Sunday, July 15, 2012

ಕತೆ : ಸುನಂದ


'ಸುನಂದ ಮೇಡಮ್ , ಸಾರ್ ನಿಮ್ಮನ್ನು ಕರಿ ಅಂತ ಹೇಳಿದ್ರು' . ಕೆಲಸದಲ್ಲಿ ಮುಳುಗಿದ್ದ ಸುನಂದ ತಲೆ ಎತ್ತಿ ನೋಡಿದಳು. ಅಟೆಂಡರ್ ರಂಗಣ್ಣ , ಇವಳ ಮುಖ ನೋಡಿ ಹೊರಟು ಹೋದ
'ಏಕಿರಬಹುದು, ಬಾಸ್ ಕರೆಯುತ್ತಿರುವುದು. ತುಂಬಾ ದಿನವಾಯಿತು ಅವರು ಚೇಂಬರ್ ಒಳಗೆ ಕರೆದು ', ಎಂದು ನೆನೆಯುತ್ತ ಸುನಂದ ನಿದಾನಕ್ಕೆ ಎದ್ದು, ಅವಳ ಬಾಸ್ ಮಹೇಶ್ ಕುಳಿತ್ತಿದ್ದ ರೂಮಿನತ್ತ ಹೊರಟಳು. ಫ್ಲಾಪ್ ಡೋರನ್ನು ತಳ್ಳುತ್ತ ನಿದಾನಕ್ಕೆ ಒಳಗೆ ಹೋಗಿ ಎದಿರು ನಿಂತು.
'ಸಾರ್ ಕರೆದಿರ" ಎಂದಳು.
ಅವನು ಒಮ್ಮೆ ತಲೆ ಎತ್ತಿ ಇವಳತ್ತ ನೋಡಿದ ನಂತರ ಅವನ ಎದುರಿಗಿದ್ದ , ಕಂಪ್ಯೂಟರ್ ಪರದೆಯತ್ತ ಅವನ ದೃಷ್ಟಿ ತಿರುಗಿತು.
'ಈಗ ಹೇಗಿದ್ದೀರಿ" ಅವನ ಪ್ರಶ್ನೆ. ಮೊದಲಾದರೆ ಸುನಂದಳ ಮುಖ ನೋಡುವಾಗಲೆ ಅವನ ಮುಖವು ಅರಳುತ್ತಿತ್ತು, ಕುಳಿತುಕೊಳ್ಳಿ ಎಂದು ಎದುರಿನ ಖುರ್ಚಿ ತೋರಿಸುತ್ತಿದ್ದ. ಅವಳು ಅದನ್ನು ನೆನೆಯುತ್ತ
"ತೊಂದರೆ ಇಲ್ಲ ಚೆನ್ನಾಗಿದ್ದೇನೆ" ಎಂದಳು,
ಮಹೇಶ್.
"ನೋಡಿ, ನೀವು ತೊಂದರೆ ತೆಗೆದುಕೊಳ್ಳ ಬೇಡಿ, ಯಾವುದಕ್ಕು ಯೋಚಿಸಬೇಡಿ, ಎರಡು ಮೂರು ತಿಂಗಳು ರಜಾ ಹಾಕಿಬಿಡಿ, ನಾನು ಸ್ಯಾಂಕ್ಷನ್ ಮಾಡ್ತೀನಿ ,ಚಿಂತೆ ಬೇಡ ಅಪ್ ಕೋರ್ಸ್ ನೀವು ನಾರ್ಮಲ್ ಲೀವ್ ಅಪ್ಲೈ ಮಾಡಿ ಸಾಕು ಮೆಡಿಕಲ್ ಸಪೋರ್ಟ್ ಏನು ಬೇಕಿಲ್ಲ" ಎಂದ.
ಸುನಂದ ಕೊಂಚ ಆಶ್ಚರ್ಯದಿಂದಲೆ,
"ಬೇಡ ಸಾರ್, ಈಗ ರಜದ ಅಗತ್ಯವೇನಿಲ್ಲ, ಅಲ್ಲದೆ ನನಗೆ ಮನೆಯಲ್ಲಿ ಸುಮ್ಮನೆ ಕೂತಷ್ಟು ಹಿಂಸೆ, ಇಲ್ಲಾದರೆ ಕೆಲಸದಲ್ಲಿ ಕಾಲ ಕಳೆದುಹೋಗುತ್ತೆ' ಎಂದಳು,
ಅದಕ್ಕೆ ಮಹೇಶ, "ಅದೇನೊ ಸರಿಯೆ, ಆದರೆ ರಜಾ ಎನ್ನುವುದು ಇರುವುದೆ ಇಂತ ಸಮಯಕ್ಕೆ, ಅಲ್ಲವೆ, ಅರಾಮವಾಗಿ ಹಾಕಿ ಹೋಗಿ" ಎಂದ.
ಸುನಂದಳು "ಥ್ಯಾಂಕ್ಸ್ ಸರ್, ನನಗೆ ರಜಾ ಬೇಕೆನಿಸಿದರೆ ಖಂಡೀತಾ ಹಾಕ್ತೇನೆ," ಎನ್ನುತ್ತ ಹೊರಟಳು.
ಆದರೆ ಮಹೇಶ
"ಒಂದು ನಿಮಿಶ ಇವರೆ ನಿಲ್ಲಿ, " ಎಂದ, ಅವಳು ನಿಂತಂತೆ,
"ನೋಡಿ, ಸುನಂದರವರೆ, ನಿಮ್ಮ ಈ ಸ್ಥಿಥಿ ನಮಗು ಬೇಸರವೆ, ಆದರು ಏನು ಮಾಡುವುದು ಹೇಳಿ, ನೇರವಾಗಿ ಹೇಳುತ್ತಿದ್ದೇನೆ ಅಂತ ಬೇಸರಪಡಬೇಡಿ, ಅಪ್ ಕೋರ್ಸ್, ನಿಮ್ಮನ್ನು ನಾನು ಬಲವಂತ ಮಾಡಲು ಆಗಲ್ಲ ನೋಡಿ,ಆದರು, ನಾನು ನಿಮಗೆ ಪರಿಸ್ಥಿಥಿ ಹೇಳಲೆ ಬೇಕಲ್ವ, ಈಗ ಬೆಳಗ್ಗೆ, ನಿಮ್ಮ ಲೇಡೀಸ್ ಸ್ಟಾಫ್ ಎಲ್ಲ ಬಂದಿದ್ದರು, ಅವರು ಕೆಲವು ತೊಂದರೆ ಹೇಳ್ತಿದ್ದಾರೆ, ನಿಮ್ಮ ಬಗ್ಗೆಯೆ, ಅವರಿಗೆ ನಿಮ್ಮ ಬಗ್ಗೆ ಯಾವ ದ್ವೇಷವು ಇಲ್ಲ, ಆದರೂ, ಹ್ಯೂಮನ್ ಸೈಕಾಲಜಿ ನೋಡಿ, ಮತ್ತೆನಿಲ್ಲ, ಅವರಿಗೆಲ್ಲ ಚಿಂತೆ, ಅವರು ನಿಮ್ಮ ಜೊತೆಯೆ ರೆಸ್ಟ್ ರೂಮ್, ವಾಶ್ ರೂಮ್, ಮತ್ತೆ ಇರುವ ಪ್ರಿವಿಲೇಜ್ ನೆಲ್ಲ ಶೇರ್ ಮಾಡಬೇಕಲ್ವ, ಹಾಗಾಗಿ , ದೈ ಆರ್ ವರೀಡ್, ಅವರು ಮಾತನಾಡುವ ರೀತಿ ಗೊತ್ತಲ್ಲ, ನೀವು ರಜಾ ಹಾಕದಿದ್ದರೆ, ಅವರು ಎಲ್ಲರು ರಜಾ ಹಾಕಿ ಹೋಗ್ತೀವಿ ಅಂತ ಹೇಳಿದ್ದಾರೆ, ನಾನು ಎಲ್ಲ ಮ್ಯಾನೇಜ್ ಮಾಡ್ಬೇಕು ನೋಡಿ. ಅವರು ಹೇಳೋದು ತಪ್ಪು ಅಂತ ಹೇಳಕ್ಕಾಗಲ್ಲ.ಯಾರೆ ಆಗಲಿ ಹೆದರಿಕೆ ಸಾಮಾನ್ಯ ನೋಡಿ. ನೀವು ಕೆಲವು ಕಾಲ ಅಷ್ಟೆ, ರಜಾ ಹಾಕಿ ಬಿಡಿ. ನಂತರ ನಾರ್ಮಲ್ ಗೆ ಬಂದ ತಕ್ಷಣ , ನೀವು ರಿಪೋರ್ಟ್ ಮಾಡಿಕೊಳ್ಳ ಬಹುದು ಅಲ್ವ, ಸಾರಿ ತಪ್ಪು ತಿಳಿಯಬೇಡಿ, ನನಗು ಗೊತ್ತು ಈ ರೀತಿ ಎಲ್ಲ ಹೇಳುವುದು ತಪ್ಪು ಅಂತ"
ಮಹೇಶ ಹೇಳುತ್ತಿರುವಂತೆ, ಅವಳ ಬುದ್ದಿ ಮಂಕಾಯಿತು, ಏನಾಗುತ್ತಿದೆ. ಅಲ್ಲ ಕಡೆಯ ಪಕ್ಷ ನನ್ನ ಕ್ಲೋಸ್ ಫ್ರೆಂಡ್ ಶರ್ಮಿಳಾ ಆದರು ನನಗೆ ತಿಳಿಸಬಹುದಿತ್ತು, ಮತ್ತೆ ನೆನಪಾಯಿತು, ಬೆಳಗ್ಗೆ ಬಾಸ್ ಚೇಂಬರ್ ಒಳಗಿನಿಂದ ಎಲ್ಲರ ಜೊತೆ ಅವಳು ಹೊರಬಂದಿದ್ದನ್ನು ನೋಡಿದ ನೆನಪಾಯಿತು. ಸುನಂದಳಿಗೆ ಮತ್ತೇನು ತೋಚಲಿಲ್ಲ. ಮೌನವಾಗಿ ಎದ್ದು ಹೊರಬಂದಳು. ತನ್ನ ಜಾಗದಲ್ಲಿ ಸ್ವಲ್ಪ ಕಾಲ ಮೌನವಾಗಿ ಕುಳಿತಳು, ಕಡೆಗೆ ನಿರ್ದರಿಸಿದಳು, ತಾನೀಗ ರಜಾ ಹಾಕುವುದೆ ಸರಿ. ಟೇಬಲ್ ಡ್ರಾದಿಂದ, ಫಾರ್ಮ್ ಹೊರತೆಗೆದು ಅದನ್ನು ಬರ್ತಿ ಮಾಡಿದಳು. ಮರುದಿನದಿಂದ ಪೂರ ಮೂರು ತಿಂಗಳು, ರಂಗಣ್ಣನನ್ನು ಕೈ ಸನ್ನೆಯಿಂದ ಹತ್ತಿರ ಬಾ ಎಂದು ಕರೆದಳು,
" ಬಾಸ್ ಕೈಲಿ ಕೊಡು" ಎನ್ನುತ್ತ ಅವನ ಕೈಗೆ ತನ್ನ ರಜಾ ವಿನಂತಿಯ ಕಾಗದಗಳನ್ನು ತಲುಪಿಸಿದಳು. ನಿದಾನಕ್ಕೆ ಅಲ್ಲಿಂದ ಎದ್ದು ಹೊರಟಳು.
ಸಂಜೆ ಮನೆಗೆ ಹೋಗುವಾಗ ಅಪರೂಪಕ್ಕೊಮ್ಮೆ ಬಸ್ಸಿನಲ್ಲಿ ಸೀಟು ಸಿಗುವುದುಂಟು. ಅವಳು ಮತ್ತೊಂದು ವಿಷಯ ಗಮನಿಸಿದ್ದಳು, ಈ ನಡುವೆ ಕೆಲವೊಮ್ಮೆ ತಾನು ಕುಳಿತ ನಂತರ ತನ್ನ ಪಕ್ಕದಲಿ ಜಾಗವಿದ್ದರು ಅಲ್ಲಿ ಯಾರು ಬೇಗ ಕುಳಿತುಕೊಳ್ಳಲು ಬರುತ್ತಿರಲಿಲ್ಲ. ಹತ್ತಿರ ಬಂದವರು ಅವಳ ಮುಖವನ್ನೊಮ್ಮೆ ನೋಡುತ್ತ ಹಾಗೆ ನಿಂತು ಬಿಡುವರು.
ಈ ದಿನ ಅವಳ ಮನಸ್ಸು ಹಳೆಯ ನೆನಪಲ್ಲಿ ತೇಲುತ್ತಿತ್ತು. ಮದುವೆಯಾಗಿ ಸರಿಸುಮಾರು ಹದಿನೈದು ವರ್ಷ ಕಳೆದಿತ್ತು. ಪತಿ ನಟರಾಜ, ಹಾಗು ಮಗಳು ಶಿಲ್ಪರ ಪುಟ್ಟ ಕುಟುಂಬ. ಜೊತೆಯಲ್ಲಿ ಅತ್ತೆ , ಮಾವ ಹಾಗು ನಾದಿನಿ ಅನುರಾದ. ಆರು ಜನರಿದ್ದರು, ದೊಡ್ಡ ಮನೆಯಾದ ಕಾರಣ ತೊಂದರೆ ಏನಿರಲಿಲ್ಲ. ಮಾವನವರ ಪೆನ್ ಷನ್ ಹಣ, ತನ್ನ ಹಾಗು ಗಂಡನ ಸಂಬಳ. ಹೆಚ್ಚು ಖರ್ಚಿಲ್ಲದ ಸಂಸಾರ ಎಲ್ಲವು ನೆಮ್ಮದಿಯಾಗಿಯೆ ಇತ್ತು. ಅತ್ತೆಯ ಮಾತು ಒಂದು ರೀತಿ ಸುತ್ತ ಬಳಸು ಆದರು ತೀರ ಕೆಟ್ಟವರೇನಲ್ಲ. ಮಾವನವರಾದರೊ ನಿವೃತ್ತ ಮನದವರು. ದುಡಿಯುವ ಸೊಸೆ ತಾನಾದ್ದರಿಂದ ಅವಳಿಗೆ ಮನೆಯಲ್ಲಿ ಸಾಕಷ್ಟು ಬೆಲೆಯು ಇದ್ದಿತ್ತು.
ಮಗಳು ಶಿಲ್ಪ ಆಗಲೆ ಹೈಸ್ಕೂಲ್ ಸೇರಿದ್ದಳು. ಚಿಕ್ಕವಯಸಿನಿಂದಲು ತನ್ನ ಅಮ್ಮ ಕೆಲಸಕ್ಕೆ ಹೋಗುವದನ್ನು ಹೊಂದಿಕೊಂಡೆ ಬೆಳೆದವಳು ಅವಳು. ಆದರೆ ಮನೆಯಲ್ಲಿರುವಾಗ ಸದಾ ಅಮ್ಮನ ಸೆರಗೆ ಬೇಕು ಸದಾ ಸುತ್ತಿಕೊಂಡಿರಲು. ಮೊದಲಿಗೆ ಅತ್ತೆಯಾವರು ಅನ್ನುತ್ತಿದ್ದರು,
'ಬೆಳಗಿನಿಂದ ಸೇವೆಗೆ ನಾನು ಬೇಕು ಸಂಜೆ ಅಮ್ಮ ಬರುತ್ತಲೆ , ಅತ್ತ ಸೇರಿಬಿಡುತ್ತಾಳೆ, ಎಲ್ಲಿ ಹೋಗುತ್ತೆ, ತನ್ನದು ಅನ್ನುವ ಬಾಂದವ್ಯ'
ತನಗೋ ಬೆಳಗ್ಗೆ ಆಫೀಸಿಗೆ ಹೊರಡುವ ತರಾತುರಿ ಅ ನಡುವೆಯೆ
'ಅಮ್ಮ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸು' , 'ಟವೆಲ್ ಕೊಡು' , 'ಪುಸ್ತಕ ಸಿಗುತ್ತಿಲ್ಲ' ಹೀಗೆ ಪ್ರತಿಯೊಂದಕ್ಕು ತನ್ನನ್ನು ಕರೆಯುವ ಮಗಳು,
'ನನ್ನ ಗಾಡಿ ಕೀ ಎಲ್ಲಿಟ್ಟೆ ನೋಡೆ' ಎನ್ನುವ ಗಂಡ.
"ಸುನಂದ ನಿನಗೆ ಲೇಟ್ ಆಗಲ್ವ ಬೇಗ ಸಿದ್ದ ಆಗಮ್ಮ" ಎನ್ನುವ ಅತ್ತೆ,
ಪೇಪರು ಹಿಡಿದು ದೀಕ್ಷೆಯಲ್ಲಿ ಕುಳಿತ ಮಾವ.
ಈಗೊಂದು ಆರು ತಿಂಗಳಿಂದ ಎಲ್ಲವು ಬದಲಾಗಿತ್ತು. ಮಗಳು ಅವಳನ್ನು ಕೂಗುವುದು ನಿಲ್ಲಿಸಿದ್ದಳು.
"ಅಜ್ಜಿ ಟವೆಲ್ " ಎಂದು ಕೂಗುತ್ತಿದ್ದಳು, ಒಮ್ಮೆ ತಾನು ತೆಗೆದುಕೊಂಡು ಹೋದರೆ, ಮುಖ ಸಪ್ಪೆಯಾಗಿ "ನೀನೆಕ್ಕಮ್ಮ ತರಲು ಹೋದೆ" ಅನ್ನುವಳು.
"ಅಮ್ಮ ನನ್ನ ಕರ್ಚೀಫ್ ನೋಡಿದೆಯ" ಎಂದು ಈ ವಯಸಿನಲ್ಲು ಅವರ ಅಮ್ಮನನ್ನು ಕೇಳುವ ಅವಳ ಗಂಡ.
ಅವಳಿಗೆ ಎಲ್ಲ ಅರ್ಥವಾಗುತ್ತಿತ್ತು. ಎಲ್ಲವು ಕಳೆದೆರಡು ವರ್ಷದಿಂದ ಪ್ರಾರಂಬವಾದ, ತನ್ನ ಜೀವನವನ್ನೆ ಬದಲಾಯಿಸಿದ, ಕಾಯಿಲೆ ಇದು. ಮೊದಲಲ್ಲಿ ಮೇಲು ಹೊಟ್ಟೆಯಲ್ಲಿ ಅದೇನೊ ನೋವು ಕಾಣಿಸಿಕೊಂಡಿತು. ತಾನೆ ಕೆಲವು ಮಾತ್ರೆ ತೆಗೆದುಕೊಂಡಳು. ನಂತರ ಅದೇನೊ ನೋವು ಶಮನಕ್ಕೆ ಬರುತ್ತಿಲ್ಲ ಅನಿಸಿದಾಗ ಡಾಕ್ಟರ್ ಹತ್ತಿರ ಹೋದಳು. ಪರೀಕ್ಷೆ ಮಾಡಿದ ಡಾಕ್ಟರ್ ಕೆಲವು ಸಾರಿ ಗ್ಯಾಸ್ಟ್ರಿಕ್ ಸಮಸ್ಯೆಗು ಇದೇ ರೀತಿ ತೊಂದರೆಯಾಗುವುದುಂಟು ಎನ್ನುತ್ತ ಕೆಲವು ಮಾತ್ರೆಗಳನ್ನು ನೀಡಿ. ಕಾಫಿ ಟಿ ಮುಂತಾದವುಗಳನ್ನು , ಅತಿಯಾದ ಎಣ್ಣೆ ಹಾಗು ಹಾಗು ಸಿಹಿಗಳನ್ನು ತೆಗೆದುಕೊಳ್ಳ ಬೇಡಿ ಎಂದ ತಿಳಿಸಿದರು. ಸ್ವಲ್ಪ ಕಡಿಮೆ ಆಯಿತು ಅನ್ನಿಸಿದ ನೋವು ಮತ್ತೆ ಮತ್ತೆ ಜಾಸ್ತಿಯಾಗುತ್ತಿತ್ತು. ಪದೆಪದೆ ಆಫೀಸಿಗು ರಜಾ ಹಾಕಬೇಕಾಗುತ್ತಿತ್ತು. ಡಾಕ್ಟರ್ ಗಳು ಸರಿಯಾಗಿ ನೋಡುತ್ತಿಲ್ಲ ಎಂದು ಗಂಡ ನಟರಾಜನಿಗೆ ಕೋಪ ಹಾಗಾಗಿ ಡಾಕ್ಟರ್ ಗಳನ್ನು ಹಲವು ಸಾರಿ ಬದಲಿಸಿದರು. ಎಕ್ಸ್ ರೆ , ಇ.ಸಿ.ಜಿ ಅಂತವೆಲ್ಲ ಆಯಿತು. ಸಮಸ್ಯೆ ಮಾತ್ರ ಪರಿಹಾರವಾಗಲಿಲ್ಲ. ಪದೆ ಪದೆ ಜ್ವರ ಬೇರೆ ಪ್ರಾರಂಬವಾಯಿತು. ಅದನ್ನು ಒಮ್ಮೆ ಜಾಂಡೀಸ್ ಎಂದು ಪರಿಗಣಿಸಿ ಅದಕ್ಕೆ ಬೇರೆ ಟ್ರೀಟ್ ಮೆಂಟ್ ಆಯಿತು. ಹೀಗೆ ಆರು ತಿಂಗಳು ಸರಿಯಾಗಿ ಕಾಯಿಲೆ ಏನು ಎಂದು ತಿಳಿಯದೆ ಪರದಾಡಿದರು.
ನಂತರ ಅವರ ಫ್ಯಾಮಿಲಿ ಡಾಕ್ಟರ್ ಗೀತ ಅವಳ ಬವಣೆಯನ್ನೆಲ್ಲ ಕಾಣುತ್ತ, ಮತ್ತೆ ಎಕ್ಸ್ ರೇ ಮುಂತಾದುವುಗಳನ್ನೆಲ್ಲ ತೆಗೆಸಿ , ಪರೀಕ್ಷಿಸಿ ದವರು ಏಕೊ, ಅದು ಕ್ಯಾನ್ಸರ್ ಇರಬಹುದೆ ಎಂದು ಅನುಮಾನಟ್ಟಾಗ ಮನೆಯವರೆಲ್ಲ ಬೆಚ್ಚಿಬಿದ್ದರು. ಮತ್ತೆ ಓಡಾಟ ಪ್ರಾರಂಬವಾಯಿತು. ಡಾ! ಗೀತರವರು ಅವಳನ್ನು ಕಿದ್ವಾಯ್ ಗೆ ರೆಫೆರ್ ಮಾಡಿದರು. ಸುನಂದಳಂತು ಎಲ್ಲ ದೇವರನ್ನು ಬೇಡುತ್ತ, ತನಗೆ ಕ್ಯಾನ್ಸರ್ ಅಂತ ಕಾಯಿಲೆಗಳು ಇಲ್ಲದಿರಲಿ, ಎಂದು ಪ್ರಾರ್ಥಿಸುತ್ತ, ಕಿದ್ವಾಯ್ ಗೆ ಪರೀಕ್ಷೆಗೆ ಹೋದಳು. ಆದರೆ ಜೀವನದ ನಿಯಮದ ಮುಂದೆ ಅವಳ ನಿರೀಕ್ಷೆಗಳೆಲ್ಲ ತಲೆಕೆಳಗಾದವು. ಡಾಕ್ಟರ್ ಗಳು ಅವಳಿಗೆ ಕ್ಯಾನ್ಸರ್ ಇರುವುದು ದೃಡಪಡಿಸಿದರು. ಅವರು ಹೇಳಿದಂತೆ ಅದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್. ಅಲ್ಲದೆ ಅವಳ ಕಾಯಿಲೆಯನ್ನು ಕ್ಯಾನ್ಸರ್ ಎಂದು ಕಂಡುಹಿಡಿಯುವ ಹೊತ್ತಿಗೆ ಸಾಕಷ್ಟು ತಡವಾಗಿದೆ ಎಂದರು. ಮತ್ತೆ ಯಾವುದೆ ತಡ ಮಾಡದೆ ಅವಳ ಟ್ರೀಟ್ ಮೆಂಟ್ ಪಾರಂಬವಾಯಿತು. ಅವಳು ಆಗಲೆ ಕಡೆಯ ಹಂತದಲ್ಲಿದ್ದಳು. ಜೀವದಲ್ಲಿ ಉಳಿಯುವ ಅವಕಾಶ ಶೇಕಡ ೨೦ ಕ್ಕಿಂತ ಕಡಿಮೆ. ಅದನ್ನು ಕೇಳುವಾಗಲೆ ಅವಳ ಆತ್ಮಸ್ಥೈರ್ಯವೆಲ್ಲ ಉಡುಗಿ ಹೋಗಿತ್ತು. ಮಾನಸಿಕವಾಗಿ ಎಲ್ಲಕ್ಕು ಸಿದ್ದವಾದಳು.
ಕ್ಯಾನ್ಸರ್ ಸೆಲ್ ಗಳು ಅಕ್ಕಪಕ್ಕದ ಅಂಗಾಂಗಗಳಿಗು ವ್ಯಾಪಿಸಲು ಪ್ರಾರಂಬವಾಗಿತ್ತು. ಮೊದಲ ಹಂತದ ಅಪರೇಶನ್ ಮಾಡಲಾಯಿತು. ನಂತರೆ ಕೆಲವು ಕಾಲ ರೇಡಿಯೊ ಥೆರಫಿ ಸಣ್ಣ ಹಂತದಲ್ಲಿ ನಡೆಸಲಾಯಿತು. ಕಡೆಯಲ್ಲಿ ಕಿಮೋ ಥೆರೆಪಿ ಪಾರಂಬಿಸಿದಾಗ ಅವಳು ಹೈರಾಣವಾಗಿದ್ದಳು. ಹಾಗು ಅವಳು ಆಕೆ ಡಾಕ್ಟರ್ ಗಳನ್ನು ಕೇಳಿದಳು, ಇದೆಂತದು ಡಾಕ್ಟರ್ ಎಲ್ಲ ವಿದವಾದ ಟ್ರೇಟ್ ಮೆಂಟ್ ಕೊಡುತ್ತೀರಿ, ರೇಡಿಯೊ ಥೆರಪಿ ನಂತರ ಕಿಮೋ ಥೆರಪಿ ಬೇಡ ಅಲ್ಲವೆ ಎಂದು. ಆದರೆ ಡಾಕ್ಟರ್ ಗಳು ತುಂಬಾ ಗಂಭೀರವಾಗಿ ಚಿಂತಿಸಿ ತಮ್ಮ ನಿರ್ದಾರ ಕೈಗೊಂಡಿದ್ದರು. ಅವರಿಗೆ ಅವಳ ಜೀವೆ ಉಳಿಸುವದೊಂದೆ ಗುರಿ. ಉಳಿದ ಪರಿಣಾಮಗಳೆಲ್ಲ ಅವರು ಲಕ್ಷಿಸುತ್ತಿರಲಿಲ್ಲ.
ನೋವು ಅನ್ನುವುದು ಅವಳ ದಿನ ನಿತ್ಯದ ಹಾಡಾಯಿತು. ರೆಡಿಯೋ ಥೆರೆಪಿಯ ಹಂತದಲ್ಲಿ ಅವಳಿಗೆ ರಾತ್ರಿಗಳು ನಿದ್ದೆಯಿಲ್ಲದ ರಾತ್ರಿಗಳಾದವು. ರಾತ್ರಿ ಪೂರ್ತಿ ಅವಳು ಕೆಲವೊಮ್ಮೆ ಎದ್ದು ಕುಳಿತಿರುತ್ತಿದ್ದಳು. ಅವಳ ತಾಯಿ ಹೇಳುತ್ತಿದ್ದ ಮಾತುಗಳು ನೆನಪಾದವು. ಯಾವುದೆ ಕಾಯಿಲೆ ಇರುವಾಗ ಅದರ ನೋವುಗಳು ಸಾಮಾನ್ಯವಾಗಿ ರಾತ್ರಿಯ ವೇಳೆಗಳಲ್ಲಿ ಉಲ್ಬಣಗೊಳ್ಳುವುದು. ಹಗಳು ಬಿಸಿಲು ಏರಿದಂತೆ ಸ್ವಲ್ಪ ನೋವು ಶಮನ ಗೊಳ್ಳುವುದು. ಆ ಮಾತು ನಿಜವಾಗಿತ್ತು. ಹಗಲಿನ ನೋವು ರಾತ್ರಿ ದ್ವಿಗುಣಗೊಳ್ಳುತ್ತಿತ್ತು. ಸುಮ್ಮನೆ ರಾತ್ರಿ ಕುಳಿತವಳಿಗೆ ಯಾವುದೊ ಯೋಚನೆಗಳು ಆವರಿಸುತ್ತಿದ್ದವು.
ಒಮ್ಮೆ ಸರಿರಾತ್ರಿಯಲ್ಲಿ ಕುಳಿತವಳಿಗೆ ಬಸ್ಸಿನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬಂದಿತು. ದೂರದಿಂದ ತನ್ನ ಪಕ್ಕದಲ್ಲಿ ಸೀಟು ಖಾಲಿ ಇರುವದನ್ನು ಗಮನಿಸಿದ ಯುವಕನೊಬ್ಬ ಆತುರವಾಗಿ ಬಂದು ಕುಳಿತ. ಸೆರಗು ಹೊದ್ದು ಕಿಟಕಿಯತ್ತ ಮುಖ ಮಾಡಿದ್ದ ತಾನು ಏನಕ್ಕೊ ಮುಖ ಒಳಗೆ ತಿರುಗಿಸಿದಾಗ ಆ ಯುವಕ ಗಾಭರಿಗೊಂಡವನಂತೆ ಎದ್ದು ನಿಂತು ಹಿಂದೆ ಹೋಗಿದ್ದ. ಒಮ್ಮೆಲೆ ಬಂದ ಆ ನೆನಪಿನಿಂದ ಅವಳಿಗೆ ಅದೇಕೊ ನಗು ಉಕ್ಕಿ ಉಕ್ಕಿ ಬಂದಿತು.
ಸರಿರಾತ್ರಿಯಲ್ಲಿ ಅವಳ ನಗುವಿನಿಂದ ರೂಮಿನಲ್ಲಿ ಮಲಗಿದ್ದ ಅವಳ ಅತ್ತೆ, ಮತ್ತೊಂದಡೆ ರೂಮಿನಿಲ್ಲದ್ದ ಅವಳ ಗಂಡ ನಟರಾಜ ಎದ್ದು ಬಂದಿದ್ದರು. ನಟರಾಜನಿಗೇಕೊ ಅನುಮಾನ, ಬಹುಷಃ ಕ್ಯಾನ್ಸರ್ ಸೆಲ್ ಗಳು ಅತಿಯಾಗಿ ಬೆಳೆದು ಬೆನ್ನುಮೂಳೆ ಹಾಗು ಮೆದುಳನ್ನು ಆಕ್ರಮಿಸಿರಬಹುದು ಅದಕ್ಕೆ ಹಾಗೆ ಆಡುತ್ತಿದ್ದಾಳೆ ಎಂದು. ಕಡೆಗೆ ಡಾಕ್ಟರ್ ಬಳಿ ಪ್ರಸ್ತಾಪ ಮಾಡಿ ಅವರ ಕೈಲಿ ಬೈಸಿಕೊಂಡಿದ್ದ.
ಥೆರಫಿಗಳ ಪರಿಣಾಮ ದೇಹದ ಮೇಲೆ ಕಾಣಲು ಪ್ರಾರಂಬವಾಯಿತು. ಮೊದಲಲ್ಲಿ ತಲೆಯ ಕೂದಲೆಲ್ಲ ಉದುರಲು ಪಾರಂಬವಾದಗ ಅವಳು ಹೆದರಿದಳು, ಆದರೆ ಡಾಕ್ಟರ್ ಗಳೆ ಹೇಳಿದರು, ಅದೆಲ್ಲ ಏನು ಮಾಡಲಾಗಲ್ಲ, ಅವೆಲ್ಲ ಪರಿಣಾಮಗಳು ನಿರೀಕ್ಷಿತವೆ. ಬೇಕಾದರೆ ಟೋಫನ್ ಧರಿಸಿ ಎಂದು. ಅವಳು ಅದನ್ನು ಮಾಡಿ ನೋಡಿದಳು. ಆದರೆ ಕಣ್ಣ ಮೇಲಿನ ಹುಬ್ಬು ಎಲ್ಲ ಉದುರಿ ಮುಖ ವಿಕಾರವಾಗಿ ಕಾಣಲು ಪ್ರಾರಂಬವಾಯಿತು, ಯಾರಿಗು ಮುಖ ತೋರಿಸಲು ನಾಚಿಕೆ ಎನಿಸುತ್ತಿತ್ತು. ಆದರೆ ಅವಳು ಎಲ್ಲವನ್ನು ಸಹಿಸಲೆ ಬೇಕಿತ್ತು.
ಕಿಮೋ ಥೆರಫಿಯ ಕಡೆಯ ಹಂತಕ್ಕೆ ಬರುತ್ತಿದ್ದಂತೆ , ಮತ್ತೊಂದು ಪರಿಣಾಮ ಕಾಣಿಸಿತು. ಮೊದಲು ಬೆನ್ನ ಮೇಲೆ ತೋಳ ಮೇಲೆ ಕಾಣಿಸಿಕೊಂಡ ಕೀವು ಗುಳ್ಳೆಗಳ್ಳು ಮುಖದ ಮೇಲೆಲ್ಲ ವ್ಯಾಪಿಸಿತು. ಕೆಲವು ದೊಡ್ಡ ದೊಡ್ಡ ಗಾಯದಂತೆ ಮುಖದ ಮೇಲೆಲ್ಲ ಕಾಣಿಸುತ್ತಿತ್ತು. ಸುನಂದ ಬಹಳ ಮುಜುಗರ, ದುಃಖ ಅನುಭವಿಸಿದಳು. ತನ್ನ ಮುಖ ನೋಡುವುದು ಅವಳಿಗೆ ಶಾಪದಂತೆ ಅನ್ನಿಸಿತ್ತು. ಕನ್ನಡಿ ಎದುರು ಹೋಗುವುದೆ ನಿಲ್ಲಿಸಿದ್ದಳು. ಅಷ್ಟಕ್ಕು ಕನ್ನಡಿ ಎದುರಿಗೆ ನಿಂತು ಅವಳು ಏನು ಮಾಡುವದಿತ್ತು. ಬಾಚಲು ತಲೆಯಲ್ಲಿ ಕೂದಲೆ ಇರಲಿಲ್ಲ. ವಿಕಾರ ಮುಖ.
ಡಾಕ್ಟರ್ ಗಳ ಬಳಿ ತನ್ನ ಅವಸ್ಥೆಯ ಬಗ್ಗೆ ಪ್ರಸ್ಥಾಪ ಮಾಡಿದಳು ಅವರು "ನೋಡಮ್ಮ ಇಂತವೆಲ್ಲ ಏನು ಮಾಡುವದಕ್ಕೆ ಆಗುವದಿಲ್ಲ, ಕ್ಯಾನ್ಸರ್ ಗೆ ಚಿಕಿತ್ಸೆ ಮಾಡುವಾಗ ಹೀಗೆಲ್ಲ ಅಡ್ಡಪರಿಣಾಮಗಳು ಆಗುತ್ತವೆ. ಅದು ಎಲ್ಲರಲ್ಲು ಒಂದೆ ರೀತಿ ಇರಲ್ಲ, ನಿನಗೆ ಹೀಗೆ ಆಗಿದೆ . ಏನು ಮಾಡುವುದು. ಆದರು ನಾವು ಇದನ್ನು ಪಾಸಿಟೀವ್ ಆಗಿಯೆ ನೋಡುತ್ತೇವೆ. ಇದನ್ನು ಒಳ್ಳೆಯ ಲಕ್ಷಣವೆಂದು ನಿರ್ದರಿಸುತ್ತೇವೆ" ಎಂದರು. ಅವಳಿಗೆ ಆಶ್ಚರ್ಯವಾಯಿತು,
"ಇದೆಂತದು ಡಾಕ್ಟರ್, ನನ್ನ ಈ ವಿಕಾರ ಮುಖ, ನವೆ, ನೋವು, ಇವೆಲ್ಲ ಒಳ್ಳೆಯ ಲಕ್ಷಣ ಹೇಗೆ ಆಗುತ್ತದೆ" ಅಂದಳು ನೋವಿನಿಂದ. ಅದಕ್ಕೆ ಡಾಕ್ಟರ್
"ಹಾಗಲ್ಲಮ್ಮ, ನಿನ್ನ ಮುಖ ಮೈ ಎಲ್ಲ ಕೀವು ಗುಳ್ಳೆಯಾಗುತ್ತಿದೆ ಅಂದರೆ, ನಿನ್ನ ದೇಹದೊಳಗಿನ ರೋಗ ವಿರೋದಿ ಶಕ್ತಿ , ಸಶಕ್ತವಾಗಿದೆ, ಯಾವುದೊ ಹೊರಗಿನ ಶಕ್ತಿಯ ವಿರುದ್ದ ಹೋರಾಡುತ್ತಿದೆ ಎಂತಲೆ ಲೆಕ್ಕ ಅಲ್ಲವೆ, ನೋಡು ಕಿಮೊಥೆರಪಿ ಯಿಂದ ಕ್ಯಾನ್ಸರ್ ಕಣಗಳ ಮೇಲೆ ಪರಿಣಾಮವಾಗಿದೆ, ಅದರ ಪರೀಕ್ಷೆಯಲ್ಲಿ ಗೊತ್ತಾಗುತ್ತಿದೆ, ಅದೀಗ ಹರಡುತ್ತಿಲ್ಲ, ಅಂದರೆ ಅದರ ಶಕ್ತಿ ಕುಂದುತ್ತಿದೆ, ಔಷದದ ಅಡ್ಡ ಪರಿಣಾಮ , ಕೂದಲು ಉದರುವುದು, ಹಾಗು ಕೀವು ಗುಳ್ಳೆಗಳು ಆಗುತ್ತಿದೆ, ಇವೆಲ್ಲ ಥೆರಪಿ ನಂತರ ತಾನಾಗೆ ಸರಿ ಹೋಗುತ್ತದೆ" ಎಂದರು.
ಸುನಂದ "ಹಾಗಿದ್ದಲ್ಲಿ ನನ್ನ ತಲೆಯ ಕೂದಲು ಮತ್ತೆ ಬೆಳೆಯುತ್ತದ ಡಾಕ್ಟರ್ " ಕೇಳಿದಳು, ಅಸಹಾಯಕತೆಯಿಂದ
ಅದಕ್ಕೆ ಡಾಕ್ಟರ್ "ಹೌದಮ್ಮ ಖಂಡೀತ, ಕ್ಯಾನ್ಸರ್ ಗೆ ಕೊಡುತ್ತಿರುವ ಔಷದಿ ಥೆರೆಪಿಗಳ ಕೋರ್ಸ್ ಮುಗಿಯಲಿ, ಎಲ್ಲವು ತಾನಾಗೆ ಕಂಟ್ರೋಲ್ ಗೆ ಬರುತ್ತದೆ, ಮುಖ್ಯವಾಗಿ ನಿನಗೆ ಬೇಕಾದುದ್ದು, ವಿಶ್ವಾಸ, ಆತ್ಮ ಶಕ್ತಿ" ಎಂದರು
ಅವಳಿಗೆ ಆತ್ಮಶಕ್ತಿಯೇನೊ ದೃಡವಾಗಿಯೆ ಇತ್ತು, ಆದರೆ ಅವಳಿಗೆ ನೋವು ಆಗುತ್ತಿದ್ದುದ್ದು, ಪರಿಚಿತರ ಪ್ರತಿಕ್ರಿಯೆಗಳಿಂದ. ಹೊರಗಿನವರು ಹೋಗಲಿ, ಮನೆಯಲ್ಲಿ ಮಗಳು, ಅತ್ತೆ ಗಂಡ ಇವರೆ ತನ್ನ ಜೊತೆ ಮಾತನಾಡುವಾಗ ಮುಜುಗರ ತೋರಿಸುತ್ತಿದ್ದರು. ಅವಳ ಮುಖ ನೋಡದೆ , ಬೇರೆ ಕಡೆ ಮುಖ ತಿರುಗಿಸುತ್ತಿದ್ದರು. ಆಫೀಸಿನಲ್ಲಿಯು ಅಷ್ಟೆ , ಎಷ್ಟೋ ವರ್ಷಗಳಿಂದ ಅವಳಿಗೆ ಸ್ನೇಹಿತರಾಗಿದ್ದವರೆಲ್ಲ ದೂರ ಉಳಿದರು. ಮಾತನಾಡಿದರು ಸಹ ,ಅಪರಿಚಿರರಂತೆ ವರ್ತಿಸುತ್ತಿದ್ದರು.
ಕಡೆಗೊಮ್ಮೆ ತನ್ನ ಅವಳ ಗಂಡ ನಟರಾಜನು ಪರೋಕ್ಷವಾಗಿ ಎಂಬಂತೆ ಅವಳ ಮೇಲೆ ಅರೋಪ ಹೊರಸಿದ, ಕ್ಯಾನ್ಸರ್ ವಂಶವಾಹಿಯಾಗಿ ಹರಿಯುವ ಕಾಯಿಲೆ, ಮೊದಲೆ ಅವಳ ವಂಶದಲ್ಲಿ ಯಾರಿಗಾದರು ಇದ್ದೀತು, ಆದರೆ ಅದನ್ನು ಮದುವೆಗೆ ಮೊದಲೆ ಹೇಳದೆ ತನಗೆ ಅವಳ ಅಪ್ಪ ಅಮ್ಮ ಮೋಸ ಮಾಡಿದ್ದಾರೆ ಎಂದು. ಮದುವೆಯಾದ ಹದಿನೈದು ವರ್ಷದ ನಂತರದ ಈ ಅರೋಪಕ್ಕೆ, ಈಗ ಬದುಕಿಯೆ ಇಲ್ಲದ ಅವಳ ಅಪ್ಪ ಅಮ್ಮನ ಮೇಲಿನ ಆರೋಪಕ್ಕೆ ಅವಳು ನಿರುತ್ತರಳಾಗಿ ಅಂತರಂಗದಲ್ಲಿಯೆ ರೋದಿಸಿದಳು.
ಈಗ ತನ್ನ ಸ್ನೇಹಿತೆಯರೆಲ್ಲ ಒಂದಾಗಿ ನಿಂತು, ಆಫೀಸಿನಲ್ಲಿ ಬಾಸ್ ಬಳಿ ಹೋಗಿ, ಇವಳು ತಮ್ಮ ಜೊತೆಯೆ ಇದ್ದರೆ, ಎಲ್ಲರು ಒಟ್ಟೆಗೆ ರಜಾ ಹೋಗುವದಾಗಿ ಹೇಳಿಬಂದಿದ್ದಾರೆ, ಆ ಗುಂಪಿನಲ್ಲಿ, ತನ್ನ ಬಹುಕಾಲದ ಗೆಳತಿ, ಶರ್ಮಿಳಾ ಅಂದರೆ ಶಮ್ಮಿ ಸಹಾ ಸೇರಿದ್ದಾಳೆ ಅನ್ನುವಾಗ ಅವಳಿಗೆ ದುಃಖವೆನಿಸಿತು. ಅವಳಿಗೆ ಎಷ್ಟೆ ದುಃಖವಾದರು ಕಣ್ಣಾಲ್ಲಿಯಲ್ಲಿ ನೀರು ಬರಲ್ಲ. ಅದು ಕೆಲವೊಮ್ಮೆ ಕ್ಯಾನ್ಸರ್ ನ ಅಡ್ಡಪರಿಣಾಮವಂತೆ. ಶಮ್ಮಿ ಹಲವು ಬಾರಿ ತನ್ನಿಂದ ಪಡೆದಿದ್ದ ನೆರವೆಲ್ಲ ನೆನಪಿಗೆ ಬಂದಿತು. ಕಡೆಗೆ ಹಾಳಾಗಲಿ, ಇವರ ಸಹವಾಸವೆ ಬೇಡ ಎನ್ನುತ್ತ , ಮೂರು ತಿಂಗಳಿಗೆ ರಜಾ ಬರೆದುಕೊಟ್ಟು ಬಂದಿದ್ದಳು. ಹಾಗೆಂದು ಅವಳು ಕೆಲಸಕ್ಕೆ ರಾಜಿನಾಮೆ ಕೊಡುವಂತಿಲ್ಲ. ಅವಳಿಗೆ ತನ್ನ ಇಲಾಖೆಯ ಬಗ್ಗೆ ಕೃತಜ್ಞತೆಯ ಭಾವವಿದೆ, ಅವಳ ಚಿಕಿತ್ಸೆಯ ಪ್ರತಿ ರೂಪಾಯಿಯನ್ನು ಅವಳ ಇಲಾಖೆ ಬರಿಸಿತ್ತು.
ಅವಳು ನಿರ್ದರಿಸಿದ್ದಾಳೆ, "ಈ ಋಣವನ್ನು ತಾನು ಬದುಕಿರುವವರೆಗು ಅಥವ ಕೆಲಸಕ್ಕೆ ಹೋಗುವವರೆಗು ಮರೆಯದೆ, ಇಲಾಖೆಗಾಗಿ ತಾನು ಕಷ್ಟಬಿದ್ದು ದುಡಿಯುವೆ ಎಂದು"
ಮನೆಯಲ್ಲಿ ಅತ್ತೆ ಹಾಗು ಗಂಡನಿಗೆ ವಿಷಯ ತಿಳಿಸಿದಳು ಸುನಂದ. ತಾನು ಮೂರು ತಿಂಗಳು ರಜಾ ಹಾಕಿರುವೆನೆಂದು.
ಗಂಡ ನುಡಿದ "ಹೋಗಲಿ ಬಿಡು, ಹೇಗು ಮೂರು ತಿಂಗಳಿಗೆ, ಅನು ಮದುವೆ ಇದೆ ಅದರ ಕೆಲಸಕ್ಕು ಸಹಾಯವಾಗುತ್ತೆ " ಎಂದು, ಆದರೆ ಅತ್ತೆ ಏಕೊ ಮಾತೆ ಆಡಲಿಲ್ಲ. ಮೌನವಾದರು. ಮಗಳು ಸರಿ ರೂಮು ಸೇರಿ ಓದಿಗೆ ಕುಳಿತರೆ ಯಾವ ವಿಷಯಕ್ಕು ಬರುತ್ತಿರಲಿಲ್ಲ.
ಮರುದಿನ ಅತ್ತೆ ಮಾಡಿದ ತಿಂಡಿ ತಿಂದು, ಡಬ್ಬಿಗೆ ಹಾಕಿ ಮಗಳು ಸ್ಕೂಲಿಗೆ ಹೊರಟಳು. ಸುನಂದ ಅತ್ತೆಗೆ ಸಹಾಯಕ್ಕೆ ಹೋದರೆ ಅವರು ನವಿರಾಗಿಯೆ
"ಇರಲಿ ಬಿಡಮ್ಮ, ನೀನು ಹೊರಗೆ ಇರು, ಏಕೆ ಕಷ್ಟ ಪಡುವೆ, ಸುದಾರಿಸಿಕೊ, ನಾನೆಲ್ಲ ಮಾಡುತ್ತೇನೆ" ಎಂದರು. ಸ್ವಲ್ಪ ಹೊತ್ತು ಕಳೆಯಿತು, ಪೇಪರ್ ಓದಿ ಮುಗಿಸಿ, ಗಂಡ ಎಲ್ಲಿ ಕಾಣುತ್ತಿಲ್ಲ ಎಂದು ಹುಡುಕಿ ಮಹಡಿಯ ಮೇಲಿನ ರೂಮಿಗೆ ಹೊರಟಳು. ಮೇಲೆ ಬಾಲ್ಕನಿಯಲ್ಲಿ ಯಾರೊ ಮಾತನಾಡುವುದನ್ನು ಕೇಳಿ ಅತ್ತ ತಿರುಗಿದಳು, ಅತ್ತೆಯ ದ್ವನಿ ಕೇಳಿಸುತ್ತಿತ್ತು
"ನಿನಗೆ ಅರ್ಥವಾಗಲ್ಲವೊ, ಮದುವೆಗೆ ಬರಿ ಮೂರು ತಿಂಗಳಿದೆ, ಇನ್ನು ಬೀಗರು , ಅಳಿಯ ಎಂದು ಅವರ ಓಡಾಟಗಳು ಇರುತ್ತವೆ, ಈಗಂತು ಅವರ್ಯಾರಿಗು ತಿಳಿಸದೆ ಸುಮ್ಮನಿದ್ದೇವೆ, ನಾಳೆ ಅವರುಗಳು ಇವಳ ಮುಖನೋಡಿ, ಕ್ಯಾನ್ಸರ್ ಎಂದು ಭಯ ಬಿದ್ದರೆ, ನಮ್ಮ ಅನುರಾಧಳ ಗತಿ ಏನೊ, ಮದುವೆಗೆ ಏನಾದರು ತೊಂದರೆಯಾದರೆ" . ಸುನಂದಳ ಗಂಡ ಹೇಳುತ್ತಿದ್ದ
"ಸರಿಯಮ್ಮ , ಆದರೆ ಅವಳಿಗೆ ಅವಳ ಮನೆಯಲ್ಲಿಯೆ ಇರಬೇಡ ಎಂದು ಹೇಳಲು ಅಗುತ್ತ ಹೇಳು, ಅಲ್ಲದೆ ಅನುರಾಧ ಮದುವೆಗೆ ಅವಳು ಐದು ಲಕ್ಷ ತನ್ನ ಪ್ರಾವಿಡೆಂಟ್ ಫಂಡ್ ನಿಂದ ಕೊಡುತ್ತೀನಿ ಎಂದು ಅಪ್ಪನ ಕೈಲಿ ಹೇಳಿದ್ದಾಳೆ, ಅರ್ಥ ಮಾಡಿಕೊ" ಎಂದ.
ಅದಕ್ಕೆ ಅತ್ತೆ "ಅದಕ್ಕು ಇದಕ್ಕು ಏನೊ ಸಂಬಂದ, ಮನೆಯ ಸೊಸೆಯಾಗಿ, ತನ್ನ ನಾದಿನಿ ಮದುವೆಗೆ ಸಹಾಯ ಮಾಡುವುದು ಅವಳ ಕರ್ತವ್ಯ ಮಾಡುತ್ತಾಳೆ ಬಿಡು. ನಾನಂತು ಅವಳಿಗೆ ಉಪಾಯವಾಗಿಯೆ, ಹೇಳುತ್ತೇನೆ, ನೀನು ಕೆಲಸಕ್ಕೆ ಹೋಗಮ್ಮ, ಎಂದು" ಎಂದರು. ಸುನಂದಳ ಗಂಡ ನಟರಾಜ
"ಸರಿ ನಿನ್ನ ಇಷ್ಟವಮ್ಮ ಏನಾದರು ಮಾಡಿಕೊ" ಎಂದು ಮಾತು ಮುಗಿಸಿದ. ಅಲ್ಲಿಂದ ನೇರ ಕೆಳಗೆ ಬಂದಳು ಸುನಂದ.
ಈಗವಳ ಮನಸ್ಸು ಮತ್ತೆ ವಿಹ್ವಲವಾಯಿತು.
ಇದೆಂತ ತನ್ನ ಬಾಳು. ಆಫೀಸಿಗೆ ಹೋದರೆ "ರಜಾ ಹಾಕಿ ಮನೆಯಲ್ಲಿರಿ " ಅಂತಾರೆ ,
ಮನೆಯಲ್ಲಿದ್ದರೆ " ಸುಮ್ಮನೆ ಆಫೀಸಿಗೆ ಹೋಗು ನೋವು ಮರೆಯುತ್ತೆ " ಅಂತಾರೆ,
ಯಾರಿಗು ಬೇಡವಾದ ತನ್ನ ಬದುಕಿನ ಬಗ್ಗೆ ಅವಳಿಗೆ ದುಃಖ ಉಕ್ಕಿ ಬಂದಿತು. ಸಮಯ ನೋಡಿದಳು , ಆಫೀಸಿಗೆ ಹೊರಡಲು ಇನ್ನು ಕಾಲವಿತ್ತು, ಸರಿ ಎಂದು ಸ್ನಾನಕ್ಕೆ ಹೋಗಿ ಸಿದ್ದವಾಗಿ, ಅತ್ತೆಯ ಮುಂದೆ ನಿಂತು
"ಅತ್ತೆ ನಾನು ಆಫೀಸಿಗೆ ಹೋಗುತ್ತೇನೆ" ಎಂದಳು. ಸುನಂದಳ ಅತ್ತೆಗೆ ಸ್ವಲ್ಪ ಆಶ್ಚರ್ಯವೆ ಆಯಿತು, ಆದರು ತೋರಗೊಡದೆ
"ಸರಿಯಮ್ಮ ನಾನು ಅದೆ ಅಂದುಕೊಂಡೆ, ಸುಮ್ಮನೆ ಮನೆಯಲ್ಲಿದ್ದರೆ ಇಲ್ಲದ ಯೋಚನೆಗಳು, ಕೆಲಸದಲ್ಲಿದ್ದರೆ ಮನಸ್ಸು ನಿರಾಳ, ಕುಳಿತಷ್ಟ ದೇಹಕ್ಕೆ ಕಾಯಿಲೆ ಜಾಸ್ತಿ ಅಂತಾರೆ, ನೀನು ಹೋಗಿ ಬಾ ಪರವಾಗಿಲ್ಲ, ಮನೆಯಲ್ಲಿ ಹೇಗೊ ನಡೆಯುತ್ತದೆ " ಎಂದರು.
ಅವಳು ಸರಿ ಎನ್ನುತ್ತ ಸಿದ್ದವಾಗಿ, ಹೊರಟು ಬಸ್ ಸ್ಟಾಪಿಗೆ ಬಂದಳು. ಸಾಮಾನ್ಯವಾಗಿ ವಿಧಾನಸೌದಕ್ಕೆ ಹೋಗುವ ಬಸ್ಸಿನಲ್ಲಿ ಅಷ್ಟೊಂದು ರಶ್ ಕಡಿಮೆ. ಕ್ಯೂನಲ್ಲಿ ನಿಂತು ಬಸ್ ಹತ್ತಿ ಕಿಟಕಿ ಪಕ್ಕ ಕುಳಿತಳು, ಆಫೀಸ ಇರುವುದು ಮಲ್ಟಿಸ್ಟೋರ್ಡ್ ಬಿಲ್ಡಿಂಗ್ ನಲ್ಲಿ, ಏಕೊ ಕಾರ್ಪೋರೇಶನ್ ದಾಟುವಾಗಲೆ ಅವಳಿಗೆ ಮಂಕು ಕವಿಯಿತು. ಮತ್ತೆ ಆಫೀಸಿನಲ್ಲಿ ಎಲ್ಲರನ್ನು ಎದುರಿಸಬೇಕು. ಯಾರಿಗು ತಾನು ಈಗ ಅಲ್ಲಿ ಹೋಗುವುದು ಇಷ್ಟವಿಲ್ಲ, ಕಾನೂನಿನಂತೆ ಅವರೇನು ಮಾಡಲಾರರು, ಆದರೆ ಮನಸ್ಸು? ಮುಂದಿನ ಸ್ಟಾಪಿನಲ್ಲಿ ಇಳಿದಳು. ನಿರ್ದರಿಸಿದಳು , ಈದಿನ ಆಫೀಸಿಗೆ ಹೋಗುವುದೆ ಬೇಡ ನಾಳೆ ನೋಡೋಣ ಎಂದು.
ಕೆಳಗೆ ಇಳಿದ ಸುನಂದ ಈಗ ಚಿಂತಿತಳಾದಳು, ಎತ್ತ ಹೋಗುವುದು , ಹುಡುಕಿ ಹೋಗುವಂತ ಸ್ನೇಹಿತರು ಯಾರು ಇಲ್ಲ, ಇದ್ದರು ಈ ಅವಸ್ಥೆಯಲ್ಲಿ ಬೇಡ. ಡಾಕ್ಟರ ಹತ್ತಿರ ಹೋಗಬಹುದು , ಆದರೆ ಅದೇಕೊ ಬೇಸರ, ಈ ದಿನ ಹೋಗುವ ಅಗತ್ಯವೇನಿಲ್ಲ. ಹಾಗೆ ಚಿಂತಿಸಿ ನಡೆಯುತ್ತ ಹೊರಟು ಅವಳಿಗೆ ಗೊತ್ತಿಲ್ಲದೆ ಕಬ್ಬನ್ ಪಾರ್ಕ ಒಳಗೆ ರಸ್ತೆಯಲ್ಲಿ ನಡೆಯುತ್ತ ಹೊರಟಳು, ಸ್ವಲ್ಪ ಸುತ್ತಾಡುವಾಗ ಸುಸ್ತಾಯಿತು. ಹಾಗೆ ಮರ ಒಂದರ ಕೆಳಗೆ ಇದ್ದ ಬೆಂಚಿನಲ್ಲಿ ಹೋಗಿ ಕುಳಿತಳು. ಏನು ಮಾಡುವುದು ಎಂಬ ನಿರ್ದಾರವಿಲ್ಲ. ಎಲ್ಲಿ ಹೋಗುವುದು ಎಂದು ತಿಳಿದಿಲ್ಲ. ಒಳಗಿನ ಔಷದಿಗಳ ಪ್ರಭಾವ, ಹಾಗು ಬಿಸಿಲಿನಲ್ಲಿ ನಡೆದ ಸುಸ್ತು ಕಣ್ಣು ಎಳೆಯುತ್ತಿತ್ತು. ಅವಳಿಗೆ ಗೊತ್ತಿಲ್ಲದೆ ತೂಕಡಿಕೆ ಬಂದಿತು.
ಹತ್ತಿರ ಯಾರೊ ಮಾತನಾಡುತ್ತ ಇದ್ದಂತೆ ಅನ್ನಿಸಿ ಕಣ್ಣು ಬಿಟ್ಟಳು . ಮುಂದೆ ತಾಯಿ ತಂದೆಯ ಜೊತೆ ಹೋಗುತ್ತಿದ್ದ, ಮಗು ಒಂದು ಅವರ ಅಮ್ಮನ ಹತ್ತಿರ ಗಲಾಟೆ ಮಾಡುತ್ತಿತ್ತು
"ಮಮ್ಮಿ, ನನಗೆ ದುಡ್ಡು ಕೊಡು,ಅಲ್ಲಿರುವ ಬೆಗ್ಗರ್ ಅಂಟಿಗೆ ಹಾಕಬೇಕು" ಎಂದು,
ಪದೆ ಪದೆ ಕಾಡುವ ಮಗುವಿನ ಕಾಟ ತಾಳದೆ , ಆಕೆ ತನ್ನ ಬ್ಯಾಗಿನಲ್ಲಿ ಹಣ ಹುಡುಕಿ ಆ ಮಗುವಿನ ಕೈಗಿತ್ತಳು. ಸುನಂದ ನೋಡುತ್ತಿರುವಂತೆ ಆ ಮಗು ನಿದಾನವಾಗಿ ಅವಳ ಕಡೆಗೆ ನಡೆದು ಬಂದಿತು,ಅವಳತ್ತ ನೋಡುತ್ತ
"ತಗೋ" ಎನ್ನುತ್ತ , ಒಂದು ರೂಪಾಯಿ ಕಾಯಿನ್ ಅನ್ನು ಅವಳತ್ತ ಹಾಕಿ ಅವಳ ಅಮ್ಮನತ್ತ ಓಡಿ ಹೋಯಿತು. ಸುನಂದಳಿಗೆ ಭೂಮಿ ಬಿರಿದಂತೆ ಅನಿಸಿತು, ಅಯ್ಯೊ ಇದೇನು ಆ ಮಗು ತನ್ನನ್ನು ಬಿಕ್ಷುಕಿ ಎಂದು ಭಾವಿಸಿದೆ. ಇದೆಲ್ಲಿಗೆ ಬಂದಿತು ತನ್ನ ಜೀವನ. ಈಗ ಕಾಯಿಲೆಯನ್ನು ಮೀರಿ ಕಣ್ಣ ನೀರು ಅವಳ ಕಣ್ಣಲ್ಲಿ ತುಂಬಿತು. ಆ ಮಗುವು ಹಾಕಿದ್ದನ್ನು ಕಂಡ ಮತ್ತೊಂದು ಮಗುವು ಅದೆ ರೀತಿ ಬಂದು ಒಂದು ರುಪಾಯಿಯನ್ನು ಅವಳ ಮುಂದೆ ಹಿಡಿಯಿತು. ಅವಳು ಆ ಮಗುವಿನ ಮುಖವನ್ನೆ ನೋಡಿದಳು.ಕೈ ಚಾಚಲಿಲ್ಲ. ಆ ಮಗುವಿಗೆ ಭಯವಾಗಿ , ರೂಪಾಯಿಯನ್ನು ಅವಳತ್ತ ಎಸೆದು ಓಡಿಹೋಯಿತು.
ಅಲ್ಲಿ ಎಷ್ಟು ಹೊತ್ತು ಕುಳಿತಳೊ ಸುನಂದ ಅವಳಿಗೆ ತಿಳಿಯದು. ಕಣ್ಣು ಮುಚ್ಚಿದವಳಿಗೆ ತನ್ನ ಹತ್ತಿರ ಯಾರೊ ಮಾತನಾಡುತ್ತಿರುವಂತೆ ಅನ್ನಿಸಿತು. ಕಣ್ತೆರೆದರೆ, ಯಾರೊ ಇಬ್ಬರು ಗಂಡಸರು, ಹಾಗು ಒಬ್ಬಾಕೆ ಹೆಂಗಸು. ತನ್ನ ಹತ್ತಿರ ನಿಂತು ತಮಿಳಿನಲ್ಲಿ,
" ಏ ನಡಿ ಹೋಗೋಣ ಇಲ್ಲಿ ಕುಳಿತು ಏನು ಮಾಡ್ತಿದ್ದಿ " ಎಂದ ಅವರಲ್ಲಿ ಒಬ್ಬ. ಅವಳಿಗೆ ಅವರು ಯಾರು ಎಂದು ಅರ್ಥವಾಗುತ್ತಿಲ್ಲ.
"ನೀವೆಲ್ಲ ಯಾರು" ಎಂದಳು ಕನ್ನಡದಲ್ಲಿ
"ಅದು ಆಮೇಲೆ ಗೊತ್ತಾಗುತ್ತೆ ನಡಿ" ಎಂದು ಬಲವಂತವಾಗಿ ಅವಳ ತೋಳಿಗೆ ಕೈಹಾಕಿ ಎಳೆಯುತ್ತ, ರಸ್ತೆಯತ್ತ ನಡೆದರು. ಅವಳಿಗೆ ಸಾಕಷ್ಟು ಗಾಭರಿಯಾಯಿತು, ಇದೇನು ನಡುರಸ್ತೆಯಲ್ಲಿ ಹೀಗೆ ಎಳೆದಾಡುತ್ತಿದ್ದಾರೆ, ಪೋಲಿಸರನ್ನು ಕರೆಯಲೆ ಎಂದುಕೊಂಡಳು. ಅವರಲ್ಲಿ ಒಬ್ಬ ಅವಳ ಹೆಗಲಿನಲ್ಲಿ ಇದ್ದ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿದ. ಅವಳು ನಿರ್ದರಿಸಿದಳು, ಅನುಮಾನವಿಲ್ಲ ಕಳ್ಳರೆ,
"ಏಯ್ ಬಿಡೋ ಅದು ನನ್ನ ಬ್ಯಾಗು " ಎನ್ನುತ್ತ ಕೊಸರಾಡಿದಳು.
"ಇವಳದಂತೆ , ಇವಳದು, ಕಳ್ಳ ,, ಡೆ, ಹತ್ತೆ ವ್ಯಾನು ' ಎನ್ನುತ್ತ ಅವಳ ವ್ಯಾನಿಟಿ ಬ್ಯಾಗನ್ನು ಜೋರಾಗಿ ತಿರುಗಿಸಿ ಎಸೆದ. ಬ್ಯಾಗು ಗಾಳಿಯಲ್ಲಿ ತೇಲುತ್ತ ಹೋಗಿ ಮರದ ಬುಡದಲ್ಲಿ ಬಿದ್ದಿತು. ಅದರಲ್ಲಿ ಅವಳ ಪರ್ಸ್ ಹಾಗು ಮೊಬೈಲ್ ಇದ್ದಿತ್ತು. ಅವಳು ಕೊಸರಾಡಿದಾಗ, ಹಿಂದಿನಿಂದ ಒಬ್ಬ ಜೋರಾಗಿ ಅವಳ ತಲೆಯ ಮೇಲೆ ಪಟ್ ಎಂದು ಏಟು ಕೊಟ್ಟ,.ಅವಳಿಗೆ ತಲೆಯೆಲ್ಲ ದಿಂ ಎಂದಿತು. ಅವರು ನೂಕಿದಂತೆ, ಅವಳು ಅವರು ನಿಲ್ಲಿಸಿದ್ದ ವ್ಯಾನಿನ ಒಳಗೆ ನೂಕಲ್ಪಟ್ಟಳು.
ಹೊರಗಿನಿಂದ ಬಾಗಿಲು ಹಾಕಲ್ಪಟ್ಟಿತ್ತು. ಇದೇನು ಎಂದು ಅವಳು ನೆನಸುವಾಗಲೆ ವಾಹನ ಅಲ್ಲಿಂದ ಹೊರಟಿತು. ತನ್ನನ್ನು ಯಾರೊ ಕಿಡ್ನಾಪ್ ಮಾಡುತ್ತಿದ್ದಾರೆ ಯಾರ ಸಹಾಯಕ್ಕಾಗಿ ಕೂಗಲಿ ಅವಳಿಗೆ ತಿಳಿಯಲಿಲ್ಲ. ಅವಳು ಅದೆ ವ್ಯಾನಿನಲ್ಲಿ ತನ್ನೆ ಜೊತೆ ಇದ್ದ ಮತ್ತೆ ಮೂವರನ್ನು ಆಗಷ್ಟೆ ಗಮನಿಸಿದಳು. ಅವರೆಲ್ಲ ನೋಡುವಾಗಲೆ ತಿಳಿಯುತ್ತಿದೆ ತಿರುಪೆಯವರು ಎಂದು. ಅವಳಿಗೆ ಅರ್ಥವಾಗುತ್ತಿಲ್ಲ ಸಂದರ್ಭ. ಸ್ವಲ್ಪ ಹೊತ್ತಿನಲ್ಲೆ ವಾಹನ ಗೇಟ್ ಮೂಲಕ ಕಟ್ಟಡ ಒಂದನ್ನು ಪ್ರವೇಶಿಸಿತು, ಆಗ ಅವಳು ಅಲ್ಲಿದ್ದ ಬೋರ್ಡ್ ಗಳನ್ನು ಗಮನಿಸಿದಳು,
"ದೇವರೆ, ಇದು ಮಾಗಡಿ ರಸ್ತೆಯಲ್ಲಿನ, ಬೆಗ್ಗರ್ಸ್ ರಿಹೆಬಿಲೇಟಶನ್ ಸೆಂಟರ್, ಬಿಕ್ಷುಕರ ಪುನರ್ವಸತಿ ಕೇಂದ್ರ!! , ತನ್ನನ್ನೇಕೆ ಇಲ್ಲಿಗೆ ತರುತ್ತಿದ್ದಾರೆ " ಅಂದುಕೊಂಡವಳಿಗೆ , ಸ್ವಲ್ಪ ಕಾಲದಲ್ಲಿಯೆ ಪರಿಸ್ಥಿಥಿ ತಿಳಿಯಿತು, ಕಬ್ಬನ್ ಪಾರ್ಕಿನಲ್ಲಿ ಮರದ ಕೆಳಗೆ ಕುಳಿತಿದ್ದ ನನ್ನನ್ನು ಬಿಕ್ಷುಕಿ ಎಂದು ತಪ್ಪು ಭಾವಿಸಿ ತನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ರಸ್ತೆಯಲ್ಲಿ ಹುಚ್ಚು ನಾಯಿಗಳನ್ನು ವಾಹನಕ್ಕೆ ಹಿಡಿದು ತುಂಬುವ ರೀತಿ ತನ್ನನ್ನು ಹಿಡಿದು ಇಲ್ಲಿಗೆ ತಂದಿದ್ದಾರೆ, ತುಂಬಲು. ಸುನಂದಳಿಗೆ ಕಾಲ‌ ಕೆಳಗಿನ ಭೂಮಿ ಕುಸಿಯುತ್ತಿರುವಂತೆ ಅನ್ನಿಸಿತು. ಅವಮಾನ ,ಅಪಮಾನ ನಾಚಿಕೆ ಅಸಹಾಯಕತೆ ಅವಳನ್ನು ಆವರಿಸಿತು.
-------------------------------------
ವಾಹನದಿಂದ ಎಲ್ಲರನ್ನು ಕೆಳಗಿಳಿಸಲಾಯಿತು. ಒಬ್ಬೊಬ್ಬರದೆ ಹೆಸರು ಊರು ಬರೆದುಕೊಂಡು, ಅಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. ಇವರನ್ನೆಲ್ಲ ಒಳಗೆ ಕರೆದುಕೊಂಡು ಹೋದಾಗ ಅಲ್ಲಿ ದೊಡ್ಡ ನಾಟಕವೊಂದು ನಡೆಯುತ್ತಿತ್ತು. ಇಬ್ಬರು ತಮಿಳು ಬಿಕ್ಷುಕರು ಹಾಗು ಇಬ್ಬರು ಉತ್ತರಭಾರತದ ಬಿಕ್ಷುಕರು ತಮ್ಮನ್ನು ಅಲ್ಲಿ ಕರೆತಂದುದ್ದಕ್ಕಾಗಿ ಬಾರಿ ಗಲಾಟೆ ನಡೆಸಿದ್ದರು. ಅವರ ಗಲಾಟೆಗೆ ಅಲ್ಲಿದ್ದ ಸಿದ್ಬಂದಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಆ ಗಲಾಟೆಯ ನಡುವೆ ಸುನಂದ ಅವನಲ್ಲಿ ತಾನು ಬಿಕ್ಷುಕಿ ಅಲ್ಲವೆಂದು ಕುಳಿತಿದ್ದ ತನ್ನನ್ನು ಬಲವಂತವಾಗಿ ಕರೆದು ತಂದಿದ್ದಾರೆಂದು ಹೇಳಲು ಪ್ರಯತ್ನಿಸಿದಳು, ಆದರೆ ಅವನು
"ಸುಮ್ಮನೆ ಹೋಗಮ್ಮ ನೀನು ಬೇರೆ ತಲೆ ತಿನ್ನ ಬೇಡ, ಇಲ್ಲಿ ಬರುವ ಎಲ್ಲರದು ಒಂದೆ ರಾಗ, ನಾವು ಬಿಕ್ಷುಕರಲ್ಲ ಎಂದು, ಹಾಗಿದ್ದಲ್ಲಿ, ಮನೆ ಬಿಟ್ಟು ರಸ್ತೆಯ ಪಕ್ಕ ಏಕೆ ಬಂದು ಕುಳಿತು ಕೊಳ್ಳುತ್ತಾರೆ , ನನಗೆ ನಾಟಕ ಹರಿಕಥೆ ಎಲ್ಲ ಬೇಡ, ನಾಳೆ ನಾಡಿದ್ದರಲ್ಲಿ , ಇಲ್ಲಿಯ ಸಾಹೇಬರು ಬರ್ತಾರೆ ಬೇಕಾದ್ರೆ ಅವರಲ್ಲಿ ಹೇಳು,ನೀನು ಬಿಕ್ಷುಕಿ ಅಲ್ಲ ಸಿನಿಮಾ ನಟಿ ಐಶ್ವರ್ಯ ರಾಯ್ ಅಂತ , ಕೇಳಬಹುದು" ಎಂದ
ಸುತ್ತಲಿದ್ದವರು ಅವನ ಮಾತಿಗೆ ಜೋರಾಗಿ ನಗುತ್ತಿದ್ದರು. ಅವಳು ಅಸಹಾಯಕಳು ಏನು ಮಾಡಲು ಆಗದು. ಪೋನ್ ಮಾಡಲು ಪ್ರಯತ್ನಿಸಿದಳು, ಅದನ್ನು ಅವಳ ಕೈನಿಂದ ಕಿತ್ತು, ಅವಳನ್ನು ಹೊರಗೆ ಬಿಕ್ಷುಕರ ವಸತಿಯ ಕಡೆಗೆ ಕಳಿಸಿದರು.
ಒಳಗಿನ ವಾತಾವರಣ ಬೀಕರವಾಗಿತ್ತು, ಸುನಂದ ಎಂದು ಕನಸಿನಲ್ಲು ನೆನೆಸದ ಚಿತ್ರಗಳು. ಹೆಂಗಸರಿಗೆಲ್ಲ ನೀಲಿ ಬಣ್ಣದ ಬಟ್ಟೆ ಇದ್ದರೆ, ಗಂಡಸರಿಗೆ ಕಾಕಿ ಬಣ್ಣದ ಬಟ್ಟೆಗಳು ಕೊಡಲ್ಪಟ್ಟಿದ್ದವು. ಇವಳಿಗೆ ಎಲ್ಲಿ ಇರಬೇಕು ಏನು ಮಾಡಬೇಕು ಎಂದು ತೋಚದು. ಇಬ್ಬರು ಇರುವ ಜಾಗಕ್ಕೆ ನಾಲ್ವರು ಎನ್ನುವ ರೀತಿಯಲ್ಲಿ ರೂಮುಗಳಲ್ಲಿ ತುಂಬಿದ್ದರು. ಕೆಲವರು ಮಧ್ಯದ ಹಾಲಿನಲ್ಲಿ ಕಾಲು ಚಾಚಿ ಕುಳಿತಿದ್ದರು. ವಯಸ್ಸಾದವರೆ ಜಾಸ್ತಿ. ವಿದವಿದವಾದ ಕಾಯಿಲೆಗಳಿಂದ ನರಳುತ್ತಿರುವವರು ಹಲವರು. ತನಗೆ ಮೊದಲೆ ಕ್ಯಾನ್ಸರ್ ಈ ಜಾಗದಲ್ಲಿ ಮತ್ತೆ ಉಲ್ಬಣವಾಗುವುದು ಗ್ಯಾರಂಟಿ ಎಂದು ಕೊಂಡಳು ಸುನಂದ. ಕೆಲವರ ಮುಖ ನೋಡುವಾಗಲೆ ಕರುಳಲ್ಲಿ ಕಿವುಚಿದಂತೆ ಅಷ್ಟು ವಿಕಾರ ಎನಿಸುವಾಗ ಮನ ನೆನೆಯಿತು, ಸದ್ಯಕ್ಕೆ ತನ್ನ ಮುಖವು ಅವರಿಗಿಂತ ಬಿನ್ನವಿಲ್ಲ. ಮಹಿಳೆಯರ ವಿಭಾಗದಲ್ಲಿ ಇವಳು ಸೇರಿಸಲ್ಪಟ್ಟಳು.
ಅವಳಿಗೆ ಗಾಭರಿ ಪ್ರಾರಂಬವಾಯಿತು, ಏನು ಮಾಡುವುದು ಇಲ್ಲಿಂದ ಹೊರಹೋಗುವದಾದರು ಹೇಗೆ. ಸಹಾಯ ಮಾಡಲು ಸಹ ಯಾರು ಇಲ್ಲ. ತನ್ನ ಮನೆಯವರಿಗೆ ಆಗಲಿ, ಆಫೀಸಿಗೆ ಆಗಲಿ ಹೀಗೆ ತಾನು ಇಲ್ಲಿ ಸೇರಿರುವ ವಿಷಯ ತಿಳಿಯುವುದು ಸಾದ್ಯವೆ ಇಲ್ಲ. ಅವಳು ಕುಸಿದು ಕುಳಿತಳು,. ಸುತ್ತಲಿದ್ದವರೆಲ್ಲ ಅವರವರಲ್ಲಿ ತಮಿಳು , ಹಿಂದಿ ಮುಂತಾದ ಬಾಷೆಗಳಲ್ಲಿ ಜೋರಾಗಿ ಚರ್ಚಿಸುತ್ತಿದ್ದರು. ಸುಕ್ಕುಗಟ್ಟಿದ ವಯಸಾದ ಮುಖದ ಕೆಲವು ಮುದುಕಿಯರು ಮಾತ್ರ ಯಾರೊಡನೆ ಮಾತಿಗೆ ಹೋಗದೆ ತಮ್ಮ ಪಾಡಿಗೆ ತಾವು ಕುಳಿತ್ತಿದ್ದರು. ಮದ್ಯಾಹ್ನ ಊಟದ ಸಮಯಕ್ಕೆ ಎಲ್ಲರು ಹೊರಟರು, ಅವರ ಕೈಯಲ್ಲಿ ತಟ್ಟೆಗಳು. ಇವಳಿಗೆ ಏನು ಬೇಡವೆನಿಸಿತು, ತಾನು ಬಿಕ್ಷುಕರ ಜೊತೆ ಊಟ ಹಂಚಿಕೊಳ್ಳೂವುದೆ. ಅಲ್ಲಿಯ ನೀರು ಕುಡಿಯಲು ಸಹ ಬೇಡವೆಂದು ಸುಮ್ಮನೆ ಕುಳಿತಳು. ಸುತ್ತಲಿದ್ದವರು ಅವಳನ್ನು ನೋಡಿ ಹೋದರೆ ವಿನಃ ಯಾರು ಮಾತನಾಡಿಸಲಿಲ್ಲ. ಅಲ್ಲಿನ ವಾತವರಣ ಅವಳಿಗೆ ತನ್ನ ಪಾಡೇನು ತಾನು ಹೇಗೆ ಇಲ್ಲಿ ಇರಬಲ್ಲೆ ಎನ್ನುವ ದುಃಖ ತುಂಬಿತು.
ಅವಳು ದೈವದ ಬಗ್ಗೆ ಹೆಚ್ಚು ಚಿಂತಿಸುವಳಲ್ಲ. ಎಲ್ಲರಂತೆ ಸಹಜವಾಗಿ ಪೂಜೆ ದೇವಸ್ಥಾನ ಅಂತ ಇರುವವಳು, ಈಗ ಅವಳಿಗೆ ದೇವರ ಮೇಲಿನ ಕೋಪ, ಅಸಹಾಯಕತೆ ಎಲ್ಲವು ಜಾಸ್ತಿಯಾದವು. ತಾನು ಆಗೊಮ್ಮೆ ಈಗೊಮ್ಮೆ ಗುರುವಾರ ಹೋಗುತ್ತಿದ್ದ ರಾಘವೇಂದ್ರ ಸ್ವಾಮಿಗಳು ನೆನಪಿಗೆ ಬಂದರು, ಅವಳು ಮನಸಿನಲ್ಲೆ ಪ್ರಶ್ನಿಸಿದಳು.
'ಸ್ವಾಮಿ ನಾನು ಯಾವ ತಪ್ಪು ಮಾಡಿದೆ ಎಂದು ನನಗೆ ಈ ರೀತಿ ಶಿಕ್ಷೆ ಎಲ್ಲ ಸಿಗುತ್ತಿದೆ. ಬದುಕಿನಲ್ಲಿ ನಾನು ಯಾರನ್ನು ನೋಯಿಸದೆ ಇರಲು ಪ್ರಯತ್ನಿಸಿದೆ. ತನ್ನಿಂದ ಆದಾಗ ಯಾರಿಗಾದರು ಸಹಾಯ ಮಾಡಿರುವೆನೆ ಹೊರತು, ತಿಳುವಳಿಕೆಯಿಂದ ಯಾರಿಗು ಅಪಕಾರ ಮಾಡಿದವಳಲ್ಲ. ಈಗ ಎರಡು ವರ್ಷಗಳಿಂದ ಈ ಕ್ಯಾನ್ಸರ್ ಎಂಬ ಮಹಾಮಾರಿಯ ಕೈಯಲ್ಲಿ ಸಿಕ್ಕು ನರಳಿದ್ದಾಯಿತು. ಈಗ ಈ ನರಕಕ್ಕೆ ತನ್ನನ್ನು ತಳ್ಳಿರುವೆ. ಯಾವ ಕಾರಣಕ್ಕೆ, ನೀಡು ನನಗೆ ನೀಡುವ ಎಲ್ಲ ಶಿಕ್ಷೆಯನ್ನು ನೀಡಿ ಮುಗಿಸಿಬಿಡು. ಹಾಗೆ ತನಗೆ ಸಾವೊಂದನ್ನು ದಯಪಾಲಿಸಿ ಈ ಜೀವನದಿಂದ ಮುಕ್ತಗೊಳಿಸು" ಎಂದೆಲ್ಲ ಮನದಲ್ಲಿ ಬೇಡುತ್ತ ಗೋಳಾಡಿದಳು.
ಕಡೆಗೆ ಅಂದುಕೊಂಡಳು ಇನ್ನು ಯಾವ ಪರಿಸ್ಥಿಥಿಯಾದರು ಬರಲಿ ನಾನು ಎದುರಿಸಲ್ಲ, ಹಾಳಾಗಿ ಹೋಗಲಿ, ನನಗೆ ಯಾರ ಬಳಿಯು ಮಾತು ಬೇಡ. ಅಷ್ಟಕ್ಕು ಇಲ್ಲಿಂದ ಹೊರಹೋಗಿ ಮಾಡಬೇಕಿರುವದಾದರು ಏನು. ಮನೆಯಲ್ಲಿ ಇರುವುದು ಮನೆಯವರಿಗೆ ಅಸಹನೆ. ಆಪೀಸಿಗೆ ಬರುವುದು ಬೇಡ ಎಂದು ಅವರಂದಾಯ್ತು. ದೇವರು ತನಗೆ ಅದಕ್ಕಾಗಿಯೆ ಈ ಜಾಗ ತೋರಿದ್ದಾನೆ ಎಂದು ಸಮಾದಾನ ಮಾಡಿಕೊಂಡಳು. ರಾತ್ರಿಯು ಅವಳು ಊಟದ ಹಾಲಿನ ಕಡೆ ಹೋಗಲಿಲ್ಲ. ಗೋಡೆಗೆ ಒರಗಿ ಸುಮ್ಮನೆ ಕುಳಿತಿದ್ದಳು. ರಾತ್ರಿ ಅಲ್ಲಿಯ ಸೊಳ್ಳೆ ತಿಗಣೆಗಳ ಕಾಟ. ರೋಗಿಷ್ಟ ಬಿಕ್ಷುಕರ ನರಳಾಟ, ಎಲ್ಲವು ಅವಳಿಗೆ ನರಕದ ದರ್ಶನ ಮಾಡಿಸಿದವು.
ಮರುದಿನ ಬೆಳಗಾಯಿತು. ಮತ್ತೆ ಅದೆ ನೋಟ. ಇರುವ ಎಲ್ಲ ಬಿಕ್ಷುಕರು , ಒಂದೆ ಕಡೆ ಲೆಟ್ರಿನ್ , ಮುಖ ತೊಳೆಯುವುದು ಎಲ್ಲ ಮುಗಿಸಬೇಕಿತ್ತು, ಅವಳ ಬಳಿ ಬ್ರಶ್ ಆಗಲಿ, ಟವೆಲ್ ಸೋಪಾಗಲಿ ಏನು ಇಲ್ಲ. ಅದನ್ನೆಲ್ಲ ಯಾರಾದರು ಒದಗಿಸುತ್ತಾರೆಂಬ ನಂಬಿಕೆಯು ಅವಳಿಗಿಲ್ಲ. ಒಂದು ಕಡೆ ಕುಳಿತೆ ಇದ್ದಳು. ಆದಿನವು ಅವಳು ತಿಂಡಿಗಾಗಳಿ, ಊಟಕ್ಕಾಗಲಿ ಹೋಗಲಿಲ್ಲ. ಹಸಿವು ಅನ್ನುವುದು ಇಂಗಿ ಹೋಗಿತ್ತು. ಸುಸ್ತು ತುಂಬಿ ಬಂದು ನಿಲ್ಲಲ್ಲು ಕಷ್ಟ ಎನ್ನುವ ಸ್ಥಿಥಿ. ತಾನಿರುವ ರೂಪಕ್ಕು ತನ್ನ ಪರಿಸ್ಥಿಥಿಗು , ಯಾರು ನೋಡಿದರು ಬಿಕ್ಷುಕಿ ಅಲ್ಲ ಎಂದರೆ ನಂಬುವದಿಲ್ಲ ಎಂದು ನೆನೆದಾಗ ಅವಳಿಗೆ ನಗು ಬಂತು. ಮನಸನ್ನು ನಿರ್ಲಿಪ್ತತೆ ಆವರಿಸಿತು, ಅಲ್ಲಿಂದ ಬಿಡುಗಡೆಗೊಂಡು ಹೊರಗೆ ಹೋಗಬೇಕೆಂಬ ಆಸೆಯು ಏಕೊ ಸತ್ತುಹೋಯಿತು.
ರಾತ್ರಿ ಒಬ್ಬ ಮುದುಕಿ ಪಕ್ಕ ಬಂದು ಕುಳಿತಳು. "ಏಕೆ ನೀನು ಊಟಕ್ಕೆ ಬರುತ್ತಿಲ್ಲ, ಮೈ ಸರಿ ಇಲ್ಲವ ?" ಎಂದು ಕೇಳಿದಳು. ಸುನಂದ ಯಾವ ಉತ್ತರವನ್ನು ಕೊಡಲಿಲ್ಲ, ಅವಳತ್ತ ತಿರುಗಿ ಸಹ ನೋಡಲಿಲ್ಲ. ಮುದುಕಿ ಇವಳಿಂದ ಸ್ವಲ್ಪ ದೂರದಲ್ಲಿಯೆ ಮಲಗಿ ನಿದ್ದೆ ಹೋದಳು.
ಮರುದಿನ ಬೆಳಗ್ಗೆ ಮುದುಕಿಯೆ
"ಏಕೆ ಒಂದೆ ಕಡೆ ಹೀಗೆ ಕುಳಿತಿದ್ದಿ. ಏಳು, ನೀರಿದೆ ಸ್ವಲ್ಪ ಮುಖ ತೊಳೆದು ಬಾ" ಎಂದಳು. ಅವಳಿಗೆ ಯಾವ ಉತ್ಸಾಹವು ಇಲ್ಲ. ಅವಳ ಬಲವಂತಕ್ಕೆ ಎದ್ದು ಅವಳ ಜೊತೆ ಹೋದಳು. ಮುದುಕಿಯೆ ಇವಳಿಗೆ ಎಲ್ಲ ಜಾಗ ತೋರಿಸಿ. ನೀರಿರುವ ಜಾಗ ತೋರಿಸಿ ಜೊತೆಗೆ ನಿಂತಿದ್ದಳು. ಅಲ್ಲಿ ಎಲ್ಲ ಮುಗಿಸಿ ಮತ್ತೆ ತಾನು ಮೊದಲಿನ ಜಾಗಕ್ಕೆ ಬಂದು ಕುಳಿತಳು ಸುನಂದ. ಮುದುಕಿ ಪಕ್ಕದಲ್ಲಿ ಬಂದು ಕುಳಿತು ಕೊಂಡಿತು
"ನಿನ್ನನ್ನು ನೋಡಿದರೆ ಬಿಕ್ಷುಕಿಯ ತರ ಅನ್ನಿಸುವದಿಲ್ಲ, ಏನು ಕಾಯಿಲೆ, ಇಲ್ಲಿ ಹೇಗೆ ಬಂದೆ" ಎಂದಳು. ಸುನಂದಳಿಗೆ ಏಕೊ ಮಾತನಾಡಲು ಯಾವ ಉತ್ಸಾಹವು ಇಲ್ಲ, ಮಾತನಾಡಲು ಹೋದರೆ ಗಂಟಲು ಒಣಗುತ್ತಿತ್ತು.
ಮುದುಕಿ ಪುನಃ
'ಎರಡು ದಿನದಿಂದ ನೀನು ಏನು ತಿಂದಿಲ್ಲ ಕುಡಿದಿಲ್ಲ, ಹೀಗಾದರೆ ಎಲ್ಲಿ ಶಕ್ತಿ ಇರುತ್ತದೆ ಹೇಳು, ಇಲ್ಲಿಯ ಅಹಾರ ಎಂದು ಅಸಹ್ಯಪಡಬೇಡ, ಜೀವ ಉಳಿಸಲು ಏನಾದರು ತಿನ್ನಲೆ ಬೇಕು ಏಳು" ಎಂದು ಬಲವಂತ ಪಡಿಸಿದಳು. ಕಡೆಗೆ ಅವಳ ಜೊತೆ ಹೊರಟಳು ಸುನಂದ. ಆಕೆ ಇವಳಿಗೆ ಒಂದು ತಟ್ಟೆ ಕೊಡಿಸಿದಳು. ಸಾಲಿನಲ್ಲಿ ನಿಂತು ತಾನೆ ಇವಳಿಗೆ ಅಹಾರ ತಂದು ಕೊಟ್ಟು , ಅದನ್ನು ತಿನ್ನು ಅಂದಳು. ಎರಡು ತುತ್ತು ತಿನ್ನುವದರಲ್ಲಿ ಸುನಂದಳಿಗೆ ಅಳು ಉಕ್ಕಿ ಬಂದಿತು. ಅವಳಿಗೆ ನೆನಪಿಗೆ ಬಂದಿತು. ತಾನು ಮನೆಯಲ್ಲಿದ್ದಾಗ ಬಿಕ್ಷುಕರಿಗೆ ಹಾಕುವಾಗ ಸಹ ಉತ್ತಮವಾದ ಸ್ಥಿಥಿಯಲ್ಲಿ ಇರುವ ಅಹಾರವನ್ನೆ ಹಾಕುತ್ತಿದ್ದಳು. ಅವಳ ಅತ್ತೆ ಒಮ್ಮೆ ಕೆಟ್ಟಿದ್ದ ಅಹಾರವನ್ನು ಹಾಕಲು ಹೋದಾಗ ಕೇಳುತ್ತಿದ್ದಳು
"ಅತ್ತೆ ಅವರು ಮನುಷ್ಯರೆ ಅಲ್ಲವ ಪಾಪ ಹೇಗೆ ಅಂತ ಅಹಾರ ತಿಂತಾರೆ, ಅದನ್ನು ಬಿಸಾಕಿಬಿಡಿ, ಹಾಕಬೇಡಿ" ಎಂದು. ಸುನಂದ ನೆನೆದಳು, ತಾನೆ ಈಗ ಇಂತಹ ಅಹಾರ ತಿನ್ನ ಬೇಕಿದೆ. ಒಂದೆರಡು ತುತ್ತು ತಿಂದು ನೀರು ಕುಡಿದು ಅಲ್ಲಿಂದ ಎದ್ದು ಹೊರಟಳು.
ನಾಲ್ಕೈದು ದಿನ ಕಳೆಯುವದರಲ್ಲಿ, ಆ ಮುದುಕಿ ಸುನಂದಳಿಗೆ ಹೊಂದಿಕೊಂಡು ಬಿಟ್ಟಳು. ಅವಳು ಅನ್ನುತ್ತಿದ್ದಳು
"ಇಲ್ಲಿರುವ ಬಿಕ್ಷುಕರೆಲ್ಲ ಇಲ್ಲ ತಮಿಳಿನವರು ಇಲ್ಲ ಹಿಂದಿಯವರು, ದರಿದ್ರ ಮುಂಡೇವು ಯಾರಿಗು ಕನ್ನಡ ಬರಲ್ಲ, ಸದ್ಯ ನಿನಗಾದರು ಕನ್ನಡ ಅರ್ಥವಾಗುತ್ತಲ್ಲ" ಎಂದು.
ಏನೆ ಮಾಡಿದರು ಸುನಂದ ಸದಾ ಸಪ್ಪಗೆ ಇರುತ್ತಿದ್ದಳು. ಮುದುಕಿ ಅಂದಳು ನೀನು ಸದಾ ಕೊರಗುವದರಲ್ಲಿ ಅರ್ಥವಿಲ್ಲ. ನಿನ್ನ ಮನಸಿನಲ್ಲಿ ಬರಿ ದುಃಖವೆ ತುಂಬಿಕೊಂಡಿದೆ. ಎಲ್ಲವನ್ನು ಮರೆತುಬಿಡು, ನಾವು ಹುಟ್ಟಿದಾರಿಬ್ಬ ಇಲ್ಲಿಯೆ ಇರೋದು ಅಂದುಕೊಳ್ಳುವದಪ್ಪ, ಅಷ್ಟಕ್ಕು ನಿನ್ನ ದುಃಖ ಏನು ಅದನ್ನಾದರು ಹೇಳು" ಎಂದು ಬಿಡಿಸಿ ಕೇಳಿದಳು.
ಸುನಂದಳಿಗೆ ಇಷ್ಟು ದಿನದವರೆಗು ಯಾರು ಅವಳನ್ನು ನಿನ್ನ ಮನಸೇನು ಎಂದು ಕೇಳಿರಲಿಲ್ಲ. ತನ್ನನ್ನು ತನ್ನ ಮಗಳಂತೆ ನೋಡಿಕೊಳ್ಳುವ ಈ ಮುದುಕಿಯನ್ನು ಕಾಣುವಾಗ ಅವಳಿಗೆ ಎಂದೊ ತೀರಿಹೋದ ತನ್ನ ತಾಯಿ ನೆನಪಿಗೆ ಬಂದಳು. ನಿದಾನಕ್ಕೆ ಕುಳಿತು ತನಗೆ ಕ್ಯಾನ್ಸರ್ ಎಂಬ ಕಾಯಿಲೆ ಆಕ್ರಮಿಸಿದ ದಿನದಿಂದ ತಾನು ಅನುಭವಿಸಿದ ಮಾನಸಿಕ ದುಗುಡವನ್ನೆಲ್ಲ ತೋಡಿಕೊಂಡಳು. ತನ್ನ ಸುತ್ತಲಿನ ಜನರ ಸ್ನೇಹಿತರ , ಮನೆಯವರ , ತಾನು ಕೆಲಸಮಾಡುವಲ್ಲಿನ ಜನರ ನಡತೆಗಳನ್ನು ಹೇಳುತ್ತ ಹೇಳುತ್ತ ಅವಳಿಗೆ ದುಃಖ ಉಮ್ಮಳಿಸಿ ಬಂತು, ಮುದುಕಿಯ ತೊಡೆಯ ಮೇಲೆ ತಲೆಯಿಟ್ಟು ಜೋರಾಗಿ ಅತ್ತುಬಿಟ್ಟಳು. ಅವಳ ಎಲ್ಲ ಕಥೆ ಕೇಳಿದ ಮುದುಕಿ.
"ಆಯ್ತಲ್ಲ ನಿನ್ನ ನೆನಪಿನಿಂದ ಇನ್ನು ಎಲ್ಲವು ಹೊರಹೋಗಲಿ, ಹಿಂದಿನದೆಲ್ಲ ಮರೆತುಬಿಡು. ಇಲ್ಲಿ ನಿನಗಾವ ತೊಂದರೆಯು ಇಲ್ಲದಂತೆ ನಾನು ಸದಾ ನಿನ್ನ ಜೊತೆ ಇರುತ್ತೇನೆ , ದೇವರಿದ್ದಾನೆ ಸುಮ್ಮನಿರು " ಎಂದು, ತುಂಬಾ ಹೊತ್ತಿನವರೆಗು ತೊಡೆಯ ಮೇಲೆ ಮುಖವಿಟ್ಟು ಮಲಗಿದ್ದ ಸುನಂದಳ ತಲೆ ಸವರುತ್ತಲೆ ಇದ್ದಳು.
ಮರುದಿನ ಬೆಳಗ್ಗೆಯೆ ಮುದುಕಿ ಎದ್ದು, ವಸತಿಗಳ ಹಿಂದೆ ಇದ್ದ ಪ್ರದೇಶದಲ್ಲಿ ಸುತ್ತುತ್ತಿದಳು, ಅಲ್ಲೆಲ್ಲ ಮುಳ್ಳೂ ಕಂಟಿಗಳು ಬರಿ ಕಾಡುಗಿಡಗಳು ಬೆಳೆದು, ಪೊದೆಗಳಿಂದ ತುಂಬಿತ್ತು. ಅವಳು ಸುತ್ತುತ್ತಿರುವುದು ಕಂಡ ಅಲ್ಲಿನ ಕೆಲಸಗಾರರು, ನಗುತ್ತ
"ಏನು ಮುದುಕಿ , ಹಿಂದೆ ಸುತ್ತುತ್ತ ಇದ್ದೀಯ, ಗೋಡೆ ಹಾರಿ ಓಡಿ ಹೋಗಲು , ನೋಡ್ತಿದ್ದೀಯ" ಎನ್ನುತ ರೇಗಿಸಿದರು, ಆಕೆಯು ನಗುತ್ತ,
"ಬಿಡಪ್ಪ ನಾನು ಹೊರಗೆ ಹೋದರೆ ತಾನೆ ಎಲ್ಲಿ ಹೋದೇನು, ಯಾವುದೊ ಲಾರಿ ಬಸ್ಸಿನ ಕೆಳಗೆ ಸಿಕ್ಕಿ ಸಾಯಬೇಕಷ್ಟೆ" ಎನ್ನುತ್ತ ಉತ್ತರಿಸಿದಳು.
ಅವಳು ತುಂಬಾ ಹೊತ್ತು ಹುಡುಕಿದ್ದು ಸಾರ್ಥಕವಾಗಿತ್ತು. ಅವಳು ಅದ್ಯಾವುದೊ ಗಿಡದ ಎಲೆಗಳನ್ನು ಹಿಡಿದು ಉತ್ಸಾಹದಿಂದ ಅಲ್ಲಿಂದ ಹೊರಟಳು. ಅದೊಂದು ಕಾಡು ಗಿಡ. ಚಿಕ್ಕ ಚಿಕ್ಕ ಎಲೆ, ಹಾಗು ಬರಿ ಮುಳ್ಳಿನಿಂದ ತುಂಬಿದ ಚಿಕ್ಕ ಗಿಡವದು. ಅದರ ಎಲೆಗಳು, ಮುದುಕಿ ಅದನ್ನು ಒಳಗೆ ತೆಗೆದುಕೊಂಡು ಹೋದವಳು, ಎಲೆಗಳನ್ನು ಸ್ವಚ್ಚಗೊಳಿಸಿ, ಕಲ್ಲಿನ ಮೇಲಿಟ್ಟು ಸಣ್ಣದೊಂದು ಕಲ್ಲಿನಿಂದ ಅದನ್ನು ಚೆನ್ನಾಗಿ ಅರೆದಳು ನಂತರ ಅದರಿಂದ ಬಂದ ರಸವನ್ನು ಅವಳ ಹತ್ತಿರವಿದ್ದ ಲೋಟಕ್ಕೆ ಹಿಂಡಿದಳು, ಅದಕ್ಕೆ ಸ್ವಲ್ಪ ನೀರು ಬೆರೆಸಿದಳು, ಸುತ್ತಲಿದ್ದವರು ಈ ಮುದುಕಿ ಏನು ನಡೆಸಿದ್ದಾಳೆ ಎಂದು ನೋಡುತ್ತಿರುವಂತೆ, ಸುನಂದಳ ಬಳಿ ಬಂದ ಮುದುಕಿ ಅವಳಿಗೆ ಆ ಲೋಟವನ್ನು ಕೊಡುತ್ತ
"ತಗೋ ಸ್ವಲ್ಪವು ಉಳಿಸದೆ ಕುಡಿದುಬಿಡು, ಸ್ವಲ್ಪ ಕಹಿ ಇರುತ್ತೆ ಉಗುಳ ಬೇಡ" ಎಂದಳು, ಸುನಂದ ಆಶ್ಛರ್ಯದಿಂದ
"ಇದೇನಜ್ಜಿ" ಎಂದರೆ,
"ಅದೊಂದು ಸೊಪ್ಪಿನ ರಸ , ಔಷದಿ ಸೊಪ್ಪಿನ ರಸ, ನಿನಗೆ ಎಲ್ಲ ಸರಿ ಹೋಗುತ್ತೆ" ಎಂದಳು, ಸುನಂದ
"ಅಜ್ಜಿ , ದೊಡ್ಡ ದೊಡ್ಡ ಡಾಕ್ಟರ್ ಗಳೆ ನನಗೆ ಬದುಕುವ , ಕಾಯಿಲೆ ವಾಸಿ ಆಗುವ ಬರವಸೆ ಕೊಡಲಿಲ್ಲ ನೀನು ವಾಸಿ ಮಾಡ್ತೀಯ" ಎಂದದ್ದಕ್ಕೆ
"ನೋಡಮ್ಮ , ನಂಬು ಇದನ್ನು ಕುಡಿ, ಇದರಿಂದ ನಿನಗೇನು ನಷ್ಟವಂತು ಇಲ್ಲ, ನನ್ನ ಪ್ರಯತ್ನ ಮಾಡುತ್ತಿರುವೆ, ಸಾಯಲು ಸಿದ್ದವಾಗಿರುವ ನಿನಗೆ ನನ್ನ ಔಷದದ ಭಯ ಯಾಕೆ" ಎಂದಳು,
ಸುನಂದ ಏನು ಉತ್ತರಿಸದೆ , ಲೋಟದಲ್ಲಿದ್ದ ರಸವನ್ನೆಲ್ಲ ಕುಡಿದು , ಮುದುಕಿಯ ಕೈಗೆ ಲೋಟವನ್ನು ಕೊಟ್ಟಳು. ಅಂದಿನಿಂದ ಮುದುಕಿಯ ಡಾಕ್ಟರಿಕೆ ಪ್ರಾರಂಬವಾಯಿತು.
ಸುನಂದ ಒಮ್ಮೆ ಕೇಳಿದಳು
"ಅಜ್ಜಿ ನಿನಗೆ ನಾಟಿ ವೈದ್ಯ ಗೊತ್ತಿದೆಯ? ಆ ಎಲೆಯ ಹೆಸರೇನು"
ಅದಕ್ಕೆ ಮುದುಕಿಯು
"ನೋಡು ಮಗು , ಎಲೆಯ ಹೆಸರು ಹೇಳಬಾರದು, ಹೇಳಿದರೆ ಅದು ಕೆಲಸ ಮಾಡಲ್ಲ ಅಂತಾರೆ, ಹಳ್ಳಿಯಲ್ಲಿ ನನ್ನ ತಂದೆ ನಾಟಿ ವೈದ್ಯ ಮಾಡುತ್ತ ಇದ್ದದ್ದು ನೆನಪಿದೆ , ನಾನಾಗ ಚಿಕ್ಕವಯಸಿನವಳು, ಸಾಕಷ್ಟು ಸಾರಿ ಅವರ ಜೊತೆ ಮೂಲಿಕೆ ಹುಡುಕುತ್ತ ಗುಡ್ಡ ಕಾಡುಗಳನ್ನು ಸುತ್ತಿರುವೆ, ನನಗೆ ಮದುವೆಯಾದ ನಂತರ ಅದೆಲ್ಲ ಮರೆತು ಹೋಗಿತ್ತು. ಸುಮಾರು ಐವತ್ತು ವರ್ಷಗಳ ನಂತರ ನಿನಗೆ ನನ್ನ ಕೈನಿಂದ ಔಷದಿ ಮಾಡಿ ಕೊಡುತ್ತಿದ್ದೇನೆ ನೋಡೋಣ" ಎಂದಳು.
ಮುದುಕಿಯು ಅಲ್ಲಿಯ ಕೆಲಸಗಾರ ಒಬ್ಬಳನ್ನು ಹಿಡಿದಳು, ಅವಳನ್ನು ಹೇಗೊ ಕಾಡಿಸಿ, ಹೊರಗಿನಿಂದ ಶುದ್ದ ಹರಿಸಿಣ ತರಿಸಿದಳು, ಅವಳು ಅದನ್ನು ಕಾಗದದ ಪೊಟ್ಟಣದಲ್ಲಿ ತಂದು ಕೊಟ್ಟಳು. ಮುದುಕಿ ಆ ಎಲೆಯನ್ನು ರಸ ತೆಗೆದು ಹರಿಸಿನ ವನ್ನು ಅದರಲ್ಲಿ ಕಲಸಿ, ಹಿಂದೆ ಇದ್ದ ನಿಂಬೆಹಣ್ಣಿನ ಗಿಡದಿಂದ ಎಳೆ ನಿಂಬೆ ಹಣ್ಣು ತಂದು ಅದಕ್ಕೆ ಸೇರಿಸಿ ಮಿಶ್ರಣವನ್ನು ಸುನಂದಳ ಕೈ, ಬೆನ್ನು, ಮುಖದ ಮೇಲೆಲ್ಲೆ ಚೆನ್ನಾಗಿ ಹಚ್ಚಿ, ದಿನಾ ಬಿಸಲಿನಲ್ಲಿ ಒಂದೆರಡು ಗಂಟೆ ನಿಲ್ಲಿಸುತ್ತಿದ್ದಳು. ಸುನಂದಳನ್ನು ಕಂಡು ಎಲ್ಲರಿಗು ನಗು, ಆಕೆ , ಅರಳು ಮರಳು ಮುದುಕಿಯ ಮಾತು ನಂಬಿ ಅವಳು ಹೇಳಿದಂತೆ ಕೇಳುತ್ತಾಳೆ ಎಂದು,. ಆದರೆ ಯಾರು ತಲೆ ಕೆಡಸಿಕೊಳ್ಳಲಿಲ್ಲ, ಏನಾದರು ಮಾಡಿಕೊಳ್ಳಲಿ ಎಂದು ಸುಮ್ಮನಿದ್ದರು.
ಸುನಂದ ಅಲ್ಲಿಗೆ ಬಂದು ಮೂರು ಅಥವ ನಾಲಕ್ಕು ವಾರಗಳೆ ಕಳೆಯಿತೇನೊ, ಅವಳಿಗು ಲೆಕ್ಕ ತಪ್ಪಿತು. ಅಲ್ಲಿಯ ವಾತವರಣಕ್ಕೆ ಮನ ಒಗ್ಗಿ ಕೊಂಡಿತು. ಯಾರಲ್ಲಿಯು ಮಾತಿಗೆ ಹೋಗುತ್ತಿರಲಿಲ್ಲ. ಅಲ್ಲಿಯ ಮಾತು, ಕದನ, ಜಗಳಗಳು , ಹೊಡೆದಾಟ, ಕಾಯಿಲೆ, ರೋಗಗಳು, ಎಲ್ಲವನ್ನು ನೋಡುತ್ತ ಅವಳು ಬೇರೆಯದೆ ಪ್ರಪಂಚದಲ್ಲಿ ಇದ್ದುಬಿಟ್ಟಳು. ಕೆಲ ಬಿಕ್ಷುಕರು ಮನೋರೋಗಿಗಳಾಗಿದ್ದರು, ಅವರಿಗೆಲ್ಲ ಆರೈಕೆಗಳಿಲ್ಲದೆ ಸೊರಗುತ್ತಿದ್ದರು. ಹೀಗೆ ಎಷ್ಟು ದಿನ ಕಳೆಯಿತು, ತಿಳಿಯದು,
ಸುನಂದಳಿಗೆ ಅಷ್ಟು ದಿನದ ದುಗುಡದಿಂದ ಬಿಡುಗಡೆ ದೊರಕಿತ್ತು. ಹೊರಗಿನ ಎಲ್ಲ ಸಂಬಂದಗಳು ಅವಳ ಮನದಿಂದ ದೂರವಾಗಿದ್ದ್ವು ಮನ ಪ್ರಶಾಂತವಾಗಿತ್ತು. ಮುದುಕಿ ಕೊಡುತ್ತಿದ್ದ ನಾಟಿ ಔಷದದ ಪರಿಣಾಮವೊ ಏನೊ ಹೊಟ್ಟೆ ಬೆನ್ನಿನಲ್ಲಿಯ ನೋವು ಹಿಂಸೆಗಳು ತಹಬದ್ದಿಗೆ ಬಂದಿದ್ದು, ರಾತ್ರಿ ನಿದ್ದೆ ಬರುತ್ತಿದ್ದು. ಅತಿ ಕಡಿಮೆ ಅಹಾರ ಸೇವಿಸುತ್ತಿದ್ದಳು. ಅವಳೆಂದು ಊಟಕ್ಕೆ ಹೋಗುತ್ತಿರಲೆ ಇಲ್ಲ ಮುದುಕಿ ತರುತ್ತಿದ್ದ ಅಹಾರವನ್ನು ಇಬ್ಬರು ಸ್ವಲ್ಪ ತೆಗೆದುಕೊಳ್ಳುತ್ತಿದ್ದರು. ಸುತ್ತಲ ಬಿಕ್ಷುಕರು ಸುನಂದಳ ಮಾತಿಗೆ ಬರದಂತೆ ಅಜ್ಜಿ ಕಾವಲಿದ್ದಳು. ಅಜ್ಜಿಗೆ ಸುನಂದಳನ್ನು ಕಂಡರೆ ಅದೇನೊ ವ್ಯಾಮೋಹ.
ಒಂದು ದಿನ ಬೆಳಗ್ಗೆ ಮುದುಕಿ ಅಂದಳು
"ಮಗು , ನಿನ್ನ ಮುಖ ನೋಡಿಕೊಂಡಿದ್ದೀಯ, ಈಗ ಅಲ್ಲಿ ಯಾವ ಗಾಯವಾಗಲಿ, ಕಲೆಯಾಗಲಿ ಇಲ್ಲ, ನಿನ್ನ ಮುಖದಲ್ಲಿ ಈಗ ಯಜಮಾನಗಿತ್ತಿಯ ಗಾಂಭೀರ್ಯವಿದೆ"
ಸುನಂದ ತನ್ನ ಕೈ, ಕಾಲುಗಳನ್ನೆಲ್ಲ ಗಮನಿಸಿದಳು, ಮುದುಕಿಯ ಮಾತು ನಿಜ, ತನ್ನ ಕೈಕಾಲುಗಳೀಗ ಅತ್ಯಂತ ಸ್ವಚ್ಚವಾಗಿದ್ದವು, ಚರ್ಮವಂತು ಆರೋಗ್ಯವಾಗಿ ಹೊಳೆಯುತ್ತಿತ್ತು, ಅಲ್ಲದೆ ವಿಸ್ಮಯ ಎಂಬಂತೆ, ಪೂರ್ತಿ ಬೋಳಾಗಿದ್ದ ಅವಳ ತಲೆಯಲ್ಲಿ ಕೂದಲುಗಳು ಸೊಂಪಾಗಿ , ಸುಮಾರು ಮೂರು ಸೆಂಟಿ ಮೀಟರಿನಷ್ಟೆ ಬೆಳೆದು ಕಿವಿಯವರೆಗು ಇಳಿಬಿದ್ದಿದ್ದವು. ಅವಳಿಗೆ ವಿಸ್ಮಯ ಅದು ಹೇಗೊ ಮುದುಕಿಯ ಔಷದಿ ಕೆಲಸ ಮಾಡುತ್ತಿದೆ ಎಂದು. ಅವಳು ಅಂದಳು
"ಅಜ್ಜಿ ನೀನು ಸಾಮಾನ್ಯಳಲ್ಲ, ನೋಡು, ನನ್ನನ್ನೆ ಬದಲಾಯಿಸಿಬಿಟ್ಟೆ, ನನ್ನ ಸುಸ್ತು ಕಡಿಮೆಯಾಗುತ್ತಿದೆ, ದೇಹ ಪೂರ್ತಿ ಆರೋಗ್ಯವಾಗಿದೆ ಅನ್ನಿಸುತ್ತಿದೆ, ಇದೆಲ್ಲ ಹೇಗೆ ಸಾದ್ಯವಾಯಿತು, ಇಷ್ಟಾದರು ನಾನು ನೋಡು ಒಂದು ದಿನವಾದರು ನಿನ್ನ ಹೆಸರೇನು ಎಂದು ಕೇಳಲಿಲ್ಲ, ಅಜ್ಜಿ ನಿನ್ನ ಹೆಸರೇನು, ಎಲ್ಲಿಯವಳು ನನಗೆ ಹೇಳುವೆಯ" ಎಂದಳು.
ಅದಕ್ಕೆ ಮುದುಕಿ
"ಅಯ್ಯೊ ನನ್ನದೇನು ಮಗು, ಏನು ಇಂದಿರಾಗಾಂದಿ ಕತೆಯೆ ಎಲ್ಲ ಕುಳಿತು ಕೇಳಲು, ಹೀಗೆ ನನಗೆ ಇಬ್ಬರು ಗಂಡು ಮಕ್ಕಳಿದ್ದರು, ಈಗಲು ಇದ್ದಾರೆ ಎಂದೆ ಇಟ್ಟುಕೋ, ನಾನು ನನ್ನ ಗಂಡ ಎಲ್ಲ ಆಸೆ ಅವರ ಮೇಲಿಟ್ಟು ಬೆಳೆಸಿದೆವು, ಅವರುಗಳ ಮದುವೆಯು ಆಯಿತು, ಸಣ್ಣ ಬುದ್ದಿ ತೋರಿ ಅವರು ಬೇರೆ ಬೇರೆ ಮನೆ ಮಾಡಿ ಕೊಂಡು ಬೆಂಗಳೂರಿಗೆ ಹೋದರು, ನನ್ನ ಗ್ರಹಚಾರ ನನ್ನ ಗಂಡನು ನನ್ನ ಒಬ್ಬಳನ್ನೆ ಬಿಟ್ಟು ಸತ್ತು ಹೋದ, ಹೇಗೊ ಕಾಲ ಕಳೆಯುತ್ತಿದ್ದೆ, ಆದರೆ ಮಕ್ಕಳು ಬಿಡಲಿಲ್ಲ, ನಾವು ನೋಡಿಕೊಳ್ತೀವಿ ಎಂದು, ತುಮಕೂರಿನಲ್ಲಿದ್ದ ಮನೆಯನ್ನು ಮಾರಿದರು, ಹಣ ಇಬ್ಬರು ಹಂಚಿಕೊಂಡರು, ನನ್ನನ್ನು ಇಲ್ಲಿಗೆ ಕರೆ ತಂದರು, ಸೊಸೆಯರದೆ ದರ್ಬಾರು, ನನ್ನ ಇಬ್ಬರು ಮಕ್ಕಳು ಪರಸ್ಪರ ಮಾತನಾಡುತ್ತಿರಲಿಲ್ಲ ಎಂತದೊ ಜಗಳ ಇಬ್ಬರಿಗು. ನನ್ನನ್ನು ಒಬ್ಬರೆ ಇಟ್ಟುಕೊಳ್ಳಲು ಸಿದ್ದವಿರಲಿಲ್ಲ, ಮೂರುತಿಂಗಳು ದೊಡ್ಡವನ ಮನೆ, ಮೂರು ತಿಂಗಳಾದ ಮರುದಿನವೆ ನನ್ನ ಹಿರಿ ಸೊಸೆ ಆಟೋದಲ್ಲಿ ತಂದು ನನ್ನನ್ನು ಕಿರಿಸೊಸೆಯ ಮನೆ ಬಾಗಿಲಲ್ಲಿ ಇಳಿಸಿ ಹೋಗುತ್ತಿದ್ದಳು, ಒಳಗು ಬರುತ್ತಿರಲಿಲ್ಲ. ಇಲ್ಲಿ ಮೂರುತಿಂಗಳಾದರೆ ಮತ್ತೆ ಅದೇ ಕತೆ, ಕಿರಿಯಳು ನನ್ನನ್ನು ದೊಡ್ಡ ಸೊಸೆಯ ಮನೆಯ ಬಾಗಿಲಲ್ಲಿ ಇಳಿಸಿ ಹೋಗುವಳು.
ಸೊಸೆಯರಿಬ್ಬರು ಕೆಲಸಕ್ಕೆ ಹೋಗುವರು, ಹೀಗೆ ನನ್ನನ್ನು ಕಿರಿಸೊಸೆ ಮನೆಮುಂದು ಇಳಿಸಿ ಹೋದ ದಿನ ಇವಳೇನಾದರು ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಲ್ಲಿ ನಾನು ರಾತ್ರಿ ಏಳರ ವರೆಗು ಬೀಗ ಹಾಕಿದ ಅವಳ ಮನೆಮುಂದೆ ಕಾಯಬೇಕು. ಇದೆ ಪದ್ದತಿ. ಒಮ್ಮೆ ಹಿರಿ ಸೊಸೆ ನನ್ನನ್ನು ಕಿರಿಸೊಸೆಯ ಮನೆಮುಂದೆ ಇಳಿಸಿಹೋದಳು, ಮನೆ ಬೀಗಹಾಕಿತ್ತು, ನಾನು ಇಬ್ಬರು ಕೆಲಸಕ್ಕೆ ಹೋಗಿದ್ದಾರೆ ಎಂದು ಕಾಯುತ್ತಿದೆ, ರಾತ್ರಿಯಾದರು ಯಾರು ಬರಲಿಲ್ಲ, ಏತಕ್ಕೊ ಹೊರಬಂದ ಪಕ್ಕದಮನೆಯಾಕೆ 'ಮನೆಯಲ್ಲಿ ಯಾರು ಇಲ್ಲ, ಎಲ್ಲೊ ಟೂರ್ ಹೋಗಿದ್ದಾರೆ, ಬರುವುದು ವಾರ ಆಗುತ್ತೆ ' ಅಂದಳು ಕೀ ಕೇಳಿದರೆ ಕೊಟ್ಟಿಲ್ಲ ಅಂದಳು, ನನಗೆ ಸುಸ್ತಾಗಿತ್ತು, ದೊಡ್ಡ ಮಗನ ಮನೆಗೆ ಹೋಗಲು ನನಗೆ ದಾರಿ ತಿಳಿಯದು, ಬೆಂಗಳೂರಿನಲ್ಲಿ ಓಡಾಟ ನನಗೆ ಗೊತ್ತಿಲ್ಲ, ಅಲ್ಲದೆ ನನ್ನ ಹತ್ತಿರ ಬಿಡಿಕಾಸಿಲ್ಲ ಏನು ಮಾಡಲಿ. ರಾತ್ರಿ ಎಲ್ಲ ಗೇಟಿನ ಮುಂದೆ ಮಲಗಿದ್ದೆ. ಬೆಳಗ್ಗೆ ಏಳುವಾಗಲೆ , ಮುಂದೆ ವ್ಯಾನ್ ನಿಂತಿತ್ತು, ಯಾರೊ ಅವರಿಗೆ ಫೋನ್ ಮಾಡಿದ್ದರಂತೆ, ರಸ್ತೆಯಲ್ಲಿ ಬಿಕ್ಷುಕಿ ಮಲಗಿದ್ದಾಳೆ, ಅಂತ , ಇಲ್ಲಿಗೆ ಕರೆತಂದರು, ನನಗು ಎರಡು ದಿನ ದುಃಖವಾಯಿತು, ಹಾಗೆ ಇಲ್ಲಿಯೆ ಅಭ್ಯಾಸವಾಯಿತು. ಈಗ ಅನ್ನಿಸುತ್ತೆದೆ ನನ್ನ ಮಕ್ಕಳ ಮನೆಗಿಂತ ಇಲ್ಲಿಯೆ ಸುಖವಾಗಿದ್ದೇನೆ ಎಂದು" ಎನ್ನುತ್ತ ನಿಲ್ಲಿಸಿದಳು.
ಸ್ವಲ್ಪ ಕಾಲ ಸುಮ್ಮನಿದ್ದ ಸುನಂದ
"ಅಜ್ಜಿ ನಿನಗೆ ಇಲ್ಲಿ ಯಾವ ಬೇಸರವು ಇಲ್ಲವ? ನಿನ್ನ ಮಕ್ಕಳನ್ನು ಪುನಃ ನೋಡಲು ಹೋಗಲ್ಲವೆ? " ಎಂದಳು.
ಅದಕ್ಕೆ ಆಕೆ "ಇಲ್ಲಮ್ಮ , ಇಲ್ಲಿ ನನಗೆಂತ ಬೇಸರ. ನಾನು ಎಲ್ಲಿದ್ದರು ಇಷ್ಟೆ, ಒಂದು ಹೊತ್ತಿನ ಊಟ, ನಂತರ ಹೇಗೊ ಕಾಲ ಕಳೆಯುವುದು ಅಲ್ಲವೆ, ಅಷ್ಟಕ್ಕು ನನ್ನ ಕರೆದುಕೊಂಡು ಹೋಗಿ ಸೇವೆಮಾಡಲು ನನ್ನ ಮಕ್ಕಳೇನು ಕಾಯುತ್ತಿಲ್ಲ. ಅವರಿಗೆ ನಾನು ಅಲ್ಲಿ ಇರದೆ ಇರುವದರಿಂದ ಆನಂದವಾಗಿಯೆ ಇರುತ್ತಾರೆ, ನಾನೀಗ ಬದುಕಿದ್ದೀನಿ ಅಂತ ತಿಳಿದರೆ , ಅವರಿಗೆ ಪೀಕಲಾಟ, ಪಾಪ ಅದೆಷ್ಟು ಸಂಕಟ ಪಡ್ತಾರೊ. ನನ್ನ ಮನಸೀಗ ನೆಮ್ಮದಿಯಾಗಿದೆ, ನಾನು ಇಲ್ಲಿ ಎಷ್ಟು ದಿನ ಇರಬೇಕೊ ಗೊತ್ತಿಲ್ಲ. ನನ್ನ ಆಯಸ್ಸು ಇರುವಷ್ಟು ದಿನ ಇರುವುದು. ಇಂದೊ ನಾಳೆಯೊ ಅಂದು ಕೊಳ್ಳುವುದು, ಮತ್ತೆ ವರ್ಷಗಟ್ಟಲೆ ಬದುಕಿದರು ಬದುಕಿದನೆ, ಆ ದೈವಕ್ಕೆ ಲೆಕ್ಕ ತಪ್ಪಿ, ನನ್ನನ್ನು ಭೂಮಿ ಇರುವವರೆಗು ಬದುಕಿರು ಅಂದು ಬಿಟ್ಟರೊ ಆಗಲು ಚಿಂತೆ ಇಲ್ಲ ಬಿಡು, ನಾನೇನು ವರ್ಷಗಳನ್ನು ದಿನಗಳನ್ನು ಎಣಿಸುತ್ತಿಲ್ಲ. ನನ್ನಲ್ಲಿ ಎಲ್ಲ ಎಣಿಕೆಗಳು ನಿಂತು ಹೋಗಿದೆ. " ಎಂದಳು
ಕಡೆಗೆ ಸುನಂದ ಕೇಳಿದಳು
" ಅಜ್ಜಿ ನಿನ್ನ ಹೆಸರು ಏನು?" ಅಜ್ಜಿ ಈಗ ಬೊಚ್ಚು ಬಾಯಿ ತೆರೆದು ನಕ್ಕಿತು,
"ಸರಿ ಆಯ್ತು ನೋಡೀಗ, ನನ್ನ ಹೆಸರು ಕೇಳ್ತಿದ್ದಿ ಅದನ್ನ ಕೇಳಿ ಎಷ್ಟು ವರ್ಷಗಳು ಆದವೊ ನನಗೆ ಮರೆತಿದೆ, ನನ್ನ ಹೆಸರು ಸುಂದರಮ್ಮ" ಎನ್ನುತ್ತ ನಕ್ಕಳು.
ಸುತ್ತಲಿದ್ದ ಎಲ್ಲರು, ಸುನಂದಳು ನಕ್ಕರು.
ಅಜ್ಜಿ ಅಂದಳು " ನೋಡು ಮಗು ನನಗೆ ಅನ್ನಿಸ್ತ ಇದೆ, ನಿನಗಿದ್ದ ಕೆಟ್ಟದಿನಗಳೆಲ್ಲ ಮುಗಿದವು ಎಂದು, ನೀನು ಸಿದ್ದಳಾಗು, ಇಲ್ಲಿಂದ ಹೊರಗೆ ಹೋಗುವ ದಿನ ಬೇಗನೆ ಬರುತ್ತೆ, ಶನಿರಾಯ ನಿನ್ನ ಹೆಗಲೇರಿ ಕುಳಿರುವನು ಇಳಿತ್ತಿದ್ದಾನೆ, ಅದಕ್ಕೆ ನೋಡು ಕಾಯಿಲೆ ಕಡಿಮೆ ಆಗ್ತಿದೆ. ಎಲ್ಲ ಒಳ್ಳೆಯದಾಗುತ್ತೆ ಮಗು " ಅಂದಳು,
ಸುನಂದ ಏನು ಮಾತನಾಡಲಿಲ್ಲ ಸುಮ್ಮನಿದ್ದಳು.
ಅಜ್ಜಿಯ ಮಾತು ಸುಳ್ಳಾಗಲಿಲ್ಲ. ಮತ್ತೆ ಸುಮಾರು ಹದಿನೈದು ದಿನ ಕಳೆದಿರಬಹುದು. ಯುಗಾದಿ ಹಬ್ಬದ ಪ್ರಯುಕ್ತ , ಅಲ್ಲಿ ಸಣ್ಣ ಸಮಾರಂಭ ಏರ್ಪಟಿತು. ಸಮಾಜಕಲ್ಯಾಣ ಇಲಾಖೆಯ ವತಿಯಿಂದ ನಡೆದ ಸಮಾರಂಭವದು. ಅಲ್ಲಿಗೆ ಅತಿಥಿಯಾಗಿ , ಮಾಗಡಿ ರಸ್ತೆ ವಿಭಾಗದ ಕಾರ್ಪೋರೇಟರ್ ಮುಂಜುಳ ಎಂಬ ಮಹಿಳೆ ಬಂದಿದ್ದರು. ಸಮಾಜಸೇವಕಿ ಆಕೆ. ಸಮಾರಂಭ ನಡೆಯುತ್ತಿದ್ದಂತೆ, ಬಿಕ್ಷುಕರ ನಡುವೆ ಕುಳಿತಿದ್ದ ಸುನಂದ ಪಕ್ಕದಲ್ಲಿದ್ದ ಅಜ್ಜಿಗೆ ಹೇಳಿದಳು,
"ಅಜ್ಜಿ ಅಲ್ಲಿ ಕುಳಿತಿರುವಾಕೆ ನನಗೆ ಗೊತ್ತು, ಒಮ್ಮೆ ಬೇಟಿ ಮಾಡಿದ್ದೆ, ಈಗ ನೋಡು ನಾನು ಇಲ್ಲಿ ಅವರು ಅಲ್ಲಿ" ಎಂದು.
ತಕ್ಷಣ ಅಜ್ಜಿ ಸೂಚನೆ ಕೊಟ್ಟಳು
"ಮಗು ನಿನಗೆ ಇದು ಸರಿಯಾದ ಸಮಯ, ಅವರ ಹತ್ತಿರ ಹೋಗಿ ನಿನ್ನ ಪರಿಸ್ಥಿಥಿ ತಿಳಿಸು, ನಿನಗೆ ಸಹಾಯ ದೊರಕುತ್ತದೆ, ನೀನು ಇಲ್ಲಿಂದ ಹೊರಹೋಗಿ, ನಿನ್ನ ಗಂಡ ಮಕ್ಕಳ ಜೊತೆ ಸುಖವಾಗಿ ಬದುಕು "
ತಕ್ಷಣ ಸುನಂದಳಿಗೆ ಗೊತ್ತಾಯಿತು ಇದು ಸರಿಯಾದ ಸಂದರ್ಭ.
ಸಮಾರಂಭದ ನಡುವೆ ಬಿಕ್ಷುಕರ ಗುಂಪಿನ ನಡುವಿನಿಂದ ಎದ್ದು ಗಂಭೀರವಾಗಿ ನಡೆಯುತ್ತ ತನ್ನತ್ತ ಬರುತ್ತಿರುವ, ಸುನಂದಳನ್ನು ಗಮನಿಸಿದರು ಮಂಜುಳ. ಅವರಿಗೆ ಅನ್ನಿಸಿತು , ಈಕೆ ಅದೇಕೊ ಬಿಕ್ಷುಕಳಂತೆ ತೋರುತ್ತಿಲ್ಲ. ಹತ್ತಿರ ಬಂದ ಸುನಂದ, ಮಂಜಳರವರತ್ತ ನೋಡುತ್ತ
"ಮೇಡಮ್ ನಾನು ನಿಮ್ಮ ಜೊತೆ ಒಂದೈದು ನಿಮಿಷ ಮಾತನಾಡಬೇಕಿದೆ, ಅವಕಾಶ ಕೊಡುತ್ತೀರ"
ಸ್ವಚ್ಚವಾದ ಅಂಗ್ಲಬಾಷೆಯಲ್ಲಿ ಸುನಂದ ನುಡಿದಾಗ, ಮಂಜುಳ ಬೆಪ್ಪಾದರು, ಈಕೆ ಬಿಕ್ಷುಕಿಯಲ್ಲ ಎಂದು ಆಕೆಗೆ ಮತ್ತೊಮ್ಮೆ ಅನ್ನಿಸಿತು. ಸ್ಟೇಜಿನಿಂದ ಕೆಳಗೆ ಇಳಿಯುತ್ತ
"ಇಲ್ಲಿ ಬೇಡ ಅಲ್ಲಿ ಮರದ ಕೆಳಗೆ ಹೋಗೋಣ " ಎನ್ನುತ್ತ ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮರದ ಹತ್ತಿರ ನಡೆದರು.
ಸುನಂದ ನಿದಾನವಾಗಿ ತನ್ನೆಲ್ಲ ಪರಿಸ್ಥಿಥಿ ವಿವರಿಸಿ ಹೇಳಿ, ಮಂಜುಳರನ್ನು ಕುರಿತು "ಮೇಡಮ್ ನಾನು ಮೊದಲೆ ನಿಮ್ಮನ್ನು ನೋಡಿರುವೆ ನಿಮಗೆ ನೆನಪಿಲ್ಲವೆ, ನೀವು ಸಮಾಜ ಕಲ್ಯಾಣ ಇಲಾಖೆ ಕೆಲಸಕ್ಕೆ ಸಂಬಂದಪಟ್ಟಂತೆ ಒಮ್ಮೆ ನಮ್ಮ ಆಫೀಸಿಗೆ ಬಂದಿದ್ದೀರಿ, ನೀವು ಆಗ ವಿದೇಶಕ್ಕೆ ಹೋಗುವದಕ್ಕಾಗಿ ಕೆಲವು ಇಲ್ಲಿಯ ವಿಷಯ ಸಂಗ್ರಹಿಸಲು ನಮ್ಮಲಿಗೆ ಬಂದಿರಿ, ನಮ್ಮ ಬಾಸ್ ಮಹೇಶ್ ಹೇಳಿದಂತೆ ನಾನು ನಿಮಗೆ ಸಹಾಯ ಮಾಡಿದ್ದೆ" ಎಂದಳು
ಮಂಜುಳರವರು ಎಲ್ಲರಂತೆ ಸಾಮಾನ್ಯ ಸಮಾಜಸೇವಕಿಯಲ್ಲ ನಿಜ್ಜಕ್ಕು ತನ್ನನ್ನೆ ಸಮರ್ಪಿಸಿಕೊಂಡಿದ್ದವರು. ಹಿಂದೊಮ್ಮೆ ಸರ್ಕಾರದ ಪರವಾಗಿ ವಿದೇಶಕ್ಕೆ ಹೋಗುವ ಸಂದರ್ಭದಲ್ಲಿಯು ಆಕೆ ವಿವಿದ ಇಲಾಖೆಗಳಿಗೆ ಸುತ್ತಿ ತನಗೆ ಬೇಕಾದ ಮಾಹಿತಿಯನ್ನೆಲ್ಲ ಪಡೆದು ಹೋಗಿದ್ದರು. ಅಲ್ಲಿಯ ಸಮಾಜದ ಅಧ್ಯಯನ ನಡೆಸುವದಕ್ಕಾಗಿ ಆಕೆ ತೆರಳಿದ್ದರು. ಆಗ ಮಂಜುಳರವರು ಸುನಂದಳನ್ನು ಸಂಪರ್ಕಿಸಿದ್ದರು.
ಮಂಜುಳರಿಗೆ ತಕ್ಷಣ ಎಲ್ಲ ನೆನಪಿಗೆ ಬಂದಿತು, ಅಲ್ಲದೆ ಅವರು ಸುನಂದಳನ್ನು ಗುರುತಿಸಿದ್ದರು. ಅವರಿಗೆ ತುಂಬಾ ನೋವಾಗಿತ್ತು, ಇಲ್ಲಿಯವರು ಬಿಕ್ಷುಕಿ ಎಂದು ಸುನಂದಳನ್ನು ಇಲ್ಲಿ ತಂದಿಟ್ಟಿರುವುದು. ತಕ್ಷಣ ಆಕೆ ಬಿಕ್ಷುಕರ ಪುನರ್ವಸತಿ ಕೇಂದ್ರದ ಮುಖ್ಯಸ್ಥರನ್ನು ಕರೆದು ಮಾತನಾಡಿದರು. ಆಗಿರುವ ತಪ್ಪಿಗಾಗಿ ಪಾಪ ಆತನು ಪಶ್ಚಾತಾಪ ಪಟ್ಟರು. ಮುಂದಿನದೆಲ್ಲ ಸುನಂದಳಿಗೆ ಸುಲುಭವಾಯಿತು. ಮಂಜುಳರವರ ರೆಕಮಂಡೇಶನ್ ಮೇಲೆ ಸುನಂದಳನ್ನು ಹೊರಕಳಿಸಲು ಸುಲುಭವಾಗಿ ಅಲ್ಲಿಯವರು ಒಪ್ಪಿದರು, ಆಗ ಸುನಂದ ಮತ್ತೆ ಮಂಜುಳರವರ ಹತ್ತಿರ ಮಾತನಾಡಿ ಅಜ್ಜಿಯ ವಿಷಯ ತಿಳಿಸಿ, ಅವರನ್ನು ತನ್ನ ಜೊತೆ ಕರೆದೊಯ್ಯುವುದಾಗಿ ತಿಳಿಸಿದಳು. ಎಲ್ಲವು ಅಲ್ಲಿಯ ನಿಯಮಗಳಿಗೆ ಅನುಸಾರವಾಗಿಯೆ ನಿರ್ದಾರವಾಗಿ ಅವರಿಬ್ಬರು ಅಲ್ಲಿಂದ ಸ್ವತಂತ್ರರಾದರು, ಅಜ್ಜಿಗಂತು ಆಶ್ಚರ್ಯ, ಸುನಂದ ತನ್ನನ್ನು ಹೊರತಂದಿದ್ದು. ಈಗವಳು ಸ್ವಲ್ಪ ಚಿಂತಿತಳಾದಳು, ಇವಳು ಮತ್ತೆ ತನ್ನನ್ನು ಮಕ್ಕಳ ಮನೆಗೆ ಕಳಿಸಿದರೆ ಅಲ್ಲಿ ಹೋಗಿ ಏಗಬೇಕಲ್ಲ ಎಂದು.
***************** ***********************
ಸುಮಾರು ಮೂರು ತಿಂಗಳು ಕಳೆದಿತ್ತೇನೊ. ಬಿಕ್ಷುಕರ ಪುನರ್ವಸತಿ ನಿಲಯದಿಂದ ಹೊರಬಂದ ಸುನಂದ, ಹೊಸ ವ್ಯಕ್ತಿತ್ವ ಪಡೆದವಳಾದಳು..ಒಮ್ಮೆ ಕೂಡ ತನ್ನ ಮನೆಗೆ ಹೋಗಲಿಲ್ಲ ತನ್ನ ಹಳೆಯ ಆಫೀಸಿಗು ಹೋಗಲಿಲ್ಲ. ಮಂಜುಳ ಅವಳಿಗೆ ಪೂರ್ಣ ನೆರವಾದರು. ಒಮ್ಮೆ ಇರಲಿ ಎಂದು ತಾನು ಪರೀಕ್ಷೆ ಮಾಡಿಸುತ್ತಿದ್ದ ಡಾಕ್ಟರ್ ಬಳಿ ಪರೀಕ್ಷೆ ಮಾಡಿಸಿದಳು. ಈಗ ಆಶ್ಚರ್ಯ ಪಡುವ ಸರದಿ ಡಾಕ್ಟರ್ ಅವರದಾಯಿತು. ಕಾಯಿಲೆ ಇತ್ತು ಎಂಬ ಚಿನ್ಹೆ ಸಹ ಇರದಂತೆ ಕ್ಯಾನ್ಸರ್ ವಾಸಿಯಾಗಿತ್ತು.
ಅವರು ನುಡಿದರು,
"ನಿಮಗೆ ಬೇಕಿದ್ದಲ್ಲಿ ಬೆಂಗಳೂರಿನಲ್ಲಿ ಇರುವ ಎಲ್ಲ ಡಾಕ್ಟರ್ ಗಳ ಬಳಿ ಬೇಕಾದರು ಮರು ಪರೀಕ್ಷೆ ಮಾಡಿಸಿ, ಖಂಡೀತ ಗುಣವಾಗಿದೆ ಇದೆಲ್ಲ ಇಷ್ಟು ಬೇಗ ಹೇಗಾಯ್ತು ಅನ್ನೋದೆ ಆಶ್ಚರ್ಯ'
ಆಗ ಸುನಂದ ಅಜ್ಜಿಯ ನಾಟಿ ವೈದ್ಯದ ವಿಧಾನವನ್ನು ತಿಳಿಸಿದಳು.
ಅದಕ್ಕೆ ಡಾಕ್ಟರ್ “ಹೇಗೊ ನಿಮಗೆ ಗುಣವಾಗಿದ್ದೆ ಮುಖ್ಯ, ಆದರು ನಿರ್ಲಕ್ಷ್ಯ ಬೇಡ, ಮೂರು ತಿಂಗಳಿಗೊಮ್ಮೆ ಸಂಪೂರ್ಣ ಪರೀಕ್ಷೆ ಮಾಡಿಸಿ, ಕ್ಯಾನ್ಸರ್ ಕಣಗಳ ಹರಡುವಿಕೆ ಪೂರ್ಣ ನಿಂತಿದೆಯೆ ಎಂದು ಖಚಿತಪಡಿಸಿಕೊಳ್ಳಿ, ಹಾಗೆ ನಾನು ಕೊಡುವ ಕೆಲವು ಔಷದಿಗಳನ್ನು ತೆಗೆದುಕೊಳ್ಳುತ್ತಿರಿ, ವಿಶ್ ಯೂ ಆಲ್ ದ ಬೆಷ್ಟ್ “ ಎಂದರು.
ಸುನಂದಳ ವಿಷಯವೆಲ್ಲ ಒಮ್ಮೆ ಟೀವಿ ಚಾನಲ್ ನಲ್ಲಿ ವರದಿಯಾಗಿ ಬಂದಿತು.
ಸುನಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆ ಪಡೆದಳು . ಅಲ್ಲಿ ದುರ್ಗಿಗುಡಿ ಬಾಗದ ಒಂದು ಮನೆಯಲ್ಲಿ ಅವಳು ಹಾಗು ಅವಳ ಅಜ್ಜಿ ಸುಂದರಮ್ಮ ಇಬ್ಬರದೆ ವಾಸ. ಕೆಲವು ದಿನಗಳಾಗಿದ್ದವು. ರಾತ್ರಿ ಗಂಟೆ ಏಳಾಗಿತ್ತೇನೊ , ಬಾಗಿಲಲ್ಲಿ ಯಾರೊ ನಿಂತಂತೆ ಆಯಿತು. ತಲೆ ಎತ್ತಿ ನೋಡಿದಳು, ಮನೆಯ ಬಾಗಿಲಲ್ಲಿ ಅವಳ ಗಂಡ ನಟರಾಜ. ನಗುತ್ತ ನಿಂತಿದ್ದ. ಅವಳು ಅವನತ್ತ ನೋಡಿದಳು.
"ಇದೇನು, ಸುನಂದ, ಹೀಗೆ ಮಾಡಿದೆ, ಮನೆಗೆ ಏಕೆ ಬರಲಿಲ್ಲ, ನಾವೆಲ್ಲ ಟೀವಿ ಮೂಲಕ ಸುದ್ದಿ ತಿಳಿಯಬೇಕಾಯಿತು. ನಾನಂತು ಎಷ್ಟು ಹುಡುಕಿದೆ ಗೊತ್ತಾ?. ಅದೇನು ಶಿವಮೊಗ್ಗಕ್ಕೆ ಬಂದು ಬಿಟ್ಟೆ ನನಗೆ ಅರ್ಥವಾಗಲಿಲ್ಲ. ಕಳೆದ ತಿಂಗಳು ಅನುರಾದಳ ಮದುವೆ ಸಹ ಆಯಿತು, ಎಲ್ಲರು ನಿನ್ನ ಎಷ್ಟು ಕೇಳಿದರು ಗೊತ್ತ. ನೀನು ಮಾಯವಾಗಿದ್ದು ಅಪ್ಪ ಅಮ್ಮನಿಗು ಬೇಸರವಾಯಿತು, ಅಲ್ಲದೆ ಮದುವೆ ನೀನು ಐದು ಲಕ್ಷ ಕೊಡುವೆನೆಂದಿದ್ದೆಯಲ್ಲ, ನೀನೂ ಹಾಗೆಮಾಯವಾಗಿದ್ದು ಚಿಂತೆಯಾಯಿತು, ಅಪ್ಪನು ಹೇಗೊ ಮನೆಯನ್ನು ಅಡಮಾನ ಮಾಡಿ ಹಣ ಹೊಂದಿಸಿದರು. ಈಗವರು ಸಂತಸದಿಂದ್ದಿದಾರೆ ಸೊಸೆ ಬಂದರೆ ಎಲ್ಲ ಸಾಲ ಅವಳು ತೀರಿಸಿ ಬಿಡುತ್ತಾಳೆ ಎಂದು. ನಿನ್ನ ಮಗಳು ಶಿಲ್ಪ ಕೂಡ ಅಷ್ಟೆ ಅಪ್ಪ ಟೆಸ್ಟ್ ಇಲ್ಲದಿದ್ದರೆ ನಾನೆ ಜೊತೆಗೆ ಬರುತ್ತಿದ್ದೆ, ಈಗ ಎಸ್ ಎಸ್ ಎಲ್ ಸಿ ಅಲ್ಲವ , ಇಲ್ಲಿಗೆ ಬೇಗ ಕರೆತನ್ನಿ ಎಂದಳು"
ನಟರಾಜ ಮಾತನಾಡುತ್ತಲೆ ಇದ್ದ ಉತ್ಸಾಹದಿಂದ , ಸುನಂದ ಅವನ ಕಡೆ ನೋಡುತ್ತಿದ್ದಳೆ ವಿನಃ ಯಾವುದೆ ಉತ್ತರ ಕೊಡಲಿಲ್ಲ. ಕಡೆಗೆ ನುಡಿದಳು
"ನೋಡಿ , ನಾನೆಂದು ಇನ್ನು ಎಲ್ಲಿಗು ಬರಲಾರೆ, ನಿಮ್ಮ ಮನೆಗು ಬರಲಾರೆ, ಸುಮ್ಮನೆ ಏಕೆ ಮಾತು" ಎಂದಳು ತಣ್ಣಗೆ.
ಅವಳ ಪಕ್ಕದಲ್ಲಿ ಅಜ್ಜಿ ಸ್ವಲ್ಪ ಗಾಭರಿಯಿಂದ ನಿಂತು ನೋಡುತ್ತಿದ್ದಳು.
"ಅದೆಂತದು ಬರಲ್ಲ ಅನ್ನಲು ನಾವು ಅಂತದು ಏನು ಮಾಡಿದ್ದೇವೆ, ನಾವೇನು ಡೈವರ್ಸ್ ಪಡೆದಿರುವ ಗಂಡ ಹೆಂಡತಿಯೆ ಬೇರೆ ಬೇರೆ ಇರಲು, ಈಕೆ ಯಾರು ಇವಳ ಜೊತೆ ಏಕಿದ್ದೀಯ. ಮನೆಗೆ ನಡೆ" ಎಂದ. ಸ್ವಲ ಕೋಪದಲ್ಲಿ.
ಅದಕ್ಕವಳು "ನಿಮಗೆ ಬೇಕಾದಲ್ಲಿ ಡೈವರ್ಸ್ ಪೇಪರ್ ಕಳಿಸಿ ಸಹಿ ಮಾಡಿಕೊಡುತ್ತೇನೆ, ಆದರೆ ನನಗೆ ಯಾವ ಅಗತ್ಯವು ಇಲ್ಲ, ನನಗೆ ಯಾವ ಸಂಭಂದವು ಬೇಡ. ನಾನು ಹೀಗೆ ಇರುವವಳೆ. ಈಕೆ ಬಿಕ್ಷುಕರ ಕಾಲನಿಯಲ್ಲಿ ನನ್ನ ಜೊತೆಗಿದ್ದ ಅಜ್ಜಿ, ಮುಂದೆ ನನ್ನ ಜೊತೆಗೆ ಇರುತ್ತಾಳೆ. ಈಗ ಸಮಯವಾಯಿತು ಹೊರಡಿ" ಎಂದಳು.
ನಟರಾಜ ಏನೇನೊ ಮಾತನಾಡಿದ ಆದರೆ ಅವಳು ಮೌನವಾಗಿ ನಿಂತಳೆ ಹೊರತು ಯಾವ ಮಾತು ಆಡಲಿಲ್ಲ. ಕಡೆಗೆ ನಟರಾಜನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನು ಕೂಗಾಡುತ್ತಲೆ ಇದ್ದ. ಸುನಂದ ಮಾತ್ರ ಯಾವ ಮಾತು ಕೇಳದವಳಂತೆ, ಟೀವಿಯ ಕಡೆ ನೋಡುತ್ತಿದ್ದವಳು
"ಅಜ್ಜಿ ಊಟಕ್ಕೆ ಸಮಯವಾಯಿತು, ನನಗಂತು ಹಸಿವು, ಬೇಗ ಏಳು ಊಟಮಾಡೋಣ" ಎಂದಳು, ನಟರಾಜ ಅಲ್ಲಿರುವದನ್ನು ಉಪೇಕ್ಷಿಸಿ. ಅವನಿಗೆ ಏನು ತೋಚದಂತೆ ಆಗಿ ಅಲ್ಲಿಂದ ಹೊರಟು ಹೋದ.
ಆಗ ಅಜ್ಜಿಯು "ಸುನಂದ ಏನಮ್ಮ ಇದೆಲ್ಲ, ನಾನು ಎಷ್ಟು ದಿನ ನಿನ್ನ ಜೊತೆಗಿರ್ತೀನಿ, ವಯಸ್ಸಾದ ಕಾಲಕ್ಕೆ ಗಂಡ ಮಕ್ಕಳು ಎಲ್ಲ ಇರಬೇಕಮ್ಮ, ನೀನು ತಪ್ಪು ಮಾಡ್ತೀದ್ದೀಯ ಅನ್ಸುತ್ತೆ ಅಂದಳು"
ಸುನಂದ ಜೋರಾಗಿ ನಗುತ್ತಿದ್ದಳು
"ಅಜ್ಜಿ , ನಿನಗೆ ನಿನ್ನ ಮಕ್ಕಳಿಂದ ಇಷ್ಟು ಅನುಭವವಾದ ಮೇಲು, ನನ್ನ ಪಾಡು ನೋಡಿದ ಮೇಲು ಈ ಮಾತು ಆಡ್ತಿದ್ದೀಯಲ್ಲ, ನಿನಗೆ ಗೊತ್ತಾಗಲ್ಲ ಸುಮ್ಮನಿರು. ನೀನೆನು ಚಿಂತಿಸಬೇಡ, ತಿಳಿದುಕೊ, ಒಮ್ಮೆ ನಾನೆ ಏನಾದರು ಮೊದಲು ಸತ್ತರೆ ನಿನಗೆ ಮುಂದೆ ಏನು ತೊಂದರೆ ಯಾಗದಂತೆ ಎಲ್ಲ ಏರ್ಪಾಡು ಮಾಡಿ ಸಾಯುತ್ತೇನೆ, ನೀನೆ ಮೊದಲು ಸತ್ತರೆ ಆಗ ನಿನ್ನಂತದೆ ಮತ್ತೊಂದು ಅಜ್ಜಿಯನ್ನು ಎಲ್ಲಿಯಾದರು ಹುಡುಕಿ ತಂದಿಟ್ಟು ಕೊಳ್ಳುತ್ತೇನೆ ಅಷ್ಟೆ. ಮತ್ತೆ ನನಗೆ ಯಾವ ಸಂಭಂದವು ಬೇಡ , ನಾನು ಹೀಗೆ ಇರುವವಳೆ" ಎಂದಳು ನಗುತ್ತ, ಅಜ್ಜಿಗೆ ಅವಳ ಮಾತು ಎಷ್ಟು ಅರ್ಥವಾಯಿತೊ , ಸುಮ್ಮನಾದಳು.
ಸುನಂದ ತನ್ನ ಗಂಡ ಹೋದ ನಂತರ ಹೊರಗಿನ ಬಾಗಿಲು ಭದ್ರ ಪಡಿಸಲು ಬಂದವಳು ನಿಂತು ನೋಡಿದಳು , ಅದು ಕಾರ್ತೀಕದ ರಾತ್ರಿ ,
ಬಾಗಿಲಿನ ಎರಡು ಪಕ್ಕದಲ್ಲಿ ಅಜ್ಜಿ ಹಚ್ಚಿಟ್ಟ ಸೊಡರಿನ ದೀಪ , ಸಣ್ಣಗೆ ಮಿನುಗುತ್ತಿತ್ತು.

No comments:

Post a Comment

enter your comments please