ರಾಧ ಮಾಧವ
ಕೃಷ್ಣ ..ಕೃಷ್ಣ ..ಕೃಷ್ಣ (15)-ರಾಧ ಮಾಧವ
ಇಲ್ಲಿಯವರೆಗೂ.
ಗಣೇಶ
ಸರಿಯೆ ಕೃಷ್ಣ ನಿನ್ನ ರಾದೆಯ ಕತೆಯದಾದರು ಎಂತಹುದು, ಇಂದಿಗೂ ರಾದ ಮಾಧವ ಪ್ರೇಮವೆಂದೆ ವರ್ಣಿಸುತ್ತಾರೆ ಆದರೆ ನಿಮ್ಮಿಬ್ಬರ ಮದುವೆಯಾದರು ಏಕೆ ಆಗಲಿಲ್ಲ
ಮುಂದೆ ಓದಿ..
ಕೃಷ್ಣ ಸ್ವಲ್ಪ ಭಾವಪೂರ್ಣನಾಗಿದ್ದ
“ಗಣೇಶ ನನ್ನ ಜೀವನಯಾತ್ರೆಯಲ್ಲಿ ರಾಧೆಯ ಪಾತ್ರವೆ ಬೇರೆ. ಉಳಿದೆಲ್ಲ ಸಂಬಂಧಗಳು ಒಂದು ತೂಕವಾದರೆ ರಾಧೆಯ ಸಂಬಂಧದ ತೂಕವೆ ಬೇರೆ. ನನ್ನ ಜೀವನದ ಬೇರೆ ಎಲ್ಲ ಸಂಬಂಧಗಳು ನನ್ನ ಜೊತೆ ಒಡನಾಡುವಾಗ ಅವರು ನನ್ನ ಮೇಲೆ ಅವಲಂಬಿತರಾಗಿದ್ದರು. ಅವರ ತನು ಮನ ಆತ್ಮ ಇವೆಲ್ಲ ನನ್ನ ಸಂಬಂಧದ ಮೇಲೆ ಅವಲಂಬಿತ ಅನ್ನುವಂತಿದ್ದರು ಆದರೆ ರಾಧೆಯ ಸಂಬಂಧ ಇದಕ್ಕೆ ವಿರುದ್ದವಾಗಿದ್ದು, ನನ್ನ ತನು ಮನ ಆತ್ಮ ಎಲ್ಲ ರೀತಿಯ ಭಾವನೆಗಳು ರಾಧೆಯ ಮೇಲೆ ಅವಲಂಬಿತವಾಗಿತ್ತು ಇದೆ ರಾಧೆಯ ಸಂಬಂಧಕ್ಕು ಉಳಿದ ಸಂಬಂಧಕ್ಕು ಇದ್ದ ವ್ಯತ್ಯಾಸ. ನನ್ನ ಪತ್ನಿಯರೆಲ್ಲ ನನ್ನನ್ನು ಮೋಹಿಸಿ ಬಂದವರೆ ಆಗಿದ್ದರು, ನನ್ನ ನಡೆ ನುಡಿಗಳು ನನ್ನ ಸಂಚಾರ ಅವರನ್ನೆಲ್ಲ ದುಗುಡಕ್ಕೆ ದೂಡುತ್ತಿತ್ತು.
ಪಾಂಡವರು ನನ್ನ ಆತ್ಮ ಎಂದು ಹೇಳುವಾಗಲು ಅವರೆಲ್ಲರು ನನ್ನಿಂದ ಅವಲಂಬನೆಯ ನಿರೀಕ್ಷೆ ಮಾಡುತ್ತಿದ್ದರು. ನನ್ನ ತಂಗಿ ಎಂದು ಹೇಳುವ ದ್ರೌಪತಿ ಸಹ ನನ್ನಿಂದ ಉಪಕಾರದ ಸಂತೈಸುವಿಕೆಯ ನಿರೀಕ್ಷಯಲ್ಲಿದ್ದವಳೆ. ನನ್ನ ನಗು ನನ್ನ ಮಾತು ಅವಳಲ್ಲಿ ದೈರ್ಯವನ್ನು ತುಂಬುತ್ತಿತ್ತು ಇದು ಅವಳದೆ ಮಾತು. ಹಾಗೆಯೆ ಮಥುರಾನಗರವಾಗಲಿ ದ್ವಾರಕೆಯ ಬಂದುಗಳು ಸ್ನೇಹಿತರು ತಂದೆ ತಾಯಿ ತಂಗಿಯರು ಅಣ್ಣ ಬಲರಾಮ ಸ್ನೇಹಿತರು ಎಲ್ಲರ ಪ್ರೀತಿಯು ಸಹ ನಿರೀಕ್ಷೆಯೊಡನೆ ಬೆರೆತುಕೊಂಡಿತ್ತು.
ನನ್ನಿಂದ ಯಾವ ನಿರೀಕ್ಷೆಯ ಅಪೇಕ್ಷೆಯು ಇಲ್ಲದೆ ನನ್ನನ್ನು ಪ್ರೀತಿಸಿದ ಜನರೆಂದರೆ ಗೋಕುಲದವರು. ನನ್ನನ್ನು ಚಿಕ್ಕ ಮಗುವಿನಿಂದ ದೊಡ್ಡವನಾಗಿ ಬೆಳೆಸಿದ ಆ ಜನ ನನ್ನನ್ನು ಸದಾ ಚಿಕ್ಕಮಗುವಾಗಿಯೆ ನೋಡುತ್ತಿದ್ದರು. ಅಂತಹ ಹಳ್ಳಿಯ ಹುಡುಗಿ ರಾಧೆ. ರಾಧೆಯ ಹೆಸರು ನನ್ನ ಹೃದಯ ಮನಸ್ಸು ದೇಹ ಎಲ್ಲಕ್ಕು ಶಕ್ತಿ ತುಂಬಬಲ್ಲದಾಗಿತ್ತು. ಅವಳ ಸಾಂಗತ್ಯಕ್ಕೆ ನಾನು ಹಾತೊರೆಯುತ್ತಿದ್ದೆ. ಬೆಳಗ್ಗೆಯಾದರೆ ದನಕಾಯಲು ಹೋದಾಗ ರಾಧೆ ಯಾವಾಗ ಬರುವಳೋ ಎನ್ನುವ ನಿರೀಕ್ಷೆಯೊಡನೆ ಮರದ ಕೆಳಗೆ ಕೊಳಲು ಊದುತ್ತ ಕುಳಿತಿರುತ್ತಿದ್ದೆ, ರಾತ್ರಿಯಾದರೆ ಯಮುನೆಯ ತೀರಕ್ಕೆ ಸ್ನೇಹಿತೆಯರೊಡನೆ ಬರುವಳು ರಾಸಕ್ರೀಡೆಗೆ ಎಂದು ಕಾಯುತ್ತಿದೆ. ರಾಧೆ ಎನ್ನುವ ಹೆಸರು ನನಗೆ ಸದಾ ನಿರೀಕ್ಷೆಯೆ ಆಗಿತ್ತು.
ಆದರೆ ರಾಧೆಯಾದರೋ ಎಂದಿಗೂ ನನ್ನಿಂದ ಏನನ್ನು ಅಪೇಕ್ಷೆ ಪಡಲಿಲ್ಲ. ಯಾವುದಕ್ಕು ಹಾತೊರೆಯಲಿಲ್ಲ. ನಿರ್ವಾಜ್ಯ ಅಂತಃಕರಣದಿಂದ ನನಗೆ ಪ್ರೇಮ ದೀಕ್ಷೆ ನೀಡಿದಳು. ವಯಸಿನಲ್ಲಿ ಆಕೆ ನನಗಿಂತಲೂ ತುಸು ದೊಡ್ಡವಳೆ ಇರಬಹುದು ಆದರೆ ಅದು ನಮ್ಮಿಬ್ಬರ ಸ್ನೇಹಕ್ಕೆ ಎಂದಿಗೂ ಅಡ್ಡಿ ಬರಲಿಲ್ಲ. ನಮ್ಮಿಬ್ಬರದೂ ಅಪ್ಪಟ ಶುದ್ದ ಸ್ನೇಹವಾಗಿತ್ತು. ಅವಳು ಎದುರಿಗಿರುವಳು ಎಂಬ ಭಾವ ನನ್ನಲ್ಲಿ ಉತ್ಸಾಹ ತುಂಬುತ್ತಿತ್ತು"
ಕೃಷ್ಣ ಹೇಳುತ್ತಿದ್ದರೆ ಗಣೇಶ ಆಶ್ಚರ್ಯದಿಂದ ಕೃಷ್ಣನನ್ನೆ ನೋಡುತ್ತಿದ್ದ. ಗಣೇಶನಿಗೆ ಅಚ್ಚರಿ ಎನಿಸಿತ್ತು. ಜಗತ್ತೆ ಪ್ರೀತಿಸುವ ಜಗನ್ನಾಥ ಕೃಷ್ಣ , ರಾಧೆಯ ಪ್ರೇಮವೆಂದೊಡನೆ ತಾನೆ ಮೈಮರೆತಿದ್ದ. ಅವನು ತನ್ನೊಳಗೆ ತಾನು ಎಂಬಂತೆ ತನ್ಮಯತೆಯಿಂದ ತನ್ನ ರಾಧೆಯ ಪ್ರೀತಿಯನ್ನು ಅರುಹಿತ್ತಿದ್ದ. ರಾಧೆಯ ಪ್ರೇಮವೆಂಬುದು ಎಷ್ಟೊ ವರ್ಷಗಳ ನಂತರವಾದರು ಅದನ್ನು ಅರುಹುವಾಗ ಪ್ರೇಮ ಎಂಬುದು ಕೃಷ್ಣನ ಮೈ ಮನಗಳಲ್ಲೆಲ್ಲ ತುಂಬಿ ತುಳುಕುತ್ತಿತ್ತು. ಕೃಷ್ಣ ಮುಂದುವರೆಸಿದ
“ಆದರೆ ಈ ರಾಧೆಯನ್ನು ನಾನು ಮದುವೆಯಾಗಿ ಮಥುರೆಗೆ ಅಲ್ಲಿಂದ ದ್ವಾರಕೆಗೆ ಕರೆದೊಯ್ಯುವುದು ಅನ್ನುವುದು ನನ್ನ ಕಲ್ಪನೆಗೆ ಹೊಂದುತ್ತಿರಲಿಲ್ಲ. ಗೋಕುಲದ ಶುದ್ದ ಸ್ನೇಹದ ವಾತವರಣದಲ್ಲಿ ಬೆಳೆದ ರಾಧೆಗೆ ಮಥುರೆಯ ರಾಜಕೀಯ, ಆ ರಾಜಕೀಯದ ನಡುವಿನ ಕೃಷ್ಣ ಎಂದಿಗೂ ಇಷ್ಟವಾಗುತ್ತಿರಲಿಲ್ಲ. ಒಮ್ಮೆ ಅವಳನ್ನು ಮದುವೆಯಾಗಿ ಕರೆದುಕೊಂಡು ಹೋಗಿದ್ದಲ್ಲಿ, ಅಷ್ಟಮಹಿಷಿಯರ ಆಡಂಬರ ಅಸೂಯೆ ಅಬ್ಬರಗಳ ನಡುವೆ ಕಳೆದುಹೋಗುತ್ತಿದ್ದಳು. ಗೋಕುಲವಿಲ್ಲದೆ ರಾಧೆಯು ಕೃಷ್ಣನನ್ನು ಸೇರುವುದು ಅರ್ಥವಿಲ್ಲದ ಕ್ರಿಯೆಯಾಗಿತ್ತು. ರಾಧೆ ಎಂಬ ಶಕ್ತಿ ನನ್ನೊಳಗೆ ಬೆರೆತು ಜೀವನದ ಕಡೆಯವರೆಗೂ ನನ್ನಲ್ಲಿ ಉತ್ಸಾಹ ತುಂಬುತ್ತಿತ್ತು.”
ಕೃಷ್ಣ ಮತ್ತೆ ಹೇಳಿದ,
"ಹೌದು ಗಣೇಶ ರಾಧೆಯ ಪ್ರೇಮ ಎಂಬುದು ನನ್ನ ಜೀವನದುದ್ದಕ್ಕು ನನ್ನಲ್ಲಿ ಉತ್ಸಾಹ ತುಂಬುತ್ತಿತ್ತು. ಅವಳು ಎಲ್ಲೊ ದೂರದ ಗೋಕುಲದಲ್ಲಿ ಇರುವಳು ಎನ್ನುವ ಭಾವವೆ ನನಗೆ ಶಕ್ತಿಯಾಗಿತ್ತು. ಆದರೆ ಒಮ್ಮೆ ಗೋಕುಲವನ್ನು ತೊರೆದು ಬಂದವನು ನಾನು ಪುನಃ ಅಲ್ಲಿಗೆ ಹೋಗಲೆ ಇಲ್ಲ. ಏಕೆಂದರೆ ಗೋಕುಲದಿಂದ ಮಥುರೆಗೆ ಬಂದ ತಕ್ಷಣ ಕೃಷ್ಣನ ಹೊರರೂಪ ನಡೆ ನುಡಿ ಎಲ್ಲವೂ ಬದಲಾಗಿಹೋಗಿತ್ತು. ರಾಧೆಯ ಪ್ರೀತಿಯಲ್ಲಿ ಮುಳುಗಿದ್ದ ಮುಗ್ದ ಕೃಷ್ಣನ ಸ್ವರೂಪ ಇಲ್ಲಿ ಮಾಯವಾಗಿತ್ತು. ಅಂತಹ ರೂಪದಲ್ಲಿ ರಾಧೆಯ ಎದುರಿಗೆ ಹೋಗುವುದು ನನಗೆ ಬೇಕಿರಲಿಲ್ಲ. ಆದರೆ ನಾನು ಗೋಕುಲದಿಂದ ಸುದ್ದಿ ಸಂಗ್ರಹಿಸುತ್ತಲೆ ಇದ್ದೆ. ರಾಧೆ ಜೀವನ ಪೂರ್ತಿ ನನ್ನನ್ನು ಕಾಯುತ್ತಲೆ ಇದ್ದಳು. ಒಂದು ದಿನವು ಗೊಣಗಲಿಲ್ಲ ಅಸಮಾದಾನ ಪಡಲಿಲ್ಲ. ಕೃಷ್ಣ ಎಂದಾದರು ಬರುವನು ಎನ್ನುವ ನಿರೀಕ್ಷೆಯಲ್ಲಿ ಸದಾ ನನ್ನನ್ನು ಕಾಯುತ್ತಿದ್ದಳು. ನಾನು ನನ್ನ ಜೀವನದಲ್ಲಿ ಯಾರಿಗಾದರು ಕಾಯಿಸುವಂತೆ ಮಾಡಿದೆ ಎಂದು ನನಗೆ ಅನ್ನಿಸಿದ್ದರೆ ಅದು ರಾಧೆಗೆ ಮಾತ್ರ. ಅವಳ ಪ್ರೀತಿಯನ್ನೆಂದು ಅದರ ಆಳವನ್ನೆಂದು ನಾನು ಅರಿಯಲಾಗಲಿಲ್ಲ"
ಗಣೇಶ ನಗುತ್ತ ಹೇಳಿದ
“ಕೃಷ್ಣ ನನಗೆ ಅನ್ನಿಸುತ್ತಿದೆ, ಸಾವಿರಾರು ಗೋಪಿಕೆಯರು ನಿನ್ನನ್ನು ಆರಾಧಿಸಿದರು, ರುಕ್ಮಿಣಿ ಸತ್ಯಭಾಮೆ ಎಲ್ಲರು ನಿನ್ನನ್ನು ಮೋಹಿಸಿ ಮದುವೆಯಾದರು, ಹದಿನಾರು ಸಾವಿರ ಹೆಂಗೆಳೆಯರು ನಿನ್ನ ಪತ್ನಿಯರಾದರು, ಆದರೆ ನೀನು ಮಾತ್ರ ರಾಧೆಯನ್ನು ಪ್ರೀತಿಸಿದೆ , ಇಂದಿಗೂ ಅವಳ ನೆನಪು ನಿನ್ನಲ್ಲಿ ಹಸಿರಾಗಿದೆ, ನಿನ್ನ ಮಾತುಗಳಲ್ಲಿ ಉತ್ಸಾಹ ಹೆಚ್ಚಿಸುತ್ತಿದೆ , ಅಂದರೆ ರಾಧೆಯ ಪ್ರೀತಿಯಾದರು ಎಂತಹುದು. ಅವಳ ಪ್ರೀತಿಗಿದ್ದ ಶಕ್ತಿ ಎಂತಹುದು, ಬಹುಶಃ ನೀನು ಚಿಕ್ಕವಯಸಿನ ಪ್ರೀತಿ ಹಾಗು ಪ್ರಥಮ ಪ್ರೀತಿ ಇದಾದ್ದರಿಂದ ಅವಳ ಬಗ್ಗೆ ನಿನಗೆ ಇಷ್ಟೊಂದು ಆಕರ್ಷಣೆ ಅನ್ನಿಸುತ್ತಿದೆ, ನೀನು ಏನು ಹೇಳುವೆ?”
ಕೃಷ್ಣ ಗಹಗಹಿಸಿ ನಕ್ಕ
“ಗಣೇಶ ನೀನು ಬ್ರಹ್ಮಚಾರಿ ಎಂದಿಗೂ ಬ್ರಹ್ಮಚಾರಿಯೆ, ನೀನು ವಿಶ್ಲೇಷಿಸುತ್ತಿರುವ ಪ್ರೀತಿಯ ರೀತಿ ನನಗೆ ಅರ್ಥವಾಯಿತು. ಆದರೆ ಗಣೇಶ ನಿನ್ನ ವಿಶ್ಲೇಷಣೆ ತಪ್ಪು. ರಾಧಮಾಧವರ ಪ್ರೀತಿಯ ಪರಿ ನಿನಗಷ್ಟೆ ಅಲ್ಲ ಗಣಪ ಯಾರಿಗೂ ಅರ್ಥವಾಗದು, ಅದು ಅಂತಹ ದೈವಿಕ ಸ್ವರೂಪದ್ದು, ಸಾಮಾನ್ಯ ಯೋಚನೆಗೆ ನಿಲುಕದ್ದು. ನಾನು ರಾಧೆಯನ್ನು ಕಾಯ ವಾಚ ಮನಸ ಪ್ರೀತಿಸಿದೆನೊ ಹಾಗೆ ರಾಧೆ ಸಹ , ನನ್ನ ಅವಳ ಪ್ರೀತಿ ಮಾತಿನ, ಪದಗಳ ಅಲಂಕಾರಕ್ಕೆ ನಿಲುಕದ್ದು. ಹೃದಯಗಳ ನಡುವಿನ ಆತ್ಮಗಳ ನಡುವಿನ ಪರಿಪೂರ್ಣ ಸಂವಾದ ಅದು. ಅಷ್ಟು ಮಾತ್ರ ಹೇಳಬಲ್ಲೆ”
ಗಣೇಶ ನಕ್ಕು ಸುಮ್ಮನಾದವ ಸ್ವಲ್ಪ ಕಾಲ, ಕೃಷ್ಣನ ಮುಖವನ್ನೆ ನೋಡುತ್ತ ಕುಳಿತ. ನಂತರ ನುಡಿದ.
“ಕೃಷ್ಣ ನಿನ್ನ ಮೇಲೆ ಅಪಾದನೆಯೊಂದಿದೆ, ನೀನು ಮನಸು ಮಾಡಿದ್ದರೆ ಮಹಾಭಾರತದ ಯುದ್ದ ತಡೆಯ ಬಹುದಿತ್ತು. ನೀನು ನಿನ್ನ ದ್ವಾರಕೆಯ ಜನರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದೆ ನಿನಗೆ ಆಗುವ ಮಾನ ಅಪಮಾನಗಳನ್ನು ಲೆಕ್ಕಿಸಲಿಲ್ಲ. ಜರಾಸಂದ ಬಂದಾಗ ಹೇಡಿ ಎನ್ನುವ ಬಿರುದು ಬರುವಂತಿದ್ದರು ಜನರಿಗೆ ತೊಂದರೆ ಯಾಗಬಾರದೆಂದು ಓಡಿ ಹೋದೆ, ಹಾಗೆ ಮತ್ತೊಮ್ಮೆ ಅವನು ಬರುವದರಲ್ಲಿ ಮದುರೆಯಿಂದ ದ್ವಾರಕೆಗೆ ನಗರವನ್ನೆ ಜನರ ಸಮೇತ ಸಾಗಿಸಿದೆ. ದ್ವಾರಕೆಯನ್ನು ರಕ್ಷಿಸಿದೆ, ಆದರೆ ಮಹಾಭಾರತ ಯುದ್ದವನ್ನು ನಡೆಯಲು ಬಿಟ್ಟು ಲಕ್ಷ ಲಕ್ಷ ಜನರ ಸಾವಿಗೆ ಕಾರಣನಾದೆ”
ರಾಧೆಯ ನೆನಪಿನಲ್ಲಿದ್ದ ಕೃಷ್ಣನಿಗೆ ಗಣೇಶ ಮಾಡಿದ ಅಪಾದನೆ ಅರ್ಥಮಾಡಿಕೊಳ್ಳಲು, ಮನಸಿನ ಲಹರಿ ಬದಲಾಗಲು ಸಮಯಾವಾಕಾಶ ನೀಡುವಂತೆ ಗಣೇಶ ಮೌನವಾಗಿ ಕೃಷ್ಣನನ್ನು ನೋಡುತ್ತಿದ್ದ.
ಮುಂದುವರೆಯುವುದು……
ಚಿತ್ರಕೃಪೆ : radhakrishna
No comments:
Post a Comment
enter your comments please