ಜೀವನ ಅವಲೋಕನ
ಕೃಷ್ಣ ..ಕೃಷ್ಣ ..ಕೃಷ್ಣ (16) - ಜೀವನ ಅವಲೋಕನ
ಇಲ್ಲಿಯವರೆಗೂ..
ಗಣೇಶ
“ಕೃಷ್ಣ ನಿನ್ನ ಮೇಲೆ ಅಪಾದನೆಯೊಂದಿದೆ, ನೀನು ಮನಸು ಮಾಡಿದ್ದರೆ ಮಹಾಭಾರತದ ಯುದ್ದ ತಡೆಯ ಬಹುದಿತ್ತು. ನೀನು ನಿನ್ನ ದ್ವಾರಕೆಯ ಜನರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದೆ ನಿನಗೆ ಆಗುವ ಮಾನ ಅಪಮಾನಗಳನ್ನು ಲೆಕ್ಕಿಸಲಿಲ್ಲ. ಜರಾಸಂದ ಬಂದಾಗ ಹೇಡಿ ಎನ್ನುವ ಬಿರುದು ಬರುವಂತಿದ್ದರು ಜನರಿಗೆ ತೊಂದರೆಯಾಗಬಾರದೆಂದು ಓಡಿ ಹೋದೆ, ಹಾಗೆ ಮತ್ತೊಮ್ಮೆ ಅವನು ಬರುವದರಲ್ಲಿ ಮದುರೆಯಿಂದ ದ್ವಾರಕೆಗೆ ನಗರವನ್ನೆ ಜನರ ಸಮೇತ ಸಾಗಿಸಿದೆ. ದ್ವಾರಕೆಯನ್ನು ರಕ್ಷಿಸಿದೆ, ಆದರೆ ಮಹಾಭಾರತ ಯುದ್ದವನ್ನು ನಡೆಯಲು ಬಿಟ್ಟು ಲಕ್ಷ ಲಕ್ಷ ಜನರ ಸಾವಿಗೆ ಕಾರಣನಾದೆ”
ರಾಧೆಯ ನೆನಪಿನಲ್ಲಿದ್ದ ಕೃಷ್ಣನಿಗೆ ಗಣೇಶ ಮಾಡಿದ ಅಪಾದನೆ ಅರ್ಥಮಾಡಿಕೊಳ್ಳಲು, ಮನಸಿನ ಲಹರಿ ಬದಲಾಗಲು ಸಮಯಾವಾಕಾಶ ನೀಡುವಂತೆ ಗಣೇಶ ಮೌನವಾಗಿ ಕೃಷ್ಣನನ್ನು ನೋಡುತ್ತಿದ್ದ.
ಮುಂದೆ ಓದಿ..
ಕೃಷ್ಣ
“ಇಲ್ಲ ಗಣೇಶ ಅವೆಲ್ಲ ಕಲ್ಪಿತ ವಾದಗಳು. ನೀನು ಮೊದಲೊಮ್ಮೆ ಕೇಳಿದೆ ನಾನು ಯಾದವರ ಕಲಹ ತಡೆಯಲಿಲ್ಲ ಎಂದು ಈಗ ಕೇಳುತ್ತಿರುವೆ ದ್ವಾರಕೆಯ ಜನರನ್ನು ರಕ್ಷಿಸಿದೆ ಮಹಾಭಾರತ ಯುದ್ದ ತಡೆಯಲಿಲ್ಲ ಎಂದು. ನಾನು ಯಾವಾಗಲು ಯುದ್ದ ತಡೆಯಲು ಪ್ರಯತ್ನಿಸಿದೆ, ದುರ್ಯೋಧನನಲ್ಲಿ ಅದಕ್ಕಾಗಿ ರಾಯಭಾರಿಯಾಗಿ ಹೋದೆ ಆದರೆ ಅಲ್ಲಿ ಅದು ಸುಖಾಂತ್ಯವಾಗುವ ಯಾವ ಲಕ್ಷಣವು ಕಾಣಲಿಲ್ಲ. ಕೌರವರೆ ಆಗಲಿ ಪಾಂಡವರೆ ಆಗಲಿ ತಮ್ಮ ನಿರ್ಧಾರದಿಂದ ಹೆಜ್ಜೆ ಹಿಂದೆ ಇಡಲು ಸಿದ್ದವಿರಲಿಲ್ಲ. ಹಾಗಾಗಿ ಯುದ್ದಕ್ಕೆ ಸಿದ್ದವಾಗಲೆ ಬೇಕಿತ್ತು. ಮತ್ತೆ ಮಧ್ಯದಲ್ಲಿ ಅರ್ಜುನ ನಿಂತು ನಾನು ಯುದ್ದ ಮಾಡುವದಿಲ್ಲ ಅನ್ನುವಾಗ ಅವನನ್ನು ಬಿಟ್ಟಾದರು ಭೀಮ ನಕುಲ ಸಹದೇವ ಮುಂತಾದವರೆಲ್ಲ ಯುದ್ದಕ್ಕೆ ಸಿದ್ದರಾಗುತ್ತಿದ್ದರು, ಯುದ್ದವಂತು ತಪ್ಪುತ್ತಿರಲಿಲ್ಲ, ಆದರೆ ಅರ್ಜುನನ ಹೊರತುಪಡಿಸಿದ್ದರೆ, ಕರ್ಣನಂತ ಯೋಧನನ್ನು ಎದುರಿಸಲು ಪಾಂಡವರಿಗೆ ಸಾದ್ಯವಿರಲಿಲ್ಲ, ಯುದ್ದವಂತು ತಪ್ಪುತಿರಲಿಲ್ಲ ಆದರೆ ನ್ಯಾಯ ಎಂದು ಅಂದುಕೊಂಡಿರುವ ಪಕ್ಷಕ್ಕೆ ಸೋಲಾಗುತ್ತಿತ್ತು. ಧರ್ಮ ಎಂದು ನಾವು ನಂಬಿದ ಕಡೆ ಸೋಲಾಗುತ್ತಿತ್ತು, ಹಾಗಾಗಿ ಅರ್ಜುನ ಯುದ್ದ ಮಾಡುವದಿಲ್ಲ ಎನ್ನುವಾಗಲು ನಾನು ಅವನನ್ನು ಪ್ರೋತ್ಸಾಹಿಸಿ ಯುದ್ದಕ್ಕೆ ನಿಲ್ಲಿಸಿದೆ”
ಗಣೇಶ ಸುಮ್ಮನೆ ಕುಳಿತಿದ್ದ.
ಕೃಷ್ಣ ಮುಂದುವರೆಸಿದ
“ಕಡೆಗೆ ನನ್ನವರು ಅನ್ನುವ ಯಾದವರನ್ನು ಅಷ್ಟೆ ಅಂತರ್ಯುದ್ದ ಆಗದಂತೆ ಎಷ್ಟೋ ತಡೆದೆ ಆದರೆ ಅವರಲ್ಲಿ ಒಬ್ಬನನ್ನು ಕಂಡರೆ ಮತ್ತೊಬ್ಬನಿಗೆ ದ್ವೇಷ ಅದು ಯಾವ ಮಟ್ಟಿಗೆ ಎಂದರೆ ಅವರವರಲ್ಲೆ ಹೋರಾಡಿ ಸಾಯುವಷ್ಟು , ಬಹುಶಃ ನನ್ನವರ ಅಂತರ್ಯುದ್ದ ಪ್ರಾರಂಭವಾದಂತೆ ನನಗೆ ಅನ್ನಿಸಿತು, ನಾನು ಜೀವನದಲ್ಲಿ ಸೋಲುತ್ತಿದ್ದೇನೆ ಅಂತ. ನನಗೆ ಯಾವ ಯುದ್ದವನ್ನು ತಡೆಯಲು ಆಗಲಿಲ್ಲ ಅನ್ನಿಸಿತು. ಕೆಲವರು ಅನ್ನುತ್ತಿರುವುದು ನನ್ನ ಕಿವಿಗೆ ಹಿಂದೆಲ್ಲ ಬಿದ್ದಿತ್ತು, ಭೂಮಿಯ ಭಾರ ಇಳಿಸುವದಕ್ಕಾಗಿ ನಾನು ಜನಿಸಿದ್ದೇನೆ ಎಂದು ಅದು ನಿಜವೇನೊ ಎಂದು ನನಗು ಅನ್ನಿಸಿ ದುಃಖವೆನಿಸಿತು...”
ಕೃಷ್ಣ ತನ್ನ ಮಾತು ನಿಲ್ಲಿಸಿದ, ಗಣೇಶ ಪುನಃ ಕೇಳಿದ
“ಅಂದರೆ ನಿನ್ನ ಅವತಾರ ನಿರರ್ಥಕ ಎಂದು ನಿನಗನಿಸಿದೆಯೆ ಕೃಷ್ಣ, ನೀನು ಬಂದ ಉದ್ದೇಶ ನೆರವೇರಲಿಲ್ಲವ ?”
ಕೃಷ್ಣ ನಗುತ್ತ
“ನಿರರ್ಥಕ ಅನಿಸಲು ಹೇಗೆ ಸಾದ್ಯ ಗಣೇಶ?. ಜನ ಹೇಳುವಂತೆ ನನ್ನ ಹುಟ್ಟೆ ಭೂಮಿಯ ಭಾರ ಕಡಿಮೆ ಮಾಡಲು ಎನ್ನುವದಾದರೆ ಅದು ನೆರವೇರಿತು, ಅಥವ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಅನ್ನುವದಾದರೆ ಅದು ನೆರವೇರಿತು. ಜನರಿಗೆ ಹಿಂಸಕರಾಗಿದ್ದ ರಾಜರುಗಳ ಸೈನಿಕರ ವಂಶ ಬಹಳಷ್ಟು ನಾಶವಾಯಿತು.
ನಿನಗೆ ತಿಳಿಯದು ಗಣೇಶ. ಯುದ್ಧದ ಪಾಡಿಗೆ ಯುಧ್ದನಡೆಯುತ್ತಿತ್ತು ಆದರೆ ಯುದ್ಧಕ್ಕೆ ಸಂಬಂಧ ಇಲ್ಲದ ರೈತ ಅವನ ಪಾಡಿಗೆ ನೇಗಿಲು ಹಿಡಿದು ಉಳಿಮೆ ಮಾಡುತ್ತಿದ್ದ. ಗೊಲ್ಲರವನು ತನ್ನ ಪಾಡಿಗೆ ಪಶುಪಾಲನೆಯಲ್ಲಿ ತೊಡಗಿದ್ದ, ಏನಿದ್ದರು ಯುದ್ಧದಲ್ಲಿ ನೇರಭಾಗವಹಿಸಿದವರಿಗಷ್ಟೆ ಯುದ್ದದ ಬಿಸಿ ತಟ್ಟಿತು, ಯುದ್ಧದಲ್ಲಿ ಭಾಗವಹಿಸಿದವರ ಮನೆಯಲ್ಲಿ ಮಾತ್ರವೆ ಅಳುವಿನ ಶಬ್ಧ ಕೇಳಿಬರುತ್ತಿತ್ತು. ಭಾರತವನ್ನು ಓದುವರೆಲ್ಲ ಯುದ್ದವ ವಿವರವನ್ನು, ಅದರಲ್ಲಿ ಬಾಗವಹಿಸಿ ಕಷ್ಟ ನಷ್ಟ ಪಟ್ಟವರ ಕತೆಗಳನ್ನು ಓದುತ್ತ ಆಗ ಪ್ರಪಂಚವೆ ಆಗಿತ್ತು ಅಂದುಕೊಳ್ಳುವುದು ಸಹಜ ಆದರೆ ಯುದ್ಧದ ಹೊರತಾದ ಸಾಧಾರಣ ಜೀವನ ಎಂದಿನಂತೆ ನಡೆದೆ ಇತ್ತು”
ಗಣೇಶ
“ಕೃಷ್ಣ ನಿನಗೆ ಎಂದು ತಪ್ಪು ಮಾಡಿದೆ ಅನ್ನಿಸಲಿಲ್ಲವೆ ಅಥವ ನಿನ್ನ ನಿರ್ಧಾರ ತಪ್ಪು ಅನಿಸಲಿಲ್ಲವೆ, ಆಗಿನ ಪರಿಸ್ಥಿತಿ ಬಿಡು ಈಗ ಶಾಂತವಾಗಿ ಕುಳಿತು ಯೋಚಿಸಿದಾಗ ಏನು ಅನಿಸುತ್ತೆ ಹೇಳು”
ಕೃಷ್ಣ ಶಾಂತವಾಗಿದ್ದ. ಅವನ ಕಣ್ಣುಗಳು ದೂರದ ದಿಗಂತದತ್ತ ನೆಟ್ಟಿತ್ತು. ರಾತ್ರಿ ಕಳೆದು ಸೂರ್ಯ ಹೊರಬರುವದರ ಸಂಕೇತ ಎನ್ನುವಂತೆ ಆಕಾಶದಲ್ಲಿ ನಸುಗೆಂಪು ಹರಡುತ್ತ ಸಮುದ್ರದ ನೀರೆಲ್ಲ ಕೆಂಪಾಗುತಿತ್ತು . ಅವನು ಯೋಚಿಸುತ್ತ ನಿಧಾನಕ್ಕೆ ನುಡಿದ
“ಹೌದು ಗಣೇಶ, ನನ್ನ ಮೊದಲ ರಾಜಕೀಯ ನಿರ್ಧಾರವೆ ತಪ್ಪಾಯಿತೇನೊ ಅನ್ನಿಸುತ್ತೆ. ಅಂದರೆ ನಾನು ಕಂಸನನ್ನು ಕೊಂದಿದ್ದು ತಪ್ಪು ಅನ್ನಿಸುತ್ತೆ ಒಮ್ಮೊಮ್ಮೆ”
ಗಣೇಶ ಬೆಚ್ಚಿಬಿದ್ದ, ನುಡಿದ.
“ಇದೇನು ಕೃಷ್ಣ ನಿನ್ನ ನುಡಿ. ನಿನ್ನ ಹುಟ್ಟು ಆದುದ್ದೆ ಕಂಸನನ್ನು ಕೊಲ್ಲಲು ಎಂದು ಎಲ್ಲರು ನಂಬಿದ್ದಾರೆ, ಅವನನ್ನು ಕೊಂದು ನೀನು ನಿನ್ನ ತಂದೆ ತಾಯಿಯರನ್ನು ಸೆರೆಮನೆಯಿಂದ ಬಿಡಿಸಿದ ಎಂದು ನಿನ್ನನ್ನು ಕೊಂಡಾಡುತ್ತಾರೆ. ದುಷ್ಟನಾದ ಅವನನ್ನು ಕೊಂದಿದ್ದು ಭೂಭಾರ ಕಡಿಮೆ ಆಯಿತೆಂದು ಹೇಳುತ್ತಾರೆ ಹೀಗಿರುವಾಗ ಆ ನಿರ್ಧಾರವೆ ತಪ್ಪು ಅನ್ನುತ್ತ ನನ್ನಲ್ಲಿ ಅಚ್ಚರಿ ಮೂಡಿಸುತ್ತ ಇದ್ದೀಯ”
ಗಣೇಶನಿಗೆ ಕೃಷ್ಣ ಏನು ಹೇಳುವನೊ ಎನ್ನುವ ಕುತೂಹಲ
ಕೃಷ್ಣ ನುಡಿದ
“ಗಣೇಶ ಎಲ್ಲರಿಗು ಹಾಗೆ ಅನ್ನಿಸುವುದು ಸಹಜ. ಬಹುಶಃ ನಾನು ಹಾಗೆ ನಂಬಿದ್ದೆ ಅನ್ನಿಸುತ್ತೆ. ಆದರೆ ನೋಡು ಗಣೇಶ ಒಮ್ಮೆ ನನ್ನ ಜೀವನದ ಘಟನೆಗಳನ್ನು ಅವಲೋಕಿಸು. ಕಂಸನನ್ನು ಕೊಂದ ಒಂದು ನಿರ್ಧಾರವೆ ನನ್ನ ಪೂರ್ಣ ಜೀವನದ ಆಗುಹೋಗುಗಳನ್ನು ರೂಪಿಸಿದೆ ಅಲ್ಲವೆ ನಿನಗೆ ಅರ್ಥವಾಗುತ್ತಿಲ್ಲವೆ. ಮಥುರೆಯ ಪ್ರತಿ ಪ್ರಜೆಯು ನಾನು ಬಂದು ಕಂಸನನ್ನು ಕೊಲ್ಲುವನೆಂದು ಕಾಯುತ್ತಿದ್ದ. ನನ್ನ ಹಿರಿಯರು ತಂದೆ ತಾಯಿಯರು ಕಡೆಗೆ ಹೋಗಲಿ ಕಂಸ ಕೂಡ ನಾನು ಹುಟ್ಟಿ ಬಂದು ಅವನನ್ನು ಕೊಲ್ಲುವೆ ಎನ್ನುವ ಭಾವನೆಯಲ್ಲಿ ಕಾಯುತ್ತಿದ್ದ. ಹಾಗಿರುವಾಗ ನಾನು ಸಹ ಹಾಗೆ ಅಂದುಕೊಂಡುಬಿಟ್ಟೆ. ಕಂಸನನ್ನು ಕೊಲ್ಲುವುದು ನನ್ನ ಜೀವನದ ಉದ್ದೇಶ ಅಂದುಕೊಂಡುಬಿಟ್ಟೆ ಆದರೆ ಅದರಿಂದ ಆದ ಪರಿಣಾಮಗಳನ್ನು ನೋಡು. ಕಂಸನನ್ನು ಕೊಂದೆ ಎಂದ ತಕ್ಷಣ ಕಂಸನ ಮಾವನಾದ ಜರಾಸಂಧ ನನ್ನ ವೈರಿಯಾದ. ಜರಾಸಂಧನ ಮಗಳನ್ನು ಕಂಸ ಮದುವೆಯಾಗಿದ್ದವನು ಅಲ್ಲವೆ. ಅಲ್ಲದೆ ಕಂಸ ಜರಾಸಂಧನ ಪ್ರಿಯ ಶಿಷ್ಯನಾಗಿದ್ದ. ಹಾಗಾಗಿ ಅವನನ್ನು ನಾನು ಎದುರಿಸಬೇಕಾಯಿತು. ನನ್ನ ಜೀವ ಉಳಿಸಿಕೊಳ್ಳಲು ಕೊಲ್ಲಬೇಕಾಯಿತು. ನಂತರ ಶಿಶುಪಾಲ ದಂತವಕ್ತ್ರರನ್ನು ವಿಷಯವು ಹಾಗೆ ಅಲ್ಲವೆ.
ಕಂಸನ ಮರಣದ ಕಾರಣಕ್ಕೆ ನನ್ನ ಹೆಸರು ಮಥುರೆಯಿಂದ ಹೊರಜಗತ್ತಿಗೆ ಪ್ರಚಾರವಾಯಿತು. ನನಗೆ ಒಂದು ರಾಜಕೀಯ ಸ್ಥಾನ ದೊರಕಿತು. ನನ್ನ ಎಲ್ಲ ನಿರ್ಧಾರಗಳು ಅನಿವಾರ್ಯವಾಗಿ ಈ ಸ್ಥಿತಿಯೊಂದಿಗೆ ತೆಗೆದುಕೊಳ್ಳುವಂತಾಯಿತು. ಮಥುರೆಯಲ್ಲಿ ನನ್ನ ಹೆಸರು ನಿಂತಿದ್ದು ನಂತರ ಪ್ರಚಾರವಾಗಿದ್ದು ಸಹ ಕಂಸನನ್ನು ಕೊಂದ ಹಿನ್ನಲೆಯೊಂದಿಗೆ . ಇಲ್ಲದಿದ್ದರೆ ಗೋಕುಲದಲ್ಲಿ ಬೆಳೆದ ಸಾದರಣ ಹಳ್ಳಿಯ ಗೊಲ್ಲರ ಹುಡುಗ ಅಷ್ಟು ಬೆಳೆಯಲು ಸಾದ್ಯವೆ ಇರಲಿಲ್ಲ. ಒಮ್ಮೆ ನಾನು ಕಂಸನನ್ನು ಕೊಲ್ಲದಿದ್ದರೆ ನನ್ನ ಪರಿಸ್ಥಿತಿ ಈ ರೀತಿ ಇರುತ್ತಲೆ ಇರಲಿಲ್ಲ. ನನ್ನ ಜೀವನದ ದಿಕ್ಕೆ ಬೇರೆ ಇರುತ್ತಿತ್ತು, ಹೊರಗಿನ ರಾಜಕೀಯದಲ್ಲಿ ಸಹ ನನ್ನ ಕೈವಾಡ ಇರಲು ಸಾದ್ಯವಿರಲಿಲ್ಲ ಅಲ್ಲವೆ ?”
ಗಣೇಶ ಅಚ್ಚರಿಯಿಂದ ಕೇಳಿದ
“ಆದರೆ ಕಂಸನನ್ನು ಕೊಲ್ಲದಿದ್ದರೆ ಅವನೆ ನಿನ್ನನ್ನು ಹುಡುಕಿ ಕೊಲ್ಲುತ್ತಿದ್ದ ಅಲ್ಲವೆ ಆಗ ನಿನಗೆ ಜೀವನ ಎಲ್ಲಿರುತ್ತಿತ್ತು”
ಕೃಷ್ಣ
“ನಿನ್ನ ಮಾತು ಒಂದು ಮಟ್ಟಕ್ಕೆ ನಿಜ ಗಣೇಶ. ಆದರೆ ನಾನೊಂದು ಪ್ರಯತ್ನ ಪಟ್ಟಿದ್ದರೆ ಹೇಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ. ನಾನು ಅವನನ್ನು ಕೊಲ್ಲುವದಕ್ಕಿಂತ ನೇರವಾಗಿ ಹೋಗಿ ಅವನನ್ನೆ ಬೇಟಿಯಾಗಿ ನನಗೇನು ನಿನ್ನ ಮೇಲೆ ದ್ವೇಷವಿಲ್ಲ. ನಿನ್ನನ್ನು ಕೊಲ್ಲುವ ಉದ್ದೇಶವು ಇಲ್ಲ ಇವೆಲ್ಲ ಯಾರೊ ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ಹೇಳಿ ಪ್ರಯತ್ನ ಪಡಬಹುದಿತ್ತು. ಅವನು ನಂಬದಿದ್ದರು ಸಹ ಕಡೆಗೊಮ್ಮೆ ನನ್ನ ತಂದೆ ತಾಯಿಯರನ್ನು ಸೆರೆಮನೆಯಿಂದ ಬಿಟ್ಟು ಬಿಡು ಅವರ ಬದಲಿಗೆ ನಾನು ಸೆರೆಯಲ್ಲಿರುತ್ತೇನೆ. ಆಗ ನಿನ್ನನ್ನು ಕೊಲ್ಲಲ್ಲು ಆಗುವದಿಲ್ಲ ಎಂದು ನಂಬಿಸಿದ್ದರೆ, ಕಡೆಗೆ ನನ್ನ ತಂದೆ ತಾಯಿಯರನ್ನು ಬಿಡುತ್ತಿದ್ದನೊ ಏನೊ!. ನಿಧಾನವಾಗಿ ಅವನ ಮನಸನ್ನು ಶಾಂತಗೊಳಿಸಿ ಅವನ ಮನಸನ್ನು ಒಲಿಸಿಕೊಂಡಿದ್ದರೆ ನಂತರದ ಪರಿಸ್ಥಿತಿಯೆ ಬೇರೆ ಇರುತ್ತಿತ್ತೇನೊ ಅನ್ನಿಸುತ್ತೆ. ಜರಾಸಂಧನ ತಂಟೆಯಾಗಲಿ, ಶಿಶಿಪಾಲನ ದ್ವೇಷವಾಗಲಿ ಇರುತ್ತಿರಲಿಲ್ಲ. ಕಡೆಗೆ ಮಹಾಭಾರತ ಯುದ್ದಕ್ಕೆ ನನ್ನ ಅಗತ್ಯವು ಬರುತ್ತಿರಲಿಲ್ಲವೊ ಏನೊ”
ಗಹಗಹಿಸಿ ನಕ್ಕ ಕೃಷ್ಣ, ಮುಂದುವರೆಸಿದ
“ಕಡೆಗೆ ಅವನನ್ನು ಒಪ್ಪಿಸಿ ಹೊರಟಿದ್ದರೆ ನನಗೆ ಹಿಂದಿರುಗಲು ಗೋಕುಲ ಹಾಗು ಅಲ್ಲಿಯ ಮುಗ್ದ ಗೋಪಾಲರು ಇದ್ದೆ ಇದ್ದರು. ಆದರೆ ಅಷ್ಟು ಯೋಚಿಸುವ ವಯಸ್ಸು ನನ್ನದಿರಲಿಲ್ಲವೊ ಏನೊ, ಆಗಿನ್ನು ನನಗೆ ಹದಿನೇಳು ಹದಿನೆಂಟು ಇರಬಹುದು. ಮಥುರೆಯಿಂದ ಬಂದ ಸಾತ್ಯಕಿ ಮುಂತಾದವರು ಹಿರಿಯರು, ವಯಸಾದವರು, ಕಂಸನ ತಂದೆ ಉಗ್ರಸೇನನಾಗಲಿ, ನನ್ನ ತಂದೆ ತಾಯಿಯಾಗಲಿ ಎಲ್ಲರದು ಒಂದೆ ಜಪ ನಾನು ಕಂಸನನ್ನು ಕೊಲ್ಲುವನೆಂದು. ಹಾಗಾಗಿ ನನ್ನ ಮನವು ಆ ಭಾವಕ್ಕೆ ಒಲಿಯಿತು.
ಮುಂದೆ ನನ್ನ ಜೀವನದ ಎಲ್ಲ ನಿರ್ಧಾರಗಳು, ಕಂಸನ ಕೊಲೆಯ ಹಿನ್ನಲೆಯಲ್ಲಿಯೆ ನಿರ್ಧಾರವಾಯಿತು ಅನ್ನಿಸುತ್ತೆ. ಅದಕ್ಕೆ ಅನ್ನಿಸುತ್ತೆ ಕಂಸನ ಕೊಲೆ ನನ್ನ ಜೀವನದಲ್ಲಿ ಸರಿಯಾದ ನಿರ್ದಾರ ಹೌದೊ ಅಲ್ಲವೊ ಎಂದು ಅನುಮಾನ ಕಾಡುತ್ತದೆ “
.
ಗಣೇಶ ಮತ್ತೆ ನುಡಿದ
“ಇಲ್ಲ ಕೃಷ್ಣ ಆಗಿನ ನಿನ್ನ ನಿರ್ಧಾರವೆ ಸರಿ , ಏಕೆಂದರೆ ಕಂಸನಾದರು ಸಾದರಣ ದುಷ್ಟನಾಗಿರಲಿಲ್ಲ. ತನ್ನ ರಾಜ್ಯದ ಜನರಿಗೆ ದುಸ್ವಪ್ನಃನಾಗಿದ್ದ, ತನ್ನ ಜೀವಭಯಕ್ಕಾಗಿ ಅವನು ಸಾವಿರಾರು ಮಕ್ಕಳ ಕೊಲೆ ಮಾಡಿಸಿದ್ದ. ತನ್ನ ತಂಗಿ ಅವಳ ಗಂಡನನ್ನು ಕೊಲ್ಲಲು ನೋಡಿ ಕಡೆಗೆ ಸೆರೆಗೆ ತಳ್ಳಿದ.ಅಧಿಕಾರಕ್ಕೆ ಬರಲು ತನ್ನ ಹಿಂದೆ ಹುಟ್ಟಿದ ತನ್ನ ಅಣ್ಣಂದಿರನ್ನೆಲ್ಲ ಕೊಲೆ ಮಾಡಿಸಿ, ತನ್ನ ಸ್ವಂತ ತಂದೆಯನ್ನೆ ಸೆರೆಮನೆಗೆ ತಳ್ಳಿದ್ದ, ಇಷ್ಟೆಲ್ಲ ಅವಗುಣ ಹೊಂದಿದ್ದವನನ್ನು ಕೊಂದಿರುವದಕ್ಕಾಗಿ ನೀನು ಪಶ್ಚಾತಾಪ ಪಡಬೇಕಿಲ್ಲ”
ಕೃಷ್ಣ
“ಗಣೇಶ, ನಾನು ಪಶ್ಚಾತಾಪ ಪಡಲಿಲ್ಲ, ಅವನ ಕುಕೃತ್ಯಗಳಿಗೆ ಅವನಿಗೆ ಸರಿಯಾದ ಶಿಕ್ಷೆ ಎಂದರೆ ಸಾವೆ ಆಗಿತ್ತು, ಆದರೆ ನಾನು ಹೇಳಿದ್ದು ಆ ಘಟನೆ ನನ್ನ ಜೀವನದ ಮೇಲೆ ಪರಿಣಾಮ ಮಾಡಿತ್ತು, ನನ್ನ ಜೀವನದ ದಿಕ್ಕನ್ನೆ ನಿರ್ಧರಿಸಿತು ಎಂದು ಅಷ್ಟೆ”
ಗಣೇಶ ಹಾಗು ಕೃಷ್ಣರ ನಡುವೆ ದೀರ್ಘ ನೀರವ ಮೌನವೊಂದು ನೆಲಸಿತು
ಮುಂದುವರೆಯುವುದು..
ಚಿತ್ರಕೃಪೆ : ಅವಲೋಕನ
No comments:
Post a Comment
enter your comments please