Tuesday, March 25, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೫)


ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೫)

ವಿಚಾರಣೆ ಮೊದಲಾದಂತೆ ನ್ಯಾಯದೀಶರು ಬಂದು ಆಸೀನರಾದರು. ಅಂದು ಅವರ ಮುಂದೆ ಬರಬೇಕಾಗಿದ್ದ ಕೇಸ್ ಮಹಾಲಕ್ಷ್ಮೀಪುರಂ ಪೋಲಿಸ್ ವರ್ಸಸ್  ಆರೋಪಿ ವೆಂಕಟೇಶಯ್ಯ ಎಂದು ಕೂಗಿದಾಗ ಪೋಲಿಸರು ವೆಂಕಟೇಶಯ್ಯನವರನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದರು.
ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಲು ಪ್ರಾರಂಭಿಸಿದರು

"ಮಹಾಸ್ವಾಮಿ ತಮ್ಮ ಎದುರಿಗೆ ನಿಂತಿರುವ ಈತ ವೆಂಕಟೇಶಯ್ಯ ಎಂದು, ಇವರು ವೃತ್ತಿಯಲ್ಲಿ ಸರ್ಕಾರ ಪ್ರೌಡಶಾಲೆಯಲ್ಲಿ ಮುಖ್ಯ ಉಪದ್ಯಾಯರಾಗಿದ್ದವರು. ಈಗ ನಿವೃತ್ತರು , ತನ್ನ   ನಡತೆಯಿಂದ ಮಕ್ಕಳಿಗೆ ಸಮಾಜಕ್ಕೆ  ಆದರ್ಶವಾಗಬೇಕಿದ್ದ ಇವರು , ಹಣದ ಕಾರಣಕ್ಕೆ ಅವರ ಆತ್ಮೀಯ ಸ್ನೇಹಿತನ ಕೊಲೆ ಮಾಡಿ ಅಪರಾದಿಯಾಗಿ ತಮ್ಮೆದುರು ನಿಂತಿದ್ದಾರೆ.  ಅವರು ತಾವು ಮಾಡಿರುವ ಕೊಲೆಯನ್ನು ಒಪ್ಪಿಕೊಳ್ಳದ ಕಾರಣ ಈ ವಿಚಾರಣೆ ನಡೆಯಬೇಕಾಗಿದೆ. ಅವರು ಕೊಲೆ ಮಾಡಿರುವರು ಎನ್ನಲು ಸಾಕಷ್ಟು ಸಾಕ್ಷಿಗಳಿವೆ. ಸಂದರ್ಭವೂ ಸಹಿತ ಅವರ ಹೊರತು ಮತ್ಯಾರು ಕೊಲೆ ಮಾಡಿಲ್ಲ ಎಂಬುದಕ್ಕೆ ಕಾರಣವಾಗಿದೆ. ಹಾಗಾಗಿ ಅವರ ವಿರುದ್ದ ಇರುವ ಸಾಕ್ಷಿಗಳನ್ನು ಹಾಗು ಸಂದರ್ಭಗಳನ್ನು ವಿವರಿಸಿ ಅಪರಾದವನ್ನು ನಿರೂಪಿಸುವದಕ್ಕೆ ಹಾಗು ಶಿಕ್ಷೆಕೊಡುವದಕ್ಕೆ ಕೋರ್ಟ್ ಅನುಮತಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ " ಎಂದರು.ನ್ಯಾಯದೀಶರು ನಗುತ್ತ
"ಈಗ ಈ ಅರೋಪಿ ಕೊಲೆಯನ್ನು ಮಾಡಿದ್ದಾನೆ ಎನ್ನುವದನ್ನು ಸಾಕ್ಷೀ ಸಮೇತ ನಿರೂಪಿಸಿ ನಂತರ ಅವರಿಗೆ ಕೊಡಬಹುದಾದ ಶಿಕ್ಷೆಯ ಬಗ್ಗೆ ಕೋರ್ಟ್ ಅಲೋಚಿಸಲು ಬಿಡಿ" ಎಂದರು.

ಸರ್ಕಾರಿ ವಕೀಲರು
"ಸರಿ ಸ್ವಾಮಿ" ಎನ್ನುತ್ತ
"ಮೊದಲಿಗೆ ಇದು ಡಾಕ್ಟರ್ ಸರ್ಟಿಫಿಕೇಟ್, ಇದು  ಅನಂತರಾಮಯ್ಯನವರು ತಲೆಯ ಹಿಂಬಾಗಕ್ಕೆ ಗಟ್ಟಿಯಾದ ವಸ್ತುವಿನಿಂದ ಬಿದ್ದ ಏಟಿನಿಂದ ಮರಣಹೊಂದಿದ್ದಾರೆ ಎಂದು ಸರ್ಕಾರಿ ಅಸ್ಪತ್ರೆಯ ಡಾಕ್ಟರ್  ಕೊಟ್ಟಿರುವರು"
ಎನ್ನುತ್ತ ಡಾಕ್ಟರ್ ಸರ್ಟಿಫಿಕೇಟ್ ಕೊಟ್ಟರು, ಅದನ್ನು ನ್ಯಾಯಲಯ ಪರಿಶೀಲಿಸಿ, ದಾಖಲೆಗಾಗಿ ತೆಗೆದುಕೊಂಡಿತು
"ನಂತರ ಸ್ವಾಮಿ, ಇದು ಅದೇ ಬಸ್ ಸ್ಟಾಂಡಿನಲ್ಲಿ ಕೊಲೆಯ ನಂತರ ಬಿದ್ದಿದ್ದ ಕೊಲೆಗೆ ಉಪಯೋಗಿಸಿದ ಕಲ್ಲು, ಇದರ ಮೇಲೆ ರಕ್ತದ ಕಲೆಇದೆ"
ಎನ್ನುತ್ತ ಕಲ್ಲನ್ನು ಎರಡು ಕೈಯಿಂದ ಎತ್ತಿ ಕೊಟ್ಟರು
ನ್ಯಾಯದೀಶರು "ಪರವಾಗಿಲ್ಲವೆ ಸಾಕಷ್ಟು ದೊಡ್ಡ ಕಲ್ಲೆ ತಂದಿರುವಿರಿ" ಎಂದರು

ಸರ್ಕಾರಿ ವಕೀಲರು
"ಹೌದು ಸ್ವಾಮಿ, ಆ ಕಲ್ಲಿನ ಮೇಲೆ ಬಿದ್ದಿರುವ ರಕ್ತದ ಕಲೆಯನ್ನು ಲ್ಯಾಬ್ ಗೆ ಕಳುಹಿಸಿ ಪರೀಕ್ಷಿಸಲಾಗಿದೆ,  ಆ ರಕ್ತ  ಮೃತ ಅನಂತರಾಮಯ್ಯನವರದೇ ಎಂದು ಪರೀಕ್ಷೆಯಿಂದ ದೃಡವಾಗಿದೆ"
ಎನ್ನುತ್ತ ಅದಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಕೊಟ್ಟರು,
ಜೊತೆಗೆ ಉಳಿದ ದಾಖಲೆಗಳನ್ನು ಕೊಟ್ಟರು.

ಎಲ್ಲವನ್ನು ಪರಿಶೀಲಿಸಿದ ನಂತರ ನ್ಯಾಯದೀಶರು,
"ಸರಿ ಎಲ್ಲವೂ ಆಯಿತು, ಕೊಲೆಯನ್ನು ನೇರವಾಗಿ ನೊಡಿದ ಸಾಕ್ಷಿ ಯಾವುದಾದರು ಇದೆಯ?"
ವಕೀಲರು
"ಹೌದು ಸ್ವಾಮಿ, ಕೊಲೆಯನ್ನು ನೇರವಾಗಿ ನೋಡಿದ ಒಬ್ಬ ವ್ಯಕ್ತಿ ಇದ್ದಾನೆ, ಅವನು ಕೊಲೆಯಾದ  ಎರಡು ದಿನದ ನಂತರ ಪೋಲಿಸ್ ಸ್ಟೇಷನಿಗೆ ಬಂದು ವಿಚಾರಣ ಅಧಿಕಾರಿಯಾದ ಅಶೋಕ್ ಬಳಿ   , ತಾನು ಕೊಲೆ ನೋಡಿರುವದಾಗಿ ಹೇಳಿಕೆ ಕೊಟ್ಟಿದ್ದಾನೆ , ಹಾಗಾಗಿ ನಂತರ ಅವನ ಹೆಸರನ್ನು ಸೇರಿಸಲಾಯಿತು,  ತಾವು ಒಪ್ಪಿಗೆ ಕೊಟ್ಟರೆ ಅವನನ್ನು ಕಟಕಟೆಗೆ ಕರೆಯುತ್ತೇನೆ" ಎಂದರು

ನ್ಯಾಯಾದೀಶರು
"ಸರಿ ಕರೆಸಿ ಅವರ ಹೇಳಿಕೆ ದಾಖಲಿಸಿಬಿಡೋಣ"

ನ್ಯಾಯಲಯದ  ಪ್ರಹರಿ  ಶಿವಣ್ಣ  ..ಶಿವಣ್ಣ.... ಶಿವಣ್ಣ ಎಂದು ದೊಡ್ಡ ದ್ವನಿಯಲ್ಲಿ ಕೂಗಿದಾಗ , ಮಧ್ಯವಯಸ್ಕನೊಬ್ಬನು , ನ್ಯಾಯಲಯದ ಪ್ರೇಕ್ಷರ ಜೊತೆ ಕುಳಿತಿದ್ದವನು ಎದ್ದು ಬಂದು ನ್ಯಾಯದೀಶರಿಗೆ ನಮಸ್ಕರಿಸಿ , ಕಟಕಟೆಯನ್ನು ಹತ್ತಿ ನಿಂತನು
ಅವನಿಂದ ಸತ್ಯದ ಪ್ರಮಾಣವಚನ ಸ್ವೀಕರಿಸಲಾಯಿತು,
ನಂತರ ಸರ್ಕಾರಿ ವಕೀಲರು
"ನಿಮ್ಮ ಹೆಸರೇನು"
" ಶಿವಣ್ಣ ಎಂದು ಸಾರ್"
ವಕೀಲರು "ಕೊಲೆಯಾದವರು ನಿಮಗೆ ಪರಿಚಯವೇ"
ಶಿವಣ್ಣ  "ಪರಿಚಯ ಅಂತ ಏನಿಲ್ಲ ಆದರೆ ಅವರನ್ನು ಸಾಕಷ್ಟು ಸಾರಿ ನೋಡಿರುವೆ"
ವಕೀಲರು "ನೋಡಿರುವೆ ಎಂದರೆ ಹೇಗೆ "
ಶಿವಣ್ಣ  "ನಾನು ಸಹ ಮಹಾಲಕ್ಷ್ಮೀಪುರದಲ್ಲಿಯೆ ಇರುವುದು ಹಾಗಾಗಿ ಅವರನ್ನು ಅಂಗಡಿ ಹತ್ತಿರ ಅವರ ಮನೆಯ ಮುಂದು ಓಡಿಯಾಡುವಾಗ , ಬಸ್ ಸ್ಟಾಪಿನ ಬಳಿ ಹೀಗೆ ಅಗಾಗ್ಯೆ ನೋಡುತ್ತಿದ್ದೆ,  ಆದರೆ ಅವರನ್ನು ಮಾತನಾಡಿಸಿರಲಿಲ್ಲ ಅವರ ಪರಿಚಯವೂ ಇರಲಿಲ್ಲ, ಆದರೆ ಅವರ ಮನೆ ತಿಳಿದಿತ್ತು"
ವಕೀಲರು "ಕೊಲೆಯಾದ ದಿನ ನೀವು ಅವರನ್ನು ನೋಡಿದ್ದೀರ? ಎಲ್ಲಿ"
ಶಿವಣ್ಣ "ಹೌದು ಅವರು ಕೊಲೆಯಾದ ಸ್ಥಳದಲ್ಲಿ ಬಸ್ ಸ್ಟಾಂಡಿನ ಹತ್ತಿರ ನಿಂತಿದ್ದಾಗ ನೋಡಿದೆ"
ವಕೀಲರು "ಬಸ್ ಸ್ಟಾಂಡಿನ ಬಳಿ ಅವರೇನು ಮಾಡುತ್ತಿದ್ದರು"
ಶಿವಣ್ಣ  "ಬಸ್ ಸ್ಟಾಂಡಿನ ಬಳಿ ನಿಂತು ಅವರ ಸ್ನೇಹಿತರು ಅನ್ನಿಸುತ್ತೆ ಅವರ ಜೊತೆ ಗಟ್ಟಿಯಾಗಿ ಮಾತು ಕತೆ ನಡೆಸಿದ್ದರು, ಯಾವುದೋ ಹಣಕಾಸು ಸಂಬಂಧಿಸಿದಂತೆ ಅವರಿಬ್ಬರ ನಡುವೆ ವಾದ ನಡೆದಿತ್ತು"
ವಕೀಲರು "ಅವರ ಸ್ನೇಹಿತರು ಎಂದರೆ ಯಾರು , ನೋಡಿ ಇಲ್ಲಿದ್ದಾರಲ್ಲ ಇವರೇನಾ?"
ಶಿವಣ್ಣ  "ಹೌದು ಇವರ ಜೊತೆಯೆ ಇದ್ದದ್ದು, ಇವರೇ ಆ ದಿನ ಕೂಗಾಡುತ್ತಿದ್ದರು"
ವಕೀಲರು "ನಿಮಗೆ ಇವರ ಪರಿಚಯವಿದೆಯೆ?"
ಶಿವಣ್ಣ  "ಇಲ್ಲ ಇವರನ್ನು ಮೊದಲೆಂದು ನೋಡಿದ ನೆನಪಿಲ್ಲ, ಆ ದಿನ  ಅನಂತರಾಮಯ್ಯನವರ  ಜೊತೆ ಕೂಗಾಡುತ್ತಿದ್ದರಿಂದ ಇವರನ್ನು ನೋಡಿದೆ ಹಾಗಾಗಿ ಇವರ ಮುಖ ಚೆನ್ನಾಗಿ ನೆನಪಿದೆ"
ವಕೀಲರು "ಸರಿ ನಂತರ ಏನಾಯಿತು"
ಶಿವಣ್ಣ  "ಕೋಪಮಾಡಿಕೊಂಡ ಅನಂತರಾಮಯ್ಯ ಅಲ್ಲಿಂದ ಹೊರಟುಬಿಟ್ಟರು,  ಆಗ ಇವರು ಬಗ್ಗಿ
ನೆಲದ ಮೇಲಿದ್ದ ಕಲ್ಲನ್ನು ಎತ್ತಿಕೊಂಡು ಹಿಂದಿನಿಂದ ತಲೆಗೆ ಹೊಡೆದರು, ಆಗ ಅನಂತರಾಮಯ್ಯನವರು ಅಯ್ಯೋ ಎಂದು ಜೋರಾಗಿ ಕಿರುಚಿ ಕೆಳಗೆ ಬಿದ್ದರು, ಇವರು ಕಲ್ಲನ್ನು ಎಸೆದು  ಅತ್ತ ಇತ್ತ ನೋಡುತ್ತ ನಿಂತಿದ್ದರು ಅಷ್ಟರಲ್ಲಿ ಬಸ್ಸು ಬಂದಿತು ಇವರು ಬಸ್ಸು ಹತ್ತಿ ಹೊರಟುಹೋದರು"
ವಕೀಲರು "ನಂತರ ನೀವೇನು ಮಾಡಿದಿರಿ?"
ಶಿವಣ್ಣ  "ನನಗೆ ಏನು ತೋಚಲಿಲ್ಲ, ಅಷ್ಟರಲ್ಲಿ ಸ್ವಲ್ಪ ಜನ ಸೇರಿದ್ದರು, ಅನಂತರಾಮಯ್ಯನವರ ಮನೆಯವರು ಬಂದರು, ಯಾರೊ ಪೋಲಿಸರಿಗೆ ಫೋನ್ ಮಾಡಿದ್ದರು ಅನ್ನಿಸುತ್ತೆ, ಪೋಲಿಸರು ಬಂದರು, ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಅಂದುಕೊಂಡೆ, ಅಲ್ಲಿಂದ ಹೊರಟುಹೋದೆ, ಬೆಳಗ್ಗೆ ಪೇಪರ್ ನೋಡುವಾಗ ತಿಳಿಯಿತು ಅದು ಕೊಲೆ ಅಂತ ಆಗ ಪೋಲಿಸಿನವರ ಹತ್ತಿರ ಹೋಗಿ ರಾತ್ರಿ ನಾನು ನೋಡಿದ್ದನ್ನು ತಿಳಿಸಿದೆ"

ವಕೀಲರು “ಅಲ್ಲಿಗೆ ನೀವು ಆ ರಾತ್ರಿ ಅನಂತರಾಮಯ್ಯನವರಿಗೆ ಹಿಂದಿನಿಂದ ತಲೆಗೆ ಕಲ್ಲಿನಿಂದ ಹೊಡೆದ ವ್ಯಕ್ತಿ ಇವರೇ ಎಂದು ನಿರ್ಧಾರವಾಗಿ ಹೇಳುತ್ತೀರಾ?”
ಶಿವಣ್ಣ  “ಹೌದು ಸ್ವಾಮಿ, ನಿರ್ಧಾರವಾಗಿ ಹೇಳಬಲ್ಲೆ ಇಲ್ಲಿ ನಿಂತಿರುವ ಈ ವ್ಯಕ್ತಿಯೆ ಅನಂತರಾಮಯ್ಯನವರಿಗೆ ಹಿಂದಿನಿಂದ ಕಲ್ಲಿನಿಂದ ತಲೆಗೆ ಹೊಡೆದವರು”
ಸರ್ಕಾರಿ ವಕೀಲರು , ನ್ಯಾಯದೀಶರತ್ತ ತಿರುಗಿ , ತಮ್ಮ ಸಾಕ್ಷಿಯ ಹೇಳಿಕೆ ಮುಗಿಯಿತೆಂದು ಹೇಳಿದರು.

ತಮ್ಮ ಡೈರಿಯಲ್ಲಿ ನೋಟ್ ಮಾಡಿಕೊಳ್ಳುತ್ತಿದ್ದ ನ್ಯಾಯಾದೀಶರು , ನರಸಿಂಹನತ್ತ ತಿರುಗಿ ,

“ನಿಮಗೆ ಸಾಕ್ಷಿಯನ್ನು ವಿಚಾರಿಸುವ ಪ್ರಶ್ನೆಗಳಿದೆಯೆ?”
“ಹೌದು ಸ್ವಾಮಿ, ಸಾಕಷ್ಟು ಪ್ರಶ್ನೆಗಳಿವೆ” ನರಸಿಂಹ ಎದ್ದು ಬಂದ.

ಸಾಕ್ಷಿಕಟಕಟೆಯಲ್ಲಿ ನಿಂತಿದ್ದವನನ್ನು ಪ್ರಶ್ನಿಸಿದ
“ನಿಮ್ಮ ಹೆಸರು”  ನರಸಿಂಹ ಕೇಳಿದ
“ಶಿವಣ್ಣ ಎಂದು”  ಸಾಕ್ಷಿಯ ಉತ್ತರ,  
“ನೀವು ಏನು ಉದ್ಯೋಗ ಮಾಡಿಕೊಂಡಿದ್ದೀರಿ?”  ನರಸಿಂಹ ಲೋಕಾಭಿರಾಮ ಎನ್ನುವಂತೆ ಕೇಳಿದ,
“ನಿಶ್ಚಿತ ಉದ್ಯೋಗ ಅಂತೇನಿಲ್ಲ ಸಾರ್,  ಜೀವನಕ್ಕೆ ಯಾವುದಾದರು ಕೆಲಸ ಅಂತ ಮಾಡುತ್ತಿರುತ್ತೇನೆ, ಕೂಲಿ ಮಾಡುವೆ, ಕೆಲವೊಮ್ಮೆ ಮನೆ ಕೊಡಿಸುವ ಮಾರಿಸುವ ಕೆಲಸವೂ ಮಾಡುವೆ, ಬಾಡಿಗೆ ಮನೆ ಕೊಡಿಸುವೆ,  ಬೆಳಗ್ಗೆ ಪೇಪರ್ ಹಾಕುವೆ , ಹೀಗೆಯೆ ಎಂದು ಕೆಲಸ ಯಾವುದೆ ಇಲ್ಲ ಸಾರ್”  
ಶಿವಣ್ಣ ಸ್ವಲ್ಪ ನಿರಾಸೆಯ ದ್ವನಿಯಲ್ಲಿ ನುಡಿದ
“ಹೌದೇ ನಿಮ್ಮ ಕೆಲಸ ನೋಡಿ ಆಸಕ್ತಿದಾಯಕ,ನೋಡಿ ನಮಗೆ ಇಷ್ಟವೋ ಇಲ್ಲವೋ ನಾನಂತು ಇದೇ ಉದ್ಯೋಗ ಮಾಡಬೇಕು“ ಎಂದು ನಕ್ಕ ನರಸಿಂಹ
“ನಿಮ್ಮದೇನು ಸಾರ್ ತಮಾಷಿ,  ನಿಮಗೂ ನನಗೂ ಹೋಲಿಕೆಯೆ” ಎಂದ  ಶಿವಣ್ಣ  ನಗುತ್ತ
“ಇರಲಿ ಬಿಡಿ ತಮಾಷಿ ಮಾಡಿದೆ, ನಿಮ್ಮನ್ನು ಕೋರ್ಟಿನಲ್ಲಿ ತುಂಬಾ ಸಾರಿ ನೋಡಿರುವಂತಿದೆಯಲ್ಲ, ಈ ಕೋರ್ಟಿಗೆ ಆಗಾಗ್ಯೆ ಬರುತ್ತಿರುತ್ತೀರ ?”
ಶಿವಣ್ಣ  ಸ್ವಲ್ಪ ವಿಚಲಿತನಾದ
“ಹಾಗೇನು ಇಲ್ಲ, ಹೀಗೆ ಒಂದೆರಡು ಬಾರಿ ಸುಮ್ಮನೆ ಬಂದಿರಬಹುದು, ಏನಾದರು ಕೆಲಸ ಎಂದು”
“ಇಲ್ಲಿ ನಿಮಗೆ ಕೆಲಸವೇನಿರುತ್ತದೆ ಶಿವಣ್ಣ, ಇರಲಿ , ಅಂದ ಹಾಗೆ ನಿಮ್ಮನ್ನು ಇದೇ ಕೋರ್ಟಿನ ಬೇರೆ ಯಾವುದೋ ಕೇಸಿನಲ್ಲಿ, ತಡೆಯಿರಿ ನೆನಪಿಗೆ ಬಂದಿತು, ಕಳೆದವಾರ ಒಂದು ಆಕ್ಸಿಡೆಂಟ್ ಕೇಸಿನಲ್ಲಿ ಸಹ ಸಾಕ್ಷಿಯಾಗಿ ನೋಡಿದ್ದೆ , ಅಲ್ಲಿ ನೀವು ಲಾರಿಯವನ ಪರ ಸಾಕ್ಷಿ ಹೇಳಲು ಬಂದಿದ್ದೀರಿ ಅಲ್ಲವೇ, ಲಾಯರ್ ರಾಘವೇಂದ್ರ ಆ ಕೇಸ್ ಡೀಲ್ ಮಾಡ್ತಾ ಇದ್ರು “  ನರಸಿಂಹ ಕೇಳಿದ
“ಆ ಹೌದು , ಅಲ್ಲ,  ಹೌದು ಸಾರ್, ಆ ಆಕ್ಸಿಡೆಂಟ್ ಕೇಸಿನಲ್ಲಿ ಬಂದಿದ್ದೆ,” ಶಿವಣ್ಣ ಉಗುಳು ನುಂಗುತ್ತ ಹೇಳಿದ
“ಅಂದರೆ ಸಾಕ್ಷಿ ಹೇಳುವುದೇ ನಿಮಗೆ ಉದ್ಯೋಗವಾಗಿರುವಂತಿದೆ “ ನರಸಿಂಹ ನಗುತ್ತ ಕೇಳಿದ
ಸರ್ಕಾರಿ ವಕೀಲ ಎದ್ದು ಹೇಳಿದ
“ಸ್ವಾಮಿ , ಲಾಯರ್ ನರಸಿಂಹರವರು ಅನವಶ್ಯಕವಾಗಿ ನನ್ನ ಸಾಕ್ಷಿಯನ್ನು  ಗಲಿಬಿಲಿಗೊಳಿಸುತ್ತಿದ್ದಾರೆ “
ನ್ಯಾಯಾದೀಶರು ನರಸಿಂಹನನ್ನು ಪ್ರಶ್ನಾರ್ಥಕವಾಗಿ ನೋಡಿದರು
“ಕ್ಷಮಿಸಿ ಸ್ವಾಮಿ, ನನಗೆ ಇವರನ್ನು ಗಲಿಬಿಲಿಗೊಳಿಸುವ ಅಗತ್ಯವೇನಿಲ್ಲ ಆದರೆ ಪದೇ ಪದೇ ಕೋರ್ಟಿನಲ್ಲಿ ಬೇರೆ ಬೇರೆ ಕೇಸಿನಲ್ಲಿ ಕಾಣುವಾಗ ಪೋಲಿಸರು ಸೃಷ್ಟಿಸಿದ ಸಾಕ್ಷಿಯಂತೆ ಕಾಣಿಸಿತು ಹಾಗಾಗಿ ಕೇಳಿದೆ, ನನ್ನ ತಪ್ಪಿದ್ದರೆ ಕ್ಷಮೆ ಇರಲಿ ” ಎಂದ ನಗುತ್ತ ನರಸಿಂಹ
ನ್ಯಾಯಾದೀಶರು ಸಹ
“ನರಸಿಂಹ, ಅವರು ಯಾವ ಸಾಕ್ಷಿಯನ್ನು ಕರೆತರುತ್ತಾರೊ ಅವರ ಮಾತನ್ನು ರೆಕಾರ್ಡ್ ಮಾಡಲಾಗುತ್ತೆ, ಅದು ಸರಿಯೋ ತಪ್ಪೋ ಎನ್ನುವುದು ಮೊದಲೇ ಹೇಳಲಾಗುವದಿಲ್ಲ, ನಿಮಗೆ ಅನುಮಾನವಿದ್ದರೆ, ಅಗತ್ಯ ಪ್ರಶ್ನೆ ಕೇಳಿ, ಆದರೆ ಅದು ಕೊಲೆಯ ಬಗ್ಗೆ ಮಾತ್ರ”
“ಆಗಬಹುದು ಸ್ವಾಮಿ” ಎಂದ ನರಸಿಂಹ,
“ಸರಿ ಶಿವಣ್ಣರವರೆ ನೀವು ತಿಳಿಸಿದ್ದೀರಿ, ಕೊಲೆಯಾದ ಸಮಯದಲ್ಲಿ ನೀವು ಅಲ್ಲಿ ಇದ್ದಿರಿ ಎಂದು. ನೀವು ಅಲ್ಲಿ ಏಕೆ ಹೋಗಿದ್ದೀರಿ”
“ಬಸ್ ಹತ್ತೋಣವೆಂದು ಕಾಯುತ್ತಿದ್ದೆ, ಆಗ ಇವರಿಬ್ಬರು ಅಂದರೆ ಅನಂತರಾಮಯ್ಯನವರು ಮತ್ತು ಇವರು ಅಲ್ಲಿ ಬಂದರು, ನಂತರದ ಗಲಾಟೆ ನಡೆಯಿತು’  ಶಿವಣ್ಣ ಹೇಳಿದ
“ನಿಮ್ಮ ಮನೆ ಮಹಾಲಕ್ಷ್ಮೀಪುರದಲ್ಲಿಯೆ ಅಲ್ಲವೇ ಇರುವುದು, ಆ ರಾತ್ರಿಯಲ್ಲಿ ನೀವು ಬಸ್ ಏಕೆ ಹತ್ತಲೂ ಹೋದಿರಿ”  ನರಸಿಂಹ ಪ್ರಶ್ನಿಸಿದ
“ಜಯನಗರದಲ್ಲಿ ನನ್ನ ಅಕ್ಕನ ಮನೆ ಇದೆ , ಅಲ್ಲಿ ಹೋಗಿಬರೋಣವೆಂದು ಕಾಯುತ್ತಿದ್ದೆ”  ಎಂದ  ಶಿವಣ್ಣ
“ಸರಿ ನೀವು ನೋಡಿದಂತೆ ಅಲ್ಲಿ ಏನೇನು ನಡೆಯಿತು ತಿಳಿಸಿ”  ವಕೀಲ ನರಸಿಂಹ  ಶಿವಣ್ಣನನ್ನು ಕೇಳಿ ಬಾಗಿ ನಿಂತ.
“ಆಗಲೇ ಹೇಳಿದೆನಲ್ಲ, ಅವರಿಬ್ಬರ ನಡುವೆ ಹಣಕಾಸಿನ ವಾಗ್ವಾದ ನಡೆಯುತ್ತಿತ್ತು, ಜೋರಾಗಿ ಕೂಗಾಡಿದ ಅನಂತರಾಮಯ್ಯನವರು ಅಲ್ಲಿಂದ ಕೋಪಮಾಡಿಕೊಂಡು ಹೊರಟರು ಆಗ ಕೋಪದಿಂದ ವೆಂಕಟೇಶಯ್ಯ ಅಂದರೆ ಇವರು, ನೆಲದ ಮೇಲೆ ಬಿದ್ದಿದ್ದ ಕಲ್ಲನ್ನು ತೆಗೆದು ಹಿಂದಿನಿಂದ ತಲೆಗೆ ಹೊಡೆದರು, ನಂತರ ನೋಡುವಲ್ಲಿ ಬಸ್ ಬಂದಿತು ಅದನ್ನು ಹತ್ತಿ ಹೊರಟುಹೋದರು”  ,  ಶಿವಣ್ಣನ ಮಾತಿಗೆ ನರಸಿಂಹ ಕೊಂಚ ಕುತೂಹಲದಿಂದ ಕೇಳಿದ
“ಬಸ್ ನಲ್ಲಿದ್ದವರು ಯಾರು ನೆಲದ ಮೇಲೆ ಬಿದ್ದಿದ್ದ ಅನಂತರಾಮಯ್ಯನವರನ್ನು ಗಮನಿಸಲಿಲ್ಲವೆ?”
“ಬಹುಷಃ ಇಲ್ಲ ಅನ್ನಿಸುತ್ತೆ, ಬಸ್ ವೇಗವಾಗಿ ಬಂದಿತು, ಸ್ಲೋ ಮಾಡಿ ನಿಲ್ಲಿಸಿದ , ಇವರು ಹತ್ತುತ್ತಲೆ ಹೊರಟುಹೋದ”  ಎಂದ  ಶಿವಣ್ಣ, ಅದಕ್ಕೆ ನರಸಿಂಹ ನಗುತ್ತ,
“ನಿಮ್ಮ ಹೇಳಿಕೆ ವಿಚಿತ್ರವಾಗಿದೆ  ಶಿವಣ್ಣ , ಇರಲಿ,  ನೋಡಿ ಅಲ್ಲಿದೆಯಲ್ಲ ಅದೇ ಕಲ್ಲಿನಲ್ಲಿಯೆ ಅವರು ಹೊಡೇದಿದ್ದು,   ಸ್ವಲ್ಪ  ನೋಡಿ ಹೇಳಿ”
ಕಲ್ಲನ್ನು ಪರೀಕ್ಷಿಸಿದ ಶಿವಣ್ಣ
” ಹೌದು ಸರ್ ಇದೇ ಕಲ್ಲು ಅಲ್ಲಿ ಬಿದ್ದಿದ್ದು”
ನರಸಿಂಹ ಗಂಭೀರವಾಗಿ ಕೇಳಿದ
“ಅಲ್ರೀ  ಕಲ್ಲಿನಿಂದ ಹೊಡೆದ ಎಂದು ಹೇಳುತ್ತೀರಿ, ನೀವು ಅಲ್ಲೇ ನಿಂತಿದ್ದವರು, ಸ್ವಲ್ಪವಾದರು ತಡೆಯುವ ಪ್ರಯತ್ನಪಡಲಿಲ್ಲವೇ”
“ಅದಾ, ಇಲ್ಲ ಸಾರ್ ನಾನು ಸ್ವಲ್ಪ ದೂರದಲ್ಲಿದ್ದೆ , ನೋಡುವಾಗ ಇದ್ದಕಿದ್ದಂತೆ ಹೊಡೆದು ಬಿಟ್ಟರು”   ಶಿವಣ್ಣ ನೆನಪಿಸಿಕೊಂಡವನಂತೆ ನುಡಿದ
“ಹೌದೇ , ದೂರ ಅಂದರೆ ಎಷ್ಟು ದೂರ ಒಂದು ಐದು ಅಡಿ ಇರಬಹುದೇ”  ನರಸಿಂಹನ ಪ್ರಶ್ನೆ,
ಶಿವಣ್ಣ  ಹೇಳಿದ  “ಇಲ್ಲ ಸಾರ್ , ನಾನು ಎದುರು ಪುಟ್ ಪಾತಿನಮೇಲಿದ್ದೆ ಹಾಗಾಗಿ ತಡೆಯಲಾಗಲಿಲ್ಲ”  
ನರಸಿಂಹ  “ಎದುರು ಪುಟ್ ಪಾತೆ, ಬಸ್ ಕಾಯುವರು ಎದುರುಪುಟ್ ಪಾತಿಗೆ ಏಕೆ ಹೋದಿರಿ”
ಶಿವಣ್ಣ: “ಇಲ್ಲ ಒಬ್ಬನೆ ಸಿಗರೇಟ್ ಸೇದುತ್ತಿದ್ದೆ, ಬಸ್ ಬಂದರೆ ಈ ಕಡೆ ಓಡಿಬರೋಣ ಎಂದು ಕಾಯುತ್ತಿದ್ದೆ”
ನರಸಿಂಹ:  “ಹೌದೇ , ಶಿವಣ್ಣ ನಾನು ಅಲ್ಲಿ ಬಂದು ನೋಡಿದ್ದೇನೆ, ರಸ್ತೆ ಸುಮಾರು ಮೂವತ್ತು ಅಡಿ ಇದೆ, ಎರದು ಪುಟ್ ಪಾತ್ ಸೇರಿಸಿದರೆ ನೀವು ಸುಮಾರು, ಮುವತ್ತೈದು ಅಡಿ ದೂರದಲ್ಲಿದ್ದಿರಿ ಸರಿಯೆ?”
ಶಿವಣ್ಣ: “ಹೌದು ಸರ್, ಸರಿಯಾಗಿದೆ “
ನರಸಿಂಹ: “ಆದರೆ ಕೊಲೆಯಾಗಿರುವುರು ರಾತ್ರಿ ಎಂಟುಗಂಟೆ ಸುಮಾರಿನಿಲ್ಲಿ ಪೋಲಿಸರ ಪ್ರಕಾರ, ನೀವು ಅಷ್ಟು ದೂರದಿಂದ ಕೊಲೆಯಾಗುವದನ್ನು ಹೇಗೆ ನೋಡಿದಿರಿ ಕತ್ತಲಿರಲಿಲ್ಲವೇ?, ಅಲ್ಲದೇ ಅಲ್ಲಿ ರಸ್ತೆಯ ಎರಡೂ ಪಕ್ಕ ಮರಗಳಿವೆ ಹಾಗಾಗಿ ಮತ್ತೂ ಕತ್ತಲೂ “

ಶಿವಣ್ಣ: “ಇಲ್ಲ ಸರ್ ಬೀದಿ ದೀಪ ಇರುತ್ತಲ್ಲವೆ, ಅದರ ಬೆಳಕಿನಲ್ಲಿ ನೋಡಿದೆ ಅನ್ನಿಸುತ್ತೆ”
ನರಸಿಂಹನ ದ್ವನಿ ಏರಿತ್ತು
“ಸುಳ್ಳು ಹೇಳುತ್ತ ಇರುವಿರಿ ಶಿವಣ್ಣ, ನಾನು ವಿಚಾರಿಸಿದ್ದೀನಿ,  ಅಲ್ಲಿಯ ಬಸ್ ಸ್ಟಾಪಿನಲ್ಲಿಯ   ದೀಪ ಹೋಗಿ ಸುಮಾರು ಎರಡು ತಿಂಗಳೇ ಕಳೆದಿದೆ,  ಕಾರ್ಪೋರೇಷನ್ ನವರು ಸರಿಪಡಿಸಿಲ್ಲ, ಅಲ್ಲಿ ಕತ್ತಲು ಕತ್ತಲು ಇತ್ತು, ಈಗಲೂ ಅಲ್ಲಿ ದೀಪ ಸರಿಪಡಿಸಿಲ್ಲ, ಹೇಳಿ ನಿಮಗೆ ಮುಖ ಸ್ವಷ್ಟವಾಗಿ ಕಾಣಿಸಿತಾ?”
ಶಿವಣ್ಣ  “ಸಾರ್ , ಅದು , ಸಾರ್, ಹೌದು ಸಾರ್, ನೆನಪಿಗೆ ಬಂದಿತು, ಕತ್ತಲು ಕತ್ತಲು ಇತ್ತು, ಅದಕ್ಕೆ ನಾನು ತಕ್ಷಣಬಂದು ತಡೆಯಲಾಗಲಿಲ್ಲ”
ನರಸಿಂಹ : “ಹೌದೇ, ಹಾಗಿದ್ದರೆ, ದೂರದಿಂದ ನಿಮಗೆ ಇವರಿಬ್ಬರೇ ಅಲ್ಲಿ ಕುಳಿತ್ತಿದ್ದವರು ಜಗಳ ಆಡುತ್ತಿದ್ದವರು ಎಂದು ಸ್ವಷ್ಟವಾಗಿ ಕಾಣಿಸಿಲ್ಲ ಅಲ್ಲವೇ”
ಶಿವಣ್ಣ : “ಹಾಗೇನು ಅಲ್ಲ ಸಾರ್ ಇವರು ಕೊಲೆ ಮಾಡಿ ಬಸ್ ಹತ್ತಿ ಹೋದರಲ್ಲ,  ನಂತರ ಈ ಕಡೆ ಓಡಿ ಬಂದೆ ಆಗ ಹತ್ತಿರದಿಂದ ಮುಖ ಗಮನಿಸಿದಾಗ, ಬಿದ್ದವರು ಅನಂತರಾಮಯ್ಯ ಎಂದು ಗುರುತು ಸಿಕ್ಕಿತು”
ನರಸಿಂಹ ನಗುತ್ತ ಹೇಳಿದ , “ಹೌದೇ, ಅಂದರೆ ಅಷ್ಟು ದೂರದಿಂದ ಅಲ್ಲಿದ್ದವರು ಗುರುತಿರುವರೇ ಆದ ಅನಂತರಾಮಯ್ಯ ಎಂದು ನಿಮಗೆ ತಿಳಿಯಲಿಲ್ಲ, ಹಾಗಿರುವಾಗ ಪರಿಚಯವೇ ಇಲ್ಲದ ಈ ವೆಂಕಟೇಶಯ್ಯನವರನ್ನು ಅಲ್ಲಿದ್ದರು ಎಂದು ಹೇಗೆ ಗುರುತಿಸುವಿರಿ”

ಶಿವಣ್ಣ ಕನ್‍ಫ್ಯೂಸ್ ಆದ ಆದರೂ ಯೋಚಿಸಿ ಹೇಳಿದ,
“ಸರ್ ಅಲ್ಲಿದ್ದ ಇಬ್ಬರಲ್ಲಿ ಇವರೂ ಒಬ್ಬರು ಎಂದು ಗೊತ್ತಾಗಿದೆಯಲ್ಲ ಸಾರ್, ಪೋಲಿಸರೆ ಅರೆಷ್ಟೆ ಮಾಡಿದ್ದಾರೆ, ಅಂದ ಮೇಲೆ ಇವರೇ ಅಲ್ಲವೆ ಕಲ್ಲಿನಿಂದ ಹೊಡೆದಿರುವುದು”
ನರಸಿಂಹ ನಗುತ್ತಿದ್ದ
ನ್ಯಾಯದೀಶರು ಹೇಳಿದರು
“ಶಿವಣ್ಣ ನೀವು ಊಹೆ ಮಾಡುವಂತಿಲ್ಲ, ನಿಮಗೆ ಕಾಣಿಸಿದ್ದು ಮಾತ್ರ ಹೇಳಬೇಕು”
ಶಿವಣ್ಣ ಹೇಳಿದ
“ಆಗಲಿ ಸ್ವಾಮಿ, ನಾನು ದೂರದಿಂದ ಒಬ್ಬ ವ್ಯಕ್ತಿ  ಅನಂತಯ್ಯನವರ ತಲೆಗೆ ಹೊಡೆದಿದ್ದು ನೋಡಿದೆ, ನಂತರ ಅವರು ಬಸ್ ಹತ್ತಿ ಹೊರಟು ಹೋದರು, ನಂತರ ಅನಂತರಾಮಯ್ಯನವರೆ ಬಿದ್ದಿರುವುದು ಎನ್ನುವದನ್ನು ಗಮನಿಸಿದೆ “
ನರಸಿಂಹ ಪ್ರಶ್ನಿಸಿದ,
“ಸರಿ ಶಿವಣ್ಣ, ನೀವು ವ್ಯಕ್ತಿಗಳನ್ನೆ ದೂರದಿಂದ ಗುರುತಿಸಲು ಆಗಲಿಲ್ಲ, ಅನ್ನುವಾಗ ಇದೇ ಕಲ್ಲು ಎಂದು ಗುರುತಿಸಿದ್ದು ಹೇಗೆ ?”
ಶಿವಣ್ಣ ಉತ್ತರಿಸಿದ
“ಅದಾ ಸಾರ್, … ಅವರು ಎಸೆದು ಹೋದದ್ದು, ಅಲ್ಲಿ ಬಿದ್ದಿತ್ತಲ್ಲ , ಆಗ ನೋಡಿದ್ದೆ”
“ಹೌದೆ ಶಿವಣ್ಣ, ಹೋಗಲಿ ಕಲ್ಲನ್ನು ಮತ್ತೊಮ್ಮೆ ನೋಡಿ, ನೀವು ಅದನ್ನು ಎತ್ತಿ ಪರೀಕ್ಷಿಸಬಹುದು” ಎನ್ನುತ ನ್ಯಾಯಾಲಯದ ಅಪ್ಪಣೆ ಪಡೆಯುತ್ತ, ಕಲ್ಲನ್ನು ಎತ್ತಿ ಅವನಿಗೆ ಕೊಟ್ಟ ನರಸಿಂಹ,
ಶಿವಣ್ಣ ಅದನ್ನು ಸ್ವಲ್ಪ ಶ್ರಮವಹಿಸಿ ಎತ್ತಿ ಹಿಡಿದ
“ನೋಡಿ ಸಾಕಷ್ಟು ಬಾರ ಅನ್ನಿಸುತ್ತೆ ಅಲ್ಲವೇ” ಎಂದ ನರಸಿಂಹ
“ಹೌದು ಸಾರ್ ಸಾಕಷ್ಟು ಬಾರ ಇದೆ “ ಎಂದ ಶಿವಣ್ಣ
“ನೋಡಿ ನಿಮ್ಮ ವಯಸ್ಸು ಸುಮಾರು ಮೂವತ್ತು ಮೂವತೈದು ಇರಬಹುದು, ಆದರೆ ವೆಂಕಟೇಶಯ್ಯನವರನ್ನು ನೋಡಿ, ಸುಮಾರು ಎಪ್ಪತ್ತು ವಯಸ್ಸು ದಾಟಿದೆ, ಅಲ್ಲದೆ ಸತ್ತಿರುವ ಅನಂತರಾಮಯ್ಯನವರು ಸುಮಾರು ಆರು ಅಡಿ ಎತ್ತರದವರು, ವೆಂಕಟೇಶಯ್ಯ ಎಂದರೆ ಐದು ಅಡಿ ಎರಡು ಇಂಚು ಇರಬಹುದು, ಹಾಗಿರುವಾಗ ವೆಂಕಟೇಶಯ್ಯನವರು ಅದನ್ನು ಅಷ್ಟು ಎತ್ತರಕ್ಕೆ ಎತ್ತಿ ಅದನ್ನು ಉಪಯೋಗಿಸಲು ಸಾದ್ಯವೇ?” ನರಸಿಂಹ ಶಿವಣ್ಣನನ್ನೆ ನೋಡುತ್ತ ಕೇಳಿದ,

“ಏಕಿಲ್ಲ ಸಾದ್ಯ ನೋಡಿ ಎರಡು ಕೈಯಿಂದ ತಲೆಯಮೇಲೆ ಎತ್ತಿ ಹಿಡಿದು, ಹೊಡೆಯಬಹುದು ಅಲ್ಲವೇ”
ಎನ್ನುತ್ತ ಎರಡು ಕೈಯಿಂದ ಕಲ್ಲನ್ನು ತಲೆಯಮೇಲೆ ಎತ್ತಿ ಹಿಡಿದು ತೋರಿಸಿದ ಶಿವಣ್ಣ.
“ಹೋಗಲಿ ಬಿಡಿ, ಮತ್ತೊಮ್ಮೆ ಕೇಳುತ್ತಿರುವೆ, ನೀವು ವೆಂಕಟೇಶಯ್ಯ ಕಲ್ಲನ್ನು ನೆಲದಿಂದ ಎತ್ತಿಕೊಂಡಿದ್ದು, ನಂತರ ನೆಲದ ಮೇಲೆ ಬಿಸಾಕಿದ್ದು ನೀವು ನೋಡಿರುವಿರಾ?”  ನರಸಿಂಹ ಮತ್ತೆ ಕೇಳಿದ
“ಖಂಡೀತ ನೋಡಿರುವೆ ಸಾರ್”  ದೃಡವಾಗಿ ಉತ್ತರಿಸಿದ ಶಿವಣ್ಣ
“ಸರಿ ನೀವಿನ್ನು ಹೋಗಬಹುದು” ಎನ್ನುತ್ತ ನರಸಿಂಹ
“ಸ್ವಾಮಿ ಈ ಸಾಕ್ಷಿಯನ್ನು ಕೇಳುವ ನನ್ನ ಪ್ರಶ್ನೆಗಳು ಮುಗಿಯಿತು “ ಎಂದ ನ್ಯಾಯಾದೀಶರಿಗೆ
ಅಂದಿನ ವಿಚಾರಣೆ ಮುಗಿದು ಕೇಸ್ , ವಿಚಾರಣೆಯನ್ನು ಮುಂದಿನ ದಿನಕ್ಕೆ ನಿಗದಿಪಡಿಸಲಾಯಿತು

ಮುಂದುವರೆಯುವುದು…..

1 comment:

  1. ನರಸಿಂಹ ಚಾಣಾಕ್ಷ ವಕೀಲ ಸಾರ್.
    ಕಥನದ ಈ ಭಾಗ ಸಿನಿಮೀಯವಾಗಿದೆ.

    ReplyDelete

enter your comments please