Monday, June 6, 2016

ಮದರ್ಸ್ ಡೇ

ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು,  ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ ಪಡೆದು, ನಡುಮನೆಗೆ ಬಂದು ಸೋಪಾ ಮೇಲೆ ಕುಳಿತರು. ಕಾಫಿ ಕುಡಿಯುತ್ತಿದ್ದರೂ, ಅದೆಂತದೋ ಹಿಂಸೆ, ಬಲಗಡೆ ಪಕ್ಕೆಯಲ್ಲಿ ಸಣ್ಣ ನೋವು.  ಅಲ್ಲಿಯೆ ಮತ್ತೊಂದು ಸೋಪದಲ್ಲಿ ಅಂದಿನ ಪತ್ರಿಕೆ ಹಿಡಿದು ಅದರಲ್ಲೆ ಮುಳುಗಿದ್ದ ಮಗ ಗೋಕುಲ್ ಕಡೆ ನೋಡಿದರು. ಅವನ ಮುಖದಲ್ಲಿ ಗಂಭೀರತೆ. ಮಗನ ಕೈಲಿ ಮಾತನಾಡಲೆ ಅವರಿಗೆ ಈಚೆಗೆ ಭಯ. ಮಾತನಾಡಿದರೆ ಸಿಡುಕುವನು.
’ಈ ದಿನ ನಿನಗೆ ಆಫೀಸಿಗೆ ರಜಾ ಅಲ್ಲವೆ ? ’ ಸರೋಜಮ್ಮ ಮೆಲುದ್ವನಿಯಲ್ಲಿ ಕೇಳಿದರು.
’ಇವತ್ತು ಬಾನುವಾರ ಅಲ್ಲವೇನಮ್ಮ, ರಜಾ ಅಲ್ಲವೇ ಅಂತ ಬೇರೆ ಕೇಳ್ತೀಯ, ಇವತ್ತು ಆಫೀಸ್ ಗೆ ಹೋಗಕ್ಕೆ ಆಗುತ್ತ’
’ಅಲ್ಲವೋ ಇವತ್ತು ಹೇಗಿದ್ದರು ರಜಾ, ನೀನೆ ಹೇಳಿದ್ದಲ್ಲ, ಈ ಬಾನುವಾರ ಆದರೆ ಚೆಕ್ ಅಪ್ ಗೆ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗ್ತೀನಿ, ಅಂತ. ಹೋಗೋಣವೆ, ಏಕೋ ಈವತ್ತು ಏಳುವಾಗಲೆ ಸರಿ ಇಲ್ಲ, ಇಂತದೋ ಹಿಂಸೆ, ಪಕ್ಕೆಯಲ್ಲೆಲ್ಲ ನೋವು’ 
ಮಗ ಅಮ್ಮನನ್ನು ದೀರ್ಘವಾಗಿ ನೋಡಿದ . 
’ಏನಮ್ಮ,..  ನಿನ್ನೆ ಹೇಳಿದ್ದನ್ನು  ಮರೆತುಬಿಟ್ಟೆಯಾ. ಈ ದಿನ ನಮ್ಮ  ವಾಟ್ಸಪ್ ಗ್ರೂಪಿನಿಂದ ನಂದಿತಾ ಮನೆಯಲ್ಲಿ ಮದರ್ಸ್ ಡೇ ಸೆಲೆಬ್ರೇಟ್ ಮಾಡ್ತೀವಿ,ನೀನು ಬರಬೇಕಾಗುತ್ತೆ ಅಂತ ಹೇಳಿದ್ದೆನಲ್ಲಮ್ಮ. ಈಗ ಸ್ನಾನ ಮಾಡಿ ಹೊರಡಬೇಕು. ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಅವರ ಮನೇಲಿ ಇರಬೇಕು ಅಂದಿದ್ದಾರೆ , ನಿನಗೆ ಎಲ್ಲೋ ಬಹುಷಃ ಗ್ಯಾಸ್ಟ್ರಿಕ್ ಜಾಸ್ತಿ ಆಗಿರಬೇಕು. ರಾತ್ರಿಹೊತ್ತು ಚಪಾತಿ ತಿಂದರೆ ಕೆಲವೊಮ್ಮೆ ಅರಗಲ್ಲ.   ಮತ್ತೆ ಈ ವಾರದಲ್ಲಿ ಎಂದಾದರು ಒಂದು ದಿನ ರಜಾ ಹಾಕಿ , ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗುತ್ತೇನೆ ಆಯ್ತಾ ? ’ 
ಅಮ್ಮನಿಗೆ ಅರ್ಥವಾಗಿತ್ತು, ಮಗ ಸದ್ಯಕ್ಕೆ ತನ್ನನ್ನು ಡಾಕ್ಟರ್ ಬಳಿ ಕರೆದೊಯ್ಯಲ್ಲ, ಎಂದು. ಅವರಿಗೆ ಡಾಕ್ಟರ್ ಬಳಿ ಪದೇ ಪದೇ ಹೋಗುವ ಅಭ್ಯಾಸ ಏನಿಲ್ಲ. ಆದರೆ ಕಳೆದ ಎರಡು ವಾರಗಳಿಂದ ಅವರ ಅರೋಗ್ಯ ತೀರ ಹದಗೆಟ್ಟಿದೆ ಎಂದು ಅವರಿಗೆ ಅನ್ನಿಸುತ್ತಿತ್ತು. ಹೇಳಲಾಗದು ಅನುಭವಿಸಲಾಗದು ಅಂತಾರಲ್ಲ ಹಾಗೆ. ಬೇರೆ ದಾರಿ ಇಲ್ಲ ಈಗ ಸಿದ್ದರಾಗಿ ಮಗನ ಜೊತೆ ಹೋಗಲೇ ಬೇಕು. 
ಅಷ್ಟರಲ್ಲಿ ಸೊಸೆ ರಮ್ಯ ಅಂದಳು
’ನಿಮಗೆ ಮೊದಲೆ ಸರಿ ಇಲ್ಲ ಅಂತೀರಿ, ಇನ್ನು ಇಲ್ಲಿ ತಿಂಡಿ ತಿಂದು ಹೊರಡಬೇಡಿ ,  ಅಲ್ಲಿ   ಮತ್ತೇನು ಮಾಡ್ತಾರೋ   ಅಲ್ಲಿ  ಎಲ್ಲರ ಎದುರಿಗೆ ತಿನ್ನಲ್ಲ ಅನ್ನುವದಕ್ಕಾಗಲ , ಈಗ ತಿಂಡಿ ತಿನ್ನ ಬೇಡಿ, ಒಂದು ಲೋಟ ಹಾಲು ಕೊಡುವೆ ಕುಡಿದುಬಿಡಿ, ಒಟ್ಟಿಗೆ ಅಲ್ಲಿ ಊಟ ಮಾಡಿದರಾಯಿತು’ 
ಸರೋಜಮ್ಮನಿಗೆ ತಿಂಡಿಯದೇನು ಆತುರವಿಲ್ಲ, ಆದರೆ ಕಾಫಿಯ ಬಯಕೆ ಸ್ವಲ್ಪ ಜಾಸ್ತಿ
’ಹಾಗೆ ಆಗಲಮ್ಮ ತಿಂಡಿ ಬೇಡ ಬಿಡು, ಒಂದು ಲೋಟ ಕಾಫಿ ಕುಡಿದುಬಿಡುವೆ ಸಾಕು ’ ಎಂದರೆ ಸ್ವಲ್ಪ ಆಸೆಯಿಂದ. 
’ನಿಮಗೆ ಅರ್ಥವಾಗಲ್ವ ಅತ್ತೆ,  ಮೊದಲೆ ಗ್ಯಾಸ್ ಅಂತೀರಿ, ಪದೇ ಪದೇ ಕಾಫಿ ಏಕೆ. ಹಾಲು ಕುಡೀರಿ’ 
ಸರೋಜಮ್ಮ ಸಪ್ಪಗಾಗಿ ಸುಮ್ಮನಾದರು.
ಗೋಕುಲ್ ಮೌನವಾಗಿದ್ದ. 
…………
ನಂದಿತಾ ಮನೆಯಲ್ಲಿ ಬಾರಿ ಜನರೇ ಸೇರಿದ್ದರು. ಒಟ್ಟು ಹದಿನಾಲಕ್ಕು ಫ್ಯಾಮಿಲಿ ಅನ್ನುವಾಗಲು, ಐವತ್ತು ಜನರ ಹತ್ತಿರ. ’ಮದರ್ಸ್ ಡೇ’ ಎನ್ನುವ ಸಂಭ್ರಮಾಚರಣೆ. ನಂದಿತಾಳಿಗೆ ಈಟಿವಿ    ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಸಿನ್ ಒಬ್ಬರಿದ್ದರು, ಕ್ಯಾಮರಾಮನ್, ಅವರ ಮೂಲಕ ಸಂಪರ್ಕಿಸಿ, ತನ್ನ ಮನೆಯ ಮದರ್ಸ್ ಡೇ ಸೆಲೆಬ್ರೇಶನ್ ಸುದ್ದಿ, ಟೀವಿಯ ಸುದ್ದಿಯಲ್ಲಿ ಬರುವಂತೆ ಮಾಡುತ್ತೇನೆ ಅಂದಿದ್ದಳು. ಹಾಗಾಗಿ ಎಲ್ಲ ಹೆಂಗಸರು ತಮ್ಮ ಅಲಂಕಾರದೊಡನೆ ಸಿದ್ದರಾಗಿ ಬಂದಿದ್ದರು. 
ಎಲ್ಲರ ಸಂಭ್ರಮ ಆಕಾಶ ಮುಟ್ಟಿತ್ತು,. ತಮ್ಮೊಡನೆ ಕರೆತಂದಿದ್ದ, ತಾಯಂದಿರನ್ನು ಎಲ್ಲರಿಗೂ ಪರಿಚಯ ಮಾಡಿಸುತ್ತ, ನಂತರ ಸಾಲಾಗಿ ಕುರ್ಚಿಗಳನ್ನು ಹಾಕಿ ಎಲ್ಲರನ್ನೂ ಕೂಡಿಸಲಾಯಿತು. ಟೀವಿಯ ಕ್ಯಾಮರಗಳ ಜೊತೆ ಜೊತೆಗೆ ಎಲ್ಲರ ಮೊಬೈಲ್ ಗಳು ಕೆಲಸ ಮಾಡುತ್ತಿದ್ದವು, ತಮ್ಮ ತಮ್ಮ ಮೊಬೈಲ್ ನಲ್ಲಿ ಅಮ್ಮನ ಜೊತೆ , ಎಲ್ಲ ಅಮ್ಮಂದಿರ ಗುಂಪನ್ನು ಪೋಟೋ ತೆಗೆಯುತ್ತ, ಅಲ್ಲಿಂದಲೆ ವಾಟ್ಸಪ್ ಗುಂಪುಗಳಿಗೆ, ತಮ್ಮ ಪೇಸ್ ಬುಕ್ ಪುಟಗಳಿಗೆ ಅಪ್ ಲೋಡ್ ಮಾಡುತ್ತ ಹರ್ಷಿಸುತ್ತಿದ್ದರು. 
ನಂತರದ ಕಾರ್ಯಕ್ರಮ ಎಂದರೆ, ’ಕೈ ತುತ್ತು’ ಎಂದು ಪ್ರಕಟಿಸಲಾಯಿತು. 
ಎಲ್ಲರೂ ಅವರವರ ತಾಯಿಯ ಕೈಲಿ ಅನ್ನ ತಿನ್ನುವುದು. ತಟ್ಟೆಗಳಲ್ಲಿ  ತಿನಸುಗಳನ್ನೆಲ್ಲ ಹಾಕಿ , ತಾಯಂದಿರ ಕೈಗೆ ಕೊಡಲಾಯಿತು, ಅವರ ಮುಂದೆ ಅವರ ಮಕ್ಕಳು,  ’ಆ ’ ಎನ್ನುತ್ತ ಬಾಯಿ ತೆಗೆದು ತಮ್ಮ ಅಮ್ಮನ ಕೈಲಿ ತುತ್ತು ಇಡಿಸಿಕೊಳ್ಳುವುದು. ಮನೆಯಲ್ಲಿ ತೀರ ಗಂಬೀರವಾಗಿಯೆ ಇರುವ ಗೋಕುಲ್ ಅಲ್ಲಿ ಎಲ್ಲರೆದುರಿಗೆ ಅಮ್ಮನನ್ನು ಮುದ್ದುಗೆರೆಯುತ್ತಿದ್ದ. ಅಮ್ಮ ಅದು ತಿನ್ನಿಸು, ಇದು ತಿನ್ನಿಸು, ನೋಡು ನನಗೆ ಮೈಸೂರ್ ಪಾಕ್ ಅಂದರೆ ಇಷ್ಟ ನೀನು ಅದನ್ನೆ ಮರೆತುಬಿಟ್ಟೆ, ಎಂದು ಕೇಳುತ್ತ ಅಮ್ಮನ ಕೈಲಿ ತಿನ್ನಿಸಿಕೊಂಡ. 
ಸರೋಜಮ್ಮನಿಗೆ ಆಶ್ಚರ್ಯ , ಮನೆಯಲ್ಲಿ ಸಿಹಿಯನ್ನು ಮುಟ್ಟುವನೇ ಅಲ್ಲ, ಗೋಕುಲ್, ಒಮ್ಮೆ ಬಲವಂತವಾಗಿ ತಟ್ಟೆಗೆ ಹಾಕಿದರು, ಸಿಹಿ ಚೆಲ್ಲಬಾರದು ಎಂದರೂ ಕೇಳದೆ, ಬಿಸಾಕುತ್ತಿದ್ದವನು ಎಲ್ಲರೆದುರಿಗೆ ಅವನ ವರ್ತನೆಯೆ ಬೇರೆಯಾಗಿ ತೋರುತ್ತಿದೆ ಅವರಿಗೆ. ಹಾಗೆ ಸೊಸೆಯು ತಮ್ಮ ಅತ್ತೆಯ ಕೈಲಿ ಕೈತುತ್ತು ತಿಂದಳು.  ಸಂಜೆ ಎಲ್ಲವೂ ಟೀವಿಯ ಮದರ್ಸ್ ಡೆ ಕಾರ್ಯಕ್ರಮದಲ್ಲಿ ಎಲ್ಲ ಬರುವುದು ಎನ್ನುವ ಸಂತಸ , ನಿರೀಕ್ಷೆ ಅವರಿಗೆಲ್ಲ. ಸರೋಜಮ್ಮನಿಗೆ ಏಕೊ ಬಳಲಿಕೆ ಅನ್ನಿಸುತ್ತಿತ್ತು. ಎಲ್ಲರೆದುರು ಹೇಗೆ ಹೇಳುವುದು ಎಂದು ಸುಮ್ಮನಿದ್ದರು. ಅಲ್ಲದೆ ಅದೇಕೊ ಬಾರಿ ಬಾಯರಿಕೆ, ಸ್ವಲ್ಪ ನೀರು ಕುಡಿಯ ಬೇಕು ಅನ್ನಿಸುತ್ತಿತ್ತು
ಕೈ ತುತ್ತು ಕಾರ್ಯಕ್ರಮ ಮುಗಿದ ನಂತರ ಅಮ್ಮಂದಿರಗೆ ಊಟ ಏರ್ಪಾಟಾಗಿತ್ತು.  ಹೋಟೆಲ್ ನಿಂದ ತರಿಸಿದ ಊಟ ಸರೋಜಮ್ಮನಿಗೆ ಇಷ್ಟವೇ ಆಗುವದಿಲ್ಲ, ಆದರೆ ಅಲ್ಲಿಯೆಲ್ಲ ಏನು ಮಾತನಾಡುವುದು. ತಟ್ಟೆಯಲ್ಲಿ ಬಡಿಸಿದ್ದ ಯಾವ ವ್ಯಂಜನವು ಅವರಿಗೆ ಇಷ್ಟ ಅನ್ನಿಸುತ್ತಿಲ್ಲ. ತಿನ್ನಲೂ ಆಗುತ್ತಿಲ್ಲ. ಎಲ್ಲರ ಬಲವಂತಗಳು ಬೇರೆ. ಸ್ವಲ್ಪ ಅನ್ನ ಮಜ್ಜಿಗೆ ತಮ್ಮ ತಟ್ಟೆಗೆ ಹಾಕಿಸಿಕೊಂಡರು. ಪಕ್ಕದಲ್ಲಿದ್ದ  ಕಮಲಮ್ಮ ಅವರಿಗೆ ಪರಿಚಿತರೆ, ಮಗನ ಸ್ನೇಹಿತ, ಸತೀಶನ ಅಮ್ಮ.  ತಮ್ಮ ಮನೆಗೆ ಬಂದಿದ್ದವರು. ಆದರೆ ಏಕೊ ಅವರು ತಮ್ಮೊಡನೆ ಮಾತನಾಡುತ್ತಿಲ್ಲ. ಆಕೆಯ ಮುಖವನ್ನೊಮ್ಮೆ ದಿಟ್ಟಿಸಿದರು. ಆಕೆಯ ಮುಖದಲ್ಲಿ ಅದೇನೊ ನೋವು ಮಡುವುಗಟ್ಟಿದೆ ಅನ್ನಿಸಿತು. ಬಹುಷಃ ತನ್ನ ಹಾಗೆ ಆಕೆಗೂ ಏನು ನೋವು ಅನ್ನಿಸಿ , ನಗು ಬಂದಿತು. ಎಂತದೋ ಮದರ್ಸ್ ಡೇ ಅಂತೆ ಹುಚ್ಚುಮುಂಡೇವು , ಅಂದು ಕೊಂಡರು.  
ಹತ್ತಿರದಲ್ಲಿ ಕುಳಿತಿದ್ದ ನಂದಿತಾ, ಗೋಕುಲ್ ನನ್ನು ಕುರಿತು ಹೇಳಿದಳು 
’ನೋಡಿ ಗೋಕುಲ್ ನಿಮ್ಮ ಅಮ್ಮ ನಗುತ್ತಿದ್ದಾರೆ . ಬಹುಷಃ ಅವರು ನಿಮ್ಮ ಚಿಕ್ಕವಯಸ್ಸಿನ ತುಂಟತನವನ್ನು ನೆನೆಸಿಕೊಂಡು ಈಗ ನಗುತ್ತಿದ್ದಾರೆ, ಅಲ್ಲವೇ ಅಮ್ಮ ’ ಎನ್ನುತ್ತ ಸರೋಜಮ್ಮನನ್ನು ಕೇಳಿದಳು. ಸರೋಜಮ್ಮ ಏನು ತೋಚದೆ ಒಮ್ಮೆ ಪೆಚ್ಚುನಗೆ ಬೀರಿದರು. 
ಮದರ್ಸ್ ಡೇಯ ಎಲ್ಲ ಸಂಭ್ರಮಾಚರಣೆ ಮುಗಿಯಿತು 
ಅಲ್ಲಿ ಎಲ್ಲವನ್ನು ಮುಗಿಸಿ ಹೊರಡುವಾಗ ಸರೋಜಮ್ಮನಿಗೆ ಸಾಕೆನಿಸಿತ್ತು. ಅದೇನೊ ಮೈಯೆಲ್ಲ ಬೆವರು , ಥೂತ್ , ಬಿಸಿಲಿನ ಜಳ ತಡೆಯುವುದು ಕಷ್ಟವೇ. ಸೊಸೆಯಲ್ಲಿ ಅಂದರು, ತುಂಬಾ ಕಷ್ಟವಮ್ಮ ವಿಪರೀತ ಸೆಕೆಯಾಗುತ್ತಿದೆ. ಅದಕ್ಕವಳು 
’ಅಯ್ಯೋ ಈ ಬೆಸಿಗೆ ಎಲ್ಲರೂ ಬೆವರುತ್ತಿದ್ದಾರೆ, ನಿಮಗೆ ಮೊದಲೆ ವಯಸ್ಸಾಯಿತು ತಡೆಯುವುದು ಕಷ್ಟ’ ಎಂದಳು
’ನನಗಷ್ಟೆ ಏನು ರಮ್ಯಾ , ನಿನಗೂ ವಯಸ್ಸಾಯಿತು, ಈ ಯುಗಾದಿಗೆ ಐವತ್ತೊಂದು ಆಯಿತಲ್ಲವೆ ’ ಎನ್ನಲೂ ಹೋಗಿದ್ದವರು, ಆಕೆಯ ಮುಖದ ಮೇಕಪ್ಪನ್ನು, ತುಟಿಗೆ ಹಚ್ಚಿದ್ದ ಲಿಫ್ ಸ್ಟಿಕ್ಕನ್ನು ನೋಡುತ್ತ ಸುಮ್ಮನಾದರು. ಆಕೆಯ ಅನುಭವ ಹೇಳುತ್ತಿತ್ತು, ಕೆಲವು ಮಾತುಗಳನ್ನು ಆಡಿ ನಂತರ ಅರಗಿಸಿಕೊಳ್ಳುವುದು ಕಷ್ಟ ಎಂದು. 
ಮಗ ಸೊಸೆ ಮುಂದಿನ ಸೀಟಿನಲ್ಲಿದ್ದರೆ, ಕಾರಿನ ಹಿಂದಿನ ಸೀಟಿನಲ್ಲಿ ಸರೋಜಮ್ಮ ಒರಗಿದ್ದರು, ಆಕೆಗೆ ಅದೇನೊ ತುಂಬಾನೆ ಬಾಯರಿಕೆ ಅನ್ನಿಸುತ್ತಿತ್ತು. ನೀರು ಕುಡಿಯಬೇಕು, ಆದರೆ ಈಗ ಯಾರಲ್ಲಿ ಕೇಳುವುದು , ಮನೆಗೆ ಹೋಗವವರೆಗೂ ತಡೆಯಲೇ ಬೇಕು. 
ಮನೆಯ ಗೇಟಿನ ಮುಂದೆ ಕಾರು ನಿಂತು,  ರಮ್ಯ ಕೆಳಗಿ ಇಳಿದು ಗೇಟನ್ನು ತೆಗೆದು , ಮನೆಯ ಕೀ ಹಿಡಿದು ಒಳಹೋದಳು. ಗೋಕುಲ್ ಕಾರನ್ನು ನಿಧಾನವಾಗಿ ಒಳಗೆ ತಂದ. ಕಾರನ್ನು ನಿಲ್ಲಿಸಿ. ಕಾರಿನ ಏ.ಸಿ. ಆಫ್ ಮಾಡಿ. ಕೆಳಗಿಳಿಯ ಹೊರಟವನು ಸರೋಜಮ್ಮ ಇನ್ನು ಕೆಳಗಿಳಿಯದೆ, ಸೀಟಿಗೆ ಒರಗಿ ನಿದ್ರಿಸುತ್ತಿರುವದನ್ನು ಕಂಡ.
’ಅಮ್ಮ ಮನೆ ಬಂತು ಕೆಳಗಿಳಿ’
ಆಕೆಗೆ ಅದೇನು ನಿದ್ದೆಯೋ, ಆಕೆ ಮಲಗಿರುವ ಬಂಗಿಯನ್ನು ಕಾಣುತ್ತ, ಅವನಿಗೆ ಅದೇನೊ ಆತಂಕ ಎನಿಸಿ,  ಕಾರಿನ ಹಿಂದಿನ ಬಾಗಿಲು ತೆರೆದು, ಕೂಗುತ್ತಿದ್ದ
’ಅಮ್ಮ ಎದ್ದೇಳು ಮನೆ ಬಂದಿತು’ , ಗಂಡನ ಕೂಗು ಕೇಳಿ ಸೊಸೆ ರಮ್ಯಳು, ಬಾಗಿಲಿಗೆ ಬಂದು ಕೇಳಿದಳು
’ಅದೇನು ನಿಮ್ಮ ಕೂಗಾಟ, ಅಮ್ಮ ಅಮ್ಮ ಎಂದು’
ಅವನು ಹೇಳಿದ
’ಅಮ್ಮ ಅದೇಕೊ ಎಷ್ಟು ಕೂಗಿದರು, ಏಳುತ್ತಲೆ ಇಲ್ಲ ಕಣೇ’  ರಮ್ಯಳು ಸಹ ಮೆಟ್ಟಿಲಿಳಿದು ಬಂದಳು. ..

No comments:

Post a Comment

enter your comments please