Tuesday, August 29, 2017

ಕಥೆ : ಇಳಿದು ಬಾ ತಾಯಿ

ಕಥೆ : ಇಳಿದು ಬಾ ತಾಯಿ

ಸಗರ 

ತ್ರೇತಾಯುಗದಲ್ಲಿದ್ದ ಸೂರ್ಯವಂಶದ ಚಕ್ರವರ್ತಿ. ಶ್ರೀರಾಮನಿಗಿಂತ ಹಿಂದಿನ ತಲೆಮಾರಿನವ. ಸಗರ ಚಕ್ರವರ್ತಿಗೊಂದು ಆಸೆ ನೂರು ಅಶ್ವಮೇಧಯಾಗಗಳನ್ನು ಮಾಡಬೇಕೆಂದು. ಹಾಗೆ  ನೂರು ಅಶ್ವಮೇದಯಾಗಗಳನ್ನು ನಡೆಸಿದಲ್ಲಿ ಅವನು ಇಂದ್ರಪದವಿಗೆ ಅರ್ಹನಾಗುತ್ತಿದ್ದ. ಚಕ್ರವರ್ತಿ ಮನಸ್ಸು ಮಾಡಿದರೆ ಏನು ಕಷ್ಟ. ತೊಂಬತ್ತಂಬತ್ತು ಅಶ್ವಮೇದಯಾಗಗಳು ನಿರಾಂತಕವಾಗಿ ನೆರವೇರಿದವು. ನೂರನೆ ಅಶ್ವಮೇಧಯಾಗದ  ಯಜ್ಞದ ಕುದುರೆಯನ್ನು ಸ್ವತಂತ್ರವಾಗಿ ಬಿಡಲಾಗಿತ್ತು ದಿಗ್ವಿಜಯದ ಸಂಕೇತವಾಗಿ. 

ಅತ್ತ ದೇವಲೋಕದ ಇಂದ್ರನಿಗೆ ಎಂತದೋ ಸಂಕಟ, ಸಗರನು ಯಾಗ ಮುಗಿಸಿಬಿಟ್ಟಲ್ಲಿ ತನಗೆ ಸರಿಸಮಾನನಾಗುವನು, ಅವನು ಇಂದ್ರಪದವಿಗೆ ಅರ್ಹನಾಗುವನು. ಇಂದ್ರನು  ಒಂದು ಕುತಂತ್ರದ ಆಟ ಹೂಡಿದ. ಯಜ್ಞದ ಕುದುರೆಯನ್ನು ಅಪಹರಿಸಿದ, ನಂತರ ಪಾತಾಳದಲ್ಲಿ ತಪಸ್ಸು ಮಾಡುತ್ತ ಕುಳಿತಿದ್ದ, ಇಹಲೋಕವನ್ನೆ ಮರೆತಿದ್ದ ಕಪಿಲ ಮುನಿಯ ಆಶ್ರಮದಲ್ಲಿ ಕುದುರೆಯನ್ನು ಅಡಗಿಸಿಟ್ಟ. ನಂತರ  ಕುದುರೆ ಆಶ್ರಮದಲ್ಲಿರುವ ಸುದ್ದಿ ಸಗರನಿಗೆ,ಅವನ ಪುತ್ರರಿಗೆ ತಲುಪುವಂತೆ ನೋಡಿಕೊಂಡ. 

ಸಗರನಿಗೆ ಅರವತ್ತು ಸಾವಿರ ಮಕ್ಕಳು ರಾಣಿ ಸುಮತಿಯಿಂದ ಜನಿಸಿದವರು. ಹಾಗೆ ಮತ್ತೊಬ್ಬ ಮಗ ಅಸಮಂಜ ರಾಣಿ ಕೇಶಿನಿಗೆ ಜನಿಸಿದವನು.ಯಜ್ಞದ ಕುದುರೆ ಮಾಯವಾದ ವಿಷಯ ಸಗರನನ್ನು ಕೆರಳಿಸಿತು. ತನ್ನ ಮಕ್ಕಳನ್ನು ಕರೆದು ಹುಡುಕುವಂತೆ ಅಜ್ಞೆ ನೀಡಿದ.  ಎಲ್ಲರೂ ಅಪ್ಪನ ಯಜ್ಞದ ಕುದುರೆಯನ್ನು ಹುಡುಕುತ್ತ ಹೊರಟರು. ಕಪಿಲ ಮುನಿಯ ಆಶ್ರಮವನ್ನು ಸೇರಿದರು. 
ಅಲ್ಲಿದ್ದ ಯಜ್ಞದ ಕುದುರೆಯನ್ನು ಕಂಡರು. 

ಆತುರಗಾರನಿಗೆ ಬುದ್ದಿ ಕಡಿಮೆ ಎನ್ನುವುದು ಸುಳ್ಳಲ್ಲ.  ರಾಜಕುಮಾರರೆಲ್ಲ ಕಪಿಲ ಮುನಿಯೆ ಕುದುರೆ ಕದ್ದು ಅಡಗಿಸಿರುವನೆಂದು ಭಾವಿಸಿದರು, ಅವನನ್ನು ತಪಸ್ಸಿನಿಂದ ಎಚ್ಚರಿಸಿದರು. ಕಠೋರ ತಪದಲ್ಲಿ ಮುಳುಗಿದ್ದ ಕಪಿಲಮುನಿಗೆ ರಾಜಕುಮಾರರ ಅವಿವೇಕ ಕೆರಳಿಸಿತು,   
ಒಂದು ಹೂಂಕಾರ ಅಷ್ಟೆ 
ಎಲ್ಲ ಅರವತ್ತು ಸಾವಿರದ ಒಂದು ರಾಜಕುವರರು ನಿಂತಲ್ಲೆ ಭಸ್ಮವಾದರು. 
              *************** 

2020 ರ ಡಿಸೆಂಬರ್ ತಿಂಗಳ 21 ನೇ ದಿನ

ಭೂಮಿಯಲ್ಲಿನ ಜೀವಿಗಳಿಗೆ ಅಘಾತವೊಂದು ಕಾದಿತ್ತು. 
ತಾನೆ ಮಾಡಿದ ತಪ್ಪಿಗೆ ತಾನೆ ಬಲಿಯಾಗಿ ನಾಶವಾಗುವ ಅಂಚಿಗೆ ಬಂದು ನಿಂತಿತ್ತು ಮನುಕುಲ. 
ಚೀನದೇಶದವರು ಸುಮಾರು ಎರಡು ವರುಷಗಳಿಂದ ರಹಸ್ಯವಾಗಿ ಪ್ರಯೋಗ ಒಂದನ್ನು ನಡೆಸಿದ್ದರು. ಪದೇ ಪದೇ ಆಗುತ್ತಿರುವ ಭೂಕಂಪನದ ಅಧ್ಯಯನದ ಅಂಗವಾಗಿ ಭೂಮಿಯ ಆಳದವರೆಗಿನ ವಿವಿದ ಕಲ್ಲಿನ ಮಣ್ಣಿನ ಪದರಗಳನ್ನು  ಪರೀಕ್ಷಿಸಲು ಹೊರಟಿದ್ದರು. ಅದಕ್ಕಾಗಿ ಅಗಾದ ಹಿಂದೂಮಹಾಸಾಗರದಲ್ಲಿ ಇಂಡೋನೇಶಿಯಾದ ಮೇಲ್ಭಾಗದಲ್ಲಿ ತನ್ನ ನೆಲದ ಸಮೀಪಕ್ಕೆ ಸಮುದ್ರಮಧ್ಯ ನೆಲವನ್ನು ಕೊರೆಯುತ್ತ, ಸೂಪರ್ ಬೋರ್ ವೆಲ್ ಒಂದನ್ನು ಕೊರೆಯಲು ಹೊರಟಿದ್ದರು. 

ಮೆಟ್ರೋ ರೈಲಿನ ಸುರಂಗ ನಿರ್ಮಿಸಲು ಬಳಸುವ ಕಟರ್ ಹೆಡ್ ನಂತಹ ದೊಡ್ಡ ಯಂತ್ರಗಳು ಭೂಮಿಯ ಆಳಕ್ಕೆ ನಿಧಾನಕ್ಕೆ ಸಾಗಿದ್ದವು, ಸುಮಾರು ಎರಡು ವರ್ಷಗಳ ಕಾಲ ಹಾಗೆ ಕೆಳೆಗೆ ಸಾಗುತ್ತಿದ್ದ ಆ ಬೋರ್ ವೆಲ್ ಸಾಧನಗಳು  ಭೂಮಿಯ ಒಳಗೆ ಸಾಗುತ್ತ ಸುಮಾರು ಮೂವತ್ತು ಕಿಮೀಗಿಂತ ಹೆಚ್ಚಿನ ಆಳ ತಲುಪಿದ್ದವು. ಹಿಂದೊಮ್ಮೆ ಇಂತಹುದೆ ಪ್ರಯೋಗ ಸಣ್ಣಪ್ರಮಾಣದಲ್ಲಿ ಯೂರೋಪಿನಲ್ಲಿ ನಡೆದು, ಜನಗಳ ಒತ್ತದಿಂದ ಮಧ್ಯದಲ್ಲಿಯೆ ಕೈಬಿಡಲಾಗಿತ್ತು. ಆದರೆ ಚೀನಿಯರು ಇಂತಹ ಹೊರಗಿನ ಒತ್ತಡಕ್ಕೆಲ್ಲ ಸೊಪ್ಪುಹಾಕುವರಲ್ಲ. 

ಭೂಮಿಯ ವಿವಿದ ಪದರಗಳ ವಿವರ ಪಡೆಯುತ್ತ ಮತ್ತೆ ಮುಂದುವರೆಯುತ್ತಿರುವಂತೆ ಅವರಿಗೆ ಸಣ್ಣ ಆಶ್ಚರ್ಯ ಕಾದಿತ್ತು, ಯಂತ್ರಕ್ಕೆ ಯಾವುದೆ ಮಣ್ಣು ಅಥವ ಕಲ್ಲು ಸಿಗದೆ ಖಾಲಿ ಜಾಗದಲ್ಲಿ ಯಂತ್ರದ ಮುಂಬಾಗ ತಿರುಗುತ್ತ ಮುಂದೆ ಹೋಗುತ್ತಿರುವಂತೆ ಅವರಿಗೆ ಕಾಣಿಸಿತು, ಮೊದಲು ಎಂತಹುದೋ ಒಂದು ಖಾಲಿ ಜಾಗ ನಡುವಿನಲ್ಲಿ ಇರಬೇಕೆಂದು ಅವರು ಭಾವಿಸಿದರಾದರು, ಯಂತ್ರ ಬಹಳ ದೂರ ಸಾಗಿದಾಗಲು  ಮಣ್ಣು ಕಲ್ಲು ಸಿಗದೆ ಹೋದಾಗ ಅವರು ಕೆಲಸ ನಿಲ್ಲಿಸಿ, ಕ್ಯಾಮರಗಳನ್ನು ಬಳಸಿ ನೋಡಿದರು. ಅವರಿಗೆ ಆಶ್ಚರ್ಯ ಕಾದಿತ್ತು, ಭೂಮಿಯ ಒಡಲಾಳದಲ್ಲಿ , ಆ ಆಳದಲ್ಲಿ , ಅಗಾದವಾದ ಖಾಲಿ ಜಾಗವಿದ್ದು ಅದು ಸುತ್ತಲು ಶಿಲಾ ಪದರದಿಂದ ಸುತ್ತುವರೆಯಲ್ಪಟ್ಟಿತ್ತು. 

ಆ ಖಾಲಿಜಾಗದ ಸುತ್ತಳತೆ ಹಾಗು ಗಾತ್ರ ಅವರ ಅರಿವಿಗೆ ಬರಲಿಲ್ಲ. ಹಾಗೆ ಅಂತಹ ಶೂನ್ಯ ಜಾಗವೊಂದು ಭೂಮಿಯಒಳಗೆ ಏಕೆ ನಿರ್ಮಾಣವಾಯಿತೆಂದು ಅವರು ಪರೀಕ್ಷಿಸುತ್ತ ಇರುವಂತೆ   ಅನಾಹುತ ಜರುಗಿಹೋಗಿತ್ತು. ಇವರು ಯಂತ್ರ ಬಳಸಿ ಕೊರೆಯುತ್ತಿದ್ದ ಆ ಭಾಗ ಕುಸಿಯಲು ಪ್ರಾರಂಭವಾಯಿತು, ಕಲ್ಲುಗಳ ನಡುವೆ ಅದೇನು ಬಿರುಕು ಇತ್ತೊ ಇವರು ನಿರೀಕ್ಷಿಸುವ ಮೊದಲೆ, ಇವರ ಯಂತ್ರಗಳೆಲ್ಲ ಭೂಮಿಯ ಆಳವನ್ನು ಸೇರಿತ್ತು, ಮೇಲಿನಿಂದ ಮಣ್ಣು ಕಲ್ಲು ಕುಸಿಯುತ್ತಿರುವಂತೆ, ಅಗಾದ ವೇಗದಲ್ಲಿ ಸಮುದ್ರದ ನೀರು ಒಳನುಗ್ಗಿ ಕಣ್ಮರೆಯಾಗುತ್ತಿತ್ತು.  ಅಷ್ಟು ವೇಗದಲ್ಲಿ ಸಮುದ್ರದ ನೀರು ಆಳ ಕಣಿವೆಯ ಒಳಗೆ ಇಳಿಯುತ್ತಿರುವಂತೆ, ಸಮುದ್ರದಲ್ಲಿ  ಹತ್ತು ಕಿಮೀಗಿಂತ ಹೆಚ್ಚಿನ ವ್ಯಾಸದ ಸುಳಿ , ಅತೀ ವೇಗದಲ್ಲಿ ಸುತ್ತಲು ಪ್ರಾರಂಭಿಸಿತು, ಆ ಸುಳಿಯ ಕೊನೆ , ನೀರು ನುಗ್ಗುತ್ತಿರುವ ಚೀನಿಯರು ಕೊರೆದ ಕುಸಿಯುತ್ತಿರುವ ಬೋರ್ ವೆಲ್ ಆಗಿತ್ತು. ನಂತರ ಯಾರು ನಿರೀಕ್ಷಿಸಿದಂತೆ ಆ ಮಹಾಸುಳಿಯ ಪರಿಣಾಮ ಚೀನದ ಸಮುದ್ರದಡದಲ್ಲಿ ಅಗಾದವಾದ ದೈತ್ಯಾಕಾರದ ಬೀಮ ಸ್ವರೂಪಿ ಅಲೆಗಳು ಅಪ್ಪಳಿಸಲು ಮೊದಲಿಟ್ಟವು. ಸಮುದ್ರದಡದ ಹಳ್ಳಿ ಪಟ್ಟಣಗಳು ನೋಡ ನೋಡುತ್ತಿರುವಂತೆ ನಿರ್ನಾಮವಾದವು. 

ಇಂತಹ ಘಟನೆ ಕ್ಷಣಕಾಲ ನಡೆದು ನಿಲ್ಲುವಂತೆ ಕಾಣಲಿಲ್ಲ.  ಸಮುದ್ರದ ನೀರು ಆ  ಭೀಕರವಾದ ಕುಸಿದ ತಾಣದಲ್ಲಿ ಬಸಿದು ಹೋಗುತ್ತಿತ್ತು. ಎಲ್ಲ ವಿಜ್ಞಾನಿಗಳು, ಇಂಜಿನೀಯರ್ ಗಳು ಅಸಾಹಾಯಕರಾಗಿ ಇರುವಂತೆ ಹೊರಗಿನ ಪ್ರಪಂಚಕ್ಕೆ ಸುದ್ದಿ ಹಬ್ಬಿ ಎಲ್ಲರೂ ಕಂಗಲಾದರು. ಪ್ರಪಂಚವೆಲ್ಲ ಚೀನವನ್ನು ದೂಷಿಸುತ್ತಿದ್ದರು, ಸಹ ಯಾವುದೇ ಪ್ರಯೋಜನ ಇರದಂತೆ ಕಣ್ಣ ಎದುರಿಗೆ ಸಮುದ್ರದ ನೀರು , ಮನೆಯ ತೊಟ್ಟಿಯಲ್ಲಿನ ನೀರಿನಂತೆ ಖಾಲಿಯಾಗುತ್ತಿತ್ತು, ಯಾವುದೋ ದೊಡ್ಡ ಮೋಟಾರ ಹಾಕಿ ಎಳೆಯುತ್ತಿರುವಂತೆ , ಸಮುದ್ರದ ನೀರಿನ ಮಟ್ಟ ಕುಸಿಯುತ್ತಿತ್ತು, ಅಷ್ಟೆ ಅಲ್ಲ ಸುತ್ತಲು ಸುತ್ತಿತ್ತಿದ್ದ ಹಡಗು ಸಣ್ಣದೋಣಿಗಳು ಆ ಕಡೆಗೆ ಸೆಳೆಯುತ್ತಿದ್ದು, ಅವರ ಪ್ರಯತ್ನವೆಲ್ಲ ವ್ಯರ್ಥವಾಗುವಂತೆ ಹಲವಾರು ದೋಣಿಗಳು ಸಹ ನೀರಿನ ಸೆಳೆತಕ್ಕೆ ಸಿಕ್ಕಿ ನಿರ್ಮಾಣವಾಗಿದ್ದ ಆ ಆಳ ದೊಗರಿನೊಳಗೆ ಕಣ್ಮರೆಯಾದವು.

ಈಗ ಎಲ್ಲರೂ ದೇವರನ್ನು ನೆನೆಯುತ್ತಿದ್ದರು, ಆ ಮಹಾರಂದ್ರ ತಾನಾಗೆ ಮುಚ್ಚಿಕೊಳ್ಳಬೇಕೆ ವಿನಃ ಮನುಷ್ಯ ಪ್ರಯತ್ನಕ್ಕೆ ಹೊರತಾಗಿದ್ದು, ಎಲ್ಲರನ್ನೂ ಈಗ ಕಾಡುತ್ತಿದ್ದ ಪ್ರಶ್ನೆ ಎಂದರೆ ನೀರೆಲ್ಲ ಮಾಯವಾದರೆ ಮುಂದಿನ ಗತಿ ಏನು. ಎಲ್ಲರ ಯೋಚನೆಯನ್ನು ಮೀರಿ, ಐದನೆ ದಿನಕ್ಕೆ ಅ ಮಹಾರಂದ್ರ ಸಮುದ್ರದಲ್ಲಿ ಕೊಚ್ಚಿಬರುತ್ತಿರುವ ಮಣ್ಣು ಕಲ್ಲುಗಳಿಂದ ಮುಚ್ಚಿಕೊಳ್ಳುತ್ತಿತ್ತು. ಸುಮಾರು ಹತ್ತು ದಿನಗಳವರೆಗೂ ನಡೆದ ಅ ಮಹಾ ವರುಣ ಯಜ್ಞದಲ್ಲಿ , ನೀರು ನುಗ್ಗುವುದು ನಿಂತಿತು ಎಂದು ಎಲ್ಲರು ಅಂದುಕೊಳ್ಳುವ ಹೊತ್ತಿಗೆ, ಸಮುದ್ರದ ನೀರು ಬಹುತೇಕ ಬಸಿದು ಹೋಗಿತ್ತು. ಎಲ್ಲರೂ ಅಂದುಕೊಳ್ಳುವಂತೆ, ಅದು ಈಗ ಕೇವಲ ಚೀನಕ್ಕೆ ಸಂಬಂದಿಸಿದ ವಿಷಯವಾಗಿರಲಿಲ್ಲ, ಸಮುದ್ರ ಒಂದಕೊಂದು ಬೆಸಿದಿದ್ದ ಪರಿಣಾಮ, ಸಪ್ತಸಾಗರ ಎಂದು ನಾವು ಭಾವಿಸುವ ಎಲ್ಲ ಸಮುದ್ರಗಳ ನೀರು ಬಹುತೇಕ ಖಾಲಿಯಾಗಿ ಹೋಗಿತ್ತು, ಎಲ್ಲ ದೇಶಗಳಲ್ಲಿ ಸಮುದ್ರದ ದಡ  ಹತ್ತರಿಂದ ನೂರಾರು ಕಿ.ಮೀ   ವರೆಗೂ ಹಿಂದಕ್ಕೆ ಸರಿದಿತ್ತು. 

ಕೆಲವು ಆಶ್ಚರ್ಯಗಳು ಕಾದಿದ್ದವು, ಈಗ ಶ್ರೀಲಂಕ ನೀರಿನಿಂದ ಸುತ್ತುವರೆದಿರಲಿಲ್ಲ, ಭಾರತದಿಂದ ಶ್ರೀಲಂಕಾಗೆ ನೆಲದ ಮೇಲೆ ನಡೆದುಹೋಗಬಹುದಿತ್ತು, ಭಾರತದ ಸುತ್ತಲಿನ ಹಲವು ದ್ವೀಪಗಳಿಗೆ ಅದೇ ಗತಿ. ಭಾರತವಷ್ಟೆ ಅಲ್ಲದೆ, ಪ್ರಪಂಚದ ಎಲ್ಲ ಭಾಗಗಳಲ್ಲಿ ಈ ಪರಿಸ್ಥಿತಿ ಏರ್ಪಟ್ಟಿದ್ದು, ಸಮುದ್ರ ತನ್ನ ಮೊದಲಿನ ಗಾತ್ರದಲ್ಲಿ  ಕುಸಿದು ಹೋಗಿತ್ತು, ಮೊದಲಿದ್ದ  ಪ್ರಮಾಣದ ನೀರಿನ ಅರ್ಧ ಬಾಗವು ಇರಲಿಲ್ಲ. 

ಭೂಮಿಯ ಆಳಕ್ಕೆ ಸೇರಿಹೋದ ಆ ನೀರು ಏನಾಯಿತು ಎಂದು ತಿಳಿಯಲು ಆಗಲಿಲ್ಲ. ಅದು ಭೂಮಿಯ ಅಂತರ್ಜಲದ ಮಟ್ಟವನ್ನು ಮೀರಿದ್ದಾಗಿದ್ದು, ಒಳಗೆ ಸೇರಿಹೋಗಿ, ಒಳಗಿನ ಬಿಸಿಯಿಂದ ಬಹುತೇಕ ಆವಿಯಾಗಿ , ಒಳಗೆ ಒತ್ತಡವನ್ನು ಉಂಟು ಮಾಡುತ್ತಿತ್ತು, ಪರಿಣಾಮ ಎನ್ನುವಂತೆ ಚೀನ ಹಾಗು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ಭೂಕಂಪದ ಪ್ರಮಾಣ ಮೊದಲಿಗಿಂತ ಹೆಚ್ಚಾಗಿತ್ತು
                                 *****************

ಭಗೀರಥ
  
ಕುದುರೆಯನ್ನು ಹುಡುಕುತ್ತ ಹೊರಟ ರಾಜಕುಮಾರರು ಬರದಿರಲು ರಾಜ ಸಗರ ಚಿಂತಿತನಾದ. ಕಡೆಗೊಮ್ಮೆ ತನ್ನ ಮಕ್ಕಳೆಲ್ಲ ಕಪಿಲಮುನಿಯ ಕೋಪಕ್ಕೆ ಬಲಿಯಾದ ವಿಷಯ ತಿಳಿಯಿತು. ತನ್ನ ಮೊಮ್ಮಗ ಅಂಶುಮಾನನನ್ನು ಕಪಿಲ ಮುನಿಯ ಬಳಿಗೆ ಕಳಿಸಿದ. ಅಂಶುಮಾನನು ನಡೆದ ವಿಷಯವನ್ನು ಮುನಿಯಿಂದ ತಿಳಿದು, ತನ್ನ ತಂದೆ ಚಿಕ್ಕಪ್ಪಂದಿರ ಅವಿವೇಕಕ್ಕೆ ಮರುಗುತ್ತ ಇರುವಾಗ ಕಪಿಲ ಮುನಿ ಹೇಳಿದ, ದೇವಲೋಕದ ಗಂಗೆ ಇಲ್ಲಿ ಅವತರಿಸಿ, ಅಲ್ಲಿರುವ ರಾಜಕುವರರ ಬೂದಿ ಮೂಳೆಗಳನ್ನು ತೊಳೆದರೆ ಅವರಿಗೆಲ್ಲ ಸದ್ಗತಿ ದೊರೆಯುವುದು. 

ದೇವಲೋಕದ ಗಂಗೆಯನ್ನು ಭೂಮಿಗೆ  ಕರೆಸುವರಾದರು ಯಾರು? 

ಸೂರ್ಯವಂಶದಲ್ಲಿ ತಲೆಮಾರುಗಳು ಕಳೆಯಿತು, ಸಗರನ ವಂಶಜರಾದ ದಿಲೀಪ , ಕಲ್ಮಶಪಾದರ ಕಾಲವಾಯಿತು. ಇವರ ನಂತರ ಬಂದವನೇ ಭಗೀರಥ 

*****************************

ನೀರಿಗಾಗಿ ನಭದತ್ತ 

2025 ರ ವರ್ಷ , ಆಗೆಲ್ಲ ನೀರಿನ ಕೊರತೆ ವಿಶ್ವವನ್ನು ಕಾಡುತ್ತಿತ್ತು. ನೀರಿಗಾಗಿ ದೇಶಗಳ ನಡುವೆ ಯುದ್ದಗಳು ನಡೆದವು. ಒಂದೇ ದೇಶದ ಎರಡು ರಾಜ್ಯಗಳ ನಡುವೆ ನೀರಿನ ಹಕ್ಕಿಗಾಗಿ ಹೋರಾಟ ಏರ್ಪಟಿತು. ಕರ್ನಾಟಕ ತಮಿಳಿನಾಡಿನಂತ ರಾಜ್ಯಗಳಲ್ಲಿ ಕಾವೇರಿ ನೀರಿನ ಹೋರಾಟ ಮುಗಿಲು ಮುಟ್ಟಿತ್ತು. ಜೀವನದಿ ಎಂದು ಕರೆಯಲ್ಪಡುತ್ತಿದ್ದ ಕಾವೇರಿ ಬಹುತೇಕ ಬತ್ತಿ ಹೋಗಿತ್ತು.

ನೀರಿನ ಅಭಾವದಿಂದಾಗಿ ಕಾಡು ನಶಿಸಿದಂತೆ ಅದರಲ್ಲಿನ ಪ್ರಾಣಿಗಳು ಸಾಯುತ್ತಿದ್ದವು, ಹಾಗೆ ಅತೀವ ನೀರಿನ ಕೊರತೆಯಿಂದ ಅಹಾರದ ಸಮಸ್ಯೆ ತಲೆದೋರಿತು. ಹಸಿವು ನೀರಡಿಕೆಯಿಂದ  ಹಲವು ದೇಶಗಳಲ್ಲಿ ಜನರ ಸಾವಿನ ಪ್ರಮಾಣ ಜಾಸ್ತಿಯಾಯಿತು. 
ಕಾಡಿನ ಪ್ರಾಣಿಗಳು ಬಹುತೇಕ ನಾಶವಾದವು.

ಕುಡಿಯುವ ನೀರಿನ ಬೇಡಿಕೆ ಜಾಸ್ತಿಯಾದಂತೆ,  ನೀರನ್ನು ಕೃತಕವಾಗಿ ನಿರ್ಮಿಸುವ ಪ್ರಯತ್ನಗಳೆಲ್ಲ ನಡೆದವು. ಆಗ ವಿಜ್ಞಾನಿಗಳ ಕಣ್ಣು ಭೂಮಿಯನ್ನು ದಾಟಿ ಅಂತರೀಕ್ಷದತ್ತ ನೆಟ್ಟಿತ್ತು. ಅವರಿಗೆ ಆಕರ್ಷಕವಾಗಿ ಕಾಣುತ್ತ ಇದ್ದದ್ದು, 2011 ರಲ್ಲಿ ನಾಸದ ಕಣ್ಣಿಗೆ ಬಿದ್ದಿದ್ದ  ಕ್ವಾಸರ್ ರೀತಿಯ ನೀರಿನ ಸಂಗ್ರಹ . ಕಪ್ಪುರಂದ್ರವನ್ನು ಸುತ್ತುವರೆದಿದ್ದ ಅಲ್ಲಿಯ ನೀರಿನ ಪ್ರಮಾಣ ಭೂಮಂಡಲದ ನೀರಿನ 140 ಮಿಲಿಯನ್ ಪಟ್ಟು ಹೆಚ್ಚಿನದಾಗಿತ್ತು. ಆದರೆ ಅದು ಇದ್ದಿದ್ದು  12 ಮಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಲ್ಲಿ. ಅಲ್ಲಿಯ ನೀರು ತರುವುದು ಸಾದ್ಯವಿರಲಿಲ್ಲ. 

ಅಂತಹ ಸಮಯದಲ್ಲಿ ಭಾರತದ ವಿಜ್ಞಾನಿಯೊಬ್ಬ ವಿಚಿತ್ರವೊಂದನ್ನು ಗಮನಿಸಿದನು, ನಮ್ಮ ಅಕಾಶಗಂಗೆಯಲ್ಲಿ ಅಲ್ಲಲ್ಲಿ ನೀರಿನ ಹನಿಗಳು ಒಂದಡೆ ಸೇರಿ, ಘನೀಭೂತಗೊಂಡು ವಿವಿದ ಆಕಾರಗಳಲ್ಲಿ  ಸುತ್ತುತ್ತ ಇದ್ದವು, ಅವುಗಳು ಸಾಮಾನ್ಯ ಅಕಾಶಕಾಯಗಳಂತೆ ಸೂರ್ಯನನ್ನು ಸುತ್ತುಬರುತ್ತಿದ್ದು, ಕೆಲವೊಮ್ಮೆ ತಮ್ಮ ಪಥವನ್ನು ಬದಲಿಸುತ್ತ ಇದ್ದವು. ಅವುಗಳು ವಿಜ್ಞಾನಿಗಳ ಕಣ್ಣಿಗೆ ಬಿದ್ದರು ಸಹ ಅವುಗಳನ್ನು ಯಾವುದೋ ಧೂಮಕೇತುಗಳೊ ಅಥವ ಮತ್ಯಾವುದೋ ಉಲ್ಕೆಗಳ ರೀತಿಯ ಕಲ್ಲುಗಳೊ ಎಂದು ನಿರ್ಲಕ್ಷಿಸುವ ಸಾದ್ಯತೆ ಇತ್ತು. 

ಅಂತಹ ಅಪಾರ ನೀರಿನ ಸಂಗ್ರಹ ವ್ಯರ್ಥವಾಗಿ ಅಕಾಶದಲ್ಲಿ ಸುತ್ತುವ ಬದಲು ಭೂಮಿಗೆ ಬಂದರೆ ಇಲ್ಲಿಯ ನೀರಿನ ಸಮಸ್ಯೆ ಬಗೆಹರಿದು ಇಲ್ಲಿ ಕಾಡುತ್ತಿರುವ ಮನುಕುಲವೇ ಅಳಿಸಹೋಗಬಹುದಾದ ಸಂಭವನೀಯತೆಯಿಂದ ಹೊರಬರಬಹುದೆಂದು ವಿಜ್ಞಾನಿಗಳ ನಿರೀಕ್ಷೆ.  ಆದರೆ ಎಲೋ ದೂರ ಗಗನದಲ್ಲಿ ಸುತ್ತುತ್ತಿರುವ ನೀರಿನ ಸಂಗ್ರಹ ಭೂಮಿಗೆ ತರುವದಾದರು ಹೇಗೆ, ಅಲ್ಲಿಯ ನೀರಿನ ಸಂಗ್ರಹ ಭೂಮಿಯನ್ನು ತಲುಪುವ ಬಗೆ ಹೇಗೆ? ಅಲ್ಲಿಂದ ಮೋಟರ್ ಹಾಕಿ ಭೂಮಿಗೆ ನೀರನ್ನು ಎಳೆಯುವದಂತು ಸಾದ್ಯವಿರಲಿಲ್ಲ. 

ಅಂತಹ ಅಪತ್ಕಾಲದಲ್ಲಿ  ಅಂತರೀಕ್ಷದಲ್ಲಿನ ನೀರಿನ ಸಂಗ್ರಹದ ಬಗ್ಗೆ ತಲೆ ಕೆಡಸಿಕೊಂಡು ಅತ್ಯಂತ ಆಸಕ್ತಿಯಿಂದ ನಾಸದಲ್ಲಿ ಕೆಲಸ ಮಾಡುತ್ತಿದ್ದ ತಂಡದ ನಾಯಕ , ಭಾರತೀಯ ಮೂಲದ ಯುವ ವಿಜ್ಞಾನಿಯ ಹೆಸರು  ಭಗೀರಥ ಸೂರ್ಯವಂಶಿ.

                                                     **********

ಭಗೀರಥ ಪ್ರಯತ್ನ ......


ಸೂರ್ಯವಂಶದ ರಾಜ , ಸಗರ ಚಕ್ರವರ್ತಿಯ ಮರಿಮಗನ ಮಗ ಭಗೀರಥ ಸುಲುಭಕ್ಕೆ ಸೋಲುಪ್ಪುವನಾಗರಿಲಿಲ್ಲ. ಗಂಗೆಯನ್ನು ಕುರಿತು ತಪ್ಪಸ್ಸು ಪ್ರಾರಂಭಿಸಿದ. ಕಡೆಗೊಮ್ಮೆ ಗಂಗೆ ಭಗೀರಥನ ಪ್ರಾರ್ಥನೆಗೆ ಸುಪ್ರೀತಳಾದಳು, 
ಆದರೆ ಒಂದು ತೊಂದರೆ ಎದುರಾಯಿತು 
ಆಕೆ ಹೇಳಿದಳು
’ನಾನು ನಿನ್ನ ಮಾತಿನಂತೆ ದೇವಲೋಕದಿಂದ ಭೂಮಿಗೆ ಬರಬಲ್ಲೆ, ನಿನ್ನ ಪೂರ್ವಜರ ಪಾಪವನ್ನು ತೊಳೆಯಬಲ್ಲೆ.  ಆದರೆ ದೇವಲೋಕದಿಂದ ಭೂಮಿಯ ಮೇಲೆ ಧುಮುಕಿದರೆ ಆ ವೇಗವನ್ನು ಭೂಮಿ ತಡೆಯಲಾರಳು, ಅದಕ್ಕೆ ಇರುವುದು ಒಂದೇ ಉಪಾಯ, ಪರಮೇಶ್ವರನ್ನು ನನ್ನ ವೇಗವನ್ನು ತಡೆಯ ಬಲ್ಲನಾದರೆ, ಆಗ ಸರಿ ’  

ಗಂಗೆಗೆ ಮನದೊಳಗೆ ಎಂತದೋ ಆಸೆ , ಈ ಸಂದರ್ಭ ಉಪಯೋಗಿಸಿ ಶಿವನ ತಲೆಯ ಮೇಲೆ ಏರಬಹುದೆಂದು. 
ಭಗೀರಥ ಗಂಗೆಯ ಮಾತಿಗೆ ಒಪ್ಪಿದ.

ಭಗೀರಥ ಪರಮೇಶ್ವರನನ್ನು ಒಲಿಸಲು ತಪಸ್ಸು ಪ್ರಾರಂಭಿಸಿದ. 

ನೂರಾರು ವರ್ಷಗಳ ಅಖಂಡ ತಪಸ್ಸು ಪರಶಿವ ಒಲಿದ, ಭಗೀರಥನಿಗೆ ಸಹಾಯ ಮಾಡಲು ಒಪ್ಪಿದ. 

ಮತ್ತೇನು ? ದೇವಗಂಗೆಯನ್ನು ಭೂಮಿಗೆ ಇಳಿಸುವ ಕಾರ್ಯಕ್ಕೆ ಎಲ್ಲ ವೇದಿಕೆಗಳು ಸಿದ್ದವಾಯಿತು. 

                                       ********************
ನಭದಲ್ಲಿ ವರುಣ


ಯುವ ವಿಜ್ಞಾನಿ ಭಗೀರಥ ತನ್ನ ವೃತ್ತಿಯನ್ನು ತಪಸ್ಸಿನಂತೆ ಸ್ವೀಕರಿಸಿದ್ದ, ಅವನಿಗೆ ಸದಾ ಅಂತರಿಕ್ಷದಲ್ಲಿನ ನೀರಿನ ಸಂಗ್ರಹದ್ದೆ ಜಪ. ಹೇಗಾದರು ಸರಿ ಅಲ್ಲಿರುನ ನೀರಿನ ಸಂಗ್ರಹವನ್ನು ಭೂಮಿಯತ್ತ ತರಬೇಕೆನ್ನುವುದು ಅವನ ಪ್ರಯತ್ನ. ಆದರೆ ಕಾರ್ಯಸಾಧ್ಯತೆಯ ಬಗ್ಗೆ ಏನೆಲ್ಲ ತೊಡಕುಗಳು. 
ಹೀಗಿರಲು ಒಮ್ಮೆ ಅನಿರೀಕ್ಷಿತ ಎನ್ನುವಂತೆ ಒಂದು ಸಂಚಲನ ಅವನ ಗಮನ ಸೆಳೆದಿತ್ತು . ನೀರಿನ ಹನಿಗಳು ಘನೀಭೂತಗೊಂಡ ಉಪಗ್ರಹ ರೂಪದ ಆಕಾರವೊಂದು ಸೂರ್ಯನನ್ನು ಸುತ್ತುವರೆದು ಭೂಮಿಯ ದಿಕ್ಕಿಗೆ ಬರುತ್ತಿತ್ತು. ಅದರ ವೇಗ ಭೂಮಿ ಸೂರ್ಯನನ್ನು ಸುತ್ತುವ ವೇಗಕ್ಕಿಂತ ನಾಲಕ್ಕರಷ್ಟಿದ್ದು, ಅದರ ಪಥ ಭೂಮಿಯ ಪಥದ ಸಮೀಪವೆ ಇತ್ತು. ಎಲ್ಲ ಲೆಕ್ಕಚಾರಗಳು ಸರಿ ಹೋದರೆ ಅದು ಭೂಮಿಯನ್ನು ಅತಿ ಸಮೀಪದಲ್ಲಿ ಅಂದರೆ ಹತ್ತು ಸಾವಿರ ಕಿ.ಮೀ ನಷ್ಟು ಅಂತರದಲ್ಲಿ ಹಾದು ಹೋಗುತ್ತಿತ್ತು. ಸೂರ್ಯಮಂಡಲವನ್ನು ಆ ಅಕಾರ ಯಾವಾಗ ಪ್ರವೇಶಿಸಿತೊ ಅದರಲ್ಲಿದ್ದ ನೀರು ಆವಿಯ ರೂಪತಾಳಿ ಅದನ್ನು ಮೋಡದಂತೆ ಸುತ್ತುವರೆದಿದ್ದು, ಒಳಗಿನ ವಜ್ರದಂತೆ ಕಠಿಣವಾದ ನೀರಿನ ಬಂಡೆಗಳು ಆಗೊಮ್ಮೆ ಈಗೊಮ್ಮೆ ಕದಲುತ್ತ ಸೂರ್ಯನನ್ನು ಸುತ್ತುತ್ತಿದ್ದವು. ಭಗೀರಥನ ಗುಂಪು ಆ ಉಪಗ್ರಹಕ್ಕೆ ವರುಣಗ್ರಹ ಎಂದು ಹೆಸರಿಟ್ಟರು. 

ಭಗೀರಥನ ಮನದಲ್ಲಿ ಈಗ ಒಂದು ಮಹಾ ಯೋಚನೆ ಸಿದ್ದವಾಗುತ್ತಿತ್ತು. ಹೇಗಾದರು ಸರಿ ವರುಣಗ್ರಹದ ನೂರನೆ ಒಂದು ಬಾಗದಷ್ಟು ನೀರನ್ನಾದರು ಭೂಮಿಗೆ ತರಲು ಸಾದ್ಯವಾದರು ಸಹ ಭೂಮಿ ನೀರಿನ ಮಹಾ ಬರದಿಂದ ಹೊರಬಲ್ಲದಾಗಿತ್ತು. ಅವನ ತಂಡ ಒಂದು ಯೋಜನೆ ಸಿದ್ದಪಡಿಸಿತ್ತು, ಅದರಂತೆ ಆ ವರುಣಗ್ರಹ ಭೂಮಿಗೆ ಅತಿಸಮೀಪ ಬಂದಾಗ ಅದರ ಮೇಲೆ ಭೂಮಿಯ ವಿರುದ್ದ ದಿಕ್ಕಿನಿಂದ ರಾಕೆಟ್ ಗಳನ್ನು ಅಣುತಲೆಗಳನ್ನು ಸಿಡಿಸುವುದು. ಆ ಗ್ರಹವನ್ನು ಭೂಮಿಯ ಕಡೆ ತಳ್ಳಲು ಪ್ರಯುತ್ನಿಸುವುದು. ಭೂಮಿಗೆ ಅತೀ ಸಮೀಪ ಆ ಗ್ರಹ ಬಂದಾಗ ಅದನ್ನು ಪುನಃ ಸಿಡಿಸಿ ಚಿದ್ರಗೊಳಿಸುವುದು. ಒಮ್ಮೆ ಅದು ಭೂಮಿಯ ವಾತವರಣ ತಲುಪಿತೆಂದರೆ ನಂತರ ಎಲ್ಲವು ಸಲೀಸು, ಭೂಮಿಯ ವಾತವರಣಕ್ಕೆ ಸಿಕ್ಕಿ ಆ ನೀರ್ಗಲ್ಲ ಚೂರುಗಳು ಕರಗಿ ನೀರಿನ ರೂಪ ತಾಳುತ್ತವೆ , ಅದು ಅವರ ಯೋಚನೆ.  

 ಇಂತಹ ಒಂದು ಯೋಚನೆ ನಾಸದ ಮುಂದಿಟ್ಟಾಗ ಕೆಲವರು ಸ್ವಾಗತಿಸಿದರಾದರು ಬಹುತೇಕ ವಿರೋದಿಸಿದರು. ಅದರ ಅಡ್ಡ ಪರಿಣಾಮಗಳ ಬಗ್ಗೆ ಯಾರಿಗೂ ಖಚಿತತೆ ಇರಲಿಲ್ಲ. ಅದು ಬರಿ ನೀರ್ಗಲ್ಲುಗಳೋ ಅಥವ ಒಳಬಾಗದಲ್ಲಿ ಶಿಲೆಗಳಿದ್ದರು ಅದು ಭೂಮಿಗೆ ಅಪ್ಪಳಿಸಿದರೆ, ಅದರ ಪರಿಣಾಮ ಏನು ಎನ್ನುವುದು ಯಾರ ಅರಿವಿನಲ್ಲಿಯೂ ಇರಲಿಲ್ಲ. ಆದರೆ ಕಡೆಗೊಮ್ಮೆ ಚರ್ಚೆನಡೆಯಿತು. 
ನೀರಿನ ಕೊರತೆಯಿಂದ ಇಂದಲ್ಲ ನಾಳೆ ಭೂಮಿಯಲ್ಲಿನ ಎಲ್ಲ ಜೀವಿಗಳು ನಾಶವಾಗುವುದು ಖಚಿತವಾಗಿದ್ದು, ಭೂಮಿ ಮತ್ತೊಂದು ಮಂಗಳಗ್ರಹದಂತೆ ಆಗುವ ಸಂಭವನೀಯತೆ ಅತಿ ಹತ್ತಿರದಲ್ಲಿಯೆ ಇತ್ತು. ಹಾಗಿರಲು ಈಗ ಸ್ವಲ್ಪ ಅಪಾಯವನ್ನು ಎದುರಿಸಿದರು ಸಹಿತ ಒಮ್ಮೆ ಪ್ರಯೋಗದಲ್ಲಿ ಯಶಸ್ವಿಯಾದರೆ , ಭೂಮಿಯಲ್ಲಿ ಶಾಶ್ವತ ನೀರಿನ ಸಮಸ್ಯೆ ಪರಿಹಾರವಾಗುತ್ತಿತ್ತು. 

ಜಗತ್ತಿನ ಬಲಾಡ್ಯದೇಶಗಳೆಲ್ಲ ಕುಳಿತು ಚರ್ಚಿಸಿದವು. ಇಂತಹ ಪ್ರಯೋಗಕ್ಕೆ ತಲೆ ಒಡ್ಡುವುದು ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಎಲ್ಲ ದೇಶಗಳು ಬಂದವು. ವಿಜ್ಞಾನಿಗಳೆಲ್ಲ ಕುಳಿತು ತಾಂತ್ರಿಕ ವಿಷಯಗಳನ್ನೆ ಚರ್ಚಿಸಿದರು. ಭೂಮಿಗೆ ಅತೀ ಕಡಿಮೆ ಅಪಾಯವಾಗುವ ರೀತಿಯಲ್ಲಿ ವರುಣಗ್ರಹದ ನೀರನ್ನು ಭೂಮಿಗೆ ಇಳಿಸಲು ಮಹಾ ಯೋಜನೆ ಒಂದು ನಾಸದ ಯುವ ವಿಜ್ಞಾನಿ ಭಗೀರಥ ಸೂರ್ಯವಂಶಿಯ ನೇತೃತ್ವದಲ್ಲಿ ಸಿದ್ದವಾಯಿತು 


                                ******************  

ತ್ರಿಪಥಗಾಮಿನಿ ಗಂಗೆ...


ಪರಮೇಶ್ವರ , ತನ್ನ ತಲೆಯ ಕೂದಲನ್ನು ಹರಡಿ ಸ್ಥಿರವಾಗಿ ನಿಂತ. ದೇವಲೋಕದಿಂದ ಗಂಗೆ ತನ್ನ ಅಬ್ಬರ, ರಬಸದೊಡನೆ ಭೂಮಿಗೆ ದುಮುಕಿದಳು. ಅವಳಿಗೆ ಒಂದು ಅನುಮಾನ ’ಈ ಪರಶಿವ ತನ್ನ ವೇಗವನ್ನು ತಡೆಯುವನೆ ?" 

ಪರಶಿವನಿಗೆ ಗಂಗೆಯ ಅಂತರಂಗ ತಿಳಿಯಿತು, ಅವನಲ್ಲಿ ಒಂದು ನಸುನಗು, ದುಮುಕುತ್ತಿದ್ದ ಗಂಗೆ, ಶಿವನ ಜಡೆಯಲ್ಲಿ ಸಿಲುಕಿ ಸ್ಥಭ್ದಳಾದಳು, ಆಕೆ ಯಾವ ಪ್ರಯತ್ನಮಾಡಿದರು, ಅಲ್ಲಿಂದ ಹೊರಬರಲಾಗಲಿಲ್ಲ. 

ಸಗರನಿಗೆ ಮತ್ತೆ ಆತಂಕ. 
ಪರಶಿವನನ್ನು ಪ್ರಾರ್ಥಿಸಿದ ’ದೇವ ಕಾಪಾಡು, ಗಂಗೆಯನ್ನು ಹೊರಬಿಡು’ ಎಂದು. 

ಗಂಗೆಗೂ ಪಶ್ಚಾತಾಪವೆನಿಸಿತ್ತು, ಪರಶಿವನ ಶಕ್ತಿಯನ್ನು ಅನುಮಾನಿಸಿದ್ದಕ್ಕೆ. 
ಪರಶಿವ ಮತ್ತೆ ಆಕೆಯನ್ನು ಹೊರಹೋಗಲು ಬಿಟ್ಟ. 

ನಂತರ ಎಲ್ಲವೂ ಸುಖಾಂತ. 
ಭಗೀರಥ ಮುಂದೆ ನಡೆದರೆ ಅವನ ಹಿಂದೆ ದೇವಗಂಗೆ ನಡೆದಳು, ಪಾತಳವನ್ನು ಸೇರಿ ತ್ರಿಪಥಗಾಮಿನಿ ಎನಿಸಿದಳು, ಕಪಿಲಮುನಿಯ ಆಶ್ರಮವನ್ನು ಸೇರಿ ಅಲ್ಲಿದ್ದ ಸಗರಚಕ್ರವರ್ತಿಯ ಅರವತ್ತು ಸಾವಿರಮಕ್ಕಳ ಬೂದಿಮೂಳೆಗಳನ್ನೆಲ್ಲ ತೊಳೆದು ಅವರ ಪಾಪ ಹರಿಸಿದಳು.
ಭಗೀರಥ ಧನ್ಯನಾದ. ಅವನ ಹೆಸರು ಪ್ರಸಿದ್ಧವಾಯಿತು. ಅವನ ಅವಿರತ ಪ್ರಯತ್ನವನ್ನು ಮುಂದೆ ’ಭಗೀರಥ ಪ್ರಯತ್ನ’ ಎಂದೆ ಕರೆಯಲಾಯಿತು. 

                                          ******************

ಇಳಿದು ಬಾ ತಾಯಿ ಇಳಿದು ಬಾ.....


ಅಂದು ಸರಿಯಾಗಿ ಬೆಳಗಿನ 6:00 ಘಂಟೆ ಡಿಸೆಂಬರ್ 21 2026 ನೇ ವರ್ಷ 

ನಾಸದಲ್ಲಿ ಕ್ಷಣಗಣನೆ ನಡೆದಿತ್ತು, ಭೂಮಿಯಿಂದ ಹಾರಿಸಲ್ಪಟ್ಟ ಅಣುತಲೆಗಳನ್ನು ಹೊತ್ತ ರಾಕೆಟಗಳು ಭೂಮಿಯ ಸುತ್ತ ಹಾರಾಡುತ್ತಿರುವ ಉಪಗ್ರಹಗಳ ನೆರವಿನಿಂದ ನಿಯಂತ್ರಿಸಲ್ಪಡುತ್ತಿತ್ತು. ಅವರ ಎಲ್ಲ ಲೆಕ್ಕಚಾರಗಳು ಸರಿಯಾಗಿಯೆ ನಡೆದಿತ್ತು. ಕಡೆಗೊಮ್ಮೆ ಆ ಸುಂದರ ವರುಣಗ್ರಹದ ಮೇಲೆ ಭೂಮಿಯಿಂದ ಹೊರಟಿದ್ದ ರಾಕೆಟಗಳು ತಮ್ಮ ಸುತ್ತನ್ನು ಮುಗಿಸಿ, ಆಕ್ರಮಣನಡೆಸಿದ್ದವು, ಅಪಾರಶಕ್ತಿಯ ಅಣುತಲೆಗಳು ಅಂತರೀಕ್ಷದ ಆ ವರುಣಗ್ರಹದ ಮೇಲೆ ಒಮ್ಮೆಲೆ ಸಿಡಿದಾಗ ಅಲ್ಲಿದ್ದ ನೀರಬಂಡೆಗಳು ಒಂದೇ ಕ್ಷಣದಲ್ಲಿ ಚೂರು ಚೂರಾಗಿ ಅಲ್ಲಿಂದ  ಮಹಾ ಸಮುದ್ರಮಥನದಂತೆ ನೀರಿನ ಅಲೆಗಳು, ನೀರಿನ ಹನಿಗಳು ಯಾರು ಇರದ ಅಂತರಿಕ್ಷದಲ್ಲಿ ಚಿಮ್ಮಿದವು, ಸುತ್ತಲು ಲಕ್ಷ ಲಕ್ಷ ಕಾಮನಬಿಲ್ಲನ್ನು ಸೃಷ್ಟಿಸಿದವು, ನೀರಿನ ಕಲ್ಲಿನ ಚೂರುಗಳ ಮೇಲೆ ಹನಿಗಳ ಮೇಲೆ ಬಿದ್ದ ಬಿಸಿಲಿನ ಕಿರಣಗಳು ಆ ವರುಣಗ್ರಹ ವಜ್ರದಗ್ರಹದಂತೆ ಹೊಳೆಯುವಂತೆ ಮಾಡಿದವು. 

ಪ್ರಯತ್ನ ಸಾರ್ಥಕವಾಗಿತ್ತು,   ವರುಣಗ್ರಹ ಸಿಡಿದು , ಅದರ ಒಂದು ಮಹಾಭಾಗ  ಭೂಮಿಯತ್ತ ಹೊರಟಿತ್ತು. ಅದರಲ್ಲಿದ್ದ ಆಪಾರ ಪ್ರಮಾಣದ ನೀರ್ಭಂಡೆಗಳು ಸಿಡಿತದಿಂದ ಉಂಟಾದ ಬಿಸಿಗೆ ಕರಗುತ್ತಿದ್ದವು. ಹಾಗೆ  ಆ ವರುಣಗ್ರಹವು ಭೂಮಿಯನ್ನು ಅಪ್ಪಳಿಸಿದಲ್ಲಿ ಭೂಮಿಗೆ ಅಪಾಯವಿತ್ತು. ಈಗ ವಿಜ್ಞಾನಿಗಳು ಎರಡನೆ ಹಂತದ ಕಾರ್ಯಚರಣೆಗೆ ಸಿದ್ದರಾಗಿದ್ದರು, ಭೂಮಿಗೆ ಅತಿ ಸಮೀಪದಲ್ಲಿ ಅಪ್ಪಳಿಸುವಂತೆ ಗ್ರಹ ಮುನ್ನುಗುತ್ತಿತ್ತು ಈಗ ಮತ್ತೊಮ್ಮೆ ಅದರ ಮೇಲೆ ಆಕ್ರಮಣ ನಡೆಸಲಾಯಿತು, ಈಗ ಆ ವರುಣಗ್ರಹದ ಬಾಗ ಮತ್ತೊಮ್ಮೆ ಚೂರು ಚೂರಾಗಿತ್ತು. ಭೂಮಿಯತ್ತ ಅದರ ಬಂಡೆಗಳು, ರಾಶಿ ರಾಶಿ ನೀರಿನ ತೊರೆ, ಅಪಾರವೇಗದಲ್ಲಿ ಮುನ್ನುಗುತ್ತಿತ್ತು. ಎಲ್ಲರ ಲೆಕ್ಕಚಾರದಂತೆ ನಡೆದರೆ ಭಾರತದ ಹಿಮಾಲಯದ ಶೃಂಗದ ಮೇಲೆ ಅಂತಹ ನೀರಬಂಡೆಗಳ, ನೀರಿನ ರಾಶಿ ಸುರಿಯುತ್ತಿತ್ತು. ಮಾನಸಸರೋವರ, ಕೈಲಾಸಪರ್ವತ ಎಲ್ಲವೂ ದೇವಗಂಗೆಯ ಮಹಾ ಪ್ರತಾಪಕ್ಕೆ , ಸಲಿಲ ದಾರೆಗೆ, ಜಲರಾಶಿಯ ಅಬ್ಬರಕ್ಕೆ ಸಿದ್ದವಾಗಿ ನಿಂತಿತ್ತು. 

ಕಡೆಯ ಕ್ಷಣದ ಗಣನೆ ಎಲ್ಲರ ಲೆಕ್ಕಚಾರ ಸ್ವಲ್ಪವೂ ತಪ್ಪಿಲ್ಲ ಅನ್ನುವಂತೆ, ಅನಂತ ಜಲರಾಶಿ ಕೈಲಾಸಮಾನಸ ಪರ್ವತವನ್ನು ಅಪ್ಪಳಿಸಿತು, ಹಾಗೆ ಸುತ್ತಲಿನ ಎಲ್ಲ ಹಿಮಾಲಯ ಶೃಂಗಗಳು ನೀರಿನಿಂದ ಸ್ನಾನಮಾಡಲು ನಿಂತಿರುವಂತೆ ತೋರುತ್ತ ಜಲರಾಶಿಗೆ ಮೈಒಡ್ಡಿ ನಿಂತವು.  ನೋಡಲು ಅದೊಂದು ದೈವಿಕ ದೃಷ್ಯ ಎನ್ನುವಂತೆ ಕಾಣುತ್ತ, ಅಕಾಶದಿಂದ ದೇವಗಂಗೆ ಕೆಳಗಿಳಿದ ಕತೆಯನ್ನು ನೆನಪಿಸುತ್ತ , ಆ ಅಗಾದ ಜಲರಾಶಿ ಹಿಮಾಲಯದ ಪ್ರಪಾತವನ್ನೆಲ್ಲ ತುಂಬುತ್ತ ಒಂದೆರಡು ಕ್ಷಣಕಾಲ ಕಾದು ನಂತರ ಕೆಳಗಿನ ಕಣಿವೆಗಳತ್ತ ನುಗ್ಗುತ್ತಿತ್ತು. 

ಅಂತಹ ಅಸದೃಷ್ಯ ಸಂಭವನೀಯತೆಗೆ ಯಾವುದೇ ಹೋಲಿಕೆ ಇಲ್ಲ ಎನ್ನುವಂತೆ ದೇವಗಂಗೆ ಅಂತರಿಕ್ಷದಿಂದ ಭೂಮಿಯನ್ನು ಪ್ರವೇಶಿಸಿದಳು. ಹಿಮಾಲಯದಿಂದ ಉದ್ಭವವಾಗುವ ಗಂಗೆ ಯಮುನಾ ಅಲ್ಲದೆ ಚೀನದತ್ತ ಹರಿಯುವ ನದಿಗಳು, ನೇಪಾಳ ಪಾಕಿಸ್ತಾನ ಎಲ್ಲವೂ ಜಲಮಯವಾಗಿಹೋದವು. ನೋಡು ನೋಡುತ್ತಲೆ ನದಿಯ ತನ್ನ ಎಲ್ಲ ಎಲ್ಲೆಗಳನ್ನು ಮೀರಿ, ಹರಿಯುತ್ತ, ತನ್ನ ಎರಡು ದಡದಲ್ಲಿರುವ ಮಾನವ ನಿರ್ಮಿತ ರಚನೆಗಳನ್ನೆಲ್ಲ ಕೆಡಿವಿ  ಸಮುದ್ರದತ್ತ ಓಡುತ್ತಿತ್ತು. 

ಇಂತಹ ಕುಂಭದ್ರೋಣ ಜಲವೃಷ್ಟಿ ಕೇವಲ ಹಿಮಾಲಯದ ಮೇಲೆ ಮಾತ್ರವಾಗದೆ ಸಿಡಿತದಿಂದ ಹಾರಿದ ಜಲಬಂಡೆಗಳು ಭೂಮಿಯ ವಾತವರಣಕ್ಕೆ ಪ್ರವೇಶವಾಗುವಾಗಲೆ ಕರಗುತ್ತ, ಬಿಸಿನೀರ ದಾರೆಯಾಗುತ್ತ, ಮತ್ತೆ ತಣ್ಣಗಾಗುತ್ತ ಭೂಮಿಯನ್ನು ಸೇರಿದವು, ಸಂಪೂರ್ಣ ಭೂಮಂಡಲದ ಅಕಾಶವೆ ಜಲರಾಶಿಯಿಂದ ತುಂಬಿ, ಭೂಗ್ರಹ ಜಲಾವೃತ್ತವಾಗಿರುವಂತೆ ಕಾಣಿಸುತ್ತ ಇತ್ತು,

ಮೊದಲೆ ಎಚ್ಚರಿಕೆ ತೆಗೆದುಕೊಂಡ ಕಾರಣ , ಜನರು ಸುರಕ್ಷಿತ ತಾಣಗಳನ್ನು ಸೇರಿದ್ದಾರಾದರು ಇಂತಹ ಜಲಪ್ರಳಯ ಹಲವೂ ದೇಶಗಳಿಂದ ನೂರಾರು ಜನರನ್ನು ಆಹುತಿ ಪಡೆದಿತ್ತು. 

ನಿರೀಕ್ಷಿಸಿದಂತೆ ಒಂದೇ ದಿನದಲ್ಲಿ ನಿಲ್ಲುವ ಜಲದಾಳಿ ಇದಾಗಿರಲಿಲ್ಲ, ವರುಣಗ್ರಹ ಛಿದ್ರವಾಗಿ ತನ್ನ ಆಕಾರವನ್ನು ಕಳೆದುಕೊಂಡು ಅಂತರಿಕ್ಷದಲ್ಲಿ ಮುಂದುವರೆಯಿತಾದರು, ಆ ಗ್ರಹದಿಂದ ಕಳಚಿಕೊಂಡ ಅಪಾರಪ್ರಮಾಣಾದ ಜಲರಾಶಿ ನಭವನ್ನೆ ಸುತ್ತುಹಾಕುತ್ತ ಭೂಮಿಯ ಸೆಳೆತಕ್ಕೆ ಸಿಕ್ಕು, ಗುರುತ್ವದ ಆಕರ್ಷಣೆಗೆ ಒಳಗಾಗಿ , ಭೂಮಿಯ ಮೇಲೆ ಮಳೆಯಾಗಿ ಸುರಿಯುತ್ತಿತ್ತು. 

ಭೂಮಿಯಲ್ಲಿನ ಜನರಿಗೆ ಇದೊಂದು ಅಪೂರ್ವ ಅನುಭವವಾಗಿತ್ತು, ತುಣುಕುಮೋಡವು ಇಲ್ಲದೇ, ಯಾವುದೇ ಗುಡುಗು ಸಿಡಿಲುಗಳ ಅರ್ಭಟವಿಲ್ಲದೆ, ಸುರಿಯುತ್ತಿರುವ ಮಳೆ ಎಲ್ಲರಿಗೂ ಅಪೂರ್ವ ಅನುಭೂತಿಯನ್ನು ಕೊಟ್ಟಿತ್ತು. ದೊಡ್ಡ ದೊಡ್ಡ ಕಲ್ಲುಗಳು ಭೂಮಿಯನ್ನು ಪ್ರವೇಶಿಸಿದಾಗ ಉಲ್ಕೆಯಂತೆ ಮಿನುಗುತ್ತಿದ್ದವು. ಇಂತಹ ಅಪರೂಪದ ಮಳೆ ಹಲವು ದಿನಗಳ ಕಾಲ ಮುಂದುವರೆದು, ಭೂಮಿಯ ಎಲ್ಲ ಹಳ್ಳಕೊಳ್ಳಗಳು ನದಿ ತೊರೆಗಳು ತುಂಬಿ ಹರಿದು, ಜಲವೆಲ್ಲ ಸಮುದ್ರವನ್ನು ಸೇರಿ ಸಮುದ್ರದ ಮಟ್ಟ ಹೆಚ್ಚುತ್ತ ಹೋಗಿ ಮೊದಲಿದ್ದ ಮಟ್ಟಕ್ಕೆ ಬಂದು ಮುಟ್ಟುತ್ತಿತ್ತು. ಪುರಾಣಗಳಲ್ಲಿ, ಬೈಬಲ್ ಮುಂತಾದ ಮತ ಗ್ರಂಥಗಳಲ್ಲಿ ವರ್ಣಿಸಲ್ಪಟ್ಟ ಮಹಾಪ್ರಳಯದ ಮಳೆಯನ್ನು ಎಲ್ಲರೂ ನೆನೆಯುತ್ತಿದ್ದರು. 

ಎಲ್ಲವೂ ನಿರೀಕ್ಷಿಯಂತೆ ನಡೆದ ಸಂತಸದಲ್ಲಿ ಇದ್ದ ನಾಸದ ಯುವವಿಜ್ಞಾನಿ ಭಗೀರಥ ಸೂರ್ಯವಂಶಿ, ಅವನಲ್ಲಿ ಸಂತಸ ಅನ್ನುವುದು ತುಂಬಿತುಳುಕುತ್ತಿತ್ತು, ಆ ಸಂತಸ ಅವನು ಪಡೆಯಬಹುದಾದ ಎಲ್ಲಾ ಸನ್ಮಾನಗಳ ಸಂತಸವನ್ನು ಮೀರಿಸಿದ್ದಾಗಿತ್ತು. ಮನೆಯ ಟರೇಸಿನಲ್ಲಿ ಒಂಟಿಯಾಗಿ ನಿಂತು ಸುರಿಯುತ್ತಿರುವ ಮಸಲಧಾರೆಯನ್ನು ದಿಟ್ಟಿಸುತ್ತಿದ್ದ ಅವನಲ್ಲಿ ಒಂದು ಉತ್ಕರ್ಷ ತುಂಬುತ್ತಿತ್ತು, ತಾನು ಚಿಕ್ಕವಯಸಿನಲ್ಲಿ ಕೇಳಿದ್ದ ಹಾಡು ಅವನಲ್ಲಿ ಅಸ್ವಷ್ಟವಾಗಿ ಮನದಲ್ಲಿ ತುಂಬಿ ಗುನುಗುತಿತ್ತು , ಬೇಂದ್ರೆಯವರ ಕವನ ಅವನ ತುಟಿಯಲ್ಲಿ ನಲಿಯುತ್ತಿತ್ತು

ಇಳಿದು ಬಾ ತಾಯಿ ಇಳಿದು ಬಾ !
ಇಳಿದು ಬಾ ತಾಯಿ ಇಳಿದು ಬಾ !

Wednesday, August 23, 2017

ನೆನಪಿನ ಪಯಣ - ಭಾಗ 9


 (link is external)
ನೆನಪಿನ ಪಯಣ - ಭಾಗ 

ನೆನಪಿನ ಪಯಣ - ಭಾಗ 9

ಶೃಂಗೇರಿಯಲ್ಲಿ ನಾನು ಒಬ್ಬಂಟಿಯಾಗಿ ಅಲೆಯುತ್ತಿದೆ.
ಕತ್ತಲು ಕಳೆದು ಎಷ್ಟು ಹೊತ್ತಾದರು ನದಿಯ ದಡದ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿರುತ್ತಿದ್ದೆ. ಮೂರನೆ ದಿನ ನಾನು ಸಂಜೆ ಹಾಗೆ ಕುಳಿತಿರುವಾಗ ವಯೋವೃದ್ದರೊಬ್ಬರು ಪಕ್ಕದಲ್ಲಿ ಬಂದು ಕುಳಿತರು. ನನ್ನನ್ನು ಸಹಜವಾಗಿ ಎಲ್ಲಿಂದ, ಬಂದಿದ್ದು ಇತ್ಯಾದಿ ಮಾತನಾಡಿಸಿದರು. ನನಗೆ ಅವರಲ್ಲಿ ಮಾತನಾಡುವ ಯಾವ ಉತ್ಸಾಹವು ಇರಲಿಲ್ಲ.
ಕತ್ತಲಿನ ಆ ನಿಶ್ಯಬ್ದದಲ್ಲಿ ಅವರು ಅವರಿಗಷ್ಟೆ ಎನ್ನುವಂತೆ ಮಾತನಾಡಿಕೊಳ್ಳುತ್ತಲೆ ಇದ್ದರು, ನನ್ನ ಕಿವಿಗೆ ಬಿದ್ದರು ನಾನು ಪ್ರತಿಕಿಯಿಸುತ್ತಿರಲಿಲ್ಲ.
ನಡುವೆ ಅವರು ನುಡಿದರು,
ನೋಡಿ ಈ ನದಿಯ ನೀರಿನ ಹರಿವಿನ ಜುಳುಜುಳು ನಾದವನ್ನು, ನಾವು ಮನುಷ್ಯರು ಪ್ರಕೃತಿಯ ಎಲ್ಲವೂ ನಮಗಾಗಿ ಎಂದು ಭ್ರಮಿಸುತ್ತೇವೆ. ಆದರೆ ಇಲ್ಲಿ ಯಾವ ಮನುಷ್ಯ ಇಲ್ಲದಿರುವಾಗಲು. ಪ್ರಕೃತಿ ತನ್ನ ಸಂತಸವನ್ನು ವ್ಯಕ್ತಪಡಿಸುತ್ತಲೆ ಇರುತ್ತದೆ. ಯಾರು ಇಲ್ಲ ಅನ್ನುವಾಗಲು, ಕಾರ್ಗತ್ತಲಿನಲ್ಲು ನದಿ ತನ್ನ ಜುಳು ಜುಳು ಶಬ್ದವನ್ನು ಹೊರಡಿಸುತ್ತಲೆ ಇರುತ್ತದೆ, ಅದು ಬೇರೆ ಯಾರೋ ಕೇಳಲಿ ಎಂದಲ್ಲ ತನಗೆ ತಾನೆ ಕೇಳಿಸಿಕೊಳ್ಳಲು. ಯಾರು ಇರದಿರುವಾಗಲು, ನದಿ ತನ್ನ ದ್ವನಿಯನ್ನು ತಾನೆ ಕೇಳುತ್ತ ಆನಂದ ಪಡುತ್ತಲಿರುತ್ತದೆ.
ಆತ ಏನೇನೊ ಮಾತನಾಡುತ್ತಿದ್ದರು, ನನಗೆ ತಲೆಯಲ್ಲಿ ತಟ್ಟನೆ ಒಂದು ಆಲೋಚನೆ ಹೊಳೆದಿತ್ತು. ಮನುಷ್ಯನ ಮೆದುಳು ಅವನದೆ ದ್ವನಿಗೆ ವಿಶಿಷ್ಟವಾಗಿ ಪ್ರತಿಕ್ರಿಯಿಸುತ್ತದೆ.ಎಲ್ಲಿಯೋ ಓದಿದ್ದ, ಯಾವುದೋ ಪ್ರಯೋಗ ಒಂದು ನೆನಪಿಗೆ ಬಂದಿತ್ತು, ಎಳೆಮಗುವು , ಏನು ಮಾಡಿದರು ತಾನು ಅಳುನಿಲ್ಲಿಸದೆ,ಸುಸ್ತಾಗಿರುತ್ತದೆ. ಅಂತಹ ಮಗುವನ್ನು ಅಳು ನಿಲ್ಲಿಸಲು ಎಲ್ಲ ಪ್ರಯತ್ನಗಳು ವ್ಯರ್ಥವಾದಾಗ, ಡಾಕ್ಟರ್ ಒಬ್ಬ, ಯೋಚಿಸಿ ಆ ಮಗುವಿನ ಅಳುವನ್ನೆ ರೆಕಾರ್ಡ್ ಮಾಡಿ, ಮಗುವಿಗೆ ಕೇಳುವಂತೆ ಅದನ್ನು ಹಾಕಿದ. ಅಳುತ್ತಿದ್ದ ಮಗು ತಟ್ಟನೆ ತನ್ನ ಅಳು ನಿಲ್ಲಿಸಿ, ತನ್ನದೆ ದ್ವನಿ ಆಸಕ್ತಿಯಿಂದ ಕೇಳಲು ಪ್ರಾರಂಭಿಸಿತು.
ಅದಕ್ಕೆ ವೈಜಾನಿಕ ಕಾರಣವು ಇತ್ತು, ಮನುಷ್ಯನ ಮೆದುಳು ತನ್ನದೆ ದ್ವನಿಗೆ ವಿಶಿಷ್ಟವಾಗಿ ಪ್ರತಿಕ್ರಿಯಿಸುತ್ತದೆ. ತಲೆಯಲ್ಲಿ ಎಂತದೋ ಒಂದು ಮಿಂಚು ಹೊಳೆದಂತೆ ಆಗಿತ್ತು. ಯಾರ ದ್ವನಿಗೂ ಪ್ರತಿಕ್ರಿಯೆ ನೀಡದಿರುವ ಜ್ಯೋತಿ, ಒಂದು ವೇಳೆ ತನ್ನದೆ ದ್ವನಿಗೆ ಹೇಗೆ ಪ್ರತಿಕ್ರಿಯಿಸುವಳು. ಹೊಳೆಯುತ್ತಿದ್ದಂತೆ ಎದ್ದುನಿಂತೆ, ಪಕ್ಕದಲ್ಲಿದ್ದ ಮುದುಕ ನನ್ನತ್ತ ಆಶ್ಚರ್ಯದಿಂದ ಎಂಬಂತೆ ನೋಡಿದರು.
ನಿಮ್ಮಿಂದ ತುಂಬಾ ಉಪಕಾರವಾಯಿತು, ಬರುತ್ತೇನೆ , ಸ್ವಲ್ಪ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಹೊರಟೆ. ಆತನಿಗೆ ಪಾಪ ನನ್ನ ಮನಸಿನ ಸ್ಥಿತಿ ಎಷ್ಟು ಅರ್ಥವಾಯಿತೋ ಯಾರಿಗೆ ಗೊತ್ತು.
…..
ನಾನು ಪುನ ಬೆಂಗಳೂರು ಸೇರಿದವನೆ, ಬ್ಯಾಗೆಲ್ಲ ಮನೆಯಲ್ಲಿ ಎಸೆದು, ಆಸ್ಪತ್ರೆಯತ್ತ ಓಡಿದೆ. ಬಹುಷಃ ಜ್ಯೋತಿ ಅದೇ ವಾರ್ಡಿನಲ್ಲಿರಬಹುದು. ಒಳಗೆ ಹೋಗುವಾಗಲೆ ಡಾಕ್ಟರ್ ಹೊರಗೆ ಬರುತ್ತಿದ್ದರು, ನನ್ನನ್ನು ನೋಡಿ , ಇವನು ಇಷ್ಟುದಿನ ಎಲ್ಲಿ ಮಾಯವಾದ ಅಂದುಕೊಂಡರೋ ಏನೊ, ತಿರಸ್ಕಾರವಾಗಿ ನಗುತ್ತ ಹೊರಟುಹೋದರು.
ನನಗೆ ಕೋಪ ಬರಲಿಲ್ಲ, ನನ್ನದೆ ತಪ್ಪು ಇತ್ತಲ್ಲ.
ಅವರ ಹಿಂದೆ ಆನಂದ ಬರುತ್ತಿದ್ದ. ನನ್ನನ್ನು ನೋಡಿ ನಿಂತವನು.
ಎಲ್ಲಿ ಹೋಗಿದ್ದೆ, ಎರಡು, ಮೂರು ದಿನದಿಂದ ಎಂದು ಕೇಳಿದ.
ನಾನು ಅವನಿಗೆ ಉತ್ತರಿಸುವ ಬದಲಿಗೆ,
ಆನಂದ , ಆ ದಿನ ನೀನು , ಜ್ಯೋತಿ ಮಾತನಾಡುತ್ತಿರುವಾಗ ಪೂರ್ತಿ ರೆಕಾರ್ಡ್ ಮಾಡಿದ್ದೆ ಅಲ್ಲವೇ ? ಅದು ಈಗ ನಿನ್ನ ಹತ್ತಿರ ಇದೆಯಾ?
ಅದಕ್ಕವನು ,
ಇದೆಯಲ್ಲ, ಇದೇ ಮೊಬೈಲ್ ನಲ್ಲಿಯೇ ಪೂರ್ತಿ ಸಂಭಾಷಣೆ ಹಾಗೆ ಇದೆ ಎಂದ
ಸರಿ ಒಳ್ಳೆಯದಾಯಿತು, ನಿನ್ನ ಬಳಿ, ಮೊಬೈಲ್ ನಿಂದ ಕಿವಿಗೆ ಸಿಕ್ಕಿಸಿ ಕೇಳುವರಲ್ಲ, ಇಯರ್ ಪೋನ್ , ಅದು ಇರುವುದೇ ? ಎಂದೆ
ಅವನು ಉತ್ತರಿಸುವ ಮೊದಲೆ, ಅವನ ಹಿಂದೆಯೆ ಇದ್ದ , ಅವನ ಮಗ ,
ಇದೇ ಅಂಕಲ್ , ಇದಾಗುತ್ತ ನೋಡಿ
ಎನ್ನುತ್ತ ಅವನ ಜೀನ್ಸ್ ಕೋಟಿನ ಜೋಬಿನಲ್ಲಿದ್ದ, ಈಯರ್ ಪೋನ್ ತೆಗೆದುಕೊಟ್ಟ.
ನನ್ನಿಂದ ತೀರ ಈ ಹುಡುಗನು ಅನುಭವಿಸುವಂತಾಯಿತಲ್ಲ, ಎನ್ನುವ ಬೇಸರ ನನಗೆ.
ಹುಡುಗನ ಮುಖ ನೋಡಿದೆ, ಪಾಪ, ಪೂರ್ತಿಯಾಗಿ ಸೋತು, ಹೋಗಿತ್ತು, ಬಹುಶಃ ಅವರ ಅಮ್ಮ ಅವನ ಬಗ್ಗೆ ಆಡಿದ್ದ ಮಾತುಗಳನ್ನು ಅವನೂ ಕೇಳಿರಬಹುದೇನೊ.
ನಾನು ಆನಂದನ ಮೊಬೈಲ್ ಗೆ ಅವನ ಮಗ ಕೊಟ್ಟ ಈಯರ್ ಪೋನ್ ಸಿಕ್ಕಿಸಿ, ನನ್ನ ಕಿವಿಗೆ ಹಾಕಿ, ಆ ದಿನ ರೆಕಾರ್ಡ್ ಮಾಡಿದ್ದ ವಾಯ್ಸ್ ಪೈಲ್ ರನ್ ಮಾಡಿ ನೋಡಿದೆ. ಅತ್ಯಂತ ಸ್ವಷ್ಟವಾಗಿ ಎಲ್ಲವೂ ರೆಕಾರ್ಡ್ ಆಗಿತ್ತು.

ಬನ್ನಿ ಒಳಗೆ ಹೋಗೋಣ
ಎನ್ನುತ್ತ ಒಳ ನಡೆದೆ. ಅವರಿಬ್ಬರಿಗೂ ನನ್ನ ನಡೆ ಅರ್ಥವಾಗದೆ ಹಿಂದೆ ಬಂದರು. ಅವನ ಮಗ ಮತ್ತೆ ಈ ಆಂಕಲ್ ಏನು ಮಾಡುವರೋ ಎನ್ನುವ ಭಯಕ್ಕೋ ಏನೋ
ಏಕೆ ಅಂಕಲ್ , ಏನು ಮಾಡುವಿರಿ,ಮತ್ತೆ ಏನು ಎನ್ನುತ್ತಲೆ ಒಳಗೆ ಬಂದ.
ವಾರ ಕಳೆದಾಗಲು ಜ್ಯೋತಿ ಹಾಗೆ ಮಲಗಿದ್ದಳು. ಮುಖದಲ್ಲಿ ಅದೇ ನಿರ್ಭಾವ. ಮುಚ್ಚಿದ ಕಣ್ಣು. ಬಹುಶಃ ಅದೇ ಶೂನ್ಯದಲ್ಲಿ ಅವಳ ಮನಸ್ಸು ನೆಲೆಸಿರಬಹುದು. ದೇವರೆ ನನ್ನ ಈಗಿನ ಪ್ರಯತ್ನದಲ್ಲಿ ಯಶ ಕೊಡು ಎಂದು ಮೌನವಾಗಿ ಮನದಲ್ಲಿ ಪ್ರಾರ್ಥಿಸಿದೆ.
ಅವಳ ಪಕ್ಕ ಕುಳಿತು. ಈಯರಿಂಗ್ ಪೋನನ್ನು ಅವಳ ಎರಡು ಕಿವಿಗೆ ಸಿಕ್ಕಿಸಿದೆ. ದ್ವನಿ ಎತ್ತರದಲ್ಲಿಟ್ಟೆ. ನಂತರ ಅವಳದೆ ದ್ವನಿ ಇರುವ ರೆಕಾರ್ಡ್ ಹಚ್ಚಿ ಸುಮ್ಮನೆ ಅವಳ ಮುಖ ನೋಡುತ್ತ ಕುಳಿತೆ.
ಎರಡು ಮೂರು ಕ್ಷಣ ಕಳೆದಿರಬಹುದೇನೊ, ಅವಳ ಕಣ್ಣಗುಡ್ಡೆಗಳು ಚಲಿಸುವತ್ತಿವೆ ಅನ್ನಿಸಿತು. ನನ್ನ ಮನ ನುಡಿಯುತ್ತಿತ್ತು, ಆಕೆ ಖಂಡಿತ ಪ್ರತಿಕ್ರಿಯೆ ನೀಡುವಳು ಎಂದು. ಮತ್ತೆ ಹತ್ತು ನಿಮಿಷ ಕಳೆದಿರಬಹುದೇನೊ, ಆಕೆಯ ಕಣ್ಣಲ್ಲಿ ನೀರು ಹರಿಯುತ್ತಿತ್ತು, ಅವಳ ಮನದಲ್ಲಿ ಏನು ನಡೆಯುತ್ತಿರಬಹುದು. ನನಗೆ ತಕ್ಷಣ ಹೊಳೆಯಿತು. ಅಂದು ಅವಳ ಮಗನ ಬಗ್ಗೆ ಮಾತನಾಡುವಾಗ ಆಕೆ ಭಾವಪೂರಿತಳಾಗಿದ್ದಳು, ಈಗ ಬಹುಶಃ ಅದೇ ತನ್ನ ಮಾತುಗಳಿಗೆ ತಾನು ಪ್ರತಿಕ್ರಿಯೆ ನೀಡುತ್ತಿದ್ದಾಳೆ. ನಾನು ವಿಶ್ವಾಸದಿಂದ ಆಕೆಯನ್ನು ನೋಡುತ್ತಿದ್ದರೆ, ಆನಂದ ಮತ್ತು ಅವನ ಮಗನ ಮುಖದಲ್ಲಿ ಗೊಂದಲ.
ಅಂಕಲ್ ಅಮ್ಮ ಅಳುತ್ತಿದ್ದಾರೆ ಎಂದ ಅವನು ಭಯದಿಂದ
ನನ್ನಲ್ಲಿ ಎಂತದೋ ನಿರಾಂತಕ
ಅಳಲಿ ಬಿಡು ಒಳ್ಳೆಯದೇ ಎಂದೆ
ಕೆಲವೇ ಕ್ಷಣ ಆಕೆ ಜೋರಾಗಿಯೆ ಅಳುತ್ತಿದ್ದಳು,
ಶಶಾಂಕ ಶಶಾಂಕ ನನ್ನ ಮಗ ಎಂದು ಆಕೆ ಬಿಕ್ಕುತ್ತಿದ್ದಳು,
ನನ್ನಲ್ಲಿ ಸಂತಸ ಉಕ್ಕಿಹರಿಯುತ್ತಿತ್ತು,
ಮಲಗಿದ್ದ ಆಕೆ ತಟ್ಟನೆ ಎದ್ದು ಕುಳಿತಳು,
ಆಕೆಗಿನ್ನು ತನ್ನ ಅಳು ಹಿಡಿತಕ್ಕೆ ಬಂದಿರಲಿಲ್ಲ, ಅಳುತ್ತಲೆ ನಮ್ಮನೆಲ್ಲ ನೋಡಿದಳು. ಆನಂದನತ್ತ ನೋಡಿದಳು.
ನಿದಾನಕ್ಕೆ ಅಳು ನಿಲ್ಲಿಸಿದಳು. ಶಶಾಂಕನನ್ನು ನೋಡಿದವಳು ಸ್ವಲ್ಪ ಆಶ್ಚರ್ಯಗೊಂಡಂತೆ,
ನೀನು ಯಾವಗ ಊಟಿಯಿಂದ ಬಂದೆ ಶಶಾಂಕ್ ಎಂದಳು.
ಅವನು ಅಳುತಿದ್ದ,
ಏಕೊ ಏನಾಯಿತು, ಎನ್ನುತ್ತ ಸುತ್ತಲು ನೋಡಿ, ಇದೇನು ನಾನೆಲ್ಲಿದ್ದಿನಿ, ಇದು ನಮ್ಮ ಮನೆಯಲ್ಲವೇನು? ನನಗೆ ಏನಾಗಿತ್ತು ಎಂದಳು.
ನನಗೆ ಮನಸ್ಸು ತುಂಬಿ ಬರುತ್ತಿತ್ತು.
ಆ ಮೂವರು ನೆಮ್ಮದಿಯಾಗಿ ಏನು ಬೇಕೊ ಅದು ಮಾತನಾಡಲಿ ಎನ್ನುವಂತೆ, ನಾನು ಮಾತನಾಡದೆ ಎದ್ದು ಹೊರಗೆ ಬಂದೆ.
ಆಸ್ಪತ್ರೆಯ ಕಾರಿಡಾರಿನಲ್ಲಿದ್ದ ಕಿಟಕಿಯ ಬಳಿ ಹೋಗಿ ನಿಂತಾಗ
ಹೊರಗಿನ ಹೂಗಿಡಗಳೆಲ್ಲ ಸೂರ್ಯನ ಬಿಸಿಲಿನಲ್ಲಿ ಹೊಳೆಯುತ್ತಿದ್ದವು,
ನನ್ನ ಕಣ್ಣಿನಲ್ಲಿ ತೆಳುನೀರು ತುಂಬಿ ಹೊರಗಿನ ದೃಷ್ಯ ಅಸ್ವಷ್ಟವಾಗುತಿತ್ತು.
ನನ್ನ ಕನ್ನಡಕ ತೆಗೆದು ಕಣ್ಣಿರನೊಮ್ಮೆ ಒರೆಸಿಕೊಂಡೆ.

ಶುಭಂ .
photo courtesy https://www.google.co.in/url?sa=i&rct=j&q=&esrc=s&source=images&cd=&cad=rja&uact=8&ved=0ahUKEwiOg_bs0ezVAhWMOI8KHVQaBNcQjRwIBw&url=%2Furl%3Fsa%3Di%26rct%3Dj%26q%3D%26esrc%3Ds%26source%3Dimages%26cd%3D%26cad%3Drja%26uact%3D8%26ved%3D%26url%3Dhttp%253A%252F%252Fmiriadna.com%252Fpreview%252Fforest-small-river%26psig%3DAFQjCNH0-cP3JUDN4pAhQhs3kbSihDglrA%26ust%3D1503553080310344&psig=AFQjCNH0-cP3JUDN4pAhQhs3kbSihDglrA&ust=1503553080310344(link is external)

Tuesday, August 22, 2017

ನೆನಪಿನ ಪಯಣ - ಭಾಗ 8

ನೆನಪಿನ ಪಯಣ - ಭಾಗ 8

 
ಮರುದಿನ
 
ನಿಮಾನ್ಸ್ ನಲ್ಲಿ ಡಾಕ್ಟರ್ ಟೇಬಲ್ ಎದುರು ನಾನು , ಆನಂದ ಹಾಗು ಸಂದ್ಯಾ ದಿಕ್ಕೆಟ್ಟು ಕುಳಿತಿದ್ದೆವು. ಆನಂದರ ಮಗ ಶಶಾಂಕ ಇನ್ನು ಬಂದಿರಲಿಲ್ಲ. ಅವನಿಗೆ ಬೇಗ ಬರುವಂತೆ ಆನಂದ ಪೋನ್ ಮಾಡಿ ತಿಳಿಸಿದ್ದರು.
ನಿಮಾನ್ಸಿಲ್ಲಿಯ ನ್ಯೋರೋಸ್ಪೆಶಲಿಷ್ಟ್ ಡಾಕ್ಟರ್ , ನಮ್ಮಿಂದ ಹಲವಾರು ಸಾರಿ ವಿವರಣೆ ಕೇಳಿದ್ದರು. ನಾನು ಎಲ್ಲವೂ ಹೇಗೆ ಆಯಿತೆಂದು ಬಿಡಿಸಿ ಬಿಡಿಸಿ ತಿಳಿಸಿದ್ದೆ. ಕಡೆಗೆ ಆನಂದ ಜ್ಯೋತಿಯ ತಲೆಯ ಬಳಿ ಇಟ್ಟಿದ್ದ ಮೊಬೈಲ್ ರೆಕಾರ್ಡಾರ್ ನೆನಪಿಗೆ ಬಂದಿತು. ಆನಂದ ತನ್ನ ಮೊಬೈಲ್ ನ್ನು ಡಾಕ್ಟರಿಗೆ ಕೊಟ್ಟಿದ್ದ. ಅದನ್ನು ಅಲ್ಲಿನ ಡಾಕ್ಟರಗಳ ಗುಂಪು ಎರಡೆರಡು ಸಾರಿ ಪ್ರತಿ ಅಕ್ಷರವನ್ನು ಕೇಳಿದ್ದರು.
ನ್ಯೂರಾಲಿಜಿಸ್ಟ್ ಡಾಕ್ಟರ್ ನಮ್ಮೆದುರು ಗಂಭೀರವಾಗಿ ಕುಳಿತಿದ್ದರು.
ನನ್ನನ್ನು ಕುರಿತು ಹೇಳಿದರು
ನೀವು ಎಂತಹ ಅಪಾಯಕಾರಿ ಕೆಲಸವನ್ನು ಕೈಗೊಂಡಿದ್ದೀರಿ ಎನ್ನುವ ಅರಿವು ನಿಮಗಿಲ್ಲವೆ , ಸಾಮಾನ್ಯವಾಗಿ ಸಮ್ಮೋಹಿನಿ ವಿದ್ಯೆಯನ್ನುನುರಿತವರು ಮಾತ್ರ ನಿರ್ವಹಿಸುವರು, ಆದರೆ ನೀವು ಎಲ್ಲೋ ಅರ್ಧ ಪರ್ದ ಕಲಿತು ಅದನ್ನು ಆಕೆಯ ಮೇಲೆ ಪ್ರಯೋಗಿಸಿದ್ದೀರಿ
ನಾನು ಬೆಚ್ಚಿಬಿದ್ದೆ
ಇಲ್ಲ ಡಾಕ್ಟರ್ ನನಗೆ ಸಮ್ಮೋಹಿನಿ ವಿಧ್ಯೆ ಅಂದರೆ ಹಿಪ್ನಾಟಿಸಂ ಗೊತ್ತು ಇಲ್ಲ, ಅದನ್ನು ಆಕೆಯ ಮೇಲೆ ಪ್ರಯೋಗಿಸಲು ಇಲ್ಲ
ಅವರು ನಕ್ಕರು
ಈಗ ಮತ್ತೇನು ನೀವು ಮಾಡಿರುವುದು ಅಂದುಕೊಂಡಿದ್ದೀರಿ, ರೂಮಿನಲ್ಲಿ ಎಲ್ಲ ದೀಪಗಳನ್ನು ಆರಿಸಿ, ಒಂದೇ ದೀಪವನ್ನು ಆಕೆ ನೋಡುವಂತೆ ಉಳಿಸಿದ್ದೀರಿ, ಹಿಪ್ನಾಟಿಸಂ ಗೆ ಬೇಕಾದ ಎಲ್ಲ ವಾತವರಣಾ ಸೃಷ್ಟಿ ಮಾಡಿದ್ದೀರಿ. ರೆಕಾರ್ಡರ್ ನಲ್ಲಿ ನಿಮ್ಮ ದ್ವನಿಯನ್ನೊಮ್ಮೆ ಆಲಿಸಿ ನೋಡಿ. ಅತ್ಯಂತ ಮಂದ್ರವಾದ ದ್ವನಿ, ನಿಧಾನಕ್ಕೆ ಆಕೆಯ ಮೆದುಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಂತ ದ್ವನಿ. ಆದರೆ ಅಕೆಗೆ ಕೊಡುವ ಸೂಚನೆಗಳನ್ನು ಮಾತ್ರ ಸರಿಯಾಗಿ ಕೊಡದೆ ಆಕೆ ಇಂತಹ ಸ್ಥಿತಿ ತಲುಪುವಂತೆ ಮಾಡಿದ್ದೀರಿ
ನಾನು ಉದ್ವೇಗದಿಂದ
ಇಲ್ಲ ಡಾಕ್ಟರ್ , ನಾನು ಆಕೆಗೆ ಪದೆ ಪದೆ ಹೇಳಿರುವೆ , ನಾನು ಹಿಪ್ನಾಟಿಸಂ ಮಾಡುತ್ತಿಲ್ಲ , ನೀನು ಯೋಚಿಸಲು, ನಿರ್ದರಿಸಲು ಸ್ವತಂತ್ರಳು ಎಂದು
ಡಾಕ್ಟರ್ ನನ್ನ ಮುಖ ನೋಡುತ್ತ ನುಡಿದರು
ನೀವು ಹಿಪ್ನಾಟಿಸಂ ಮಾಡುತ್ತಿಲ್ಲ ಎಂದು ಪದೆ ಪದೆ ಬಾಯಲ್ಲಿ ಹೇಳಿದ್ದೀರಿ ಆದರೆ ಆಕೆ ಹಿಪ್ನಾಟಿಸಂಗೆ ಒಳಗಾಗಿದ್ದಾರೆ ನಿಮ್ಮಿಂದ. ಆದರೆ ಸಾಮಾನ್ಯ ಹಿಪ್ನಾಟಿಸಂನಲ್ಲಿ ಎಲ್ಲರು ಸೂಚನೆ ಕೊಡುವಾಗ , ನೀನೀಗ ನನ್ನ ವಶದಲ್ಲಿದ್ದೀಯ, ನಾನು ಹೇಳಿದಂತೆ ಕೇಳುತ್ತೀಯ ಎಂದರೆ ನೀವು ಅದಕ್ಕೆ ವಿರುದ್ದವಾಗಿ ಹೇಳಿದ್ದೀರಿ, ನೀನು ಸ್ವತಂತ್ರಳು ನಿನಗೆ ಬೇಕಾದಂತೆ ಚಿಂತಿಸಬಹುದು, ನಿನಗೆ ಮನಬಂದಾಗ ಮೇಲೆ ಏಳಬಹುದು ಅನ್ನುವ ರೀತಿಯ ಸೂಚನೆ ಕೊಟ್ಟಿದ್ದೀರಿ, ಹಾಗಿರುವಾಗ ಅವಳನ್ನು ಮತ್ತೆ ಎಬ್ಬಿಸುವುದು ನಿಮ್ಮಿಂದ ಹೇಗೆ ಸಾದ್ಯ ?
ನಾನು ಗೊಂದಲದಿಂದ ಅವರ ಮುಖ ನೋಡಿದೆ, ಡಾಕ್ಟರ್ ಮುಂದೆ ಹೇಳಿದರು
ನಿಮಗೆ ತಿಳಿಯದು ಹಿಪ್ನಾಟಿಸಂಗೆ ಒಳಗಾದ ವ್ಯಕ್ತಿಯ ಮೆದುಳಿಗೆ , ದೇಹಕ್ಕೆ ಅದಮ್ಯ ಶಕ್ತಿ ಇರುತ್ತದೆ , ಅಂತಹ ಸ್ಥಿತಿಯಲ್ಲಿ ಮೆದುಳು ಮಾತ್ರ ಹಿಪ್ನಾಟಿಸಂ ಮಾಡಿದವರ ವಶದಲ್ಲಿಯೆ ಇರುತ್ತದೆ. ನೀವು ಇಲ್ಲಿ ಹಿಪ್ನಾಟಿಸಂಗೆ ಅನುಕೂಲವಾಗುವಂತ ಎಲ್ಲ ವಾತವರಣ ಸೃಷ್ಟಿಸಿದ್ದೀರಿ, ಸೂಚನೆಗಳನ್ನು ಕೊಡುವಾಗ ಮಾತ್ರ ಆಕೆಯ ಮನಸ್ಸು ಬುದ್ದಿಯ ದಾರಿ ತಪ್ಪಿಸಿದ್ದೀರಿ
ಗೊಂದಲದಿಂದ ಅವರ ಮುಖ ನೋಡಿದೆ,
ನೀವು ರೆಕಾರ್ಡ್ ಮಾಡಿರುವ ಮಾತುಗಳನ್ನು ಕೇಳಿನೋಡಿ, ಆಕೆಗೆ ನೆನಪಿನಲ್ಲಿ ಹಿಂದೆ ಹಿಂದೆ ಹೋಗು ಎಂದೇ ಹೇಳುತ್ತಿದ್ದೀರಿ, ಆಕೆ ತನ್ನ ನೆನಪಿನ ಪಯಣದಲ್ಲಿ ಮತ್ತೆ ಮುಂದಕ್ಕೆ , ಪ್ರಸ್ತುತಕ್ಕೆ ಬರುವುದು ಹೇಗೆ ಎನ್ನುವ ಸೂಚನೆಗೆ ಆಕೆಗೆ ಇಲ್ಲ. ಆ ಸ್ಥಿತಿಯಲ್ಲಿ ಅವಳಿಗೆ ನಿನ್ನ ಮನಸಿಗೆ ತೋಚಿದ ನೆನಪನ್ನು ದಾಖಲಿಸುವಂತೆ ಹೇಳಿದ್ದೀರಿ. ನೀನು ಸ್ವತಂತ್ರಳು ಅನ್ನುವಾಗ ಆಕೆ ನಿಮ್ಮ ಮಾತನ್ನು ಕೇಳದಿದ್ದರು ಪರವಾಗಿಲ್ಲ ಎನ್ನುವ ಸೂಚನೆ ಹೋಗಿದೆ, ಹಾಗಾಗಿ ನೀವು ಸಾಕು ಎದ್ದೇಳು ಅಂದರು ಆಕೆ ಎಚ್ಚರಗೊಳ್ಳುತ್ತಿಲ್ಲ. ಆಕೆ ತನ್ನ ಕಲ್ಪನೆಯಲ್ಲಿ ತನ್ನ ನೆನಪಿನ ಕೊಟ್ಟ ಕೊನೆಯ ಬಿಂದುವನ್ನು ತಲುಪಿದ್ದಾರೆ, ಆಕೆಯ ಪ್ರಕಾರ ಅಲ್ಲಿಂದ ಹಿಂದೆ ಹೋಗಲು ಸಾದ್ಯವಿಲ್ಲ. ಆದರೆ ಅಲ್ಲಿಂದ ಮುಂದೆ ಬರಲು ನೀವು ಸೂಚಿಸಲೂ ಇಲ್ಲ. ಆಕೆಯೆ ಮನಸ್ಸು ಬದಲಾಯಿಸಿ, ಪುನಃ ವರ್ತಮಾನಕ್ಕೆ ಬರಬೇಕು ಅನ್ನುವ ವಾತವರಣ ಸೃಷ್ಟಿಸಿದ್ದೀರಿ
 
ನಾನು ನುಡಿದೆ,
ಆದರೆ ಡಾಕ್ಟರ್ ನಮ್ಮ ಕಲ್ಪನೆ ನಿಜವಾಗಿದೆ ಅಲ್ಲವೆ ? ಆಕೆ ತನ್ನ ಅನುಭವಗಳನ್ನು ಹೇಳುತ್ತಾ ಹೋಗಿದ್ದಾರಲ್ಲ,
ಡಾಕ್ಟರ್ ನುಡಿದರು,
ಸರಿ ಏನಾಯಿತೀಗ, ಆಕೆ ತನ್ನ ಬಾಲ್ಯಕ್ಕೆ ಹಂತ ಹಂತವಾಗಿ ಜಿಗಿದ್ದಿದ್ದಾರೆ, ಹಳೆಯದನ್ನೆಲ್ಲ ನೆನಪಿಸಿಕೊಂಡು ಆಕೆಯ ಮನ ಹಗುರಾಗಿದೆ ಒಪ್ಪೋಣ , ಅದಕ್ಕೆ ಹಿಪ್ನಾಟಿಸಂ ಸಹಾಯ ಏತಕ್ಕೆ ಬೇಕೆ, ಅವರ ಸ್ನೇಹಿತರ ಜೊತೆ ಹಂಚಿಕೊಂಡರೆ ಸಾಕಲ್ಲವೆ
ನಾನು ಹೇಳಿದೆ,
ಅದಲ್ಲ ಡಾಕ್ಟರ್ ಆಕೆ ತನ್ನ ಹುಟ್ಟಿನಿಂದ ಹಿಂದಕ್ಕೂ ನೆನಪನ್ನು ಕೆದಕಿದ್ದಾರೆ, ನನ್ನ ಪ್ರಕಾರ ಆಕೆಯ ಮೆದುಳಿನಲ್ಲಿ ವಂಶಪಾರಂಪರ್ಯವಾಗಿ ಮನುಜ ಕುಲದ ಬೆಳವಣಿಗೆಯ ಹಂತಗಳು ಶೇಖರವಾಗಿದೆ ಅಲ್ಲವೆ , ಅಲ್ಲದೆ ಅವರು ಮನುಜ ಕುಲದ ಹುಟ್ಟಿನಿಂದ ಹಿಂದಕ್ಕೆ ಹೋಗಿ ಭೂಮಿಯ ಸೃಷ್ಟಿ , ಸಮುದ್ರದ ಸೃಷ್ಟಿ, ಸೂರ್ಯನ ರೂಪಗೊಳ್ಳುವಿಕೆ ಎಲ್ಲ ನೋಡಿದಂತೆ ಹೇಳುತ್ತಿದ್ದಾರಲ್ಲ?
ದಾಕ್ಟರ್ ನನ್ನತ್ತ ಮರುಕದಿಂದ ನೋಡಿದರು,
 
ಆಕೆ ತನ್ನ ಹುಟ್ಟಿನಿಂದ ಹಿಂದಕ್ಕೆ ಹೇಳಿರುವುದು, ಆಕೆ ತನ್ನ ತಂದೆ ತಾಯಿಯ ಬಾಯಲ್ಲಿ ಕೇಳಿದ ಕತೆಗಳಾಗಿರಬಹುದು, ಅದನ್ನೆ ತನ್ನ ಅನುಭವ ಎಂದು ಭಾವಿಸಿ ಹೇಳಿರುತ್ತಾರೆ ಅಷ್ಟೆ
ನಾನು ಮೊಂಡುವಾದ ಹೂಡಿದೆ
ಆದರೆ ಡಾಕ್ಟರ್ ಆಕೆ ಯಾವುದೋ ಕಾಡುಜನರ ಕತೆಯನ್ನು ಕೃಷ್ಣದೇವರಾಯನ ಜೊತೆ ಇದ್ದಿದ್ದನ್ನು ಹೇಳುತ್ತಿದ್ದಾರಲ್ಲ ಅದನ್ನು ಯಾರು ಹೇಳಿರುತ್ತಾರೆ
ಡಾಕ್ಟರ್ ಹೇಳಿದರು,
ಅದೆಲ್ಲ ಆಕೆ ಎಲ್ಲಿ ನೋಡಿರಲು ಸಾದ್ಯ, ಅವೆಲ್ಲ ಆಕೆಯ ಕಲ್ಪನೆಗಳು, ಅಥವ ಎಲ್ಲಿಯೋ ಓದಿರುವದನ್ನು ಕಲ್ಪಿಸಿ ಅನುಭವ ಅಂತ ಹೇಳ್ತೀದ್ದಾರೆ ಅನ್ನಿಸುತ್ತೆ, ಅಲ್ಲದೆ ಭೂಮಿಯ ಸೃಷ್ಟಿ ಸೂರ್ಯನ ಸೃಷ್ಟಿ ಎಲ್ಲವೂ ಹೇಗೆ ಗೊತ್ತಿರಲು ಸಾದ್ಯ
ನಾನು ನನ್ನ ಕಲ್ಪನೆಯನ್ನು ಬಿಚ್ಚಿಟ್ಟೆ,
ಅಲ್ಲ ಡಾಕ್ಟರ್ ನಮ್ಮ ದೇಹ ಆಗಿರುವುದು ನರಮಂಡಲ, ನ್ಯೂರಾನ್ ಮುಂತಾದವುಗಳಿಂದ, ಅವು ವಂಶಪಾರಂಪರ್ಯವಾಗಿ ಮುಂದುವರೆಯುತ್ತಿದೆ, ಹಾಗಿರುವಾಗ ಮೆದುಳಿನಲ್ಲಿ ನಮ್ಮ ತಂದೆಯ ತಾಯಿಯ, ತಾತಂದಿರ ನೆನಪುಗಳು ಶೇಕರವಾಗಿದ್ದು, ನನ್ನ ನೆನೆಪಿನಂತೆಯೆ ಏಕೆ ಅವರಿಗೆ ಕಾಣಿಸಿರಬಾರದು, ಅದು ಹೇಗೋ ಆಕೆಯ ಮೆದುಳಿನಲ್ಲಿ ಹುದುಗಿದ್ದ ನೆನಪನ್ನು ಕೆದಕಲು ಆಕೆಗೆ ಸಾದ್ಯವಾಗಿದೆ ಅನ್ನಿಸುತ್ತೆ
ಡಾಕ್ಟರ್ ಸಹನೆ ಮೀರಿತ್ತು,
ಸ್ವಾಮಿ , ನೀವು ಅತಿಯಾಗಿ ಪುಸ್ತಕ ಓದುವದನ್ನು ಬಿಟ್ಟುಬಿಡಿ, ನಿಮ್ಮ ಕಲ್ಪನೆಗಳು, ಕತೆಗಳು ಇಲ್ಲಿ ವಿಜ್ಜಾನವಾಗಲಾರದು, ನೀವು ಹೇಳಿದಂತೆ ಆದರೆ ಮನುಷ್ಯ ಅಥವ ಜೀವಕೋಶ ಜನ್ಮ ತಳೆದಿದ್ದೆ, ಭೂಮಿಯ ಮೇಲೆ ಆಕೆ ಭೂಮಿಯ ರಚನೆಗಿಂತಲೂ ಹಿಂದಿನದೆಲ್ಲ ಹೇಳಲು ಹೇಗೆ ಸಾದ್ಯ. ಮನುಷ್ಯನ ಮೆದುಳಿನ ಶಕ್ತಿಯ ಕಲ್ಪನೆ ನಿಮಗಿಲ್ಲ. ನೀವು ಆ ಬಗ್ಗೆ ಓದಿಯೂ ಇಲ್ಲ. ನನಗೆ ತಿಳಿದಂತೆ ಆಕೆ ಮಾತನಾಡಿರುವದನ್ನು ಗಮನಿಸಿದರೆ ಆಕೆಗೆ ನಿಜವಾದ ಅನುಭವಕ್ಕೂ , ಕೇಳಿರುವುದು ಅಥವ ಕಲ್ಪನೆಗೆ ವ್ಯೆತ್ಯಾಸವನ್ನು ಗುರುತಿಸಲು ಆಗುತ್ತಿಲ್ಲ. ಆಕೆ ಇಲ್ಲಿಯವರೆಗೂ ಹೇಳಿರುವ ಭೂಮಿಯ ಸೂರ್ಯನ ಭ್ರಹ್ಮಾಂಡದ ಕಲ್ಪನೆಗಳೆಲ್ಲ ಎಲ್ಲಿಯಾದರು ಗೂಗಲ್ ನಲ್ಲಿ ಹುಡುಕಿನೋಡಿ ಬರಹದಲ್ಲಿ, ಯೂ-ಟ್ಯೂಬ್ ನಲ್ಲಿ ಎಲ್ಲಿಯೋ ಇದ್ದೆ ಇರುತ್ತದೆ. ಯಾವ ಹೊಸದು ಇಲ್ಲ.
ನಾನು ಸೋತು ಹೇಳಿದೆ
ಆದರೆ ನಾವು ಈಗ ಸಾದಿಸಿದ್ದೆಲ್ಲ ಸುಳ್ಳೆ, ಆಕೆ ನೆನಪಿನಲ್ಲಿ ಹಿಂದಕ್ಕೆ ಪಯಣಿಸಿದ್ದು ಸುಳ್ಳೆ
ಡಾಕ್ಟರ್ ಸಹನೆ ಕಳೆದು, ಕೋಪದಿಂದ ಹೇಳಿದರು
ನೋಡಿ , ನನಗೆ ಈಗ ನಿಮ್ಮ ಸಾದನೆ ಸುಳ್ಳು ಸತ್ಯ ಎನ್ನುವುದು, ನಿಮ್ಮ ಯಾವುದೋ ಕತೆ ಇದೆಲ್ಲ ಮುಖ್ಯವಲ್ಲ, ನಮಗೀಗ ಆಕೆಯನ್ನು ಸಹಜ ಸ್ಥಿತಿಗೆ ತರುವುದು ಹೇಗೆಂಬುದೆ ಮುಖ್ಯ.
ಆನಂದ ಈಗ ಮಾತನಾಡಿದ
ಅಂದರೆ ಡಾಕ್ಟರ್ , ಜ್ಯೋತಿ ಪುನಃ ಮೊದಲಿನಂತೆ ಆಗುತ್ತಾಳೆ, ಯಾವ ಸಮಸ್ಯೆಯೂ ಇಲ್ಲ ಅಲ್ಲವೆ ?
ಡಾಕ್ಟರ್ ಮುರುಳಿಕೃಷ್ಣ ನುಡಿದರು
ಹಾಗೆ ಹೇಳುವುದು ಕಷ್ಟ, ಆಕೆಯೀಗ ಸ್ವಯಂ ಹಿಪ್ನಾಟಿಸಂ ಅನ್ನುತ್ತಾರಲ್ಲ ಆ ಸ್ಥಿತಿಯಲ್ಲಿ ಇದ್ದಾರೆ, ಹೊರಗಿನ ಯಾವ ಮಾತನ್ನು ಕೇಳಿಸಿಕೊಳ್ಳುತ್ತಲೇ ಇಲ್ಲ, ಹಾಗೆ ಹೊರಗಿನ ಯಾವ ಘಟನೆಗಳು , ಮಾತು , ಬೆಳಕು, ಆಕೆಯ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ, ಆಕೆಯ ಮೆದುಳು ತನ್ನೋಳಗೆ ತಾನೆ ಅನ್ನುವಂತೆ ಆಳವಾದ ಹಿಪ್ನಾಟಿಸಂ ಗೆ ಹೊರಟುಹೋಗಿದೆ. ಮತ್ತು ಅದು ಆಕೆಯ ಹಿಡಿತದಲ್ಲಿ ಮಾತ್ರ ಇದೆ. ಆದರೆ ದೇಹ ಮಾತ್ರ ಸಹಜ ಸ್ಥಿತಿಯಲ್ಲಿದೆ , ಆಕೆಯ ಹೃದಯವಾಗಲಿ ಉಳಿದ ಅಂಗಗಳಾಗಲಿ ತಮ್ಮ ಕೆಲಸ ನಿರ್ವಹಿಸುತ್ತಿವೆ.
 
ಆನಂದ ಮತ್ತೆ ಕೇಳಿದ
ಅಂದರೆ ಅವಳು ಈಗ ಕೋಮದಲ್ಲಿದ್ದಾಳೆಯೆ ?
ತಲೆ ಆಡಿಸುತ್ತ ನುಡಿದರು
ಇಲ್ಲ ಕೋಮದಲ್ಲಿ ಆದರೆ ಅವಳ ಮೆದುಳು ಸತ್ತ ಸ್ಥಿತಿಯಲ್ಲಿರುತ್ತೆ, ಹಾಗಾಗಿ ದೇಹವೂ ಕೇವಲ ಹಸಿ ತರಕಾರಿ ಅನ್ನುತ್ತಾರಲ್ಲ ಹಾಗಿರುತ್ತೆ, ಇಲ್ಲಿ ಹಾಗಿಲ್ಲ, ಆಕೆಯ ಮೆದುಳು ಸಹ ಸಹಜ ಸ್ಥಿತಿಯಲ್ಲಿಯೆ ಇದೆ, ದೈಹಿಕವಾಗಿಯೂ ಆರೋಗ್ಯವಾಗಿದ್ದಾರೆ. ಆದರೆ ಮೆದುಳು ನಿದ್ದೆ ಏನು ಮಾಡುತ್ತಿಲ್ಲ. ಸಂಪೂರ್ಣ ಕ್ರಿಯಾತ್ಮಕವಾಗಿದ್ದೆ. ಹಾಗೆ ಹೇಳುವದಾದರೆ ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಯಾವುದೋ ಲಾಜಿಕ್ ತಪ್ಪಾಗಿ, ಲೂಪ್ ನಲ್ಲಿ ಸಿಕ್ಕಿಕೊಳ್ಳುವುದು ಅನ್ನುತ್ತಾರಲ್ಲ ಆ ರೀತಿ ಅಂದುಕೊಳ್ಳಿ , ಆಕೆಯ ತರ್ಕದ ಕೊಂಡಿ ಸ್ಥಗಿತಗೊಂಡಿದೆ ಅನ್ನಬಹುದೇನೊ. ಹಾಗಾಗಿ ಆಕೆ ಕೋಮದಲ್ಲಿದ್ದಾರೆ ಅನ್ನುವಂತಿಲ್ಲ. ಎಚ್ಚರದಲ್ಲೂ ಇಲ್ಲ . ಕಂಪ್ಯೂಟರ್ ನಲ್ಲಿ ಯಾದರೆ ರಿಸ್ಟಾರ್ಟ್ ಅಂದು ಬಿಡುತ್ತೀರಿ, ಇಲ್ಲಿ ಹಾಗೆ ಆಗಲ್ಲವಲ್ಲ
ಆನಂದನ ದ್ವನಿಯಲ್ಲಿ ಆತಂಕವೂ ಇತ್ತು
ಸರಿ ಸಾರ್ ಹಾಗಿದ್ದರೆ, ಜ್ಯೋತಿಯನ್ನು ಮತ್ತೆ ಎಬ್ಬಿಸುವುದು ಹೇಗೆ, ಎಷ್ಟು ಕಾಲವಾಗಬಹುದು ಆಕೆ ಏಳಲು, ಮತ್ತೆ ಅದೇನೊ ಕರೆಂಟ್ ಕೊಡುವುದು ಅನ್ನುತ್ತಾರಲ್ಲ, ಎಲೆಕ್ಟ್ರಿಕ್ ಶಾಕ್ ಅವೆಲ್ಲ ಆಗಲ್ಲ ಅಲ್ಲವೆ ಡಾಕ್ಟರ್
ಡಾಕ್ಟರ್ ದ್ವನಿ ಒಂದು ರೀತಿ ಇತ್ತು,
ರೀ ಅವೆಲ್ಲ ಹೇಳಬೇಡಿ, ಇಲ್ಲಿ ನೀವಲ್ಲ ಡಾಕ್ಟರ್ ನಾನು. ಈ ಕೇಸಿನಲ್ಲಿ ಏನೆಲ್ಲ ಮಾಡಿದರೆ ಆಕೆ ಪ್ರಾಣಕ್ಕೆ ಅಪಾಯವಾಗಬಹುದು.
ಇಷ್ಟು ಕಾಲ ಎಂದು ಹೇಳುವುದು ಸ್ವಲ್ಪ ಕಷ್ಟವೆ , ಆಕೆ ತಾನಾಗೆ ಏಳಬೇಕು. ಸದ್ಯಕ್ಕೆ ಅದಕ್ಕೆ ಕಾಯಬೇಕು. ಆಕೆ ಯಾರ ದ್ವನಿಗೂ ಪ್ರತಿಕ್ರಿಯಿಸುತ್ತಿಲ್ಲ. ಸದ್ಯಕ್ಕೆ ಇವರ ದ್ವನಿಗೆ ಮೊದಲು ಪತಿಕ್ರಿಯೆ ನೀಡುತ್ತಿದ್ದರು ಅನ್ನುವಿರಿ, (ನನ್ನ ಕಡೇ ಕೈ ತೋರಿಸಿದರು) ಅದೊಂದು ಹೋಪ್ ಇದೆ , ನೋಡೋಣ ಇವರ ಮೂಲಕ ಪ್ರಯತ್ನಿಸೋಣ ಅದೊಂದೆ ಸಾದ್ಯತೇ ಇದೆ.
ಎಂದರು
ನಾನೀಗ ಆತಂಕ, ಅವಮಾನ, ಅಪಮಾನ, ತಪ್ಪಿತಸ್ತನ ಭಾವನೆ, ಪಶ್ಚತಾಪ ಎಲ್ಲ ಭಾವನೆಗಳ ಮಿಶ್ರಣದಲ್ಲಿ ತಲೆ ತಗ್ಗಿಸಿ ಕುಳಿತೆ. ಅದು ತುಂಬಾ ಯಾತನಮಯ ದಿನಗಳಾಗಿದ್ದವು. ನಾನು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆ. ಡಾಕ್ಟರ್ ಹೇಳಿದಂತೆ ದಿನವೂ ಬೇರೆ ಬೇರೆ ಮಾರ್ಗಗಳಿಂದ ಜ್ಯೋತಿಯನ್ನು ಎಬ್ಬಿಸಲು ಪ್ರಯತ್ನಪಡುತ್ತಿದ್ದೆ. ಆದರೆ ಯಾವ ಪರಿಣಾಮವು ಇರಲಿಲ್ಲ. ಆಕೆಗೆ ಮಲಗಿದ ಕಡೆ ಕೃತಕ ರೀತಿಯಲ್ಲಿ ಅಹಾರ ಕೊಟ್ಟು ಅವಳ ದೇಹವನ್ನು ಜತನದಿಂದ ನೋಡಿಕೊಳ್ಳುತ್ತಿದ್ದರು. ಅವಳನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಸಹ ನಿರಾಶರಾಗಿದ್ದರು, ಅವರ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿದ್ದವು. ಹಾಗೆ ಅವಳಿಗೆ ವಿದ್ಯುತ್ ಶಾಕ್ ಕೊಡುವ ಮಟ್ಟಿಗೆ ಯಾವ ಡಾಕ್ಟರ್ ಸಹ ಒಪ್ಪಲಿಲ್ಲ. ಮೆದುಳು ವ್ಯಾದಿಗ್ರಸ್ಥವಾಗಿ, ಹತೋಟಿ ತಪ್ಪಿ ವರ್ತಿಸುತ್ತಿದ್ದರೆ, ಅ ಮಾರ್ಗ ಅನುಸರಿಸಬಹುದೆ ಹೊರತು, ಆರೋಗ್ಯಪೂರ್ಣವಾಗಿರುವ ಮೆದುಳಿಗೆ ಶಾಕ್ ಕೊಡುವುದು ಸರಿಯಲ್ಲ ಎಂದು ಸುಮ್ಮನಾಗಿದ್ದರು.
ನನ್ನಲ್ಲಿ ಅಪರಾದಿ ಭಾವ ಜಾಗೃತವಾಗಿ ನನ್ನ ಮನಸಿನ ಸ್ವಾದೀನ ತಪ್ಪುತ್ತಿತ್ತು. ಎಲ್ಲಿಯಾದರು ಹೊರಗೆ ಹೋಗಿ ಬರಬೇಕೆಂದು ನಿರ್ಧರಿಸಿದೆ. ಆದರೆ ಅದನ್ನು ಯಾರಲ್ಲಿಯೂ ಹೇಳಲು ಹೋಗದೆ, ನಾನು ಶೃಂಗೇರಿಗೆ ಹೊರಟುಬಿಟ್ಟೆ. 
 
ಮುಂದುವರೆಯುವುದು .....

Monday, August 21, 2017

ನೆನಪಿನ ಪಯಣ - ಭಾಗ 7

ನೆನಪಿನ ಪಯಣ - ಭಾಗ 7

 
ರೂಮಿನೊಳಗೆ ಬಂದರೆ ಜ್ಯೋತಿ ಹಾಗೆ ಮಲಗಿದ್ದರು.
ಆನಂದನಿಗೆ ಸಣ್ಣ ದ್ವನಿಯಲ್ಲಿ ಎಲ್ಲವನ್ನು ತಿಳಿಸಿದೆ. ಸಮಯ ಆಗಲೆ ರಾತ್ರಿ ಒಂಬತ್ತರ ಸಮೀಪ. ಆರ್ಯನ ಹೆಂಡತಿ ಉಷಾ, ತಮಗೆ ಬೆಳಗ್ಗೆ ಆಪೀಸಿಗೆ ಹೋಗಬೇಕಾಗಿದೆ ಎಂದು ತಿಳಿಸಿದರು, ಹಾಗಾಗಿ ಆರ್ಯ ಹಾಗು ಉಷಾಗೆ ಹೊರಡಲು ತಿಳಿಸಿದೆವು. ಅವರು ಒಲ್ಲದ ಮನದಿಂದ ಹೊರಟರು. ಮೂರ್ತಿಗಳು ಸಪ್ಪೆಯಾಗಿಯೆ ಹೊರಟರು. ಸಂದ್ಯಾ ತನ್ನ ಮನೆಗೆ ಪೋನ್ ಮಾಡಿ, ಅವರ ಅಮ್ಮನ ಬಳಿ, ತಾನು ರಾತ್ರಿ ಎಲ್ಲ ಜ್ಯೋತಿಯ ಮನೆಯಲ್ಲಿ ಇರಬೇಕಾಗಬಹುದು ಎಂದು ತಿಳಿಸಿದರು.
ಈಗ ಮಲಗಿರುವ ಜ್ಯೋತಿಯ ಸುತ್ತ, ನಾನು ಆನಂದ ಹಾಗು ಸಂದ್ಯಾ ಕುಳಿತಿದ್ದೆವು.
ಜ್ಯೋತಿ ಪುನಃ ಕನಲಿದಳು, ಅದು ಅವಳು ಮಾತನಾಡುವ ಸೂಚನೆ ಎಂದು ಅರಿತೆವು,.
ನಿಜವಾಗಿತ್ತು ಆಕೆಯ ಮಾತು ಪುನಃ ಪ್ರಾರಂಭವಾಯಿತು
ಸೂರ್ಯನ ರಚನೆ ನಮ್ಮ ಭೂಮಿಯ ರಚನೆಗೆ ಮೂಲವಸ್ತುವಾಗಿ ಕಾಣುತ್ತದೆ. ಇದನ್ನ ಆಕಾಶವೆಂದು ಕರೆಯುವುದೊ ಬೇಡವೋ ತಿಳಿಯದು. ಅಗಾದವಾದ ಅವಕಾಶ. ಮೊಡ ದಟೈಸಿದಂತೆ ಬರಿಯ ಬಿಳಿಯ ಧೂಮ. ಆದರೆ ಅದು ಕೇವಲ ಧೂಮವಾಗದೆ ಶಕ್ತಿ ಸಂಚಯಗೊಂಡ ಮೂಲವಸ್ತು. ಒಳಗೆ ಅಗಣಿತ ವೇಗದಿಂದ ಸುತ್ತುತ್ತಿರುವ ಧೂಮ ಸುಳಿ. ನಡುಬಾಗದಲ್ಲಿ , ಎಂತದೋ ಕುಸಿತ. ಸೂರ್ಯನ ಮೂಲ ಸ್ವರೂಪ. ಕೋಟಿ ಕೋಟಿ ಜಲಜನಕ ಬಾಂಬುಗಳನ್ನು ಸಿಡಿಸಿದರು, ನಾವು ಉಹಿಸಲಾಗದ ಅಪಾರ ಶಕ್ತಿಯ ಸಂಚಯ ಸೂರ್ಯ. ಅಂತಹ ಅಂತರ್ ವಿಸ್ಪೋಟಗಳಿದಂಲೆ ತನ್ನ ಜೀವಿತ ಹಾಗು ಆ ಶಕ್ತಿಯ ಮೂಲವೆ ಭೂಮಿ ಹಾಗು ಇತರೆ ಗ್ರಹಗಳಿಗೂ ಅಹಾರವೆನ್ನುವುದು ವಿಚಿತ್ರ. ಸೂರ್ಯನ ಪ್ರಾರಂಭಿಕ ರೂಪವನ್ನು ವರ್ಣಿಸುವುದು ಪದಗಳಿಂದ ಅಶಕ್ಯ. ಆ ಅಪಾರ ಶಕ್ತಿಯಾಗಲಿ, ಬೆಳಕಾಗಲಿ, ಅಲ್ಲಿಂದ ಹುಟ್ಟುತ್ತಿರುವ ಅಪರಿಮಿತ ಶಾಖದ ಶಕ್ತಿಯಾಗಲಿ ಹೋಲಿಕೆಯೆ ಇಲ್ಲದ ಅಸದೃಷ್ಯ ಘಟನೆ ಎನ್ನಿಸುತ್ತಿದೆ.
ಇಂತಹ ಒಂದು ಕ್ರಿಯೆ ಪೂರ್ಣವಾಗುವುದು ಮಾತ್ರ ಕೋಟಿ ಕೋಟಿ ಮನುಷ್ಯ ವರ್ಷಗಳ ಕಾಲಮಾನದಲ್ಲಿ, ಇಲ್ಲಿ ಕಾಲವೆಂಬುದೆ ಇಲ್ಲ. ಕಾಲಕ್ಕೆ ಅರ್ಥವೂ ಇಲ್ಲ. ಕಾಲದಲ್ಲಿ ಹಿಂದೆ ಹೋಗುವುದು ಅನ್ನುವ ಮಾತು ಅಸಂಗತವಾಗಿ ಕಾಣುತ್ತಿದೆ. .... ಜ್ಯೋತಿಯ ನಗು.... ಅಂತಹ ಸೂರ್ಯನ ನಿರ್ಮಾಣದ ಕ್ರಿಯೆಯನ್ನು ವರ್ಣಿಸಲು ಹೇಗೆ ಸಾದ್ಯ. ತಮಸೋಮ ಜ್ಯೋತಿರ್ಗಮಯ ಎನ್ನುವ ಮಾತೊಂದೆ ಸಾಕು ಅನ್ನಿಸುತ್ತಿದೆ ಅವನ ಸೃಷ್ಟಿಯನ್ನು ವರ್ಣಿಸಲು. ಅಂತಹ ಸೂರ್ಯನ ಅಗಾದ ಶಕ್ತಿಯೆ ಭೂಮಿಯಾಗಲಿ ಇತರ ಗ್ರಹಗಳಾಗಲಿ ರೂಪಗೊಳ್ಳಲು, ಇರಲು, ಅಲ್ಲಿ ಜೀವಿ ಎನ್ನುವ ವಸ್ತು ಕಾಣಿಸಿಕೊಳ್ಳಲು ಸಾದ್ಯವಾಗಿಸಿದೆ
 
ಜ್ಯೋತಿ ತನ್ನ ಮಾತನ್ನು ಮುಂದುವರೆಸಿದ್ದಳು. ಸೂರ್ಯನ ರಚನೆಯನ್ನು ಅವನ ಸ್ವರೂಪವನ್ನು , ಅವನ ಮನೋಹರ ಭೀಬಿತ್ಸ, ಉಗ್ರ ರೂಪಗಳನ್ನು ವರ್ಣಿಸುತ್ತಲೇ ಹೋದಳು..
ಆನಂದ
’ನಾನು ಹೊರಗೆ ಹೋಗಿ ಎಲ್ಲರಿಗೂ ತಿನ್ನಲು ಏನಾದರು ತರುತ್ತೇನೆ, ನೀವು ಜ್ಯೋತಿಯ ಬಳಿಯೆ ಇರಿ’ ’ ’
ಅವನು ಹೊರಗೆ ಹೋಗಿ ಸ್ಕೂಟರ್ ಸ್ಟಾರ್ಟ್ ಮಾಡಿ ಹೋದ ಶಬ್ದ ಕೇಳಿಸಿತು. ನಂತರ ನಿಶ್ಯಬ್ದ.
ಅಂತಹ ನಿಶ್ಯಬ್ದದ ರಾತ್ರಿಯಲ್ಲಿ ಜ್ಯೋತಿ ಮಾತ್ರ ಸಣ್ಣ ದ್ವನಿಯಲ್ಲಿ ಸೂರ್ಯನ ಮೇಲ್ಮೈಯನ್ನು ಅದರ ಅಸದೃಷ್ಯ ಹೋಲಿಕೆಯನ್ನು ವಿವರಿಸುತ್ತಿದ್ದಳು. ಕೆಲವು ಕ್ಷಣಗಳಲ್ಲಿ , ಅವಳು ಪುನಃ ಮೌನವಾದಳು.
ಹಿಂದಕ್ಕೆ ಅಂದರೆ ಜ್ಯೋತಿ ತನ್ನ ನೆನಪಿನ ಪಯಣದಲ್ಲಿ ಎಲ್ಲಿಯವರೆಗೂ ಹೋಗಲು ಸಾದ್ಯ? ಅನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಅಷ್ಟಕ್ಕೂ ಸೂರ್ಯನ ರಚನೆಯ ನಂತರ ಮತ್ತೂ ಹಿಂದೆ ಹೋಗುವುದು ಅಂದರೆ ಅರ್ಥವೇನು. ಇವಳು ಮಾತನಾಡುತ್ತಿರುವದಾದರು ಏನು, ಅದು ಆಕೆಗೆ ಹೇಗೆ ಕಾಣಿಸುತ್ತಿದೆ. ಕಾಣುತ್ತದೆ ಅನ್ನುವದಾದರೆ ಆಗ ಆಕೆಯ ಸ್ವರೂಪವಾದರು ಏನು, ಆಗಿನ್ನು ಜೀವಿಗಳೆ ಈ ಸೃಷ್ಟಿಯಲ್ಲಿರಲಿಲ್ಲ ಅನ್ನುವ ಭಾವ ಬಂದಿತು.
ನನ್ನ ಮನಸೀಗ ಹುಚ್ಚುಚ್ಚಾಗಿ ಚಿಂತಿಸುತ್ತಿತ್ತು. ಒಂದು ವೇಳೆ ಭೂಮಿಯಲ್ಲಿನ ಈ ಜೀವಿಗಳೆಲ್ಲ ಹೊರಗಿನ ಯಾವುದೋನಕ್ಷತ್ರ ಲೋಕದಿಂದ ಬಂದಿದೆಯೆಂದು ಉಹಿಸುವದಾದರೆ, ನಮ್ಮ ಮನುಷಯನ ಮೆದುಳಿನಲ್ಲಿ , ಸೂರ್ಯ ನಕ್ಷತ್ರಗಳ ರಚನೆಯ ವಿವರವೂ ಹುದುಗಿರಲು ಸಾದ್ಯವೇ ಎಂದೆಲ್ಲ ಚಿಂತಿಸುತ್ತಿದ್ದೆ. ನಾವೀಗ ಯಾವುದೋ ಭ್ರಮೆಯ ಲೋಕದಲ್ಲಿ ಇದ್ದಂತೆ ಇದ್ದೆವು. ಯಾವುದೋ ಸಣ್ಣ ಮಾತಿನಿಂದ ಪ್ರಾರಂಭವಾದ ನಮ್ಮ ಪರಿಸ್ಥಿತಿ ಇಂತಹ ವಿಚಿತ್ರ ಸಂದರ್ಭದಲ್ಲಿ ಸಿಲುಕುವಂತೆ ಮಾಡಿತ್ತು. ಬಹುಶಃ ನಾಳೆ ಬೆಳಗಾದರೆ ಈಕೆಯ ಮಗನೂ ಬರುವ , ಅವನು ಹೀಗೆ ಮಲಗಿರುವ ತನ್ನ ತಾಯಿಯನ್ನು ಕಂಡರೆ ಏನೆಂದು ಭಾವಿಸುವನೋ, ವಯಸ್ಸಿನಲ್ಲಿ ಹಿರಿಯರಾದ ನಾವೆಲ್ಲ ಸೇರಿ, ಯಾವುದೋ ಉದ್ದಟತನ, ಬಾಲಿಷವಾಗಿ ಚಿಂತಿಸಿ ಅವರ ಅಮ್ಮನನ್ನು ಇಂತಹ ಪರಿಸ್ಥಿತಿಗೆ ದೂಡಿದ್ದಾರೆ ಎಂದು ನೊಂದುಕೊಳ್ಳುವದಿಲ್ಲವೆ ?
ಆದರೆ ಸ್ವಸ್ಥವಾಗಿ ಮಲಗಿದ್ದ ಜ್ಯೋತಿ ಮಾತ್ರ ಎಲ್ಲ ಯೋಚನೆಗಳಿಂದ ಹೊರತಾದವರಂತೆ, ಸೂರ್ಯನ ರಚನೆಯನ್ನು ಅದರ ಭೀಕರತೆಯನ್ನು ಸೌಂದರ್ಯವನ್ನು ವರ್ಣಿಸುತ್ತಲೇ ಹೋದರು. ಕಡೆಗೊಮ್ಮೆ ಆಕೆಯ ಮಾತುಗಳು ನಿಂತವು.
ಹೊರಗೆ ಸ್ಕೂಟರ್ ನಿಂತ ಶಬ್ಧ, ಬಹುಶಃ ಆನಂದ ಬಂದ ಅನ್ನಿಸುತ್ತೆ ಅಂದುಕೊಳ್ಳುವಾಗಲೆ, ಆನಂದ ಊಟದ ಪಾರ್ಸಲ್ ಗಳನ್ನು ಹಿಡಿದು ಒಳಬಂದ. ನನಗಂತೂ ಸಂಕೋಚವೆನಿಸುತ್ತ ಇತ್ತು.
 
ನಾನು ಜ್ಯೋತಿಯನ್ನು ಊಟಕ್ಕೆ ಎಬ್ಬಿಸಿನೋಡೋಣಾ ಎಂದುಕೊಂಡೆ. ಡಾಕ್ಟರ್ ಹೇಳಿದ್ದು ನೆನಪಿತ್ತು, ಅವಳನ್ನು ಬಲವಂತ ಮಾಡಬೇಡಿ ಎಂದು.
ನಾನು ಮೆಲುದ್ವನಿಯಲ್ಲಿ
ಜ್ಯೋತಿ, ಆನಂದ ಊಟ ತಂದಿದ್ದಾರೆ, ಏಳಿ ಊಟ ಮಾಡೋಣಾವೆ ? ಏಳುತ್ತೀರಾ ಎಂದೆ
ಜ್ಯೋತಿಯ ಕಡೆಯಿಂದ ದೀರ್ಘಮೌನ, ಮತ್ತೆ ಕೇಳಿದೆ
ಜ್ಯೋತಿ ಏಳಿ ಊಟ ಮಾಡೋಣವೆ ? ನೋಡಿ ಆನಂದ ನಿಮಗಾಗಿ ಊಟ ತಂದಿದ್ದಾರೆ
ಅತಿ ನಿಧಾನ ಅನ್ನುವಂತೆ ಕೇಳಿದರು
ಆನಂದ ....... ಆನಂದ ಯಾರು ?
ನನಗೆ ಗಾಭರಿ ಅನ್ನಿಸಿತು.
ಇದೇನು ಹೀಗನ್ನುವಿರಿ, ಆನಂದ ನಿಮ್ಮ ಪತಿ, ಬೆಳಗ್ಗೆ ನಿಮ್ಮ ಮಗ ಶಶಾಂಕ ಬರುತ್ತಿದ್ದಾನೆ ಎಂದೆ
ಆಕೆ ಮತ್ತೆ,
ಆನಂದ...... ಶಶಾಂಕ...... ಯಾರು ..... ಹಿಂದೆ ಮತ್ತೂ ಹಿಂದೆ ........ ಹೋಗುತ್ತಿರುವೆ
ಎಂದರು
ನನ್ನ ಮುಖದಲ್ಲಿನ ಗಾಭರಿ ನೋಡುತ್ತಿದ್ದ, ಆನಂದ, ನಿಧಾನವಾಗಿ ಬಂದು ನನ್ನ ಹೆಗಲ ಮೇಲೆ ಕೈ ಇಟ್ಟು ಮೃದುವಾಗಿ ಅದುಮಿದ.
ಗಾಭರಿ ಬೇಡ ನೋಡೋಣ ಡಾಕ್ಟರ್ ಬಂದರೆ ಸರಿಹೋಗಬಹುದು ಎಂದ ,
ಸಂಧ್ಯಾರಿಗೆ ಊಟವನ್ನು ಸಿದ್ದಪಡಿಸಲು ತಿಳಿಸಿ, ಸುಮ್ಮನೆ ಕುಳಿತ. ಸಂದ್ಯಾ ನನಗೆ ಆನಂದನಿಗೆ ಇಬ್ಬರಿಗೂ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟರು. ಅದೇನು ಅಂತಹ ಹಸಿವಿನಲ್ಲೂ ಸಹ ತಿನ್ನಲೂ ಕಷ್ಟವಾಗುತ್ತಿತ್ತು. ಇದೆಂತಹ ಪ್ರಮಾಧ ಮಾಡಿದೆ ಎನ್ನುವ ಆತಂಕ ನನ್ನ ಮನಸನ್ನು ತುಂಬಿತ್ತು. ಸಂದ್ಯಾರಿಗೆ ಸಹ ಊಟ ಮಾಡಲು ಆನಂದ ತಿಳಿಸಿದ. ನಾವು ಸೇರಿದಷ್ಟು ಊಟ ಮಾಡಿ ಮುಗಿಸಿದೆವು, ತಂದಿದ್ದ ಅಹಾರದಲ್ಲಿ ಅರ್ಧವಿನ್ನು ಪಾತ್ರೆಗಳಲ್ಲಿಯೆ ಉಳಿದಿತ್ತು.
ನಾನು ಸ್ವಲ್ಪ ಕಾಲ ಹಾಲಿನಲ್ಲಿ ಕುಳಿತಿದ್ದೆ. ಈಗ ಡಾಕ್ಟರ್ ಬರುವದನ್ನು ಕಾಯುವದರ ವಿನಃ ಬೇರೆನು ಮಾಡಲು ಸಾದ್ಯವಿಲ್ಲ ಎನ್ನುವ ಸ್ಥಿತಿ. ಮತ್ತೆ ರೂಮಿನಲ್ಲಿ ಹೋದೆ. ಸಂದ್ಯಾ ಜ್ಯೋತಿಯ ಪಕ್ಕ ಕುಳಿತಿದ್ದರು. ಸಂದ್ಯಾರ ಮುಖ ಕಳೆಗುಂದಿತ್ತು. ಏನು ಹೀಗಾಯಿತಲ್ಲ ಎನ್ನುವ ಚಿಂತೆ. ಜ್ಯೋತಿ ಮಾತ್ರ ಯಥಾ ಪ್ರಕಾರ ಮಲಗಿದ್ದರು. ಅವರ ಮುಖದಲ್ಲಿ ಯಾವುದೇ ತೊಂದರೆ ಇರದೆ ಸಾಮಾನ್ಯವಾಗಿ ಮಲಗುವ ಹಾಗೆ ಇದ್ದರು.
 
ನನ್ನ ಮೊಬೈಲ್ ರಿಂಗ್ ಆಯಿತು. ಓ ಅದೇ ಡಾಕ್ಟರ್ ನಂಬರಿನಿಂದ ಕಾಲ್ ಬಂದಿತ್ತು. ಅವರೇ ಹೇಳಿದರು,
’ನಾನೀಗ ರಸ್ತೆಯ ತುದಿಯಲ್ಲಿದ್ದೇನೆ, ಟೂ ವೀಲರ್ ನಲ್ಲಿಯೆ ಬರುತ್ತಿದ್ದೇನೆ, ನೀವು ಯಾರಾದರು ಮನೆಯಿಂದ ಹೊರಬಂದರೆ ನನಗೆ ಮನೆ ಗುರುತಿಸಲು ಆಗುತ್ತದೆ’
ನಾನು ಸರಿ ಎಂದೆ, ನಾನು ಹೊರಗೆ ಬರುತ್ತಿದ್ದೇನೆ ಎಂದು ತಿಳಿಸಿ. ಆನಂದನಿಗೆ ಹೇಳಿದೆ. ನಾನು ಆನಂದ ಇಬ್ಬರು ಬಾಗಿಲು ತೆರೆದು,ಹೊರಗೆ ಬಂದು ಗೇಟ್ ತೆಗೆದು ರಸ್ತೆಯಲ್ಲಿ ಬಂದು ನಿಂತೆವು. ಒಂದೆರಡು ನಿಮಿಷವಾಗಿರಬಹುದು, ರಸ್ತೆಯಲ್ಲಿ ಮೋಟಾರ್ ಬೈಕ್ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದು ನಿಲ್ಲಿಸಿದ ಅವರು
’ ನೀವೇ ಅಲ್ಲವೆ ಕಾಲ್ ಮಾಡಿದ್ದು, ನಾನು ಡಾಕ್ಟರ ಶ್ರೀಧರ್ ಎಂದು ಅವರನ್ನು ಪರಿಚಯಿಸಿಕೊಂಡರು
ಆನಂದ ಮತ್ತು ನಾನು ಅವರನ್ನು ಬನ್ನಿ ಎಂದು ಒಳಗೆ ಕರೆತಂದೆವು. ನಾನು ಅವರ ಸ್ನೇಹಿತ. ಅಚ್ಚುತ ನನ್ನ ತಮ್ಮನ ಮಗ ಎಂದು ತಿಳಿಸಿದೆ.
ಸರಿ ಈಗ ಸಮಸ್ಯೆ ತಿಳಿಸಿ, ಅಂದ ಹಾಗೆ ಪೇಷೆಂಟ್ ಎಲ್ಲಿದ್ದಾರೆ, ಎಂದರು
ಅವರು ಪೇಷೆಂಟ್ ಎಂದು ಕೇಳಿದ್ದು, ನನಗೆ ಒಂದು ರೀತಿ ಆಯಿತಾದರು ಏನು ಮಾಡುವುದು ಸುಮ್ಮನಾದೆ.
ನಾನು ಈಗ ಮೊದಲಿನಿಂದ ನಡೆದ ಕತೆಯನ್ನೆಲ್ಲ ಪುನಃ ತಿಳಿಸಿದೆ. ನಂತರ ಅವರು ಯೋಚಿಸುತ್ತ ಬನ್ನಿ ರೂಮಿನೊಳಗೆ ಹೋಗೋಣ ಎನ್ನುತ್ತ ಹೊರಟರು. ನಾವು ಹಿಂದೆ. ಒಳಗೆ ಜ್ಯೋತಿಯ ಪಕ್ಕ ಕುಳಿತಿದ್ದ ಸಂದ್ಯಾ ಎದ್ದು ಡಾಕ್ಟರಿಗೆ ಜಾಗಮಾಡಿಕೊಟ್ಟರು. ಅಲ್ಲಿ ಕುಳಿತ, ಡಾಕ್ಟರ್, ಜ್ಯೋತಿಯ, ನಾಡಿಯನ್ನುಪರೀಕ್ಷಿಸಿ, ನಂತರ ಮೃದುವಾಗೆ ರೆಪ್ಪೆಗಳನ್ನು ಬಿಡಿಸಿ ನೋಡಿದರು. ಜ್ಯೋತಿಯ ಕೈ ಬೆರಳುಗಳನ್ನು, ಕಾಲುಗಳ ಬೆರಳನ್ನು ಅಲುಗಿಸಿ, ಮತ್ತೇನೇನೊ ಕೆಲವು ದೈಹಿಕ ಪರೀಕ್ಷ ನಡೆಸಿ, ಅವಳ ಹೆಸರನ್ನು ನಮ್ಮಿಂದ ತಿಳಿದು, ಆಕೆಯ ಕಿವಿಯತ್ತ ಬಗ್ಗಿ
ಜ್ಯೋತಿ.... ಜ್ಯೋತಿ ಎಂದು ಕೂಗಿದರು.
ಆಕೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ನಮ್ಮತ್ತ ತಿರುಗಿ ಹೇಳಿದರು,
ಆಕೆ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಲೆ ಇಲ್ಲ ಅನ್ನಿಸುತ್ತಿದೆ, ಅಸಲಿಗೆ ಹೊರಗಿನ ಯಾವುದೇ ಶಬ್ದ ಕೇಳಿಸಿಕೊಳ್ಳುತ್ತಿಲ್ಲ ಎಂದರು.
ನಾನು ಇಲ್ಲ ಡಾಕ್ಟರ್ , ಕೆಲವು ಸಲ ನನ್ನ ಮಾತಿಗೆ ರಿಯಾಕ್ಟ್ ಮಾಡುತ್ತಿದ್ದಾರೆ ಎಂದೆ
ಹಾಗಿದ್ದರೆ ನೀವು ಆಕೆಯನ್ನು ಮಾತನಾಡಿಸಿ ನೋಡೋಣ ಎನ್ನುತ್ತ ಎದ್ದು, ರೂಮಿನಲ್ಲಿಯ ಎಲ್ಲ ದೀಪಗಳನ್ನು ಹಾಕುವಂತೆ ತಿಳಿಸಿದರು
ನಾನು ನಿಧಾನಕ್ಕೆ
ಜ್ಯೋತಿ.... ನೋಡಿ ಎದ್ದೇಳಿ, ಡಾಕ್ಟರ್ ಬಂದಿದ್ದಾರೆ, ನಿಮ್ಮನ್ನು ಪರೀಕ್ಷಿಸಬೇಕಂತೆ. ಎಚ್ಚರ ಮಾಡಿಕೊಳ್ಳಿ. ಎಂದೆ
 
ಜ್ಯೋತಿಯ ಮುಖದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ , ಒಂದು ನಿಮಿಶವಾಯಿತೇನೊ , ಏನು ಮಾಡುವುದು ಎಂದು ಚಿಂತಿಸುವಾಗ
ಕತ್ತಲು..... ಕತ್ತಲಿನತ್ತ ಪಯಣ ಎಂದು ಕನಲಿದರು ಜ್ಯೋತಿ
ಈಗ ಡಾಕ್ಟರ್ ಆಸಕ್ತಿಯಿಂದ ನೋಡುತ್ತಿದ್ದರು.
ಏನು ಕತ್ತಲು ಜ್ಯೋತಿ ಎಂದೆ
 
ಏನಿಲ್ಲ. ಸೃಷ್ಟಿಯ ಮೊಟ್ಟ ಮೊದಲ ಹಂತ. ಎಲ್ಲದಕ್ಕಿಂತ ಮೊದಲು. ಏನು ಇಲ್ಲದ ಸ್ಥಿತಿಯತ್ತ ಪಯಣ ಎಂದರು. ಈಕೆ ಏನು ಹೇಳುತ್ತಿದ್ದಾರೆ ಎಂದು ಚಿಂತಿಸುತ್ತಿದ್ದೆ. ಆಕೆ ಮುಂದುವರೆದರು
 
ಕತ್ತಲು, ಕತ್ತಲು ಹೊರತು ಏನಿಲ್ಲ. ಏನಿಲ್ಲ ಅಂದರೆ ಏನು ಇಲ್ಲ, ಖಾಲಿ ಜಾಗವು ಇಲ್ಲ, ಶೂನ್ಯವೂ ಇಲ್ಲ. ಆದರು ಸೃಷ್ಟಿಗೆ ಬೇಕಾದ ಎಲ್ಲ ಸಿದ್ದತೆಯೂ ನಡೆದಿದೆ. ನಾನು ಅದಕ್ಕೆ ಸಾಕ್ಷಿ ಆಗಲಿದ್ದೇನೆ
ಜ್ಯೋತಿಯ ಮುಖದಲ್ಲಿ ಅಪಾರ ಸಂತಸ.
ಇದೊಂದು ಸ್ಥಿತಿ, ಏನು ಇಲ್ಲ ಅಂದರೆ ಏನು ಇಲ್ಲ, ಬೆಳಕೂ ಇಲ್ಲ , ಕತ್ತಲೆಯೂ ಅಲ್ಲ. ಶಬ್ದವೂ ಇಲ್ಲ. ಇಲ್ಲಿ ಎಲ್ಲವೂ ನಿಶ್ಯಬ್ದವೇ. ಸಮಯವೆನ್ನುವುದು ಇಲ್ಲಿ ಸಮಾದಿಯಾಗಿದೆ. ಇಲ್ಲಿಂದ ಹಿಂದಕ್ಕೆ ಸಮಯವೂ ಇಲ್ಲ. ಬೆಳಕು ಸಮಯ ಶಬ್ದ ಎಲ್ಲವೂ ಬೀಜರೂಪದಲ್ಲಿ ಹುದುಗಿಹೋಗಿದೆ. ಅಸಲಿಗೆ ಆಕಾಶವೇ ಇಲ್ಲ , ಆಕೆಯ ಹೊರತಾಗಿಏನು ಇಲ್ಲ.
 
ನನಗೆ ಕೊಂಚ ಕುತೂಹಲವೆನಿಸಿತ್ತು
ಆಕೆಯೆ ಆಕೆ ಎಂದರೆ ಯಾರು?
ಶಕ್ತಿ .... ಶಕ್ತಿ ಯನ್ನು ಆಕೆ ಎಂದೆ. ಪೂರ್ಣ ಪ್ರಖಂಡ ಶೂನ್ಯದಲ್ಲಿ ಶಕ್ತಿಯೊಂದು ನಿಗೂಡವಾಗಿ ಹುದುಗಿದೆ. ಬೀಜರೂಪದಲ್ಲಿ ಶಕ್ತಿಅಡಗಿದೆ. ಅಂತಹ ಶಕ್ತಿಯ ಅವಿರ್ಭವಕ್ಕಾಗಿ ಕ್ಷಣ ಸಜ್ಜಾಗಿದೆ. ತನ್ನೊಳಗೆ ತಾನು ಅಸ್ತಂಗತವಾಗಿರುವ ಆ ಪ್ರಚಂಡ ಶಕ್ತಿ ಪ್ರಕಟಗೊಳ್ಳಲಿದೆ, ಮತ್ತು ಪರಿಪೂರ್ಣ ಭ್ರಹ್ಮಾಂಡದ ಉದಯಕ್ಕೆ ಕಾರಣವಾಗಲಿದೆ.
 
ಅಂದರೆ ನೀವು ಈಗ ಬಿಗ್ ಬಾಂಗ್ ಸ್ಪೋಟದ ಬಗ್ಗೆ ಹೇಳುತ್ತಿದ್ದೀರಾ ?
ಹೌದು. ಅಂತಹ ಪ್ರಚಂಡ ಸ್ಪೋಟಕ್ಕೆ ನಾನು ಸಹ ಸಾಕ್ಷಿಯಾಗಲಿದ್ದೇನೆ.
ನಾನು ಸಹ ಅಂದರೆ ನಿಮ್ಮ ಜೊತೆ ಮತ್ಯಾರು ಇದ್ದಾರೆ.
ನನಗೆ ಕುತೂಹಲ
ದೀರ್ಘ ಮೌನ
ತಿಳಿಯದು ,... ಹೇಳಲಾರೆ....... ಗೊತ್ತಿಲ್ಲ... ನಾನೀಗ ಸಮಯದ ಆಳದ ಸೆಳೆತದಲ್ಲಿ ಹುದುಗಿಹೋಗಿದ್ದೇನೆ. ಅಲ್ಲಿ ಯಾವ ಅನುಭವವೂ ಇಲ್ಲ ಬೆಳಕಿಲ್ಲ ಶಬ್ದವಿಲ್ಲ ಚಲನೆಯಿಲ್ಲ , ಸ್ಪೇಸ್ ಇಲ್ಲ, ಅಂತಹ ಮಹಾ ಸ್ಪೋಟದ ನಂತರ ನನ್ನ ಸ್ಥಿತಿ ಏನೋ ನನಗೂ ಗೊತ್ತಿಲ್ಲ.
ಮತ್ತೆ ನೀವು ಈ ಕಾಲದ ಪಯಣವನ್ನು ನಿಲ್ಲಿಸಿ ಹಿಂದೆ ಬರುವುದು ಯಾವಾಗ?
ಹಿಂದೆ ನಾನು ಹಿಂದೆ ಹೋಗುತ್ತಿದ್ದೆ ಇಷ್ಟು ಕಾಲ, ಈಗ ಸ್ಥಿರವಾಗಿದ್ದೇನೆ ..... ಮತ್ತೆ ಹಿಂದಕ್ಕೆ ಚಲಿಸಲಾರೆ.
ಹಾಗಲ್ಲ ನೀವು ಎಚ್ಚರಗೊಳ್ಳುವುದು ಯಾವಾಗ, ನಿಮಗಾಗಿ ಎಲ್ಲರೂ ಕಾಯುತ್ತಿದ್ದೇವೆ
ಗೊತ್ತಿಲ್ಲ ನಾನೀಗ ಕಾಲದ ಕೊನೆಯ ತುದಿ ತಲುಪಿರುವೆ. ಇಲ್ಲಿ ಎಲ್ಲವೂ ಸ್ಥಬ್ದ. ಇಲ್ಲಿ ಬೆಳಕಿಲ್ಲ ಶಬ್ದವಿಲ್ಲ ಚಲನೆಯಿಲ್ಲ ಸ್ಪೇಸ್ ಇಲ್ಲ ಮಹಾಸ್ಪೋಟಕ್ಕೆ ಕಾಯುತ್ತಿರುವೆ , ಯಾರಿಗೂ ಸಿಗದ ಅಪೂರ್ವ ಅವಕಾಶಕ್ಕಾಗಿ ಕಾದಿರುವೆ..... ಕತ್ತಲೆ ....... ನಿಗೂಡ ಕತ್ತಲೆ...
 
ಜ್ಯೋತಿಯ ಮಾತು ನಿಂತು ಹೋಯಿತು.
ನಂತರ ನಾನು ಮಾತನಾಡಿಸಲು ಎಷ್ಟೋ ಪ್ರಯತ್ನಪಟ್ಟೆ. ಆಗಲಿಲ್ಲ . ಆಕೆ ನನ್ನ ಮಾತಿಗೂ ಸಹ ಸ್ಪಂದಿಸುವದನ್ನು ನಿಲ್ಲಿಸಿದಳು.
ಡಾಕ್ಟರ್ , ಕುತೂಹಲದಿಂದ ನಮ್ಮ ಮಾತನ್ನು ಕೇಳುತ್ತಿದ್ದವರು ಏನು ಅರ್ಥವಾಗದಂತೆ ಕುಳಿತರು...
ಕಡೆಗೆ ಬಹಳ ಸಮಯದ ನಂತರ ಹೇಳಿದರು.
ಆಕೆಯ ಪರಿಸ್ಥಿತಿ ಅರ್ಥಮಾಡಿಕೊಳ್ಳಲಾಗುತ್ತಿಲ್ಲ . ನೀವು ನಿಮಾನ್ಸ್ ಗೆ ಅಡ್ಮಿಟ್ ಮಾಡಬೇಕಾಗಿದೆ ಅನ್ನಿಸುತ್ತೆ. ನಾನು ನನ್ನ ಸೀನಿಯರ್ ಜೊತೆ ಬೆಳಗ್ಗೆ ಮಾತನಾಡುವೆ. ಈಕೆಯ ದೇಹ ಸ್ಥಿತಿ ಸ್ಥಿರವಾಗಿದೆ. ಇವರ ಹಾರ್ಟ್ ಬೀಟ್ ಆಗಲಿ. ಪಲ್ಸ್ ಆಗಲಿ, ರಕ್ತದೊತ್ತಡವಾಗಲಿ ಅಂತಹ ವ್ಯೆತ್ಯಾಸವೇನಿಲ್ಲ ಅತ್ಯಂತ ಸಹಜವಾಗಿದೆ. ಈಕೆಯ ಮೆದುಳಿನ ಸ್ಥಿತಿ ಹಾಗು ಉಳಿದ ಪರೀಕ್ಷೆಗಳನ್ನು ಇಲ್ಲಿ ಮಾಡಲಾಗುವದಿಲ್ಲ. ನೀವು ಸಾದ್ಯವಾದರೆ ಈಗಲೆ ಅಥವ ನಾಳೆ ಬೆಳಗ್ಗೆ ಈಕೆಯನ್ನು ಇಲ್ಲಿಂದ ಸಾಗಿಸಿ, ಅಂಭ್ಯೂಲೆನ್ಸ್ ಗೆ ಕಾಲ್ ಮಾಡಿ. ನಿಮಾನ್ಸ್ ಗೆ ಅಡ್ಮಿಟ್ ಆದನಂತರ ಮುಂದಿನ ಕ್ರಮದ ಬಗ್ಗೆ ಚಿಂತಿಸೋಣ. ಸದ್ಯಕ್ಕೆ ಈಕೆಗೆ ಯಾವುದೇ ಮೆಡಿಸನ್ ಕೊಡುವ ಅವಶ್ಯಕತೆ ಕಾಣುತ್ತಿಲ್ಲ
ಮುಂದುವರೆಯುವುದು...

Friday, August 18, 2017

ನೆನಪಿನ ಪಯಣ - ಭಾಗ 6

ನೆನಪಿನ ಪಯಣ - ಭಾಗ 6


ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ

ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ
ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ.
ಎಲ್ಲ ಚೆನ್ನಾಗಿದ್ದಾರೆ ಎಂದು ತಿಳಿಸಿ ಅವನ ಮಾತುಗಳನ್ನು ಕತ್ತರಿಸುತ್ತಾ ಹೇಳಿದೆ, ಅಚ್ಯುತ ನಾನೀಗ ಒಂದು ತೊಂದರೆಯಲ್ಲಿದ್ದೇನೆ ಅಂತ ತಿಳಿಸಿ. ನಡೆದ ಘಟನೆಯನ್ನೆಲ್ಲ ವಿವರಿಸಿದೆ.
ನನಗೆ ನಾಚಿಕೆ ಅನ್ನಿಸಿತು. ಆದರೂ ನಾವು ಮಾಡಿರುವ ಕೆಲಸ ಆದರೂ ಹೇಳಲೇ ಬೇಕಿತ್ತು. ಅವನು ನನ್ನ ಮಾತುಗಳನ್ನೆಲ್ಲ ಕೆಲಕಾಲ ಕೇಳಿಕೊಂಡ, ನಂತರ ಕ್ಷಣದ ಮೌನ
ದೊಡ್ಡಪ್ಪ , ನೀವು ಹೇಳುವದನ್ನು ಕೇಳುವಾಗ ಸ್ವಲ್ಪ ಸಮಸ್ಯೆಯಲ್ಲಿ ಇದ್ದೀರೆಂದು ಅನ್ನಿಸುತ್ತಿದೆ. ಚಿಂತೆ ಮಾಡಬೇಡಿ. ನಿಮ್ಮ ಬೆಂಗಳೂರಿನಲ್ಲಿಯೆ ನನ್ನ ಸ್ನೇಹಿತ ಒಬ್ಬನಿದ್ದಾನೆ , ಶ್ರೀದರ್ ಎಂದು ಅವನು ಅಲ್ಲಿಯೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಅವನ ನಂಬರ್ ಕೊಡುತ್ತೇನೆ ಬರೆದುಕೊಳ್ಳಿ. ನಾನು ಸಹ ಅವನಿಗೆ ಪೋನ್ ಮಾಡುತ್ತೇನೆ. ಎಂದು ಅವನ ಸ್ನೇಹಿತನ ನಂಬರ್ ಹೇಳಿದ . ಬರೆದುಕೊಂಡು, ಮೊದಲು ಅಚ್ಚುತ ಅವನಿಗೆ ಪೋನ್ ಮಾಡಲಿ ಎಂದುಕೊಂಡೆ. ಅಷ್ಟರಲ್ಲಿ ರೂಮಿನಿಂದ ಹೊರಬಂದ ಸಂದ್ಯಾ, ನನ್ನನ್ನು ಒಳಬನ್ನಿ ಅನ್ನುವಂತೆ ಸನ್ನೆಮಾಡಿದರು

ಒಳಹೋದರೆ, ಜ್ಯೋತಿ ಮತ್ತೆ ಮಾತನಾಡುತ್ತಿದ್ದರು,
ಆದರೆ ಬಹಳ ನಿಧಾನ , ಒಂದು ಪದಕ್ಕು ಮತ್ತೊಂದು ಪದಕ್ಕೂ ಸಾಕಷ್ಟು ಅಂತರವಿಟ್ಟು ಮಾತನಾಡುವಾಗ, ಅವರು ಎಲ್ಲಿಂದಲೋ ಮಾತನಾಡುತ್ತಿರುವಂತೆ ಕೇಳಿಸುತ್ತಿತ್ತು
ಹೌದು ...... ನೀರು.... ಎಲ್ಲಡೆಯೂ ನೀರು... ಭೂಮಿಯ ಮೇಲೆ ನೀರಿನ ಹೊರತಾಗಿ ಏನು ಇಲ್ಲವೆ ?
ಅಂದರೆ ಜ್ಯೋತಿ ನೀವೀಗ ಮತ್ತೆ ಹಿಂದೆ ಹೋಗಿದ್ದೀರಾ ನೆನಪಿನಲ್ಲಿ

ಹಿಂದೆ ಹೌದು ಹಿಂದೆ ಆಂದರೆ ಹಿಂದೆ ಮೊದಲಿಗೆ.... ಅಲ್ಲಿ ನಾನು ನೀನು ಯಾರು ಇಲ್ಲ. ಪ್ರಾಣಿ ಜನ ಏನು ಇಲ್ಲ . ಮನೆ ಮರ ಏನು ಇಲ್ಲ.... ನೀರು ಹೊರತು ಏನು ಇಲ್ಲ. ಆಕಾಶವು ನೀರಿನಿಂದ ತುಂಬಿದೆಯೋನೊ......
ಸೃಷ್ಟಿಯ ಮೊದಲ ದಿನಗಳ ಬಗ್ಗೆ ಹೇಳುತ್ತಿದ್ದೀರಾ ? ಎಂದೆ
ಇಲ್ಲ, ನೀರು ಬಿಟ್ಟು ಏನು ಇಲ್ಲ. ನೀರಿನ ಹೊರತಾಗಿ ಏನು ಇಲ್ಲ. ಭೂಮಿಯಲ್ಲಿ ನೀರಿನ ಹೊರತು ಮತ್ತೇನುಇಲ್ಲ ಅನ್ನಿಸುತ್ತಿದೆ. ಆಕಾಶವು ಮೋಡದಿಂದ ಮುಚ್ಚಿ ಎಷ್ಟೋ ಸಾವಿರ ವರ್ಷ ಲಕ್ಷ ವರ್ಷಗಳಾಯಿತೇನೊ ಮತ್ತೂ ಹಿಂದೆ ಹೋಗಬೇಕೇನೋ ... ಇನ್ನೂ ಹಿಂದೆ
ನನಗೆ ಗಾಭರಿ ಆಯಿತು. ಬೇಡ ಜ್ಯೋತಿ ಸಾಕು ಬಿಡಿ ಎಷ್ಟು ಹಿಂದೆ ಹೋಗುವಿರಿ, ಸಾಕು ಬಿಡಿ. ಎಚ್ಚರಗೊಳ್ಳಿ
ಇಲ್ಲ ಹೋಗಬೇಕು. ಹಿಂದೆ ಹೋಗಬೇಕು. ಜ್ಯೋತಿ........ ಜ್ಯೋತಿ ವರ್ಷ..... ಎಂದೆಲ್ಲ ಆಕೆ ಆನ್ನುತ್ತಿದ್ದಳು
ಇವರು ಏನು ಹೇಳುತ್ತಿದ್ದಾರೆ. ಈಗ ನಾನು ದೇವರನ್ನು ನೆನೆಯುವಂತಾಯಿತು. ದೇವರೆ ಇದೆಂತಹ ಸಂದರ್ಭ ತಂದಿಟ್ಟೆ. ಏನೋ ಸಾಮಾನ್ಯ ಚರ್ಚೆಯಿಂದ ಪ್ರಾರಂಭವಾದ , ಈ ಘಟನೆ , ನನ್ನನ್ನು ಹೀಗೆ ಸಿಲುಕಿಸಿದೆಯಲ್ಲ . ಕಾಲವನ್ನು ಹೆಬ್ಬಾವಿಗೆ ಹೋಲಿಸುವರು. ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ ಅನ್ನುವರು. ಅಂತಹ ಕಾಲದ ರಹಸ್ಯಕ್ಕೆ ನಾವು ಕೈ ಹಾಕಲು ಹೋಗಿ ಏನಾದರು ಪ್ರಮಾದವಾಗಿದೆಯ. ಕಾಲವೆಂಬ ಹೆಬ್ಬಾವಿನ ಬಾಯಿಗೆ ನಾವೆಲ್ಲ ಸಿಲುಕಿದ್ದೆವು. ಹೊರಬರುವ ದಾರಿ ತಿಳಿಯುತ್ತಿಲ್ಲ . ಬಲವಂತವಾಗಿ ಜ್ಯೋತಿಯನ್ನು ಎಬ್ಬಿಸಹೋಗಿ ಏನಾದರು ಅನಾಹುತವಾದರೆ ಎನ್ನುವ ಭಯ ನಮ್ಮನ್ನು ಕಾಡುತ್ತಿತ್ತು.
ಆದರೆ ಜ್ಯೋತಿ ನನ್ನ ಯಾವ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆ ತನ್ನ ತನ್ನ ಪಾಡಿಗೆ ತಾನು ಕಾಲದಲ್ಲಿ ಹಿಂದಕ್ಕೆ ಸರಿಯುತ್ತಿದ್ದಳು. ನನಗೆ ಎರಡು ರೀತಿಯ ಯೋಚನೆಗಳು ಈಗ ಕಾಡುತ್ತಿದ್ದವು. ಮೊದಲೆಯದಾಗಿ, ಈಕೆ ಹೇಳುತ್ತಿರುವ ಘಟನೆ ಹಾಗು ನೆನಪುಗಳೆಲ್ಲ ನಿಜವಾ ಒಂದು ವೇಳೆ ನಿಜವಾದಲ್ಲಿ, ತನ್ನ ಹುಟ್ಟಿನಿಂದಲೂ ಹಿಂದಕ್ಕೆ ಆಕೆಗೆ ನೆನಪುಗಳಿರುವುದು ಹೇಗೆ ಸಾದ್ಯ, ಎರಡನೆಯದು ಈಕೆಯನ್ನು ಎಬ್ಬಿಸುವುದು ಹೇಗೆ, ಒಂದು ವೇಳೆ ಏನಾದರು ಸಮಸ್ಯೆಯಾದಲ್ಲಿ ಆನಂದ ನನ್ನಬಗ್ಗೆ ಏನು ಭಾವಿಸುವದಿಲ್ಲ ? ಎನ್ನುವ ಸಂಕಟ.

ಅಂತಹ ಚಿಂತೆಯಲ್ಲಿರಬೇಕಾದರೆ , ಮತ್ತೆ ಜ್ಯೋತಿಯ ಮುಖಭಾವದಲ್ಲಿ ವ್ಯತ್ಯಾಸವಾಯಿತು. ಆಕೆ ನುಡಿಯುತ್ತಿದಳು.
ಅಪೂರ್ವ ದೃಷ್ಯ, ನೀರಿಗಿಂತ ಹಿಂದೆ ಹೋದರೆ, ಭೂಮಿ ಕೇವಲ ಉರಿಯುವ ಗೋಲ. ದೂರದ ಅಗಸದಲ್ಲಿ ಸೂರ್ಯನ ಬೆಳಕಿನ ವಿನಃ ಯಾವುದೇ ಜೀವವಿಲ್ಲ. ಇನ್ನೂ ನೀರು ಸಹ ರೂಪಗೊಂಡಿಲ್ಲ. ಆಗೊಮ್ಮೆ ಈಗೊಮ್ಮೆ ಆಗಸದಿಂದ, ಉಲ್ಕಾಪಾತವಾದಂತೆ ದೊಡ್ಡ ದೊಡ್ದ ಉಲ್ಕೆಗಳು ಭೂಮಿಗೆ ಬಂದು ಅಪ್ಪಳಿಸುತ್ತಿವೆ. ಅದು ಅಪ್ಪಳಿಸುವ ರಬಸಕ್ಕೆ ಉರಿಯುತ್ತಿರುವ ಭೂಮಿಯ ಮದ್ಯೆ, ನೀರಿನಲ್ಲಿ ಕಲ್ಲು ಹಾಕಿದಾಗ ಏಳುವ ಅಲೆಗಳಂತೆ ಬೆಂಕಿಯಲ್ಲಿ ಅಲೆಗಳು ಏಳುತ್ತಿವೆ. ಅಂತಹ ದಗದಗಿಸುವ ಉರಿಯಿಂದ ಭೂಮಿಯ ಮೇಲೆ ನೂರಾರು ಕಿ.ಮಿ ವರೆಗೂ ಮೋಡಗಳು ದಟೈಸುತ್ತಿವೆ. ಉರಿಯುತ್ತಿವ ಬೆಂಕಿಗೆ ಅದೇನು ಅಹಾರವೊ ತಿಳಿಯದು, ಬೆಂಕಿ ಮಾತ್ರ ಸಪ್ತ ವರ್ಣಗಳಲ್ಲು ನಾಲಿಗೆ ಚಾಚುತ್ತಿದೆ. ಇದೊಂದು ಅಸದೃಷ್ಯ ದೃಷ್ಯ. ವಿವರಣೆಗೆ ನಿಲುಕದು. ಅಂತಹ ಬೆಂಕಿಯ ಒತ್ತಡಕ್ಕೊ, ಭೂಮಿಯ ಒಳಗಿನಿಂದ ಹೊರಗೆ ಚುಮ್ಮುತ್ತಿರುವ ಲಾವ ಚುಲುಮೆಗಳಿಂದಲೋ , ಅವುಗಳ ಒತ್ತಡಕ್ಕೊ ಭೂಮಿ ತನ್ನ ಸುತ್ತ ತಾನೆ ತಿರುವುವ ಅಪೂರ್ವ ನೋಟ ಮನಸೂರೆಗೊಳ್ಳುತ್ತಿದೆ.
ಜ್ಯೋತಿ ಒಂದು ಕ್ಷಣ ನಿಲ್ಲಿಸಿದಳು, ನಾನು ಕೇಳಿದೆ
ಅಂದರೆ ನೀವೀಗ ಭೂಮಿಯ ರೂಪಗೊಳ್ಳುತ್ತಿರುವ ದಿನಗಳನ್ನು ನೋಡುತ್ತಿರುವಿರ.
ಆಕೆಯ ದ್ವನಿ ಬದಲಾಯಿತು
ನಡುವೆ ಮಾತನಾಡಬೇಡ. ಸುಮ್ಮನೆ ಕೇಳು ಎಂದಳು.
ಪ್ರಥಮ ಬಾರಿ ಆಕೆ ನನ್ನಬಗ್ಗೆ ಏಕವಚನ ಪ್ರಯೋಗ ನಡೇಸಿದ್ದಳು. ನಾನು ಆನಂದ, ಸಂದ್ಯಾರ ಮುಖ ನೋಡಿದೆ. ಅವರಿಬ್ಬರು ನಿರ್ಲಿಪ್ತರಾಗಿದ್ದರು. ಬಹುಶಃ ಎಲ್ಲಕ್ಕೂ , ಎಲ್ಲ ಆಶ್ಚರ್ಯಗಳಿಗೂ ಸಿದ್ದರಾದಂತೆ ಇದ್ದರು. ನಾನು ಮೌನವಾಗಿದ್ದೆ. ಜ್ಯೋತಿ ಮುಂದುವರೆಸಿದಳು
ಆಕೆಯ ಮಾತುಗಳು ಮಾತ್ರ ಸರಾಗವಾಗಿ ಬರುತ್ತಿರಲಿಲ್ಲ , ಪ್ರತಿಪದಕ್ಕು ಪದಕು ಸಾಕಷ್ಟು ಅಂತರವಿತ್ತು ಆಕೆಯ ಮಾತಿನಲ್ಲಿ.
ಇಂತಹ ದೃಷ್ಯ ನೋಡಲು ಸಿಗುವುದೇ ಒಂದು ಪುಣ್ಯ. ಭೂಮಿ ಈಗ ರೂಪಗೊಳ್ಳುತಿರುವ ದಿನಗಳು ಇವು. ನೋಡಿದರೆ, ಭೂಮಿ ಸೂರ್ಯ ಚಂದ್ರ ಎಲ್ಲಕ್ಕೂ ಒಂದೆ ಅಹಾರ ದೊರೆತಂತೆ ಕಾಣಿಸುತ್ತೆ. ಈಗ ಪ್ರಾಣಿಗಳು ಉಸಿರಾಡಲು ಬೇಕಾದ ಜೀವವಾಯುವೆ ಇಲ್ಲದ ದಿನ. ಆದರೆ ಯಾವ ಚಿಂತೆಯೂ ಇಲ್ಲ ಏಕೆಂದರೆ ಯಾವುದೇ ಜೀವಿಯು ಭೂಮಿಯ ಮೇಲಿಲ್ಲ. ಜೀವಿ ಅಂದರೆ ಹಸಿರು ಸಹ ಇಲ್ಲ. ಈ ರುದ್ರ ರಮಣೀಯ ಸೃಷ್ಟಿ ನರ್ತನದಲ್ಲಿ ಯಾವ ಜೀವಿಯು ಇರಲು ಸಾದ್ಯವೂ ಇಲ್ಲ. ನಭದಿಂದ ಬಂದು ಯಾವುದಾವುದೋ ಸಣ್ಣ ಗ್ರಹಗಳು ಅಪ್ಪಳಿಸಿದರೆ ಆಗೆಲ್ಲ ಉಂಟಾಗುತ್ತಿರುವ ಪರಿಣಾಮಗಳನ್ನು ನಿನಗೆ ಹೇಗೆ ವರ್ಣಿಸಿ ಹೇಳಲಿ? . ಇಂತಹ ಅಸದೃಷ್ಯ ಪರಿಸರದಲ್ಲಿ, ನೀರು ರೂಪಗೊಂಡಿತು ಎನ್ನುವುದೇ ಆಶ್ಚರ್ಯವಾಗಿ ತೋರುತ್ತಿದೆ .
ನೀರು ರೂಪಗೊಳ್ಳುತ್ತಲೆ, ಅದು ತನಗೆ ತಾನೆ ಹೆಚ್ಚಾಗುತ್ತ, ಭೂಮಿಯ ಮೇಲೆ ಆಕಾಶದಲ್ಲಿ ಆವರಿಸುತ್ತ ಹೋಯಿತು. ನೀರಿನ ಪ್ರಭಾವ ಹೆಚ್ಚಾಗುತ್ತಲೆ. ಉರಿಯುವ ಗೋಳ ತನಗೆ ತಾನೆ ತಣಿಯುತ್ತ ಹೋಯಿತು. ಜೀವರಾಶಿಯ ಹುಟ್ಟುವಿಕೆಗೆ ಕಾರಣವಾಯಿತು.ಜ್ಯೋತಿ ತನ್ನ ಮಾತು ನಿಲ್ಲಿಸಿದಳು. ಆಕೆಯ ಮನಸಿನಲ್ಲಿ ಮತ್ತೆ ಏನು ನಡೆಯುತ್ತಿದೆಯೋ ಅಂದುಕೊಂಡೆ
ಬಹುಶಃ ಭೂಮಿಯ ಹುಟ್ಟಿಗೆ ಮೊದಲು ಸೂರ್ಯನ ಹುಟ್ಟು ಆಯಿತೇನೊಎಂದಳು.
ಅಲ್ಲಿಗೆ ಆಕೆ ಸೂರ್ಯನ ಹುಟ್ಟಿಗೆ ಹೋಗುತ್ತಿದ್ದಾಳ? ದೇವರೆ ನಿಜಕ್ಕೂ ಏನಾಗುತ್ತಿದೆ, ಈಕೆಯನ್ನು ಎಬ್ಬಿಸುವ ಪರಿಯೆಂತು.
ನಾನು ಮೊಬೈಲ್ ಹಿಡಿದು , ಹೊರನಡೆದೆ. ಅಚ್ಚುತ ಹೇಳಿದ್ದ ಡಾಕ್ಟರಿಗೆ ಪೋನ್ ಮಾಡಬೇಕಿತ್ತು.
ಮೊದಲ ಪ್ರಯತ್ನದಲ್ಲಿಯೆ ಡಾಕ್ಟರ್ ಸಿಕ್ಕಿಬಿಟ್ಟರು ಅಚ್ಚುತನ ಸ್ನೇಹಿತ ಶ್ರೀದರ್.
ನನ್ನ ಪರಿಚಯ ಮಾಡಿಕೊಂಡೆ, ಅವರು ಹೇಳಿ ಸರ್ ನಾನೇನು ಸಹಾಯಮಾಡಬಹುದು, ಅಚ್ಚುತ ಏನೊ ಹೇಳಿದ್ದ, ನೀವು ವಿವರಿಸಿದರೆ ನಾನು ಯೋಚಿಸಬಹುದು ಎಂದರು.
ನಾನು ನಡೆದ ಘಟನೆಗಳನ್ನು ಮೊದಲಿನಿಂದ ವಿವರಿಸಿದೆ. ನಂತರ ಸದ್ಯದ ಪರಿಸ್ಥಿತಿ ಹೇಳುತ್ತ್, ಸಮಸ್ಯೆ ತಿಳಿಸಿದೆ. ಆಕೆಗೆ ಏನು ಸಮಸ್ಯೆ ಅಥವ ತೊಂದರೆಗಳಾದರೆ ಹೇಗೆ ಎನ್ನುವ ನನ್ನ ಆತಂಕವನ್ನು ತಿಳಿಸಿದೆ. ಆತ ಎಲ್ಲವನ್ನು ಕೇಳಿಕೊಂಡರು. ಜ್ಯೋತಿಯ ದೈಹಿಕ ಸ್ಥಿತಿಯ ಬಗ್ಗೆ ಕೇಳಿದರು, ನಾನು ಆಕೆ ದೈಹಿಕವಾಗಿ ಸಹಜವಾಗಿ ಇರುವಳೆಂದು, ನಿದ್ದೆಯಲ್ಲಿ ಮಾತನಾಡುತ್ತಿರುವ ರೀತಿ, ಅತ್ಯಂತ ನಿಧಾನಕ್ಕೆ ಮಾತನಾಡುತ್ತಿರುವಳೆಂದು ತಿಳಿಸಿದೆ. ಒಂದು ನಿಮಿಶ ಯೋಚಿಸುತ್ತಿದ್ದ ಡಾಕ್ಟರ್ , ನಿಮ್ಮ ಮನೆ ಎಲ್ಲಿ ಬರುವದೆಂದು ಕೇಳಿದರು. ನಾನು ವಿಳಾಸ ತಿಳಿಸಿದೆ. ಅದಕ್ಕವರು, ನಾನೀಗ ನನ್ನ ನರ್ಸಿಂಗ್ ಹೋಮ್ ನಲ್ಲಿದ್ದೇನೆ. ಇಲ್ಲಿ ಇನ್ನು ಅರ್ಧ ಅಥವ ಒಂದು ಗಂಟೆಯ ಕೆಲಸವಿದೆ. ಇಲ್ಲಿ ಮುಗಿಸಿ ಹೊರಡುತ್ತೇನೆ. ನಿಮ್ಮ ಮನೆಗೆ ಒಮ್ಮೆ ಬರುತ್ತೇನೆ. ನಂತರ ನಿರ್ದಾರ ಮಾಡಬಹುದು. ಎಂದರು. ಅಲ್ಲದೆ ಅವರು ತಾವು ಬರುವ ತನಕ ಜ್ಯೋತಿಯನ್ನು ಬಲವಂತವಾಗಿ ಎಬ್ಬಿಸುವ ಪ್ರಯತ್ನ ಮಾಡಬೇಡಿ ಎನ್ನುವ ಎಚ್ಚರಿಕೆಯನ್ನು ಕೊಟ್ಟರು.ಅವರು ಬರುವುದು ಕನಿಷ್ಠ ಎರಡು ಗಂಟೇಗಳಾಬಹುದು ಎನ್ನಿಸಿತು.
ಅವರಿಗೆ ವಂದನೆ ತಿಳಿಸಿ, ಕಾಲ್ ಕಟ್ ಮಾಡಿದೆ. ನಂತರ ನಮ್ಮ ಮನೆಗೆ ಕಾಲ್ ಮಾಡಿ, ನಾನು ಬರುವುದು ತುಂಬಾನೆ ತಡ ಆಗಬಹುದು., ಅಥವ ರಾತ್ರಿಬರದೆ ಬೆಳಗ್ಗೆ ಬರಬಹುದು, ಎಂದು ತಿಳಿಸಿದೆ. ಮನೆಯವರು, ಗಾಭರಿಯಿಂದ, ಏನು ಎತ್ತ ಎಂದೆಲ್ಲ ಕೇಳಿದಾಗ, ಮನೆಗೆ ಬಂದ ನಂತರ ವಿವರ ತಿಳಿಸುವೆ ಎಂದು ಕಾಲ್ ಕಟ್ ಮಾಡಿದೆ.