Thursday, September 5, 2013

ಆ ಮನೆ


ಕತೆ ಪ್ರಾರಂಭವಾಗಿದ್ದೆ  ಆ ಮನೆಯಿಂದ.

ಮಗಳಿಗೆ ರಜಾ ಎಂದು ಒಂದೆರಡು ದಿನ ಸುತ್ತಾಡಲು ಮಗಳು ನಾನು ಹಾಗು ಮನೆಯಾಕೆ ಹೊರಟಿದ್ದೆವು. ದೂರಪಾರ ಬೇಸರ. ಕಾರಿನಲ್ಲಿ ಹೋಗಿಬರುವ ದೂರವಾದರೆ ಪರವಾಗಿಲ್ಲ ಎಂದು ಚಿಕ್ಕಮಗಳೂರಿನ ಹೊರನಾಡು ಕುದುರೆಮುಖದ ಕಡೆ ಹೋಗಿದ್ದೆವು ನಮ್ಮದೆ ಕಾರಿನಲ್ಲಿ. ಮಧ್ಯಾನ್ಹ ಅಲ್ಲಿಂದ ಹೊರಟಾಗ ರಾತ್ರಿ ಕತ್ತಲೆಯಾಗುವದೊರಳಗೆ ಚಿಕ್ಕಮಗಳೂರು ಸೇರಿ, ಊಟ ಮುಗಿಸಿ ರಾತ್ರಿಪ್ರಯಾಣ ಮಾಡಿ ತುಮಕೂರು ಸೇರುವ ಯೋಜನೆ ಇತ್ತು. ಆದರೆ  ಹೊರಗೆ ಬಂದ ಮೇಲೆ ಎಲ್ಲವು ನಮ್ಮ ಯೋಚನೆಯಂತೆ ನಡೆಯುವದಿಲ್ಲ.ಅದೇಕೊ ಹೊರನಾಡಿನಿಂದ ಹೊರಟ ನಮ್ಮ ಪ್ರಯಾಣ ನಿಧಾನವಾಗುತ್ತ ಹೋಯಿತು. ಅಲ್ಲದೆ ಘಟ್ಟಸ್ಥಳಗಳಂತ ಜಾಗದಲ್ಲಿ ನಮ್ಮ ಡ್ರೈವಿಂಗ್ ಅಷ್ಟರಲ್ಲೆ ಇದೆ. ಅದು ಹೇಗೊ ಚಿಕ್ಕಮಗಳೂರು ಎಲ್ಲೊ ಇದೆ ಅನ್ನುವಾಗಲೆ   ಬೆಳಕು ಕರಗುತ್ತ ಹೋಯಿತು  . ನಾವು ಸವೆಸಿದ್ದ ದಾರಿಯು ಕೊಂಚ ತಪ್ಪಾಯಿತೇನೊ ಎಂದು ನಮಗನ್ನಿಸಲು ಪ್ರಾರಂಬವಾಗಿದ್ದು ರಸ್ತೆಯಲ್ಲಿ ನಮ್ಮ ಕಾರಿನ ಹೊರತಾಗಿ ಬೇರೆ ಯಾವುದೆ ವಾಹನ ಕಾಣದಿದ್ದಾಗ. ಗ್ರಹಚಾರ ಅಷ್ಟಕ್ಕೆ ಮುಗಿದಿರಲಿಲ್ಲ, ಚಲಿಸುತ್ತಿದ್ದ ನಮ್ಮ ಕಾರು ಇದ್ದಕ್ಕಿದಂತೆ ನಿಂತುಹೋಯಿತು.

"ಹುಶ್ " ಎಂದು ಉಸಿರು ಹಾಕುತ್ತ ಹೊರಗಿಳಿದೆ. ಚಿಕ್ಕಮಗಳೂರಿನಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದು ಅರಿವಿಗೆ ಬರುತ್ತಿಲ್ಲ. ಸುತ್ತಲೂ ಯಾರನ್ನು ಕೇಳಲು ಜನರೆ ಇಲ್ಲ. ಮೊಬೈಲ್ ನಲ್ಲಿ ಸಿಗ್ನಲ್ ಇಲ್ಲ. ಇದೆಂತ ಜಾಗ ತಲುಪಿದೆವು ದೇವರೆ ಎಂದು ಕೊಂಡೆ.
ಕಾರಿನ ಬಾನೆಟ್ ತೆಗೆದುನೋಡಿದೆ. ನನಗೇನು ಅರ್ಥವಾದಂತೆ ಅನಿಸಲಿಲ್ಲ. ಮಗಳು ಕೆಳಗಿಳಿದಳು, ಮುಖದಲ್ಲಿ ಎಂತದೋ ಆತಂಕ.
"ಏನು ಆಗಿಲ್ಲ ಕಾರಿಗೆ, ಬಹುಷಃ ಅತಿಯಾಗಿ ಹೀಟ್ ಆಯಿತೇನೊ, ಸ್ವಲ್ಪ ಕಾದುನೋಡೋಣ ಸ್ಟಾರ್ಟ್ ಆಗಬಹುದು" ಎಂದೆ

ನನ್ನ ಥಿಯರಿ ಮಗಳಿಗೆ ಹಾಗು ಹೆಂಡತಿಗೆ ಹಿಡಿಸಲಿಲ್ಲ ಎನ್ನುವುದು ಮುಖದಲ್ಲಿ ಕಾಣುತ್ತಿತ್ತು, ಆದರೆ ನನ್ನ ಮಾತು ನಂಬುವುದರ ವಿನಾ ಅವರಿಗೂ ಬೇರೆ ದಾರಿ ಇದ್ದಂತಿಲ್ಲ.

ರಸ್ತೆಯಲ್ಲಿ ನಿಂತು ಸುತ್ತಲೂ ಕಣ್ಣಾಡಿಸಿದೆ. ಹಸಿರು ರಾಶಿಯ ಹೊರತು ಮತ್ತೇನು ಕಾಣದು ದೂರದಲ್ಲಿ ತಲೆ ಎತ್ತಿ ನಿಂತ ದುರ್ಗಮ ಬೆಟ್ಟಗಳು. ಬೇಸರವನ್ನೆಲ್ಲ ಒಂದು ಕ್ಷಣ ಮರೆಯುವಂತ ದೃಷ್ಯ. ನಾವು ನಿಂತಿದ್ದ ರಸ್ತೆಯಿಂದ ಕೆಳಬಾಗದಲ್ಲಿ ಒಂದು ಹೆಂಚಿನ ಮನೆ ಕಾಣಿಸಿತು. ಯಾರಾದರು ಕಂಡಾರ ಎಂದು ಕಣ್ಣರಳಿಸಿದೆ ಯಾವುದೆ ವ್ಯಕ್ತಿಯ ಪ್ರಾಣಿಯ ಸುಳಿವೂ ಇಲ್ಲ. ನಿಂತು ಬೇಸರವೆನಿಸಿ ಸ್ವಲ್ಪ ಕೆಳಗಿಳಿದು ಮನೆಯತ್ತ ನಡೆದೆ.
"ಎಲ್ಲಿಗಪ್ಪ" ಎನ್ನುತ್ತ ಮಗಳು ಹಿಂದೆ ಬಂದಾಗ,ಒಬ್ಬಳೆ ಕಾರಿನಲ್ಲಿರಲು ಹೆದರಿ ಹೆಂಡತಿಯು ನಮ್ಮ ಜೊತೆ ಬಂದಳು. ಹತ್ತಿರ ಕಂಡರು ಆ ಮನೆ ತಲುಪುವಾಗ ಐದು ನಿಮಿಷವಾಗಿತ್ತು. ಮನೆಯ ಮುಂದೆ ನಿಂತರೂ ಸಹ ಯಾರ ಸುಳಿವಿಲ್ಲ. ಅಷ್ಟಕ್ಕು ಮನೆಯಲ್ಲಿ ಯಾರಾದರು ವಾಸವಾಗಿದ್ದಾರೆ ಎಂದು ಅನಿಸಲಿಲ್ಲ.

ಮನೆ ಮುಂಬಾಗಿಲು ಹಾಕಿ, ಮುಂದಿನಿಂದ ಚಿಲುಕ ಸಿಕ್ಕಿಸಲಾಗಿತ್ತು ಆದರೆ ಬೀಗವಂತು ಹಾಕಿರಲಿಲ್ಲ. ನಾನು ಚಿಲಕ ತೆಗೆದೆ, ಜೊತೆಯಲ್ಲಿದ್ದ ಪತ್ನಿ
"ಬೇಡ ಸುಮ್ಮನೀರಿ, ಗೊತ್ತಿರದ ಜಾಗ ಯಾರದೋ ಮನೆ, ನಿಮಗೇಕೆ ಬೇಕಿದ್ದಿತೂ ' ಎಂದಳು.
ಮಗಳು ಸುಮ್ಮನಿದ್ದಳು
ಬಾಗಿಲನ್ನು ಹಿಂದೆ ತಳ್ಳಿದೆ ಸಲಿಸಾಗೆ ತೆಗೆದುಕೊಂಡಿತು. ಒಳಗೆ ಹೆಜ್ಜೆ ಇಟ್ಟೆ , ಮನೆಯಲ್ಲಿ ಯಾರು ವಾಸವಾಗಿಲ್ಲ ಎನ್ನುವುದು ಎದ್ದು ಕಾಣುತ್ತಿತ್ತು. ಹೊರಗಿನಿಂದ ಕಾಣುವಂತೆ ಮನೆ ಚಿಕ್ಕದಾಗಿರಲಿಲ್ಲ ಸಾಕಷ್ಟು ವಿಸ್ತಾರವಾಗಿದ್ದು, ನಾನು ಪ್ರವೇಶಿಸಿದ, ಮುಂದಿನ ಕೋಣೆಯ ಮೂಲಕ ಒಳಗೆ ನೋಡಿದರೆ, ಕಂಬಗಳ ದೊಡ್ಡ ಹಜಾರ, ಅತ್ತ ಇತ್ತ ರೂಮುಗಳು, ಅಡುಗೆ ಮನೆ ಬಚ್ಚಲು ಮನೆ , ಎಲ್ಲವನ್ನು ಸುತ್ತಿ ನೋಡಿದೆವು, ಸ್ವಚ್ಚವಾಗಿ ಗುಡಿಸಿಟ್ಟಂತೆ, ಎಲ್ಲಿಯೂ ಯಾವ ವಸ್ತುವು ಮನೆಯಲಿಲ್ಲ. ಕೆಂಪು ಸಿಮೆಂಟಿನ  ಮನೆಯಲ್ಲಿ ನೆಲದ ಮೇಲೆಲ್ಲ ದೂಳು. ಎಲ್ಲವನ್ನು ಸುತ್ತಿ ಬಂದೆವು.  ಹೊರಗೆ ಅಕಾಶವನ್ನು ಮೋಡ ಕವಿಯುತ್ತಿದೆ ಅನ್ನಿಸಿತು.
ಪತ್ನಿ ಅಂದಳು
"ನೋಡಿ ಮೋಡವಾಗುತ್ತಿದೆ, ಕಾರಿನ ಹತ್ತಿರ ಹೋಗಿ, ಹೊರಡೋಣ"
ಮಗಳು ಅಂದಳು
"ಸರಿಯಮ್ಮ ಕಾರ್ ಸ್ಟಾರ್ಟ್ ಆಗಬೇಕಲ್ಲ"
ಏನು ಮಾಡುವುದು ಎನ್ನುವ ಯೋಚನೆ ನನ್ನ ತಲೆಯನ್ನು ತಿನ್ನುತ್ತಿತ್ತು.  ನಾವು ಪ್ರವೇಶಿಸಿದ ಹಜಾರದ ಗೋಡೆಯ ಗೂಡಿನಲ್ಲಿ ಚಾಪೆ ಒಂದು ಸುತ್ತಿ ಇಟ್ಟಿದ್ದು, ಮನೆಗೆಲ್ಲ ಅದೊಂದೆ ವಸ್ತು ಇದ್ದಿದ್ದು. ನನ್ನ ಮಗಳೇಕೊ,
"ಅಪ್ಪ ಅದೇನೊ ಸುಸ್ತು, ನಾನು ಒಂದು ನಿಮಿಷ ಕುಳಿತಿರುತ್ತೇನೆ" ಎನ್ನುತ್ತ ಆ ಚಾಪೆ ಹೊರತೆಗೆದು ಅದನ್ನು ಕೊಡವಿದಳು, ಸಾಕಷ್ಟು ದೂಳು ಎದ್ದಿತ್ತು. ನನ್ನಾಕೆಯಂತು ಕೋಪಮಾಡಿಕೊಂಡಿದ್ದಳು
"ಈ ದೂಳಿನಲ್ಲಿ ಏಕೆ ಕೂಡುವೆ, ನಿನಗೆ ಮೊದಲೆ ಅಲರ್ಜಿ ಜಾಸ್ತಿ. ಎಂತ ಜಾಗವೊ ನಿನಗಂತು ನಿಗಾ ಇಲ್ಲ" ಎನ್ನುತ್ತಿದ್ದಳು.
ಹೊರಗೆ ಸಣ್ಣ ಮಳೆ ಪ್ರಾರಂಬವಾಯಿತು. ಸ್ವಲ್ಪ ನಸುಗತ್ತಲಾಯಿತು ಅನ್ನಿಸಿತು, ನನಗೂ ಸಹ ಕತ್ತಲಾಗುವ ಮುಂಚೆ ಹೊರಟು, ಹೇಗೊ ಕಾರ ಸ್ಟಾರ್ಟ್ ಮಾಡಿ ಚಿಕ್ಕಮಗಳೂರನ್ನು ಸೇರುವುದು ಕ್ಷೇಮವಾದ ಮಾರ್ಗ ಅನ್ನಿಸುತ್ತ ಇತ್ತು. ಸಮಸ್ಯೆ ಎಂದರೆ ಇಲ್ಲಿ ಯಾವ ಸಹಾಯವು ಇರಲಿಲ್ಲ.  ಒಂದೈದು ನಿಮಿಶದಲ್ಲಿಯೆ ಮಳೆ ನಿಂತಿತು.

ಬಾಗಿಲಿನಿಂದ ಹೊರನೋಡುತ್ತ  'ಸರಿ ಹೊರಡುವುದು' ಅಂದುಕೊಳ್ಳುವದೊರಳೆಗೆ ಮಗಳು
"ಅಪ್ಪ, ಆಮ್ಮಾ" ಎಂದು ಕೂಗಿಕೊಂಡಳು
ನಾವು ಅದೇನೊ ಎಂದು ತಿರುಗಿ ನೊಡುವಾಗ, ವಿಚಿತ್ರವೊಂದು ಕಾಣಿಸಿತು, ಪೂರ್ತಿ ಮನೆ ಏನು ಇಲ್ಲ  ಅನ್ನುವ ನಮ್ಮ ಮಾತು ಸುಳ್ಳು ಮಾಡುವಂತೆ . ಒಳಗಿನ ರೂಮಿನಿಂದ ಸ್ವಲ್ಪ ಹಸಿರು ಬಣ್ಣದ ಹಾವೊಂದು ಹೊರಬರುತ್ತಿತ್ತು. ಅದು ಮಗಳು ಕುಳಿತ್ತಿದ್ದ ಚಾಪೆಯ ಹತ್ತಿರವೆ ಬಂದು, ನೋಡುತ್ತ ನೋಡುತ್ತ ಇರುವಂತೆ ಅವಳ ಕೈಗೆ ಸುತ್ತಿ ಕೊಂಡಿತು. ನಾನು ಹೋಗಿ ಅದನ್ನು ಬಿಡಿಸುವುದು ಹೇಗೆಂದು ದೈರ್ಯ ಮಾಡಿ ಕೀಳಲು ಹೋದಂತೆ, ಅದು ತನ್ನ ರೂಪ ಬದಲಿಸುತ್ತಿತ್ತು ! ಹಾವಿನ ರೂಪದಿಂದ ಕುಗ್ಗಿ, ಸ್ವಲ್ಪ ದಪ್ಪಗಾಗಿ , ನೋಡಲು ದೊಡ್ಡದೊಂದು ಸೌತೆಕಾಯಿ ಅನ್ನುವಂತೆ ಅವಳ ಕೈ ಮೇಲಿತ್ತು. ಆಕೆ ಕೈಯನ್ನು ಜೋರಾಗಿ ಕೊಡವಿದಳು. ಅದು ಪಿಂಗ್ ಪಾಂಗ್ ಬಾಲಿನಂತೆ ಎಗರಿ ನನ್ನ ಮೈಮೇಲೆ ಬಿತ್ತು

ನಾನು ಗಾಭರಿಪಟ್ಟು ಹಿಂದೆ ಹೆಜ್ಜೆ ಇಟ್ಟೆ. ಉಪಯೋಗವಿಲ್ಲ ಅದು ನನ್ನ ಭುಜದ ಮೇಲೆ ಬಿದ್ದಿದ್ದು ತಕ್ಷಣ ಹಿಂಬದಿಯಿಂದ ನನ್ನ ಕುತ್ತಿಗೆಯ ಮೇಲೆ ಕುಳಿತು ಕುತ್ತಿಗೆಯನ್ನು ಹಿಡಿಯಿತು. ಕೈ ಹಾಕಿ ಅದನ್ನು ಕೀಳಲು ಹೋದೆ , ಕೀಳಲು ಹೋದಷ್ಟು ಅದು ತನ್ನ ಹಿಡಿತ ಬಿಗಿಗೊಳಿಸುತ್ತ ಹೋಯಿತು.

ಮೂವರಿಗು ಗಾಭರಿಯಾಗಿತ್ತು ಇದೇನು ಆಯಿತು, ಎಂದು ಅರ್ಥವಾಗುತ್ತಿಲ್ಲ
"ಕೀಳಲು ಸಾದ್ಯವಿಲ್ಲ, ನನ್ನ ಮಾತು ಕೇಳು"
ಎನ್ನುವ ದ್ವನಿ ಕೇಳಿಸಿತು. ಯಾರ ಮಾತು ಅದು ಅರ್ಥವೆ ಆಗುತ್ತಿಲ್ಲ. ಮನೆಯಲ್ಲಿ ನಾವು ಮೂವರಲ್ಲದೆ ಮತ್ಯಾರೋ ಇದ್ದಾರೆ!.ಆದರೆ ನಮ್ಮ ಕಣ್ಣಿಗೆ ಇಷ್ಟು ಹೊತ್ತಾದರು ಏಕೆ ಕಾಣಲಿಲ್ಲ. ನಾನು ಕುತ್ತಿಗೆಯಲ್ಲಿ ಇದ್ದ ಆ ಜೀವಿಯ ಹೊರತಾಗಿಯು ಕೂಗಿಕೊಂಡೆ
"ಯಾರು ನೀವು , ಎಲ್ಲಿದ್ದೀರ "
ಪಕ ಪಕ ನಗು
"ಏಕೆ ನಿನ್ನ ಕುತ್ತಿಗೆಯ ಮೇಲೆ ಕುಳಿತಿರುವೆ, ಮತ್ತೆ ಎಲ್ಲಿ ಎಂದು ಬೇರೆ ಕೇಳುತ್ತಿರುವೆಯಲ್ಲ "
ನನ್ನ ಉಸಿರು ನಿಂತಂತೆ ಅನ್ನಿಸಿತು, ನಾನು ಯಾವುದೋ ಹುಳುವೊ, ಹಾವೋ ಎಂತದೋ ಇದು ಜೀವಿ ಎಂದು ಆತಂಕದಲ್ಲಿದ್ದರೆ ಅದು ನಗುತ್ತ ಮಾತನಾಡಬಲ್ಲದು ಎಂದು ನನಗೆ ಅನ್ನಿಸಲೆ ಇಲ್ಲ
"ಏಕೆ ನಂಬಿಕೆ ಬರುತ್ತಿಲ್ಲವೆ, ನಾನೆ ನಿನ್ನ ಕುತ್ತಿಗೆಯ ಮೇಲೆ ಕುಳಿತಿರುವೆ ಕಾಣಿಸುತ್ತಿಲ್ಲವೆ"
ಅಲ್ಲಿಗೆ ನಿಜ, ಆದರೆ ಹಾವಿನಂತೆ ಬಂದು ಸೌತೆಕಾಯಿ ಆಕಾರಕ್ಕೆ ಬದಲಾಗಿರುವ ಈ ಯಾವುದೋ ಜೀವಿ ಮಾತನಾಡುತ್ತಿರುವದಂತು ಸತ್ಯ  . ಆದರೆ ಏಕೆ.  ಮಗಳು ಹಾಗು ನನ್ನ ಹೆಂಡತಿ ಸಾಕಷ್ಟು ಹೆದರಿದ್ದರು, ಕೂಗಿ ಸುಮ್ಮನಾಗಿದ್ದರು. ನಾನಂತು ಪರಿಸ್ಥಿಥಿ ಎದುರಿಸಲೇ ಬೇಕಿತ್ತು. ಮತ್ತೆ ದೈರ್ಯ ತಂದುಕೊಳ್ಳುತ್ತ ಕೂಗಿದೆ
"ನೀನು ಯಾರು, ನೋಡಲು ವಿಚಿತ್ರ ಆಕಾರದಲ್ಲಿರುವೆ, ನನ್ನ ಕುತ್ತಿಗೆ ಏಕೆ ಹಿಡಿದಿರುವೆ, ಬಿಡು ನನ್ನನ್ನು ಬಿಡು "

"ಅಷ್ಟು ಗಾಭರಿ ಏನು ಬೇಡ. ನನ್ನಿಂದ ನಿನಗೆ ತೊಂದರೆ ಏನು ಆಗಲಾರದು, ಬದಲಿಗೆ ಸಾಕಷ್ಟು ಲಾಭವೆ ಆಗುತ್ತದೆ, ಕೊಂಚ ನಾನು ಹೇಳಿದಂತೆ ಕೇಳಬೇಕು ಅಷ್ಟೆ" ಎಂದಿತು ಆ ದ್ವನಿ

"ಲಾಭವೆ ಹಾಗೆಂದರೆ ಏನು " ಎಂದು ನಾನಂದೆ. ಹೆಂಡತಿಯಾದರೊ
"ಅದೆಲ್ಲ ಬೇರೆ ಮೊದಲು ಅವರ ಕುತ್ತಿಗೆಯಿಂದ ಕೆಳಗೆ ಇಳಿ, ಏನು ಬೇಕಾದರು ಮಾಡೋಣ" ಎಂದಳು
"ಕುತ್ತಿಗೆ ಏರಿದನಂತರ ನನ್ನನ್ನು ಕುತ್ತಿಗೆಯಿಂದ ಇಳಿಸುವುದು ಅಷ್ಟು ಸುಲುಭವಲ್ಲ " ಜೋರಾಗಿ ನಗುತ್ತಿದ್ದ ಆ ವಸ್ತು ಹೇಳಿತು
"ನನ್ನ ಮಾತು ಕೇಳುವದೊಂದೆ ನಿಮಗೆ ಉಳಿದಿರುವ ಮಾರ್ಗ, ಹಾಗೆ ಮಾಡಿದರೆ, ಅಪಾರ ನಿಧಿಯು ನಿಮ್ಮದಾಗುತ್ತೆ , ನನ್ನ ಆಸೆಯೂ ನೆರವೇರುತ್ತೆ"
ಅದು ಕುತ್ತಿಗೆಯನ್ನು ಬಿಗಿದು ಹಿಡಿದಿತ್ತೆ ವಿನಃ ನನ್ನ ಉಸಿರಾಟಕ್ಕೆ ಏನು ತೊಂದರೆ ಇರಲಿಲ್ಲ, ಆದರೆ ದಿಂಬಿನಂತೆ ಕುತ್ತಿಗೆ ಸುತ್ತಿ ಕೊಂಡಿದ್ದರಿಂದ ನನಗೆ ಇರುಸುಮುರುಸು, ಅಲ್ಲದೆ ಎಷ್ಟು ಕಾಲ ಹಾಗೆ ಇರಲು ಸಾದ್ಯ. ಅಲ್ಲದೆ ಮಾತನಾಡುತ್ತಿರುವ ಈ ಜೀವಿಯಿಂದ ನನಗೆ ಅಪಾಯವಿಲ್ಲ ಎಂದು ನಂಬುವದಾದರು ಹೇಗೆ. ನನ್ನ ಪತ್ನಿಯಾದರೋ ಹೇಳಿದಳು
"ರೀ ಬನ್ನಿ ಮೊದಲು ಮನೆಯಿಂದ ಹೊರಗೆ ಹೋಗೋಣ. ನಂತರ ಏನು ಅಂತ ನಿರ್ಧರಿಸೋಣ"

ನಾವು ಹೊರಗೆ ಬಂದು ನಡೆಯುತ್ತ ಕಾರಿನ ಹತ್ತಿರ ಬಂದೆ, ಕುತ್ತಿಗೆಯ ಮೇಲಿದ್ದ ಜೀವಿ ನಗುತ್ತಿತ್ತು.
"ದಡ್ಡ ಹೆಂಡತಿ ಮಾತು ಕೇಳಿದರೆ ಕುತ್ತಿಗೆ ಮುರಿಯುತ್ತೆ. ಕಾರು ಹತ್ತಿದರೆ ಕಾಲು ಮುರಿಯುತ್ತೆ ಹುಶಾರ್ ' ಎಂದಿತು
ನಾನು ಯೋಚಿಸಿ ಹೇಳಿದೆ
"ಅದೆಲ್ಲ ಅಲ್ಲ ನೋಡು ಸಣ್ಣಗೆ ಮಳೆ ಹನಿಯುತ್ತಿದೆಯಲ್ಲ, ಒಳಗೆ ಕುಳಿತು ವಿಷಯ ಮಾತನಾಡಬಹುದಲ್ಲ. ಅಷ್ಟಕ್ಕು ನೀನು ಯಾರು ಈ ಮನೆಗೂ ನಿನಗೂ ಏನು ಸಂಭಂದ , ನಿದಿ ಅಂತೆಲ್ಲ ಹೇಳುತ್ತಿಯಲ್ಲ ಅದನ್ನು ನನಗೆ ಎಕೆ ಕೊಡಬೇಕು ಬೇರೆ ಯಾರಿಗಾದರು ಬೇಕು ಅನ್ನುವರಿಗೆ ಕೊಡಬಹುದಲ್ಲವೆ?"

"ಅದು ಹಾಗೆಲ್ಲ ನಿಧಿಯನ್ನು ಎಲ್ಲರಿಗೂ ಕೊಡಲಾಗುವದಿಲ್ಲ, ಹಾಗೆ ಕೊಡಬೇಕೆಂದರೆ ನಿನ್ನ ರೀತಿ ಸಂಸಾರವೆ ಆಗಬೇಕು ಒಬ್ಬಳೆ ಆದ ಹೆಣ್ಣುಮಗಳಿರಬೇಕು, ಇನ್ನು ಅವಳಿಗೆ ಮದುವೆ ಆಗಿರಬಾರದು" ಎಂದಿತು
ನನಗೆ ಕೊಂಚ ಆಶ್ಚರ್ಯ. ಇದ್ಯಾವುದೋ ಜೀವಿಗೆ ನನಗೆ ಇವಳೊಬ್ಬಳೆ ಮಗಳು ಎನ್ನುವ ವಿಷಯದ ಅರಿವಿರುವಾದಾದರು ಹೇಗೆ? ಅಷ್ಟಕ್ಕು ಆ ರೀತಿ ಇದ್ದ ಮಾತ್ರಕ್ಕೆ ನಮಗೆ ಏಕೆ ನಿಧಿ ಕೊಡಬೇಕು. ಈ ಜೀವಿ ಯಾವ ರೀತಿಯದು, ಮನುಷ್ಯನಂತೆ ಮಾತನಾಡುವದಾದರು ಏಕೆ, ನಿಧಿಯ ಬಳಿ ಹಾವಿರುತ್ತದೆ ಅನ್ನುವ ನಂಭಿಕೆ ಇದೆಯಾದರು ಇದ್ಯಾವ ಜೀವ ಹೀಗಿದೆ ಈ ರೀತಿ ಅನೇಕ ಅನುಮಾನಗಳು. ಆದರೂ ಹೇಳಿದೆ
"ನೋಡು ಕಾರಿನೊಳಗೆ ಕುಳಿತು ಕೊಳ್ಳೋಣ ಮೊದಲು ಮಳೆ ಬರುತ್ತಿದೆಯಲ್ಲ, ಸುಮ್ಮನೆ ನಾವೆಲ್ಲ ನೆನೆಯುವದಾದರು ಏಕೆ, ನಾನೇನು ಓಡಿಹೋಗಲಾರೆ, ನೀನು ಕುತ್ತಿಗೆಯ ಮೇಲೆ ಇದ್ದೀಯಲ್ಲ" ಎಂದೆ. ಅದು ಅರೆ ಮನಸಿನಿಂದ ಒಪ್ಪಿತ್ತು. ನಾನು ಮುಂಬಾಗಕ್ಕೆ ಹತ್ತಿ ಕುಳಿತೆ. ಮಗಳು ಹಿಂದೆ ಬಾಗಿಲು ತೆರೆದು ನನ್ನ ಹಿಂದೆ ಬರುವಂತೆ ಕುಳಿತಳು. ಹೆಂಡತಿಗೆ ಅದೇನೊ ಭಯ ನನ್ನ ಪಕ್ಕದ ಸೀಟಿಗೆ ಬಂದಳು. ಕಾರಿನ ಬಾಗಿಲನ್ನು ಹಾಕಿದರೆ, ಒಳಗೆಲ್ಲ  ಭಯದ ವಾತವಾರಣ. ಅಷ್ಟಾದರು ಹೊರಗೆ ಒಂದು ವಾಹನವಿಲ್ಲವೇಕೆ ಎನ್ನುವ ಯೋಚನೆ.
ನಾನು ಮತ್ತೆ ಕೇಳಿದೆ
"ನೋಡು ಈಗ ಎಲ್ಲ ವಿವರವಾಗಿ ಹೇಳು. ನಿನಗೂ ಇಲ್ಲಿರುವ ಯಾವುದೋ ನಿಧಿಗೂ ಏನು ಸಂಭಂದ.ಅದನ್ನು ನನಗೆ ಏಕೆ ಕೊಡಬೇಕು. ಈ ಮನೆಯಾದರು ಯಾರದು. ನೀನು ಅದು ಹೇಗೆ ಮಾತನಾಡುತ್ತಿರುವೆ?"
ಆ ಜೀವಿ ಹೇಳಿತು " ಈ ಎಲ್ಲ ಪ್ರಶ್ನೆಗೆ ಉತ್ತರ ಹೇಳಬೇಕೆಂದರೆ ನಾನು ನಿನಗೆ ಈ ಮನೆಯ ಪೂರ್ತಿ ಕತೆ ಹೇಳಬೇಕು.ನೀನು ನಿಧಿಯ ಬಳಿಗೆ ಬರುವೆ ಅದನ್ನು ಹೊರಗೆ ತೆಗೆದು, ನಂತರ ಅದನ್ನು ತೆಗೆದುಕೊಳ್ಳುವೆ ನನ್ನ ಮಾತು ಕೇಳುವೆ ಎಂದರೆ ಮಾತ್ರ ಈ ಮನೆಯ ಕತೆ ಕೇಳುವೆ" ಎಂದಿತು

ನಾನು ಹೇಳಿದೆ "ನಿಧಿ ಎಲ್ಲಿದೆ, ನೀನು ಹೇಳುವ ಕತೆ ಮೊದಲು ಹೇಳು ನಂತರ ನಾನು ನಿಧಿಯ ಬಳಿ ಬರುವ ವಿಷಯ ನಿನಗೆ ತಿಳಿಸುವೆ" ಎಂದೆ
 ಆ ಜೀವಿ ಹೇಳಿತು
"ನಿಧಿ ಇಲ್ಲೆ ಇದೆ  ಕೆಳೆಗೆ ನೀನು ನೋಡಿದ ಮನೆಯಿಂದ ಮತ್ತೆ ಅರ್ಧ ದೂರ ಕೆಳಗಿಳಿದರೆ ಅಲ್ಲೊಂದು ಭಾವಿ ಇದೆ. ಭಾವಿ ಪಕ್ಕದ ಒಂದು ಜಾಗದಲ್ಲಿ ಇರುವ ನಿಧಿ ನಿನಗೆ ತೋರುವೆ. ಮೊದಲಿಗೆ ನಾನು ಹೇಳುವ ಕತೆ ಕೇಳು, ಅದು ಈ ಮನೆಯ ಕತೆ " ಎಂದಿತು.
ನಾನು ಮೌನವಾಗಿದ್ದೆ. ಅಂತಹ ಆತಂಕದಲ್ಲಿದ್ದರೂ, ಕಾರಿನಲ್ಲಿ ನಾವು ಆ ಭಯಂಕರ ಅನ್ನುವ ಜೀವಿಯ ಬಳಿ ಇದ್ದರು ಅದೇಕೊ ಅದು ಹೇಳಬಹುದಾದ ಕತೆ ಕುತೂಹಲ ಅನಿಸುತ್ತಿತ್ತು.
"ಈ ಮನೆಯಲ್ಲಿ ಬಹಳ ವರ್ಷಗಳ ಹಿಂದೆ ಜಮೀನುದಾರನ ಸಂಸಾರವೊಂದು ವಾಸವಾಗಿತ್ತು. ಸಂಜೀವಯ್ಯ ಎನ್ನುವ ಹೆಸರು ಅವನದು. ಮದುವೆಯಾಗಿ ಸಣ್ಣದೊಂದು ಹೆಣ್ಣು ಮಗುವಿರಬೇಕಾದರೆ ಅವನ ಹೆಂಡತಿ ಅದೇ ಭಾವಿಯ ಬಳಿ ಹಾವೊಂದು ಕಚ್ಚಿ ಸತ್ತುಹೋದಳು. ಅವನೊಬ್ಬನೆ ಒಂಟಿಯಾಗಿ ಮಗಳನ್ನು ಬೆಳೆಸಿದ.
ಅಪಾರ ಸಂಪತ್ತು. ಸುತ್ತಲ್ಲಿನ ನೂರಾರು ಎಕರೆ ಕಾಫಿತೋಟ. ಚಿನ್ನ ಬೆಳ್ಳಿಗೆ ಲೆಕ್ಕವಿಲ್ಲ ಅನ್ನುವಂತಿತ್ತು. ಇದ್ದ ತೋಟ ಜಮೀನಿನಿಂದ ಸಾಕಷ್ಟು ಅದಾಯ ಬರುತ್ತಿತ್ತು. ತಲ ತಲಾಂತರದಿಂದ ಬಂದ ಆಸ್ತಿ. ಊರ ಹೊರಗಿನ ಒಂಟಿ ಮನೆ ಬೇರೆ. ಹೆಂಡತಿ ಹೋದ ನಂತರ ಅವನು ಮಾನಸಿಕವಾಗಿ ಕುಗ್ಗಿಹೋದ. ಒಬ್ಬಳೆ ಮಗಳು ಲೀಲಳನ್ನು ಮುದ್ದಿನಿಂದ ಬೆಳೆಸಿದ. ಅವಳು ಕೇಳಿದ ಯಾವುದಕ್ಕು ಎಂದಿಗೂ ಇಲ್ಲ ಅನ್ನಲಿಲ್ಲ. ಕಡೆಗೊಮ್ಮೆ ದೂರದೂರಿಗೆ ಹೋಗಿ ಓದುವನೆಂದಳು, ಕಷ್ಟವೆನಿಸಿದರು ಮೈಸೂರಿಗೆ ಕಳಿಸಿ ಹಾಸ್ಟೆಲ್ಲಿನಲ್ಲಿರಿಸಿದ.
ಇವನಿಗೆ ಇಲ್ಲಿ ಒಂಟಿ ಬದುಕು. ಮನೆಯಲ್ಲಿ ಒಬ್ಬನೆ ಇರಲು ಕಳ್ಳ ಕಾಕರ ಭಯ, ಚಿನ್ನ ಬೆಳ್ಳಿ ಅಪಾರ ಹಣವನ್ನು ಯಾರು ಇರದ ಸಮಯದಲ್ಲಿ ನೋಡಿ ಭಾವಿ ಹತ್ತಿರ ನೆಲದಲ್ಲಿ ಒಂದು ಸ್ಥಳ ಮಾಡಿ ಇರಿಸುತ್ತಿದ್ದ. ಅಲ್ಲಿ ಯಾರು ಹೋಗುತ್ತಿರಲಿಲ್ಲ. ಕೂಲಿಗಳು ತೋಟದಲ್ಲಿ ಕೆಲಸ ಮುಗಿಸಿಹೊರಡುತ್ತಿದ್ದರು.

ಓದುವದಕ್ಕೆ ಹೋಗಿದ್ದ ಮಗಳು ಇದ್ದಕ್ಕಿದಂತೆ ಓದನ್ನು ಅರ್ಧಕ್ಕೆ ನಿಲ್ಲಿಸಿ ಹಿಂದೆ ಬಂದಳು. ಏಕೆ ಎಂದು ಅವನು ಕೇಳಿದರು ಹೇಳಲಿಲ್ಲ. ಎಷ್ಟೋ ತಿಂಗಳು ಅದೇ ರೀತಿ ಇದ್ದಳು. ಕಡೆಗೊಮ್ಮೆ ಹೇಳಿದಳು ಅವಳು ಯಾರನ್ನೊ ಪ್ರೀತಿಸಿದ್ದಳು ಎಂದು. ಮಗಳಿಗಾಗಿ ಎಲ್ಲ ತ್ಯಾಗಕ್ಕು ಸಿದ್ದನಾಗಿದ್ದ ಅಪ್ಪ, ಅವನ ಜೊತೆಗೆ ಮದುವೆ ಮಾಡಲು ಸಿದ್ದನಿದ್ದ, ಆದರೆ ಸಾದ್ಯವಾಗಲಿಲ್ಲ. ಇವಳು ಪ್ರೀತಿಸಿದ್ದ ಹುಡುಗ ಇವಳನ್ನು ಪ್ರೀತಿಸಲಿಲ್ಲ, ಮದುವೆಯಾಗಲು ಒಪ್ಪಲಿಲ್ಲ. ಅವನ ಮದುವೆ ಬೇರೆ ಹುಡುಗಿಯ ಜೊತೆ ನಡೆದೆ ಹೋಯಿತು, ಮದುವೆಯ ದಿನವೆ ಮಗಳು ಅದೇ ಬಾವಿಗೆ ಹಾರಿ ಸತ್ತು ಹೋದಳು.

ಅಪ್ಪ ಹುಚ್ಚನಂತಾದ, ಅವನೀಗ ಒಂಟಿ ಪಿಶಾಚಿ, ಅಪಾರ ಆಸ್ತಿ ಆದರೆ ಅನುಭವಿಸುವರೆ ಇಲ್ಲ. ಹೆಂಡತಿ ಇಲ್ಲ ಇದ್ದೊಬ್ಬ ಮಗಳು ಕಣ್ಣೆದುರೆ ಶವವಾದಳು. ಎಷ್ಟೋ ವರ್ಷ ಹಾಗೆ ಕಳೆದ ಕಡೆಗೆ ಅವನೊಬ್ಬನೆ ಆ ಒಂಟಿ ಮನೆಯಲ್ಲಿ ನೇಣು ಹಾಕಿ ಸತ್ತುಹೋದ. ಅವನ ಸಂಸ್ಕಾರ ಮಾಡಲು ಅವನಿಗೆ ದಿಕ್ಕಿಲ್ಲ. ಮನೆಯನ್ನೆಲ್ಲ ಯಾರೋ ಸ್ವಚ್ಚ ಮಾಡಿಟ್ಟರು. ಆದರೆ ಅಲ್ಲಿ ಯಾರು ವಾಸಕ್ಕೆ ಬರಲಿಲ್ಲ ಕಾರಣ, ಆ ಮನೆಯಲ್ಲಿ ಅವನ ಆತ್ಮ ಬೇರೆ ಬೇರೆ ರೂಪದಲ್ಲಿ ತಿರುಗುತ್ತಿದೆ ಎಂದು"

ಅದು ಕತೆಯನ್ನು ನಿಲ್ಲಿಸಿತು. ಕತೆ ಹೇಳುತ್ತ ಹೇಳುತ್ತ ಮೈಮರೆತು ಆ ಜೀವಿ ಕುತ್ತಿಗೆ ಬಿಟ್ಟು ನನ್ನ ಹೆಗಲ ಮೇಲೆ ಕುಳಿತಿತ್ತು.

ನಾನು ಮತ್ತೆ ಕೇಳಿದೆ "ಅಂದರೆ ಅವನ ಆತ್ಮ ಈ ಮನೆಯಲ್ಲಿ ಇದೆ ಅನ್ನುವುದು ನಿಜವ. ಆ ಬಾವಿಯ ಹತ್ತಿರ ನಿಧಿ ಇದೆಯ?"

ಅದು ಹುಚ್ಚು ಹುಚ್ಚಾಗಿ ನಗುತ್ತಿತ್ತು " ಅಯ್ಯೋ ಮೂರ್ಖ ಇಲ್ಲಿಯವರೆಗೂ ನಾನು ಹೇಳಿದ್ದ ಕತೆ ಕೇಳಲಿಲ್ಲವೆ. ಅಷ್ಟಕ್ಕು ಆ ಕತೆ ಯಾರದೆಂದು ತಿಳಿದೆ. ನನ್ನದೆ ಅಲ್ಲವೆ. ಅದಕ್ಕಾಗಿಯೆ ಹೇಳುತ್ತಿರುವುದು, ನಿಧಿ ಇರುವ ಸಂಗತಿ ನನಗೊಬ್ಬನಿಗೆ ತಿಳಿದಿದೆ ನನ್ನ ಮಾತು ಕೇಳು ನಡಿ ಭಾವಿಯತ್ತ" ಎಂದಿತು
ನಾನು ಹೇಳಿದೆ, ಸಾಮಾನ್ಯ ಆತ್ಮವಿದೆ ಅನ್ನುವದಾರೆ, ಯಾವುದಾದರು ಮನುಷ್ಯನ ಮೇಲೆ ಬರುವುದು ಸಾಮಾನ್ಯ, ನೀನಾದರೆ ಅದೇನು, ಹಾವಿನಂತೆ ಬಂದೆ, ಈಗ ಈ ಜೀವಿಯಾಗಿದ್ದಿ ಪಿಂಗ್ ಪಾಂಗ್ ಬಾಲಿನಂತೆ ಚಲಿಸುತ್ತಿ"
 ಆ ಜೀವಿ ಜೋರಾಗಿ ನಗುತ್ತಿತ್ತು "ಹೌದು ಸಾಮಾನ್ಯ ಮನುಷ್ಯರ ಮೇಲೆ ಆತ್ಮ ಬಂದು ನೆಲೆಸೋದು, ಆದರೆ ಈ ಮನೆಗೆ ವರ್ಷಗಳ ಕಾದೆ ಯಾವ ಮಾನವ ಜೀವಿಯೂ ಬರಲೆ ಇಲ್ಲ.  ಆ ಹಾಳು ಬಾವೀಲಿ ಎಷ್ಟು ದಿನ ಎಂದು ಕಾಯಲಿ. ಎಷ್ಟು ಹುಡುಕಿದರು ನನ್ನ ಮಗಳ ರೂಪ ಆ ಬಾವೀಲಿ ಕಾಣಲೆ ಇಲ್ಲ. ಅವಳಂತೆ ಇರುವರಾರಾದರು ನನ್ನ ಜೊತೆ ಬಂದರು ಸರಿ ಅನ್ನಿಸುತ್ತೆ ಆದರೆ ಆಗಲಿಲ್ಲ. ಕಡೆಗೊಮ್ಮೆ ಇಲ್ಲಿ ಓಡಿಯಾಡಿಕೊಂಡಿದ್ದ ಹಳೆಯ ಹಾವನ್ನು ನೋಡಿದೆ, ಅದೆ ನನ್ನ ಪತ್ನಿಯನ್ನು ಕಚ್ಚಿ ಕೊಂದಿದ್ದು ಇರಲೂ ಬಹುದು ಅನ್ನಿಸಿತು. ಅದು ತೀರ ವಯಸ್ಸಾಗಿತ್ತು, ನಾನು ಪ್ರಯತ್ನಿಸಿದೆ, ಕಡೆಗೊಮ್ಮೆ  ಹಾವಿನ ದೇಹದೊಳಗೆ ಪ್ರವೇಶಿಸಲು ಸಾದ್ಯವಾಯಿತು, ಆದರೆ ಕೆಲವು ದಿನಗಳಾದ ನಂತರ ನನಗೆ ಅರಿವಿಗೆ ಬಂದಿತು. ಹಾವಿನ ದೇಹದಲ್ಲಿದ್ದಾಗ ನನಗೆ ಬೇಕಾದ ರೂಪ ಧರಿಸಲು ಬರುತ್ತಿತ್ತು. ಹೀಗೆ ಇಲ್ಲಿ ಬರುವರನ್ನು ಕಾಯುತ್ತಿದೆ. ಈಗ ನೀನು ಬಂದಿರುವೆ ನಿಧಿಯನ್ನೆಲ್ಲ ನಿನಗೆ ಒಪ್ಪಿಸಿದರೆ ನಾನು ಇಲ್ಲಿಂದ ಹೋಗಬಹುದು, ನೀನು ನಿನ್ನ ಮಗಳ ಜೊತೆ ಬಾವಿಹತ್ತಿರ ಹೋಗೋಣ ಬಾ ' ಎಂದಿತು

ನನಗೇಕೊ ಅದರ ವರ್ತನೆ ಅನುಮಾನಾಸ್ಪದ ಅನ್ನಿಸಿತು. ನನ್ನನ್ನು ಹೋಗಲಿ ಮಗಳನ್ನು ಸಹ ಅದು ಏಕೆ ಕರೆಯುತ್ತಿದೆ. ಅಲ್ಲದೆ ಅದು ಆಡಿದ ಮಾತು ನೆನಪಿಗೆ ಬಂದಿತು ಮಗಳಂತೆ ಇರುವರಾದರು ಸರಿ ಬಂದರೆ ಸರಿ ಎಂದಿತ್ತು.ನನಗೆ ಅನ್ನಿಸಿದಂತೆ ನಿಧಿಯ ಹೆಸರಲ್ಲಿ ನನ್ನ ಮಗಳ ಜೀವಕ್ಕೆ ಅಪಾಯ ತರುವ ಸಾದ್ಯತೆ ಇದೆ ಅನ್ನಿಸಿತು.

 ಈಗ ಇದರ ಸಹವಾಸದಿಂದ ತಪ್ಪಿಸಿಕೊಳ್ಳುವದಾರಿ ಇರಬಹುದೆ  ಎಂದು ಯೋಚಿಸುತ್ತಿರಬೇಕಾದರೆ ಆ ಘಟನೆ ನಡೆಯಿತು. ಕತೆ ಹೇಳುತ್ತ ಆ ಜೀವಿ ತನ್ನನ್ನು ಮರೆತಿತ್ತು, ಹಾಗೆ ಕತೆ ಕೇಳುತ್ತ ನಾನು ಸಹ ಮರೆತಿದ್ದೆ, ಹಿಂದೆ ಕುಳಿತ್ತಿದ್ದ ನನ್ನ ಮಗಳನ್ನು ಇಬ್ಬರು ಮರೆತಿದ್ದೆವು.

ಹಿಂದೆ ಕುಳಿತ್ತಿದ್ದ ಅವಳು,  ತನ್ನ ಬಳಿ ಇದ್ದ ಕರಿಯ ಶಾಲಿನಂತ ದೊಡ್ದ ವಸ್ತ್ರವನ್ನು ಆ ಜೀವಿಯ  ಮೇಲೆ ಕವಚಿದಳು, ಅದನ್ನು ಮುಚ್ಚಿಬಿಟ್ಟಳು. ಆ ಜೀವಿ ಎಷ್ಟು ಜೋರಾಗಿ ಸೆಣೆಸಾಡುತ್ತಿತು ಎಂದರೆ ಕ್ಷಣ ಕಳೆದರು ಅವಳ ಕೈಯಿಂದ ತಪ್ಪಿಸಿಕೊಳ್ಳುವ ಸಾದ್ಯತೆ ಇತ್ತು, ನಾನು ಸಹ ಕೈ ಜೋಡಿಸಿದೆ, ಅದರ ಸುತ್ತ ಇದ್ದ ಬಟ್ಟೆಯನ್ನು ಗಟ್ಟಿ ಮಾಡಿ ನನ್ನ ಕೈಗೆ ಪಡೆದು , ಮಗಳಿಗೆ ಹೇಳಿದೆ
"ಬೇಗ ಸೀಟಿನ ಕೆಳಗಿರುವ ಕಬ್ಬಿಣದ ಟೂಲ್ ಕಿಟ್ ತೆಗಿ, ಅದರೊಳಗಿರುವ ವಸ್ತುವನ್ನೆಲ್ಲ ಕೆಳಗೆ ಸುರಿದು ಅದನ್ನು ಮುಂದಿನ ಸೀಟಿನ ಮೇಲೆ ಹಾಕು, ಅವಳು ಒಂದೆ ಕ್ಷಣ ಕೆಳಗೆ ಬಗ್ಗಿ ಕಾರು ಕೆಟ್ಟಿದೆ ಎಂದು ಈಚೆ ತೆಗೆದಿದ್ದ ಕಣ್ಣಿಣದ ಟೂಲ್ ಕಿಟ್ ತೆಗೆದು ಅದರಲ್ಲಿದ್ದುದನ್ನೆಲ ಹೊರಗೆ ಸುರಿದಳು. ಪಕ್ಕದಲ್ಲಿ ಹೆಂಡತಿ ನನ್ನ ಕಣ್ಣು ಸನ್ನೆಯಂತೆ ಬಾಗಿಲು ತೆರೆದು ಹಿಂದೆ ಸರಿದು ಸೀಟು ಖಾಲಿ ಮಾಡಿದಳು.
ಮಗಳು ಪೆಟ್ಟಿಗೆಯನ್ನು ಸೀಟಿನಮೇಲೆ ಇಟ್ಟಳು. ನಾನು ಆ ಜೀವಿಯನ್ನು ಬಟ್ಟೆಯ ಸಮೇತ ಆ ಪೆಟ್ಟಿಗೆಯಲ್ಲಿಡುವಾಗಲೆ ಪತ್ನಿ ಮೇಲಿನಿಂದ ಆ ಪೆಟ್ಟಿಗೆ ಮುಚ್ಚಿಬಿಟ್ಟಳು. ಎಷ್ಟು ಆತುರವೆಂದರೆ ಕಣ್ಣಿಣದ ಬಾಗಿಲು ಕೈಗೆ ತರಚಿತು. ಅದರ ಚಿಲಕ ಭದ್ರಪಡಿಸುವಾಗಲೆ ಮಗಳು ಅದರ ಬೀಗ ಕೊಟ್ಟಳು ಹಿಂದಿನಿಂದ. ಬೀಗವನ್ನು ಹಾಕಿದ್ದಾಯಿತು.

ಆದರು ನಮಗೆ ಭಯ ಅನಿಸಿತು. ಆ ಜೀವಿ ಯಾವ ಕ್ಷಣಕ್ಕೆ  ಪೆಟ್ಟಿಗೆ ಮುರಿದು ಹೊರಬರುವುದೋ ತಿಳಿಯದು. ಒಳಗಿನಿಂದ ಆ ಜೀವಿ ಕೂಗಿಕೊಳ್ಳುವುದು ಕ್ಷೀಣವಾಗಿ ಕೇಳಿಸುತ್ತಿದೆ,
"ಮೋಸ ಮೋಸ ನೀವು ನನಗೆ ಮೋಸ ಮಾಡಿದಿರಿ ನಾನು ಹೊರಗೆ ಬಂದರೆ ಸುಮ್ಮನೆ ಬಿಡಲ್ಲ"
ನಾನು ಬೇಗ ಕೆಳಗಿಳಿದೆ, ಆ ಪೆಟ್ಟಿಗೆಯನ್ನು ಹಿಂದೆ ತೆಗೆದುಕೊಂಡು ಹೋಗಿ ಕಾರಿನ ಡಿಕ್ಕಿ ತೆಗೆದೆ. ಅದರಲ್ಲಿ ಕಭ್ಭಿಣದ ಸರಪಳಿ ಇದ್ದಿತು. ಅದನ್ನು ತೆಗೆದು ಪೆಟ್ಟಿಗೆ ಭದ್ರಪಡಿಸಿದೆ. ಡಿಕ್ಕಿಮುಚ್ಚಿ ಮುಂದೆ ಬಂದು ಕುಳಿತೆ. ಹಿಂದಿನಿಂದ ಶಬ್ದ ಕೇಳಿಸುತ್ತಲೆ ಇತ್ತು.
ಮಗಳು
"ಅಪ್ಪ ಕಾರು ಸ್ಟಾರ್ಟ್ ಆಗುತ್ತ ನೋಡು" ಎಂದಳು
ಆಶ್ಚರ್ಯ ಕಾರುಯಾವ ತೊಂದರೆ ಇಲ್ಲದೆ ಸ್ಟಾರ್ಟ್ ಆಯಿತು. ಇಬ್ಬರನ್ನು ಬೇಗ ಬೇಗ ಹತ್ತಿ ಬಾಗಿಲು ಹಾಕಿಕೊಳ್ಳಿ ಎನ್ನುತ್ತ. ಅವರಿಬ್ಬರು ಹತ್ತುವಾಗಲೆ ಹೊರಟೆ. ಕಾರು ವೇಗ ಪಡೆಯಿತು. ಸುಮಾರು ಹತ್ತು ನಿಮಿಷ ಚಲಿಸುವಾಗ ಮುಖ್ಯ ರಸ್ತೆಗೆ ಬಂದು ಸೇರಿತು ಕಾರು. ಚಲಿಸುತ್ತಿರುವ ವಾಹನಗಳು. ಅಬ್ಬ ಅನ್ನಿಸಿತು, ರಸ್ತೆ ಪಕ್ಕದಲ್ಲಿ ಮೈಲಿಗಲ್ಲು ಕಾಣಿಸಿತು,
"ಚಿಕ್ಕಮಗಳೂರು ೨೦ ಕಿ,ಮಿ" ಅನ್ನುವದನ್ನು ಕಾಣುವಾಗ ಗೊತ್ತಾಯಿತು. ನಾನು ಅದು ಹೇಗೊ ಮುಖ್ಯರಸ್ತೆ ಬಿಟ್ಟು ಯಾವುದೊ ಅಡ್ಡ ರಸ್ತೆಗೆ ಇಳಿದುಬಿಟ್ಟೆದ್ದೆ

ಸುಮಾರು ಮುಕ್ಕಾಲು ಗಂಟೆ ದಾಟುವಾಗ ಚಿಕ್ಕಮಗಳೂರು,  ರಾತ್ರಿ ಬಹಳ ಸಮಯವಾಗಿತ್ತು. ಅದು ಏಕೊ ಕಾರ್ ನಿಲ್ಲಿಸಿ ಹೊಟೆಲ್ ನಲ್ಲಿ ಊಟಮಾಡಬೇಕು ಅಂದು ಅನ್ನಿಸಲಿಲ್ಲ. ಕಾರ್ ನಿಲ್ಲಿಸಿದೆ, ತಕ್ಷಣ ಮಡದಿ ಕೆಳಗಿಳಿದು, ಅಂಗಡಿಯಿಂದ ಸ್ವಲ್ಪ ಬ್ರೆಡ್ ಬಿಸ್ಕತ್ ಹಣ್ಣು ಅಂತವುಗಳನ್ನು ತಂದಳು. ಮಗಳು ಅಪ್ಪ ಕಾರನ್ನು ನಿಲ್ಲಿಸಬೇಡಿ ಓಡಿಸಿ ಮುಂದೆ ಯೋಚಿಸೋಣ ಎಂದಳು.

ಮೂವರಿಗು ನಿದ್ದೆ ಇಲ್ಲ. ಆತಂಕ. ಹೇಗೋ ಬಿಸ್ಕತ್ ಸ್ವಲ್ಪ ಹಣ್ಣು ತಿಂದೆವು ಅದು ಕಾರು ಓಡುತ್ತಿರುವಾಗಲೆ. ಅಷ್ಟಾದರು ಆ ಜೀವಿಯಿಂದ ಯಾವುದೇ ತೊಂದರೆ ಆಗಲಿಲ್ಲ. ಒಳಗಿನಿಂದ ಆಗೊಮ್ಮೆ ಇಗೊಮ್ಮೆ ಡಬ್ ಡಬ್ ಎನ್ನುವ ಶಬ್ದವಷ್ಟೆ. ಈಗ ಸ್ವಲ್ಪ ನಿರಾತಂಕವೆನಿಸಿತು. ಆ ಜೀವಿ ಪೆಟ್ಟಿಗೆಯಿಂದ ತಪ್ಪಿಸಿಕೊಳ್ಳಲಾರದು, ಕಣ್ಣಿಣದ ಪೆಟ್ಟಿಗೆ ಅದು, ಆ ಆತ್ಮ ಹೊಕ್ಕಿರುವ ದೇಹವಾದರು ಹಲ್ಲು ಸಹ ಇಲ್ಲದ್ದ ಜೀವಿ. ಎಂತದೋ ಹಾವು ನಂತರ ವಿಚಿತ್ರ ಜೀವಿ. ಅದು ಕುತ್ತಿಗೆ ಹಿಡಿದ ಪಟ್ಟು ಭಯ ಮೂಡಿಸಿತ್ತು, ಬಿಡಿಸಿಕೊಳ್ಲಲು ಸಾದ್ಯವೆ ಇರಲಿಲ್ಲ. ಆದರೆ ಮಗಳು ಅದ್ಯಾವ ಮಾಯದಲ್ಲೊ ಆ ಜೀವಿಯನ್ನು ಮೋಸಗೊಳಿಸಿದ್ದಳು.

ಸುಮಾರು ಐದು ತಾಸು ಕಳೆಯಿತು. ನಾವೀಗ ತುಮಕೂರು ದಾಟುತ್ತಿದ್ದೆವು. ಸಮಯ ನೋಡಿದರೆ ಬೆಳಗಿನ ಐದು ಗಂಟೆ. ಆಗ ನನಗೆ ಅದೇನೊ ತೋಚಿತು ಸರಿಯೋ ತಪ್ಪೊ ಎನ್ನುತ್ತ ದೇವರಾಯನ ದುರ್ಗದ ಕಡೆಗೆ ಕಾರು ತಿರುಗಿಸಿದೆ.
"ಎಲ್ಲಿ ಹೋಗುತ್ತಿರುವಿರಿ" ಅಲ್ಲ ಎಂದಳು ಮಗಳು.
ನಾನು ಏನು ಮಾತನಾಡದಿರುವಂತೆ ಸೂಚಿಸಿದೆ. ಆ ಜೀವಿಗೆ ಯಾವುದೆ ಸುಳಿವು ಸಿಗಬಾರದು. ಸುಮಾರು ಆರುಘಂಟೆ ಹೊತ್ತಿಗೆ ಮೇಲಿನ ಬೆಟ್ಟದಲ್ಲಿದ್ದೆವು.
ಅಲ್ಲಿ ಜನ ಬರುವುದು ಸಾಮಾನ್ಯ ಬೆಳಗಿನ ಹತ್ತು ಘಂಟೆ ನಂತರ. ದೇವಾಲಯ ಆಗಿನ್ನು ಬಾಗಿಲು ತೆರೆಯುತ್ತಿದ್ದರು ಅನ್ನಿಸುತ್ತೆ. ನಾವು ಕಾಲು ತೊಳೆದುಬರುವರಂತೆ ಹಿಂದಿನ ಕೊಳದ ಬಳಿ ಹೋದೆವು.
ಕೊಳದ ಮೆಟ್ಟಿಲುಗಳು ಹತ್ತಿರದಲ್ಲಿ, ಒಂದು ಗ್ರಿಲ್ ಗೇಟ್ ಇತ್ತು. ಅದನ್ನು ಬೀಗ ಹಾಕದೆ ಸುಮ್ಮನೆ ಚಿಲುಕ ಸಿಕ್ಕಿಸಲಾಗಿತ್ತು. ಅದು ನನಗೆ ಚೆನ್ನಾಗಿ ಗೊತ್ತಿರುವ ಜಾಗ. ಬಾಗಿಲು ತೆರೆದರೆ, ಪಾತಾಳಗಂಗೆಯತ್ತ ಹೋಗುವ ಇಳಿವ ಮೆಟ್ಟಿಲು.
ನಾನು ಮಗಳಿಗೆ ಟಾರ್ಚ್ ತೆಗೆದುಕೊಳ್ಳುವಂತೆ ತಿಳಿಸಿದೆ
"ಅಪ್ಪ ಮೊಬೈಲ್ ನಲ್ಲಿ ಬೆಳಕು ಇದೆಯಲ್ಲ "ಎಂದಳು
"ಸರಿ ಹಿಂದೆ ಬಾ, ಹುಷಾರು ಎನ್ನುತ್ತ. ಗ್ರಿಲ್ ತೆಗೆದು ಮೆಟ್ಟಲು ಇಳಿಯಲು ಪ್ರಾರಂಬಿಸಿದೆ. ಹಿಂದೆ ಮೊಬೈಲ್ ಟಾರ್ಚ್ ಹಿಡಿದ ಮಗಳು. ಮೆಟ್ಟಿಲು ಮುಗಿಯಿತು, ಬಂಡೆಗಳ ಮೇಲೆ ಎಚ್ಚರದ ಹೆಜ್ಜೆ ಇಡುತ್ತಿದೆ. ಹತ್ತು ನಿಮಿಷ ದಾಟಿತೇನೊ, ಇಳಿಯುವುದು ಮುಗಿಯಿತು. ಕೆಳಗೆ ಗಂಗೆಯ ನೀರು ಹರಿಯುವುದು ಕೇಳಿಸುತ್ತಿತ್ತು.
ಮನದಲ್ಲಿಯೆ ನೆನೆದೆ. ಈ ಜೀವಿಯನ್ನು ಇಲ್ಲಿ ಬಿಟ್ಟು ಹೋಗುವೆ. ಈ ಜೀವಿಯಿಂದ ನನಗೆ ನನ್ನ ಸಂಸಾರಕ್ಕೆ ಏನು ತೊಂದರೆಯಾಗದಿರಲಿ. ಇದು ಸರಿಯೋ ತಪ್ಪೋ ತಿಳಿದಿಲ್ಲ. ನನ್ನ ಕ್ಷಮಿಸು ಎಂದು ದೇವರನ್ನು ಕೇಳುತ್ತ. ಆ ಕಬ್ಬಿಣದ ಪೆಟ್ಟಿಗೆಯನ್ನು ನಿಧಾನವಾಗಿ ನೀರಿನಲ್ಲಿ ಮುಳುಗಿಸಿಬಿಟ್ಟೆ. ಅದರಲ್ಲಿ ಒಳಗಿನಿಂದ ಕೂಗುವುದು ಆ ಗುಹೆಯಲ್ಲಿ ಸ್ವಷ್ಟವಾಗಿ ಕೇಳಿಸುತ್ತಿತ್ತು
"ಏ ನನ್ನನ್ನು ಎಲ್ಲಿ ಕರೆತಂದಿರುವೆ ಏನು ಮಾಡುತ್ತಿರುವೆ ನನ್ನನ್ನು ಬಿಟ್ಟು ಬಿಡು ನಾನು ಹೊರಟುಹೋಗುವೆ"
ಪೆಟ್ಟಿಗೆ ನಿಧಾನವಾಗಿ ನೀರಿನಲ್ಲಿ ಮುಳುಗಿಹೋಯಿತು. ಗುಳು ಗುಳು ಎನ್ನುವ ಶಬ್ದ ಸ್ವಲ್ಪ ಕಾಲ ನಂತರ ಅದು ನಿಂತಿತು.
ಕಣ್ಮುಚ್ಚಿ ಕೈಮುಗಿದು, ನಂತರ  ಮೇಲೆ ಬಂದೆವು, ಕೈಕಾಲು ತೊಳೆದು, ಮೇಲೆ ಬರುವಾಗ ಅಲ್ಲಿಯ ವಾಚ್ ಮನ್ ಕಾಣಿಸಿದ. ಆಶ್ಚರ್ಯ ಎನ್ನುವಂತೆ ಕೇಳಿದ
"ಇದೇನು ಸಾರ್ ಇಷ್ಟು ಬೆಳಗ್ಗೆ ಬೆಳಗ್ಗೆ ಇಲ್ಲಿ. ಇಷ್ಟು ಬೇಗ. ಎಲ್ಲಿಂದ ಬರುತ್ತಿರುವಿರಿ ನೀವು"
"ಇಲ್ಲಪ್ಪ ಬೆಂಗಳೂರಿಗೆ ಹೋಗುತ್ತಿದ್ದೆವು ಹಾಗೆ ದೇವರ ದರ್ಶನ ಮಾಡಿ ಹೋಗೋಣ ಅನ್ನಿಸಿತು ಬಂದುಬಿಟ್ಟೆವು. ಬಾಗಿಲು ಯಾವಾಗ ತೆರೆಯುತ್ತೆ"
ಅವನು ಹೇಳಿದ. ಆಗಲೆ ಶಾಸ್ತ್ರಿಗಳು ಬಂದು ದೇವರ ಗರ್ಭಗುಡಿ ಸ್ವಚ್ಚ ಗೊಳಿಸಿ, ದೀಪ ಹಚ್ಚುತ್ತಿದ್ದಾರೆ. ಒಳಗೆ ಹೋಗಿ"
ಒಳಗೆ ಹೋಗಿ ಮೂವರು ನರಸಿಂಹನ ದರ್ಶನ ಪಡೆದು., ಹೊರ ಬಂದಾಗ ಸೂರ್ಯ ಆಗಿನ್ನುಹುಟ್ಟುತ್ತಿದ್ದ. ಬೆಟ್ಟದ ತುದಿಯಿಂದ ಸುತ್ತಲ ಮಂಜು, ಮೋಡ ಹಸಿರು ಗುಡ್ಡಗಳು ಎಲ್ಲವು ಚಿತ್ತಾಕರ್ಷಕವಾಗಿ ಕಾಣುತ್ತಿದ್ದವು. ಅಲ್ಲಿಂದ ಹೊರಡುವಾಗಲೆ ಮಗಳು ಅಂದಳು
"ಅಪ್ಪಾಜಿ ಆದರೆ ಆ ಜೀವಿಗೆ ಮಾತನಾಡುವ ಶಕ್ತಿ ಇದೆ, ನನಗೇಕೊ ಅದು ಹೇಗೋ ತಪ್ಪಿಸಿಕೊಂಡು ಇಲ್ಲಿಂದ ಪುನಃ ಹೊರಟುಹೋಗುತ್ತೆ ಎಂದು ನನಗನ್ನಿಸುತ್ತೆ"
ಪತ್ನಿ ಅಂದಳು
'ಅದು ಹೇಳಿದ ಮಾತು ನಿಜವಿರಬಹುದೇನೊ, ನಿಧಿ ಅಲ್ಲಿ ಇತ್ತೊ ಏನೊ"
ಮಗಳು ಹೇಳಿದಳು
"ನಿಧಿ ಇರುವ ಮಾತು ಸತ್ಯವೆ ಇರಬಹುದು ಆದರೆ, ನಾವು ಕಷ್ಟಪಟ್ಟು ದುಡಿಯದ ಹಣ ನಮ್ಮನ್ನು ಸೇರಿದರೆ ಅದರಿಂದ ಒಳ್ಳೆಯದು ಆಗುತ್ತ ಅನ್ನುವ ನಂಬಿಕೆ ನನಗಿಲ್ಲ. ಅದರಿಂದ ತೊಂದರೆಯೆ ಅಲ್ಲವೆ ಅಪ್ಪ?" ಎಂದಳು
ನಾನು ಹೆಮ್ಮೆಯಿಂದ ಮಗಳ ಮುಖ ನೋಡಿದೆ.
..............................----------......

ಇದೆಲ್ಲ ಕಳೆದು ಮೂರು ವರ್ಷಗಳಾಗಿತ್ತು ಅನ್ನಿಸುತ್ತೆ
ಬೆಳಗ್ಗೆ ಎದ್ದು ಕಾಫಿ ಕುಡಿಯುತ್ತ ಕುಳಿತ್ತಿದ್ದೆ, ಆಗಿನ್ನು ಬಂದಿದ್ದ ಪೇಪರ್ ಮಗಳು ನೋಡುತ್ತಿದ್ದಳು. ಅಂದು ಬಾನುವಾರ ರಜಾ ಬೇರೆ.
"ಅಪ್ಪ ಇಲ್ಲಿ ನೋಡಿ ಓದಿ" ಜೋರಾಗಿ ಕೂಗುತ್ತ ಮಗಳು ಪತ್ರಿಕೆ ಕೊಟ್ಟಳು.
"ಬೆಂಗಳೂರಿನ ದಂಪತಿಗಳು ಚಿಕ್ಕಮಗಳೂರಿನ ಹತ್ತಿರ ಮರಣ" ಎನ್ನುವ ಶೀರ್ಷಿಕೆ. ಕುತೂಹಲದಿಂದ ಓದಿನೋಡಿದೆ
"ಬೆಂಗಳೂರಿನ ದಂಪತಿಗಳು ತಮ್ಮ ಒಬ್ಬಳೆ ಮಗಳೊಡನೆ ಚಿಕ್ಕಮಗಳೂರಿನ ಹತ್ತಿರದ ಇಪ್ಪತ್ತು ಕಿ.ಮೀ ದೂರದಲ್ಲಿರುವ ಒಂಟಿ ಮನೆಯ ಹತ್ತಿರ ಬಾವಿಯ ಬಳಿ ಶವವಾಗಿ ಸಿಕ್ಕಿದಾರೆ. ಅವಳ ಒಬ್ಬಳೆ ಮಗಳು ಸಹ ಅದೇ ರೀತಿ ಅವರ ಪಕ್ಕದಲ್ಲಿ ಶವವಾಗಿ ಮಲಗಿದ್ದಾಳೆ. ಬೆಂಗಳೂರಿನ ಈ ಮೂವರು ಅಷ್ಟು ದೂರದಿಂದ ಬಂದು, ಒಳ ರಸ್ತೆಯಲ್ಲಿರುವ ಈ ಮನೆಯ ಬಳಿ ಈ ರೀತಿ ಸತ್ತಿರುವುದು ಆಶ್ಚರ್ಯ ಹಾಗು ಕುತೂಹಲಕ್ಕೆ ಕಾರಣವಾಗಿದೆ. ಗಿರಿನಗರದಲ್ಲಿ ವಾಸವಾಗಿರುವ  ಮಂಜುನಾಥ(೫೦) ಮಂಜುಳ (೪೬) ಹಾಗು ಅವರ ಮಗಳು ಪೂರ್ಣಿಮಾ(೧೯) ಈ ಮೂವರು ಶುಕ್ರವಾರ ದೇವರಾಯನ ದುರ್ಗಕ್ಕೆ ಎಂದು ಹೇಳಿ ಕಾರಿನಲ್ಲಿ ಹೊರಟ್ಟಿದ್ದರು ಎಂದು ಅವರ ಮನೆಯವರು ತಿಳಿಸಿದ್ದಾರೆ. ದೇವರ ದರ್ಶನಕ್ಕೆ ಎಂದು ದೇವರಾಯನ ದುರ್ಗಕ್ಕೆ ಹೊರಟವರು, ಏಕೆ ಚಿಕ್ಕಮಗಳೂರಿನ ಹತ್ತಿರಕ್ಕೆ ಹೋದರು ಎಂದು ಮನೆಯವರೂ ಸಹ ಉತ್ತರಿಸಲಾಗದೆ ಇದ್ದಾರೆ. ಚಿಕ್ಕಮಗಳೂರಿನ ಪೋಲಿಸರು ಈ ಸಂಬಂಧ ವಿಚಾರಣೆ ನಡೆಸಿದ್ದಾರೆ"

3 comments:

  1. ಕೌತುಕಮಯ ಕಥೆ,ಹೇಳಿದ ರೀತಿ ತುಂಬಾ ಹಿಡಿಸಿತು.

    ReplyDelete
  2. ಸದ್ಯ ಬೆಳಿಗ್ಗೆ ಓದಿದೆ ಸಾರ್, ರಾತ್ರಿ ಓದಿದ್ದಾರೆ ನನ್ನ ಗತಿ?

    "ನಾವು ಕಷ್ಟಪಟ್ಟು ದುಡಿಯದ ಹಣ ನಮ್ಮನ್ನು ಸೇರಿದರೆ ಅದರಿಂದ ಒಳ್ಳೆಯದು ಆಗುತ್ತ ಅನ್ನುವ ನಂಬಿಕೆ ನನಗಿಲ್ಲ." ಎನ್ನುವ ಮಗಳ ಮಾತು ಮನಸ್ಸಿಗೆ ನಾಟಿತು.

    ReplyDelete
  3. ಕಥೆ ಮನಸ್ಸಿಗೆ ನಾಟುವಂತಿದೆ

    ReplyDelete

enter your comments please