ಕೃಷ್ಣ..ಕೃಷ್ಣ..ಕೃಷ್ಣ.. (6)- ಶ್ರೀಕೃಷ್ಣ ಜನಿಸಿದ ಧರೆಯಲ್ಲಿ...
(೧೨-೦೬-೨೦೧೩)
ಗಣೇಶ
“ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಬ, ಕಂಸನಿಗೆ ‘ನಿನ್ನ ಮರಣ ದೇವಕಿಯ ಎಂಟನೆ ಮಗುವಿನಿಂದ ‘ ಎಂದು ಅಶರೀರವಾಣಿಯಾಯಿತು ಎನ್ನುವ ಬಗ್ಗೆ ಏನು ಹೇಳುವೆ?. ಇಲ್ಲಿಯವರೆಗು ಯಾರಿಗೆ ಆಗಲಿ ನಿನ್ನ ಮರಣ ಹೀಗೆ ಎನ್ನುವ ರಹಸ್ಯವನ್ನು ಸೃಷ್ಟಿ ಮೊದಲೆ ಬಿಟ್ಟುಕೊಡಲ್ಲ ಹಾಗಿರುವಾಗ ಕಂಸನಿಗೆ ಕೇಳಿದ ಅಶರೀರವಾಣಿ ಸತ್ಯವ?"
ಕೃಷ್ಣ
"ಗಣೇಶ, ಹಾಗೆ ನೋಡಿದರೆ ನಿನ್ನ ಅನುಮಾನಕ್ಕೆ ನಾನು ಉತ್ತರ ಕೊಡಬೇಕಾಗಿಯೆ ಇಲ್ಲ ಎಕೆಂದರೆ ನಾನು ಇನ್ನು ಆಗ ಹುಟ್ಟೆ ಇರಲಿಲ್ಲ. ಆದರು ಹೇಳುವೆ, ನನಗೆ ಅನ್ನಿಸುವಂತೆ ಆಗ ಮಥುರಾನಗರದಲ್ಲಿ ಯಾದವರ ನಡುವೆ ಗುಂಪುಗಳು ಹಾಗು ಪರಸ್ಪರ ಹೋರಾಟಗಳಿದ್ದವು, ಕಂಸನಿಗೆ ಅಸಂಖ್ಯಾತ ವೈರಿಗಳಿದ್ದರು. ಕಂಸನ ಆಕ್ರಮಣವನ್ನು ತಡೆಯುವ ಶಕ್ತಿಯು ಸಣ್ಣಪುಟ್ಟ ರಾಜರುಗಳಿಗೆ ಇರಲಿಲ್ಲ.
ಆದರೆ ಕಂಸನಿಗಿದ್ದ ಕೆಲವು ದೋಷಗಳು ತೀರ ಹತ್ತಿರದವರಿಗೆ ಗೊತ್ತಿತ್ತು ಅದರಲ್ಲಿ ಅವನು ತನ್ನ ಸಾವಿಗೆ ಅತಿಯಾಗಿ ಹೆದರುವನು ಎಂಬುದು ಒಂದು. ಕಂಸನ ಈ ದುರ್ಬಲತೆಯನ್ನು ತಿಳಿದಿದ್ದ ಯಾರೊ ಅವನ ಶತ್ರುಗಳು ಈ ಅಶರೀರವಾಣಿಯ ಕತೆ ಹುಟ್ಟಿಹಾಕಿರಬಹುದು, ದೇವಕಿ ವಸುದೇವರ ಮದುವೆಯ ಗಲಾಟೆಯಲ್ಲಿ ಕಂಸನಿಗೆ ಕೇಳಿಸುವಂತೆ ಮಾಡಿರಬಹುದು. ಹೆದರಿದ ಕಂಸ ಜೀವಭಯದಿಂದ ತನ್ನನ್ನು ರಕ್ಷಿಸಿಕೊಳ್ಳುವತ್ತ ಗಮನಹರಿಸಿದ ಹಾಗಾಗಿ ಅವನಿಗೆ ತನ್ನ ಶತ್ರು ರಾಜ್ಯದ ಕಡೆ ಆಕ್ರಮಣ ಮಾಡುವ ಗಮನ ಕಡೆಯಾಯಿತು ಅನ್ನಿಸುತ್ತೆ. ಹಾಗಾಗಿ ಇದು ಒಂದು ಶತ್ರುಗಳ ಸಂಚು ಇರಬಹುದು ಎನ್ನುವುದು ನನ್ನ ಅಭಿಪ್ರಾಯ.
ಮತ್ತೊಂದು ಉಲ್ಲೇಖ ಕೆಲವರು ಹೇಳುವಂತೆ ಅಶರೀರವಾಣಿ ಅನ್ನುವದೆಲ್ಲ ಏನು ಇಲ್ಲ. ಕಂಸನಿಗೆ ದೇವಗುರು ನಾರದರು ಬಂದು ಸಾವಿನ ಬಗ್ಗೆ ತಿಳಿಸಿದರು ಎನ್ನುವುದು, ಈ ಸಂಭವನೀಯತೆ ಸತ್ಯಕ್ಕೆ ಹತ್ತಿರವಾದುದ್ದು ಅನಿಸುತ್ತಿದೆ” ಎಂದ ಕೃಷ್ಣ.
(೩೧-೦೭-೨೦೧೩)
ಗಣೇಶ ಸ್ವಲ್ಪ ನಗುತ್ತ
" ಕೃಷ್ಣ, ಕಂಸ ನಿನ್ನ ಬರುವಿಕೆಗೆ ಹೆದರಿದ, ನಿನ್ನ ಹುಟ್ಟಿಗೆ ಮೊದಲೆ ನಿನ್ನ ದ್ವೇಷ ಮಾಡಲು ಪ್ರಾರಂಬಿಸಿದ ಎಂದು ಕೊಳ್ಳೋಣ. ಆದರೆ ಅಂತಹ ಭಯವಿದ್ದವನು ನಿನ್ನ ತಾಯಿ ದೇವಕಿಯನ್ನು ಅಥವ ವಸುದೇವನನ್ನೆ ಕೊಲ್ಲ ಬಹುದಿತ್ತಲ್ಲ ಅವರನ್ನು ಅನಗತ್ಯ ಸೇರೆಯಲ್ಲಿಟ್ಟು ತನ್ನ ಸಾವನ್ನು ತಾನೆ ಏಕೆ ಕಾಯುತ್ತ ಕುಳಿತ? ಇದು ಗೊಂದಲ ಹುಟ್ಟಿಸುವದಿಲ್ಲವೆ. "
ಕೃಷ್ಣ
"ಗಣೇಶ ನಿನ್ನ ಅನುಮಾನ ಸಕಾರಣವಾಗಿದೆ, ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ಮಥುರೆಯ ಆಗಿನ ರಾಜಕೀಯ ಸ್ಥಿಥಿಯನ್ನು ನೀನು ಅರ್ಥಮಾಡಿಕೊಳ್ಳಬೇಕು. ಮಥುರೆಗೆ ಮಹಾರಾಜ ಎಂದು ಉಗ್ರಸೇನನನ್ನು ಕೂಡಿಸಿದ್ದರು ಆದರೆ ಅವನು ಅಧಿಕಾರವೆ ಇಲ್ಲದ ಹೆಸರಿಗೆ ರಾಜ . ಯಾದವರು ಎಂದು ಎಲ್ಲಡೆ ಪ್ರಸಿದ್ದರಾಗಿದ್ದರು ಸಹ , ಒಳ ಹೊಕ್ಕು ನೋಡಿದರೆ ಅವರಲ್ಲಿ ಹತ್ತು ಹಲವು ಗುಂಪುಗಳು, ಒಂದು ಗುಂಪಿಗು ಮತ್ತೊಂದಕ್ಕು ಬಿಡಿಸಲಾರದ ವೈಷಮ್ಯ. ಹಾಗಿದ್ದಾಗ ತನ್ನ ತಂದೆಯನ್ನು ಬದಿಗೆ ಸರಿಸಿ, ಗೃಹಬಂಧನದಲ್ಲಿರಿಸಿ ಸಿಂಹಾಸನ ಏರಿದ ಕಂಸ. ಅವನು ಸಿಂಹಾಸನ ಏರಿ ಪ್ರಭಲನಾಗಿದ್ದರು ಸಹ ಅವನ ರಾಜ್ಯದಲ್ಲಿ ಎಲ್ಲರನ್ನು ಎದಿರು ಹಾಕಿಕೊಳ್ಳಲು ಅವನಿಗೆ ಸಾದ್ಯವಿರಲಿಲ್ಲ. ವಸುದೇವನನ್ನು ದೇವಕಿಯನ್ನು ಕೊಂದಿದ್ದರೆ ಅವನ ಪರಿಸ್ಥಿತಿ ಮತ್ತಷ್ಟು ಹೀನವಾಗಿ ಸಂಕಟಕ್ಕೆ ಒಳಗಾಗುತ್ತಿದ್ದ. ಅವನ ಸ್ಥಾನಕ್ಕೆ ಕುತ್ತು ಬರುವ ಸಾದ್ಯತೆಗಳು ಅಗಾದವಾಗಿದ್ದು, ತನ್ನ ಜೀವ ಭಯವನ್ನು ಮೀರಿ ಅವರನ್ನು ಜೀವಂತ ಉಳಿಸಲೆ ಬೇಕಿತ್ತು"
ಗಣೇಶ ಕೊಂಚ ಸಂಕೋಚದಿಂದಲೆ ಕೇಳಿದ
"ಅದು ಸರಿ ಕೃಷ್ಣ ಆದರೆ ಅವನು ವಸುದೇವನನ್ನು ದೇವಕಿಯನ್ನು ಒಂದೆ ಸೆರೆಯಲ್ಲಿ ಏಕಿರಿಸಿದ, ಬೇರೆ ಬೇರೆ ಮನೆಗಳಲ್ಲಿ ಬಂದಿಸಿ ಇರಿಸಿದ್ದರೆ, ಅವನ ತಂಗಿಗೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ ಅಲ್ಲವೆ . ಹಾಗಾದಾಗ ದೇವಕಿಯ ಮಗನಿಂದ ಅವನಿಗೆ ಮರಣ ಎನ್ನುವುದು ಪೊಳ್ಳಾಗುತ್ತಿತ್ತು ಅನ್ನಿಸದೆ "
ಕೃಷ್ಣ ಅಚ್ಚರಿಯಿಂದ ಗಣಪನನ್ನು ನೋಡಿದ
"ಭಲೆ ಗಣೇಶ , ಪರವಾಗಿಲ್ಲ , ನೀನು ಇಷ್ಟು ಚುರುಕಾಗಿ ಯೋಚಿಸುತ್ತಿದ್ದೀಯಲ್ಲ. ಅದು ಬ್ರಹ್ಮಚಾರಿಯಾಗಿಯು . ಮೆಚ್ಚತಕ್ಕದೆ. ಬಹುಷಃ ತನಗಿದ್ದ ಜೀವಭಯದಲ್ಲಿ ಕಂಸನ ಮನಸ್ಸು ಚುರುಕಾಗಿರಲಿಲ್ಲ ಅನ್ನಿಸುತ್ತೆ,ಅವನ ಮಂದಮತಿಗೆ ಹೊಳೆದಿರಲಿಕ್ಕಿಲ್ಲ.
ಅವನ ಸುತ್ತ ಇದ್ದ ಅವನ ಹಿಂಬಾಲಕರು ಹಾಗು ಸಲಹೆ ಕೊಡುವರು ಸಹ ಹಾಗೆ ಇದ್ದರು ಅನ್ನಿಸುತ್ತೆ,
ಅಲ್ಲದೆ ದೇವಕಿ ಅವನಿಗೆ ಸ್ವಂತ ತಂಗಿ ಅಲ್ಲದಿದ್ದರು ಅವಳನ್ನು ಕಂಡರೆ ಅವನಿಗೆ ಅಪಾರ ಕರುಣೆ ಕಕ್ಕುಲತೆ ಇತ್ತಂತೆ ಹಾಗಾಗಿ ತನ್ನ ಗಂಡನ ಜೊತೆ ನೆಮ್ಮದಿಯಾಗಿರಲಿ ಎಂದು ಬಿಟ್ಟಿರಬಹುದು."
(01/08/13)
ಗಣೇಶ
"ಕೃಷ್ಣ .. ನೀನು ಹುಟ್ಟುವಾಗ ಹೊರಗೆ ದೊಡ್ಡ ಮಳೆ ಬರುತ್ತಿತ್ತು, ಎಲ್ಲಡೆಯು ಕತ್ತಲು, ಕಂಸ ಹಾಕಿದ ಬಲವಾದ ಕಾವಲು, ಅಷ್ಟಿದ್ದರು ಕಟ್ಟಿನ ಸುರಕ್ಷಿತ ಸೆರೆಮನೆಯಿಂದ ಹೊರಟು ಗೋಕುಲವನ್ನು ಸೇರಿಬಿಟ್ಟೆ, ಹರಿಯುತ್ತಿದ್ದ ಯಮುನಾ ನಿನ್ನ ತಂದೆಗೆ ದಾರಿ ಬಿಟ್ಟಳು, ತಲೆಯ ಮೇಲೆ ಆಧಿಶೇಷ ರಕ್ಷಣೆ ಕೊಡುತ್ತಿದ್ದ ಈ ಘಟನೆಗಳೆಲ್ಲ ನಿನಗೆ ನೆನಪಿದೆಯೆ"
ಕೃಷ್ಣ
"ನಾನು ಆಗಿನ್ನು ಹುಟ್ಟಿದ, ಕಣ್ಣು ತೆರೆಯದ ಕೂಸು , ಇಂತಹುವುದೆಲ್ಲ ನೆನಪಿರಲು ಹೇಗೆ ಸಾದ್ಯ, ಆದರೆ ಏನು ನಡೆದಿರಬಹುದು ಎನ್ನುವದನ್ನು ಕಲ್ಪಿಸಿಕೊಳ್ಳಬಲ್ಲೆ ಅಷ್ಟೆ. ಕಂಸ ಎಂತರ ಕ್ರೂರಿಯಾದರು, ಅವನ ವಿರುದ್ದ ಗುಂಪುಗಳು ಸದಾ ಸಕ್ರಿಯವಾಗಿದ್ದವು. ಅವನ ಬೆನ್ನ ಹಿಂದೆ ಅವನ ವಿರುದ್ದದ ದೇಶಕ್ಕೆ ಅನುಕೂಲವಾಗಬಲ್ಲ ಘಟನೆಗಳು ನಡೆಯುತ್ತಿದ್ದವು, ಕಂಸನ ಸ್ವಂತ ತಂದೆ ಉಗ್ರಸೇನನೆ ಕಂಸನಿಗೆ ವಿರುದ್ದವಾಗಿದ್ದ. ಹಾಗಿರುವಾಗ ನಾನು ಅಂತಹ ಭದ್ರವಾದ ಸೆರೆಯಿಂದ ಹೊರಬಂದುದ್ದು ಒಂದು ಪಿತೂರಿಯ ಬಾಗವಾಗಿತ್ತು. ಕಂಸನ ಮನದಲ್ಲಿ ಹೇಗೆ ತನ್ನ ಸಾವು ದೇವಕಿಯ ಎಂಟನೆ ಮಗನಿಂದ ಎಂದು ಅಚ್ಚುಹೊತ್ತಿತ್ತೊ, ಹಾಗೆ ರಾಜ್ಯದ ಜನವೆಲ್ಲ ನಂಬಿಹೋಗಿದ್ದರು. ದೇವಕಿಯ ಎಂಟನೆ ಮಗ ಬಂದು ಕಂಸನ ದುಷ್ಟ ಆಡಳಿತದಿಂದ ತಮ್ಮನ್ನು ಪಾರುಮಾಡುವನು ಎಂದು ಕಾಯುತ್ತಿದ್ದರು. ಶತ್ರು ಧಮನ ಮಾಡುವದರಲ್ಲಿ ಕಂಸ ಕುಖ್ಯಾತನಾಗಿದ್ದ. ಚಿಕ್ಕ ಮಕ್ಕಳನ್ನು ಬಿಡದೆ ಕೊಲ್ಲಿಸುತ್ತಿದ್ದ. ತನ್ನದೆ ಆದ ನಂಬುಗೆಯ ಒಂದು ಗುಂಪನ್ನು ಬೆಳೆಸಿ ಆಡಳಿತ ತನ್ನ ಕೈಯಲ್ಲೆ ಇಡಲು ಪ್ರಯತ್ನಪಡುತ್ತಿದ್ದ.
ಸರ್ವಾಧಿಕಾರಿಯ ಎಲ್ಲ ಲಕ್ಷಣಗಳು ಕಂಸನಲ್ಲಿದ್ದವು, ದೇಶದ ಜನರನ್ನು ತನ್ನ ಸೈನ್ಯದ ಭಯದಲ್ಲಿಟ್ಟಿದ್ದ, ಅವನಿಗೆ ಆಸರೆಯಾಗಿದ್ದವನು ಜರಾಸಂದ ಅವನ ಬಲದ ದೈರ್ಯದ ಮೇಲೆ ಕಂಸನ ರಾಜ್ಯಭಾರ ನಡೆಯುತ್ತಿತ್ತು.
ನಾನು ಈ ಎಲ್ಲವನ್ನು ಮೀರಿ ತಂದೆಯ ತಲೆಯ ಮೇಲೆ ಬುಟ್ಟಿಯಲ್ಲಿ ಕುಳಿತು, ಬಂದನದಿಂದ ಹೊರಗೆ ದಾಟಿ, ನದಿಯಲ್ಲಿ ಮತ್ತೊಂದು ದಡ ತಲುಪಿ ಗೋಕುಲವನ್ನು , ತಾಯಿ ಯಶೋದೆಯ ಮಡಿಲನ್ನು ಸೇರಿದೆ. ನನ್ನ ಆ ಪ್ರಯಾಣದ ಹಿಂದೆ ಸಾಕಷ್ಟು ಜನರ ಕೈವಾಡವಿದೆ, ಜೀವವನ್ನು ಒತ್ತೆ ಇಟ್ಟು ಆ ಕೆಲಸಕ್ಕೆ ಕೈ ಹಾಕಿದ್ದಾರೆ"
ಗಣೇಶ
"ನಿನ್ನನ್ನು ಹೊರಗೆ ಕಳಿಸುವುದು ನಿನ್ನ ಹೆತ್ತ ತಾಯಿಗೆ ಕಷ್ಟವಾಗಲಿಲ್ಲವೆ, ಆಕೆ ನಿನ್ನನ್ನು ತೊರೆದು ಹೇಗೆ ಇದ್ದಳು"
(೦೨-೦೮-೨೦೧೩)
ಕೃಷ್ಣ
" ಆಗ ತಾನೆ ಹೆತ್ತ ಮಗುವನ್ನು ಅಗಲುವುದು ಯಾರಿಗೆ ಆಗಲಿ ದುಃಖವೆ , ಇನ್ನು ನನ್ನ ತಾಯಿ ದೇವಕಿಗೆ ಸಂಕಟವಾಗದಿರುವುದೆ?. ಆದರೆ ತನ್ನ ಮಗುವಿನ ಪ್ರಾಣ ಅದಕ್ಕು ಮೀರಿದ್ದಲ್ಲವೆ. ಅವಳ ಎದುರಿಗೆ ಉಳಿದ ಏಳು ಮಕ್ಕಳು ಮರಣ ಹೊಂದಿದ್ದರು. ಅಲ್ಲೆ ಇದ್ದಲ್ಲಿ ನನ್ನ ಪ್ರಾಣವು ಹೋಗುತ್ತಿತ್ತು ಅನ್ನುವುದು ಸತ್ಯವಲ್ಲವೆ. ಹಾಗಿದ್ದಾಗ, ತನ್ನ ಮಗುವನ್ನು ಅಗಲುವುದರಿಂದ ಆ ಮಗುವಿನ ಪ್ರಾಣ ಉಳಿಯುತ್ತೆ ಅನ್ನುವದಾದರೆ ಯಾವ ತಾಯಿಯಾದರು ಸಿದ್ದಳಾಗುವಳು ಅಲ್ಲವೆ? ಹಾಗೆಯೆ ನನ್ನ ತಾಯಿ ನನ್ನ ಪ್ರಾಣ ಉಳಿಸುವ ಸಲುವಾಗಿ ನನ್ನ ಅಗಲಿಕೆಯನ್ನು ಸಹಿಸಿದಳು ಅನ್ನಿಸುತ್ತೆ. ಆದರು ಆ ಭಾವ ನನ್ನನ್ನು ಕಾಡಲಿಲ್ಲ ಅಂದುಕೋ ನನಗೆ ಯಶೋದೆಯೆ ತಾಯಿಯಾಗಿದ್ದಳು. ದೇವಕಿ ಎನ್ನುವ ತಾಯಿ ನನಗೆ ಇದ್ದಾಳೆ ಅನ್ನುವ ಕಲ್ಪನೆಯೆ ನನಗಿರಲಿಲ್ಲ"
ಗಣೇಶ
"ಬಹುಷ ನೀನು ಗೋಕುಲದಲ್ಲಿ ಇದ್ದದ್ದು ಕಂಸನಿಗೆ ತಿಳಿಯಿತು ಅನ್ನಿಸುತ್ತೆ, ಹಾಗಾಗಿ ನಿನ್ನ ಮೇಲೆ ಆಕ್ರಮಣ ಪ್ರಾರಂಭವಾಯಿತು ಅನ್ನಿಸುತ್ತೆ, ಆ ಪೂತನಿ ಮುಂತಾದವರೆಲ್ಲ ನಿನ್ನನ್ನು ಕೊಲ್ಲಲು ಬರುವಾಗ ನಿನಗೆ ಭಯ ಅನಿಸಲಿಲ್ಲವೆ. ನೀನು ಅವಳನ್ನು ರಕ್ತ ಹೀರಿಯೆ ಕೊಂದುಬಿಟ್ಟೆಯಂತೆ!"
ಗಣಪನ ದ್ವನಿಯಲ್ಲಿ ಆಶ್ಚರ್ಯ.
=================
ಮುಂದುವರೆಯುವುದು…...
ಒಳ್ಳೆಯ ಚರ್ಚೆಯಾಯಿತು.
ReplyDeleteನನಗೂ ಅರೆರೆ ಈ ಅಶರೀರವಾಣಿ ಎಂದರೇನು ಎನ್ನುವುದೇ doubt ಇತ್ತು. ಈಗ ಅದು ನಿವಾರಣೆಯಾಯಿತು. ಅಶರೀರವಾಣಿಯ ಕತೆಕಟ್ಟಿ ಕಂಸನನ್ನು ಹೆದರಿಸಿರಲೂ ಇದ್ದೀತು.
ತುಂಬಾ ಒಳ್ಳೆಯ ಧಾರಾವಾಹಿ...
ಹೌದು ಸಾರ್ ಹಾಗೆ ಅನ್ನಿಸುತ್ತೆ. ಆದರೆ ಕೆಲವು ಕಡೆ ನಾರದರು ಬಂದು ಕಂಸನಿಗೆ ವಿಷಯ ತಿಳಿಸಿದರು ಎನ್ನುತ್ತದೆ ಕತೆ ಅದನ್ನು ನಂಬಬಹುದು ಏಕೆಂದರೆ ನಾರದರ ಕೆಲಸಗಳೆಲ್ಲ ಅಂತಹುವೆ ಅಲ್ಲವೆ :-)
ReplyDelete