ಕಥೆ : ಇಳಿದು ಬಾ ತಾಯಿ
ಸಗರ
ತ್ರೇತಾಯುಗದಲ್ಲಿದ್ದ ಸೂರ್ಯವಂಶದ ಚಕ್ರವರ್ತಿ. ಶ್ರೀರಾಮನಿಗಿಂತ ಹಿಂದಿನ ತಲೆಮಾರಿನವ. ಸಗರ ಚಕ್ರವರ್ತಿಗೊಂದು ಆಸೆ ನೂರು ಅಶ್ವಮೇಧಯಾಗಗಳನ್ನು ಮಾಡಬೇಕೆಂದು. ಹಾಗೆ ನೂರು ಅಶ್ವಮೇದಯಾಗಗಳನ್ನು ನಡೆಸಿದಲ್ಲಿ ಅವನು ಇಂದ್ರಪದವಿಗೆ ಅರ್ಹನಾಗುತ್ತಿದ್ದ. ಚಕ್ರವರ್ತಿ ಮನಸ್ಸು ಮಾಡಿದರೆ ಏನು ಕಷ್ಟ. ತೊಂಬತ್ತಂಬತ್ತು ಅಶ್ವಮೇದಯಾಗಗಳು ನಿರಾಂತಕವಾಗಿ ನೆರವೇರಿದವು. ನೂರನೆ ಅಶ್ವಮೇಧಯಾಗದ ಯಜ್ಞದ ಕುದುರೆಯನ್ನು ಸ್ವತಂತ್ರವಾಗಿ ಬಿಡಲಾಗಿತ್ತು ದಿಗ್ವಿಜಯದ ಸಂಕೇತವಾಗಿ.
ಅತ್ತ ದೇವಲೋಕದ ಇಂದ್ರನಿಗೆ ಎಂತದೋ ಸಂಕಟ, ಸಗರನು ಯಾಗ ಮುಗಿಸಿಬಿಟ್ಟಲ್ಲಿ ತನಗೆ ಸರಿಸಮಾನನಾಗುವನು, ಅವನು ಇಂದ್ರಪದವಿಗೆ ಅರ್ಹನಾಗುವನು. ಇಂದ್ರನು ಒಂದು ಕುತಂತ್ರದ ಆಟ ಹೂಡಿದ. ಯಜ್ಞದ ಕುದುರೆಯನ್ನು ಅಪಹರಿಸಿದ, ನಂತರ ಪಾತಾಳದಲ್ಲಿ ತಪಸ್ಸು ಮಾಡುತ್ತ ಕುಳಿತಿದ್ದ, ಇಹಲೋಕವನ್ನೆ ಮರೆತಿದ್ದ ಕಪಿಲ ಮುನಿಯ ಆಶ್ರಮದಲ್ಲಿ ಕುದುರೆಯನ್ನು ಅಡಗಿಸಿಟ್ಟ. ನಂತರ ಕುದುರೆ ಆಶ್ರಮದಲ್ಲಿರುವ ಸುದ್ದಿ ಸಗರನಿಗೆ,ಅವನ ಪುತ್ರರಿಗೆ ತಲುಪುವಂತೆ ನೋಡಿಕೊಂಡ.
ಸಗರನಿಗೆ ಅರವತ್ತು ಸಾವಿರ ಮಕ್ಕಳು ರಾಣಿ ಸುಮತಿಯಿಂದ ಜನಿಸಿದವರು. ಹಾಗೆ ಮತ್ತೊಬ್ಬ ಮಗ ಅಸಮಂಜ ರಾಣಿ ಕೇಶಿನಿಗೆ ಜನಿಸಿದವನು.ಯಜ್ಞದ ಕುದುರೆ ಮಾಯವಾದ ವಿಷಯ ಸಗರನನ್ನು ಕೆರಳಿಸಿತು. ತನ್ನ ಮಕ್ಕಳನ್ನು ಕರೆದು ಹುಡುಕುವಂತೆ ಅಜ್ಞೆ ನೀಡಿದ. ಎಲ್ಲರೂ ಅಪ್ಪನ ಯಜ್ಞದ ಕುದುರೆಯನ್ನು ಹುಡುಕುತ್ತ ಹೊರಟರು. ಕಪಿಲ ಮುನಿಯ ಆಶ್ರಮವನ್ನು ಸೇರಿದರು.
ಅಲ್ಲಿದ್ದ ಯಜ್ಞದ ಕುದುರೆಯನ್ನು ಕಂಡರು.
ಆತುರಗಾರನಿಗೆ ಬುದ್ದಿ ಕಡಿಮೆ ಎನ್ನುವುದು ಸುಳ್ಳಲ್ಲ. ರಾಜಕುಮಾರರೆಲ್ಲ ಕಪಿಲ ಮುನಿಯೆ ಕುದುರೆ ಕದ್ದು ಅಡಗಿಸಿರುವನೆಂದು ಭಾವಿಸಿದರು, ಅವನನ್ನು ತಪಸ್ಸಿನಿಂದ ಎಚ್ಚರಿಸಿದರು. ಕಠೋರ ತಪದಲ್ಲಿ ಮುಳುಗಿದ್ದ ಕಪಿಲಮುನಿಗೆ ರಾಜಕುಮಾರರ ಅವಿವೇಕ ಕೆರಳಿಸಿತು,
ಒಂದು ಹೂಂಕಾರ ಅಷ್ಟೆ
ಎಲ್ಲ ಅರವತ್ತು ಸಾವಿರದ ಒಂದು ರಾಜಕುವರರು ನಿಂತಲ್ಲೆ ಭಸ್ಮವಾದರು.
***************
2020 ರ ಡಿಸೆಂಬರ್ ತಿಂಗಳ 21 ನೇ ದಿನ
ಭೂಮಿಯಲ್ಲಿನ ಜೀವಿಗಳಿಗೆ ಅಘಾತವೊಂದು ಕಾದಿತ್ತು.
ತಾನೆ ಮಾಡಿದ ತಪ್ಪಿಗೆ ತಾನೆ ಬಲಿಯಾಗಿ ನಾಶವಾಗುವ ಅಂಚಿಗೆ ಬಂದು ನಿಂತಿತ್ತು ಮನುಕುಲ.
ಚೀನದೇಶದವರು ಸುಮಾರು ಎರಡು ವರುಷಗಳಿಂದ ರಹಸ್ಯವಾಗಿ ಪ್ರಯೋಗ ಒಂದನ್ನು ನಡೆಸಿದ್ದರು. ಪದೇ ಪದೇ ಆಗುತ್ತಿರುವ ಭೂಕಂಪನದ ಅಧ್ಯಯನದ ಅಂಗವಾಗಿ ಭೂಮಿಯ ಆಳದವರೆಗಿನ ವಿವಿದ ಕಲ್ಲಿನ ಮಣ್ಣಿನ ಪದರಗಳನ್ನು ಪರೀಕ್ಷಿಸಲು ಹೊರಟಿದ್ದರು. ಅದಕ್ಕಾಗಿ ಅಗಾದ ಹಿಂದೂಮಹಾಸಾಗರದಲ್ಲಿ ಇಂಡೋನೇಶಿಯಾದ ಮೇಲ್ಭಾಗದಲ್ಲಿ ತನ್ನ ನೆಲದ ಸಮೀಪಕ್ಕೆ ಸಮುದ್ರಮಧ್ಯ ನೆಲವನ್ನು ಕೊರೆಯುತ್ತ, ಸೂಪರ್ ಬೋರ್ ವೆಲ್ ಒಂದನ್ನು ಕೊರೆಯಲು ಹೊರಟಿದ್ದರು.
ಮೆಟ್ರೋ ರೈಲಿನ ಸುರಂಗ ನಿರ್ಮಿಸಲು ಬಳಸುವ ಕಟರ್ ಹೆಡ್ ನಂತಹ ದೊಡ್ಡ ಯಂತ್ರಗಳು ಭೂಮಿಯ ಆಳಕ್ಕೆ ನಿಧಾನಕ್ಕೆ ಸಾಗಿದ್ದವು, ಸುಮಾರು ಎರಡು ವರ್ಷಗಳ ಕಾಲ ಹಾಗೆ ಕೆಳೆಗೆ ಸಾಗುತ್ತಿದ್ದ ಆ ಬೋರ್ ವೆಲ್ ಸಾಧನಗಳು ಭೂಮಿಯ ಒಳಗೆ ಸಾಗುತ್ತ ಸುಮಾರು ಮೂವತ್ತು ಕಿಮೀಗಿಂತ ಹೆಚ್ಚಿನ ಆಳ ತಲುಪಿದ್ದವು. ಹಿಂದೊಮ್ಮೆ ಇಂತಹುದೆ ಪ್ರಯೋಗ ಸಣ್ಣಪ್ರಮಾಣದಲ್ಲಿ ಯೂರೋಪಿನಲ್ಲಿ ನಡೆದು, ಜನಗಳ ಒತ್ತದಿಂದ ಮಧ್ಯದಲ್ಲಿಯೆ ಕೈಬಿಡಲಾಗಿತ್ತು. ಆದರೆ ಚೀನಿಯರು ಇಂತಹ ಹೊರಗಿನ ಒತ್ತಡಕ್ಕೆಲ್ಲ ಸೊಪ್ಪುಹಾಕುವರಲ್ಲ.
ಭೂಮಿಯ ವಿವಿದ ಪದರಗಳ ವಿವರ ಪಡೆಯುತ್ತ ಮತ್ತೆ ಮುಂದುವರೆಯುತ್ತಿರುವಂತೆ ಅವರಿಗೆ ಸಣ್ಣ ಆಶ್ಚರ್ಯ ಕಾದಿತ್ತು, ಯಂತ್ರಕ್ಕೆ ಯಾವುದೆ ಮಣ್ಣು ಅಥವ ಕಲ್ಲು ಸಿಗದೆ ಖಾಲಿ ಜಾಗದಲ್ಲಿ ಯಂತ್ರದ ಮುಂಬಾಗ ತಿರುಗುತ್ತ ಮುಂದೆ ಹೋಗುತ್ತಿರುವಂತೆ ಅವರಿಗೆ ಕಾಣಿಸಿತು, ಮೊದಲು ಎಂತಹುದೋ ಒಂದು ಖಾಲಿ ಜಾಗ ನಡುವಿನಲ್ಲಿ ಇರಬೇಕೆಂದು ಅವರು ಭಾವಿಸಿದರಾದರು, ಯಂತ್ರ ಬಹಳ ದೂರ ಸಾಗಿದಾಗಲು ಮಣ್ಣು ಕಲ್ಲು ಸಿಗದೆ ಹೋದಾಗ ಅವರು ಕೆಲಸ ನಿಲ್ಲಿಸಿ, ಕ್ಯಾಮರಗಳನ್ನು ಬಳಸಿ ನೋಡಿದರು. ಅವರಿಗೆ ಆಶ್ಚರ್ಯ ಕಾದಿತ್ತು, ಭೂಮಿಯ ಒಡಲಾಳದಲ್ಲಿ , ಆ ಆಳದಲ್ಲಿ , ಅಗಾದವಾದ ಖಾಲಿ ಜಾಗವಿದ್ದು ಅದು ಸುತ್ತಲು ಶಿಲಾ ಪದರದಿಂದ ಸುತ್ತುವರೆಯಲ್ಪಟ್ಟಿತ್ತು.
ಆ ಖಾಲಿಜಾಗದ ಸುತ್ತಳತೆ ಹಾಗು ಗಾತ್ರ ಅವರ ಅರಿವಿಗೆ ಬರಲಿಲ್ಲ. ಹಾಗೆ ಅಂತಹ ಶೂನ್ಯ ಜಾಗವೊಂದು ಭೂಮಿಯಒಳಗೆ ಏಕೆ ನಿರ್ಮಾಣವಾಯಿತೆಂದು ಅವರು ಪರೀಕ್ಷಿಸುತ್ತ ಇರುವಂತೆ ಅನಾಹುತ ಜರುಗಿಹೋಗಿತ್ತು. ಇವರು ಯಂತ್ರ ಬಳಸಿ ಕೊರೆಯುತ್ತಿದ್ದ ಆ ಭಾಗ ಕುಸಿಯಲು ಪ್ರಾರಂಭವಾಯಿತು, ಕಲ್ಲುಗಳ ನಡುವೆ ಅದೇನು ಬಿರುಕು ಇತ್ತೊ ಇವರು ನಿರೀಕ್ಷಿಸುವ ಮೊದಲೆ, ಇವರ ಯಂತ್ರಗಳೆಲ್ಲ ಭೂಮಿಯ ಆಳವನ್ನು ಸೇರಿತ್ತು, ಮೇಲಿನಿಂದ ಮಣ್ಣು ಕಲ್ಲು ಕುಸಿಯುತ್ತಿರುವಂತೆ, ಅಗಾದ ವೇಗದಲ್ಲಿ ಸಮುದ್ರದ ನೀರು ಒಳನುಗ್ಗಿ ಕಣ್ಮರೆಯಾಗುತ್ತಿತ್ತು. ಅಷ್ಟು ವೇಗದಲ್ಲಿ ಸಮುದ್ರದ ನೀರು ಆಳ ಕಣಿವೆಯ ಒಳಗೆ ಇಳಿಯುತ್ತಿರುವಂತೆ, ಸಮುದ್ರದಲ್ಲಿ ಹತ್ತು ಕಿಮೀಗಿಂತ ಹೆಚ್ಚಿನ ವ್ಯಾಸದ ಸುಳಿ , ಅತೀ ವೇಗದಲ್ಲಿ ಸುತ್ತಲು ಪ್ರಾರಂಭಿಸಿತು, ಆ ಸುಳಿಯ ಕೊನೆ , ನೀರು ನುಗ್ಗುತ್ತಿರುವ ಚೀನಿಯರು ಕೊರೆದ ಕುಸಿಯುತ್ತಿರುವ ಬೋರ್ ವೆಲ್ ಆಗಿತ್ತು. ನಂತರ ಯಾರು ನಿರೀಕ್ಷಿಸಿದಂತೆ ಆ ಮಹಾಸುಳಿಯ ಪರಿಣಾಮ ಚೀನದ ಸಮುದ್ರದಡದಲ್ಲಿ ಅಗಾದವಾದ ದೈತ್ಯಾಕಾರದ ಬೀಮ ಸ್ವರೂಪಿ ಅಲೆಗಳು ಅಪ್ಪಳಿಸಲು ಮೊದಲಿಟ್ಟವು. ಸಮುದ್ರದಡದ ಹಳ್ಳಿ ಪಟ್ಟಣಗಳು ನೋಡ ನೋಡುತ್ತಿರುವಂತೆ ನಿರ್ನಾಮವಾದವು.
ಇಂತಹ ಘಟನೆ ಕ್ಷಣಕಾಲ ನಡೆದು ನಿಲ್ಲುವಂತೆ ಕಾಣಲಿಲ್ಲ. ಸಮುದ್ರದ ನೀರು ಆ ಭೀಕರವಾದ ಕುಸಿದ ತಾಣದಲ್ಲಿ ಬಸಿದು ಹೋಗುತ್ತಿತ್ತು. ಎಲ್ಲ ವಿಜ್ಞಾನಿಗಳು, ಇಂಜಿನೀಯರ್ ಗಳು ಅಸಾಹಾಯಕರಾಗಿ ಇರುವಂತೆ ಹೊರಗಿನ ಪ್ರಪಂಚಕ್ಕೆ ಸುದ್ದಿ ಹಬ್ಬಿ ಎಲ್ಲರೂ ಕಂಗಲಾದರು. ಪ್ರಪಂಚವೆಲ್ಲ ಚೀನವನ್ನು ದೂಷಿಸುತ್ತಿದ್ದರು, ಸಹ ಯಾವುದೇ ಪ್ರಯೋಜನ ಇರದಂತೆ ಕಣ್ಣ ಎದುರಿಗೆ ಸಮುದ್ರದ ನೀರು , ಮನೆಯ ತೊಟ್ಟಿಯಲ್ಲಿನ ನೀರಿನಂತೆ ಖಾಲಿಯಾಗುತ್ತಿತ್ತು, ಯಾವುದೋ ದೊಡ್ಡ ಮೋಟಾರ ಹಾಕಿ ಎಳೆಯುತ್ತಿರುವಂತೆ , ಸಮುದ್ರದ ನೀರಿನ ಮಟ್ಟ ಕುಸಿಯುತ್ತಿತ್ತು, ಅಷ್ಟೆ ಅಲ್ಲ ಸುತ್ತಲು ಸುತ್ತಿತ್ತಿದ್ದ ಹಡಗು ಸಣ್ಣದೋಣಿಗಳು ಆ ಕಡೆಗೆ ಸೆಳೆಯುತ್ತಿದ್ದು, ಅವರ ಪ್ರಯತ್ನವೆಲ್ಲ ವ್ಯರ್ಥವಾಗುವಂತೆ ಹಲವಾರು ದೋಣಿಗಳು ಸಹ ನೀರಿನ ಸೆಳೆತಕ್ಕೆ ಸಿಕ್ಕಿ ನಿರ್ಮಾಣವಾಗಿದ್ದ ಆ ಆಳ ದೊಗರಿನೊಳಗೆ ಕಣ್ಮರೆಯಾದವು.
ಈಗ ಎಲ್ಲರೂ ದೇವರನ್ನು ನೆನೆಯುತ್ತಿದ್ದರು, ಆ ಮಹಾರಂದ್ರ ತಾನಾಗೆ ಮುಚ್ಚಿಕೊಳ್ಳಬೇಕೆ ವಿನಃ ಮನುಷ್ಯ ಪ್ರಯತ್ನಕ್ಕೆ ಹೊರತಾಗಿದ್ದು, ಎಲ್ಲರನ್ನೂ ಈಗ ಕಾಡುತ್ತಿದ್ದ ಪ್ರಶ್ನೆ ಎಂದರೆ ನೀರೆಲ್ಲ ಮಾಯವಾದರೆ ಮುಂದಿನ ಗತಿ ಏನು. ಎಲ್ಲರ ಯೋಚನೆಯನ್ನು ಮೀರಿ, ಐದನೆ ದಿನಕ್ಕೆ ಅ ಮಹಾರಂದ್ರ ಸಮುದ್ರದಲ್ಲಿ ಕೊಚ್ಚಿಬರುತ್ತಿರುವ ಮಣ್ಣು ಕಲ್ಲುಗಳಿಂದ ಮುಚ್ಚಿಕೊಳ್ಳುತ್ತಿತ್ತು. ಸುಮಾರು ಹತ್ತು ದಿನಗಳವರೆಗೂ ನಡೆದ ಅ ಮಹಾ ವರುಣ ಯಜ್ಞದಲ್ಲಿ , ನೀರು ನುಗ್ಗುವುದು ನಿಂತಿತು ಎಂದು ಎಲ್ಲರು ಅಂದುಕೊಳ್ಳುವ ಹೊತ್ತಿಗೆ, ಸಮುದ್ರದ ನೀರು ಬಹುತೇಕ ಬಸಿದು ಹೋಗಿತ್ತು. ಎಲ್ಲರೂ ಅಂದುಕೊಳ್ಳುವಂತೆ, ಅದು ಈಗ ಕೇವಲ ಚೀನಕ್ಕೆ ಸಂಬಂದಿಸಿದ ವಿಷಯವಾಗಿರಲಿಲ್ಲ, ಸಮುದ್ರ ಒಂದಕೊಂದು ಬೆಸಿದಿದ್ದ ಪರಿಣಾಮ, ಸಪ್ತಸಾಗರ ಎಂದು ನಾವು ಭಾವಿಸುವ ಎಲ್ಲ ಸಮುದ್ರಗಳ ನೀರು ಬಹುತೇಕ ಖಾಲಿಯಾಗಿ ಹೋಗಿತ್ತು, ಎಲ್ಲ ದೇಶಗಳಲ್ಲಿ ಸಮುದ್ರದ ದಡ ಹತ್ತರಿಂದ ನೂರಾರು ಕಿ.ಮೀ ವರೆಗೂ ಹಿಂದಕ್ಕೆ ಸರಿದಿತ್ತು.
ಕೆಲವು ಆಶ್ಚರ್ಯಗಳು ಕಾದಿದ್ದವು, ಈಗ ಶ್ರೀಲಂಕ ನೀರಿನಿಂದ ಸುತ್ತುವರೆದಿರಲಿಲ್ಲ, ಭಾರತದಿಂದ ಶ್ರೀಲಂಕಾಗೆ ನೆಲದ ಮೇಲೆ ನಡೆದುಹೋಗಬಹುದಿತ್ತು, ಭಾರತದ ಸುತ್ತಲಿನ ಹಲವು ದ್ವೀಪಗಳಿಗೆ ಅದೇ ಗತಿ. ಭಾರತವಷ್ಟೆ ಅಲ್ಲದೆ, ಪ್ರಪಂಚದ ಎಲ್ಲ ಭಾಗಗಳಲ್ಲಿ ಈ ಪರಿಸ್ಥಿತಿ ಏರ್ಪಟ್ಟಿದ್ದು, ಸಮುದ್ರ ತನ್ನ ಮೊದಲಿನ ಗಾತ್ರದಲ್ಲಿ ಕುಸಿದು ಹೋಗಿತ್ತು, ಮೊದಲಿದ್ದ ಪ್ರಮಾಣದ ನೀರಿನ ಅರ್ಧ ಬಾಗವು ಇರಲಿಲ್ಲ.
ಭೂಮಿಯ ಆಳಕ್ಕೆ ಸೇರಿಹೋದ ಆ ನೀರು ಏನಾಯಿತು ಎಂದು ತಿಳಿಯಲು ಆಗಲಿಲ್ಲ. ಅದು ಭೂಮಿಯ ಅಂತರ್ಜಲದ ಮಟ್ಟವನ್ನು ಮೀರಿದ್ದಾಗಿದ್ದು, ಒಳಗೆ ಸೇರಿಹೋಗಿ, ಒಳಗಿನ ಬಿಸಿಯಿಂದ ಬಹುತೇಕ ಆವಿಯಾಗಿ , ಒಳಗೆ ಒತ್ತಡವನ್ನು ಉಂಟು ಮಾಡುತ್ತಿತ್ತು, ಪರಿಣಾಮ ಎನ್ನುವಂತೆ ಚೀನ ಹಾಗು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ಭೂಕಂಪದ ಪ್ರಮಾಣ ಮೊದಲಿಗಿಂತ ಹೆಚ್ಚಾಗಿತ್ತು
*****************
ಭಗೀರಥ
ಕುದುರೆಯನ್ನು ಹುಡುಕುತ್ತ ಹೊರಟ ರಾಜಕುಮಾರರು ಬರದಿರಲು ರಾಜ ಸಗರ ಚಿಂತಿತನಾದ. ಕಡೆಗೊಮ್ಮೆ ತನ್ನ ಮಕ್ಕಳೆಲ್ಲ ಕಪಿಲಮುನಿಯ ಕೋಪಕ್ಕೆ ಬಲಿಯಾದ ವಿಷಯ ತಿಳಿಯಿತು. ತನ್ನ ಮೊಮ್ಮಗ ಅಂಶುಮಾನನನ್ನು ಕಪಿಲ ಮುನಿಯ ಬಳಿಗೆ ಕಳಿಸಿದ. ಅಂಶುಮಾನನು ನಡೆದ ವಿಷಯವನ್ನು ಮುನಿಯಿಂದ ತಿಳಿದು, ತನ್ನ ತಂದೆ ಚಿಕ್ಕಪ್ಪಂದಿರ ಅವಿವೇಕಕ್ಕೆ ಮರುಗುತ್ತ ಇರುವಾಗ ಕಪಿಲ ಮುನಿ ಹೇಳಿದ, ದೇವಲೋಕದ ಗಂಗೆ ಇಲ್ಲಿ ಅವತರಿಸಿ, ಅಲ್ಲಿರುವ ರಾಜಕುವರರ ಬೂದಿ ಮೂಳೆಗಳನ್ನು ತೊಳೆದರೆ ಅವರಿಗೆಲ್ಲ ಸದ್ಗತಿ ದೊರೆಯುವುದು.
ದೇವಲೋಕದ ಗಂಗೆಯನ್ನು ಭೂಮಿಗೆ ಕರೆಸುವರಾದರು ಯಾರು?
ಸೂರ್ಯವಂಶದಲ್ಲಿ ತಲೆಮಾರುಗಳು ಕಳೆಯಿತು, ಸಗರನ ವಂಶಜರಾದ ದಿಲೀಪ , ಕಲ್ಮಶಪಾದರ ಕಾಲವಾಯಿತು. ಇವರ ನಂತರ ಬಂದವನೇ ಭಗೀರಥ
*****************************
ನೀರಿಗಾಗಿ ನಭದತ್ತ
2025 ರ ವರ್ಷ , ಆಗೆಲ್ಲ ನೀರಿನ ಕೊರತೆ ವಿಶ್ವವನ್ನು ಕಾಡುತ್ತಿತ್ತು. ನೀರಿಗಾಗಿ ದೇಶಗಳ ನಡುವೆ ಯುದ್ದಗಳು ನಡೆದವು. ಒಂದೇ ದೇಶದ ಎರಡು ರಾಜ್ಯಗಳ ನಡುವೆ ನೀರಿನ ಹಕ್ಕಿಗಾಗಿ ಹೋರಾಟ ಏರ್ಪಟಿತು. ಕರ್ನಾಟಕ ತಮಿಳಿನಾಡಿನಂತ ರಾಜ್ಯಗಳಲ್ಲಿ ಕಾವೇರಿ ನೀರಿನ ಹೋರಾಟ ಮುಗಿಲು ಮುಟ್ಟಿತ್ತು. ಜೀವನದಿ ಎಂದು ಕರೆಯಲ್ಪಡುತ್ತಿದ್ದ ಕಾವೇರಿ ಬಹುತೇಕ ಬತ್ತಿ ಹೋಗಿತ್ತು.
ನೀರಿನ ಅಭಾವದಿಂದಾಗಿ ಕಾಡು ನಶಿಸಿದಂತೆ ಅದರಲ್ಲಿನ ಪ್ರಾಣಿಗಳು ಸಾಯುತ್ತಿದ್ದವು, ಹಾಗೆ ಅತೀವ ನೀರಿನ ಕೊರತೆಯಿಂದ ಅಹಾರದ ಸಮಸ್ಯೆ ತಲೆದೋರಿತು. ಹಸಿವು ನೀರಡಿಕೆಯಿಂದ ಹಲವು ದೇಶಗಳಲ್ಲಿ ಜನರ ಸಾವಿನ ಪ್ರಮಾಣ ಜಾಸ್ತಿಯಾಯಿತು.
ಕಾಡಿನ ಪ್ರಾಣಿಗಳು ಬಹುತೇಕ ನಾಶವಾದವು.
ಕುಡಿಯುವ ನೀರಿನ ಬೇಡಿಕೆ ಜಾಸ್ತಿಯಾದಂತೆ, ನೀರನ್ನು ಕೃತಕವಾಗಿ ನಿರ್ಮಿಸುವ ಪ್ರಯತ್ನಗಳೆಲ್ಲ ನಡೆದವು. ಆಗ ವಿಜ್ಞಾನಿಗಳ ಕಣ್ಣು ಭೂಮಿಯನ್ನು ದಾಟಿ ಅಂತರೀಕ್ಷದತ್ತ ನೆಟ್ಟಿತ್ತು. ಅವರಿಗೆ ಆಕರ್ಷಕವಾಗಿ ಕಾಣುತ್ತ ಇದ್ದದ್ದು, 2011 ರಲ್ಲಿ ನಾಸದ ಕಣ್ಣಿಗೆ ಬಿದ್ದಿದ್ದ ಕ್ವಾಸರ್ ರೀತಿಯ ನೀರಿನ ಸಂಗ್ರಹ . ಕಪ್ಪುರಂದ್ರವನ್ನು ಸುತ್ತುವರೆದಿದ್ದ ಅಲ್ಲಿಯ ನೀರಿನ ಪ್ರಮಾಣ ಭೂಮಂಡಲದ ನೀರಿನ 140 ಮಿಲಿಯನ್ ಪಟ್ಟು ಹೆಚ್ಚಿನದಾಗಿತ್ತು. ಆದರೆ ಅದು ಇದ್ದಿದ್ದು 12 ಮಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಲ್ಲಿ. ಅಲ್ಲಿಯ ನೀರು ತರುವುದು ಸಾದ್ಯವಿರಲಿಲ್ಲ.
ಅಂತಹ ಸಮಯದಲ್ಲಿ ಭಾರತದ ವಿಜ್ಞಾನಿಯೊಬ್ಬ ವಿಚಿತ್ರವೊಂದನ್ನು ಗಮನಿಸಿದನು, ನಮ್ಮ ಅಕಾಶಗಂಗೆಯಲ್ಲಿ ಅಲ್ಲಲ್ಲಿ ನೀರಿನ ಹನಿಗಳು ಒಂದಡೆ ಸೇರಿ, ಘನೀಭೂತಗೊಂಡು ವಿವಿದ ಆಕಾರಗಳಲ್ಲಿ ಸುತ್ತುತ್ತ ಇದ್ದವು, ಅವುಗಳು ಸಾಮಾನ್ಯ ಅಕಾಶಕಾಯಗಳಂತೆ ಸೂರ್ಯನನ್ನು ಸುತ್ತುಬರುತ್ತಿದ್ದು, ಕೆಲವೊಮ್ಮೆ ತಮ್ಮ ಪಥವನ್ನು ಬದಲಿಸುತ್ತ ಇದ್ದವು. ಅವುಗಳು ವಿಜ್ಞಾನಿಗಳ ಕಣ್ಣಿಗೆ ಬಿದ್ದರು ಸಹ ಅವುಗಳನ್ನು ಯಾವುದೋ ಧೂಮಕೇತುಗಳೊ ಅಥವ ಮತ್ಯಾವುದೋ ಉಲ್ಕೆಗಳ ರೀತಿಯ ಕಲ್ಲುಗಳೊ ಎಂದು ನಿರ್ಲಕ್ಷಿಸುವ ಸಾದ್ಯತೆ ಇತ್ತು.
ಅಂತಹ ಅಪಾರ ನೀರಿನ ಸಂಗ್ರಹ ವ್ಯರ್ಥವಾಗಿ ಅಕಾಶದಲ್ಲಿ ಸುತ್ತುವ ಬದಲು ಭೂಮಿಗೆ ಬಂದರೆ ಇಲ್ಲಿಯ ನೀರಿನ ಸಮಸ್ಯೆ ಬಗೆಹರಿದು ಇಲ್ಲಿ ಕಾಡುತ್ತಿರುವ ಮನುಕುಲವೇ ಅಳಿಸಹೋಗಬಹುದಾದ ಸಂಭವನೀಯತೆಯಿಂದ ಹೊರಬರಬಹುದೆಂದು ವಿಜ್ಞಾನಿಗಳ ನಿರೀಕ್ಷೆ. ಆದರೆ ಎಲೋ ದೂರ ಗಗನದಲ್ಲಿ ಸುತ್ತುತ್ತಿರುವ ನೀರಿನ ಸಂಗ್ರಹ ಭೂಮಿಗೆ ತರುವದಾದರು ಹೇಗೆ, ಅಲ್ಲಿಯ ನೀರಿನ ಸಂಗ್ರಹ ಭೂಮಿಯನ್ನು ತಲುಪುವ ಬಗೆ ಹೇಗೆ? ಅಲ್ಲಿಂದ ಮೋಟರ್ ಹಾಕಿ ಭೂಮಿಗೆ ನೀರನ್ನು ಎಳೆಯುವದಂತು ಸಾದ್ಯವಿರಲಿಲ್ಲ.
ಅಂತಹ ಅಪತ್ಕಾಲದಲ್ಲಿ ಅಂತರೀಕ್ಷದಲ್ಲಿನ ನೀರಿನ ಸಂಗ್ರಹದ ಬಗ್ಗೆ ತಲೆ ಕೆಡಸಿಕೊಂಡು ಅತ್ಯಂತ ಆಸಕ್ತಿಯಿಂದ ನಾಸದಲ್ಲಿ ಕೆಲಸ ಮಾಡುತ್ತಿದ್ದ ತಂಡದ ನಾಯಕ , ಭಾರತೀಯ ಮೂಲದ ಯುವ ವಿಜ್ಞಾನಿಯ ಹೆಸರು ಭಗೀರಥ ಸೂರ್ಯವಂಶಿ.
**********
ಭಗೀರಥ ಪ್ರಯತ್ನ ......
ಸೂರ್ಯವಂಶದ ರಾಜ , ಸಗರ ಚಕ್ರವರ್ತಿಯ ಮರಿಮಗನ ಮಗ ಭಗೀರಥ ಸುಲುಭಕ್ಕೆ ಸೋಲುಪ್ಪುವನಾಗರಿಲಿಲ್ಲ. ಗಂಗೆಯನ್ನು ಕುರಿತು ತಪ್ಪಸ್ಸು ಪ್ರಾರಂಭಿಸಿದ. ಕಡೆಗೊಮ್ಮೆ ಗಂಗೆ ಭಗೀರಥನ ಪ್ರಾರ್ಥನೆಗೆ ಸುಪ್ರೀತಳಾದಳು,
ಆದರೆ ಒಂದು ತೊಂದರೆ ಎದುರಾಯಿತು
ಆಕೆ ಹೇಳಿದಳು
’ನಾನು ನಿನ್ನ ಮಾತಿನಂತೆ ದೇವಲೋಕದಿಂದ ಭೂಮಿಗೆ ಬರಬಲ್ಲೆ, ನಿನ್ನ ಪೂರ್ವಜರ ಪಾಪವನ್ನು ತೊಳೆಯಬಲ್ಲೆ. ಆದರೆ ದೇವಲೋಕದಿಂದ ಭೂಮಿಯ ಮೇಲೆ ಧುಮುಕಿದರೆ ಆ ವೇಗವನ್ನು ಭೂಮಿ ತಡೆಯಲಾರಳು, ಅದಕ್ಕೆ ಇರುವುದು ಒಂದೇ ಉಪಾಯ, ಪರಮೇಶ್ವರನ್ನು ನನ್ನ ವೇಗವನ್ನು ತಡೆಯ ಬಲ್ಲನಾದರೆ, ಆಗ ಸರಿ ’
ಗಂಗೆಗೆ ಮನದೊಳಗೆ ಎಂತದೋ ಆಸೆ , ಈ ಸಂದರ್ಭ ಉಪಯೋಗಿಸಿ ಶಿವನ ತಲೆಯ ಮೇಲೆ ಏರಬಹುದೆಂದು.
ಭಗೀರಥ ಗಂಗೆಯ ಮಾತಿಗೆ ಒಪ್ಪಿದ.
ಭಗೀರಥ ಪರಮೇಶ್ವರನನ್ನು ಒಲಿಸಲು ತಪಸ್ಸು ಪ್ರಾರಂಭಿಸಿದ.
ನೂರಾರು ವರ್ಷಗಳ ಅಖಂಡ ತಪಸ್ಸು ಪರಶಿವ ಒಲಿದ, ಭಗೀರಥನಿಗೆ ಸಹಾಯ ಮಾಡಲು ಒಪ್ಪಿದ.
ಮತ್ತೇನು ? ದೇವಗಂಗೆಯನ್ನು ಭೂಮಿಗೆ ಇಳಿಸುವ ಕಾರ್ಯಕ್ಕೆ ಎಲ್ಲ ವೇದಿಕೆಗಳು ಸಿದ್ದವಾಯಿತು.
********************
ನಭದಲ್ಲಿ ವರುಣ
ಯುವ ವಿಜ್ಞಾನಿ ಭಗೀರಥ ತನ್ನ ವೃತ್ತಿಯನ್ನು ತಪಸ್ಸಿನಂತೆ ಸ್ವೀಕರಿಸಿದ್ದ, ಅವನಿಗೆ ಸದಾ ಅಂತರಿಕ್ಷದಲ್ಲಿನ ನೀರಿನ ಸಂಗ್ರಹದ್ದೆ ಜಪ. ಹೇಗಾದರು ಸರಿ ಅಲ್ಲಿರುನ ನೀರಿನ ಸಂಗ್ರಹವನ್ನು ಭೂಮಿಯತ್ತ ತರಬೇಕೆನ್ನುವುದು ಅವನ ಪ್ರಯತ್ನ. ಆದರೆ ಕಾರ್ಯಸಾಧ್ಯತೆಯ ಬಗ್ಗೆ ಏನೆಲ್ಲ ತೊಡಕುಗಳು.
ಹೀಗಿರಲು ಒಮ್ಮೆ ಅನಿರೀಕ್ಷಿತ ಎನ್ನುವಂತೆ ಒಂದು ಸಂಚಲನ ಅವನ ಗಮನ ಸೆಳೆದಿತ್ತು . ನೀರಿನ ಹನಿಗಳು ಘನೀಭೂತಗೊಂಡ ಉಪಗ್ರಹ ರೂಪದ ಆಕಾರವೊಂದು ಸೂರ್ಯನನ್ನು ಸುತ್ತುವರೆದು ಭೂಮಿಯ ದಿಕ್ಕಿಗೆ ಬರುತ್ತಿತ್ತು. ಅದರ ವೇಗ ಭೂಮಿ ಸೂರ್ಯನನ್ನು ಸುತ್ತುವ ವೇಗಕ್ಕಿಂತ ನಾಲಕ್ಕರಷ್ಟಿದ್ದು, ಅದರ ಪಥ ಭೂಮಿಯ ಪಥದ ಸಮೀಪವೆ ಇತ್ತು. ಎಲ್ಲ ಲೆಕ್ಕಚಾರಗಳು ಸರಿ ಹೋದರೆ ಅದು ಭೂಮಿಯನ್ನು ಅತಿ ಸಮೀಪದಲ್ಲಿ ಅಂದರೆ ಹತ್ತು ಸಾವಿರ ಕಿ.ಮೀ ನಷ್ಟು ಅಂತರದಲ್ಲಿ ಹಾದು ಹೋಗುತ್ತಿತ್ತು. ಸೂರ್ಯಮಂಡಲವನ್ನು ಆ ಅಕಾರ ಯಾವಾಗ ಪ್ರವೇಶಿಸಿತೊ ಅದರಲ್ಲಿದ್ದ ನೀರು ಆವಿಯ ರೂಪತಾಳಿ ಅದನ್ನು ಮೋಡದಂತೆ ಸುತ್ತುವರೆದಿದ್ದು, ಒಳಗಿನ ವಜ್ರದಂತೆ ಕಠಿಣವಾದ ನೀರಿನ ಬಂಡೆಗಳು ಆಗೊಮ್ಮೆ ಈಗೊಮ್ಮೆ ಕದಲುತ್ತ ಸೂರ್ಯನನ್ನು ಸುತ್ತುತ್ತಿದ್ದವು. ಭಗೀರಥನ ಗುಂಪು ಆ ಉಪಗ್ರಹಕ್ಕೆ ವರುಣಗ್ರಹ ಎಂದು ಹೆಸರಿಟ್ಟರು.
ಭಗೀರಥನ ಮನದಲ್ಲಿ ಈಗ ಒಂದು ಮಹಾ ಯೋಚನೆ ಸಿದ್ದವಾಗುತ್ತಿತ್ತು. ಹೇಗಾದರು ಸರಿ ವರುಣಗ್ರಹದ ನೂರನೆ ಒಂದು ಬಾಗದಷ್ಟು ನೀರನ್ನಾದರು ಭೂಮಿಗೆ ತರಲು ಸಾದ್ಯವಾದರು ಸಹ ಭೂಮಿ ನೀರಿನ ಮಹಾ ಬರದಿಂದ ಹೊರಬಲ್ಲದಾಗಿತ್ತು. ಅವನ ತಂಡ ಒಂದು ಯೋಜನೆ ಸಿದ್ದಪಡಿಸಿತ್ತು, ಅದರಂತೆ ಆ ವರುಣಗ್ರಹ ಭೂಮಿಗೆ ಅತಿಸಮೀಪ ಬಂದಾಗ ಅದರ ಮೇಲೆ ಭೂಮಿಯ ವಿರುದ್ದ ದಿಕ್ಕಿನಿಂದ ರಾಕೆಟ್ ಗಳನ್ನು ಅಣುತಲೆಗಳನ್ನು ಸಿಡಿಸುವುದು. ಆ ಗ್ರಹವನ್ನು ಭೂಮಿಯ ಕಡೆ ತಳ್ಳಲು ಪ್ರಯುತ್ನಿಸುವುದು. ಭೂಮಿಗೆ ಅತೀ ಸಮೀಪ ಆ ಗ್ರಹ ಬಂದಾಗ ಅದನ್ನು ಪುನಃ ಸಿಡಿಸಿ ಚಿದ್ರಗೊಳಿಸುವುದು. ಒಮ್ಮೆ ಅದು ಭೂಮಿಯ ವಾತವರಣ ತಲುಪಿತೆಂದರೆ ನಂತರ ಎಲ್ಲವು ಸಲೀಸು, ಭೂಮಿಯ ವಾತವರಣಕ್ಕೆ ಸಿಕ್ಕಿ ಆ ನೀರ್ಗಲ್ಲ ಚೂರುಗಳು ಕರಗಿ ನೀರಿನ ರೂಪ ತಾಳುತ್ತವೆ , ಅದು ಅವರ ಯೋಚನೆ.
ಇಂತಹ ಒಂದು ಯೋಚನೆ ನಾಸದ ಮುಂದಿಟ್ಟಾಗ ಕೆಲವರು ಸ್ವಾಗತಿಸಿದರಾದರು ಬಹುತೇಕ ವಿರೋದಿಸಿದರು. ಅದರ ಅಡ್ಡ ಪರಿಣಾಮಗಳ ಬಗ್ಗೆ ಯಾರಿಗೂ ಖಚಿತತೆ ಇರಲಿಲ್ಲ. ಅದು ಬರಿ ನೀರ್ಗಲ್ಲುಗಳೋ ಅಥವ ಒಳಬಾಗದಲ್ಲಿ ಶಿಲೆಗಳಿದ್ದರು ಅದು ಭೂಮಿಗೆ ಅಪ್ಪಳಿಸಿದರೆ, ಅದರ ಪರಿಣಾಮ ಏನು ಎನ್ನುವುದು ಯಾರ ಅರಿವಿನಲ್ಲಿಯೂ ಇರಲಿಲ್ಲ. ಆದರೆ ಕಡೆಗೊಮ್ಮೆ ಚರ್ಚೆನಡೆಯಿತು.
ನೀರಿನ ಕೊರತೆಯಿಂದ ಇಂದಲ್ಲ ನಾಳೆ ಭೂಮಿಯಲ್ಲಿನ ಎಲ್ಲ ಜೀವಿಗಳು ನಾಶವಾಗುವುದು ಖಚಿತವಾಗಿದ್ದು, ಭೂಮಿ ಮತ್ತೊಂದು ಮಂಗಳಗ್ರಹದಂತೆ ಆಗುವ ಸಂಭವನೀಯತೆ ಅತಿ ಹತ್ತಿರದಲ್ಲಿಯೆ ಇತ್ತು. ಹಾಗಿರಲು ಈಗ ಸ್ವಲ್ಪ ಅಪಾಯವನ್ನು ಎದುರಿಸಿದರು ಸಹಿತ ಒಮ್ಮೆ ಪ್ರಯೋಗದಲ್ಲಿ ಯಶಸ್ವಿಯಾದರೆ , ಭೂಮಿಯಲ್ಲಿ ಶಾಶ್ವತ ನೀರಿನ ಸಮಸ್ಯೆ ಪರಿಹಾರವಾಗುತ್ತಿತ್ತು.
ಜಗತ್ತಿನ ಬಲಾಡ್ಯದೇಶಗಳೆಲ್ಲ ಕುಳಿತು ಚರ್ಚಿಸಿದವು. ಇಂತಹ ಪ್ರಯೋಗಕ್ಕೆ ತಲೆ ಒಡ್ಡುವುದು ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಎಲ್ಲ ದೇಶಗಳು ಬಂದವು. ವಿಜ್ಞಾನಿಗಳೆಲ್ಲ ಕುಳಿತು ತಾಂತ್ರಿಕ ವಿಷಯಗಳನ್ನೆ ಚರ್ಚಿಸಿದರು. ಭೂಮಿಗೆ ಅತೀ ಕಡಿಮೆ ಅಪಾಯವಾಗುವ ರೀತಿಯಲ್ಲಿ ವರುಣಗ್ರಹದ ನೀರನ್ನು ಭೂಮಿಗೆ ಇಳಿಸಲು ಮಹಾ ಯೋಜನೆ ಒಂದು ನಾಸದ ಯುವ ವಿಜ್ಞಾನಿ ಭಗೀರಥ ಸೂರ್ಯವಂಶಿಯ ನೇತೃತ್ವದಲ್ಲಿ ಸಿದ್ದವಾಯಿತು
******************
ತ್ರಿಪಥಗಾಮಿನಿ ಗಂಗೆ...
ಪರಮೇಶ್ವರ , ತನ್ನ ತಲೆಯ ಕೂದಲನ್ನು ಹರಡಿ ಸ್ಥಿರವಾಗಿ ನಿಂತ. ದೇವಲೋಕದಿಂದ ಗಂಗೆ ತನ್ನ ಅಬ್ಬರ, ರಬಸದೊಡನೆ ಭೂಮಿಗೆ ದುಮುಕಿದಳು. ಅವಳಿಗೆ ಒಂದು ಅನುಮಾನ ’ಈ ಪರಶಿವ ತನ್ನ ವೇಗವನ್ನು ತಡೆಯುವನೆ ?"
ಪರಶಿವನಿಗೆ ಗಂಗೆಯ ಅಂತರಂಗ ತಿಳಿಯಿತು, ಅವನಲ್ಲಿ ಒಂದು ನಸುನಗು, ದುಮುಕುತ್ತಿದ್ದ ಗಂಗೆ, ಶಿವನ ಜಡೆಯಲ್ಲಿ ಸಿಲುಕಿ ಸ್ಥಭ್ದಳಾದಳು, ಆಕೆ ಯಾವ ಪ್ರಯತ್ನಮಾಡಿದರು, ಅಲ್ಲಿಂದ ಹೊರಬರಲಾಗಲಿಲ್ಲ.
ಸಗರನಿಗೆ ಮತ್ತೆ ಆತಂಕ.
ಪರಶಿವನನ್ನು ಪ್ರಾರ್ಥಿಸಿದ ’ದೇವ ಕಾಪಾಡು, ಗಂಗೆಯನ್ನು ಹೊರಬಿಡು’ ಎಂದು.
ಗಂಗೆಗೂ ಪಶ್ಚಾತಾಪವೆನಿಸಿತ್ತು, ಪರಶಿವನ ಶಕ್ತಿಯನ್ನು ಅನುಮಾನಿಸಿದ್ದಕ್ಕೆ.
ಪರಶಿವ ಮತ್ತೆ ಆಕೆಯನ್ನು ಹೊರಹೋಗಲು ಬಿಟ್ಟ.
ನಂತರ ಎಲ್ಲವೂ ಸುಖಾಂತ.
ಭಗೀರಥ ಮುಂದೆ ನಡೆದರೆ ಅವನ ಹಿಂದೆ ದೇವಗಂಗೆ ನಡೆದಳು, ಪಾತಳವನ್ನು ಸೇರಿ ತ್ರಿಪಥಗಾಮಿನಿ ಎನಿಸಿದಳು, ಕಪಿಲಮುನಿಯ ಆಶ್ರಮವನ್ನು ಸೇರಿ ಅಲ್ಲಿದ್ದ ಸಗರಚಕ್ರವರ್ತಿಯ ಅರವತ್ತು ಸಾವಿರಮಕ್ಕಳ ಬೂದಿಮೂಳೆಗಳನ್ನೆಲ್ಲ ತೊಳೆದು ಅವರ ಪಾಪ ಹರಿಸಿದಳು.
ಭಗೀರಥ ಧನ್ಯನಾದ. ಅವನ ಹೆಸರು ಪ್ರಸಿದ್ಧವಾಯಿತು. ಅವನ ಅವಿರತ ಪ್ರಯತ್ನವನ್ನು ಮುಂದೆ ’ಭಗೀರಥ ಪ್ರಯತ್ನ’ ಎಂದೆ ಕರೆಯಲಾಯಿತು.
******************
ಇಳಿದು ಬಾ ತಾಯಿ ಇಳಿದು ಬಾ.....
ಅಂದು ಸರಿಯಾಗಿ ಬೆಳಗಿನ 6:00 ಘಂಟೆ ಡಿಸೆಂಬರ್ 21 2026 ನೇ ವರ್ಷ
ನಾಸದಲ್ಲಿ ಕ್ಷಣಗಣನೆ ನಡೆದಿತ್ತು, ಭೂಮಿಯಿಂದ ಹಾರಿಸಲ್ಪಟ್ಟ ಅಣುತಲೆಗಳನ್ನು ಹೊತ್ತ ರಾಕೆಟಗಳು ಭೂಮಿಯ ಸುತ್ತ ಹಾರಾಡುತ್ತಿರುವ ಉಪಗ್ರಹಗಳ ನೆರವಿನಿಂದ ನಿಯಂತ್ರಿಸಲ್ಪಡುತ್ತಿತ್ತು. ಅವರ ಎಲ್ಲ ಲೆಕ್ಕಚಾರಗಳು ಸರಿಯಾಗಿಯೆ ನಡೆದಿತ್ತು. ಕಡೆಗೊಮ್ಮೆ ಆ ಸುಂದರ ವರುಣಗ್ರಹದ ಮೇಲೆ ಭೂಮಿಯಿಂದ ಹೊರಟಿದ್ದ ರಾಕೆಟಗಳು ತಮ್ಮ ಸುತ್ತನ್ನು ಮುಗಿಸಿ, ಆಕ್ರಮಣನಡೆಸಿದ್ದವು, ಅಪಾರಶಕ್ತಿಯ ಅಣುತಲೆಗಳು ಅಂತರೀಕ್ಷದ ಆ ವರುಣಗ್ರಹದ ಮೇಲೆ ಒಮ್ಮೆಲೆ ಸಿಡಿದಾಗ ಅಲ್ಲಿದ್ದ ನೀರಬಂಡೆಗಳು ಒಂದೇ ಕ್ಷಣದಲ್ಲಿ ಚೂರು ಚೂರಾಗಿ ಅಲ್ಲಿಂದ ಮಹಾ ಸಮುದ್ರಮಥನದಂತೆ ನೀರಿನ ಅಲೆಗಳು, ನೀರಿನ ಹನಿಗಳು ಯಾರು ಇರದ ಅಂತರಿಕ್ಷದಲ್ಲಿ ಚಿಮ್ಮಿದವು, ಸುತ್ತಲು ಲಕ್ಷ ಲಕ್ಷ ಕಾಮನಬಿಲ್ಲನ್ನು ಸೃಷ್ಟಿಸಿದವು, ನೀರಿನ ಕಲ್ಲಿನ ಚೂರುಗಳ ಮೇಲೆ ಹನಿಗಳ ಮೇಲೆ ಬಿದ್ದ ಬಿಸಿಲಿನ ಕಿರಣಗಳು ಆ ವರುಣಗ್ರಹ ವಜ್ರದಗ್ರಹದಂತೆ ಹೊಳೆಯುವಂತೆ ಮಾಡಿದವು.
ಪ್ರಯತ್ನ ಸಾರ್ಥಕವಾಗಿತ್ತು, ವರುಣಗ್ರಹ ಸಿಡಿದು , ಅದರ ಒಂದು ಮಹಾಭಾಗ ಭೂಮಿಯತ್ತ ಹೊರಟಿತ್ತು. ಅದರಲ್ಲಿದ್ದ ಆಪಾರ ಪ್ರಮಾಣದ ನೀರ್ಭಂಡೆಗಳು ಸಿಡಿತದಿಂದ ಉಂಟಾದ ಬಿಸಿಗೆ ಕರಗುತ್ತಿದ್ದವು. ಹಾಗೆ ಆ ವರುಣಗ್ರಹವು ಭೂಮಿಯನ್ನು ಅಪ್ಪಳಿಸಿದಲ್ಲಿ ಭೂಮಿಗೆ ಅಪಾಯವಿತ್ತು. ಈಗ ವಿಜ್ಞಾನಿಗಳು ಎರಡನೆ ಹಂತದ ಕಾರ್ಯಚರಣೆಗೆ ಸಿದ್ದರಾಗಿದ್ದರು, ಭೂಮಿಗೆ ಅತಿ ಸಮೀಪದಲ್ಲಿ ಅಪ್ಪಳಿಸುವಂತೆ ಗ್ರಹ ಮುನ್ನುಗುತ್ತಿತ್ತು ಈಗ ಮತ್ತೊಮ್ಮೆ ಅದರ ಮೇಲೆ ಆಕ್ರಮಣ ನಡೆಸಲಾಯಿತು, ಈಗ ಆ ವರುಣಗ್ರಹದ ಬಾಗ ಮತ್ತೊಮ್ಮೆ ಚೂರು ಚೂರಾಗಿತ್ತು. ಭೂಮಿಯತ್ತ ಅದರ ಬಂಡೆಗಳು, ರಾಶಿ ರಾಶಿ ನೀರಿನ ತೊರೆ, ಅಪಾರವೇಗದಲ್ಲಿ ಮುನ್ನುಗುತ್ತಿತ್ತು. ಎಲ್ಲರ ಲೆಕ್ಕಚಾರದಂತೆ ನಡೆದರೆ ಭಾರತದ ಹಿಮಾಲಯದ ಶೃಂಗದ ಮೇಲೆ ಅಂತಹ ನೀರಬಂಡೆಗಳ, ನೀರಿನ ರಾಶಿ ಸುರಿಯುತ್ತಿತ್ತು. ಮಾನಸಸರೋವರ, ಕೈಲಾಸಪರ್ವತ ಎಲ್ಲವೂ ದೇವಗಂಗೆಯ ಮಹಾ ಪ್ರತಾಪಕ್ಕೆ , ಸಲಿಲ ದಾರೆಗೆ, ಜಲರಾಶಿಯ ಅಬ್ಬರಕ್ಕೆ ಸಿದ್ದವಾಗಿ ನಿಂತಿತ್ತು.
ಕಡೆಯ ಕ್ಷಣದ ಗಣನೆ ಎಲ್ಲರ ಲೆಕ್ಕಚಾರ ಸ್ವಲ್ಪವೂ ತಪ್ಪಿಲ್ಲ ಅನ್ನುವಂತೆ, ಅನಂತ ಜಲರಾಶಿ ಕೈಲಾಸಮಾನಸ ಪರ್ವತವನ್ನು ಅಪ್ಪಳಿಸಿತು, ಹಾಗೆ ಸುತ್ತಲಿನ ಎಲ್ಲ ಹಿಮಾಲಯ ಶೃಂಗಗಳು ನೀರಿನಿಂದ ಸ್ನಾನಮಾಡಲು ನಿಂತಿರುವಂತೆ ತೋರುತ್ತ ಜಲರಾಶಿಗೆ ಮೈಒಡ್ಡಿ ನಿಂತವು. ನೋಡಲು ಅದೊಂದು ದೈವಿಕ ದೃಷ್ಯ ಎನ್ನುವಂತೆ ಕಾಣುತ್ತ, ಅಕಾಶದಿಂದ ದೇವಗಂಗೆ ಕೆಳಗಿಳಿದ ಕತೆಯನ್ನು ನೆನಪಿಸುತ್ತ , ಆ ಅಗಾದ ಜಲರಾಶಿ ಹಿಮಾಲಯದ ಪ್ರಪಾತವನ್ನೆಲ್ಲ ತುಂಬುತ್ತ ಒಂದೆರಡು ಕ್ಷಣಕಾಲ ಕಾದು ನಂತರ ಕೆಳಗಿನ ಕಣಿವೆಗಳತ್ತ ನುಗ್ಗುತ್ತಿತ್ತು.
ಅಂತಹ ಅಸದೃಷ್ಯ ಸಂಭವನೀಯತೆಗೆ ಯಾವುದೇ ಹೋಲಿಕೆ ಇಲ್ಲ ಎನ್ನುವಂತೆ ದೇವಗಂಗೆ ಅಂತರಿಕ್ಷದಿಂದ ಭೂಮಿಯನ್ನು ಪ್ರವೇಶಿಸಿದಳು. ಹಿಮಾಲಯದಿಂದ ಉದ್ಭವವಾಗುವ ಗಂಗೆ ಯಮುನಾ ಅಲ್ಲದೆ ಚೀನದತ್ತ ಹರಿಯುವ ನದಿಗಳು, ನೇಪಾಳ ಪಾಕಿಸ್ತಾನ ಎಲ್ಲವೂ ಜಲಮಯವಾಗಿಹೋದವು. ನೋಡು ನೋಡುತ್ತಲೆ ನದಿಯ ತನ್ನ ಎಲ್ಲ ಎಲ್ಲೆಗಳನ್ನು ಮೀರಿ, ಹರಿಯುತ್ತ, ತನ್ನ ಎರಡು ದಡದಲ್ಲಿರುವ ಮಾನವ ನಿರ್ಮಿತ ರಚನೆಗಳನ್ನೆಲ್ಲ ಕೆಡಿವಿ ಸಮುದ್ರದತ್ತ ಓಡುತ್ತಿತ್ತು.
ಇಂತಹ ಕುಂಭದ್ರೋಣ ಜಲವೃಷ್ಟಿ ಕೇವಲ ಹಿಮಾಲಯದ ಮೇಲೆ ಮಾತ್ರವಾಗದೆ ಸಿಡಿತದಿಂದ ಹಾರಿದ ಜಲಬಂಡೆಗಳು ಭೂಮಿಯ ವಾತವರಣಕ್ಕೆ ಪ್ರವೇಶವಾಗುವಾಗಲೆ ಕರಗುತ್ತ, ಬಿಸಿನೀರ ದಾರೆಯಾಗುತ್ತ, ಮತ್ತೆ ತಣ್ಣಗಾಗುತ್ತ ಭೂಮಿಯನ್ನು ಸೇರಿದವು, ಸಂಪೂರ್ಣ ಭೂಮಂಡಲದ ಅಕಾಶವೆ ಜಲರಾಶಿಯಿಂದ ತುಂಬಿ, ಭೂಗ್ರಹ ಜಲಾವೃತ್ತವಾಗಿರುವಂತೆ ಕಾಣಿಸುತ್ತ ಇತ್ತು,
ಮೊದಲೆ ಎಚ್ಚರಿಕೆ ತೆಗೆದುಕೊಂಡ ಕಾರಣ , ಜನರು ಸುರಕ್ಷಿತ ತಾಣಗಳನ್ನು ಸೇರಿದ್ದಾರಾದರು ಇಂತಹ ಜಲಪ್ರಳಯ ಹಲವೂ ದೇಶಗಳಿಂದ ನೂರಾರು ಜನರನ್ನು ಆಹುತಿ ಪಡೆದಿತ್ತು.
ನಿರೀಕ್ಷಿಸಿದಂತೆ ಒಂದೇ ದಿನದಲ್ಲಿ ನಿಲ್ಲುವ ಜಲದಾಳಿ ಇದಾಗಿರಲಿಲ್ಲ, ವರುಣಗ್ರಹ ಛಿದ್ರವಾಗಿ ತನ್ನ ಆಕಾರವನ್ನು ಕಳೆದುಕೊಂಡು ಅಂತರಿಕ್ಷದಲ್ಲಿ ಮುಂದುವರೆಯಿತಾದರು, ಆ ಗ್ರಹದಿಂದ ಕಳಚಿಕೊಂಡ ಅಪಾರಪ್ರಮಾಣಾದ ಜಲರಾಶಿ ನಭವನ್ನೆ ಸುತ್ತುಹಾಕುತ್ತ ಭೂಮಿಯ ಸೆಳೆತಕ್ಕೆ ಸಿಕ್ಕು, ಗುರುತ್ವದ ಆಕರ್ಷಣೆಗೆ ಒಳಗಾಗಿ , ಭೂಮಿಯ ಮೇಲೆ ಮಳೆಯಾಗಿ ಸುರಿಯುತ್ತಿತ್ತು.
ಭೂಮಿಯಲ್ಲಿನ ಜನರಿಗೆ ಇದೊಂದು ಅಪೂರ್ವ ಅನುಭವವಾಗಿತ್ತು, ತುಣುಕುಮೋಡವು ಇಲ್ಲದೇ, ಯಾವುದೇ ಗುಡುಗು ಸಿಡಿಲುಗಳ ಅರ್ಭಟವಿಲ್ಲದೆ, ಸುರಿಯುತ್ತಿರುವ ಮಳೆ ಎಲ್ಲರಿಗೂ ಅಪೂರ್ವ ಅನುಭೂತಿಯನ್ನು ಕೊಟ್ಟಿತ್ತು. ದೊಡ್ಡ ದೊಡ್ಡ ಕಲ್ಲುಗಳು ಭೂಮಿಯನ್ನು ಪ್ರವೇಶಿಸಿದಾಗ ಉಲ್ಕೆಯಂತೆ ಮಿನುಗುತ್ತಿದ್ದವು. ಇಂತಹ ಅಪರೂಪದ ಮಳೆ ಹಲವು ದಿನಗಳ ಕಾಲ ಮುಂದುವರೆದು, ಭೂಮಿಯ ಎಲ್ಲ ಹಳ್ಳಕೊಳ್ಳಗಳು ನದಿ ತೊರೆಗಳು ತುಂಬಿ ಹರಿದು, ಜಲವೆಲ್ಲ ಸಮುದ್ರವನ್ನು ಸೇರಿ ಸಮುದ್ರದ ಮಟ್ಟ ಹೆಚ್ಚುತ್ತ ಹೋಗಿ ಮೊದಲಿದ್ದ ಮಟ್ಟಕ್ಕೆ ಬಂದು ಮುಟ್ಟುತ್ತಿತ್ತು. ಪುರಾಣಗಳಲ್ಲಿ, ಬೈಬಲ್ ಮುಂತಾದ ಮತ ಗ್ರಂಥಗಳಲ್ಲಿ ವರ್ಣಿಸಲ್ಪಟ್ಟ ಮಹಾಪ್ರಳಯದ ಮಳೆಯನ್ನು ಎಲ್ಲರೂ ನೆನೆಯುತ್ತಿದ್ದರು.
ಎಲ್ಲವೂ ನಿರೀಕ್ಷಿಯಂತೆ ನಡೆದ ಸಂತಸದಲ್ಲಿ ಇದ್ದ ನಾಸದ ಯುವವಿಜ್ಞಾನಿ ಭಗೀರಥ ಸೂರ್ಯವಂಶಿ, ಅವನಲ್ಲಿ ಸಂತಸ ಅನ್ನುವುದು ತುಂಬಿತುಳುಕುತ್ತಿತ್ತು, ಆ ಸಂತಸ ಅವನು ಪಡೆಯಬಹುದಾದ ಎಲ್ಲಾ ಸನ್ಮಾನಗಳ ಸಂತಸವನ್ನು ಮೀರಿಸಿದ್ದಾಗಿತ್ತು. ಮನೆಯ ಟರೇಸಿನಲ್ಲಿ ಒಂಟಿಯಾಗಿ ನಿಂತು ಸುರಿಯುತ್ತಿರುವ ಮಸಲಧಾರೆಯನ್ನು ದಿಟ್ಟಿಸುತ್ತಿದ್ದ ಅವನಲ್ಲಿ ಒಂದು ಉತ್ಕರ್ಷ ತುಂಬುತ್ತಿತ್ತು, ತಾನು ಚಿಕ್ಕವಯಸಿನಲ್ಲಿ ಕೇಳಿದ್ದ ಹಾಡು ಅವನಲ್ಲಿ ಅಸ್ವಷ್ಟವಾಗಿ ಮನದಲ್ಲಿ ತುಂಬಿ ಗುನುಗುತಿತ್ತು , ಬೇಂದ್ರೆಯವರ ಕವನ ಅವನ ತುಟಿಯಲ್ಲಿ ನಲಿಯುತ್ತಿತ್ತು
ಇಳಿದು ಬಾ ತಾಯಿ ಇಳಿದು ಬಾ !
ಇಳಿದು ಬಾ ತಾಯಿ ಇಳಿದು ಬಾ !
No comments:
Post a Comment
enter your comments please