ಕೆಂಪು ಸಿಗ್ನಲ್ ಬಿತ್ತು, ಸ್ವಲ್ಪ ಬೇಸರದಿಂದಲೆ ಕಾರಿನ ಬ್ರೇಕ್ ಅದುಮಿದರು ಮಹಾಂತೇಶ್ . ದೇಹಕ್ಕೆ ಅದೇನೊ ಆಯಾಸ ಅನ್ನಿಸುತ್ತಿತ್ತು. ಬೆಳಗ್ಗೆ ಬೇಗ ಮನೆಯಿಂದ ಹೊರಟಿದ್ದು. ಮಧ್ಯಾಹ್ನದ ಊಟವು ಸರಿ ಎನಿಸಲಿಲ್ಲ. ಅಲ್ಲದೆ ಸಂಜೆಯವರೆಗು ಸಹಕಾರನಗರದ ಕೋಪರೇಟಿವ್ ಸೊಸೈಟಿಯಲ್ಲಿ ಕುಳಿತಿದ್ದು, ಅಲ್ಲಿ ವಿಷಯಗಳತ್ತ ಗಮನ ಹರಿಸಿದ್ದಾಯ್ತು. ಅದೇನೊ ನೋಡುವಾಗ ವ್ಯವಹಾರ ಬಹಳಷ್ಟು ಹೆಚ್ಚುಕಡಿಮೆ ಇರುವಂತಿದೆ, ಅಲ್ಲಿನ ವ್ಯವಹಾರಗಳಲ್ಲಿ ನಾಳೆ ಪಟ್ಟಾಗಿ ಕುಳಿತು ನಿಧಾನವಾಗಿ ನೋಡಬೇಕು. ಅಲ್ಲಿ ಸಾಕಷ್ಟು ಸಹಕಾರ ಸಿಗುತ್ತಿಲ್ಲ , ಬೇಕೆಂದೆ ನಿಧಾನ ಮಾಡುತ್ತಿದ್ದಾರೆ ಕೇಳಿದ ದಾಖಲೆಗಳನ್ನು ಒದಗಿಸಲು. ಮಹಂತೇಶನ ಯೋಚನೆ ಸಾಗಿತು. ಪಕ್ಕದಲ್ಲಿದ್ದ ಕನ್ನಡಿಯಲ್ಲಿ ನೋಡಿದ, ಹಿಂದೆ ಒಂದು ಕೆಂಪನೆಯ ಅಲ್ಟೊ. ಅದೇಕೊ ತನ್ನ ಹಿಂದೆಯೆ ಬಹಳ ದೂರದಿಂದಲು ಬರುತ್ತಿದೆ ಅನ್ನಿಸಿತು, ಈ ಬೆಂಗಳೂರಿನ ಟ್ರಾಫಿಕ್ ನಲ್ಲಿ ಓವರ್ ಟೇಕ್ ಮಾಡಿ ಹೋಗೋದು ಕಷ್ಟವೆ, ಆದರೆ ಆ ಕಾರಿನಲ್ಲಿನ ಡ್ರೈವರ್ ಮುಖಕಾಣುವಾಗ ಹಾಗೆನಿಸಲಿಲ್ಲ, ಇಪ್ಪತ್ತರ ಆಸುಪಾಸಿನ ಯುವಕ ಅಷ್ಟು ಸಹನೆಯಿಂದ ಡ್ರೈವ್ ಮಾಡುವುದು ಅಪರೂಪವೆ. ಯೋಚಿಸುತ್ತಿರವಂತೆ ಹಸಿರು ದೀಪ ಕಾಣಿಸಿತು. ಮೇಖ್ರಿ ಸರ್ಕಲ್ ದಾಟಿದ್ದಾಗಿತ್ತು.
ರಸ್ತೆಯಲ್ಲಿನ ವಾಹನಗಳು ಸ್ವಲ್ಪ ತೆಳುವಾದವು, ಆದರು ಅದೇನೊ ಆ ಕೆಂಪನೆ ಆಲ್ಟೊ ತನ್ನ ಹಿಂದೆಯೆ ಬರುತ್ತಿದೆ ಅನ್ನಿಸಿತು. ನೋಡೋಣ ಅಂತ ಕಾರಿವ ವೇಗ ಹೆಚ್ಚಿಸಿದರು ಮಹಾಂತೇಶ್ , ಹಿಂದಿನ ಕಾರಿನ ವೇಗವು ಹೆಚ್ಚಿತು. ಮತ್ತೆ ಸ್ವಲ್ಪ ದೂರ ಹೋಗಿ ಮತ್ತೆ ವೇಗ ತಗ್ಗಿಸಿದರು, ಹಿಂದಿನ ಕಾರಿನ ವೇಗವು ತಗ್ಗಿತ್ತು. ಅವರಿಗೆ ಯಾವ ಅನುಮಾನವು ಉಳಿಯಲಿಲ್ಲ 'ತನ್ನನ್ನು ಅವರು ಹಿಂಬಾಲಿಸುತ್ತಿದ್ದಾರೆ'. ಮತ್ತೊಮ್ಮೆ ಹಿಂದಿನ ಕಾರಿನತ್ತ ಗಮನಿಸಿದರು, ಅದರಲ್ಲಿ ನಾಲ್ವರು ಇರುವಂತೆ ಕಾಣಿಸಿತು. ಎಲ್ಲರು ಯುವಕರೆ. ಏನಿರಬಹುದು ಇವರ ಹುನ್ನಾರ, ಅವರಿಗೆ ಗೊತ್ತಿತ್ತು ತನ್ನ ಮೇಲೆ ಸದಾ ಕೆಲವರ ಕೆಂಗಣ್ಣು ಇದೆ. ತನ್ನ ಜೀವಕ್ಕೊ, ದೇಹಕ್ಕೊ ಅಪತ್ತು ಇದೆ ಅಂತ ಕೆಲವೊಮ್ಮೆ ಅವರಿಗೆ ಅನ್ನಿಸಿತ್ತು. ಆದರೆ ಅದು ಅವರನ್ನು ಕಂಗೆಡಿಸಿರಲಿಲ್ಲ. ಅವರ ವೃತ್ತಿಯೆ ಅಂತಹುದು. ಕರ್ನಾಟಕ ಸರ್ಕಾರದಲ್ಲಿ ಕೋಆಪರೇಟಿವ್ ಸೊಸೈಟಿಗಳ ಆಡಿಟಿಂಗ್ ವಿಭಾಗದಲ್ಲಿ ಉಪನಿರ್ದೇಶಕರು ಮಹಾಂತೇಶ್. ಅವರ ವೃತ್ತಿ ಜೀವನದಲ್ಲಿ ಹಲವು ಬಾರಿ ಇಂತಹ ಪ್ರಸಂಗಗಳನ್ನು ಬೆದರಿಕೆಗಳನ್ನು ಸಹಿಸಿ ಗಟ್ಟಿಯಾದ ಮನವದು.
ಸೂಕ್ಷ್ಮವಾಗಿ ಗಮನಿಸುವಾಗ ತನ್ನ ಹಿಂದೆ ಬಿದ್ದವರಿಂದ ಅದೇನೊ ಅಪಾಯವಿದೆ ಎಂದೆ ಅನ್ನಿಸಿತು. ಪಕ್ಕದಲ್ಲಿದ್ದ ಮೊಬೈಲ್ ಕೈಗೆ ತೆಗೆದುಕೊಂಡರು. 'ಪೋಲಿಸ್ ಗೆ ಕಾಲ್ ಮಾಡುವುದ?' ಒಮ್ಮೆ ಚಿಂತಿಸಿದರು. ಬೇಡ ಸುಮ್ಮನೆ ಗಲಾಟೆಯಾಗುತ್ತೆ. ಒಮ್ಮೆ ಹಿಂದಿರುವವರು ಸುಮ್ಮನೆ ಸಹ ಬರುತ್ತಿರಬಹುದು, ನಾನೆ ತಪ್ಪು ತಿಳಿದಿರಬಹುದು. ಗೆಳೆಯ ವೇಲುಗೆ ಒಮ್ಮೆ ಕಾಲ್ ಮಾಡೋಣ ಎಂದುಕೊಂಡು, ಮೊಬೈಲ್ ಒತ್ತಿದರು,
ಅದೇನೊ ' ನೀವು ಕಾಲ್ ಮಾಡಿದ ನಂಬರ್ ಕಾರ್ಯ ನಿರತವಾಗಿ ಸ್ವಲ್ಪ ಕಾಲದ ನಂತರ ಪ್ರಯತ್ನಿಸಿ' ಎಂದು ಬರುತ್ತಿದೆ.
ಮತ್ತೆ ಪ್ರಯತ್ನಿಸಿದರು, ಅದೇ ದ್ವನಿ, ಸರಿ ಎನ್ನುತ್ತ ಮನೆಗೊಮ್ಮೆ ಮಾಡಿನೋಡೋಣ ಲಾಂಡ್ ಲೈನ್ ಗೆ ಎನ್ನುತ್ತ ಕಾಲ್ ಮಾಡಿದರು, ಅದೇನೊ ಯಾವ ಪ್ರತಿಕ್ರಿಯೆ ಇಲ್ಲ. ಎಲ್ಲರು ಏನು ಮಾಡುತ್ತಿದ್ದಾರೊ. ಅವರಿಗೆ ಅನ್ನಿಸಿತು ತಕ್ಷಣ ತನ್ನ ಪರಿಸ್ಥಿಥಿಯನ್ನು ಯಾರಿಗಾದರು ಹೇಳಿದರೆ ಉತ್ತಮ. ಅವರಿಗೆ ನೆನಪಿಗೆ ಬಂದಿದ್ದು, ಆಫೀಸ್ ನಲ್ಲಿಯ ತಮ್ಮ ಕಾರ್ಯ ಸಹಾಯಕಿ ಜ್ಯೋತಿ. ಅವಳಿಗೆ ಯಾವ ಸಮಯದಲ್ಲಿ ಕಾಲ್ ಮಾಡಿದರು ಉತ್ತರಿಸುವ ನಿಸ್ಪೃಹ ಅಧಿಕಾರಿ, ಕೆಲಸಗಾರಳು ಆಕೆ. ಸರಿ ಎಂದುಕೊಂಡು, ಅವಳ ನಂಬರ್ ಹುಡುಕಿ ಒತ್ತಿದರು. ಎರಡೆ ರಿಂಗ್ , ಪೋನ್ ಕನೆಕ್ಟ್ ಆಯಿತು. ಆ ತುದಿಯಿಂದ
"ಸಾರ್..." ಎನ್ನುವ ದ್ವನಿ.
ಮಹಾಂತೇಶ್ ಬಾಯಿ ತೆರೆಯುವ ಮುನ್ನವೆ, ಅವರ ಕಾರಿಗೆ ಹಿಂದಿನಿಂದ ಬರುತ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದಿತ್ತು, ಹೊಡೆತದ ರಭಸಕ್ಕೆ , ಕೈಲಿದ್ದ ಮೊಬೈಲ್ ಮುಂದಿನ ಗಾಜಿಗೆ ಬಡಿದು, ಹೊರಗೆ ಎಗರಿತು. ಕಾರ್ ಅವರ ಕಂಟ್ರೋಲಿಗೆ ಸಿಗದ ಪಕ್ಕದ ಪುಟ್ಪಾತ್ ಕಡೆ ನುಗ್ಗಿತು. ಕಷ್ಟಬಿದ್ದು ಬ್ರೇಕ್ ಅದುಮಿದ ಮಹಾಂತೇಶ್ ಇದೇನು ಹೀಗೆ ಆಯಿತು, ಆಕ್ಸಿಡೆಂಟ್ ಎನ್ನುತ್ತ ಇಂಜಿನ್ ಆಪ್ ಮಾಡಿ, ಬಾಗಿಲು ತೆರೆದು ಹೊರಗಿಳಿದರು.
ಏನಾಗಿದೆ ಎಂದು ನೋಡುತ್ತಿರುವಾಗಲೆ ಕಾಣಿಸಿತು. ತಮ್ಮಗೆ ಡಿಕ್ಕಿ ಹೊಡೆದ ಹಿಂದಿನ ಕಾರಿನಲ್ಲಿದ್ದ ಯುವಕರು, ಕಾರ್ ನಿಲ್ಲಿಸಿ, ಆತುರವಾಗಿ ತಮ್ಮ ಕಡೆ ಬರುತ್ತಿರುವುದು, ಮತ್ತು ಅವರೆಲ್ಲರ ಕೈಗಳಲ್ಲಿ, ಕ್ರಿಕೇಟ್ ಬ್ಯಾಟ್, ವಿಕೆಟ್, ಚೈನ್ ತರದ ಆಯುಧಗಳು ಕಾಣುತ್ತಿದ್ದವು, ಅನುಭವಿ ಮಹಂತೇಶ್ ತಕ್ಷಣ ಅರಿತರು. ಇದು ತಮ್ಮ ಮೇಲೆ ನಡೆಯುತ್ತಿರುವ ಅಟ್ಯಾಕ್, ಇಲ್ಲಿ ನಿಲ್ಲುವುದು ಕ್ಷೇಮವಲ್ಲ, ಬೇಗ ಕಾರಿನ ಒಳಗೆ ಹೋಗಲು ಪ್ರಯತ್ನಿಸಿದರು. ಆದರೆ ಸಮಯ ಮೀರಿತ್ತು, ಪಾತಕಿಗಳು ಹತ್ತಿರ ಬಂದು ಆಗಿತ್ತು. ಮುಂದಿದ್ದವ ಬ್ಯಾಟ್ ಮೇಲೆತ್ತಿ ಬಾರಿಸಿದ, ಕೈಯನ್ನು ಅಡ್ಡ ಹಿಡಿದರು. ಬಲಗೈ ಮುರಿದಂತೆ ಆಯಿತು. ಎಷ್ಟೆ ಗಟ್ಟಿಮುಟ್ಟಾದ ದೇಹವಾದರು, ನಾಲ್ವರು ಯುವಕರ ದಾಳಿ ತಡೆಯುವಂತಿರಲಿಲ್ಲ. ಅಲ್ಲದೆ ಅವರು ಪೂರ್ಣ ಸಿದ್ದರಾಗಿ ಬಂದಿದ್ದರು. ಕೈ ಕಾಲು ತಲೆಗಳ ಮೇಲೆ ಸತತ ಹೊಡೆತಗಳು ಬಿದ್ದವು. ಕೆಳಗೆ ಕುಸಿಯುತ್ತಿರುವಾಗ ಬ್ಯಾಟ್ ತಲೆಗೆ ಬಲವಾಗಿ ಬಾರಿಸಿತು. ತಲೆಯಿಂದ ರಕ್ತ ಪ್ರವಾಹವಾಗಿ ಹರಿಯುತ್ತಿತ್ತು. ನೆಲಕ್ಕೆ ಬೀಳುತ್ತಿರುವಂತೆ, ನಾಲ್ವರು ಯುವಕರು ಸುತ್ತಲು ನಿಂತರು, ಕೆಲಕಾಲ ವಿಕ್ಷಿಸಿದ ಅವರು ತಕ್ಷಣ ತಮ್ಮ ಕಾರಿನತ್ತ ಹೊರಟರು. ಒಂದೆರಡು ಕ್ಷಣವಷ್ಟೆ. ಯುವಕರ ಕುಳಿತ್ತಿದ್ದ ಕಾರು ವೇಗವಾಗಿ ಅಲ್ಲಿಂದ ಹೊರಟುಹೋಯಿತು.
ಆಗಿನ್ನು ಮಳೆಬಂದು ನಿಂತು ನೆಲವೆಲ್ಲ ನೀರಿನಿಂದ ತೊಳೆದಂತಾಗಿದ್ದು ಈಗ ಮಹಾಂತೇಶ್ ರಕ್ತವು ಸೇರಿ ಭೂಮಿ ಕೆಂಪಾಗಿ ಕಾಣುತ್ತಿತ್ತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ನಿಧಾನಕ್ಕೆ ಇತ್ತ ನೋಡಿ ಚಲಿಸುತ್ತಿದ್ದವಾಗಲಿ ನಿಲ್ಲಿಸುತ್ತಿರಲಿಲ್ಲ. ಬೆಂಗಳೂರು ಎಂಬ ಜನಭರಿತ ಕಾಡಿನ ಟಾರ್ ರಸ್ತೆಯಲ್ಲಿ, ರಾಜ್ಯದ ಕೆ.ಎ,ಎಸ್ ದರ್ಜೆಯ ಒಬ್ಬ ಹಿರಿಯ ಅಧಿಕಾರಿ, ನಿದಾನವಾಗಿ ತನ್ನ ದೇಹದಿಂದ ರಕ್ತವನ್ನು ಕಳೆದುಕೊಳ್ಳುತ್ತ ನಿತ್ರಾಣವಾಗುತ್ತ ಮಲಗಿದ್ದ. ಅವನ ಮನದಲ್ಲಿ ಭಾವನೆಗಳು ಅವನಿಗೆ ಅರ್ಥವಾಗದಂತೆ ಇದ್ದವು, ಒಮ್ಮೆ ತನ್ನ ಪತ್ನಿ ಮಕ್ಕಳನ್ನು ನೆನೆದ, ಮನೆಯಲ್ಲಿರುವ ವಯಸ್ಸಾದ ತಂದೆ ನೆನಪಿಗೆ ಬಂದರು, ಅದೇಕೊ ಅವನಿಗೆ ಚಿಕ್ಕ ವಯಸಿನಲ್ಲಿ ಹೋಗುತ್ತಿದ್ದ ತನ್ನ ತಂದೆಯವರ ಊರು ಕುಣಿಗಲ್ ನ ಸಿ.ಎಸ್.ಪುರ ಹತ್ತಿರದ ಸೀಗೆಹಳ್ಳಿಯ ಮನೆಗಳು, ರಸ್ತೆಗಳು ಹೊಲಗದ್ದೆಗಳು, ಬಾಲ್ಯದ ಸ್ನೇಹಿತರು ನೆನಪಿಗೆ ಬರುತ್ತಿರುವಂತೆ ನಿದಾನವಾಗಿ ಪ್ರಜ್ಞೆ ತಪ್ಪಿಹೋಗಿ ಮನಸು ದೇಹಗಳು ನಿಶ್ಚಲವಾಯಿತು..
..................
ಪೋಲಿಸ್ ಇನ್ಸ್ಪೆಕ್ಟರ್ ನಾಯಕ್ ಮೋಟರ್ ಬೈಕನ್ನು ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿನ ಪಕ್ಕ ನಿಲ್ಲಿಸಿದ. ಹಿಂದೆ ಇದ್ದ ಪೇದೆ ಮಂಜುನಾಥ ಕೆಳಗೆ ಇಳಿದ. ನಾಯಕ್ ಗೆ ಕಂಟ್ರೋಲ್ ರೂಮಿನಿಂದ ಕಾಲ್ ಬಂದಿತ್ತು, ಹೋಟೆಲ್ ಅಟ್ರಿಯ ಬಳಿ ಯಾವುದೊ ಗಲಾಟೆಯಾಗಿದೆ ರಸ್ತೆಯಲ್ಲಿ ಯಾರೊ ಬಿದ್ದಿದ್ದಾರೆ ಎಂದು. ಹಾಗೆ ಅವನು ಅಲ್ಲಿ ಬಂದಿದ್ದ. ನಾಯಕ್ ಕಾರಿನ ಒಳಗೆಲ್ಲ ನೋಡುತ್ತಿರುವಂತೆ, ಅವನು ನುಡಿದ,
"ಥತ್ತೇರಿ, ಇದೇ ಆಗೋಯ್ತು, ಬರಿ ಕತ್ತಿ, ಮಚ್ಚು, ಕೊಲೆ, ಹೆಣ ಅಂತ ನಮ್ಮ ಜೀವನ. ನೋಡು ಮೊದಲು ಕಂಟ್ರೋಲ್ ರೂಮಿಗೆ ಕಾಂಟಾಕ್ಟ್ ಮಾಡಿ, ವಿಷಯ ತಿಳಿಸಿ, ನಂತರ ಈ ಬಾಡಿ ಎತ್ತಿ ಪೋಸ್ಟ್ ಮಾರ್ಟಮ್ಗೆ ಕಳಿಸಬೇಕು, ಮೊದಲು ಸ್ಥಳದ ಪಂಚನಾಮೆ, ಇನ್ನು ಎಲ್ಲ ಶುರು"
ನಾಯಕ್ ಜೋರಾಗಿಯೆ ವಟಗುಟ್ಟುತ್ತಿದ್ದ,
ಕಾನ್ಸ್ ಟೇಬಲ್ ಮಂಜುನಾಥ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಶವದತ್ತ ನಡೆದುಹೋದವನು ಪಕ್ಕದಲ್ಲಿ ಕುಳಿತ. ಅವನಿಗೆ ಅನುಮಾನ ಬಂದಿತು, ಬಗ್ಗಿ ನೋಡಿದವನು ಕೂಗಿದ
"ಸಾರ್ ಇದು ಪೋಸ್ಟ್ ಮಾರ್ಟಮ್ ಕೇಸಲ್ಲ, ಇವನು ಸತ್ತಿಲ್ಲ ಇನ್ನು ಬದುಕಿದ್ದಾನೆ" ಎಂದು.
ತಕ್ಷಣ ನಾಯಕ್ ಹತ್ತಿರ ಹೋಗಿ ಗಮನಿಸಿದ, ನಿಜ ಕೆಳಗೆ ಬಿದ್ದಿರುವ ವ್ಯಕ್ತಿ ಸತ್ತಿಲ್ಲ ಬದುಕಿದ್ದಾನೆ, ತನ್ನ ಮೊಬೈಲ್ ಎತ್ತಿ ಕಂಟ್ರೋಲ್ ರೂಮನ್ನು ಸಂಪರ್ಕಿಸಿ, ತಕ್ಷಣ ಆಂಬುಲೆನ್ಸ್ ಗೆ ಏರ್ಪಾಡು ಮಾಡುವಂತೆ ತಿಳಿಸಿ. ಸುತ್ತಲು ಗಮನಿಸಿದ. ಇವರಿಬ್ಬರು ಇರುವದನ್ನು ಕಂಡು ಆಗಲೆ ಸುತ್ತಲು ಜನ ಸೇರಲಾರಂಬಿಸಿದರು. ಅವರು ಹತ್ತಿರ ಬರದಂತೆ ನೋಡಬೇಕು ಯಾವುದಾದರು ಸಾಕ್ಷಿಗಳಿದ್ದರೆ ನಾಶವಾಗುವ ಸಾದ್ಯತೆ ಇರುತ್ತದೆ. ನಾಯಕ್ ಸಾರ್ವಜನಿಕರನ್ನು ಕುರಿತು ಹೇಳಿದ
"ನಿಮ್ಮಲ್ಲಿ ಯಾರಾದರು ಈ ಕೊಲೆ ಪ್ರಯತ್ನ ನೋಡಿದವರಿದ್ದರೆ, ಹೇಳಿ, ಉಳಿದವರು ದೂರ ನಿಲ್ಲಿ"
ತಕ್ಷಣ ಎಲ್ಲ ದೂರ ಹೋಗಿ ನಿಂತರು.
ಸುತ್ತಲು ಗಮನಿಸಿದಂತೆ ಕಾರಿನ ಹಿಂದಿನ ಚಕ್ರದ ಹತ್ತಿರ ಯಾವುದೋ ಮೊಬೈಲ್ ಬಿದ್ದಿರುವಂತೆ ಕಾಣಿಸಿತು. ಮಂಜುನಾಥ ಬಗ್ಗಿ ತೆಗೆದುಕೊಂಡ. ನಾಯಕ್ ಹೇಳಿದ
"ಅದನ್ನೇಕೆ ಮುಟ್ಟಿದೆ, ಅದು ಕೊಲೆಗಾರನಿಗೆ ಸೇರಿರಬಹುದು, ಕೆಳಗೆ ಬೀಳಿಸಿದ್ದರೆ"
"ಹಾಗಲ್ಲ ಸಾರ್ ನನಗೇಕೊ ಇದು ಇಲ್ಲಿ ಬಿದ್ದಿರುವ ವ್ಯಕ್ತಿಯದೆ ಅನ್ನಿಸಿತು, ಇವನು ಯಾರು ಅಂತ ತಿಳಿಯಬಹುದು ಅದಕ್ಕಾಗಿ ನೋಡಿದೆ" ಎನ್ನುತ್ತ ಮೊಬೈಲ್ ಅನ್ನು ಬಟ್ಟೆಯಿಂದ ಒರೆಸಿ ಗಮನಿಸಿದ.
ಅವನು ಅದನ್ನು ಗಮನಿಸುತ್ತಿರುವಂತೆ ಜನರ ಗುಂಪಿನಿಂದ, ಜೀನ್ಸ್ ಪ್ಯಾಂಟ್, ಹಾಗು ಬಿಳಿ ಶರ್ಟ್ ದರಿಸಿ, ಸ್ವಲ್ಪ ಗಡ್ಡ ಇರುವಾಗ ಹತ್ತಿರ ಬಂದ. ಅವನು ಬಂದದ್ದನ್ನು ಕಂಡ, ಮಂಜುನಾಥ ನುಡಿದ
"ನೀನಾಗಲೆ ಹಾಜರ್, ಅದೆಲ್ಲಿರುತ್ತೀರೊ ನಕ್ಷತ್ರಿಕರು ನೀವು, ಪೋಲಿಸರಿಗಿಂತ ಮುಂದೆಯೆ ಬಂದು ನಿಂತಿರುತ್ತೀರಿ" ಜಬರ್ದಸ್ತ್ ಮಾಡಿದ.
ಆ ವ್ಯಕ್ತಿಯ ಹೆಸರು ವೀರೇಶ ಎಂದು, ಅವನು ಬೆಂಗಳೂರಿನ ಅವಿನ್ಯೂ ರಸ್ತೆಯ ಸಂದಿಯಿಂದ ಸಂಜೆಯಲ್ಲಿ ಮಾತ್ರ ಪ್ರಕಟವಾಗುವ ಪತ್ರಿಕೆಯೊಂದರ ರಿಪೋರ್ಟರ್. ಆದರೆ ಅವನಿಗೆ ಸುದ್ದಿಯನ್ನು ಆ ಪತ್ರಿಕೆಗೆ ಕೊಡಬೇಕು ಎಂಬ ಯಾವ ಕಟ್ಟುಪಾಡು ಇಲ್ಲ. ಕೆಲವೊಮ್ಮೆ ಅವನು ತನ್ನ ಪತ್ರಿಕೆಗೆ ಕೊಡುವದಕ್ಕಿಂತ ಸುದ್ದಿಯನ್ನು ಮೊದಲೆ, T.V.-9 ಮುಂತಾದ ಮಾಧ್ಯಮಗಳಿಗೆ, ಅಥವ ಕೆಲವೊಮ್ಮೆ ದೊಡ್ಡ ಅಂಗ್ಲ ಪತ್ರಿಕೆಯ ರಿಪೋರ್ಟರ್ ಗಳಿಗೆ ಸುದ್ದಿಯನ್ನು ತಲುಪಿಸಿಬಿಡುತ್ತಾನೆ. ಅದಕ್ಕೆ ಕಾರಣ ಅವರು ಕೊಡುವ ಅಲ್ಪಸ್ವಲ್ಪ ಹಣ, ಒಮ್ಮೊಮ್ಮೆ ಅವರ ಜೊತೆ ಸೇರಿದಾಗ ಸಿಗುವ ಪುಕ್ಕಟೆ ತಿಂಡಿ, ಊಟ, ಪಾನೀಯಗಳು. ಯಾವ ಸಿದ್ದಾಂತ ತತ್ವಗಳಿಗೂ ದೂರವಾದ ಅವನು ಸುದ್ದಿಯನ್ನು ಹಾಗೆ ಹೇಳುವದಕ್ಕಿಂತ ಅದರಲ್ಲಿ ಏನಾದರು ಉಪ್ಪುಕಾರವಿದ್ದರೆ ಮಾತ್ರ ಲಾಭವೆಂದೆ ಅರಿತ್ತಿದ್ದವನು, ಹಾಗಾಗಿ ಅವನು ಕೊಡುವ ಸುದ್ದಿಗಳಲ್ಲಿ ಅರ್ದಭಾಗ ಸುಳ್ಳಿರುತ್ತದೆ ಎಂದು ಎಲ್ಲರಿಗು ಗೊತ್ತು,ಆದರು ಅದನ್ನು ಪ್ರಕಟಿಸುತ್ತಿದ್ದರು, ಕಾರಣ ಸರ್ಕ್ಯುಲೇಶನ್, ಮತ್ತು ಟಿ ಅರ್ ಪಿ ಲೆಕ್ಕಚಾರಗಳು.
ಮೊಬೈಲ್ ಹಿಡಿದ ಮಂಜುನಾಥ , ಇನ್ಸ್ಪೆಕ್ಟರ್ ನಾಯಕ್ ಗೆ ಹೇಳಿದ
'ಸಾರ್ , ಕೇವಲ ಹದಿನೈದು ನಿಮಿಷ ಮುಂಚೆ ಇದರಿಂದ ಎರಡು ಮೂರು ಕಾಲ್ ಹೋಗಿದ್ದೆ ಅನ್ನಿಸುತ್ತೆ. ಕಡೆಯ ಕಾಲ್ ಯಾವುದೊ ಹುಡುಗಿಗೆ, ಸಾರ್ ಎಂತದೊ ಜ್ಯೋತಿ ಎಂದಿದೆ'
ವೀರೇಶನ ಕಿವಿ 'ಹುಡುಗಿ' ಎನ್ನುತ್ತಲೆ ಚುರುಕಾಯಿತು.
ನಾಯಕ್ ಹತ್ತಿರ ಬಂದವನು ಹೇಳಿದ
'ಕಡೆಯಲ್ಲಿ ಕಾಲ್ ಹೋಗಿದೆಯಲ್ಲ ಆ ನಂಬರ್ಗೆ ನೀನು ಪುನಃ ಕಾಲ್ ಮಾಡು, ಅಗ ಈ ಕಾರು, ಮತ್ತು ಬಿದ್ದಿರುವ ದೇಹ ಯಾರದೆಂದು ತಿಳಿಯಬಹುದು, ಬೇಡ ಕೊಡಿಲ್ಲಿ ನಾನೆ ಮಾಡುತ್ತೇನೆ '
ಎನ್ನುತ್ತ ಮಂಜುನಾಥನಿಂದ ಮೊಬೈಲ್ ಪಡೆದ. ನಾಯಕ್ ಪೋನ್ ಕಾಲ್ ಮಾಡುವಾಗಲೆ ಮಂಜುನಾಥ ಕುಳಿತು, ದೇಹದ ಸರ್ವೆ ನಡೆಸಿದ, ಜೇಬಿನಲ್ಲಿ ಡ್ರೈವಿಂಗ್ ಲೈಸನ್ಸ್ ಅಥವ ಯಾವುದಾದರು ಹೆಸರಿರುವ ಕಾರ್ಡ್ ಸಿಕ್ಕರೆ ಗುರುತಿಸಲು ಅನುಕೂಲ ಎಂದು. ಅವನು ಕೆಳಗೆ ಬಿದ್ದಿದ್ದ ವ್ಯಕ್ತಿಯ ಜೇಬನ್ನು ತಡಕುವಾಗ ದೂರದಲ್ಲಿ ನಿಂತ ಜನರ ಮದ್ಯದಲ್ಲಿ ಒಬ್ಬ ಅಜ್ಞಾತ ವ್ಯಕ್ತಿ ಬುದ್ದಿವಂತನಂತೆ ತನ್ನ ಪಕ್ಕದಲ್ಲಿದ್ದವನಿಗೆ ಹೇಳಿದ
"ನೋಡು ಈ ಪೋಲಿಸರು, ಸತ್ತ ವ್ಯಕ್ತಿಯ ಜೇಬನ್ನು ಬಿಡಲ್ಲ ಅಲ್ಲಿ ಏನಾದರು ಹಣ ಒಡವೆ ಇದ್ದರೆ ಇವರು ಹೊಡೆದು ಬಿಡುತ್ತಾರೆ, ಪಕ್ಕಾ ಕಳ್ಳರು ಅಂದರೆ ಇವರೆ" , ಆ ಮಾತು ಕೇಳಿದ ವ್ಯಕ್ತಿ ತಲೆ ಆಡಿಸಿದ ನಿಜ ಅನ್ನುವಂತೆ.
ನಾಯಕ್ ಮೊಬೈಲ್ ನಿಂದ ಕಡೆಯ ಕಾಲ್ ಹೋಗಿದ್ದ ಜ್ಯೋತಿ ಎಂಬಾಕೆಗೆ ಕಾಲ್ ಮಾಡಿದ, ಆ ಕಡೆಯಿಂದ
"ಸಾರ್... ಹೇಳಿ, ಆಗಲೆ ನಿಮ್ಮಕಾಲ್ ಅರ್ಧಕ್ಕೆ ಕಟ್ ಆಗಿ ಹೋಯ್ತು ಏಕೆ" ಎನ್ನುವ ದ್ವನಿ.
ನಾಯಕ್ ಕೇಳಿದ " ನೋಡಿ ಮೇಡಮ್, ನಾನು ಹೈಗ್ರೌಂಡ್ ಪೋಲಿಸ್ ಇನ್ಸ್ಪೆಕ್ಟರ್ ನಾಯಕ್ ಮಾತನಾಡೋದು, ಇಲ್ಲಿ ಹೋಟೆಲ್ ಏಟ್ರಿಯ ಬಳಿ, ಇದು ಯಾರ ಮೊಬೈಲ್ ತಿಳಿಸುತ್ತೀರ"
ಆ ಕಡೆಯಿಂದ ಗಾಭರಿಯ ದ್ವನಿ
"ಹೌದಾ, ಸಾರ್, ನೀವು ಮಾತನಾಡುತ್ತಿರುವ ಮೊಬೈಲ್ ನಮ್ಮ ಬಾಸ್ ಮಹಾಂತೇಶ್ ಸಾರ್ ಅವರದು, ಈಗ ಹದಿನೈದು ನಿಮಿಷ ಮುಂಚೆ ಕಾಲ್ ಮಾಡಿದ್ದರು, ಆದರೆ ಏನು ಮಾತನಾಡಲೆ ಇಲ್ಲ, ದೊಡ್ಡ ಶಬ್ದ ಕೇಳಿಸಿತು ನಂತರ ಕಾಲ್ ಕಟ್ ಆಯಿತು, ಅಲ್ಲಿ ಏನಾಗಿದೆ ಸಾರ್ ಆಕ್ಸಿಡೆಂಟಾ ಏನು"
" ಆಕ್ಸಿಡೆಂಟ ಅಲ್ಲ ಮೇಡಮ್ , ನೀವು ಯಾರು ಮಾತನಾಡುತ್ತಿರುವುದು ತಿಳಿಸಿ, ನೋಡಿ ಇಲ್ಲಿರುವ ಕಾರಿನ ನಂಬರ್ KA 01 MC1724 ಇದು ನಿಮಗೆ ತಿಳಿದಿರುವುದಾ? " ನಾಯಕ್ ಮತ್ತೆ ಕನ್ ಫರ್ ಮೇಶನ್ಗಾಗಿ ಕೇಳಿದ
"1724 ನಂಬರಾ? ಅದು ನಮ್ಮ ಬಾಸ್ ಅವರದೆ ಕಾರ್ ಹೌದು, ಅವರೆಲ್ಲಿದ್ದಾರೆ ಅಲ್ಲಿಯೆ ಇದ್ದಾರ ವಿಶಯ ತಿಳಿಸಿ" ಆಕೆ ಅಂದಳು ಗಾಬರಿಯಿಂದ
"ಹೌದು ಇಲ್ಲಿಯೆ ಇದ್ದಾರೆ , ಆದರೆ ಮಾತನಾಡುವ ಪರಿಸ್ಥಿಥಿಯಲ್ಲಿ ಇಲ್ಲ, ನಿಮಗೆ ಅವರ ಮನೆಯ ನಂಬರ್ ಕೊಡಲಿಕ್ಕಾಗುತ್ತ" ಕೇಳಿದ ನಾಯಕ್,
"ಸರಿ ತೆಗೆದುಕೊಳ್ಳಿ ಮನೆಯ ಲ್ಯಾಂಡ್ ಲೈನ್ ನಂಬರ್ '೨೬೬೧೧೭೪೫' , ಮನೆಯಲ್ಲಿ ಸಾರ್ ಅವರ ಪತ್ನಿ, ಮತ್ತು ಸಾರ್ ತಂದೆ ಇರುತ್ತಾರೆ ಅನ್ನಿಸುತ್ತೆ, ನಾನು ಕಾಲ್ ಮಾಡಿ ನೋಡ್ತೀನಿ, ಏನು ಕಾರ್ ಆಕ್ಸಿಡೆಂಟ್ ಆಗಿದೆಯ ,ನಾನು ಅಲ್ಲಿಗೆ ಬರಬೇಕ?" ಎಂದಳು.
"ನೀವು ಬರುವುದು ಬೇಡ ಬಿಡಿ, ನಾನು ಮನೆಗೆ ಮಾತನಾಡಿ ನೋಡ್ತೀನಿ, ಆಮೇಲೆ ಬೇಕಾದರೆ ನಿಮ್ಮನ್ನು ಪುನಃ ಕರೀತೇನೆ" ಎನ್ನುತ್ತ ನಾಯಕ್ ಮೊಬೈಲ್ ಕಾಲ್ ಕಟ್ ಮಾಡಿದ,
ಆ ವೇಳೆಗೆ ಕೆಳಗೆ ಕುಳಿತಿದ್ದ ಮಂಜುನಾಥ ವ್ಯಕ್ತಿಯ ಜೇಬಿನಿಂದ ಪರ್ಸ್ ತೆಗೆದು ಅದರಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಮತ್ತು ಅದರಲ್ಲಿನ ಪೋಟೊ ನೋಡಿ, ಕೆಳಗೆ ಬಿದ್ದಿರುವಾತ ಮಹಾಂತೇಶ್ , ಕೆ ಎ ಎಸ್ ಅಧಿಕಾರಿ ಎಂದು ಗ್ಯಾರಂಟಿ ಮಾಡಿಕೊಂಡಿದ್ದ.
ನಾಯಕ್ ಪುನಃ ಮಹಾಂತೇಶ್ ಮನೆಗೆ ಪೋನ್ ಮಾಡಿದ , ಯಾರೊ ಗಂಡಸರು ಪೋನ್ ತೆಗೆದರು,
"ಹಲೋ ಇದು ನಾಯಕ್ , ಹೈಗ್ರೌಂಡ್ ಪೋಲಿಸ್, ಇಲ್ಲಿ ಏಟ್ರಿಯ ಹೋಟೆಲ್ ಹತ್ತಿರ ಮಹಾಂತೇಶ್ ಮೇಲೆ ಹಲ್ಲೆಯಾಗಿದೆ, ಅವರನ್ನು ಅಸ್ಪತ್ರೆಗೆ ಸಾಗಿಸುತ್ತಿದ್ದೇವೆ, ನೀವು ಯಾರು ಮಾತನಾಡೋದು" ಎಂದರು.
ಆ ಕಡೆಯಿಂದ ಮಹಂತೇಶ್ ತಂದೆ, ಸಾಕಷ್ಟು ಗಾಭರಿಯಾಗಿದ್ದರು, ತಾವು ಎಲ್ಲರು ಈಗ ಬರುವದಾಗಿ ತಿಳಿಸಿದರು.
ಅಷ್ಟರಲ್ಲಿ, ಅಲ್ಲಿಗೆ ಅಂಬ್ಯುಲೆನ್ಸ್ ಶಬ್ದ ಮಾಡುತ್ತ ಬಂದು ನಿಂತಿತು, ಹಿಂದೆಯೆ ಪೋಲಿಸ್ ವ್ಯಾನ್ ಅದರಲ್ಲಿ ಸೆಂಟ್ರಲ್ ವಿಭಾಗದ Acp ಮತ್ತು ಮತ್ತೆ ಇಬ್ಬರು ಇನ್ಸಪೆಕ್ಟರ್ . ಈಗ ನಾಯಕ್ ಚುರುಕುಗೊಂಡರು, ಸಲ್ಯೂಟ್ ಜೊತೆ ಹಿರಿಯ ಅಧಿಕಾರಿಯನ್ನು ಸ್ವಾಗತಿಸಿದರು.
"ಏನಾಗಿದೆ ನಾಯಕ್ ಏನು ಪ್ರೊಸೀಡಿಂಗ್ಸ್ , ಏನಾದರು ಕ್ಲೂಗಳಿವೆಯ" ಎನ್ನುತ್ತ ಹತ್ತಿರ ಬಂದರು,
"ಸಾರ್, ದಾಂದಲೆಗೆ ಒಳಗಾದವರು, ಮಹಂತೇಶ್ ಅನ್ನುವರು ಸಾರ್, senior KAS, ಕೋಅಪರೇಟಿಂಗ್ ಆಡಿಟ್ ನ deputy director, ದಾಳಿ ಮಾಡಿದವರು ಯಾರು ಎಂದು ಇನ್ನು ತಿಳಿದಿಲ್ಲ, ಕ್ಲೂಗಳನ್ನು ನೊಡ್ತಾ ಇದ್ದೇನೆ ಸಾರ್, ಅಂಬ್ಯುಲೆನ್ಸ್ ಗೆ ಅರೇಂಜ್ ಮಾಡಿದೆ ಈಗ ಶಿಫ್ಟ್ ಮಾಡಿಸ್ತೇನೆ, ಅವರ ಮನೆಯವರಿಗೆ ಕಾಂಟಾಕ್ಟ್ ಮಾಡಿದೆ, ಅವರು ಬರುತ್ತಿದ್ದಾರೆ",
ಮಹಾಂತೇಶ್ ಮಲಗಿರುವ ಸ್ಥಳವನ್ನು ಗುರುತು ಮಾಡಿಕೊಂಡು, ಕೆಲವು ಫೋಟೊಗಳನ್ನು ತೆಗೆದುಕೊಂಡು, ಅವರನ್ನು ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಿದರು. ಅಲ್ಲಿದ್ದ ಕಾನ್ಸ್ ಟೇಬಲ್ ಗಳಿಗೆ ಯಾರು ಹತ್ತಿರ ಬರದಂತೆ ಕಾಯಬೇಕೆಂದು ತಿಳಿಸಿ, ಹಿರಿಯ ಅದಿಕಾರಿಗಳಿಗೆ ತಿಳಿಸಿ, ನಾಯಕ್ ಅಂಬ್ಯುಲೆನ್ಸ್ ನ ಹಿಂದೆ ಹೊರಟರು, ಜೊತೆಗೆ ಸ್ವಲ್ಪ ಕಾಲದಲ್ಲಿ ಹಿರಿಯ ಅಧಿಕಾರಿಗಳು ಸಹ ಅಲ್ಲಿಂದ ಅಸ್ಪತ್ರೆಯತ್ತ ಪ್ರಯಾಣಬೆಳೆಸಿದರು. ಈಗ ಸ್ಥಳದಲ್ಲಿ ಬರಿ ಕಾನ್ಸ್ ಟೇಬಲ್ ಗಳು ಮತ್ತು ಸಬ್ ಇನ್ಸ್ಪೆಕ್ಟರ್ ಗಳು, ಟೀವಿ ಮಾಧ್ಯಮದವರು ಹಾಗು ಪತ್ರಿಕೆಗಳ ಪ್ರತಿನಿದಿಗಳು ಆಗಲೆ ಸ್ಥಳದಲ್ಲಿ ಸೇರಿ ಕಾನ್ಸ್ ಟೇಬಲ್ ಗಳಿಂದ ಎಲ್ಲ ವಿಷಯ ಸಂಗ್ರಹಿಸಲು ಪ್ರಯತ್ನಪಡುತ್ತಿದ್ದರು.
ವೀರೇಶ ಆಗಲೆ ತನ್ನ ರಿಪೋರ್ಟ್ ಕೆಲವು ಮಾದ್ಯಮಗಳಿಗೆ ತಲುಪಿಸಿಯಾಗಿತ್ತು, ಟೀವಿಗಳು ಆಗಲೆ ಹೆಡ್ ಲೈನ್ಸ್ ಕೊಡುತ್ತಿದ್ದವು,
'ಬೆಂಗಳೂರಿನ ಏಟ್ರಿಯ ಹೋಟೆಲ್ ಹತ್ತಿರ , ಸರ್ಕಾರದ ಹಿರಿಯ ಕೆ ಎ ಎಸ್ ಅಧಿಕಾರಿಯ ಮೇಲೆ ದಾಳಿ" , 'ಕೆ ಎ ಎಸ್ ಅಧಿಕಾರಿ ಜೀವ ಸಾವು ಬದುಕಿನ ನಡುವೆ" , 'ಕೊಲೆ ಪ್ರಯತ್ನದ ಹಿಂದೆ ಭೂಮಾಫಿಯ ಕೈವಾಡ ಇರುವ ಶಂಕೆ' , 'ಮಹಾಂತೇಶ್ ಸೊಸೈಟಿಗಳ ಅವ್ಯವಹಾರಗಳ ವಿಚಾರಣೆ ನಡೆಸಿದ್ದರು"
ಮತ್ತೆ ಕೆಲವು ಮಾಧ್ಯಮಗಳು ಪ್ರಕಟಿಸುತ್ತಿದ್ದವು
"ಕೊಲೆಯ ಹಿಂದೆ ಹುಡುಗಿಯೊಬ್ಬಳ ಕೈವಾಡ?" , "ಮಹಂತೇಶ್ ಮೊಬೈಲಿನಲ್ಲಿ ಹುಡುಗಿಯ ಚಿತ್ರ ಇತ್ತೆ?"
ಹತ್ತು ಹಲವು ವಿಚಿತ್ರ ಸುದ್ದಿಗಳ ಮದ್ಯೆ ಮಹಾಂತೇಶ್ ಬೆಂಗಳೂರಿನ ಮಲ್ಲಿಗೆ ಅಸ್ಪತ್ರೆಯಲ್ಲಿ. ಸಾವು ನೋವುಗಳ ನಡುವೆ ಹೋರಾಟ ನಡೆಸಿದ್ದರು.
ಬಾಗ - ೨
ನಾಯಕ್ ಬೆಂಗಳೂರು ಪೋಲಿಸ್ ಸೆಂಟ್ರಲ್ ಡಿವಿಷನ್ ಎಸಿಪಿ ಕೆಳಗೆ ಕೆಲಸ ಮಾಡುತ್ತಿದ್ದವನು, ಹೈಗ್ರೌಂಡ್ಸ್ ಪೋಲಿಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ , ಕೆಲಸದಲ್ಲಿ ಅವನಿಗೆ ಅತೀವ ಆಸಕ್ತಿ ಆದರೆ ಅನುಭವ ಸ್ವಲ್ಪ ಅಷ್ಟಕಷ್ಟೆ. ಅವನ ಜೊತೆ ಸದಾ ಕಾನ್ಸ್ಟೇಬಲ್ ಮಂಜುನಾಥ . ಮಹಾಂತೇಶನ ಕೇಸಿನಲ್ಲಿ ಅವನಿಗೆ ಅಪಾರ ಆಸಕ್ತಿ ಮೂಡಿತ್ತು. . ಅವನು ಕೇಳಿರುವಂತೆ ಮಹಾಂತೇಶ ಪ್ರಾಮಾಣಿಕ ಅಧಿಕಾರಿ, ಇಂತವನಿಗೆ ತಾನು ಸಾದ್ಯವಾದಷ್ಟು ನ್ಯಾಯ ಒದಗಿಸಬೇಕು ಎಂದು ಮನದಲ್ಲಿ ತುಡಿತ. ಮೂರು ನಾಲಕ್ಕು ದಿನದಲ್ಲಿ ಅವನು ಸಾಕಷ್ಟು ವಿಷಯ ಸಂಗ್ರಹಿಸಿದ್ದ. ಮೊದಲಿಗೆ ಮಹಾಂತೇಶನ ಮೇಲೆ ನಡೆದ ಹಲ್ಲೆ ಹಾಗು ರಸ್ತೆಯಲ್ಲಿ ಬಿದ್ದಿರುವನೆಂದು ಪೋಲಿಸ್ ಗೆ ವಿಷಯ ತಿಳಿಸಿದ ವ್ಯಕ್ತಿ, ಮಹಾಂತೇಶ ರಸ್ತೆಯಲ್ಲಿ ಬಿದ್ದಿದ್ದ ಎದುರು ಗೇಟಿನಲ್ಲಿದ್ದ ಏಟ್ರಿಯ ಹೋಟೆಲಿನ ವಾಚ್ ಮನ್.
ನಾಯಕ್ ಮೋಟರ್ ಬೈಕ್ ನಲ್ಲಿ ಬಂದಿಳಿದಾಗಲೆ ವಾಚ್ ಮೆನ್ ಗೆ ಇವನು ಏಕೆ ಬಂದನೆಂದು ತಿಳಿದಿತ್ತು.
"ನೀನೆ ಏನಯ್ಯ ಮೊದಲು, ಅವನ್ನು ಕಾರ್ ಮೇಲೆ ಅಟ್ಯಾಕ್ ಆದದ್ದು ನೋಡಿದವನು" ಕೇಳಿದ ಸ್ವಲ್ಪ ಗತ್ತಿನಿಂದಲೆ
"ಇಲ್ಲ ಸಾರ್ ನಾನು ನೋಡಿದ್ದಲ್ಲ, ನಾನು ನೋಡುವ ಹೊತ್ತಿಗಾಗಲೆ , ಅಲ್ಲಿ ಯಾರು ಇರಲಿಲ್ಲ, ಕಾರು ಪಕ್ಕದ ಮರಕ್ಕೆ ಡ್ಯಾಶ್ ಹೊಡೆದು ನಿಂತಿತ್ತು, ಮತ್ತು ಅವರು ರಸ್ತೆಯಲ್ಲಿ ಬಿದ್ದಿದ್ದರು, ಸುತ್ತಲು ರಕ್ತವಿತ್ತು, ಹಾಗಾಗಿ ಪೋಲಿಸ್ಗೆ ತಿಳಿಸಿದೆ"
ತನ್ನ ಅಪ್ಪಟ ತಮಿಳುಗನ್ನಡದಲ್ಲಿ ಹೇಳಿದ ವಾಚ್ ಮನ್
"ಮತ್ತೆ ನೀನು ಏನು ನೋಡಲಿಲ್ಲ ಅನ್ನುವ ಹಾಗಿದ್ದರೆ, ಅದು ಅಪಘಾತ ಇರಬಹುದಲ್ಲ, ಯಾರೊ ಅಟ್ಯಾಕ್ ಮಾಡಿದ್ದಾರೆ ಅಂತ ಸುಳ್ಳು ಏಕೆ ತಿಳಿಸಿದೆ?"
"ಹಾಗಲ್ಲ ಸಾರ್, ಅವತ್ತು ಹೋಟೆಲ್ ಗೆ ಆ ಕಡೆಯಿಂದ ಬಂದವರೊಬ್ಬರು, ಅಲ್ಲಿ ಯಾರೊ ಕಾರಿನಲ್ಲಿದ್ದವರನ್ನು ಹೊಡೆಯುತ್ತಿದ್ದಾರೆ ಅಂತ ತಿಳಿಸಿ, ಒಳಗೆ ಹೋದರು, ನಾನು ಆಮೇಲೆ ಹೊರಗೆ ಬಂದು ನೋಡಿದೆ, ಅಲ್ಲಿ ಯಾರು ಇರಲಿಲ್ಲ, ಆದರೆ ಅವರು ರಸ್ತೆಯ ಮೇಲೆ ಬಿದ್ದಿದ್ದರು"
" ಕಾರಿನಲ್ಲಿದ್ದವರನ್ನು ಹೊಡೆಯುತ್ತಿದ್ದಾರೆ ಅಂತ ನಿನಗೆ ತಿಳಿಸಿದವರ ಹೆಸರು ಗೊತ್ತ, ಹೋಗಲಿ ಕಾರಿನಲ್ಲಿದ್ದವರು ಯಾರು ಅಂತ ನಿನಗೆ ತಿಳಿದಿತ್ತಾ?"
"ಇಲ್ಲ ಸಾರ ಹೋಟೆಲ್ ನಲ್ಲಿ ಸಂಜೆ ಯಾವುದೊ ಪಾರ್ಟಿ ಇತ್ತು, ಆ ಪಾರ್ಟಿಗೆ ಬಂದಿದ್ದವರು, ಒಳಗೆ ಹೋಗುವಾಗ ನನ್ನ ಕೈಲಿ ಹೊರಗೆ ,ಏನೊ ಗಲಾಟೆ ನಡೆಯುತ್ತಿದೆ ಅಂತ ತಿಳಿಸಿ ಹೋದರು, ನಾನು ಹೊರಗೆ ಬಂದು ನೋಡಿದೆ ಅಷ್ಟೆ, ಅಷ್ಟೆ ನನಗೆ ಗಲಾಟೆ ಬಗ್ಗೆ ತಿಳಿದಿಲ್ಲ, ಮತ್ತು ನಾನು ಹೊರಗೆಲ್ಲ ನೋಡಿ ಬರುವದರೊಳಗೆ ಇಲ್ಲಿ ಪಾರ್ಟಿಯು ಮುಗಿದಿತ್ತು ಎಲ್ಲರು ಹೊರಟುಹೋಗಿದ್ದರು"
ಈ ವಾಚ್ ಮನ್ ನಿಂದ ಹೆಚ್ಚಿಗೇನು ತಿಳಿಯುವಂತಿಲ್ಲ ಅಂದುಕೊಂಡ ನಾಯಕ್ ಸುತ್ತಲು ಕಣ್ಣಾಡಿಸಿ ಹೊರಟ. ಮಹಾಂತೇಶನ ಮನೆಗೆ ಇನ್ನೊಮ್ಮೆ ಹೋಗೋಣವೆಂದು ಚಾಮರಾಜಪೇಟೆ ಕಡೆ ಹೊರಟ, ನಿನ್ನೆ ಹೋಗಿದ್ದಾಗ, ಯಾರು ಸಿಕ್ಕಿರಲಿಲ್ಲ ಎಲ್ಲರು ಆಸ್ಪತ್ರೆಯಲ್ಲಿ ಸೇರಿದ್ದರು, ಅಲ್ಲಿ ಮಲ್ಲಿಗೆ ಆಸ್ಪತ್ರೆಯಲ್ಲಿ ಮಹಾಂತೇಶನ ಬಗ್ಗೆ ಕೇಳೋಣವೆಂದುಕೊಂಡರೆ ಸುತ್ತಲು ಸದಾ ಮಾದ್ಯಮದವರ ಸರ್ಪಗಾವಲು, ಅಲ್ಲದೆ ಮನೆಯವರೆಲ್ಲ ಇನ್ನು ಶಾಕ್ ನಲ್ಲಿದ್ದರು. ಏನಾಗಲಿ ಮಹಾಂತೇಶನಿಗೆ ಮತ್ತೆ ಪ್ರಜ್ಞೆ ಬರುವವರೆಗು ಹೆಚ್ಚಿಗೆ ವಿಷಯ ತಿಳಿಯುವುದು ಕಷ್ಟ, ಒಮ್ಮೆ ಅವನಿಗೆ ನೆನಪು ಬಂದಿತ್ತೆಂದರೆ, ಯಾರು ರಸ್ತೆಯಲ್ಲಿ ಆಕ್ರಮಣ ನಡೆಸಿದರೆಂದು ತಿಳಿಯಬಹುದು.
ಈ ದಿನ ಮನೆಯಲ್ಲಿ ಅತಿ ಕಡಿಮೆ ಜನರಿದ್ದರು, ಮಹಾಂತೇಶನ ತಂದೆ ಮಧ್ಯಾಹ್ನದ ವಿಶ್ರಾಂತಿಗೆಂದು ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಇವನು ಬಂದಿದ್ದನ್ನು ಕಂಡು, ನಿಧಾನಕ್ಕೆ ಎದ್ದು ಬಂದರು, ಗೇಟಿನ ಹತ್ತಿರ ಬಂದು
"ಬನ್ನಿ ಇವರೆ, ನಿನ್ನೆ ನಿಮ್ಮನ್ನು ನೋಡಿದೆ ಮತ್ತೆ ಮಾತನಾಡಿಸಲು ಆಗಲೆ ಇಲ್ಲ, ಅಂದ ಹಾಗೆ ಎಲ್ಲಿಯವರೆಗು ಬಂದಿತು ನಿಮ್ಮ ತನಿಖೆ, ಏನಾದರು ಯಾರು ಹೊಡೆದರೆಂದು ತಿಳಿಯಿತೆ?"
"ಇಲ್ಲ ಸಾರ್ ನಾನು ಅದಕ್ಕಾಗಿಯೆ ನಿನ್ನೆಯಿಂದ ಸುತ್ತುತ್ತಿದ್ದೇನೆ, ನಿಮ್ಮಿಂದ ಏನಾದರು, ಮಹಾಂತೇಶ್ ರಿಗೆ ಸಂಭಂದಿಸಿದ ವಿಷಯ ತಿಳಿಯಬಹುದೆಂದು ಬಂದೆ"
"ಸರಿ ನನ್ನಿಂದ ಏನಾಗಬಹುದೆಂದು ತಿಳಿಸಿ, ನೋಡಿ ಈ ಇಳಿ ವಯಸ್ಸಿನಲ್ಲಿ ನನಗೆ ಬಂದಿರುವ ಈ ಸಂಕಟ ಯಾರ ಬಳಿ ಹೇಳಲಿ ಹೇಳಿ"
"ಸಮಾದಾನವಾಗಿರಿ ಎಲ್ಲ ಸರಿ ಹೋಗುತ್ತೆ, ಸರ್ಕಾರಿ ಕೆಲಸದ ಹಾದಿಯಲ್ಲಿ ಇಂತವೆಲ್ಲ ಇರುವುದೆ , ನಿಮಗೆ ತಿಳಿಯದ್ದೇನಿದೆ, ನನಗೆ ಮಹಾಂತೇಶರ , ಕೆಲವು ವಿಷಯಗಳು ಅವರ ಆಫೀಸಿನ ವಿಷಯಗಳು, ಅವರ ಹಣಕಾಸಿನ ಯಾವುದಾದರು ವ್ಯವಹಾರ, ಅಥವ ಸಂಬಂಧಿಗಳಲ್ಲಿ ಏನಾದರು ಜಗಳಗಳು, ಈ ರೀತಿ ಯಾವುದಾದರು ವಿಷಯವಿದ್ದರೆ ತಿಳಿಸಿ, ಹಿಂದೆ ಏನಾದರು ಈ ರೀತಿ ಅವರಮೇಲೆ ದಾಳಿ ನಡೆದಿತ್ತಾ?"
"ಈ ರೀತಿ ದಾಳಿಯ, ದಾಳಿ ಅಂತ ಅಲ್ಲ ಆದರೆ ಕೆಲವೊಮ್ಮೆ ಬೆದರಿಕೆಯ ಕರೆಗಳು ಬರುತ್ತಿದ್ದವು ಅಂತ ನನ್ನ ಬಳಿ ತಿಳಿಸಿದ್ದ, ಆದರೆ ಹೊರಗೆ ಅವನೆಲ್ಲು ಅದರ ಬಗ್ಗೆ ತಿಳಿಸುತ್ತಿರಲಿಲ್ಲ, ಈ ರೀತಿಯ ಕೆಲಸಗಳಲ್ಲಿ ಅಂತವೆಲ್ಲ ಸಾಮಾನ್ಯ ಎಂದು ಅವನ ಭಾವನೆ, ಬಹುಷ: ಈ ರೀತಿಯ ಅಲಕ್ಷ್ಯವೆ ಅವನನ್ನು ಈ ಸ್ಥಿಥಿಗೆ ತಂದು ಬಿಟ್ಟಿತು. ಈಗ ಪೂರ್ಣಿಮಾ ಹಾಗು ಮಕ್ಕಳ ಗತಿ ಏನೆಂದು ಭಯವಾಗುತ್ತಿದೆ" ಎಂದರು, ಪೂರ್ಣಿಮ ಎಂದರೆ ಮಹಾಂತೇಶನ ಪತ್ನಿ ಎಂದು ಅರ್ಥಮಾಡಿಕೊಂಡ ನಾಯಕ್.
"ಮತ್ತೆ ನೀವು ಹೇಳಿದಂತೆ ನಮ್ಮ ಸಂಸಾರದಲ್ಲಿ ಯಾವುದೆ ಗಲಾಟೆಗಳು, ಆಸ್ತಿಗಾಗಿ ಹೊಡೆದಾಟಗಳು ಇರಲಿಲ್ಲ, ಅವನ ವೃತ್ತಿಯ ಪೂರ್ಣ ಸ್ವರೂಪದ ಪರಿಚಯ ನನಗಿಲ್ಲ ಆದರೆ ಅಲ್ಲಿ ಸಾಕಷ್ಟು ಬೆದರಿಕೆಗಳು ಇದ್ದವು ಅಂತಲೆ ನಾನು ಭಾವಿಸುತ್ತೇನೆ"
ನಾಯಕ್ ಸ್ವಲ್ಪ ಸಂಕೋಚದಿಂದಲೆ ನುಡಿದ
"ತಪ್ಪು ತಿಳಿಯಬೇಡಿ, ಅವರಿಗೆ ಯಾವುದಾದರು, ಹೆಣ್ಣುಗಳ ಪರಿಚಯವಿತ್ತೆ, ಅಥವ ಹೊರಗಿನ ಪ್ರೇಮ ವ್ಯವಹಾರ ಈ ರೀತಿ, ಕೇಳುವುದು ನನ್ನ ಕರ್ತವ್ಯ, ಅಲ್ಲದೆ ಈ ಬಗ್ಗೆ ಮಾಧ್ಯಮಗಳಲ್ಲಿ , ಪತ್ರಿಕೆಗಳಲ್ಲಿ ಕೆಲವು ಊಹಾವರದಿಗಳನ್ನು ನೋಡಿದೆ"
ಆತ ಪಾಪ ಗಂಭೀರವಾದರು,
"ನೋಡಿ ಇವರೆ, ನಮ್ಮ ಮಹಾಂತೇಶ ಅಂತವನಲ್ಲ, ಸಂಸಾರದಲ್ಲಿ ಅವನಿಗೆ ಯಾವ ಸುಖಕ್ಕು ಕಡಿಮೆ ಇರಲಿಲ್ಲ, ಮುದ್ದಾದ ಇಬ್ಬರು ಹೆಣ್ಣುಮಕ್ಕಳು, ಹಾಗಿರುವಾಗ ಹೊರಗೆ ಆ ರೀತಿ ಅವನು ಏಕೆ ಹೋಗುತ್ತಾನೆ ಹೇಳಿ, ಅಲ್ಲದೆ ಅದು ಅವನ ಸಂಸ್ಕಾರವು ಆಗಿರಲಿಲ್ಲ, ಉತ್ತಮ ಮನೆತನದಿಂದ ಬಂದವನು ಅವನು, ನಿನ್ನೆ ರಾತ್ರಿಯು ನೋಡಿ ಅದ್ಯಾವನೊ ತಲೆಹರಟೆ ಪತ್ರಿಕೆಯವನು, ನನ್ನನ್ನು ಇದೆ ಪ್ರಶ್ನೆಯನು ಕೇಳಿದ, ನಾನು "ನನಗೆ ಅಥವ ನಮ್ಮ ಮನೆಯವರಿಗೆ ಅಂತವೆಲ್ಲ ಯಾವುದು ಗೊತ್ತಿಲ್ಲ ಅಂದೆ" ಆದರೆ, ಟೀವಿ ಗಳಲ್ಲಿ ,"ಮನೆಯವರಿಗೆ ಗೊತ್ತಿಲ್ಲದೆ, ಮಹಾಂತೇಶನಿಗೆ ಹೊರಗೆ ಹುಡುಗಿಯ ಸಹವಾಸವಿತ್ತು ಅಂತ ತೋರಿಸಿದ್ದಾರೆ, ಅಲ್ಲದೆ ಅವಳೆ ಅವನ ಸಾವಿನ ಹಿಂದೆ ಇದ್ದಾಳೆ ಅಂತ ಬರೆದಿದ್ದಾರೆ" ಈ ರೀತಿ ಎಲ್ಲ ಮಾಡುವುದು ಅವನಿಗೆ ಅನ್ಯಾಯ ಮಾಡಿದಂತೆ ಅಲ್ಲವಾ?" , ಸತ್ಯ ನಿಷ್ಟೆ ಪ್ರಮಾಣಿಕತೆ ಎಂದು ಇದ್ದವರಿಗೆ ನಮ್ಮ ಸಮಾಜ ಕೊಡುವ ಬೆಲೆ ಇದೇನಾ"
ಪುನಃ ನಾಯಕ್ ಅವರನ್ನು ಸಮಾದಾನ ಮಾಡುತ್ತ "ನೋಡಿ ನೀವು ಈಗಿನ ಪರಿಸ್ಥಿಥಿಯನ್ನು ಸಮಾಜವನ್ನು ತಿಳಿದವರು, ನಾವು ನಮ್ಮ ಹುಶಾರಿನಲ್ಲಿರಬೇಕಷ್ಟೆ, ನಿಮಗೆ ಮತ್ತೆ ಯಾವುದಾದರು ನನಗೆ ಅಪರಾದಿಗಳನ್ನು ಹಿಡಿಯಲು ಅನುಕೂಲವಾಗುವಂತ ವಿಷಯಗಳಿದ್ದರೆ ಕಾಲ್ ಮಾಡಿ ತಿಳಿಸಿ, ನನ್ನ ನಂಬರ್ ಬರೆದುಕೊಳ್ಳಿ, ಪುನಃ ಅಗತ್ಯ ಬಿದ್ದರೆ ನಿಮ್ಮನ್ನು ಬೇಟಿ ಮಾಡುವೆ, ನಿಮ್ಮ ಮಗ ಬೇಗ ಮನೆಗೆ ಬರಲೆಂದು ಹಾರೈಸುವೆ" ಎಂದು ಹೊರಬಂದ.
ನಾಯಕ್ ಗೆ ಹೆಚ್ಚಿನ ವಿಷಯಗಳೇನು ತಿಳಿದು ಬರಿಲಿಲ್ಲ, ಇಷ್ಟಾದರು ಮಹಾಂತೇಶನ ಮೇಲೆ ದಾಳಿಮಾಡಿದವರು ಯಾರೆಂದು ತಿಳಿದುಬರುತ್ತಿಲ್ಲ, ಸನ್ನಿವೇಶವನ್ನು ನೋಡಿದರೆ, ಯಾರೊ ಹಣ ಕೊಟ್ಟು ವೃತ್ತಿ ನಿರತ ದಾಳಿಕಾರರಂತವರ ಕೈಲಿ ಹೊಡೆಸಿದಂತೆ ಇದೆ, ಇದು ಕೊಲೆಯ ಪ್ರಯತ್ನವೊ ಅಥವ ದಾಳಿಮಾಡಿ ಮಹಾಂತೇಶನನ್ನು ಘಾಸಿಗೊಳಿಸುವ ಉದ್ದೇಶವೊ ಅರ್ಥವಾಗುತ್ತಿಲ್ಲ ಅಂದುಕೊಂಡ ನಾಯಕ್. ಬಹುಷ; ಮಹಾಂತೇಶನ ಆಫೀಸಿಗೆ ಹೋದರೆ ಹೆಚ್ಚಿನ ವಿಷಯ ತಿಳಿಯಬಹುದೆ ಎನ್ನಿಸಿತು.
ನಾಯಕ್ ಮೇಲೆ ಒತ್ತಡ ಸಾಕಷ್ಟಿತ್ತು, ಮಹಾಂತೇಶನ ಪ್ರಕರಣ ನಡೆದು ಮೂರನೆ ದಿನವಾದರು , ಈ ಕೇಸಿನಲ್ಲಿ ಯಾವ ಪ್ರಗತಿಯು ಆಗಿರಲಿಲ್ಲ. ಪತ್ರಿಕೆಗಳಲ್ಲಿ , ತಮ್ಮ ಸಾಹೇಬರು ರವಿಕಾಂತೇಗೌಡರು ಒಂದೆರಡು ದಿನದಲ್ಲೆ ಪ್ರಕರಣದ ಗುಟ್ಟನ್ನು ಬೇದಿಸುವದಾಗಿ ತಿಳಿಸಿದ್ದಾರೆ, ACP ಸಾಹೇಬರು ದಿನಕ್ಕೆ ಎರಡು ಸಾರಿ ಕಾಲ್ ಮಾಡಿ ಕೇಸ್ ಎಲ್ಲಿಗೆ ಬಂತು ಅನ್ನುತ್ತಿದ್ದಾರೆ, ಈಗ ಸಂಜೆಯಾಗುತ್ತ ಬಂದಿತು, ನಾಳೆ ಮಹಾಂತೇಶನ ಆಫೀಸಿಗೆ ಹೋಗಿ ಕೆಲವು ವಿಷಯ ತಿಳಿಯಬೇಕು ಅಂದುಕೊಂಡ. ಹಾಗೆ ಮಹಾಂತೇಶ ದಾಳಿಗೆ ಗುರಿಯಾಗುವ ಮುಂಚೆ ಸಹಕಾರ ನಗರ ಕೋಅಪರೇಟಿವ್ ಸೋಸೈಟಿಯಿಂದ ಹೊರಟಿದ್ದು, ಒಮ್ಮೆ ಅಲ್ಲಿಗೆ ಹೋಗಿ ಬರುವದು ಒಳ್ಳೆಯದು ಅನ್ನಿಸಿತು.
---------------------------------------------------------------
ಮರುದಿನ ಮುಂಚೆ ಆಫೀಸಿಗೆ ಬಂದ ನಾಯಕ್ ಮಹಾಂತೇಶನ ಆಪೀಸಿಗೆ ಹೋಗಿ ಬರಬೇಕೆನ್ನುವ ತನ್ನ ನಿರ್ಧಾರ ಬದಲಿಸಿ ಸಹಕಾರನಗರ ಕೋಆಪರೇಟಿವ್ ಸೊಸೈಟಿಯತ್ತ ಹೊರಟ ಜೊತೆಯಲ್ಲಿ ಎಂದಿನಂತೆ ಮಂಜುನಾಥ. ಸೊಸೈಟಿಯ ಒಳಬಾಗದಲ್ಲಿ ಬೈಕ್ ನಿಲ್ಲಿಸಿ ಒಳನಡೆದಾಗಲೆ ಅಲ್ಲಿಯ ಸಿದ್ಭಂದಿಗೆ ಅರಿವಿನಲ್ಲಿತ್ತು, ಪೋಲಿಸ್ ಬಂದಿರುವುದು ವಿಚಾರಣೆಗೆ ಎಂದು, ಅಲ್ಲಿಯು ಬಹಳಷ್ಟು ವಿಷಯ ತಿಳಿಯಿತು. ಮಹಾಂತೇಶ್ ಬಹುತೇಕ ಅಲ್ಲಿ ಎಲ್ಲ ವಿಭಾಗಗಳನ್ನು ಕೂಲಂಕುಶವಾಗಿ ಆಡಿಟಿಂಗ ನಡೆಸಿದ್ದ. ಬಹುತೇಕ ಸಿದ್ಬಂದಿ ಹೆದರಿ ಹೋಗಿದ್ದರು. ಕೆಲವರು ಕಿರಿಯ ಕೆಲಸಗಾರರು ಅನುಭವ ಕಡಿಮೆ ಅಂತವರನ್ನು ಕರೆದು ಬಹುತೇಕ ವಿಷಯ ಕೆದಕಿದ್ದ ಮಹಾಂತೇಶ್.
ನಾಯಕ್ ಸೊಸೈಟಿಯ ಹಿರಿಯ ಆಡಳಿತಾಧಿಕಾರಿಗಳನ್ನು ಕೇಳಿ ಅಲ್ಲಿ ಕೆಲಸ ಮಾಡುವ ಎಲ್ಲ ಸಿದ್ಬಂದಿಯ ಹೆಸರು , ವಿಳಾಸಗಳನ್ನು ತೆಗೆದುಕೊಂಡ. ಅಲ್ಲಿ ಗಮನಿಸುವಂತ ಸಂಗತಿಗಳೇನಿರಲಿಲ್ಲ.
ನಂತರ ಅಲ್ಲಿಂದ ಹೊರಟವನು ಮಹಾಂತೇಶನ ಆಫೀಸ್ ತಲುಪಿದ. ನಡುವೆ ಒಂದು ಸಿಗರೇಟ್ ಮತ್ತು ಕಾಫಿ ಅಷ್ಟೆ. ಏಕೊ ಬೆಳಗಿನ ಉಪಹಾರವನ್ನು ಮಾಡಲು ಆಗಿರಲಿಲ್ಲ ಅವನಿಗೆ, ಹೇಗೊ ಈ ಕೇಸನ್ನು ಕೊನೆಗಾಣಿಸಲೆ ಬೇಕೆಂಬ ತವಕ. ಮಹಾಂತೇಶನ ಆಫೀಸಿನಲ್ಲಿ , ಮೊದಲ ದಿನ ಮಾತನಾಡಿದ , ಮಹಾಂತೇಶನ ಅಸಿಸ್ಟೆಂಟ್ ಜ್ಯೋತಿ ಸಿಕ್ಕಿದ್ದಳು.
ಆಕರ್ಷಕ ಮಹಿಳೆ ಆದರೆ ಅಷ್ಟೆ ಗಂಭೀರ. ನಾಯಕ್ ಅವಳ ಹತ್ತಿರ ಹೋಗಿ ವಿವರ ಕೇಳುವಾಗಲು ಯಾವುದೆ ಗೊಂದಲಕ್ಕೆ ಒಳಗಾಗದೆ ಸಾಕಷ್ಟು ವಿವರ ಒದಗಿಸಿದಳು, ಬಹುತೇಕ ಮಹಾಂತೇಶನ ಕೆಲಸದ ವಿವರ. ಆಪೀಸಿನಲ್ಲಿ ಅವಳು ಹೇಳುವಂತೆ ಮಹಾಂತೇಶನಿಗೆ ಯಾವುದೆ ವಿರೋದವಾಗಲಿ ಅಥವ ಅಸೂಯೆ ಮುಂತಾದ ಸಮಸ್ಯಗಳಾಗಲಿ ಇರಲಿಲ್ಲ. ಆದರೆ ಅವನ ಕೆಲಸದ ಒತ್ತಡ ಹಾಗು ಸ್ವರೂಪವೆ ಬೇರೆ. ಬರಿ ಬೆಂಗಳೂರಿನಲ್ಲಿ ಸುಮಾರು 282 ಗೃಹನಿರ್ಮಾಣ ಸಂಘಗಳಿವೆ, ಅಲ್ಲಿ ಸುಮಾರು ರೂಪಾಯಿ ಮೂರು ಲಕ್ಷ ಕೋಟಿಗಳಿಗಿಂತ ಅಧಿಕ ಹಣದ ವ್ಯವಹಾರವಿದೆ. ಈ ಸಂಘಗಳಿಗೆಲ್ಲ ಮೇಲ್ವಿಚಾರಕನಾಗಿ ಅವುಗಳ ವ್ಯವಹಾರವನ್ನು ಗಮನಿಸಿ , ಅವುಗಳಲ್ಲಿನ ಮೋಸ ವಂಚನೆಯನ್ನು ಬಯಲಿಗೆಳಿಯುವ ಗುರುತರ ಜವಾಬ್ದಾರಿ ಮಹಾಂತೇಶನ ಮೇಲಿತ್ತು. ಹಾಗಾಗಿ ಸಹಜವಾಗಿ ಭೂಮಾಫಿಯದಂತ ವ್ಯವಸ್ಥೆಗಳು ಮಹಾಂತೇಶನತ್ತ ಕೆಂಗಣ್ಣು ಬೀರುವುದು ಸಾಮಾನ್ಯ.
"ಪರಿಸ್ಥಿಥಿ ಹೀಗಿದೆ, ನೀವು ಯಾರ ಮೇಲೆ ಅನುಮಾನ ಪಡುತ್ತೀರಿ ಹೇಳಿ" ಜ್ಯೋತಿ ಪ್ರಶ್ನಿಸಿದಳು, ನಾಯಕ್ ಸಹ ತಲೆದೂಗಿದ. ಅವಳ ಮಾತು ನಿಜವೆ, ಇಂತದೊಂದು ವ್ಯವಸ್ಥೆಯ ಕೇಂದ್ರಬಿಂದು ಮಹಾಂತೇಶ ಅನ್ನುವಾಗ ಅವನ ಕೊಲೆಗೆ ಸಹಜವಾಗಿ ಬಹಳಷ್ಟು ಜನರಿಗೆ ಕಾರಣವಿರುತ್ತದೆ.
ನಾಯಕನಿಗೆ ತಲೆ ಕೆಟ್ಟಂತಾಗಿತ್ತು, ಕೇಸು ದಿನ ದಿನಕ್ಕೆ ಕಗಂಟಾಗುತ್ತಿದೆ. ಹಾಗೆ ಪೋಲಿಸಿನ ಇಲಾಖೆಯ ಮೇಲೆ ಮಾಧ್ಯಮಗಳ , ಸರ್ಕಾರದ ಒತ್ತಡ ಜಾಸ್ತಿಯಾಗುತ್ತಿದೆ. ಅಲ್ಲಿಂದ ಹೊರಟವನು ಪುನಃ ಪೋಲಿಸ್ ಸ್ಟೇಷನ್ ಸೇರಿ ಕುಳಿತುಕೊಳ್ಳೂವಾಗಲೆ ACP ಕಾಲ್ ಬಂದಿತು.
"ಏನ್ರಿ ಬೆಳಗ್ಗೆ ಇಂದ ಎಲ್ಲಿ ಹೋಗಿದ್ರಿ, ಅಲ್ಲಿ ಮಹಾಂತೇಶ್ ಕೇಸು ನೋಡಿರೆಂದು ನಮ್ಮ ಪ್ರಾಣ ಹಿಂಡ್ತಾ ಇದ್ದಾರೆ, ಇವತ್ತು ನೋಡ್ರಿ , ಅದ್ಯಾರೊ ಆ ಮಹಿಮಾಪಾಟೇಲ್ ಮೊದಲೆ ರಾಜಕೀಯದವರು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ, ಅವರು ಮಹಾಂತೇಶ್ ಕೈಲಿ ಅದೇನೊ ಕೋಅಪರೇಟಿವ್ ಸೊಸೈಟಿ ಅವ್ಯವಹಾರಗಳ ಡಿಟೈಲ್ ಕೇಳಿದ್ದರಂತೆ, ಅದಕ್ಕೆ ಹಲ್ಲೆಯಾಗಿರಬಹುದು ಅಂತ ಹೇಳಿದ್ದಾರೆ, ಭೂಮಾಫಿಯದ ನೆರಳು ಕಾಣ್ತಾ ಇದೆ, ನೀವು ನೋಡಿದ್ರೆ ಸುಮ್ಮನೆ ಬೈಕ್ ನಲ್ಲಿ ಸಿಟಿ ಸುತ್ತುತ್ತ ಮಜಾ ಮಾಡ್ತಾ ಇದ್ದೀರಿ, ನೋಡ್ರಿ ನೀವು ಏನು ಮಾಡ್ತೀರಿ ಗೊತ್ತಿಲ್ಲ, ನನಗೆ ನಾಳೆ ಒಳಗೆ ರಿಸಲ್ಟ್ ಬೇಕು" ಅಂತ ಸಿಕ್ಕ ಪಟ್ಟೆ ಕೂಗಾಡಿದರು,
ನಾಯಕ್ 'ಸರಿ ಸಾರ್ , ನಾನು ಪೂರ್ತಿ ಅದೆ ಪ್ರಯತ್ನದಲ್ಲಿದ್ದೇನೆ ಸಾರ್, ಸಾಕಷ್ಟು ವಿಷಯ ಸಂಗ್ರಹಿಸಿದ್ದೇನೆ, ಮಹಾಂತೇಶ್ ಅವರಿಗೆ ಪ್ರಜ್ಞೆ ಬಂದರೆ ನಮಗೆ ಕ್ಲೂ ಸಿಗಬಹುದು' ಎಂದನು.
ಅದಕ್ಕೆ ಅವರು "ರೀ ಅವರಿಗೆ ಪ್ರಜ್ಝೆ ಬರಲಿ ಅಂತ ಕಾಯ್ತ ಕೂರುವಷ್ಟು ಪುರುಸತ್ತು ಇಲ್ರಿ, ಇವತ್ತು ದೊಡ್ಡ ಸಾಹೇಬ್ರೆ ಡೈರಕ್ಟ್ ಆಗಿ ಮಾತನಾಡಿದ್ದಾರೆ, ನಿಮಗೆ ಏನು ಸಹಾಯ ಬೇಕು ಹೇಳಿ, you go beyond motive ಇವ್ರೆ, ಕೊಲೆಗೆ ಕಾರಣ ತಿಳಿದ್ರೆ ಕೊಲೆ ಕೇಸ್ ಸಾಲ್ವ್ ಆದ ಹಾಗೆ ಅಲ್ವೆನ್ರಿ, ಕೊಲೆಗೆ ಕಾರಣಗಳನ್ನು ಗುರುತಿಸಿ ಅವುಗಳ ಹಿಂದೆ ಹೋಗ್ರಿ"
ದರಿದ್ರ ಮೋಟೊ ಅಂತೆ, ಮುದುಕ ಸಾಯ್ತಾನೆ, ಕುಡಿಯಲು ಹಣಕೊಡಲಿಲ್ಲ ಅಂತ ಹೆಂಡತಿ ಕುತ್ತಿಗೆ ಕುಯ್ಯುವ, ತನಗೆ ಅಪ್ಪ ತೋರಿಸಿದ ಗಂಡು ಒಪ್ಪಿಗೆ ಇಲ್ಲ ಎಂದು ಅವನನ್ನೆ ಕತ್ತರಿಸುವ , ಅಥವ ಮದುವೆ ಮಾಡಲಿಲ್ಲ ಎಂದು ತಂದೆ ತಾಯಿಯನ್ನೆ ಶೂಟ್ ಮಾಡುವ ಈ ಕಾಲದಲ್ಲಿ ಕೊಲೆಗಳಿಗೆ ಇಂತಹುದೆ ಅಂತ ಉದ್ದೇಶ ಎಲ್ಲಿರುತ್ತೆ ಇವನ .... ಎಂದು ಮನಸಿನಲ್ಲಿ ಅಂದುಕೊಂಡು,
"ಆಯ್ತು ಸಾರ್ ನಿಮ್ಮ ಸಲಹೆಯಂತೆ ನಡೆಯುತ್ತೀನಿ" ಎನ್ನುತ್ತ ಪೋನ್ ಕೆಳಗಿಟ್ಟ ನಾಯಕ್
ನಾಯಕ್ ಕಂಗಾಲಾಗಿ ಹೋದ, 'ಥೂ ದರಿದ್ರ ಕೆಲಸವೆ" ಅಂತ ಬೈದುಕೊಂಡ. ಮಂಜುನಾಥನನ್ನು ಕರೆದು,
'ಒಂದು ಕಾಫಿ ತರಿಸಲು ಹೇಳಿ ಸಿಗರೇಟ್ ಹಚ್ಚಿದ"
"ಅಲ್ಲಿಗೆ ಈದಿನದ ಮಧ್ಯಾನದ ಊಟದ ಕತೆ ಮುಗಿಯಿತು," ಎಂದು ಗೊಣಗುತ್ತ ಹೊರಗೆ ಹೊರಟ ಮಂಜುನಾಥ.
ಅಷ್ಟರಲ್ಲಿ ನಾಯಕ್ ಗಮನಿಸಿದ, ಸ್ಟೇಶನಿನಲ್ಲಿ ಜೀನ್ಸ್, ಬಿಳಿಯ ಶರ್ಟ್ ದರಿಸಿದ ವ್ಯಕ್ತಿ ಟಳಾಯಿಸುತ್ತಿದ್ದ, ಅವನನ್ನು ಹತ್ತಿರ ಕರೆದು
"ರೀ ನೀವು ಅವತ್ತು , ಮಹಾಂತೇಶ್ ಆಕ್ಸಿಡೆಂಟ್ ಆದ ಸ್ಥಳದ ಹತ್ತಿರವಿದ್ದವರು ನೀವೆ ಅಲ್ಲವೇನ್ರಿ" ಎಂದ.
ಅವನು ಹಲ್ಲು ಕಿರಿಯುತ್ತ
"ಹೌದು ಸಾರ್, ನಾನೆ ವೀರೇಶ, ನನಗೆ ಅಂತ ವಾಸನೆಯೆಲ್ಲ ಬೇಗ ಬಂದುಬಿಡುತ್ತೆ ಸಾರ್, ಏನಾಯ್ತು ಸಾರ್ ಆ ಕೊಲೆ ವಿಷಯ, ಏನಾದ್ರು ಕ್ಲೂಗಳು ಸಿಕ್ಕಿದೆಯಾ"
"ರೀ, ಕ್ಲೂನಂತೆ ನಿಮ್ಮ ತಲೆ, ಅದೇನ್ರಿ ಹಾಗೆ ಬರೆದಿದ್ದಾರೆ ನಿಮ್ಮೊರು, ಕೊಲೆ ಹಿಂದೆ ಯಾರೊ ಹುಡುಗಿ ಇದ್ದಾಳೆ ಅಂತ, ನಿಮ್ಮನ್ನು ನಂಬಿ ನಾವು ಎನ್ ಕ್ವಯರಿ ಮಾಡಲು ಹೋದರೆ ಅಷ್ಟೆ ಮುಖಕ್ಕೆ ಸಗಣಿ ಹೊಡಿತಾರೆ" ಅಂತ ರೇಗಿದ.
"ಅದೆಲ್ಲಿ ಸಾರ್ , ನೀವೆ ಅವತ್ತು ಮಾತಾಡ್ತಾ ಇದ್ರಲ್ಲ , ಮೊಬೈಲ್ ನಲ್ಲಿ ಯಾವುದೊ ಹುಡುಗಿಯ ಕರೆ ಇದೆ ಅಂತ ಹಾಗಾಗಿ ಬರೆದುಬಿಟ್ಟೆ ಅಷ್ಟೆ" ಅಂತ ಮತ್ತೆ ಹಲ್ಲು ಕಿರಿದ,
"ಸರಿ ಸರಿ, ನಿಮ್ಮ ಸುದ್ದಿಗಳನ್ನು ನಂಬಿದವರು ಅಷ್ಟೆ , ಹೋಗ್ರಿ ಹೊರಗೆ, ಹೊರಡಿ" ಎಂದು ಬೈದ
"ಹೋಗ್ತೀನಿ ಬಿಡಿ ಸಾರ್, ನಾನೇನೊ ಸುಮ್ಮನೆ ಇರಲಿ ಅಂತ ಒಂದು ಲೈನ್ ಸೇರಿಸಿದ್ದೆ, ಅದಿರ್ಲಿ ಬಿಡಿ ಸಾರ್, ಆದರೆ ನಾನು ಒಂದು ಹೇಳ್ಬೋದ, ನೀವು ಕೊಲೆ ತನಿಖೆ ಮಾಡೋರು, ಗಟ್ಟಿ ಸಾಕ್ಷಿಗಳನ್ನು ಹಿಡಿದು ಹೋಗ್ಬೇಕು , ಅದು ಬಿಟ್ಟು ಪತ್ರಿಕೆಯಲ್ಲಿ ಊಹ ಸುದ್ದಿಯನ್ನೆ ಹಿಡಿದು, ತನಿಖೆಗೆ ಹೋಗಬಾರದು ಅಲ್ವ ಸಾರ್" ಅಂತ ನಗುತ್ತ ಹೊರಟ, ನಾಯಕನಿಗೆ ಅವನು ತನ್ನನ್ನು ಹಂಗಿಸಿದ್ದು ರೇಗಿ ಹೋಯ್ತು,
"ಈಡಿಯೆಟ್ , ಸ್ಕೌಂಡ್ರಲ್ " ಅಂತ ವೀರೇಶನನ್ನು ಮನಸಿನಲ್ಲೆ ಬೈದುಕೊಂಡ.
ಸರಿ ಹೇಗಾದರು ಸರಿ , ನಾಳೆ ಮಲ್ಲಿಗೆ ಆಸ್ಪತ್ರೆಗೆ ಹೋಗಿ, ಡಾಕ್ಟರ್ ಗಳನ್ನು ಬೇಟಿಮಾಡಿ, ಏನಾದರು ಮಹಾಂತೇಶರನ್ನು ಮಾತನಾಡಿಸಲು ಸಾದ್ಯವ ತಿಳಿಯಬೇಕು. ಅಂದುಕೊಂಡ. ಅಷ್ಟರಲ್ಲಿ ಕಾಫಿಹಿಡಿದು, ಮಂಜುನಾಥ ಒಳಗೆ ಬಂದವನು ಕಾಫಿ ಕೊಡುತ್ತ
"ಸಾರ್ ವಿಷಯ ತಿಳಿಯಿತ?" ಎಂದ
"ಏನೊ ಅದು, ನೇರವಾಗಿ ಸುದ್ದಿಯನ್ನು ತಿಳಿಸು, ಒಳ್ಳೆ ಮನೇಲಿ ಹೆಂಡತಿ ಹೇಳೂವ ಒಗಟಿನಂತೆ ಹೇಳಬೇಡ" ಎಂದು ರೇಗಿದ.
ಮಂಜುನಾಥ , ನಾಯಕನ ಕೋಪಕ್ಕೆ ಎಂದು ಹೆದರುವದಿಲ್ಲ.
"ಅದಲ್ಲ ಸಾರ್, ನಮ್ಮ ಏಟ್ರಿಯ ಹೊಟೆಲ ಹತ್ತಿರದ ಆಕ್ಸಿಡೆಂಟ್ ಹೀರೊ ಮಹಾಂತೇಶ್ ಕೆ ಎ ಎಸ್ , ಆಸ್ಪತ್ರೆಯಲ್ಲಿ ಸತ್ತು ಹೋದನಂತೆ, ಎಲ್ಲ ಟೀವಿಗಳಲ್ಲಿ ಬರ್ತಾ ಇದೆ" ನುಡಿದ ಮಂಜುನಾಥ
ನಾಯಕನ ಕೈಯಲ್ಲಿದ್ದ ಕಾಫಿ ಲೋಟ ತುಳುಕಿ, ಕಾಫಿಯೆಲ್ಲ ಟೇಬಲ್ ಮೇಲೆ ಚೆಲ್ಲಿಹೋಯಿತು.
--------------------------------------------------------------------------
ಎರಡು ದಿನ ಸಬ್ ಇನ್ಸ್ ಪೆಕ್ಟರ್ ನಾಯಕ್ ಗೆ ಮಹಾಂತೇಶನ ಕೊಲೆ ಕೇಸಿನ ಓಡಾಟವೆ ಆಗಿಹೋಯಿತು, ಆಸ್ಪತ್ರೆಗೆ ಹೋಗಿದ್ದು, ಅಲ್ಲಿಯ ಪ್ರೊಸೀಜರ್ಸ್ ಗಳು, ನಂತರ ಮಹಾಂತೇಶನ ಮನೆಗೆ ಓಡಾಟ. ಪೋಸ್ಟ್ ಮಾರ್ಟಮ್ ರೆಪೋರ್ಟ್, ಅಲ್ಲದೆ ಕೊಲೆ ಪ್ರಯತ್ನ ಹಾಗು ಪರಾರಿ ಎಂದು ಇದ್ದ ಕೇಸನ್ನು ಈಗ, ಕೊಲೆ ಎಂದು ಬದಲಾಯಿಸಬೇಕಾಯಿತು.
ಈ ನಡುವೆ ಮಹಾಂತೇಶ ಮರಣಹೊಂದಿದ ನಂತರ, ಮುಖ್ಯಮಂತ್ರಿ ಗೌಡರು , ಮೃತನ ಮನೆಗೆ ಬೇಟಿನೀಡಿ, ಆದಷ್ಟು ಬೇಗ ಕೊಲೆಗಾರರನ್ನು ಪೋಲಿಸರ ಮೂಲಕ ಹಿಡಿದು ಕಾನುನಿನ ಕೈಗೆ ಒಪ್ಪಿಸುವ ಆಶ್ವಾಸನೆ ನೀಡಿದರು. ನಂತರ ಇಲಾಖೆಯ ಮೇಲೆ ಒತ್ತಡ ಮತ್ತು ಜಾಸ್ತಿ ಆಯಿತು. ಏಟ್ರಿಯ ಹೋಟೆಲ್ ಸಮೀಪದ ಸರ್ಕಲ್ ನಲ್ಲಿ ಇರಬಹುದಾದ ಸಿ.ಸಿ. ಕ್ಯಾಮರ ದೃಷ್ಯಗಳನ್ನು ಗ್ರಹಿಸುವ ಪ್ರಯತ್ನ ಕೂಡ ನಡೆಯಿತು. ಆದರೆ ರಾತ್ರಿಯಾದ ಕಾರಣ ಮತ್ತು ಮಳೆ ಬಂದು ನಿಂತಿದ್ದ ಕಾರಣ ಎಲ್ಲವು ಅಸ್ವಷ್ಟ. ಅಲ್ಲಿಗೆ ಬಂದಿರಬಹುದಾದ ವ್ಯಕ್ತಿಗಳು ಯಾರಿರಬಹುದು, ಯಾವ ಕ್ಲೂಗಳನ್ನು ಬಿಡದೆ ಮಾಡಿರುವ ಕೊಲೆ ನೋಡಿದರೆ ಯಾರೊ ಪಕ್ಕಾ ಪ್ರೊಫೆಷನಲ್ಸ್ ಮಾಡಿರುವುದು ಅನ್ನಿಸುತ್ತಿತ್ತು, ಅಂದರೆ ಯಾರೊ ಹಣ ಕೊಟ್ಟು ಸುಫಾರಿ ನೀಡಿ ಕೊಲೆ ಮಾಡಿಸಿದ್ದಾರೆ, ನಾಯಕ್ ಗೆ ಇದು ಯಾರೊ ಭೂಮಾಫಿಯಾದವರ ಕೆಲಸ ಅನ್ನಿಸ ತೊಡಗಿತು. ಅವನಿಗೆ ಸಾಕಷ್ಟು ತಲೆ ಕೆಟ್ಟಿತ್ತು.
ಮಧ್ಯಾನದ ಸಮಯ ಎಂದಿನಂತೆ ಮಂಜುನಾಥನನ್ನು ಕಾಫಿ ತರಲು ಕಳಿಸಿದ, ಹೈಗೃಂಡ್ ಪೋಲಿಸ್ ಸ್ಟೇಷನ್ ನಿಂದ. ತಾನು ಕಿಟಕಿ ಪಕ್ಕ ಹಾಕಿದ್ದ ತನ್ನ ಛೇರಿನಲ್ಲಿ ಕುಳಿತು ಹೊರಗೆ ನೋಡುತ್ತಿದ್ದ.
ಐದು ನಿಮಿಷದಲ್ಲೆ ಕಾಫಿ ಜೊತೆ ಬಂದ ಮಂಜುನಾಥ.
"ಸಾರ್ , ನಿಮಗೆ ಆರಾಮ ಆಯ್ತು ಬಿಡಿ" ಅಂದ.
ನಾಯಕನಿಗೆ ಅರ್ಥವಾಗದೆ, "ಅದೇನೊ ನನಗೆ ಅರಾಮವಾಗಿದ್ದು, ಬಿಡಿಸಿ ಹೇಳು" ಎಂದ
"ಸಾರ್ ಗೊತ್ತಾಗ್ಲಿಲ್ವ, ಅದೇ ಅ ಮಹಾಂತೇಶ್ ಕೇಸನ್ನು . ಸಿ.ಸಿ.ಬಿ ಗೆ ವಹಿಸಿದ್ದಾರಂತೆ ಗೊತ್ತಾಯ್ತ, ಇವತ್ತು ಮಿರ್ಜಿ ಸಾಹೇಬ್ರು ಹೇಳಿದ್ದಾರೆ, ಹಾಗೆ ಸಿ.ಸಿ.ಬಿ ಯ ದಯಾನಂದ ಸಾಹೇಬ್ರು ಆಗ್ಲೆ ಚಾರ್ಚ್ ತಗಳಕ್ಕೆ ರಡಿ ಅಂತ ಹೇಳಿಕೆ ಕೊಟ್ಟಾಯ್ತು" ಎಂದ
ನಾಯಕನಿಗೆ ಪಿಚ್ಚೆನಿಸಿತು. ತಾನು ಒಂದು ವಾರಕ್ಕಿಂತ ಅಧಿಕ ಓಡಾಡಿ ಶ್ರಮಪಟ್ಟಿದ್ದೆಲ್ಲ ಅಷ್ಟೆ ನೀರಲ್ಲಿ ಹೋಮದಂತೆ, ಅಷ್ಟಕ್ಕು ನನಗೆ ಎಂತ ಸಪೋರ್ಟ್ ಇದೆ, ಈ ಮಂಜುನಾಥ, ಮತ್ತೊಬ್ಬ ಸೋಂಬೇರಿ ಆ ಚಂದ್ರ ಅಷ್ಟೆ. ಅಂತೆಲ್ಲ ಯೋಚಿಸುತ್ತ
"ಅಲ್ವೊ ಅದೇನೊ ನಿನಗೆ ಎಲ್ಲ ವಿಷಯವು ನನಗಿಂತ ಮೊದಲೆ ತಿಳಿಯುತ್ತೆ, ಡಿಪಾರ್ಟ್ ಮೆಂಟಿನಲ್ಲಿ ಒಳ್ಳೆ ಲಿಂಕ್ ಇದೆ ಅನ್ನು " ಎಂದ
"ಅಯ್ಯೊ ಲಿಂಕು ಅದೆಲ್ಲ ಎಲ್ಲಿ ಬಂತು ಸಾರ್, ನೀವು ಕಾಫಿಗೆ ಅಂತ ಕಳಿಸ್ತ ಇರ್ತೀರಲ್ಲ, ಆ ಪಳಿನಿ ಡಬ್ಬ ಹೋಟೆಲ್ ನಲ್ಲಿ ಒಂದು ಚಿಕ್ಕ ಟೀವಿ ಇಟ್ಟಿದ್ದಾನೆ, ಅದರಲ್ಲಿ ಯಾವಗಲು ಎಂತದೋ ಸುದ್ದಿ ಬರ್ತಾನೆ ಇರ್ತದೆ, ನಾನು ಅದನ್ನು ನೋಡಿ ನಿಮಗೆ ಬಂದು ಹೇಳ್ತೀನಿ ಅಷ್ಟೆ" ಎಂದ. ನಾಯಕನಿಗೆ ಮತ್ತೆ ಬೇಜಾರಾಯ್ತು,
"ಛೇ ಇದೆಂತ ವ್ಯವಸ್ಥೆ, ಕೆಲವು ಅಫಿಶಿಯಲ್ ನ್ಯೂಸ್ ಗಳು ಸಹ, ನಮಗೆ ಮೇಲಿನಿಂದ ಬರದೆ , ಟಿ,ವಿ, ನೋಡಿ ತಿಳಿಯುವಂತೆ ಆಯ್ತಲ್ಲ" ಎಂದು ಬೇಸರ ಪಡ್ತಾ ಕಾಫಿ ಕುಡಿಯುತ್ತಿರುವಂತೆ, ಫೋನ್ ರಿಂಗ್ ಆಯ್ತು,
ಉತ್ತರಿಸಿದರೆ, ಆ ಕಡೆಯಿಂದ ACP,
"ನಾಯಕ್, ಗೊತ್ತಾಯ್ತೇನ್ರಿ, ನೀವು ಹ್ಯಾಂಡಲ್ ಮಾಡ್ತಿದ್ದ ಆ ಮಹಾಂತೇಶ್ ಕೇಸನ್ನ , ಸಾಹೇಬ್ರು ಸಿ.ಸಿ.ಬಿ ಗೆ ಕೊಟ್ಟಿದ್ದಾರೆ, ಆಗ್ಲೆ ಅವ್ರು ಕಾಂಟಾಕ್ಟ್ ಮಾಡಿದ್ರು, ನಾನು ನಿಮ್ಮ ಹತ್ತಿರ ಮಾತನಾಡುವಂತೆ ಹೇಳಿದ್ದೀನಿ, ನೀವು ತಾನೆ ಆ ಕೇಸಲ್ಲಿ ಇನ್ ವಾಲ್ ಆಗಿ ಇದ್ದೋರು" ಎಂದು ಸಪ್ಪೆಯಾಗಿ ನುಡಿದು, ಫೋನ್ ಡಿಸ್ ಕನೆಕ್ಟ್ ಮಾಡಿದರು.
ಅವರ ಫೋನ್ ಇಡುತ್ತಿರುವಾಗಲೆ, ಸ್ಟೇಷನಿನ್ನ ಗೇಟ್ ಬಳಿ , ಸಿ.ಸಿ.ಬಿ. ಚೀಫ್ ದಯಾನಂದ ಹಾಗು A.CP. ಗುಲೇದ್ ರವರು ಬರುತ್ತಿರುವುದು ಕಾಣಿಸಿತು. ಜೊತೆ ಜೊತೆಗೆ ಸಿ.ಸಿ.ಬಿ ಇನ್ಸ್ ಸ್ಪೆಕ್ಟರ್ ರಾಜಾರಾಮ್, ಮತ್ತು ಮತ್ತೆ ಒಬ್ಬರು ಪರಿಚಯದವರು ಅನ್ನಿಸಿತು. ಅವನಿಗೆ ಆಶ್ಚರ್ಯವೆ ಆಯಿತು, ಪರವಾಗಿಲ್ಲವೆ ಅದೇನೊ ಸಿ.ಸಿ.ಬಿ ಯವರು ಬಾರಿ ವೇಗದಲ್ಲಿದ್ದಾರೆ, ಇಷ್ಟು ಬೇಗ ಕಾಣಿಸುತ್ತಿದ್ದಾರೆ, ಅಂದರೆ ಸಾಕಷ್ಟು ಒತ್ತಡವಿರಬೇಕು ಅಂದುಕೊಂಡ.
ಬಾಗ ೩
ನಾಯಕ್ ಸಂಗ್ರಹಿಸಿದ್ದ ವಿವರವನ್ನೆಲ್ಲ ಸಿ.ಸಿ.ಬಿ ಯ ಗುಂಪು ಕುಳಿತು ವಿವರವಾಗಿ ಪರಿಶೀಲಿಸಿದರು,
' ಓಕೆ , ಒಳ್ಳೆ ಗುಡ್ ಗ್ರೌಂಡ್ ವೊರ್ಕ್ ' ಅಂದರು ಸಾಹೇಬರು, ನಾಯಕ್ ಗೆ ಎಷ್ಟೋ ಸಮಾಧಾನ ಅವನು ಕೇಳಿದ
"ಸಾರ್ , ನೀವು ಒಪ್ಪಿಗೆ ಕೊಟ್ರೆ ನಾನು ನಿಮ್ಮ ಜೊತೆ ಕೇಸಲ್ಲಿ, ಇನ್ ವಾಲ್ವ್ ಆಗ್ತೀನಿ, ಮತ್ತೇನಿಲ್ಲ , ಕೆಲಸದಲ್ಲಿ ಕುತೂಹಲ ಅಷ್ಟೇ" ಎಂದ.
ದಯಾನಂದ ನಗುತ್ತ
"ವೆರಿ ಗುಡ್ ಸ್ಪಿರಿಟ್, ಯೂ ಆರ್ ವೆಲ್ ಕಂ, ಇವ್ರೆ, ಕೆಲಸ ಅಂದ್ರೆ ಈ ರೀತಿ ಇರಬೇಕು ಆಸಕ್ತಿ, ನೀವು ನಮ್ಮ ಜೊತೆ ಇರಿ, ನಾನು ನಿಮ್ಮ ರವಿಕಾಂತ ಜೊತೆ ಮಾತು ಆಡಿ ಹೇಳ್ತೀನಿ, " ಅಂದರು.
ಅವರು ಹೊರಟಂತೆ, ರಾಜರಾಮ್ ಹೇಳಿದರು ,
"ಈಗ ಹಾಗೆ ಒಮ್ಮೆ ಹೋಟೆಲ್ ಏಟ್ರಿಯ ಹತ್ತಿರ ಹೋಗಿ, ಮತ್ತೆ ಆ ವಾಚ್ ಮನ್ ಹತ್ತಿರ ಮಾತನಾಡಿ ಬರೋಣ, ಬರ್ತೀರ" ಎಂದು.
ನಾಯಕನಿಗೆ ಆಶ್ಚರ್ಯ !
"ಅವನ ಹತ್ತಿರ ಮತ್ತೇನು ಸರಕಿರುವ ಹಾಗಿಲ್ಲ ಅನ್ಸುತ್ತೆ ಸಾರ್, ಎಲ್ಲ ಹೇಳಿದ್ದಾನೆ, ಆಗಲೇಳಿ ಮತ್ತೊಮ್ಮೆ ಹೋಗೋಣ ಬನ್ನಿ" ಎಂದು ಅವರ ಜೊತೆ, ಹೋಟೆಲ್ ಕಡೆ ಹೊರಟರು..
ಬಾಗಿಲಲ್ಲಿ ಆದಿನ ಕಂಡ ವಾಚ್ ಮನ್ ಕಾಣಲಿಲ್ಲ, ಸೀದಾ ಹೋಟೆಲ್ ರಿಸೆಪ್ಷನ್ ಗೆ ಹೋದ ನಾಯಕ್ ವಿಚಾರಿಸಿದ, ಆದಿನ ಇದ್ದ ವಾಚ್ ಮನ್ ಬಗ್ಗೆ,
"ಕುಳಿತಿರಿ ಸಾರ್ ಇಲ್ಲಿಗೆ ಕರೆಸುತ್ತೇನೆ, ಅವನ ಹೆಸರು, ಚೆನ್ನಪ್ಪ, ಅಂತ"
ಎಂದು ರೆಸೆಪ್ಷನ್ ನಲ್ಲಿ ಕುಳಿತಿದ್ದಾಕೆ ತಿಳಿಸಿ, ಎಲ್ಲಿಗೋ ಪೋನ್ ಮಾಡಿ, ಚೆನ್ನಪ್ಪನನ್ನು ಕಳಿಸುವಂತೆ ತಿಳಿಸಿದಳು. ಐದು ಆರು ನಿಮಿಶವಾಗಿರಬಹುದು , ವಾಚ್ ಮನ್ ಕಾಣಿಸಿಕೊಂಡು ಇವರು ಇದ್ದಲ್ಲಿಗೆ ಬಂದು,
"ಏನ್ ಸಾರ್ ಅವತ್ತೆ ಎಲ್ಲ ಹೇಳಿದ್ನಲ್ಲ, ಇನ್ನೇನು ಸಾರ್" ಎಂದ. ರಾಜಾರಾಮ್ ಅವರು ನಿಂತು,
"ಸರಿಯಪ್ಪ ಅವತ್ತೆ ಎಲ್ಲ ಹೇಳಿದ್ದಿ, ನಾವು ಸುಮ್ಮನೆ ಹೀಗೆ ಹೋಗ್ತಾ ಇದ್ವಿ , ನಿನ್ನ ಹತ್ತಿರ ಬಂದರೆ ಮತ್ತೇನಾದರು ವಿಷಯ ತಿಳಿಯಬಹುದಾ ಅಂತ ಬಂದ್ವಿ, ಇಲ್ಲಿ ಗಲಾಟೆ, ಹೊರಗೆ ನಿಮ್ಮ ವಾಚ್ ಮನ್ ಕ್ಯಾಬಿನ್ ಹತ್ರಾನೆ ಹೋಗೋಣ ನಡಿ ನಿಧಾನಕ್ಕೆ ಮಾತನಾಡಬಹುದು" ಎನ್ನುತ್ತ ಹೊರಟರು. ವಿದಿಯಿಲ್ಲದೆ ಎಲ್ಲರು ಅವರನ್ನು ಹಿಂಬಾಲಿಸಿದರು.
ಹೊರಗೆ ಬಂದ ರಾಜಾರಾಮ್ ಮತ್ತೊಮ್ಮೆ , ಆದಿನ ನಾಯಕ್ ಕೇಳಿದ್ದ ಪ್ರಶ್ನೆಗಳನ್ನೆ ಕೇಳಿ ಕನ್ ಫರ್ಮ್ ಮಾಡಿಕೊಂಡರು, ಮತ್ತೆ
"ನಿನಗೆ ಆದಿನ ಬಂದು ಹೇಳಿದನಲ್ಲ , ಹೊರಗೆ ಗಲಾಟೆ ಆಗ್ತಿದೆ ಅಂತ ಅವನ ಹೆಸರೇನಾದರು ಗೊತ್ತಾ" ಎಂದರು.
"ಇಲ್ಲ ಸಾರ್ ಅವನು ಯಾರೊ ಹೋಟೆಲ್ ನಲ್ಲಿ ನಡೆಯುತ್ತಿದ್ದ, ಹುಟ್ಟು ಹಬ್ಬದ ಪಾರ್ಟಿಗೆ ಬಂದವನು ಅನ್ನಿಸುತ್ತೆ ನನಗೆ ಪರಿಚಯವಿಲ್ಲ" ಎಂದ ವಾಚ್ ಮನ್
"ಹೋಗಲಿ ಅವನು ಹೇಗೆ ಬಂದಿದ್ದ, ಕಾರಿನಲ್ಲೊ , ಸ್ಕೂಟರಿನಲ್ಲೊ, ನಿನಗೆ ಅದೇನಾದರು ನೆನಪಿದೆಯಾ" ಎಂದ ರಾಜಾರಾಮ್, ನಾಯಕ್ ನೋಡುತ್ತ ನಿಂತಿದ್ದ ಏನು ನುಡಿಯದೆ.
"ಅವನು ಬಂದಿದ್ದು, ಮೋಟರ್ ಸೈಕಲ್ ಸಾರ್, ಜೊತೆಗೆ ಒಂದು ಮಗುವಿತ್ತು ಪುಟ್ಟದು" ಎಂದ ವಾಚ್ ಮನ್
"ಸರಿಯೆ ಅವನು ಬಂದಿದ್ದ ಮೋಟರ್ ಸೈಕಲ್ ನಂಬರ್, ನೆನಪಿದೆಯ, ಹೋಗಲಿ ಅವನು ಏನಾದರು ನಿಮ್ಮ ಲಾಗ್ ಬುಕ್ಕಲ್ಲಿ ಎಂಟ್ರಿ ಮಾಡಿದ್ದಾನ ?" ಕೇಳಿದ, ರಾಜಾರಾಮ್
"ಗೊತ್ತು ಸಾರ್, ಅವನು ಒಳ ಹೋಗುವಾಗ ಅವನ ಬೈಕ್ ನಂಬರ್, ಎಲ್ಲವನ್ನು ಬರೆದಿದ್ದಾನೆ, ಅದು ಈ ಹೋಟೆಲ್ ನಲ್ಲಿ ಕಂಪಲ್ಸರಿ ಅಲ್ವಾ ಸಾರ್" ಎಂದ.
ಅಲ್ಲಿ ಇದ್ದ ವಾಚ್ ಮನ್ ಲಾಗ್ ಬುಕ್ಕನ್ನು ಪರಿಶೀಲಿಸ್ದರು, ಪೇಜನ್ನು ಹಿಂದೆ ತಿರುಗಿಸುತ್ತ, 29..28.. 27.. 16.. 15 ನೆ ಮೇ ತಿಂಗಳಿಗೆ ಬಂದರು,
ವಾಚ್ ಮನ್ ತನ್ನ ಬೆರಳನ್ನು ಇಟ್ಟ ಎಂಟ್ರಿಯ ಮೇಲೆ, "ಇದೇ ಸರ್ ಅವನು ಬರೆದಿರುವುದು"
ಎಲ್ಲರು ವಿವರ ಓದಿದರು, ಹೆಸರು :ಸುನಿಲ್, ಮೋಟರ್ ಬೈಕ್ ನಂಬರ್ : KA05 EM 1515, ಮೊಬೈಲ್ ನಂಬರ್ :೯೮೩೪....೩೪ , ಉದ್ದೇಶ : ಶೀಲ ಪಾರ್ಟಿ ಹುಟ್ಟುಹಬ್ಬ
ರಾಜಾರಾಮ್ ಖುಷಿಯಾದರು,
"ಅಂದರೆ ಇವನು ನೇರವಾಗಿ ಕೊಲೆಯನ್ನು ನೋಡಿರುವನು, ಪ್ರತ್ಯಕ್ಷದರ್ಶಿ, ಅಂದರೆ ಐ ವಿಟ್ ನೆಸ್ .... ಮೈಗಾಡ್ "
ನಾಯಕ್ ಈಗ ಬೆಚ್ಚಿ ಬಿದ್ದ . ಅವನಿಗೆ ಈಗ ರೇಗಿ ಹೋಗಿತ್ತು, ಆದಿನ ತಾನು ಬಂದಾಗ ವಾಚ್ ಮನ್ ಇದನ್ನು ಹೇಳಿರಲಿಲ್ಲ
"ಏನಯ್ಯ , ನಾನು ಆ ದಿನ ಬಂದಾಗ ನೀನಿದನ್ನು ಏಕೆ ಹೇಳಲಿಲ್ಲ" ರೇಗಿದ, ಅವನ ಮೇಲೆ
"ನೀವು ಕೇಳಲಿಲ್ವಲ್ಲ ಸಾರ್, ಕೇಳಿದ್ದರೆ ನಾನು ಹೇಳಿರುತ್ತಿದ್ದೆ, ನನಗೇನು ಗೊತ್ತು, ಇವೆಲ್ಲ ಹೇಳಬೇಕು ಅಂತ" ಎಂದು ಪೆದ್ದು ಪೆದ್ದಾಗಿ ನುಡಿದ.
ಇನ್ಸ್ ಪೆಕ್ಟರ್ ರಾಜಾರಾಮ್ ನಾಯಕನತ್ತ ತಿರುಗಿ ಕುಹಕದ ನಗೆ ನಗುತ್ತಿದ್ದ, ನಾಯಕ್ ಗೆ ಉರಿದು ಹೋಯಿತು.
ನಾಯಕ್ ಕೇಳಿದ "ಇದೆ ಬೈಕ್ ಅಂತ ಗ್ಯಾರಂಟಿನ" .
ವಾಚ್ ಮನ್ ಹೇಳಿದ
"ನಾನು ಯಾವತ್ತು ತಪ್ಪಲ್ಲ ಸಾರ್, ಅದೇ ನನಗೆ ನೆನಪಿದೆ, ನೋಡಿ ಮೊದಲ ಅಕ್ಷರ ಮರೆತು ರೆಡ್ ಇಂಕಿನಲ್ಲಿ ಬರೆದಿದ್ದಾನೆ"
"ಮತ್ತೆ ಅವತ್ತು ಹೆಸರು ಗೊತ್ತಿಲ್ಲ ಅಂದೆಯಲ್ಲ, ಇಲ್ಲಿ ಹೆಸರಿದೆ" ಅಂದ ನಾಯಕ್ ಕೌತುಕದಿಂದ
"ಹೌದ ಸಾರ್, ನನಗೆ ಇಂಗ್ಲೀಶ್ ಅರ್ಥವಾಗಲ್ಲ, ನಂಬರ್ ಮಾತ್ರ ಗೊತ್ತಾಗುತ್ತೆ, ಬರಿ ತಮಿಳು ಅಷ್ಟೆ ಓದಕ್ಕೆ ಬರೋದು" ಎಂದ.
ಸರಿ ಇಬ್ಬರು ಹೋಟೆಲ್ ನ ಆಡಳಿತಕ್ಕೆ ತಿಳಿಸಿ, ಆ ವಾಚ್ ಮನ್ ಲಾಗ್ ಬುಕ್ ಪಡೆದು , ಅದಕ್ಕೆ ಸಂಬಂದಿಸಿದ ಲೆಟರ್ ಅನ್ನು ಹೆಡ್ ಆಫೀಸ್ ನಿಂದ ಕಳಿಸುವದಾಗಿ ತಿಳಿಸಿ, ಸಿ.ಸಿ.ಬಿ ಹೆಡ್ ಕ್ವಾರ್ಟಸ್ ಸೇರಿದರು. ಹೋಟೆಲ್ ನಲ್ಲಿ ತಿಂಡಿ ಕಾಫಿ ಎಲ್ಲ ಆಗಿತ್ತು. ರಾಜಾರಾಮ್ ಮತ್ತು ನಾಯಕ್ ಜೊತೆ ಬೇರೆಯವರು ಸೇರಿದರು.
ಸುನಿಲನ ನಂಬರಿಗೆ ಕಾಲ್ ಮಾಡಿದರು ರಾಜಾರಾಮ್ , ಎಲ್ಲರ ಮನದಲ್ಲು ಉದ್ವೇಗ. ಒಂದು... ಎರಡು...ಕ್ಷಣ
"ಹಲೋ, ಸುನಿಲ್ ಹಿಯರ್.. " ಎಂಬ ದ್ವನಿ.
"ಹಲೋ ಸುನಿಲ್, ನಾನು ರಾಜಾರಾಮ್ ಅಂತ ಇನ್ಸ್ಪೆಕ್ಟರ್ , ಸಿ.ಸಿ.ಬಿ. ಬೆಂಗಳೂರು, ಕೆಲವು ಇನ್ ಫರ್ಮೇಶ ಗೋಸ್ಕರ ನಿಮ್ಮನ್ನು ಕಾಂಟಾಕ್ಟ್ ಮಾಡುತ್ತಿದ್ದೇವೆ. ನೀವು ಸಿ.ಸಿ.ಬಿ. ಹೆಡ್ ಕ್ವಾರ್ಟಾರ್ಸ್ ಗೆ ಬರಲು ಸಾದ್ಯವ, ಅಥವ ನಾವೆ ಅಲ್ಲಿಗೆ ಬರಬೇಕೆಂದರು ರೆಡಿ" ಎಂದರು. ಅವರು ಎಷ್ಟೆ ವಿನಯವಾಗಿ ಮಾತನಾಡಿದರು, ಪೋಲಿಸ್ ಗತ್ತು, ಆಕಡೆಯಿರುವ ಸುನಿಲ್ ಗೆ ತಿಳಿಯುತ್ತಿತ್ತು. ಅವನು
"ಏಕೆ ಅಂತ ಕೇಳಬಹುದಾ ಸರ್, ನಾನು ಪೋಲಿಸ್ ಗೆ ತಿಳಿಸಬೇಕಾದ ವಿಷಯವೇನಿದೆ? " ಎಂದ ತುಸು ಆತಂಕ, ಮತ್ತು ಆಶ್ಚರ್ಯದಲ್ಲಿ.
"ಸುನಿಲ್ ರವರೆ ನಾವು ಮಹಾಂತೇಶ್ ಎಂಬುವರ ಕೊಲೆಯ ತನಿಖೆಯಲ್ಲಿದ್ದೇವೆ, ನಿಮಗೆ ತಿಳಿದಿದೆ, ನೀವು ಮೇ ೧೫ ರ ಸಂಜೆ ಹೋಟೆಲ್ ಏಟ್ರಿಯಾಗೆ ಪಾರ್ಟಿಗೆ ಹೋದಾಗ ಅಲ್ಲಿ ರಸ್ತೆಯ ಪಕ್ಕ ಒಂದು ಅಪಘಾತ ಕಂಡಿರಿ ಅದರ ವಿವರಣೆ ಬೇಕಿದೆ ಅಷ್ಟೆ, ನೀವು ಹೆದರಬೇಕಿಲ್ಲ, ನಿಮಗೆ ಯಾವ ತೊಂದರೆಯು ಇಲ್ಲ " ಎಂದರು.
ಅವನು ತುಸು ಆಶ್ಚರ್ಯದಿಂದಲೆ,
"ಸರಿ ಸಾರ್ ಆದರೆ ನಿಮಗೆ ನನ್ನ ಮೊಬೈಲ್ ನಂಬರ್ ಹೇಗೆ ದೊರಕಿತು, ಮತ್ತು ನಾನು ಆ ದಿನ ಅಲ್ಲಿದ್ದೆ ಅಂತ ಹೇಗೆ...." ಎಂದ ಅನುಮಾನದಿಂದ. ರಾಜಾರಾಮ್ ನಕ್ಕರು
"ನೀವೆ ಎಲ್ಲ ವಿವರವನ್ನು ಹೋಟೆಲಿನ ವಾಚ್ ಮನ್ ಲಾಗ್ ಬುಕ್ಕಿನಲ್ಲಿ ಬರೆದಿರುವಿರಲ್ಲ, ಸುನಿಲ್ , ಯಾವಾಗ ಬರುವಿರಿ, ಬೇಗ ಬಂದರೆ ನಮಗೆ ಅನುಕೂಲ" ಎಂದರು. ಸುನಿಲ್ ಗೆ ಆಶ್ಚರ್ಯ ಪೋಲಿಸರು ಹೇಗೆಲ್ಲ ಕೆಲಸ ಮಾಡ್ತಾರೆ ಅಂತ, ಈಗ ವಿದಿಯಿಲ್ಲ
"ಆಯ್ತು ಸಾರ್ ನಾನೀಗ ಇಂಡಿಯನ್ ಎಕ್ಸ್ ಪ್ರೆಸ್ ಹತ್ತಿರದ ನಮ್ಮ ಆಫೀಸಿನಲ್ಲಿದ್ದೇನೆ, ಈಗಲೆ ಹೊರಟು, ಹತ್ತು ಹದಿನೈದು ನಿಮಿಶದಲ್ಲಿ ಅಲ್ಲಿರುತ್ತೇನೆ, ಹೇಗೆ ಬರುವುದು ತಿಳಿಸಿ" ಎಂದು ಕೇಳಿ ತಿಳಿದು , ಫೋನ್ ಡಿಸ್ಕನೆಕ್ಟ್ ಮಾಡಿದ.
ರಾಜಾರಾಮ್ ಸಂತಸದಿಂದ ಇದ್ದರು, ಒಳ್ಳೆ ಬ್ರೇಕ್ ಥ್ರೂ ಸಿಕ್ಕಿತು ಎಂದು, ಎಲ್ಲರು ಮಹಾಂತೇಶನ ಕೇಸಿನ ಬಗ್ಗೆ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತಿರುವಾಗಲೆ, ತನ್ನ ಬೈಕನ್ನು ಹೊರನಿಲ್ಲಿಸಿ, ಬಾಗಿಲಲ್ಲಿದ್ದ ಪಿ.ಸಿ.ಗಳನ್ನು ಕೇಳುತ್ತ ಒಳಗೆ ಬಂದ ಸುನಿಲ್. ಅವನನ್ನು ಸ್ವಾಗತಿಸಿ, ಕೂಡಿಸಿದರು, ರಾಜಾರಾಮ್,
"ಒಳ್ಳೆದು ಸುನಿಲ್ , ಹೇಳಿ ಕಾಫಿ ಟೀ ಏನಾದರು ತೆಗೆದುಕೊಳ್ತೀರ?" , ಸುನಿಲ್ ಗೆ ಸ್ವಲ್ಪ ರಿಲಾಕ್ಸ್ ಆಯಿತು, ಇಂತ ಟ್ರೀಟ್ ಮೆಂಟಿನಿಂದ, ಅವನ ಮಾನಸಿಕ ಒತ್ತಡ ಕಡಿಮೆ ಯಾಯ್ತು.
"ಎಲ್ಲ ಆಗಿದೆ ಸಾರ್, ನನ್ನಿಂದ ನಿಮಗೆ ಯಾವ ಇನ್ ಫರ್ಮೇಶನ್ ಬೇಕಾಗಿದೆ ತಿಳಿಸಿ" ಎಂದ
"ಮತ್ತೇನಿಲ್ಲ, ನೀವು ವಾಚ್ ಮನ್ ಬಳಿ ಆದಿನ ಸಂಜೆ ಹೋಟೆಲ್ ಏಟ್ರಿಯ ಹತ್ತಿರದಲ್ಲಿ ಮಾಹಾಂತೇಶ್ ಮೇಲೆ ನಡೆದ ಹಲ್ಲೆ ನೋಡಿದೆ ಅಂತ ತಿಳಿಸಿರುವಿರಿ ಅದರ ಬಗ್ಗೆ ಸ್ವಲ್ಪ ವಿವರವಾಗಿ ಹೇಳಿ, ನಿಧಾನವಾಗಿ ನೆನಪಿಸಿಕೊಳ್ಳಿ , ಎಂತದೆ ಸಣ್ಣ ವಿಷಯವಾದರು ಪರವಾಗಿಲ್ಲ, ನಿಮಗೆ ನೆನಪಿರುವ ಎಲ್ಲವನ್ನು ಹೇಳಿ" ಎಂದರು ರಾಜಾರಾಮ್
"ಸರಿ ಸಾರ್ ಹೇಳ್ತೀನಿ' ಎಂದು ನುಡಿತು ಒಂದು ನಿಮಿಶ ಸುಮ್ಮನೆ ಕುಳಿತ , ಸುನಿಲ್ ಆದಿನ ನಡೆದಿದ್ದನ್ನು ನೆನಪಿಸಿಕೊಳ್ಳುತ್ತ,
ನಂತರ ನುಡಿದ
"ಸಾರ್ ಆದಿನ ನನ್ನ ಕಲೀಗ್ ಒಬ್ಬರ ಮಗುವಿನ ಹುಟ್ಟಿದ ಹಬ್ಬದ ಪಾರ್ಟಿ ಇತ್ತು ಹೋಟೆಲ್ ಏಟ್ರಿಯಾದಲ್ಲಿ, ನಾನು ಆಫೀಸಿನಿಂದ ಮನೆಗೆ ಹೋಗಿ ನಂತರ ನನ್ನ ಮಗುವನ್ನು ಕರೆದುಕೊಂಡು ಅಲ್ಲಿಗೆ ಹೊರಟೆ, ಸಂಜೆ ಅಂದರೆ ಆಗಲೆ ಕತ್ತಲೆಯಾಗುತ್ತಿತ್ತು, ಬಹುಷಃ ಏಳು ಗಂಟೆ ಇರಬಹುದು ಸಮಯ ನೆನಪಿಲ್ಲ, ಹೋಟೆಲ್ ಹತ್ತಿರ ಬರುತ್ತಿರುವಾಗ ಗಮನಿಸಿದೆ, ನನ್ನ ಮುಂದೆ ಹೋಗುತ್ತಿದ್ದ, ಕೆಂಪನೆಯ ಆಲ್ಟೊ ಕಾರೊಂದು, ವೇಗವಾಗಿ ಹೋಗುತ್ತ ಇದ್ದದ್ದು, ಎದುರಿನ ಕಾರಿಗೆ ಡಿಕ್ಕಿ ಹೊಡೆಯಿತು, ನಾನು ಮೊದಲು ಆಕ್ಸಿಡೆಂಟ್ ಇರಬಹುದು ಎಂದು ಗಾಭರಿ ಕುತೂಹಲದಿಂದ ಗಾಡಿ ನಿಲ್ಲಿಸಿದೆ, ಅಲ್ಲದೆ ನಾನು ಸಹ ಹಿಂದಿನಿಂದ ಅದೇ ಕೆಂಪು ಆಲ್ಟೋಗೆ ಡಿಕ್ಕಿ ಹೊಡೆಯುವ ಸಾದ್ಯತೆ ಇತ್ತು. ಮುಂದೆ ಇದ್ದಿದ್ದು ಮಾರುತಿ- ೮೦೦ ಕಾರು, ಅದರಲ್ಲಿದ್ದ ವ್ಯಕ್ತಿ ಕೆಳಗಿಳಿದು ಕಾರನ್ನು ಪರೀಶಿಲಿಸುತ್ತಿದ್ದ, ಆಗ ಹಿಂದಿನ ಆಲ್ಟೋ ಕಾರಿನಿಂದ ಮೂವರು ಅಥವ ನಾಲ್ವರು ಇಳಿದು ವೇಗವಾಗಿ ಓಡುತ್ತ ಮುಂದಿದ್ದ ಕಾರಿನತ್ತ ಹೋಗಿ ಕೆಳಗಿಳಿದು ನಿಂತಿದ್ದ ವ್ಯಕ್ತಿಗೆ ಅವರ ಕೈಲಿದ್ದ ಕೋಲು,ದೊಣ್ಣೆಯಂತದು, ಬಹುಷಃ ಕ್ರಿಕೇಟ್ ಬ್ಯಾಟಿರಬಹುದು ಅವುಗಳಿಂದ ಹೊಡೆಯುತ್ತಿದ್ದರು, ನಂತರ ಆ ವ್ಯಕ್ತಿ ಕೆಳಗೆ ಬಿದ್ದ, ನಂತರ ಅವರೆಲ್ಲ ಇತ್ತ ತಿರುಗಿದರು, ನಾನು ಆಗ ಬೈಕಿನಲ್ಲಿ ಮುಂದೆ ಹೊರಟುಬಿಟ್ಟೆ , ಬೈಕಿನಲ್ಲಿ ನನ್ನ ಮಗಳು ಬೇರೆ ಇದ್ದಳು, ಯಾಕೆ ರಿಸ್ಕ್ ಅನ್ನಿಸಿತು"
ರಾಜಾರಾಮ್ ಈಗ ನುಡಿದರು "ಸರಿ , ಈಗ ಆ ವ್ಯಕ್ತಿಗಳನ್ನು ಗುರುತಿಸಬಲ್ಲಿರ, ಮತ್ತೆ ಕಾರಿನ ನಂಬರ್ ಏನಾದರು ನೆನಪಿದೆಯ ಹೇಗೆ ತಿಳಿಸಿ"
ಸುನಿಲ್ ನುಡಿದನು "ಸಾರ್ ಅವರೆಲ ಸುಮಾರು ಒಂದೆ ವಯಸಿನವರು ಅನ್ನಿಸಿತು, ಸರಿಸುಮಾರು ೨೫ ಅಥವ ೨೮ ಇರಬಹುದು. ಒಬ್ಬಾತ ಸ್ವಲ್ಪ ಗಡ್ಡ ಬಿಟ್ಟಿದ್ದ, , ಹೌದು ನೋಡಿ, ಮತ್ತೆ ವಾಹನದ ನಂಬರ್ ಕೇಳಿದಿರಿ, ಆ ದಿನ ಕೆಂಪು ಕಾರು ಮುಂದಿನ ಕಾರಿಗೆ ಗುದ್ದಿದಾಗ ಗಮನಿಸಿದೆ, 945 ಅಂತ ಕೊನೆಯಲ್ಲಿ ಇದ್ದ ನೆನಪು, ಆದರೆ ಗಾಭರಿಯಲ್ಲಿ ಮರೆತು ಬಿಟ್ಟೆ, ಮತ್ತೆ ವಾಪಸ್ ನಾನು ಹೋಟೆಲ್ ನಿಂದ ಹೊರೆಟಾಗ ಅಲ್ಲಿ ಆ ಕಾರು ಇರಲಿಲ್ಲ, ಮತ್ತು ಕೆಳಗೆ ಬಿದ್ದ ವ್ಯಕ್ತಿಯು ಇರಲಿಲ್ಲ, ಬರಿ ನೀವು ಅಂದರೆ ಪೋಲಿಸಿರು ಇದ್ದಿರಿ, ಮತ್ತು ಮುಂದಿದ್ದ ಬಿಳಿಯ ಮಾರುತಿ-೮೦೦ ಮಾತ್ರ ಆಲ್ಲಿ ನಿಂತಿತ್ತು, ಹಾ ಮರೆತೆ, ಡಿಕ್ಕಿಯಾದಾಗ ಕೆಂಪು ಆಲ್ಟೋ ಕಾರಿನ ಮುಂಬಾಗ ಏಟು ಬಿದ್ದು ಒಳಗೆ ಹೋಗಿ ನೆಗ್ಗಿ ಹೋಗಿತ್ತು"
ಮತ್ತಷ್ಟು ವಿಷಯಗಳನ್ನು ಚರ್ಚಿಸಿದರು.
ರಾಜಾರಾಮ್ ನುಡಿದರು
"ವೆಲ್ ಸುನಿಲ್ ನಿಮ್ಮಿಂದ ಸಾಕಷ್ಟು ವಿಷಯ ತಿಳಿಯಿತು, ಮತ್ತೆ ಏನಾದರು ಅನುಮಾನ ಬಂದರೆ ಮತ್ತೆ ಕೇಳುತ್ತೇವೆ , ಬಹುಷ: ನೀವು ಮುಖ್ಯ ಸಾಕ್ಷಿಯಾಗಬೇಕಾಗಬಹುದು, ನೀವೆ ಅಲ್ಲವೆ ಐ ವಿಟ್ ನೆಸ್"
ಸುನಿಲ ಪೂರ ಗಾಭರಿಯಾದ
"ಸಾರ್ ನಾನು ಕೋರ್ಟಿಗೆಲ್ಲ ಬರಬೇಕಾ, ಬೇಡ ಸಾರ್ ನಿಮ್ಮಗೆ ಎಲ್ಲ ತಿಳಿಸಿರುವೆನಲ್ಲ, ನನಗೆ ತೊಂದರೆ ಆಗಲ್ವ ಸಾರ್" ಎಂದು ಗೋಗೆರದ.
"ಸುನಿಲ್ , ನೀವು ಎಜುಕೇಟೇಡ್ ಏಕೆ ಅಷ್ಟು ಹೆದರಿಕೆ, ನಾವೇನು ನಿಮ್ಮನ್ನು ಏನುಮಾಡುವದಿಲ್ಲ, ಕೋರ್ಟ್ ಸಹ ನಿಮ್ಮ ಏನು ಮಾಡುವದಿಲ್ಲ, ಮತ್ತೊಂದು ವಿಷಯ ನಿಮ್ಮ ಹೆಸರಾಗಲಿ ನಿಮ್ಮ ಪರಿಚಯವಾಗಲಿ ಎಲ್ಲಿಯು ಬರದಂತೆ ನಾವು ಎಚ್ಚರ ವಹಿಸುತ್ತೇವೆ ಆಯ್ತಾ. ಯಾವ ಮಾಧ್ಯಮಕ್ಕಾಗಲಿ , ಅಥವ ಪೇಪರಿಗಾಗಲಿ ನಿಮ್ಮ ವಿಷಯ ತಿಳಿಸುವದಿಲ್ಲ. ನಿಮಗೆ ಯಾವ ತೊಂದರೆಯು ಇರದಂತೆ ನೋಡಿಕೊಳ್ತೇವೆ ಆಯ್ತಾ" ಎಂದು ದೈರ್ಯ ತುಂಬಿದರು, ರಾಜಾರಾಮ್ ಅವನಲ್ಲಿ.
ಸುನಿಲನ ಮನೆಯ ವಿಳಾಸ, ಆಫೀಸಿನ ವಿಳಾಸ, ಅವನ ಫೋನ್ ನಂಬರಗಳು ಎಲ್ಲವನ್ನು ಪಡೆದು ಅಗತ್ಯ ಬಿದ್ದರೆ ಮಾತ್ರ ಕಂಟ್ಯಾಕ್ಟ್ ಮಾಡುವದಾಗಿ ತಿಳಿಸಿ ಕಳಿಸಿಕೊಟ್ಟರು.
ನಾಯಕ್ ಗು ಒಂದು ಸಮಾದಾನ ಎನಿಸಿತು, ಸದ್ಯ ಎಂತದೋ ಒಂದು , ಘಟನೆ ನೋಡಿರುವ ಒಬ್ಬ ಸಾಕ್ಷಿ ಸಿಕ್ಕಿದ. ಹೇಗು ಮುಂದುವರೆಯಬಹುದು ಕೇಸಿನಲ್ಲಿ ಎಂದು.
ಈಗ ಮೇಕ್ರಿ ಸರ್ಕಲ್ನಲ್ಲಿ ಇದ್ದ ಸಿ.ಸಿ. ಕ್ಯಾಮರದ ದೃಷ್ಯದ ಅನಾಲಿಸಿಸೆ ಗೆ ಪುಣೆಗೆ ಕಳಿಸಿದ್ದರು, ಅವರನ್ನು ಕಾಂಟ್ಯಾಕ್ಟ್ ಮಾಡಿ, ಸುನಿಲ ತಿಳಿಸಿದ ಕಾರಿನ ವಿವರವನ್ನೆಲ್ಲ ಮೈಲ್ ಮಾಡುವದಾಗಿ ತಿಳಿಸಿ, 'ಸಿ.ಸಿ.ಕ್ಯಾಮರದಲ್ಲಿ ಆ ಕಾರಿನ ವಿವರವೇನಾದರು ಸಿಗುವುದೆ ಎಂದು ನೋಡಲು ತಿಳಿಸಿದರು' , ಸಿ.ಸಿ.ಬಿ ಚೀಫ್ ದಯಾನಂದ.
ಆಗಲೆ ರಾತ್ರಿ ತಡವಾಗಿತ್ತು, ಮರುದಿನ ಸಹಕಾರಿ ನಗರ ಸೊಸೈಟಿಯತ್ತ ಪುನಃ ಹೋಗುವುದು ಎಂಬ ತೀರ್ಮಾನಕ್ಕೆ ಎಲ್ಲರು ಬಂದರು. ನಾಯಕ್ ಈಗ ಉತ್ಸಾಹ ತಾಳಿದ್ದ, ತಾನು ಪುನ: ಮರುದಿನ ಬೆಳಗ್ಗೆ ಮುಂಚೆಯೆ ಬಂದು ಅವರನ್ನು ಕೂಡಿಕೊಳ್ಳುವದಾಗಿ ತಿಳಿಸಿದ.
-------------------------------------------------------------------------------------------------------------------------
ಮರುದಿನ ನಾಯಕ್ ತನ್ನ ACP ಗೆ ಇನ್ ಫರ್ಮ್ ಮಾಡಿ, ನೇರ ಸಿ.ಸಿ.ಬಿ. ಕೇಂದ್ರ ಕಚೇರಿಗೆ ಬೇಟಿ ನೀಡಿದ. ನಾಯಕನನ್ನು ರಾಜಾರಾಮ್ ನಗುತ್ತ ಸ್ವಾಗತಿಸಿದ. ಒಳಗೆ ಹೋಗುವಾಗಲೆ ಅವರು ಬೆಳಗಿನ ಉಪಹಾರ ಕಾಫಿ ಎಲ್ಲವನ್ನು ಅಲ್ಲಿಗೆ ತರಿಸಿದರು. ರಾಜಾರಾಮ್ ಸಬ್ ಇನ್ಸ್ ಪೆಕ್ಟರ್ ನಾಯಕ್ ಜೊತೆ ಸಹಕಾರನಗರ ಕೋಅಪರೇಟಿವ್ ಸೊಸೈಟಿಗೆ ಹೋಗಿ ಬರೋಣವೆಂದು ನಿರ್ದರಿಸಿ, ತನ್ನ ಚೀಫ್ ACP ಗುಲೇದ್ ರವರಿಗೆ ಕಾಲ್ ಮಾಡಿದರು. ಅವರಿಗೆ ಆಶ್ಚರ್ಯ ಕಾದಿತ್ತು, ಸ್ವಲ್ಪ ಕಾಯುವಂತೆ ತಿಳಿಸಿದ ಅವರು, ಸ್ವಲ್ಪ ಹೊತ್ತಿನಲ್ಲೆ ತಾವು ಮತ್ತು ಸಿ.ಸಿ.ಬಿ ಚೀಫ್ ದಯಾನಂದ ಸಹ ಅವರ ಜೊತೆ ಬರುವದಾಗಿ ತಿಳಿಸಿದಾಗ ನಾಯಕ್ ಗೆ ಖುಷಿ ಮತ್ತು ಅಚ್ಚರಿ.
ಹತ್ತು ನಿಮಿಶದಲ್ಲಿಯೆ ಅವರಿಬ್ಬರು ಬಂದು ಜೊತೆ ಸೇರಿದರು. ಎಲ್ಲರು ಹೊರಡಲು ಪೋಲಿಸ್ ಜೀಪ್ ಸಿದ್ದವಾಗಿತ್ತು. ಹೊರಗೆ ಬಂದು ಜೀಪ್ ಹತ್ತುವಾಗ ACP ಗುಲೇದ್ ರವರು ಮತ್ತೊಂದು ಸಮದಾನದ ಸಂಗತಿ ತಿಳಿಸಿದರು. ನಿನ್ನೆ ಸುನಿಲ ಹೇಳಿದ ವಿವರಗಳು ಪುಣೆಯ ಸಿ.ಸಿ.ಕ್ಯಾಮರದ ಅನಾಲಿಸಿಸ್ ಜೊತೆ ಹೋಲಿಕೆಯಾಗುತ್ತಿದೆಯಂತೆ, ಅವರು ಸ್ವಷ್ಟವಾಗಿ ಹೇಳುತ್ತಿದ್ದಾರೆ, ಮೇ ೧೫ ರಾತ್ರಿ ಎಂಟುಗಂಟೆ ಸುಮಾರಿಗೆ ಮಹಾಂತೇಶನ ಹಿಂದೆ ಇದ್ದ ಕಾರು ಕೆಂಪು ಬಣ್ಣದ ಆಲ್ಟೊ ಮತ್ತು ಅದರ ನಂಬರ್ ಸಹ ಸುನಿಲ ತಿಳಿಸದಂತೆ ಇತ್ತು ಅದು TN23 MN 945.
ಅವರು ಮಾತನಾಡುತ್ತಿರುವಂತೆ ಜೀಪ್ ಡ್ರೈವರ್ ಹೇಳಿದ ,
'TN23 ಅಂದ್ರೆ ಅದು ವೆಲ್ಲೂರ್ ರಿಜಿಸ್ಟೇಷನ್ ಇರುತ್ತೆ ಸಾರ್, ತಮಿಳು ನಾಡಿನ ಗಾಡಿ'
ದಯಾನಂದ, ಗುಲೇದ್ ಹಾಗು ರಾಜಾರಾಮ್ ಹಿಂದಿನ ಸೀಟಿಗೆ ಹೋಗುತ್ತ, ನಾಯಕ್ ಗೆ ಮುಂದಿನ ಸೀಟಿಗೆ ಬರುವಂತೆ ತಿಳಿಸಿದರು. ಒಮ್ಮೆ ಅವನು ಸಹಕಾರನಗರ ಸೊಸೈಟಿಗೆ ಹೋಗಿ ಬಂದವನಲ್ಲವೆ. ನಾಯಕ್ ಗಾಡಿ ಹತ್ತಿ ಮುಂದೆ ಕುಳಿತುಕೊಳ್ಳುತ್ತಿರುವಂತೆ , ಡ್ರೈವರ್ ನಾಯಕ್ ನನ್ನು ಒಮ್ಮೆ ದಿಟ್ಟಿಸಿದ. ನಾಯಕ್ ಗೆ ಎಂತದೊ ಕಸಿವಿಸಿ. ಈ ಡ್ರೈವರ್ ನನ್ನು ಮತ್ತೆಲ್ಲೊ ನೋಡಿರುವಂತಿದೆ ಎಲ್ಲಿರಬಹುದು ಎಂದು ಯೋಚಿಸುವದರಲ್ಲಿ ಜೀಪ್ ಹೊರಟಿತು. ಸರಿಯಾಗಿ ಹತ್ತು ಗಂಟೆ ಮೂವತ್ತು ನಿಮಿಶಕ್ಕೆ ಎಲ್ಲರು ಸೊಸೈಟಿ ಗೇಟ್ ಬಳಿ ಇದ್ದರು. ಎಲ್ಲರು ಕೆಳಗಿಳಿದರು. ಒಳಗೆ ಹೊರಟಂತೆ ಅದೇನೊ, ದಯಾನಂದ ಸಾಹೇಬರು , ಜೀಪಿನ ಡ್ರೈವರ್ ನನ್ನೆ ಒಂದು ಕ್ಷಣ ನೋಡಿದರು, ಅವನು ಅಷ್ಟೆ , ಅದೇನೊ ಮಾತುಗಳ ವಿನಿಮಯ ಕಣ್ಣಿನಲ್ಲೆ ಆಯಿತು.
ಒಳಗೆ ಹೋಗುವಾಗಲೆ ಸಹಕಾರನಗರ ಸೊಸೈಟಿಯ ಹಿರಿಯ ಅಧಿಕಾರಿಯೆ ಬಂದು ಸ್ವಾಗತಿಸಿದರು, ಇವರು ಬರುವ ವಿಷಯ ಮೊದಲೆ ತಿಳಿಸಲಾಗಿತ್ತು ಅನ್ನಿಸುತ್ತೆ ಅಂದುಕೊಂಡ ನಾಯಕ್. ಒಳಗಿನ ಚೇಂಬರ್ ಗೆ ಹೋದರು ಎಲ್ಲರು. ನಾಲ್ವರು ಕುಳಿತಂತೆ, ಗುಲೇದ್ ಸಾಹೇಬರು ಅಲ್ಲಿಯ ಅಧಿಕಾರಿಗಳನ್ನು ಕುರಿತು ಮಹಾಂತೇಶನ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಕೇಳಿದರು. ಎಲ್ಲವು ಅಸ್ವಷ್ಟ ಪ್ರಶ್ನೆಗಳು, ನಾಯಕ ಅಂದುಕೊಂಡ. ಇದೇನು ಹೀಗೆ ಗೊತ್ತುಗುರಿ ಇಲ್ಲದಂತೆ ಏನೇನೊ ಕೇಳುತ್ತಿರುವರು. ಆಗ ಗುಲೇದ್ ಸಾಹೇಬರು
ನಾವು ಕೆಲವು ಕೆಲಸಗಾರರ ಕೈಲಿ ಮಾತನಾಡಲು ಬಯಸಿದ್ದೇವೆ ಅವರನ್ನು ಕರೆಸಿ ಎಂದರು.
"ಎಲ್ಲರನ್ನು ಪುನ: ಕರೆಸಲೆ" ಅವರ ಪ್ರಶ್ನೆ. ಆಗ ರಾಜಾರಾಮ್ ಜೇಬಿನಿಂದ ಒಂದು ಕಾಗದ ತೆಗೆದರು,
"ಎಲ್ಲರು ಬೇಡ, ಈ ಕಾಗದದಲ್ಲಿರುವ ಅಧಿಕಾರಿ ಮತ್ತು ಕೆಲಸಗಾರರು ಮಾತ್ರ ಸಾಕು" ಎಂದರು.
ನಾಯಕ್ ನಿಗೆ ಆಶ್ಚರ್ಯ, ಅದರಲ್ಲಿ ಇದ್ದದ್ದು, ಕೇವಲ ನಾಲಕ್ಕು ಹೆಸರು ಮಾತ್ರ, ಇವನಿಗೆ ಆಶ್ಚರ್ಯ ಇವರು ಯಾವ ಬೇಸಿಸ್ ಮೇಲೆ ಶಾರ್ಟ್ ಲಿಷ್ಟ್ ಮಾಡಿದ್ದಾರೆ ಎಂದು. ಮತ್ತೆ ಗಮನಿಸಿದ, ತನ್ನ ಜೊತೆ ಇದ್ದ ಮತ್ತೊಂದು ಲಿಷ್ಟ್ ಜೊತೆ ಹೋಲಿಸುತ್ತ, ಇವರ ಸೆಲೆಕ್ಟ್ ಮಾಡಿಸುವ ಎಲ್ಲ ಕೆಲಸಗಾರರ ವಯಸ್ಸು ೨೫ ರಿಂದ ೩೦ ರ ಒಳಗೆ ಇರುವವರು, ನಾಯಕನಿಗೆ ಹೊಳೆಯಿತು. ಪ್ರತ್ಯಕ್ಷದರ್ಶಿ ಸುನಿಲ್ ಆದಿನ ದಾಳಿಮಾಡಿದವರು ವಯಸ್ಸು ಹೆಚ್ಚು ಕಡಿಮೆ ಇದೆ ಎಂದು ತಿಳಿಸಿದ್ದ. ಅದಕ್ಕಾಗಿ ಇರಬಹುದು ಸಿ.ಸಿ.ಬಿ ನವರ ಜಾಣ್ಮೆ ಅವನಿಗೆ ಮೆಚ್ಚುಗೆಯಾಯಿತು.
ಸ್ವಲ್ಪ ಕಾಲದಲ್ಲೆ ಮೂವರು ಕೆಲಸಗಾರರು ಒಳಬಂದರು,
ಒಬ್ಬೊಬ್ಬರು ಹಿನ್ನಲೆ , ಅವರು ಕೆಲಸಕ್ಕೆ ಸೇರಿದ ಪರಿಸ್ಥಿಥಿ, ಈಗ ಅವರು ಮತ್ತೆ ಎಲ್ಲಿಯಾದರು ಕೆಲಸ ಪ್ರಯತ್ನ ಪಡುತ್ತಿದ್ದಾರ, ಅವರ ಅಲ್ಲಿನ ಕಾರ್ಯವ್ಯಾಪ್ತಿ ಏನು, ಹೀಗೆ ಹಲವಾರು ವಿಷಯ ಕೆದಕಿದರು. ಅವರು ತಮ್ಮ ವಿಷಯವನ್ನೆಲ್ಲ ವಿವರವಾಗಿ ತಿಳಿಸಿದರು. ಆದರೆ ಆ ಲಿಷ್ಟ್ ನಲ್ಲಿದ್ದ ಕಡೆಯ ಹೆಸರು ಕಿರಣ್ ವಯಸ್ಸು ೨೩ ವರ್ಷ , ಅವನು ಮಾತ್ರ ಇರಲಿಲ್ಲ.
ರಾಜಾರಾಮ್ ಪ್ರಶ್ನಿಸಿದರು,
"ಇವರೆಲ್ಲ ಸರಿ , ಆದರೆ ಕಿರಣ್ ಎನ್ನುವ ಎಲ್ಲಿ ಒಳ ಬರಲಿಲ್ಲ ಅವನನ್ನು ಕರೆಯಿರಿ"
ಅಲ್ಲಿಯ ಅಧಿಕಾರಿ ತಿಳಿಸಿದರು
"ಇಲ್ಲ ಸಾರ್ ಅವನು ಡ್ಯೂಟಿಗೆ ಬಂದಿಲ್ಲ, ರಜಾ ಎಂದು ತಿಳಿಸಿಲ್ಲ, ಬರಬಹುದು" ಎಂದರು.
"ಅವನು ಈದಿನ ಬಂದಿಲ್ಲವೊ ಅಥವ ಹೇಗೆ " ಎಂದರು ರಾಜಾರಾಮ್
"ಸಾರ್ , ಹೇಳಬೇಕೊ ಇಲ್ಲವೊ ತಿಳಿಯುತ್ತಿಲ್ಲ, ಅವನು ಸುಮಾರು ಎಂಟು ದಿನದಿಂದ ಕೆಲಸಕ್ಕೆ ಬರುತ್ತಿಲ್ಲ, ಕಳೆದವಾರ ನಿಮ್ಮ ಸಬ್ ಇನ್ಸ್ ಪೆಕ್ಟರ್ , ಇವರು, " ಎನ್ನುತ್ತ ನಾಯಕ್ ನತ್ತ ಕೈ ತೋರಿಸಿ , ಮುಂದುವರೆದರು
"ಇವರು ಬಂದು ಹೋದರಲ್ಲ ಮರುದಿನದಿಂದ ಕಿರಣ್ ಡ್ಯೂಟಿಗೆ ಬರುತ್ತಿಲ್ಲ, ಯಾವ ಸುದ್ದಿಯು ಇಲ್ಲ" ಎಂದರು.
"ಬರುತ್ತಿಲ್ಲ ಎಂದರೆ ಏನು, ನೀವು ಪೋನ್ ಮಾಡಿ ವಿಚಾರಿಸಲಿಲ್ಲವೆ " ಎಂದು ಪ್ರಶ್ನಿಸಿದರು ರಾಜಾರಾಮ್
"ಪ್ರಯತ್ನಿಸಿದೆವು ಸಾರ್, ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ, ಅವನು ಕಾಂಟಾಕ್ಟ್ ಗೆ ಸಿಗುತ್ತಿಲ್ಲ" ಎಂದರು ಅವರು,
"ನಿಮ್ಮ ಸಹೋದ್ಯೋಗಿ ಅವನು ನಿಮಗೆ ತಿಳಿಯದೆ ಅವನ ಬಗ್ಗೆ " ಎನ್ನುತ್ತ ರಾಜಾರಾಮ್ ಉಳಿದ ಉದ್ಯೋಗಿಗಳನ್ನು ಪ್ರಶ್ನಿಸಿದರು.
"ಸಾರ್, ನಾವು ಇಲ್ಲೆನೊ ಒಟ್ಟಿಗೆ ಇರುತ್ತೇವೆ , ನಿಜ ಆದರೆ ಆಫೀಸ್ ಕೆಲಸದ ನಂತರ ನಮ್ಮ ಸಂಬಂದಗಳೇನು ಇಲ್ಲ, ಆಫೀಸ್ ಸಮಯದ ನಂತರ ನಾವು ಬೆರೆಯುವುದು ಕಡಿಮೆ, ಹಾಗಾಗಿ ಕಿರಣ್ ಬಗ್ಗೆ ನಮಗೆ ಅಷ್ಟಾಗಿ ತಿಳಿಯದು, ಅಲ್ಲದೆ ನಾವು ಅವನ ಮೊಬೈಲ್ ಗೆ ಕಾಲ್ ಮಾಡುವೆವು ವಿನಃ ಅವನ ಮನೆಗೆ ಪೋನೊ ಇದೆಯೊ ಇಲ್ಲವೊ ನಮಗೆ ತಿಳಿಯದು" ಎಂದರು.
ಸರಿ ಅಲ್ಲಿ ಏನು ಮಾಡುವುದು ಉಳಿದಿರಲಿಲ್ಲ, ಕಿರಣ್ ನ ವಿಳಾಸ ಹೇಗು ಇತ್ತು, ಸರಿ ನೋಡಿದರಾಯ್ತೆಂದು ಅಲ್ಲಿಂದ ಹೊರಬಂದು , ಮತ್ತೆ ಅಗತ್ಯವಿದ್ದರೆ ಸಂಪರ್ಕಿಸುವದಾಗಿ ತಿಳಿಸಿ ಹೊರಟರು, ಇವರು ಹೊರಡುವ ಸಮಯಕ್ಕೆ ಸರಿಯಾಗಿ ಡ್ರೈವರ್ ಸಿದ್ದವಾಗಿ ಜೀಪ್ ನಲ್ಲಿ ಕುಳಿತ್ತಿದ್ದ. ಎಲ್ಲರು ಮೌನವಾಗಿದ್ದರು. ಆಗ ದಯಾನಂದ ಅವರು, ಡ್ರೈವರನತ ನೋಡುತ್ತ
"ಎಸ್ , ಮಿ! ಚಕ್ರಪಾಣಿ ಹೇಳಿ, ಏನಾದರು ವಿಷೇಶ ತಿಳಿಯಿತಾ, ಎನಿತಿಂಗ್ ಸ್ಪೆಷಲ್" ಎಂದರು.
ನಾಯಕ್ ಬೆಚ್ಚಿಬಿದ್ದ, ಅವನಿಗೆ ಒಮ್ಮೆಲೆ ಹೊಳೆಯಿತು, ತನ್ನ ನೆನಪಿಗೆ ತಲೆ ಚಚ್ಚಿಕೊಳ್ಳಬೇಕೆನಿಸಿತು, ಡ್ರೈವರ್ ಸೀಟಿನಲ್ಲಿದ್ದವರು , ಸಿ.ಸಿ.ಬಿ. ಯಲ್ಲಿ ಕೆಲಸಮಾಡುತ್ತಿರುವ ಒಬ್ಬ ಅಡಿಶನಲ್ ACP , ಹೆಸರು ಚಕ್ರಪಾಣಿ ಹಿಂದೊಮ್ಮೆ ಅವರನ್ನು ನೋಡಿರುವೆ, ಆದರೆ ವೇಶ ಮರೆಸುವದರಲ್ಲಿ ಅವರು ಚತುರರು, ಅವನು ದಂಗಾಗಿ ಹೋದ, ತಾನು ಮೋಸಹೋದೆನಲ್ಲ ಎಂದು. ನಾಯಕನತ್ತ ಒಮ್ಮೆ ನೋಡಿದ ಚಕ್ರಪಾಣಿ ನಗುತ್ತ ನುಡಿದ
"ಹೌದು ಸಾರ್, ಕೆಲವು ಮುಖ್ಯ ವಿಷಯಗಳೆಲ್ಲ ತಿಳಿದವು, ಸೈಕಲ್ ಸ್ಟಾಂಡನಲ್ಲಿ ಹರಟೆ ಹೊಡೆಯುವರು, ವಾಚ್ ಮನ್ ಇವರನ್ನೆಲ್ಲ ಮಾತನಾಡಿಸಿದೆ, ಸಾಕಷ್ಟು ವಿಶಯವಿದೆ, ಅಲ್ಲಿ ಯಾರ ಬಗ್ಗೆಯು ಸಂದೇಹ ಪಡುವಂತಿಲ್ಲ, ಆದರೆ ಒಬ್ಬ ಹುಡುಗನಿದ್ದಾನೆ, ಅವರ ಹೆಸರು ಕಿರಣ್ ಎಂದು, ಅವನು ಕೆಲಸಕ್ಕೆ ಸೇರಿ ನಾಲಕ್ಕು ವರ್ಷವಾಗಿದೆ, ಅವನ ತಂದೆ ಸೋಮನಾಥ ಸಹ ಇಲ್ಲೆ ಕೆಲಸ ಮಾಡುತ್ತಿದ್ದರು, ಆದರೆ ಅವರು ಕೆಲಸದಲ್ಲಿರುವಾಗಲೆ ಮರಣಹೊಂದಿದರು, ಅ ಅನುಕಂಪದ ಅಧಾರದಲ್ಲಿ ಇವನಿಗೆ ಕೆಲಸ ಸಿಕ್ಕಿದೆ, ಆದರೆ ಇವನ ನಡುವಳಿಕೆ ಅನುಮಾನಾಸ್ಪದ, ಇವನ ವಯಸಿನ ಹಲವು ಗೆಳೆಯರಿದ್ದಾರೆ, ಅವರ ಜೊತೆ ಸೇರಿ, ಕುಡಿತ, ಜೂಜು, ಹುಡುಗಿಯರ ಶೋಕಿ ಇಂತವೆಲ್ಲ ಸಾಕಷ್ಟು ನಡೆಸಿದ್ದಾನೆ. ಮನೆಯಲ್ಲಿ ಇಬ್ಬರು ತಂಗಿಯರು, ಇವನ ತಾಯಿ, ಇವನನ್ನು ಹುಡುಕುತ್ತಾ, ಇಲ್ಲಿಗೆ ಬಂದು ಕೆಲವು ಸಾರಿ ಕಣ್ಣೀರಿಟ್ಟಿದ್ದಾರೆ, ಅಂತಹ ಒಳ್ಳೆಯ ಸಹವಾಸವಲ್ಲ. ಮತ್ತು ಅವನ ಕೈಲಿ , ಅವನ ಸಂಬಳಕ್ಕೆ ಮೀರಿದ ಅಪಾರ ಹಣ ಓಡಾಡುತ್ತದೆ, ಅದಕ್ಕಾಗಿಯೆ ಗೆಳಯರು ಜಾಸ್ತಿ"
ಎನ್ನುತ್ತಾ ನಿಲ್ಲಿಸಿದರು, ಚಕ್ರಪಾಣಿ. ಆಗ ದಯಾನಂದರವರು
"ಹೌದೆ, ನೋಡಿ ಈದಿನ ಅವನು ಕೆಲಸಕ್ಕೆ ಬಂದಿಲ್ಲ, ಅಲ್ಲದೆ ಒಂದು ವಾರದಿಂದ ಬರುತ್ತಿಲ್ಲವಂತೆ" ಎಂದರು, ಅದಕ್ಕೆ ಚಕ್ರಪಾಣಿ
"ಗೊತ್ತು ಸಾರ್, ಇವರು, ನಾಯಕ್ ಬಂದು ಹೋದ ದಿನದಿಂದ ಅವನು ಹೆದರಿ ಎಲ್ಲಿಯೋ ಹೊರಟುಹೋಗಿದ್ದಾನೆ, ಮತ್ತೊಂದು ಆಸಕ್ತಿಧಾಯಕ ಸುದ್ದಿ ಇದೆ ಸಾರ್, ಇವನ ಗೆಳೆಯ ಆಟೋ ಡ್ರೈವರ್ ಅಯ್ಯಪ್ಪನಿಗಾಗಿ ಇವನು ಹೊಸದಾಗಿ ಒಂದು ಕಾರು ಪರ್ಚೇಸ್ ಮಾಡಿದ್ದಾನೆ, ಸೆಕೆಂಡ್ ಹ್ಯಾಂಡ್, ... (ಸ್ವಲ್ಪ ತಡೆದು ಹೇಳಿದರು ಚಕ್ರಪಾಣಿ) ...... ಕೆಂಪು ಆಲ್ಟೋ ಸಾರ್, ತಮಿಳು ನಾಡಿನ ಗಾಡಿ, ಇದು ಸೊಸೈಟಿಗೆ ಎರಡು ಹೊತ್ತು ಕಾಫಿ ತರುವ ಹುಡುಗ ಕೊಟ್ಟ ಸುದ್ದಿ"
ಎಲ್ಲರು ಬೆಚ್ಚಿ ಬಿದ್ದರು, ಹೆಚ್ಚು ಕಡಿಮೆ ಕೊಲೆಗಾರನತ್ತ ತಲುಪುವ ಗ್ಯಾರಂಟಿ ಎಲ್ಲರಿಗೆ ಆಯಿತು.
"ಮತ್ತೆ ಆ ಕಿರಣ್ ಇರುವ ಮನೆಯತ್ತ ಹೋಗಿ ನೋಡಬಹುದಲ್ವ" ದಯಾನಂದ ಸಾಹೇಬರು ನುಡಿದರು,
ACP ಚಕ್ರಪಾಣಿ ನಗುತ್ತ ಹೇಳಿದರು
"ಈಗ ನಮ್ಮ ಜೀಪ್ ಹೋಗುತ್ತಿರುವುದು ಅಲ್ಲಿಗೆ ಸಾರ್, ಮಲ್ಲೇಶ್ವರದ ಕಿರಣ್ ಮನೆಯ ಕಡೆಗೆ"
ಬಾಗ - ೪
ಕಿರಣ್ ತನ್ನ ಮನೆಯಲ್ಲಿ ಇರಲಿಲ್ಲ. ಎಲ್ಲಿಗೆ ಹೋಗಿರುವನೆಂದು ಸಹ ಮನೆಯಲ್ಲಿದ್ದವರಿಗೆ ಗೊತ್ತಿಲಿಲ್ಲ. ಮಗ ಬಂದಾನೆಂದು ಕುಳಿತಿರುವ ತಾಯಿಯ ಜೀವ, ಜೊತೆಗೆ ಅವನ ಇಬ್ಬರು ತಂಗಿಯರು.
ಕಿರಣನ ಸ್ನೇಹಿತರ ಬಗ್ಗೆ ಕೇಳಿದ್ದಕ್ಕೆ ಆಕೆ ಗೋಳಾಟ ಮತ್ತೆ ಹೆಚ್ಚಿತ್ತು
"ನೋಡಿ, ಮನೆಗೆ ಮಾರಿ ಊರಿಗೆ ಉಪಕಾರಿ ಎಂದರೆ ಇವನೆ ನೋಡಿ, ತನ್ನ ತಂಗಿಯರಿಗೆ ಒಂದು ಜೊತೆ ಬಟ್ಟೆ ತರುವದಿಲ್ಲ, ಅವರು ಹರಿದ ಬಟ್ಟೆಯನ್ನೆ ಸರಿಮಾಡಿ ಉಡುತ್ತಾರೆ, ಮನೆಗೆ ಯಾವ ಸಹಾಯ ಮಾಡುವದಿಲ್ಲ, ಅದ್ಯಾರೊ ಅವನ ಸ್ನೇಹಿತನಿಗೆ ಕಾರು ಕೊಡಿಸಿದ್ದಾನೆ ಎಂದು ಎಲ್ಲರು ಬಂದು ಹೇಳುತ್ತಾರೆ, ಅವನ ಸ್ವಭಾವವೆ ನಮಗೆ ಅರ್ಥವಾಗಲ್ಲ, ಅವನ ಸ್ನೇಹಿತರು, ಯಾರೊ ಬರಿ ಆಟೋ ಡ್ರೈವರ್ ಗಳು, ಟ್ಯಾಕ್ಸಿ ಡ್ರೈವರ್ ಗಳು, ಅವರಾದರು ಸರಿ ಇರುವರ, ಎಲ್ಲ ಕೆಟ್ಟ ಅಭ್ಯಾಸದವರೆ, ನಿನಗೆ ನಿನ್ನ ತಂದೆ ಕೊಡಿಸಿ ಹೋದ ಕೆಲಸವಿದೆ ಓದಿದ ಹುಡುಗ, ಸರಿಯಾಗಿರೊ ಎಂದರೆ ಇವನಿಗೆ ಅವರ ಸಹವಾಸವೆ ಬೇಕು ಏನು ಮಾಡುವುದು ಹೇಳಿ" ಎಂದರು ಆಕೆ
ಮತ್ತೆ 'ಅವರ ಹೆಸರೇನು, ನೀವು ನೋಡಿದ್ದೀರ' ಎನ್ನುವ ಪ್ರಶ್ನೆಗೆ
"ಇಲ್ಲ ಅವರ್ಯಾರು ನಮ್ಮ ಮನೆಯ ಒಳಗೆ ಬರುತ್ತಿರಲಿಲ್ಲ, ರಸ್ತೆಯಲ್ಲಿ ನಿಂತು ವಾಹನ ಹಾರ್ನ್ ಬಾರಿಸೋರು, ಇಲ್ಲ ಮೊಬೈಲ್ ಗೆ ಕಾಲ್ ಮಾಡೋರು, ಇವನು ಓಡಿಹೋಗೋನು, ನನಗೆ ತಿಳಿದಂತೆ ಮೂರು ನಾಲಕ್ಕು ಜನರಿದ್ದಾರೆ, ಅಯ್ಯಪ್ಪ, ಮುರಳಿ, ಶಿವ ಅಂತಲೊ ಏನೊ ಹೆಸರುಗಳು, ಇಲ್ಲೆ ಮಲ್ಲೇಶ್ವರದ ಸರ್ಕಲ್ ಹತ್ತಿರದ ಆಟೋ ಸ್ಟಾಂಡ್ ನಲ್ಲಿ ಯಾವಾಗಲು ಇರ್ತಾರಂತೆ" ಎಂದಳು ಆಕೆ.
ಕಿರಣನ ಅಮ್ಮನಿಗೆ ಒಳಗೆ ಹೋದ ರಾಜಾರಾಮ್ ಮತ್ತು ಚಕ್ರಪಾಣಿ ಇಬ್ಬರು ಸಿವಿಲ್ ಡ್ರೆಸ್ ನಲ್ಲಿ ಇದ್ದದ್ದು, ಪೋಲಿಸರು ಎಂದು ತಿಳಿಯಲೆ ಇಲ್ಲ , ಇವರಾರೊ ಕಿರಣನ ಸೊಸೈಟಿಯಿಂದ ಬಂದಿರುವ ಅಧಿಕಾರಿಗಳು ಅಂತಲೆ ಭಾವಿಸಿ ಉತ್ತರಿಸಿದ್ದಳು ಅಮಾಯಕಳಾದ ಆಕೆ.
ಅಲ್ಲಿಂದ ಹೊರಟು , ದಯಾನಂದ ಹಾಗು ಚಕ್ರಪಾಣಿಯವರು ಮನೆಗೆ ಊಟಕ್ಕೆ ಹೋಗಿಬರುವದಾಗಿ ತಿಳಿಸಿ ಹೊರಟು ಹೋದರು, ದಾರಿಯಲ್ಲಿ ನಾಯಕ್ ಹಾಗು ರಾಜಾರಾಮ್ ಹೈಗ್ರೌಂಡ್ಸ್ ಪೋಲಿಸ್ ಸ್ಟೇಷನ್ ಬಳಿ ಇಳಿದುಕೊಂಡು, ಹತ್ತಿರದ ಹೋಟೆಲ್ ನಲ್ಲಿ ಊಟ ಮುಗಿಸಿ ಇಬ್ಬರು ಸ್ಟೇಷನ್ ನಲ್ಲಿ ಬಂದು ಕುಳಿತರು. ಕಾನ್ ಸ್ಟೇಬಲ್ ಮಂಜುನಾಥ ಹಾಜರಾದ
"ನಮಸ್ಕಾರ್ ಸಾರ್, ಬೆಳಗ್ಗೆ ಇಂದ ಕಾಣ್ಲೆ ಇಲ್ಲ ಸಾರ್, ಏನ್ ಸಾರ್ ಹೋಗಿ ಊಟ ತರೋದ, ನಮ್ಮ ಪಳಿನಿ ಹೋಟೆಲ್ ನಲ್ಲಿ ಚೆನ್ನಾಗೆಯೆ ಇರುತ್ತೆ, ಜೊತೆಗೆ ಒಂದು ಪ್ಲೇಟ್ ಪಕೋಡ ಕಟ್ಟಿಸಿ ಬಿಡ್ತೀನಿ" ಎಂದ.
ನಾಯಕ್ ನಗುತ್ತ ಹೇಳಿದರು.
"ಅದೆಲ್ಲ ಬೇಡಯ್ಯ, ನಮ್ಮದು ಊಟ ಆಯ್ತು, ನೀನು ಮತ್ತೊಂದು ಕೆಲಸ ಮಾಡಬೇಕಲ್ಲ, ಇಲ್ಲೆ ಮಲ್ಲೇಶ್ವರ, ಶೇಷಾದ್ರಿಪುರ ಅಂತ ಆಟೋ ಓಡಿಸುತ್ತ ಇರುವ ಇಬ್ಬರು ಡ್ರೈವರ್ ಹೆಸರು ಕೊಡ್ತೀನಿ, ಅಯ್ಯಪ್ಪ ಮತ್ತು ಮುರಳಿ ಅಂತ, ಒಬ್ಬ ಗಡ್ಡ ಬಿಟ್ಟಿರಬಹುದು, ವಯಸ್ಸು ಇಪ್ಪತೈದರಿಂದ ಮೂವತ್ತರ ಒಳಗೆ, ಮಲ್ಲೇಶ್ವರ ಸರ್ಕಲ್ ಅಥವ ಮಧ್ಯದಲ್ಲಿ ಎಲ್ಲೊ ಇರ್ತಾರೆ ಅವರು ಅಥವ ಅವರ ಬಗ್ಗೆ ಗೊತ್ತಿರುವ ಆಟೋದವರು , ಸ್ನೇಹಿತರು , ಹೇಗಾದರು ನೀನು ಹಿಡಿದು ತರಬೇಕು, ಅವರನ್ನು ನೀನೇನು ಹೆದರಿಸಬೇಡ. ಸುಮ್ಮನೆ ಕರೆತಂದರೆ ಸಾಕು, ಮತೊಂದು ಕ್ಲೂ ಈಚೆಗೆ ಆಟೋ ಡ್ರೈವರ್ ಅಯ್ಯಪ್ಪ ಒಂದು ಕಾರು ಕೊಂಡಿದ್ದಾನೆ, ಅವನು ಸಹಕಾರನಗರದ ಸೊಸೈಟಿಯ ಕೆಲಸಗಾರ ಕಿರಣ್ ಎಂಬುವನ ಸ್ನೇಹಿತ. ನಿನಗೆ ಸಾದ್ಯವ? " ಎಂದ ನಾಯಕ್.
ಮಂಜುನಾಥ ಒಂದು ಘಳಿಗೆ ಸುಮ್ಮನೆ ನಿಂತ
"ಸಾರ್, ನೀವು ಇಷ್ಟು ದಿನಗಳಲ್ಲಿ ನನಗೆ ಕಾಫಿ ತಾ, ಊಟ ತಾ , ಸಿಗರೇಟು ತಾ ಎಂದು ಕೆಲಸ ಹೇಳ್ತಿದ್ರಿ, ಇಷ್ಟು ವರ್ಷಕ್ಕೆ ಒಂದು ಬಾರಿ ತಲೆ ಉಪಯೋಗಿಸುವ ಕೆಲಸ ಹೇಳ್ತಿದ್ದೀರಿ, ನಾನು ಖಂಡೀತ ಮಾಡ್ತೀನಿ ಸಾರ್, ಬೇಕಾದರೆ ನೋಡಿ, ಹೊರಗೆ ಪಳಿನಿ ಹೋಟೆಲ್ ಗೆ ಹೇಳಿ ಕಾಫಿ ಕಳಿಸಿ ಹೋಗ್ತೀನಿ, ನನ್ನ ಕಾಲ್ ಗೆ ಕಾಯ್ತಾ ಇರಿ" ಅವನ ದ್ವನಿಯಲ್ಲಿ ಎಂತದೊ ಸಂತಸ ಜೊತೆಗೆ, ದನ್ಯತಾಭಾವ ಗುರುತಿಸಿದ ನಾಯಕ್ ನಗುತ್ತ ಸುಮ್ಮನಾದ.
ಅವನು ಹೇಳಿದಂತೆ ಸ್ವಲ್ಪ ಹೊತ್ತಿನಲ್ಲೆ , ಕಾಫಿ ಸಿಗರೇಟ್ ಬಂದಿತು. ಇಬ್ಬರು ಕಾಫಿ ಕುಡಿಯುತ್ತ ಹಾಗೆ ರಿಲಾಕ್ಸ್ ಮಾಡಿದರು, ಮಧ್ಯಾಹ್ನ ಊಟದ ಸಮಯವಾದ್ದರಿಂದ ಗಲಾಟೆಯೆ ಸ್ವಲ್ಪ ಕಡಿಮೆ, ನಾಯಕ್ ಗೆ ನಿನ್ನೆಯಿಂದ ಓಡಾಡುತ್ತಿರುವುದು ಆಯಾಸ ಎನಿಸಿದರು, ಎಂತದೊ ಕೆಲಸದಲ್ಲಿ ಸಂತಸವು ಇತ್ತು. ಮಂಜುನಾಥ ಹೊರಟು ಒಂದು ಘಂಟೆಯ ಮೇಲಾಗಿತ್ತು. ರಾಜಾರಾಮ್ ರವರು
"ಸರಿ ನಾಯಕ್ , ನಾನು ಹೊರಡುತ್ತೇನೆ, ಮತ್ತೆ ಸಿಗುತ್ತೇನೆ, ಈ ಕೇಸಿನ ಬಗ್ಗೆ ಚರ್ಚಿಸುವ " ಎನ್ನುತ್ತ ಎದ್ದರು.
ನಾಯಕನ ಮೊಬೈಲ್ ರಿಂಗ್ ಆಯಿತು, ಆ ಕಡೆಯಿಂದ ಮಂಜುನಾಥ
"ಸಾರ್ ನಾನು ಮಂಜುನಾಥ, ಹತ್ತು ನಿಮಿಶ ಅಲ್ಲೆ ಇರಿ ಸಾರ್ , ನಿಮ್ಮ ಸ್ನೇಹಿತ್ರು ಇದ್ದರಾಲ್ಲ, ಸಿ.ಸಿ.ಬಿ ನೋರು, ಅವರ್ಗು ಇರಕ್ಕೆ ಹೇಳಿ, ನಾನು ಒಂದು ಸುದ್ದಿಯ ಜೊತೆ ಬರ್ತಾ ಇದ್ದೀನಿ"
ರಾಜಾರಾಮ್ ರವರಿಗೆ ಇದನ್ನು ತಿಳಿಸಿದ ನಾಯಕ್ ಸ್ವಲ್ಪ ಹೊತ್ತು ಕಾದು ಹೊರಡುವಂತೆ ತಿಳಿಸಿದ. ಅವರು ಕುತೂಹಲದಿಂದ ಸರಿ ಎಂದು ಕುಳಿತರು.
ಮಂಜುನಾಥ ಹೇಳಿದಂತೆ, ಹತ್ತು ನಿಮಿಷದಲ್ಲಿ ಅವನು ಒಂದು ಆಟೋದಲ್ಲಿ ಬಂದಿಳಿದ. ಜೊತೆಗೆ ಆಟೋ ಡ್ರೈವರ್ ನನ್ನು ಒಳಗೆ ಕರೆತಂದ, ನಾಯಕನತ್ತ ನೋಡುತ್ತ ನುಡಿದ
"ಸಾರ್, ಇವನು ವೇಲು ಅಂತ, ಆಟೋ ಡ್ರೈವರ್, ಮಲ್ಲೇಶ್ವರದವನೆ, ಇವನಿಗೆ ಆ ಮುರಳಿ, ಮತ್ತು ಅಯ್ಯಪ್ಪ ಎಲ್ಲ ಚೆನ್ನಾಗಿಯೆ ಗೊತ್ತಂತೆ, ಅವರ ಜೊತೆ ಎರಡು ವರ್ಷದ ಕೆಳಗೆ, ಶಬರಿಮಲೈಗೆ ಹೋಗಿದ್ದನಂತೆ, ಮತ್ತೆಲ್ಲ ನಿಮಗೆ ಏನು ಬೇಕೊ ಅದನ್ನು ನೀವು ವಿಚಾರಿಸಿಕೊಳ್ಳಿ " ಎನ್ನುತ್ತ ನಿಂತ.
ನಾಯಕ್ ಮಂಜುನಾಥನನ್ನು ಮೆಚ್ಚಿಗೆಯಿಂದ ನೋಡಿದರೆ, ರಾಜಾರಾಮ್ ರವರು ಅವನನ್ನು ,
"ವೆರಿ ಗುಡ್, ಮಂಜುನಾಥ್ ' ಎಂದು ಅಭಿನಂದಿಸಿದರು. ಯಾವ ಹಿನ್ನಲೆಯು ಗೊತ್ತಿಲ್ಲದ ಡ್ರೈವರ್ ವೇಲು ಮಾತ್ರ ಇವರನ್ನು ನೋಡುತ್ತ ನಿಂತಿದ್ದ.
ರಾಜಾರಾಮ್ ವೇಲುವನ್ನು ಮಾತನಾಡಿಸುತ್ತ
"ವೇಲು , ಯಾವುದೊ ಕೇಸಿಗೆ ಕೆಲವು ಇನ್ ಫರ್ ಮೇಶನ್ ಬೇಕಾಗಿದೆ, ಸ್ವಲ್ಪ ನಿನ್ನ ಸ್ನೇಹಿತ, ಇದ್ದಾನಲ್ಲಪ್ಪ ಅಯ್ಯಪ್ಪ ಅನ್ನುವನು ಅವನನ್ನು ಕರೆತರಬೇಕಲ್ಲ , ಆಗುತ್ತಾ" ಎಂದರು.
"ಏಕೆ ಸಾರ್, ಅಯ್ಯಪ್ಪ ನ , ಅವನು ಊರಿನಲ್ಲಿ ಇರೋದು ಡೌಟು ಸಾರ್, ಮೂರು ನಾಲಕ್ಕು ದಿನದಿಂದ ಅವನು ಸಿಕ್ಕಿಲ್ಲ, ಅವನು ಅವನ ನೆಂಟರ ಮನೆಗೆ ಹೋಗ್ತೀನಿ ಅಂತಿದ್ದ" ಎಂದ.
"ಹೌದ, ವೇಲು, ಏನು ಮಾಡೋದು, ತುಂಬಾ ಅರ್ಜೆಂಟ್ ಇತ್ತಲ್ಲಪ್ಪ, ನಮ್ಮ ಬಾಸ್ ಗಳು ಸುಮ್ಮನೆ ತಲೆ ತಿಂತಾರೆ, ಈಗ ಏನಾದರು ಮಾಡಿ ಆ ಅಯ್ಯಪ್ಪನ ನೋಡ್ಬೇಕಲ್ಲ" ಎಂದರು.
"ಏನು ಅರ್ಜೆಂಟ್ ಸಾರ್, ನನಗೆ ಗೊತ್ತಿದ್ದರೆ ನಾನೆ ಹೇಳ್ತೀನಿ ಕೇಳಿ " ಎಂದ ಅಮಾಯಕ ವೇಲು.
"ಹಾಗಲ್ಲಪ್ಪ, ಅದು ಅವನ ಸ್ನೇಹಿತರಿಗೆ ಸೇರಿದ ವಿಶಯ, ಅವನು ಸಿಗ್ತಾ ಇಲ್ಲ, ಅಲ್ಲದೆ ಒಂದು ರಹಸ್ಯವಿದೆ ನಿನಗೆ ನೇರವಾಗಿ ತಿಳಿಸುವಂತಿಲ್ಲ, ನೀನು ಹೆದರಬೇಡ, ನೀನು ಸಹಾಯ ಒಂದು ಮಾಡು, ನಿನಗೆ ಮುಂದೆ ಏನು ಬೇಕಾದರು ಅನುಕೂಲ ನಾನು ಮಾಡಿಕೊಡುತ್ತೇನೆ ನೋಡು ಈಗ ನನಗೆ ಹೇಗಾದರು ಸರಿ ಅಯ್ಯಪ್ಪ ಅನ್ನುವನನ್ನು ಬೇಟಿಯಾಗಬೇಕು " ಎಂದರು.
"ಸಾರ್, ನನಗೆ ಸಹಾಯಮಾಡಲು ಏನು ತೊಂದರೆ ಎಲ್ಲ, ಆದರೆ ಅವನು ಊರಿನಲ್ಲಿ ಇಲ್ಲ, ತಮಿಳುನಾಡಿನ ಅವನ ನೆಂಟರ ಮನೆಗೆ ಹೋಗ್ತೀನಿ ಅಂತಿದ್ದ, ಈಗ ಅವನು ಇಲ್ಲಿ ಇಲ್ವಲ್ಲ ಹೇಗೆ ಕರೆತರಲಿ?"
"ಸರಿ ನೀನು ಹೇಳೋದು ನಿಜಾನೆ, ಅವನ ನೆಂಟನ ಮನೆ ಅಂದ್ಯಲ್ಲ ನಿನಗೆ ವಿಳಾಸ ಗೊತ್ತ, ನಾನೆ ಹೇಗಾದರು, ಸರಿ ಬೇಟಿ ಮಾಡಲು ನೋಡ್ತೇನೆ?"
"ಇಲ್ಲ ಸರ್ ನನಗೆ ವಿಳಾಸ ಹೇಳಲು ಗೊತ್ತಿಲ್ಲ, ಆದರೆ ಅವನ ನೆಂಟನ ಮನೆ ನೋಡಿ ಗೊತ್ತಿದೆ, ಹಿಂದೆ ಶಬರಿಮಲೈ ಮತ್ತು ತಮಿಳುನಾಡು ಟೂರು ಹೋಗುವಾಗ ಅವನ ಜೊತೆ ನಾನು ಅವರ ಮನೇಗೆ ಹೋಗಿದ್ವಿ, ಮದ್ಯಾನ ಊಟ ಅವರ ಮನೇಲೆ ಮಾಡಿದ್ವಿ" ಎಂದ.
"ಅಂದರೆ ನೀವು ಮನೆ ನೋಡಿದ್ದಿ ಅಂತ ಆಯ್ತು, ಈಗ ಅಲ್ಲಿಗೆ ಹೋಗಿಬರಲು ಸಾದ್ಯವ, ನಾನು ನಿನ್ನ ಜೊತೆ ಬರ್ತೇನೆ ಬೇಕಾದ್ರೆ" ಎಂದರು.
" ಸಾರ್, ಅವನು ಹೋಗಿರುವುದು ತಮಿಳುನಾಡಿನ ವೆಲ್ಲೂರು ಸಮೀಪದ ಅಂಬೂರು ಎಂಬ ಊರಿಗೆ, ಬೇಗ ಅಂದ್ರು ಅಲ್ಲಿಗೆ ತಲುಪಲು , ಇಲ್ಲಿಂದ ಹೊರಟರೆ ನಾಲಕ್ಕು ಗಂಟೆ ಬೇಕು. ನನಗೆ ಒಮ್ಮೆ ಮಾತ್ರ ಹೋದ ನೆನಪು, ಅಲ್ಲಿಯ ಮುರುಘ ದೇವಾಸ್ಥಾನದ ಪಕ್ಕದ ಗಲ್ಲಿಯಲ್ಲಿ ಅವರ ಮನೆಗೆ ಹೋಗಿದ್ದ ನೆನಪಿದೆ, ಆದರೆ ವಿಳಾಸ ಹೇಳಕ್ಕೆ ಬರಲ್ಲ"
"ಸರಿ ಈಗ ಹೊರಟರಾಯಿತು" ಕೈಯಲ್ಲಿದ್ದ ವಾಚ್ ನೋಡುತ್ತ ನುಡಿದರು, ರಾಜಾರಾಮ್
"ಈಗಿನ್ನು ಮೂರು ಕಾಲು ಘಂಟೆ, ನಾಲಕ್ಕಕ್ಕೆ ಹೊರಟರು, ರಾತ್ರಿ ಎಂಟಕ್ಕೆ ಅಲ್ಲಿಗೆ ತಲುಪುತ್ತೇವೆ, ಅವನ ಜೊತೆ ಸ್ವಲ್ಪ ಮಾತನಾಡಬೇಕು, ಮುಗಿಸಿ ರಾತ್ರಿ ಹನ್ನೆರಡಕ್ಕೆ ಬೆಂಗಳೂರಿಗೆ ಹಿಂದೆ ಬಂದುಬಿಡಬಹುದು, ಬೇಕಾದರೆ ನಮ್ಮ ಜೀಪಿನಲ್ಲೆ ಹೋಗಿ ಬರೋಣ" ಎಂದರು.
ವೇಲುಗೆ ಆಶ್ಚರ್ಯ , ಇದೆಂತದು ಹೀಗೆ ಅರ್ಜೆಂಟ್ ಮಾಡ್ತಾ ಇದ್ದಾರೆ ಅದೇನು ಮಾತು ಇದ್ದೀತು ನಾಯಕ್ ಸ್ನೇಹಿತ ಅನ್ನೊ ಈ ವ್ಯಕ್ತಿಗೆ, ಇವನು ಯಾರಿರ ಬಹುದು ಯಾರಾದರು ರಾಜಕೀಯದವನ ಅಂತ ಯೋಚಿಸಿದ ವೇಲು.
"ಸಾರ್ , ಅದು ಹೇಗೆ ಸಾರ್ , ನಾನು ಮನೆಗು ಹೇಳಿ ಬಂದಿಲ್ಲ, ಅಲ್ಲದೆ ನಾಳೆ ಬೆಳಗ್ಗೆ ಎದ್ದು ಹೋದರಾಗಲ್ವೆ ಬೇಕಾದರೆ ಬರ್ತೀನಿ" ಎಂದ ವೇಲು ಅರ್ದ ಮನಸ್ಸಿನಿಂದ
"ಹಾಗಲ್ಲಪ್ಪ , ನಿನಗೆ ಗೊತ್ತಿಲ್ಲ ಶುಭಸ್ಯ ಶೀಘ್ರಂ ಅಂತಾರೆ ದೊಡ್ಡೋವ್ರು, ನನಗೆ ಈಗ ಅಂದರೆ ಈಗಲೆ ಆಗಿ ಬಿಡಬೇಕು, ನಾಯಕ್ ನೀನು ವೇಲುಗೆ ಹೇಳಿ ಒಪ್ಸಪ್ಪ, ನಾನು ಎರಡೆ ನಿಮಿಷ ಬರ್ತೇನೆ" ಎನ್ನುತ್ತ ಸ್ಟೇಷನ್ನಿನಿಂದ ಹೊರಬಂದು. ತಮ್ಮ ಚೀಫ್ ದಯಾನಂದರಿಗೆ ಪೋನಿನಲ್ಲಿ ಮಾತನಾಡಿದರು,
"ಸಾರ್, ಈಗಲೆ ಹೊರಟು ಬಿಡ್ತೇವೆ ಸಾರ್, ನಾಳೆ ಎಂದರೆ ಹೇಗೋ, ನಮ್ಮ ಪಾರ್ಟಿಗಳು ತಪ್ಪಿಸಿಕೊಂಡರೆ ಕಷ್ಟ, ನಾನು ಚಕ್ರಪಾಣಿಯವರಿಗೆ ಮಾತನಾಡ್ತೇನೆ ಸಾರ್ , ನೀವು ಹೇಳಿ, ನಮ್ಮ ಜೀಪಿನಲ್ಲಿ ನಾನು ನಾಯಕ್ ಮತ್ತು ವೇಲು ಜೊತೆಗೆ ಒಬ್ಬರು ಹೋಗ್ತೀವಿ, ನಮ್ಮ ಜೀಪನ್ನು , ಒಂದು ವ್ಯಾನ್ ಹಿಂಬಾಲಿಸಲಿ ಸಾರ್, ಅದರಲ್ಲಿ ನಾಲಕ್ಕು , ಸಬ್ ಇನ್ಸ್ ಪೆಕ್ಟರ್, ಹಾಗು ನಾಲಕ್ಕು ಕಾನ್ ಸ್ಟೇಬಲ್ ಇರಲಿ ಸಾಕು, ಆದರೆ ನಮ್ಮ ಜೀಪಿಗೆ ಅವರು ಕಾಣಿಸಿಕೊಳ್ಳುವುದು ಬೇಡ, ನಾನು ಅವರ ಕಾಂಟಾಕ್ಟ್ ನಲ್ಲಿರುತ್ತೇನೆ" ಎಂದರು.
ಅದಕ್ಕೆ ದಯಾನಂದ್ "ನೀವನ್ನುವುದು ಸರಿ, ಈಗಲೆ ಹೊರಡಿ, ಕೇಸ್ ಬೇಗ ಕನ್ಸಾಲಿಡೇಟ್ ಆಗಲಿ ನಮಗೆ ಒತ್ತಡ ತಪ್ಪುತ್ತೆ, ನಾನು ಚಕ್ರಪಾಣಿಯವರಿಗೆ ಎಲ್ಲ ಕನ್ವೇ ಮಾಡ್ತೇನೆ, ನೀವು ಹೊರಟ ಹತ್ತು ನಿಮಿಶಕ್ಕೆ ಅವರು ಹೊರಡ್ತಾರೆ, ಇನ್ನೊಂದು ವಿಷಯ, ನೀವು ಹೇಳ್ತಿರೊ, ಅಂಬೂರಿನಲ್ಲಿ , ಪೋಲಿಸ್ ಎಸ್ ಪಿ ನಮ್ಮ ಬೆಂಗಳೂರಿನೋನೆ ಪನ್ನೀರ್ ಸೆಲ್ವಂ ಅಂತ ಹೆಸರು ನನ್ನ ಜೊತೆ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಓದಿದೋನು, ನೀವು ಹೋಗಿ ಬೆಂಗಳೂರಿನ ಜನ ಅಂದ್ರೆ ಸಾಕು ಏನು ಬೇಕಾದ್ರು ಹೆಲ್ಪ್ ಮಾಡ್ತಾನೆ, ನಾನು ಅವನಿಗೆ ಪೋನ್ ಮಾಡ್ತೀನಿ, ನೀವು ಹೆಲ್ಪ್ ತಗೋಳ್ಳಿ , ವಿಶ್ ಯು ಆಲ್ ಸೆಕ್ಸಸ್ " ಅಂತ ವಿಶ್ ಮಾಡಿದ್ರು
ಸರಿಯಾಗಿ ನಾಲಕ್ಕು ಗಂಟೆ ಮೂವತ್ತು ನಿಮಿಶಕ್ಕೆ , ನಾಯಕ್, ರಾಜಾರಾಮ್, ವೇಲು ಕುಳಿತ ಸಿ.ಸಿ.ಬಿ ಜೀಪ್ ಆಗಲೆ ಎಲೆಕ್ಟ್ರಾನಿಕ್ ಸಿಟಿಯ ಮೇಲು ಸೇತುವೆ ದಾಟಿ , ೮೦ ಕಿ.ಮಿ. ವೇಗದಲ್ಲಿ ತಮಿಳುನಾಡಿನ ಕಡೆ ಓಡುತ್ತಿತ್ತು. ವೇಲುಗೆ ಇನ್ನು ಅರ್ಥವಾಗಿರಲಿಲ್ಲ, ಇವರು ಅಯ್ಯಪ್ಪನ ಹತ್ತಿರ ಅದೇನು ಅಂತ ಅರ್ಜೆಂಟ್ ಮಾತನಾಡಬೇಕು. ಪಾಪ ವೇಲು ಫೋನಿನಲ್ಲಿ ಮನೆಗೆ ತಾನು ತಡವಾಗಿ ಬರುವದಾಗಿ ತಿಳಿಸಿ ಗಡಿಬಿಡಿಯಲ್ಲಿ ಹೊರಟಿದ್ದ. ಅವನ ಆಟೋ ಹೈಗ್ರೌಂಡ್ಸ್ ಪೋಲಿಸ್ ಸ್ಟೇಶನ್ ನಲ್ಲಿಯೆ ಇದ್ದಿತ್ತು, ಮಂಜುನಾಥನು ಸ್ವಲ್ಪ ತಮಾಶಿಯಾಗಿಯೆ
"ನಿನ್ನ ಆಟೋ ಇಲ್ಲಿಯೆ ಇರುತ್ತದೆ ಬೇಗ ಬಂದುಬಿಡಪ್ಪ, ನಮ್ಮವರನ್ನು ನಂಬುವುದು ಕಷ್ಟ, ನೀನು ಬರುವುದು ತಡ ಮಾಡಿದರೆ, ನಿನ್ನ ಆಟೋ ಪಾರ್ಟ್ ಗಳನ್ನು ಬಿಚ್ಚಿ ಮಾರಿಕೊಂಡು ಬಿಡ್ತಾರೆ" ಅಂತ ಹೆದರಿಸಿದ್ದ.
ಎಲ್ಲರು ನಕ್ಕರೆ ವೇಲು ಮಾತ್ರ ಅದು ನಿಜವೇನೊ ಅಂತಲೆ ಹೆದರಿದ್ದ.
ಇವರ ವಾಹನ ಅಂಬೂರು ತಲುಪಲು ಕಡಿಮೆ ಅಂದರು ರಾತ್ರಿ ಎಂಟುವರೆ ಒಂಬತ್ತು ಗಂಟೆಯಾಗಬಹುದು, ದಾರಿಯಲ್ಲಿ ನಾಯಕ್ ಹಾಗು ರಾಜಾರಾಮ್ ಸ್ವಲ್ಪ ಮೌನ ವಹಿಸಿದ್ರು, ವೇಲು ಎದುರು ಮಾತು ಬೇಡ ಅಂತ. ದಾರಿಯಲ್ಲಿ ಕಾಪೀಗೆ ಅಂತ ಹತ್ತು ನಿಮಿಶಕ್ಕೆ ಇಳಿದಾಗ, ಹಿಂದೆ ಪೋಲಿಸ್ ವ್ಯಾನ್ ಬರುತ್ತಿರುವುದು ಕನ್ ಫರ್ಮ್ ಮಾಡಿಕೊಂಡರು ರಾಜಾರಾಮ್. ನಾಯಕ್ ಮಾತ್ರ ಅವರ ಜೊತೆ ಮಾತನಾಡುತ್ತ,
"ಸಾರ್ , ಕಾರಿನ ಫಸಲ್ ಒಂದು ಸಾಲ್ವ ಆಗಬೇಕಿದೆ ಅನ್ನಿಸುತ್ತೆ, ಅದನ್ನು ಟ್ರೇಸ್ ಮಾಡಬೇಕು" ಅಂದ. ರಾಜಾರಾಮ್ ಸಹಿತ,
"ಬಿಡಿ , ಈಗ ಈ ಅಯ್ಯಪ್ಪ ಏನಾದರು ಸಿಕ್ಕಿದರೆ, ಆ ಕಾರಿನ ವಿಷಯವು ತಿಳಿಯುತ್ತೆ" ಎನ್ನುವಾಗ, ಮೂತ್ರ ವಿಸರ್ಜೆನೆಗೆಂದು ಹಿಂದೆ ಹೋಗಿದ್ದ ವೇಲು, ಬರುವಾಗ ಕಡೆಯಲ್ಲಿ ಇವರ ಮಾತು ಕೇಳಿಸಿಕೊಂಡು
"ಯಾವ ವೆಹಿಕಲ್ ಸಾರ್ ನೀವು ಮಾತಾಡ್ತೀರೋದು, ಅದೆ ಅಯ್ಯಪ್ಪನ ಹೊಸ ಕಾರಿನದ? ಏನು ಸಮಸ್ಯೆ " ಎಂದ.
ತಕ್ಷಣ ರಾಜಾರಾಮ್ ಮಾತು ಬದಲಾಯಿಸಿದರು
"ಹೌದೂರಿ, ಅದೇ ಈಗ ಸಮಸ್ಯೆ ಬಂದಿರೋದು, ಅದೇನೊ ನಿಮ್ಮ ಅಯ್ಯಪ್ಪ ತಮಿಳುನಾಡಿನ ಕಾರ್ ತಂದಿದ್ದಾರಂತೆ, ಆದರೆ ಇವರು ಸೆಕೆಂಡ್ ಹ್ಯಾಂಡ್ ಕೊಳ್ಳುವ ಮೊದಲೆ ಅಲ್ಲಿ ತಮಿಳುನಾಡಿನಲ್ಲಿ ಆ ಕಾರಿನಲ್ಲಿ ಒಂದು ಕೊಲೆಯ ಪ್ರಯತ್ನವಾಗಿದೆ, ನಿಮ್ಮ ಅಯ್ಯಪ್ಪ ಗೊತ್ತಿಲ್ಲದೆ ಅದನ್ನು ಕೊಂಡಿದ್ದಾರೆ ಅನ್ನಿಸುತ್ತೆ, ನಮಗೆ ತಮಿಳು ನಾಡಿನ ಪೋಲಿಸರು,ವಿವರ ಕೇಳ್ತಿದ್ದಾರೆ, ಅದಕ್ಕೆ ನಾವು ಹೊರಟಿರುವುದು " ಅಂತ ಕತೆ ಕಟ್ಟಿದರು, ವೇಲು ತಕ್ಷಣ ನಂಬಿಬಿಟ್ಟ.
"ಅಯ್ಯೊ ಹೌದಾ ಸಾರ್, ನೀವು ಮೊದಲೆ ವಿಷಯ ತಿಳಿಸುವದಲ್ವ, ನಾನು ಹೇಳ್ತಿದ್ದೆ, ಆ ಕಾರನ್ನು ನನಗೆ ಕೊಟ್ಟು ಅದನ್ನು ರಿಪೇರಿಗೆ ಬಿಡು ಅಂತ ಅಯ್ಯಪ್ಪ ಹೇಳಿ ಹೋಗಿದ್ದ, ಅದೇನೊ ಮುಂದೆ ನೆಗ್ಗಿ ಹೋಗಿದೆ, ಅದನ್ನು ತರುವಾಗಲೆ ಹಾಗೆ ಆಗಿತಂತೆ, ಅಲ್ಲೆ ಮಲ್ಲೇಶ್ವರದ ವಿನಾಯಕ ಕಾರ್ ಸರ್ವಿಸ್ ಸೆಂಟರ್ ಗೆ ಕೊಟ್ಟಿದ್ದೇನೆ, ನಾಳೆ ಕೊಡಬಹುದು, ಈಗ ಏನು ಸಮಸ್ಯೆಯಾಗುತ್ತ ಸಾರ್ " ಎಂದ.
ನಾಯಕ್ ಹಾಗು ರಾಜಾರಾಮ್ ಮುಖ ಮುಖ ನೋಡಿಕೊಂಡರು, ಅದೇನೊ ಈ ಕೇಸಿನಲ್ಲಿ ಎಲ್ಲವು ಸಾಕ್ಷಿಗಳು ಕಾಲಿಗೆ ತೊಡರುತ್ತಿವೆ, ತಿಂಗಳು ಅಂದುಕೊಂಡದ್ದು ಎರಡು ಮೂರು ದಿನದಲ್ಲೆ ಸಾಲ್ವ್ ಆಗುವಂತಿದೆ ಅಂದುಕೊಂಡರು ರಾಜಾರಾಮ್ . ಮತ್ತೆ ದಯಾನಂದ್ ಗೆ ಮೊಬೈಲ್ ಮಾಡಿ ವಿಷಯ ತಿಳಿಸಿದರು.
"ಸಾರ್ ಆ ಕಾರು ಮಲ್ಲೆಶ್ವರದ ವಿನಾಯಕ ಕಾರ್ ಸರ್ವಿಸ್ ಸೆಂಟರ್ ನಲ್ಲಿದೆ " ಎಂದು.
--------------------- ..................
ಇವರ ಕಾರು ಅಂಬೂರು ತಲುಪುವಾಗ ರಾತ್ರಿ ಎಂಟುಗಂಟೆ, ನಲವತ್ತು ನಿಮಿಷ , ಊರ ಹೊರಗೆ ಸ್ವಲ್ಪ ಕಾಯುತ್ತ ನಿಂತರು, ಹಿಂದಿನಿಂದ ಬರುತ್ತಿರುವ ವ್ಯಾನಿಗೆ, ವೇಲುಗೆ ಅವರು ಕಾಯುತ್ತಿರುವದೇತಕ್ಕೆ ಎನ್ನುವುದು ತಿಳಿಯಲಿಲ್ಲ. ನಂತರ ಅವರು ಅಲ್ಲಿಯ ಪೋಲಿಸ್ ಸ್ಟೇಶನ್ ಗೆ ಹೋಗಿ ಅಲ್ಲಿಯ ಸಬ್ ಇನ್ಸ್ ಪೆಕ್ಟರ್ ನನ್ನು ಬೇಟಿಮಾಡಿ ತಾವು ಬಂದಿರುವ ವಿಷಯ ತಿಳಿಸಿದರು, ದಯಾನಂದ ಸಾಹೇಬರ ಕಾಲ್ ಕೆಲಸ ಮಾಡಿತ್ತು, ಅಲ್ಲಿನವರೆಲ್ಲ ಎಲ್ಲ ಸಹಕಾರಕ್ಕೆ ಸಿದ್ದರಾದರು. ಮತ್ತೆ ಹಿಂದಿನಿಂದ ವ್ಯಾನ್ ಬಂದು ಸೇರಿ ಕೊಂಡಿತು. ವೇಲುಗೆ ದಾರಿ ತೋರಿಸು ನಡಿ, ಎಂದು ಹೊರಟಾಗ ವೇಲುಗೆ ಎಂತದೊ ಅನುಮಾನ , ಕೇವಲ ಅಯ್ಯಪ್ಪನನ್ನು ಬೇಟಿಮಾಡಲು ಇಷ್ಟೊಂದು ಏರ್ಪಾಡೇಕೆ, ಇದರಲ್ಲಿ ಎಂತದೊ ಮೋಸವಿದೆ ಎಂದು ಅವನಿಗೆ ಅನಿಸ ಹತ್ತಿತ್ತು, ಆದರೆ ಸುತ್ತಲು ಬರಿ ಪೋಲಿಸರು, ಅವನು ಏನುಮಾಡುವ ಹಾಗಿರಲಿಲ್ಲ. ಎರಡು ವರ್ಷದ ಹಿಂದೆ ಬಂದ ನೆನಪಿನಿಂದ ಅವನು , ಅಂಬೂರಿನ ಮುರುಘ ದೇವಾಲಯದ ಪಕ್ಕದ ಸಂದಿಯಲ್ಲಿ ಹೋಗಿ
"ಸಾರ್ ಜೀಪಿ ನಿಲ್ಲಿಸಿ ಇಲ್ಲಿಂದ ವಾಹನ ಹೋಗುವದಿಲ್ಲ, ಹತ್ತಿಪ್ಪತ್ತು ಅಡಿಯಷ್ಟು ನಡೆಯಬೇಕು " ಎಂದ,
ಅವನಿಗೆ ಎರಡು ವರ್ಷದ ಹಿಂದೆ ಬಂದ ಸ್ಥಳಕ್ಕೆ ಸರಿಯಾಗಿ ಬಂದಿರುವದಕ್ಕೆ ಸಂತಸ.
ವೇಲು ಜೊತೆ ಜೊತೆಯಾಗಿ, ರಾಜಾರಾಮ್, ನಾಯಕ್, ಅಲ್ಲಿಯ ಅಧಿಕಾರಿ ಗೋಪಿನಾಥ್, ಹಿಂದೆ ವ್ಯಾನಿನನಲ್ಲಿದ್ದ ಇಬ್ಬರು ಇನ್ಸ್ ಪೆಕ್ಟರ್ ಎಲ್ಲ ಹೊರಟರು,
"ಸಾರ್ ಇದೆ ಮನೆ, ದೀಪ ಇನ್ನು ಉರೀತಿದೆ, ಎದ್ದಿರಬಹುದು" ಎಂದ.
ಆಗ ರಾಜಾರಾಮ್ , 'ವೇಲು ನೀನು ಒಂದು ಕೆಲಸ ಮಾಡು, ನೀನು ಹಿಂದೆ ಹೋಗಿ, ನಾವು ಬಂದ ವ್ಯಾನಿನಲ್ಲಿ ಕುಳಿತುಕೊ, ನಾವು ಇಲ್ಲಿ ಬಂದಿರುವುದು ನಿನ್ನ ಸ್ನೇಹಿತ , ಅಯ್ಯಪ್ಪ ಹಾಗು ಇತರ ಅವನ ಗೆಳೆಯರನ್ನು ಹಿಡಿಯಲು, ಅವರು ಒಂದು ಕೊಲೆಯಲ್ಲಿ ಬಾಗಿಯಾಗಿದ್ದಾರೆ, ನೀನೇನು ಗಾಭರಿಯಾಗಬೇಡ, ಸದ್ಯಕ್ಕೆ ಅವರೆಲ್ಲ ನಿನ್ನ ನೋಡುವುದು ಬೇಡ" ಎಂದರು.
ವೇಲುಗೆ ಗಾಬರಿಯಾಗಿ , ಕಾಲು ನಡುಗಿತು, ಇದೆಂತದು ನನಗೆ ಯಾವ ಸುಳಿವು ಕೊಡದೆ ನನ್ನನ್ನು ಹೀಗೆ ಸುಳ್ಳು ಹೇಳಿ ಕರೆದು ತಂದರಲ್ಲ, ಪಾಪ ಅಯ್ಯಪ್ಪ ನನ್ನು ನಾನೆ ಪೋಲಿಸಿಗೆ ಕೊಟ್ಟ ಹಾಗೆ ಆಯ್ತು, ಆದರೆ ಇವರೇನು ಹೇಳುತ್ತಿದ್ದಾರೆ, ಅಯ್ಯಪ್ಪ ಯಾವ ಕೊಲೆ ಮಾಡಿದ. ಹೀಗೆಲ್ಲ ಯೋಚಿಸುತ್ತ , ವೇಲು ಮಂಕಾಗಿ ನಿದಾನಕ್ಕೆ ಹೋಗಿ, ಅವರು ಹೇಳಿದಂತೆ , ತಾನು ಬಂದಿದ್ದ ಜೀಪಿನಲ್ಲಿ ಹೋಗಿ ಕುಳಿತ, ಪಕ್ಕದಲ್ಲಿ ಡ್ರೈವರ್ ಇವನ ಮುಖ ನೋಡಿ ನಕ್ಕ.
---- ----------------
ಮುಂದಿನದೆಲ್ಲ ಪೋಲಿಸರ ನಿರೀಕ್ಷೆಯಂತೆ ನಡೆಯಿತು. ಅಲ್ಲಿ ಅಯ್ಯಪ್ಪ , ಕಿರಣ, ಶಿವ ಅಲ್ಲದೆ ಮತ್ತೊಬ್ಬ ಅವರ ಗೆಳೆಯ ಮುರಳಿ ಕಣ್ಣು ಕಣ್ಣು ಬಿಟ್ಟರು. ಅಷ್ಟು ದೂರದ ಬೆಂಗಳೂರಿನಿಂದ ತಮ್ಮ ವಾಸನೆ ಹಿಡಿದು ಅವರು ಬಂದುದ್ದು ಹೇಗೆ ಎಂದು ಅವರಿಗೆ ಗೊತ್ತಾಗಲಿಲ್ಲ. ಬಾಗಿಲು ತೆರೆಯುವಾಗಲೆ ಕಾಣಿಸಿದ ಪೋಲಿಸನ್ನು ಕಂಡು ಅಯ್ಯಪ್ಪನ ಚಿಕ್ಕಪ್ಪನು ಗಾಬರಿ ಬಿದ್ದ. ನಾಲ್ವರನ್ನು ಹಿಡಿದು, ಬೇಡಿ ತೊಡಿಸಿ, ಎಳೆದು ತಂದು ಮುಂದಿದ್ದ ವ್ಯಾನಿನಲ್ಲಿ ಎಲ್ಲರನ್ನು ಕೂಡಿಸಿದರು, ಹಿಂದೆಯೆ ಬೆಂಗಳೂರಿನಿಂದ ಬಂದಿದ್ದ, ಸಬ್ ಇನ್ಸ್ ಪೆಕ್ಟರ್ ಗಳು , ಕಾನ್ಸ್ ಟೇಬಲ್ಸ್ ಎಲ್ಲರು ಹತ್ತಿ ಕೂತರು, ಜೊತೆಗೆ ರಾಜಾರಾಮ್, ನಾಯಕ್, ಎಲ್ಲರು ಅಂಬೂರಿನ ಪೋಲಿಸ್ ಸ್ಟೇಶನ್ ತಲುಪಿದರು, ಅಲ್ಲಿ ಕೆಲವು ಫಾರ್ಮಾಲಿಟೀಸ್ ಮುಗಿಯುವಾಗ ಅರ್ದಗಂಟೆಯಾಯಿತು, ಎಲ್ಲರು ಅಲ್ಲಿಯೆ ಇಡ್ಲಿ ತರಿಸಿ ತಿಂದರು, ಅಲ್ಲಿಂದ ಬೆಂಗಳೂರಿನ ಕಡೆಗೆ ಮತ್ತೆ ಪೋಲಿಸ್ ವ್ಯಾನ್ ತಿರುಗಿದಾಗ, ಸರಿ ರಾತ್ರಿ ಹನ್ನೆರಡು ಗಂಟೆ.
ನಾಯಕ್ ಅಂದರು ರಾಜಾರಾಮ್ ಬಳಿ
"ಮತ್ತೆ ನಾಲಕ್ಕು ಗಂಟೆಗಿಂತ ಹೆಚ್ಚು ಕಾಲ ಗಾಡಿಯಲ್ಲಿಯೆ ಕೂಡಬೇಕು, ನಿದ್ದೆಯಂತು ದೂರ ಉಳಿಯಿತು. ಸಮಯ ಕಳೆಯುವುದು ಹೇಗೆ?"
ರಾಜಾರಾಮ್ ಗಟ್ಟಿಯಾಗಿ ನಕ್ಕರು. " ನಿದ್ದೆ ಎಲ್ಲಿ ಬಂತು, ನಮಗೂ ನಿದ್ದೆಯಿಲ್ಲ, ನಮ್ಮ ಕೈಲಿ ಸಿಕ್ಕಿರುವರಿಗು ನಿದ್ದೆಯಿಲ್ಲ. ಸುಮ್ಮನೆ ಕೂಡಲು ಸಮಯವೆಲ್ಲಿದ್ದೆ, ಈಗ ಇಂಟರಾಗೇಶನ್ ಪ್ರಾರಂಬವಾಗಬೇಕಲ್ಲ"
ಮತ್ತೇನು, ಪೋಲಿಸ್ ವ್ಯಾನ್ ಬೆಂಗಳೂರಿನ ಹತ್ತಿರ ಬರಲು ಸುಮಾರು ನಾಲಕ್ಕು ಗಂಟೆ ತೆಗೆದು ಕೊಂಡಿತು, ಅಂಬೂರಿನಿಂದ ಬೆಂಗಳೂರಿನವರೆಗು ಅರ್ದರಾತ್ರಿಯಲ್ಲಿ ಹೆದ್ದಾರಿಯಲ್ಲಿ ಅದೇ ವಾಹನದಲ್ಲೆ ರಾಜಾರಾಮ್ , ನಾಯಕ್ ಮತ್ತು ಉಳಿದ ಸಬ್ ಇನ್ಸ್ ಪೆಕ್ಟರ್ ಗಳು ಕೈದಿಗಳ ವಿಚಾರಣೆ ಪ್ರಾರಂಬಿಸಿದರು.
ಬೆಂಗಳೂರಿಗೆ ತಲುಪುವ ವೇಳೆಗೆ ಹೆಚ್ಚು ಕಡಿಮೆ, ಪ್ರಕರಣದ ಅಪರಾದಿಗಳ ವಿಚಾರಣೆ ಮುಗಿದಿತ್ತು. ಕಿರಣ್ , ಅಯ್ಯಪ್ಪ, ಮುರಳಿ ಹಾಗು ಶಿವ ತಮ್ಮ ಅಪರಾದಗಳನ್ನು ಒಪ್ಪಿಕೊಂಡಿದ್ದರು.
------------------------------------------- -------
ಮಿರ್ಜಿ ಸಾಹೇಬರ ಪ್ರೆಸ್ ಮೀಟ್ :
ಪೋಲಿಸ್ ಕಮೀಶನರ್ ಮಿರ್ಜಿ ಸಾಹೇಬರು , ಮರುದಿನವೆ ಪ್ರೆಸ್ ಮೀಟ್ ಕರೆದಿದ್ದರು. ಅವರು ಕೊಲೆಯ ಎಲ್ಲ ವಿವರಗಳನ್ನು ಒದಗಿಸಿದರು. ಕಿರಣ್ , ತನ್ನ ತಂದೆಯ ಸಾವಿನ ನಂತರ ಅವರು ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿಯೆ ಕೆಲಸಕ್ಕೆ ಸೇರಿಕೊಂಡ. ಚಿಕ್ಕ ವಯಸಿನಿಂದಲೆ ದಾರಿ ತಪ್ಪಿದ್ದ ಅವನು ಕೈಗೆ ಹಣ ಸಿಗುವಂತಾದಗ, ಅದರ ದುರುಪಯೋಗಕ್ಕೆ ಮನಸ್ಸು ಕೊಟ್ಟ, ಅದಕ್ಕೆ ಇಂಬುಗೊಟ್ಟಂತೆ ಅವನ ಸ್ನೇಹಿತರು. ಕೋತಿಗೆ ಹೆಂಡ ಕುಡಿಸಿದಂತೆ ಆಗಿತ್ತು ಅವನ ಸ್ಥಿಥಿ. ತನಗೆ ಬೇಕಾದ ಎಲ್ಲ ದುಶ್ಚಟಗಳಿಗೂ ತಾನು ಕೆಲಸ ಮಾಡುವ ಸೊಸೈಟಿಯ ಹಣ ಲಪಟಾಯಿಸುತ್ತಿದ್ದ. ಸೊಸೈಟಿಯಲ್ಲಿ , ಇನ್ನು ಚಿಕ್ಕವನು ಎಂಬ ಭಾವನೆ, ಅವನ ತಂದೆಯ ಮೇಲಿದ್ದ ನಂಭಿಕೆ, ಇವನನ್ನು ಯಾರು ಗಮನಿಸದಂತೆ ಮಾಡಿತ್ತು. ಈ ರೀತಿ ಒಂದೆರಡು ವರ್ಷಗಳಲ್ಲಿ ಇವನು ಸೊಸೈಟಿಗೆ ಮೋಸ ಮಾಡಿದ ಹಣ ಹಲವು ಲಕ್ಷ ದಾಟಿತ್ತು, ಇಂತಹ ಸಂದರ್ಭದಲ್ಲಿ ಮಹಾಂತೇಶ್ , ಸೊಸೈಟಿಗೆ ಆಡಿಟಿಂಗ್ ಗೆ ಬರುವದಾಗಿ ಸೂಚನೆ ಕಳಿಸಿದ್ದ. ಅದೊಂದು ರೊಟಿನ್ ಡ್ಯೂಟಿ, ಆದರೆ ಮಹಾಂತೇಶನ ಬಗ್ಗೆ ಮೊದಲೆ ಬಹಳ ಕೇಳಿದ್ದ ಕಿರಣ್ ಮಾತ್ರ ಹೆದರಿಹೋಗಿದ್ದ. ಅವನು ಬಂದ ದಿನವೆ ತನ್ನ ಕರೆಸಿ ವಿವರ ಕೇಳಿ ಮರುದಿನ ಬರುವದಾಗಿ ತಿಳಿಸಿ ಹೋಗಿದ್ದ. ಕಿರಣ್ ಗೆ ಈ ಪರಿಸ್ಥಿಥಿಯಿಂದ ಪಾರಾಗಬೇಕಿತ್ತು. ಹೆಚ್ಚು ಕಡಿಮೆಯಾದರೆ, ತನ್ನ ಕೆಲಸವು ಹೋಗುವುದು, ಜೈಲು ಸೇರಬೇಕಾಗಬಹುದು. ಅವನು ಚಿಂತಿಸಿದ.
ಅವನಿಗೆ ಹೊಳೆದ ಉಪಾಯವೆಂದರೆ, ಹೇಗಾದರು ಸರಿ ಮಹಾಂತೇಶ ಸೊಸೈಟಿಗೆ ಆಡಿಟಿಂಗ್ ಗೆ ಬರದಂತೆ ಮಾಡುವುದು, ಅಂದರೆ ಅವನ ಮೇಲೆ ಅಟ್ಯಾಕ್ ಮಾಡಿ ಅವನು ಆಸ್ಪತ್ರೆ ಸೇರಿದರೆ ಸರಿ ಎನ್ನುವ ಭಾವ. ಸದಾ ತನ್ನ ಜೊತೆ ಸುತ್ತುವ ಅಯ್ಯಪ್ಪ, ಮುರುಳಿ, ಶಿವ ಎಂಬುವರನ್ನು ಸರಿಮಾಡಿಕೊಂಡ. ಈಚೆಗೆ ಅವನು ಹಣಕೊಟ್ಟು ಅಯ್ಯಪ್ಪನಿಗೆ ಒಂದು ಕಾರು ಕೊಡಿಸಿದ್ದ, ಅದರ ಋಣ ಬೇರೆ ಇದ್ದಿತ್ತು , ಆಟೋ ಡ್ರೈವರ್ ಅಯ್ಯಪ್ಪನ ಮೇಲೆ. ಉಳಿದವರಿಗು ಕಿರಣ್ ಹಣ ಕೊಡಲು ಸಿದ್ದನಾದ, ಅದಕ್ಕು ಸೊಸೈಟಿಯ ಹಣವೆ ಅವನು ಉಪಯೋಗಿಸಿದ್ದು.
ಮಹಾಂತೇಶ್ ಮೊದಲ ದಿನ ಸೊಸೈಟಿಗೆ ಬಂದು ಅಲ್ಲಿಂದ ಹೊರಟ ತಕ್ಷಣ , ತನ್ನ ಸ್ನೇಹಿತರಿಗೆ ಮೊಬೈಲ್ ನಲ್ಲಿ ಸುದ್ದಿ ಮುಟ್ಟಿಸಿದ. ಅವರು ಕಾರಿನಲ್ಲಿ ಮಹಾಂತೇಶ ನನ್ನು ಹಿಂಬಾಲಿಸಿದರು. ಮೇಖ್ರೀ ಸರ್ಕಲ್ ಗೆ ಮುಂಚೆಯೆ ಅವರು ಅಟ್ಯಾಕ್ ಮಾಡಲು ಬಯಸಿದ್ದರು. ಆದರೆ ಸಂಜೆಯ ಟ್ರಾಫಿಕ್ ಅವರನ್ನು ತಡೆದಿತ್ತು. ಕಡೆಗೆ ಏಟ್ರಿಯ ಹೋಟೆಲ್ ಹತ್ತಿರ ಬಂದಾಗ ಅವರು ತಮ್ಮ ಕೆಲಸಕ್ಕೆ ಇಳಿದರು. ಮೊದಲಿಗೆ ಅವನನ್ನು ಘಾಸಿಗೊಳಿಸಿ ಆಸ್ಪತ್ರೆ ಸೇರುವಂತೆ ಮಾಡುವುದು ಅವರ ಉದ್ದೇಶ. ಆದರೆ ಮಹಾಂತೇಶ್ ಕಿರಣ್ ನನ್ನು ನೋಡಿದ್ದ., ಹಾಗಾಗಿ ಕಡೆಯಲ್ಲಿ ಅವರು ತಮ್ಮ ಪ್ಲಾನ್ ಬದಲಿಸಿದರು. ಮುಗಿಸಿಬಿಡಲು ಯೋಚಿಸಿದ್ದರು. ಮಹಾಂತೇಶ್ ಐದು ದಿನ ಆಸ್ಪತ್ರೆಯಲ್ಲಿ ನರಳಿ ಕಡೆಗೆ ಪ್ರಾಣ ಬಿಟ್ಟಾಗ ಅವರೆಲ್ಲ ನೆಮ್ಮದಿಯಾಗಿ ಇನ್ನು ತಮ್ಮ ಹೆಸರು ಹೊರಗೆ ಬರಲ್ಲ ಎಂದು ಇದ್ದರು. ಆದರೆ ಪೋಲಿಸರು, ಮಹಾಂತೇಶನ ಕೊಲೆಯ ಜಾಡು ಹಿಡಿದು. ಸೊಸೈಟಿ ವರೆಗು ಬಂದಾಗ ಮಾತ್ರ ಕಿರಣ್ ಗಾಭರಿಯಾಗಿದ್ದ. ಕಡೆಗೆ ಸ್ವಲ್ಪ ದಿನಗಳ ಕಾಲ ಊರು ಬಿಡುವುದು ಕ್ಷೇಮವೆಂದು ಭಾವಿಸಿ ಹೊರಟಿದ್ದರು, ಕಡೆಗೆ ಪೋಲಿಸರ ಚಾಕಚಕ್ಯತೆಯಿಂದ ಸಿಕ್ಕಿಬಿದ್ದು ತಮ್ಮ ತಪ್ಪು ಒಪ್ಪಿಕೊಂಡಿದ್ದರು.
ಇದನ್ನು ಬೇದಿಸಲು ಸಿಸಿಬಿಯವರು ಕ್ರೈಮ್ ಪೋಲಿಸರ ಎರಡು ನೂರಕ್ಕು ಹೆಚ್ಚು ಜನರು ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ಪ್ರೆಸ್ ನವರು ಕೇಳಿದ ಯಾವ ಪ್ರಶ್ನೆಗೆ ಉತ್ತರ ಕೊಡಲು, ಸಹ ಮಿರ್ಜಿ ಸಾಹೇಬರು ಅಸಹನೆಯಿಂದ ಸಿಡುಕಿದರು, ಅವರಿಗೆ ಕಿರಿಕಿರಿ ಉಂಟುಮಾಡಿದ ಮೀಡಿಯ ಬಗ್ಗೆ ಅದೇನೊ ಅಸಹನೆ. ಮಾದ್ಯಮದವರು ಒಂದು ಪ್ರಶ್ನೆ
"ಕೊಲೆಯ ಹಿಂದೆ ಯಾವುದೊ ಹುಡುಗಿ ಇದ್ದಾಳೆ, ಎಂದು, ಮತ್ತು ಸರ್ಕಾರಿ ಇದ್ದಾರೆ ಎಂದು ಸುದ್ದಿ ಇದೆಯಲ್ಲ" . ಎಂದು ಕೇಳಿದಾಗ ಅವರು ಉರಿದು ಬಿದ್ದರು
"ಯಾರ್ರಿ, ನಿಮಗೆ ಹೇಳಿದ್ದು ಹಾಗಂತ, ಅವರನ್ನು ತೋರಿಸಿ, ನಮ್ಮವರು ಯಾರು ಹಾಗೆ ಹೇಳಿಲ್ಲವಲ್ಲ." ಎಂದೆಲ್ಲ ಕೂಗಾಡಿದರು. ಕಡೆಗೊಮ್ಮೆ ಮಾಧ್ಯಮದವರ ಕುತೂಹಲವು ತಣ್ಣಗಾಯಿತು.
------------------------------------------------------ - - -
ಒಂದೆರಡು ದಿನಗಳ ನಂತರವೇನೊ. ನಾಯಕ್ ಸುಮ್ಮನೆ ಕುಳಿತ್ತಿದ್ದ ಪೋಲಿಸ್ ಸ್ಟೇಶನ್ ನಲ್ಲಿ, ಹೊರಗಿನಿಂದ ಬಂದ ಮಂಜುನಾಥ ನುಡಿದ
"ಇನ್ನೇನು ಆಯ್ತಲ್ಲ ಸರ್ , ಎಲ್ಲ ಕೇಡಿಗಳು ಸಿಕ್ಕಿದರಲ್ಲ ಬಿಡಿ , ಪಾಪ ಆ ಪ್ರಾಮಾಣಿಕ ಅಧಿಕಾರಿ ಮಹಾಂತೇಶನ ಆತ್ಮಕ್ಕೆ ಸಂತಸ ವಾಗುತ್ತೆ ಅಲ್ವ?"
ಪೋಲಿಸ್ ಸ್ಟೇಶನ್ ನಲ್ಲಿ ಆತ್ಮ ಎಂದೆಲ್ಲ ಪದ ಕೇಳಿದ ನಾಯಕ್ , ಅವನ ಮುಖವನ್ನೆ ನೋಡಿದ
" ಅದೇನೊ ಸರಿ ನೀನು ಹೇಳೋದು, ಆದರೆ ನಾವಿರುವ ಪರಿಸ್ಥಿಥಿ ನೋಡು, ನಾವೇನೊ ಕಷ್ಟ ಬಿದ್ದು ಎಲ್ಲ ಅಪರಾದಿಗಳನ್ನು ಹಿಡಿದು ತರುತ್ತೇವೆ, ಆದರೆ ಅವರನ್ನು ಕಾನುನಿನ ಅಡಿಯಲ್ಲಿ ತರೋದೆ ಒಂದು ಕಷ್ಟದ ಕೆಲಸ. ಹೀಗೆ ಅಂತ ಹೇಗೆ ಹೇಳೋದು. ಅವರು ಬೈಲ್ ಪಡೆದು ಹೊರಬರಬಹುದು. ಕೇಸು ಸೆಟ್ಲ್ ಆಗಲು ಎಷ್ಟು ಕಾಲ ಬೇಕೊ ಆಗ ನಾನು ನೀನು ಎಲ್ಲಿರುತ್ತೇವೆ , ಇವೆಲ್ಲ ಯಾರಿಗೆ ಗೊತ್ತಿದೆ ಹೇಳು. ಮತ್ತೆ ನಾವು ಎಷ್ಟೆ ಶ್ರಮ ಪಟ್ಟರು, ಕೋರ್ಟಿನಲ್ಲಿ ಸರ್ಕಾರಿ ವಕೀಲರು ಕೇಸನ್ನು ಹೇಗೆ ನಡೆಸುತ್ತಾರೆ ಎಂಬುದರ ಮೇಲೆ ಇವರಿಗೆ ಆಗುವ ಶಿಕ್ಷೆ ಎಲ್ಲ ನಿರ್ದಾರ ಆಗೋದು,
ಹೋಗಲಿ ಬಿಡು ಅದೆಲ್ಲ ಯಾಕೆ? ಅಲ್ಲದೆ ನನಗೆ ಇನ್ನೊಂದು ಚಿಂತೆ ಕಾಡುತ್ತೆ, ಅದೇನೊ ಈಗಿನ ಜನಾಂಗ ಹೀಗೆ ಆಗುತ್ತಿದೆ, ಯುವಕರೆ ಇಂತ ಕ್ರಿಮಿನಲ್ ಆಕ್ಟಿವಿಟಿ ನಲ್ಲಿ ಸೇರುತ್ತಾರೆ, ಈಗ ನೋಡು ಎಲ್ಲರು ಬರಿ ೨೦ ರಿಂದ ಮೂವತ್ತು ವರ್ಷದವರು ಅವರ ಮನೆಯವರ ಪರಿಸ್ಥಿಥಿ ನೋಡು ಇದೆಲ್ಲ ಆ ಹುಡುಗರ ಯೋಚನೆಗೆ ಏಕೆ ಬರಲ್ಲ" ತನ್ನ ಮಾತು ನಿಲ್ಲಿಸಿದ ನಾಯಕ್
"ನೀವು ಹೇಳೋದು ಸರಿಯೆ ಸಾರ್, ಅದರೇನು ಮಾಡೋದು, ಈಗ ಎಲ್ಲ ಇರೋದೆ ಹಾಗೆ ಅಲ್ವ ಸಾರ್, ನಾವು ಎಲ್ಲ ಹೀಗಿದೆ ಅಂತ ಕೊರಗುವದಕ್ಕಿಂತ, ನಾವು ಸರಿಯಾಗಿದ್ದರೆ ಆಯ್ತು, ಎಲ್ಲರು ಹಾಗೆ ಭಾವಿಸಿದರೆ , ಒಂದು ದಿನ ಎಲ್ಲವು ಸರಿ ಹೋಗುತ್ತೇನೊ ಯಾರಿಗೆ ಗೊತ್ತು " ಎಂದ. ನಾಯಕ್ , ಮಂಜುನಾಥನ ತರ್ಕಕ್ಕೆ ಆಶ್ಚರ್ಯದಿಂದ ಅವನತ್ತ ನೋಡಿದ
----------------------------------------
ಮುಗಿಯಿತು:
ಓದುಗನ ಆಸಕ್ತಿಯನ್ನು ಚದುರಲು ಬಿಡದ ಉತ್ತಮ ಕಥೆ... ಇಷ್ಟವಾಯಿತು..
ReplyDelete