Wednesday, September 18, 2013

ಕೃಷ್ಣ..ಕೃಷ್ಣ..ಕೃಷ್ಣ.. - ಧರ್ಮ ಎಂದರೇನು?

ಧರ್ಮ ಎಂದರೇನು?

ಕೃಷ್ಣ..ಕೃಷ್ಣ..ಕೃಷ್ಣ.. (5)-  ಧರ್ಮ ಎಂದರೇನು?










ಗಣಪತಿಯು ಕೃಷ್ಣನನ್ನು ಕೇಳಬಹುದಾದ ಪ್ರಶ್ನೆಗಳನ್ನು ಮನಸಿನಲ್ಲಿಯೆ ಯೋಚಿಸುತ್ತಿದ್ದ. ಕೃಷ್ಣನ ಹುಟ್ಟಿನಿಂದ ಕೊನೆಯವರೆಗು ನಡೆದಿರುವ ಮುಖ್ಯ ಘಟನೆಗಳತ್ತ ಗಣಪತಿಯ ಚಿಂತನೆ ನಡೆದಿತ್ತು. ಮಹಾಭಾರತದ ಯುದ್ದವನ್ನು ಧರ್ಮಯುದ್ದವೆಂದೆ ಕರೆಯುವರು ಅಲ್ಲಿಯ ಕೃಷ್ಣನ ಪಾತ್ರವು ಅವನ ಮನದಲ್ಲಿತ್ತು. ಕೃಷ್ಣ ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯನ್ನು ಧರ್ಮದ ವ್ಯಾಖ್ಯಾನದಂತೆ ಹೇಳಿದ್ದು ಗಣಪತಿಯ ಮನ ಚಿಂತಿಸುತ್ತಿತ್ತು. ಈ ಎಲ್ಲ ಹಿನ್ನಲೆಯಲ್ಲಿ ಕೃಷ್ಣನನ್ನು ಕೇಳಬೇಕಾದ  ಪ್ರಶ್ನೆಗಳ  ಬಗ್ಗೆ ಗಣಪತಿ ಚಿಂತನೆ ನಡೆಸಿದ್ದ.


ಗಣಪತಿಯ ಮುಖವನ್ನೆ ನೋಡುತ್ತ ಕುಳಿತಿದ್ದ ಕೃಷ್ಣ ಗಣಪತಿಯನ್ನು ಕೇಳಿದ


"ಗಣೇಶ ಧರ್ಮ ಎಂದರೇನು?"


ಗಣಪತಿ ಗಲಿಬಿಲಿಗೊಂಡ, ತಾನು ಕೃಷ್ಣನನ್ನು ಪ್ರಶ್ನೆ ಕೇಳಬೇಕೆಂದಿರುವಾಗ ಕೃಷ್ಣನೆ ಪ್ರಶ್ನೆ ಕೇಳಿದ್ದು ಅವನನ್ನು ಚಕಿತನನ್ನಾಗಿಸಿತ್ತು


ಗಣಪತಿ ಉತ್ತರಿಸಿದ


"ಇದೇನು ಕೃಷ್ಣ ಹೀಗೆ ಕೇಳುತ್ತಿ, ಧರ್ಮ ಎಂಬುದು ಹಲವು ವಿಧ , ಒಟ್ಟು ಧರ್ಮಗಳಲ್ಲಿ ಮುಖ್ಯವಾದವು ಹಿಂದೂ ಧರ್ಮ, ಬೌದ್ದ ಧರ್ಮ , ಜೈನ ಧರ್ಮ, ಅಲ್ಲದೆ ಹೊರದೇಶಗಳಿಂದ ಬಂದ ಮುಸಲ್ಮಾನ ಹಾಗು ಕ್ರೈಸ್ತರಿಗೆ ಅವರಿಗೆ ಆದ ಧರ್ಮಗಳಿವೆ..."


ಗಣೇಶನ ಮಾತನ್ನು ಅರ್ಧದಲ್ಲಿಯೆ ಕತ್ತರಿಸುತ್ತ ಕೃಷ್ಣ ನುಡಿದ , ನಗುತ್ತ


"ಗಣೇಶ ಹುಡುಗಾಟ ಬೇಡ, ನಾನು ಗಂಭೀರವಾಗಿ ಕೇಳುತ್ತಿರುವೆ. ನೀನು ಬೇಕು ಬೇಕೆಂದು ಶಾಲೆಯ ಹುಡುಗನ ರೀತಿ ಉತ್ತರಿಸುತ್ತ ಇದ್ದೀಯ, ನನ್ನ ಪ್ರಶ್ನೆಗೆ ನಾನು ನಿನ್ನಿಂದ ತರ್ಕಬದ್ದ ಉತ್ತರವನ್ನು ನಿರೀಕ್ಷಿಸುತ್ತಿದ್ದೇನೆ"


ಗಣೇಶ ನುಡಿದ
’ಇದೇನು ಮಾತು ಕೃಷ್ಣ, ಧರ್ಮ ಎಂದರೆ ಏನು ಎಂದು ನೀನು ನನ್ನನ್ನು ಕೇಳುತ್ತಿದ್ದಿ, ಧರ್ಮದ ಬಗ್ಗೆ ಹದಿನೆಂಟು ಅಧ್ಯಾಯಗಳ  ಭಗವದ್ಗೀತೆಯ ಭೋದಕ ನೀನು. ಧರ್ಮದ ರಕ್ಷಣೆಗಾಗಿ ಎಂದು ಹದಿನೆಂಟು ದಿನಗಳು ನಡೆದ ಮಹಾಭಾರತದ ಯುದ್ದದ ರುವಾರಿ ನೀನು. ಧರ್ಮದ ರಕ್ಷಣೆಗಾಗಿ ಎಂದು ಅವತಾರವೆತ್ತಿ ಬಂದ ಪುರುಷ ನೀನು, ಈಗ ನೀನು ನನ್ನನ್ನು ಧರ್ಮ ಎಂದರೇನು ಎಂದು ಕೇಳುವುದು ಸರಿಯೆ ?"


ಕೃಷ್ಣ ನುಡಿದ
“ಇರಲಿ ಗಣೇಶ ಹೇಳು. ನೀನು ಹೇಳಿದಂತೆ ನಾನು ಆರ್ಜುನನಿಗೆ ಹೇಳಿದ ಆ ಮಾತುಗಳಲ್ಲಿ ಧರ್ಮದ ವಿಶ್ಲೇಷಣೆಯು ಬಂದಿರಬಹುದು. ಧರ್ಮದ ಭೋದನೆಯು ಆಗಿರಬಹುದು. ಆದರೆ ಅದು ಆಗಿನ ದ್ವಾಪರ ಯುಗಕ್ಕಾಯಿತು. ಧರ್ಮ ಎನ್ನುವುದು ಕಾಲ ಕಾಲಕ್ಕೆ ತನ್ನ ವ್ಯಾಖ್ಯೆಯನ್ನು ಬದಲಾಯಿಸಿಕೊಳ್ಳುತ್ತಲೆ ಇರುತ್ತದೆ. ನೀನು ಹೇಳಿದಂತೆ ನಾನು ಅಲ್ಲಿ ಸಹ ಧರ್ಮ ಎಂದರೆ ಇಂತದೆ ಎಂದು ಎಲ್ಲಿ ಯಾವ ಬಲತ್ಕಾರವನ್ನು ಹೇರಿಲ್ಲ. ನಾನು ನನ್ನ ಜೀವನದಲ್ಲಿ ಅರ್ಥಮಾಡಿಕೊಂಡ ಧರ್ಮದ ಸ್ವರೂಪವನ್ನು ಅರ್ಜುನನಿಗೆ ವಿವರಿಸಲು ಯತ್ನಿಸಿದ್ದೇನೆ.


ಅಷ್ಟೆ ಅಲ್ಲ ಕಡೆಯಲ್ಲಿ ನೀನು ಗಮನಿಸಿರುವೆಯೊ ಇಲ್ಲವೊ ತಿಳಿದಿಲ್ಲ. ನಾನು ಹೇಳಿದ ಧರ್ಮದ ವ್ಯಾಖ್ಯೆಯನ್ನು ಒಪ್ಪುವುದು ಅಥವ ಬಿಡುವುದು ಎನ್ನುವ ಆಯ್ಕೆಯನ್ನು ಅರ್ಜುನನಿಗೆ ಬಿಟ್ಟಿದ್ದೇನೆ. ನಾನು ಹೇಳುವುದು ಸಮ್ಮತವಿಲ್ಲದಿದ್ದರೆ ನೀನು ನಿನ್ನ ಮನಸಿಗೆ ತೋರಿದಂತೆ, ಆತ್ಮಭೋದೆಯಂತೆ ನಡೆ ಎಂದು ತಿಳಿಸಿದ್ದೇನೆ.


ನಮ್ಮ ಮನಸ್ಸೆ ನಮಗೆ ಗುರು ಅಲ್ಲವೆ ಗಣೇಶ. ನಮ್ಮ ಆತ್ಮಭೋದಿಸುವ ಮಾರ್ಗವೆ ಎಲ್ಲಕ್ಕಿಂತ ಶ್ರೇಷ್ಠ, ಎಲ್ಲ ಗುರುವಿನ ಮಾರ್ಗದರ್ಶನಕ್ಕಿಂತಲೂ ಉತ್ತಮವಾದ ದಾರಿ. ಇದು ನನ್ನ ಅಭಿಮತ.


ದ್ವಾಪರದ ಕಡೆಯ ಹೊತ್ತಿಗೆ ಹಿರಿಯರ ಮಾತುಗಳನ್ನು ಗಾಳಿಗೆ ತೂರಲಾಯಿತು. ಈಗಂತು ಕಲಿಗಾಲ. ಅವರವರ  ಜೀವನ ಮಾರ್ಗಕ್ಕೆ ಅವರೆ ಹೊಣೆ.
   ಅದಕ್ಕಾಗಿಯೆ ನಾನು ಅರ್ಥಮಾಡಿಕೊಂಡದ್ದಕ್ಕು ನಿನ್ನ ಈಗಿನ ತುಲನಾತ್ಮಕ ಅಭಿಪ್ರಾಯಕ್ಕು ವ್ಯತ್ಯಾಸ ತಿಳಿಯಲೋಸುಗ ಕೇಳಿದೆ.
ಗಣೇಶ ಧರ್ಮ ಎಂದರೆ ಏನು?”


ಗಣೇಶ ಸ್ವಲ್ಪ ಕಾಲ ಚಿಂತಿತನಾದ, ನಂತರ ನುಡಿದ
“ಕೃಷ್ಣ, ನೀನು ಹೇಳಿದಂತೆ ಧರ್ಮದ ವ್ಯಾಖ್ಯೆಯನ್ನು ಕಾಲ ಕಾಲಕ್ಕೆ ಮಾಡಲಾಗಿದೆ. ಧರ್ಮ ಎಂದರೆ ಇಂತಹುದೆ ಎಂದು ಬೆರಳು ತೋರಿಸಿ ನುಡಿಯುವುದು ಕಷ್ಟ , ನಾನಂತು ಧರ್ಮ ಎಂದರೆ ಹೀಗೆ ಅರ್ಥಮಾಡಿಕೊಂಡಿದ್ದೇನೆ.


ಧರ್ಮ ಎನ್ನುವ ಪದ ಹಲವು ವೈವಿಧ್ಯಗಳ ಸಮಗ್ರ ರೂಪ. ಹಲವು ರೂಪಗಳ ಸಮ್ಮಿಲನ.  ಧರ್ಮ ಎಂದರೆ ನಾವು ಆಚರಿಸುವ, ನಮ್ಮ ಹಿರಿಯರು ಹೀಗೆ ಎಂದು ತೋರಿಸಿದ ಧಾರ್ಮಿಕ ಆಚರಣೆಗಳು, ಧರ್ಮ ಎಂದರೆ ನಾವು ಅನುಸರಿಸುತ್ತಲಿರುವ ಸಂಸ್ಕೃತಿಗಳ ರೂಪವಾಗಿರಬಹುದು. ಧರ್ಮ ಎಂದರೆ ನಾವು ಆಚರಿಸುವ ಹಬ್ಬ ಹರಿದಿನ ನಾಡ ಹಬ್ಬಗಳ ಸ್ವರೂಪದಲ್ಲಿರಬಹುದು. ಧರ್ಮ ಎಂದರೆ ನಮ್ಮ ಹೊರಗಿನ ರೂಪ, ಗಂಡಸರಾಗಲಿ ಹೆಂಗಸರಾಗಲಿ ಧರಿಸುವ ಧಿರಸು ಅಥವ ಬಟ್ಟೆಗಳು. ಧರ್ಮ ಎಂದರೆ ನಾವು ಕಲಿಯುವ ವಿಧ್ಯೆಯ ಸ್ವರೂಪ. ಧರ್ಮ ಎಂದರೆ ನಮ್ಮ ಸಾರ್ವಜನಿಕ ನಡವಳಿಕೆ ಅನ್ಯರಿಗೆ ನಾವು ತೋರುವ ಗೌರವ, ಅವರ ಅಭಿಪ್ರಾಯಗಳಿಗೆ ನೀಡುವ ಬೆಲೆ, ಒಂದು ವೇಳೆ ಇನ್ನೊಬ್ಬರು ತಪ್ಪು ಮಾಡಿದಾಗಲು ನಾವು ಅವರನ್ನು ಕ್ಷಮಿಸಿ ಸರಿ ದಾರಿಯಲ್ಲಿ ಕೊಂಡೊಯ್ಯುವ , ಸರಿ ದಾರಿ ತೋರುವ ವ್ಯಕ್ತಿತ್ವ.  ಧರ್ಮ ಎಂದರೆ ನ್ಯಾಯ ಅನ್ಯಾಯಗಳ, ಶುದ್ದ ವ್ಯಕ್ತಿತ್ವದ ಪರಿಜ್ಞಾನ
ಧರ್ಮ ಎಂದರೆ ದೊಡ್ಡವರು ಚಿಕ್ಕವರಿಗೆ ತೋರುವ ಪ್ರೀತಿ ಚಿಕ್ಕವರು ದೊಡ್ಡವರಿಗೆ ನೀಡುವ ಬೆಲೆ, ಗೌರವ.  ಧರ್ಮ ಎಂದರೆ ನಮ್ಮ ಸೃಷ್ಟಿಯನ್ನು  ಅರ್ಥಮಾಡಿಕೊಳ್ಳುವ  ಪ್ರಯತ್ನ. ಧರ್ಮ ಎಂದರೆ ನಮ್ಮದೆ ಆದ ಸಾಹಿತ್ಯ ಲಲಿತಕಲೆ ಧಾರ್ಮಿಕ ಗ್ರಂಥಗಳು….. ಹೀಗೆ ಧರ್ಮಕ್ಕೆ ತನ್ನದೆ ಆದ ವಿಶಾಲ ವಿಸೃತ ರೂಪವಿದೆ ಕೃಷ್ಣ, ನಾನು ಹೇಳಿದ್ದು ಸರಿ ಅನ್ನಿಸುತ್ತಿಲ್ಲವೆ”


ಕೃಷ್ಣ ಸ್ವಲ್ಪ ಕಾಲ ಗಣೇಶನನ್ನೆ ನೋಡುತ್ತ ಕುಳಿತ್ತಿದ ನಂತರ ನಗುತ್ತ ಹೇಳಿದ
“ಗಣೇಶ ನಾನು ಹದಿನೆಂಟು ಅದ್ಯಾಯದಲ್ಲಿ ದೀರ್ಘವಾಗಿ ವಿವರಿಸಿದ್ದನ್ನು,  ಹತ್ತು ಹಲವು ವ್ಯಾಖ್ಯೆಯನ್ನು ನೀನು ಕೆಲವೆ ವಾಕ್ಯಗಳಲ್ಲಿ ತಣ್ಣಗೆ ವಿವರಿಸಿದೆ. ಹೌದು ಗಣೇಶ ಧರ್ಮಕ್ಕೆ ಇಂತಹುದೆ ಎಂದು ನಿರ್ಧಿಷ್ಟವಾದ ರೂಪವಿಲ್ಲ. ನೀನು ಹೇಳಿದ ಈ ಎಲ್ಲ ರೂಪಗಳ ಜೊತೆಗೆ ಮತ್ತೊಂದು ಬಿಟ್ಟುಹೋದ ಅಂಶವೆಂದರೆ, ನೀನು ಹೇಳಿದ ಈ ಎಲ್ಲ ವಿವರಗಳು ಭೂಮಿಯಲ್ಲಿನ ವಿವಿಧ ಬಾಗಗಳಲ್ಲಿ ಬೇರೆ ಬೇರೆ ರೂಪ ತಾಳುತ್ತವೆ. ಪ್ರತಿ ಜನಾಂಗ, ಪ್ರತಿ ಭೂಖಂಡ ಅಥವ ದೇಶ ತನ್ನದೆ ಆದ ಆಚರಣೆ,ಸಂಸ್ಕೃತಿ, ಬಟ್ಟೆ ಬರೆ, ವಿಧ್ಯೆ, ಸಾರ್ವಜನಿಕ ನಡುವಳಿಕೆ , ನ್ಯಾಯ ಅನ್ಯಾಯಗಳ ವಿವೇಚನೆ ಎಲ್ಲವು ಬದಲಾಗುತ್ತ ಹೋಗುತ್ತದೆ, ಹಾಗು ಅದನ್ನು ಅಲ್ಲಿಯ ಧರ್ಮವೆಂದು ಕರೆಯಬಹುದು.


ಮತ್ತು ಅಂತಹ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವುದು ಅವರ ಹಕ್ಕಾಗಿರುತ್ತದೆ. ತನ್ನ ಧರ್ಮದ ಮೇಲೆ ನಡೆಯುವ ಒಳಗಿನ ಹಾಗು ಹೊರಗಿನ ದಾಳಿಯನ್ನು ತಡೆಯುವುದು ಸಹ ಅವನ ಧರ್ಮವಾಗಿರುತ್ತದೆ, ಅದರೆ ಅದು ಯುದ್ದದಿಂದ, ಹೋರಾಟದಿಂದ , ಸಾವಿನಿಂದ ಸಾದ್ಯವಿಲ್ಲ ಎನ್ನುವುದು ನಾವು ಹಿಂದೆಲ್ಲ ಕಂಡಿರುವ ಸತ್ಯ. ಶಾಂತಿ ಹಾಗು ಸಹನೆಯ ಮೂಲಮಂತ್ರದಿಂದ ತನ್ನ ವಿರುದ್ದ ನಡೆಯುವ ಯಾವುದೆ ದಾಳಿಯನ್ನು ತಡೆಯಬಹುದು ಅನ್ನಿಸುತ್ತೆ”


ಗಣೇಶ ಸ್ವಲ್ಪ ನಕ್ಕ
“ನಿನ್ನ ಮಾತು ಸತ್ಯ ಕೃಷ್ಣ.  ಇಲ್ಲಿಯವರೆಗು ನಡೆದಿರುವ ಯಾವ ಯುದ್ದದಿಂದ ಹಿಂಸೆಯಿಂದ ಯಾವುದೆ ವಿಷಯ ಇತ್ಯರ್ಥವಾಗಿಲ್ಲ ಎನ್ನುವುದು ಸತ್ಯ. ಬಹುಷಃ ಇದೆ ಈ ಯುಗದ ಧರ್ಮವಾದರೆ ಚೆನ್ನಾಗಿರುತ್ತೆ” ಎಂದ


ಕೃಷ್ಣ ನುಡಿದ
“ಸರಿ ಗಣೇಶ ನಾನಿನ್ನು ನಿನ್ನನ್ನು ತಡೆಯುವದಿಲ್ಲ, ನಿನಗೆ ಬೇಕಾದ ಪ್ರಶ್ನೆ ಕೇಳು, ನನ್ನ ಜೀವನದ ಹಲವು ಘಟನೆಗಳ ಬಗ್ಗೆ ನೀನು ವಿವರ ಕೇಳುವೆ ಅನ್ನಿಸುತ್ತಿದೆ. ನಾನು ನನ್ನ ವಿವೇಚನೆಯಲ್ಲಿರುವಷ್ಟನ್ನು ವಿವರಿಸುವೆ. ನನ್ನ ವಿವರಣೆ ಕೊಡಲು ಪ್ರಯತ್ನಿಸುವೆ”
ಎಂದನು


ಸ್ವಲ್ಪ ಕಾಲ ಸುಮ್ಮನಿದ್ದ ಗಣೇಶ


."ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಭ, ಕಂಸನಿಗೆ ನಿನ್ನ ಮರಣ ದೇವಕಿಯ ಎಂಟನೆ ಮಗುವಿನಿಂದ ಎಂದು ಅಶರೀರವಾಣಿಯಾಯಿತು ಎನ್ನುವ ಬಗ್ಗೆ ಏನು ಹೇಳುವೆ?. ಇಲ್ಲಿಯವರೆಗು ಯಾರಿಗೆ ಆಗಲಿ ನಿನ್ನ ಮರಣ ಹೀಗೆ ಎನ್ನುವ ರಹಸ್ಯ ಸೃಷ್ಟಿ ಬಿಟ್ಟುಕೊಡಲ್ಲ ಹಾಗಿರುವಾಗ ಕಂಸನಿಗೆ ಕೇಳಿದ ಅಶರೀರವಾಣಿ ಸತ್ಯವ?"
ಮುಂದುವರೆಯುವುದು......

1 comment:

  1. ಧರ್ಮವು ಮಾನಸಿಕವೋ - ಆಚರಣೆಗೋ - ತೋರಿಕೆಗೋ - ರಕ್ತಪಾತಕ್ಕೋ ಎನ್ನುವ ತಾಕಲಾಟಗಳು ಇತ್ತು ಅದು ಈಗ ತುಸು ನೀಗಿತು.

    ReplyDelete

enter your comments please