Wednesday, January 29, 2014

ಸಾಗರ ಪ್ರವಾಸ : ಇಡುಗುಂಜಿ ಹಾಗು ಅಪ್ಸರಕೊಂಡ

ಸಾಗರ ಪ್ರವಾಸ :  ಇಡುಗುಂಜಿ ಹಾಗು ಅಪ್ಸರಕೊಂಡ 

ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ.
ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು ,
'ಹಿಂದಿನ ಚಕ್ರ ಪಂಚರ್' !!!!!



ಇಡುಗುಂಜಿಯ ಗಣಪ :  

ಮತ್ತೇನು ? ಎಲ್ಲರೂ ಇಳಿದೆವು, ಡ್ರೈವರ್ ಚಕ್ರ ಬದಲಿಸಲು ಮುಂದಾದ. ನಾವು  ನಮ್ಮ ಕೈಲಾದ ಎಲ್ಲ ಸಹಾಯವನ್ನು ಅವನಿಗೆ ಮಾಡಿದೆವು. ಅಲ್ಪ ಕಾಲದಲ್ಲಿ ಮತ್ತೆ ಸಿದ್ದ.

ಎಲ್ಲರೂ ವಾಹನ ಹತ್ತಿ ಇಡುಗುಂಜಿಯತ್ತ ಹೊರಟೆವು. ಬರೀ ಐದೇ ನಿಮಿಷ ದೇವಾಲಯದ ಮುಂದೆ ಇದ್ದೆವು. ಇಳಿಯುವಾಗ ವಯಸ್ಸಾದ ಮುದುಕಿ ಒಬ್ಬಳು ಎಳೆ ಗರಿಕೆಯನ್ನು ದಾರದಲ್ಲಿ ಕಟ್ಟಿ ಮಾರುತ್ತಿದ್ದಳು, ಅದನ್ನು ಪಡೆದು ದೇವಾಲಯದ ಒಳಹೊಕ್ಕೆವು.

ಇಡುಗುಂಜಿ ಹೊನ್ನಾವರ ತಾಲೋಕಿನ ಚಿಕ್ಕ ಹಳ್ಳಿಯಾಗಿದ್ದು, ಇಲ್ಲಿರುವ ಪುರಾತನ ಗಣಪತಿ ದೇವಾಲಯದಿಂದರ ಪ್ರಸಿದ್ದ. ಬಾಲಕನ ರೂಪದಲ್ಲಿರುವ ನಿಂತಿರುವ ಗಣಪ, ಎರಡು ಕೈ, ಹಾಗು ಚಿಕ್ಕ ಕಾಲುಗಳು,

ನೋಡಲು  ಸ್ವಲ್ಪ ಗೋಕರ್ಣದ ಗಣಪನ ರೀತಿಯೆ. 1500 ಸಾವಿರ ವರ್ಷದಷ್ಟು ಇತಿಹಾಸವಿರುವ ಪುರಾತನ ದೇವಾಲಯ.

ಗಣೇಶನಿಗೆ ನಮಸ್ಕರಿಸಿ, ಒಂದೆರಡು ನಿಮಿಶ ಕುಳಿತು ಹೊರಬರುವಾಗ, ಡ್ರೈವರ್ ವಾಹನವನ್ನು ಮೊದಲಿನಂತೆ ಪಕ್ಕಾ ಮಾಡಿದ್ದ ಈಗ ಯಾವುದೇ ಶಬ್ಧವೂ ಇಲ್ಲ

ಮುಂದೆ ಹೊರಟ ಜಾಗ ಅಪ್ಸರಕೊಂಡ ಎಂಬ ಸ್ಥಳ


ಅಪ್ಸರಕೊಂಡ : 






ಇದು ಹೆಚ್ಚು ಪ್ರಖ್ಯಾತವಾಗಿಲ್ಲದ ಸ್ಥಳ. ಅಲ್ಲಿಗೆ ತಲುಪುವಾಗಲು ನಮಗೆ ಅಲ್ಲಿ ಏನು ಇರಬಹುದೆಂಬ ಕಲ್ಪನೆ ಇಲ್ಲ.

ಎದುರಿಗೆ ನರಸಿಂಹ ದೇವಾಲಯ ಒಂದು ಇತ್ತು. ಆದರೆ ಅದರ ಒಳಗೆ ಹೋಗದೆ ಎಡಬಾಗದಲ್ಲಿದ್ದ ಸಂದಿಯಂತ ಸ್ಥಳದಲ್ಲಿ ಮುಂದುವರೆದವು. ಕಾಲುದಾರಿ ಕಾಡಿನ ಮದ್ಯೆ. ಬಲಬಾಗಕ್ಕೆ ತಿರುಗಿ , ಕೆಳಗೆ ಇಳಿಯುವಾಗ ಕಾಣಿಸಿತು, ಸಣ್ಣದೊಂದು ಜಲಪಾತ.
ಅದ್ಭುತ ದೃಶ್ಯ. ಸುತ್ತಲೂ ಮರಗಳಿಂದ ಆವರಿಸಿ, ಇಳಿಜಾರಿನಲ್ಲಿ ದೊಡ್ಡ  ತಗ್ಗುಪ್ರದೇಶ ಒಂದರಲ್ಲಿ ದುಮುಕುತ್ತಿರುವ ಜಲದಾರೆ. ನಿಜಕ್ಕು ಅಪ್ಸರೆಯರು ಬಂದು ಸ್ನಾನಮಾಡಿ ಹೊಗುತ್ತಿರಬಹುದು ಎಂದು ಅನ್ನಿಸುವ ಸ್ಥಳ. ಇಳಿಯಲು ಮೆಟ್ಟಿಲುಗಳು. ಅಲ್ಲಿಯೇ ಇರುವ ಮನಸ್ಸು. ಆದರೆ ಕತ್ತಲಾಗುತ್ತಿರುವ ಅನುಭವ. ಆಯಿತು ಎಂದು ಮೇಲೆ ಬರುತ್ತಿರುವಂತೆ, ಆತುರ ಪಡಿಸುತ್ತ ನಮ್ಮ ಡ್ರೈವರ್ ಮತ್ತು ಗೈಡ್  ಪ್ರಮೋದ ನಮ್ಮನ್ನು ಕಾಲುದಾರಿಯಲ್ಲಿ ಕರೆದುಕೊಂಡುಹೊರಟರು.
ಎತ್ತರದ ಸ್ಥಳಕ್ಕೆ ಹೋಗುತ್ತಿದ್ದೆವು. ಹತ್ತು ನಿಮಿಶ ನಡೆಯುತ್ತಿರುವಂತೆ,  ತಟ್ಟನೆ ನಮ್ಮ ಮುಂದೆ ಅದ್ಭುತ ಲೋಕವೊಂದು ತೆರೆದುಕೊಂಡಿತು.  ನಮ್ಮ ದಾರಿ ಕೊನೆಯಾಗಿತ್ತು ನಾವು ಗುಡ್ಡಒಂದರ ಮೇಲೆ ಇದ್ದೆವು ಮತ್ತು ಅಲ್ಲಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಸಮುದ್ರ ಗೋಚರಿಸುತ್ತ ಇತ್ತು. ಹಾಗು ಸೂರ್ಯ ಆಗಲೆ ಮುಳುಗಿ ಆಗಿತ್ತು. ಮೈ ನವಿರೇಳಿಸುವ ದೃಷ್ಯ.
ಗೈಡ್ ನಿರಾಸೆಯಿಂದ ನುಡಿದ
"ಸಾರ್ ಆಗಲೇ ಸೂರ್ಯ ಮುಳುಗಿ ಆಗಿದೆ, ಹತ್ತು ನಿಮಿಶ ಮುಂಚೆ ಬರಬೇಕಿತ್ತು"
ಅಡ್ಡಿಯಿಲ್ಲ , ಸೂರ್ಯನಿಲ್ಲದೆಯು ಸಮುದ್ರ ನಸುಬೆಳಕಿನಲ್ಲಿ ಸುಂದರವಾಗಿ ಕಾಣುತ್ತಿತ್ತು. ಅಲೆಗಳು ದಡಕ್ಕೆ ಬಡಿಯುತ್ತಿರುವುದು ಅಲ್ಲಿಗೂ ಗೋಚರಿಸುತ್ತ ಇತ್ತು.
ಹಾಗೆ ನಿಂತುಬಿಡುತ್ತಿದ್ದವೇನೊ, ಆದರೆ ಅವನು ಬಿಡಲಿಲ್ಲ,
'ಸಾರ್ ಇಷ್ಟು ದೂರ ಬಂದಿರುವೆವು,  ಕೆಳಗೆ ಒಂದು ಪಾರ್ಕ್ ಇದೆ ನೋಡಿ ಹೋಗೋಣಾ'
ನಮಗೆಲ್ಲ ಅನುಮಾನ ಆಗಲೇ ಕತ್ತಲಾಗುತ್ತ ಬಂದಿದೆ ಮತ್ತೆಂತ ಪಾರ್ಕ್ ಎಂದು,
ಆದರೆ ಅವನು ಬಿಡಲೊಲ್ಲ.ಅವನ ಬಲವಂತಕ್ಕೆ ಸರಿ ಎನ್ನುತ್ತ ಅವನ ಹಿಂದೆ ಹೊರಟೆವು.
'ಅಯ್ಯೋ ಅದೇನೊ ಗಿಡಗಳ ನಡುವೆ ನಿಂತಿರುವುದು ಹುಲಿಯಾ?"
ಆತಂಕ ಪಡುವದರಲ್ಲಿ ತಿಳಿಯಿತು ಅಲ್ಲಲ್ಲಿ ಹುಲಿ, ಚಿರತೆ, ಮುಂತಾದ ಬೊಂಬೆಗಳನ್ನು ಮಾಡಿ ನಿಲ್ಲಿಸಿದ್ದಾರೆ ಪೊದೆಗಳ ನಡುವೆ , ಅದು ಕತ್ತಲಲ್ಲಿ ನಿಜವಾದ ಹುಲಿಯೆ ಎಂದು ಭ್ರಮೆ ಮೂಡಿಸುತ್ತಿದೆ.

ಮತ್ತು ಕೆಳಗೆ ಹೋದಾಗ ಅಲ್ಲಿ ಇದ್ದದ್ದು ಒಂದು 'ಭೂತ ಬಂಗಲೆ' , ಆದರೆ ಯಾರು ಹೆದರಲಿಲ್ಲ ಬಿಡಿ, ಅಲ್ಲಿದ್ದ ಎಲ್ಲರೂ 'ಆಪ್ತಮಿತ್ರ' ಸಿನಿಮಾವನ್ನು ಒಂದಕ್ಕಿಂತ ಜಾಸ್ತಿ ಸರಿ ನೋಡಿದವರೆ. ಸಮಾದಿಯ ಮೇಲೆ ಕುಳಿತು ಫೋಟೊ ತೆಗೆಸಿಕೊಂಡೆವು. ಪೂರ್ಣ ಕತ್ತಲಾವರಿಸಿತು,
ಹಿಂದಕ್ಕೆ ಹೊರಟಾಗ ನಿಜವಾದ ಸಮಸ್ಯೆ ಎದುರಾಯಿತು. ವನದ ಮಧ್ಯದ ಕಾಲುದಾರಿ. ಯಾರ ಹತ್ತಿರವು ಬ್ಯಾಟರಿ ಸಹ ಇಲ್ಲ. ಬಳಿಯಿಂದ ಮೊಬೈಲ್ ನಿಂದ ಬರುತ್ತಿದ ಬೆಳಕು. ಕತ್ತಲಲ್ಲಿ ಯಾವುದಾದರು ಪ್ರಾಣಿ ಬಂದರೆ ಎನ್ನುವ ಭಯ. ಹಾಗೆ ನಡೆದು ಬಂದು ಮುಂಬಾಗ ತಲುಪಿದೆವು.
ಅಲ್ಲಿದ್ದ ಉಗ್ರನರಸಿಂಹನ ದೇವಾಲಯದ ಒಳಗೆ ಹೋಗಿ ನಮಸ್ಕರಿಸಿ, ಮತ್ತೆ ಬಂದು ವಾಹನ ಏರಿ ಹೊರಟಿದ್ದು 'ನಮ್ಮ ಮನೆಗೆ' ಎಂದರೆ ಸಾಗರದ ಕಡೆಗೆ.
ಜೋಗ್ ಮಾರ್ಗವಾಗಿ , ಸುಮಾರು   ತೊಂಬತ್ತು ಕಿ.ಮೀ ದೂರ ಕ್ರಮಿಸಿ ಸಾಗರ ತಲುಪುವಾಗ ಆಗಲೇ ರಾತ್ರಿ ಒಂಬತ್ತು ಗಂಟೆ ದಾಟಿತ್ತು. ಮುಖ್ಯರಸ್ತೆಯಲ್ಲಿದ್ದ 'ಪವಿತ್ರ ಹೋಟೆಲ್ ' ಬಳಿ ವಾಹನ ನಿಲ್ಲಿಸಿ ಊಟ ಮುಗಿಸಿ. ನಮ್ಮ ಲಾಡ್ಜ್ ತಲುಪಿದೆವು.
ಮಲಗಿ ಎರಡೇ ನಿಮಿಶ ಎಲ್ಲರೂ ನಿದ್ದೆಗೆ ವಶ.

2 comments:

  1. ಇಡುಗುಂಜಿ ಹಾಗು ಅಪ್ಸರಕೊಂಡ ಪ್ರವಾಸ ಕಥನ ಕಳೆಗಟ್ಟಿದೇ.
    ಅಪ್ಸರಕೊಂಡದ ಬಗ್ಗೆ ಗೆಳೆಯರೊಬ್ಬರು ಹಿಂದೊಮ್ಮೆ ನನಗೆ ಮೇಲ್ ಕಳುಹಿಸಿದ ನೆನಪು ಜಾಲಾಡುತ್ತೇನೆ ಸಿಕ್ಕರೆ ನಿಮಗಾಗಿ ಮರು ಪ್ರಕಟಿಸುತ್ತೇನೆ.

    ReplyDelete
  2. ಬದರೀನಾಥ್ ಸಾರ್,
    ವಂದನೆಗಳು, ಹಾಗೆ ಮೇಲ್ ಇದ್ದಲ್ಲಿ ಪ್ರಕಟಿಸಿ, ಅಪ್ಸರಕೊಂಡ, ಪಕ್ಕದ ಗುಡ್ಡ, ಅಲ್ಲಿಯ ಹಳೆಯ ಬಂಗಲೆ, ರಸ್ತೆಯ ಪಕ್ಕಕ್ಕೆ ಇರುವ ನರಸಿಂಹ ದೇವಾಲಯ ಎಲ್ಲವೂ ಕುತೂಹಲ ಹುಟ್ಟಿಸುತ್ತದೆ ಆದರೆ ಹೆಚ್ಚಿನ ವಿವರಗಳಿಲ್ಲ.

    ReplyDelete

enter your comments please