ್ನ ಮರಣದ ಕ್ಷಣ ಈಗಲೆ ಬಂದಿತಾ? ಎಂದು ಕತ್ತಿಯನ್ನು ಎತ್ತಿ ಹೂಂಕರಿಸುತ್ತ ಕೇಳಿದ "ಯಾರು ನೀನು ನನ್ನ ಎದುರಿಗೆ ಹೇಗೆ ಬಂದೆ?"
ಸಂಪೂರ್ಣ ಖಾಲಿಯಾಗಿ ಬರಿ ಕತ್ತಲೆಯ ತುಂಬಿದ್ದ ಅಂತಸ್ತದು, ಅವಳ ನಗು ಉರುಳು ಉರುಳಾಗಿ ಅವನ ಕಿವಿಯನ್ನು ತುಂಬುತ್ತ ಅವನಲ್ಲಿ ಭಯವನು ಹುಟ್ಟಿಸುತ್ತಿದೆ.
"ಎಲವೊ ಕಂಸ ನಾನು ಮಾಯ, ವಿಷ್ಣುಮಾಯ. ನನ್ನನ್ನು ದುರ್ಗಿ ಎಂದು ಕರೆಯುವರು. ನಾನು ಯಾರು ಎಂಬುದಕ್ಕಿಂತ ಏಕೆ ಬಂದೆ ಎಂದು ತಿಳಿ,ನಿನ್ನ ಕಡೆಗಾಲ ಹತ್ತಿರ ಬಂದಾಯ್ತು.ನಿನ್ನ ಕೊಲ್ಲುವ ಶಿಶು ಭೂಮಿಗೆ ಆಗಲೆ ಬಂದಾಯ್ತು, ತುಂಬಿಹರಿಯುತ್ತಿರುವ ಯಮುನೆಯನ್ನು ದಾಟಿ ತನ್ನ ಮನೆ ಸೇರಿಯಾಯ್ತು. ನಿನ್ನ ದುಷ್ಟತನಕ್ಕೆ , ಕ್ರೌರ್ಯಕ್ಕೆ ಕೊನೆ ಹಾಕಲು ಇಲ್ಲಿಗೆ ಬರಲಿದೆ"
ಕಂಸ ಮತ್ತೆ ಕೃದ್ರನಾದ "ಎಲೆ ಮಾಯೆ, ನನ್ನನ್ನು ಕೊಲ್ಲುವ ಶಿಶು ಹುಟ್ಟಿದ ಮಾತ್ರಕ್ಕೆ ನಾನು ಅದರ ಬರವನ್ನು ನಿರೀಕ್ಷಿಸುತ್ತ ಕೂಡಲಾರೆ, ಹುಡುಕಿ ಆ ಮಗುವನ್ನು ಹುಡುಕಿ ಕೊಲ್ಲುವೆ. ಕಂಸನ ಶಕ್ತಿಗೆ ಆ ಮಗು ಎದುರೆ? ನಿನ್ನ ಮಾಯ ಶಕ್ತಿ ನನ್ನನ್ನೇನು ಮಾಡಲಾಗದು ಎಂದು ತಿಳಿ"

"ಅಯ್ಯೋ ಮೂರ್ಖ ನನ್ನ ಮಾಯೆಯ ಪರಿಯನ್ನು ನೀನು ಅರಿಯಲಾರೆ,ನಿನ್ನ ಸಾವನ್ನು ತಡೆಯುವೆ ಎಂಬ ಭ್ರಮೆಯಲ್ಲಿ ವಸುದೇವ ದೇವಕಿಯರನ್ನು ಸೆರೆಯಲ್ಲಿರಿಸಿದೆಯ? ಬುದ್ದಿಹೀನನೆ ಅವರನ್ನು ಒಂದೆ ಕೋಣೆಯಲ್ಲಿರಿಸಿ ಸಂಸಾರ ಮಾಡಲು ಏಕೆ ಬಿಟ್ಟೆ?, ಅವರಿಗೆ ಹುಟ್ಟುವ ಮಗುವನ್ನು ಕಾಯುತ್ತ ಏಕೆ ಕುಳಿತೆ?. ಅವರಿಬ್ಬರನ್ನು ಬೇರೆ ಬೇರೆ ಸೆರೆಮನೆಯಲ್ಲಿರಿಸಿ ಅವರಿಗೆ ಸಂತಾನವೆ ಆಗದಂತೆ ತಡೆಯಬಹುದಿತ್ತಲ್ಲವೆ. ನಿನಗೇಕೆ ಹೊಳೆಯಲಿಲ್ಲ ಅಥವ ನಿನ್ನ ಆಪ್ತರಾರು ಆ ಸಲಹೆ ಕೊಡಲಿಲ್ಲ ಏಕೆ?"
"ಹೌದು ನನಗೆ ಏಕೆ ಹೊಳೆಯಲಿಲ್ಲ " ಮಾಯೆಯನ್ನು ಪುನಃ ಕೇಳಿದ ಕಂಸ ಅಮಾಯಕನಂತೆ. ನಕ್ಕಳು ವಿಷ್ಣು ಮಾಯ ನಗುತ್ತ ಅಂದಳು "ಅದೇ ನಾನು ಎಂದು ತಿಳಿ".

   ಅವಳ ರೂಪ ಮಸುಕು ಮಸುಕಾಗಿ ಕರಗುತ್ತಿತ್ತು, ನಿದಾನವಾಗಿ ಮತ್ತೇನೊ ಹೊಳೆಯಿತು ಕಂಸನಿಗೆ " ತಡೆ ತಡೆ ಮಾಯ ಹೋಗಬೇಡ ನನ್ನನ್ನು ಕ್ರೂರಿ ಎಂದೆಯಲ್ಲವೆ, ದುಷ್ಟ ಎಂದು ಬಿರುದು ನೀಡಿದೆಯಲ್ಲವೆ? ಆದರೆ ಅದಕ್ಕೆ ನಾನು ಕಾರಣನೆ ಹೇಳು? ಪ್ರಕೃತಿಯಲ್ಲಿ ಹುಟ್ಟು ಸಾವನ್ನು ರಹಸ್ಯವೆನ್ನುತ್ತಾರೆ ಅದು ಮನುಷ್ಯನ ಅರಿವಿಗೆ ನಿಲುಕುವದಿಲ್ಲ. ಹೀಗಿರುವಾಗ ವಿಶ್ವದಲ್ಲಿ ಯಾರಿಗು ಇರದೆ ನನ್ನೊಬ್ಬನಿಗೆ ಮಾತ್ರ ಮರಣದ ಭವಿಷ್ಯವನ್ನು ಏಕೆ ಹೇಳಿದೆ?ದೇವಕಿಯ ಮಗನಿಂದಲೆ ನನಗೆ ಮರಣವೆಂದು ನೀನು ಮುಂದಾಗಿ ತಿಳಿಸದಿದ್ದರೆ ನಾನು ರಕ್ಕಸನಂತೆ ವರ್ತಿಸುತ್ತಿರಲಿಲ್ಲ ಅಲ್ಲವೆ?. ಅವಳನ್ನು ಸೆರೆಗೆ ತಳ್ಳಿ ಅವಳ ಮಕ್ಕಳನ್ನು ಕೊಲ್ಲುತಲು ಇರಲಿಲ್ಲ. ಮಾಯ, "ಜೀವ ಪ್ರತಿಯೊಬ್ಬರಿಗು ಪ್ರಿಯವಲ್ಲವೆ". ನನ್ನ ಜೀವ ಕಾಪಾಡಿಕೊಳ್ಳೂವುದು ನನ್ನ ಹಕ್ಕಲ್ಲವೆ , ಹೇಳು ನನಗೆ ಯಾವ ಕಾರಣಕ್ಕಾಗಿ ಮರಣದ ಭವಿಷ್ಯವನ್ನು ನುಡಿದೆ?"

ಮಾಯೆಯ ಸ್ವರೂಪ ಕರಗಿ ಕತ್ತಲಲ್ಲಿ ಒಂದಾಗಿ ಬೆರೆಯುತ್ತಿರುವಂತೆ ಕಂಸ ಜೋರಾಗಿ ಕೂಗಿತ್ತಿದ್ದ ಮತಿಗೆಟ್ಟವನಂತೆ "ನಿಲ್ಲು ಮಾಯ ಹೋಗಬೇಡ , ನನಗೆ ವಿಷಯ ತಿಳಿಸಿ ಹೋಗು". ಅವನ ದ್ವನಿ ಕೀರಲಾಗುತ್ತ ಹೋಗಿ ನಿಂತು ಹೋಯಿತು. ಸಂಪೂರ್ಣ ಕತ್ತಲಾವರಿಸಿತು. ಹೊರಗೆ ಮಳೆ ನಿಂತುಹೋಗಿ ಆಕಾಶ ಶುಭ್ರವಾಗುತ್ತಿತ್ತು. ಕಂಸ ಅಲುಗಾಡದಂತೆ ನಿಂತೆ ಇದ್ದ ಬೊಂಬೆಯಂತೆ.
---------------------------------------------------------------------------------------------

ನಿದಾನವಾಗಿ ಕತ್ತಲೆ ಕರಗಿ ಬೆಳಕು ಹರಿಯುತ್ತಿತ್ತು.ಮರಗಿಡಗಳಲ್ಲಿ ಪಕ್ಷಿಗಳ ಕಲವರ, ಹಾದಿಯಲ್ಲಿ ಹಸುಗಳ ಅಂಬಾ ಎಂಬ ಕೂಗು ಕೇಳುತ್ತಿರುವಂತೆ ಪೂರ್ವದಲ್ಲಿ ನಿದಾನವಾಗಿ ಕೆಂಪು ಮೂಡಿ ಬಾಲಸೂರ್ಯ ಹೊರಬರಲು ತಯಾರಿ ನಡೆಸಿದ್ದ. ಯಮುನಾ ನದಿಯನ್ನು ದಾಟಿ ಅತಿ ದೂರದಲ್ಲಿ , ಗೋಕುಲದಲ್ಲಿ ನಂದಗೋಪನ ಮನೆಯಲ್ಲಿ ಪುಟ್ಟ ಮಗುವಿನ ಅಳುವೊಂದು ಕೇಳುತ್ತಿದೆ. ಆಲಿಸಿ.... ... ನೀವು ಕೇಳಿ ಆ ಪುಟ್ಟ ಮಗುವಿನ ಅಳು....

ದಕ್ಷ ಯಜ್ಞ

" ರೀ ಗೊತ್ತಾಯ್ತ?" 
 ಬೆಳಗಿನ ತಿಂಡಿ ಮುಗಿಸಿ ಆ ದಿನದ ಸುದ್ದಿಪತ್ರಿಕೆ  ಹಿಡಿದು ಕುಳಿತಿದ್ದ ನಾನು ಏನು ಎಂದು ಕೇಳಲಿಲ್ಲ. ಏನೋ ಹೇಳುವುದಕ್ಕೆ ಅದು ಪೀಠಿಕೆ ಎಂದು ಗೊತ್ತು. ನಿವೃತ್ತನಾಗಿ ಎರಡು ವರ್ಷಗಳಾಗಿ ದೇಹಕ್ಕು, ಮನಸಿಗು ಒಂದು ರೀತಿಯ ಜಡತ್ವ ಅಭ್ಯಾಸವಾಗಿತ್ತು. ಪುನಃ ನನ್ನವಳೆ ಮುಂದುವರೆಸಿದಳು "ಮಧು ಊರಿಗೆ ಬಂದಿದ್ದಾನೆ". ಮಧು ಅಂದರೆ ಮಧುಸೂದನ, ನನ್ನ ಚಿಕ್ಕಮ್ಮನ ಮಗ ಶ್ರೀನಿವಾಸನ ಮೊದಲನೆ ಮಗ. ಶ್ರೀನಿವಾಸ ಹಾಗು ಅವನ ಹೆಂಡತಿ ವನಜ ನಮ್ಮ ಮನೆಯ ಹತ್ತಿರವೆ ಇದ್ದವರು. ಅವರಿಗೆ ಇಬ್ಬರು ಮಕ್ಕಳು ಮಧುಸೂದನ ಮತ್ತು ಕೇಶವ. ಹೀಗೆ ಇಪ್ಪತ್ತು ವರ್ಷಗಳ ಹಿಂದೆ ಶ್ರೀನಿವಾಸ ಕಾಶಿಗೆ ಎಂದು ಹೋದವನು ಹಾಗೆ ಮಾಯವಾಗಿಬಿಟ್ಟ. ಅವನು ಎಲ್ಲಿ ಹೋದ ಎಂಬುದೆ ತಿಳಿಯಲಿಲ್ಲ. ಪೋಲಿಸ ಮುಂತಾದ ಎಲ್ಲ ಮಾರ್ಗವು ಮುಗಿಯಿತು ಅವನು ಬದುಕಿದ್ದಾನೋ ಇಲ್ಲವೋ ಎಂಬ ಸುಳಿವು ಸಿಗದೆ ಕಡೆಗೆ ಎಲ್ಲ ಸುಮ್ಮನಾದರು. ವನಜ ಕೆಲಸಕ್ಕೆ ಸೇರಿದಳು. ಗಂಡ ಬಿಟ್ಟು ಹೋದ ಹಣವು ಸೇರಿ ಹೇಗೊ ಮಕ್ಕಳನ್ನು ಓದಿಸಿದಳು. ಅವಳಿಗೆ ಹಾಗು ಮಕ್ಕಳಿಗೆ ಪ್ರತಿ ಸಣ್ಣವಿಷಯಕ್ಕು ನನ್ನ ಬಳಿ ಬರುವುದು ಅಬ್ಯಾಸ. ನನಗು ಅಷ್ಟೆ ಶ್ರೀನಿವಾಸನ ಜೊತೆಯ ಸ್ನೇಹಕ್ಕೊ , ಹುಡುಗರ ಮೇಲಿನ ಕರುಣೆಗೊ ಅವರಿಗೆ ಸದಾ ಸಹಾಯ ಮಾಡುವಾಗ ಬೇಸರ ಅನ್ನಿಸುತ್ತಿರಲಿಲ್ಲ. ವನಜ ಹಾಗು ಇಬ್ಬರು ಹುಡುಗರು ಮಧು ಹಾಗು ಕೇಶವ ನನ್ನನು ಚಿಕ್ಕಪ್ಪ ಎಂದೆ ಕರೆಯುತ್ತಿದ್ದರು. 
      ಐದು ವರ್ಷಗಳ ಹಿಂದೆ ಮನೆಗೆ ಬಂದಿದ್ದ ವನಜ ಏಕೊ ಬೇಸರ ಮಾಡಿಕೊಂಡಿದ್ದಳು. ಮಧುವಿನ ಬಗ್ಗೆ ಅವಳಿಗೆ ಚಿಂತೆಯಾಗಿತ್ತು.     ಕಂಪ್ಯೂಟರನಲ್ಲಿ ಬಿ.ಇ. ಮುಗಿಸಿ ಮನೆಯಲಿದ್ದ ಮಧುವಿನ ವರ್ತನೆ ಅವಳಿಗೆ ಸಮಸ್ಯೆಯಾಗಿತ್ತು. ಸದಾ ಸೋಮಾರಿಯಂತೆ ಮಲಗಿರುವುದು, ಇಲ್ಲ ಸ್ನೇಹಿತರು ಬಂದರೆ ಅವರೋಡನೆ ತಿರುಗಾಡಲು ಹೋದರೆ ಸರಿರಾತ್ರಿಯಾದರು ಬರುತ್ತಿರಲಿಲ್ಲ. ಅವನ ವರ್ತನೆ, ಸಹವಾಸಗಳು ಯಾವುದು ಸರಿಇರಲಿಲ್ಲ. ಹಾಗಂತ ಅಪ್ಪನ ನೆರಳಿಲ್ಲದೆ ಬೆಳೆದ ಒರಟು ಮಗನನ್ನು ತಿದ್ದುವ ಶಕ್ತಿಯು ಅವಳಿಗೆ ಇರಲಿಲ್ಲ. 
     ಅದೇ ಸಮಯಕ್ಕೆ ನನ್ನ ಪರಿಚಯದವರ ಮೂಲಕ, ಅಮೇರಿಕದ ಸಾಫ್ಟವೇರ್      ಕಂಪನಿಯೊಂದರ ಹುದ್ದೆಗಾಗಿ ಮಧುವಿನ ದಾಖಲೆಗಳು ಹಾಗು ಅಪ್ಲಿಕೇಶನ್ ಕಳಿಸಿದ್ದು,    ಅವನಿಗೆ ಇಂಟರವ್ಯೂಗಾಗಿ ಕರೆ ಬಂದಿತು. ಹೇಗೊ ಅವನ ಆಯ್ಕೆಯು ಆಗಿಹೋಗಿತ್ತು. ನಾನು ರಜಾಹಾಕಿ ಅವನ ಜೊತೆ ಓಡಾಡಬೇಕಾಯಿತು. ಆಸಮಯದಲ್ಲಿ ಅವನು ತನ್ನ ಸೋಮಾರಿತನ, ಬಿಡುಬೀಸು ಸ್ವಬಾವದಿಂದಾಗಿ ನನ್ನ ಸಹನೆಯನ್ನೆ ಕೆಣಕುತ್ತಿದ್ದ. ಅವನ ದಾಖಲೆಗಳಿಗೆ ಸರ್ಕಾರಿ ಅಧಿಕಾರಿಗಳಿಂದ ಪ್ರಮಾಣಪತ್ರ ಬೇಕಾದಾಗ, ನಾನು ನನ್ನ ಬಾಸ್‌ಗೆ ಹೇಳಿದ್ದೆ, ಸಂಜೆ ಬರುತ್ತೇನೆ ಎಂದ ಇವನು ಬಂದಿದ್ದು ಸಾಯಂಕಾಲ ಆರು ಘಂಟೆಯ ನಂತರ. ಇವನ ದಾಖಲೆಗಳಿಗೆ ಸಹಿಮಾಡಲು ಇವನಿಗಾಗಿ ನಮ್ಮ ಮೇಲಾಧಿಕಾರಿ ಒಂದು ಗಂಟೆಗು ಅಧಿಕ ಕಾಯುವ ಪ್ರಮೇಯ ಬಂತು. 
     ಹೇಗೊ ಅವನು ವಿದೇಶಕ್ಕೆ ಹೊರಟ. ನಂತರ ಅವನು ಒಂದು ಸಾರಿ ಮಾತ್ರ   ಟೆಲಿಫೋನ ಮಾಡಿದ್ದ. ಪ್ರಾರಂಬದಲ್ಲಿ ಅವನ ಬಗ್ಗೆ ಬಂದು ತಿಳಿಸುತ್ತಿದ್ದ ವನಜ ನಂತರ   ನಿಲ್ಲಿಸಿದಳು. ಈಗ ಅವರ ಮನೆಯ ಸ್ಥಿಥಿಯು ಬದಲಾಗಿತ್ತು.ಅವನ ವಿದೇಶಿ ಹಣದಿಂದ ಹೊಸಮನೆ, ಕಾರು ಎಲ್ಲ ಬಂದಿದ್ದವು. ಈಗ ನನ್ನ ಸಹಾಯದ ಅಗತ್ಯವು ಅವರಿಗೆ ಇರಲಿಲ್ಲ. ಅವನು ಊರಿಗೆ ಬಂದು ಮೂರು ದಿನ ಕಳೆದಿದ್ದು ನನಗೆ ತಿಳಿದಿತ್ತು. ಮಧು ನಮ್ಮ ಮನೆಗೆ ಬರಬಹುದೆಂದು ತಿಳಿದಿದ್ದೆ ಹಾಗಾಗಿ ಸುಮ್ಮನಿದ್ದೆ.
    ನನ್ನ ಮೌನದಿಂದ ವಿಚಲಿತಳಾಗದ ಅವಳು "ಇವತ್ತು ಹೋಗಿ ಅವನನ್ನು ನೋಡಿ ಬರೋಣ್ವ?" ಎಂದು ಕೇಳಿದಳು. ಏಕೋ ನನ್ನ ಒಳಮನಸಿಗೆ ಅಲ್ಲಿ ಹೋಗುವುದು ಬೇಕಿರಲಿಲ್ಲ ಆದರೆ ಹೋಗಿ ಅವನನ್ನು ಮಾತನಾಡಿಸಿಬರಬೇಕೆಂಬ ಅತುರವು ಇತ್ತು. ಹೀಗಾಗಿ ಅವಳಿಗೆ "ನೀನು ಬೇಡ. ಈಗ ನಾನು ಹೋಗಿಬರುತ್ತೇನೆ, ನೀನು ನಾಳೆ, ನಾಡಿದ್ದು ಹೋಗೋದ ಅಥವ ಅವನೆ ಇಲ್ಲಿ ಬರುತ್ತಾನ ಆಮೇಲೆ ನೋಡೋಣ" ಎಂದೆ. ನನ್ನನ್ನು ಒಂದು ರೀತಿ ನೋಡಿದ ಅವಳು  ಏನು ಮಾತನಾಡದೆ ಒಳಗೆ ಹೊರಟುಹೋದಳು.
   ಮಧುವಿನ ಮನೆ ತಲುಪಿದಾಗ ಆಗಲೆ ಬಿಸಿಲು ನೆತ್ತಿಗೇರುತಿತ್ತು. ಹೊರಗೆ ನಿಂತ ಕಾರು ಅವನು ಒಳಗೆ ಇರುವದನ್ನು ಹೇಳಿತು. ಭವ್ಯವಾಗಿ ನಿಂತ ಮನೆ ವೈಭವವನ್ನು ಸಾರುತಿತ್ತು. ಬಾಗಿಲು ತಟ್ಟಿದೆ, ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆಯಿತು. ವನಜ ನನ್ನನು ನೋಡಿ ನಗುತ್ತ "ಕಾಲಿಂಗ್ ಬೆಲ್ ಮಾಡದೆ ಬಾಗಿಲು ತಟ್ಟಿದಾಗಲೆ ನೀವೆ ಅಂದುಕೊಂಡೆ ಒಳಗೆ ಬನ್ನಿ ಎನ್ನುತ್ತ ಒಳಗೆ ಹೊರಟಳು. ನಾನು ಹಿಂಬಾಲಿಸಿದೆ, ಇವಳು ಚಿಕ್ಕವಳು ಆಗಲೆ ನಮ್ಮಂತೆ    ಹಿರಿಯ ವಯಸಿನವಳಂತೆ ಕಾಣುತ್ತಾಳೆ, ಸಂಸಾರದ ಬಾರ ಅಂದುಕೊಂಡೆ. ಒಳಗೆ ಹೋಗಿ  ಹಾಲಿನಲ್ಲಿದ್ದ ಸೋಫದಲ್ಲಿ ಕುಳಿತೆ. ವನಜ ನೀರು ತರುತ್ತ  "ತುಂಬಾ ಬಿಸಿಲು ಹೇಗೆ ಬಂದಿರಿ?"  ಅನ್ನುತ್ತ ನೀರು ಕೊಟ್ಟಳು. ತಣ್ಣನೆಯ ನೀರು ಕುಡಿಯುತ್ತಿರುವಾಗಲೆ ವನಜ "ತುಂಬ ದಿನ ಅಯ್ತಲ್ವ ನೀವು ಬಂದು" ಎಂದಳು. ಹಾಲಿನಲ್ಲಿಯೆ ಟೀವಿ ನೋಡುತ್ತ ಕುಳಿತ್ತಿದ್ದ ಕೇಶವ    ನನ್ನತ್ತ ತಿರುಗಿಯು ನೋಡಲಿಲ್ಲ. ನಾನಗಿಯೆ "ಕೇಶವ ಈಗ ಏನು ಮಾಡ್ತಿದೀಯ ನಿನ್ನ ಓದು ಮುಗಿದಿರಬೇಕಲ್ವ?" ಎಂದೆ. ಅವನು ಟೀವಿ ಆರಿಸಿ ನನ್ನ ಕಡೆ ನೋಡಿದ, 
    ವನಜ "ಅವನ ಓದು ಮುಗೀತು ಚಿಕ್ಕಪ್ಪ, ಮಧು ಇವನನ್ನು ಅಲ್ಲಿಗೆ ಬಾ, ಅನ್ನುತ್ತಿದಾನೆ, ಇವನು ಹೊರಟು ಒಂದೆ ಕಾಲಲ್ಲಿ ನಿಂತಿದಾನೆ" ಅಂದಳು. ಕೇಶವ ಏನು ಮಾತನಾಡದೆ ನನ್ನ ಕಡೆ ತಿರುಗಿಯು ನೋಡದೆ ಎದ್ದು, ನಿದಾನವಾಗಿ ಮನೆಯ ಒಳಗೆ ಇದ್ದ ಮೆಟ್ಟಲು ಹತ್ತುತ್ತ ಮೇಲಿನ ಬಾಗಕ್ಕೆ ಹೊರಟು ಹೋದ. ಏಕೊ ವನಜಳಿಗೆ ಈಗ ಮಕ್ಕಳ ಚಿಂತೆಗಿಂತ, ತನ್ನ ಇಳಿವಯಸಿನ, ತನ್ನ ಜೀವನದ ಯೋಚನೆಯೆ ಅಧಿಕ ಅನ್ನಿಸಿತು. 
   ಪುನ: ನಾನಾಗಿಯೆ "ಮಧು ಎಲ್ಲಿ ವನಜ ಅವನನ್ನು ಮಾತನಾಡಿಸಿ ಹೋಗೋಣ ಅಂತಲೆ ಬಂದೆ , ಅವನು ಮನೆ ಕಡೆ ಏನಾದರು ಬರ್ತಾನ? ಮನೆಯಲ್ಲಿ ಅವಳು ಸಹ ಮಧುವನ್ನು ನೋಡಬೇಕು ಅಂತ ಕುಣಿತಿದ್ಲು" ಅಂದೆ. ಏಕೋ ವನಜಳ ಮುಖದಲ್ಲಿ ಸುಖ, ಸಂತೋಷವಲ್ಲದ  ಭಾವಗಳು ಹಾದು ಹೋದವು. "ಇರಿ ಚಿಕ್ಕಪ್ಪ, ಮೇಲೆ ಇದ್ದಾನೆ ನಾನೆ ಹೋಗಿ ಕರೆಯುತ್ತೀನಿ" ಎಂದು ಮೆಟ್ಟಿಲುಗಳನ್ನು ಹತ್ತುತ್ತ ಮೇಲೆ ಹೋದಳು. ಎಲ್ಲೊ  ಸಣ್ಣದ್ವನಿಯಲ್ಲಿ      ಮಾತನಾಡುತ್ತಿರುವ ಶಬ್ದ. ನಂತರ ಕೆಳಗೆ ಬಂದ ವನಜ "ಬರ್ತಿದಾನೆ ಚಿಕ್ಕಪ್ಪ ಒಂದು ನಿಮಿಷ"  ಅನ್ನುವಾಗ, ಅವಳ ದ್ವನಿಯೇಕೊ ಒಡಕು ಅನ್ನಿಸಿ ಎಲ್ಲವು ಸರಿಯಲ್ಲ, ಸಹಜವಾಗಿಲ್ಲ ಅಥವ  ನನ್ನ ಭ್ರಮೆಯೋ ಎಂದು ಸುಮ್ಮನಾದೆ. 
     ಮಧು ಕೆಳಗಿಳಿದು ಬಂದ, ನೋಡುವಾಗ ಮೊದಲಿಗಿಂತ ಕೆಂಪಗೆ, ದಪ್ಪಗೆ ಆಗಿದ್ದಾನೆ ಅನ್ನಿಸಿತು. ಎದುರಿಗೆ ಬಂದು ಕುಳಿತವನ ಕಣ್ಣುಗಳು ಕೆಂಪು ಕೆಂಪು, ಮಹಡಿಮೇಲೆ ಏನು ಮಾಡುತ್ತಿದ್ದ, ಕುಡಿಯುತ್ತಿದ್ದನ? ಛೇ ಛೇ, ಅವನು ಸುಮ್ಮನೆ ಕುಳಿತಾಗ ನಾನಾಗೆ ಮಾತನಾಡಿದೆ "ಹೇಗಿದ್ದೀಯ ಮಧು, ನಿನ್ನ ಮಾತನಾಡಿಸೋಣ ಅಂತ ಬಂದೆ,ನೀನು ಏನೊ ಕೆಲಸದಲ್ಲಿದ್ದೀಯ ಅನ್ನಿಸುತ್ತೆ" 
   "ಹ್ಹ, ಚಿಕ್ಕಪ್ಪ,  ನೀವು ಏನು ಈಗ ರಿಟೈರ್ಡ ಅನ್ನಿಸುತ್ತೆ. ಅದಕ್ಕೆ ಈ ಬಿಸಿಲಿನಲ್ಲು ಬಂದು ಬಿಟ್ಟಿದೀರಿ?" ಅಂದ. ಮಾತಿನ ಪ್ರಾರಂಬವೆ ಸರಿಹೋಗಲಿಲ್ಲ ಅನ್ನಿಸಿತು. ಆದರು "ಬಿಸಿಲು ಏನು ಮಾಡುತ್ತೆ, ಹಾಗಂತ ಮಾಡೊ ಕೆಲಸಬಿಟ್ಟು ಬಿಡ್ತಾರ? , ನಿನ್ನನ್ನು ಬಂದು ನೋಡ ಬೇಕಲ್ವ ಹಾಗಾಗಿ ಬಂದೆ ನಿನಗೇನು ತೊಂದರೆ ಆಯಿತ?" ಎಂದೆ.
   "ತೊಂದರೆ ಅಂತ ಅಲ್ಲ, ಆದರು ಇಲ್ಲಿಯ ರೀತಿನೀತಿಗಳೆ ನನಗೆ ಹಿಡಿಸಲ್ಲ , ಈಗ ಅಮೇರಿಕದಲ್ಲಿ ನೋಡಿ, ಟಲಿಫೋನ್ ಮಾಡಿ ಅವರ ಸಮಯ ತಿಳಿದುಕೊಂಡೆ ಒಬ್ಬರು     ಇನ್ನೊಬ್ಬರ ಮನೆಗೆ ಹೋಗ್ತಾರೆ, ಸಾಮನ್ಯವಾಗಿ ಮನೆಗಳಲ್ಲಿ ಒಬ್ಬರನ್ನೊಬ್ಬರು ಬೇಟಿ ಮಾಡೋದು ಕಡಿಮೆ. ಇಲ್ಲಿ ಆರೀತಿಯ ನಾಗರೀಕತೆಯನ್ನು ನಿರೀಕ್ಷೆ ಮಾಡಕ್ಕಾಗಲ್ಲ" ಅಂದ. ಏನು ಹರಿತವಾಗಿ ಮಾತನಾಡುತ್ತಿದ್ದಾನೆ, ಇದೆ ಮಧು ತನ್ನ ಕೆಲಸಗಳಿಗಾಗಿ ರಾತ್ರಿ ಹತ್ತು ಹನ್ನೊಂದು ಗಂಟೆಗೆಲ್ಲ ನಮ್ಮ ಮನೆಯ ಬಾಗಿಲು ತಟ್ಟುತ್ತಿದ್ದ ಅಂತ ನೆನಪಾಗಿ ಮನಸಿಗೆ ಕಸಿವಿಸಿಯಾಯಿತು. ಪುನಃ ನಾನೆ "ಏನು ಮಾಡೋದು ಹೇಳಪ್ಪ, ಇದು ಇಲ್ಲಿಯ ರೀತಿನೀತಿ, ನಮ್ಮ ನಾಗರೀಕತೆ ನಮ್ಮ ನೆಲದ ಸಂಪ್ರದಾಯಗಳಿಗೆ ನಾವು ಇಲ್ಲಿದ್ದಾಗ  ಬೆಲೆ ಕೊಡಬೇಕು. ಅಲ್ವಾ?" ಎಂದೆ.
    "ಏನು ರೀತಿನೀತಿ, ಸಂಪ್ರದಾಯ ಎಲ್ಲ ಹಿಪೋಕ್ರಸಿ, ಸದಾ ನೀತಿ,ಧರ್ಮದ ಬಗ್ಗೆ ಕೊರೆಯುವ ಇಲ್ಲಿ ಇರುವಷ್ಟು ಮೌಡ್ಯ, ಭ್ರಷ್ಟಾಚಾರ ಯಾವ ದೇಶದಲ್ಲಿಯು ಇಲ್ಲ. ಇಲ್ಲಿ ಏನು ಸಾದಿಸಿದ್ದಾರೆ ಹೇಳಿ , ಒಂದು ರಸ್ತೆಯ, ಕುಡಿಯಲು ನೀರು, ಉತ್ತಮ ವ್ಯವಸ್ಥೆ ಯಾವುದು ಇಲ್ಲ. ಇರುವುದೆಲ್ಲ ಬರಿ ಬೊಗಳೆ. ಅಲ್ಲಿ ಬಂದು ನೋಡಿ, ಅಲ್ಲಿಯ ರಸ್ತೆಗಳು, ನಗರಗಳು, ನಾಗರೀಕತೆ ಎಲ್ಲ ನೋಡಿ ಇಲ್ಲಿಯ ಜನ ಕಲಿಯಬೇಕು" ಅಂದ. 
     ನಾವು ಅವರಿಂದ ಕಲಿಯಬೇಕ? ನಮ್ಮ ಸಂಸ್ಕೃತಿ ಅವರಿಗಿಂತ ಎಷ್ಟೊ ಸಾವಿರ ವರ್ಷಗಳಷ್ಟು ಹಳೆಯದು, ನಾವು ನಗರಗಳನ್ನು ಕಟ್ಟುತ್ತಿದಾಗ ಅವರಿನ್ನು ಕಾಡು ಜನರಂತೆ ಬದುಕುತ್ತಿದ್ದರು, ಅವರಿಂದ ನಾವು ನಾಗರೀಕತೆ ಕಲಿಯಬೇಕ ಅನ್ನಿಸಿತು. ಮತ್ತೆ ಮಧುವಿಗೆ ಕೇಳಬೇಕೆನಿಸಿತು, ಅವನು ವಿಮಾನನಿಲ್ದಾಣದಿಂದ ಮನೆವರೆಗು ಬಂದ ನುಣ್ಣನೆಯ ರಸ್ತೆ, ನೂರಾರು ಕಿಲೋಮೀಟರ ದೂರದಿಂದ ತಂದಿರುವ ಅವನು ಕುಡಿಯುತ್ತಿರುವ ಕಾವೇರಿ ನೀರು, ಅವನು ತಣ್ಣಗೆ ಕುಳಿತಿರುವ ಏರಕಂಡಿಶನರಗೆ ಬೇಕಾದ ವಿಧ್ಯುತಶಕ್ತಿ ಇವೆಲ್ಲ ನಮ್ಮ ಸಾದನೆಗಳೆ ಅಲ್ಲವ?. ಅಷ್ಟೇಕೆ ಮಧುವಿಗೆ ಶಿಕ್ಷಣ,ನಾಗರೀಕತೆ ಕಲಿಸಿ ಅವನನ್ನು ವಿದೇಶಕ್ಕೆ ಕಳಿಸಿರುವುದು ನಮ್ಮ ಸರ್ಕಾರ,ನಮ್ಮ ಜನರ ಹಣವೆ ಅಲ್ಲವ. ಆದರೆ ಇವನ ಕೈಲಿ ವಾದಮಾಡುವದರಲ್ಲಿ ಏನು ಉಪಯೋಗವಿಲ್ಲ ಅನ್ನಿಸಿತು.
   ಅವನು ಮುಂದುವರೆಸಿದ " ಜೊತೆಗೆ ಚಿಕ್ಕಪ್ಪ, ಇಲ್ಲಿಯ ಜನ ಸಾಕಷ್ಟು ಸೋಮಾರಿಗಳು, ಸರ್ಕಾರಿ ಕಛೇರಿಗಳಲ್ಲಿ ನೋಡಿ, ಸಂಜೆ ಘಂಟೆ ಐದಾದರೆ ತಮ್ಮ ಕೆಲಸ ಮುಗಿಯಿತು ಎಂಬಂತೆ ಹೊರಟುಬಿಡುತ್ತಾರೆ ಜೀವನದಲ್ಲಿ ಮುಂದೆ ಬರಬೇಕೆಂಬ ಛಲವೇ ಇಲ್ಲ. ಸದಾ ಧರ್ಮದ ಗೊಡ್ದು ಪುರಾಣ. ಈಗ ನೀವೆ ನೋಡಿ ನಿವೃತ್ತರಾದ ತಕ್ಷಣ ಜೀವನದಲ್ಲಿ ಎಲ್ಲ ಸಾದಿಸಿಬಿಟ್ಟೆ ಏನು ಉಳಿದಿಲ್ಲ ಎಂಬಂತೆ ವಿಶ್ರಾಂತಿ ಪಡೆಯುತ್ತ, ಸುಮ್ಮನೆ ಮನೆ ಮನೆ ಅಂತ ಓಡಾಡಿಕೊಂಡಿದ್ದೀರಿ. ಮನುಷ್ಯನಿಗೆ ಕೆಲಸಮಾಡುತ್ತೇನೆಂಬ ಹುರುಪು ಇರಬೇಕು ಅಲ್ವ?" 
   ಎಲಾ ಇವನ, ಕೆಲವರ್ಷಗಳ ಹಿಂದೆ ಇವನಿಗಾಗಿ ಸಂಜೆ ನಮ್ಮ ಆಫೀಸನಲ್ಲಿ ಸಾಯಂಕಾಲ ಆರು ದಾಟಿದರು ಕಾಯುತ್ತ ಕುಳಿತ್ತಿದ್ದವು ಈಗ ಹೀಗನ್ನುತ್ತಾನೆ ಅಮೇರಿಕದಲ್ಲಿದ್ದ ಇವನು ನಮ್ಮಲ್ಲಿಯ ಕಛೇರಿಗಳನ್ನು ಯಾವಾಗ ಬಂದು ನೋಡಿದ, ನಿವೃತ್ತನಾದ ನಂತರ ಮನೆ ಮನೆ ಸುತ್ತುತ್ತ ಇದ್ದೀನಿ ಅಂತ ಯಾರು ಹೇಳಿದರು. ದೃಷ್ಟಿಮಾಂದ್ಯರ ಶಾಲೆ ಹಾಗು ಅನಾಥ ಮಕ್ಕಳ ಆಶ್ರಮದಲ್ಲಿ ಎರಡು ಕಡೆ ಕೆಲಸ ಮಾಡುತ್ತಿರುವದರಿಂದ ಈಗ ಮೊದಲಿಗಿಂತ ಕೆಲಸ ಹೆಚ್ಚು ಇದು ಇವನಿಗೆ ತಿಳಿಯದ. ನನಗೆ ಅವಮಾನ ಮಾಡಲೆ ಹೀಗೆ ಮಾತಾಡುತ್ತಿದ್ದಾನ ಅಥವ  ಇವನ ಸ್ವಭಾವನೆ ಈ ರೀತಿಯ ಅಂತ ಗೊಂದಲವಾಯಿತು. ಎದುರಿಗೆ ಕುಳಿತ್ತಿದ್ದ ವನಜ ಅತಂಕಗೊಂಡವಳಂತೆ "ಮಧು ನಿನ್ನನು ಮಾತನಾಡಿಸಿಹೋಗಲು ಬಂದರೆ ಈ ರೀತಿಯ ಅವರ ಕೈಲಿ ಮಾತನಾಡೋದು, ನಿನಗೆ ಅವರು ಮಾಡಿರುವ ಉಪಕಾರ ನೆನೆ, ನಾಳೆ ಬಾನುವಾರ ನೀನು ಬಂದಿರುವ ಸಂದರ್ಭಕ್ಕೆ ಒಂದು ಗಣೇಶ ಹೋಮ, ಸತ್ಯನಾರಾಯಣ ಪೂಜ ಇಡುವ ಅಂತಿದೀನಿ,  ಚಿಕ್ಕಪ್ಪನಿಗೆ ಬನ್ನಿ ಅಂತ ಕರೆ, ನೀನು ಅವರ ಮನೆಗೆ ಹೋಗಿ ಚಿಕ್ಕಮ್ಮನಿಗೂ ಕರೆದು ಬಾ" ಅಂದಳು.
    ಮಧು ಅವರಮ್ಮನ ಮುಖವನ್ನು ಒಮ್ಮೆ ಕ್ರೂರವಾಗಿ ನೋಡಿದ "ಅಮ್ಮ ನಾನಾಗಲೆ ಹೇಳಿದ್ದೀನಿ ನನಗೆ ಅದರಲ್ಲಿ ಆಸಕ್ತಿ ಇಲ್ಲ ಅಂತ, ನಾನು ಹೋಮ ಹವನ ಇದನ್ನೆಲ್ಲ ನಂಬುವದಿಲ್ಲ, ಹೋಮವಂತೆ, ಯಙ್ಞವಂತೆ ಎಲ್ಲ ನಾಟಕ. ನಿಜವಾದ 'ಯಙ್ಞವನ್ನು' ನಾನು ಮಾಡಿದ್ದೀನಿ, ನನ್ನ ಜೀವನವೆ ನಿಜವಾದ ಸಾಧನೆ. ನೀನು ಮೊದಲಿದ್ದ ಸ್ಥಿಥಿಗು ಈಗಿನದಕ್ಕು ಹೋಲಿಸಿನೋಡು,  ನೀನು ಇವರನ್ನಲ್ಲ  ನನ್ನ ಸಹಾಯವನ್ನು ನೆನೆಯಬೇಕು." ಎನ್ನುತ್ತ ಎದ್ದು ನಿಂತು, "ಚಿಕ್ಕಪ್ಪ ನಾನು ನಂತರ ಸಿಗ್ತೇನೆ, ಈಗ ಸ್ವಲ್ಪ ಕೆಲಸವಿದೆ" ಎಂದು ನುಡಿದು ಮೆಟ್ಟಲೇರುತ್ತ ಮೇಲೆ ಹೋದ. ವನಜ ಸಪ್ಪೆಯಾಗಿ ನಿಂತಳು, ನಾನು ಎದ್ದು ನಿಲ್ಲುತ್ತ "ವನಜ ನಾನು ಹೊರಡುತ್ತೇನಮ್ಮ,   ಮನೆಯಲ್ಲಿ ಅವಳು ಕಾಯುತ್ತಿರುತ್ತಾಳೆ." 
   ವನಜ ಹಿಂದೆ ಬರುತ್ತ "ಚಿಕ್ಕಪ್ಪ ಊಟಮಾಡಿ ಹೋಗಬಹುದಲ್ವ" ಎಂದಳು. ನಾನು "ಬೇಡಮ್ಮ ಮನೆಯಲ್ಲಿ ಕಾಯುತ್ತಿರುತ್ತಾಳೆ" ಎಂದೆ. ಅವಳು ಸಂಕೋಚದಿಂದ "ಚಿಕ್ಕಪ್ಪ ಬೇಜಾರು ಮಾಡಿಕೊಬೇಡಿ, ಅವನು ಮಾತಿನಲ್ಲಿ ತುಂಬಾ ಒರಟ, ನಾನು ಹೇಳಿದರು ಅವನು ಏನು ಬೆಲೆ ಕೊಡಲ್ಲ" ಎಂದಳು. 
ನಾನು "ಪರವಾಗಿಲ್ಲ ಬಿಡಮ್ಮ, ವಯಸ್ಸಾದವರಿಗೆ ದೇವರು ಅವಮಾನವನ್ನು ತಡೆಯುವ ಶಕ್ತಿಯನ್ನು ಸ್ವಲ್ಪ ಜಾಸ್ತಿಯಾಗಿಯೆ ಕೊಟ್ಟಿರುತ್ತಾನೆ, ನೀನೇನು ಕೊರಗಬೇಡ"     ಎನ್ನುತ್ತ ಮನೆಯಕಡೆ ಹೊರಟೆ.
     ಮನೆಯಲ್ಲಿ ನಾನು ಊಟಕ್ಕೆ ಬರಲ್ಲ ಎಂದು ಅಡಿಗೆ ಮಾಡಿರುತ್ತಾಳೊ ಇಲ್ಲವೋ ಅಂತ ಯೋಚಿಸಿ, ದಾರಿಯಲ್ಲಿ ಹೋಟಲಿನಲ್ಲಿ ಏನಾದರು ಕಟ್ಟಿಸಿಕೊಂಡು ಹೋಗಬೇಕು ಅಂದುಕೊಂಡು ರಸ್ತೆ ದಾಟುತ್ತಿದ್ದಾಗ ಕೆಲ ಹುಡುಗರು ಪಟಾಕಿ ಸಿಡಿಸುತ್ತಿದ್ದರು. ಮತ್ತೆ ದೀಪಾವಳಿ ಬಂತಲ್ವ, ಮುಂದಿನವಾರ ಮಗಳು  ಊರಿನಿಂದ ಬರುತ್ತಾಳೆ , ನೆನಪಿಗೆ ಬಂದು ಹುರುಪು ಜಾಸ್ತಿಯಾಯಿತು. 
    "ನಾನು ನಿಜವಾದ ಯಙ್ಞವನ್ನು ಮಾಡಿದ್ದೀನಿ ನನ್ನ ಜೀವನವೆ ಒಂದು ಸಾಧನೆ" ಅಂತ ಅನ್ನುತ್ತಿದ್ದ ಮಧುವಿನ ಮಾತುಗಳೆ    ನೆನಪಿಗೆ ಬಂತು, ಯಙ್ಞ , ಅಂದರೆ ದಕ್ಷಯಙ್ಞವೆ?, ನಿಜ ದಕ್ಷಯಙ್ಞವೆಂದರೆ ಯಾರಿಗಾದರು ಅಭಿಮಾನ ಭಂಗವಾಗಲೆ ಬೇಕೇನೊ, ಸದ್ಯ ನನ್ನವಳನ್ನು ಕರೆತರದೆ ಒಳ್ಳೆಯ ಕೆಲಸ ಮಾಡಿದೆ, ಅವಳಿಗೆ ಇದನ್ನೆಲ್ಲ ಸಹಿಸುವ ಶಕ್ತಿಯಿಲ್ಲ ಅನ್ನಿಸುವಾಗ ಮತ್ತೊಂದು ಅಸಂಗತ ಯೋಚನೆ ಬಂದಿತು, ಅಲ್ಲ ಶಿವನು ದಕ್ಷಯಙ್ಞಕ್ಕೆ ಪಾರ್ವತಿಯನ್ನು ಏಕೆ ಕಳಿಸಿದ, ಅವಳ ಬದಲು ಅವಳನ್ನು ತಡೆದು ತಾನೆ ಹೋಗಿಬರಬಹುದಿತ್ತು ಅನ್ನಿಸಿತು, 
------------------------------------------------------------------------------------------------------------------------------------

ಕಡೆಯಮಾತು : ಭಾರತದ ನೆಲದಲ್ಲಿಯೆ ಹುಟ್ಟಿ, ಬೆಳೆದು. ನಮ್ಮ ಸೌಕರ್ಯಗಳನ್ನು ಪಡೆದು ಡಿಗ್ರಿ ಮುಗಿಸಿ, ನಂತರ ವಿದೇಶ ಸೇರಿ ಹೆತ್ತವರನ್ನು , ತಾಯುನಾಡನ್ನು ಹೀಗೆಳೆಯುತ್ತ ತಾವು ಇರುವ ವಿದೇಶವನ್ನು ಪ್ರತಿ ಮಾತಿಗು ಹೊಗಳುತ್ತ ಇರುವ ಕೆಲವು 'ವಿದೇಶಿ' ಭಾರತೀಯರ ಮಾತುಗಳನ್ನು , ಅಥವ ಎಂದು ವಿದೇಶವನ್ನು ನೋಡದಿದ್ದರು ಪ್ರತಿಮಾತಿಗು ಭಾರತವನ್ನು ಹೊರದೇಶದೊಂದಿಗೆ ಹೋಲಿಕೆ ಮಾಡುತ್ತ ನಮ್ಮನ್ನೆ ಕೀಳಿರಿಮೆಯಿಂದ ಕಾಣುವ ಭಾರತೀಯ 'ವಿದೇಶಿ'ಯರನ್ನು ಮಾತುಗಳನ್ನು ಕೇಳುವಾಗ ಈ ಕತೆ ಬರೆಯಬೇಕೆನಿಸಿತು. ಯಾರೊಬ್ಬರ ಮನ ಬೇಸರಪಡಿಸಲು ಅಲ್ಲ 

ದೆವ್ವದ ಕಥೆ: ಹೆಂಡತಿಯನ್ನು ಹೊಡೆಯಬೇಡ !!!

ಮನುವಿನ ಮನೆ ಬಾಗಿಲು ತಟ್ಟಿದಾಗ ತೆಗೆದುದ್ದು ಅವನ ಶ್ರೀಮತಿ, ಸುಮಾ. ನನ್ನನ್ನು ಕಂಡು "ಒಳಗೆ ಬನ್ನಿ" ಎಂದು ನಗು ಮುಖ ಮಾಡಿದರು. ಹಾಲಿನಲ್ಲಿ ಸೋಫ ಮೇಲೆ ಅಜ್ಜಿ ಕುಳಿತಿದ್ದರು, ನನ್ನನ್ನು ಕಂಡು "ಬಾರಪ್ಪ ಕುಳಿತಿಕೊ" ಅಂತ ಸ್ವಾಗತ ಮಾಡಿದರು. ನಾನು "ಹೇಗಿದ್ದೀರಾ ಅಜ್ಜಿ" ಎಂದೆ. "ನನ್ನದೇನಪ್ಪ ಎಲ್ಲ ಮುಗಿಯಿತು, ಇರುವಷ್ಟು ದಿನ ಇದ್ದುಬಿಡುವುದು ಮೊಮ್ಮಗನಿಗೆ ಬಾರವಾಗಿ"  ಎಂದರು. "ಹಾಗೆಲ್ಲ ಏಕೆ ಅಂದುಕೊಳ್ಳುವಿರಿ, ಇರುವುದು ಹಾಯಾಗಿ ಇರುವದಪ್ಪ " ಎಂದೇನೊ ಹೇಳುತ್ತಿದ್ದೆ, ಅಷ್ಟರಲ್ಲಿ, ರೂಮಿನಲ್ಲಿ ಮಲಗಿದ್ದ ಮನು ಎದ್ದು ಈಚೆ ಬಂದು ನನ್ನನ್ನು ಕಂಡು "ಏನು ಬುರುಡೆ ಬಿಡುವ ದಾಸಯ್ಯನವರು ಬಂದು ಬಿಟ್ಟಿದ್ದಾರೆ" ಎಂದ.
 "ಮನೆಗೆ ಬಂದವರ ಜೊತೆ ಮಾತನಾಡುವ ರೀತಿ ತಿಳಿದಿಲ್ಲ ಎಂತದು ಅದೆಲ್ಲ" ಅಂತ ಪಾಪ ಅಜ್ಜಿ ಬೇಸರ ಮಾಡಿದರು. ಅವನು ನಗುತ್ತ
"ಕುಳಿತಿರು ಒಳಗೆ ಹೋಗಿ ಮುಖ ತೊಳೆದು ಬರುತ್ತೇನೆ ಅಜ್ಜಿ ಕೈಲಿ ನಿನ್ನ "ಬುರುಡೆ" ಕಥೆ ಹೇಳ್ತಿರು " ಎಂದು ಹೊರಟ. ಅಜ್ಜಿ "ಎಂತದಪ್ಪ ಅದು ಬುರುಡೆ ಕಥೆ" ಎಂದರು ಕುತೂಹಲದಿಂದ, ನಾನು ಸ್ವಲ್ಪ ಉತ್ಸಾಹದಿಂದಲೆ , ಕಡೂರಿನ ಅಣ್ಣಗೇರೀಗೆ ಹೋದ ಅನುಭವವನ್ನೆಲ್ಲ ವರ್ಣಿಸಿದೆ.
 ಅವರು "ಬಿಡಪ್ಪ ಕಥೆ ಚೆನ್ನಾಗಿಯೆ ಬರೆದಿದ್ದಿ" ಎಂದರು. ನನಗೆ ಕೋಪ ಬಂದಿತು, ಅಜ್ಜಿ ಅದು ಬರೆದ ಕತೆಯಲ್ಲಿ ನಿಜ ಅನುಭವ ಅನ್ನುವದರೊಳಗೆ, ಒಳಹೋಗಿದ್ದ ಮನು ಮುಖತೊಳೆದು, ಶರ್ಟ್ ಹಾಕಿ, ಕೈಯಲ್ಲಿ ಸ್ವೀಟ್ ನ ಪ್ಯಾಕೇಟ್ ಹಿಡಿದು ಬಂದ
" ನೋಡು ಸ್ವೀಟ್ ಇದೆ ತಿಂತೀಯ, ದಸರಾ ಹಬ್ಬಕ್ಕೆ ಆಫೀಸ್ ನಲ್ಲಿ ಕೊಟ್ಟಿದ್ದು, ಮನೆಯಲ್ಲಿ ಯಾರಿಗೆ ಕೊಟ್ಟರು ಬೇಡ ಅಂತಾರೆ ನೋಡು" ಅಂದ. ನನಗೆ ಕೋಪ ಬಂದಿತು,
"ಮನೇಲಿ ಯಾರು ಬೇಡ ಅನ್ನುವದನ್ನು ನಾನು ತಿನ್ನಲು ನನ್ನ ಹೊಟ್ಟೆ ಏನು ಕಸದಡಬ್ಬಿ ಅಲ್ಲ" ಎಂದೆ. ಅವನು
"ಒಹೋ ರಾಯರಿಗೆ ಕೋಪ ಬಂದಿತೇನೊ, ಅಲ್ಲಿ ಯಾವುದೊ ದೆವ್ವ ಕೊಟ್ಟ ಪಾಯಸ ತಿಂದು ಕತ್ತೆ ತರ ಮಲಗ್ತೀಯ, ಇಲ್ಲಿ ನಾನು ಕೊಟ್ಟಾಗ ಮಾತ್ರ ಕೋಪ ತೋರಿಸ್ತೀಯ " ಅಂತ ಜೋರಾಗಿ ನಗುತ್ತಿದ್ದ,
 ಅಜ್ಜಿ "ಮನು ಅದೆಂತದು ಪಾಪ ಅವನು ಮನೆಗೆ ಬಂದಾಗಲೆಲ್ಲ ಹಾಗೆ ಕಾಡ್ತಿ , ನಿನಗೆ ಹೆದರಿ ಅವನು ಮನೆಗೆ ಬರುವುದೆ ಬಿಡ್ತಾನೆ ಅಷ್ಟೆ" ಎಂದರು. ಅದಕ್ಕೆ ಮನು ನಗುತ್ತ
" ಎಲ್ಲಜ್ಜಿ ದೆವ್ವಕ್ಕೆ ಹೆದರದವನು ನನಗೆ ಹೆದರ್ತಾನ?" ಎಂದ. ಎಂದಿಗು ಬಗೆಹರಿಯದ ನಮ್ಮಿಬ್ಬರ ಜಗಳ ಬಿಡಿಸಲಾರದೆ ಅಜ್ಜಿ ಸುಮ್ಮನಾದರು. ಅಷ್ಟರಲ್ಲಿ ಸುಮ ಕಾಫಿತಂದರು. ಒಳಗೆ ಮಲಗಿದ್ದ ಮಕ್ಕಳಿಬ್ಬರು ಸನತ್ ಹಾಗು ಸಾಕೇತ್ ಎದ್ದು ಬಂದರು ನನ್ನನ್ನು ಕಂಡು,
"ದೆವ್ವದ .. ಅಂಕಲ್ ಬಂದಿದ್ದಾರೆ " ಎನ್ನುತ್ತಾ ಓಡಿ ಬಂದರು. ನನ್ನ ಪಕ್ಕ ಕುಳಿತು,
"ಅಜ್ಜಿ , ಅಂಕಲ್ ಬಂದಿದ್ದಾರೆ ಏನಾದರು ದೆವ್ವದ ಕತೆ ಹೇಳಿ" ಎನ್ನುತ್ತ ರಾಗ ಪ್ರಾರಂಬಿಸಿದರು.
ಅಜ್ಜಿ " ನಾನೆಂತದೊ ಹೇಳುವುದು ಅಂಕಲ್ಲೆ ಬುರುಡೆ ಕತೆ ಹೇಳ್ತಾರೆ ಕೇಳಿ" ಎಂದರು, ಅದಕ್ಕೆ ಮಕ್ಕಳು "ಅಯ್ಯೊ ಬುರುಡೆ ಕತೆನಾ! ಆಗಲೆ ಅಪ್ಪ ಹೇಳಿದ್ದಾರೆ, ಎಲ್ಲಾದರು ಬುರುಡೆ ಕತೆ ಹೇಳುತ್ತಾ, ನೀವು ಬೇರೆ ಕತೆ ಹೇಳಿ ಅಜ್ಜಿ " ಎನ್ನುತ್ತಾ ಕೇಳಿದವು.
  "ಮಕ್ಕಳೆ ಹಾಗೆಲ್ಲ ಅನ್ನಲಾಗದು ಕೆಲವೊಮ್ಮೆ ಸತ್ತು ಹೋದವರೆ ಆ ರೀತಿಯೆಲ್ಲ ಎದುರಿಗೆ ಬರುವುದು ಉಂಟು, ನೆಲದಲ್ಲಿ ಬುರುಡೆ ಸಿಗುವುದು ಉಂಟು" ಅಂದರು. ನನಗೆ ಅರ್ಥವಾಗಿತ್ತು ಅಜ್ಜಿ ಯಾವುದೊ ಕತೆಗೆ ಪೀಠಿಕೆ ಹಾಕ್ತಾ ಇದ್ದಾರೆ, ಅಂತ ನಾನು ಕಿವಿಗಳನ್ನು ಸರಿಪಡಿಸಿಕೊಂಡು ಕುಳಿತೆ.
------------------------------------------------------------------------------------------------------------------------
   ನಾನು ತುಮಕೂರಿನಲ್ಲಿ ಗಂಡನ ಜೊತೆ ಇದ್ದೆ ಅಂತ ಹೇಳಿದ್ದೆನಲ್ಲ ಆ ಕಾಲದಲ್ಲಿ ಇವರ ಜೊತೆ ಒಬ್ಬ ಕೆಲಸ ಮಾಡುತ್ತಿದ್ದವ ಸುದರ್ಶನ ಎಂದು ಹೆಸರು. ಅವನ ಹೆಂಡತಿ ರಾಜಲಕ್ಷ್ಮಿ ನನಗೆ ಒಳ್ಳೆ ಗೆಳತಿಯಾಗಿದ್ದಳು, ಆದರೆ ಸುದರ್ಶನ ಮಾತ್ರ ನಮ್ಮ ಯಜಮಾನರಂತಲ್ಲ, ಮನೆಯಲ್ಲಿ ಸದಾ ಹೆಂಡತಿ ಜೊತೆ ಗಲಾಟೆ, ಕೆಲವೊಮ್ಮೆ ಕೋಪ ಬಂದಾಗ ಹೆಂಡತಿಗೆ ಹಿಡಿದು ಬಾರಿಸಿಬಿಡುತ್ತಿದ್ದ, ಅಷ್ಟೆ ಅಕ್ಕರೆಯು ಇತ್ತು ಅಂತ ಇಟ್ಗೊ, ಹಾಗಿರಬೇಕಾದರೆ ಅವನಿಗೆ  ಮನೆ  ಕೊಳ್ಳಬೇಕು ಅಂತ  ಮನಸಿಗೆ ಬಂದಿತು. ಸರಿಯೆ ಊರಲ್ಲಿರುವ ಮಾರಟಕ್ಕಿರುವ ಮನೆ , ಖಾಲಿ ಸೈಟ್ ಗಳನ್ನೆಲ್ಲ ಜಾಲಡತೊಡಗಿದ. ಹೆಂಡತಿಯ ಸಲಹೆ ಕೇಳುವ ಸಹನೆ ಅವನಿಗಿರಲೂ ಇಲ್ಲ,

  ಸರಿ ಯಾರೊ ಹೇಳಿದರು ಎಂದು ಸೋಮೇಶ್ವರ ಭಡಾವಣೆಯ ಹಳೆ ಮನೆಯೊಂದನ್ನು ನೋಡಲು ಹೋದ. ಅಸಲಿಗೆ ಅದು ಮನೆಯೆ ಅಲ್ಲ , ಯಾವುದೊ ಕಾಲದಲ್ಲಿ ಬಿದ್ದುಹೋಗಿರುವ ಮುರುಕು ಗೋಡೆಗಳಷ್ಟೆ ಉಳಿದಿರುವ ಹಳೆಯ ಮನೆ.
ಸುದರ್ಶನ ಕೇಳಿದ ಮದ್ಯವರ್ತಿಯನ್ನು "ಇದೇನು ಮನೆ ಅಂದಿರಿ ಹೀಗಿದೆ?" .
ಅವನು ತನ್ನ ವ್ಯಾಪಾರಿ ವಾಕ್ಚಾತುರ್ಯದಿಂದ ಹೇಳಿದ " ನಿಮಗೆ ಖಾಲಿ ಜಾಗಕಷ್ಟೆ ಸಾರ್ ದರ ಹೇಳಿರುವುದು, ಎಲ್ಲವನ್ನು ಕ್ಲೀನ್ ಮಾಡಿಸಬೇಕು ಅಂತ, ಹೇಳಿ ನಿಮಗೆ ಕಡಿಮೆ ಮಾಡಿಸಿಕೊಡ್ತೀನಿ, ಈ ಮನೆಯ ಯಜಮಾನರು ಎಲ್ಲೊ ಮುಂಬಯಿಯಲ್ಲಿ ಇದ್ದಾರಂತೆ, ಅವರಿಗೆನು ಇದರ ಮೇಲೆ ಆಸಕ್ತಿಯಿಲ್ಲ, ನಾವು ಹೇಳಿದ ದರಕ್ಕೆ ಕೊಡುತ್ತಾರೆ, ಯಾವುದೊ ಕಾಲದಲ್ಲಿ ಅವರ ಅಪ್ಪ ಅಮ್ಮ ಈ ಮನೆಯಲ್ಲಿ ಇದ್ದರಂತೆ ಈಗ ಅವರು ಇಲ್ಲ, ನೀವು ನಿಮ್ಮದಾಗಿಸಿಕೊಂಡು ಬಿಡಿ , ಈ ರೀತಿಯ ಅವಕಾಶಗಳು ಸಿಗೋದು ಕಡಿಮೆ" ಎಂದ
     ಸುದರ್ಶನ ಲೆಕ್ಕ ಹಾಕಿದ, ಸೈಟಿನ ರೇಟು, ಮನೆ ಕಟ್ಟಿಸಲು ತಗಲುವ ವೆಚ್ಚ ಎಲ್ಲ ಲೆಕ್ಕ ಹಾಕಿದರೆ ತಾನು ಅಂದುಕೊಂಡಿದಕ್ಕಿಂತ ತುಂಬಾ ಕಡಿಮೆಗೆ ಕೆಲಸವಾಗುತ್ತದೆ. ಹೇಗೊ ವ್ಯವಹಾರವೆಲ್ಲ ಕುದುರಿ, ರಿಜೆಸ್ಟರ್ ಆಗಿ, ಗುದ್ದಲಿ ಪೂಜೆಯು ಮುಗಿಯಿತು. ಸುದರ್ಶನ ಹಾಗು ಅವನ ಹೆಂಡತಿ ರಾಜಲಕ್ಷ್ಮಿಗೆ ಮಹದಾನಂದ. ಆದರೆ ಆ ಸಂತೋಷ ತುಂಬ ಕಾಲ ಉಳಿಯಲಿಲ್ಲ.
   ಗುದ್ದಲಿಪೂಜೆಯ ಮರುದಿನ ಬೆಳಗ್ಗೆ ಪೂಜೆ ನಡೆಸಿದ ಜಾಗದಲ್ಲಿ ತಳಪಾಯಕ್ಕಾಗಿ ಅಗೆಯಲು ಪ್ರಾರಂಬಿಸಿದರು, ಹತ್ತು ಹದಿನೈದು ನಿಮಿಷವಾಗಿರಬಹುದೇನೊ, ನೆಲದಿಂದ ಮೂರು ಅಡಿ ಕೆಳಗೆ, ಹಾರೆಗೆ ಮನುಷ್ಯನ ತಲೆಬುರುಡೆಯೊಂದು ಸಿಕ್ಕಿತು. ಕೆಲಸದವ ಗಾಭರಿಯಿಂದ ಕೂಗಿಕೊಂಡ ಎಲ್ಲರು ಸೇರಿದರು. ಹಾಗೆ ಮಣ್ಣು ಬಿಡಿಸುತ್ತ ಹೋದ ಹಾಗೆ ಪೂರ್ಣ ಅಸ್ಥಿಪಂಜರ ಗೋಚರಿಸಿತು. .
     ಕುತ್ತಿಗೆಯಲ್ಲಿನ ಕರಿಮಣಿಯ ತಾಳಿಸರ, ಕಾಲುಬೆರಳಲ್ಲಿನ ಬೆಳ್ಳಿಯುಂಗರಗಳು ಎಲ್ಲವನ್ನು ನೋಡುವಾಗ ಸ್ವಷ್ಟವಾಗಿ ತಿಳಿಯುತ್ತಿತ್ತು ಅದೊಂದು ಹೆಣ್ಣಿನ ಅಸ್ಥಿಪಂಜರ ಅಂತ. ಕೆಲಸದವರು ಹೆದರಿ ಕೆಲಸ ನಿಲ್ಲಿಸಿಬಿಟ್ಟರು. ಸುದರ್ಶನನಿಗೆ ಏನು ತೋಚದಾಯಿತು.
      ಸಂಜೆ ಆಗುತ್ತಿತ್ತು, ಆರುಗಂಟೆ ಇರಬಹುದೇನೊ, ಒಬ್ಬನೆ ಮತ್ತೆ ಬಂದ ಅದೆ ಜಾಗಕ್ಕೆ, ಅಗೆದಿದ್ದ ಜಾಗ ಬಗ್ಗಿ ನೋಡಿದ. ಅಲ್ಲೆಲ್ಲ ಓಡಾಡಿ ಪಾಯಕ್ಕೆ ಅಂತ ಹಾಕಿದ್ದ ಕಲ್ಲೊಂದರ ಮೇಲೆ ಕುಳಿತು ಯೋಚನೆ ಮಾಡುತ್ತಿದ್ದ. ಏಕೆ ಹೀಗಾಯ್ತು? . ರಸ್ತೆಯ ಕಡೆಯಿಂದ ಯಾರೊ ವಯಸ್ಸಾದ ವ್ಯಕ್ತಿಯೊಬ್ಬ ಒಳಬಂದರು.
"ನೀವೆನಾ ಹೊಸದಾಗಿ ಈ ಜಾಗ ಕೊಂಡವರು ?" ಎಂದರು,
"ನಾನೆ , ಸುದರ್ಶನ ಎಂದು, ತಮ್ಮ ಪರಿಚಯವಾಗಲಿಲ್ಲ" ಎಂದ
"ನಾನು ಶೇಖರಮೂರ್ತಿ, ಇಲ್ಲಿಯೆ ತುಂಬಾ ವರ್ಷದಿಂದ ಇದ್ದೇನೆ, ಬೆಳಗ್ಗೆ ಕೆಲಸ ಪ್ರಾರಂಬಿಸಿದವರು ಏಕೊ ನಿಲ್ಲಿಸಿಬಿಟ್ಟಿರಿ ಏನು ಸಮಸ್ಯೆ" ಎಂದರು ಆತ.
"ಮತ್ತೇನಿಲ್ಲ ಅಗೆಯಲು ಪ್ರಾರಂಬಮಾಡಿದಂತೆ ಒಂದು ಅಸ್ಥಿಪಂಜರ ಸಿಕ್ಕಿತು, ಏನೊ ಹೆದರಿಕೆ, ಎಲ್ಲ ಕೆಲಸದವರು ಕೆಲಸ ನಿಲ್ಲಿಸಿಬಿಟ್ಟರು, ಈ ಮನೆಯಲ್ಲಿ ಮೊದಲು ಯಾರಿದ್ದರೊ ನನಗೆ ತಿಳಿಯದು, ನೀವು ಇಲ್ಲಿ ಹಳಬರೆನ್ನುತ್ತೀರಿ, ನಿಮಗೆ ಈ ಮನೆಯಲ್ಲಿದ್ದವರ ಪರಿಚಯವೇನಾದರು ಇತ್ತೆ, ಇಲ್ಲಿ ಅಸ್ಥಿಪಂಜರವಿರಲು ಕಾರಣವೇನಿರಬಹುದು ನಿಮಗೆ ಗೊತ್ತ?" ಎಂದೆಲ್ಲ ಪ್ರಶ್ನಿಸಿದ.
ಅದಕ್ಕೆ ಬಂದಿದ್ದ ವಯಸ್ಕ ಶೇಖರಮೂರ್ತಿ  ಸ್ವಲ್ಪ ಕಾಲ ಮೌನವಾಗಿ ಕುಳಿತ್ತಿದ್ದು ನಂತರ ಹೇಳಿದ
"ನೋಡಿ ನಾನು ನಿಮಗೆ ಹೇಳಬೇಕೊ ಅಥವ ಹೇಳಬಾರದೊ ತಿಳಿಯುತ್ತಿಲ್ಲ, ಸುತ್ತ ಮುತ್ತ ಜನ ಏನೆನೊ ಮಾತಾನಾಡಿಕೊಳ್ಳುತ್ತಾರೆ, ನನಗೆ ತಿಳಿದಿದ್ದನ್ನು ನಿಮಗೆ ತಿಳಿಸುತ್ತೇನೆ" ಎಂದು ಆ ಜಾಗಕ್ಕೆ ಸಂಬಂದಪಟ್ಟ ಕಥೆ ಹೇಳಿದರು.
    ಕೆಲವು ವರ್ಷಗಳ ಹಿಂದೆ ಈ ಮನೆಯಲ್ಲಿ ವಯಸ್ಸಾದ ದಂಪತಿಗಳು ವಾಸವಿದ್ದರು, ಅವರು ಹೆಸರು ನನ್ನದೆ ಶೇಖರ ಮೂರ್ತಿ ಎಂದು, ಆತನ ಪತ್ನಿ ಲಲಿತಮ್ಮ. ಅವರಿಗೆ ಒಬ್ಬನೆ ಮಗ ಮುಂಬಯಿಯಲ್ಲಿ ನೆಲೆಸಿದ್ದ, ಅವನಿಗೆ ಇಲ್ಲಿ ಹಿಂದಿರುಗಿ ಬಂದು ಅಪ್ಪ ಅಮ್ಮನ ಜೊತೆಯಿರಲು ಇಷ್ಟವಿಲ್ಲ, ಅಲ್ಲಿಯೆ ದೊಡ್ಡಕೆಲಸ. ಲಲಿತಮ್ಮನಿಗೆ ನಾವು ಮುಂಬಯಿಗೆ ಹೋಗಿ ಮಗನ ಜೊತೆ ಇದ್ದುಬಿಡಬೇಕು ಅಂತ ಆಸೆ. ಆದರೆ ಆತನಿಗೆ ಅದೇಕೊ ಇಷ್ಟವಿಲ್ಲ ಸ್ವಂತ ಮನೆಬಿಟ್ಟು ಎಲ್ಲಿಗೊ ಹೋಗಿ ಮಗನ ಕೈಕೆಳಗೆ ಇರುವದಕ್ಕಿಂತ ಇಲ್ಲಿ ಸ್ವಂತಂತ್ರವಾಗಿ ಇರುವುದೆ ಹಿತ ಎಂದು ಆತನ ವಾದ. ಆಗಾಗ್ಯೆ ಗಂಡ ಹೆಂಡತಿ ನಡುವೆ ಅದು ಚಕಮಕಿಗೆ ಕಾರಣವಾಗುತ್ತಿತ್ತು.

   ಆಕೆ ಮೂರು ಆರು ತಿಂಗಳಿಗೊಮ್ಮೆ  ಮಗನ ಮನೆಗೆ ಹೋಗ್ತೀನಿ ಎಂದು ಹೋಗಿ ಮುಂಬಯಿಯಲ್ಲಿದ್ದು ವಾರದೊಳಗೆ ಸೊಸೆಯ ಜೊತೆ ಹೊಂದಿಕೆಯಾಗದೆ ಹಿಂದೆ ಬರುತ್ತಿದ್ದಳು. ಹೀಗೆ ಒಮ್ಮೆ ಒಂದು ಅನಾಹುತವಾಗಿಹೋಯಿತು, ಏನೊ ಕಾರಣಕ್ಕೊ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಬವಾಯಿತು. ಮದುವೆಯಾಗಿ ಅಷ್ಟು ವರ್ಷಕಳೆದಿದ್ದರು ಆಗುತ್ತಿದ್ದ ಅವರ ಜಗಳ ಎಲ್ಲರಲ್ಲು ಬೇಸರ ಮೂಡಿಸಿದ್ದು ಅಕ್ಕಪಕ್ಕದ ಜನಗಳು ತಲೆಕೆಡಸಿಕೊಳ್ಳುತ್ತಿರಲಿಲ್ಲ. ಕೋಪಗೊಂಡ ಗಂಡ ಅದೇನೊ ಹೆಂಡತಿಗೆ ಕೈಲಿದ್ದ ಕೋಲಿನಿಂದ ಬಾರಿಸಿದ, ತಪ್ಪಿಸಿಕೊಳ್ಳಲು ಓಡಿದ ಆಕೆ ಜಾರಿ ಅಡುಗೆಮನೆಯಲ್ಲಿದ ಕಲ್ಲಿನ ಕಟ್ಟೆಗೆ ತಲೆ ಒಡೆದು ಕೆಳಗೆ ಬಿದ್ದರು. ಒಂದು ಕ್ಷಣ ಅವನಿಗೆ ಏನಾಯಿತೆಂದೆ ಅರ್ಥವಾಗಲಿಲ್ಲ. ಪರೀಕ್ಷೆ ಮಾಡಿ ನೋಡಿದಲ್ಲಿ ಆಕೆ ಸತ್ತು ಹೋಗಿದ್ದರು.  ಆಗಲೆ ರಾತ್ರಿಯಾಗಿತ್ತು. ಏನು ತೋಚದೆ ಸುಮ್ಮನೆ ಕುಳಿತ.

  ರಾತ್ರಿಯೆಲ್ಲ ಯೋಚಿಸುತ್ತಿರುವಾಗ ಏನೊ ಹೊಳೆಯಿತು, ಅಡುಗೆಮನೆಯ ನೆಲದಲ್ಲಿ ಯಾವುದೊ ಕಾಲದ ತೊಟ್ಟಿಯಿತ್ತು. ಅದನ್ನು ಉಪಯೋಗ ಮಾಡದೆ ಸುಮ್ಮನೆ ಹಲಗೆ ಮುಚ್ಚಿ ಬಿಡಲಾಗಿತ್ತು. ಕಂಗಾಲಾಗಿದ್ದ ಮುದುಕ ಪಾಪ ಒಬ್ಬನೆ ಹೇಗೊ ಅವನ ಹೆಂಡತಿಯ ಶವವನ್ನು ಅದರಲ್ಲಿ ಮಲಗಿಸಿದ. ಮನೆಯ ಹೊರಗೆ ಕಾಂಪೋಡಿನ ಗಿಡಗಳ ನಡುವಿನಿಂದ ಕೆತ್ತಿ ಕೆತ್ತಿ ಮಣ್ಣನ್ನು ತಂದು ತೊಟ್ಟಿಯಲ್ಲಿ ತುಂಬಿಸಿದ. ನಂತರ ನೆಲವನ್ನು ಸರಿಮಾಡಿ ಮೆತ್ತಿ. ನೆಲವನ್ನು ಸಗಣಿಯಿಂದ ಸಾರಿಸಿದ.  ಮರುದಿನ ಹೊರಗೆ ಹೋಗಿ ಸ್ವಲ್ಪ ಸಿಮೆಂಟ್ ಮರಳು ಬ್ಯಾಗಿನಲ್ಲಿ ತಂದು ಗಾರೆಮಾಡಿ ಅದನ್ನು ತೊಟ್ಟಿಯ ಜಾಗದಲ್ಲಿ ಮೆತ್ತಿ ಅಲ್ಲಿ ತೊಟ್ಟಿ ಇತ್ತು ಅಂತ ಗುರುತು ಸಿಗದ ಹಾಗಾಗಿ ಹೋಯಿತು. ಇಷ್ಟಾಗುವಾಗ  ಎರಡು ಮೂರು ದಿನ ಕಳೆಯಿತು.  ವಾರ ಕಳೆದ ನಂತರ ಯಾರೊ ಕೇಳಿದರು ನಿಮ್ಮ ಪತ್ನಿ ಎಲ್ಲಿ ಪುನಃ ಮುಂಬಯಿಗೆ ಹೋದರ ಎಂದು. ಅವನಿಗೆ ಸರಾಗವೆನಿಸಿ "ಹೌದು" ಎಂದು ಬಿಟ್ಟ.  ಹದಿನೈದು ದಿನ ಕಳೆದ ನಂತರ ಮಗನಿಗೆ ಒಂದು ಪತ್ರಬರೆದ. ಇಲ್ಲಿ ಒಬ್ಬನೆ ಕಷ್ಟವಾಗುತ್ತಿದೆ ನಿಮ್ಮ ಅಮ್ಮನನ್ನು ಬೇಗ ಹಿಂದೆ ಕಳಿಸು ಅಂತ. ಮಾರುತ್ತರ ಬಂತು ಮಗನಿಂದ ಅಮ್ಮ ಅಲ್ಲಿ ಬಂದಿಲ್ಲ ಅಂತ. ಅಸಲಿಗೆ ಅವಳು ಹೋಗಿದ್ದರೆ ತಾನೆ. ನಂತರ ಸುದ್ದಿಯೆಲ್ಲ ಹಬ್ಬಿತ್ತು, ಮುಂಬಯಿಗೆ ಅಂತ ಹೋದ ಮುದುಕಿ ಎಲ್ಲಿಯೊ ತಪ್ಪಿಸಿಕೊಂಡಳು ಅಂತ ಎಲ್ಲ ಹುಡುಕಿ ಸುಮ್ಮನಾದರು. ಮಗನು ಸುದ್ದಿಪತ್ರಿಕೆಗೆಲ್ಲ ಅಮ್ಮನ ಚಿತ್ರ ಕೊಟ್ಟು ಸಿಕ್ಕರೆ ಯಾರಾದರು ತಿಳಿಸಬೇಕೆಂದು ಕೋರಿದ. ಎಲ್ಲ ನಿಷ್ಪಲ.

  ಮುದುಕನ ಆತಂಕವೇನೊ ಕಳೆಯಿತು ಆದರೆ ಅವನ ಒಳಗಿನ ಮನಸ್ಸು ಅವನನ್ನು ಸುಮ್ಮನಿರಲು ಬಿಡಲಿಲ್ಲ. ದಿನ ರಾತ್ರಿಯಾದರೆ, ಅಡುಗೆಮನೆಗೆ ಹೋಗಿ ಅವನ ಹೆಂಡತಿ ಸಮಾದಿ ಎದುರು ಕುಳಿತು ಬಿಡುವನು. ಊಟವಿಲ್ಲ ನಿದ್ರೆಯಿಲ್ಲ  ಮೇಲಾಗಿ ಒಂಟಿ ಜೀವನ. ಅವನ ಹೃದಯದಲ್ಲಿ ಏನು ಹಿಂಸೆಯಾಗುತ್ತಿತ್ತು ಯಾರು ಅರಿಯರು. ಹೀಗೆ ಆರು ಎಂಟು ತಿಂಗಳು ಕಳೆಯಿತೇನೊ,   ಹಿಂಸೆ ತಾಳಲಾರದೆ.  ಮುದುಕ ಅದೆ ಅಡುಗೆ ಮನೆಯ ತೊಲೆಗೆ ನೇಣು ಹಾಕಿಕೊಂಡು ಪ್ರಾಣಬಿಟ್ಟ. ಅದು ಅಕ್ಕ ಪಕ್ಕದ ಮನೆಯವರಿಗೆ ತಿಳಿಯುವಾಗ ಐದು ದಿನ ಕಳೆದಿತ್ತು. ಪೋಲಿಸರು ಬಂದರು. ನೇತಾಡುತ್ತಿದ್ದ ಹೆಣ ಇಳಿಸಿ , ಮುಂಬಯಿಯಲ್ಲಿದ್ದ ಮಗನಿಗೆ ಸುದ್ದಿ ಕಳಿಸಿ ಅವನು ಬಂದು ಎಲ್ಲ ಮುಗಿಯಿತು.  ಸಣ್ಣ ಗಲಾಟೆಯಲ್ಲಿ ಪ್ರಾರಂಬವಾದ ಅವರಿಬ್ಬರ ಜಗಳ ಇಬ್ಬರ ಜೀವವನ್ನೆ ತೆಗೆದುಕೊಂಡಿತ್ತು.

  ಕತೆ ಮುಗಿಸಿದ ಶೇಖರಯ್ಯ ಸುಮ್ಮನೆ ಕುಳಿತ, ಕೇಳಿದ ಸುದರ್ಶನನು ಅಷ್ಟೆ. ಪಾಪ! ಎಂತ ಅಂತ್ಯ ಎಂಬ ವಿಷಾದದಿಂದ ಕುಳಿತಿದ್ದವನು, ಪುನಃ ಗುಂಡಿಯ ಬಳಿ ಹೋದ. ಅವರಲ್ಲಿ ಕೇಳಿದ
"ನಾನೀಗ ಏನು ಮಾಡಲಿ, ಇಲ್ಲಿ ಮನೆ ಕಟ್ಟಿದಲ್ಲಿ ನನಗೆ ತೊಂದರೆಯಾಗದೆ ಹೆಂಡತಿ ಮಕ್ಕಳು ಇರುವವನು" ಎಂದ.
ಅದಕ್ಕಾತ " ಎಂತ ತೊಂದರೆಯಪ್ಪ ಇಲ್ಲಿ ನಡೆದಿದ್ದಕ್ಕು ನಿನಗು ಯಾವ ಸಂಬಂಧವು ಇಲ್ಲ, ಒಂದು ಕೆಲಸ ಮಾಡು, ಪಾಪ ಆ ಮುದುಕಿಗೆ ಸರಿಯಾದ ಸಂಸ್ಕಾರಗಳಾಗಿಲ್ಲ, ನೀನು ಈ ಎಲುಬಿನ ಗೂಡನ್ನು ಬಟ್ಟೆಯಲ್ಲಿ ತೆಗೆದುಕೊಂಡು ಹೋಗಿ ಕಾವೇರಿಯೊ ಯಾವುದಾದರು ತೀರ್ಥಕ್ಕೆ ಬಿಟ್ಟುಬಿಡು, ನಂತರ   ದಂಪತಿಗಳ ಶಾಂತಿಗಾಗಿ ಯಾರನ್ನಾದರು ಶಾಸ್ತ್ರಿಗಳನ್ನು ಕೇಳಿ ಒಂದಿಷ್ಟು ತಿಥಿಯನ್ನು ಏನಾದರು ಶಾಂತಿಯನ್ನೊ ಮಾಡು. ಅವರಿಬ್ಬರಿಗೆ ನೆಮ್ಮದಿ ಸಿಗುತ್ತದೆ, ನೀನು ಅಷ್ಟೆ ಇದನ್ನು ಎಚ್ಚರಿಕೆ ಎಂದು ಭಾವಿಸು ಮನೆ ಕಟ್ಟಿದ ನಂತರ ಯಾವುದೆ ಕಾರಣಕ್ಕು ನಿನ್ನ ಹೆಂಡತಿಯನ್ನು ನಿಂದಿಸುವುದು, ಹೊಡೆಯುವುದು ಏನು ಮಾಡಬೇಡ , ಅದರಿಂದ ನಿನಗೆ ಒಳ್ಳೆಯದಾಗಲ್ಲ ಎಂದು ತಿಳಿ " ಎಂದರು.
    ಅವನು ಆಗಲಿ ಎನ್ನುತ್ತ ಕೆಳಗೆ ನೋಡುತ್ತಿದ್ದವನಿಗೆ ಒಂದು ಸಂದೇಹ ಬಂದಿತು, " ಸರಿಯೆ ಅವರು ಪತ್ನಿಯನ್ನು ನೆಲದಲ್ಲಿ ಹುಗಿದಿದ್ದು, ಯಾರಿಗು ಗೊತ್ತಿಲ್ಲ ಹಾಗಿರಬೇಕಾದಲ್ಲಿ ನಿಮಗೆ ಹೇಗೆ ತಿಳಿಯಿತು" ಎಂದು ಕೇಳುತ್ತ ಹಿಂದೆ ನೋಡಿದ. ಆದರೆ ಅವನ ಜೊತೆ ಕುಳಿತು ಮಾತನಾಡುತ್ತಿದ್ದ ವ್ಯಕ್ತಿ ಎಲ್ಲಿಯು ಕಾಣಲಿಲ್ಲ. ಚಕಿತನಾದ "ಇಷ್ಟು ಬೇಗ ಹೇಗೆ ಎದ್ದು ಹೋಗಲು ಸಾದ್ಯ ಅದು ಮಾತನಾಡುತ್ತಲೆ". ಎಂದು ಬೇಗ ರಸ್ತೆಗೆ ಬಂದು ಆಕಡೆ ಈಕಡೆ ಪರಿಶೀಲಿಸಿದ. ಎಲ್ಲಿಯು ಯಾರ ಸುಳಿವು ಇಲ್ಲ. ಅವನ ಹಿಂದಿನಿಂದ ಕರಿಯ ಬೆಕ್ಕೊಂದು ನಿಶ್ಯಬ್ದವಾಗಿ ಹೊರಹೋದಾಗ ಅವನು ಬೆಚ್ಚಿ ಬಿದ್ದ.
  ಮರುದಿನ ಬೆಳಗ್ಗೆ ಸುದರ್ಶನ ಸೈಟಿನ ಹತ್ತಿರವಿದ್ದಾಗ , ಜಟಕಾದಲ್ಲಿ  ಹುಸೇನ ಬಂದಿದ್ದ, ಹಳೆಯ ಮನೆಯಲ್ಲಿದ್ದ ರಾಶಿ ರಾಶಿ ಕಬ್ಬಿಣ ಹಾಗು ಹಳೆಯ ವಸ್ತುಗಳನ್ನು ಮೂಲೆಯಲ್ಲಿ ರಾಶಿ ಹಾಕಿದ್ದು ಅದನ್ನು ಅವನಿಗೆ ತೆಗೆದುಕೊಂಡು ಹೋಗಲು ಸುದರ್ಶನ ಹೇಳಿದ್ದ. ಅವನು ಹಳೆಯದನ್ನೆಲ್ಲ ಅವನ ಜಟಕಾಗೆ ತುಂಬುತ್ತಿರುವಾಗ ಒಂದು ಫೋಟೋ ಕಾಣಿಸಿತು, ಸುದರ್ಶನ ಅದನ್ನು ಕೈಯಲ್ಲಿ ಹಿಡಿದು ನೋಡುತ್ತಿರುವಾಗ, ಅದೊಂದು ಗಂಡ ಹೆಂಡತಿಯ ಹಳೆ ಫೋಟೊ ಅದರಲ್ಲಿರುವ ಗಂಡಸಿನ ಮುಖ ನೋಡುವಾಗ ನಿನ್ನೆ ಸಂಜೆ ಬಂದು ಕತೆ ಹೇಳಿದ ವ್ಯಕ್ತಿಯೆ ಅನ್ನಿಸಿತು. ಇವನ ಕೈಯಲ್ಲಿರುವ ಫೋಟೊ ನೋಡಿ ಹುಸೇನ ಹೇಳಿದ
"ಇದಾ ಸಾಮಿ, ಈ ಮನೇಲಿದ್ದರಲ್ಲ ಶೇಖರಪ್ಪ ಅನ್ನೋರು ಅವರು ಅವರ ಸಂಸಾರದ್ದು, ಪಾಪ ಆ ಯಮ್ಮ ಎಲ್ಲೊ ಮುಂಬಯಿ ಹೋಗ್ತೀನಿ ಅಂತ ಹೇಳಿ ಹೋದಳು ತಪ್ಪಿಸಿಕೊಂಡು ಕಾಣದಂಗಾದ್ಳು, ಈ ಯಪ್ಪ ಒಬ್ಬನೆ ಏನಾಯ್ತೊ ಆರು ಏಳು ತಿಂಗಳಲ್ಲೆ ನೇಣ್ಗೆ ಹಾಕ್ಕೊಂಡು ಸತ್ತು ದೇವರ ಪಾದ ಸೇರ್ದ, ಪಾಪ ಅವನ್ದು ಜಾಗ ಈಗ ನೀವು ಕಟ್ಟಿಸ್ತ ಇದ್ದೀರಿ" ಎಂದ
  ಸುದರ್ಶನನಿಗೆ ಗಾಭರಿಯಾಯ್ತು, "ಸರಿಯಾಗಿ ನೋಡಯ್ಯ ಹುಸೇನ, ನಾನು ನಿನ್ನೆ ಸಂಜೆ ಈ ವ್ಯಕ್ತಿ ಜೊತೆ ಇಲ್ಲೆ ಮಾತಾಡಿದ್ದೇನೆ" ಅಂದ
ಅದಕ್ಕೆ ಹುಸೇನ " ನೀವೆಂತದು ಮಜಾ ಮಾಡ್ತೀರ ಸಾಮಿ, ನನಗೆ ಅವ ಚೆನ್ನಾಗಿ ಗೊತ್ತು, ದೋಸ್ತು, ಅವ ಹೋಗಿ ಯಾವ ಕಾಲ ಆಯ್ತು ನೀವು ಅದೆಂಗೆ ಅವನ್ದು ಜೊತೆ ಆಡ್ತೀರಿ ಮಾತಾ, ಇನ್ನಾರ್ನೊ ನೋಡಿ ನೀವು ಬೆಸ್ತು ಬಿದ್ದೀದ್ದೀರಿ ಬಿಡಿ" ಅಂದ.
  ಸುದರ್ಶನ ಅವನ ಜೊತೆ ಮಾತು ಮುಂದುವರಿಸದೆ ಸುಮ್ಮನಾದ.
---------------------------------------------------------------------     

ಅಜ್ಜಿ ಕತೆ ಮುಗಿಸಿದಾಗ , ನನಗೆ ಎಂತದೊ ಆಶ್ಚರ್ಯ. ಮತ್ತೆ ಕೇಳಿದೆ "ಅಲ್ಲ ಅಜ್ಜಿ ಆಮೇಲೆ ಅವರು ಮನೆ ಕಟ್ಟಿದ್ರ ಇಲ್ವ"
"ಕಟ್ಟದೆ ಏನು, ನಾನು ಅಮನೆ ಗೃಹಪ್ರವೇಶಕ್ಕು ಹೋಗಿ ಊಟ ಮಾಡಿ ಬಂದೆ, ಎಂತ ತೊಂದರೆಯು ಇಲ್ಲ, ಅವನ ಹೆಂಡತಿ ರಾಜಲಕ್ಷ್ಮಿ ಸಹ ಅಮೇಲೆ ಸಿಗುತ್ತಿದ್ದಳು, ಅವಳು ಸಂತೋಷವಾಗಿದ್ದಳು, ಅದೇಕೊ ಆ ಮನೆ ಕಟ್ಟಿದ ಮೇಲೆ ಸುದರ್ಶನ ತನ್ನ ಒರಟು ತನ ಬಿಟ್ಟು ಹೆಂಡತಿ ಹತ್ತಿರ ತುಂಬ ಮೃದುವಾಗಿ ನಡೆದು ಕೊಳ್ತಿದ್ದ, ಅವಳ ಮಾತಿಗೆ ಬೆಲೆ ಕೊಡ್ತಿದ್ದ , ಹಾಗಾಗಿ ಅವಳಿಗೆ , ಈ ಮನೆಗೆ ಬಂದ ನಂತರ ಎಲ್ಲ ಸರಿ ಹೋಯ್ತು ಅಂತ ಖುಷಿ"
ನಾನು ಸುಮ್ಮನೆ ಕುಳಿತಿದ್ದೆ. ಮನುವಿನ ಮಕ್ಕಳು ಸನತ್ ಸಾಕೇತ ಅಜ್ಜಿ ಮುಖ ನೋಡ್ತಾ ಇದ್ದವರು,
"ಹೋಗಜ್ಜಿ ಕತೆ ಚೆನ್ನಾಗೆ ಇಲ್ಲ,  ಇದಕ್ಕಿಂತ ಬುರುಡೆ ಕತೇನೆ ಚೆನ್ನಾಗಿದೆ ಅದನ್ನೆ ಹೇಳು " ಅಂತ ಗಲಾಟೆ ಮಾಡಿದರು.
ಅಜ್ಜಿ ಕೋಪ ಮಾಡಿ "ಹೋಗ್ರೊ ಕತೆನು ಇಲ್ಲ ಎಂತದು ಇಲ್ಲ, ಪರೀಕ್ಷೆ ಹತ್ತಿರ ಬಂತು ಓದಿಕೊಳ್ಳಿ" ಅಂತ ಬೈದು ಓಡಿಸಿದರು.
ನಾನು ಸರಿ ಟೈಮ್ ಆಯಿತು ಅಂತ ಎದ್ದು ಹೊರಟೆ. ಸಂಪದದ ವಿನಯ್ ಹೇಳಿದ ಮಾತು ನೆನಪಿಗೆ ಬಂತು,
"ಅಜ್ಜಿ ಸಂಪದದಲ್ಲಿ ನಿಮ್ಮ ಅಭಿಮಾನಿ ವಿನಯ್ ಅಂತ ನಿಮಗೆ "ಹಾಯ್" ಎನ್ನಲು ತಿಳಿಸಿದ್ದಾರೆ " ಎಂದೆ.
ಅಜ್ಜಿಗೆ ಅದೇನು ಅರ್ಥವಾಯಿತೊ "ಅದೆಂತದು ಹಾಯ್ , ಹಾಯಲು ನಾನೇನು ಹಸುವ ನನಗೆ ಕೊಂಬಿದೆಯ?" ಅಂದರು. ಮಕ್ಕಳು ಸುಮ ಮನು ಎಲ್ಲ ನಗುತ್ತಿದ್ದರು. ನಾನು ನಗುತ್ತ ನಮ್ಮ ಮನೆಗೆ ಹೊರಟೆ.

ಹುಡುಗಿಯರೆ ನೀವೇಕೆ ಹೀಗೆ ?


ಬಾನುವಾರ ಸಂಜೆ ಸದಾಶಿವನಗರದ ಪಾರ್ಕ್, ಬೆಂಗಳೂರಿನವರಿಗೆ ಪಾರ್ಕ್ ಅಂದರೆ ಅದೇನು ಹುಚ್ಚೊ, ಪಿತಪತ ಅನ್ನುವ ಜನ. ಗಣೇಶರು ನಿಂತು ಮರವೊಂದನ್ನು ನೋಡುತ್ತ ಅಂದುಕೊಂಡರು   
"ಇದು ಬುರುಡೆ ಮರ ಅನ್ನುತ್ತಾರಲ್ಲ ಅದಿರಬೇಕು". ಅಷ್ಟರಲ್ಲಿ ಯಾರೊ ಅವರ ಕೈ ಎಳೆದಂತಾಯ್ತು, 
ಕೆಳಗೆ ನೋಡಿದರೆ, ಅವರ ಐದು ವರ್ಷದ ಮಗಳು, 
"ಅಪ್ಪ ಅದೆಂತ ಮರ ಅದರ ಹೆಸರೇನು", ಗಣೇಶರು ದ್ವನಿ ತಗ್ಗಿಸಿ ನುಡಿದರು 
"ಅದಾ! ನಿಮ್ಮ ಮಾವ ಬರ್ತಾನಲ್ಲ, ಶೇಖರ ಅವನ ಮಾತಿನ ಜಾತಿಯ ಮರ" ಅಂದರು. 
ಮಗುವಿನ ಹಿಂದೆ ನಿಂತಿದ್ದ ತಾಯಿ ಸೃಷ್ಟಿಯ ಮುಖ ಕೋಪದಿಂದ ಕೆಂಪಾಯಿತು 
"ರೀ ಪಾಪ ಅವನು ನಿಮಗೇನು ಮಾಡಿದ್ದಾನೆ, ದೇಶ ಬಿಟ್ಟು ಅವನೆಲ್ಲೊ ಇದ್ದಾನೆ, ಅವನನ ಏಕ್ರಿ ಆಡಿಕೊಳ್ತೀರಿ". 

ಗಣೇಶ ನಗುತ್ತ 
"ಹೋಗ್ಲಿ ಬಿಡೇ, ಯಾಕಿಷ್ಟು ಕೋಪ ಮಾಡಿ ಕೊಳ್ತಿ, ಏನೊ ಮಗುವಿನ ಹತ್ತಿರ ತಮಾಷಿ ಮಾಡಿದೆ,ಅವನ ಹೆಸರು ಬೇಡ ಅಂದ್ರೆ ನಮ್ಮ ಕಡೆಯವರದೆ ಆಗಲಿ, ನಮ್ಮ ಮಾವ ಇದ್ದಾರಲ್ಲ, ಅವರ ಮಾತಿನ ಜಾತಿ ಅಂದರಾಯ್ತು ಬಿಡು".

ಗಣೇಶರ ಮಾತಿನ ಅರ್ಥ ನಿಧಾನವಾಗಿ ಆದಂತೆ ಸೃಷ್ಟಿ ಕೋಪದಿಂದ, ದೂರ ಹೋಗಿ ನಿಂತಳು, ಮಗುವು ಅವಳ ಜೊತೆ ಹೋಯಿತು, ಅಕಾಶದಿಂದ ಎಂಬಂತೆ ಮೇಲಿನಿಂದ ನೇತು ಬಿದ್ದಿದ್ದ ದಾಸವಾಳದ ಹೂವನ್ನು ನೋಡಿ ಮಗು 
"ಅಮ್ಮ ಹೂವು ನೋಡು ಎಷ್ಟು ಮೇಲಿದೆ" 
ಮಗುವಿನ ಮಾತಿನಿಂದ ಸೃಷ್ಟಿ  ಮೇಲೆ ನೋಡುತ್ತ, ಒಂದು ಹೆಜ್ಜೆ ಹಿಂದೆ ಇಟ್ಟಳು , ಹಿಂದಿನಿಂದ ಬರುತ್ತಿದ್ದ ಯಾರಿಗೊ ಡಿಕ್ಕಿಯಾಯಿತು
"ಏನ್ರಿ ಅಕಾಶ ನೋಡ್ತ ನಡೀತೀರಿ" ಆ ಕಡೆಯಿಂದ ಬಂದ ಹೆಣ್ಣಿನ ದ್ವನಿಗೆ, ಬೆಚ್ಚಿದ ಸೃಷ್ಟಿ
"ಕ್ಷಮಿಸಿ, ಮೇಡಂ" ಅನ್ನುತ್ತ ಪಕ್ಕಕ್ಕೆ ತಿರುಗಿದಳು , ಅವರ ಮುಖ ನೋಡುತ್ತಿದ್ದಂತೆ  ಸೃಷ್ಟಿಯ  ಕಣ್ಣಿನ ಹೊಳಪು ಹೆಚ್ಚಿತು
"ಅರೆ ನೀನು, ಲಲಿತ , ಇದೇನೆ ಇಲ್ಲಿ" 

ಸಂತೋಷದಿಂದ ಅವಳನ್ನು ಅಪ್ಪಿಕೊಂಡಳು. ಲಲಿತಳಿಗೆ ತಕ್ಷಣ ಹೊಳೆಯಿತು, ಇವಳಾರು ಎಂದು
"ಏ ಸೃಷ್ಟಿ, ಬಿಡೆ, ನೀನು ಹೀಗೆ ತಬ್ಬಿಕೊಂಡರೆ, ನನ್ನ ಯಜಮಾನರಿದ್ದಾರೆ ತಪ್ಪು ತಿಳಿಯುತ್ತಾರೆ" ಎಂದಳು.
"ಥೂ ! ನಿನ್ನ ,  ಇನ್ನು ನಿನ್ನ ಬುದ್ದಿ ಬಿಡಲಿಲ್ಲ ನೋಡು, ಎಲ್ಲಿದ್ದೀಯೆ ಈಗ, ಎಷ್ಟು ವರ್ಷವಾಯಿತು ನೋಡಿ ಮಾತಾಡಿ" ಎಂದಳು.
"ಇದೇ ಬೆಂಗಳೂರಿನಲ್ಲಿಯೆ ಇದ್ದೀನಿ, ಮಲ್ಲೇಶ್ವರದಲ್ಲೆ, ನನ್ನ ಗಂಡ ಹಾಗು ಮಗಳು ಬಂದಿದ್ದಾರೆ,ಬಾ ಅವರನ್ನು ಮಾತನಾಡಿಸುವಂತೆ,ನಿಮ್ಮ ಯಜಮಾನರೆಲ್ಲಿ" ಎಂದಳು,
"ಅವರು ಬಂದಿದ್ದಾರೆ,ನೋಡು ಇವಳೆ ನನ್ನ ಮಗಳು ಶ್ರುತಿ" ಎನ್ನುತ್ತ, ದೂರ ನಿಂತಿದ್ದ ಗಂಡನನ್ನು 

"ರೀ, ಬನ್ರಿ ಇಲ್ಲಿ" ಎಂದು ಕೂಗಿದಳು.
"ಏನೇ ಹಳೆ ಕಾಲದವರ ಹಾಗೆ ಕೂಗ್ತಿ , ನೀನು ಮಾಡ್ರನ್ ಅಲ್ಲವ, ನಿನ್ನಿ ಮಿಷ್ಟರ್ ಅನ್ನು ಹೆಸರಿಡಿದೆ ಕರೆಯೋದಪ್ಪ, ಅದರಲ್ಲೇನು" ಎನ್ನುತ್ತಿರುವಾಗ , 

ಗಣೇಶ ನಗುತ್ತ ಹತ್ತಿರ ಬಂದರು, ಅಷ್ಟರಲ್ಲಿ ಇವರಿದ್ದ ಕಡೆ, ಲಲಿತ ಗಂಡ ಶ್ರೀನಿವಾಸ ಸಹ ಬಂದ ಮಗಳು ಶ್ರೇಯ ಜೊತೆ. ಗೆಳತಿಯರಿಬ್ಬರು ನಗುತ್ತಿದ್ದರು, ಅವರಿಬ್ಬರು ಎಲ್ ಕೆ ಜಿ ಯಿಂದ ಡಿಗ್ರಿ ಮುಗಿಸುವ ತನಕ ಜೊತೆಯಲ್ಲಿ ಓದಿದವರು, ಅದೇನೊ ಮದುವೆ ನಂತರ ಇಬ್ಬರ ನಡುವೆ ಸಂಪರ್ಕವೆ ಇರಲಿಲ್ಲ, ಸಂದರ್ಭವೆ ಹಾಗಿತ್ತು.
ಸೃಷ್ಟಿ ,   ಲಲಿತ ಹಾಗು ಶ್ರೀನಿವಾಸನಿಗೆ ತನ್ನ ಗಂಡ ಹಾಗು ಮಗಳನ್ನು ಪರಿಚಯ ಮಾಡಿದಳು 

"ಇವಳೆ ನೋಡೆ ನನ್ನ ಮಗಳೆ ಶ್ರುತಿ, ಇವರು ನಮ್ಮ ಯಜಮಾನರು"
ಲಲಿತ ದಂಗಾದಳು, 

"ಇದೇನೇ ಒಳ್ಳೆ ಸಂಪ್ರದಾಯಸ್ಥೆ ಆಗಿ ಬಿಟ್ಟಿದ್ದಿ ಗಂಡನ ಹೆಸರೇಳಲು ನಾಚಿಕೆ" ಎಂದಾಗ, 
ಗಣೇಶರು ನಗುತ್ತ "ನಾನು ಗಣೇಶ " ಎಂದು ತಮ್ಮ ಸ್ವಪರಿಚಯ ಮಾಡಿಕೊಂಡರು,
ಸೃಷ್ಟಿಯನ್ನೆ ನೋಡುತ್ತಿದ್ದ ಲಲಿತಳಿಗೆ, ಮನಸ್ಸು  ತನ್ನ ಬಾಲ್ಯ ಹಾಗು ಹುಡುಗುತನದ ದಿನಗಳು ಮನಸ್ಸಿನಲ್ಲಿ ಹಾದು ಹೋಯಿತು....

..
..
ಚಿಕ್ಕ ವಯಸ್ಸಿನಿಂದಲು ಅಷ್ಟೆ ಸೃಷ್ಟಿ ಅಂದರೆ ಸ್ವಲ್ಪ ಡೇರ್ ಅಂಡ್ ಡೆವಿಲ್ ಅನ್ನುವ ರೀತಿಯ ಹುಡುಗಿಯೆ, ಯಾರಿಗೂ ಕೇರ್ ಮಾಡುತ್ತಿರಲಿಲ್ಲ.  ಅವರ ಅಪ್ಪ ಅಮ್ಮನಿಗು ಅಷ್ಟೆ, ಹುಡುಗಿ ಸ್ವಲ್ಪ ದಾಷ್ಟೀಕ ಜಾಸ್ತಿ ಮುಂದೆ ಹೇಗೊ ಅಂತ ಆತಂಕ. ವಯಸಿಗೆ ಬಂದ ಮೇಲು ಅಷ್ಟೆ ಅವಳು ತಲೆ ತಗ್ಗಿಸಿ ನಡೆದವಳೇನಲ್ಲ, ಯಾರಾದರು ಹುಡುಗರು , ಕಿಚಾಯಿಸಿದರೆ ಎದುರಿಗೆ ನಿಂತು ದಬಾಯಿಸಿಬಿಡುವವಳೆ. ಅಕ್ಕಪಕ್ಕದ ಮನೆಯವರೆಲ್ಲ ಹೆಸರಿಟ್ಟಿದ್ದರು, ಇದು "ಭಜಾರಿ ಹೆಣ್ಣು"  ಎಂದಿದ್ದರೂ  ಅಪ್ಪ ಅಮ್ಮನ ಮಾತು ಕೇಳುವವಳಲ್ಲ, ತನಗೆ ಸರಿ ಅನ್ನಿಸಿದ ಯಾವುದೋ ಹುಡುಗನನ್ನು ಹಿಡಿದು ಲವ್ ಮಾಡಿ ಓಡಿ ಹೋಗುವಳೆ ಎಂದು ಅವರೆಲ್ಲರ ಭಾವನೆ. 

ಕಾಲೇಜಿನಲ್ಲು ಓದುವದರ ಜೊತೆ ಎಲ್ಲದರಲ್ಲೂ ಅವಳೆ ಮುಂದು, ಕಾಲೇಜಿನ ಕೆಲವು ಅಧ್ಯಾಪಕರೆ ಸೃಷ್ಟಿ ಅಂದರೆ ಬೆಚ್ಚಿ ಜಾಗ ಬಿಡುತ್ತಿದ್ದವರೆ. ಪದವಿಯ ಕಡೆಯ ವರ್ಷ, ಭಾಷಣ ಸ್ಪರ್ದೆ ನಡೆದಿತ್ತು, ಸೃಷ್ಟಿ ಇಲ್ಲದೆ ಅದು ನಡೆಯುವಂತಿಲ್ಲ, ಅವಳ ಬಲವಂತಕ್ಕೆ ಲಲಿತ ಸೇರಿದ್ದಳು, ಆದರೆ ಇಬ್ಬರದು ವಿರುದ್ಧ ಸ್ವಭಾವ, ಹಾಗಾಗಿ ಇಬ್ಬರು ಭಾಷಣಕ್ಕೂ ವಿರುದ್ಧ ಪಕ್ಷವನ್ನು  ಆಯ್ದು ಕೊಂಡಿದ್ದರು, ವಿಷಯ ಸರಳ,
"ನಮ್ಮ ಸಮಾಜಕ್ಕೆ ಸಂಪ್ರದಾಯದ ಮದುವೆ ಸರಿಯೊ ಅಥವ ಪ್ರೇಮ ವಿವಾಹ ಸರಿಯೊ" . 

ಸೃಷ್ಟಿ ಸಹಜವಾಗಿ ಪ್ರೇಮ ವಿವಾಹದ ಪರ

"ನಮ್ಮ ಭಾರತೀಯ ಸಮಾಜ ಜಡ್ಡುಗಟ್ಟಿದೆ, ಸದಾ ಸಂಪ್ರದಾಯದ ಸಂಕೋಲೆಯಲ್ಲಿ ಬಂದಿ, ಹೆಣ್ಣುಮಕ್ಕಳನ್ನು "ನೀನು ದೈವ" ಎಂದು ಉಬ್ಬಿಸಿ ಚಿನ್ನದ ಸಂಕೋಲೆಯನ್ನೆ ತೊಡೆಸಿದೆ. ನಾವು ಅದರಿಂದ ಹೊರಬರಬೇಕು, ಅಪ್ಪ ಅಮ್ಮ ತೋರಿಸುವ ಗಂಡನನ್ನು ಎಲ್ಲ ಹೆಣ್ಣು ಮಕ್ಕಳು ತಿರಸ್ಕರಿಸಿ,  ಮನ ಒಪ್ಪಿದ ಗಂಡನನ್ನೆ ವರಿಸಿ, ಎಂದು ಕರೆಕೊಟ್ಟಳು,


 'ಈ ಸಂಪ್ರದಾಯದ ಮದುವೆಗಳು ವರದಕ್ಷಿಣೆ ಎಂಬ ಭೂತಕ್ಕೆ ಕಾರಣವಾಗಿದೆ ಆದ್ದರಿಂದ ಈ ಸಂಪ್ರದಾಯದ ಮದುವೆ ಅನ್ನುವ ಪದ್ದತಿಯನ್ನೆ ತಿರಸ್ಕರಿಸಬೇಕು ಅಂದಳು,  ಅಲ್ಲದೆ ಕೇವಲ ಅಪ್ಪ ಅಮ್ಮನಿಗಾಗಿ ಯಾವುದೋ ಹಣವಂತನನ್ನ, ಸರ್ಕಾರಿ ನೌಕರಿ ಇರುವನು ಎಂದೊ, ಅವನು ಹೇಗಿದ್ದರು ಸರಿ ಎಂದು,ಮದುವೆಯಾಗಿ ನಮ್ಮ ಆತ್ಮ ದ್ರೋಹ ಮಾಡಿಕೊಳ್ಳುವುದು ಬೇಡ ಎಂದಳು. ನಾನೇನೊ ಎಂದಿದ್ದರು, ಅಂತಹ ಗಂಡನನ್ನು ಒಲ್ಲೆ, ನನ್ನ ಮನಸಿಗೆ ಒಪ್ಪುವ, ಕುಡಿ ಮೀಸೆಯ ಹುಡುಗನನ್ನೆ ವರಿಸುತ್ತೇನೆ ಹೊರತು, ಅಪ್ಪ ಅಮ್ಮ ತೋರಿಸುವ ಗುಡಾಣ ಗಾತ್ರದ ಗಂಡನ್ನಲ್ಲ" ಎಂದು ಘೋಶಿಸಿದಳು, 

ಹಿಂದಿನ ಸಾಲಿನಲ್ಲಿದ್ದ ಹುಡುಗರಂತು, ಚಪ್ಪಾಳೆ ತಟ್ಟಿ ಸ್ವಾಗತಿಸಿದರು, ಕೆಲವು ಪ್ರಾಧ್ಯಾಪಕರ ಮುಖ ಏಕೊ ತುಂಬಾ ಗಂಭೀರವಾಗಿತ್ತು.

 ಸಂಜೆ ಮನೆಗೆ ಬಂದಳು ಸೃಷ್ಟಿ. ಇನ್ನೆರಡು ತಿಂಗಳಿಗೆ ಪರೀಕ್ಷೆ ಇರುವದರಿಂದ, ಪರೀಕ್ಷೆಯ ನಂತರ ಅವಳಿಗೆ ಮದುವೆ ಮಾಡಲು ಸಿದ್ಧವಿದ್ಧರು ಅವಳ ಅಪ್ಪ ಅಮ್ಮ, ಆ ದಿನವೆ ಅವಳನು ನೋಡಲು ವರ ಬರುವನಿದ್ದ, ಅವರೆ ಗಣೇಶರು. ಆ ವಿಷಯವನ್ನು ಏಕೊ ಗೆಳತಿ ಲಲಿತಳಿಂದಲು ಮುಚ್ಚಿ ಇಟ್ಟಿದಳು, ಇನ್ನು ಆಗಲಿಲ್ಲ ಹೋಗಲಿಲ್ಲ ಏಕೆ ಎಂದು. 


 ತಮಾಷಿ ಅಂದರೆ ಹೊರಗೆ ಅಷ್ಟೆಲ್ಲ ನವನಾಗರೀಕ ತರುಣಿಯಂತೆ ವರ್ತಿಸಿದ ಸೃಷ್ಟಿ ಮನೆಯಲ್ಲಿ ತಂದೆ, ತಾಯಿಯ ಮಾತಿಗೆ ಯಾವುದೇ ವಿರೋದ ವ್ಯಕ್ತಪಡಿಸಲಿಲ್ಲ. ಸುಖವಾಗಿ ರೇಷ್ಮೆ ಸೀರೆಯುಟ್ಟು, ಅವಳ ಅಜ್ಜಿ ಹೇಳಿದಂತೆ, ಜಡೆ ಹಾಕಿಕೊಂಡು, ತಲೆತುಂಬಾ ಹೂವು ಮುಡಿದು. ಸಿದ್ದವಾದಳು. ಗಂಡಿನವರು ಎಲ್ಲ ಬಂದಾಗ, ಅಮ್ಮನ ಅಣತಿಯಂತೆ ತಲೆ ತಗ್ಗಿಸಿ ಅವರಿಗೆ ಕೊಬ್ಬರಿಮಿಠಾಯಿ, ಉಪ್ಪಿಟ್ಟಿನ ತಟ್ಟೆಗಳನ್ನು ಕೊಟ್ಟಳು. ಕಾಫಿಯನ್ನು ಕೊಟ್ಟು. ಚಿಕ್ಕ ವಯಸಿನಲ್ಲಿ ಪಾಸ್ ಮಾಡಿದ್ದ ಜೂನಿಯರ್ ಸಂಗೀತ ನೆನಪಿಸಿಕೊಂಡು, ಒಂದು ದೇವರನಾಮವನ್ನು ಹಾಡಿಬಿಟ್ಟಳು. 

 ಗಂಡಿನ ಮನೆಯವರಿಗೆಲ್ಲ ಸಂತಸ, ಈ ಕಾಲದಲ್ಲಿಯೂ ಸಹ ಇಂತ ಸಂಪ್ರದಾಯಸ್ತ ಹುಡುಗಿ ನೋಡಲು ಸಿಕ್ಕಳಲ್ಲ ಎಂದು. ಸುಮಾರು ತೊಂಬತ್ತು ಕೇಜಿಗು ಅಧಿಕವಿದ್ದ ಗಣೇಶರನ್ನು ಅವಳು "ಕಿಂ ಕಃ " ಎನ್ನದೆ "ಚ"ಕಾರವೆತ್ತದೆ ಮದುವೆಯಾಗಲು ಒಪ್ಪಿದ್ದು, ಸ್ವತಃ ಅವಳ ಅಪ್ಪ ಅಮ್ಮನಿಗೆ ಆಶ್ಚರ್ಯ. ಇವಳಿಗೆ ಇನ್ನೆಷ್ಟು ಗಂಡು ತೋರಿಸಿ ಒಪ್ಪಿಸಬೇಕೊ ಎಂಬ ಆತಂಕದಲ್ಲಿದ್ದ ಅವರಿಗೆ ಮೊದಲಗಂಡನ್ನೆ ಅವಳು ಒಪ್ಪಿದಾಗ ನಿಜಕ್ಕು ಖುಷಿ ಬಿದ್ದರು. ಬಹಳ ಜನ ಅಂದರು ಅವರಿಬ್ಬರಿಗೆ ಈಡು ಜೋಡಿಲ್ಲ ಎಂದು, ಅಲ್ಲದೆ ಅವರಿಬ್ಬರ ಹೆಸರುಗಳು ಅಷ್ಟೆ ಒಂದು ಮಾಡ್ರನ್ ಮತ್ತೊಂದು ಸಂಪ್ರದಾಯಬದ್ದ.

  ಪರೀಕ್ಷೆ ನಂತರ, ಗಂಡಿನವರ ಇಚ್ಚೆಯಂತೆ ಮೈಸೂರಿನಲ್ಲೆ ಮದುವೆ ನೆರವೇರಿತ್ತು, ಚಿಕ್ಕ ವಯಸ್ಸಿನಿಂದಲು ಬೆಕ್ಕಿನಂತೆ ಎಲ್ಲರನ್ನು ಪರಚಲು ಬರುತ್ತಿದ್ದ ಸೃಷ್ಟಿ ಮದುವೆ ನಂತರ ಗಂಡನಮನೆಗೆ ಹೊಂದಿಕೊಂಡ ಪರಿ ಮಾತ್ರ ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿ ಆವಳ ಅಪ್ಪ ಅಮ್ಮನೆ ಭಾವಿಸಿದ್ದರು. ಅವಳ ಗಂಡ ಗಣೇಶನಾದರು ಸರಿ, ಒಂದೆ ಒಂದು ರುಪಾಯಿಸಹ ವರದಕ್ಷಿಣೆ ಎಂದೊ ಅಥವ ವರೋಪಚಾರವೆಂದೊ ಪಡೆಯಲು ಒಪ್ಪದೆ ಇದ್ದದ್ದು, ಅವನ ಬಗ್ಗೆ ಅವಳ ಗೌರವ ನೂರ್ಪಾಲಾಗಲು ಕಾರಣವಾಗಿತ್ತು.
....
....

ನಗುತ್ತಿದ್ದ ಗಣೇಶರನ್ನು ಕಂಡ, ಲಲಿತಳ ಗಂಡ ಶ್ರೀನಿವಾಸರು ತಾವು ಕೈಮಾಡಿ 

"ನಾನು ಶ್ರೀನಿವಾಸ" ಎಂದರು, 
ಅವರ ದ್ವನಿಯಂತೆ ಅವರ ಮುಖವು ಗಂಭೀರವೆ, ಅದೇನೊ ನಕ್ಕರೆ ಏನೊ ಕಳೆದುಕೊಳ್ಳುವರಂತೆ ಎನ್ನುವ ರೀತಿಯಲ್ಲಿ. ಲಲಿತ ನಗುತ್ತ ಗೆಳತಿಗೆ ತಿಳಿಸಿದಳು 
"ಇವರು ನಮ್ಮವರು ಶ್ರೀನಿವಾಸ, ಮನೆಯಲ್ಲಿ ಸೀನ ಎನ್ನುತ್ತೇನೆ, (ನಗು), ಇವಳು ಮಗಳು, ಮೇಘ" ಎಂದಳು. 

ಲಲಿತಳ ಮುಖವನ್ನೆ ನೋಡುತ್ತಿದ್ದಳು ಸೃಷ್ಟಿ, ಕಾಲೇಜು ಓದುವಾಗ ಸಹ  ಯಾರನ್ನು ತಲೆ ಎತ್ತಿ ಮಾತನಾಡಿಸಿದವಳಲ್ಲ ಇವಳು, ಈಗ ಎಷ್ಟೆ ಡೇರ್ ಆಗಿದ್ದಾಳೆ ಅಂದುಕೊಂಡಳು. ಛೇ! ಮದುವೆ ನಂತರ ಗಂಡನನ್ನು ಹೆಸರಿಡಿದು ಕರೆದರೆ ಆಯಸ್ಸು ಕಡಿಮೆ ಅಂತಾರೆ, ಇವಳಿಗೆ ಯಾವ ಎಗ್ಗು ಇಲ್ಲವಲ್ಲ,ಇವಳ ಸಂಪ್ರದಾಯದ ವರ್ತನೆ ಎಲ್ಲಿ ಹೋಯ್ತೊ ಅಂದು ಕೊಂಡಳು, ಸೃಷ್ಟಿಯ ಮನಸ್ಸು ಸಹ ಏಕೊ ಹಿಂದಕ್ಕೆ ಓಡುತ್ತಿತ್ತು
..
..
ಕಾಲೇಜಿನ ಅಂದಿನ ದಿನಗಳಲ್ಲಿ ಲಲಿತ ಎಂದು ತಲೆಯಿತ್ತಿ ಯಾರನ್ನು ನೋಡಿದವಳಲ್ಲ, ಹುಡುಗರು ಅಷ್ಟೆ ಅವಳಿಗೆ ಹೆದರಿಕೆ ಮಿಶ್ರಿತ, ಗೌರವ ತೋರುತ್ತಿದ್ದಳು, ಅವಳೆ ಹೇಳುತ್ತಿದ್ದಳು, ನಾವು ಸರಿಯಾಗಿದ್ದಲ್ಲಿ ನಮಗೆ ಎಲ್ಲರು ಹೆದರುತ್ತಾರೆ, ನಮ್ಮ ತಂಟೆಗೆ ಯಾರು ಬರುವದಿಲ್ಲ. ನಮ್ಮ ನಡತೆ ಸರಿ ಇಲ್ಲದಿದ್ದಾಗ, ಎಲ್ಲರು ನಮ್ಮ ಲಘುವಾಗಿ ಕಾಣುತ್ತಾರೆ. ಆ ದಿನ ಬಾಷಣ ಸ್ಪರ್ದೆಯನ್ನು ನೆನಸಿತು, ಸೃಷ್ಟಿಯ ಬಾಷಣದ ನಂತರ ಲಲಿತ ನಿಧಾನಕ್ಕೆ ಎದ್ದು ಬಂದಳು, ಹುಡುಗರೆಲ್ಲ ಮೌನ

 "ನಾವು ಇರುವುದು ಭಾರತದಲ್ಲಿ, ನಾವು ನಮ್ಮ ಸಂಪ್ರದಾಯವನ್ನು ಮರೆತು ಯಾವುದೋ ದೇಶದ ಸಂಪ್ರದಾಯ ಅನುಸರಿಸುತ್ತ, ನಮ್ಮ ಮದುವೆಯನ್ನು ನಿರಾಕರಿಸಿ ಪ್ರೇಮ ವಿವಾಹ ಮಾಡಿಕೊಳ್ಳಬೇಕ? , ಅಸಲಿಗೆ ಅಲ್ಲಿ ವಿವಾಹವೆ ಇರುವದಿಲ್ಲ, ವಿವಾಹವೆಂದರೆ ಬರಿ ಧಾರ್ಮಿಕ ಕ್ರಿಯೆಗಳಲ್ಲ, ಅದು ಗಂಡು ಹೆಣ್ಣನ್ನು ಮತ್ತ್ತು ಆ ವಂಶಗಳೆರಡನ್ನು ಒಂದಾಗಿಸುವ ಪವಿತ್ರ ಘಳಿಗೆ. ಚಿಕ್ಕಂದಿನಿಂದ ನಮ್ಮನ್ನು ಸಾಕಿದ ಅಪ್ಪ ಅಮ್ಮನನ್ನು ನೆನೆಯಿರಿ, ನಾವು ಅತ್ತಾಗ ಅತ್ತು ನಕ್ಕಾಗ ನಕ್ಕು, ರೆಕ್ಕೆ ಬಲಿಯಿತು ಅಂದಾಕ್ಷಣ ಅವರನ್ನು ನಿರಾಕರಿಸಿ ಓಡಿಹೋಗಲು ನಾವೇನು ಪಶುಗಳೆ, ಬುದ್ದಿ ಇರುವ ಮನುಷ್ಯರಲ್ಲವೆ. ಪ್ರೇಮ ವಿವಾಹದಲ್ಲಿ ಒಮ್ಮೆ ಗಂಡು ಅಥವ ಹೆಣ್ಣು ತನ್ನ ಆಸೆ ತೀರಿತೆಂದು ಸಂಬಂಧ ಮುರಿದರೆ ಮುಂದಿನ ಜೀವನವೇನು, ನಮ್ಮ ಸಮಾಜ ಪೂರ್ತಿ ಈರೀತಿ ಮದುವೆ ಮುರಿದುಕೊಂಡವರಿರಬೇಕೆ. ಎಂದೆಲ್ಲ ವಾದಿಸಿದಳು, ನಾನಂತು ಪ್ರೇಮ ವಿವಾಹದ ಹೆಸರಿನಲ್ಲಿ ಅಪ್ಪ ಅಮ್ಮನಿಗೆ ದ್ರೋಹ ಮಾಡಲು ಸಿದ್ದಳಿಲ್ಲ, ಈ ಪದ್ದತಿಯನ್ನು ನಾನು ಒಪ್ಪಲು ಸಿದ್ದಳಿಲ್ಲ" ಎಂದು ವಾದಿಸಿದಳು. 


ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರಾಧ್ಯಾಪಕರು ಸಹ ಅವಳ ಮಾತುಗಳಿಗೆ ಮೆಚ್ಚಿ ಚೆಪ್ಪಾಳೆ ತಟ್ಟಿದರು.

 ವಾದಮಾಡುವಾಗ ಅವಳಿಗೆ ತನ್ಮಯತೆ ಇರಲಿಲ್ಲ ಅದಕ್ಕೆ ಕಾರಣವು ಇತ್ತು, ಆವಳು ಟೈಪಿಂಗ್ ಗೆ ಹೋಗುವಾಗ ಅಲ್ಲಿ ಅವಳ ರಸ್ತೆಯವನೆ ಆದ ಶ್ರೀನಿವಾಸನನ್ನು ಬೇಟಿ ಮಾಡುತ್ತಿದ್ದಳು, ಬೇರೆ ಬೇರೆ ಬ್ಯಾಚ್ ಆದ್ದರಿಂದ ಸೃಷ್ಟಿಗು ಇದರ ಅರಿವು ಆಗದಂತೆ ಎಚ್ಚರ ವಹಿಸಿದ್ದಳು. ಶ್ರೀನಿವಾಸ ಬೇರೆಯದೆ ಆದ ಜಾತಿ, ಈ ವಿವಾಹವನ್ನು ಅವಳ ಸಂಪ್ರದಾಯದ ಹಿನ್ನಲೆಯಲ್ಲಿ ಬಂದ ಅಪ್ಪ ಅಮ್ಮ ಒಪ್ಪುವುದು ಖಂಡೀತ ಸಾದ್ಯವಿಲ್ಲ ಎಂದು ಅವಳಿಗೆ ತಿಳಿದಿದ್ದು, ಆದರೂ ಸಹ  ಅವಳು ಮುಂದುವರೆದಿದ್ದಳು, ಅಷ್ಟಕ್ಕು ಅವಳು ಅವನನ್ನು ಏಕೆ ಮೆಚ್ಚಿಕೊಂಡಿದ್ದಳು ಅಂತ ಅವಳಿಗು ತಿಳಿಯದು. ಅವನೇನು ಸ್ಪುರದ್ರೂಪಿಯಲ್ಲ ಬುದ್ದಿಯಲ್ಲಿ ಆಗಲಿ ಹಣದಲ್ಲೆ ಆಗಲಿ ಅವಳನ್ನು ಮೀರಿಸುವನಲ್ಲ.ಪರೀಕ್ಷೆ ಮುಗಿಯಲು ಕಾಯುತ್ತಿದ್ದಳು, ಮುಗಿದ ವಾರದೊಳಗೆ, ಅವನೊಡನೆ ಗುಟ್ಟಾಗಿ ಹೋಗಿ ಮದುವೆ ಮಾಡಿಕೊಂಡು ಬಂದು ಅಪ್ಪ ಅಮ್ಮನ ಮುಂದೆ ನಿಂತಳು, ಅವರು ತಾನೆ ಏನು ಮಾಡಿಯಾರು, ಕನಸಿನಲ್ಲು ನಿರೀಕ್ಷಿಸದ ಈ ಘಟನೆಯಿಂದ ಅವರು ದೃತಿಗೆಟ್ಟರು. ಮಗಳು ಮನೆಯನ್ನು ತೊರೆದು ಬೆಂಗಳೂರಿಗೆ ಹೊರಟು ಹೋದಳು. ಅವಮಾನ ಅಕ್ಕಪಕ್ಕದ ಮನೆಗಳ ದೃಷ್ಟಿಯನ್ನು ಎದುರಿಸಲಾಗದ, ಅವರು ತಮ್ಮ ಎರಡನೆ ಮಗಳ ಹಿತದೃಷ್ಟಿಯಿಂದ ಮನೆಯನ್ನು ಮಾರಿ ಅವರ ಹಳ್ಳಿಗೆ ಹೋಗಿಸೇರಿದರು.
   ಮದುವೆಯಾದ ಕೆಲವೆ ದಿನಗಳಲ್ಲಿ ಲಲಿತ ಅರಿತಳು ತನ್ನತಪ್ಪು ಏನೆಂದು, ಅವನ ಧನದಾಹ, ಬೇರೆ ಹೆಣ್ಣುಗಳ ಬಗ್ಗೆ ಅವನು ತೋರಿಸುವ ಆಸೆ ಇವೆಲ್ಲ ಕಂಡು ಒಳಗೆ ಬೇಯುತ್ತಿದ್ದಳು, ಆದರೇನು ಜೀವನದಲ್ಲಿ ಮುಂದಿಟ್ಟ ಹೆಜ್ಜೆಯನ್ನು ಎಂದಿಗು ಹಿಂದಿಡಲಾಗದು ಎಂಬ ಅರಿವು ಅವಳಿಗೆ ಈಗ ಮೂಡಿತ್ತು.

4
-----------------------------------------------------------------------------------------
ಲಲಿತ, ಸೃಷ್ಟಿ ಸಾಕಷ್ಟು ಹೊತ್ತು ನಗುತ್ತ ಮಾತನಾಡಿದರು, ಗಣೇಶರು ಮಕ್ಕಳನ್ನು ಕರೆದುಕೊಂಡು ಹೋಗಿ ಅಮೇರಿಕನ್ ಕಾರ್ನ್ ಪಾನಿಪುರಿಯನ್ನು ಕೊಡಿಸಿ ತಾವು ತಿಂದರು. ಅವರಿಗೆ ಸಮಾದಾನ ಸದ್ಯ , ಸೃಷ್ಟಿ ಗಮನಿಸಿದರೆ ತನಗೆ ತಿನ್ನಲು ಬಿಡುವದಿಲ್ಲ, ತಡೆಯುತ್ತಾಳೆ .ಈಗ ಗೆಳತಿ ಜೊತೆ ಮಾತಿನಲ್ಲಿ ಮೈಮರೆತ್ತಿದ್ದಾಳೆ ಎಂದು.

ಸದಾಶಿವನಗರದ ಆ ಪಾರ್ಕನಲ್ಲಿ ಜನದಟ್ಟಣೆ ಕಡಿಮೆಯಾಗುತ್ತಿತ್ತು. 

"ಬನ್ನಿ ನಮ್ಮ ಮನೆಗೆ " ಲಲಿತ ಅಹ್ವಾನಿಸಿದಳು, ಹಾಗೆಯೆ, 
'ನಿನ್ನ ಮೊಬೈಲ್ ನಂಬರ್ ಕೊಡು' ಅಂದಳು ಸೃಷ್ಟಿ, 
ಲಲಿತ ತನ್ನ ವ್ಯಾನಿಟಿಬ್ಯಾಗಿನಿಂದ ಬಿಳಿ ಕಾಗದ ತೆಗೆದು , ಅವಳ ಗಂಡನಿಂದ ಪೆನ್ ಪಡೆದು ಮೊಬೈಲ್ ನಂಬರೆ ಬರೆದು ಅವಳಿಗೆ ಕೊಟ್ಟು 
"ನನಗೆ ಬರೆದುಕೊಳ್ಳಲು ಬೇಜಾರಮ್ಮ, ಮನೆಗೆ ಹೋಗಿ ನೀನೆ ನಿನ್ನ ಮೊಬೈಲ್ ನಿಂದ ನನಗೆ ಕಾಲ್ ಮಾಡು ನಿನ್ನ ನಂಬರ್ ಸೇವ್ ಮಾಡಿಕೊಳ್ತೀನಿ" ಅಂದಳು, 
ಗಣೇಶ ಏಕೊ ನಗುತ್ತಿದ್ದರು. ಲಲಿತಳ ಗಂಡ ಶ್ರೀನಿವಾಸ  ಸೃಷ್ಟಿಯ ಹತ್ತಿರ 
'ನಿಮ್ಮ ವಿಳಾಸ ಕೊಡಿ ಇವಳನ್ನು ಕರೆತರುತ್ತೇನೆ' ಅಂದರು,
ಅದಕ್ಕೆ ಲಲಿತ "ನನಗೆ ಇವರ ಮನೆ ಗೊತ್ತುರಿ, ಅಡ್ರೆಸ್ ಏನು ಬೇಡ ಬಿಡಿ, ನಾವು ಹೋಗೋಣ" ಎಂದಾಗ ಆತ ಸುಮ್ಮನಾದರು. ಸೃಷ್ಟಿಗೆ ಸ್ವಲ್ಪ ಆಶ್ಚರ್ಯವಾಯಿತು, ಇವಳಿಗೆ ನಮ್ಮ ಮನೆ ಹೇಗೆ ಗೊತ್ತು ಅಂತ. ಗಣೇಶ ಪುನಃ ನಗುತ್ತಿದ್ದರು. ಸರಿ ಬೈ ಹೇಳುತ್ತ ಲಲಿತ, ಶ್ರೀನಿವಾಸ, ಮೇಘ ಹೊರಟರು.
-------------------------------------------------------------------

ಅವರು ಹೊರಟಂತೆ, ಸೃಷ್ಟಿ ಗಂಡನಿಗೆ, 

"ಒಮ್ಮೆ ಅವರ ಮನೆಗೆ ಹೋಗ ಬೇಕು ರೀ ತುಂಬಾ ಒಳ್ಳೆಯವಳು" ಅಂದಳು, 
"ಆಗಲ್ಲ ಬಿಡು ನಿನಗೆ ಅವರ ಮನೆ ಗೊತ್ತಿಲ್ಲ" ಅಂದರು ಗಣೇಶ, 
ಅದಕ್ಕೆ ಸೃಷ್ತಿ "ಅಡ್ರೆಸ್ ಗೊತ್ತಿಲ್ಲ ಅಂದರೇನಾಯಿತು, ಪೋನ್ ನಂಬರ್  ಕೊಟ್ಟಿದಾಳಲ್ಲ ಮಾಡಿದರಾಯ್ತು ಅಥವ ಅವಳೆ ನಮ್ಮ ಮನೆಗೆ ಬರ್ತೀನಿ ಅಂತ ಹೇಳಿದ್ದಾಳಲ್ಲ ಬರ್ತಾಳೆ" ಅಂದಳು.
ಗಣೇಶರು ಜೋರಾಗಿ ನಕ್ಕು ಬಿಟ್ಟರು 
"ನೀನು ಫೋನ್ ಮಾಡಕ್ಕಾಗಲ್ಲ, ಏಕೆಂದರೆ ಅವರು ಬರೆದಿರೋದು ಬರಿ ಒಂಬತ್ತು ಡಿಜಿಟ್ ಅಷ್ಟೆ, ಮೊಬೈಲ್ಗೆ ಹತ್ತು ಸಂಖ್ಯೆ ಇರಬೇಕು, ಮತ್ತು ಅವರಿಗೆ ನಮ್ಮ ವಿಳಾಸ ಸಹ ಗೊತ್ತಿಲ್ಲ ಹಾಗಾಗಿ ಅವರು ಬರುವುದು ಸುಳ್ಳು" ಎಂದರು, 
ಗಾಭರಿಯಿಂದ ಲಲಿತ ಕೊಟ್ಟ ಚೀಟಿಯನ್ನು ತೆಗೆದು ನೋಡಿದಳು ಸೃಷ್ಟಿ. ಗಣೇಶರು ಹೇಳಿದ್ದು ನಿಜವಾಗಿತ್ತು, ಬರಿ ಒಂಬತ್ತು ಸಂಖ್ಯೆಗಳಿದ್ದವು. ಅವಳು ಚಕಿತಳಾಗಿ ನುಡಿದಳು
"ನಿಮಗೆ ಹೇಗೆ ತಿಳಿಯಿತು, ಮತ್ತು ಲಲಿತ  ಹೀಗೇಕೆ ಮಾಡಿದಳು?"

ಗಣೇಶರೆಂದರು ನಗುತ್ತ 

"ಅವಳು ಬರೆದಾಗಲೆ ನಾನು ಗಮನಿಸಿದೆ, ಮೊಬೈಲ್ ನಂಬರ್ ತಪ್ಪು ಅಂತ, ಬಹುಶಃ ಅವಳ ಗಂಡ ನಿನ್ನನ್ನು ನೋಡುತ್ತ ಇದ್ದಿದ್ದು ಅವಳಿಗೆ ಇರಿಸುಮುರುಸಾಗಿದೆ, ಅನ್ನಿಸುತ್ತೆ, ಅದಕ್ಕಾಗಿ ವಿಳಾಸ ಸಹ ಪಡೆಯಲಿಲ್ಲ, ಮತ್ತು ಎಂದೂ ಅವಳು ನಿನ್ನನ್ನು ಬೇಟಿ ಮಾಡುವದಿಲ್ಲ, ನಿನ್ನ ಗೆಳತಿ ತುಂಬಾ ಬುದ್ದಿವಂತೆ" ಅಂದರು.
  

ಒಂದು ಕ್ಷಣ ಸೃಷ್ಟಿಯ ಮುಖ ಕೆಂಪಗಾಯಿತು, ಆದರು ಕಿಚಾಯಿಸುವ ದ್ವನಿಯಲ್ಲಿ 
"ಪರವಾಗಿಲ್ಲ, ದೇಹ ದೊಡ್ಡದಾದರು ಬುದ್ಧಿ ಮಾತ್ರ ತುಂಬಾ ಚುರುಕು" ಎಂದಳು.
ಕೈ ಹಿಡಿದು ನಡೆಯುತ್ತಿದ್ದ ಮಗಳು ಶ್ರುತಿ 

"ಅಮ್ಮ ಯಾರಿಗಮ್ಮ ನೀನು ಹೇಳಿದ್ದು ದೇಹ ದೊಡ್ಡದಾದರು ಬುದ್ದಿ ಮಾತ್ರ ತುಂಬಾ ಚುರುಕು ಅಂತ" ಎಂದು ಕೇಳಿದಾಗ,
ಸೃಷ್ಟಿ ನಗುತ್ತ ನುಡಿದಳು 

"ಅದಾ ಆನೆಗೆ ಪುಟ್ಟು, ದೇಹ ತುಂಬಾ ದೊಡ್ಡದಾದರು ಅದರ ಬುದ್ದಿ ತುಂಬಾ ಚುರುಕು" ಅಂದಳು, ಗಂಡನ ಕಡೆ ತಿರುಗಿನೋಡದೆ.


Monday, February 11, 2013

ರಾಮಯಣದಲ್ಲೊಂದು ಮೌನರಾಗ --ಊರ್ಮಿಳ

ಯಾರಾದರು ಸ್ನಾನಕ್ಕೆ ಇಳಿದು ಹೊರಬರಲು ತಡವಾದರೆ ಅಮ್ಮನದು ಒಂದೆ ಕೂಗು 'ಇವಳದ್ದೊಳ್ಳೆ ಉರ್ಮಿಳ ಸ್ನಾನವಾಯಿತು ಬೇಗ ಮುಗಿಸಲ್ಲ' , ನಾನೆಂದಾದರು ಕೇಳಿದರೆ "ಈ ಉರ್ಮಿಳ ಎಂದರೆ ಯಾರು" ಎಂದು, ಅವರು ಒಂದು ಕಥೆಯನ್ನೆ ಹೇಳುತ್ತಿದ್ದರು, "ಊರ್ಮಿಳಾದೇವಿ ಎಂದರೆ ಲಕ್ಷ್ಮಣನ ಹೆಂಡತಿ ಎಲ್ಲದರಲ್ಲು ಬಲು ನಿದಾನ, ಸ್ನಾನಕ್ಕೆ ಇಳಿದರಂತು ಸರಿಯೆ, ಹೀಗೊಮ್ಮೆ ರಾಮನ ಪಟ್ಟಾಭಿಷೇಕಕ್ಕೆ ಸಿದ್ದವಾಗಲು ಸ್ನಾನಗೃಹ ಸೇರಿದಳು,ಆದರೆ ಹೊರಗೆ ಏನೆನೊ ನಡೆಯಿತು, ರಾಮ ರಾಜ್ಯ ಒಲ್ಲದೆ ವನವಾಸಕ್ಕೆ ಸಿದ್ದನಾದ,ಜೊತೆಗೆ ಸೀತ. ಲಕ್ಷ್ಮಣ ಪಾಪ ನಾನು ಬರುತ್ತೇನೆ ಅಂತ ಅಣ್ಣನಲ್ಲಿ ಗೋಗರೆದು, ಹೆಂಡತಿಗೆ ಹೇಳಿಹೋಗಲು ಬಂದರೆ, ಅವಳು ಹೊರಗೆ ಬಂದರೆ ತಾನೆ. ಅವನು ಕಾದು ಬೇಸರದಿಂದ ಹೊರಟೆಹೋದ. ಅಣ್ಣನ ಜೊತೆ ಕಾಡು ಸೇರಿದ, ಇತ್ತ ಊರ್ಮಿಳ ದೀರ್ಘ ಸ್ನಾನದೀಕ್ಷೆಯಲ್ಲಿ ಮುಳುಗಿದ್ದಳು. ಅತ್ತ ಕಾಡಾಯಿತು, ಸೀತ ಅಪಹರಣವಾಗಿ ರಾವಣಸಂಹಾರವಾಯಿತು, ಹದಿನಾಲಕ್ಕು ವರ್ಷಗಳು ಕಳೆದು ಎಲ್ಲ ಮರಳಿದರು, ಮತ್ತೆ ಪಟ್ಟಾಭಿಷೇಕಕ್ಕೆ ಎಲ್ಲ ಸಿದ್ದರಾಗುವಾಗ, ಊರ್ಮಿಳ ಸ್ನಾನ ಮುಗಿಸಿ ಹೊರಬಂದು ಲಕ್ಷ್ಮಣನಿಗೆ ಹೇಳಿದಳು" ನೀವು ಬೇಗ ಸ್ನಾನ ಮುಗಿಸಿಬಿಡಿ, ಪಟ್ಟಾಭಿಷೇಕಕ್ಕೆ ಹೋಗಲು ತಡವಾಗುತ್ತದೆ". ಪಾಪ ಅವಳಿಗೆ ಲಕ್ಷ್ಮಣ ವನವಾಸಕ್ಕೆ ಹೋಗಿದ್ದು ಬಂದಿದ್ದು ತಿಳಿಯಲೆ ಇಲ್ಲ'.
   ಹಿಂದಿನವರು ಎಷ್ಟುಬೇಗ ಕಥೆಗಳನ್ನು ಹೆಣೆದುಬಿಡುತ್ತಾರೆ, ಅನ್ನುವಾಗ ನನ್ನ ಮನ ನೆನೆಸಿತು, ರಾಮಾಯಣದಲ್ಲಿ ತನ್ನ ಮೌನರಾಗದಿಂದಲೆ ತನ್ನ ಇರುವನ್ನು ತೋರ್ಪಡಿಸುವ ಊರ್ಮಿಳ ಎಂತಹವಳಿರಬಹುದು. ಮದುವೆಯಾಗಿ ಗಂಡನ ಮನೆಗೆ ಬಂದ ಸ್ವಲ್ಪ ಕಾಲದಲ್ಲೆ, ತನ್ನನ್ನು ತೊರೆದು ಅಣ್ಣನ ಹಿಂದೆ ಕಾಡಿಗೆ ನಡೆದ ಗಂಡನ ವಿರಹದಿಂದ ದಗ್ದಳಾಗಿ, ಯಾರ ಕಣ್ಣಿಗೂ ಬೀಳದೆ, ಮೌನವಾಗಿಯೆ ಉಳಿಯುವ ಊರ್ಮಿಳಳ ಮನಸ್ಸು ಭಾವಗಳು ಹೇಗಿರಬಹುದು. ಈ ಎಲ್ಲ ಯೋಚನೆಗಳು ನನ್ನನ್ನು ಕಾಡುತ್ತಲೆ ಇತ್ತು. ಎಂದೊ ತ್ರೇತಾಯುಗದಲ್ಲಿ ನಡೆದಿರಬಹುದಾದ ಘಟನೆಗಳ ಸುತ್ತ ನನ್ನ ಮನದ ಕಲ್ಪನೆ ಸುತ್ತುತ್ತಿತ್ತು.
------------------------------------------     ೧
...
..
.

ಅಯೋದ್ಯನಗರದ ಲಕ್ಷ್ಮಣನ ಅರಮನೆ. ಹೆಸರು ಲಕ್ಷ್ಮಣನ ಅರಮನೆಯಾದರು, ಈಗಿನ ಚಿಕ್ಕಮಕ್ಕಳಿಗೆ ಲಕ್ಷ್ಮಣನೆಂದರೆ ಯಾರು ಅಂತ ಗೊತ್ತಿಲ್ಲ. "ಅವನು ರಾಮನ ತಮ್ಮ" ಎಂದು ಹೇಳಲು, ಮತ್ತೆ ಮುಂದಿನ ಪ್ರಶ್ನೆ ಬರುತ್ತದೆ "ರಾಮನೆಂದರೆ? ಅವನು ಯಾರು?" .  ಅಲ್ಲಿ ಇರುವರಾದರು ಅಷ್ಟೆ ಲಕ್ಷ್ಮಣನ ಪತ್ನಿ ಉರ್ಮಿಳ ಒಬ್ಬಳೆ ಜೊತೆಗೆ ಅವಳ ಸಖಿಯರು, ಮತ್ತೆ ದೊಡ್ಡ ಅರಮನೆಯ ಆಗುಹೋಗುಗಳನ್ನು ನೋಡಿಕೊಳ್ಳಲು ತಕ್ಕ ಕೆಲಸದವರು. ಅಯೋದ್ಯೆಯ ಅರಸರೆಂದರೆ ಸುಮ್ಮನೆಯೆ ?ಆಡಂಬರ, ಪ್ರತಿಯೊಬ್ಬ ರಾಜಕುವರರಿಗು ಪ್ರತ್ಯೇಕ ಅರಮನೆ, ಅದರ ಸುತ್ತಲು ಉದ್ಯಾನವನ, ನೀರಿನ ಕಾರಂಜಿಗಳು, ಲತಾಕುಂಜಗಳು ಮೊದಲುಗೊಂಡು ಕೊನೆಯಿಲ್ಲದ ವೈಭವ.

   ಸೂರ್ಯಪಡುವಣದತ್ತ ವಾಲಿದಂತೆ ನಸುಗತ್ತಲು ಅರಮನೆಯನ್ನು ತುಂಬುತ್ತಿತ್ತು, ಅದನ್ನು ಓಡಿಸಲೊ ಎಂಬಂತೆ, ಮಾಧವಿ ಪ್ರತಿಕೋಣೆಯಲ್ಲು ಎಣ್ಣೆಯ ಹಣತೆಗಳನ್ನು ಇಡುತ್ತ ಸಾಗಿದಳು.  ಕೊನೆಗೆ ಹೊರಗಿನ ದ್ವಾರದಲ್ಲಿ ದೀಪಗಳನ್ನಿಡುತ್ತ ತೃಪ್ತಿಯಿಂದ ನಿಂತು ನೋಡಿ, ನಂತರ ನೆನಸಿಕೊಂಡಳು, "ಮಹಾರಾಣಿ ಉರ್ಮಿಳಾದೇವಿಯವರೆಲ್ಲಿ ಎಲ್ಲಿಯೂ ಕಾಣಲಿಲ್ಲವೆ?"
  ಅವಳು ತನ್ನೊಳಗೆ ನಕ್ಕಳು, ಊರ್ಮಿಳಾದೇವಿ ಸದಾ ಇರುವ ಸ್ಥಳ ಒಂದೆ ಎಂದು ಚಿಂತಿಸುತ್ತ, ಹೊರಬಂದು ಅರಮನೆಯ ಮುಂದಿನ ಹೂತೋಟದಲ್ಲಿ ನಡೆದಳು.   ಶುಕ್ಲಪಕ್ಷದ ನವಮಿಯ ಚಂದ್ರನ ಬೆಳಕು, ಗಿಡಮರಗಳ ಮೇಲಿನಿಂದ ಬೀಸುವ ತಂಪಾದ ಗಾಳಿಯನ್ನು ಅಸ್ವಾದಿಸುತ್ತ ನೀರಿನ ಕೊಳದ ಪಕ್ಕ ಇರುವ ಲತಾಕುಂಜದ ಕೆಳಗಿನ ಕಲ್ಲುಹಾಸಿನ ಸೋಫಾನಗಳತ್ತ ನಡೆದಳು. ಅವಳ ಊಹೆ ನಿಜವಾಗಿತ್ತು ಊರ್ಮಿಳಾದೇವಿ ಅಲ್ಲಿಯೆ ಕುಳಿತಿದ್ದಾಳೆ.

 ಮಾಧವಿ ಬಂದದ್ದನ್ನು ಅವಳ ಹೆಜ್ಜೆಯ ಸದ್ದಿನಿಂದಲೆ ಅರಿತಳು ಉರ್ಮಿಳ, ಆದರೆ ಆ ಕಡೆತಿರುಗದೆ ಕೊಳದತ್ತಲೆ ನೆಟ್ಟ ನೋಟವಿಟ್ಟಿದ್ದಳು.ಕೊಳದಲ್ಲಿರುವ ಕಮಲಗಳ ಸೊಭಗನ್ನುನೋಡುತ್ತ ಮೈಮರೆತ್ತಿದ್ದಳು.ಹತ್ತಿರ ಬಂದ ಮಾಧವಿ ಮಹಾರಾಣಿಯ ಮುಖವನ್ನು ದಿಟ್ಟಿಸಿದಳು. ನಸುಚಂದ್ರನ ಬೆಳಕಲ್ಲಿ ಕಾಣುತ್ತಿದ್ದ ಆಕೆಯ ಮುಖದ ಹೊಳಪು, ಪ್ರಶಾಂತವಾಗಿ ಸದಾ ಗಂಭೀರವಾಗಿರುವ ಆಕೆಯ ಮುಖಭಾವ, ಕಡೆದು ಕೂಡಿಸಿದಂತೆ ಕಾಣುತ್ತಿರುವ ಆಕೆಯ ಅಂಗ ಸೌಷ್ಟ್ಣವ ಎಲ್ಲವನ್ನು ನೋಡುತ್ತ, ತನ್ನಮಹಾರಾಣಿ ಅಪರೂಪ ಲಾವಣ್ಯವತಿ ಅಂದುಕೊಂಡಳು ಮನದಲ್ಲಿ. ಸೀತೆಯೊಡನೆ ಹೋಲಿಸಿದರು ಊರ್ಮಿಳಾದೇವಿ   ಸೊಭಗುಳ್ಳವಳೆ ಆದರೇನು  ಅವಳಷ್ಟು  ಅದೃಷ್ಟವಂತಳಲ್ಲ ಇವಳು ಅನ್ನಿಸಿತು. ಹತ್ತಿರ ನಿಂತು ಮೃದುದ್ವನಿಯಲ್ಲಿ
"ಮಹಾರಾಣಿ ಕತ್ತಲಾಗುತ್ತಿದೆ" ಎಂದಳು ಮಾಧವಿ.
"ಊ...ಮ್" ಎಂದಳು ಊರ್ಮಿಳ, ಇವಳ ಕರೆಯ ಕಡೆಗೆ ಗಮನಕೊಡದೆ.
"ದೇವಿ, ಗಿಡಮರಗಳ ನಡುವೆ ಹುಳುಹುಪ್ಪಡಿಗಳು ಸರಿದಾಡಬಹುದು ಕತ್ತಲಲ್ಲಿ ಏಕೆ ಒಳಗೆ ಬರಬಹುದಲ್ಲವೆ" ಎಂದಳು ಮಾದವಿ.
"ಮಾಧವಿ ಇನ್ನು ಸ್ವಲ್ಪಹೊತ್ತು ಕಾಲ ಇರೋಣ ಕುಳಿತಿಕೊ" ಎನ್ನುತ್ತ ಕೈತೋರಿಸಿದಳು.
   ಮಾಧವಿ ಎಲ್ಲರೆದುರು ಎಂದಿಗು ಮಹಾರಾಣಿಯ ಸರಿಸಮನಾಗಿ ಕುಳಿತುಕೊಳ್ಳುವದಿಲ್ಲ, ಆದರೆ ಇಬ್ಬರೆ ಇದ್ದಾಗ ಅವರ ನಡುವೆ ಅಂತಸ್ಥಿನ ಬೇಧಭಾವವಿರುವದಿಲ್ಲ. ಪಕ್ಕ ಕುಳಿತ ಆಕೆಯ ಹೆಗಲಮೇಲೆ ಕೈಯಿಟ್ಟು ನುಡಿದಳು ಊರ್ಮಿಳ.
 "ಲಕ್ಷ್ಮಣನು ಕಾಡಿಗೆ ಹೋಗಿ ಹದಿನಾಲಕ್ಕು ವರುಷಗಳು ಕಳೆದುಹೋದವಲ್ಲವೆ ಮಾಧವಿ"
ಸ್ವಲ್ಪ್ಲ ಕಾಲ ಮೌನ
"ಹೌದು ಮಹಾರಾಣಿ, ನಾಳೆ ನವಮಿ ಬಂದರೆ ಹದಿನಾಲಕ್ಕು ವರ್ಷ ಸಮನಾಯಿತು ನಂತರ ಯಾವಾಗಬೇಕಾದರು ಬರಬಹುದು"
'ಲಕ್ಷ್ಮಣನಿಗೆ ನನ್ನ ನೆನಪು ಉಳಿದಿದ್ದೀತೆ ಮಾಧವಿ" ಊರ್ಮಿಳ ದ್ವನಿ ಭಾರವಾಗಿತ್ತು, ಅವಳ ಪ್ರಶ್ನೆಯಿಂದ ಮಾಧವಿ ವ್ಯಥೆಗೊಂಡಳು, ಏನು ಉತ್ತರ ಕೊಡದೆ "ಮಹಾರಾಣಿ" ಎನ್ನುತ್ತ ಆಕೆಯ ಕೈಅದುಮಿದಳು. ಚಿಕ್ಕ ಮಕ್ಕಳಿಂದಲು ಒಟ್ಟಿಗೆ ಬೆಳೆದವರು ಅವರಿಬ್ಬರು, ಊರ್ಮಿಳೆಯ ಮನಸ್ಸು ವ್ಯಥೆ, ಮನೋಭಾವ ದ್ವನಿ ಎಲ್ಲವು ಮಾಧವಿಗೆ ಚಿರಪರಿಚಿತ. ಅವಳ ಮನಸಿನ ಸೂಕ್ಷ್ಮತೆ ಅವಳು ಬಲ್ಲಳು.
ಮಾಧವಿಯ ಮನ ಹಿಂದಿನದನ್ನೆಲ್ಲ ನೆನೆಯಿತು...
--------------------------------------------    ೨

ತೀರ ಚಿಕ್ಕ ವಯಸ್ಸಿನಿಂದಲು ಅಷ್ಟೆ ಊರ್ಮಿಳದೇವಿಯದು ಸೂಕ್ಷ್ಮ ಸ್ವಭಾವ ಗಂಭೀರ ಪ್ರವೃತ್ತಿ. ಸೀತ ಹಾಗು ಊರ್ಮಿಳ ಜನಕಮಹಾರಾಜನ ಮಕ್ಕಳಾದರು, ಸೀತೆಯಷ್ಟು ಪ್ರಸಿದ್ದಿ ಪಡೆದವಳಲ್ಲ ಊರ್ಮಿಳ. ಅದಕ್ಕೆ ಅವಳ ಒಳಗೆ ಮುದುಡಿಕೊಳ್ಳೂವ ಪ್ರವೃತ್ತಿಯು ಕಾರಣವಾಗಿತ್ತು. ಸೀತೆಯಾದರೊ ಇವಳಿಗೆ ತದ್ವಿರುದ್ದ,ತನಗೆ ಸರಿ ಅನ್ನಿಸಿದ್ದನ್ನು ನೇರವಾಗಿ ನುಡಿಯುವಳು. ತಂದೆಯೆ ಆಗಲಿ ಗಂಡನೆ ಆಗಲಿ ಎದುರಿಗೆ ನಿಂತು ವಾದಿಸಿ , ಒಪ್ಪಿಸಿ ತನಗೆ ಬೇಕಾದುದ್ದನ್ನು ಪಡೆಯುವಳೆ. ಹದಿನಾಲಕ್ಕು ವರುಷಗಳ ಹಿಂದೆ ರಾಮನು ತನ್ನ ತಂದೆಯ ಮಾತನ್ನು ಉಳಿಸಲು ವನವಾಸಕ್ಕೆ ಹೊರಟು ನಿಂತನು, ತಾನು ಜೊತೆಗೆ ಬರುವನೆಂದಳು ಸೀತ. ರಾಮನು "ಬೇಡ ನೀನು ಅಯೋದ್ಯಯಲ್ಲಿಯೆ ಇದ್ದು ಅತ್ತೆ ಮಾವರನ್ನು ನೋಡಿಕೊ" ಎಂದರೆ ಅದನ್ನು ಒಪ್ಪದೆ, "ಕೈಹಿಡಿದ ನಂತರ ನೀನಿರುವಲ್ಲಿ ನಾನಿರುವುದೆ ಧರ್ಮ, ಸಪ್ತಪದಿಯಲ್ಲಿ ಕೊಟ್ಟ ಮಾತಿನಂತೆ ನನ್ನನ್ನು ಜೊತೆಗೆ ಕರೆದೊಯ್ಯುವುದು ನಿನ್ನ ಕರ್ತವ್ಯ, ನನ್ನ ಮಾತನ್ನು ತಿರಸ್ಕರಸಿ ಒಬ್ಬನೆ ಹೋಗುವಂತಿಲ್ಲ" ಎಂದು ಕಠಿಣ ಮಾತುಗಳಲ್ಲಿ ರಾಮನನ್ನು ಒಪ್ಪಿಸಿ ತಾನು ಅವನ ಜೊತೆಗೆ ಹೊರಟುಬಿಟ್ಟಳು

  ರಾಮನನ್ನು ಸದಾ ನೆರಳಿನಂತೆ ಅನುಸರಿಸುವ ಲಕ್ಷ್ಮಣನಿಗೆ ರಾಮನು ಅನುಸರಿಸಿದ ಪತಿಧರ್ಮ ಮಾತ್ರ ಕಾಣದಾಯಿತು, ತಾನು ಜೊತೆಗೆ ಬರುವನೆಂದ ಊರ್ಮಿಳೆಯ ಮಾತನ್ನು ಕೇಳಲು ಅವನು ಸಿದ್ದನಿರಲಿಲ್ಲ."ನೀನು ಜೊತೆಗೆ ಬಂದರೆ ರಾಮನ ಸೇವೆ ಮಾಡಲು ನನಗೆ ಅಡಚಣೆಯಾಗುತ್ತೆ ಹಾಗಾಗಿ ಬೇಡ" ಅಂದು ಬಿಟ್ಟ.
 ಅವನಿಗೆ ತನ್ನ ಕೈಹಿಡಿದ ಪತ್ನಿಯನ್ನು ಸಲಹುದಕ್ಕಿಂತಲು ರಾಮನನ್ನು ಅನುಸರಿಸುವ ಕರ್ತವ್ಯವೆ ಮುಖ್ಯ ಎನಿಸಿಬಿಟ್ಟಿತು. ರಾಮನು ಅಷ್ಟೆ ಏಕೊ ತನ್ನ ತಮ್ಮ ಲಕ್ಷ್ಮಣನಿಗೆ ನಿನ್ನ ಸತಿಯನ್ನು ಜೊತೆಯಲ್ಲಿ ಕರೆದು ತಾ ಅನ್ನಲಿಲ್ಲ. ಸೀತ ಆದರು ಅಷ್ಟೆ ಹದಿನಾಲಕ್ಕು ವರುಷ ತನಗೆ ತಂಗಿಯ ಜೊತೆಯಾಗುತ್ತದೆ ವನವಾಸದಲ್ಲಿ ಎಂದು ಎಣಿಸಲಿಲ್ಲ. ಯಾವ ಭಾವನೆಯು ಇಲ್ಲದೆ ಲಕ್ಷ್ಮಣ ಪತ್ನಿಯನ್ನು ತೊರೆದು ಹೊರಟ, ಅದು ಹದಿನಾಲಕ್ಕು ವರುಷಗಳ ದೀರ್ಘ ಕಾಲ. ಊರ್ಮಿಳ ತನ್ನ ಪತಿಯ ಎದಿರುನಿಂತು ಗಟ್ಟಿಯಾಗಿ ವಾದಿಸಿ ಗೆಲ್ಲುವಷ್ಟು ದಿಟ್ಟಳಲ್ಲ. ಮನದಲ್ಲಿಯೆ ಕೊರಗಿದಳು.
"ಮಾಧವಿ ನನಗೆ ಊರ್ಮಿಳ ಎಂದು ಹೆಸರನ್ನಿಟ್ಟಿದ್ದಾರೆ, ಹಾಗೆಂದರು ಹೃದಯಕ್ಕೆ ಸಮೀಪವಾದವಳು ಎಂದು ಅರ್ಥವಂತೆ, ಆದರೆ ನಾನೊ ನೋಡು ಅನಾಥೆಯಂತೆ ಯಾರ ಹೃದಯಕ್ಕು ಪ್ರವೇಶವಿಲ್ಲದವಳು, ಕಡೆಗೆ ನನ್ನ ಗಂಡನಿಗೆ ಬೇಡವಾದವಳು" ಎನ್ನುತ್ತ ಕಣ್ಣೀರ ಸುರಿಸುವಳು. ಊರ್ಮಿಳಾದೇವಿಯ ಸೂಕ್ಷ್ಮಮನಸಿನ ನೋವಿನ ಕಣ್ಣೀರು ಮೊದಲಸಲವೇನಲ್ಲ ಅವಳು ನೋಡಿರುವುದು, ಚಿಕ್ಕವಯಸಿನಿಂದಲು ಬಲ್ಲಳು ಆಕೆ ಊರ್ಮಿಳದೇವಿಯನ್ನು.

   ಸೀತ ಹಾಗು ಊರ್ಮಿಳ ಇಬ್ಬರು ಜನಕಮಹಾರಾಜನ ಮಕ್ಕಳಾದರು ಅದೇನೊ ಮಹಾರಾಜನಿಗೆ ಮೊದಲಿನಿಂದಲು ಸೀತೆಯೆಂದರೆ ಎಂತದೊ ವ್ಯಾಮೋಹ ಅಕ್ಕರೆ. ಕೈಕೈ ಹಿಡಿದು ಅರಮನೆಯಲ್ಲಿ ಓಡಾಡುವ ಇಬ್ಬರು ಹೆಣ್ಣುಮಕ್ಕಳನ್ನು ಕಂಡರೆ ಎಲ್ಲರ ಮುಖದಲ್ಲು ಮಂದಹಾಸ. ಅರಮನೆಗೆ ಬರುವ ಹೋಗುವ ಅತಿಥಿಗಳು ನೂರಾರು. ಜನಕಮಹಾರಾಜ ಧರ್ಮನಿಷ್ಟ, ವೇದಾಂತಿ ಅವನೊಡನೆ ಚರ್ಚಿಸಲು ಬರುವವರು ಅಪಾರ. ಪರಿಚಿತ ಋಷಿಮುನಿಗಳು ಬಂದಾಗ ಜನಕನು "ಸೀತ ಇಲ್ಲಿಬಾರಮ್ಮ" ಎಂದು ಕರೆದು, ಹೆಮ್ಮೆಯ ದ್ವನಿಯಲ್ಲಿ "ಪಂಡಿತರೆ ಇವಳೆ ನನ್ನ ಮಗಳು ಸೀತ ಅವಳನ್ನು ಆಶೀರ್ವದಿಸಿ" ಎನ್ನುವನು. ಬಂದಿರುವವರು ಸೀತೆಯನ್ನು ಮುದ್ದಿನಿಂದ ಮಾತನಾಡಿಸಿ ನಂತರ " ಯಾವುದು ಈ ಇನ್ನೊಂದು ಮಗು ಮುದ್ದಾಗಿದೆ" ಎಂದು ಕೇಳುವಾಗ ಹೇಳುವನು ಜನಕ ಆಗ ನೆನೆಸಿಕೊಂಡಂತೆ "ಈಕೆ ನನ್ನ ದ್ವಿತೀಯ ಪುತ್ರಿ ಊರ್ಮಿಳ". ಏಕೊ ಮೊದಲಿನ ಹೆಮ್ಮೆಯ ದ್ವನಿ ತನ್ನ ತಂದೆಯದು ಎಂದು ಊರ್ಮಿಳೆಗೆ ಅನ್ನಿಸುತ್ತಿರಲಿಲ್ಲ.
ಸ್ವಲ್ಪ ಬುದ್ದಿ ಬಂದನಂತರ ಅವಳಿಗೆ ಅನ್ನಿಸಿದ್ದು ಇದೆ, ನಮ್ಮ ಅಪ್ಪ ಹೀಗೆ ಏಕೆ? ಹೊರಗಿನವರು ಬರುವಾಗ "ಇವರಿಬ್ಬರು ನನ್ನ ಮಕ್ಕಳು ಸೀತ ಹಾಗು ಊರ್ಮಿಳ ಆಶೀರ್ವದಿಸಿ" ಎಂದು ಹೇಳಬಹುದಲ್ಲ ಎಂದು. ಸೂಕ್ಷ್ಮಮನಸಿನ ಹುಡುಗಿ ಆಕೆ, ಸಮಯ ಸಂದರ್ಭದ ಅರಿವಿನೊಡನೆ ನಿದಾನವಾಗಿ ಅಕ್ಕನಿಂದ ದೂರ ಸರಿಯುತ್ತಿದ್ದಳು. ತನ್ನರಮನೆಯ ದಾಸಿಯ ಮಗಳು ಮಾಧವಿಯೊಡನೆ ಅವಳ ಸಖ್ಯ ಬೆಳೆಯಿತು. ತನ್ನ ಸರಿಸಮಾನದ ವಯೋಮಾನದ ಅವಳೊಡನೆ ಆಗಾಗ್ಯೆ ಮನಬಿಚ್ಚಿ ಮಾತನಾಡುವಳು. ಉಳಿದಂತೆ ಅಪ್ಪ ಅಮ್ಮನೊಡನೆ ಅದೇ ಗಂಭೀರ.ಮೌನ.
ರೂಪಿನಲ್ಲಿ ತನ್ನ ಅಕ್ಕನನ್ನು ಮೀರುತ್ತಿದ್ದ ಅವಳು ಏಕೊ ಅರಮನೆ ಹಾಗು ರಾಜ್ಯದ ಜನಮನದ ಹೃದಯದಲ್ಲಿ ಮನೆಮಾಡಲಿಲ್ಲ. ಊರ್ಮಿಳ ಸದಾ ಸೀತೆಯ ನೆರಳಿನಲ್ಲೆ ಉಳಿದುಬಿಟ್ಟಳು, ಆ ನೆರಳಿನಿಂದ ಎಂದು ಹೊರಬರುವ ಪ್ರಯತ್ನ ಮಾಡದೆ, ಎಲೆಮರೆಯಲ್ಲಿ ಅರಳಿನಿಂತ ಮಲ್ಲಿಗೆಯಂತೆ ಉಳಿದುಬಿಟ್ಟಳು.

   ಯಾವುದೊ ಶಿವಧನುವಂತೆ ಅದನ್ನು ಹೆದೆಯೇರಿಸಿ ಬಾಣಹೂಡಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವೆನೆಂದು ಜನಕಮಹಾರಾಜ ಹೇಳಿಕೆ ಹೊರಡಿಸಿದಾಗ ಎಲ್ಲಡೆ ಸಂಭ್ರಮ. ಊರ್ಮಿಳಾಗು ಕುತೂಹಲ ಎಲ್ಲರೊಡನೆ ತಾನು ಹೋಗಿ ನೋಡಿ ಬಂದಳು ಆ ಶಿವಧನುವನ್ನು. ಅವಳ ಮನದ ಮೂಲೆಯಲ್ಲಿ ಎಲ್ಲಿಯೊ ಒಂದು ಆಸೆಯ ಚಿಗುರು ಸೀತೆಯ ಮದುವೆ ನಂತರ ನಮ್ಮ ಅಪ್ಪ ನನ್ನ ಮದುವೆಯಾಗುವನಿಗು ಅದೇ ರೀತಿ ಸ್ಪರ್ದೆಯಿಟ್ಟು , ಅದಕ್ಕಿಂತ ದೊಡ್ಡ ಬಿಲ್ಲನ್ನು ಪಣಕ್ಕಿಟ್ಟು ಗೆಲ್ಲುವನಿಗೆ ತನ್ನನ್ನು ಕೊಡುವನೊ ಎನ್ನುವಾಗ ಸುಖದ ಕಲ್ಪನೆಯಲ್ಲಿ ಮುಳುಗುವಳು. ಕಿಲಕಿಲ ನಗುತ್ತ ತನ್ನ ಸಖಿಮಾಧವಿಯೊಡನೆ ತನ್ನ ಮನದಾಸೆ ಹಂಚಿಕೊಂಡಿದ್ದಳು.

 ಸುದ್ದಿ ಬಂದಿತ್ತು, ಯಾರೊ ವಿಶ್ವಮಿತ್ರ ಮುನಿಗಳಂತೆ ಅಯೋದ್ಯೆಯ ರಾಜಕುವರರೊಡನೆ ಬಂದಿರುವರಂತೆ, ಹೆಸರು ಶ್ರೀರಾಮನಂತೆ, ತಂದೆ ಪಣಕ್ಕಿಟ್ಟಿರುವ ಬಿಲ್ಲನ್ನು ಬಂಗಿಸುವನಂತೆ. ಎಲ್ಲ ಸಂಭ್ರಮದಿಂದ ನೆರೆದಿದ್ದರು. ಅರಮನೆಯ ಸ್ಪರ್ಧೆ ನಡೆಯುವ ಸ್ಥಳದ ಉಪ್ಪರಿಗೆಯ ಮೇಲೆ ಊರ್ಮಿಳ ಸಹ ಬಂದು ಕುಳಿತ್ತಿದ್ದಳು. ರಾಮನು ಧೀರಭಾವದಿಂದ ನಡೆದುಬರುವಾಗ ಬಿಲ್ಲನ್ನು ಎಡಕೈಯಲ್ಲಿ ಹಿಡಿದು ಎತ್ತುವಾಗಲೆ ಅಂದುಕೊಂಡಳು, "ಈತ ಸ್ಪರ್ದೆಯಲ್ಲಿ  ಗೆದ್ದಲ್ಲಿ ಇವನನ್ನು ವರಿಸಿದಲ್ಲಿ ಅಕ್ಕ ಸೀತ ನಿಜಕ್ಕು ಭಾಗ್ಯವಂತೆ". ರಾಮ ಅಲ್ಲಿ ನೆರೆದಿರುವವರ ನಿರೀಕ್ಷೆ ಸುಳ್ಳುಮಾಡಲಿಲ್ಲ. ಅವನು ಬಿಲ್ಲನ್ನು ಹೂಡಲು ಬಗ್ಗಿಸಿದರೆ ಬಿಲ್ಲೆ ಶಬ್ದ ಮಾಡುತ್ತ ಮುರಿದುಹೋಯಿತು. ಎಲ್ಲಡೆ ಹರ್ಷೋದ್ಗಾರ. ಜನಕ ಮಹಾರಾಜ ನಗುತ್ತ ವಿಶ್ವಮಿತ್ರರೊಡನೆ ಮಾತನಾಡುತ್ತು ನಿಂತಿರುವಂತೆ, ಸೀತೆ ಹಾರವನ್ನು ಹಿಡಿದು ನಗುತ್ತ ಹೋಗಿ ರಾಮಚಂದ್ರನ ಬಾಗಿದ ಕೊರಳಿಗೆ ವಿಜಯಮಾಲೆ ಹಾಕಿದಳು.

 ಸ್ವಲ್ಪ ಹೊತ್ತಿನಲ್ಲೆ ಮೇಲುಪ್ಪರಿಗೆಗೆ ಸುದ್ದಿ ಬಂದಿತು. ಸೀತೆಯ ಜೊತೆಜೊತೆಗೆ ಊರ್ಮಿಳದೇವಿಗೆ ರಾಮನ ಜೊತೆ ಬಂದಿರುವ ಅವನ ಸಹೋದರ ಲಕ್ಷ್ಮಣನ ಜೊತೆ ವಿವಾಹವಂತೆ. ಹಾಗೆಂದು ಜನಕಮಹಾರಾಜ ಸುದ್ದಿ ಕಳಿಸಿದ್ದಾನೆ ರಾಮನ ತಂದೆ ದಶರಥಮಹಾರಾಜನಿರುವ ಅಯೋದ್ಯೆಯ ಅರಮನೆಗೆ. ಊರ್ಮಿಳಾಗೆ ಆಶ್ಚರ್ಯ ಇದೇನಿದು, ಸ್ಪರ್ಧೆ ಇದ್ದದ್ದು, ಸೀತಳನ್ನು ವರಿಸಲು. ತನಗೆ ಯಾವ ಸೂಚನೆಯನ್ನು ಕೊಡದೆ ತನ್ನ  ಮದುವೆ ಸಹ ನಿರ್ದಾರವಾಗಿ ಹೋಯಿತೆ.ಕಡೆಗು ತಾನು ಸೀತೆಯ ನೆರಳಾಗಿಯೆ ಉಳಿದೆನೆ.ತನ್ನನ್ನು ವರಿಸಲೊ ಯಾವುದೊ ರಾಜ್ಯದ ರಾಜಕುಮಾರೊಬ್ಬ ಬಂದು ಪಣಕ್ಕಿಟ್ತ ಬಿಲ್ಲನ್ನು ಹೂಡಿ ತನ್ನನ್ನು ಮದುವೆಯಾವುವನೆಂದು ತಾನು ಕಟ್ಟಿದ್ದ ಕನಸು ಗಾಳಿಯ ಗುಳ್ಳೆಯಂತೆ ಒಡೆದುಹೋಯಿತೆ. ವ್ಯಥೆಗೊಂಡಳು ಊರ್ಮಿಳ. ಯಾವ ಸದ್ದು ಇಲ್ಲದಂತೆ ನಿದಾನವಾಗಿ ತನ್ನರಮನೆಗೆ ಸರಿದು ಹೋದಳು ಊರ್ಮಿಳ ತನ್ನನ್ನು ಮದುವೆಯಾಗುವ ವರ ಆ ಶ್ರೀರಾಮನ ತಮ್ಮ ಯಾರು ಎಂದು ನೋಡುವ ಕುತೂಹಲವು ಇಲ್ಲದೆ. ನಂತರ ಮಾಧವಿ ಒಮ್ಮೆ ಹೇಳಿದಳು "ನಿಮ್ಮ ಅಭಿಲಾಷೆಯನ್ನು ಕಡೆಯಪಕ್ಷ ಒಮ್ಮೆ ತಾಯಿಯವರಲ್ಲಿಯಾದರು ಹೇಳಿ". ಆದರೆ ಊರ್ಮಿಳ ಒಪ್ಪಲಿಲ್ಲ ಅವಳು ಹೇಳಿದಳು "ಅದಾಗದು ಮಾಧವಿ, ಒಮ್ಮೆ ನಾನು ಹಾಗೆ ಹೇಳಿದೆನಾದರೆ, ನನಗೆ ಸೀತೆಯ ಸೌಭಾಗ್ಯ ಕಂಡು ಈರ್ಷ್ಯೆ ಎಂದು ಭಾವಿಸುವರು, ನನಗೆ ಅಕ್ಕನ ಭಾಗ್ಯದ ಬಗ್ಗೆ ಯಾವುದೆ ಅಸೂಯೆ ಇಲ್ಲ, ನನ್ನ ಅದೃಷ್ಟ ಇದ್ದಂತೆ ನಡೆಯಲಿ ಬಿಡು"

  ಸಂಭ್ರಮದಿಂದ ಸೀತರಾಮ ಕಲ್ಯಾಣ ನೆರವೇರಿತು. ಜೊತೆ ಜೊತೆಗೆ ಲಕ್ಷ್ಮಣ ಊರ್ಮಿಳ, ಹಾಗು ಇವರ ಚಿಕ್ಕಪ್ಪ , ಜನಕಮಹಾರಜನ ತಮ್ಮ ಕುಷದ್ವಜನ ಮಕ್ಕಳಾದ ಮಾಂಡವಿಯೊಡನೆ ಭರತ , ಹಾಗು ಶ್ರುತಕೀರ್ಥಿಯ ಜೊತೆ ಶತೃಘ್ನನ ವಿವಾಹ ನಡೆಸಲಾಯಿತು. ಅಯೋದ್ಯೆಗೆ ಬರುವಾಗ ಊರ್ಮಿಳ ತನ್ನ ಜೊತೆ ತನ್ನ ಪ್ರಿಯ ಸಖಿ ಮಾಧವಿಯನ್ನು ಜೊತೆಜೊತೆಗೆ ಕರೆತಂದಳು.
ಅಯೋದ್ಯೆಗೆ ಬಂದ ಕೆಲವೆ ದಿನಗಳಲ್ಲಿ ಊರ್ಮಿಳೆಗೆ ಅರ್ಥವಾಗಿಹೋಗಿತ್ತು ಇಲ್ಲಿನ ಪರಿಸ್ಥಿಥಿ. ತನ್ನ ಪತಿ ಲಕ್ಷ್ಮಣನಿಗೆ ಅನುಜ ರಾಮನೆಂದರೆ ಅಪಾರ ಭಕ್ತಿ, ಪ್ರೀತಿ ಶ್ರದ್ದೆ. ಅದು ಎಷ್ಟೆಂದರೆ ರಾಮನನ್ನು ಹೊರತುಪಡಿಸಿದರೆ ಅವನಿಗೆ ಸ್ವತಂತ್ರ ವ್ಯಕ್ತಿತ್ವವೆ ಇಲ್ಲವೇನೊ ಅನ್ನುವಂತೆ ರಾಮನ ನೆರಳಾಗಿ ಇರುತ್ತಿದ್ದನು ಲಕ್ಷ್ಮಣ.

 ಊರ್ಮೀಳಾದೇವಿಗೆ ಮನದಲ್ಲಿಯೆ ಚೋದ್ಯ, ಇದೆಂತದು ತಾನು ಚಿಕ್ಕಂದಿನಿಂದ ಸೀತೆಯ ನೆರಳಿಂದ ಹೊರಬರಲಾರದೆ ಚಡಪಡಿಸಿದರೆ , ತನ್ನ ಪತಿ ಲಕ್ಷ್ಮಣನಾದರೊ ಆಕೆಯ ಪತಿ ಶ್ರೀರಾಮನ ನೆರಳೆ. ಅವಳಿಗೆ ನೋವಿನ ಜೊತೆಗೆ ನಗು. ಲಕ್ಷ್ಮಣನ ಅವಳಿಸೋದರನಂತೆ ಶತೃಘ್ನ, ಅವನಾದರೊ ಏಕೊ ರಾಮನ ಜೊತೆ ಅಷ್ಟಾಗಿ ಬೆರೆಯನು ದೂರದಿಂದಲೆ ಗೌರವದಿಂದ ನಮಸ್ಕರಿಸುವ, ಉಳಿದಂತೆ ಅವನದು ಭರತನ ಜೊತೆಗೆ ಹೆಚ್ಚು ಒಡನಾಟ.

 ಲಕ್ಷ್ಮಣನು ಸೀತರಾಮಚಂದ್ರರನ್ನು ಅನುಸರಿಸಿ ಕಾಡಿಗೆ ಹೊರಟಂತೆ ಊರ್ಮೀಳಾದೇವಿ ಒಂಟಿಯಾಗೆ ಉಳಿದುಹೋದಳು. ಆಗೊಮ್ಮೆ ಈಗೊಮ್ಮೆ ವಿಶೇಷ ಸಂದರ್ಭಗಳಲ್ಲಿ ಅತ್ತೆ ಹಾಗು ಹಿರಿಯರನ್ನು ಬೇಟಿಯಾಗುವಳು,ತೌರು ಮಿಥಿಲಾನಗರವು ಏಕೊ ದೂರವಾಗಿಯೆ ಉಳಿದು, ಸಖಿ ಮಾಧವಿಯೊಡನೆ ಮಾತ್ರ ಅವಳ ಸಖ್ಯ. ಅವಳು ತನ್ನರಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತ ಇರುತ್ತಿದ್ದಿದ್ದು ಅರಮನೆ ಉದ್ಯಾನದ ನೀರಿನ ಕಾರಂಜಿಯ ಸಮೀಪದ ಕಲ್ಲು ಸೋಫಾನಗಳ ಮೇಲೆ. ಇಂದು ಸಹ ಹಾಗೆಯೆ ಕುಳಿತಿರುವಳು ಅವಳು ಚಿರವಿರಹಿಣಿಯಂತೆ.

------------------------------------------------------------------  ೩

ಕತ್ತಲು ಆವರಿಸಿದಂತೆ ನಿದಾನಕ್ಕೆ ಎದ್ದು ಹೊರಟಳು ಊರ್ಮಿಳ  ತನ್ನ ಪ್ರಿಯಸಖಿಯೊಡನೆ. "ಮಾಧವಿ ನನಗೆ ಇಷ್ಟಾದರು ಒಂದು ಚಿಕ್ಕ ಆಸೆ ಉಳಿದಿದೆ ಅದು ನಡೆದೀತೆ" ಎಂದಳು. "ಏನು ಮಹರಾಣಿ ತಮ್ಮ ಆಸೆ" ಕುತೂಹಲದಿಂದ ಪ್ರಶ್ನೆ ಮಾಡಿದಳು ಮಾಧವಿ. ಕ್ಷಣಕಾಲ ಮೌನ. ನಂತರ ಊರ್ಮಿಳ ಎಂದಳು "ಹದಿನಾಲಕ್ಕು ದೀರ್ಘ ವರುಷಗಳ ಕಾಲ ನಾನು ಸನ್ಯಾಸಿನಿಯಂತೆ ನನ್ನ ಗಂಡನಿಗೆ ಕಾಯುತ್ತಲೆ ಇದ್ದೀನಿ. ಅವನಿಂದ ಒಂದು ಚಿಕ್ಕ ಸುದ್ದಿಯು ಇಲ್ಲ, ಅವನ ಕರ್ತವ್ಯಕ್ಕೆ ನಾನು ಎಂದು ಅಡ್ಡಿ ಬರುವದಿಲ್ಲ, ಹಿಂದಿರುಗಿದ ನಂತರ ಕಡೆಯ ಪಕ್ಷ ಒಮ್ಮೆಯಾದರು ಸರಿ ನನ್ನೊಡನೆ "ಊರ್ಮಿಳ ನೀನು ಇಷ್ಟು ವರ್ಷ ಹೇಗೆ ಕಳೆದೆ, ನಾನಿಲ್ಲದೆ ಕಷ್ಟವಾಗಲಿಲ್ಲವೆ" ಎಂದು ಕೇಳಿದರು ಸಾಕು, ನನಗದು ಸಾಕು, ನಾನು ಇಷ್ಟು ವರ್ಷ ಪಟ್ಟ ಕಷ್ಟವನ್ನೆಲ್ಲ ಮರೆತುಬಿಡುತ್ತೇನೆ" ಎಂದಳು
 ಮಾಧವಿ ನಗುನಗುತ್ತ " ಕೇಳದೆ ಏನು ಮಹರಾಣಿ, ಮಹಾರಾಜ ಲಕ್ಷ್ಮಣಕುಮಾರರು ನಿಮ್ಮನ್ನು ಅಗಲಿ ನೊಂದಿರುತ್ತಾರೆ, ನಿಜಕ್ಕು ನಿಮ್ಮನ್ನು ಅವರು ಸಂತೈಸುವರು" ಎಂದಳು

"ಅಯೋದ್ಯ ಅರಸರ ದೈವ ಸೂರ್ಯಭಗವಾನನಲ್ಲಿ ನಾನು ಈಗ ದಿನ ಅದೆ ಅರಕೆ ಮಾಡಿಕೊಳ್ಳುತ್ತಿದ್ದೀನಿ, ನನ್ನ ಚಿಕ್ಕ ಕೋರಿಕೆ ನೆರವೇರಿಸು ದೇವ, ಸಾಕು ನನ್ನ ಈ ದೀರ್ಘವಿರಹದ ನೋವನ್ನು ಮರೆತುಬಿಡುವೆ ಎಂದು"  ಊರ್ಮಿಳ ಮೆಲುನುಡಿಯಲ್ಲಿ ನುಡಿದಳು.

 ಅವರಿಬ್ಬರು ಅರಮನೆಯ ದ್ವಾರದ ಹತ್ತಿರಬರುವಾಗಲೆ , ಮಹಾದ್ವಾರದ ಹತ್ತಿರದಿಂದ ಸೇವಕಿಯೊಬ್ಬಳು ಓಡಿಬಂದಳು. "ಅಯೋದ್ಯೆಗೆ ಸುದ್ದಿ ಬಂದೆದೆಯಂತೆ. ನಾಳೆ ಸೂರ್ಯೋದಯದ ನಂತರ ವನವಾಸಕ್ಕೆ ಹೋಗಿರುವ ಸೀತ ರಾಮರು ಹಿಂದಿರುಗಿ ಬರುವರಂತೆ, ಎಲ್ಲಡೆ ಸ್ವಾಗತ ಸಂಭ್ರಮಕ್ಕೆ ಸಿದ್ದತೆ ಪ್ರಾರಂಬವಾಗಿದೆ" ಎಂದಳು.

  "ಮತ್ತೆ ಲಕ್ಷ್ಮಣ ಮಹಾರಾಜರು" ಎನ್ನಲು ಹೋಗಿದ್ದ ಮಾಧವಿ ಊರ್ಮಿಳೆಯ ಮುಖನೋಡುತ್ತ ಸುಮ್ಮನಾದಳು. ನಂತರ ಆ ಸಖಿ ಊರ್ಮಿಳೆಯ ಎದುರಿಗೆ ನಿಂತು ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಳು. ಸೀತ ರಾಮರು ವನವಾಸಕ್ಕೆ ಹೋಗಿ ಚಿತ್ರಕೂಟ ಪರ್ವತದಲ್ಲಿ ವಾಸವಾಗಿದುದ್ದು, ಅಲ್ಲಿಗೆ ಬಂದ ಶೂರ್ಪನಖಿ ಎಂಬ ರಕ್ಕಸಿಯ ದಸೆಯಿಂದ ರಾವಣನ ಆಗಮನ. ರಾವಣನು ಹೆಣ್ಣಿನ ವ್ಯಾಮೋಹದಿಂದ ಸೀತೆಯನ್ನು ಅಪಹರಣ ಮಾಡಿದ್ದು. ನಂತರ ರಾಮ ಲಕ್ಷ್ಮಣರು ಸುಗ್ರೀವ ಹನುಮಂತ ಮುಂತಾದ ವಾನರವೀರರ ಸಹಾಯದಿಂದ ಸಮುದ್ರ ದಾಟಿ ರಾವಣನನ್ನು ಸಂಹರಿಸಿ, ಈಗ ಎಲ್ಲರೊಡನೆ ಹಿಂದೆ ಬರುತ್ತಿರುವ ವಿಷಯಗಳನ್ನು ಸುದೀರ್ಘವಾಗಿ ತಿಳಿಸಿದಳು. ಯುದ್ದದಲ್ಲಿ ಲಕ್ಷ್ಮಣನು ಜ್ಞಾನತಪ್ಪಿ ಬಿದ್ದು ಸಾವಿನ ಅಂಚಿನಲ್ಲಿದ್ದುದ್ದನ್ನು ಕೇಳುವಾಗ ಊರ್ಮಿಳೆಗೆ ಕಣ್ಣಲ್ಲಿ ನೀರು ತುಂಬಿ ದುಖಃ ಉಕ್ಕಿ ಬಂತು. "ದೇವ ಅವರಿಗೇನು ಆಗದಂತೆ ಕಾಪಾಡು" ಎಂದು ಬೇಡಿದಳು. ಕಡೆಗೆ ತನ್ನ ಪತಿಯನ್ನುಳಿಸಲು ಸಂಜೀವಿನಿ ಪರ್ವತವನ್ನೆ ತಂದ, ತಾನೆಂದು ಕಾಣದ ಹನುಮಂತನನ್ನು ಮನದಲ್ಲಿಯೆ ಸ್ಮರಿಸಿದಳು.
    ಮರುದಿನ ಅಯೋದ್ಯ ನಗರಿಗೆ ಸಂಭ್ರಮ, ಪ್ರತಿ ಮನೆ ಬೀದಿ ದೇಗುಲಗಳಲ್ಲಿ ಹಸಿರು ತೋರಣ ಹೂಗಳಿಂದ ಅಲಂಕರಿಸಲಾಗಿತ್ತು. ಊರ್ಮಿಳ ಇದ್ದ ಅರಮನೆಯು ಅದಕ್ಕೆ ಹೊರತಲ್ಲ. ಎಲ್ಲಡೆಯು ಸಂಭ್ರಮಗಳ ಉತ್ತುಂಗ, ಕೇಕೆ ಹರ್ಷೊದ್ಗಾರಗಳು.
   ಊರ್ಮಿಳ ಶುಭ್ರಳಾಗಿ ಸಿದ್ದಳಾಗಿ ಸೂರ್ಯನ ಆರಾದನೆ ಮುಗಿಸಿ ಕಾದಿದ್ದಾಳೆ. ಮನದಲ್ಲಿ ಒಂದೇ ಕೋರಿಕೆ "ಪ್ರಭು ನನ್ನ ಪತಿ ಒಮ್ಮೆಯಾದರು ನನ್ನ ನೋಡಿ ಮುಗುಳ್ನಕ್ಕು ಊರ್ಮಿಳಾ ನೀನು ಹೇಗಿದ್ದಿ, ನಾನು ನಿನಗಾಗಿ ಕಾತರಿಸಿ ಬಂದಿದ್ದೇನೆ  ಎಂದು ನುಡಿಯಲಿ". ಅವಳ ಮನ ಪಿಸುಗುಟ್ಟುತ್ತಲಿದೆ, "ಲಕ್ಷ್ಮಣ ನೀನು ಇಷ್ಟುಕಾಲದ ನಂತರ ನೋಡಲು ಹೇಗಿದ್ದಿ?. ನನ್ನೆದುರು ಬರುವ ಆ ಶುಭ ಗಳಿಗೆ ಸಮೀಪಿಸಿತು" ಎಂದು.
   ಮಹಾದ್ವಾರದ ಹತ್ತಿರ ಕೂಗಾಟ, "ರಾಜಕುಮಾರ ಲಕ್ಷ್ಮಣನಿಗೆ ಜಯವಾಗಲಿ" ಎನ್ನುವ ಜಯಕಾರದ ದ್ವನಿ ಮುಗಿಲುಮುಟ್ಟಿದೆ. ಆರತಿ ಹಿಡಿದು ಸಿದ್ದಳಾದಳು ಊರ್ಮಿಳ ಅವನನ್ನು ಸ್ವಾಗತಿಸಲು. ಲಕ್ಷ್ಮಣನು ಒಳಬರುತ್ತಿದ್ದಾನೆ ! ಕಾಡಿಗೆ ಹೊರಟಾಗ ಇದ್ದ ಅದೆ ನಾರುಮಡಿಯ ಏಕವಸ್ತ್ರದಲ್ಲಿ.ಕೈಯಲ್ಲಿ ಬಿಲ್ಲು. ದೀರ್ಘಕಾಲದ ವನವಾಸ , ಯುದ್ದದ ಶ್ರಮದಿಂದ ಬಳಲಿದ ಮುಖಭಾವ. ಎದುರಿಗೆ ಹೋಗಿ ನಗುತ್ತ ಆರತಿ ಎತ್ತಿದಳು ಊರ್ಮಿಳ.

   ಲಕ್ಷ್ಮಣನಿಗೆ ಬಾಗಿಲಲ್ಲಿ ನಿಲ್ಲಲ್ಲು ಏನೊ ಚಡಪಡಿಕೆ, ಒಳಹೊರಟ. ಆರತಿ ತಟ್ಟೆಯನ್ನು ದಾಸಿಯ ಕೈಲಿಟ್ಟು ತಾನು ಅವನ ಹೆಜ್ಜೆಯ ವೇಗಕ್ಕೆ ಹೆಜ್ಜೆ ಹೊಂದಿಸುತ್ತ ನಡೆದಳು ಊರ್ಮಿಳ.
  "ಹೇಗಿದ್ದೀರಿ" ಇದಕ್ಕಿಂತ ಹೆಚ್ಚಿಗೆ ಅವಳಿಗೆ ನುಡಿಯಲಾಗಲಿಲ್ಲ, ಗಂಟಲು ಕಟ್ಟಿದಂತಾಯ್ತು.
  ಲಕ್ಷ್ಮಣನು ಹೇಳುತ್ತಿದ್ದಾನೆ "ಆಯಿತು ವನವಾಸವೆಲ್ಲ ಮುಗಿಯಿತು. ರಾಮನು ಯುದ್ದವು ಗೆದ್ದಾಯಿತು. ಇನ್ನೇನು ಆಪತ್ತು ಅಡಚಣೆಗಳೆಲ್ಲ ಮುಗಿದವು. ಶೀಘ್ರದಲ್ಲಿ ರಾಮನಿಗೆ ಪಟ್ಟಾಭಿಷೇಕ. ಈಗ ಅದನ್ನು ಯಾರು ತಡೆಯಲಾರರು"
  ಊರ್ಮಿಳ ಮನದಲ್ಲಿಯೆ ಪ್ರಾರ್ಥಿಸುತ್ತಿದ್ದಾಳೆ"ಭಗವಾನ್ ಸೂರ್ಯದೇವ, ನನ್ನ ಪತಿ ಒಮ್ಮೆಯಾದರು ನನ್ನತ್ತ ಕೃಪೆ ತೋರಲಿ, ಒಂದೇ ಒಂದು ಸಾರಿ ಊರ್ಮಿಳ ನೀನು ಇಷ್ಟುವರ್ಷ ಹೇಗಿದ್ದೆ ಎಂದು ಕೇಳಲಿ, ನನ್ನ ಚಿಕ್ಕ ಕೋರಿಕೆ ನೆರವೇರಿಸಲಾರೆಯ?"  
  ಏಕೊ ಊರ್ಮಿಳ ಕಣ್ಣ ಕೊನೆಯಲ್ಲಿ ಕಾಣಿಸಿಕೊಂಡ ನೀರ ಬಿಂದುವೊಂದರಿಂದ ಅವಳ ದೃಷ್ಟಿ ಮಂಜಾಗಿ ಲಕ್ಷ್ಮಣ ಅಸ್ವಷ್ಟನಾಗಿ ಕಾಣುತ್ತಿದ್ದಾನೆ.
  ಲಕ್ಷ್ಮಣ ಮುಂದುವರೆಸಿದ ತನ್ನ ಮಾತನ್ನು "ಇಂದಿನಿಂದಲೆ ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಪ್ರಾರಂಬಿಸಬೇಕು, ಈ ನಾರುಮಡಿ ಕಳೆದು ಸ್ನಾನ ಮುಗಿಸಿ, ಶುಭ್ರವಸ್ತ್ರ ಧರಿಸಿ, ಹೊರಟರೆ ಆಯಿತು, ರಾಮನ ಪಟ್ಟಾಭಿಷೇಕ ಮುಗಿಯುವವರೆಗು ನಾನು ವಿಶ್ರಮಿಸುವಂತಿಲ್ಲ ಎಲ್ಲ ನನ್ನದೆ ಜವಾಬ್ದಾರಿ ಅಂದಿದ್ದನೆ ಅವನು"
   ಏಕೊ ಏಕೊ ಪಾಪ ಊರ್ಮಿಳೆಯ ಕಣ್ಣಲ್ಲಿದ್ದ ಜಲಬಿಂದು ಕೆಳಗೆ ಜಾರಿ ಅವಳ ನುಣುಪಾದ ಕೆನ್ನೆಯ ಮೇಲೆ ಹರಿದಿದೆ, ಮತ್ತೆ ಮತ್ತೆ ಕಣ್ಣು ತುಂಬಿಕೊಳ್ಳುತ್ತಿದೆ. ಭಗವಾನ್ ಸೂರ್ಯನಲ್ಲಿ ಅವಳ ಪ್ರಾರ್ಥನೆ ಮುಂದುವರೆದಿದೆ
   "ಒಂದೇ ಒಂದು ಸಾರಿ ನನ್ನ ಪತಿ ಲಕ್ಷ್ಮಣನು ನನ್ನನ್ನು ಹೇಗಿದ್ದಿ ಎಂದು ವಿಚಾರಿಸಲಿ......"
.....
....
...
                                                                   ** ಮುಗಿಯಿತು.**

ವರ್ಣಚಿತ್ರ: ಇಂಟರೆನೆಟ್ನಿಂದ ಎರಡು ಚಿತ್ರಗಳನ್ನು ತೆಗೆದು ಸಂಯೋಜನೆಗೊಳಿಸಿದೆ