Monday, March 24, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೪)


ಅಕ್ಸಿಡೆಂಟ್ ಆಗಿದ್ದ ಬಸ್‍ಸ್ಟಾಪಿನ ಹತ್ತಿರ ನರಸಿಂಹ ಹಾಗು ಪಾಂಡು ನಿಂತು ಸುತ್ತಲೂ ಗಮನಿಸುತ್ತಿದ್ದರು.    ಸುಮಾರು ನಲವತ್ತು ಅಡಿ ಅಗಲವಿದ್ದ ರಸ್ತೆ, ಹೊಸದಾಗಿ ಟಾರ್ ಹಾಕಲಾಗಿತ್ತು . ರಸ್ತೆಯ ಎಡಬಾಗಕ್ಕೆ  ಸಿಟಿ ಬಸ್‍ಗಾಗಿ ಸ್ಟಾಪ್ ಇದ್ದು ಅಲ್ಲಿ ಒಂದೆರಡು ಆಟೋಗಳು ನಿಂತಿದ್ದವು.  ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯೆ ಹಾಗಾಗಿ ಬರುವ ವಾಹನಗಳು ವೇಗವಾಗಿ ಬರುತ್ತಿದ್ದವು. ಅಲ್ಲದೆ ಅದು ಇಳಿಜಾರು ಇರುವ ರಸ್ತೆ ಹಾಗಾಗಿ ಮೇಲಿನಿಂದ ಬರುವ ವಾಹನಗಳ ವೇಗ ಮತ್ತು ಜಾಸ್ತಿ. 



ಪುಟ್ ಪಾತ್ ಮೇಲೆ ಬಸ್‍ಸ್ಟಾಪಿದ್ದು ಅದರಲ್ಲಿ ಯಾರೋ ಒಬ್ಬಾತ ಮಾತ್ರ ಬಸ್ ಕಾಯುತ್ತಿ ನಿಂತಿದ್ದ. ಬಸ್ ಸ್ಟಾಪಿನ ಪುಟ್ ಪಾತ್ ನಿಂದ ರಸ್ತೆಯೊಳಗೆ ಸುಮಾರು ಆರು ಆಡಿ ದೂರದಲ್ಲಿ ಟಾರ್ ಕಿತ್ತು ಗುಂಡಿ ಆಗಿದ್ದು, ಅಲ್ಲಿ ಜಲ್ಲಿ ಹಾಗು ಮಣ್ಣು ಮೇಲ್ಭಾಗಕ್ಕೆ ಬಂದಿತ್ತು. ಆ ಗುಂಡಿಯ ಪಕ್ಕ ಸೀಮೆಸುಣ್ಣದಲ್ಲಿ ಅಸ್ವಷ್ಟವಾಗಿ ಮನುಷ್ಯನ ಆಕಾರ ಬರೆಯಲ್ಪಟ್ಟಿತ್ತು, ರಕ್ತದ ಕಲೆ ತೊಳೆದಿದ್ದರು ಸ್ವಲ್ಪ ಉಳಿದಿತ್ತು. ನರಸಿಂಹ ಅಂದ
"ಇದೇ ಜಾಗ ಇರಬೇಕು ಆ ಮೃತವ್ಯಕ್ತಿ ಬಿದ್ದಿದ್ದು,   ಇಲ್ಲಿ ನೋಡು ಪೋಲಿಸರು ಮಾರ್ಕ್ ಮಾಡಿದ್ದಾರೆ"

"ಹೌದು ಸಾರ್, ಅವತ್ತೇ ಪೋಲಿಸ್ ಸ್ಟೇಷನ್ ನಲ್ಲಿ ಹೇಳುತ್ತಿದ್ದನಲ್ಲ ಆ ಹೆಡ್ಡ ಕಾನ್ಸ್ಟೇಭಲ್, ಕಲ್ಲನ್ನು ಕಿತ್ತು ತಂದೆವು ಎಂದು"
ನಗುತ್ತ ಹೇಳಿದ ಪಾಂಡು ಬಸ್‍ಸ್ಟಾಪ್  ಬಳಿ ನಿಂತು ಸುತ್ತಲು ನೋಡುತ್ತ, ನೆಲದ ಮೇಲೆ ಬಿದ್ದಿದ್ದ ವಸ್ತುಗಳನ್ನೆಲ್ಲ ಕಾಲಿನಿಂದ ಒದೆಯುತ್ತಿದ್ದ ಸುಮ್ಮನೆ ಸಮಯ ಕಳೆಯಲು.
ಅಷ್ಟರಲ್ಲಿ, ಬಸ್ ಸ್ಟಾಂಡಿನ ಹಿಂಬಾಗದಲ್ಲಿ ಇದ್ದ ಖಾಲಿ ಸೈಟ್ ನಲ್ಲಿ ಸಣ್ಣ ಶೆಡ್ ಇದ್ದು ಅದರ ಮುಂದೆ ಕುಳಿತಿದ್ದ ವ್ಯಕ್ತಿಯೊಬ್ಬ , ಇವರಿಬ್ಬರನ್ನು ಕಂಡು ಕುತೂಹಲದಿಂದ ಎದ್ದು ಬಂದ.
"ಏನ್ಸಾರ್ ನೋಡುತ್ತ ಇದ್ದೀರಿ" ಎಂದ ಹಲ್ಲು ಕಿರಿಯುತ್ತ,
ಕಪ್ಪಗಿನ ಆ ವ್ಯಕ್ತಿ ಬನೀನ್ ಲುಂಗಿ ತೊಟ್ಟಿದ್ದ, ಅವನತ್ತ ನೋಡುತ್ತ ಪಾಂಡು ಎಂದ,
"ಅದೇ ಮೊನ್ನೆ ಸಂಜೆ ಇಲ್ಲೊಂದು ಕೊಲೆ ಆಯ್ತು ಅಲ್ಲವಾ ಅದನ್ನು ಪರೀಕ್ಷೆ ಮಾಡೋಕ್ಕೆ ಬಂದಿದ್ದೀವಿ" ಎಂದ
"ಆಯ್ತಲ್ಲ ಸಾರ್, ಮೊನ್ನೆ ರಾತ್ರೀನೆ ಪೋಲಿಸರು ಬಂದಿದ್ದರಲ್ಲ, ಎಲ್ಲಾ ನೋಡಿದರು, ನೀವು ಯಾರು ಸಾರ್, ಮತ್ತೇನು ನೋಡಕ್ಕೆ ಬಂದ್ರಿ"
ಎಂದ ಕುತೂಹಲದಿಂದ
"ನಾವು ಪೋಲಿಸರೆ, ನಿನಗೆ ಗೊತ್ತಾಗಲ್ಲ, ನಾವು ಯೂನಿಫಾರ್ಮ್ ಹಾಕುವ ಹಾಗಿಲ್ಲ, ಅಷ್ಟೇ"
ಎಂದ ಪಾಂಡು ಗಂಭೀರವಾಗಿ
"ನೀವು ಸಿ ಐ ಡಿ ಗಳ ಸಾರ್, ಪೋಲಿಸ್ ಸಿ ಐ ಡೀನಾ, ಕೊಲೆ ಕೇಸು ಕಂಡು ಹಿಡಿಯಕ್ಕೆ ಬಂದಿದ್ದೀರಾ?"
ಆ ತಮಿಳು ವ್ಯಕ್ತಿ ಹಲ್ಲು ಬಿಡುತ್ತ ಕೇಳಿದ ಅವನ ದ್ವನಿಯಲ್ಲಿ ಎಂತದೋ ಕುತೂಹಲ.
"ಹೌದು, ಹಾಗೆ ಅಂದುಕೋ, ನೀನು ಇಲ್ಲಿ ಯಾವಗಲು ಇರ್ತೀಯಾ ಅಲ್ವ. ಅವತ್ತು ಕೊಲೆ ಆಯ್ತಲ್ಲ ನೀನು ನೋಡಲಿಲ್ವ, ಯಾರು ಮಾಡಿದ್ದು ಎಂದು. ನಿನಗೆ ಗೊತ್ತಿರಬೇಕಲ್ಲ , ಅಂದ ಹಾಗೆ ನಿನ್ನ ಹೆಸರೇನು"   
ಅವನ ಮುಖವನ್ನೆ ನೋಡುತ್ತ ಕೇಳಿದ ಪಾಂಡು

"ನಾನು ಮೂರ್ತಿ ಅಂತಾ ಸಾರ್, ನಾನಂತು ಕೊಲೆಗಾರ ಯಾರು ಅಂತ ನೋಡಲಿಲ್ಲ ಸಾರ್, ಅವತ್ತು ಕೊಲೆ ಆದಾಗ ಶೆಡ್ ಒಳಗೆ ಮಲಗಿದ್ದೆ, ಹೊರಗೆ ಯಾವುದೋ ವಾಹನ ಬ್ರೇಕ್ ಹಾಕಿದ ಹಾಗೆ ಶಬ್ದ  , ನಂತರ ಯಾರೋ ಕೂಗುತ್ತಿದ್ದರು ಜೋರಾಗಿ,
ನಾನು ಹೊರಗೆ ಬಂದೆ. ಬಸ್ ಸ್ಟಾಪಿನಲ್ಲಿ ಲೈಟ್ ಹೋಗಿ ಎರಡು ತಿಂಗಳಾಗಿದೆ, ಹೊರಗೆ ಬಂದರೆ ಏನು ಸರಿಯಾಗಿ ಕಾಣಲ್ಲ, ಕತ್ತಲು ಕತ್ತಲು. ದೂರಕ್ಕೆ ಯಾರೋ ರಸ್ತೆಯಲ್ಲಿ ಮಲಗಿದಂತೆ ಕಾಣಿಸಿತು, ಯಾರೋ ಕುಡಿದವರು ಇರಬೇಕು ಅಂದುಕೊಂಡೆ ಮೊದಲು.  ಅಕಸ್ಮಾತ್ ಯಾವುದಾದರು ಬಸ್ ಬಂದರೆ ಅವನ ಮೇಲೆ ಹತ್ತಿಬಿಟ್ಟರೆ ಕಷ್ಟ, ಎಬ್ಬಿಸಿ ಪಕ್ಕಕ್ಕೆ ಕಳಿಸೋಣ ಎಂದು ಹತ್ತಿರ ಬಂದೆ,  ನೋಡಿದರೆ ಕುಡಿದರಂತೆ ಇರಲಿಲ್ಲ. ನೆಲದ ಮೇಲೆ ಅಂಗಾತ ಮಲಗಿದ್ದರು, ಗಮನಿಸುವಾಗ ತಲೆಯ ಬಾಗದಿಂದ ರಕ್ತ ಬರುತ್ತಿತ್ತು. ಹತ್ತಿರದಿಂದ ನೋಡಿದೆ ಸತ್ತು ಹೋಗಿದ್ದರು. ನಂತರ ಜನ ಎಲ್ಲ ಸೇರಿದರು. ಅವರು ಮೇಷ್ಟ್ರು ಪಕ್ಕದ ರಸ್ತೆಯವರು ಅಂತ ಗೊತ್ತಾಯ್ತು. ಯಾರೋ ಹೋಗಿ ಅವರ ಮನೆಯವರನ್ನು ಕರೆದುಕೊಂಡು ಬಂದರು. ಪಾಪ  ಹೆಂಗಸರು. ಆಮೇಲೆ ಪೋಲಿಸರು ಬಂದರು, ಎಲ್ಲ ನೋಡಿ ಹೆಣ ತಗೊಂಡು ಹೋದರು’

ಪಾಂಡು ಅಂದ
" ಅಲ್ಲಿಗೆ ನೀನು ಯಾರನ್ನು ನೋಡಲಿಲ್ಲ ಅಂತೀಯ,  ಇರಲಿ ಸತ್ತವನು ಮಲಗಿದ್ದನಲ್ಲ, ರಸ್ತೆಯ ಮೇಲೆ ಇದ್ದ ಅಲ್ಲವ,  ಬಸ್ ಏನಾದರು ಬಂತ ಆಗ. ಯಾರೋ ಕಲ್ಲಿನಿಂದ ತಲೆ ಜಜ್ಜಿ ಸಾಯಿಸಿದ್ದು ಅಂತಾರೆ ಎಲ್ಲರೂ"

ಮೂರ್ತೀ ಹೇಳಿದ
"ಹೌದು ಸಾರ್ ಹೆಣ ರಸ್ತೆಗೆ ಮಲಗಿತ್ತು, ಬಸ್ ಏನಾದರು ಬಂದರೆ ಕತ್ತಲೆಯಲ್ಲಿ ಸೀದ ಹೆಣದ ಮೇಲೆ ಹೋಗಬೇಕಿತ್ತು, ಹಾಗಿತ್ತು, ಅದಕ್ಕೆ ಪೋಲಿಸರು ಬೇಗ ತೆಗೆದರು. ಕಲ್ಲು ರಸ್ತೆಯಲ್ಲಿಯೆ ಇತ್ತು. ಅದನ್ನು ನಾನೆ ಪೋಲಿಸರು ಹೇಳಿದ ಹಾಗೆ ಕಿತ್ತು ಕೊಟ್ಟಿದ್ದು"

ಪಾಂಡು ಎಂದ
"ಅಂದರೆ ರಸ್ತೆಯಲ್ಲಿ ಆ ಕಲ್ಲು ಹುದುಗಿತ್ತ, ಎಷ್ಟು ದೊಡ್ಡ ಕಲ್ಲು, ಎಷ್ಟು ಬಾರ ಇರಬಹುದು"

"ಸಾರ್ , ನಾನು ಗುದ್ದಲಿ ತಂದು ಅಗೆದು ತೆಗೆದುಕೊಟ್ಟೆ, ಸುಮಾರು ಎರಡು ಅಡಿ ಉದ್ದ ಇರಬಹುದೇನೊ, ಹತ್ತು ಕೇಜಿಯಷ್ಟು ಬಾರವಿತ್ತು, ಮುಕ್ಕಾಲು ಬಾಗ ನೆಲದೊಳಗೆ ಇತ್ತು, ಸುತ್ತಲು ಇದ್ದ ಟಾರ್,ಜಲ್ಲಿ ಬಿಡಿಸಿ ಕೀಳುವಾಗ ಕಷ್ಟವೇ ಆಯ್ತು"
ಪಾಂಡು ನರಸಿಂಹನ ಮುಖ ನೋಡಿದ.
ನರಸಿಂಹ ನಗುತ್ತಿದ್ದ.
"ಆಯ್ತಪ್ಪ ಮೂರ್ತಿ ನಿನ್ನಿಂದ ಸಹಾಯ ಆಯ್ತು ನೋಡು ಅಂದ ಹಾಗೆ ನೀನು ಇಲ್ಲೇ ಇರ್ತೀಯ, ಎಷ್ಟು ದಿನದಿಂದ ಇದ್ದೀಯ"
ಎಂದ ನರಸಿಂಹ
"ಅಯ್ಯೋ ಸಾರ್ ,  ಈ ಸೈಟ್ ನಲ್ಲಿ ಶೆಡ್ ಹಾಕಿ ಇದ್ದೇನೆ, ಹೀಗೆ ಎರಡು ವರ್ಷ ಕಳೆಯಿತು. ಸೈಟ್ ಓನರ್ ಕಳೆದವಾರ ಬಂದಿದ್ರು, ಇನ್ನು ಎರಡು ವರ್ಷ ಮನೆ ಕಟ್ಟಲ್ಲವಂತೆ, ನಾನು ಇನ್ನೂ ಎರಡು ವರ್ಷ ಇಲ್ಲಿ ಇರ್ತೀನಿ, ನಮ್ಮದೇನು ಸಾರ್ ಏಳು ಅಂದರೆ ಟೆಂಟ್ ಎತ್ಕೊಂಡು ಹೋಗ್ತಾ ಇರೋದು " ಅಂದ ಮೂರ್ತಿ.
"ಸರೀನಮ್ಮ, ನೀನು ಇಲ್ಲಿ ಹೇಳಿದ ವಿಷಯವನ್ನು ಮುಂದೆ ಕರೆದಾಗ ಬಂದು ಹೇಳಬೇಕಾಗುತ್ತೆ, ನಾನು ಬಂದು ನಿನ್ನ ಬಳಿ ಮಾತನಾಡಿದ ವಿಷಯ ಯಾರಲ್ಲೂ ಹೇಳಲು ಹೋಗಬೇಡ, ಕಡೆಗೆ ನಿಮ್ಮ ಇನ್ಸ್ ಪೆಕ್ಟರ್ ಇದ್ದಾರಲ್ಲ ಅವರಲ್ಲು ಹೇಳಬೇಡ”

ಅನ್ನುತ್ತ ,  ತಗೋಳಯ್ಯ ಇಟ್ಕೋ ನಿನಗೆ ಯಾವುದಾದರು ಖರ್ಚಿಗೆ ಆಗುತ್ತೆ ಎಂದು ನೂರರ ಎರಡು ನೋಟು ಅವನಿಗೆ ಬೇಡ ಎಂದರೂ ನೀಡಿದ. ಮೂರ್ತಿಗೆ ಆಶ್ಚರ್ಯ , ಪೋಲಿಸರು ದುಡ್ಡು ಕೀಳುವುದು ನೋಡಿರುವೆ ಇಲ್ಲಿ ತನಗೆ ಕೊಟ್ಟು ಹೋಗುತ್ತಿದ್ದಾರಲ್ಲ ಎಂದು.

ನರಸಿಂಹ ಮೋಟರ್ ಬೈಕ್ ಸ್ಟಾರ್ಟ್ ಮಾಡುತ್ತಿರುವಂತೆ , ಪಾಂಡು ಹಿಂದಿನ ಸೀಟಿಗೆ ಹತ್ತುತ್ತ ನುಡಿದ

"ಸಾರ್ , ಈ ಮಹಾಲಕ್ಷ್ಮೀ ಪುರಂ ಇನ್ಸ್ ಪೆಕ್ಟರ್ ಬಹಳ ಇಂಟಲಿಜೆಂಟ್ ತರಾ ಕಾಣೀಸ್ತಾನಲ್ಲ ಸರ್ " ಎಂದ.

ನರಸಿಂಹ ಜೋರಾಗಿ ನಗುತ್ತ,
“ಹೌದಪ್ಪ ಬಿಡು ತುಂಬಾ ಇಂಟೆಲಿಜೆಂಟ” ಎನ್ನುತ್ತ ಮುಂದೆ ಹೊರಟ. ಸ್ವಲ್ಪ ದೂರ ಸಾಗಿದ ಮೇಲೆ ನುಡಿದ
"ಪಾಂಡು ನನಗೆ ಅನ್ನಿಸುತ್ತ ಇದೆ ನಾನು ಏನೊ ಒಂದು ಪಾಯಿಂಟ್ ಮಿಸ್ ಮಾಡ್ತಾ ಇದ್ದೀನಿ ಎಂದು, ಏನು ಅಂತ ಹೊಳಿತಿಲ್ಲ"
ಪಾಂಡು ಎಂದ
"ಕಲ್ಲು ನೆಲದಿಂದ ಕಿತ್ತರಲ್ಲ ಅದಾ ಬಾಸ್ ’
ನರಸಿಂಹ ಗಂಭೀರವಾಗಿದ್ದ
"ಅದಲ್ಲಯ್ಯ,  ಇನ್ನೇನೊ ತಪ್ಪು ಮಾಡ್ತಾ ಇದ್ದೇವೆ, ಅದೇನು ಎಂದು ಗೊತ್ತಾಗ್ತ ಇಲ್ಲ"
ಪಾಂಡು ಯೋಚಿಸುತ್ತಿದ್ದ , ಹಾಗೆ ಕೇಳಿದ
"ಸಾರ್ , ಕೊಲೆಯಾದವನ ಮನೆ ಇಲ್ಲೆ ಪಕ್ಕದ ರಸ್ತೆಯಲ್ಲಿ , ಒಮ್ಮೆ ಹೋಗಿ ನೋಡೋಣವ?"

ನರಸಿಂಹ ಹೇಳಿದ
"ಅಲ್ಲಯ್ಯ ನಾವು ಎದುರು ಪಾರ್ಟಿ ಲಾಯರ್ ಗಳು, ಅವರ ಮನೆಗೆ ಹೋಗೋದು ಸರಿ ಏನಯ್ಯ"
"ಸಾರ್, ನೀವು ಎದುರು ಪಾರ್ಟಿ ಲಾಯರ್ ಅಂತ ಕೊಲೆಯಾದವನ ಮನೆಯಲ್ಲೇನು ತಿಳಿದಿಲ್ಲ, ಅಲ್ಲದೆ ನಾವೇನು ಅವರನ್ನು ಹೆದರಿಸಲು ಏನು ಹೋಗುತ್ತಿಲ್ಲ, ಸುಮ್ಮನೆ ಏನಾದರು ವಿಷಯ ತಿಳಿದೀತ ಎಂದು"
ಪಾಂಡು ನುಡಿದ,
"ಯಾವುದೇ ಪಾಯಿಂಟ್ ಮಿಸ್ ಆಗಬಾರದಲ್ಲವೇ ಸಾರ್ " ಎಂದ

ಮನೆ ಹುಡುಕುವದೇನು ಕಷ್ಟವಾಗಲಿಲ್ಲ.  ಅನಂತರಾಮಯ್ಯನ ಹೆಂಡತಿ ರಾಜಮ್ಮ, ತನ್ನ ಗಂಡನ ಕೊಲೆಯಾಗಿದೆ ಎಂದು ಬರೆದು ಕೊಟ್ಟಿದ್ದ ಕಂಪ್ಲೇಟ್ ನಲ್ಲಿ ಅವರ ಮನೆಯ ವಿಳಾಸವು ಇತ್ತು. ಅದರ ಒಂದು ಜರಾಕ್ಸ್ ಪ್ರತಿಯು ಅವನ ಬಳಿ ಇತ್ತು

ಒಳಗೆ ಹೋಗುವಾಗಲೆ  ಹುಡುಗಿಯೊಬ್ಬಳು ಎದುರಾದಳು, ಹೈಸ್ಕೂಲ್ ಓದುತ್ತಿರುವ ವಯಸ್ಸೇನೊ. ಒಳಗಿನಿಂದ ವಯಸ್ಸಾದ ಹೆಂಗಸೊಬ್ಬಳು ಬಂದು
"ಯಾರು ನೀವು ಏನು ಬೇಕು ? ’ ಎನ್ನುವ ಪ್ರಶ್ನೆಯೊಡನೆ ಸ್ವಾಗತಿಸಿದರು.
"ಇಲ್ಲಮ್ಮ ನಾನು ಕೊಲೆ ಕೇಸ್ ಸಂಬಂಧವಾಗಿ ಬಂದಿರುವೆ, ಕೆಲವು ಪ್ರಶ್ನೆ ಕೇಳುವದಿತ್ತು " ಅಂದ ನರಸಿಂಹ.
"ಎಲ್ಲವನ್ನು ಹೇಳಿ ಆಗಿದೆಯಲ್ಲ, ಕೊಲೆಯಾಗಿದೆ ಎಂದು ಬರೆದುಕೊಟ್ಟಿದ್ದೇನೆ ಪೋಲಿಸ್ ಹತ್ತಿರ. ಇಷ್ಟಕ್ಕೂ ನೀವು ಯಾರು?"
"ಇಲ್ಲಮ್ಮ ನಾವು ಕೊಲೆಯ ಕಾರಣ ತಿಳಿಯಲೇ ಬಂದಿದ್ದೇವೆ, ಅಂದುಕೊಳ್ಳಿ, ನಿಜವಾಗಲು ಮೇಷ್ಟ್ರು ವೆಂಕಟೇಶಯ್ಯನವರೇ ಕೊಲೆ ಮಾಡಿದ್ದಾರ?" ನರಸಿಂಹ ಪ್ರಶ್ನಿಸಿದ
"ಇನ್ಯಾರು ಮಾಡುತ್ತಾರೆ, ಇನ್ಸ್ ಪೆಕ್ಟರ್ ಬೇರೆ ಯಾರ ಬಳಿ ಮಾತನಾಡಬೇಡ ಅಂದಿದ್ದಾರೆ, ನೀವು ಯಾರು ಹೇಳಿ"
ರಾಜಮ್ಮ  ತುಸು ಜೋರಿನಲ್ಲಿ ಮಾತನಾಡಿದಳು,
ನರಸಿಂಹ ಅಂತಹ ಎಷ್ಟೋ ಕೇಸ್ ನೋಡಿದ್ದವನು
"ನೋಡಮ್ಮ ಇನ್ಸ್ ಪೆಕ್ಟರ್ ನನಗೆ ತಿಳಿದಿರುವವನೆ, ಬೇಕಾದರೆ ಅವನನ್ನೆ ಇಲ್ಲಿ ಕರೆಯಲಾ? , ನಾನು ನಿಮಗೆ ತೊಂದರೆ ಕೊಡಲು ಬಂದಿಲ್ಲ,   ನಿಮಗೆ ಅನುಕೂಲಮಾಡಲೆಂದೆ ಬಂದಿರುವುದು" ಎಂದ
ನರಸಿಂಹನ ದ್ವನಿ, ಅವನ ವ್ಯಕ್ತಿತ್ವ ಆಕೆಯನ್ನು ಮಣಿಸಿತ್ತು,
"ಸರಿ ನಿಮಗೆ ಏನು ಬೇಕು ಹೇಳಿ" ಎನ್ನುತ್ತ ಕುಳಿತುಕೊಳ್ಳಲು ಕುರ್ಚಿ ತೋರಿಸಿದಳು.
"ನಿಮ್ಮ ಯಜಮಾನರು ಅಂದರೆ ಅನಂತರಾಮಯ್ಯನವರಿಗೆ, ವೆಂಕಟೇಶಯ್ಯನವರು ಸಾಲ ಕೊಟ್ಟಿದ್ದು ನಿಜವಾ?"
"ಹೌದು ನಿಜ ಐದು ಲಕ್ಷ ಸಾಲ ಅಂತ ಕೊಟ್ಟಿದ್ದರು, ಆದರೆ ಅದಕ್ಕೆ ಬದಲಾಗಿ ಪ್ರಾಣವನ್ನೆ ತೆಗೆದುಬಿಟ್ಟರು"
ಆಕೆ ಎಂದಳು ಕಣ್ಣಲ್ಲಿ ನೀರು ತುಂಬುತ್ತ
"ನೀವು ಅವರಿಗೆ ಬಡ್ಡಿ ಎಂದು ಹಣವನ್ನೇನಾದರು ಕೊಡುತ್ತಿದ್ದಿರಾ? "
"ಇಲ್ಲ, ಬರಿ ಕೈಸಾಲ ಎಂದು ಕೊಟ್ಟಿದ್ದರು, ಬಡ್ಡಿಯನ್ನೇನು ಅವರು ಕೇಳಿರಲಿಲ್ಲ"
"ಬಡ್ಡಿಯೂ ಇಲ್ಲದೆ ಐದು ಲಕ್ಷ ಕೊಟ್ಟಿದ್ದರಾ? ಅಂದರೆ ಅವರಿಬ್ಬರು ತುಂಬಾನೆ ಸ್ನೇಹಿತರು ಅಂತ ಆಯ್ತು, ಹಾಗಿರುವಾಗ ವೆಂಕಟೇಶಯ್ಯನವರೆ ಕೊಲೆಮಾಡಿದ್ದಾರೆ ಎಂದು, ಏಕೆ ಭಾವಿಸುವಿರಿ, ಬೇರೆ ಯಾರಾದರು ಕೊಲೆ ಮಾಡಿರಬಹುದಲ್ಲ, ವೆಂಕಟೇಶಯ್ಯ ಅಲ್ಲದೆ ಬೇರೆ ಯಾರಾದರ ಬಳಿ ನಿಮ್ಮ ಯಜಮಾನರು ಸಾಲ ಮಾಡಿದ್ದರ?"
"ಇಲ್ಲ ಹಾಗೇನು ಇಲ್ಲ, ಸೈಟ್ ಅಧಾರ ಮಾಡಿ ಬ್ಯಾಂಕಿನಿಂದ ಸಾಲ ಪಡೆದಿದ್ದರು ಅಷ್ಟೆ, ಅವರ ಇಲಾಖೆಯಲ್ಲಿ   ಪಿ.ಎಫ್ ಅಂತ ಏನೇನೊ ಸ್ವಲ್ಪ ತೆಗೆದಿದ್ದರು, ಹೊರಗಡೆ ವೆಂಕಟೇಶಯ್ಯನವರ ಹತ್ರ ಮಾತ್ರ ಸಾಲ ತಗೊಂಡಿದ್ದರು, ಅದನ್ನು ತೀರಿಸಬಾರದು ಎಂದೇನಿರಲಿಲ್ಲ, ಸ್ವಲ್ಪ ಅನಾನುಕೂಲ ಆಯ್ತು ಅದಕ್ಕೆ ಅವರು ಬಂದು ಮನೇ ಹತ್ರ ಬಾರಿ ಗಲಾಟೆ ಮಾಡಿದರು. ಇಬ್ಬರೂ ಕೂಗಾಡಿದರು, ಕಡೆಗೆ ನಮ್ಮವರೆ ಶಾಂತರಾಗಿ ಸಾಲ ತೀರಿಸುತ್ತೇನೆ ಅಂತ ಸಮಾದಾನ ಮಾಡಿದರು, ಬಸ್ಸಿಗೆ ಹತ್ತಿಸಿ ಬರುತ್ತೇನೆ ಅಂತ ಹೋದವರು ವಾಪಸ್ ಬರಲೇ ಇಲ್ಲ, ಬಸ್ ಸ್ಟಾಂಡಿನಲ್ಲಿ ಮತ್ತೆ ಏನು ಗಲಾಟೆಯಾಯಿತೋ ಯಾರು ಇಲ್ಲ ಎಂದು ಹೇಳಿ ಅವರು ಕಲ್ಲಿನಿಂದ ತಲೆಗೆ ಹೊಡೆದು ಹೊರಟೇ ಹೋಗಿದ್ದಾರೆ"
ಎಂದಳು.

"ನಿಮಗೆ ವೆಂಕಟೇಶಯ್ಯನವರು ಕಲ್ಲಿನಿಂದ ಹೊಡೆದರು ಎಂದು ನೋಡಿದವರು ಯಾರಾದರು ಹೇಳಿದ್ದಾರ?"
ನರಸಿಂಹ ಕೇಳಿದ
"ಯಾರು ಏಕೆ ಹೇಳಬೇಕು ಸಂದರ್ಭ ನೋಡಿದರೆ ಗೊತ್ತಾಗಲ್ವ ಅವರಲ್ಲದೆ ಬೇರೆ  ಯಾರು ಮಾಡಕ್ಕೆ ಆಗುತ್ತೆ ಹೇಳಿ"
ಆಕೆ ಕಣ್ಣೀರು ಹಾಕಿದರು.
"ಸರಿಯಮ್ಮ ಕಲ್ಲಿನಿಂದ ಹೊಡೆದು ಕೊಲೆಮಾಡಿದ್ದಾರೆ ಎಂದು ನಿಮಗೆ ಯಾರು ಹೇಳಿದರು"  ನರಸಿಂಹ ಮತ್ತೇ ಕೇಳಿದ,
"ನಾನು ವೆಂಕಟೇಶಯ್ಯನೆ ಕೊಲೆಮಾಡಿರೋದು ಎಂದು ಹೇಳಿದಾಗ ಇನ್ಸ್ ಪೆಕ್ಟರ್ , ಈ ರೀತಿ ಆಗಿರಬಹುದು ಎಂದರು, ಬಸ್ ಸ್ಟಾಂಡಿನಲ್ಲಿ ರಕ್ತದ ಕಲೆಯಿದ್ದ ಕಲ್ಲು ಸಿಕ್ಕಿದೆಯಲ್ಲ"

ನರಸಿಂಹ ಮತ್ತು ಪಾಂಡು ಅಲ್ಲಿಂದ ಎದ್ದು ಹೊರಟರು, ಅವರಿಗೆ ಮೊದಲೇ ತಿಳಿದಿದ್ದ ವಿಷಯಕ್ಕಿಂತ ಹೆಚ್ಚೆಗೆ ಏನು ಸಿಗಲಿಲ್ಲ. ಹೊರಡುವಾಗ ಹೊರಗಡೆ ಮೋಟರ್ ಬೈಕ್ ಸದ್ದು ಆಯಿತು. ಬಾಗಿಲಲ್ಲಿ ಸುಮಾರು ಹದಿನೇಳು ಹದಿನೆಂಟರ ಹುಡುಗ ಕಂಡುಬಂದ. ಅವನನ್ನು ನೋಡುತ್ತ ನರಸಿಂಹ ಕೇಳಿದ
"ಈ ಹುಡುಗ ಯಾರು ನಿಮ್ಮ ಮಗನಾ?"  
ರಾಜಮ್ಮ ಉತ್ತರಿಸುತ್ತ,
"ಅಲ್ಲ, ಇವನು ಪಕ್ಕದ ಬೀದಿಯ ಹುಡುಗ, ನಮ್ಮವರ ಹತ್ತಿರ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದವನು, ಈಗಲೂ ಅಗಾಗ್ಯೆ ಬರುತ್ತಾನೆ, ನಮಗೆ ಏನಾದರು ಕೆಲಸವಿದ್ದರೆ ಸಹಾಯ ಮಾಡುತ್ತಾನೆ"
"ಏನು ನಿನ್ನ ಹೆಸರು, ಈಗ ಏನು ಓದುತ್ತಿದ್ದೀಯ ನೀನು" ನರಸಿಂಹ ಕೇಳಿದ, ಮನೆಯಿಂದ ಹೊರಗೆ ಬರುತ್ತ
"ನನ್ನ ಹೆಸರು ಪ್ರದೀಪ್ ಅಂತ ಸಾರ್, ಈಗ ಪೀಯು ಓದುತ್ತಿರುವೆ"
"ಎಷ್ಟು ವರ್ಷ ನಿನಗೆ, ಆಗಲೇ ಬೈಕ್ ಓಡಿಸುತ್ತಿದ್ದೀ"
ಬೈಕನ್ನೆ ಗಮನಿಸುತ್ತ ಕೇಳಿದ ನರಸಿಂಹ.

ಪ್ರದೀಪ , ನರಸಿಂಹನ ಕಣ್ಣು ತಪ್ಪಿಸುತ್ತ ಹೇಳಿದ
"ಇಲ್ಲ ಸಾರ್, ಇನ್ನೂ ಲೈಸನ್ಸ್ ಸಿಕ್ಕಿಲ್ಲ, ಹೊರಗೆ ದೂರವೆಲ್ಲೂ ಹೋಗಲ್ಲ, ಇಲ್ಲೆ ಈ ಬೀದಿ, ನಮ್ಮ ಬೀದಿ, ಪಕ್ಕದ ಬೀದಿ ಅಂತ ಇಲ್ಲೇ ಓಡಾಡುತ್ತೇನೆ ಅಷ್ಟೆ."
ಬೈಕ್ ಹತ್ತಿದ ನರಸಿಂಹ , ಪಾಂಡುವಿನೊಡನೆ ನುಡಿದ
"ಏನು ಉಪಯೋಗವಾಗಲಿಲ್ಲ, ಕೊಲೆಯಲ್ಲಿ ಎಂತದೋ ಒಂದು ಕೊಂಡಿ ಮಿಸ್ಸಿಂಗ್ , ಏನಂತ ಹೇಳೋದು ಕಷ್ಟ, ನೋಡೋಣ, ಮೇಸ್ಟರಂತು ಈ ಕೊಲೆ ಮಾಡಿಲ್ಲ ಅನ್ನಿಸುತ್ತಿದೆ"

ಪಾಂಡು ನುಡಿದ ಎತ್ತಲೋ ನೋಡುತ್ತ  ಅಂದ,
"ಸರಿ ಸಾರ್ ಅದನ್ನೇ ಕೋರ್ಟ್ ಒಪ್ಪಬೇಕಲ್ಲ, ಈಗ ಸಾಂದರ್ಭಿಕ ಸಾಕ್ಷಗಳನ್ನು ನೋಡಿದರೆ ಅವರಿಗೆ ವಿರುದ್ದವಾಗಿರುವಂತಿದೆ"
ನರಸಿಂಹನೆಂದ
"ಎಂತದಿದೆ ಮಣ್ಣು, ಈ ಇನ್ಸ್‍ ಪೆಕ್ಟರ್ ಹಾಕಿರುವ ಕೇಸ್, ಕೊಟ್ಟಿರುವ ಸಾಕ್ಷಿಗಳನ್ನು ಸುಳ್ಳು ಎಂದು ನಿರೂಪಿಸಲು ಐದು ನಿಮಿಷ ಸಾಕು"
ಪಾಂಡು ಮೌನವಾದ.
------------------------



ಕೋರ್ಟಿನಲ್ಲಿ ವಿಚಾರಣೆಗೆ ಬರುವ ಹೊತ್ತಿಗೆ ಮೂರುತಿಂಗಳು ಕಳೆದಿತ್ತು.
ಪೋಲಿಸರು ಹಾಕಿದ್ದ ಚಾರ್ಜ್ ಶೀಟನ್ನು ಪರಾಂಬರಿಸಿದ್ದ ನರಸಿಂಹ. ತಮಾಷಿ ಎಂದರೆ ಮೊದಲು ಕೊಲೆಯಾದ ಜಾಗದಲ್ಲಿ ಯಾರು ಇಲ್ಲ, ಕೊಲೆಯನ್ನು ನೋಡಿದ ಸಾಕ್ಷಿ ಯಾರು ಇಲ್ಲ ಅನ್ನುತ್ತಿದ್ದವರು ಪೋಲಿಸರು, ಈಗ ವೆಂಕಟೇಶಯ್ಯನವರು ಅನಂತರಾಮಯ್ಯನನ್ನು ಕಲ್ಲಿನಿಂದ ಹೊಡೆದುದ್ದನ್ನು ನೋಡಿದೆ ಎಂದು ಹೇಳುವ ಸಾಕ್ಷಿಯೊಬ್ಬರನ್ನು ಸೃಷ್ಟಿಸಿದ್ದರು. ನರಸಿಂಹ ಮನದಲ್ಲಿಯೆ ನಕ್ಕ. ಅಂತು ಇನ್ಸ್‍ಪೆಕ್ಟರ್ ಅಶೋಕ್  ವೆಂಕಟೇಶಯ್ಯನವರನ್ನೆ ಕೊಲೆಗಾರನೆಂದು ನಿರೂಪಿಸಲು ಎಲ್ಲ ಕಸರತ್ತು ನಡೆಸಿದ್ದರು.

ಜಡ್ಜ್ ಮುಂದೆ ಎಲ್ಲ ದಾಖಲೆಗಳನ್ನು ಇಟ್ಟ ಸರ್ಕಾರಿ ವಕೀಲರು,
"ಅರೋಪಿ ವೆಂಕಟೇಶಯ್ಯನವರು  ಹಾಗು ಕೊಲೆಯಾದ ಅನಂತರಾಮಯ್ಯನವರು ಬಹಳ ಕಾಲದಿಂದ ಮಿತ್ರರಾಗಿದ್ದರು,  ಅನಂತರಾಮಯ್ಯನವರು ಮನೆಕಟ್ಟುವ ಸಂದರ್ಭದಲ್ಲಿ ವೆಂಕಟೇಶಯ್ಯವವರು ಐದು ಲಕ್ಷ ಹಣವನ್ನು ಅನಂತರಾಮಯ್ಯನವರಿಗೆ ಕೊಟ್ಟಿರುತ್ತಾರೆ ಆದರೆ ಅನಂತರಾಮಯ್ಯನವರು  ಮನೆ ಕಟ್ಟಿದ ತಾಪತ್ರಯದಲ್ಲಿದ್ದ ಕಾರಣ ಹಣವನ್ನಾಗಲಿ ಬಡ್ಡಿಯನ್ನಾಗಲಿ ಹಿಂದಕ್ಕೆ ಕೊಟ್ಟಿರುವದಿಲ್ಲ, ಆ ಕಾರಣದಿಂದ ಅಗಾಗ್ಯೆ ವೆಂಕಟೇಶಯ್ಯನವರು ಅನಂತರಾಮಯ್ಯನವರ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು.

ಕೊಲೆಯಾದ ದಿನ ಸಹಿತ , ಇಬ್ಬರ ಜಗಳ ತಾರಕಕ್ಕೆ ಹೋಗಿತ್ತು. ನಂತರ ಮನೆಗೆ ಹೊರಟ ವೆಂಕಟೇಶಯ್ಯನವರನ್ನು ಕಳುಹಿಸಲು ಅನಂತರಾಮಯ್ಯನವರು ಮನೆಯ ಹತ್ತಿರವೆ ಇರುವ ನಗರ ಬಸ್ ನಿಲ್ದಾಣಕ್ಕೆ  ಸ್ನೇಹಿತನ ಜೊತೆ ಹೋದರು.  ಅಲ್ಲಿ ಪುನಃ ಹಣದ ಬಗ್ಗೆ ಮಾತುಕತೆ ನಡೆದು, ವೆಂಕಟೇಶಯ್ಯನವರು ರೋಷದಿಂದ, ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಕಲ್ಲಿನಿಂದ ಅನಂತರಾಮಯ್ಯನವರ ತಲೆಗೆ ಹಿಂಬಾಗದಿಂದ ಹೊಡೆದು ಕೊಲೆಮಾಡಿರುತ್ತಾರೆ. ಕಲ್ಲಿನ ಮೇಲೆ ಇರುವ ರಕ್ತವು ಅನಂತರಾಮಯ್ಯನವರ ರಕ್ತವು ಒಂದೇ ಎಂದು ಡಾಕ್ಟರ್‌ಗಳೂ ಗುರುತಿಸಿ ಸರ್ಟಿಫಿಕೇಟ್ ಕೊಟ್ಟಿರುತ್ತಾರೆ.  
ಮನೆಗೆ ಬಂದು ಪದೇ ಪದೇ ಜಗಳವಾಡುತ್ತಿದ್ದರು, ಮತ್ತು ಕೊಲೆಯಾದ ದಿನ ಸಹ ಹಣದ ವಿಷಯಕ್ಕೆ ಜಗಳ ನಡೆದು ನಂತರ ಇಬ್ಬರೇ ಬಸ್ ನಿಲ್ದಾಣಕ್ಕೆ ಹೋದರೆಂದು ಕೊಲೆಯಾಗಿರುವ ಅನಂತರಾಮಯ್ಯನವರ ಪತ್ನಿಯೆ ಸಾಕ್ಷಿಯಾಗಿದ್ದು , ಅವರೇ ಪೋಲಿಸರಿಗೆ ದೂರು ಸಹ ಕೊಟ್ಟಿರುತ್ತಾರೆ.
ಬಸ್‌ನಿಲ್ದಾಣದಲ್ಲಿ ನಿಂತಿದ್ದ ಏಕೈಕ ವ್ಯಕ್ತಿ ಶ್ರೀಧರ ಎಂಬುವರು ಸಹ ಪೋಲಿಸ್ ಸ್ಟೇಷನ್‌ಗೆ ತಾನಾಗೆ ಬಂದು ತಾನು ಕೊಲೆಯನ್ನು ನೋಡಿರುವದಾಗಿ ತಿಳಿಸಿರುತ್ತಾರೆ.
ಈ ಎಲ್ಲ ಅರೋಪಗಳ ಹಿನ್ನಲೆಯಲ್ಲಿ ವೆಂಕಟೇಶಯ್ಯನವರ ಮೇಲೆ  ಹಲ್ಲೆಯ ಆರೋಪ, ಹತ್ತಾಶೆ  ರೋಷದಿಂದ ಕೊಲೆ, ಆಕ್ರಮಣ ಮಾಡಿದ ಅರೋಪವನ್ನು ಹೊರೆಸಿ  ಭಾರತದ ಕಾನೂನಿನ , ಚಾಪ್ಟರ್ ೧೬ ರ ಸೆಕ್ಷನ್ 351 , ಸೆಕ್ಷನ್ 300 , ಸೆಕ್ಷನ್ 319  ಅಡಿಯಲ್ಲಿ ಚಾರ್ಚ್ ಶೀಟ್ ಹಾಕಿದೆ, ಅಲ್ಲದೆ  ಕೊಲೆಯ ನಂತರ ತಪ್ಪಿಸಿಕೊಳ್ಳುವ ಪ್ರಯತ್ನ, ಅಲ್ಲದೆ ಕಾನೂನು ಬಾಹಿರವಾಗಿ ಹಣದ ಲೇವಾದೇವಿ ಅರೋಪ ಸಹ ಇದೆ ಎನ್ನುತ್ತ  ತಮ್ಮ ಸಾಕ್ಷಿ ದಾಖಲೆಗಳನ್ನೆಲ್ಲ ನ್ಯಾಯದೀಶರ ಮುಂದೆ ಇರಿಸಿದರು.

ಎಲ್ಲವನ್ನು  ವಿವರವಾಗಿ ವೀಕ್ಷಿಸಿದ ನ್ಯಾಯದೀಶರು, ಅರೋಪಿ ವೆಂಕಟೇಶಯ್ಯನವರನ್ನು ಕುರಿತು
"ನೀವೀಗ ಪೋಲಿಸರು ನಿಮ್ಮ ಮೇಲೆ ಹೊರಸಿದ ಎಲ್ಲ ಆರೋಪಗಳನ್ನು ಕೇಳಿರುವಿಲ್ಲ , ಅದನ್ನೆಲ್ಲ ಒಪ್ಪಿಕೊಳ್ಳುತ್ತೀರ "
ಎಂದು ಪ್ರಶ್ನಿಸಿದರು
ವೆಂಕಟೇಶಯ್ಯನವರು
"ಸ್ವಾಮಿ ಪೋಲಿಸರು ತಿಳಿಸಿದಂತೆ ನಾನು  ಕೊಲೆಯಾದ ದಿನ ನನ್ನ ಸ್ನೇಹಿತ ಅನಂತರಾಮಯ್ಯನ ಮನೆಗೆ ಹೋಗಿದ್ದು ನಿಜ. ಅವರು ಹಣ ಸದ್ಯಕ್ಕೆ ಹಿಂದೆ ಕೊಡಲಾಗಲ್ಲ ಎನ್ನುವಾಗ ಇಬ್ಬರು ವಾದ ಮಾಡಿದ್ದು ನಿಜ. ನಂತರ ನಾನು ಮನೆಗೆ ಹೊರಟೆ, ಅನಂತರಾಮಯ್ಯನೆ ನನ್ನ ಜೊತೆ ಬಸ್ ನಿಲ್ದಾಣಕ್ಕೆ ಬಂದ. ನಂತರ ಬಸ್ ಬಂದಿತ್ತು ನಾನು ಬಸ್ ಹತ್ತಿ ಮನೆಗೆ ಬಂದೆ. ನಾನು ಬಸ್ ಹತ್ತುವಾಗಲು ಅನಂತರಾಮಯ್ಯ ಬಸ್ ನಿಲ್ದಾಣದಲ್ಲಿಯೆ ನಿಂತಿದ್ದ. ಅವನು ಹೇಗೆ ಕೊಲೆಯಾದನೋ ನನಗೆ ತಿಳಿದಿಲ್ಲ. ನಾನು ಅವನ ಕೊಲೆ ಮಾಡಿಲ್ಲ "
ಎಂದು ನಿಧಾನವಾಗಿ ತಿಳಿಸಿದರು.
ನ್ಯಾಯಾದೀಶರು
"ಸರಿ ಹಾಗಿದ್ದರೆ ಈ ಕೇಸಿನ ಸತ್ಯಾಸತ್ಯತೆಗಳನ್ನು ತಿಳಿಯಲು ವಿಚಾರಣೆ ನಡೆಸಬೇಕಾಗಿದೆ. ನೀವು ನಿಮ್ಮ ಪರವಾಗಿ ಯಾರಾದರು ವಕೀಲರನ್ನು ನಿಯಮಿಸಿಕೊಂಡಿದ್ದೀರ?"
ಎಂದು ಪ್ರಶ್ನಿಸಿದರು.
ನರಸಿಂಹ ಎದ್ದು
"ಸ್ವಾಮಿ , ವೆಂಕಟೇಶಯ್ಯನವರ ಪರವಾಗಿ ನಾನು ವಾದ ಮಾಡುತ್ತೇನೆ.  ಅದಕ್ಕೆ ಸಂಬಂದಿಸಿದ ದಾಖಲೆಗಳು ಇಲ್ಲಿವೆ " ಎನ್ನುತ್ತ ಪತ್ರಗಳನ್ನು ನೀಡಿದರು
ನ್ಯಾಯಾದೀಶರು ಗಂಭೀರವಾಗಿ
"ಸರಿ ಹಾಗಿದ್ದರೆ ಈ ಕೇಸಿಗೆ ಸಂಬಂದಿಸಿದ ಮೊದಲ ವಿಚಾರಣೆ ಮುಂದಿನ ಸೋಮವಾರ  ಪ್ರಾರಂಬವಾಗಲಿ’
ಎನ್ನುತ್ತ ಎದ್ದರು.
ಮುಂದುವರೆಯುವುದು …..

1 comment:

  1. 4ನೇ ಭಾಗವು ರೋಚಕವಾಗಿದೆ.
    ಕಲ್ಲಿನ ಸತ್ಯ ಬಯಲಾದ ಹಾಗೆ ಆಯ್ತು ಅಲ್ಲವೇ?

    ReplyDelete

enter your comments please