Monday, February 13, 2012

ಬೆಳ್ಳಿ ಲೋಟ

ತಿಂಗಳಿಗೊಂದು ದೆವ್ವದ ಕಥೆ : ಬೆಳ್ಳಿ ಲೋಟ


ಬಾನುವಾರ ಮನುವನ್ನು ನೋಡಿ ಬರೋಣ ಅಂತ ಅವರ ಮನೆಗೆ ಹೋದೆ. ಅವನ ಇಬ್ಬರು ಮಕ್ಕಳು ಸನತ್ ಹಾಗು ಸಾಕೇತ್ ಸುಮಾರು ಆರು ಹಾಗು ಎಂಟು ವರ್ಷದವರು ಅಂಕಲ್ ಬಂದ್ರು ಅಂತ ಸಂಭ್ರಮ ಅವರಿಗೆ. ಮನು ನನಗೆ ಸ್ನೇಹಿತ ಹಾಗೆ ದೂರದ ನೆಂಟ ಕೂಡಾ. ಅವನ ಮನೆಯಾಕೆ ಸುಮ ಅಡುಗೆ ಮನೆಯಿಂದ ಹೊರಬಂದರು. ನನ್ನನು ನೋಡಿ ಮನೆಯಲ್ಲಿ ಹೇಗಿದ್ದಾರೆ ಅಂತ ಎಲ್ಲ ವಿಚಾರಿಸಿ, ಕುಡಿಯಲು ಕಾಫಿಯೆ ಆಗಬೇಕ ಅಥವ ನಿಂಬೆ ಪಾನಕ ಮಾಡಲ ಅಂತ ಕೇಳಿದರು. ನಾನು ಬಿಸಲಿನಲ್ಲಿ ಬಂದವನು ಹಾಗಾಗಿ ಪಾನಕವೆ ಆದೀತು ಅಂತ ತಿಳಿಸಿ ಮನು ಕೈಲಿ ಹರಟೆ ಹೊಡೆಯುತ್ತ ಕುಳಿತೆ. ಅಷ್ಟರಲ್ಲಿ ಆಕೆ ಅಡುಗೆ ಕೊಣೆಯಿಂದ ತಟ್ಟೆಯಲ್ಲಿ ಪಾನಕದ ಲೋಟಗಳೊಂದಿಗೆ ಬಂದು ನನ್ನ ಕೈಗೆ ಒಂದು ನಿಂಬೆಪಾನಕ ಲೋಟ ಕೊಡುತ್ತ "ನಿದಾನವಾಗಿ ಇದ್ದು ಊಟ ಮುಗಿಸಿ ಹೋಗಿ ಅಡುಗೆ ತಯಾರಿ ನಡೆದಿದೆ" ಅಂದರು.ಆಕೆಯ ನಗುಮುಖ ನೋಡುವಾಗ ಯಾರಿಗಾದರು ಊಟಮುಗಿಸಿಯೆ ಹೋಗಬೇಕು ಅನ್ನಿಸುವುದು ಸಹಜ. ಪಾನಕ ಕುಡಿಯುವಾಗಲೆ ಜೀವಕ್ಕೆ ಹಾಯೆನಿಸಿತು, ಅದಕ್ಕೆ ಹಾಕಿದ್ದ ಯಾಲಕ್ಕಿಯ ಸುವಾಸನೆ ಘ್ರಾಣೇಂದ್ರಿಯಗಳಲ್ಲೆಲ್ಲ ಆವರಿಸಿತು. ಹಾಗೆ ಕುಡಿಯುತ್ತ ಗಮನಿಸಿದೆ ಕೈಯಲ್ಲಿದ್ದ ಉದ್ದಲೋಟ ಬೆಳ್ಳಿಯದರಂತಿತ್ತು. ಸಾಕಷ್ಟು ತೂಕವು ಇದ್ದು ನಾನು ಆಶ್ಚರ್ಯದಿಂದ "ಇದೇನಪ್ಪ ಈ ಕಾಲದಲ್ಲು ಬೆಳ್ಳಿ ಲೋಟವೆ ?" ಎಂದೆ.
ಅದಕ್ಕವನು "ಇರಲಾದಪ್ಪ ತುಂಬಾ ಹಳೆಯ ಕಾಲದ್ದು, ನಮ್ಮ ಅಜ್ಜಿಯದು ಅಂತಾರೆ" ಎಂದು ಸುಮ್ಮನಾದ. ಆದರೆ ಮಕ್ಕಳಿಬ್ಬರು"ಒಹೋ ನನಗೆ ಗೊತ್ತು, ಅಜ್ಜಿಕಾಲದ್ದು ಬೆಳ್ಳಿ ಲೋಟ ದೆವ್ವ ಕೊಟ್ಟಿದ್ದು" ಅಂತ ಕೂಗಿದವು.
ನಾನು ನಗುತ್ತ "ಇದೇನೊ ಹೀಗಂತಾರೆ ! ದೆವ್ವದ ಲೋಟವೆ?" ಎಂದೆ. ಅಷ್ಟರಲ್ಲಿ ಮಕ್ಕಳಿಬ್ಬರು ಎದ್ದು ರೂಮಿನಲ್ಲಿದ ಅಜ್ಜಿಯ ಹತ್ತಿರ ಓಡಿದವು
"ಅಜ್ಜಿ ಅಜ್ಜಿ ಬಾ ಅಜ್ಜಿ, ಅಂಕಲ್ ಬಂದಿದ್ದಾರೆ, ನಿನ್ನ ದೆವ್ವದ ಲೋಟದ ಕಥೆ ಹೇಳು" ಅಂತ ಕೈ ಹಿಡಿದು ಎಳೆದು ತಂದವು.ಮನುವಿಗೆ ಎಂತದೊ ಮುಜುಗರವಾದರೆ, ಅವನ ಮನೆಯಾಕೆಗೆ ಮುಖದತುಂಬಾ ನಗು.
"ಬಿಡ್ರೋ ನನ್ನ ಕೈನ ಯಾಕೀಗೆ ಎಳೀತಿರಿ ನಾನು ಬಿದ್ದು ಬಿಡ್ತೀನಿ ಇನ್ನು" ಎಂದು ತಟ್ಟಾಡುತ್ತಲೆ ಬಂದ ಮನುವಿನ  ಅಜ್ಜಿ, ಎದುರಿನ ಸೋಫದ ಮೇಲೆ ಕುಳಿತರು. ವಯಸ್ಸು ಎಂಬತ್ತು ದಾಟಿರಬಹುದೇನೊ ಆದರು ಕಣ್ಣು ಕಿವಿ ಚುರುಕಾಗಿರುವ ಅಜ್ಜಿ.
"ಅಜ್ಜಿ ನಾನು ಮನುವಿನ ಗೆಳೆಯ ಗೋಪಾಲ ಗೊತ್ತಾಯಿತೆ" ಎಂದೆ.
"ಗೊತ್ತು ಬಿಡಪ್ಪ ಗೆಳೆಯ ಏನು ಬಂತು ನೀನು ವರಸೆಯಲ್ಲಿ ಮನುವಿಗೆ ಚಿಕ್ಕಪ್ಪನಾಗಬೇಕು ಅಲ್ಲವೆ" ಅಂದರು. ನನಗಿಂತ ಆರು ತಿಂಗಳು ದೊಡ್ಡವನಾದ ಮನು, ನನ್ನನ್ನು ಅವನಿಗೆ ಚಿಕ್ಕಪ್ಪ ಅಂದಿದಕ್ಕೆ ನಗುತ್ತಿದ್ದ.
ಅವನ ಮಕ್ಕಳು "ಅಜ್ಜಿ ಅಂಕಲ್‌ಗು ದೆವ್ವ ಕೊಟ್ಟ ಲೋಟದ ಕಥೆ ಹೇಳಜ್ಜಿ" ಅಂತ ವರಾತ ಹಚ್ಚಿದವು. ನಾನು ಸಹ ಕುತೂಹಲದಲ್ಲಿ "ಏನಜ್ಜಿ ಅದು ದೆವ್ವದ ಕಥೆ ಹೇಳಿ ಅಂದೆ"
"ನೀನು ಸರಿ ಮಕ್ಕಳ ಹಾಗೆ ಆಡ್ತೀಯಪ್ಪ, ಇವರಂತು ಯಾರು ನಂಬಲ್ಲ ನಾನು ಕಥೆ ಕಟ್ಟಿ ಹೇಳ್ತೀನಿ ಅಂತಲೇ ಬಾವಿಸ್ತಾರೆ, ಈ ಮಕ್ಕಳಿಗೆ ಒಂದು ಕಥೆಯ ಹುಚ್ಚಷ್ಟೆ" ಎಂದು ನಗುತ್ತ ಆ ಲೋಟಕ್ಕೆ ಸಂಬಂದಿಸಿದ ಕಥೆ ತಿಳಿಸಿದರು. ಆದನ್ನು ನಾನು ಹೇಳುವದಕ್ಕಿಂತ ಅವರ ಮಾತಲ್ಲೆ ಕೇಳಿ.
                                               .........
ಆಗ ನನಗೆ ಸುಮಾರು ಹದಿನೆಂಟು ವರ್ಷವಿರಬಹುದು ಅಂದರೆ ಸರಿಸುಮಾರು ಅರವತ್ತೆರಡು ವರ್ಷಗಳಾದವೇನೊ, ಮದುವೆಯಾಗಿ ಗಂಡನ ಮನೆಗೆ ಬಂದಿದ್ದೆ. ಇವರಿಗೆ ತುಮಕೂರಿನಲ್ಲಿ ಹೊಸದಾಗಿ ಕೆಲಸ ಆಗಿತ್ತು. ಆಗಿನ ಕಾಲಕ್ಕೆ ಅವರದು ಅಮಲ್ದಾರರ ಕಛೇರಿಯಲ್ಲಿ ಗುಮಾಸ್ತನ ಕೆಲಸ.ತುಮಕೂರಿನ ಚಿಕ್ಕಪೇಟೆಯಲ್ಲಿ ಬಾಡಿಗೆ ಮನೆಮಾಡಿ ನನ್ನನ್ನು ಕರೆದೋಯ್ದರು. ಮನೆಯಲ್ಲಿ ನಾನು ಅವರು ಇಬ್ಬರೆ.ನನಗೂ ಹೊಸಜಾಗ ಮನೆಯ ಸುತ್ತಲಿದ್ದ ಒಬ್ಬರಾದರು ಪರಿಚಯವಿಲ್ಲ.ಒಂದೆರಡು ದಿನ ಮನೆಯಲ್ಲಿ ಸಾಮಾನು ಜೋಡಿಸುವುದೆ ಕೆಲಸವಾಯಿತು.ಆಫೀಸ್ ಮುಗಿಸಿ ಬಂದ ನಂತರ ಇವರು ಸಹಾಯ ಮಾಡುತ್ತಿದ್ದರು. ಅಲ್ಲಿ ಹೋಗಿ ನಾಲ್ಕೈದು ದಿನವಾಗಿರಬಹುದೇನೊ ಅಂದು ಶುಕ್ರವಾರ ಸಂಜೆ ಇವರಿನ್ನು ಆಫೀಸಿನಿಂದ ಆಗ ತಾನೆ ಬಂದಿದ್ದರು.ಹೊರಗಿನಿಂದ ಒಬ್ಬಾಕೆ ನಗುತ್ತ ಒಳಬಂದರು ಸುಮಾರು ಐವತ್ತು ವರುಷ ಪ್ರಾಯ, ನನ್ನ ಅಮ್ಮನ ವಯಸ್ಸಿರಬಹುದು.
"ನೋಡಮ್ಮ ನಾನು ಕಮಲಮ್ಮ ಅಂತ ಪಕ್ಕದ ಬೀದಿಯಲ್ಲಿದ್ದೇನೆ. ನೀನು ಈ ಮನೆಗೆ ಹೊಸದಾಗಿ ಬಂದಿ ಅನ್ನಿಸುತ್ತೆ ನನ್ನ ಪರಿಚಯವಿಲ್ಲ ನಿನ್ನ ಹೆಸರೇನು" ಎಂದು ವಿಚಾರಿಸಿದರು.ಬಾಯಿ ತುಂಬಾ ಮಾತನಾಡಿದ ಆಕೆ ನಂತರ "ಶುಕ್ರವಾರ ಸಂಜೆ ಪೂಜೆ ಮಾಡಿದ್ದೇನಮ್ಮ ಮನೆಯಲ್ಲಿ ನಾಲ್ಕು ಮುತ್ತೈದೆಯರನ್ನು ಕರೆಯೋಣ ಅಂತ, ಬಂದು ಬಿಡಮ್ಮ ಕುಂಕುಮ ತಗೊಂಡು ಬರುವಿಯಂತೆ" ಎಂದು ಕರೆದರು.
ಆಗ ನಾನು "ಕಮಲಮ್ಮನವರೆ ನಾನು ನಿಮ್ಮ ಮನೆ ನೋಡಿಲ್ಲವಲ್ಲ" ಅಂದೆ.
ಆಕೆ "ಅದೇನಮ್ಮ ಕಮಲಮ್ಮನವರೆ ಅಂತ ಅದೆಲ್ಲ ಏನು ಬೇಡ, ಅಮ್ಮ ಅಂತ ಕರೀ ಸಾಕು, ನಾನು ನಿನ್ನ ಅಮ್ಮನ ಹಾಗೆ ಅಂದುಕೋ, ನೀನಿನ್ನು ಪುಟ್ಟವಳು . ನಮ್ಮ ಮನೇ ಹುಡುಕೋಕ್ಕೇನು ಬಂಗ,ಹಿಂದಿನ ಬೀದಿಗೆ ಬಾ ಅಲ್ಲಿ ಒಂದು ಹುಡುಗಿಯರ ಹೈಸ್ಕೂಲಿದೆ, ಅದರ ಎದುರಿಗೆ ನಮ್ಮ ಮನೆ. ಮನೆ ಮುಂದೆ ದೊಡ್ಡ ಮಲ್ಲಿಗೆ ಬಳ್ಳಿ ಹಬ್ಬಿದೆ, ಸುಲುಬ" ಎನ್ನುತ್ತ ಹೊರಟರು. ನಾನು ಸರಿ ಅಂತ ಕುಂಕುಮ ಕೊಟ್ಟು ಕಳಿಸಿದೆ.
ಅವರು ಹೋದ ನಂತರ ಮುಖ ತೊಳೆದು ಸೀರೆ ಬದಲಿಸಿ ತಲೆ ಬಾಚಿ ಕುಂಕುಮವಿಟ್ಟು ಯಜಮಾನರಿಗೆ ಹೇಳಿ ಹೊರಟೆ. ಅಕ್ಕ ಪಕ್ಕದಲ್ಲಿ ಯಾರು ಹೊರಟಂತೆ ಕಾಣಲಿಲ್ಲ, ಯಾರನ್ನು ಕೇಳಲು ಸಂಕೋಚ ಹಾಗೆ ನಡೆಯುತ್ತ ಪಕ್ಕದ ಬೀದಿಗೆ ಬಂದೆ.ಅವರು ಹೇಳಿದಂತೆ ಹೈಸ್ಕೂಲಿನ ಕಟ್ಟಡವು ಎದುರಿಗೆ ಮಲ್ಲಿಗೆ ಹಂದರವಿದ್ದ ಮನೆಯು ಕಾಣಿಸಿತು.ಹೊರಗೆ ಬಾಗಿಲಿಗೆ ದೀಪ ಹಚ್ಚಿ ಇಟ್ಟಿದರು. ಅಮ್ಮ ಎಂದು ಕೂಗುತ್ತ ಒಳಗೆ ಹೋದೆ.
ನಡುವಿನಲ್ಲಿ ಯಾರು ಕಾಣಿಸಲಿಲ್ಲ, ಮತ್ತೊಮ್ಮೆ "ಅಮ್ಮ" ಎಂದು ಜೋರಾಗಿ ಕೂಗಿದೆ. ಸ್ವಲ್ಪ ಮುಂದು ಮಾಡಿದ ಅಡಿಗೆಮನೆ ಬಾಗಿಲನ್ನು ತೆರೆದುಕೊಂಡು ಆಕೆ ಹೊರಬಂದರು.
"ಕುಳಿತುಕೋ ಬಾಮ್ಮ" ಎನ್ನುತ್ತ ಚಾಪೆ ಹಾಸಿ "ನಿಮ್ಮ ಮನೆಯಷ್ಟು ದೊಡ್ಡದಲ್ಲ ನಮ್ಮ ಮನೆ" ಅಂದರು.
ನಾನು ಕೂಡುತ್ತ ಸುತ್ತಲು ಗಮನಿಸಿದೆ. ಶುಬ್ರಮನೆ, ಸ್ವಚ್ಚವಾಗಿಟ್ಟಿದ್ದಾರೆ, ಹೆಂಚಿನ ಮಾಡು ಹಳೆಯಕಾಲದ ದೊಡ್ಡ ಮುಂಬಾಗಿಲು. ಹೊರಗೆ  ಮನೆಯ ಆವರಣದಲ್ಲಿದ್ದ ಮಲ್ಲಿಗೆಯ ಸುವಾಸನೆ ಮನೆಯಲ್ಲೆಲ್ಲ ತುಂಬಿತ್ತು.ಆಕೆ ನಗುತ್ತ "ಸ್ವಲ್ಪ ನಿಂಬೆ ಪಾನಕ ಕೊಡ್ತೀನಮ್ಮ ಕುಡಿದುಬಿಡು, ಒಂದೈದು ಕ್ಷಣ, ಸಜ್ಜಿಗೆ ಮಾಡುತ್ತಿದ್ದೇನೆ ಯಾಲಕ್ಕಿ ಪುಡಿ ಉದುರಿಸಿದರಾಯ್ತು, ಕೊಡ್ತೀನಿ" ಅಂದರು.
ನಾನು "ಪರವಾಗಿಲ್ಲ ನಿದಾನವಾಗಿಯೆ ಮಾಡಿ ನನಗೇನು ಆತುರವಿಲ್ಲ" ಎನ್ನುತ್ತ "ಮಲ್ಲಿಗೆಯ ಸುವಾಸನೆ ಚೆನ್ನಾಗಗಿದೆ ಮನೆಯೆಲ್ಲ ಹರಡಿದೆ" ಎಂದೆ.
ನಗುತ್ತ ಒಳ ಹೋದ ಆಕೆ ಎರಡು ಕ್ಷಣದಲ್ಲೆ ಹೊರಬಂದು, ತಗೋ ಮುಡಿದುಕೊ ಎಂದು ಕಟ್ಟಿದ ಮಲ್ಲಿಗೆ ಕೊಡುತ್ತ, ಒಂದು ದೊಡ್ಡ ಲೋಟದ ತುಂಬಾ ತಂದಿದ್ದ ಪಾನಕ ಕೊಟ್ಟು,
"ಕುಡಿಯುತ್ತಿರು, ಸಜ್ಜಿಗೆ ಕೋಸಂಬರಿ ಕೊಟ್ಟು ಕುಂಕುಮ ಕೊಡುತ್ತೇನೆ" ಅಂದರು.
ಎದುರು ಗೋಡೆಗೆ ಹಾಕಿದ್ದ ಫೋಟವನ್ನು ನೋಡುತ್ತ, ಕುಡಿದು ಮುಗಿಸಿ ಕಾಯುತ್ತಿದ್ದೆ. ಈಗ ಎಂದು ಒಳಗೆ ಹೋದಾಕೆ ಹತ್ತು ಹದಿನೈದು ನಿಮಿಶವಾದರು ಹೊರಬರಲಿಲ್ಲ. ಸರಿ ಲೋಟಕೊಟ್ಟು ಮಾತನಾಡಿಸಿ ಹೊರಡೋಣವೆಂದು ಎದ್ದು ಮುಂದೆ ಮಾಡಿದ್ದ ಅಡುಗೆಮನೆ ಬಾಗಿಲನ್ನು ಸ್ವಲ್ಪ ದೂಡುತ್ತ "ಅಮ್ಮ" ಎಂದು ನಿದಾನವಾಗಿ ಕೂಗುತ್ತ ಒಳಗೆ ಹೆಜ್ಜೆಯಿಟ್ಟೆ ಅಷ್ಟೆ !
 ಒಳಗೆ ಕಂಡ ದೃಷ್ಯದಿಂದ ನನ್ನ ಜೀವ ಬಾಯಿಗೆ ಬರುವಂತೆ ಆಯಿತು. ಹೆದರಿಕೆ ಎಂಬು ನನ್ನ ಮೈಮನ ಎದೆಯನ್ನೆಲ್ಲ ವ್ಯಾಪಿಸಿ , ಕಿರುಚಲು ಆಗದಂತೆ ನನ್ನ ಸ್ವರ ಗಂಟಲಲ್ಲಿಯೆ ಹುದುಗಿಹೋಯ್ತು, ಕೈಕಾಲುಗಳೆಲ್ಲ ನಡುಗಲ್ಲು ಪ್ರಾರಂಬಿಸಿದವು. ನಾನು ನೋಡಿದ ದೃಷ್ಯವಾದರು ಏನು !!
ಸೌದೆ ಒಲೆಯ ಮೇಲೆ ಸಜ್ಜಿಗೆಯ ಪಾತ್ರೆಯನ್ನಿಟ್ಟ ಆಕೆ, ಒಲೆಯಮುಂದೆ ಕುಳಿತ್ತಿದ್ದರು, ಕೂದಲು ಬೆನ್ನ ಮೇಲೆಲ್ಲ ಹರಡಿದ್ದು, ಆಕೆ ತನ್ನ ಎರಡು ಕಾಲುಗಳನ್ನು ಸೌದೆಯ ಬದಲು ಒಲೆಯಲ್ಲಿ ತುರುಕಿದ್ದರು, ಅವರ ಎರಡು ಕಾಲುಗಳು ಬೆಂಕಿ ಹತ್ತಿ ಉರಿಯುತ್ತಿದ್ದವು. ಬಿಳಿ ರೋಮ ತುಂಬಿದ ಹಾವಿನಂತ ಕೈಯಿಂದ ಆಕೆ ಪಾತ್ರೆಯಲ್ಲಿದ್ದ ಸಜ್ಜಿಗೆಯನ್ನು ಕೆದಕುತ್ತಿದ್ದರು. ನಾನು ಅಮ್ಮ ಎಂದು ಕೂಗುತ್ತ ಒಳಗೆಹೋದ ಒಡನೆಯೆ ಆಕೆಯು ನನ್ನತ್ತ ತಿರುಗಿ ನೋಡಿದ ದೃಷ್ಯವನ್ನು ನಾನು ಎಂದು ಮರೆಯಲಾರೆ.ಕೆಂಪಗೆ ಕೆಂಡದಂತೆ ಹೊಳೆಯುತ್ತಿದ್ದ ಕಣ್ಣುಗಳು ಒಳಗೆ ಗಿರಗಿರ ತಿರುಗಿತ್ತಿದ್ದವು,ಮೂಗಿನ ಜಾಗದಲ್ಲಿ ದೊಡ್ಡ ರಂದ್ರಮಾತ್ರವಿದ್ದು, ಮೂಳೆ ಮೇಲೆ ಎದ್ದು ಬಂದತ್ತ ಕೆನ್ನೆಗಳು. ನಾನು ಇದ್ದಕಿದ್ದಂತೆ ಒಳಹೋಗಿದ್ದು ಆಕೆಗೆ ಕೋಪ ತರಿಸಿತೇನೊ,ಉದ್ದಕ್ಕೆ ಹಾವಿನಂತೆ ಬಳುಕಿತ್ತಿದ್ದ ತನ್ನ ಕೈಯನ್ನು ಕುಳಿತಲ್ಲಿಂದಲೆ ನನ್ನ ಕಡೆ ಚಾಚಿದರು, ರಕ್ತ ತೊಟ್ಟಿಡುತ್ತಿರುವಂತೆ ಕಾಣುತ್ತಿದ್ದ ಕೆಂಪಗೆ ಉದ್ದಕ್ಕಿದ್ದ ಉಗುರುಗಳು.

ನಾನು ತಕ್ಷಣ ಹಿಂದಕ್ಕೆ ತಿರುಗಿ ಓಡತೊಡಗಿದೆ.ಹೇಗೆ ಬಂದೆನೊ ಗೊತ್ತಿಲ್ಲ, ಕಿರುಚುತ್ತಲೆ ನಮ್ಮ ಮನೆಯ ಒಳಗೆ ಓಡಿಬಂದು ಮನೆಯ ಬಾಗಿಲು ಮುಚ್ಚಿನಿಂತೆ. ಏನನ್ನೊ ಓದುತ್ತ ಕುಳಿತ್ತಿದ್ದ, ನಮ್ಮವರು ನನ್ನ ಗಾಬರಿಯನ್ನು ಕಂಡು ಏನಾಯಿತೆ ಎಂದು ಎದ್ದು ನಿಂತು ಹತ್ತಿರ ಬಂದರು. ಹೆದರಿಕೆಯಿಂದ ಬಿಳುಚಿದ್ದ, ನಡಗುತ್ತಿದ್ದ ನನ್ನನ್ನ ಕಂದು ಅವರಿಗೂ ಎಂತದೋ ಭಯ ಹಾಗು ಆಶ್ಚರ್ಯ. ನಾನು ವೇಗವಾಗಿ ಬಂದು ಅವರನ್ನು ಅಪ್ಪಿ ಕುಳಿತೆ.
ಅವರು ಸಮಾದಾನ ಮಾಡುತ್ತ ಏನಾಯಿತು ಹೇಳೂ ಅಂದರು. ನಾನು ಅವರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದೆ. ಅವರು ಹೆದರಿ ನಿಂತರು, ಆಗಲೆ ನಾನು ಗಮನಿಸಿದ್ದು ನನ್ನ ಕೈಯಲ್ಲಿ ಆಕೆ ಕೊಟ್ಟ ಬೆಳ್ಳಿಯ ಲೋಟ ಹಾಗೆ ಉಳಿದುಬಿಟ್ಟಿತ್ತು ಮತ್ತು ಮುಡಿಯಲ್ಲಿ ಮಲ್ಲಿಗೆ ಹೂವು. ತಕ್ಷಣ ಹೂವನ್ನು ಕಿತ್ತು ದೂರ ಎಸೆದೆ. ಲೋಟವನ್ನು ದೂರವಿಟ್ಟೆ.ರಾತ್ರಿ ಹೇಗೆ ಕಳೆದೆವು ತಿಳಿಯದು. ಹೇಗೊ ಬೆಳಗಾಯಿತು.
ನಂತರ ಇವರ ಪಕ್ಕದ ಮನೆಗೆ ಹೋಗಿ ಹೀಗೆಲ್ಲ ಆಯ್ತು ಅಂತ ತಿಳಿಸಿದರು. ಅದಕ್ಕವರು "ಸಂಜೆ ದೀಪ ಹಚ್ಚಿದ ನಂತರ ನೀವೊಬ್ಬರೆ ಏಕೆ ಹೊರಟಿರಿ, ನಮ್ಮನ್ನು ಯಾರನ್ನಾದರು ಕರೆಯಬಾರದಿತ್ತೆ. ನೀವು ಹೋಗಿರುವುದ ಹಾಳುಬಿದ್ದ ಮನೆ ಅಲ್ಲಿ ಎಷ್ಟೋ ವರ್ಷಗಳಿಂದಲೂ ಯಾರು ವಾಸವಿಲ್ಲ. ದೆವ್ವವಿದೆ ಅಂತ ಎಲ್ಲರೂ ಹೇಳ್ತಾರಾಗ್ಲಿ ನಾವಂತು ಎಂದು ಏನನ್ನು ಕಂಡಿಲ್ಲ. ಯಾರದರು ಹೊಸಬರು ಬಂದರೆ ಹೀಗೆ ಆಟವಾಡಿಸುತ್ತೆ" ಎಂದರು.
ನಮ್ಮ ಯಜಮಾನರು ಪಕ್ಕದ ಮನೆಯವರೆಲ್ಲ ಸೇರಿ ಆ ಮನೆಯನ್ನು ನೋಡಲು ಪುನಃ ಹೊರಟರು. ಹಗಲಾದ್ದರಿಂದ ನನಗೂ ಸ್ವಲ್ಪ ದೈರ್ಯಬಂದಂತಾಗಿ ನಾನು ಹೊರಟೆ. ಅಲ್ಲಿ ಹೋದರೆ ನನ್ನ ಕಣ್ಣನ್ನು ನಾನೆ ನಂಬಲಾಗಲಿಲ್ಲ.
ರಾತ್ರಿ ದೀಪದೊಂದಿಗೆ ಕಂಗೊಳಿಸುತ್ತ್ದ ಇದ್ದ ಆ ಮನೆ ಈಗ ಹಾಳು ಸುರಿಯುತ್ತಿತ್ತು. ಬಿದ್ದು ಹೋದ ಗೋಡೆಗಳು , ಗುರುತಿಗು ಒಂದು ಹೆಂಚಿರಲಿಲ್ಲ, ಕಾಂಪೋಂಡಿನ ಒಳಗೆ ಕಸಕಡ್ಡಿ ತುಂಬಿ ಒಳಗೆ ಕಾಲಿಡಲು ಸಾದ್ಯವೆ ಇರಲಿಲ್ಲ. ಮಲ್ಲಿಗೆ ಬಳ್ಳಿ ಮಾತ್ರ ದೈತ್ಯಕಾರವಾಗಿ ಹಬ್ಬಿ ನಿಂತಿತ್ತು. ಅದರ ಬುಡದಲ್ಲಿ ಎಷ್ಟೋ ವರ್ಷಗಳಿಂದ ಉದುರಿಬಿದ್ದಿರುವ ಹೂವು ,ಗೊಬ್ಬರ. ನಾನು ರಾತ್ರಿ ನೋಡಿದ ದೃಷ್ಯ ಸತ್ಯವೆಂದು ನಾನೆ ನಂಬುವ ಹಾಗಿರಲಿಲ್ಲ. ಮತ್ತೆ ಒಳಗೆ ಹೋಗುವ ದೈರ್ಯ ಯಾರಿಗು ಬರಲಿಲ್ಲ ಮನೆಗೆ ಹಿಂದಿರುಗಿದೆವು.ಅದೊಂದು ಲೋಟ ಹೇಗೊ ಮನೆಯಲ್ಲಿ ಉಳಿದುಬಿಟ್ಟಿತು
                                                      ****************
ಆಕೆ ಕಥೆ ಮುಗಿಸಿದರು ಮಕ್ಕಳಾದರು ದೆವ್ವ ದೆವ್ವ ಕೊಟ್ಟ ಲೋಟ ಎಂದು ಕುಣಿಯತೊಡಗಿದೆವು.ನಾನು ಅದೇ ಲೋಟವನ್ನು ಕೈಯಲ್ಲಿ ಹಿಡಿದಿದ್ದೆ ಲೋಟದಲ್ಲಿ ಯಾರೊ ಹೆಣ್ಣಿನ ಮುಖ ಕಂಡಂತಾಯ್ತು ಹಾಗಾಗಿ ಏಕೊ ಒಮ್ಮೆ ಮೈನಡುಗಿದಂತಾಯ್ತು.ಲೋಟ ಕೆಳಗಿಟ್ಟು.
"ಸರಿಯಜ್ಜಿ ನಿಮ್ಮ ಅನುಭವ ಭಯಂಕರವಾಗಿದೆ, ಮುಂದೆ ಹೀಗೆ ಯಾವಗಲಾದರು ಬರುತ್ತೇನೆ. ನಿಮ್ಮಗೆ ಈ ರೀತಿಯ ಕಥೆಗಳು ಗೊತ್ತಿರುವದನ್ನು ತಿಳಿಸಿ " ಎಂದೆ.
ಆಕೆ ನಗುತ್ತ "ಸರಿಯಪ್ಪ ಒಟ್ಟಿನಲ್ಲಿ ನನ್ನನ್ನು ಕಥೆ ಹೇಳುವ ಅಜ್ಜಿಯನ್ನಾಗಿ ಮಾಡಿದೆ. ಅದಕ್ಕೇನು ಬಾ, ನೀನು ಬರುವಾಗ ನಾನು ಸಮಾ ಇದ್ದರೆ ಹೇಳೋಣ" ಎಂದರು.
ನಾನು ಮನೆಗೆ ಬರುತ್ತ ಈ ಸಮಾ ಇದ್ದರೆ ಎನ್ನುವ ಪದದ ಅರ್ಥವೇನಿರಬಹುದೆಂದು ಚಿಂತಿಸುತ್ತಿದ್ದೆ.

No comments:

Post a Comment

enter your comments please