Friday, September 13, 2013

ಕೃಷ್ಣ..ಕೃಷ್ಣ..ಕೃಷ್ಣ.. - ಉಡುಪಿ ಸಮುದ್ರ ತೀರ





ಪೀಠಿಕೆ:
ಇದೊಂದು ಕಲ್ಪನ ಬರಹ.  ನಾವು ದೇವರುಗಳ ಬಗ್ಗೆ ಮಾತನಾಡುವೆವು ವಿನಃ ಆ ದೇವತೆಗಳು ಎಂದಿಗೂ ನಮ್ಮೆದಿರು ನಿಂತು ಮಾತನಾಡುವದಿಲ್ಲ ಎನ್ನುವುದು ಸತ್ಯ. ಒಮ್ಮೆ ಆ ದೈವ ಯಾರದರು ಎದುರಿಗೆ ನಿಂತು ಮಾತನಾಡಿದರು ಅದು ಎಲ್ಲರಿಗು ತಿಳಿಯವುದು ಇಲ್ಲ   :-) .
ಹಾಗಿರುವಾಗ ಆ ಕೃಷ್ಣನಿಗೆ ತನ್ನ ಭಾವನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಅನಿಸಿದರೆ ? . ಅವನಿಗೆ ಜೊತೆಯಾದರು ಯಾರಿರುವರು ಅದಕ್ಕೆ ಮತ್ತೊಂದು ದೈವವನ್ನು ಕರೆಸಬೇಕಾಯಿತು ನನ್ನ ಬರಹಕ್ಕೆ. ಅಂತಹ ಇಬ್ಬರು ದೇವತೆಗಳ ಸಂವಾದ ಅಥವ ಸಂಭಾಷಣೆಯೆ ಈ ಬರಹ ‘ಕೃಷ್ಣ ಕೃಷ್ಣ ಕೃಷ್ಣ.’.  ಇಲ್ಲಿ ಯಾರದೆ ನಿಂದನೆಯಿಲ್ಲ. ಅಥವ ಯಾರ ಮಾತಿಗೂ ಉತ್ತರ ಕೊಡಲು ಈ ಬರಹ ಬರೆದಿರುವದಲ್ಲ. ನನ್ನ ಮನಸಿನ ಅನಿಸಿಕೆಗಳನ್ನು ಕೃಷ್ಣನ ಜೀವನದ ಘಟನೆಗಳನ್ನು ಯೋಚಿಸುತ್ತ ಬರೆದಿರುವುದು. ಇದು ನನ್ನ ಪ್ರಶ್ನೆಗಳಿಗೆ ನಾನೆ ಉತ್ತರ ಕಂಡುಕೊಳ್ಳುವ ಪ್ರಯತ್ನ. ಹಾಗೆ ಹೊರಗಿನ ಪ್ರಶ್ನೆಗಳಿಗೂ ಉತ್ತರ ಯೋಚಿಸುವ ಒಂದು ಪ್ರಯತ್ನ.


 ಇದನ್ನು ಗಂಭೀರ ಚಿಂತನೆಯ ರೂಪದಲ್ಲೆ ಓದುವ ಅಗತ್ಯವಿಲ್ಲ. ಬರಹದಲ್ಲಿರುವ ವಿಡಂಭನೆ ಹಾಗು ಹಾಸ್ಯವು ಎಲ್ಲರಿಗೂ ಇಷ್ಟವಾಗುವದೆಂಬ ನಂಬಿಕೆ ನನ್ನದು. …….  ಸರಿ ಬನ್ನಿ ಉಡುಪಿಗೆ ಹೋಗೋಣ



ಕೃಷ್ಣ..ಕೃಷ್ಣ..ಕೃಷ್ಣ.. (1)
===========


ಉಡುಪಿಯ ಕಡಲ ಕಿನಾರೆ. ಸಂಜೆಯ ಸೂರ್ಯನ ಸೊಭಗಿನ ಕಿರಣಗಳು ದಡದ ಮೇಲೆಲ್ಲ ಹರಡಿ, ಕಡಲ ತಡಿಯ ಮರಳೆಲ್ಲ ಚಿನ್ನದ ಹುಡಿ ಹರಡಿದಂತೆ ಕಾಣಿಸುತ್ತಿತ್ತು. ಸೂರ್ಯನು ದಿಗಂತದ ಅಂಚಿನಲ್ಲಿ ನಿಂತು, ಕೆಳಗೆ ದುಮುಕಿದರೆ ಕತ್ತಲೆ ಇದೆಯಲ್ಲ ಎಂದು ಹೆದರುವನಂತೆ ಇಣುಕಿನೋಡುತ್ತಿದ್ದ.  ಸಂಜೆಯ ಸೂರ್ಯನ ಈ ಆಟವನ್ನು ವಿಕ್ಷಿಸುತ್ತ ಇಬ್ಬರು ಬಾಲಕರ ಸಮುದ್ರದ ದಡದಲ್ಲಿ ಇದ್ದು ನೋಡುತ್ತಿದ್ದರು. ಒಬ್ಬ ಬಾಲಕ ಸ್ವಲ್ಪ ದಡೂತಿಯೆ, ತನ್ನ ಬಾರಿ ದೇಹವನ್ನು ಹೊರಲಾರೆ ಎಂಬಂತೆ ಮರಳ ಮೇಲೆ ಕಾಲು ಚಾಚಿ ಕುಳಿತ್ತಿದ್ದ. ಮತ್ತೊಬ್ಬ ಬಾಲಕ ನೋಡಲು ಸ್ಲಲ್ಪ ಕಪ್ಪೆನಿಸಿದರು, ಮತ್ತೆ ಮತ್ತೆ ನೋಡಬೇಕು ಎನಿಸುವ ಆಕರ್ಷಣೆ ಇರುವಂತಹವನು , ಅವನು ಮೊದಲ ಬಾಲಕನಿಂದ ಸ್ವಲ್ಪ ದೂರಕ್ಕೆ ಕಾಲು ಚಾಚಿ ಕುಳಿತು, ಸಣ್ಣ ಕಲ್ಲುಗಳನ್ನು ಕಪ್ಪೆಚಿಪ್ಪನ್ನು ಆರಿಸಿ ಸಮುದ್ರಕ್ಕೆ ಎಸೆಯುತ್ತಿದ್ದ.  ಸಮುದ್ರ ರಾಜನು ಸ್ವಲ್ಪ ಸಂತಸದಿಂದ ಇರುವಂತೆ ಕಾಣಿಸುತ್ತ ಇತ್ತು. ಅವನ ನವಿರಾದ ಅಲೆಗಳು, ನಿಧಾನಕ್ಕೆ ಬಂದು ಇಬ್ಬರು ಬಾಲಕರ ಕಾಲುಗಳನ್ನು ಪದೆ ಪದೆ ತೊಳೆಯುತ್ತ ಮತ್ತೆ ಹಿಂದೆ ಸರಿಯುತ್ತಿತ್ತು.


ಹೌದು ಇಬ್ಬರು ಬಾಲಕರು ಸಾಮಾನ್ಯರಲ್ಲ, ಒಬ್ಬ ಗೋಕರ್ಣದಲ್ಲಿ ನೆಲೆನಿಂತಿರುವ ಬಾಲಕ ಗಣಪ, ಮತ್ತೊಬ್ಬ ಉಡುಪಿಯ ದೇಗುಲದಲ್ಲಿ ನೂರಾರು ವರ್ಷಗಳಿಂದ ನಿಂತು ಪೂಜೆ ಸ್ವೀಕರಿಸುತ್ತಿರುವ ಬಾಲಕ ಕೃಷ್ಣ. ಅದೇನೊ ಮೌನ ಇಬ್ಬರ ನಡುವೆ ಮನೆಮಾಡಿತ್ತು.
ದೀರ್ಘ ಮೌನದ ನಂತರ ಗಣಪ ನಗುತ್ತ ನುಡಿದ
"ಅದೇನು ಕೃಷ್ಣ ಅಷ್ಟೊಂದು ಮೌನ, ಚಿಂತನೆ, ಬಹುಷಃ ನೀನು ಅವತಾರಕಾಲದಲ್ಲಿಯು ಇಷ್ಟು ಚಿಂತನೆ ನಡೆಸಿರಲಿಲ್ಲ ಅನ್ನಿಸುತ್ತೆ"


ಕೃಷ್ಣ ಸಹ ನಗುತ್ತ ಹೇಳಿದ


"ಬಹುಷಃ ಹಾಗೆ ಹಾಗಿದೆ ಗಣಪ, ಇಲ್ಲಿ ಪ್ರತಿ ದಿನ ಮನುಷ್ಯ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ , ದುಃಖವೆನಿಸುತ್ತೆ. ಅಧಿಕಾರ ಹಣ ಹೆಣ್ಣು ಕುಡಿತ ಲೋಕವನ್ನೆಲ್ಲ ವ್ಯಾಪಿಸಿದೆ. ಅರ್ಥವಿಲ್ಲದ ದ್ವೇಷ ದೇಶವನ್ನೆಲ್ಲ ಆವರಿಸಿದೆ. ಒಬ್ಬರು ಮತ್ತೊಬ್ಬರನ್ನು ನಂಬುವದಿಲ್ಲ  ಜಾತಿ ಜಾತಿಯ ನಡುವೆ , ಮತಗಳ ನಡುವೆ ಅನುದಿನ ಹೊಡೆದಾಟ. ಎಲ್ಲಿ ಅಂದರೆ ಅಲ್ಲಿ ಸ್ಪೋಟಿಸುವ ಬಾಂಬ್ ಗಳು ಮತ್ತೆ ಮರುದಿನ ಏನು ಆಗಲಿಲ್ಲ ಎನ್ನುವಂತೆ ಓಡಾಡುವ ಜನ. ಮತ್ತೆ ರಾಕ್ಷಸ ರಾಜ್ಯ ತಲೆ ಎತ್ತಿದೆಯ ಅನ್ನುವ ಸಂದೇಹ ಕಾಡುತ್ತದೆ. ನೀನಾದರೆ ವರುಷಕ್ಕೊಂದು ದಿನ ಇಲ್ಲಿ ಬಂದು ಹೋದರೆ ಮುಗಿಯಿತು , ಅವರು ಕೊಡುವ ಪ್ರಸಾದ ಸ್ವೀಕರಿಸಿ , ಆಶೀರ್ವಾದ ಮಾಡಿ ಹೊರಟರೆ ಆಯಿತು , ಒಂದು ತರಕ್ಕೆ ಸುಖ " ಎಂದ ಕೃಷ್ಣ ಗಣಪನನ್ನು ರೇಗಿಸುತ್ತ
(೧೧-೦೬-೨೦೧೩)


ಮುಂದುವರೆಯುವುದು…..

1 comment:

  1. opening ಚೆನ್ನಾಗಿದೆ, ಇನ್ನೂ ಶುರುವಾಗಲೀ ಬೆನಕ - ಕಿಟ್ಟಪ್ಪ ಸಂವಾದ ಪ್ರಹಸನಗಳು :)

    ReplyDelete

enter your comments please