Thursday, March 3, 2016

ಒನ್ ವೇ - (ಕಲ್ಪನಾ ಬರಹ )

ಒನ್ ವೇ
======
(ಕಲ್ಪನಾ ಬರಹ )
ಬಿಸಿಲು ಬೇರೆ , ಹೆಲ್ಮೆಟ್ ಧರಿಸಿ ಸ್ಕೂಟರ್ ಓಡಿಸುವುದು ಎಂದರೆ ಯಮ ಹಿಂಸೆ,
ಸದಾ ಓಡಾಡುತ್ತಿದ್ದ ಅಡ್ಡ ರಸ್ತೆ ಒಂದಿತ್ತು , ಚಾಮರಾಜನಗರದಲ್ಲಿ, ಅಲ್ಲಿ ನುಗ್ಗಿದ್ದರೆ, ನೇರವಾಗಿ ಮುಖ್ಯರಸ್ತೆ ಸೇರಿಬಿಡುವೆವು.
ಥೂ....
ಇದೆಂತದು ಒನ್ ವೇ ಎಂದು ಬೋರ್ಡ್ ಹಾಕಿಬಿಟ್ಟಿದ್ದಾರೆ, ಎಲ್ಲ ರಸ್ತೆಗಳು ಹೀಗಾದರೆ ಟೂ ವೀಲರ್ ಗಳ ಗತಿಏನು?
ನಿಲ್ಲಿಸಿ ಯೋಚಿಸಿದೆ
'ಹೋಗಿ ಸಾ ಪರ್ವಾಗಿಲ್ಲ, ಬೋರ್ಡ್ ಹಾಕಿದ್ದಾರೆ ಅಷ್ಟೆ ಯಾರು ಕೇಳಲ್ಲ' ಎಂದ ರಸ್ತೆಯ ಪಕ್ಕ ನಿಂತಿದ್ದ ಒಬ್ಬ
ಅವನತ್ತ ನೋಡಿದೆ, ಶೂಹಾಕಿ, ಪ್ಯಾಂಟ್ ಶರ್ಟ್ ಧರಿಸಿದ್ದ, ಸಣ್ಣ ಹೇರ್ ಕಟ್ ,
'ಒನ್ ವೇ ಅಂತ ಹಾಕಿದ್ದಾರಲ್ಲ, ಪೋಲಿಸರು ಹಿಡಿದರೆ ' ಎಂದರೆ,
ಯಾವ ಪೋಲಿಸ್ ಸಾರ್, ದಿನಕ್ಕೊಂದು ರಸ್ತೆಗೆ ಈ ಥರ ಭೋರ್ಡ್ ಇಡ್ತಾರೆ, ನಿಮ್ಮ ಪಾಡಿಗೆ ನೀವು ಹೋಗಿ' ಎಂದು ದೈರ್ಯ ತುಂಬಿದ.
ಮನಸಿಗೆ ಅದೇನು ಮಂಕು ಕವಿಯಿತೋ,
ಸ್ಕೂಟರ್ ಅದೇ ರಸ್ತೆಗೆ ತಿರುಗಿಸಿದೆ,
ಮೂರು ನಾಲಕ್ಕು ನಿಮಿಶವಷ್ಟೆ, ಮುಖ್ಯರಸ್ತೆಗೆ ಬಲಕ್ಕೆ ತಿರುಗಬೇಕು,
ಪ್ರತ್ಯಕ್ಷ !
ಸ್ಕೂಟರ್ ನಿಲ್ಲಿಸಿ ಎನ್ನುವಂತೆ ಕನಿಷ್ಠ ಪೇದೆ ಎದುಗಾಗಿ ಕೈ ಆಡಿಸಿದ, ಪಕ್ಕದಲ್ಲಿಯೆ ಇನ್ಸ್ ಪೆಕ್ಟರ್ ಮೋಟರ್ ಬೈಕನ್ನು ನೋ ಪಾರ್ಕಿಂಗ್ ಬೋರ್ಡಿನ ಎದುರು ನಿಲ್ಲಿಸಿ ಅದರ ಪಕ್ಕ ನಿಂತಿದ್ದ.
ಓಡಿ ತಪ್ಪಿಸುವುದೆಲ್ಲ ಅಪಾಯ, ನಿಲ್ಲಿಸಿದೆ.
ಏನ್ ಸಾರ್ ಒನ್ ವೇ ನಲ್ಲಿ ಬರ್ತಿದ್ದೀರಲ್ಲ, ಬೋರ್ಡ್ ಕಾಣಿಸಲಿಲ್ಲವ, ಬನ್ನಿ ಫೈನ್ ಕಟ್ಟಿ ನಮ್ಮ ಸಾಹೆಬ್ರು ಕರಿತಾವ್ರೆ ಅಂದ
ಸರಿ ವಿದಿಯಿಲ್ಲ, ಗಾಡಿ ನಿಲ್ಲಿಸಿ ಅವನತ್ತ ನಡೆದೆ,
ಸರಿ ಪ್ರವರ ಶುರು,
ಡಿ ಎಲ್ ಇದೆಯ , ತೋರಿಸಿ,
ತೆಗೆದು ತೋರಿಸಿದೆ,
ಅರ್ ಸಿ
ಅದು ಆಯಿತು,
ಇನ್ಷೂರೆನ್ಸ್
ಅದೂ ಇದೆ,
ಎಮಿಶನ್ ಟೆಸ್ಟ್
ಖಂಡಿತ ಇದೆ (ನೀನು ಮಾಡಿಸಿದರೆ ಒಳ್ಳೆಯದೇನೊ ಅನ್ನುವಂತೆ ಸಿಗರೇಟ್ ಹೊಗೆ ಬಿಡುತ್ತಿದ್ದ)
ಸರಿ ತೆಗೀರಿ, ಕಟ್ಟಿ, ಒನ್ ವೇ ನಲ್ಲಿ ಬಂದಿದ್ದಕ್ಕೆ ಎಂದ,
ಪೋಲಿಸರ ಸಂಗಡ ವಾದ ಮಾಡುವದರಲ್ಲಿ ಯಾವ ಉಪಯೋಗವು ಇಲ್ಲ ಎಂದು ತಿಳಿದಿದ್ದೆ,
ಜೋಬಿಗೆ ಕೈ ಹಾಕಿ ಹಣ ತೆಗೆಯುತ್ತಿರುವಂತೆ, ಅವನ ಮೊಬೈಲ್ ರಿಂಗ್ ಆಯಿತು,
'ಹೇಳಯ್ಯ , ಏನು ಯಾರು ಆ ಕಡೆಯಿಂದ ಬರುತ್ತಲೆ ಇಲ್ಲ, ಏನು ಮಾಡುತ್ತಿದ್ದಿ, ನೀವೆಲ್ಲ ಏನು ಡ್ಯೂಟಿ ಮಾಡ್ತೀರೋ' ಎಂದ
ನಾನು ತೀರ ಪಕ್ಕದಲ್ಲಿ ನಿಂತಿದ್ದ ಆ ಕಡೆಯಿಂದ ಮಾತನಾದುವ ದ್ವನಿ ಅಸ್ವಷ್ಟ ಅನ್ನುವಂತೆ ಕೇಳಿಸಿತು,
'ಇಲ್ಲ ಸಾರ್ ಕಳಿಸುತ್ತಿದ್ದೀನಲ್ಲ, ಈಗ ತಾನೆ ಒಬ್ಬ ಸ್ಕೂಟರ್ ನಲ್ಲಿ ಬಂದ ನೋಡಿ, ಗಾಡಿ ನಂಬರ್, ೬೩೨೨ '
ಅರೇ ನನ್ನ ಗಾಡಿ ನಂಬರ್ ಹೇಳುತ್ತಿದ್ದಾನೆ!!!
ಸರಿ ಸರಿ, ಬಂದಿದ್ದಾರೆ ಬಿಡು, ನೀನು ಆದಷ್ಟೆ ಬೇಗ ಬೇಗ ಕಳಿಸು, ಬಿಸಿಲು ಬೇರೆ, ಊಟದ ಸಮಯ ಆಯಿತು, ಇಲ್ಲಿ ನೋಡಿದರೆ ಅರ್ದಾನು ಟಾರ್ಗೆಟ್ ಮುಟ್ಟಿಲ್ಲ'
ಅಂತ ಬೈದು ಮೊಬೈಲ್ ಕಟ್ ಮಾಡಿದ.
ನನಗೆ ಬೆಚ್ಚಿಬೀಳುವಂತೆ ಆಯಿತು, ಆ ಕಡೆಯಿಂದ ಕೇಳಿದ ದ್ವನಿ, ಈಗ ತಾನೆ ಕೇಳಿದಂತೆ ಇದೆಯಲ್ಲ, ನಿಜ, ಅವನೆ ನನ್ನನ್ನು ಹೋಗಿ ಸಾರ್ ಏನಾಗಲ್ಲ ಎಂದು ಪುಸಲಾಯಿಸಿ, ಒನ್ ವೇ ನಲ್ಲಿ ಕಳಿಸಿದ ಭೂಪ.
ಇನ್ಸ್ ಪೆಕ್ಟರ್ ಮುಖ ನಿರ್ವಿಕಾರ,
'ಏನ್ಸಾರ್ ಯಾರದು ಕಾಲ್ ' ಎಂದೆ
'ರೀ, ಯಾವುದೋ ಪರ್ಸನಲ್ ನಿಮಗೆ ಏಕೆ ಬೇಕ್ರಿ, ಪೈನ್ ಕಟ್ಟಿ ಹೋಗಿ ' ಎಂದ , ರಸೀತಿ ಹಾಕಿ ಆಗಿತ್ತು, ಪೈನ್ ಕಟ್ಟಿದವನು, ಗಾಡಿ ಹತ್ತಿ ಪುನಃ ಬಂದ ರಸ್ತೆಗೆ ತಿರುಗಿಸಿದೆ,
'ಏನು ಪುನಃ ಅದೇ ರಸ್ತೆಗೆ ಹೊರಟಿರಿ' ಎಂದ ಪೇದೆ,
'ಈಗೇನು ಅದು ಒನ್ ವೇ ' ಅಲ್ಲವಲ್ಲ ಎನ್ನುತ್ತ ಗಾಡಿ ಓಡಿಸಿ, ಈ ತುದಿಗೆ ಬಂದರೆ ಆ ಮನುಷ್ಯ ಮತ್ತಾರನ್ನೊ ಅದೇ ರಸ್ತೆಗೆ ಮತ್ತೆ ಕೆಲವರನ್ನು ಕಳಿಸುತ್ತಿದ್ದಾನೆ, ನನಗೆ ರೇಗಿ ಹೋಯಿತು.
'ಅಲ್ರೀ, ಆ ಕಡೆ ಪೋಲಿಸ್ ನಿಂತಿದ್ದಾರೆ, ನೀವೇನ್ರಿ ಎಲ್ಲರನ್ನು ಒನ್ ವೇ ನಲ್ಲಿ ಕಳಿಸುತ್ತಿದ್ದೀರಿ' ಎಂದು ದಬಾಯಿಸಿದೆ,
ಗೊತತ್ತಿಲ್ಲದವನಂತೆ
'ಅಯ್ಯೋ ಹೌದಾ ಸಾರ್, ನನಗೆ ತಿಳಿಯಲಿಲ್ಲ ನೋಡಿ' ಎಂದ
'ರೀ ನಾಟಕ ಆಡಬೇಡಿ, ನನ್ನನ್ನು ಕಳಿಸಿ, ನೀವೆ ಆ ಕಡೆ ಇರುವ ಇನ್ಸ್ ಪೆಕ್ಟರಿಗೆ ಪೋನ್ ಮಾಡಲಿಲ್ಲವಾ, ನೀವು ಪೋಲಿಸರೆ ತಾನೇ ' ಎಂದೆ ದಬಾಯಿಸುತ್ತ
'ಸಾರ್ ನಿಜ ಹೇಳಿಬಿಡುವೆ, ನಾನು ಪೋಲಿಸನೆ, ಏನು ಮಾಡುವುದು ತಿಂಗಳ ಕಡೆ, ಇಷ್ಟು ದಂಡ ವಸೂಲಿ ಮಾಡಲೇ ಬೇಕು ಎಂದು ಟಾರ್ಗೆಟ್ ಫೀಕ್ಸ್ ಮಾಡಿರುತ್ತಾರೆ, ಜನ ಈಗೀಗ ಬುದ್ದಿವಂತರಾಗಿದ್ದಾರೆ, ಪೋಲಿಸರಿದ್ದರೆ ಅಲ್ಲಿಗೆ ಬರುವುದೇ ಇಲ್ಲ , ಅದಕ್ಕೆ ವಿದಿಯಿಲ್ಲದೆ, ಈ ಕಡೆ ಸಿವಿಲ್ ಡ್ರೆಸ್ ನಲ್ಲಿ ನಿ೦ತು ಜನರನ್ನು ಕಳಿಸು, ಎಂದು ಸಾಹೆಬ್ರು ನಿಲ್ಲಿಸಿದ್ದಾರೆ' ಎಂದು ಹಲ್ಲು ಕಿರಿದ.
ಅಯ್ಯೋ ಪಾಪಿ ನಿನ್ನ ನಂಬಿ ಅಲ್ಲಿ ಹೋಗು ಮೂರುನೂರು ಕೊಟ್ಟು ಬಂದೆನಲ್ಲ, ಅಂದರೆ
ಬಿಡಿಸಾರ್ ಸರ್ಕಾರಕ್ಕೆ ತಾನೆ ಕೊಡ್ತಾ ಇರುವುದು, ಎಂದ
ಅಲ್ಲಪ್ಪ ಹೀಗೆಲ್ಲ ನೀನೆ ನಿಂತು ತಪ್ಪು ಮಾಡಿಸುವುದು, ಅದಕ್ಕೆ ದಂಡ ಹಾಕುವುದು ತಪ್ಪಲ್ವ
ಅಂದರೆ
ತಪ್ಪೇ ಅನ್ನಿ, ಆದರೆ ಏನು ಮಾಡಕ್ಕಾಯ್ತದೆ ಸಾರ್, ದೊಡ್ಡೋರಿಗೆ ಹೇಳಿದರೆ ಅರ್ಥವಾಗಲ್ಲ, ನಾವೇನು ಸಂಬಳದಿಂದ ಕೊಡಕ್ಕಾಗುತ್ತದ, ಟಾರ್ಗೆಟ್ ಅಂದರೆ ಅಂತ ನನ್ನನ್ನೆ ದಬಾಯಿಸಿದ.
ಸರಿ ಇವನ ಜೊತೆ ವಾದದಿಂದ ಯಾವುದೇ ಪ್ರಯೋಜನವಿಲ್ಲ, ನಾನು ಇನ್ನು ಉಷಾರಾಗಿರಬೇಕು, ಯಾರು ಹೇಳಿದರೆ ಇಂತಹುದೆಲ್ಲ ಕೇಳಬಾರದು, ಅಂತ ಅಂದುಕೊಂಡೆ
ನೋಡಪ್ಪ, ಈ ರಸ್ತೆಯಲ್ಲಿ ಪುನಃ ಹೋದರೆ ದಂಡ ಕೊಡಬೇಕಾ , ಒಂದು ಸಾರಿ ಕೊಟ್ಟಾಗಿದೆಯಲ್ಲ
ಎಂದರೆ,
ಒಂದು ಸಾರಿ ಕಟ್ಟಿದ್ದರೆ ಆಯಿತು ಸಾರ್, ಪುನಃ ನಿಲ್ಲಿಸಿದರೆ ಅದೇ ರಸೀತಿ ತೋರಿಸಿಬಿಡಿ, ನಾನು ಹೇಳ್ತೀನಿ, ನೀವು ಹೋಗಿ ಎಂದು ದಾರಾಳ ಬುದ್ದಿ ತೋರಿಸಿದ
ನೋಡೋಣ ಪರೀಕ್ಷೆ ಮಾಡಿಯೇ ಬಿಡೋಣ ಎಂದು ಅದೇ ರಸ್ತೆಯಲ್ಲಿ ಹಿಂದೆ ಹೊರಟೆ , ರಸ್ತೆಯ ತುದಿ ತಲುಪಿ ಬಲಕ್ಕೆ ತಿರುಗುವಾಗ ಪುನಃ ಅದೇ ಪೋಲಿಸ್ ಕನಿಷ್ಠಪೇದೆ ನಿಂತಿದ್ದ , ನನ್ನ ಗಾಡಿ ನೋಡಿ ನಗುತ್ತ
ಹೋಗಿ ಹೋಗಿ ಎನ್ನುವಂತೆ ಕೈ ಆಡಿಸಿದ.
ಸರಿ ಮುಂದೆ ಹೊರಟೆ

No comments:

Post a Comment

enter your comments please