Wednesday, March 30, 2016

ಕೊಟ್ಟೂರ ಜಾತ್ರೆ ಮತ್ತು ಜಯಂತ.

ಕೊಟ್ಟೂರ ಜಾತ್ರೆ ಮತ್ತು ಜಯಂತ.





ಜಯಂತ ಅಮ್ಮನ ಕೈ ಹಿಡಿದು ನಡೆಯುತ್ತಿರುವಂತೆ ಸುತ್ತಲು ಕಾಣುತ್ತಿದ್ದ ರಂಗು ರಂಗು ಅವನ ಕಣ್ಣು ತುಂಬುತಿತ್ತು.


ಅಮ್ಮ, ಸರೋಜ ತನ್ನದೆ ರಸ್ತೆಯ ಅಕ್ಕಪಕ್ಕದ ಮನೆಯ ಗೆಳತಿಯರೊಡನೆ ಜಾತ್ರೆಯ  ಸಂಭ್ರಮ   ನೋಡಲು ಹೊರಟಾಗ ಜಯಂತನದೇ ಚಿಂತೆ ಸರೋಜಳಿಗೆ, ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ, ಕರೆದುಕೊಂಡು ಹೋಗುವಂತಿಲ್ಲ. ಅಂತಹ ವಯಸ್ಸು ಅವನದು. ಬೆಳೆಯುವ ವಯಸಿನ ಮಕ್ಕಳದೆ ಒಂದು ಸಮಸ್ಯೆ ಬಿಡಿ, ತೀರ ಚಿಕ್ಕ ಮಕ್ಕಳಾದರೆ ಅಮ್ಮಂದಿರು ಎತ್ತಿ ಸೊಂಟದ ಮೇಲೆ ಕೂಡಿಸಿಕೊಂಡು, ಆ ಕಡೆ ಈಕಡೆ ಎನ್ನುತ್ತ ಬಾರ ಬದಲಾಯಿಸುವಂತೆ, ಮಕ್ಕಳನ್ನು ಎಡಗಡೆ ಬಲಗಡೆ ಎತ್ತಿಕೊಳ್ಳುತ್ತ ಹೇಗೊ ನಿಭಾಯಿಸುತ್ತಾರೆ. ಆದರೆ ಮೂರು ನಾಲಕ್ಕು ವಯಸ್ಸಿನ   ಬಾಲಕರಾದರೆ ಅಮ್ಮಂದಿರಿಗೆ ಸಮಸ್ಯೆಯೆ, ಹೊತ್ತು ನಡೆಯುವುದು ಕಷ್ಟ ಹಾಗಂತ ಮಕ್ಕಳನ್ನು ನಡೆಸುವುದು ಕಷ್ಟ, ಅವು ಮೊಂಡುತನ ಮಾಡುತ್ತಲೆ ನಡೆಯುತ್ತವೆ.

ಕೊಟ್ಟೂರೇಶ್ವರ ಜಾತ್ರೆ ಅಂದರೆ ಅದೊಂದು ಸಂಭ್ರಮ ಹೆಣ್ಣುಮಕ್ಕಳಿಗೆ ಮಕ್ಕಳಿಗೆ, ತೇರು ಎಳೆಯುವುದು ಮುಖ್ಯ ಆಕರ್ಷಣೆಯಾದರು, ಆ ಸಂಭ್ರಮದಲ್ಲಿ ಸೇರುತ್ತಿದ್ದ ಸಾಲು ಅಂಗಡಿಗಳು ಸಿಹಿತಿಂಡಿಗಳು ಬಟ್ಟೆ ಆಟದ ಸಾಮಾನು, ಮನೋರಂಜನೆ ಒಂದೇ ಎರಡೇ ...

ಜಾತ್ರೆಯಲ್ಲಿ ಅಮ್ಮನ ಜೊತೆ ಹೊರಟ ಜಯಂತನಿಗೆ ಸುತ್ತಲಿನ ರಂಗು ಕಣ್ಣು ತುಂಬುತ್ತಿತ್ತು, ಅಮ್ಮನ ಕಣ್ಣು ಸೀರೆ, ಬಳೆಗಳ ಅಂಗಡಿಗಳತ್ತ ಆದರೆ, ಅವನದು ಬೆಲೂನು, ಸಿಹಿ ಅಂಗಡಿಗಳತ್ತ.  ಬೆಂಡುಬತ್ತಾಸು , ಪುರಿ ಅಂದರೆ ಆಯಿತು ಜಯಂತನಂತಹ ಮಕ್ಕಳಿಗೆ ಪ್ರಾಣ. ಅಮ್ಮನ ಕೈಯಿಂದ ಆಗಾಗ್ಯೆ ಕೊಸರಿಕೊಳ್ಳುತ್ತಲೆ ನಡೆಯುತ್ತಿದ್ದ.

ಸರೋಜಳಿಗೂ ಭಯವೇ ಮಗು ತಪ್ಪಿಸಿಕೊಂಡರೆ ಎಂದು, ಅವನ ಪುಟ್ಟ ಕೈಯನ್ನು ಬಲವಾಗಿ ಹಿಡಿದೆ ನಡೆಯುತ್ತಿದ್ದಳು.
’ಅಮ್ಮು ನಂಗೆ ಬಣ್ಣದ ಬೆಲೂನು ಕೊಡಿಸು’ ಮಗು ಗೋಗರಿಯುತ್ತಿತ್ತು.
’ಥೂ ಬೇಡಮ್ಮ ಪುಟ್ಟ ಅದು ಚೆನ್ನಾಗಿಲ್ಲ, ಡಂ ಅಂದುಬಿಡುತ್ತೆ, ಸುಮ್ಮನೆ ಒಂದು ರುಪಾಯಿ ದಂಡ’
ಅಮ್ಮ ಹೇಳಿದರೆ ಜಯಂತನಿಗೆ ಎಲ್ಲಿ ಅರ್ಥವಾಗಬೇಕು.

ಹಾಗಿರುವಾಗ ಬೆಲೂನು ಮಾರುವವನೊಬ್ಬ, ಹೆಗಲ ಮೇಲೆ ತರಹಾವರಿ ಊದಿದ ಬೆಲೂನು ಕಟ್ಟಿದ ಕೋಲನ್ನು ಹಿಡಿದು, ಮಕ್ಕಳನ್ನು ಆಕರ್ಷಿಸಲು ಎನ್ನುವಂತೆ ಪಿಳ್ಳಂಗೋವಿಯಂತ ಕೊಳಲನ್ನು ಊದುತ್ತ ನಡೆದಿದ್ದ, ಮಗನ ಕೈಯನ್ನು ಹಿಡಿದಿದ್ದ, ಜಯಂತನ ಅಮ್ಮ ಒಂದು ಕ್ಷಣ ಕೈ ಸಡಿಲಿಸಿ, ಎದುರಿಗೆ ಇರುವ ಕಣ್ಣುಕುಕ್ಕುವ ಬಟ್ಟೆಯ ಅಂಗಡಿ ನೋಡುತ್ತಿದ್ದಳು , ಅವಳಿಗೇನು ಹೆಚ್ಚು ವಯಸ್ಸೇ, ಇನ್ನೂ ಇಪ್ಪತ್ತಾರು ಇದ್ದೀತು, ಆಸೆಪಡುವ ವಯಸ್ಸು. ಆದರೆ ಆ ಕ್ಷಣದಲ್ಲಿ ಮಗು ಅವಳ ಕೈಯನ್ನು ಕೊಸರಿ ಬೆಲೂನು ಮಾರುವನ ಹಿಂದೆ ನಡೆದಿದ್ದು ಅವಳಿಗೆ ಅರಿವಿಗೆ ಬರಲಿಲ್ಲ.

ಕ್ಷಣಕಾಲ ಕಳೆದು ಪಕ್ಕದಲ್ಲಿ ನೋಡಿದರೆ ಮಗುವಿಲ್ಲ. ಅವಳ ಉಸಿರು ನಿಂತಂತೆ ಆಯಿತು. ಹೃದಯದ ಬಡಿತ ಏರಿತು.
ತನ್ನ ಮಗುವೆಲ್ಲಿ?

ಜೊತೆಯಲ್ಲಿ ಬಂದಿದ್ದ ರಸ್ತೆಯ ಸ್ನೆಹಿತೆಗೆ ಹೇಳಿದಳು,
’ಪದ್ಮ, ಜಯಂತ ಕಾಣುತ್ತಿಲ್ಲ’
ಅವಳ ದ್ವನಿಯಲ್ಲಿ ಅವಳ ಗಾಭರಿ ಎಲ್ಲರಿಗೂ ಅರ್ಥವಾಗಿತ್ತು. ಇಬ್ಬರೂ ಭಯ ಪಟ್ಟು ಹುಡುಕಲು ತೊಡಗಿದರು.

ಇತ್ತ ಬೆಲೂನಿನ ಮಾರಾಟಗಾರನ ಹಿಂದೆ ನಡೆದಿದ್ದ ಜಯಂತನಿಗೆ ಒಂದೆರಡು ಕ್ಷಣದಲ್ಲಿ ತಾನು ಅವನ ಹಿಂದೆ ನಡೆಯಲಾರನೆಂದು ಅರಿವಾಗಿತ್ತು, ಕ್ಷಣಕಾಲ ಜಯಂತ ನಿಲ್ಲುತ್ತಲೇ, ಬೆಲೂನಿನ ಮಾವ ಅಲ್ಲಿಂದ ಕಣ್ಮರೆಯಾಗಿದ್ದ. ಅವನು  ಪಕ್ಕದಲ್ಲಿ ನೋಡಿದರೆ ಅಮ್ಮನಿಲ್ಲ. ಮಗುವಿನ ಭಯ ತಾರಕಕ್ಕೆ ಏರಿತು, ಏನು ತೋರದ ಜಯಂತ ಜೋರಾಗಿ ಅಳಲು ತೊಡಗಿದ. ಹಸುವಿನಿಂದ ತಪ್ಪಿಸಿಕೊಂಡ ಕರುವಿನ ರೀತಿ ಅತ್ತ ಇತ್ತ ಓಡಾಡಿದ ಆದರೆ ಅವನಿಗೆ ಎಲ್ಲಿ ಹೋಗಬೇಕೆಂದು ತಿಳಿಯಲಿಲ್ಲ. ಸುತ್ತಲೂ ಜನ ಆದರೆ ಅಮ್ಮನಿಲ್ಲ.

ಜಾತ್ರೆಯ ಜನ ಮಗುವನ್ನು ಅಳುವನ್ನು ನೋಡಿದರು, ಪಾಪ ಮಗು ತಪ್ಪಿಸಿಕೊಂಡಿದೆ ಅಂದುಕೊಳ್ಳುತ್ತ, ಸುತ್ತಲು ಎಲ್ಲಿಯಾದರು ಮಗುವಿನ ಅಪ್ಪ ಅಮ್ಮ ಕಾಣಬಹುದೆ ಎಂದು ನೋಡಿದರು.
ಛೆ!! ಪಾಪ !! ಅನ್ನುವದರ ಹೊರತು ಅವರೇನು ಸಹಾಯ ಮಾಡಲಾರರು, ಮಗುವಿನ ಹೆಸರು ಕೇಳಿದರೆ ಜಯಂತ್ ಎನ್ನುತ್ತಿದೆ.
ಅಪ್ಪ ಅಮ್ಮನ ಹೆಸರು ಕೇಳಿದರು ಗಾಭರಿಯಲ್ಲಿ ಮಗು ಹೇಳುತ್ತಿಲ್ಲ. ಮುಂದೇನು ಅನ್ನುವದೊರೊಳಗೆ ಅಲ್ಲಿ ಒಬ್ಬ ಪೋಲಿಸ್ ಅಧಿಕಾರಿ ಬಂದ. ಸುರಕ್ಷತೆಗಾಗಿ ಅವನು ಅಲ್ಲಿದ್ದ, ಜನರ ಗುಂಪು ನೋಡಿ ಬಂದು ವಿಷಯ ತಿಳಿದವನು ಮಗುವನ್ನು ಎತ್ತಿಕೊಂಡು ರಮಿಸುತ್ತ, ಪೋಲಿಸ್ ಕಂಟ್ರೋಲ್ ರೂಮಿನತ್ತ ಹೊರಟ. ಅಲ್ಲಿ ಲೌಡ್ ಸ್ಪೀಕರ್ ಇದ್ದು, ಅದರ ಮೂಲಕ ಮಗುವಿನ ಅಪ್ಪ ಅಮ್ಮನಿಗೆ ಸುದ್ದಿ ಕೊಡಬಹುದೆಂದೆ ಅವನ ಯೋಚನೆ.

ಕಂಟ್ರೋಲ್ ರೂಮಿನಲ್ಲಿ ಮಗುವನ್ನು ಕೂಡಿಸಿಕೊಂಡು, ಅಲ್ಲಿಂದ ಮೈಕಿನ ಮೂಲಕ ಕೂಗಿ ಹೇಳಿದರು, ಮಗುವೊಂದು ಸಿಕ್ಕಿದೆ, ಅಪ್ಪ ಅಮ್ಮನ ಹೆಸರು ಹೇಳುತ್ತಿಲ್ಲ, ಮಗುವಿನ ಹೆಸರು ಜಯಂತ್ . ನೀಲಿ ಬಣ್ಣದ ನಿಕ್ಕರ್ , ಬಿಳಿಬಣ್ಣದ ಶರ್ಟ್ ಎಂದೆಲ್ಲ ವರ್ಣಿಸಿದರು.
ಮಗು ಮಾತ್ರ ಅಳು ನಿಲ್ಲಿಸುತ್ತಿಲ್ಲ. ಅಧಿಕಾರಿ ಕೇಳಿದ,
’ಮಗು ಅಳಬೇಡಪ್ಪ, ಚಾಕಲೇಟ್ ತಿನ್ನುತ್ತೀಯ ಕೊಡಿಸಲ’
’ಬೇಡ’ ಅನ್ನುವಂತೆ ಮಗು ತಲೆ ಅಡ್ಡ ಹಾಕಿತು.
ಇನ್ನೂ ಮದುವೆ ಇಲ್ಲದ ಯುವಕ ಆ ಪೋಲಿಸ್ ಅಧಿಕಾರಿ. ಅವನಿಗೆ ಮಗುವನ್ನು ಸಮಾಧಾನ ಪಡಿಸಲು ತಿಳಿಯದು. ಪಕ್ಕದಲ್ಲಿದ್ದ ಮಹಿಳಾ ಅಧಿಕಾರಿ ಮುಸು ಮುಸು ನಗುತ್ತಿದ್ದರು.
’ಮತ್ತೇನು ಬೇಕು ಹೇಳು ಕೊಡಿಸುವೆ ಅಳಬೇಡ  ನಿಮ್ಮ ಅಮ್ಮ ಈಗ ಬರುತ್ತಾರೆ’
’ನಂಗೆ ಬೆಲೂನ್ ಬೇಕು’ ಜಯಂತ್ ಅಳುತ್ತಲೇ ನುಡಿದ.
ಪೋಲಿಸ್ ಅಧಿಕಾರಿ ಮುಖದಲ್ಲಿ ನಗು, ಹೊರಗೆ ಬಗ್ಗಿ ನೋಡಿ ಅಲ್ಲಿದ್ದ ಬೆಲೂನ್ ಮಾರಾಟಗಾರನನ್ನು ಬಳಿ ಕರೆದು, ಮಗುವಿಗೆ ಒಂದು ಬೆಲೂನ್ ಕೊಡಿಸಿದ. ಮಗು ಗಪ್ ಚಿಪ್ . ಈಗ ಅಧಿಕಾರಿ ಪಕ್ಕದಲ್ಲಿದ್ದ ಮಹಿಳಾ ಅಧಿಕಾರಿಯತ್ತ ತುಂಟು ನಗೆ ಬೀರಿದ.

ಮಗು ಬೆಲೂನಿನ ಸಂಭ್ರಮದಲ್ಲಿರುವಾಗಲೆ, ಜಯಂತನ ತಾಯಿ ಸರೋಜ ಅಲ್ಲಿ ಬಂದಳು.
’ನನ್ನ ಮಗು ತಪ್ಪಿಸಿಕೊಂಡಿದೆ, ಅಳುತ್ತಲೆ ಮಹಿಳಾ ಅಧಿಕಾರಿ ಬಳಿ ನುಡಿದಳು’ ಅವಳ ಅಳುವಿನಲ್ಲಿ ಭಯ , ದುಃಖ ಅಸಹಾಯಕತೆ ಎಲ್ಲವೂ ಮಿಳಿತಗೊಂಡಿದ್ದವು.
’ಆ ಮಗುನಾ ನೋಡಿ’ ಮೂಲೆಯಲ್ಲಿ ಬೆಲೂನ್ ಹಿಡಿದು, ಕುಳಿತಿದ್ದ ಮಗುವನ್ನು ತೋರಿದಳು ಮಹಿಳಾ ಅಧಿಕಾರಿ.

ತನ್ನ ಮಗುವನ್ನು ಅಲ್ಲಿ ಕಾಣುತ್ತಲೆ, ಅವಳ ಅಳು ನುಗ್ಗಿ ಬಂದಿತು,
’ಜಯಂತ್ ’ ಕೂಗಿ ಮಗುವಿನಡೆ ಹೆಜ್ಜೆ ಹಾಕಿದಳು.
ಜಯಂತ್ ಸಹ ತನ್ನ ಬೆಲೂನಿನ ಸಂಭ್ರಮದಿಂದ ಅಮ್ಮನತ್ತ ಮುಖತಿರುಗಿಸಿದ, ಈಗ ಅವನಿಗೆ ಅಮ್ಮನಿಂದ ತಪ್ಪಿಸಿಕೊಂಡಿದ್ದು ಮತ್ತೆ ನೆನಪಿಗೆ ಬಂದು ಅಳು ಬಂದಿತು. ಅಮ್ಮನತ್ತ ಓಡಿಬಂದ
’ಎಲ್ಲಿ ಹೋಗಿದ್ದೆ, ಪುಟ್ಟು’ ಎನ್ನುತ್ತ ಸರೋಜ ಬಿಕ್ಕಿದಳು. ಮತ್ತೆ ಮಗುವಿನ ಕೈಲಿ ಬಣ್ಣದ ಬೆಲೂನ್ ನೋಡುತ್ತ ಆಶ್ಚರ್ಯದಿಂದ ಎನ್ನುವಂತೆ
’ಇದು ಎಲ್ಲಿಂದ ಸಿಕ್ಕಿತು’ ಎಂದಳು
’ಈ ಮಾಮ ಕೊಡಿಸಿದರು ’ ಎನ್ನುತ್ತ , ಪೋಲಿಸ್ ಅಧಿಕಾರಿಯತ್ತ ಕೈ ಮಾಡಿತು ಮಗು
ಆಗ ಅಧಿಕಾರಿ ಜಯಂತ್ ಅಮ್ಮನಿಗೆ ಹೇಳಿದ
’ಏನಮ್ಮ ಮಗುವನ್ನು ಹುಷಾರಾಗಿ ನೋಡಿಕೊಳ್ಳಬೇಕಲ್ಲವ, ಇಷ್ಟೊಂದು ಜನ ಸೇರಿರುವ ಕಡೆ ಹೀಗೆ ಬೇಜಾವಬ್ದಾರಿ ಮಾಡಿದರೆ ಹೇಗೆ, ಮಕ್ಕಳು ತಪ್ಪಿಸಿಕೊಂಡರೆ, ಕೆಲವರ ಕೈಗೆ ಸಿಕ್ಕರೆ ಮತ್ತೆ ಸಿಗಲ್ಲ ಗೊತ್ತ’
ಅವನು ದರ್ಪದಿಂದ ನುಡಿದ
ಸರೋಜ ನಾಚಿಕೆ, ದುಃಖದಿಂದ ನುಡಿದಳು
’ತಪ್ಪಾಗಿ ಹೋಯಿತು, ಸಾರ್, ಕೈ ಹಿಡಿದುಕೊಂಡೆ ಇದ್ದೆ, ಯಾವ ಮಾಯದಲ್ಲಿ ಕೈ ಬಿಡಿಸಿಕೊಂಡ,  ತಪ್ಪಿಸಿಕೊಂಡ ಗೊತ್ತಾಗಲಿಲ್ಲ. ಇನ್ನು ಹುಷಾರಾಗಿರುತ್ತೇನೆ. ನಿಮ್ಮಿಂದ ತುಂಬಾ ಉಪಕಾರವಾಯಿತು’ ಎನ್ನುತ್ತ , ಆಕೆ ಅಧಿಕಾರಿಗೆ ಕೈಮುಗಿದಳು.
’ಸರಿಯಮ್ಮ, ಮಗುವನ್ನು ಕೆಳಗೆ ಇಳಿಸಬೇಡ’ ಎಂದು ಹೇಳಿ ಕಳಿಸಿದ.
ಮಗು ಸಂಭ್ರಮದಿಂದ ಬೆಲೂನಿನ ಜೊತೆ ಆಡುವಾಗ ಅಂದುಕೊಂಡಳು ’ತಪ್ಪು ಮಾಡಿದೆ,  ಮಗು ಕೇಳಿದಾಗ ಒಂದು ಬೆಲೂನು ಕೊಡಿಸಿದ್ದರೆ, ಅದು ತಪ್ಪಿಸಿಕೊಳ್ಳುತ್ತಿರಲಿಲ್ಲ ಅನ್ನಿಸುತ್ತೆ’ .        .....

’ಇಲ್ಲಿ ಅರ್ಧಗಂಟೆ ಸಮಯವಿದೆ , ಊಟ ಮಾಡಬಹುದು’  ಕಂಡೆಕ್ಟರ್ ಕೂಗಿದ.
ಜಯಂತನ ನೆನಪಿನ ಸರಣಿಗೆ ಭಂಗ ಬಂದಿತ್ತು. ಕಣ್ಣು ತೆರೆದ

ವೇಗವಾಗಿ ಹೋಗುತ್ತಿದ್ದ ಬಸ್ , ವೇಗ ತಗ್ಗಿಸಿ, ರಸ್ತೆಯ ಪಕ್ಕಕ್ಕೆ ಹೋಗಿ, ನಿಂತಿದ್ದು, ತಕ್ಷಣ ಎನ್ನುವಂತೆ ಬಸ್ಸಿನ ಎಲ್ಲ ಲೈಟ್ ಗಳು ಹತ್ತಿದ್ದು ಜಯಂತನಿಗೆ ಮುಜುಗರ ಎನ್ನುವಂತೆ ಆಯಿತು. ಬಸ್ಸಿನಿಂದ ಹೊರಗೆ ನೋಡಿದ. ರಾತ್ರೆಯ ದೀಪದ ಬೆಳಕಿನಲ್ಲಿ ಹೋಟೆಲಿನ ಹೆಸರು ಸ್ವಷ್ಟವಾಗಿ ಕಾಣುತ್ತಿಲ್ಲ. ಸುಮ್ಮನೆ ಕುಳಿತಿರುವ ಬದಲು ಕೆಳಗಿಳಿದರಾಯಿತು ಎನ್ನುತ್ತ ನಿಧಾನವಾಗಿ ಬಸ್ಸಿನಿಂದ ಕೆಳಗಿಳಿದವನು , ಹೋಟೆಲಿನತ್ತ ಸಾಗಿದ. ಎಲ್ಲರೂ ಊಟ , ತಿಂಡಿ ತೆಗೆದುಕೊಳ್ಳುತ್ತಿದ್ದರು, ಅವನು ಮನೆಯಿಂದ ಹೊರಡುವಾಗಲೆ ಮೊಸರನ್ನ ತಿಂದಿದ್ದ. ರಾತ್ರಿ ಪ್ರಯಾಣ ಹೆಚ್ಚು ತಿಂದರೆ ಸರಿಹೋಗಲ್ಲ ಎಂದು. ಕೌಂಟರಿನಲ್ಲಿ ಕೇಳಿ ಕಾಫಿ ಪಡೆದವನು , ಅಲ್ಲಿ ಕುಳಿತು ನಿಧಾನವಾಗಿ ಕುಡಿದು  ಹೊರಗೆ ಬಂದವನು , ಹೋಟೆಲಿನ ಹಿಂಬಾದಲ್ಲಿದ್ದ ಕತ್ತಲಿನತ್ತ ನಡೆದು ತನ್ನ ಕೆಲಸ ಮುಗಿಸಿ. ಮತ್ತೆ ಬಂದು ಬಸ್ಸಿನ ಹತ್ತಿರ ನಿಂತ.
ಪಕ್ಕದಲ್ಲಿ ನಿಂತಿದ್ದ ಯಾರನ್ನೋ ಕೇಳಿದ ಇದು ಯಾವ ಊರು.
’ಹಿರಿಯೂರು’ ಎಂದರು ಅವರು. ಆದರೆ, ಅವರು ಇರುವುದು ಊರಿನಂತೆ ಕಾಣಲಿಲ್ಲ,   ಊರಿನ ಹೊರಬಾಗ ಇರಬಹುದು.
ಜಯಂತ ಅಂದುಕೊಳ್ಳುತ್ತಿದ್ದ, ಬಹುಶಃ ಅಂದು ಚಿಕ್ಕ ಮಗುವಿನಲ್ಲಿ ತಪ್ಪಿಸಿಕೊಂಡಿದ್ದು ಅವನ ಮನಸಿನ ಮೇಲೆ ಬಹಳ ಪ್ರಭಾವ ಬೀರಿತ್ತು. ಒಬ್ಬನೆ ಎಲ್ಲಿಯಾದರು ಹೋಗಲು ಅವನ ಮನ ಅಳುಕುತ್ತಿತ್ತು, ತುಂಬಾ ಜನ ಸೇರಿದ ಅಪರಿಚಿತ ಜಾಗವಂತು ಅವನಲ್ಲಿ ಎಂತದೋ ತಳಮಳ ಗಾಭರಿ ಉಂಟುಮಾಡುತ್ತಿತ್ತು.
ಬಸ್ಸು ಪುನಃ ಹೊರಟಂತೆ, ಬಸ್ಸಿನ ಒಳಗಿನ ಎಲ್ಲ ದೀಪಗಳು ಆರಿದವು. ಜಯಂತ ತಲೆ ಹಿಂದೆ ಒರಗಿಸಿ, ಅರಾಮವಾಗಿ ಕುಳಿತ.
ಅದೇನೊ ಅವನ ಮನಸ್ಸಿನಲ್ಲಿ ಕೊಟ್ಟೂರಿನ ಜಾತ್ರೆಯ ಹಳೆಯ ಸಂಭ್ರಮಗಳು, ನೆನಪುಗಳು ಹಾದು ಹೋಗುತ್ತಿದ್ದವು. ಕೊಟ್ಟೂರಿನ ಜಾತ್ರೆ ಹಾಗು ಅವನ ಜೀವನದ ಘಟನೆಗಳು ಪರಸ್ಪರ ತಳುಕುಹಾಕಿಕೊಂಡಿದ್ದವು.

ಅವನ ಮನ ಪುನಃ ಕಾಲೇಜಿನ ದಿನಗಳನ್ನು ನೆನೆಯುತ್ತಿತ್ತು....


’ಜಯಂತ ಇರೋ ನಾನು ಬರುತ್ತೀನಿ ಒಟ್ಟಿಗೆ ಹೋಗೋಣ. ತೇರು ಎಳೆಯಲು ಇನ್ನು ತುಂಬಾ ಹೊತ್ತಿದೆ. ಇಷ್ಟು ಬೇಗ ಹೋಗಿ ಏನು ಮಾಡುತ್ತೀಯ. ಜೊತೆಗೆ ಹೋದರಾಯಿತು’
’ಹೋಗಮ್ಮೋ, ನೀನು ಬೀದಿಯಲ್ಲಿರುವ ಎಲ್ಲ ಹೆಂಗಸರನ್ನು ಜೊತೆ ಕರೆತರುತ್ತೀಯ, ನಿಮ್ಮ ಜೊತೆ ನಾನ್ಯಾಕೆ ಬರಲಿ, ನಾನು ನನ್ನ ಪ್ರೆಂಡ್ಸ್ ಜೊತೆ ನನ್ನ ಪಾಡಿಗೆ ಹೋಗುತ್ತೇನೆ, ನೀನು ನಿನ್ನ ಪ್ರೆಂಡ್ಸ್ ಜೊತೆ ಹೋಗು’

ಸರೋಜ ಗೊಣಗುತ್ತ ತೆಪ್ಪಗಾದರು.

ಆಗಿನ್ನು  ಮೀಸೆ ಚಿಗುರಿದ ವಯಸ್ಸು ಅವನದು, ಎರಡನೇ ಪೀಯೂಸಿ ಓದುತ್ತಿದ್ದವನು. ಅದೇನೊ ಆ ವರ್ಷ ತೇರು ಎಳೆಯುವದ ದಿನ ಅವನ ಕಾಲೇಜಿಗು, ಊರಿನಲ್ಲಿಯ ಶಾಲೆಗಳಿಗು ರಜೆ ಇತ್ತು.
ಆದರೆ ಅವನ ಕಾರ್ಯಕ್ರಮ ಬೇರೆ ಇತ್ತು ಅದನ್ನು ಅವನು ಯಾರ ಬಳಿಯೂ ಹೇಳಿಕೊಳ್ಳಲಾರ. ಇನ್ನು ಅಮ್ಮನ ಬಳಿ ಆ ಗುಟ್ಟನ್ನು ಹೇಳುವದಾದರು ಹೇಗೆ ?

ಅವನ ಕಾಲೇಜಿನಲ್ಲಿ , ಶಾಮಲ ಎಂಬ ಹುಡುಗಿ ಒಬ್ಬಳಿದ್ದಳು, ನೋಡಲು ಆಕರ್ಷಕವಾಗಿ ಮುದ್ದಾಗಿದ್ದು ಎಲ್ಲ ಹುಡುಗರ ಕಣ್ಮಣಿ. ಆದರೆ ಅವಳನ್ನು ಮಾತನಾಡಿಸುವ ಧೈರ್ಯ ಮಾತ್ರ ಯಾರಲ್ಲೂ ಇಲ್ಲ. ಆ ಕಾಲದಲ್ಲಿ  ಹುಡುಗ ಹುಡುಗಿಯರು ಮಾತನಾಡುತ್ತಿದ್ದಾರೆ ಅಂದರೆ ಅದು ಅವರ ನಡುವಿನ ಪ್ರೀತಿಯೆಂದೆ ನೇರ ಅರ್ಥ.

ಕಾಲೇಜಿಗೆ ಸೇರಿದ ದಿನದಿಂದಲು ಜಯಂತ್ ಆ ಹುಡುಗಿಯ ಹಿಂದೆ ಓಡಾಡುತ್ತಿದ್ದ. ವಯಸ್ಸಿನ ಪ್ರಭಾವ ಹಾಗು ಆಕರ್ಷಣೆ ಸಹಜವಾಗಿ ಇಬ್ಬರ ನಡುವೆ ಭಾವಾನತ್ಮಕವಾದ ಒಂದು ಅಗೋಚರ ಸಂಬಂಧ ಬೆಸೆದಿತ್ತು.  ಮೊದಲನೆ ವರ್ಷ ಅವಳನ್ನು ಜಯಂತ ಮಾತನಾಡಿಸಿಯೆ ಇರಲಿಲ್ಲ. ಎರಡನೆ ವರ್ಷದ ಪ್ರಾರಂಭದಲ್ಲಿ , ಕಾಲೇಜಿನ ಫಿಸಿಕ್ಸ್ ಲ್ಯಾಬ್ ನಲ್ಲಿ ಅವಳಾಗಿಯೆ ಒಮ್ಮೆ ಅವನ ಸಹಾಯ ಕೋರಿದಳು. ಅಂದಿನಿಂದ ಅಗಾಗ್ಯೆ ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತಿದ್ದು. ಕಡೆಗೊಮ್ಮೆ ಶಾಲೆಯ ವಿಷಯಗಳನ್ನು ಹೊರತು ಪಡಿಸಿ, ಸ್ವಂತ ವಿಷಯಗಳನ್ನು ಚರ್ಚಿಸುವ ಮಟ್ಟಕ್ಕೆ ಅವರಿಬ್ಬರ ನಡುವೆ ಅನುಬಂಧ ಬೆಳೆದಿತ್ತು.

 ಕಾಲೇಜಿಗೆ ರಜೆ ಎಂದು ಘೋಷಿಸಿದಾಗ, ಶಾಮಲ , ಜಯಂತನನ್ನು ಕೇಳಿದಳು,
’ನಾಡಿದ್ದು ರಜಾ ದಿನಾ ಬರುತ್ತಿದ್ದೀರಾ ಕಾಲೇಜಿಗೆ?’
’ರಜಾ ಇದೆಯಲ್ಲ ಏಕೆ ಬರುವುದು, ಬಂದರು ಇಲ್ಲಿ ಯಾರಿರುತ್ತಾರೆ’ ಅವನು ಅಮಾಯಕನಾಗಿ ಕೇಳಿದ.
’ಬಂದರೆ ನಾನಿರುತ್ತೇನೆ’
ಶಾಮಲ ನಗುತ್ತ ನುಡಿದಾಗ, ಜಯಂತನ ಮನದಲ್ಲಿ ಎಂತದೋ ಅಲ್ಲೋಲಕಲ್ಲೋಲ.
’ನೀವು ಬರುತ್ತೀದ್ದೀರಾ? , ಹಾಗಿದ್ದಾರೆ ನಾನು ಬರುತ್ತೇನೆ. ಬಂದು ಏನು ಮಾಡುವುದು’ ಅವನ ಪ್ರಶ್ನೆ
’ಬನ್ನೀ ಬಂದ ನಂತರ ಏನಾದರು ಇರುತ್ತದೆ, ಹಾಯಾಗಿ ಕುಳಿತು ಮಾತನಾಡಬಹುದು’
ಶಾಮಲ ನಗುತ್ತ ನುಡಿದಾಗ, ಜಯಂತ ಶಾಮಲಳ ನಗುವಿನ ಬಲೆಯೊಳಗೆ ಸಿಲುಕಿಬಿಟ್ಟಿದ್ದ.

ಈಗ ಬೆಳಗ್ಗೆ ಎದ್ದು ಅವನು ಹೊರಡುವಾಗ , ಸರೋಜ ಮಗ ತೇರಿಗೆ ಹೋಗುತ್ತಿರುವನೆಂದೆ ತಿಳಿದು, ತಾವು ಜೊತೆಯಲ್ಲಿ ಬರುವದೆಂದರೆ ಜಯಂತ ಎಲ್ಲಿ ಒಪ್ಪುವನು. ಅವನ ಮನ ಅಲ್ಲಿರಲೇ ಇಲ್ಲ. ಅಪ್ಪ ಕೊಡಿಸಿದ್ದ ಸೈಕಲ್ ಹತ್ತಿ ಕಾಲೇಜಿನ ಕಡೆಗೆ ವೇಗವಾಗಿ ನಡೆದ.

ಕಾಲೇಜಾದರು ಪೂರ್ತಿ ನಿರ್ಜನವಾಗಿತ್ತು. ವಾಚ್ ಮನ್ ಸದಾ ಇರುತ್ತಿದ್ದವನು , ಅವನು ಸಹ ಇಂದು ತೇರಿನತ್ತ ನಡೆದಿದ್ದನೋ ಏನೊ. ಸೈಕಲ್ ನಿಲ್ಲಿಸಿದ ಜಯಂತ , ನಿಧಾನವಾಗಿ ನಡೆಯುತ್ತ ಕಾಲೇಜಿನ ಹಿಂಬಾಗದ ಮೈದಾನದತ್ತ ನಡೆದ. ಶಾಮಲ ಬರಲು ಇನ್ನು ಸಮಯ ಬೇಕು ಅನ್ನಿಸುತ್ತೆ ಅಂದುಕೊಂಡವನು ಹಿಂಬಾಗದ ಮೈದಾನದಲ್ಲಿದ್ದ ಅಡಿಟೋರಿಯಂ ಮೆಟ್ಟಿಲುಗಳತ್ತ ನಡೆದ. ಅಲ್ಲಿದ್ದ ಸಾಲುಕಂಬಗಳತ್ತ ನಡೆಯುತ್ತ, ಕಂಬಕ್ಕೆ ಒರಗಿ ಕುಳಿತು ಕಾಯುವದೆಂದು ಅಂದುಕೊಳ್ಳುತ್ತಿರುವಾಗಲೆ, ಅಲ್ಲಿದ್ದ ಕಂಬದ ಬಳಿ ಯಾರೋ ಕುಳಿತಿರುವುದು ಕಾಣಿಸಿ, ಗಮನಿಸಿದರೆ, ಶಾಮಲ ಆಗಲೇ ಬಂದು ಕುಳಿತಿದ್ದಾರೆ. ಅವನ ಗಡಿಬಿಡಿ ಮಾಡುತ್ತಲೆ ಹತ್ತಿರ ಬಂದ.
’ಓ ನೀವಾಗಲೆ ಬಂದು ಆಗಿದೆ, ನಾನು ಕಾಯಬೇಕೆಂದು ಅಂದುಕೊಳ್ಳುತ್ತಿದೆ’ ಅವನು ನುಡಿದ.
’ಇರಲಿ ಬಿಡಿ ಸದಾ ಗಂಡಸರೇ ಕಾಯಬೇಕೆಂದು ನಿಯಮವೇನಿಲ್ಲ, ಹೆಂಗಸರು ಕಾಯಬಹುದು’
ಅವಳು ನಗುತ್ತ ನುಡಿದಾಗ, ಅವನಲ್ಲಿ ಎಂತದೋ ಇರುಸುಮುರುಸು. ಈ ರೀತಿಯ ರಸಿಕತೆ ಅನ್ನಬಹುದಾದದ ರೀತಿಯ ಸಂಭಾಷಣೆ ಅವನಿಗೆ ಹೊಸತು.

’ಬನ್ನಿ ಕುಳಿತುಕೊಳ್ಳಿ’ ಪಕ್ಕದಲ್ಲಿ ಜಾಗ ತೋರಿಸಿದಳು ಶಾಮಲ. ಅವನು ಹೋಗಿ ಕುಳಿತ
ಏನೆಂದು ಮಾತನಾಡುವುದು ಎಂಬ ಗೊಂದಲದಲ್ಲಿ
’ನೀವು ಹೋಗುವದಿಲ್ಲವ ತೇರಿಗೆ’ ಎಂದ
’ಹೋಗುವುದೆ , ಇನ್ನೂ ಸಾಕಷ್ಟು ಸಮಯವಿದೆಯಲ್ಲ, ನೀವು ಹೋಗಬೇಕಾ" ಎಂದಳು.
’ಏನಿಲ್ಲ, ಪ್ರತಿವರ್ಷ ಇರುವ ಜಾತ್ರೆಯೇ ತಾನೆ, ಹೊಸದೇನಲ್ಲವಲ್ಲ, ಹೋಗದಿದ್ದರೂ ನಡೆಯುತ್ತೆ , ಅಮ್ಮ ಕರೆದರು, ನೀವು ಹೋಗಿ ಎಂದು ಬಂದೆ’ ಎಂದು ನುಡಿದ.
’ಇನ್ನು ಅಮ್ಮನ್ನ ಬಿಟ್ಟು ಓಡಾಡುವದಿಲ್ವ, ಈ ಪಾಪು ’ ಎಂದು ರೇಗಿಸಿ, ನಕ್ಕಳು. ಅವನ ಮುಖವೆಲ್ಲ ಕೆಂಪಾಯಿತು.

ಇಬ್ಬರು ಮನೆಯ ಬಗ್ಗೆ ಅಪ್ಪ ಅಮ್ಮನ ಬಗ್ಗೆ , ಶಾಮಲ ಅಣ್ಣನ ಬಗ್ಗೆ, ಮುಂದಿನ ಓದು ಕೆಲಸ ಈ ರೀತಿ ಎಂತದೆಲ್ಲ ಮಾತನಾಡಿದರು.
ಕಡೆಗೊಮ್ಮೆ ಅನ್ನುವಂತೆ ಶಾಮಲ ಕೇಳಿದಳು,
’ಜಯಂತ್ ನೀವು ನನ್ನ ಬಗ್ಗೆ ಏನು ಹೇಳಲೇ ಇಲ್ಲ ’
ಜಯಂತ್ ಗಲಿಬಿಲಿಯಾದ, ಸಂಭ್ರಮದಿಂದ ಮಾತನಾಡುತ್ತಿದ್ದವನಿಗೆ ಇಂತಹ ಮಾತಿಗೆ ಏನೆಂದು ಉತ್ತರಿಸುವುದು ತಿಳಿಯದೆ ಕಣ್ಣು ಕಣ್ನು ಬಿಟ್ಟ
’ನಿಮ್ಮ ಬಗ್ಗೆ ಏನು ಹೇಳುವುದು, ತುಂಬಾ ಒಳ್ಳೆಯವರು, ಚೆನ್ನಾಗಿ ಓದುತ್ತೀರಿ, ಆಟದಲ್ಲೂ ಮುಂದು, ಮಾತು ನನಗಿಂತ ಚೆನ್ನಾಗಿ ಆಡುತ್ತೀರಿ’ ಹೀಗೆಲ್ಲ ಹೇಳಿದ
’ಅಷ್ಟೇನ, ನೋಡಲು ಹೇಗಿದ್ದೀನಿ, ಚೆನ್ನಾಗಿಲ್ಲವಾ ?" ಆಕೆ ನಗುತ್ತ ಕೇಳಿದಳು
ಜಯಂತನ ಮುಖ ಕೆಂಪಡರಿ ಹೋಯಿತು.
’ಆ ಚೆನ್ನಾಗಿದ್ದೀರಿ.... ’ ಅವನು ತಡವರಿಸಿದಾಗ ಅವನ ನಾಚಿಕೆ ಸ್ವಭಾಗ ಕಂಡು ಶಾಮಲ ಸಂತಸದಿಂದ ನಕ್ಕುಬಿಟ್ಟಳು
’ಎಷ್ಟೊಂದು ನಾಚಿಕೇರಿ ನಿಮಗೆ. ಹೋಗಲಿ ಬಿಡಿ, ನೇರವಾಗಿ ಮಾತನಾಡಿಬಿಡೋಣ, ನಾನು ಅಂದರೆ ನಿಮಗೆ ಏನು ಅನ್ನಿಸಲ್ವ, ಇಷ್ಟ ಅಂತ ಅನ್ನಿಸಲ್ವ, ನನಗಂತೂ ನೀವು ತುಂಬಾ ಇಷ್ಟ ’  ಶಾಮಲ ಮನದ ಮಾತು ಬಿಚ್ಚಿ ನುಡಿದಾಗ ಜಯಂತ ಚಲಿಸಿಹೋದ.
’ಖಂಡಿತ ಶಾಮಲ ನೀವು ಅಂದರೆ ನನಗೆ ತುಂಬಾನೆ ಇಷ್ಟ, ಆದರೆ ಅದನ್ನೆಲ್ಲ ನೇರವಾಗಿ ಹೇಗೆ ಹೇಳುವುದು ಅಂತ ಸುಮ್ಮನಿದ್ದೆ, ಈಗ ನೀವಾಗೆ ಹೇಳುವಂತೆ ಮಾಡಿದಿರಿ’
ಮುಂದೆ ಅವರಿಬ್ಬರ ನಡುವೆ  ಯಾವುದು ಸುರಲೋಕದ ಸ್ವಪ್ನದಲ್ಲಿಯಂತ ಮಾತುಕತೆಯಲ್ಲ ನಡೆದವು.
’ಈಗ ನಾವಿಬ್ಬರು ಓದುತ್ತಿರುವೆವು, ಇನ್ನು ಕನಿಷ್ಟ ಆರು ವರ್ಷಗಳಾದರು ಬೇಕೆ ಬೇಕು, ನಮ್ಮಿಬ್ಬರ ಓದು ಮುಗಿದು, ಕೆಲಸ ಅಂತೆಲ್ಲ ಆಗಿ, ಜೀವನದಲ್ಲಿ ಮದುವೆ ಎಂಬ ಲೋಕಕ್ಕೆ ಕಾಲಿಡಲು, ನೀವು ನನಗಾಗಿ ಕಾಯುತ್ತೀರ’  ತನ್ನ ಕೈಯನ್ನು ಮುಂದೆ ಚಾಚಿದಳು.

ಜಯಂತ ಅವಳ ಕೈ ಹಿಡಿದರು, ಪ್ರಥಮಬಾರಿ ಆದ್ದರಿಂದ ಲಘುವಾಗಿ ಕಂಪಿಸುತ್ತಿತ್ತು. ನುಡಿದ,
’ಆರಲ್ಲ ಎಷ್ಟು ವರ್ಷವಾದರು ನಾನು ಕಾಯುತ್ತೀನಿ’.
ಆಕೆ ನಗುತ್ತ ಎದ್ದುನಿಂತಳು, ಜಯಂತ ಕುಳಿತಿರುವಂತೆಯೆ,
’ನನಗೆ ಈದಿನ ತುಂಬಾ ಖುಷಿಯಾಗಿದೆ ಜಯಂತ್, ಈ ದಿನ ಮರೆಯಲ್ಲ, ಕೋಟ್ಟೂರೇಶ್ವರನ ತೇರಿನ ದಿನ ನಮ್ಮಿಬ್ಬರ ಜೀವನದ ಅಮೂಲ್ಯವಾದ ದಿನ. ಇಂದು ನಮ್ಮಿಬ್ಬರ ನಡುವೆ ಎಷ್ಟು ವರ್ಷವಾದರು ಕಾಯುವ ಒಪ್ಪಂದವಾಗಿದೆ, ನಾನು ಕಾಯುತ್ತೇನೆ  ಅಂತ, ಒಪ್ಪಂದದ ಪತ್ರಕ್ಕೆ ಒಂದು ಮುದ್ರೆ ಬೇಕಲ್ಲವೆ ? ’ ಎಂದಳು
ಜಯಂತ ನೋಡುತ್ತಿರುವಂತೆ, ನಿಂತಿದ್ದ ಆಕೆ ಬಗ್ಗಿ, ಜಯಂತನ ಹಣೆಗೆ, ಎರಡೂ ಕೆನ್ನೆಗೆ ಮುತ್ತಿನ ಮುದ್ರೆ ಒತ್ತಿದವಳೆ, ನಗುತ್ತ ಮೆಟ್ಟಲುಗಳನ್ನು ಇಳಿಯುತ್ತ ಅಲ್ಲಿಂದ ಓಡಿದಳು, ಹಿಂದೆ ತಿರುಗಿ ನುಡಿದಳು
’ನಾನು ದೇವಸ್ಥಾನದ ಹತ್ತಿರ ಹೋಗುತ್ತಿದ್ದೇನೆ , ತೇರು ನೋಡಲು’
ಅವಳು ಕಣ್ಮರೆ ಆಗುವವರೆಗೂ ಜಯಂತ ಅಲ್ಲಿಯೇ ಕುಳಿತ್ತಿದ್ದ, ಅವನಲ್ಲಿ ಎಂತದೋ ಮಹತ್ತರ ಬದಲಾವಣೆ ಒಂದು ಆಗಿತ್ತು, ಅದು ಏನೆಂದು ಅವನಿಗೆ ಅರ್ಥವಾಗಲಿಲ್ಲ.
.
.
ಬಸ್ಸು ಹಿರಿಯೂರು ದಾಟಿ ಚಿತ್ರದುರ್ಗದತ್ತ ಹೋಗುತ್ತಿದೆಯೇನೊ ಅಂದುಕೊಂಡ ಜಯಂತ್ . ಕಿಟಕಿಯಿಂದ ಹೊರಗೆ ನೋಡಿದ.
ಬಸ್ಸಿನಲ್ಲಿ ಎಲ್ಲರೂ ನಿದ್ದೆಯಲ್ಲಿ ಮುಳುಗಿದ್ದರೂ ಸಹ ಅದೇಕೊ ಅವನಿಗೆ ನಿದ್ದೆ ಬದಲು ಹಳೆಯ ನೆನಪುಗಳು ಒಂದರ ನಂತರ ಒಂದು ತೇಲಿ ಹೋಗುತ್ತಿದ್ದವು.

ನಂತರ ಅಲ್ಲಿಂದ ಎದ್ದು ತೇರಿಗೆ ಅವನು ಹೋಗಿದ್ದ, ಅಲ್ಲಿ ಶಾಮಲ ಅವನಿಗೆ ಕಾಣಿಸಲೇ ಇಲ್ಲ, ತೇರಿಗಿಂತ ಹೆಚ್ಚಾಗಿ ಅವಳ ಮುಖವನ್ನೆ ಅವನು ಹುಡುಕಿದ್ದ. ಅವನ ಗೆಳೆಯರೆಲ್ಲರು ಅವನ ವಿಚಿತ್ರ ವರ್ತನೆ ಗಮನಿಸಿದ್ದರು.

ಜಯಂತ ಅಂದುಕೊಂಡ, ಆ ದಿನ ಆ ರೀತಿ ಎದ್ದು ಓಡಿದವಳನ್ನು ಕಂಡಿದ್ದೆ, ಕಡೆಯ ದರ್ಶವಾಗಬಹುದೆಂದು ಎಂದು ಅಂದುಕೊಂಡಿರಲಿಲ್ಲ. ಮರುದಿನ ಅವಳು ಕಾಲೇಜಿಗೂ ಬರಲಿಲ್ಲ. ಒಂದೆರಡು ದಿನದಲ್ಲಿಯೆ , ಪರೀಕ್ಷೆಗಾಗಿ,  ಸಿದ್ದತೆಗಾಗಿ ರಜೆ ಎಂದು ಘೋಷಿಸಿದರು.

ಪರೀಕ್ಷೆಯಲ್ಲೂ ಸಹ ಅವಳು ಮುಂಚೆ ಬರುತ್ತಿರಲಿಲ್ಲ, ಪರೀಕ್ಷೆ ಪ್ರಾರಂಭ ಅನ್ನುವಾಗ ಅವರ ಅಪ್ಪನ ಆಪೀಸಿನ ಜೀಪಿನಲ್ಲಿ ಬಂದು ಇಳಿಯುತ್ತಿದ್ದಳು, ಅವರಿಬ್ಬರಿಗೂ ಬೇರೆ ಬೇರೆ ರೂಮಿನಲ್ಲಿ  ಜಾಗವಿತ್ತು, ಜಯಂತ ಪರೀಕ್ಷೆ ಬರೆದು ಹೊರಗೆ ಬರುವಾಗ, ಶಾಮಲ ತಾಯಿ ಬಂದು ಕಾಯುತ್ತಿದ್ದರು, ಶಾಮಲ ಅತ್ತ ಇತ್ತ ತಿರುಗದೆ, ಅವರ ಜೊತೆ ಹೊರಟು ಹೋಗುತ್ತಿದ್ದಳು.

ಜಯಂತನಿಗೆ ಅಘಾತವಾಗಿತ್ತು, ತಾನಾಗಿ ಕರೆದು ಮಾತನಾಡಿಸಿದ ಅವಳಿಗೆ ಏನು ಆಯಿತು, ಹೀಗೇಕೆ ಮಾಡುತ್ತಿರುವಳು. ತನ್ನತ್ತ ತಿರುಗಿನೋಡುತ್ತಲೂ ಇಲ್ಲ. ಪರೀಕ್ಷೆ ಮುಗಿದರು, ಅವಳನ್ನು ಬೇಟಿ ಮಾಡಲು ಆಗಲೇ ಇಲ್ಲ. ಅವರ ಅಪ್ಪ ಅಲ್ಲಿಯ ಸರ್ಕಾರಿ ಹುದ್ದೆಯಲ್ಲಿದ್ದವರು. ಕೆಲವು ದಿನಗಳ ನಂತರ ತಿಳಿಯಿತು. ಅವರ ಅಪ್ಪನಿಗೆ ಅಲ್ಲಿಂದ ಟ್ರಾನ್ಸ್ ಫರ್ ಆಯಿತು, ಅವರು ಬೇರೆ ಊರಿಗೆ ಹೊರಟುಹೋದರು.

ಜಯಂತನ ಮನ ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು, ಅವನು ಯಾರಲ್ಲಿಯೂ ತನ್ನ ಹಾಗು ಶಾಮಲಳ ಪ್ರೀತಿಯ ವಿಷಯ ತಿಳಿಸಿರಲಿಲ್ಲ. ಹಾಗಾಗಿ ಯಾರಬಳಿಯು ತನ್ನ ದುಃಖವನ್ನಾಗಲಿ, ವೇದನೆಯನ್ನಾಗಲಿ ತೋಡಿಕೊಳ್ಳುವಂತಿಲ್ಲ. ಮನೆಯಲ್ಲಿ ಅಮ್ಮ ಮಾತ್ರ ಅವನ ಬದಲಾವಣೆ ಗುರುತಿಸಿ , ಯಾಕೋ ಏನಾಯ್ತೋ ಎಂದು ಹಲವು ಸಾರಿ ಕೇಳಿದರು ಸಹ ಜಯಂತ ಆ ವಿಷಯವನ್ನು , ಗುಟ್ಟನ್ನು ಬಿಟ್ಟುಕೊಡಲಿಲ್ಲ. ಅವನಲ್ಲಿ ಒಂದೆ ಒಳ ಆಸೆ ಇತ್ತು , ತನಗಾಗಿ ಆರು ವರ್ಷ ಕಾಯುತ್ತೇನೆ ಎಂದು ಮಾತು ತೆಗೆದುಕೊಂಡವಳು ತನಗಾಗಿ ಕಾಯುತ್ತಾಳೆ, ಇಂದಲ್ಲ ನಾಳೆ ತನಗೆ ಸಿಗುತ್ತಾಲೆ ಎಂದು. ಆದರೆ ಆ ಆಸೆಯೂ ತಪ್ಪು ಎನ್ನುವುದು ಅವನಿಗೆ ಕೆಲವೂ ದಿನದಲ್ಲಿಯೆ ಅರಿವಾಯಿತು.

ಪೀಯೂಸಿ ಮುಗಿಸಿ, ಮುಂದೆ ಡಿಗ್ರಿಗೆ ಸೇರುವ ದಿನಗಳವು, ಎಲ್ಲ ಯಾಂತ್ರಿಕವಾಗಿ ನಡೆಯುತ್ತಿದ್ದರು ಅವನಲ್ಲಿ ಯಾವುದೇ ಉತ್ಸಾಹವಿರಲಿಲ್ಲ. ಒಂದು ದಿನ ಅವನು ಕಾಲೇಜು  ಮುಗಿಸಿ  ಮನೆಗೆ ಬಂದು ಊಟಕ್ಕೆ ಕುಳಿತಾಗ , ಅವರ ಅಪ್ಪ ಸುಬ್ಬಣ್ಣ ಸಹಿತ ಊಟಕ್ಕೆ ಕುಳಿತಿದ್ದರು,  ಅಮ್ಮ ಸರೋಜ ಒಂದು ಪೋಸ್ಟ್ ಕಾರ್ಡ್ ತಂದು ಕೊಟ್ಟರು
ಅವರ ಆಶ್ಚರ್ಯಕ್ಕೆ ಕಾರಣವಿತ್ತು,  ಪೂರ್ತಿ ಕಾರ್ಡಿನಲ್ಲಿ ಒಂದೇ ಒಂದೆ ಪದವಿತ್ತು

’ಮರೆತುಬಿಡು’

ಆ ಪತ್ರ ಯಾರು ಯಾರಿಗೆ ಬರೆದರು ಯಾವ ವಿಷಯಕ್ಕೆ ಎನ್ನುವ ಯಾವುದೇ ಸುಳಿವಿರಲಿಲ್ಲ, ’ಮರೆತುಬಿಡು’ ಎನ್ನುವ ಪದದ ವಿನಃ ಪತ್ರಪೂರ್ತಿ ಖಾಲಿ.

ಜಯಂತನ ಅಪ್ಪ ಸುಬ್ಬಣ್ಣ , ಪತ್ರ ತಮ್ಮದೋ ಅಲ್ಲವೋ ಎನ್ನುತ್ತ ವಿಳಾಸವನ್ನೆಲ್ಲ ಪರಿಶೀಲಿಸಿದರು, ವಿಳಾಸ ಸರಿಯಾಗಿಯೆ ಇತ್ತು, ಅವರದೇ , ಆದರೆ ಯಾರು ಬರೆದರು ಎಂದು ಮಾತ್ರ ಗೊತ್ತಾಗುತ್ತಿಲ್ಲ. ಆತ ಅದೇಕೊ ಅನುಮಾನದಿಂದ ಜಯಂತನ ಮುಖ ನೋಡಿದರು.
ಜಯಂತನಿಗೆ ಸ್ವಷ್ಟವಾಗಿ ಗೊತ್ತಾಗಿ ಹೋಗಿತ್ತು, ಇದು ಶಾಮಲ ಬರೆದಿರುವ ಪತ್ರವೇ. ಮರೆತುಬಿಡು ಎನ್ನುವ ಮಾತು ಕೂಡ ತನ್ನನ್ನು ಕುರಿತು ಬರೆದಿದ್ದೇ ಆಗಿತ್ತು . ಆದರೆ ಅಪ್ಪನ ಬಳಿಯಾಗಲಿ, ಅಮ್ಮನ ಬಳಿಯಾಗಲಿ ಅವನು ಏನು ನುಡಿಯಲಿಲ್ಲ. ಆ ಪತ್ರದ ಬಗ್ಗೆ ಆಸಕ್ತಿಯನ್ನು ತೋರಿಸಲಿಲ್ಲ . ತನಗೇನು ಗೊತ್ತಿಲ್ಲ ಅಂದುಬಿಟ್ಟ.

.....

ನಿಟ್ಟುಸಿರೊಂದು ಬಸ್ಸು ಚಲಿಸುವ ಆ ಶಬ್ದದಲ್ಲಿ ಕಲೆತುಹೋಯಿತು. ಕಿಟಕಿಯಿಂದ ಹೊರಗೆ ದಿಟ್ಟಿಸಿದ ಜಯಂತ್ , ಪೂರ್ಣ ಕತ್ತಲೆ , ಅಂದರೆ ಬಸ್ಸು ಯಾವುದೇ ಊರಿನ ಸಮೀಪವಿಲ್ಲ. ಹೆದ್ದಾರಿಯಲ್ಲಿ ಓಡುತ್ತಿದೆ. ಕತ್ತಲಲ್ಲಿಯೆ ಕೈ ಎತ್ತಿ ಸಮಯ ಗಮನಿಸಿದ. ಅವನ ವಾಚಿನಲ್ಲಿ  ರಾತ್ರೆ  ಎರಡು ಘಂಟೆಯ ಆಸುಪಾಸು. ಸರಿ ಇನ್ನೂ ಕುಳಿತಿರಬೇಕು ಎನ್ನುವ ಇರುಸುಮುರುಸು. ಎಲ್ಲಿಯಾದರು ನಿಲ್ಲಿಸಿದರೆ ಮತ್ತೊಂದು ಕಾಫಿ ಕುಡಿಯಬಹುದೆ ಎನ್ನುವ ಮನಸ್ಸು.

ಅವನಿಗೆ ಜೀವನದಲ್ಲಿ ಎಂದಿಗೂ ಅರ್ಥವಾಗಿರಲಿಲ್ಲ. ತನ್ನನ್ನು ಆ ರೀತಿ ಅವಳೇ ಕರೆದು ಆ ರೀತಿ ಎಲ್ಲ ಮಾತನಾಡಿಸಿ, ನಂತರ ಏನು ಸಂಬಂಧವೇ ಇಲ್ಲವೇನು ಅನ್ನುವ ರೀತಿಯಲ್ಲಿ ತೊರೆದು ಹೊರಟುಹೋಗಿದ್ದಳು ಶಾಮಲ. ಆ ನೋವು ಅವನನ್ನು ಬಹಳ ವರ್ಷಗಳ ಕಾಲ ಕಾಡಿತ್ತು. ಮನಸ್ಸು ಸ್ಥಿಮಿತಗೊಳಿಸಿ ಓದಿನತ್ತ ಗಮನ ಕೊಟ್ಟಿದ್ದ. ಶ್ರಮಪಟ್ಟು ಉತ್ತಮ ಕೆಲಸವೂ ಸಿಕ್ಕಿತ್ತು. ಇಷ್ಟು ವರ್ಷಗಳ ನಂತರ ರಿಟೈರ್ಡ್ ಅನ್ನುವ ಸಮಯಕ್ಕೆ ತಿಂಗಳಿಗೆ ಲಕ್ಷ ಮೀರಿ ಸಂಬಳ ಸಹ ಬರುತ್ತಿತ್ತು.

ಮದುವೆ ಮಕ್ಕಳು ಎಲ್ಲವೂ ಆಗಿದ್ದು ಹೆಂಡತಿ ಪ್ರಭಾ  ಈಚೆಗೆ ಎಲ್ಲಿಗೂ ಹೊರಬರುವದಿಲ್ಲ. ಎಲ್ಲಿಯಾದರು ಕರೆದರು ನಿಷ್ಠೂರವಾಗಿಯೆ ಹೇಳಿಬಿಡುತ್ತಾಳೆ, ತನಗೆ ಬರುವದಕ್ಕೆ ಆಗುವದಿಲ್ಲ ಎಂದು. ಬೇಕಿದ್ದರೆ ನೀವು ಒಬ್ಬರೇ ಹೋಗಿ ಬನ್ನಿ ಎನ್ನುತ್ತಾಳೆ.

ಮಗಳು ಅಷ್ಟೆ ಚಿಕ್ಕ ವಯಸ್ಸಿನಲ್ಲಿ , ತಾನು ಕರೆದೊಡನೆ ತನ್ನ ಜೊತೆ ಹೊರಟು ಬಿಡುತ್ತಿದ್ದವಳೆ , ಈಗಲಾದರೆ ಕರೆದರೆ ,
’ಅಪ್ಪ ಆ ಕೆಲಸವಿದೆ, ಇವರನ್ನು ನೋಡಬೇಕು’ ಎಂದು ಏನೆಲ್ಲ ಕಾರಣಗಳನ್ನು ಹೇಳಿ, ಕಡೆಗೆ ಅವರ ಅಮ್ಮನ ರೀತಿಯೆ
’ನೀವು ಹೋಗಿ ಬನ್ನಿ ’ ಅನ್ನುವವಳೆ .

ಮದುವೆಯಾದ ಹೊಸತರಲ್ಲಿನ ನೆನಪು ಜಯಂತನನ್ನು ಕಾಡಿತ್ತು, ಆಗ ತನ್ನ ಅಮ್ಮ , ತನ್ನ ಸೊಸೆಗೆ ತಯಾರಿ ಕೊಡುತ್ತಿದ್ದ ಕಾಲ. ಬೆಂಗಳುರಿನಿಂದ ಹೆಂಡತಿಯನ್ನು ಕೊಟ್ಟೂರಿನ ಜಾತ್ರೆಗೆ ಕರೆದುಕೊಂಡು ಹೋಗಿದ್ದ ಜಯಂತ. ಜಾತ್ರೆ ಸುತ್ತವಾಗಲೆಲ್ಲ ಅದೇನೊ ಅವನಿಗೆ ಶಾಮಲಳದೆ ನೆನಪು. ಅವಳು ಆ ನಂತರ ಕೊಟ್ಟೂರಿಗೆ ಬಂದಳೋ ಇಲ್ಲವೋ , ಈಗ ಎಲ್ಲಿರುವಳೊ ತಿಳಿಯಲೇ ಇಲ್ಲ.
ನಂತರ ಒಮ್ಮೆ ಮಗಳು ಹುಟ್ಟಿದನಂತರ ಅಲ್ಲಿಗೆ ಹೋಗಿದ್ದ ನೆನಪು ಅವನನ್ನು ಕಾಡಿತು, ಹೆಚ್ಚು ಕಡಿಮೆ ತಾನು ಅಮ್ಮನ ಜೊತೆ ಅದೇ ಜಾತ್ರೆಗೆ ಹೋಗಿದ್ದಾಗ ತಪ್ಪಿಸಿಕೊಂಡ ನೆನಪು ಅದೇಕೊ ಅವನನ್ನು ಕಾಡಿಸುತ್ತಿತ್ತು, ಹಾಗಾಗಿ ಮಗಳನ್ನು ಜಾತ್ರೆಯಲ್ಲಿ ಕೆಳಗಿ ಇಳಿಸಿದ್ದೇ ಕಡಿಮೆ. ಹೆಂಡತಿ ಬೈಯ್ಯುತ್ತಿದ್ದಳು,
’ನೀವು ಅವಳನ್ನು ಎತ್ತಿ ಎತ್ತಿ ಹಾಳುಮಾಡುತ್ತಿದ್ದೀರಿ, ನಡೆಯುವುದು ಅವಳು ಕಲಿಯುವುದೇ ಇಲ್ಲ’ ಅನ್ನುವಾಗಲು ತನಗೆ ಅವಳ ಮಾತು ಅಷ್ಟು ಮುಖ್ಯವೆಂದು ಅನ್ನಿಸುತ್ತಿರಲಿಲ್ಲ.

ಅತ್ತೆ ಸೊಸೆ ಜಾತ್ರೆಯ ತೇರಿನ ಸಂಭ್ರಮದಲ್ಲಿ ಮುಳುಗಿರುವಾಗ ಅದೇಕೊ ಮಗಳನ್ನು ಕರೆದುಕೊಂಡು ಕಾಲೇಜಿನತ್ತ ಹೊರಟಿದ್ದ. ಎಲ್ಲವೂ ಬದಲಾಗಿದೆ ಅನ್ನಿಸಿದ್ದರು, ಮೂಲರೂಪವಂತು ಹಾಗೆಯೆ ಇತ್ತು, ಮಗಳನ್ನು ಕರೆದುಕೊಂಡು ನಡೆಯುತ್ತ, ಅವಳು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಜೊತೆಗೆ ಬರುತ್ತಿರುವಾಗ, ಶಾಮಲ ಜೊತೆ ಕುಳಿತಿದ್ದ ಅದೇ ಕಂಬದತ್ತ ಬಂದು ಕುಳಿತ.

ಮಗಳು ಕುಳಿತುಕೊಳ್ಳದೆ ಅಲ್ಲೆಲ್ಲ ಓಡಿಯಾಡುತ್ತಿದ್ದರೆ, ಅವನ ಮನಸ್ಸು ಮಾತ್ರ ಯೌವನದ ಕಾಲದ  ಘಟನೆಗಳನ್ನು ನೆನಪಿಮಾಡಿಕೊಳ್ಳುತ್ತ ಸಂಭ್ರಮಪಡುತ್ತಿತ್ತು. ಅವನಿಗೆ ಅರಿವಿಲ್ಲದೆ ಒಮ್ಮೆ ಪಿಸುಗುಟ್ಟಿದ
’ಶಾಮಲ’ ಎಂದು
ಮಗು ಅಪ್ಪನತ್ತ ತಿರುಗಿ ಏನಪ್ಪ ಎಂದಿತು.
ಮರೆತಿದ್ದ, ತನ್ನ ಮಗಳಿಗೂ ಅದೇ ಶಾಮಲ ಎನ್ನುವ ಹೆಸರನ್ನು ಆಯ್ದು ಇಟ್ಟಿದ್ದ. ಆ ಹೆಸರಿನ ರಹಸ್ಯ ಅವನಿಗೊಬ್ಬನಿಗೆ ಮಾತ್ರ ತಿಳಿದಿತ್ತು.

ಸುತ್ತಾಡುತ್ತಿದ್ದ ಮಗಳು,

ಕಂಬದ ಹಿಂದೆ ನಿಂತು ಹೇಳಿದಳು,

’ಅಪ್ಪ ಇಲ್ಲಿ ನೋಡು ಯಾರೊ ಏನೋ ಬರೆದಿದ್ದಾರೆ , ಇದು ಏನು’

ಹೌದೇ , ಎನ್ನುತ್ತ, ನಿಧಾನಕ್ಕೆ ಎದ್ದು ಕಂಬದತ್ತ ನೋಡಿದ, ಕನ್ನಡ ಅಕ್ಷರಗಳಲ್ಲಿ ಕೆತ್ತಿರುವುದು. ಮಗುವಿಗೆ ಇನ್ನು ಪೂರ್ತಿ ಅಕ್ಷರ ಓದುವದಕ್ಕೆ ಬಾರದು, ಹಾಗಾಗಿ ಕೇಳಿದ್ದಳು,

ಅದು
’ಜಯಂತ್ - ಶಾಮಲ’ ಎಂದು ಯಾರೋ ಬರೆದಿದ್ದಾರೆ ಪುಟ್ಟು ’ ಎಂದ

ಮಗು ಸಂಭ್ರಮದಿಂದ ನುಡಿಯಿತು
’ಅಪ್ಪ  ನಂದು ನಿಂದು ಹೆಸರು ಇಲ್ಲಿ ಯಾರೋ ಬರೆದಿದ್ದಾರೆ ’ ಅಂತ ಸಂಭ್ರಮ ಪಟ್ಟಿತು.

ಜಯಂತ ಬೆಚ್ಚಿಬಿದ್ದ, ಇಲ್ಲಿ ಜಯಂತ ಶಾಮಲ ಅನ್ನುವ ಹೆಸರು ಹೇಗೆ ಬಂದಿತು. ಯಾರಾದರು ತನ್ನ ಹಾಗು ಅವಳ ಹೆಸರನ್ನು ಕೆತ್ತಿಹೋಗಿದ್ದಾರಾ?. ಸಾದ್ಯವಿಲ್ಲ ನಮ್ಮಿಬ್ಬರ ಪ್ರೀತಿಯ ವಿಷಯ ನಮ್ಮಿಬ್ಬರಿಗೆ ಬಿಟ್ಟು ಮೂರನೆಯವರಿಗೆ ಗೊತ್ತಿಲ್ಲ. ಅಥವ ಬೇರೆ ಯಾರೋ ಜಯಂತ್ ಹಾಗು ಶಾಮಲ ಎನ್ನುವ ಜೋಡಿಯ ಹೆಸರಾ? ಅವನ ಮನಸ್ಸು ಏಕೊ ಅದನ್ನು ಒಪ್ಪುತ್ತಿರಲಿಲ್ಲ
ಮತ್ತೆ ಒಂದು ಒಂದು ಅವಕಾಶ , ಅದನ್ನು ನೆನೆಯುವಾಗಲೆ ಅವನ ದೇಹ ಮನಸ್ಸುಗಳೆಲ್ಲ ಸಂಭ್ರಮದಿಂದ ಮುದಗೊಂಡವು.
ಒಂದು ವೇಳೆ ಶಾಮಲ , ಆ ನಂತರ ಇಲ್ಲಿ ಬಂದು, ನಾವಿಬ್ಬರು ಕುಳಿತು ಮಾತನಾಡಿದ್ದ , ಸ್ಥಳ ಈ ಕಂಬದ ಮೇಲೆ ನಮ್ಮಿಬ್ಬರ ಹೆಸರು ಕೆತ್ತಿ ಹೋಗಿದ್ದಾಳ. ಅಂದರೆ ಇನ್ನೂ ಅವಳು ನನ್ನನ್ನು ನೆನೆಯುತ್ತಿದ್ದಾಳಾ ?
ಅವನಲ್ಲಿ ಎಂತದೋ ಒಂದು ತನ್ಮಯತೆಯ ಭಾವ ತುಂಬಿಕೊಂಡಿತ್ತು.

ಮನೆಗೆ ಬಂದನಂತರ ಮಗಳು ಅವರ ಅಮ್ಮನ ಬಳಿ, ಪ್ರವರವನ್ನೆಲ್ಲ ಒಪ್ಪಿಸಿದಳು,
’ಅಮ್ಮ ಅಪ್ಪನ ಜೊತೆ ಅಪ್ಪನ ಸ್ಕೂಲಿಗೆ ಹೋಗಿದ್ದೆ’ ಅಂತೆಲ್ಲ
ಕಡೆಗೊಮ್ಮೆ,
’ಆಪ್ಪನ ಹಾಗು ತನ್ನ ಹೆಸರನ್ನು ಕಂಬದ ಮೇಲೆ ನೋಡಿದೆ’ ಎಂದು ಮಗು ನುಡಿದಾಗ, ಹೆಂಡತಿ ಜಯಂತನನ್ನು ಅನುಮಾನದಿಂದ ದಿಟ್ಟಿಸಿದಳು
"ಅದೇನ್ರಿ ನಿಮ್ಮ ಹೆಸರು ಕಂಬದ ಮೇಲೆ ಯಾರು ಕೆತ್ತಿದ್ದಾರೆ, ಅದೇನು ಅಶೋಕ ಸ್ಥಂಬಾನ ’ ಎಂದು ಕೇಳಿದಳು.

’ಲೇ ಅದ್ಯಾವ ಹೆಸರುಗಳೊ, ನಿನ್ನ ಮಗಳಿಗೆ ಓದಲು ಬರುತ್ತೆ ಅನ್ನುವಂತೆ ಕೇಳ್ತೀಯಲ್ಲ, ನನ್ನ ಹೆಸರು ಇದ್ದಿದ್ದು ನಿಜ, ಗೋಡೆಯ ಮೇಲೆ, ಆದರೆ ಅದು ಯಾವ ಜಯಂತನದೋ, ನಿಂದೊಳ್ಳೆ  ಕತೆಯಾಯಿತು, ಸುಮಾರು ಐವತ್ತು ಅರವತ್ತು ವರುಷವಾಗಿದೆಯೇನೊ ಆ ಕಟ್ಟಡಕ್ಕೆ, ಅದೆಷ್ಟು ಜಯಂತರು ಬಂದು ಹೋಗಿದ್ದಾರೋ ’ ಎಂದೆಲ್ಲ ಕತೆ, ವೇಧಾಂತ ಎಲ್ಲ ಬಿಗಿದು ಅವಳ ಬಾಯಿ ಮುಚ್ಚಿಸಿದ ಜಯಂತ

....

ಬಸ್ಸಿನೊಳಗಿನ ಎಲ್ಲ ದೀಪಗಳು ಬೆಳಗಿದವು, ಅವನ ಇಚ್ಚೆಯಂತೆ ಯಾವುದೋ ಹೋಟೆಲಿನ ಮುಂದೆ ಬಸ್ಸು ನಿಂತಿತ್ತು, ಅದೇಕೊ ಕಾಫಿ ಕುಡಿಯಲೇ ಬೇಕೆನಿಸಿ, ಜಯಂತ ಕೆಳಗಿಳಿದ, ಬಹಳ ಜನ ಬಸ್ಸಿನಿಂದ ಕೆಳಗಿಳಿಯಲೇ ಇಲ್ಲ. ಕಾಫಿ ಕುಡಿದ ಜಯಂತ ಬಸ್ಸಿನ  ಚಾಲಕನನ್ನು ಸುಮ್ಮನೆ ಕೇಳಿದ,
’ಎಷ್ಟು ಹೊತ್ತಿಗೆ ಕೊಟ್ಟೂರು ತಲುಪುವೆವು’
’ಆಯ್ತಲ್ಲ ಸಾರ್, ಇನ್ನೊಂದು ಗಂಟೆ ಅಷ್ಟೆ ಬಿಡಿ’ ಎಂದ ನಿರಾಳವಾಗಿ ಸಿಗರೇಟ್ ಸೇದುತ್ತ.

ಬಸ್ಸಿನೊಳಗೆ ಬಂದ ಜಯಂತನ ಮನಸ್ಸು ನಿರಾಳವಾಗಿತ್ತು. ರಾತ್ರಿ ಎಲ್ಲ ಕಾಡಿದ ನೆನಪು ಅವನನ್ನು ಕಚುಗುಳಿ ಇಡುತ್ತಿತ್ತು, ಅರವತ್ತು ವಯಸ್ಸಾದರು ತನಗಿನ್ನು ಬಾಲ್ಯ ಕಾಡುವದೇಕೆ ಎಂದಿತು ಅವನ ಮನ. ಈ ಸಾರಿ ಮಾತ್ರ ತೇರು ಮುಗಿಸಿ, ಮತ್ತೆ ಆ ಕಾಲೇಜಿನ ಹತ್ತಿರ ಹೋಗಿ ಬಂದು ಬಿಡಬೇಕು. ನಾನು ಶಾಮಲ ಕುಳಿತು ಮಾತನಾಡಿದ ಆ ಕಂಬವನ್ನೊಮ್ಮೆ ನೋಡಿ , ಆ ಜಾಗದಲ್ಲಿ ಐದು ನಿಮಿಷ ಕುಳಿತಿದ್ದು ಬಂದು ಬಿಡಬೇಕು.

ಇನ್ನು ಕೊಟ್ಟೂರೇಶ್ವರ ಜಾತ್ರೆಯ ಸಂಬ್ರಮ ಜೀವನದಲ್ಲಿ ಸಾಕೇನೊ, ಮುಂದಿನ ವರ್ಷದಿಂದ ಸಾದ್ಯವಾದರೆ ಬರುವುದು ಇಲ್ಲದಿದ್ದರೆ ಬೇಡ ಅನ್ನುವ ಭಾವ ಮನಸನ್ನು ತುಂಬಿಕೊಂಡಿತು.

ಅಲ್ಲದೇ ತನ್ನ ಅಮ್ಮ ಸರೋಜಳ ಚಿಂತೆಯೂ ಅವನನ್ನು ಕಾಡಿತು, ಇಷ್ಟು ವರ್ಷವಾದರು ಅವಳು ಇಲ್ಲಿ ಒಂಟಿಯಾಗಿಯೇ ಇದ್ದಾಳೆ, ತೀರ ವಯಸ್ಸಾಯಿತು, ಇನ್ನು ಅವಳನ್ನು ಇಲ್ಲಿ ಒಂಟಿಯಾಗಿ ಬಿಡುವುದು ಒಳ್ಳೆಯದಲ್ಲವೇನೊ. ಹೊರಡುವಾಗ ಹೆಂಡತಿ ಹಾಗು ಮಗಳು ಇಬ್ಬರು ಹೇಳಿದ್ದಾರೆ, ನಿಮ್ಮ ಅಮ್ಮನನ್ನು ಅಲ್ಲಿ ಬಿಟ್ಟು ಬರಬೇಡಿ, ಹೊರಟರೆ ಜೊತೆಗೆ ಕರೆತಂದುಬಿಡಿ, ನಮ್ಮ ಜೊತೆಗೆ ಇರಲಿ ಎಂದು. ಏನಾದರು ಮಾಡಿ ಅಮ್ಮನನ್ನು ಒಪ್ಪಿಸಿ, ಈ ಬಾರಿ ಜೊತೆಗೆ ಕರೆದೋಯ್ದುಬಿಡಬೇಕು.

ಬಸ್ಸು ಮತ್ತೆ ಚಲಿಸಿದಂತೆ, ರಾತ್ರೆ ಪೂರ್ತಿ ಎದ್ದಿದ್ದ ಜಯಂತ , ಅದೇಕೊ ನಿದ್ದೆಗೆ ಜಾರಿದ.

ಶುಭಂ


2 comments:

  1. ಅರ್ಥಗರ್ಭಿತ ಕಥೆ. ನಡುವಿನ ಘಟಿತಗಳ ಕಾರ್ಯಾ - ಕಾರಣವನ್ನು ಓದುಗರ ಊಹೆಗೆ ಬಿಟ್ಟರೂ, ಪೂರ್ಣಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತದೆ, ಜೊತೆಗೆ ಕೊನೆಯಲ್ಲೊಂದು ಕಾಡುವ ಪ್ರಶ್ನೆಯನ್ನು ಉಳಿಸುತ್ತ.

    ReplyDelete
  2. ವಂದನೆಗಳು ನಾಗೇಶರೆ,
    ವಯಸ್ಸಾದ ವ್ಯಕ್ತಿಯೊಬ್ಬ ಜಾತ್ರೆಗೆ ಹೋಗುವಾಗ, ಜಾತ್ರೆಗೆ ಸಂಬಂಧಿಸಿದ ತನ್ನ ನೆನಪನ್ನು ಕೆದಕುತ್ತಲೆ ಅವನ ಜೀವನದ ಪ್ರಮುಖ ಘಟನೆಗಳನ್ನು ಜೋಡಿಸುವ ಯತ್ನ. ಕೊಟ್ಟೂರ ಜಾತ್ರೆಗೂ ಅವನ ಜೀವನಕ್ಕೂ ಇರುವ ಸಂಬಂಧ, ಹಾಗೆಯೆ , ಜಾತ್ರೆಯ ಜೊತೆಗೆ ಅವನ ವಯಸ್ಸಿನ ವ್ಯೆತ್ಯಾಸ, ಚಿಕ್ಕಮಗುವಿನಿಂದ ಅರವತ್ತರ ವೃದ್ದನವರೆಗಿನ ಬೆಳವಣಿಗೆ ಇದು ವಸ್ತು.
    ಮತ್ತೆ ಪ್ರಶ್ನೆ ಬಹುಶಃ ಶಾಮಲ ಏಕೆ ಹೋದಳು ಎನ್ನುವದು ಅನ್ನಿಸುತ್ತೆ, ಪ್ರೇಮದಲ್ಲಿ ಹತ್ತಿರ ಬರುವದಕ್ಕೂ ದೂರಹೋಗುವದಕ್ಕು ಕಾರಣ ಹತ್ತು ಹಲವು. ಆದರು ಅವಳ ನೆನಪಲ್ಲಿ ಇವನು ಇವಳ ನೆನಪಲ್ಲಿ ಅವಳು ಇದ್ದರು ಅನ್ನುವದನ್ನು ಹೇಳುತ್ತಿದ್ದೇನೆ ಕಾರಣ, ಇದು ಪ್ರೇಮಿಗಳ ದಿನಾಚರಣೆಗಾಗಿ ಬರೆದ ಕತೆ. ಆದರೆ ತಡವಾಗಿ ಪ್ರಕಟಿಸುತ್ತಿದ್ದೇನೆ ಅಷ್ಟೆ !
    - ಪಾರ್ಥಸಾರಥಿ

    ReplyDelete

enter your comments please