Tuesday, January 28, 2014

ಸಾಗರ ಯಾತ್ರೆ - ಮುರ್ಡೇಶ್ವರ ಹಾಗು ಮುಂದೆ ...

ಸಾಗರ ಯಾತ್ರೆ - ಮುರ್ಡೇಶ್ವರ ಹಾಗು ಮುಂದೆ ...
ಮುರ್ಡೇಶ್ವರ :
ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ.ಮೀ, ಸುಮಾರು ಒಂದು ಗಂಟೆಯ ಪ್ರಯಾಣ. ಮುರ್ಡೇಶ್ವರ ತಲುಪಿದೆವು.


ಎಷ್ಟೂ ದೂರಕ್ಕೂ ಕತ್ತು ಎತ್ತಿ ನೋಡಬೇಕಾದ ಈಶ್ವರ ಧ್ಯಾನಕ್ಕೆ ಕುಳಿತ ಬಂಗಿಯ ವಿಗ್ರಹ ಎದ್ದು ಕಾಣುವುದು.
ಪ್ರಪಂಚದಲ್ಲಿಯೆ ಅತಿ ಎತ್ತರದ ಶಿವನ ವಿಗ್ರಹಗಳಲ್ಲಿ ಎರಡನೆಯದಂತೆ
ಪಕ್ಕದಲ್ಲಿ ಅಷ್ಟೇ ಎತ್ತರಕ್ಕೆ ನಿಂತ ದೇವಾಲಯದ ಗೋಪುರ. ಇವೆಲ್ಲವನ್ನು ಮೀರಿದ ಆಕರ್ಷಣೆ ಸಮುದ್ರ ದಡ.  ಅದೇನೊ ಅರಬ್ಬಿ ಸಮುದ್ರ ಇಲ್ಲಿ ಎಷ್ಟು ದೂರಕ್ಕೆ ಹೋದರೂ ಅಷ್ಟೆ ಆಳ. ಹೆಚ್ಚು ಅಪಾಯವಿಲ್ಲ ಅನ್ನಿಸುವಂತೆ ಅಲೆಗಳು. ಚಿಕ್ಕವರು , ಇಳಿವಯಸಿನವರು ಸಮಾನರಾಗಿ ಸಮುದ್ರದಲ್ಲಿ ನೆನೆಯುವರು ಆಲೆಗಳ ಜೊತೆ ಆಡುತ್ತ ಆನಂದ ಅನುಭವಿಸಿವರು.  ಇಲ್ಲಿ ಬೋಟಿಂಗ್ ಹೋಗುವ ಅನುಕೂಲವೂ ಇದೆ.
ಸಮುದ್ರದಡದಲ್ಲಿ ಕಾಡುವ ಏಜೆಂಟ್ ಗಳು
'ಸಾರ್ ರೂಮ್ ಬೇಕಾ?"
ಎನ್ನುತ್ತ ಮೋಟರ್ ಬೈಕನ್ನು ಸಮುದ್ರ ನೀರಿನಲ್ಲೆ  ನುಗ್ಗಿಸಿ ನಮ್ಮನ್ನು ಕಾಡಿಸುವರು.
ಪ್ರತಿಯೊಬ್ಬರ ಕೈಲಿ ಕ್ಯಾಮರ ಇರುವಾಗಲು,
'ಸಾರ್ ಫೋಟೋ ತೆಗೆಸುತ್ತೀರ, ಇಲ್ಲಿಯೇ ಪ್ರಿಂಟ್ ಹಾಕಿ ಕೊಡುವೆವು '
ಎನ್ನುತ್ತ ಹಿಂದೆ ಬೀಳುವ ಕೆಲವು ಮಂದಿ.

ಹೀಗೆ ಸಮುದ್ರ ಸ್ನಾನ ಮುಗಿಸಿ, ಅಲ್ಲಿಯೆ  ಹೊರಗೆ ಇರುವ ಬಾತ್ ರೂಮಿನಲ್ಲಿ ಮತ್ತೆ ಸ್ನಾನ ಮಾಡಿ ಬಟ್ಟೆ ಬದಲಿಸಿ, ಹತ್ತಿರ ಕಾಣುವ ಮುರುಡೇಶ್ವರ ದೇವಾಲಯ ಹೊಕ್ಕೆವು. ಸುಂದರ ಸ್ಥಳ.
ಗೋಕರ್ಣದಲ್ಲಿ,   ರಾವಣ ಶಿವನನ್ನು ಮೆಚ್ಚಿಸಿ ತಂದ ಆತ್ಮಲಿಂಗ ಗಣೇಶ ಹಾಗು ನಾರದರು ಮಾಡಿದ ಉಪಾಯದಿಂದ ಭೂಸ್ಪರ್ಶವಾಗಿ ಸ್ಥಾಪಿತವಾಗಲು ಕೋಪಗೊಂಡ ರಾವಣ ಆತ್ಮಲಿಂಗವನ್ನು ಕೀಳಲು ಹೋದಾಗ ಐದು ಸ್ಥಳಗಳಲ್ಲಿ ಅದರ ತುಂಡುಗಳು ಬಿದ್ದವು, ಕಡೆಯ ಆತ್ಮಲಿಂಗದ ಬಾಗವೇ ಮುರ್ಡೇಶ್ವರದಲ್ಲಿರುವ ಶಿವಲಿಂಗ. ಎನ್ನುವ ಪುರಾಣದ ವಿವರಣೆಯು ಇಲ್ಲಿಯ ದೇವಾಲಯಕ್ಕೆ ಇದ್ದು ಪೂರ್ವದ ಹೆಸರು ಕಂದುಕಗಿರಿಯ ಮೃದೇಶ್ವರ.

ಇಲ್ಲಿ ಇಪ್ಪತ್ತು ಅಂತಸ್ತುಗಳ ರಾಜಗೋಪುರವಿದ್ದು , ಎತ್ತರದ ಗೋಪುರ ಹತ್ತಲು ಲಿಫ್ಟ್ ಸಹ ಇದೆ. ಹತ್ತು ರೂಪಾಯಿ ಅಷ್ಟೆ, ಮೇಲಿನಿಂದ ಮತ್ತೆ ಸುತ್ತಲ ಸ್ಥಳ ವೀಕ್ಷಣೆ ಮಾಡಬಹುದು.

ಎಲ್ಲವನ್ನೂ  ಮುಗಿಸಿ ಕಾಫಿಕುಡಿದು, ಕಾರ್ ನತ್ತ ಹೊರಡುವಾಗ ಡ್ರೈವರ್ ಆಗಲೆ ಗೊಣಗುತ್ತಿದ್ದ, ಇಲ್ಲೆ ಅರ್ಧಗಂಟೆ ತಡವಾಯಿತು, ಅಪ್ಸರಕೊಂಡದಲ್ಲಿಯ ' ಸನ್ ಸೆಟ್ ' ಮಿಸ್ಸಾಗುತ್ತೆ ಎಂದು.
ಅಲ್ಲಿಂದ ನಾವು ಮುಂದೆ ಹೊರಟ ಸ್ಥಳ ಇಡುಗುಂಜಿ.  ಚಾಲಕನಿಗೆ ಅದೇನೊ ಆತುರ, ಹೇಗೊ ಆದಷ್ಟು ಮುಂಚೆ ಇಡುಗುಂಜಿ ಮುಟ್ಟಿ, ಮುಂದೆ ಹೋಗಬೇಕು ಎಂದು.
ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ.
ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು ,
'ಹಿಂದಿನ ಚಕ್ರ ಪಂಚರ್' !!!!!

2 comments:

  1. ತಾವು ಮುರ್ಡೇಶ್ವರದ ಬಗ್ಗೆ ಬರೆದಾಗ ಆ ಸಾಗರದ ರೌಧ್ರಾವತಾರ ನೆನಪಾಯಿತು ಸಾರ್.
    ಅರೆರೆ ಪಂಚರ್ ಆಯಿತೇ? ಮುಂದೆ... ಮುಂದುವರೆಯಲಿ....

    ReplyDelete
  2. ಸಾಗರವೆ ಹಾಗೆ ಒಮ್ಮೆ ರೌದ್ರ ಒಮ್ಮೆ ಶಾಂತಮುದ್ರೆ
    ಮನುಷ್ಯ ಎರಡೂ ಭಾವದ ಎದುರಿಗೆ ಮಂಡಿಯೂರಲೇ ಬೇಕು

    ReplyDelete

enter your comments please