Saturday, August 20, 2016

ಎಡಪಂಥೀಯ ಹಾಗು ಬಲಪಂಥೀಯ

ಎಡಪಂಥೀಯ ಹಾಗು ಬಲಪಂಥೀಯಲೋಕದಲ್ಲಿ  ರೂಡಿಗತ ನಂಬಿಕೆಗಳನ್ನು ಅಲೋಚನೆಗಳನ್ನು ಆಚರಣೆಗಳನ್ನು ಪುರಸ್ಕರಿಸುತ್ತ ತಾವು ಅದರಂತೆ ಆಚರಿಸುವವರನ್ನು ಬಲಪಂಥೀಯರೆಂದು ,  ಅವುಗಳನ್ನು ಅನುಮಾನಿಸುತ್ತ ಇಂತಹ ರೂಡಿಗತ ಆಲೋಚನೆಗಳನ್ನು ವಿರೋದಿಸಿ ತಮ್ಮದೆ ಹೊಸಚಿಂತನೆಯನ್ನು ಮುಂದಿಡುವವರನ್ನು ಎಡಪಂಥೀಯರೆಂದೆ ಸಾಮಾನ್ಯವಾಗಿ ವರ್ಗೀಕರಿಸಬಹುದು.  ಹಾಗು ಇಂತಹ ವರ್ಗೀಕರಣೆ ಮೊದಲಿನಿಂದಲೂ ಸಾಮಾನ್ಯವಾಗಿ ಧಾರ್ಮೀಕ ಆಚರಣೆಗಳ ಆದಾರದಲ್ಲಿ ಪ್ರಮುಖವಾಗಿ ಬಳಸಲಾಗುತ್ತಿದೆ ಅನ್ನುವುದು ಮುಖ್ಯ. 

ಇಂತಹ ಎಡಪಂಥೀಯ ಚಿಂತನೆ ಯಾವಾಗಿನಿಂದ ಹುಟ್ಟಿಕೊಂಡಿತು ಎಂದು ಚಿಂತಿಸುವದಕ್ಕೆ ಹೋದಲ್ಲಿ ಭಾರತದ ಮಟ್ಟಿಗೆ ಹೇಳುವದಾದರೆ ಬಲಪಂಥೀಯ ವಾದ ಹುಟ್ಟುವಾಗಲೆ ಎಡಪಂಥೀಯ ವಾದವು ಹುಟ್ಟಿಕೊಂಡಿತು ಅನ್ನುವುದು ಸತ್ಯ. ಆದರೆ ಅದನ್ನು ಬೇರೆ ಬೇರೆ ಹೆಸರಿನಿಂದ ಗುರುತಿಸಲಾಗುತ್ತಿತ್ತು . 

ಭಾರತದಲ್ಲಿ ಲಿಖಿತ ಇತಿಹಾಸ ಮೊದಲಿಗೆ ಇಲ್ಲವೆ ಇಲ್ಲ. ಇಲ್ಲಿರುವ ವೇದ ಉಪನಿಷತ್ ಧರ್ಮಗ್ರಂಥಗಳು ಧಾರ್ಮಿಕ ಕೆಲಸದ ಜೊತೆ ಜೊತೆಗೆ ಇತಿಹಾಸವನ್ನು ದಾಖಲಿಸುವ ಕೆಲಸ ಮಾಡುತ್ತಿವೆ. ಇವೆಲ್ಲ ಧಾರ್ಮಿಕ ರಚನೆಗಳು ಬಲಪಂಥೀಯವಾದವನ್ನು ಪುರಸ್ಕರಿಸುವ ದಾಖಲೆಗಳು ಎಂದು ಹೇಳುವವರು ಮತ್ತೊಂದು ಯೋಚಿಸುವದಿಲ್ಲ. ಅವರು ಎಡಪಂಥೀಯ ವಾದವನ್ನು ಅಷ್ಟೆ ಮರ್ಯಾದೆಯಿಂದ ದಾಖಲಿಸಿವೆ, ಹಾಗು ಅದಕ್ಕೊಂದು ಸ್ಥಾನವನ್ನು ಕೊಟ್ಟಿವೆ ಅನ್ನುವದನ್ನು ಮರೆಯುತ್ತೇವೆ. ಪಾಶ್ಚೀಮಾತ್ಯ ಹಾಗು ಇತರೆ ದೇಶಗಳಲ್ಲಿ ಧರ್ಮಕ್ಕೆ ವಿರುದ್ದವಾಗಿ ಒಂದು ಪದ ಆಡಿದರು ಸಹ ಅವರನ್ನು ಬೀದಿಯಲ್ಲಿ ಬೆಂಕಿಯಲ್ಲಿ ಸುಡುವ ಅಸಹನೆ ಇದ್ದ ಕಾಲದಲ್ಲಿ ಭಾರತದಲ್ಲಿ ಎಡಪಂಥೀಯ ಚಿಂತನೆಗಳು ಹಾಗೆ ಹಾಗೆ ಪುರಾಣ ವೇದ ಉಪನಿಷತ್ ಗಳಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ ಅನ್ನುವದು ಭಾರತದ ಹೆಮ್ಮೆ .  ಮತ್ತೊಂದು ವಿಶೇಷವೆಂದರೆ ಆಳುತ್ತಿದ್ದ ವರ್ಗ ಬಲಪಂಥೀಯ ಚಿಂತನೆಯಿಂದ ಪ್ರಭಾವಕ್ಕೆ ಒಳಗಾಗಿದ್ದಾಗಲು ಎಡಪಂಥೀಯ ಚಿಂತನೆಗಳು ದಾಖಲಿಸ್ಪಟ್ಟಿತು. 

ಮೊದಲೆ ಹೇಳಿದಂತೆ ಬಲಪಂಥೀಯವಾದದ ಜೊತೆ ಜೊತೆಗೆ ಎಡಪಂಥೀಯ ವಾದವು ಹುಟ್ಟಿಕೊಂಡಿತು, ನಮ್ಮಲ್ಲಿ ಮೊದಲಿಗೆ ಸಿಗುವುದು ವೇದಗಳ ಕಾಲ ಹಾಗು ವೇದ ಪೂರ್ವಕಾಲ. ಆಗಿನ ಒಂದು ಘಟನೆಯನ್ನು ಗಮನಿಸಿ, ನಚಿಕೇತ ಎಂಬ ಪುಟ್ಟ ಬಾಲಕ ತನ್ನ ತಂದೆ ಮಾಡುತ್ತಿದ್ದ  ವಿಶ್ವಜಿತ್ ಯಾಗದ ವಿಧಿಗಳನ್ನೆ ಪ್ರಶ್ನಿಸಿದ. ಅವನ ತಂದೆ ತನ್ನಲ್ಲಿರುವ ಎಲ್ಲವನ್ನು ದಾನಮಾಡುತ್ತೇನೆ ಎನ್ನುವ ಸಂಕಲ್ಪದಿಂದ ಪ್ರಾರಂಬಿಸಿದ ಯಾಗದ ವಿದಿಯಾಗಿ ತನ್ನ ತಂದೆ ತನ್ನಲ್ಲಿದ್ದ ಬರಡು ಹಸುವನ್ನು ದಾನ ಮಾಡಿದ್ದನ್ನು ವಿರೋದಿಸಿದ. ತನ್ನ ತಂದೆ ಜೊತೆ ವಾದಿಸಿದ. ಆಗೆಲ್ಲ ಹಿರಿಯರನ್ನು ವಿರೋದಿಸುವು  ಸಾದ್ಯವೇ ಇಲ್ಲದಂತ ಕಾಲ. ತನ್ನನ್ನು ಯಾರಿಗೆ ದಾನ ಕೊಡುವಿರಿ ಎಂದು ತಂದೆಯನ್ನು ಸಿಟ್ಟಿಗೆಬ್ಬಿಸಿದ,   ಅವನಿಗೆ ಸತ್ತ ನಂತರದ ಬದುಕಿನ ಬಗ್ಗೆ ವೇದಗಳು ಸಾರುವ ವಿಷಯದ ಬಗ್ಗೆ ಅನುಮಾನಗಳಿದ್ದವು, ಹಾಗಾಗಿ ಅದನ್ನು ಅರಿಯುವ ಚಿಂತನೆಯಿಂದ ಅವನು ಯಮಧರ್ಮರಾಯನ ಪಾಲದ.  
ಕತೆ ಮುಂದುವರೆಯುತ್ತದೆ. ಆದರೆ ಇಲ್ಲಿ ರೂಡಿಗತ ವಿದಿಯನ್ನು ಪ್ರಶ್ನಿಸುವುದು ಅಂದರೆ ಎಡಪಂಥೀಯ ಚಿಂತನೆಯೇ ಅಲ್ಲವೆ .  
ಹಾಗೆಯೆ ಎಡಪಂಥೀಯ ಭಾವನೆಯೆ ದಟ್ಟವಾಗಿದ್ದ , ಹರಿಯನ್ನು ದಿಕ್ಕರಿಸಿದ ಹಿರಣ್ಯಕಷ್ಯಪುವಿಗೆ ಸ್ವತಃ ಮಗನೆ ಬಲಪಂಥ ಹಿಡಿದು ಎದುರಿಸಿದ ಪ್ರಹ್ಲಾದ ಎನ್ನಬಹುದೇನೊ. 
ತೀರವೇದಗಳ ಕಾಲಕ್ಕೆ  ವೇದಗಳನ್ನು ದಿಕ್ಕರಿಸುವರನ್ನು  ಲೋಕಾಯುತ ಅಥವ ಚಾರ್ವಾಕರು ಎನ್ನುತ್ತಿದ್ದರು. ಚಾರ್ವಕ ವಾದವು ದೈವತ್ವವನ್ನು ನಿರಾಕರಿಸಿ, ಲೌಕಿಕ ಜೀವನವನ್ನು ಎತ್ತಿ ಹಿಡಿಯುವುದು ಆಗಿತ್ತು.  ತಾರ್ಕಿಕವಾಗಿ ನೋಡುವದಾದರೆ, ಇವರನ್ನು ಎಡಪಂಥೀಯರೆಂದೆ ಗುರುತಿಸಬಹುದು. 
ರಾಮಾಯಣ ಮಹಾಭಾರತ ಕಾಲಕ್ಕು ಹೀಗೆ ವ್ಯವಸ್ಥೆಯನ್ನು  ವಿಲೋಮ ದೃಷ್ಟಿಯಿಂದ ನೋಡುತ್ತ ಇದ್ದವರು ಇರುವಂತಹವರು ಇದ್ದರು. ಹೀಗಾಗಿ ಎಡಪಂಥ ಬಲಪಂಥ ಎನ್ನುವುದು ಎಲ್ಲ ಕಾಲಕ್ಕು ಪ್ರಸ್ತುತವೆ ಆಗಿದೆ. 
ಶಂಕರಚಾರ್ಯರ ಕಾಲಕ್ಕೆ ಚಾರ್ವಕರ ಹೆಸರು ಹಲವಾರು ಬಾರಿ ಪ್ರಸ್ತಾಪವಾಗುತ್ತೆ.  ಬಹುತೇಕ ಧಾರ್ಮಿಕ ನಂಬಿಕೆಗಳ ವಿರುದ್ದದ ಅಲೋಚನೆಗಳೆ ಮೊದಲಿಗೆ ಎಡಪಂಥವಾಗಿತ್ತೇನೊ.  
ನಂತರ ಬೌದ್ದಪಂಥ ದೇಶದಲ್ಲಿ ಪ್ರಭಲವಾಗುವಾಗ, ಭೌದ್ದರು ವೇದಗಳನ್ನು ಅಲ್ಲಗಳೆದರು. ಅದು ಸಹ ಎಡಪಂಥೀಯ ಚಿಂತನೆಯೆ ಆಗಿದೆ. 

ಆದರೆ ಕ್ರಮೇಣ ಎಡ ಹಾಗು ಬಲ ಪಂಥೀಯ ಚಿಂತನೆಗಳು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತ ಸಾಗಿತೇನೊ, 
ಸ್ವಂತಂತ್ರಾನಂತರ ಕಮ್ಯೂನಿಷ್ಟ್ ಚಿಂತನೆಗಳು ಭಾರತೀಯರ ಮೇಲೆ ಬಹಳ ಪ್ರಭಾವ ಬೀರಿತು, ಆಗ ಅಂದು ಕೊಂಡರು ಕಮ್ಯೂನಿಷ್ಟ್ ಚಿಂತನೆಗಳು ಎಡ ಪಂಥೀಯ ವೆಂದು 
ನೆಹರೂ ಕಾಲದ ಬಹಳಷ್ಟು ಚಿಂತನೆಗಳು ಎಡ ಪಂಥೀಯ ವಾದದ ಚಿಂತನೆಯೆ ಅವುಗಳು ಬಹಳಷ್ಟು ಜನರ ಮೇಲೆ ಪ್ರಭಾವ ಬೀರಿದವು.   
ಆದರೆ ಅದೇಕೋ ನಂತರದಲ್ಲಿ ಎಡಪಂಥೀಯ ಚಿಂತನೆಗಳು ಬಹಳಷ್ಟು ರಾಜಕೀಯ ಸ್ವರೂಪ ಪಡೆದುಕೊಂಡವು. ಸಮಾಜವನ್ನು ಬಹುತೇಕ ಜಾತಿಯ ಆದಾರದ ಮೇಲೆ ಮತಗಳ ಆಧಾರದ ಮೇಲೆ ಒಡೆಯಲಾಯಿತು. ಇಂತಹ ರಾಜಕೀಯ ನಡೆಗಳು ರಾಜಕೀಯ ಪಕ್ಷಗಳ ಮತಗಳಿಕೆಯ ತಂತ್ರಗಳಾಗಿದ್ದವು. ಇಂತಹ  ಪ್ರಯತ್ನಗಳು ಎಡ ಬಲ ಚಿಂತನೆಗೆ  ಜಾತಿಯ ರೂಪ ಕೊಟ್ಟವು. ಮೊದಲು ಕೇವಲ ತತ್ವಗಳ ಮೇಲೆ ತರ್ಕದ ಮೇಲೆ ಮಂಡಿಸಲಾಗುತ್ತಿದ್ದ ವಾದಗಳಿಗೆ ಸ್ವಷ್ಟವಾದ ಜಾತಿಯ ರೂಪ ಕೊಡಲಾಯಿತು. 

ಆದರೆ ಸಮಾಜವನ್ನು ನಿಜವಾಗಿ ವಿಶ್ಲೇಶಣೆ ಮಾಡಲು ಹೋದರೆ ಎಡಪಂಥ ಬಲಪಂಥದ ಪ್ರಭಾವಗಳು ಎಲ್ಲ ವರ್ಗ ಎಲ್ಲ ಜಾತಿಯ ಮೇಲೆ ಆಗಿರುವುದು ಸ್ವಷ್ಟವಾಗಿಯೆ ಇದೆ. ಇಂದು ಬಲಪಂಥೀಯರಂತೆ  ತರ್ಕ ಮಾಡುತ್ತ ವಾದ ಮಾಡುವ ಸಮಾಜದ ಬಹಳಷ್ಟು ಜನ ಆಚರಣೆಯಲ್ಲಿ ಎಡಪಂಥೀಯರೇ ಆಗಿದ್ದಾರೆ. ಧರ್ಮವನ್ನು ವೇದವನ್ನು ಪುರಸ್ಕರಿಸುವ ಬಹಳ ಜನ ಅದನ್ನು ಅರಿಯುವ ಕೆಲಸವನ್ನಂತೂ ಮಾಡುವರಲ್ಲ ಅನ್ನುವುದು ಸತ್ಯ.  ಒಂದು ಕಾಲಕ್ಕೆ ವೇದವನ್ನು ದಿಕ್ಕರಿಸುವರನ್ನು ನಾಸ್ತಿಕರೆಂದು , ಎಡಪಂಥೀಯವೆಂದೆ ಗುರುತಿಸಬಹುದಾಗಿತ್ತು. ಏಕೆಂದರೆ ಅವರು ಸಮಾಜದ ಸಾಮಾನ್ಯ ನಂಬಿಕೆಗಳಿಗಿಂತ ವಿಭಿನ್ನವಾಗಿ ಚಿಂತಿಸಿದವರು. ಆದರೆ ಈಗಿನ ವಿಪರ್ಯಾಸವೆಂದರೆ ಬಲಪಂಥೀಯರೆಂದು ಗುರುತಿಸಿಕೊಳ್ಳುವ  ಬಹುಪಾಲು ಜನ ವೇದದ ಗಂದವನ್ನು ಅರಿಯಲೆಂದು ಹೋಗುವದಿಲ್ಲ, ಹಾಗೆ ದೇವರನ್ನು ನಂಬುವರೆಂದು ತೋರಿಸುತ್ತ ಕೇವಲ ಢಾಂಬಿಕ ಆಚರಣೆಗಳಲ್ಲಿ ಮುಳುಗಿರುತ್ತಾರೆ ಮತ್ತು ದುರಂತವೆಂದರೆ ಅಂತಹ ಆಚರಣೆಗಳನ್ನು ಅವರು ಮನಸಾರೆ ನಂಬುವದಿಲ್ಲ, ಕೇವಲ ಆಚರಿಸುತ್ತಾರೆ, ಇವೆಲ್ಲ ಬಲಪಂಥೀಯರ ಮೇಲೆ ಆಗಿರುವ ಎಡಪಂಥೀಯ ಚಿಂತನೆಗಳ ಪ್ರಭಾವವೆಂದು ಗುರುತಿಸಬಹುದು. 

ಹಾಗೆ ಎಡಪಂಥೀಯರೆಂದು ಗುರುತಿಸಿಕೊಳ್ಳುವವರು ಸಹ ತಮ್ಮ ಆಚರಣೆಗಳಿಗೆ, ರೂಡಿಗತ ಸಂಪ್ರದಾಯಗಳಿಗೆ ಹೊರತಾದವರಲ್ಲ. ಯಾವುದೋ ಒಂದು ರೂಪದಲ್ಲಿ ಅದನ್ನೆಲ್ಲ ಆಚರಿಸುವವರೆ. ಅವನು ಎಂತಹ ಪಕ್ಕ ಎಡಪಂಥೀಯನಾಗಿದ್ದರು, ಸ್ವರ್ಗ ನರಕ ನಂಬುವದಿಲ್ಲ,  ಇಲ್ಲಿನ ಲೌಕಿಕ ಪ್ರಪಂಚವಷ್ಟೆ ನಿಜ , ಉಳಿದಿದ್ದೆಲ್ಲ ಮೋಸದ ವಾದ ಎನ್ನುವರು ಸಹ, ತನ್ನ ತಂದೆಯೋ ತಾಯಿಯೋ ಸತ್ತಾಗ ಯಾವುದೋ ವಿದದ ಧಾರ್ಮಿಕ ಆಚರಣೆಗಳನ್ನು ಆಚರಿಸುವವರೆ.  ಆರೋಗ್ಯ ಕೈಕೊಟ್ಟಾಗ, ವಯಸಿನ ಪ್ರಭಾವ ಅವರ ಮೇಲಾದಾಗ ಅವರ ವಾದಗಳೆಲ್ಲ ಸಡಿಲವಾಗುತ್ತವೆ, ಹಾಗೆ ನಂಬಿಕೆಗಳಲ್ಲಿ ಬಿರುಕು ಕಾಣಿಸುತ್ತವೆ, ತಮ್ಮ ವಾದದಲ್ಲಿ ಗೊಂದಲವೋ, ಟೊಳ್ಳುತನವೋ ಇರುವದನ್ನು ಅವರು ಅರಗಿಸಿಕೊಳ್ಳಲಾರರು. 

ಹಿಂದೆಲ್ಲ ಸಮಾಜಸುಧಾರಕರು , ಚಿಂತಕರು  ಅಥವ ಬುದ್ದಿಜೀವಿಗಳೆಂದು ಗುರುತಿಸಿಕೊಳ್ಳುತ್ತಿದ್ದ ವರ್ಗ ಎಂದಿಗೂ ಆಳುವ ಸರ್ಕಾರಗಳ, ಅರಸರ ಪ್ರಭಾವಕ್ಕೆ  , ಅಧಿಕಾರದ ಶಕ್ತಿಗೆ ಮಣಿದವರಲ್ಲ, ಎಷ್ಟೋ ಚಿಂತಕರು ಬುದ್ದಿಜೀವಿಗಳು ಆಳುವ ವ್ಯವಸ್ಥೆಯನ್ನು ವಿರೋದಿಸುತ್ತಲೆ ತಮ್ಮ ನಂಬಿಕೆಗಳಿಗಾಗಿ ತಮ್ಮ ಚಿಂತನೆಗಳಿಗಾಗಿ ಜೀವ ಕಳೆದುಕೊಂಡರು, ಆದರೆ ಈಗಿನ ವಿಪರ್ಯಾಸವೆಂದರೆ ಅಂತಹ ಚಿಂತಕರ, ಬುದ್ದಿಜೀವಿಗಳ ಗುಂಪು ತಮ್ಮನ್ನು ತಾವೆ ಯಾವುದೋ ಒಂದು ಆಳುವ ಅಥವ ರಾಜಕೀಯ ಪಕ್ಷ ಒಂದರ ಜೊತೆ ಗುರುತಿಸಿಕೊಳ್ಳುತ್ತಿರುವುದು. 

ತೀರ ತಾವು ನಂಬಿದ ತರ್ಕಕ್ಕೆ ನಂಬಿಕೆಗೆ ಕಡೆಯವರೆಗೂ ಅಂಟಿಕೊಂಡಿರುವವರು ಎರಡೂ ಪಂಥಗಳಲ್ಲಿ ಒಂದಿಷ್ಟು ಕಾಣಿಸಿದರು ಅಂದರೆ ಅವರು ಸಮಾಜದಲ್ಲಿ ದೊಡ್ಡವ್ಯಕ್ತಿಗಳಾಗಿರುತ್ತಾರೆ, ಅದು ಅವರಿಗೆ ಕೆಲವೊಮ್ಮೆ ಅನಿವಾರ್ಯ. 
ಉಳಿದಂತೆ 

 ಎಡ ಎಡವಾಗಿ ಎಂದೂ ಇಲ್ಲ  ಬಲವೂ ಅಷ್ಟೆ ಎಂದೂ ಬಲವಾಗಿ ಇರೋಲ್ಲ . 
ಎಡ ಬಲಗಳು ಅದಲು ಬದಲಾಗುತ್ತಲೆ ಇರುತ್ತವೆ 
ತನ್ನ ಸುತ್ತ ತಾನೆ ಸುತ್ತುವ ಈ ಬದುಕಿನಲ್ಲಿ.

1 comment:

enter your comments please