Showing posts with label detectives. Show all posts
Showing posts with label detectives. Show all posts

Friday, March 28, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)

 ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)   


ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ
ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ ನಡೆದಿರುವಾದರು ಏನು. ಅಲ್ಲಿ ಯಾರೋ ಒಬ್ಬರು ಬೈಕ್ ನಲ್ಲಿ ಬಂದಿದ್ದಾರೆ ಆದರೆ ಯಾರಿರಬಹುದು,ಯಾಕಿರಬಹುದು ಅವರಿಗೂ ಅನಂತರಾಮಯ್ಯನವರಿಗೂ ಏನು ಸಂಬಂಧವಿರಬಹುದು. ಯೋಚಿಸುತ್ತಲೆ ಅನ್ಯಮನಸ್ಕನಾಗಿ ಪ್ರಶ್ನಿಸುತ್ತಿದ್ದ ನರಸಿಂಹ.

“ ಅಶೋಕ್ ರವರೆ ನೀವೆ ಈಗ ಕೇಳಿದ್ದೀರಿ ಒಪ್ಪಿಕೊಂಡಿದ್ದೀರಿ,  ಕೊಲೆಯಾದ ಜಾಗದಿಂದ ನೀವು ತಂದಿರುವ ಕಲ್ಲು ತಪ್ಪು ಸಾಕ್ಷಿ ಎಂದು, ಕೋರ್ಟನ್ನು ಆ ಮೂಲಕ ತಪ್ಪು ದಾರಿಗೆ ಎಳೆದಿರುವಿರಿ ಅಲ್ಲವೇ”

ಪೋಲಿಸ್ ಅಧಿಕಾರಿ ಅಶೋಕ್ ಅವರ ಮೊಂಡುವಾಗ ಮುಂದುವರೆಸಿದ್ದರು.



“ಹಾಗೇನು ಇಲ್ಲ, ನಾನು ಹೇಳಿದ ರೀತಿ ತಪ್ಪಿರಬಹುದು ಆದರೆ ಕಲ್ಲು ಕೊಲೆಯಲ್ಲಿ ಬಾಗಿಯಾಗಿದೇ ಎಂದೇ ಅನ್ನಿಸುತ್ತಿದೆ ಅಲ್ಲವೆ, ಇಲ್ಲದಿದ್ದರೆ ಕಲ್ಲಿನ ಮೇಲೆ ರಕ್ತ ಏಕೆ  ಸುರಿದಿತ್ತು,  ಕೊಲೆಯಾದವನ ತಲೆಯನ್ನು ಕಲ್ಲಿಗೆ ಗಟ್ಟಿಸಿ ಕೊಲೆಮಾಡಿರಬಹುದು ಅಲ್ಲವೆ ?”
 
ನರಸಿಂಹ ನಗುತ್ತ ಕೇಳಿದ
“ಹೌದೇ ಹಾಗಿದ್ದಲ್ಲಿ, ನಿಮ್ಮ ಸಾಕ್ಷಿ ಶಿವಣ್ಣನ ಕತೆ ಏನು? ನೀವೆ ಕರೆತಂದಿರುವಿರಿ ಕಲ್ಲಿನಲ್ಲಿ ಎಗರಿ ಎಗರಿ ತಲೆಗೆ ಹೊಡೆದರು ನಾನು ನೋಡಿದೆ ಎಂದು ಹೇಳಲು ಅದು ಸುಳ್ಳು ಸಾಕ್ಷಿ ಎಂದು ನೀವೆ ಒಪ್ಪುತ್ತಿರುವಿರಿ ಅಲ್ಲವೇ. ನಿಮಗೆ ಹೇಗಾದರು ಕೊಲೆ ಪ್ರಕರಣ ಕಂಡು ಹಿಡಿದೆ ಅನ್ನಿಸಿ ಒಬ್ಬರಿಗೆ ಶಿಕ್ಷೆ ಕೊಡಿಸಬೇಕು ಅಷ್ಟೆ ನಿಮ್ಮ ಉದ್ದೇಶ, ಯಾರನ್ನೊ ಒಬ್ಬರನ್ನು ಫಿಟ್ ಮಾಡಲು ಆತುರ ಏಕೆ?”
ಎಂದ ಗಂಭೀರವಾಗಿ.


ಅಶೋಕನಿಗೆ ಪಿತ್ತ ನೆತ್ತಿಗೇರಿತ್ತು, ತನ್ನ ಕೆಲಸವೆಲ್ಲ ನೀರಿನಲ್ಲಿ ಹೋಮದಂತೆ ಆಗುತ್ತಿತ್ತು, ತನ್ನ ಸಾಕ್ಷಿಗಳೆಲ್ಲ ತನ್ನ ಎದುರಿಗೆ ಬಿದ್ದು ಹೋಗುತ್ತಿತ್ತು, ಹೀಗೆ ಆದರೆ ಎಷ್ಟು ಅವಮಾನ, ಕಡೆಗೆ ತನ್ನ ಕೈ ಕೆಳಗೆ ಕೆಲಸ ಮಾಡುವ ಕಾನ್ಸ್‍ಟೇಭಲ್ ಗಳು ಸಹಿತ ತನ್ನನ್ನ ಹಾಸ್ಯ ಮಾಡುವಂತಾಗುವುದು. ಅವನು ಕೋಪದಿಂದ ನುಡಿದ
“ನೋಡಿ ನಾನು ಯಾರನ್ನೊ ಕೊಲೆಗೆ ಸಂಬಂಧಪಡದವರನ್ನು ಇಲ್ಲಿ ತಂದು ನಿಲ್ಲಿಸುತ್ತಿಲ್ಲ, ಕೊಲೆಗೆ ನೇರವಾಗಿ ಸಂಬಂಧಿಸಿದ ವ್ಯಕ್ತಿ ಈ ಆರೋಪಿ, ಸಾಯುವಾಗ ಜೊತೆಗಿದ್ದವರು, ಒಂದು ವೇಳೆ ಆ ಮೋಟರ್ ಬೈಕ್‍ನಲ್ಲಿ ಬಂದಿದ್ದವರು ಯಾರೊ ಇದ್ದರು ಅನ್ನುವದಾದರೆ , ಅದು ಈ ಅರೋಪಿಗೆ ಗೊತ್ತಿರುತ್ತದೆ, ನಾನು ಸರಿಯಾದವರನ್ನೆ ಕಟಕಟೆಯಲ್ಲಿ ನಿಲ್ಲಿಸಿದ್ದೇನೆ, ಹಾಗೆ ಯಾರೊ  ಸಿಕ್ಕಿದವರನ್ನು  ರಸ್ತೆಯಲ್ಲಿಯೆ ಒದ್ದು ಒದ್ದು ಒಪ್ಪಿಸಲಾಗುವದಿಲ್ಲ”  
ನ್ಯಾಯದೀಶರು, ಗಂಭೀರವಾಗಿ,
“ಮಿ! ಅಶೋಕ್ ನೀವು ಜವಾಬ್ದಾರಿಯ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿ, ಕೋರ್ಟಿನಲ್ಲಿ ಹೀಗೆಲ್ಲ ವರ್ತಿವಂತಿಲ್ಲ, ವಕೀಲರ ಮೇಲೆ ಕೂಗಾಡುವಂತಿಲ್ಲ ತಿಳಿಯದೇ. ಇನ್ನೊಮ್ಮೆ ಹೀಗೆ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತೆ “ ಎಂದು ಎಚ್ಚರಿಸಿದರು.
ನರಸಿಂಹ ಒಂದು ಕ್ಷಣ ಸುಮ್ಮನೆ ನಿಂತಿದ್ದ, ಅವನಿಗೆ ಅಶೋಕನ ಮಾತೆ ಕಿವಿಯಲ್ಲಿ ಗುನುಗುತ್ತಿತ್ತು,
ರಸ್ತೆಯಲ್ಲಿ ಒದ್ದು, ಒದ್ದು ಎಂದುಕೊಂಡ, ತಲೆಗೆ ಏನೋ ಮಿಂಚಿನಂತೆ ಹೊಳೆಯಿತು.
ಹೌದು ತಾನು  ಕೊಲೆಯಾದ ತಾಣಕ್ಕೆ ಹೋದಾಗ ಈ ಪಾಂಡು ನೆಲದ ಮೇಲೆ ಬಿದ್ದ ವಸ್ತುವನ್ನೆಲ್ಲ ತನ್ನ ಕಾಲಿನಿಂದ ಒದೆಯುತ್ತ ನಿಂತಿದ್ದ,  ಹೌದು ಏನದು !  ಹೌದು ಕೊಲೆಗೆ ಲಿಂಕ್ ಅದೇ, ಈಗ ಅಲ್ಲಿಯೇ ಇರುವುದೋ ಇಲ್ಲವೋ ತಿಳಿಯದು, ಅದು ತನ್ನನ್ನು ಕೊಲೆಗಾರನಲ್ಲಿಗೆ ಕರೆದೊಯ್ಯುವುದೋ ಇಲ್ಲವೋ ತಿಳಿಯದು.
ಅವನ ಆತುರ ಅತಿಯಾಯಿತು,  ಆದರೂ ಹೊರಗೆ ತನ್ನ ಕಾತುರ ತೋರದೇ ನುಡಿದ
“ಸ್ವಾಮಿ ಸಾಹೇಬರು ಕೂಗಾಡಲಿ ಬಿಡಿ,  ಕೇಸು ಸೋಲುವ ಹತಾಶೆಯಲ್ಲಿ ಕೂಗಾಡುತ್ತಿದ್ದಾರೆ,  ಅವರು ಮಾಡಬೇಕಿರುವ ಕೆಲಸ ನಾವು ಮಾಡಬೇಕಿದೆ. ಸ್ವಾಮಿ, ನನಗೆ  ಇವರು ಆಡಿದ  ಮಾತಿನಲ್ಲಿ ಏನು ಒಂದು ಎಳೆ ಹೊಳೆದಿದೆ, ನನಗೆ ಕೇವಲ ಇಪ್ಪತನಾಲಕ್ಕು ಗಂಟೆಗಳ ಅವಕಾಶ ಕೊಡಿ, ನನ್ನ ಊಹೆ ನಿಜವಾದರೆ ನನಗೆ ಒಂದು ದೊಡ್ಡ ಸಾಕ್ಷಿ ಸಿಗುತ್ತದೆ ದಯಮಾಡಿ ಈಗ ಏನು ಕೇಳಬೇಡಿ” ಎಂದ.
ನ್ಯಾಯದೀಶರು ನಗುತ್ತ , ‘ವಿಚಿತ್ರ ವ್ಯಕ್ತಿಗಳು ಕಣ್ರೀ ನೀವು, ಆಯಿತು, ಇಷ್ಟು ದಿನವೇ ಕಳೆದಿದೆಯಂತೆ ಮತ್ತೆ ಒಂದು ದಿನ ತಾನೆ’ ಎನ್ನುತ್ತ  ಮರುದಿನಕ್ಕೆ ಕೇಸನ್ನು ಮುಂದಕ್ಕೆ ಹಾಕಿ ಎದ್ದು ಹೋದರು.
……….


ಪುನಃ ನರಸಿಂಹ, ಹಾಗು ಪಾಂಡು ಕೊಲೆಯಾದ ಜಾಗದಲ್ಲಿ ನಿಂತಿದ್ದರು, ನರಸಿಂಹ ಸಿಗರೇಟ್ ಎಳೆಯುತ್ತ ಸುತ್ತಲೂ ಏನನ್ನೊ ಹುಡುಕುತ್ತ ಓಡಾಡುತ್ತಿದ್ದ,
“ಬಾಸ್ ಏನು ಹುಡುಕುತ್ತಿದ್ದಿರೀ ಹೇಳಿದರೆ ನಾನು ಹುಡುಕುವೆ “ ಎಂದ
“ಪಾಂಡು ಆ ದಿನ ನಾವು ಬಂದಿದ್ದೆವಲ್ಲ ಆಗ ನೀನು ರಸ್ತೆಯಲ್ಲಿ ನಿಂತು ಒಂದು ವಸ್ತುವನ್ನು ಒದೆಯುತ್ತ ಇದ್ದೆ ಅಗಾಗ್ಯೆ, ಅದು ಏನು ನೆನಪಿಸಿಕೋ, ಹಾಗೆ ಅದು ಇಲ್ಲೇ ಇರಬಹುದ ಹುಡುಕು” ಎಂದ
“ಬಾಸ್ ಅದಾ…. ನೆನಪಾಯಿತು, ಅದು ಯಾವುದೋ ವಾಹನದ ಬ್ರೇಕಿನ ಲೈಟ್ ಒಡೆದು ಕೆಳಗೆ ಬಿದ್ದ ಬಾಗ ಅನ್ನಿಸುತ್ತೆ,  ಒಂದು ಕೆಂಪು ಗ್ಲಾಸಿನ ಪೀಸ್,” ಎನ್ನುತ್ತ ಅದನ್ನೆ ಕಡೆಗೆ ಜೋರಾಗಿ ಒದ್ದೆನಲ್ಲವೆ ಎಂದು ನೆನಪಿಸಿಕೊಳ್ಳುತ, ಖಾಲಿ ಸೈಟ್ ಇದ್ದ ಮೂರ್ತಿಯ ಮನೆಯ ಕಡೆ ನಡೆದ . ಐದು ನಿಮಿಶದ ಹುಡುಕುವಿಕೆ ಫಲ ಕೊಟ್ಟಿತ್ತು,
“ಭಾಸ್ ಸಿಕ್ಕಿತು “ ಎನ್ನುತ್ತ ಎತ್ತಿ ತೋರಿಸಿದ, ಹೌದು ಅದೇ ಕೆಂಪು ಬಣ್ಣದ ತುಂಡು , ಯಾವುದೋ ಬೈಕಿನ ಬ್ರೇಕ್ ಲೈಟ್ ನದು.
“ಗುಡ್ ಪಾಂಡು, ಕಡೆಗೂ ಸಿಕ್ಕಿತಾ ಕೊಡು ಇಲ್ಲಿ “ ಎಂದವನೇ ತಿರುಗಿಸಿ ನೋಡಿ
“ಈಗ ಮತ್ತೆ ಅವರ ಮನೆಗೆ , ಅದೆ ಅನಂತರಾಮಯ್ಯನವರ ಮನೆಗೆ ಹೋಗಬೇಕಲ್ಲ  ಬರ್ತೀಯ ?” ಎಂದ
“ಪುನಃ ಅಲ್ಲಿಗಾ ಬಾಸ್ ಅದೇಕೆ, ?”
ಎಂದವನು ಸದ್ಯಕ್ಕೆ ತನ್ನ ಪ್ರಶ್ನೆಗೆ ನರಸಿಂಹ ಉತ್ತರ ಕೊಡುವದಿಲ್ಲ ಎಂದು ಅರಿತು ಸುಮ್ಮನೇ ಅವನ ಜೊತೆ ಹೊರಟ.


ತನ್ನ ಮನೆಗೆ ಪುನಃ ಬಂದ ನರಸಿಂಹನನ್ನು ನೋಡಿ ರಾಜಮ್ಮನಿಗೆ ಆಶ್ಚರ್ಯ ಸ್ವಲ್ಪ ದಿಗಿಲು
ನರಸಿಂಹ ಹೇಳಿದ
“ನೋಡಮ್ಮ  ನಿಮ್ಮ  ಗಂಡನ ಕೊಲೆಗೆ ಸಂಬಂದಿಸಿದಂತೆ ಬಂದಿರುವುದು ನಿಜ ಆದರೆ ನಿಮ್ಮ ಸಹಾಯ ಬೇಕು ಅಷ್ಟೆ ನೀವು ನನಗೆ ಏನು ಹೇಳಬೇಕಿಲ್ಲ”  ಎಂದ ನರಸಿಂಹ
“ನನ್ನ ಗಂಡನ ಕೊಲೆಗಾರನನ್ನು ಹಿಡಿಯಲು  ಸಹಾಯ ಖಂಡಿತ ಮಾಡುವೆ ಆದರೆ ನನ್ನನ್ನು ದಾರಿ ತಪ್ಪಿಸಲಾಗದು, ವೆಂಕಟೇಶಯ್ಯನವರಿಗೆ ಶಿಕ್ಷೆ ಆಗಲೇ ಬೇಕು” ಎಂದಳು ರಾಜಮ್ಮ, ಅದಕ್ಕೆ ನರಸಿಂಹ
“ಅಗಲಮ್ಮ ಅದು ಆಮೇಲೆ ಯೋಚಿಸೋಣ. ಆ ದಿನ ನಿಮ್ಮ ಮನೆಗೆ ಒಬ್ಬ ಹುಡುಗ ಬಂದಿದ್ದನಲ್ಲ ಬೈಕ್ ನಲ್ಲಿ ಅವನನ್ನು ಕರೆಸಲು ಆಗುತ್ತ ಪುನಃ, ಆದರೆ ನಾವು ಬಂದಿರುವುದು ತಿಳಿಸಬಾರದು, ಸುಮ್ಮನೆ ಬರಲು ಹೇಳಿ ಹಾಗೆ , ಬೈಕನ್ನು ತರಲು ಹೇಳಿ” ಎಂದ


“ನೀವು ಹೇಳದಿದ್ದರು ಅವನು ಬರುವುದು ಬೈಕ್ ನಲ್ಲಿಯೆ” ಅಂದುಕೊಂಡ ಆಕೆ ತನ್ನ ಮಗಳಿಗೆ ಪ್ರದೀಪನಿಗೆ ಪೋನ್ ಮಾಡಲು ಹೇಳಿದಳು. ಅವಳಿಗೆ ಒಳಗೊಳಗೆ ಒಂದು ಕುತೂಹಲ, ತನ್ನ ಗಂಡನ ಕೊಲೆಯ ವಿಷಯ ತಿಳಿಯಲು ಬಂದವರು ಈ ಹುಡುಗನಿಗೇಕೆ ಕರೆಸುತ್ತಿದ್ದಾರೆ ಅವನಿಗೂ ಈ ಕೊಲೆಗೂ ಸಂಬಂಧ ಇದೆಯ? , ಆಕೆ ಯೋಚಿಸುತ್ತಿದ್ದಳು.


ನರಸಿಂಹನು ಯೋಚಿಸುತ್ತಿದ್ದ ತಾನು ಕತ್ತಲಿನಲ್ಲಿ ಕೈ ಆಡಿಸುತ್ತಿರುವೆ, ನನ್ನ ಊಹೆ ನಿಜವೋ ಸುಳ್ಳೊ ಎಂಬುದು ಹುಡುಗನು ಬಂದ ನಂತರ ತಿಳಿಯಬಹುದು. ಎದುರಿಗೆ ರಾಜಮ್ಮ ನಿಂತಿದ್ದರೆ ಆಕೆಯ ಹಿಂದೆ ಆಕೆಯ ಇಬ್ಬರು ಹೆಣ್ಣುಮಕ್ಕಳು ನಿಂತಿದ್ದರು. ಅವನಿಗೆ ಒಂದು ಕ್ಷಣ ಪಾಪ ಅನ್ನಿಸಿತು, ಸಂಸಾರದ ಯಜಮಾನನನ್ನು ಕಳೆದುಕೊಂಡು ದಿಕ್ಕೆಟ್ಟು ನಿಂತಿರುವ ಸಂಸಾರ ಎಂದು.


ನಿರೀಕ್ಷೆಯಂತೆ ಪ್ರದೀಪ ಹಕ್ಕಿಯಂತೆ ಹಾರಿ ಬಂದ ತನ್ನ ಬೈಕ್ ಮೇಲೆ. ಬಂದು ಗಾಡಿ ನಿಲ್ಲಿಸುವಾಗಲೆ ನರಸಿಂಹ, ಮತ್ತು ಪಾಂಡುವನ್ನು ಕಂಡು ಅವನ ಮುಖದ ಸಂತಸ ಹಾರಿಹೋಯಿತು. ಒಂದು ರೀತಿ ಗೊಂದಲ ಭಯದ ಭಾವ ಅಲ್ಲಿ ನೆಲೆಗೊಂಡಿತು.
“ಬಾ ಪ್ರದೀಪ, ಇವರು ನೋಡು ಅದೇನೊ ನಿನ್ನ ಜೊತೆ ಮಾತನಾಡಬೇಕಂತೆ” ಎಂದಳು ರಾಜಮ್ಮ.
“ಬಾ ಪ್ರದೀಪ, ಏನು ಭಯಪಡಬೇಡ, ಕೆಲವು ಪ್ರಶ್ನೆ ಅಷ್ಟೆ, ನೀನು ಇನ್ನು ಡ್ರೈವಿಂಗ್ ಲೈಸನ್ಸ್ ಮಾಡಿಸಲಿಲ್ಲವಾ?” ಎಂದ ನರಸಿಂಹ ನಗುತ್ತ.
“ಮುಂದಿನ ತಿಂಗಳು ಮಾಡಿಸುತ್ತೇನೆ ಸಾರ್ ಹದಿನೆಂಟು ಆಗುತ್ತಲ್ಲ ’ ಅಂದ
“ಗಾಡಿಯನ್ನು ಪರೀಕ್ಷಿಸುತ್ತ, ಅದೇನು ನಿನ್ನ ಗಾಡಿ ಎಡಬಾಗವೆಲ್ಲ ಇಷ್ಟೋಂದು ಗೆರೆಗಳು ಎಲ್ಲಿಯೋ ಎತ್ತಿಹಾಕಿದಂತಿದೆ “ ಎಂದ ನರಸಿಂಹ
“ಇಲ್ಲ ಮನೆಯ ಹತ್ತಿರ ಬಿದ್ದು ಬಿಡ್ತು ’ ಅಂದ ಪ್ರದೀಪ, ’ಅದೇನು ಸಾರ್ ನನ್ನನ್ನು ಕರೆದಿದ್ದು?”  ಪ್ರಶ್ನಿಸಿದ
“ಹೇಳುತ್ತೇನೆ ಬಿಡು ಅಂತ ಅರ್ಜೆಂಟ್ ವಿಷಯ ಏನಲ್ಲ, ಅದೇನು ಹಿಂಬಾಗದ ಬ್ರೇಕ್ ಲೈಟ್ ಸಹ ಮುರಿದುಹೋಗಿದೆ” ಎಂದ ನರಸಿಂಹ.
“ಹೌದು ಸಾರ್ ಗಾಡಿ ಬಿತ್ತಲ್ಲ ಆಗ ಮುರಿದುಹೋಯಿತು ಅನಿಸುತ್ತೆ” ಎಂದ ಪ್ರದೀಪ, ಸ್ವಲ್ಪ ಗೊಂದಲ ಅವನ ದ್ವನಿಯಲ್ಲಿ.


“ನೋಡು ಇದೇನ ನಿನ್ನ ಗಾಡಿಯ ಬ್ರೇಕ್ ಲೈಟಿನ ಪೀಸ್,” ಅನ್ನುತ್ತ,
ಪಾಂಡುವಿಗೆ ಅದನ್ನು ತೆಗೆದು ತೋರಿಸಲು ಹೇಳಿದ
ಪಾಂಡು ತನ್ನ ಕೈಯಲ್ಲಿದ್ದ ಬ್ರೇಕ್ ಲೈಟಿನ ತುಂಡನ್ನು ತೆಗೆದು ತೋರಿಸುತ್ತ, ಗಾಡಿಯ ಹಿಂದೆ ಬಂದು, ಲೈಟಿನ ಒಡೆದ ಬಾಗ ಕೂಡಿಸಲು ನೋಡಿದ ಆಶ್ಚರ್ಯ ಅನ್ನುವಂತೆ, ಅದು ಒಡೆದಬಾಗದ ಮೇಲೆ ಸರಿಯಾಗಿ ಹೊಂದಿಕೊಂಡು ಕುಳಿತಿತು, ಒಡೆದೇ ಇಲ್ಲ ಅನ್ನುವಂತೆ. ನರಸಿಂಹನಿಗೆ ತೃಪ್ತಿಯಾಯಿತು.
“ನೋಡು ಪ್ರದೀಪ, ಈ ತುಂಡು ನಿನ್ನ ಗಾಡಿಯ ಲೈಟ್ ಮೇಲೆ ಎಷ್ಟು ಸರಿಯಾಗಿ ಕುಳಿತುಬಿಡ್ತು, ಈ ಗಾಡಿಯದೇ ಅಂತಾಯ್ತು ಅಲ್ವ”
“ಇರಬಹುದೇನೋ ಸಾರ್, ಎಲ್ಲಿ ಸಿಕ್ಕಿತು ನಿಮಗೆ “ ಅವನ ದ್ವನಿಯಲ್ಲಿ ಒಡಕು
“ಎಲ್ಲಿ ಸಿಕ್ಕಿತು ಅಂತ ಆಮೇಲೆ ಹೇಳೋಣ, ನೀನು ಅದೇನು ಪದೇ ಪದೇ ಇವರ ಮನೆಗೆ ಬರುವುದು, ಏನು ವಿಶೇಷ’ ಎಂತದೋ ಕುಹಕ ನರಸಿಂಹನ ದ್ವನಿಯಲ್ಲಿ. ಅವನು ಹಾಗೆ ಕೇಳುತ್ತಿರುವಾಗಲೆ ಪಾಂಡು ಗಮನಿಸಿದ, ರಾಜಮ್ಮನ ಎರಡನೇ ಮಗಳು  ರಾಗಿಣಿ
ಹಿಂದೆ ಸರಿದು ಹಾಗೆ ಒಳಗೆ ಹೊರಟು ಹೋದಳು. ಪಾಂಡುವಿನ ಗಮನ ಬಹಳ ಸೂಕ್ಷ್ಮ.
“ಸುಮ್ಮನೆ ಸಾರ್ ಪರಿಚಯದವರಲ್ವ ಏನಾದರು ಸಹಾಯ ಬೇಕಾಗುತ್ತೆ ಅಂತ ಬರುತ್ತಿರುತ್ತೇನೆ” ಪ್ರದೀಪ ಎಂದ
“ಏನು ನೀನು ಇಲ್ಲಿ ಬಂದು ಸಹಾಯ ಮಾಡೋದು, ಸರಿ ಏನಾದರು ಮಾಡಿಕೋ, ಆದರೆ ಅದಿನ ಬಸ್ ನಿಲ್ದಾಣದ ಹತ್ತಿರ ಏಕೆ ಹೋಗಿದ್ದೆ ಹೇಳೂ” ಎಂದ ನರಸಿಂಹ ಗಂಭೀರವಾಗಿ.
“ಯಾವ ಬಸ್ ನಿಲ್ದಾಣ , ನಾನು ಎಲ್ಲಿಗೆ ಹೋಗಿದ್ದೆ” ಪ್ರದೀಪದ ದ್ವನಿ ನಡುಗುತ್ತಿತ್ತು, ಆದರು ಅಮಾಯಕನಂತೆ ವರ್ತಿಸಲು ಪ್ರಯತ್ನಿಸಿದ.
“ಯಾವ ಬಸ್ ನಿಲ್ದಾಣ ಅಂದರೆ, ಅದೇ ನಿಮ್ಮ ಮೇಷ್ಟ್ರು ಅನಂತರಾಮಯ್ಯನವರು ಕೊಲೆ ಆದರಲ್ಲ ಅಲ್ಲಿಗೆ ಅವತ್ತು  ಏಕೆ ಹೋಗಿದ್ದೆ , ನೋಡು ನನಗೆಲ್ಲ ತಿಳಿದಿದೆ. ಅಲ್ಲಿ ಗುಡಿಸಲಲ್ಲಿ ಇರುವ ಮೂರ್ತಿ ಎಲ್ಲವನ್ನು ಹೇಳಿದ್ದಾನೆ”
ನರಸಿಂಹ ಸುಮ್ಮನೆ ಕತ್ತಲಲ್ಲಿ ಒಂದು ಬಾಣಬಿಟ್ಟ.  ಮೊದಲೆ ಹೆದರಿದ್ದ ಪ್ರದೀಪ ಈಗ ಕುಳಿತುಬಿಟ್ಟ, ಅವನು ಕಣ್ಣಲ್ಲಿ ನೀರು ಬರುತ್ತಿತ್ತು, ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ. ರಾಜಮ್ಮ ಹಾಗು ಅವಳ ಮೊದಲ ಮಗಳು ರಾಧ ಪ್ರದೀಪನನ್ನೆ ನೋಡುತ್ತಿದ್ದರು ಅಚ್ಚರಿಯಿಂದ.  
ನರಸಿಂಹ ಮತ್ತೆ ಹೇಳಿದ ,
“ನೋಡು ಯಾವುದನ್ನು ಮುಚ್ಚಿಡದೆ ಎಲ್ಲವನ್ನು ಹೇಳಿಬಿಡು ನಾನು ಕ್ರಿಮಿನಲ್ ಲಾಯರ್, ನೀನು ನಿಜವನ್ನೆ ಹೇಳಿದರೆ ನಿನ್ನನ್ನು ಹೇಗೆ ಉಳಿಸಬಹುದು ಎಂದು ಯೋಚಿಸುತ್ತೀನಿ, ಆದರೆ ನೀನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮಾತ್ರ  ಶಿಕ್ಷೆ ಕಾದಿದೆ”
ನರಸಿಂಹ ಕಾದಿದ್ದ ಕಬ್ಬಿಣವನ್ನು ಬಡಿಯುತ್ತಿದ್ದ.
“ಇಲ್ಲ ಸಾರ್ ನಾನು   ಬೇಕು ಎಂದು ಮಾಡಿದ್ದಲ್ಲ, ಆಕ್ಸಿಡೆಂಟ್ ತರ ಆಗಿಹೋಯಿತು, ನಾನು ನಿರೀಕ್ಷಿಸಿಯೇ ಇರಲಿಲ್ಲ”
ಅವನ ದ್ವನಿ ಕುಸಿದಿತ್ತು, ಮತ್ತೆ ಹೇಳಿದ
“ಆ ದಿನ ರಾತ್ರಿ ನಾನು ಬಸ್ ಸ್ಟಾಂಡಿನ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದೆ, ಯಾವ ವಾಹನವು ಇರಲಿಲ್ಲ, ಜನರೂ ಇರಲಿಲ್ಲ , ಸ್ವಲ್ಪ ಸ್ಪೀಡಾಗೆ ಬರುತ್ತಿದ್ದೆ, ಬಸ್ ಸ್ಟಾಪಿನ ಹತ್ತಿರ ಬರುವವರೆಗೂ ಗಮನಿಸಲೇ ಇಲ್ಲ , ಇದ್ದಕಿದ್ದಂತೆ ಕತ್ತಲೆಯಲ್ಲಿ ಒಬ್ಬರು ರಸ್ತೆಗೆ ಅಡ್ಡಬಂದುಬಿಟ್ಟರು, ನಾನು ಬ್ರೇಕ್ ಹಾಕಿದೆ, ಏನೆ ಮಾಡಿದರು ಗಾಡಿ ಕಂಟ್ರೋಲ್ ಸಿಗದೆ ಅವರನ್ನು ಉಜ್ಜಿ ಬಿಡ್ತು, ಅವರು ಹಿಂದಕ್ಕೆ ದಬ್ ಎಂದು ಬಿದ್ದು ಬಿಟ್ಟರು. , ಬೀಳುವಾಗ ಅಯ್ಯೋ ಎಂದು ಜೋರಾಗಿ ಕಿರುಚಿದರು.  ನನ್ನ ಗಾಡಿಯು ಕೆಳಗೆ ಬಿತ್ತು, ಯಾರು ಬಿದ್ದವರು ಎಂದು ನೋಡಿದೆ, ಮೇಷ್ಟ್ರು ಅನಂತರಾಮಯ್ಯನವರು, ಏನು ಮಾಡುವುದು ಎಂದು ಗೊತ್ತಾಗಲಿಲ್ಲ, ಅವರು ಹಿಂದಕ್ಕೆ ಬೀಳುವಾಗ ತಲೆ ಅಲ್ಲಿದ್ದ ಕಲ್ಲಿಗೆ ಬಡಿದು ತಲೆಯ ಹಿಂಬಾಗದಿಂದ ರಕ್ತ ಸುರಿಯುತ್ತ ಇತ್ತು. ಮೂರು ನಾಲಕ್ಕು ಸಾರಿ ಕೂಗಿದರು, ಅವರು ಅಲ್ಲಾಡಲೇ ಇಲ್ಲ , ಸುತ್ತಲೂ ಯಾರು ಇರಲಿಲ್ಲ, ನನಗೆ ಭಯ ಎನಿಸಿತು, ಅವರು ಸತ್ತು ಹೋದರೆ ನನ್ನನ್ನು ಪೋಲಿಸರು ಅರೆಸ್ಟ್ ಮಾಡುತ್ತಾರೆ ಅಂತ ಭಯವಾಯಿತು, ಅದಕ್ಕೆ ಅಲ್ಲಿಂದ ನನ್ನ ಬೈಕ್ ತೆಗೆದುಕೊಂಡು   ಹೊರಟು ಹೋದೆ. ಆಮೇಲೆ ಆ ಬಗ್ಗೆ ಏನಾದರು ವಿಷಯ ಗೊತ್ತಾಗಲಿ ಎಂದು ಇವರ ಮನೆಗೆ ಅಗಾಗ್ಯೆ ಬರುತ್ತಿದ್ದೆ”


ಪ್ರದೀಪ ಎಲ್ಲವನ್ನು ಹೇಳಿ ಅಳುತ್ತಿದ್ದ, ರಾಜಮ್ಮನಿಗೆ  ತಡೆಯಲಾಗದ ಅಘಾತವಾದಂತಿತ್ತು, ತನ್ನವರನ್ನು ಕೊಲೆ ಮಾಡಿ ಏನು ತಿಳಿಯದವನಂತೆ , ನನ್ನ ಕಣ್ಣೆದುರೇ ದಿನಾ ಬಂದು ಎದುರಿಗೆ ಕುಳಿತು ಲಲ್ಲೆ ಹೊಡೆಯುತ್ತಿದ್ದ ಅಂತ ತಡೆಯಲಾರದ ಕೋಪ ಬಂದು  ಎದುರಿಗೆ ನಿಂತಿದ್ದ ಅವನ ಕೆನ್ನೆಗೆ ಬಾರಿಸಿ, ಕುಸಿದು ಕುಳಿತರು.  
ಅಲ್ಲಿಂದ ಹೊರಡುವ ಮುಂಚೆ ಪಾಂಡು ರಾಜಮ್ಮನನ್ನು ಕರೆದು ಹೇಳಿದ ,
’ಬಹುಷಃ ನಿಮ್ಮ ಎರಡನೇ ಮಗಳಿಗೆ ಈ ವಿಷಯ ಮೊದಲೆ ಗೊತ್ತಿತ್ತ ಎಂದು ವಿಚಾರಿಸಿ”
ರಾಜಮ್ಮ  ಆಶ್ಚರ್ಯದಿಂದ ’ಏಕೆ?’  ಎಂದರು,
ಪಾಂಡು  ಏನು ಹೇಳಲಿಲ್ಲ. ಅಲ್ಲಿಂದ ತನ್ನ ಬಾಸ್ ಜೊತೆ ಹೊರಟುಬಿಟ್ಟ.


-----------
.


ನ್ಯಾಯದೀಶರಿಗೆ , ನರಸಿಂಹ ಎಲ್ಲವನ್ನು ಅರಿಕೆ ಮಾಡಿ ತನ್ನ ಕ್ಲೈಂಟ್ ವೆಂಕಟೇಶಯ್ಯನವರು ನಿರಪರಾದಿಯೆಂದು ಅವರನ್ನು ಗೌರವ ಪೂರ್ಣವಾಗಿ ಈ ಕೇಸಿನಿಂದ ಮುಕ್ತಗೊಳಿಸಬೇಕೆಂದು ಕೇಳಿದ.
ನ್ಯಾಯಾದೀಶರು ಪೋಲಿಸ್ ತನಿಖಾಧಿಕಾರಿ ಅಶೋಕನನು ತರಾಟೆಗೆ ತೆಗೆದುಕೊಂಡರು, ಪರಿಪೂರ್ಣವಾಗಿ ತನಿಖೆ ಮಾಡದೆ ಕೋರ್ಟಿಗೆ ನಿರಪರಾದಿಯನ್ನು ತಂದು ನಿಲ್ಲಿಸಿದ್ದಕ್ಕಾಗಿ ಚೀಮಾರಿ ಹಾಕಿದರು. ಸಹಜವಾಗಿಯೆ ಕೇಸ್ ಡಿಸಿಮಿಸ್ ಆಯಿತು. ಪೋಲಿಸರು ಪ್ರಾಪ್ತವಯಸ್ಕನಲ್ಲದ ಪ್ರದೀಪನ ಮೇಲೆ ಬೇರೆ ಬಾಲಪರಾದದ ಅಡಿಯಲ್ಲಿ ಕೇಸ್ ದಾಖಲಿಸುವಂತೆ  ನ್ಯಾಯಾದೀಶರು ನಿರ್ದೇಶಿಸಿದರು.


ಅಶೋಕನು ವೆಂಕಟೇಶಯ್ಯನವರಲ್ಲಿ ಕ್ಷಮೆ ಯಾಚಿಸಿದ.


ಕೋರ್ಟಿನ ಹೊರಗೆ  ವೆಂಕಟೇಶಯ್ಯನವರು ನರಸಿಂಹನಿಗೆ ಕೈಮುಗಿದು ನಿಂತಿದ್ದರು,
ನರಸಿಂಹ ನಗುತ್ತ ನುಡಿದ
“ಸಾರ್ ನೀವು ನನಗೆ ಗುರುಗಳು, ಹಿರಿಯರು, ಆಶೀರ್ವಾದ ಮಾಡಬೇಕು, ಕೈ ಮುಗಿಯಬಾರದು, ಇದು ನನ್ನ ಕರ್ತವ್ಯವಾಗಿತ್ತು, ನನ್ನ ಹರಸಿ”
ಅವರನ್ನು ಸಮಾದಾನ ಪಡಿಸಿ ಅಲ್ಲಿಂದ ಹೊರಟ. ಅವನ ಮನದಲ್ಲಿ ಎಂತದೋ ಒಂದು ಶಾಂತಿ ನೆಮ್ಮದಿ ತುಂಬಿಕೊಂಡಿತ್ತು.
ರಾಜಮ್ಮ ವೆಂಕಟೇಶಯ್ಯನವರಲ್ಲಿಗೆ ಬಂದು
“ನಿಮ್ಮನ್ನು ತಪ್ಪಾಗಿ ತಿಳಿದಿದ್ದಕ್ಕೆ ಕ್ಷಮಿಸಿ, ನನ್ನ ಬುದ್ದಿಗೆ ಅದೇನೊ ಮಂಕು ಕವಿದಿತ್ತು, ಹಣಕೊಟ್ಟು ಉಪಕಾರ ಮಾಡಿದ ನಿಮಗೆ ನಮ್ಮಿಂದ ದ್ರೋಹವಾಯಿತು’ ಎಂದು ಕೈಮುಗಿದಳು.
ವೆಂಕಟೇಶಯ್ಯ ಮತ್ತು ಮಹಾಲಕ್ಷ್ಮಮ್ಮ ಏನು ಮಾತನಾಡಲಿಲ್ಲ.
“ಈ ತಿಂಗಳಲ್ಲಿ ಅವರ ಇಲಾಖೆಯಂದ ಹಣ ಬರಲಿದೆ, ಮಗಳಿಗೆ ಕೆಲಸವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ, ನಿಮ್ಮ ಪೂರ್ತಿ ಹಣವನ್ನು ಹಿಂದಕ್ಕೆ ಕೊಡುವ ಜವಾಬ್ದಾರಿ ನನ್ನದು,  ಕೊಡುತ್ತೇನೆ “ ಎಂದು ತಾನಾಗಿಯೆ ಹೇಳಿದಳು.
ಎಲ್ಲೋ ನೋಡುತ್ತ ನಿಂತಿದ್ದ ಪಾಂಡು
“ಸಾರ್ ಏನಾದರು ಆಗಲಿ ನೀವು ಸ್ವಲ್ಪ ಹುಷಾರಾಗಿರಿ, ಈ ಬಾರಿ ಹಣ ಪಡೆಯಲು ನೀವು ಮಾತ್ರ ಹೋಗಬೇಡಿ” ಎಂದ .
ವೆಂಕಟೇಶಯ್ಯನವರಿಗೆ ನಗು ಬರಲಿಲ್ಲ, ಆದರೆ ಮಹಾಲಕ್ಷ್ಮಮ್ಮ ಮಾತ್ರ ಜೋರಾಗಿ ನಕ್ಕುಬಿಟ್ಟರು.



ಮುಗಿಯಿತು.

Thursday, March 27, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)
ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು,  ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ  ಬಾಕಿ ಇತ್ತು  ಸರ್ಕಾರದ ಪರವಾಗಿ.,  ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್ ಕಟಕಟೆಗೆ ಬಂದರು,
‘ಸತ್ಯವನ್ನೆ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೆ ಏನು ಹೇಳುವದಿಲ್ಲ” ಎನ್ನುವ ವಚನ ಸ್ವೀಕರಿಸಿದರು
“ನಿಮ್ಮ ಹೆಸರು” ಸರ್ಕಾರಿ ವಕೀಲರು ಕೇಳಿದರು,
“ನನ್ನ ಹೆಸರು, ಅಶೋಕ್ , ಪೋಲಿಸ್ ಇನ್ಸ್ ಪೆಕ್ಟರ್, ಈ ಕೇಸಿನಲ್ಲಿ ಐ ಓ ಆಗಿದ್ದೇನೆ”
“ಸರಿ ಹೇಳಿ , ನಿಮಗೆ ಈ ಕೇಸಿನ ಬಗ್ಗೆ ಏನು ಹೇಳುವುದಿದೆ?”  ಕೇಳಿದರು ಸರ್ಕಾರಿ ವಕೀಲರು,
“ಸ್ವಾಮಿ  ಕೊಲೆಯಾದ ಅಂದು, ಮಾರ್ಚಿ ೩ ರಂದು ರಾತ್ರಿ ಎಂಟುವರೆ ಗಂಟೆಯಾಗಿತ್ತು, ಆಗ ಪೋಲಿಸ್ ಸ್ಟೇಶನ್ ಗೆ ಒಂದು ಕಾಲ್ ಬಂದಿತು, ಮಹಾಲಕ್ಷ್ಮೀ ಪುರದ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಸತ್ತು ಬಿದ್ದಿರುವನೆಂದು ತಲೆಯಿಂದ ರಕ್ತ ಸುರಿಯುತ್ತ ಇದೆಯೆಂದು ಯಾರೋ ಕೊಲೆಮಾಡಿ ಹಾಕಿರುವರೆಂದು.   ನಾನು ಅಲ್ಲಿ ಹೋಗುವಾಗಲೆ ಜನ ಸೇರಿದ್ದರು ಅವರನ್ನೆಲ್ಲ ದೂರ ಕಳಿಸಿ ಪರೀಕ್ಷಿಸಿದೆವು, ಅಲ್ಲಿ ಬಿದ್ದಿದ್ದ ವ್ಯಕ್ತಿ ಅನಂತರಾಮಯ್ಯ ಎನ್ನುವುದು ತಿಳಿಯಿತು ಅವರ ಪತ್ನಿಯೂ ಅಲ್ಲಿ ಬಂದಿದ್ದರು, ಆಗ ವಿಷಯವೆಲ್ಲ ತಿಳಿಯಿತು, ಮೃತನ ಸ್ನೇಹಿತ ವೆಂಕಟೇಶಯ್ಯ ಅನ್ನುವರು ಅವರ ಜೊತೆ ಹೊರಟರೆಂದು , ನಂತರ ಅವರು ಹೊರಟುಹೋಗಿರುವದಾಗಿ, ತಿಳಿಯಿತು. ಮೃತ ವ್ಯಕ್ತಿಯ ಸಮೀಪವೆ ರಕ್ತಸಿಕ್ತ ಕಲ್ಲು ಬಿದ್ದಿತ್ತು. ತಕ್ಷವೆ ತನಿಖೆಗೆ ಸಹಾಯವಾಗಬಹುದಾದ ವಿಷಯಗಳನ್ನೆಲ್ಲ ಸಂಗ್ರಹಿಸಿದೆ, ಹಾಗು ಮೃತನ ಶರೀರವನ್ನು ಆಸ್ಪತ್ರೆಗೆ ಸಾಗಿಸಲು ಏರ್ಪಾಡುಮಾಡಿದೆ. ಹಾಗೆ ವೆಂಕಟೇಶಯ್ಯನವರ ವಿಳಾಸ ಪಡೆದು, ಕೊಲೆಯಾದ ಸ್ಥಳದಿಂದ ಕಣ್ಮರೆಯಾಗಿ ಓಡಿಹೋಗಿದ್ದ  ಅವರನ್ನು ಹುಡುಕುತ್ತ ಹೋಗಿ ಅವರ ಮನೆಯಲ್ಲಿಯೆ ಇದ್ದ ಅವರನ್ನು ದಸ್ತಗಿರಿ ಮಾಡಿ ಕರೆತಂದೆ. ಅಲ್ಲಿ ಇದ್ದ ಎಲ್ಲ ಸಾಕ್ಷಿಗಳು ವೆಂಕಟೇಶಯ್ಯನವರೇ ಕೊಲೆ ಮಾಡಿದ್ದಾರೆಂದು ಸಾರಿ ಹೇಳುತ್ತಿದ್ದವು. ಅಲ್ಲದೆ ಸ್ಥಳದಿಂದ ಕಣ್ಮರೆಯಾಗಿದ್ದರಿಂದ ವೆಂಕಟೇಶಯ್ಯವರ ಬಗ್ಗೆ ಅನುಮಾನ ಹೆಚ್ಚಿಸಿತು. ಎಫ್ ಐ ಅರ್ ಬುಕ್ ಮಾಡಿ ನಂತರ ಕೋರ್ಟಿಗೆ ಹಾಜರುಪಡಿಸಿದೆ, ಅವರು ಬೇಲ್ ಪಡೆದುಕೊಂಡರು” ಎಂದು ತಿಳಿಸಿದರು.
ಸರ್ಕಾರಿ ವಕೀಲರು ಕೇಳಿದರು
“ಸರಿ ಆಗ ನೇರ ಸಾಕ್ಷಿ ಯಾರು ಇರಲಿಲ್ಲ ಎಂದು ನಮೂದಿಸಿದ್ದೀರಿ, ನಂತರ ಶಿವಣ್ಣ ಎನ್ನುವರು ಹೇಗೆ ಬಂದರು”
“ಇಲ್ಲ ಎಫ್ ಐ ಅರ್ ಹಾಕುವಾಗ ನೇರ ಸಾಕ್ಷಿಯ ಬಗ್ಗೆ ಮಾಹಿತಿ ಇರಲಿಲ್ಲ, ಈ ಕೇಸ್ ಬಗ್ಗೆ ಪೇಪರ್ ಹಾಗು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಶಿವಣ್ಣ ಎನ್ನುವವರು ತಾವಾಗಿಯೆ ಬಂದು ನಾನು ಈ ಕೊಲೆಯನ್ನು ನೇರ ನೋಡಿದ್ದೇನೆ, ಆಗ ನನಗೆ ಅವರು ಸತ್ತರು ಎಂದು ಗೊತ್ತಿರಲಿಲ್ಲ, ಅಸ್ಪತ್ರೆಗೆ ಕರೆದೋಯ್ದರು ಅಂದುಕೊಂಡಿದ್ದೆ   ಎಂದು ತಿಳಿಸಿದರು, ಹಾಗಾಗಿ ನಂತರ ಅವರ ಸಾಕ್ಷಿಯನ್ನು ಕೋರ್ಟಿಗೆ ಹಾಜರು ಪಡಿಸಲಾಗಿದೆ “  
“ಈ ಕೊಲೆ ಹೇಗೆ ನಡೆದಿದೆ ಎಂದು ನೀವು ಹೇಳುವಿರಿ?”
“ಈ ಮೊದಲೇ ತಿಳಿಸಿದಂತೆ ಅನಂತರಾಮಯ್ಯನವರು ವೆಂಕಟೇಶಯ್ಯನವರ ಹತ್ತಿರ ಬಡ್ಡಿಗೆ ಹಣ ಪಡೆದಿದ್ದಾರೆ, ಆದರೆ ಅಸಲನ್ನಾಗಲಿ ಬಡ್ಡಿಯನ್ನಾಗಲಿ ಹಿಂದೆ ಕೊಟ್ಟಿಲ್ಲ, ಹಾಗಾಗಿ ಅದನ್ನು ಕೇಳಲು ಮನೆಗೆ ಬಂದಿದ್ದಾರೆ, ಮಾತಿಗೆ ಮಾತು ಬೆಳೆದು ಜಗಳವಾಗಿದೆ ನಂತರ ಉಪಾಯವಾಗಿ ಒಬ್ಬರನ್ನೆ ಬಸ್ ನಿಲ್ದಾಣಾಕ್ಕೆ ಕರೆದೋಯಿದಿದ್ದಾರೆ ಅಲ್ಲಿ ಸಮಯನೋಡಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಅಲ್ಲಿಂದ ಬಸ್ ಹತ್ತಿ ಓಡಿ ಹೋಗಿದ್ದಾರೆ”  
ಅಶೋಕರ ಮಾತಿಗೆ ವಕೀಲರು
“ಆದರೆ ಇಲ್ಲಿ ಕೊಲೆಯನ್ನು ನೋಡಿದ ನೇರ ಸಾಕ್ಷಿಗಳಿಲ್ಲ, ನೀವು ತಂದಿರುವ ಸಾಕ್ಷಿಯೂ ನಾನು ದೂರದಲ್ಲಿದ್ದೆ ಕತ್ತಲಿನ ಕಾರಣ ಮುಖ ಅಸ್ವಷ್ಟ ಎಂದು ತಿಳಿಸುತ್ತಿದ್ದಾರೆ , ಹಾಗಿರುವಾಗ ವೆಂಕಟೇಶಯ್ಯನವರೇ ಕೊಲೆ ಮಾಡಿರುವುದು ಎಂದು ನೀವು ಹೇಗೆ ಸಾಧಿಸುವಿರಿ”
ವಕೀಲರಿಗೆ ಉತ್ತರಿಸುತ್ತ ಅಶೋಕರವರು
“ಕೊಲೆಗಾರನ ಪಾತ್ರ ನಿರ್ಧರಿಸುವಾಗ, ನೇರಸಾಕ್ಷಿ ಮುಖ್ಯವಾದರು, ಕೆಲವೊಮ್ಮೆ ಸಾಂದರ್ಭಿಕ ಸಾಕ್ಷಗಳನ್ನು ಅವಲಂಬಿಸಬೇಕಾಗುತ್ತೆ. ಇಲ್ಲಿ ಕೊಲೆಗಾರನಿಗೆ ಕೊಲೆಮಾಡಲು ಉದ್ದೇಶವಿದೆ, ತನ್ನ ಹಣ ಹೋಯಿತು ಎನ್ನುವ ರೋಷವಿದೆ. ಅನಂತರಾಮಯ್ಯ ಸಾಯುವಾಗ ವೆಂಕಟೇಶಯ್ಯ ಬಿಟ್ಟು ಬೇರೆ ಯಾರು ಹತ್ತಿರದಲ್ಲಿ ಇಲ್ಲ ಅನ್ನುವದನ್ನು ಗಮನಿಸಿಬೇಕು. ಅನಂತರಾಮಯ್ಯನವರದು ಸಹಜ ಮರಣವಲ್ಲ  ಅನ್ನುವದನ್ನು ಕಲ್ಲಿಗೆ  ಹತ್ತಿರುವ ರಕ್ತ , ಶವಪರೀಕ್ಷೆ ಇವೆಲ್ಲ ದೃಡಪಡಿಸಿವೆ. ಅಲ್ಲದೆ ಅನಂತರಾಮಯ್ಯ ಸತ್ತ ನಂತರ ವೆಂಕಟೇಶಯ್ಯನವರು ಸ್ಥಳದಿಂದ ಕಣ್ಮರೆಯಾಗುತ್ತಾರೆ, ಇವೆಲ್ಲವನ್ನು ಗಮನಿಸುವಾಗ ವೆಂಕಟೇಶಯ್ಯವರೆ ಅನಂತರಾಮಯ್ಯನವರ ಕೊಲೆ ಮಾಡಿದ್ದಾರೆ ಎಂದು ಸಾಧಿಸುತ್ತದೆ ಅಲ್ಲವೆ ?” ಎಂದರು
ಸರ್ಕಾರಿ ವಕೀಲರು ನ್ಯಾಯದೀಶರತ್ತ ತಿರುಗಿ ಅಷ್ಟೆ ಸ್ವಾಮಿ ಎಂದು ನುಡಿದರು.

ನ್ಯಾಯಾದೀಶರು ನರಸಿಂಹನತ್ತ ತಿರುಗಿದರು, ನರಸಿಂಹ ಎದ್ದು ನಿಂತ.
’ಸ್ವಾಮಿ ನಿಮ್ಮ ಅಪ್ಪಣೆಯಾದರೆ , ನಾನು ಪೋಲಿಸ್ ಅಧಿಕಾರಿ ಅಶೋಕ್‍ರವರನ್ನು ಕೆಲವು ಪ್ರಶ್ನೆ ಕೇಳುವದಿದೆ’
ಅದಕ್ಕೆ ನ್ಯಾಯದೀಶರು,
“ನಿಮ್ಮ ಪರವಾಗಿ ಯಾವುದಾದರು ಸಾಕ್ಷಿಗಳನ್ನು ದಾಖಲೆಗಳನ್ನು ಒದಗಿಸುವುದು ಇದೆಯಾ?”
“ಇದೇ ಸ್ವಾಮಿ, ಸಾಕ್ಷಿಗಳಿದ್ದಾರೆ, ಮೊದಲು ಅಶೋಕರನ್ನು ಪ್ರಶ್ನೆ ಕೇಳಲು ಅವಕಾಶಕೊಟ್ಟರೆ, ಅವರು ಸತ್ಯವನ್ನೆ ಹೇಳಿದರೆ, ನನಗೆ ಸಾಕ್ಷಿಯನ್ನು ನಿಮ್ಮ ಮುಂದೆ ನಿಲ್ಲಿಸುವ ಅಗತ್ಯವೇ ಇರುವದಿಲ್ಲ’ ಎಂದನು ನರಸಿಂಹ.
ಸರ್ಕಾರಿ ವಕೀಲರು ಎದ್ದು ನಿಂತು,
“ಸ್ವಾಮಿ , ಅರೋಪಿಗಳ ವಕೀಲರು, ಅಶೋಕರವರು ತಮ್ಮ ವಿವರಣೆ ನೀಡುವದಕ್ಕೆ ಮೊದಲೆ, ಸುಳ್ಳು ಹೇಳುತ್ತಿದ್ದಾರೆ ಎಂದು ಅರೋಪಿಸುತ್ತಿದ್ದಾರೆ, ಹೇಗೆ ಸಾದ್ಯ” ಎಂದರು,
ಅದಕ್ಕೆ ನರಸಿಂಹನು
“ಕ್ಷಮಿಸಿ ಸ್ವಾಮಿ, ನಾನು ಹಾಗೆ ಹೇಳಲಿಲ್ಲ, ಪೋಲಿಸ್ ಅಧಿಕಾರಿ ಅಶೋಕರವರು ಹೇಳುವ ಮಾತು ನಮಗೆ ಒಪ್ಪಿಯಾದರೆ , ನಿಜವಾಗಿದ್ದರೆ ಆಗ ನಮಗೆ ನಮ್ಮ ಪರ ಸಾಕ್ಷಿಯ ಅಗತ್ಯವೇ ಇರುವದಿಲ್ಲ ಅಂದೆ ಅಷ್ಟೆ” ಎಂದನು.
ನ್ಯಾಯಾದೀಶರು,
“ಸರಿ ಸುಮ್ಮನ್ನೆ ಮಾತಿನ ಕಾಲಹರಣ ಬೇಡ, ಕೋರ್ಟಿನ ಸಮಯ ವ್ಯರ್ಥ ಮಾಡದೆ ಪಾಟಿಸವಾಲು ಮಾಡಿ”
ಎಂದು ಸೂಚಿಸಲು, ನರಸಿಂಹನು ಅಶೋಕನ ಎದುರಿಗೆ ಬಂದು ನಿಂತನು
“ತಮ್ಮ ಹೆಸರು”
“ಅಶೋಕ ಎಂದು, ಮಹಾಲಕ್ಷ್ಮೀಪುರದ ಪೋಲಿಸ್ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿ ಕೆಲಸ, ಪ್ರಸ್ತುತ ಈ ಕೇಸಿನ ವಿಚಾರಣ ಅಧಿಕಾರಿ”
“ಸಂತೋಷ, ಈಗ ಕೊಲೆಗೆ ಸಂಬಂಧಿಸಿದ ಪ್ರಶ್ನೆಗೆ ಬರುವ ಮೊದಲು ತಮ್ಮನ್ನು ಈ ಕೇಸಿನಲ್ಲಿ ತಾನು ಹೊರಿಸಿರುವ ಅಪರಾದಗಳ ಬಗ್ಗೆ ಪ್ರಶ್ನೆ ಕೇಳುತ್ತೇನೆ ಆಗಬಹುದೇ?”
ಆಗಲಿ ಎನ್ನುವಂತೆ ತಲೆ ಆಡಿಸಿದ , ಅಶೋಕ್
“ಅರೋಪಿ ವೆಂಕಟೇಶಯ್ಯನವರು, ಅನದಿಕೃತ ಲೇವಾದೇವಿ ಮಾಡುತ್ತಿದ್ದರೆಂದು ಅರೋಪಿಸಿದ್ದೀರಿ ಅದಕ್ಕೆ ಸಾಕ್ಷಿ ಒದಗಿಸಿದ್ದೀರಾ?”
“ಇದೆಯಲ್ಲ, ತಾವು ಬಡ್ಡಿಗೆ ಹಣ ಕೊಟ್ಟಿರುವುದಾಗಿ ಅರೋಪಿಯೆ ಒಪ್ಪಿಕೊಂಡಿದ್ದಾರೆ,  ಮೃತರ ಪತ್ನಿಯೂ ಸಾಕ್ಷಿಯಾಗಿದ್ದಾರೆ, ಅಲ್ಲದೆ ಅರೋಪಿಯ ಬ್ಯಾಂಕ್ ಪಾಸ್ ಬುಕ್ಕಿನಲ್ಲಿ ಮೃತರಿಗೆ ಕೊಟ್ಟಿರುವ ಐದು ಲಕ್ಷ ಹಣದ ಚೆಕ್ ಬಗ್ಗೆ ವಿವರ ಒದಗಿಸಿಲಾಗಿದೆ”
“ತಾವು ಹಣ ಕೊಟ್ಟಿರುವದಾಗಿ ಮಾತ್ರ ವೆಂಕಟೇಶಯ್ಯನವರು ಹೇಳಿದ್ದಾರೆ, ಆದರೆ ಬಡ್ಡಿಗೆ ಎಂದು ಅವರಾಗಲಿ, ಅಥವ ಮೃತರ ಪತ್ನಿಯಾಗಲಿ ಒಪ್ಪಿಕೊಂಡಿಲ್ಲ. ಗೆಳೆಯ ಮನೆ ಕಟ್ಟುತ್ತಿದ್ದಾನೆ ಅವನು ಬಂದು ಹಣದ ಸಹಾಯ ಕೇಳಿದಾಗ, ಕೈಗಡ ಎಂದು ಕೊಟ್ಟಿದ್ದಾರೆ ಅಷ್ಟೆ, ಎರಡು ತಿಂಗಳಲ್ಲಿ ಹಿಂದಕ್ಕೆ ಕೊಡು ಎಂದು , ಅದು ಅನಧಿಕೃತ ಲೇವಾದೇವಿಗೆ ಹೇಗೆ ಬರುತ್ತದೆ. ಅಲ್ಲದೆ ಆ ಹಣಕ್ಕೆ ಯಾವುದೆ ಗ್ಯಾರಂಟಿ, ಆಗಲಿ ಪತ್ರವ್ಯವಹಾರವಾಗಲಿ ಇಲ್ಲ, ಹಾಗಿರುವಾಗ ಅದು ಲೇವಾದೇವಿ ಆಗುತ್ತದೆಯ”
ನರಸಿಂಹ ಕೇಳಿದ
“ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಯಾರು ಹಾಗೆ ಕೊಡುವದಿಲ್ಲ ಅಲ್ಲವೇ, ಬಡ್ಡಿ ಇಲ್ಲದಿದ್ದರೆ?”
ಅಶೋಕ್ ಕೇಳಿದರು
ಅದಕ್ಕೆ ನರಸಿಂಹ
“ನೀವು ನನ್ನ ಪ್ರಶ್ನೆಗೆ ಉತ್ತರ ಹೇಳದೆ ನನ್ನನ್ನೆ ಪ್ರಶ್ನೆ ಕೇಳುತ್ತಿರುವಿರಿ, ನೀವು ಅರೋಪಿಸಿದ ಹಣದ ಲೇವಾದೇವಿಗೆ ಯಾವುದೇ ಸಾಕ್ಷ್ಯವಿಲ್ಲ. ಹೋಗಲಿ , ಆ ರೀತಿ ಅವರು ವ್ಯವಹಾರ ಮಾಡುತ್ತಿದ್ದರೆ, ಅವರು ಅನಂತರಾಮಯ್ಯನ ಹೊರತು ಬೇರೆ ಯಾರ ಜೊತೆಗಾದರು ಮಾಡಿರುವ ವ್ಯವಹಾರಗಳ ದಾಖಲೆ ಇದೆಯ?” ಎಂದ ನರಸಿಂಹ
ಪೋಲಿಸ್ ಅಧಿಕಾರಿ ಅಶೋಕ್
“ಇಲ್ಲ ನಾನು ಆ ರೀತಿಯ ಸಾಕ್ಷ್ಯ ಒದಗಿಸಿಲ್ಲ, ಈ ಕೇಸಿಗೆ ಸಂಬಂದಿಸಿದಂತೆ ಮಾತ್ರ ದಾಖಲೆ ಕೊಟ್ಟಿರುವೆ”
ನರಸಿಂಹ ಪ್ರಶ್ನಿಸಿದ
“ಸರಿ, ಹಾಗಿದ್ದರೆ, ಅವರು ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು ಎನ್ನುವದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಅಲ್ಲವೇ?”
ಅಶೋಕ್ ಉತ್ತರ ಕೊಡಲಿಲ್ಲ. ಮೌನವಾಗಿದ್ದ.
“ಹೋಗಲಿ ಹಣದ ವಿಷಯ ಬಿಡೋಣ, ನೀವು ವೆಂಕಟೇಶಯ್ಯನವರೆ ಕೊಲೆ ಮಾಡಿರುವರೆಂದು ಹೇಗೆ ನಿರ್ಧರಿಸಿದಿರಿ?”  ನರಸಿಂಹ ಪ್ರಸ್ನಿಸಿದ
ಅದಕ್ಕೆ ಉತ್ತರಿಸುತ್ತ ಅಶೋಕ್
“ಆ ದಿನ ಮಹಾಲಕ್ಷ್ಮೀಪುರದ ನಗರ ಬಸ್ ನಿಲ್ದಾಣದ ಬಳಿ ಯಾವುದೋ ಕೊಲೆಯಾಗಿರುವದೆಂದು ಸಾರ್ವಜಕರು ಯಾರೊ ಪೋನ್ ಮಾಡಿ ತಿಳಿಸಿದರು, ರಾತ್ರಿ ಎಂಟುವರೆ ಸಮಯ ಅನ್ನಿಸುತ್ತೆ, ನಾನು ತಕ್ಷಣ ಅಲ್ಲಿಗೆ ಹೋದೆ, ಆಗಲೆ ಜನ ಸೇರಿದ್ದರು, ಮೃತರ ಪತ್ನಿ ರಾಜಮ್ಮ ಅಲ್ಲಿದ್ದರು,  ತಮ್ಮ ಗಂಡನೊಂದಿಗೆ ವೆಂಕಟೇಶಯ್ಯ ಸಹ  ಒಟ್ಟಿಗೆ ಬಸ್ ನಿಲ್ದಾಣಕ್ಕೆ ಹೊರಟರೆಂದು , ಈಗ ಇಲ್ಲಿ ತನ್ನ ಗಂಡ ತಲೆಯೊಡೆದು ಬಿದ್ದಿರುವದಲ್ಲದೆ, ವೆಂಕಟೇಶಯ್ಯ ಅಲ್ಲಿಂದ ಕಣ್ಮರೆಯಾಗಿದ್ದಾರೆಂದು ತಿಳಿಸಿದರು.
 ಹಣದ ವಿಷಯಕ್ಕೆ ಸಂಜೆಯಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿಸಿದರಲ್ಲದೆ, ಕೂಗಾಟ ನಡೆಯುತ್ತ ಇತ್ತು ಎಂದು ತಿಳಿಸಿದರು, ವೆಂಕಟೇಶಯ್ಯ ತನ್ನ ಗಂಡನ ಕೊಲೆ ಮಾಡಿ ಅಲ್ಲಿಂದ ಓಡಿಹೋಗಿದ್ದಾರೆಂದು ತಿಳಿಸಿದರು, ಆಗ ವೆಂಕಟೇಶಯ್ಯನವರ ಮನೆಯ ವಿಳಾಸ ಪಡೆದು, ಅಲ್ಲಿಗೆ ಹೋಗಿ ಅವರನ್ನು ದಸ್ತಗಿರಿ ಮಾಡಿದೆ”

ನರಸಿಂಹ ವ್ಯಂಗ್ಯದಿಂದ ಕೇಳಿದ,  
“ನೀವು ವೆಂಕಟೇಶಯ್ಯನವರ ಮನೆಗೆ ಹೋದಾಗ ಅವರೇನು ಮಾಡುತ್ತ ಇದ್ದರು, ಬಟ್ಟೆಗಳನ್ನು ಬ್ಯಾಗಿನಲ್ಲಿ ತುರುಕಿ ಪ್ಲೇನಿನಲ್ಲಿ ವಿದೇಶಕ್ಕೆ ಹಾರಿಹೋಗಲು ಹೊರಟಿದ್ದರಾ?”

ಅಶೋಕ್ ಗಂಭೀರವಾಗಿ
“ಇಲ್ಲ ನಾನು ಹೋದಾಗ ಮನೆಯಲ್ಲಿ ಊಟಮಾಡುತ್ತ ಕುಳಿತಿದ್ದರು, ಎದ್ದು ಬಂದರು” ಅಶೋಕನ ದ್ವನಿ ಸ್ವಲ್ಪ ತಗ್ಗಿತ್ತು.

“ಮತ್ತೆ ಅವರು ಕೊಲೆಯ ನಂತರ ಕಣ್ಮರೆಯಾಗಿದ್ದರು ಎಂದು ತಿಳಿಸಿದ್ದೀರಿ, ಅಲ್ಲ ಮನೆಯಲ್ಲಿ ಊಟಮಾಡುತ್ತ ನೆಮ್ಮದಿಯಾಗಿ ಕುಳಿತಿರುವವರನ್ನು ಕಣ್ಮರೆ ಎಂದರೆ ಹೇಗೇ , ಅವರೇನು ಮನೆ ದೇಶ ಬಿಟ್ಟು ಹೋಗಿ ಅಡಗಿದ್ದರಾ?” ಎಂದ ನರಸಿಂಹ ಗಟ್ಟಿಯಾದ ದ್ವನಿಯಲ್ಲಿ.
ಅದಕ್ಕೆ ಅಶೋಕ್
“ಹಾಗಲ್ಲ , ಅವರ ಸ್ನೇಹಿತ ಅನಂತರಾಮಯ್ಯ ಬಸ್ ನಿಲ್ದಾಣದಲ್ಲಿ ಸತ್ತು ಬಿದ್ದಾಗ, ಇವರು ನಿಜಕ್ಕೂ ನಿರಾಪರಾದಿಯಾಗಿದ್ದರೆ ಕಡೆಯಪಕ್ಷ ಪೋಲಿಸರಿಗೆ, ಮನೆಯವರಿಗೆ ವಿಷಯ ತಿಳಿಸಬಹುದಿತ್ತಲ್ಲ, ಹಾಗೆ ಏಕೆ ಓಡಿಹೋದರು”
ನರಸಿಂಹ ಹೇಳಿದ.
“ಸರಿಯಾಗಿ ಕೇಳಿದಿರಿ, ಏಕೆ ಹಾಗೆ ಹೋದರೆಂದರೆ ಆಗ ಅನಂತರಾಮಯ್ಯನವರ ಕೊಲೆ ಆಗಿರಲಿಲ್ಲ, ವೆಂಕಟೇಶಯ್ಯನವರು ಬಸ್ಸು ಹತ್ತುವವರೆಗೂ ಅನಂತರಾಮಯ್ಯ ಸರಿಯಾಗಿಯೇ ಇದ್ದರು, ಹಾಗಾಗಿ ಅವರಿಗೆ ಪೋಲಿಸ್ ಅಥವ ಮನೆಯವರಿಗೆ ತಿಳಿಸುವ ಪ್ರಮೇಯವೇ ಬರಲಿಲ್ಲ,  ಅವರ ಎದುರಿಗೆ ಅನಂತರಾಮಯ್ಯನವರಿಗೆ ಏನಾದರು ಆಗಿದ್ದಲ್ಲಿ, ಅವರು ನೀವು ತಿಳಿಸಿದ್ದಂತೆ ಮಾಡುತ್ತಿದ್ದರು ಅಲ್ಲವೇ?”

ನರಸಿಂಹನ ತರ್ಕದ ವಾದಕ್ಕೆ ಪೋಲಿಸ್ ಅಧಿಕಾರಿ ಅಶೋಕನ ಬಾಯಿ ತಗ್ಗಿತ್ತು, ಆದರೂ ನುಡಿದ
“ಅದು ನೀವು ಹೇಳುತ್ತಿರುವ ತರ್ಕ, ಆದರೆ ಅನಂತರಾಮಯ್ಯನವರನ್ನು ಕೊಲ್ಲಲು ವೆಂಕಟೇಶಯ್ಯನವರಿಗೆ ಎಲ್ಲ ಕಾರಣಗಳೂ , ಸಂದರ್ಭದ ಅನುಕೂಲವೂ ಇದ್ದವೂ, ಹಾಗಾಗಿ ಅವರು ಕೊಲೆ ಮಾಡಿ ಅಲ್ಲಿಂದ ಮರೆಯಾದರು ಅನ್ನುವುದು ಸತ್ಯ”

ನರಸಿಂಹ
“ಸರಿ ಈಗ ನಿಮ್ಮ ತರ್ಕದ ಪ್ರಕಾರ ವೆಂಕಟೇಶಯ್ಯವರು ಹೇಗೆ ಕೊಲೆ ಮಾಡಿದ್ದಾರೆ ಎಂದು ನೀವು ಹೇಳುವುದು”

ಅಶೋಕ ಹೇಳಿದ್ದ,
“ಅದನ್ನು ಸಾಕಷ್ಟು ಬಾರಿ ನಿಮ್ಮ ಎದುರಿಗೆ ಕೋರ್ಟಿನಲ್ಲಿ ಹೇಳಲಾಗಿದೆ, ಅದಕ್ಕೆ ತಕ್ಕ ಸಾಕ್ಷಿಯನ್ನು ನಾವು ಕೊಟ್ಟಿದ್ದೇವೆ, ವೆಂಕಟೇಶಯ್ಯನವರು ರಸ್ತೆಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿ ಹಿಂಬದಿಹಿಂದ ಅನಂತರಾಮಯ್ಯನವರ ತಲೆಗೆ ಬಾರಿಸಿದ್ದಾರೆ, ನಂತರ ಕಲ್ಲನ್ನು ಅಲ್ಲೆ ಎಸೆದು ಓಡಿಹೋಗಿದ್ದಾರೆ, ಕಲ್ಲಿನ ಮೇಲಿನ ರಕ್ತದ ಕಲೆ ಅನಂತರಾಮಯ್ಯನವರದೇ ಎಂದು ಮೆಡಿಕಲ್ ರಿಪೋರ್ಟ್‍ನಲ್ಲಿ ಸಾಬೀತಾಗಿದೆ”
ನರಸಿಂಹ ಕೇಳಿದ
“ಅಕಲ್ಲಿನ ಮೇಲೆ ವೆಂಕಟೇಶ್ಯನವರ ಬೆರಳಗುರುತೇನಾದರು ಸಿಕ್ಕಿದೆಯಾ ಪರೀಕ್ಷೆ ಮಾಡಿಸಿದ್ದೀರಾ?”
ಅಶೋಕ ಹೇಳಿದರು
“ಇಲ್ಲ ಅದು ರಸ್ತೆಯಲ್ಲಿ ಬಿದ್ದಿದ್ದ, ಮಣ್ಣು ಮುಚ್ಚಿದ್ದ ಕಲ್ಲು, ಅಲ್ಲದೆ ಅದು ಸಂಪೂರ್ಣ ರಕ್ದದಿಂದ ತೋಯ್ದು ಹೋಗಿದೆ ಹಾಗಾಗಿ ಅದರ ಮೇಲೆ  ಬೆರಳಗುರುತು ಸಿಗುವ ಹಾಗಿರಲಿಲ್ಲ”

ನರಸಿಂಹ ಮತ್ತೆ ಪ್ರಶ್ನಿಸಿದ.
“ಅದು ಹೋಗಲಿ ಬಿಡಿ, ನೀವು ಹೇಳಿದಂತೆ ಹಿಂದಿನಿಂದ ತನಗಿಂತ ಎತ್ತರವಿರುವ ಅನಂತರಾಮಯ್ಯನವರ ತಲೆಗೆ ವೆಂಕಟೇಶ್ಯನವರು ಜೋರಾಗಿ ಹೊಡೆದಿದ್ದಾರೆ ಎಂದರೆ,  ಅವರು ಅಷ್ಟು ಶಕ್ತಿವಂತರಲ್ಲ,ಇರಲಿ, ಹಾಗೆ ಹಾಗಿದ್ದರು ವೆಂಕಟೇಶಯ್ಯನವರ ಬಟ್ಟೆ ರಕ್ತದಿಂದ ತೋಯ್ಯಬೇಕಾಗಿತ್ತು, ನೀವು ಆ ರೀತಿ ವೆಂಕಟೇಯ್ಯನವರ ರಕ್ತ ಸಿಕ್ತ ಬಟ್ಟೆ ಏನಾದರು ವಶಪಡಿಸಿಕೊಂಡಿದ್ದೀರಾ?”
ನರಸಿಂಹನ ಪ್ರಶ್ನೆಗೆ ಅಶೋಕ ಗಲಿಬಿಲಿಗೊಂಡ, ಆ ವಿಷಯ ಅವನು ಮರೆತಿದ್ದ,
“ಇಲ್ಲ ಆ ರೀತಿ ಬಟ್ಟೆ ಯಾವುದೂ ಸಿಗಲಿಲ್ಲ, ಬಹುಷಃ ಅವರು ಅದನ್ನು ಮುಚ್ಚಿಟ್ಟು ನಾಶ ಮಾಡಿರಬಹುದು”
ನರಸಿಂಹ  ಮತ್ತೆ ಜೋರಾಗಿ ಹೇಳಿದ
“ಇನ್ಸ್‍ಪೆಕ್ಟರ್ ಅಶೋಕ್ ರವರೆ ,  ಕಲ್ಪನೆಯ ಉತ್ತರ ನೀಡುತ್ತ ಇರುವಿರಿ .ನೀವು ಕೊಲೆಯಾದ ಒಂದು ಘಂಟೆಯೊಳಗೆ ಅರೋಪಿಯ ಮನೆಗೆ ಹೋಗಿದ್ದೀರಿ, ಅಷ್ಟು ಸಮಯದಲ್ಲಿ ಅವರು ಬಸ್ಸಿನಲ್ಲಿ ಮನೆಗೆ ಹೋಗಿ, ರಕ್ತದ ಕಲೆಯನ್ನೆಲ್ಲ ತೊಳೆದು, ಬಟ್ಟೆಯನ್ನು ನಾಶಮಾಡಿ, ಶಾಂತರಾಗಿ ಊಟಮಾಡುತ್ತ ಕುಳಿತುಕೊಳ್ಳುವುದು ಸಾದ್ಯವೇ,  ಅಲ್ಲದೇ ಅವರು ಅದೇ ರಕ್ತದ ಬಟ್ಟೆಯಲ್ಲಿಯೆ ಬಸ್ ಹತ್ತಿ ಪ್ರಯಾಣ ಮಾಡಿದರು ಎನ್ನುವಾಗ, ನಿಮ್ಮ ತರ್ಕದಲ್ಲಿ ಲೋಪವಿದೆ ಅನ್ನಿಸಲ್ಲವೆ, ಅದಾಗ್ಯು ಈ ಮೇಷ್ಟ್ರು ವೆಂಕಟೇಶಯ್ಯನವರು   ಪ್ರೊಫೆಷನ ಕೊಲೆಗಾರ ಏನಲ್ಲ, ಅಷ್ಟು ತಣ್ಣಗೆ ಎಲ್ಲ ಮಾಡಿ ಮುಗಿಸಿ ಕೂಡಲು, ಇವರಿಗೆ ಯಾವುದೇ ಕ್ರಿಮಿನಲ್ ಬ್ಯಾಗ್ರೌಂಡ ಸಹ ಇಲ್ಲ “
ನರಸಿಂಹ ಅಶೋಕನ ಮುಖವನ್ನೆ ನೋಡುತ್ತಿದ್ದ.

ಅಶೋಕ
“ಇರಬಹುದು, ಆದರೆ ಆ ಸಂದರ್ಭದಲ್ಲಿ ವೆಂಕಟೇಶಯ್ಯನವರನ್ನು ಹೊರತುಪಡಿಸಿ, ಮತ್ತೇ ಯಾರಿಗೂ ಅನಂತರಾಮಯ್ಯನನ್ನು ಕೊಲೆಮಾಡಲು ಅವಕಾಶವೂ ಇಲ್ಲ, ಕಾರಣವೂ ಇಲ್ಲ, ಅವರನ್ನು ಬಿಟ್ಟು ಮತ್ತೆ ಯಾರು ಕೊಲೆಮಾಡಲು ಸಾದ್ಯ?”
ನರಸಿಂಹ ನಗುತ್ತ ನುಡಿದ
“ಯಾರು ಕೊಲೆಮಾಡಲು ಸಾದ್ಯ ಎಂದು ಹೇಳುವುದು ನನ್ನ ಕೆಲಸವಲ್ಲ ನಿಮ್ಮ ಕೆಲಸ, ನನ್ನ ಕೆಲಸವೆಂದರೆ ವೆಂಕಟೇಶಯ್ಯನವರು ಕೊಲೆ ಮಾಡಲು ಸಾದ್ಯವಿಲ್ಲ ಎಂದು ಹೇಳುವದಷ್ಟೆ, ನನ್ನ ಕ್ಲೈಂಟ್ ನಿರಪರಾದಿ ಎಂದು ತೋರಿಸುವುದು”
ಅಶೋಕ   
“ಅದಕ್ಕಾಗಿಯೆ ನನ್ನ ಕೆಲಸವೆಂದ, ಹೇಳುತ್ತಿರುವೆ, ನನ್ನ ಪ್ರಕಾರ ವೆಂಕಟೇಶಯ್ಯನವರನ್ನು ಬಿಟ್ಟರೆ ಮತ್ತೆ ಯಾರು ಅನಂತರಾಮುವನ್ನು ಆ ಸಮಯದಲ್ಲಿ ಬೇಟಿ ಮಾಡಲೇ ಇಲ್ಲ, ಅದೇ ನಮ್ಮ ತರ್ಕ”
ನರಸಿಂಹ ಮತ್ತೆ ಹೇಳಿದ
“ಅಶೋಕ್‌ರವರೆ ನಾನು ಸಹ ಅಲ್ಲಿ ಹೋಗಿ ಜಾಗ ಪರಿಶೀಲಿಸಿದ್ದೀನಿ, ಅದು ಸುಮಾರು ನಲವತ್ತು ಅಡಿಯ ಚಿಕ್ಕ ರಸ್ತೆ ಬಸ್ ನಿಲ್ದಾಣದ ಎದುರಿಗೆ ರೋಡ್ ಡಿವೈಡರ್ ಸಹ ಹಾಕಲಾಗಿದೆ,  ಬಸ್ ನಿಲ್ದಾಣದ ಪುಟ್ಪಾತ್ ನಿಂದ ಮೂರು ಅಡಿ ದೂರಕ್ಕೆ ಶವ ಬಿದ್ದಿತ್ತು, ಯಾವುದೇ ಬಸ್ ಬಂದರು ಸಹ ನೆಲದ ಮೇಲಿದ್ದ ಅನಂತರಾಮಯ್ಯನವರ ಮೇಲೆಯೆ ಹೋಗಬೇಕಿತ್ತು, ಆದರೆ ನಿಮ್ಮ ಹೇಳಿಕೆ ಪ್ರಕಾರ , ಕೊಲೆ ಮಾಡಿದ ನಂತರ ವೆಂಕಟೇಶಯ್ಯನವರು ಬಸ್ ಹತ್ತಿ ಹೋದರು ಅನ್ನುವಿರಿ, ಹಾಗಿರುವಾಗ ಬಸ್ ಅಲ್ಲಿ ಹೇಗೆ ಚಲಿಸಿತು, ಬಸ್ ಡ್ರೈವರ್ ಆಗಲಿ, ಅಥವ ಯಾರೇ ಆಗಲಿ ನೆಲದ ಮೇಲೆ ಬಿದ್ದಿದ್ದ ಶವ ಗಮನಿಸಲಿಲ್ಲವೇ, ಪೋಲಿಸರಿಗೆ ತಿಳಿಸಲಿಲ್ಲವೇ?”
ಅಶೋಕ್ ಹೇಳಿದ
“ಗಮನಿಸಿರಬಹುದು, ನಮ್ಮಲ್ಲಿ ಶವ ಕಂಡಾಗ ಕೆಲವರು ಮಾತ್ರ  ಪೋಲಿಸರಿಗೆ ಬಂದು ಹೇಳುವರು, ಕೆಲವರು ಕಾನೂನಿನ ಗೊಡವೆ ಏಕೆ ಎಂದು ಹೋಗುವರು ಜಾಸ್ತಿ, ಬಸ್ ಡ್ರೈವರ್ ಪಕ್ಕದಿಂದ ಹೋಗಿರಬಹುದು”

ನರಸಿಂಹ ಹೇಳಿದ
“ನಿಮ್ಮ ಪ್ರಕಾರ ಅಲ್ಲಿ ಶವ ಬಿದ್ದಿದ್ದರು ಬಸ್ ಪಕ್ಕದಿಂದ ಚಲಿಸಿತು, ಬಸ್ ನಲ್ಲಿ ರಕ್ತದ ಬಟ್ಟೆಯಲ್ಲೆ ಇದ್ದ ವೆಂಕಟೇಶಯ್ಯ ಪಯಣಿಸಿದರು,  ಸರಿ ಈಗ ಆ ಕಲ್ಲಿನ ವಿಷಯಕ್ಕೆ ಬರೋಣ, ಕೊಲೆ ಮಾಡಲು ಉಪಯೋಗಿಸಿದ ಕಲ್ಲು ನಿಮಗೆ ಎಲ್ಲಿ , ಹೇಗೆ ಸಿಕ್ಕಿತು”

ಅಶೋಕ ಹೇಳಿದ
“ಅದು ಅಪರಾದಿಯು ಬಸ್ ನಿಲ್ದಾಣದ ಮುಂದೆ ಬಿದ್ದಿದ್ದ ಕಲ್ಲಿನಿಂದ ತಕ್ಷಣಕ್ಕೆ ಕೊಲೆ ಮಾಡಿ ನಂತರ ಅದನ್ನು ಅಲ್ಲಿಯೇ ಎಸೆದುಹೋಗಿದ್ದ, ನಾನು ಸ್ಥಳಕ್ಕೆ ಹೋದಾಗಲು ಆ ಕಲ್ಲು ಅಲ್ಲಿಯೆ ಬಿದ್ದಿತ್ತು ಅದನ್ನು ವಶಪಡಿಸಿಕೊಂಡು, ಅದರ ಮೇಲಿದ್ದ ರಕ್ತದ ಪರೀಕ್ಷೇ ಮಾಡಿಸಿ ಕೋರ್ಟಿಗೆ ವಶಪಡಿಸಿದ್ದೀನೆ”

“ಮತ್ತೊಮ್ಮೆ ಕೇಳುತ್ತಿದ್ದೇನೆ, ನೆಲದ ಮೇಲೆ ಬಿದ್ದಿದ್ದ ಕಲ್ಲನ್ನು ಎತ್ತಿ ಹೊಡೆದು ಅನಂತರ ಅಲ್ಲಿಯೆ ಎಸೆದು ಬಸ್ ಹತ್ತಿ ಹೋದರಾ?”



ಅಶೋಕ್ ಡೃಡವಾಗಿ ಉತ್ತರಿಸಿದ
“ಹೌದು ಹಾಗೆಯೇ ಆಗಿರುವುದು”
ನರಸಿಂಹ ಅಶೋಕ್ ರತ್ತ ನೋಡುತ್ತ
“ ಅದು ಹಾಗೆ ಆಗಿರಲಿ, ಈಗ ಅಲ್ಲಿ ನೋಡಿ, ಬೆಂಚ್ ಮೇಲೆ ಒಬ್ಬ ವ್ಯಕ್ತಿ ಕುಳಿತಿರುವ ಅವರನ್ನು ನೀವು ಗುರುತು ಹಿಡಿಯುವಿರ” ಎಂದು ಕೇಳುತ್ತ
“ನೀನು ಸ್ವಲ್ಪ ನಿಂತುಕೋಪ್ಪ,  ಮೂರ್ತಿ ಸ್ವಲ್ಪ ಮುಂದೆ ಬಾ” ಎಂದು ಕೈ ಮಾಡಿ ಕರೆದ.
ಅಶೋಕ್ ಅವನತ್ತ ನೋಡುತ್ತ
“ಇವನಾ, ಇವನನ್ನು ನೋಡಿರುವೆ, ಅಗಾಗ್ಯೆ ನಮ್ಮ ಸ್ಟೇಷನ್ ಗೆ ಬರುವವನು, ಪಾಟ್ ನಲ್ಲಿರುವ ಗಿಡಗಳನ್ನು ಸರಿಮಾಡುವುದು ಅಂತಹ ಕೆಲಸಗಳನ್ನೆಲ್ಲ ಮಾಡಿಕೊಡುವನು, ಇವನಿಗೂ ಈ ಕೇಸಿಗೂ ಏನು ಸಂಬಂಧ” ಎಂದ ಅಶೋಕ್ .
“ಸಂಬಂಧ ಆಮೇಲೆ ಹೇಳುತ್ತೇನೆ ‘ ಅಂದ  ನರಸಿಂಹ ನ್ಯಾಯಾದೀಶರನ್ನು ಕುರಿತು,
“ಸ್ವಾಮಿ, ಈ ಸಂದರ್ಭದಲ್ಲಿ ನಾನು ಇನ್ಸ್ ಪೆಕ್ಟರ್ ರವರ ಪಾಟಿಸವಾಲನ್ನು ನಂತರ ಮುಂದುವರೆಸುವೆ, ತಾವು ದಯಮಾಡಿ ಈ ನನ್ನ ಸಾಕ್ಷಿಗೆ ತಾನು ನೋಡಿರುವದನ್ನು ವಿವರಿಸಲು ಅವಕಾಶ ಕೊಡಬೇಕು, ಇವನು ಕೊಲೆಯಾಗಿರುವ ಜಾಗದ ಪಕ್ಕದಲ್ಲಿಯೇ ಗುಡಿಸಲಿನಲ್ಲಿದ್ದಾನೆ , ಮೂರ್ತಿ ಎಂದು ಹೆಸರು”
ಎಂದನು, ನ್ಯಾಯದೀಶರು ಅಸಮದಾನದಿಂದ
“ಇದೇನು ನರಸಿಂಹ, ಈ ರೀತಿ ಮಾಡುತ್ತಿರುವಿರಿ, ನಿಮ್ಮ ಸಾಕ್ಷಿಯನ್ನು ಮೊದಲು ವಿಚಾರಿಸಿ, ಕಡೆಗೆ ಕೇಸ್ ಇನ್ ಚಾರ್ಜ್ ಅಶೋಕ್ ರವರ ವಿಚಾರಣೆ ನಡೆಸಬಹುದಿತ್ತು, ಅರ್ಧಕ್ಕೆ ನಿಲ್ಲಿಸುವುದು, ನಿಮ್ಮ ಸಾಕ್ಷಿಯನ್ನು ನಡುವೆ ತರುವುದು , ಇದೆಲ್ಲ ಏನು ಮಾಡುತ್ತಿರುವಿರಿ ಕೋರ್ಟಿನ ಸಮಯ ವ್ಯರ್ಥಮಾಡುವಿರಿ”
ನರಸಿಂಹನು
“ಕ್ಷಮಿಸಿ ಬೇಕು ಸ್ವಾಮಿ, ಅಶೋಕ್ ರವರ ಹೇಳಿಕೆಯಲ್ಲಿನ ತಪ್ಪನ್ನು ತೋರಿಸಲು ನನಗೆ ಈ ಸಾಕ್ಷಿ ಬೇಕಾಗಿದೆ ಅಷ್ಟೆ, ಒಂದು ವೇಳೆ ಅಶೋಕರವರೆ ಹೇಳಿಬಿಟ್ಟಿದ್ದರೆ ನನಗೆ ಈ ಸಾಕ್ಷಿಯ ಅಗತ್ಯವಿರಲಿಲ್ಲ, ಅದಕ್ಕಾಗಿ ಕೋರ್ಟಿನ ಸಮಯ ತೆಗೆದುಕೊಳ್ಳುತ್ತಿರುವುದಕ್ಕೆ ಕ್ಷಮಿಸಬೇಕು, ಅಗತ್ಯ ಪತ್ರವನ್ನು ಸ್ವೀಕರಿಸಿ ಅವಕಾಶ ಕೊಡಬೇಕು ಎನ್ನುತ್ತ ತನ್ನ ಅಪ್ಲಿಕೇಶನ್ ಕೊಟ್ಟನು”
ನ್ಯಾಯಾದೀಶರು
“ಸರಿ , ನಿಮ್ಮ ಸಾಕ್ಷಿಯನ್ನು ಕರೆಯಿರಿ ಅದೇನು ಹೇಳಿಸುವಿರೋ ಹೇಳಿಸಿ, ರೀ ಅಶೋಕ್ ನೀವು ಸ್ವಲ್ಪ ಹೊರಬನ್ನಿ ಆಪ್ಪ, ನಂತರ ಮತ್ತೇ ಬೇಕಾದರೆ ಕರೆಯುತ್ತೇವೆ” ಎಂದರು ಅಸಮಾದಾನದಿಂದ

ಮೂರ್ತಿಯನ್ನು ಕಟಕಟೆಗೆ ಕರೆಯಲಾಯಿತು, ಅವನು ಪ್ರತಿಜ್ಞಾವಿದಿ ಸ್ವೀಕರಿಸಿದ, ಸ್ವಲ್ಪ ಹೆದರಿದಂತಿದ್ದ ಮೂರ್ತಿಗೆ ನರಸಿಂಹ ಹೇಳಿದ
“ನಿನ್ನ ಹೆಸರೇನು”
“ಮೂರ್ತಿ ಅಂತ ಸ್ವಾಮಿ”
“ನೋಡು ಮೂರ್ತಿ, ನೀನು ಏನು ಹೆದರಬೇಡ, ನಿನ್ನನ್ನು ಇಲ್ಲಿ ಕರೆದಿರುವುದು, ನೀನು ಕೊಲೆಯಾದ ದಿನ ಏನೇನೊ ನೋಡಿದೆ, ಪೋಲಿಸರಿಗೆ ಏನು ಸಹಾಯ ಮಾಡಿದೆ ಎಂದು ಕೇಳಲು ಮಾತ್ರ” ಎಂದನು ನರಸಿಂಹ,
ಮೂರ್ತಿ ಆಗಲಿ ಎನ್ನುವಂತೆ ತಲೆ ಆಡಿಸಿದ.

“ನೋಡು ಮೂರ್ತಿ ಆ ದಿನ ಬಸ್ ಸ್ಟಾಂಡಿನ ಹತ್ತಿರ ಕೊಲೆಯಾಯಿತಲ್ಲ ಆದಿನ ಏನು ನಡೆಯಿತು ನಿನಗೆ ಏನು ಗೊತ್ತಿದೆ ಎಲ್ಲ ಹೇಳು, ನೀನು ಕೊಲೆಗಾರನನ್ನು ನೋಡಿದೆಯಾ ?”
ಮೂರ್ತಿ ನಿಧಾನಕ್ಕೆ ನುಡಿದ
“ಸ್ವಾಮಿ ನಾನು ಕೊಲೆಮಾಡಿದವನನ್ನು ನೋಡಿಲ್ಲ, ಅವತ್ತು ರಾತ್ರಿ ನಾನು ಗುಡಿಸಲಲ್ಲಿ ಒಬ್ಬನೆ ಮಲಗಿದ್ದೆ, ಬಸ್ ಸ್ಟಾಂಡಿನ ಹತ್ತಿರ ಕಂಬದ ದೀಪ ಹೋದ ಮೇಲೆ ಬೇಗ ಮಲಗಿಬಿಡುತ್ತೇನೆ, ಅವತ್ತು ಹಾಗೆ ಮಲಗಿದ್ದಾಗ, ಸ್ವಲ್ಪಹೊತ್ತಾಗಿರಬಹುದು, ಹೊರಗೆ ರಸ್ತೆಯಲ್ಲಿ, ಯಾವುದೋ ಬೈಕ್ ತಕ್ಷಣ ಬ್ರೇಕ್ ಹಾಕಿದರೆ ಬರುತ್ತಲ್ಲ ಆ ರೀತಿ ಜೋರಾಗಿ ಶಬ್ದ ಬಂದಿತು, ಹಾಗೆ ಯಾರೋ ಅಯ್ಯೋ ಅಂತ ಕೂಗಿದರು, ಮತ್ತೆ ಮತ್ತೆ ಒಬ್ಬರು ಸಾರ್ ಸಾರ್ ಅನ್ನುತಿರುವುದು ಕೇಳಿಸಿತು, ನಾನು ಏನಾಯಿತು ಅಂತ ಹೊರಗೆ ಹೋಗೋಣ ಅಂತ ಎದ್ದೆ, ಮತ್ತೆ ಬೈಕ್ ಶಬ್ದ, ಹೊರಗೆ ಬಂದರೆ ಯಾರು ಕಾಣಿಸಲಿಲ್ಲ. ಸರಿ ಒಳಗೆ ಹೊರಟು ಹೋಗೋಣ ಅಂದುಕೊಂಡು ತಿರುಗುವದರಲ್ಲಿ,  ಮುಸುಕು ಬೆಳಕಲ್ಲಿ ರಸ್ತೆಯಲ್ಲಿ ಯಾರೋ ಬಿದ್ದಿರುವುದು ಕಾಣಿಸಿತು, ಹಾಗೆ ಮೇಲೆ ನಡೆದು ರಸ್ತೆಗೆ ಬಂದು ಹತ್ತಿರದಿಂದ ನೋಡಿದೆ, ತಲೆಯಿಂದ ರಕ್ತ ಬರುತ್ತಿತ್ತು, ರಸ್ತೆಯೆಲ್ಲ ರಕ್ತ ಚೆಲ್ಲಿತ್ತು, ವ್ಯಕ್ತಿ ಮಿಸುಗುತ್ತಿರಲಿಲ್ಲ, ಒಳಗೆ ಹೋಗಿ ನೀರು ತರೋಣವೆ ಅಂದುಕೊಂಡರೆ ಅವನು ಬಿದ್ದಿರುವುದು ರಸ್ತೆಯಲ್ಲಿ, ಕತ್ತಲು ಬೇರೆ ಯಾವುದಾದರು ವಾಹನ  ಬಂದರೆ ಅವನ ಮೇಲೆ ಹೋಗುತ್ತಿತ್ತು, ಸರಿ ಸ್ವಲ್ಪ ಕೂಗಿದೆ ಒಂದಿಷ್ಟು ಜನ ಸೇರಿದರು, ಹಾಗೆ ಅಲ್ಲಿ ಬಿದ್ದವರು ಮೇಷ್ಟ್ರು ಪಕ್ಕದ ರಸ್ತೆಯವರು ಎಂದು ಗೊತ್ತಾಯಿತು, ಅವರ ಮನೆಯವರು ಬಂದರು, ಆಮೇಲೆ ಪೋಲಿಸರು ಬಂದರು, ಸ್ವಲ್ಪ ಕಾಲ ನೋಡಿ ಅವರನ್ನು ಅಸ್ಪತ್ರೆಗೆ ತೆಗೆದುಕೊಂಡು ಹೋದರು”

ನರಸಿಂಹ ನ್ಯಾಯದೀಶರ ಕಡೆ ನೋಡಿದ,
“ಇವರು ಏನು ವಿಶೇಷ ಹೇಳಿದರು, ರಿ ನರಸಿಂಹ, ಈಗ ಗೊತ್ತಿರುವುದೇ, ಹೊಸದೇನಿದೆ, ಸಮಯ ಹಾಳು “ ಎಂದರು
ನರಸಿಂಹ ಹೇಳಿದ
“ಹಾಗಲ್ಲ ಸ್ವಾಮಿ, ಗಮನಿಸಿ, ಅಲ್ಲಿ ಯಾರೋ ಬೈಕ್ ನಲ್ಲಿ ಬಂದಿದ್ದಾರೆ, ಅನಂತರಾಮಯ್ಯನವರ ಕೊಲೆಯಾಗಿದೆ, ಹಾಗು ಆಗ ವೆಂಕಟೇಶಯ್ಯನವರು ಇರಲಿಲ್ಲ ಅಂತ ಅಲ್ಲವೇ”
ನ್ಯಾಯದೀಶರನ್ನು ಕೇಳಿದ.
ನ್ಯಾಯದೀಶರು
“ಬೇರೆ ಯಾರೋ ಬಂದಿದ್ದಾರೆ ಅಂದುಕೊಳ್ಳೋಣ, ವೆಂಕಟೇಶಯ್ಯ ಇರಲಿಲ್ಲ ಎಂದು ಹೇಗೆ ಸಾಧಿಸುವಿರಿ”
ನರಸಿಂಹ ಹೇಳಿದ
“ಸ್ವಾಮಿ ಇದು ಪೋಲಿಸರ ಹೇಳಿರುವ ಕೊಲೆಯ ಕತೆಗಿಂತ ಭಿನ್ನವಲ್ಲವೆ , ವೆಂಕಟೇಶಯ್ಯನವರು ಬಸ್ಸಿನಲ್ಲವೆ ಮನೆಗೆ ಹೋಗಿರುವುದು, ಅದಕ್ಕಿಂತ ಈ ಮೂರ್ತಿಯ ಮುಂದಿನ ಹೇಳಿಕೆಯನ್ನು ಗಮನಿಸಿ ದಯವಿಟ್ಟು”
ಎನ್ನುತ್ತ ನರಸಿಂಹ ಮೂರ್ತಿಯತ್ತ ತಿರುಗಿ
“ಮೂರ್ತಿ, ಕೊಲೆಯ ಸಂಗತಿಯಾಯಿತು, ನೀನು ಆ ನಂತರ ಪೋಲಿಸರಿಗೆ ಸಹಾಯ ಮಾಡಿದೆಯಲ್ಲ , ಆ ಕೊಲೆಮಾಡಿದ ಕಲ್ಲನ್ನು ತೆಗೆದುಕೊಟ್ಟದ್ದು ಎಲ್ಲವನ್ನು ಹೇಳು “
ಎನ್ನುತ್ತ, ಕುಚೇಷ್ಟೆಯಿಂದ ಅಶೋಕನ ಕಡೆ ನೋಡಿ ನಕ್ಕನು,
ಪೋಲಿಸ್ ಅಧಿಕಾರಿಗೆ ಈಗ ಸ್ವಲ್ಪ ಗಾಭರಿ.
ಮೂರ್ತಿ
“ಹೌದು ಸಾ, ಎಲ್ಲ ಹೋದರು, ಆ ಮೇಲೆ ರಾತ್ರಿ,  ಹತ್ತು ಗಂಟೆ ಆದ ಮೇಲೆ ಪೋಲಿಸರು, ಪುನಃ ಬಂದಿದ್ದರು, ಅಲ್ಲಿ ಬಿದ್ದಿದ್ದ ವಸ್ತುಗಳನ್ನೆಲ್ಲ ಹುಡುಕಿದರು, ಹಾಗೆ ರಕ್ತವಾಗಿದ್ದ ಕಲ್ಲನ್ನು ತೆಗೆದುಕೊಡಲು ಕೇಳಿದರು, ನಾನು ನನ್ನಲ್ಲಿದ್ದ ಗುದ್ದಲಿ ತಂದು ನೆಲದಿಂದ ಕಲ್ಲನ್ನು ಬಿಡಿಸಿದೆ, ನಂತರ  ಕಲ್ಲಿನ ಮೇಲಿದ್ದ  ಮಣ್ಣನು ಸ್ವಲ್ಪ ಕ್ಲೀನ್ ಮಾಡಿದೆ , ಆ ಕಲ್ಲನ್ನು ಜೀಪಿನಲ್ಲಿಡು ಅಂತ ಹೇಳಿ ಇಡಿಸಿದರು”
“ನೋಡು ಮೂರ್ತಿ ಇದೇ ಕಲ್ಲ ನೋಡು “
ಎಂದ ನರಸಿಂಹ, ಮೂರ್ತಿ
“ಹೌದು ಸಾ, ಇದೇ ಕಲ್ಲು ಅವನ್ನು ನಾನು ನೆಲದಿಂದ ಕಿತ್ತಿದ್ದು, ಮುಕ್ಕಾಲು ಬಾಗ ನೆಲದಲ್ಲೆ ಸೇರಿತ್ತು, ಸಾಹೇಬ್ರು ಕೇಳಿದರು ಎಂದು ಬಿಡಿಸಿಕೊಟ್ಟೆ, ಅದೇ ಕಲ್ಲಿನಲ್ಲಂತಲ್ಲ ಸ್ವಾಮಿ ಮೇಷ್ಟ್ರ ಕೊಲೆ ಮಾಡಿರೋದು”
ಮೂರ್ತಿ ಮುಗ್ದನಾಗಿ ಕೇಳಿದ
ನರಸಿಂಹ ನಗುತ್ತಿದ್ದರೆ, ಒಂದು ಕ್ಷಣ ಅರ್ಥವಾಗದೆ ಸುಮ್ಮನಿದ್ದ ನ್ಯಾಯದೀಶರು ನಂತರ ಗಂಭೀರವಾದರು, ಅವರಿಗೆ ಪೋಲಿಸರು ಈ ಕೇಸಿನಲ್ಲಿ ಹೇಗೆ ಸುಳ್ಳು ಸಾಕ್ಷಗಳನ್ನು ಕೊಟ್ಟು ದಾರಿ ತಪ್ಪಿಸಿದ್ದಾರೆ ಎಂದು ಅರ್ಥವಾಗಿತ್ತು.
“ಸ್ವಾಮಿ ನೀವೆ ಕೇಳಿದಿರಿ, ಪೋಲಿಸರು ಕೊಲೆಮಾಡಲು ಉಪಯೋಗಿಸಿದೆ ಎನ್ನುವ ಈ ಕಲ್ಲು ಆಳಕ್ಕೆ ನೆಲದಲ್ಲಿ ಹುದುಗಿತ್ತು, ಅದನ್ನು ಕೂಲಿಮಾಡುವ ಮೂರ್ತಿ ಕಷ್ಟಬಿದ್ದು, ಗುದ್ದಲಿ ಉಪಯೋಗಿಸಿ ಕಿತ್ತಿದ್ದಾನೆ, ಹಾಗಿರುವಾಗ ಅರೋಪಿ ವೆಂಕಟೇಶಯ್ಯನವರು ಆ ಕಲ್ಲನ್ನು ನೆಲದಿಂದ ಕಿತ್ತು ಅನಂತರಾಮಯ್ಯನ ತಲೆಗೆ ಹೊಡೆದರೆಂದು, ಮತ್ತೆ ಅದೇ ಕಲ್ಲನ್ನು ಹಿಂದಿನಂತೆ ನೆಲದಲ್ಲಿ ಹೂತು ಹೊದರೆಂದು ಹೇಳಿದರೆ ಹೇಗೆ ನಂಬಲು ಸಾದ್ಯ, ಅವರೇನು ಅಂತಹ ವಿಚಿತ್ರ ಶಕ್ತಿ ಹೊಂದಿರುವರು ಎಂದು ನಂಬಬೇಕೆ?.

ಪೋಲಿಸರು ಸ್ಥಳ ಪಂಚನಾಮೆ ನಡೆಸಿರುವುದು, ಕಲ್ಲಿನಿಂದಲೆ ಹೊಡೆದು ಸಾಯಿಸಿದ ಎನ್ನುವ ಸಾಕ್ಷಿಯನ್ನು ತಂದಿರುವುದು ಎಲ್ಲವು ಕಪೋಲ ಕಲ್ಪಿತ. ನಾನು ಕರೆತಂದಿರುವ ಸಾಕ್ಷಿ, ಪೋಲಿಸರ ಸಹಾಯಕನೇ. ನಿಮಗೆ ಮತ್ತೂ ಬೇಕಿದ್ದರೆ ಇವರದೇ  ಸ್ಟೇಷನಿನ್ನ ಹೆಡ್ ಕಾನ್ಸ್ ಟೇಬಲ್ ಮರಿಯಪ್ಪನವರನ್ನು ಸಹ ಕರಿಸಿಕೇಳಬಹುದು” ಎಂದ ನರಸಿಂಹ
ಇನ್ಸ್‍ಪೆಕ್ಟರ್ ಅಶೋಕ್ ಸಿಡಿಮಿಡಿ ಮಾಡುತ್ತ, ಅಸಹನೆಯಿಂದ ನಿಂತಿದ್ದರು,
ನ್ಯಾಯದೀಶರು, ಸರ್ಕಾರಿ ವಕೀಲರನ್ನು ಕುರಿತು
“ಏನ್ರಿ ನೀವು ಏನಾದರು ಪಾಟಿಸವಾಲು ಮಾಡುವದಿದೆಯಾ , ಇವರನ್ನು “ ಎಂದರು
ಸರ್ಕಾರಿ ವಕೀಲ ಕೋಪದಿಂದ ಪೋಲಿಸ್ ಅಧಿಕಾರಿಯ ಮುಖ ನೋಡಿದ, ಅವನಿಗೆ ಅರ್ಥವಾಗಿತ್ತು,
“ಇಲ್ಲ ಸ್ವಾಮಿ ಯಾವುದೇ ಪ್ರಶ್ನೆ ಇಲ್ಲ “ ಎಂದ
ನರಸಿಂಹ  ಮೂರ್ತಿಗೆ ಹೇಳಿದ
“ಸರಿ ಮೂರ್ತಿ ನೀನು ಬಂದು ಇಲ್ಲಿ ವಿಷಯ ತಿಳಿಸಿದ್ದು ಪೋಲಿಸರಿಗೆ ತುಂಬಾ ಸಹಾಯವಾಯಿತು, ನೀನು ಹೋಗಬಹುದು” ಎಂದ
ಮೂರ್ತಿ ಸಂತಸದಿಂದ ನ್ಯಾಯದೀಶರಿಗೂ, ನರಸಿಂಹನಿಗೂ ವಂದಿಸಿ ಸಾಕ್ಷಿ ಕಟ್ಟೆ ಯಿಂದ ಕೆಳಗಿಳಿದ


ಮುಂದಿನ ಬಾಗದಲ್ಲಿ… ಮುಕ್ತಾಯ….

Wednesday, March 26, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬)


ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬)

ಅಂದಿನ  ವಿಚಾರಣೆ ಪ್ರಾರಂಭವಾದಂತೆ ,
“ಸರಿ ನಿಮ್ಮ ಮುಂದಿನ ಸಾಕ್ಷಿ ಯಾರು ಕರೆಸಿ” ಎಂದರು ನ್ಯಾಯಾದೀಶರು, ತಮ್ಮ ಮುಂದಿದ್ದ ದಸ್ತಾವೇಜುಗಳನ್ನು ನೋಡುತ್ತ
“ ಮುಂದಿನ ಸಾಕ್ಷಿಯಾಗಿ , ಲ್ಯಾಬ್ ಪರೀಕ್ಷಕರು, ಮೋಹನ ಮೂರ್ತಿಯವರು ಸ್ವಾಮಿ”  ಎಂದರು ಸರ್ಕಾರದ ಪರ ವಕೀಲರು.
ಮೋಹನ ಮೂರ್ತಿಯವರನ್ನು ಕೋರ್ಟಿನ ವಿಧಿಯಂತೆ ಕರೆಯಲಾಯಿತು,
ನಂತರ ಸತ್ಯದ ಪ್ರಮಾಣವಚನ ಭೋದಿಸಲಾಯಿತು
“ನಿಮ್ಮ ಹೆಸರು ?” ಸರ್ಕಾರಿ ವಕೀಲರು ಕೇಳಿದರು
“ಸಾರ್ ನಾನು ಮೋಹನ ಮೂರ್ತಿ ಎಂದು, ಸರ್ಕಾರಿ ಲ್ಯಾಬ್ ನಲ್ಲಿ ಪರೀಕ್ಷಕನಾಗಿದ್ದೇನೆ”
“ಸರಿ ಈಗ ಹೇಳಿ, ಕಲ್ಲಿನ ಮೇಲಿದ್ದ ರಕ್ತದ ಕಲೆಯ ಬಗ್ಗೆ “
“ಸಾರ್ ಅದನ್ನು ಲ್ಯಾಬ್ ನಲ್ಲಿ ಪರೀಕ್ಷಿಸಿದೆ, ಕಲ್ಲಿಗೆ ಅಂಟಿರುವ ರಕ್ತ ಹಾಗು ಅನಂತರಾಮಯ್ಯನವರ ರಕ್ತ ಎರಡು ಒಂದೇನೆ ಆಗಿದೆ”
ಸರ್ಕಾರಿ ವಕೀಲರು ನುಡಿದರು
“ಸ್ವಾಮಿ ಅಷ್ಟೆ , ಈ ಸಾಕ್ಷಿಯಿಂದ ನಮಗೆ ಬೇಕಾದ ಉತ್ತರ ಸಿಕ್ಕಿದೆ”
ನ್ಯಾಯದೀಶರು , ಅರೋಪಿಯ ಪರ ವಕೀಲ ನರಸಿಂಹನತ್ತ ತಿರುಗಿದರು
“ನಿಮಗೆ ಏನಾದರು ಕೇಳುವದಿದೆಯಾ?”
ನರಸಿಂಹ ಎದ್ದು ನಿಂತು ನುಡಿದ
“ಇಲ್ಲ ಸ್ವಾಮಿ, ಇವರಲ್ಲಿ ಕೇಳುವ ಯಾವುದೇ ಪ್ರಶ್ನೆಯೂ ಇಲ್ಲ”



ನ್ಯಾಯದೀಶರು ಸರ್ಕಾರಿ ವಕೀಲರಿಗೆ ನುಡಿದರು,
“ಸರಿ ಹಾಗಿದ್ದರೆ, ನಿಮ್ಮ ಮುಂದಿನ ಸಾಕ್ಷೀ ಯಾರಿದ್ದಾರೆ ಇವರೆ  ಕರೆಸಿ, ಯಾರು ಬರುವರು”
ವಕೀಲರು  “ಸರ್ಕಾರಿ ಡಾಕ್ಟರ್ ಮುರಳಿಯವರು ಸ್ವಾಮಿ, ಶವದ ಪೋಸ್ಟ್ ಮಾರ್ಟಮ್ ಮಾಡಿದವರು”
ಕೋರ್ಟಿನ ವಿದಿಗಳೆಲ್ಲ ಮುಗಿದು ಸರ್ಕಾರಿ ಡಾಕ್ಟರ್ ಕಟಕಟೆಯಲ್ಲಿ ನಿಂತರು.
ವಕೀಲರು :  “ನಿಮ್ಮ ಹೆಸರು”
ಡಾಕ್ಟರ್ : “ಮುರಳಿ ಎಂದು ನಾನು ಡಾಕ್ಟರ್ ಆಗಿದ್ದೇನೆ, ಪ್ರಸ್ತುತ ಈ ಕೇಸಿನಲ್ಲಿ ಶವಪರೀಕ್ಷೆ ಮಾಡಿದವನು ನಾನೆ “
ವಕೀಲರು : “ಈ ಕೊಲೆಯ ಕೇಸಿನ ಬಗ್ಗೆ ನೀವೇನು ಹೇಳುವಿರಿ”
ಡಾಕ್ಟರ್ : “ಸಾರ್ ಶವ ಪರೀಕ್ಷೆ ಮಾಡಿದ ಪ್ರಕಾರ,  ಮೃತನಿಗೆ ತಲೆಯ ಹಿಂಬಾಗದಲ್ಲಿ ಬಿದ್ದ ಬಲವಾದ ಪೆಟ್ಟಿನಿಂದ ಸ್ಥಳದಲ್ಲಿಯೇ ಪ್ರಾಣ ಹೋಗಿದೆ”
ವಕೀಲರು : “ಈ ಕೊಲೆ ಯಾವ ಸಮಯದಲ್ಲಿ ನಡೆದಿರಬಹುದು ಎಂದು ನೀವು ಹೇಳುವಿರಿ”
ಡಾಕ್ಟರ್ : “ಶವದ ಪರೀಕ್ಷೆಯ ವಿವರಗಳಿಂದ ಹೇಳುವದಾದರೆ  ಮಾರ್ಚಿ ೩ ರಂದು ರಾತ್ರಿ ಸುಮಾರು ಎಂಟರಿಂದ ಎಂಟು ಹದಿನೈದು ನಿಮಿಷದೊಳಗೆ ಪ್ರಾಣ ಹೋಗಿರಬಹುದು “
ಡಾಕ್ಟರ್ : “ತಲೆಗೆ ಹಿಂಬಾಗದಲ್ಲಿ ಬಿದ್ದ ಏಟಿನಿಂದ ಪ್ರಾಣ ಹೋಗಿರುವುದು ಎನ್ನುವಿರಿ, ಹಾಗಿದ್ದರೆ ಅದು ಹೇಗೆ ಆಗಿರಬಹುದು”
ಡಾಕ್ಟರ್ : “ಯಾವುದಾದರು ಗಟ್ಟಿಯಾದ, ಮತ್ತು ಸ್ವಲ್ಪ ಚೂಪಾದ ವಸ್ತುವಿನಿಂದ ತಲೆಗೆ ಬಲವಾಗಿ ಹೊಡೆದಾಗ ಅಘಾತಕ್ಕೆ ನಂತರದ  ರಕ್ತಸ್ರಾವಕ್ಕೆ  ಪ್ರಾಣಹೋಗಿರಬಹುದು”
ವಕೀಲರು “ಇಲ್ಲಿ ನೋಡಿ ಇಲ್ಲಿ ಚೂಪಾದ ಮತ್ತು ನೀವು ಹೇಳುವಂತೆ ಗಟ್ಟಿಯಾದ ವಸ್ತು ಎಂದರೆ ಕಲ್ಲು ಇದೆಯಲ್ಲ ಇದರಿಂದ ಹೊಡೆದು ಪ್ರಾಣ ಹೋಗಿರಬಹುದಲ್ಲವೆ ?”
“ಆಗಬಹುದು , ಇಂತಹ ವಸ್ತುವಿನಿಂದಲೂ ತಲೆಗೆ ಪೆಟ್ಟು ಬಿದ್ದರೆ ಪ್ರಾಣಹೋಗಿರಬಹುದು”
“ಸರಿ ಡಾಕ್ಟರೆ ವಂದನೆಗಳು ಎಂದ ಸರ್ಕಾರಿ ವಕೀಲರು
“ಸ್ವಾಮಿ  , ಇದೇ ನಾನು ಹೇಳಲು ಬಯಸಿರುವುದು, ಸರ್ಕಾರಿ ಡಾಕ್ಟರ್ ಅಭಿಪ್ರಾಯದಂತೆ, ಗಟ್ಟಿಯಾದ ಚೂಪಾದ , ಅಂದರೆ ಈ ಕಲ್ಲಿನಿಂದ ತಲೆಯ ಹಿಂಬಾಗಕ್ಕೆ ಬಿದ್ದ ಹೊಡೆತದಿಂದ  ಈ ಮರಣ ಸಂಭವಿಸಿದೆ “

“ಸರಿ “ ಎನ್ನುವಂತೆ ತಲೆ ಆಡಿಸಿದ ನ್ಯಾಯದೀಶರು, ನರಸಿಂಹನನ್ನು ಪ್ರಶ್ನಿಸಿದರು
“ನಿಮ್ಮ ಪ್ರಶ್ನೆಗಳೇನಾದರು ಇದೆಯ ನರಸಿಂಹರವರೆ, ಅನುಮಾನಗಳು”
“ಇದೇ ಸ್ವಾಮಿ ಒಂದೆರಡು ಸಣ್ಣ ಅನುಮಾನಗಳು ಅವರನ್ನು ಕೇಳಿಬಿಡುತ್ತೇನೆ”
ನರಸಿಂಹ ಎದ್ದು ನಿಂತು ಕಟಕಟೆಯ ಬಳಿ ಬಂದ
“ತಮ್ಮ ಹೆಸರು?” ನರಸಿಂಹ ಕೇಳಿದ
ನರಸಿಂಹನ ಎರಡೂ ಬದಿ ಇಳಿಬಿದ್ದ ಉದ್ದನೆಯ ಮೀಸೆಯನ್ನು ಆಸಕ್ತಿಯಿಂದ ನೋಡುತ್ತಿದ್ದ ಡಾಕ್ಟರ್ , ಬೆಚ್ಚಿಬಿದ್ದು ನುಡಿದರು
“ಮುರಳಿ ಎಂದು”
“ಡಾಕ್ಟರ್ ನಾನು ಅದೇ ಪ್ರಶ್ನೆಗಳನ್ನು ಮತ್ತೆ ಮತ್ತೆ  ಕೇಳುವದಿಲ್ಲ, ಸಣ್ಣ ಒಂದೆರಡು ಅನುಮಾನಗಳು ಅಷ್ಟೆ “
“ಕೇಳಿ ಅದಕ್ಕೇನು ನನಗೆ ತಿಳಿದಿರುವದನ್ನೆ ತಿಳಿಸುತ್ತೇನೆ” ಎಂದರು ಡಾಕ್ಟರ್ ಮುರಳಿ
“ಡಾಕ್ಟರ್ , ಮೃತನಾಗಿರುವ ಅನಂತರಾಮಯ್ಯನವರ ಮೈಮೇಲೆ , ತಲೆಯ ಹಿಂಬಾಗದಲ್ಲಿ ಏಟು ಬಿದ್ದು ಪ್ರಾಣ ಹೋಗಿದೆ ಅನ್ನುವಿರಿ, ಅಂದರೆ ತಲೆಯ ಹಿಂಬಾಗದಲ್ಲಿ ಗಾಯ ಇದೆ ಅಂತಯಿತು, ತಲೆಯ ಹಿಂಬಾಗ ಬಿಟ್ಟು ದೇಹದ ಯಾವುದಾದರು ಬಾಗದ ಮೇಲೆ , ಮತ್ತೆಲ್ಲಾದರು ಗಾಯಗಳು, ಏಟು ಬಿದ್ದ ಗುರುತು, ಅಂತಹುದೇನದರು ಇದ್ದಿತಾ?”
ಡಾಕ್ಟರ್ ಉತ್ಸಾಹದಿಂದ ನುಡಿದರು
“ಹೌದು ಸಾರ್, ತಲೆಯ ಹಿಂಬಾಗದಲ್ಲಿ ಗಟ್ಟಿಯಾದ ವಸ್ತುವಿನಿಂದ ಬಿದ್ದ ಏಟು ಇದ್ದಿತ್ತು, ಹಾಗೆ ಬಲಗಾಲ ಮಂಡಿಯ ಮೇಲೆ, ಎಡಗಾಲ ಬೆರಳುಗಳ ಮೇಲೆ ತರಚಿದ , ಚರ್ಮ ಕಿತ್ತುಹೋದ ಗಾಯದ ಗುರುತಿದೆ, ಅದನ್ನು ನಾನು ಪೋಸ್ಟ್ ಮಾರ್ಟಮ್ ರಿಪೀರ್ಟಿನಲ್ಲು ದಾಖಲಿಸಿದ್ದೇನೆ”
ನರಸಿಂಹ ಕೊಂಚ ಆಶ್ಚರ್ಯದಲ್ಲಿಯೇ ನುಡಿದ
“ ನೋಡಿ ಪೋಲಿಸರು ತೆಗೆದಿರುವ ಪೋಟೊ ಹಾಗು ಹೇಳಿಕೆಗಳನ್ನು ಗಮನಿಸಿದರೆ, ಅನಂತರರಾಮಯ್ಯನವರ ದೇಹ ಮೇಲ್ಮುಖವಾಗಿ ಬಿದ್ದಿತ್ತು ಅನ್ನುತ್ತಾರೆ , ಹಾಗಿರುವಾಗ ಮಂಡಿಯ ಮೇಲೆ ಕಾಲಿನ ಮೇಲೆ ಗಾಯ ಹೇಗೆ ಆಗಿರಬಹುದು, ಅದೇ ಕಲ್ಲಿನಿಂದ ಜಜ್ಜಿದಾರೆಯೆ ?”
“ಇಲ್ಲ ಅದು ಜಜ್ಜಿದ ಗಾಯದ ಗುರುತ್ತಲ್ಲ, ಆಳವಾಗಿಲ್ಲ, ಕಾಲು ನೆಲದ ಮೇಲೆ ಬಿದ್ದು ಉಜ್ಜಿರುವುದು ಅಥವ ಯಾವುದೋ ವಸ್ತು ಕಾಲಿಗೆ ಅಪ್ಪಳಿಸಿರುವುದು ಇದರಿಂದ ಆಗಿರಬಹುದು”
“ಅಂದರೆ  ಮೃತ ವ್ಯಕ್ತಿ ,ಸಾಯುವ ಮುಂಚೆ ನೆಲದ ಮೇಲಿ ಬಿದ್ದು ನೋವಿನಿಂದ ಒದ್ದಾಡುವಾಗ ಆಗಿರುವ ಸಾದ್ಯತೆ ಇದೆಯಾ?
ಅಥವ ಬಹಳ ಮುಂಚೆಯೇ ಯಾವಾಗಲೋ ಆಗಿರುವ ತರಚು ಗಾಯವಿರಬಹುದೇ ?”
“ಇಲ್ಲ ಹಾಗೆ ಆಗಿರಲಾರದು, ನನ್ನ ಪ್ರಕಾರ ಯಾವುದೋ ವಸ್ತುವಿಗೆ ಕಾಲು ಉಜ್ಜಿರುವದರಿಂದ ಆಗಿರಬೇಕು, ಅದೂ ಸಹ ಮರಣದ ಸಮಯದಲ್ಲಿಯೇ ಆಗಿರುವುದು ಅದು ಹಳೆಯ ಗಾಯವಾಗಿರಲು ಸಾದ್ಯವಲ್ಲ, ಸಣ್ಣಗೆ ರಕ್ತ ಸಹ ಮೆತ್ತಿಕೊಂಡಿತ್ತು , ಗಾಯ ಹಸಿಯಾಗಿತ್ತು”
“ಸರಿ ಡಾಕ್ಟರ್ ಕಡೆಯ ಪ್ರಶ್ನೆ,  ತಲೆಯ ಹಿಂಬಾಗದಲ್ಲಿ ಆಗಿರುವ ಗಾಯ , ಕಲ್ಲಿನಿಂದ ಜಜ್ಜಿರುವುದು ಆಗಿರಬಹುದು ಅಥವ ತಲೆಯನ್ನು ಬಲವಾಗಿ ಕಲ್ಲಿಗೆ ಅಪ್ಪಳಿಸದಾಗಲು ಆಗಿರಬಹುದೇ ? “
ಡಾಕ್ಟರ್ ನಗುತ್ತ ಕೇಳಿದ
“ಅಂದರೆ ನೀವು ಹೇಳುವುದು ಮೃತವ್ಯಕ್ತಿ ತನ್ನ ತಲೆಯನ್ನು ಹಿಂದಕ್ಕೆ ಬಲವಾಗಿ ಹೊಡೆದು ಕೊಂಡ ಅಂತಲೇ ಸಾದ್ಯವಿಲ್ಲ. ಅಷ್ಟು ವೇಗವಾಗಿ ಅವರ ತಲೆಯನ್ನು ಅವರೆ ಹಿಂದಕ್ಕೆ ಹೊಡೆಯುವುದು ಸ್ವಲ್ಪ ಕಷ್ಟವೇ”
“ಸರಿ ಡಾಕ್ಟರ್ ನನ್ನ ಅನುಮಾನ ಪರಿಹರಿಸಿದ್ದಕ್ಕಾಗಿ ವಂದನೆಗಳು ನಿಮ್ಮಿಂದ ಕೆಲವು ಹೊಸ ವಿಷಯಗಳು ಸಿಕ್ಕಿದೆ, ಧನ್ಯವಾದ”
“ಸರಿ ಸಾರ್ ವಂದನೆಗಳು, ನನ್ನ ಕೆಲಸ ಮುಗಿಯಿತಲ್ಲವೆ” ಎಂದು ಕೇಳಿ ನ್ಯಾಯದೀಶರಿಗೆ ವಂದಿಸಿ ಕೆಳಗಿಳಿದರು ಕಟಕಟೆಯಿಂದ.

ಮುಂದಿನ ವಿಚಾರಣೆಯಲ್ಲಿ  ಮತ್ತೊಬ್ಬ ಸಾಕ್ಷೀಯಾಗಿ ಮೃತ ಅನಂತರಾಮಯ್ಯನವರ ಪತ್ನಿ ರಾಜಮ್ಮ  , ಆಕೆ ಬಂದು ವಿದಿಯಂತೆ ಪ್ರಮಾಣವಚನ ಸ್ವೀಕರಿಸಿ ನಿಂತರು ಕಟಕಟೆಯಲ್ಲಿ
“ನಿಮ್ಮ ಹೆಸರು “ ಸರ್ಕಾರಿ ವಕೀಲರು ಕೇಳಿದರು
“ರಾಜಮ್ಮ ಎಂದು ಸ್ವಾಮಿ”
“ಮೃತ ಅನಂತರಾಮಯ್ಯನವರು ನಿಮಗೆ ಏನಾಗಬೇಕು”
“ನನ್ನ ಪತಿ ಸ್ವಾಮಿ ಅವರು “
ಆಕೆ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದಳು. ಸ್ವಲ್ಪ ಕಾಲ ಬಿಟ್ಟು ಕೇಳಿದರು ವಕೀಲರು
“ಇಲ್ಲಿ ನಿಂತಿರುವ ಈ ವ್ಯಕ್ತಿಯನ್ನು ಗುರಿತಿಸಬಲ್ಲಿರ?”
“ಗೊತ್ತು ಸ್ವಾಮಿ, ವೆಂಕಟೇಶಯ್ಯನವರು ಎಂದು, ನಮ್ಮವರ ಸ್ನೇಹಿತರು, ಅಗಾಗ್ಯೆ ಮನೆಗೆ ಬರುತ್ತಿದ್ದರು, ಕಡೇಗೆ ಇವರಿಂದಾಗಿ ಗಂಡನನ್ನು ಕಳೆದುಕೊಂಡೆ” ಅಕೆಯ ರೋಷದ ಉತ್ತರ,
“ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಹೇಳಿದರೆ ಸಾಕಮ್ಮ, ಇವರು ನಿಮ್ಮ ಪತಿ ಅಂದರೆ ಅನಂತರಾಮಯ್ಯನವರು ಕೊಲೆಯಾದ ದಿನ ಮನೆಗೆ ಬಂದಿದ್ದರಾ” ವಕೀಲರು ಎಚ್ಚರಿಕೆಯಿಂದ ಕೇಳಿದರು,
“ಹೌದು ಬಂದಿದ್ದರು, ಸಂಜೆ ಮನೆಗೆ ಬಂದಿದ್ದರು, ಅವರು ಕೊಟ್ಟಿದ್ದ ಹಣ ಹಿಂದಕ್ಕೆ ಕೇಳಿದರು, ನಮ್ಮವರು ಹಣ ಎಲ್ಲ ಅನ್ನುವಾಗ ಜಗಳ ಪ್ರಾರಂಭವಾಯಿತು, ನೀನು ನನ್ನ ಸ್ನೇಹಕ್ಕೆ ಮೋಸ ಮಾಡಿದೆ ಅದು ಇದು ಅಂತ ಇವರು ಕೂಗಾಡಿದರು”  ಎಂದರು ರಾಜಮ್ಮ.
“ಇವರಿಂದ ನಿಮ್ಮ ಪತಿ ಹಣ ಪಡೆದಿದ್ದರಾ? ಎಷ್ಟು”  ವಕೀಲರು ಕೇಳಿದರು,
ರಾಜಮ್ಮ  “ಹೌದು ಮನೆಕಟ್ಟಲು ಸಾಲ ಎಂದು ಪಡೇದಿದ್ದರು, ಐದು ಲಕ್ಷ”
ಸರ್ಕಾರಿವಕೀಲರು  “ನಿಮ್ಮ ಪತಿ ಆ  ಅಸಲನ್ನಾಗಲಿ ಬಡ್ಡಿಯನ್ನಾಗಲಿ ಕೊಟ್ಟಿದ್ದರಾ ಹಿಂದಕ್ಕೆ”
ರಾಜಮ್ಮ  “ಇಲ್ಲ ಹಣ ಕೊಟ್ಟಿರಲಿಲ್ಲ , ಹಣಕ್ಕೆ ತೊಂದರೆ ಇತ್ತು, ಆದರೆ ನಿಧಾನಕ್ಕೆ ಕೊಡುವದಾಗಿ ತಿಳಿಸಿದರು”

ಸರ್ಕಾರಿವಕೀಲರು  “ನಂತರ ಏನಾಯಿತು?”

ರಾಜಮ್ಮ  “ಜಗಳವಾಡಿಕೊಂಡವರು ಮತ್ತೆ ತಣ್ಣಗಾದರು, ನಮ್ಮವರು ಕಣ್ಣೀರು ಹಾಕಿದರು, ಇವರು ಸಹಿತ, ಎದುರಿಗೆ ಸುಮ್ಮನಾದ ಹಾಗೆ ನಟಿಸಿದರು, ನಂತರ ಇವರು ಹೊರಟರು, ಇವರನ್ನು ಬಸ್ ಸ್ಟಾಂಡಿಗೆ ಬಿಟ್ಟು ಬರಲು ನನ್ನ ಗಂಡನೂ ಹೋದರು, ಏನಾಯಿತೂ ಗೊತ್ತಿಲ್ಲ, ಸ್ವಲ್ಪ ಕಾಲ ಕಳೆದಿತ್ತು, ನಾನು ಕಾಯುತ್ತ ಕುಳಿತಿದ್ದೆ, ಅಷ್ಟರಲ್ಲಿ , ನಮ್ಮ ಪಕ್ಕದ ಮನೆಯವರು ಬಂದು, ನಿಮ್ಮ ಯಜಮಾನರು ಬಸ್ ಸ್ಟಾಂಡಿನಲ್ಲಿ ಸತ್ತು ಬಿದ್ದಿದ್ದಾರೆ ಎಂದು ತಿಳಿಸಿದರು, ಅಲ್ಲಿ ಹೋಗಿ ನೋಡಿದರೆ, ನನ್ನ ಯಜಮಾನರು ಸತ್ತು ಬಿದ್ದಿದ್ದರು ತಲೆಯಿಂದ ರಕ್ತ ಹರಿದಿತ್ತು, ಅವರು ಬದುಕಿರಲಿಲ್ಲ”
“ಸರಿ ನೀವು ಅಲ್ಲಿ ಸುತ್ತಲು ಏನಾದರು ನೋಡಿದಿರಾ, ಹರಿತವಾದ ಆಯುದ , ಕಲ್ಲು ಅಥವ ಇನ್ನೇನಾದರು “  ವಕೀಲರು ಕೇಳಿದರು
“ಇಲ್ಲ ದುಃಖ ಹಾಗು ಗಾಭರಿಯಲ್ಲಿ ನಾನು ಏನನ್ನು ಗಮನಿಸಲಿಲ್ಲ, ಪೋಲಿಸರು ಬಂದರು , ಎಲ್ಲವನ್ನು ಕೇಳಿದರು, ನಂತರ , ನಮ್ಮ ಯಜಮಾನರ ಜೊತೆ ಹೊರಟ ವೆಂಕಟೇಶಯ್ಯನವರನ್ನು ಹುಡುಕಿದರು, ಅವರು ಕಾಣಲಿಲ್ಲ,  ಅವರ ಮನೆಯ ವಿಳಾಸ ನನ್ನಿಂದ ಪಡೆದು ಅವರನ್ನು ಹುಡುಕಲು ಹೋದರು”  ಆಕೆ ಉತ್ತರಿಸಿದರು
“ಸರಿಯಮ್ಮ, ನಿಮಗೆ ನಿಮ್ಮ ಯಜಮಾನರು ಹೇಗೆ ಸತ್ತಿದ್ದಾರೆ ಎಂದು ಗೊತ್ತಾಯಿತಾ” ವಕೀಲರು ಪ್ರಶ್ನಿಸಿದರು
“ಬೇರೆ ಹೇಗೆ ಸಾಯಲು ಸಾಧ್ಯ ಅಷ್ಟು ಆರೋಗ್ಯವಾಗಿದ್ದ ಅವರು ಇದ್ದಕ್ಕಿದ್ದಂತೆ  ಸಾಯಬೇಕಾದರೆ ಅವರನ್ನು ಕೊಲೆ ಮಾಡರಲೇ ಬೇಕು, ಅವರ ತಲೆಯ ಹಿಂಬಾಗದಿಂದ ರಕ್ತ ಸುರಿಯುತ್ತಿತ್ತು, ಅವರ ಜೊತೆ ಹೋದ ಸ್ನೇಹಿತರು ಇವರು  ಮಾಯ, ಅಂದರೆ ಮತ್ತೇನಾಗಿರಲು ಸಾದ್ಯ, ಬಸ್ ನಿಲ್ದಾಣದಲ್ಲಿ ಮತ್ತೆ ಜಗಳವಾಗಿದೆ, ಇವರು ಕಲ್ಲಿನಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಅದಕ್ಕಾಗಿ ಮನೆಯಿಂದ ಉಪಾಯವಾಗಿ ನಮ್ಮವರನ್ನು ಬಸ್ ನಿಲ್ದಾಣಾಕ್ಕೆ ಕರೆತಂದಿದ್ದಾರೆ , ನಾನು ಮೋಸಹೋದೆ ಸ್ವಾಮಿ ನ್ಯಾಯ ಕೊಡಿಸಿ”
ಸರ್ಕಾರಿ ವಕೀಲರು ನ್ಯಾಯಾದೀಶರತ್ತ ತಿರುಗಿ ,
“ನನ್ನ ಸಾಕ್ಷಿಯ ಹೇಳಿಕೆ ಮುಗಿಯಿತು ಸ್ವಾಮಿ “ ಎಂದರು.

ಯಥಾಪ್ರಕಾರ ನರಸಿಂಹ ಎದ್ದು ನಿಂತ ರಾಜಮ್ಮನನ್ನು ಪ್ರಶ್ನಿಸಲು, ನ್ಯಾಯದೀಶರ ಅಪ್ಪಣೆಯ ಮೇರೆಗೆ ಅವರನ್ನು ಪ್ರಸ್ನಿಸಿದ
“ನಿಮ್ಮ ಹೆಸರು”
“ರಾಜಮ್ಮ”
ನರಸಿಂಹ ಕೇಳಿದ
“ನಿಮ್ಮ ಪತಿ ಅನಂತರಾಮಯ್ಯನವರಿಗೂ ವೆಂಕಟೇಶಯ್ಯನವರಿಗೂ ಎಷ್ಟು ವರ್ಷಗಳ ಗೆಳೆತನ,
ರಾಜಮ್ಮ ಹೇಳಿದಳು,
ಸುಮಾರು ಇಪ್ಪತ್ತು ವರ್ಷಗಳಿಗೂ ಜಾಸ್ತಿ , ನಮ್ಮ ಮನೆಗು ಅವರ ಮನೆಗೂ ಓಡಾಟವಿದ್ದೆ ಇದೆ, ಹಳೆಯ ಗೆಳೆಯರು ಅವರು”  

ನರಸಿಂಹ “ಅಂತಹ ಗೆಳೆಯರು , ಅವರಾಗಿರುವಾಗ ವೆಂಕಟೇಶಯ್ಯನವರು ನಿಮ್ಮ ಪತಿ ಅನಂತರಾಮಯ್ಯನವರನ್ನು ಕೊಲ್ಲಲು ಸಾದ್ಯವಿದೆಯ” ,
ಆಕೆ ಯೋಚಿಸುತ್ತ ಹೇಳಿದಳು
“ಹೇಗೆ ಹೇಳುವುದು ಹಣ ತಾಯಿ ಮಕ್ಕಳ ಸಂಬಂಧವನ್ನೆ ಕೆಡಿಸುವ ಈ ಕಾಲದಲ್ಲಿ , ಸಂದರ್ಭ ಹಾಗೆ ಕಾಣುವದಲ್ಲ”  
ನರಸಿಂಹ
“ನಿಮ್ಮ ಯಜಮಾನರು ಐದು ಲಕ್ಷ ಹಣ ಪಡೆದಿದ್ದರು ಅನ್ನುವಿರಿ, ಹಿಂದೆ ಯಾವಗಲಾದರು ಆ ರೀತಿ ಹಣದ ವ್ಯವಹಾರ ಅವರಿಬ್ಬರ ನಡುವೆ ಇದ್ದೀತ?”  
ಆಕೆ ದೃಡವಾಗಿ ಹೇಳಿದಳು,
“ಇಲ್ಲ , ಈಗ ನನ್ನ ಯಜಮಾನರು ಮನೆ ಕಟ್ಟಿಸುತ್ತ ಇದ್ದದ್ದರಿಂದ ಈ ರೀತಿ ಹಣ ಪಡೆಯುವ ಸಂದರ್ಭ ಬಂದಿತು”
“ಬಡ್ಡಿಗಾಗಿ ಪಡೆದಿರುವ ಹಣವೇ, ಬಡ್ಡಿ ಕೊಡುತ್ತಿದ್ದಾರಾ?” ನರಸಿಂಹ ಪ್ರಶ್ನೆಸಿದ , ಅದಕ್ಕೆ ರಾಜಮ್ಮ
“ಇಲ್ಲ ನನಗೆ ತಿಳಿದಿರುವಂತೆ ಬಡ್ಡಿ ಎಂದು ಹಣವನ್ನು ಪಡೆದಿಲ್ಲ, ಸುಮ್ಮನೆ ಹಾಗೆ ಕೈಗಡ ಎಂದು ಪಡೆದಿರುವುದು”  
“ಹಾಗಿದ್ದಾಗ ಹಣಕ್ಕಾಗಿ ಕೊಲೆ ನಡೆದಿದೆ ಎಂದು ಹೇಗೆ ಹೇಳುವಿರಿ” ನರಸಿಂಹ ಮತ್ತೇ ಕೇಳಿದ,
“ಹೌದು ಹಣಕ್ಕಾಗಿ ಜಗಳವಾಯಿತು, ಅದು ನನ್ನ ಎದುರಿಗೆ ನಡೆಯಿತು, ನಂತರ ಆ ರೋಷದಲ್ಲಿ ಕೊಲೆ ಮಾಡಿದ್ದಾರೆ” ರಾಜಮ್ಮ ಉದ್ವೇಗದಲ್ಲಿಯೇ ಹೇಳಿದಳು,
“ಅಂದರೆ ಕೊಲೆಯಾಗುವದನ್ನು ನೀವು ಎದುರಿಗೆ ನೋಡಿದಿರ?” ನರಸಿಂಹ ಪ್ರಸ್ನಿಸಿದ, ಆಕೆ
“ಇಲ್ಲ ನಾನು ನೋಡಿಲ್ಲ, ಕೊನೆಯ ಬಾರಿ ಅವರಿಬ್ಬರು ಜೊತೆಗೆ ಹೋದದ್ದು ಮಾತ್ರ ನಾನು ನೋಡಿದ್ದೇನೆ”
“ಮತ್ತೆ ವೆಂಕಟೇಶಯ್ಯನವರೆ ಕೊಲೆ ಮಾಡಿದ್ದಾರೆ ಎಂದು ಹೇಗೆ ನಂಬುವಿರಿ” ನರಸಿಂಹನ ಕುತೂಹಲ,
“ಅವರಿಬ್ಬರ ನಡುವೆ ಹೊರಡುವ ಮೊದಲು ಜಗಳವಾಯಿತು, ಬಸ್ ಸ್ಟಾಂಡಿನಲ್ಲಿ ಅವರ ಕೊಲೆಯಾಗಿತ್ತು, ಕಲ್ಲಿನಿಂದ ಜಜ್ಜಿ ಕೊಲೆಯಾಗಿತ್ತು, ನಂತರ ಅವರು ಆ ಜಾಗದಿಂದ ಹೊರಟು ಹೋಗಿದ್ದರು, ಪೋಲಿಸರು ಅವರನ್ನು ಹುಡುಕಿ ತಂದಿದ್ದಾರೆ ಅನ್ನುವಾಗ ಅವರೇ ಕೊಲೆ ಮಾಡಿದ್ದಾರೆ ಅನ್ನುವದಕ್ಕೆ ಮತ್ತಿನೇನು ಸಾಕ್ಷಿ ಬೇಕು”
“ಅಂದರೆ ನೀವು ಈ ಸಂದರ್ಭದಿಂದ ಅನಂತರಾಮಯ್ಯನವರ ಕೊಲೆ ವೆಂಕಟೇಶಯ್ಯ ಮಾಡಿದ್ದಾರೆ ಅನ್ನುತ್ತಿದ್ದೀರಿ ಹೊರತು, ನೀವು ಎದುರಿಗೆ ನೋಡಲಿಲ್ಲ ಅಲ್ಲವೆ”  ನರಸಿಂಹ ಆಕೆಯ ಮಾತು ಕೇಳುತ್ತ ಪ್ರಸ್ನಿಸಿದ,
“ನಿಜ, ನಾನು ಎದುರಿಗೆ  ಕೊಲೆಯನ್ನು ನೋಡಲಿಲ್ಲ” ರಾಜಮ್ಮ ನಿಧಾನವಾಗಿ ಹೇಳಿದಳು.
ನರಸಿಂಹ ನ್ಯಾಯದೀಶರತ್ತ ತಿರುಗಿ ಹೇಳಿದ
“ಸ್ವಾಮಿ ಅಷ್ಟೆ ನಾನು ಹೇಳುವುದು ಇಲ್ಲಿ ವೆಂಕಟೇಶಯ್ಯನವರೆ ಅನಂತರಾಮಯ್ಯನವರ ಕೊಲೆಮಾಡಿರುವದನ್ನು   ಯಾರು ನೇರವಾಗಿ ನೋಡಿಲ್ಲ. ಅಂತಹ ಸಾಕ್ಷಿಗಳು ಇಲ್ಲಿ ಯಾರು ಇಲ್ಲ ಅಂತ ತಮ್ಮ ಗಮನಕ್ಕೆ ತರುತ್ತಿದ್ದೇನೆ”
ನ್ಯಾಯಾದೀಶರು ತಲೆ ಆಡಿಸಿದರು.